ಪದ-ಶ್ರಾವ್ಯ

ಈಗ ಆಡಿಯೋ ಟಚ್!

15
Aug 2012
Mohana Mrushtaanna
Posted in DefaultTag by sjoshi at 10:41 pm

ದಿನಾಂಕ 17 ಆಗಸ್ಟ್  2012

‘ಮೋಹನ’ ಮೃಷ್ಟಾನ್ನ

* ಶ್ರೀವತ್ಸ ಜೋಶಿ

ರಾಗರಸಾಯನ ಸರಣಿಯನ್ನು ಮುಂದುವರೆಸುತ್ತ ಇದೀಗ ಮೋಹನ ರಾಗ! ಈ ಸಲವೂ ಒಂದಷ್ಟು ವೈವಿಧ್ಯ, ಮತ್ತೊಂದು ಹೊಸತನ ಇರಲೆಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದೇನೆ. ನಿಮ್ಮ ಆಸಕ್ತಿ, ಸಮಯ, ಅನುಕೂಲ, ಇಂಟರ್‌ನೆಟ್ ಕನೆಕ್ಷನ್ ಕೆಪ್ಯಾಸಿಟಿ ಇತ್ಯಾದಿಗಳನ್ನು ನೋಡಿಕೊಂಡು ನಿಮಗೆ ಬೇಕಾದ್ದನ್ನು, ಬೇಕಾದಷ್ಟನ್ನೇ ಆಯ್ದುಕೊಳ್ಳಬಹುದು.

ಭಾಗ-1 ರಲ್ಲಿ ಒಂದೇಒಂದು ವಿಡಿಯೋ ಇದೆ. ಮೋಹನ ರಾಗದ ಪರಿಚಯ, ವೈಶಿಷ್ಟ್ಯ, ಉದಾಹರಣೆಗಳು ಇತ್ಯಾದಿ ಎಲ್ಲವೂ ನಿಮಗೆ ಇದೊಂದೇ ವಿಡಿಯೋದಲ್ಲಿ ಪಠ್ಯರೂಪದಲ್ಲೂ, ಶ್ರಾವ್ಯರೂಪದಲ್ಲೂ ಸಿಗುತ್ತದೆ. ಇದೊಂಥರ mini-meal ಇದ್ದಂತೆ. ಸ್ವಲ್ಪವೇ ಹಸಿವಿರುವುದಾದರೆ, ಇದಿಷ್ಟೇ ಸಾಕಾಗಬಹುದು.

ಭಾಗ-2 ರಲ್ಲಿ ಎಂದಿನಂತೆಯೇ ರಾಗ ಆಧಾರಿತ ವಿವಿಧ ಸಂಗೀತ ಪ್ರಕಾರಗಳ ಪ್ರಸ್ತುತಿಗಳಿವೆ. ಹತ್ತು ವಿಡಿಯೋ ತುಣುಕುಗಳಲ್ಲಿ ಮೋಹನ ರಾಗದ ಹತ್ತು ಸ್ಯಾಂಪಲ್‌ಗಳು. À-la-carte ಯಂತೆ ಅಥವಾ Buffet mealನಂತಾದರೂ ಸರಿ ನಿಮಗೆ ಇಷ್ಟವಾಗುವಷ್ಟನ್ನು ಆನಂದಿಸಬಹುದು.

ಭಾಗ-3 ಈ ಸಲದ ಸ್ಪೆಷಲ್!  ನಿಮಗೆ ನೆನಪಿರಬಹುದು, ವಿವಿಧಭಾರತಿಯಲ್ಲಿ ‘ಸಾಜ್ ಔರ್ ಆವಾಜ್’ ಎಂಬ ಕಾರ್ಯಕ್ರಮ ಬರುತ್ತಿತ್ತು, ಒಂದು ಹಾಡು (ಚಿತ್ರಗೀತೆಯಿರಬಹುದು ಅಥವಾ ಭಜನ್, ಗಜಲ್, ಶಾಸ್ತ್ರೀಯಸಂಗೀತದ ಒಂದು ಬಂದಿಷ್ ಇತ್ಯಾದಿ ಯಾವುದೇ ಇರಬಹುದು) ಮೊದಲು ವಾದ್ಯಸಂಗೀತದಲ್ಲಿ, ಆಮೇಲೆ ಗಾಯನರೂಪದಲ್ಲಿ ಪ್ರಸಾರವಾಗುತ್ತಿತ್ತು. ಒಂಥರದ ರೋಮಾಂಚಕ ಅನುಭವವಾಗುವ ಕಾರ್ಯಕ್ರಮ. ಇಲ್ಲಿ ಮೋಹನ ರಾಗರಸಾಯನದ ಮೂರನೇ ಭಾಗದಲ್ಲಿ ಅದೇ ರೀತಿಯ ರೋಮಾಂಚಕ ಅನುಭವವಾಗುವಂತೆ ಮೋಹನ ರಾಗ ಆಧಾರಿತ ಹತ್ತು ಹಾಡುಗಳು ‘ಸಾಜ್ ಔರ್ ಆವಾಜ್’ ರೂಪದಲ್ಲಿ ಇವೆ.

