ಪದ-ಶ್ರಾವ್ಯ

ಈಗ ಆಡಿಯೋ ಟಚ್!

11
Jun 2011
Blankets of Love and Affection
Posted in DefaultTag by sjoshi at 5:38 am

ದಿನಾಂಕ  12 ಜೂನ್ 2011ರ ಸಂಚಿಕೆ...

ಬಣ್ಣಬಣ್ಣದ ಕೌದಿಯಲ್ಲಿ ಬೆಚ್ಚಗಿನ ಪ್ರೀತಿ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

“ಮಗಳು ಸಿಂಧು ದಕ್ಷಿಣ ಆಫ್ರಿಕಾಕ್ಕೆ ರಿಸರ್ಚ್ ವರ್ಕ್‌ಗೋಸ್ಕರ ಹೇಗೂ ಹೋಗುವವಳಿದ್ದಳು. ಅವಳ ಲಗೇಜ್‌ನೊಂದಿಗೆ ಸುಮಾರು 60ಕ್ಕೂ ಹೆಚ್ಚು ಬ್ಲಾಂಕೆಟ್‌ಗಳನ್ನು ಕಳಿಸಿದೆವು. ‘ಪ್ರೊಜೆಕ್ಟ್ ಲೈನಸ್’ನ ನಮ್ಮ ನಾರ್ತ್‌ಕೆರೊಲಿನಾ ಶಾಖೆಯಲ್ಲಿ ಸಂಗ್ರಹವಾದ ಬ್ಲಾಂಕೆಟ್‌ಗಳು ಅವು. ಉಣ್ಣೆಯಿಂದ ಕೈಮಗ್ಗದಲ್ಲಿ ತಯಾರಿಸಿದವು, ಅಥವಾ ಕ್ರೋಷೆ ರೀತಿಯಲ್ಲಿ ಕೈಯಿಂದ ಹೆಣೆದು ಮಾಡಿದವು. ಸಿಂಧು ಅವುಗಳನ್ನು ಆಫ್ರಿಕಾದಲ್ಲಿ ತನ್ನ ಸಂಶೋಧನಾ ಕ್ಷೇತ್ರದಲ್ಲಿರುವ ಎಚ್‌ಐವಿ ಪೀಡಿತ ಬಡ ಮಕ್ಕಳಿಗೆ ಹಂಚುತ್ತಾಳೆ. ಅದೇರೀತಿ ಇನ್ನೊಂದಿಷ್ಟು ಬ್ಲಾಂಕೆಟ್‌ಗಳನ್ನು ನಮ್ಮದೇ ಶಾಖೆಯಿಂದ ಹಾಂಡುರಾಸ್ ದೇಶದ ಅನಾಥಾಶ್ರಮಗಳ ಮಕ್ಕಳಿಗೂ ಕಳಿಸಿಕೊಟ್ಟಿದ್ದೇವೆ. Project Linus ಎಂಬುದು ನಿಜಕ್ಕೂ ಒಂದು ಹೃದಯಸ್ಪರ್ಶಿ ಕಾನ್ಸೆಪ್ಟ್. ನೀವು ಅದರ ಬಗ್ಗೆ ಅಂಕಣದಲ್ಲಿ ಬರೆದು ಎಲ್ಲರಿಗೂ ಪರಿಚಯಿಸಬೇಕು...” ಎಂದರು ಸವಿತಾ ರವಿಶಂಕರ್, ಮೊನ್ನೆ ದೂರವಾಣಿಯಲ್ಲಿ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ.

