ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for July 2011


America In So Many Words

Saturday, July 30th, 2011
DefaultTag | Comments

ದಿನಾಂಕ  31 ಜುಲೈ 2011ರ ಸಂಚಿಕೆ...

ಇವೆಲ್ಲ ಪದಗಳೂ ಹುಟ್ಟಿದ್ದು ಅಮೆರಿಕದಲ್ಲಿ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಮೆರಿಕ ದೇಶದ ಬಗ್ಗೆ ಸ್ವಲ್ಪ ತಮಾಷೆಯ ಮತ್ತು ತುಸು ಕುಹಕದ ಒಂದು ಮಾತಿದೆ- ಇಲ್ಲಿ Made in USA ಮುದ್ರೆಯಿರುವ ವಸ್ತುಗಳೇ ಇಲ್ಲ ಎಂದು. ಇದು ಬಹುಮಟ್ಟಿಗೆ ನಿಜ ಕೂಡ. ಔಷಧಗಳು, ಆಹಾರ ಪದಾರ್ಥಗಳು ಮತ್ತು ದಿನಬಳಕೆಯ ಕೆಲವು ಗ್ರಾಹಕೋತ್ಪನ್ನಗಳನ್ನು ಬಿಟ್ಟರೆ ಸ್ವದೇಶದ್ದು ಅಂತ ಇಲ್ಲಿ ಯಾವುದೂ ಇಲ್ಲ. ಬಳಸಿದ ನಂತರ ಬಿಸಾಡು ಮಾದರಿಯ ನಿರ್ಲಿಪ್ತ ಜೀವನಶೈಲಿಯಲ್ಲಿ ಬಹುಶಃ ‘ಇದು ನಮ್ಮದು’ ಎಂಬ ಹೆಮ್ಮೆಯ ಭಾವನೆಗೆ ಆಸ್ಪದವಿಲ್ಲ. ಕೇವಲ ನಾಲ್ನೂರು-ಐನೂರು ವರ್ಷಗಳಷ್ಟೇ ಇತಿಹಾಸವಿರುವ ಈ ದೇಶದಲ್ಲಿ, ಈಗಿರುವ ನಿವಾಸಿಗಳೂ ಹೆಚ್ಚೂಕಡಿಮೆ ಆಮದುಗೊಂಡವರೇ (ವಲಸೆ ಬಂದವರೇ) ಆಗಿರುವ ಹಿನ್ನೆಲೆಯಲ್ಲಿ, ಈ ಸಂಗತಿ ವಿಶೇಷವೆನಿಸುವುದೂ ಇಲ್ಲ.

ಆದರೆ, ಇಂಗ್ಲಿಷ್ ಭಾಷೆಯ ವಿಷಯದಲ್ಲಿ ಹಾಗಲ್ಲ. ಕಳೆದ ನಾಲ್ಕೈದು ಶತಮಾನಗಳಲ್ಲಿ ಅಮೆರಿಕದಲ್ಲಿ ಹುಟ್ಟಿಕೊಂಡ ಸಾವಿರಾರು ಪದಗಳು ಇಂಗ್ಲಿಷ್‌ಗೆ ಸೇರ್ಪಡೆಯಾಗಿವೆ. ಭಾಷೆಯನ್ನು ಶ್ರೀಮಂತಗೊಳಿಸಿವೆ. ಹಾಗೆಯೇ ಜಾಗತಿಕವಾಗಿ ಬೇರೆ ಭಾಷೆಗಳಿಗೂ ಹಬ್ಬಿಕೊಂಡಿವೆ. ‘ಹಲೋ’, ‘ಓಕೆ’ಯಂಥ ಕೆಲವಂತೂ ದೇಶ-ಭಾಷೆಗಳ ಗಡಿ ದಾಟಿ ಇದು ನಮ್ಮದೇ ಪದ ಎನ್ನುವಷ್ಟು ಮಟ್ಟಿಗೆ ನಮ್ಮೆಲ್ಲರ ದೈನಂದಿನ ಸಂಭಾಷಣೆಗಳಲ್ಲಿ ಹಾಸುಹೊಕ್ಕಾಗಿವೆ. ಇವತ್ತಿನ ಅಂಕಣದಲ್ಲಿ ಅಂತಹ ಕೆಲವು Made in USA ಪದಗಳ ಪರಿಚಯ ಮಾಡಿಕೊಳ್ಳೋಣವೇ? ಅಂದಹಾಗೆ ಇವು ಅಮೆರಿಕದ ಜೀವನಕ್ಕೆ ಬೇಕಾಗಿ ಇಲ್ಲಿ ಮಾತ್ರ ಚಲಾವಣೆ ಇರುವವಲ್ಲ (ಅಂಥ ಪದಗಳೂ ಬೇಕಷ್ಟಿವೆ, ಅವುಗಳ ಕುರಿತು ಮುಂದೆಂದಾದರೂ ನೋಡೋಣವಂತೆ). ಇವೇನಿದ್ದರೂ ನಿಮಗೂ ಗೊತ್ತಿರುವಂಥವೇ, ನೀವೂ ಬಳಸುವಂಥವೇ. ಇವುಗಳ ಹುಟ್ಟು ಅಮೆರಿಕದಲ್ಲಿ ಆದದ್ದು ಎನ್ನುವ ವಿಚಾರ ಮಾತ್ರ ಹೊಸತು.