ಮೂರೂ ಭಾಗಗಳನ್ನು ಆನಂದಿಸಿ Full-meal ಸವಿಯುತ್ತೀರಾದರೂ ಅಜೀರ್ಣವಂತೂ ಖಂಡಿತ ಆಗೋದಿಲ್ಲ ಎಂಬ ಭರವಸೆ ಕೊಡುತ್ತಿದ್ದೇನೆ. ಹಾಗಿದ್ದರೆ ಕಿವಿ ಮತ್ತು ಮನಸ್ಸೆಂಬ ತಟ್ಟೆ ಹಿಡಿದುಕೊಂಡು ಮೋಹನ ಮೃಷ್ಟಾನ್ನಕ್ಕೆ ಸಿದ್ಧರಾಗಿ!

*** *** *** *** *** *** ***

ಮೋಹನ ರಾಗರಸಾಯನ ಭಾಗ-1

ವಿವರಗಳೆಲ್ಲವೂ ವಿಡಿಯೋದಲ್ಲಿಯೇ ಇವೆ. ಪರದೆಯ ಮೇಲೆ ಮೂಡುವ ಪಠ್ಯವನ್ನು ಗಮನಿಸುತ್ತ ಸಂಗೀತವನ್ನು ಆಲಿಸಿದರಾಯ್ತು.

*** *** *** *** *** *** ***

ಮೋಹನ ರಾಗರಸಾಯನ ಭಾಗ-2

ಸಂಗೀತದ ಅಭ್ಯಾಸವನ್ನು ಮೊದಲಿಗೆ ಸರಳ ಸ್ವರಗಳು ಆಮೇಲೆ ಜಂಟಿ ಸ್ವರಗಳ ಕಲಿಕೆಯಿಂದ ಆರಂಭಿಸುತ್ತಾರೆ. ಸ್ವರ ಕಲಿಕೆ ಆದ ನಂತರ ಚಿಕ್ಕಿಚಿಕ್ಕ ‘ಗೀತ’ಗಳ ಗಾಯನ. ಲಂಬೋದರ ಲಕುಮಿಕರನನ್ನು ನಮಿಸಿದ ನಂತರ ಶಾರದೆಯ ವಂದನೆ. ಮೋಹನ ರಾಗದಲ್ಲಿ  “ವರವೀಣಾ ಮೃದುಪಾಣಿ..." ಗೀತಗಾಯನದ ಕಲಿಕೆ. ಇಲ್ಲಿದೆ ನೋಡಿ ಸಂಗೀತಾಭ್ಯಾಸಿಯೋರ್ವನ ವಯಲಿನ್ ವಾದನದಲ್ಲಿ “ವರವೀಣಾ ಮೃದುಪಾಣಿ ವನರುಹಲೋಚನ ರಾಣಿ..."

*** *** *** *** *** *** ***

ಮೋಹನ ರಾಗದ ಹಿಂದುಸ್ಥಾನಿ ರೂಪ ‘ಭೂಪ್’ ಅಥವಾ ‘ಭೂಪಾಲಿ’ ಎಂದು ಆಗಲೇ ಭಾಗ-1ರ ವಿಡಿಯೋದಲ್ಲಿ ತಿಳಿದುಕೊಂಡೆವಷ್ಟೆ? ಭೂಪ್ ರಾಗದ ‘ಲಕ್ಷಣಗೀತೆ’ ಇಲ್ಲಿದೆ. ರಾಗದಲ್ಲಿ ಯಾವ್ಯಾವ ಸ್ವರಗಳು ಬರುತ್ತವೆ, ಸಂವಾದಿ-ಪ್ರತಿವಾದಿ ಸ್ವರಗಳು ಯಾವುವು ಅಂತೆಲ್ಲ ಲಕ್ಷಣಗಳನ್ನು ಬಣ್ಣಿಸುವ ಗೀತೆ. ಭೂಪ್ ರಾಗದಲ್ಲೇ ಇದೆ ಎಂದು ಬೇರೆ ಹೇಳಬೇಕಿಲ್ಲ!