ಸವಿತಾ ಮೂಲತಃ ಮೈಸೂರಿನವರು, ಈಗಿರುವುದು ಅಮೆರಿಕದ ನಾರ್ತ್‌ಕೆರೊಲಿನಾದಲ್ಲಿ. ಪತಿ ರವಿಶಂಕರ್ ಮತ್ತು ಇಬ್ಬರು ಹೆಣ್ಮಕ್ಕಳು ಸಿಂಧು-ಸೀಮಾ ಸೇರಿದ ಪುಟ್ಟ ಸಂಸಾರ. ವಿಶ್ವಜೀವನವೊಂದು ಪಾರವಿಲ್ಲದ ಸಿಂಧು ಎನ್ನುತ್ತ ಸೀಮಾತೀತವಾಗಿ ತನ್ನ ಕೈಲಾದಷ್ಟು ವಿಶ್ವಪ್ರಜೆಯಾಗಿ ಜೀವಿಸುವವರು ಸವಿತಾ. ದಸರೆಯಲ್ಲಿ ಮನೆತುಂಬ ಗೊಂಬೆಗಳನ್ನು ಕೂಡಿಸಿ ಭಾರತೀಯ ಸಂಸ್ಕೃತಿಯನ್ನು ಅಮೆರಿಕನ್ನರಿಗೆ ಪರಿಚಯಿಸುತ್ತಾರೆ; ಅಮೆರಿಕದ ಜೀವನದಿಂದ ಕಲಿತದ್ದನ್ನು, ಗಳಿಸಿದ್ದನ್ನು ಮೈಸೂರಿನಲ್ಲಿ ಬೇರೆಬೇರೆ ಶಾಲೆಗಳ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಇಂಥ ರಚನಾತ್ಮಕ ಚಿಂತನೆ-ಚಟುವಟಿಕೆಗಳ ಬಗ್ಗೆಯೇ ಒಮ್ಮೆ ಬರೆಯಬೇಕೆಂದಿದ್ದೇನೆ. ಇರಲಿ, ಇವತ್ತು ಪ್ರೊಜೆಕ್ಟ್ ಲೈನಸ್ ವಿಚಾರ ತಿಳಿದುಕೊಳ್ಳೋಣ. ಇದು ಸವಿತಾ ಅವರ ಕಲ್ಪನೆಯಲ್ಲ; ಅವರು ಇದರಲ್ಲೊಬ್ಬ ಸಹಭಾಗಿ, ಸ್ವಯಂಸೇವಕಿ ಅಷ್ಟೇ.

1995 ಡಿಸೆಂಬರ್ 24. ಕ್ರಿಸ್ಮಸ್‌ಈವ್ ಸಂಭ್ರಮದ ದಿನ. ಅವತ್ತು ‘ಪೆರೇಡ್’ (ಅಮೆರಿಕದಾದ್ಯಂತ ಭಾನುವಾರದ ವಾರ್ತಾಪತ್ರಿಕೆಗಳೊಂದಿಗೆ ಉಚಿತವಾಗಿ ವಿತರಣೆಯಾಗುವ ಮ್ಯಾಗಜಿನ್)ನಲ್ಲಿ Joy to the World ಎಂಬ ಒಂದು ವಿಶೇಷ ನುಡಿಚಿತ್ರ ಪ್ರಕಟವಾಯ್ತು. ಪುಲಿಟ್ಜರ್ ಪ್ರಶಸ್ತಿವಿಜೇತ ಫೋಟೊಜರ್ನಲಿಸ್ಟ್ ಎಡ್ಡಿ ಆಡಮ್ಸ್ ಬರೆದ ಲೇಖನವದು. ಅದರಲ್ಲಿ ಲೌರಾ ಎಂಬ ಪುಟ್ಟ ಹುಡುಗಿಯೊಬ್ಬಳ ಕಥಾನಕ. ಬಡಕಲು ದೇಹದ, ಬೋಳು ತಲೆಯ, ಕೈಯಲ್ಲೊಂದು ಬ್ಲಾಂಕೆಟ್ ಹಿಡಿದುಕೊಂಡಿದ್ದ ಅವಳ ಚಿತ್ರ. ಲೌರಾ ಎರಡು ವರ್ಷದವಳಿದ್ದಾಗಿಂದ ಲುಕೀಮಿಯಾ ರೋಗಬಾಧಿತೆ. ಕೆಮೊಥೆರಪಿಗಾಗಿ ಆಸ್ಪತ್ರೆಗೆ ಓಡಾಡುತ್ತಿದ್ದಳು. ಪ್ರತಿಸಲ ಆಸ್ಪತ್ರೆಗೆ ಹೋಗುವಾಗಲೂ ತನ್ನ ನೆಚ್ಚಿನ ಬ್ಲಾಂಕೆಟನ್ನು ಜತೆಯಲ್ಲಿ ಒಯ್ಯುತ್ತಿದ್ದಳು. ಅದು ಅವಳಿಗೆ ನೋವು ಮರೆಸಿ ಉಲ್ಲಾಸ ತಂದುಕೊಡುತ್ತಿತ್ತು. ಮಾನಸಿಕ ಧೈರ್ಯ ಹೆಚ್ಚಿಸುತ್ತಿತ್ತು,  ಅವಳ ಕಾಯಿಲೆ ವಾಸಿಯಾಗುವುದರಲ್ಲಿ ಬ್ಲಾಂಕೆಟ್‌ನ ಪಾತ್ರವೂ ಪ್ರಮುಖವಾಗಿತ್ತು... ಅಂತೆಲ್ಲ ಮನಕಲಕುವ ಚಿತ್ರಣ ಆ ಲೇಖನದಲ್ಲಿತ್ತು.