made_in_usa.jpg

ಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲ್-ಕಾಲೇಜುಗಳಲ್ಲಿ ಸಹಪಾಠಿಯಾಗಿದ್ದವರನ್ನು ನೆನಪಿಸಿಕೊಳ್ಳುತ್ತ “ಅವನೂ(ಳೂ) ನಾನೂ ಕ್ಲಾಸ್‌ಮೇಟ್ಸ್...” ಅಂತೀವಲ್ವಾ, ಈ ಕ್ಲಾಸ್‌ಮೇಟ್ ಪದ ಅಮೆರಿಕದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಹುಟ್ಟಿಕೊಂಡದ್ದು! ಅದೂ 1713ರಷ್ಟು ಹಿಂದೆ. ಆಮೇಲೆ ರೂಮ್‌ಮೇಟ್, ಟೀಮ್‌ಮೇಟ್, ಬ್ಯಾಚ್‌ಮೇಟ್ ಮುಂತಾದ ಪದಗಳೂ ಬಂದವು. ‘ರೌಡಿ’ ಎಂಬ ಪದವೂ ಹಾಗೆಯೇ. ಅಮೆರಿಕದ ಕಾಲೇಜುಗಳಲ್ಲಿ ದಾದಾಗಿರಿ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಇಲ್ಲಿನ ಪತ್ರಿಕೆಗಳು ಆ ಲೇಬಲ್ ಹಚ್ಚಿದವು, ಸಭ್ಯತೆಯಿಲ್ಲದವರು ಎಂಬರ್ಥದಲ್ಲಿ. ಆಮೇಲೆ ದಾರಿಹೋಕರನ್ನು ದೋಚುವವರು, ಕಾಸಿಗಾಗಿ ಕೊಲೆಗೈಯುವವರೂ ರೌಡಿಗಳೆಂದು ಗುರುತಿಸಲ್ಪಟ್ಟರು. ಇನ್ನೊಂದು, ‘ಟೀನೇಜರ್’ ಎಂಬ ಪದ. ಬಾಲ್ಯ ಕಳೆದ ಆದರೆ ವಯಸ್ಕ ಎನಿಸದ ಪ್ರಾಯದ ಹುಡುಗ-ಹುಡುಗಿಯರನ್ನು ಆರೀತಿ ಕರೆಯುವ ಪರಿಪಾಠ ತೀರಾ ಈಚೆಗೆ ಅಂದರೆ ೧೯೪೦ರ ಆಸುಪಾಸು ಅಮೆರಿಕದಲ್ಲಿ ಆರಂಭವಾದದ್ದೆಂದರೆ ನಂಬ್ತೀರಾ? ಅದಕ್ಕಿಂತ ಮೊದಲು ಇಂಗ್ಲಿಷ್‌ನಲ್ಲಿ ಆ ಪದವೇ ಇರಲಿಲ್ಲವಂತೆ, girl ಬೆಳೆದು woman ಆಗುತ್ತಿದ್ದಳು, boy ಬೆಳೆದು man ಆಗುತ್ತಿದ್ದ! 1941ರಲ್ಲಿ ರೀಡರ್ಸ್ ಡೈಜೆಸ್ಟ್ ಮಾಸಿಕವು ಮೊದಲ ಬಾರಿಗೆ ಟೀನೇಜರ್ ಪದವನ್ನು ಬಳಸಿತು.