*** *** *** *** *** *** ***

ಮೋಹನ ರಾಗ ಆಧಾರಿತ ಕನ್ನಡ ಚಿತ್ರಗೀತೆಗೊಂದು ಉದಾಹರಣೆ ಕೊಡಿ ಎಂದು ಕೇಳಿದರೆ ಬೇಕಾದಷ್ಟು ಇವೆ. ಆದರೆ ನನ್ನ ಆಯ್ಕೆ ‘ಬಯಲು ದಾರಿ’ ಚಿತ್ರದ all time favorite “ಬಾನಲ್ಲು ನೀನೇ ಭುವಿಯಲ್ಲು ನೀನೇ..." ರಾಜನ್-ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಚಿ.ಉದಯಶಂಕರ್ ರಚನೆ. ಕಲ್ಪನಾ ಅಭಿನಯಕ್ಕೆ ಎಸ್.ಜಾನಕಿಯವರ ಸುಮಧುರ ಕಂಠ.

*** *** *** *** *** *** ***

ಸತ್ಯಸಾಯಿಬಾಬಾ ಅವರಿಂದ ಹೆಚ್ಚು ಪ್ರಚಾರಗೊಂಡ ಭಜನೆ “ಗೋವಿಂದ ಕೃಷ್ಣ ಜೈ ಗೋಪಾಲ ಕೃಷ್ಣ ಜೈ" ಕೇಳಿದ್ದೀರಾ? ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆಯ ಮಕ್ಕಳು ಹಾಡಿರುವ ಈ ಭಜನೆ ಶಂಕರ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದಾಗಿನ ಧ್ವನಿಮುದ್ರಣ ಇಲ್ಲಿದೆ.

*** *** *** *** *** *** ***

ಭೂಪ್ ರಾಗ ಆಧಾರಿತ  ಹಿಂದಿ ಚಿತ್ರಗೀತೆಗೊಂದು ಉದಾಹರಣೆ ಕೊಡಿ ಎಂದರೂ ತುಂಬಾನೇ ಇವೆ. ಭಾಗ-1ರ ವಿಡಿಯೋದಲ್ಲಿ ಕೆಲವು ಉದಾಹರಣೆಗಳನ್ನು ಕೊಟ್ಟಿದ್ದೆ, ಮುಂದೆ ಭಾಗ-3ರಲ್ಲೂ ಒಂದೆರಡು ಸೂಪರ್‌ಹಿಟ್ ಹಿಂದಿ ಚಿತ್ರಗೀತೆಗಳು ಇವೆ. ಈಗ ನಾವು ನೋಡಲಿರುವುದು ‘ಸಿಲ್‌ಸಿಲಾ’ ಚಿತ್ರದ “ದೇಖಾ ಏಕ್ ಖ್ವಾಬ್ ತೋ ಯೇ" ಹಾಡನ್ನು.  ನೆದರ್‌ಲ್ಯಾಂಡ್ಸ್‌ನ ಕ್ಯುಕೆನಾಫ್ ಟ್ಯುಲಿಪ್ಸ್ ಗಾರ್ಡನ್‌ನಲ್ಲಿ ಚಿತ್ರೀಕರಣಗೊಂಡ ಈ ಹಾಡು ಅಮಿತಾಭ್-ರೇಖಾ ನಿಜಜೀವನದ ಅಭಿನಯ ಎಂದೂ ಹೆಸರುವಾಸಿ. ಕಿಶೋರ್‌ಕುಮಾರ್ ಮತ್ತು ಲತಾ ಮಂಗೇಶ್ಕರ್ ಹಾಡಿರುವ ಈ ಗೀತೆಯ ಸಾಹಿತ್ಯ: ಜಾವೇದ್ ಅಖ್ತರ್; ಸಂಗೀತ: ಶಿವ್-ಹರಿ.

*** *** *** *** *** *** ***

ಸಿಲ್‌ಸಿಲಾ ಚಿತ್ರದ ಗೀತೆಯ ಬಗ್ಗೆ ವಿವರಗಳನ್ನು ಕೊಡುವಾಗ ಸಂಗೀತ ನಿರ್ದೇಶನ “ಶಿವ್-ಹರಿ" ಎಂದಷ್ಟೇ ಹೇಳಿದ್ದೆ, ಬೇಕಂತಲೇ. ಶಿವ್-ಹರಿ ಎಂದರೆ ಯಾರು? ಅವರಿಬ್ಬರು ಭಾರತದ ಮಹಾನ್ ಸಂಗೀತಗಾರರು, ಗಂಧರ್ವಲೋಕದಿಂದ ನಮಗೋಸ್ಕರ ಇಳಿದುಬಂದವರು, ಸಂತೂರ್ ಸಾಮ್ರಾಟ ಶಿವಕುಮಾರ್ ಶರ್ಮಾ ಮತ್ತು ಬಾನ್ಸುರಿ ಬಾದಷಹ ಹರಿಪ್ರಸಾದ್ ಚೌರಾಸಿಯಾ! ಅವರಿಬ್ಬರ ಜುಗಲ್‌ಬಂದಿ ಸಂಗೀತ ಸಮಾರಾಧನೆಯೆಂದರೆ ಹೇಗಿರಬೇಡ!? ಅದರಲ್ಲೂ ಅವರು ‘ಭೂಪಾಲಿ’ ರಾಗವನ್ನೇ ಎತ್ತಿಕೊಂಡರೆ? ನೀವೇ ತಿಳಿದುಕೊಳ್ಳಿ ಹೇಗಿರುತ್ತದೆಂದು-