laura the girl suffered from leukemia

ಡೆನ್ವರ್ ನಗರದ ಕರೆನ್ ಲೌಕ್ಸ್ ಎಂಬ ಓದುಗಳ ಮೇಲೆ ಪೆರೇಡ್ ಲೇಖನ ಗಾಢವಾದ ಪರಿಣಾಮ ಬೀರಿತು. ಲೌರಾಳ ಚಿತ್ರ, ಆಕೆಯ ಕೈಲಿದ್ದ ಬ್ಲಾಂಕೆಟ್, ಲೌರಾಗೆ ಅದರಿಂದಾದ ಉಪಯೋಗದ ವಿವರಗಳು ಕರೆನ್ ಮನಸ್ಸನ್ನು ಬಹಳವಾಗಿ ಕಾಡಿತು. ಲೌರಾಳಿಗಾದರೋ ಸ್ವಂತದ ಕಂಬಳಿ ಇತ್ತು, ಬೇರೆ ನತದೃಷ್ಟ ಮಕ್ಕಳ ಬಗ್ಗೆ ಕರೆನ್ ಯೋಚಿಸತೊಡಗಿದಳು. ಆಸ್ಪತ್ರೆಗಳಲ್ಲಿ ಅಂಥ ಎಷ್ಟು ಮಕ್ಕಳಿರುವುದಿಲ್ಲ, ರೋಗದ ಭಯಾನಕತೆಯನ್ನು ಮತ್ತಷ್ಟು ಹೆಚ್ಚಿಸುವ ಬಿಳಿಚಾದರ ಹೊದ್ದುಕೊಂಡಿರುವವರು? ಅವರ ಸ್ಥಿತಿಯನ್ನು ಊಹಿಸಿ ಮಮ್ಮಲಮರುಗಿದಳು. ಕರೆನ್ ಆಗಷ್ಟೇ ಉಣ್ಣೆಯಿಂದ ಕಂಬಳಿ ಹೆಣೆಯುವುದನ್ನು ಕಲಿತಿದ್ದಳು. ಹೊಸದಾಗಿ ನೇಯ್ದಿದ್ದ ಒಂದೆರಡು ಕಂಬಳಿಗಳನ್ನು ತೆಗೆದುಕೊಂಡು ಆಕೆ ಡೆನ್ವರ್‌ನ ಆಸ್ಪತ್ರೆಗೆ ಹೊರಟೇಬಿಟ್ಟಳು. ಅಲ್ಲಿನ ವೈದ್ಯರನ್ನು ಭೇಟಿಯಾಗಿ ನಿಮ್ಮಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಯಾರಾದರೂ ಬಡ ಮಕ್ಕಳಿದ್ದರೆ ಅವರಿಗೆ ಪ್ರೀತಿಯ ಉಡುಗೊರೆಯಾಗಿ ಇವನ್ನು ತಂದಿದ್ದೇನೆ ಎಂದಳು. ಅವಳ ಔದಾರ್ಯವನ್ನು ಅರ್ಥಮಾಡಿಕೊಂಡ ವೈದ್ಯರು ಸಂತೋಷದಿಂದ ಕಂಬಳಿಗಳನ್ನು ಸ್ವೀಕರಿಸಿ ಮಕ್ಕಳಿಗೆ ಕೊಟ್ಟರು. ಚಿಕಿತ್ಸೆಯಿಂದ ಬರದಿದ್ದ ಗೆಲುವು ಬಣ್ಣಬಣ್ಣದ ಕಂಬಳಿಯಿಂದ ಬಂದಿತ್ತು ಆ ಮಕ್ಕಳ ಮುಖದಲ್ಲಿ.