ಹೊಸ ಪದಗಳನ್ನು ಟಂಕಿಸುವುದರಲ್ಲಿ, ಪ್ರಚುರಪಡಿಸುವುದರಲ್ಲಿ ಪತ್ರಿಕೆಗಳ ಪಾತ್ರ ಹಿರಿದು. ಅದೇ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪದಗಳೂ ಅಮೆರಿಕದಲ್ಲಿ ಹುಟ್ಟಿವೆ. ಇವತ್ತು ಸಂಪರ್ಕ ಮಾಧ್ಯಮಗಳನ್ನೆಲ್ಲ ಸೇರಿಸಿ ನಾವೇನು ‘ಮೀಡಿಯಾ’ ಎನ್ನುತ್ತೇವೋ ಆ ಪದ ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಚಾಲ್ತಿಗೆ ಬಂದದ್ದು ಅಮೆರಿಕದಲ್ಲೇ. ಪತ್ರಿಕೆ ಎಂದರೆ ಸುದ್ದಿಗಳು ಮಾತ್ರ ಅಂತಿದ್ದ ಕಾಲದಲ್ಲಿ ಪತ್ರಿಕೆಯ ಸಂಪಾದಕರ ಮತ್ತು ಓದುಗರ ಸ್ವಂತ ಅಭಿಪ್ರಾಯಗಳಿಗೂ ಸ್ಥಳವಿರಬೇಕು ಎಂದು ‘ಎಡಿಟೋರಿಯಲ್’ ಆರಂಭವಾದದ್ದು ಅಮೆರಿಕದಲ್ಲೇ. ‘ಡೆಡ್‌ಲೈನ್’ ಪದ ಹುಟ್ಟಿಕೊಂಡದ್ದೂ ಈ ದೇಶದಲ್ಲಿಯೇ. ಪೌರಯುದ್ಧದ ಕಾಲದಲ್ಲಿ ಸೆರೆಯಾಳುಗಳ ಚಲನವಲನ ನಿರ್ಬಂಧಿಸಲು ಹಾಕುತ್ತಿದ್ದ ಬೇಲಿಯನ್ನು ಡೆಡ್‌ಲೈನ್ ಎನ್ನಲಾಗುತ್ತಿತ್ತು, ಅದರಾಚೆಗೆ ಬಂದರೆ ಅವರ ಕಥೆ ಮುಗಿದಂತೆಯೇ ಎಂಬರ್ಥದಲ್ಲಿ. ಆದರೆ ಆಮೇಲೆ ಪತ್ರಿಕೆಗಳ ಸಂಪಾದಕರು ವರದಿಗಾರರಿಗೆ ಮತ್ತು ಲೇಖಕರಿಗೆ ಹಾಕುತ್ತಿದ್ದ ಸಮಯದ ಗಡುವನ್ನೂ ‘ಡೆಡ್‌ಲೈನ್’ ಎನ್ನುವುದು ರೂಢಿಯಾಯ್ತು. ಡೆಡ್‌ಲೈನ್‌ನೊಳಗೆ ತಲುಪದಿದ್ದರೆ ತನ್ನ ಸ್ಟೋರಿ ಡೆಡ್ ಅಂತ ಯಾವ ರಿಪೋರ್ಟರ್ ಆದರೂ ಅರ್ಥೈಸಿಕೊಳ್ಳಬೇಕು.

ಈಗ, ಸ್ಪರ್ಧೆಗಳಿಗೆ ಪ್ರವೇಶಪತ್ರ ಕಳಿಸುವುದಕ್ಕೂ ಡೆಡ್‌ಲೈನ್ ಇರುತ್ತದೆ; ವಿಮಾನ ಹೈಜಾಕ್ ಮಾಡಿದ ಭಯೋತ್ಪಾದಕರ ಬೇಡಿಕೆಗಳನ್ನು ಪೂರೈಸುವುದಕ್ಕೂ ಡೆಡ್‌ಲೈನ್ ಇರುತ್ತದೆ; ಭ್ರಷ್ಟ ಮುಖ್ಯಮಂತ್ರಿ ಕುರ್ಚಿ ಬಿಟ್ಟು ತೊಲಗುವುದಕ್ಕೆ ಮಾತ್ರ ಯಾವ ಡೆಡ್‌ಲೈನೂ ವರ್ಕ್‌ಔಟ್ ಆಗದಿರುವುದು, ಅಲ್ಲಾಡದ ಆಸಾಮಿ ಮೀನ-ಮೇಷಗಳನ್ನಷ್ಟೇ ಅಲ್ಲದೆ ಆಷಾಢ-ಶ್ರಾವಣಗಳನ್ನೂ ಎಣಿಸುತ್ತ ಕೂರಿರುವುದು ದೊಡ್ಡ ವಿಪರ್ಯಾಸ.

ಅದಿರಲಿ, ವಿಮಾನ ಹೈಜಾಕ್ ಎಂದೆನಷ್ಟೇ, ಈ ‘ಹೈಜಾಕ್’ ಸಹ ಅಮೆರಿಕದ್ದೇ ಕೊಡುಗೆ. ಅದಕ್ಕೆ ಹೊಂದಿಕೊಂಡಂತೆಯೇ ‘ಪ್ರೊಹಿಬಿಷನ್’ ಕೂಡ. 1920-30ರ ಅವಧಿಯಲ್ಲಿ ಅಮೆರಿಕದಲ್ಲಿ ಮದ್ಯನಿಷೇಧ ಇತ್ತು. ಪತ್ರಿಕೆಗಳು ಅದನ್ನು ಪ್ರೊಹಿಬಿಷನ್ ಎಂದವು. ಆ ಕಾಲದಲ್ಲಿ ಕಾನೂನುಬಾಹಿರವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಹಿಡಿಯುವವರೂ ಇದ್ದರು. ಅವರೇನೂ ಪೊಲೀಸರಲ್ಲ, ಮದ್ಯದಾಸೆಯಿಂದ ಲೂಟಿ ಮಾಡುವವರು. ಅಂಥವರನ್ನು ಹೈಜಾಕರ್ಸ್ ಎನ್ನಲಾಯ್ತು. ಮುಂದಿನ ದಶಕಗಳಲ್ಲಿ ಅದಕ್ಕಿಂತ ಘೋರವಾದ ಹೈಜಾಕ್ ಕೃತ್ಯಗಳಿಗೆ ಅಮೆರಿಕ ಮತ್ತು ಪ್ರಪಂಚವೆಲ್ಲ ಸಾಕ್ಷಿಯಾಗಬೇಕಾಯ್ತು. ‘ಬೋಗಸ್’ ಎಂಬ ಪದ ಹುಟ್ಟಿದ್ದೂ ಅಮೆರಿಕದಲ್ಲೇ. ಮೊದಲೆಲ್ಲ ಖೋಟಾ ನಾಣ್ಯಗಳು, ನೋಟುಗಳು, ಲಾಟರಿ ಟಿಕೆಟ್‌ಗಳಿಗಷ್ಟೇ ಬಳಕೆಯಾದ ಬೋಗಸ್ ಎಂಬ ಬಣ್ಣನೆ ಆಮೇಲೆ ನಕಲಿ ಆಭರಣಗಳಿಗೂ ಅಂಟಿಕೊಂಡಿತು. ಬೋಗಸ್ ಕಂಪನಿಗಳು ಹುಟ್ಟಿದವು. ಬೋಗಸ್ ಪ್ರಮಾಣಪತ್ರಗಳು ಸೃಷ್ಟಿಯಾದವು.