*** *** *** *** *** *** ***

ಹುಯಿಲಗೋಳ ನಾರಾಯಣ ರಾಯರು ಬರೆದ ಕರ್ನಾಟಕ ಏಕೀಕರಣ ಗೀತೆ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಕೇಳದ ಕನ್ನಡಿಗರಿದ್ದಾರೆಯೇ? ಈ ‘ನಾಡಗೀತೆ’ಯನ್ನು ಪ್ರಸಿದ್ಧಗೊಳಿಸಿದ ಕೀರ್ತಿ ಪಿ.ಕಾಳಿಂಗರಾಯರಿಗೆ ಸಲ್ಲುತ್ತದೆ. ಕೆಲ ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್‌ನವರು ‘ಹಚ್ಚೇವು ಕನ್ನಡದ ದೀಪ’ ಎಂಬ ಧ್ವನಿಸುರುಳಿಯನ್ನು ಹೊರತಂದರು. ಸಿ.ಅಶ್ವಥ್ ಮತ್ತು ಸಂಗಡಿಗರು ಹಾಡಿದ ಎಂಟು ಹಾಡುಗಳ ಗೀತಗುಚ್ಛವದು. ಅದರಲ್ಲಿ ಈ ಹಾಡು ಕೂಡ ಇತ್ತು.  ಈಗ ಕೇಳೋಣ, ಮೋಹನ ರಾಗದಲ್ಲಿ  “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"

*** *** *** *** *** *** ***

ಈಗ ಒಂದು ದೃಶ್ಯವನ್ನು ಕಲ್ಪಿಸಿಕೊಳ್ಳಿ. ಶಾಂತಸಾಗರದ ಯಾವುದೋ ಒಂದು ತೀರದಲ್ಲಿ, ನರಪಿಳ್ಳೆಯೂ ಇಲ್ಲದ ಪ್ರದೇಶದಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ ಸೂರ್ಯಾಸ್ತವನ್ನು ನೋಡುತ್ತ ಸಾಗರದ ಅಲೆಗಳ ವರ್ಣವೈಭವವನ್ನು ಸವಿಯುತ್ತ ನೀವು ಕುಳಿತಿದ್ದೀರಿ. ಬೇಕಿದ್ದರೆ ಧ್ಯಾನಮಗ್ನರಾಗಿದ್ದೀರಿ ಅಂತನೂ ಇಟ್ಕೊಳ್ಳಿ. ಸಾಗರದ ಅಲೆಗಳ ಜತೆಯಲ್ಲೇ ಸಂಗೀತಸಾಗರದ ಅಲೆಗಳು ಹಿತಮಿತವಾಗಿ ನಿಮ್ಮ ಕಿವಿಗಳಿಗೆ ಅಪ್ಪಳಿಸುತ್ತವೆ. ಅದೂ ಎಂಥ ಸಂಗೀತ? ಅಚ್ಚಭಾರತೀಯ ಶೈಲಿಯ ಹಿಂದುಸ್ಥಾನಿ ಗಾಯನ, ರಾಗ ‘ಭೂಪ್’ ಅಲೆಅಲೆಯಾಗಿ ಕೇಳಿಬರುತ್ತಿದೆ... ಅಂಥ ಅನುಭವ ನಿಮಗೀಗ ಕುಳಿತಲ್ಲೇ ಆಗಬೇಕಿದ್ದರೆ Princes of Sea ಆಲ್ಬಮ್‌ನ ಈ Waves Of Paradise ಟ್ರ್ಯಾಕ್‌ಅನ್ನು ನೀವು ಆಲಿಸಬೇಕು. ಉಸ್ತಾದ್ ಸಲಾಮತ್ ಅಲಿ ಖಾನ್ ಮತ್ತು ಉಸ್ತಾದ್ ಶಫ್‌ಕತ್ ಅಲಿ ಖಾನ್ ಅವರ ಗಾಯನದೊಂದಿಗೆ ರಘುನಾಥ ಸೇಠ್ ಮತ್ತು ಕ್ರಿಸ್ ಹಿನ್‌‌ಜೆ ಅವರ ಬಾನ್ಸುರಿ ವಾದನ. ಜತೆಯಲ್ಲೇ ಸಾಗರದ ಅಲೆಗಳ ಮೊರೆತ.