blanket3_for_kids.jpg

ಕರೆನ್ ಅವತ್ತೇ ಸಂಕಲ್ಪ ಮಾಡಿದಳು. ರೋಗಪೀಡಿತ, ಅನಾಥ, ಪ್ರೀತಿವಂಚಿತ ಮಕ್ಕಳಿಗೆ ಬೆಚ್ಚಗಿನ ಕಂಬಳಿಗಳನ್ನು ಉಚಿತವಾಗಿ ಒದಗಿಸುವ ಯೋಜನೆಯೊಂದನ್ನು ತಯಾರಿಸಿದಳು. ಪ್ರೊಜೆಕ್ಟ್ ಲೈನಸ್ ಎಂದು ಅದಕ್ಕೆ ಹೆಸರಿಟ್ಟಳು. Linus ಎಂದರೆ ಚಾರ್ಲ್ಸ್ ಸ್ಕಲ್ಜ್‌ನ ಜಗದ್ವಿಖ್ಯಾತ Peanuts ಕಾಮಿಕ್‌ಸರಣಿಯ ಒಂದು ಕ್ಯಾರೆಕ್ಟರ್. ಮುಖ್ಯಪಾತ್ರವಾದ ಚಾರ್ಲಿ ಬ್ರೌನ್‌ನ ಚಡ್ಡಿದೋಸ್ತ್. ಬೆರಳು ಚೀಪುತ್ತಿರುವ ತುಂಟ ಹುಡುಗ. ಹೆಗಲಮೇಲೆ ಯಾವಾಗಲೂ ತನ್ನ ಪ್ರೀತಿಯ ತಿಳಿನೀಲಿ ಬ್ಲಾಂಕೆಟ್ ಹೊತ್ತುಕೊಂಡು ತಿರುಗುವವ. ಅದೇ ಅವನ ಗುರುತು. ಬ್ಲಾಂಕೆಟ್ ಬಟವಾಡೆಯ ಈ ಮಹಾಯೋಜನೆಗೆ ‘ಲೈನಸ್’ ಹೆಸರೇ ಅತಿಸೂಕ್ತವಾದುದು ಎಂದುಕೊಂಡಳು ಕರೆನ್. ಸ್ವಾರಸ್ಯವೆಂದರೆ ಪೀನಟ್ಸ್ ಕಾಮಿಕ್ ಸೃಷ್ಟಿಕರ್ತ ಸ್ಕಲ್ಜ್‌ನಿಗೂ ಪ್ರೊಜೆಕ್ಟ್ ಲೈನಸ್ ಬಗ್ಗೆ ಕೇಳಿ ಅಪಾರ ಸಂತಸವಾಗಿತ್ತು.