ಮತ್ತೆ ಕೆಲವು ಪದಗಳು ಆಗಲೇ ಇಂಗ್ಲಿಷ್‌ನಲ್ಲಿದ್ದರೂ ಅಮೆರಿಕದಲ್ಲಿ ಅವು ಹೊಸ ಅರ್ಥ ಪಡಕೊಂಡದ್ದಿದೆ. ಉದಾಹರಣೆಗೆ ‘ಸ್ಟೋರ್’ ಎಂದರೆ ವಸ್ತುಗಳ ದಾಸ್ತಾನು ಎಂದಷ್ಟೇ ಅರ್ಥವಿದ್ದದ್ದು. ಮಾರಾಟಕ್ಕೆ ವಸ್ತುಗಳನ್ನಿಟ್ಟ ಜಾಗ ಎಂಬ ಅರ್ಥ ಬಂದದ್ದು ಅಮೆರಿಕದಲ್ಲಿ. ‘ಕೆಫೆಟೇರಿಯಾ’ದಲ್ಲಿ ಕಾಫಿಯಷ್ಟೇ ಅಲ್ಲ, ತಿಂಡಿಯೂ ಸಿಗುತ್ತದೆ, ಆದರೆ ಸ್ವಸಹಾಯ ಪದ್ಧತಿ ಪಾಲಿಸಬೇಕು ಎಂಬ ಅರ್ಥ ಬಂದದ್ದು ಅಮೆರಿಕದಲ್ಲಿ. ‘ಪ್ಲಾಂಟರ್’ ಎಂದರೆ ಯಾವುದಾದರೂ ಕಾಲೋನಿಯ ಸಂಸ್ಥಾಪಕ ಎಂದಿದ್ದ ಅರ್ಥ ದೊಡ್ಡದೊಡ್ಡ ಎಸ್ಟೇಟ್‌ಗಳ ಮಾಲೀಕ ಎಂದಾದದ್ದು ವರ್ಜೀನಿಯಾದ ತಂಬಾಕು ಪ್ಲಾಂಟೇಶನ್ ಉದ್ಯಮ ಉತ್ತುಂಗಕ್ಕೇರಿದ್ದ ಅಮೆರಿಕದಲ್ಲಿ. ‘ಫ್ಯಾನ್’ ಪದಕ್ಕೆ ಅಭಿಮಾನಿ ಹುಚ್ಚ ಎಂಬರ್ಥ ಬಂದದ್ದು ಬೇಸ್‌ಬಾಲ್ ಆಟಗಾರರ ಅಭಿಮಾನ ಹುಚ್ಚೇರಿದ ಅಮೆರಿಕದಲ್ಲಿ. ರಾಜಕೀಯ ಸ್ತರದಲ್ಲಿ, ಅಧಿಕಾರದ ಪಿರೆಮಿಡ್‌ನಲ್ಲಿ ಅತ್ಯಂತ ಕೆಳಮಟ್ಟದವರೆಗೂ ಎಂಬರ್ಥದಲ್ಲಿ ‘ಗ್ರಾಸ್ ರೂಟ್ಸ್ ಲೆವೆಲ್’ ಬಳಕೆಯಾದದ್ದು ಅಮೆರಿಕದಲ್ಲಿ. ‘ರಿಸರ್ವೇಶನ್’ ಪದ ಹುಟ್ಟಿಕೊಂಡದ್ದು ಮೂಲನಿವಾಸಿ ರೆಡ್‌ಇಂಡಿಯನ್ನರಿಗೆ ಇಂತಿಷ್ಟೇ ಜಾಗ, ಉಳಿದದ್ದು ಸರಕಾರಕ್ಕೆ ಎಂದು ಜಮೀನು ವಿಂಗಡಣೆಯ ಸಂದರ್ಭದಲ್ಲಿ ಇದೇ ಅಮೆರಿಕ ದೇಶದಲ್ಲಿ.