*** *** *** *** *** *** ***

ಮಂಟಪ ಪ್ರಭಾಕರ ಉಪಾಧ್ಯ ಹೆಸರು ಕೇಳಿರಬಹುದು ನೀವು. ಅವರ ‘ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ’ಗಳ ಬಗ್ಗೆಯೂ ಕೇಳಿರಬಹುದು ಅಥವಾ ನೋಡಿ ಆನಂದಿಸಿರಲೂಬಹುದು. ಮಂಟಪ ಉಪಾಧ್ಯರ ‘ವೇಣು ವಿಸರ್ಜನ’ ಯಕ್ಷಗಾನ ಪ್ರಸಂಗದಲ್ಲಿ “ನಂದ ತನಯನಾಗಮಿಸುವ ಸುಳಿವು ಸಿಕ್ಕಿದೆ..." ಪದ್ಯ, ಮೋಹನ ರಾಗದಲ್ಲಿ.  ಭಾಗವತರು ವಿದ್ವಾನ್ ಗಣಪತಿ ಭಟ್. ಈ ಏಕವ್ಯಕ್ತಿ ಯಕ್ಷಗಾನಗಳ ಪರಿಕಲ್ಪನೆ ಮತ್ತು ಸಂಭಾಷಣೆ ಶತಾವಧಾನಿ ಡಾ.ಆರ್.ಗಣೇಶ್ ಅವರದು.

*** *** *** *** *** *** ***

ಮ್ಯಾಂಡೋಲಿನ್ ಸಂಗೀತದ child prodigy (ಬಾಲಪ್ರತಿಭೆ)ಯಾಗಿ ಹೆಸರುವಾಸಿಯಾಗಿ ಈಗ ಪ್ರಸಿದ್ಧಿಯ ಶಿಖರವೇರಿರುವ ಯು. ಶ್ರೀನಿವಾಸ್ ಮತ್ತು ಅವರ ಕಸಿನ್ ಯು. ರಾಜೇಶ್ ದ್ವಂದ್ವ ಮ್ಯಾಂಡೊಲಿನ್ ವಾದನದಲ್ಲಿ ಪಾಪನಾಸಂ ಶಿವನ್ ಅವರ ಕೃತಿ "ಕಪಾಲಿ". ಸಂಗೀತ ಕಚೇರಿಯ ಸಭಾಂಗಣದಲ್ಲೇ ಇದ್ದೇವೇನೋ ಅನಿಸುವಷ್ಟು ಮೋಹನ ರಾಗದ ಝೇಂಕಾರ ಇಲ್ಲಿ ನಿಮಗೆ ಕೇಳಿಬರುತ್ತದೆ. ಇದರೊಂದಿಗೆ ರಾಗರಸಾಯನ ಭಾಗ-2 ಮುಗಿಯುತ್ತದೆ.

*** *** *** *** *** *** ***

ಮೋಹನ ರಾಗರಸಾಯನ ಭಾಗ-3

ಪ್ರವೀಣ್ ಗೋಡಖಿಂಡಿಯವರ ಕೊಳಲಿನ ಇಂಪಿನೊಂದಿಗೆ ಈ ‘ಸಾಜ್ ಔರ್ ಆವಾಜ್’ ವಿಶೇಷ ಕಾರ್ಯಕ್ರಮವನ್ನು ಆರಂಭಿಸೋಣ:

*

ಅದು ಯಾವ ಹಾಡು ಗೊತ್ತಾಯಿತೇ? "ಸ್ವಾಗತಮ್ ಕೃಷ್ಣ ಶರಣಾಗತಂ ಕೃಷ್ಣ..." ಈಗ ಕೆ.ಜೆ.ಯೇಸುದಾಸ್ ಅವರ ಧ್ವನಿಯಲ್ಲಿ ಕೇಳಿ ಆನಂದಿಸೋಣ.

*** *** *** *** *** *** ***

ಭಾಗ-1ರ ವಿಡಿಯೋದಲ್ಲಿ ಮೋಹನ ರಾಗದ ಬಗ್ಗೆ ವಿವರಿಸುತ್ತ ಚೈನಾ, ಜಪಾನ್, ಮಲೇಷ್ಯಾ ಮುಂತಾದ ದೇಶಗಳ ಸಂಗೀತದಲ್ಲೂ ಮೋಹನ ರಾಗದ್ದೇ ಸ್ವರಗಳಿವೆ ಎಂದಿದ್ದನ್ನು ನೀವು ಗಮನಿಸಿರಬಹುದು. Chinese music beats ಬಳಸಿ ಆರ್ಕೆಸ್ಟ್ರಾದಲ್ಲಿ ನುಡಿಸಿದ ಒಂದು ತಮಿಳು ಚಿತ್ರಗೀತೆ ಇಲ್ಲಿದೆ. ಯಾವುದೆಂದು ಗುರುತಿಸಬಲ್ಲಿರಾ?