Karen Loucks Baker

ಅದಾದಮೇಲೆ ಪ್ರೊಜೆಕ್ಟ್ ಲೈನಸ್ ಕುರಿತು ಪತ್ರಿಕೆಗಳು ಬರೆದವು. ಟೆಲಿವಿಷನ್‌ನಲ್ಲಿ ಕರೆನ್‌ಳ ಸಂದರ್ಶನ ಪ್ರಸಾರವಾಯಿತು. ಅಮೆರಿಕದ ಮೂಲೆಮೂಲೆಗಳಿಂದ ಹ್ಯಾಂಡ್‌ಮೇಡ್ ಬ್ಲಾಂಕೆಟ್‌ಗಳು, ಬಣ್ಣಬಣ್ಣದ ಕೌದಿ ಕಂಬಳಿಗಳು ಕರೆನ್ ಮನೆಗೆ ಬಂದುಬಿದ್ದವು. ಪ್ರೊಜೆಕ್ಟ್ ಲೈನಸ್‌ನಲ್ಲಿ ತಾವೂ ಭಾಗಿಯಾಗುತ್ತೇವೆಂದು ಜನ ಮುಂದೆಬಂದರು. ಎಷ್ಟೋಮಂದಿ ತಮ್ಮ ದೈನಂದಿನ ಕೆಲಸಗಳೆಲ್ಲ ಮುಗಿದಮೇಲೆ ತಡರಾತ್ರಿಯಾದರೂ ಸರಿ, ಸ್ವಲ್ಪಹೊತ್ತು ಉಣ್ಣೆ ಹೆಣಿಗೆ ಮಾಡಿಯೇ ಮಲಗುವ ಪರಿಪಾಠ ಬೆಳೆಸಿಕೊಂಡರು. ವಾರಕ್ಕೋ ತಿಂಗಳಿಗೋ ಒಂದೆರಡಾದರೂ ಬ್ಲಾಂಕೆಟ್ ತಯಾರಿಸುವ ಸ್ಪೀಡ್ ಗಳಿಸಿದರು. ಸಮಾನಮನಸ್ಕ ‘ಬ್ಲಾಂಕೆಟೀರ್ಸ್’ ಸ್ನೇಹಿತರಾದರು; ಹೆಣಿಗೆ, ಕ್ರೋಷೆ ಮತ್ತಿತರ ಕರಕೌಶಲ್ಯಗಳ ಹೊಸಹೊಸ ಐಡಿಯಾಗಳನ್ನು ವಿನಿಮಯ ಮಾಡಿಕೊಂಡರು. ನಾಲ್ಕೈದು ವರ್ಷಗಳಲ್ಲೇ ಅಮೆರಿಕದ ಐವತ್ತೂ ಸಂಸ್ಥಾನಗಳಲ್ಲಿ ಪ್ರೊಜೆಕ್ಟ್ ಲೈನಸ್‌ನ ಸ್ಥಳೀಯ ಶಾಖೆಗಳು ತೆರೆದುಕೊಂಡವು. ಇಲಿನಾಯ್ ಸಂಸ್ಥಾನದ ಬ್ಲೂಮಿಂಗ್‌ಟನ್ ಪಟ್ಟಣದಲ್ಲಿ ಪ್ರೊಜೆಕ್ಟ್ ಲೈನಸ್ ಹೆಡ್‌ಕ್ವಾರ್ಟರ್ಸ್ ಸ್ಥಾಪನೆಯಾಯಿತು. ಸ್ವಯಂಸೇವಕರು ಪ್ರೀತಿಯಿಂದ ಹೆಣೆದುಕೊಟ್ಟ ಬ್ಲಾಂಕೆಟ್‌ಗಳನ್ನು ಸಂಗ್ರಹಿಸಿ ದೇಶವಿದೇಶಗಳ ಆಸ್ಪತ್ರೆಗಳಿಗೆ, ಅನಾಥಾಶ್ರಮಗಳಿಗೆ ವಿತರಿಸುವ ವ್ಯವಸ್ಥೆಯಾಯಿತು. ಐಬಿ‌ಎಂ, ಲಾಕ್‌ಹೀಡ್‌ಮಾರ್ಟಿನ್, ಎಟಿ‌ಏಂಡ್‌ಟಿ, ಸ್ಟಾರ್‌ಬಕ್ಸ್ ಮುಂತಾದ ಕಂಪನಿಗಳು ಪ್ರಾಯೋಜಕತ್ವ ರೂಪದಲ್ಲಿ ನೆರವಾದವು. ಇದೀಗ 371 ಶಾಖೆಗಳಿಂದ ಒಟ್ಟು 38 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಬ್ಲಾಂಕೆಟ್‌ಗಳನ್ನು ಸಂಗ್ರಹಿಸಿ ವಿತರಿಸಲಾಗಿದೆ ಎನ್ನುತ್ತದೆ ಪ್ರೊಜೆಕ್ಟ್ ಲೈನಸ್‌ನ ವೆಬ್‌ಸೈಟು.