ತೀರಾ ಇತ್ತೀಚಿನ ಸೇರ್ಪಡೆಯೆಂದರೆ ‘ಬ್ಯಾಂಗಲೋರ್’ ಪದ- ಈಗ ಅಮೆರಿಕದಲ್ಲಿ ಇದೊಂದು ನಾಮಪದವಲ್ಲ, ಹೊರಗುತ್ತಿಗೆ ಕೊಡುವುದು ಎಂಬರ್ಥದ ಕ್ರಿಯಾಪದ! “ಅವರ್ ಕಂಪನಿ ಹ್ಯಾಸ್ ‘ಬ್ಯಾಂಗಲೋರ್ಡ್’ ಇಟ್ಸ್ ಕಸ್ಟಮರ್ ಸರ್ವೀಸ್ ಡಿಪಾರ್ಟ್‌ಮೆಂಟ್...”

ಕ್ರೆಡಿಟ್ ಕಾರ್ಡ್, ಪರ್ಸನಲ್ ಕಂಪ್ಯೂಟರ್, ಸಾಫ್ಟ್‌ವೇರ್, ಪೇಟೆಂಟ್, ಪಿಂಕ್ ಸ್ಲಿಪ್ ಮುಂತಾದವೆಲ್ಲ ಅಮೆರಿಕ ಮೂಲದವು ಎಂದರೆ ಸುಲಭದಲ್ಲೇ ನಂಬಬಹುದು. ಆದರೆ ಐಸ್ ಕ್ರೀಮ್, ಪಾಪ್ ಕಾರ್ನ್, ಸೀರಿಯಲ್, ಪೊಟಾಟೊ ಚಿಪ್, ಕಾಕ್‌ಟೈಲ್, ಲಿಪ್‌ಸ್ಟಿಕ್, ಜೀನ್ಸ್, ಟಿ-ಶರ್ಟ್, ಜೀಪ್, ಬುಲ್‌ಡೋಝರ್, ಟೆಡ್ಡಿಬೇರ್ ಮುಂತಾದವು ಸಹ ಅಮೆರಿಕದವೇ ಎಂದಾಗ ನಿಮಗೆ ಕೊಂಚ ಮಟ್ಟಿಗೆ ಆಶ್ಚರ್ಯವೂ ಆಗಬಹುದು! ಹೌದು, ಅದಕ್ಕೇ ಶೀರ್ಷಿಕೆಯಲ್ಲಿ ಹೇಳಿದ್ದು ಇವೆಲ್ಲ ಪದಗಳೂ ಹುಟ್ಟಿದ್ದು ಅಮೆರಿಕದಲ್ಲಿ ಅಂತ.

ಅಂದಹಾಗೆ, ಇವತ್ತಿನ ಶೀರ್ಷಿಕೆ ಇನ್ನೊಂದು ಅರ್ಥದಲ್ಲೂ ಸರಿಯಾಗಿಯೇ ಇದೆಯಲ್ಲ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

The joy of reading continues

Saturday, July 23rd, 2011
DefaultTag | Comments

ದಿನಾಂಕ  24 ಜುಲೈ 2011ರ ಸಂಚಿಕೆ...

ಪುಸ್ತಕವೆಂದರೆ ಜೇಬಿನೊಳಗಿನ ಉದ್ಯಾನವನ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಕೈಬೀಸಿ ಕರೆದಿಹುದು ಸಾಹಿತ್ಯ ತೋಟ
ಕಣ್ಸೆಳೆಯೆ ದಕ್ಕುವುದು ತಂಪಿನ ನೋಟ
ಹಣ್ಣುಂಟು ಕಾಯುಂಟು ಹೀಚುಗಾಯಿಗಳು
ಕಂಪನ್ನು ಚೆಲ್ಲುವ ಬಗೆಬಗೆಯ ಹೂಗಳು
ಕುವೆಂಪು ಬೇಂದ್ರೆಯಿಹ ಕನ್ನಡವೇ ಚೆನ್ನ
ಮಂಕುತಿಮ್ಮನ ನೀನು ಮರೆಯಬೇಡಣ್ಣ
ಅನಕೃ ತರಾಸು ತೇಜಸ್ವಿ ಜೊತೆಗೆ
ಬಲ್ಲಾಳ ಕಾರಂತ ಚಿತ್ತಾಲರೆಡೆಗೆ
ತ್ರಿವೇಣಿ ಸಾಯಿಸುತೆ ಇಂದಿರೆಯ ನೆನೆದು
ವೈದೇಹಿ ಅನುಪಮಾ ಸುಧೆಯನ್ನು ಮೊಗೆದು
ಭೈರಪ್ಪ ಪುತಿನ ಮಾಸ್ತಿ ಗೊರೂರು
ಸರಸತಿಯ ಮಕ್ಕಳಿಗೆ ಸಾಟಿ ಯಾರಿಹರು
ಬಂಡಾಯ ಕಹಳೆಯ ಸಿದ್ಧಲಿಂಗಯ್ಯ
ಗಾಂಧಿಕ್ಲಾಸಿನ ಕುಂವೀ ನಮ್ಮವರೇ ಅಯ್ಯಾ
ವಿವೇಕ ಜಯಂತ ವಸುಧೇಂದ್ರ ಇಷ್ಟ
ಓದದೇ ಉಳಿದರೆ ನಮಗೆಯೇ ನಷ್ಟ...