*

ಇದು, ಮಣಿ ರತ್ನಂ ನಿರ್ದೇಶನದ ‘ಅಗ್ನಿ ನಕ್ಷತ್ರಮ್’ ತಮಿಳು ಚಿತ್ರದ ಹಾಡು “ನಿನ್ನುಕೋರಿ ವರ್ಣಮ್..." ಈಗ ಕೆ.ಎಸ್.ಚಿತ್ರಾ ಧ್ವನಿಯಲ್ಲಿ ಕೇಳೋಣ. ಸಂಗೀತ ನಿರ್ದೇಶನ: ಇಳಯರಾಜ.

*** *** *** *** *** *** ***

ಮತ್ತೊಮ್ಮೆ ಪ್ರವೀಣ್ ಗೋಡಖಿಂಡಿ! ಮತ್ತೊಮ್ಮೆ ಮೋಹನ ಮುರಳಿ!

*

ಪುರಂದರ ದಾಸರ ಪದವನ್ನೂ ಮೋಹನ ರಾಗವನ್ನೂ ಅಜರಾಮರವಾಗಿಸಿದ ವಿದ್ಯಾಭೂಷಣರ ಕಂಠಸಿರಿಯಲ್ಲಿ “ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ..."

*** *** *** *** *** *** ***

ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೊಫೋನ್ ವಾದನದ ತುಣುಕನ್ನು ರಾಗರಸಾಯನದಲ್ಲಿ ಸೇರಿಸಬೇಕೆಂದು ಹಿಂದಿನ ಎರಡು ಸಂಚಿಕೆಗಳಲ್ಲೂ ನಾನು ಅಂದುಕೊಂಡಿದ್ದೆ, ಆದರೆ ಸೂಕ್ತವಾದ ಟ್ರ್ಯಾಕ್ ಸಿಕ್ಕಿರಲಿಲ್ಲ. ಈಗ ಸಿಕ್ಕಿತು!

*

ಮರಾಠಿ ಗೊತ್ತಿಲ್ಲದವರಿಗೂ ಮರಾಠಿ ಅಭಂಗ ಎಂದೊಡನೆ ಥಟ್ಟನೆ ನೆನಪಾಗುವಷ್ಟು ಜನಜನಿತವಾಗಿರುವ “ಮಾಝೆ ಮಾಹೇರ ಪಂಢರೀ..." ಸಂತ ಏಕನಾಥ ಮಹಾರಾಜರ ರಚನೆ,  ಏಕಮೇವಾದ್ವಿತೀಯ ಪಂಡಿತ್ ಭೀಮಸೇನ್ ಜೋಷಿ ಗಾಯನ. ಅಭಂಗದ ಭಾವಾನುವಾದ ಮತ್ತು ಪ್ರತಿಸಾಲಿನ ಅರ್ಥವನ್ನೂ ಕೊಡಲಾಗಿದೆ, ಗಮನಿಸಿ.

*** *** *** *** *** *** ***

ಮತ್ತಮತ್ತೆ  ಪ್ರವೀಣ್ ಗೋಡಖಿಂಡಿ, ಮತ್ತೆಮತ್ತೆ ಕೊಳಲು! ಏನೂ ಮಾಡೋಣ? ಮೋಹನ ರಾಗವನ್ನು  ಕೊಳಲ ಧ್ವನಿಯಲ್ಲಿ, ಅದೂ ಪ್ರವೀಣ್ ಗೋಡಖಿಂಡಿ ನುಡಿಸಿದ್ದನ್ನು ಕೇಳುವುದೆಂದರೆ ಅಕ್ಷರಗಳಲ್ಲಿ ಹಿಡಿದಿಡಲಾಗದ ಅನುಭವ. ನೀವೂ ಒಪ್ಪುತ್ತೀರಿ ಈ ಕೆಳಗಿನ ಟ್ರ್ಯಾಕ್‌ಅನ್ನು ಕೇಳಿದರೆ:

*

ಎಂಥ ಅದ್ಭುತ ಕೊಳಲಗಾನ! ಈಗ, ಲತಾ ಮಂಗೇಶ್ಕರ್ ಹಾಡಿರುವ “ಪಂಖ್ ಹೊತೇ ತೋ ಉಡ್ ಆತೀರೇ..." ಹಾಡು. ಇದು ‘ಸೆಹ್ರಾ’ ಚಿತ್ರದ್ದು. ಗೀತರಚನೆ- ಹಸರತ್ ಜೈಪುರಿ; ಸಂಗೀತ- ರಾಮಲಾಲ್ ಹೀರಾಪನ್ನಾ

*** *** *** *** *** *** ***

ಮುಂದಿನ ಪ್ರಸ್ತುತಿ ಚಿದಂಬರ ಕಾಕತ್ಕರ್ ಅವರ ಕೊಳಲು ವಾದನ. ಮಂಗಳೂರಿನಲ್ಲಿ ಬಿಎಸ್‌ಎನ್‌ಎಲ್ ಉದ್ಯೋಗಿ (ಈಗ ನಿವೃತ್ತ) ಆದ ಇವರು ನನ್ನ ಸೋದರಮಾವ. ಹವ್ಯಾಸಕ್ಕೆಂದು ಸಂಗೀತ ಕಲಿತು (ಅದೂಹೇಗೆ ಏಕಲವ್ಯವಿದ್ಯೆಯಂತೆ) ಕ್ರಿಯಾಶೀಲರಾಗಿ ಪ್ರಯೋಗಗಳನ್ನು ಮಾಡುತ್ತಿರುವವರು. ಇದೂ ಅಂಥದೇ ಒಂದು ಪ್ರಯೋಗ!