ಅಬ್ಬಾ! ಬರೀ ಒಂದು ಲೇಖನವು ಓದುಗಳೊಬ್ಬಳ ಮೇಲೆ ಇಷ್ಟು ಪರಿಣಾಮ ಬೀರಿ, ದೊಡ್ಡದೊಂದು ಆಂದೋಲನಕ್ಕೇ ಕಾರಣವಾಯಿತೆಂದರೆ ನಿಜಕ್ಕೂ ಅದ್ಭುತ ಎನಿಸುವುದಿಲ್ಲವೇ? ‘ಜಾಯ್ ಟು ದ ವರ್ಲ್ಡ್’ ಎಂದು ಶೀರ್ಷಿಕೆ ಕೊಡುವಾಗ ಲೇಖನವು ಇಷ್ಟೊಂದು ಸಂತಸವನ್ನು- ಕಂಬಳಿಗಳನ್ನು ಹೆಣೆಯುವವರಿಗೂ ಹೊದ್ದುಕೊಳ್ಳುವವರಿಗೂ- ಉಂಟುಮಾಡುತ್ತದೆಂದು ಖಂಡಿತ ಕಲ್ಪನೆ ಇದ್ದಿರಲಿಕ್ಕಿಲ್ಲ. ಕಾಣದ ಕೈಗಳ ಕರುಣೆಯ ಕೊಡುಗೆ ಎಂದರೆ ಇದೇ ಇರಬೇಕು. ಬ್ಲಾಂಕೆಟೀರ್ಸ್ ಸ್ವಯಂಸೇವಕರಿಗೆ ತಾವು ಹೆಣೆದ ಕಂಬಳಿ ಯಾವ ಮಗುವಿಗೆ ರಕ್ಷಣೆಯೊದಗಿಸುತ್ತದೆ ಎಂಬ ಕಲ್ಪನೆಯಿರುವುದಿಲ್ಲ. ಬೆಚ್ಚಗಿನ ಪ್ರೀತಿಯನ್ನು ಕಂಬಳಿಯಲ್ಲಿ ಪಡೆದುಕೊಂಡ ಮಗುವಿಗೆ ಅದನ್ನು ಹೆಣೆದು ತನಗೆ ಉಡುಗೊರೆ ಕೊಟ್ಟವರಾರು ಎಂದು ಗೊತ್ತಿರುವುದಿಲ್ಲ. ಇಲ್ಲಿ ಲಾಭ, ಕೀರ್ತಿಗಳ ಪ್ರಶ್ನೆಯೇ ಇಲ್ಲ. ಯಾರು ಎಷ್ಟು ದಾನ ಮಾಡಿದರು ಎಂಬ ಲೆಕ್ಕವಿಲ್ಲ, ತಾರತಮ್ಯವಿಲ್ಲ. ಭಾವುಕವಾಗಿ ಹೇಳುವುದಾದರೆ, ಒಂದೊಂದು ಕಂಬಳಿಯಲ್ಲೂ ಇರುವುದು ಉಣ್ಣೆಯ ಎಳೆಗಳೇ ಅಲ್ಲ! ಕರುಣೆ, ಮಮತೆ, ಆರೈಕೆ, ಹಾರೈಕೆ ಮತ್ತು ಎಲ್ಲ ರೀತಿಯಲ್ಲಿಯೂ ನಿರ್ಮಲವಾದ ಕಳಕಳಿಯ ಭಾವನೆಯುಳ್ಳ ಮೆತ್ತನೆಯ ಎಳೆಗಳು. ಪ್ಯಾರ್-ಕೇ-ಧಾಗೇ ಎಂದು ಹಿಂದಿಯಲ್ಲಿ ನುಡಿಗಟ್ಟು ಇದೆಯಲ್ಲಾ ಅಂತಹ ನಿಸ್ವಾರ್ಥ ಪ್ರೀತಿಯ ಅಕ್ಕರೆಯ ಎಳೆಗಳು.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.
Podbean App

Play this podcast on Podbean App