‘ಸಾಹಿತ್ಯಿಕ ಓದಿನ ಗೀಳನ್ನು ಇನ್ನಾದರೂ ಬೆಳೆಸಿಕೊಳ್ಳಬೇಕು’ ಎಂಬ ನನ್ನ ನಿರ್ಧಾರವನ್ನು ಶಿಕಾಗೋದಲ್ಲಿರುವ ಸ್ನೇಹಿತೆ ತ್ರಿವೇಣಿ ಶ್ರೀನಿವಾಸ ರಾವ್ ಸ್ವಾಗತಿಸಿದ್ದು ಹೀಗೆ! ಕಳೆದ ವಾರದ ಅಂಕಣವನ್ನು ಓದಿದ ಕೂಡಲೇ ಮನದಲ್ಲಿ ಮೂಡಿದ ಆಶುಕವಿತೆಯಾಗಿ ಇದನ್ನವರು ಬರೆದು ಕಳಿಸಿದ್ದಾರೆ. ಬೇಂದ್ರೆಯವರಿಂದ ಹಿಡಿದು ವಸುಧೇಂದ್ರವರೆಗೆ, ಸಾಯಿಸುತೆಯಿಂದ ಹಿಡಿದು ಸುಧಾಮೂರ್ತಿವರೆಗೆ ಕನ್ನಡ ಸಾಹಿತ್ಯಲೋಕದ ಮುತ್ತುಗಳನ್ನು ಪೋಣಿಸಿ ಸೊಗಸಾದ ಮಾಲೆ ಕಟ್ಟಿದ್ದಾರೆ. ಎಷ್ಟು ಚೆನ್ನಾಗಿದೆ ಅಲ್ಲವೇ? ತ್ರಿವೇಣಿ ಇದನ್ನು ಬರೀ ಸ್ತುತಿಗೀತೆಯಾಗಿ ಹೇಳಿದ್ದಲ್ಲ. ಈ ಎಲ್ಲ ಮಹಾನ್ ಸಾಹಿತಿಗಳ ಅನೇಕ ಕೃತಿಗಳನ್ನು ಅವರು ಓದಿ ಆನಂದಿಸಿದ್ದಾರೆ. ಅಷ್ಟೇ‌ಅಲ್ಲ, ಅವರು ಸ್ವತಃ ಓರ್ವ ಬರಹಗಾರ್ತಿ. ಹಿರಿಯ ‘ತ್ರಿವೇಣಿ’ಯವರ ಜಾಡಲ್ಲಿ ಹೆಜ್ಜೆಯಿಟ್ಟವರು. ಚಂದದ ಕಥೆ, ಕವಿತೆ, ಲಲಿತಪ್ರಬಂಧಗಳನ್ನೂ ಬರೆಯುತ್ತಾರೆ. ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯಿಕ ಓದು ಅವರ ಚಿಂತನಾಶಕ್ತಿಯನ್ನು ಪಕ್ವವಾಗಿಸಿದೆ. ಬರವಣಿಗೆಯಲ್ಲಿನ ಸತ್ವವನ್ನು ಹೆಚ್ಚಿಸಿದೆ. ಅಂದಮೇಲೆ ಸಾಹಿತ್ಯ ತೋಟಕ್ಕೆ ಸ್ವಾಗತ ಕೋರಿರುವ ತ್ರಿವೇಣಿಯವರ ಆಶಯಕ್ಕೆ ಹೆಚ್ಚು ಬೆಲೆ. ಸಾಹಿತ್ಯಿಕ ಓದನ್ನು ಇನ್ನೂ ಹೆಚ್ಚುಹೆಚ್ಚು ಜನರು ರೂಢಿಸಿಕೊಳ್ಳುವುದಕ್ಕೆ ಅವರ ಈ ಆಶುಕವಿತೆಯೇ ಒಂದು ಸ್ಫೂರ್ತಿ ಸೆಲೆ.