*

ಸಾಗರ ಸಂಗಮಂ’ ತೆಲುಗು ಚಿತ್ರದಲ್ಲಿ, ಇಳಯರಾಜ ಸಂಗೀತ ನಿರ್ದೇಶನದಲ್ಲಿ  ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಹಾಡಿದ “ವೇ ವೇಲಾ ಗೋಪೆಮ್ಮಲಾ"

*** *** *** *** *** *** ***

ಬುಲ್‌ಬುಲ್‌ ತರಂಗ’ ಎಂಬ ಒಂದು ವಾದ್ಯವಿದೆ ಗೊತ್ತೇ? ಅದಕ್ಕೆ ಶಾಹಿಬಾಜಾ ಎಂದೂ ಹೆಸರಿದೆಯಂತೆ. ವಿನಯ್ ಕಂಟಕ್ ಎಂಬುವರು ಬುಲ್‌ಬುಲ್‌ತರಂಗದಲ್ಲಿ ಅದ್ಭುತವಾಗಿ ನುಡಿಸಿರುವ ಹಾಡನ್ನು ಕೇಳಿ. ಯಾವ ಹಾಡು ಎಂದು ನಿಮಗೆ ತತ್‌ಕ್ಷಣದಲ್ಲೇ ಗೊತ್ತಾಗಬಹುದು. ಆದರೆ ನೀವು ಇನ್ನೂ ಒಂದು ಅಂಶವನ್ನು ಗಮನಿಸಬೇಕು. ಹಾಡಿನುದ್ದಕ್ಕೂ ಅವರು ಬುಲ್‌ಬುಲ್‌ತರಂಗದಲ್ಲಿ ಎರಡು ನಿರ್ದಿಷ್ಟ ಬಟನ್‌ಗಳನ್ನು ಮುಟ್ಟುವುದೇ ಇಲ್ಲ! ಅವು ಕ್ರಮವಾಗಿ ‘ಮ’ (ಮಧ್ಯಮ) ಮತ್ತು ‘ನಿ’ (ನಿಷಾಧ) ಸ್ವರಗಳ ಬಟನ್‌ಗಳು. ಮೋಹನರಾಗದಲ್ಲಿ ‘ಮ’ ಮತ್ತು ‘ನಿ’ ಸ್ವರಗಳಿಲ್ಲ.

*

ಬುಲ್‌ಬುಲ್‌ತರಂಗದಲ್ಲಿ ಬಾರಿಸಿದ ಹಾಡು ಯಾವುದೆಂದು ಗೊತ್ತಾಯ್ತಲ್ಲ? ‘ಸಂತ ತುಕಾರಾಮ್’ ಚಿತ್ರಕ್ಕಾಗಿ ಚಿ.ಸದಾಶಿವಯ್ಯ (ಚಿ.ಉದಯಶಂಕರರ ತಂದೆ) ರಚಿಸಿದ ಗೀತೆಗೆ ಸಂಗೀತ ನಿರ್ದೇಶನ ವಿಜಯ ಭಾಸ್ಕರ್.  ಡಾ.ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ಕನ್ನಡಿಗರ ಮನೆಮನೆಯಲ್ಲೂ ಮೊಳಗಿದ “ಜಯತು ಜಯ ವಿಟ್ಠಲಾ..."

*** *** *** *** *** *** ***

ಈಗ ಎಲಕ್ಟ್ರಾನಿಕ್ ಸಿಂಥೆಸೈಜರ್‌ನಲ್ಲಿ ನುಡಿಸಿರುವ ಒಂದು ಜನಪ್ರಿಯ ಹಿಂದಿ ಚಿತ್ರಗೀತೆಯ ಟ್ಯೂನ್ ಕೇಳೋಣ.