ಹಾಂ! ತೋಟ ಎಂದೊಡನೆ ನೆನಪಾಯ್ತು, A book is like a garden carried in the pocket" ಅಂತ ಒಂದು ಚೈನೀಸ್ ನಾಣ್ಣುಡಿಯಿದೆ. ಪುಸ್ತಕವೆಂದರೆ ಜೇಬಿನೊಳಗೇ ಒಂದು ಪುಟ್ಟ ಉದ್ಯಾನವಿದ್ದಂತೆ. ಆಗಾಗ ಓದಿಕೊಂಡರೆ (ವಾಯುವಿಹಾರಕ್ಕೆ ಮನಸ್ಸನ್ನು ಒಡ್ಡಿಕೊಂಡರೆ) ಆಹ್ಲಾದ ಮತ್ತು ಆನಂದ. ಮೆದುಳಿಗೂ ಅಷ್ಟಿಷ್ಟು ವ್ಯಾಯಾಮ. ನಿಜಕ್ಕೂ ಬಹಳ ಅರ್ಥಗರ್ಭಿತವಾಗಿದೆ ಈ ನಾಣ್ಣುಡಿ. ಅದೇನೇ ಇರಲಿ ಓದಿನ ಹಿರಿಮೆಯನ್ನು ಮತ್ತು ಪುಸ್ತಕಗಳ ಗರಿಮೆಯನ್ನು ನಿಮಗೆ, ಅದರಲ್ಲೂ ನಾನು, ತಿಳಿಸುವುದೇನಿದೆ? ಆದರೆ ಭಾರತದಿಂದ ಹಿಂದಿರುಗುವಾಗ ಸೂಟ್‌ಕೇಸ್ ತುಂಬಾ ಪುಸ್ತಕಗಳನ್ನು ಹೊತ್ತುಕೊಂಡು ಬಂದಿದ್ದೇನೆ, ಅವು ಯಾವುವಂತ ತಿಳಿಸುತ್ತೇನೆ ಎಂದಿದ್ದೆನಷ್ಟೆ, ಅದನ್ನೇ ಈಗ ಮಾಡುತ್ತೇನೆ.

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು- ಕೆ.ವಿ.ಸುಬ್ಬಣ್ಣ ನೆನಪಿನಲ್ಲಿ ಅಕ್ಷರ ಪ್ರಕಾಶನ ಹೊರತಂದ ‘ಮೊದಲ ಓದು’ ಪುಸ್ತಕಮಾಲೆ- ನನ್ನಂಥವರಿಗೆ ಹೇಳಿ ಮಾಡಿಸಿದ ಪುಸ್ತಕಗಳಿವು. ಒಂದೊಂದರಲ್ಲೂ ನೂರ‌ಎಂಟು ಪುಟಗಳು. ಆ ಸರಣಿಯಲ್ಲಿ ಒಟ್ಟು ಐವತ್ತು ಪುಸ್ತಕಗಳಿವೆಯಂತೆ. ಆದಿಕವಿ ಪಂಪನಿಂದ ಹಿಡಿದು ಈಗಿನ ಅನಂತಮೂರ್ತಿವರೆಗೂ ವಿವಿಧ ಲೇಖಕರ ಬರಹಗಳ ಸಂಗ್ರಹ. ಪ್ರಾತಿನಿಧಿಕವಾಗಿ ನನಗೆ ‘ನಾಗೇಶ ಹೆಗಡೆ ಅವರ ಆಯ್ದ ಬರಹಗಳು’ ಪುಸ್ತಕ ಸಿಕ್ಕಿದೆ. ಬಹಳ ಚೆನ್ನಾಗಿದೆ. ಇನ್ನೊಂದು ಪುಸ್ತಕ ನನ್ನ ಓದಿನ ಆರಂಭಕ್ಕೆ ಸರಿಯಾಗಿಯೇ ಇದೆ ಅಂತನಿಸಿದ್ದು ‘ಗಾಂಧೀಜಿಯವರ ಸಂಕ್ಷಿಪ್ತ ಆತ್ಮಕಥನ’ ಎಂಬ ಪುಸ್ತಕ. ಇದನ್ನು ಸುಮಾರಾಗಿ ಹೈಸ್ಕೂಲ್ ವಿದ್ಯಾರ್ಥಿಗಳ ಮಟ್ಟಕ್ಕಾಗುವಂತೆ ಬರೆಯಲಾಗಿದೆ. ಇದರ ಲೇಖಕಿ ಎಚ್.ಎಲ್.ಸೀತಾದೇವಿ. ಅವರ ಹೆಸರನ್ನು ನೀವೂ ಕೇಳಿಯೇ ಇರುತ್ತೀರಿ- ಎಂಬತ್ತರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ ಓದುತ್ತಿದ್ದರು. ಆಮೇಲೆ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿಸಂಪಾದಕಿಯೂ ಆಗಿದ್ದರಂತೆ. ನನಗೆ ಪರಾಗಸ್ಪರ್ಶ ಓದುಗರಾಗಿ ಇ-ಪರಿಚಿತರಾದರು, ವಿಶ್ವಾಸಪೂರ್ವಕವಾಗಿ ಪುಸ್ತಕ ಕೊಟ್ಟು ನನ್ನ ಓದಿಗೆ ಪ್ರೇರಕರಾದರು. ಸೀತಾದೇವಿಯ ವಿಚಾರ ಅದಾದರೆ, ಸೀತೆಯನ್ನು ಕುರಿತ ‘ಸೀತಾಂತರಂಗ’ ಎಂಬ ತಮ್ಮ ಕೃತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ ಬೆಂಗಳೂರಿನ ಡಾ.ಜಯಂತಿ ಮನೋಹರ್. ಈ ಕಥಾನಕವು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತಂತೆ. ಮತ್ತೆ, ಸುಧಾದಲ್ಲಿಯೇ ತುಂಬ ವರ್ಷಗಳ ಹಿಂದೆ ಬರುತ್ತಿದ್ದ ‘ಕಜ್ಜಾಯ’ದ ಪುಸ್ತಕರೂಪವೂ ನನಗೆ ಉಡುಗೊರೆಯಾಗಿ ಸಿಕ್ಕಿದೆ, ಸ್ವತಃ ಸುನಂದಾ ಬೆಳಗಾಂವಕರ್ ಅವರಿಂದಲೇ!