*

ರಾಗದ ಹೆಸರು ಭೂಪ್ ಎಂದು ಇರುವುದಕ್ಕೂ,  ಆ ರಾಗವನ್ನು ತನ್ನ ಉಸಿರೆಂದೇ ತಿಳಿದುಕೊಂಡು ಹಾಡುವ ಗಾಯಕನ ಹೆಸರು ‘ಭೂಪೇನ್’ ಎಂದಿರುವುದಕ್ಕೂ ಏನಾದರೂ ಸಂಬಂಧ? ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಭೂಪೇನ್ ಹಜಾರಿಕಾ ಸಂಗೀತ ನಿರ್ದೇಶಿಸಿ ಸ್ವಯಂ ಹಾಡಿರುವ “ದಿಲ್ ಹುಮ್ ಹುಮ್ ಕರೇ..." ಗೀತೆಯಿಲ್ಲದೆ ಮೋಹನ/ಭೂಪ್ ಕುರಿತ ಯಾವ ಕಾರ್ಯಕ್ರಮವೂ ಪರಿಪೂರ್ಣವಾಗಲಿಕ್ಕಿಲ್ಲ. ‘ರುಡಾಲಿ’ ಚಿತ್ರದ ಈ ಗೀತೆಯ ಸಾಹಿತ್ಯ ಗುಲ್ಜಾರ್ ಅವರದು.

*** *** *** *** *** *** ***

ಮತ್ತೊಮ್ಮೆ ಕೊಳಲು ವಾದನ, ಆದರೆ ಇದು ಪ್ರವೀಣ್ ಗೋಡಖಿಂಡಿಯಲ್ಲ, ಚಿದಂಬರ ಕಾಕತ್ಕರರೂ ಅಲ್ಲ.  ವಿಶಾಲ್ ಪೊನ್ನಿರ ಎಂಬೊಬ್ಬ ಹವ್ಯಾಸಿ ಸಂಗೀತಕಲಾವಿದರದು.

*

ಆ ಟ್ಯೂನ್ ಕೇಳುತ್ತಿದ್ದಾಗಲೇ ಬಹುಶಃ ನಿಮ್ಮ ಕಣ್ಮುಂದೆ ಭಕ್ತ ಕುಂಬಾರನಾಗಿ ಡಾ.ರಾಜಕುಮಾರ್ ಬಂದಿರಬಹುದು. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಹುಣಸೂರು ಕೃಷ್ಣಮೂರ್ತಿಯವರ ರಚನೆ. ಡಾ.ರಾಜ್ ಅವರ ‘ಶಾರೀರ’ವಾಗಿ ಅಮೋಘ ಹಿನ್ನೆಲೆಗಾಯನ ಮಾಡಿದ ಮಹಾನ್ ಕಲಾವಿದ ಡಾ. ಪಿ.ಬಿ.ಶ್ರೀನಿವಾಸ್ ಕಂಠಸಿರಿಯಲ್ಲಿ “ಹರಿ ನಾಮವೇ ಚಂದ ಅದ ನಂಬಿಕೋ ಕಂದ..."

*** *** *** *** *** *** ***

ಕಾರ್ಯಕ್ರಮ ಮುಗಿಯುತ್ತ ಬಂತು. ಹೋಗಿ ಬರುತ್ತೇನೆ ಎನ್ನಲು ಯಾವ ಟ್ಯೂನ್?

*

ಲವ್ ಇನ್ ಟೋಕಿಯೋ ಚಿತ್ರಕ್ಕಾಗಿ ಹಸರತ್ ಜೈಪುರಿ ಬರೆದ ಗೀತೆ, ಸಂಗೀತ ನಿರ್ದೇಶನ ಶಂಕರ್ ಜೈಕಿಷನ್. ಲತಾ ಮಂಗೇಶ್ಕರ್ ಧ್ವನಿಯಲ್ಲಿ “ಸಾಯೋನಾರಾ ಸಾಯೋನಾರಾ..." [ಜಪಾನಿಸ್ ಭಾಷೆಯಲ್ಲಿ, ಹೋಗಿ ಬರುತ್ತೇನೆ, ಹೋಗಿ ಬರುತ್ತೇನೆ...!]

*** *** *** *** *** *** ***

ಇಲ್ಲಿಗೆ ಮೋಹನ ಮಾಧುರ್ಯ ಮುಗಿಯಿತು.

mohanamelody.jpg

ಹೇಗನಿಸಿತು ಈಸಲದ ರಾಗರಸಾಯನ? ನಿಮ್ಮ ಅನಿಸಿಕೆ, ಸಲಹೆ, ಸೂಚನೆಗಳಿಗೆ ಆತ್ಮೀಯ ಸ್ವಾಗತವಿದೆ!

* * *

ರಾಗರಸಾಯನ ಮಾಲಿಕೆಯಲ್ಲಿ ಹಿಂದಿನ ಸಂಚಿಕೆಗಳು:

1. ಶಿವರಂಜನಿ ರಾಗರಸಾಯನ

2. ಕಲ್ಯಾಣಿ ಕಲರವ

*** *** *** *** *** *** ***


You can follow any responses to this entry through the RSS 2.0 feed. You can skip to the end and leave a response. Pinging is currently not allowed.