open-book.jpg

ಕಾದಂಬರಿ ಓದುವವರಿಗಾದರೆ ಆಮೇಲೆ ಅದು ಚಲನಚಿತ್ರವಾಗಿ ಬಂದಾಗ ಹೇಗಿದೆ ಎಂದು ನೋಡುವ ಕುತೂಹಲ ಇರುತ್ತದೆ. ನನಗಾದರೋ ಈಗ ತದ್ವಿರುದ್ಧ ಅನುಭವ ಆಗುವುದಿದೆ- ಮೊನ್ನೆ ಬೆಂಗಳೂರಿನಲ್ಲಿದ್ದಾಗ ‘ಬೆಟ್ಟದ ಜೀವ’ ಸಿನೆಮಾ ನೋಡಿದೆ, ಇಷ್ಟ ಆಯ್ತು. ಈಗಿನ್ನು ಶಿವರಾಮ ಕಾರಂತರ ಮೂಲ ಕಾದಂಬರಿಯನ್ನು ಓದಬೇಕೂಂತಿದ್ದೇನೆ. ಹಿರಿಯ ಮಿತ್ರ ಎಸ್.ಎಂ.ಪೆಜತ್ತಾಯ ಅವರು ಕಳೆದವರ್ಷವೇ ಆ ಪುಸ್ತಕವನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದರು, ಓದುವ ಮುಹೂರ್ತ ಕೂಡಿಬಂದಿರಲಿಲ್ಲ ಅಷ್ಟೇ.  ಈರೀತಿ ಓದಿಗೆ ಕಾಯುತ್ತಿರುವ ಕಾದಂಬರಿಗಳು ಈಗ ನನ್ನ ಬಳಿ ಇನ್ನೂ ಕೆಲವಿವೆ. “ಒಳ್ಳೆಯ ಪುಸ್ತಕ, ಓದಿ!” ಎಂದು ಸ್ನೇಹಿತರು ಕೊಟ್ಟಿರುವಂಥವು- ಕೆ.ವಿ.ಅಯ್ಯರ್ ಅವರ ‘ರೂಪದರ್ಶಿ’, ಅನಂತಮೂರ್ತಿ ಅವರ ‘ಸಂಸ್ಕಾರ’, ತರಾಸು ಅವರ ‘ಹಂಸಗೀತೆ’; ಇನ್ನುಳಿದವು ಕಾದಂಬರಿಕಾರರೇ ಕಾಂಪ್ಲಿಮೆಂಟರಿ ಕಾಪಿ ಕೊಟ್ಟಿರುವಂಥವು- ಡಾ.ತೋನ್ಸೆ ಕೃಷ್ಣರಾಜು ಅವರ ‘ಸಾವಿರ ಪಕ್ಷಿಗಳು’ (ಇದು ನೊಬೆಲ್ ಪಾರಿತೋಷಕ ಪುರಸ್ಕೃತ ಜಪಾನಿ ಕೃತಿಯ ಕನ್ನಡ ಅನುವಾದ. ಡಾ.ತೋನ್ಸೆ ಇಲ್ಲೇ ವಾಷಿಂಗ್ಟನ್‌ನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಅವರು ಗೋಪಾಲಕೃಷ್ಣ ಅಡಿಗರ ಅಳಿಯ ಎಂಬುದು ಸುಲಭ ಪರಿಚಯ), ದಾವಣಗೆರೆಯಲ್ಲಿ ಇನ್ನೂ ಎಂಜಿನಿಯರಿಂಗ್ ಓದುತ್ತಿರುವ ಗಣೇಶ ಭಟ್ ಬರೆದ ಕಿರುಕಾದಂಬರಿ ‘ಸಮಯದ ಸರ್ಕಲ್’, ಡಾ. ಗುರುಪ್ರಸಾದ್ ಕಾಗಿನೆಲೆಯವರ ‘ಗುಣ’ ಇತ್ಯಾದಿ. ಮತ್ತೆ ಕೆಲವು ಕಥಾಸಂಕಲನಗಳು: ಮಹಾಬಲಮೂರ್ತಿ ಕೊಡ್ಲೆಕೆರೆಯವರ ‘ನೆರಳು ಮತ್ತು ಇತರ ಕಥೆಗಳು’, ರಘುನಾಥ ಚ.ಹ ಅವರ ‘ಹೊರಗೂ ಮಳೆ ಒಳಗೂ ಮಳೆ’, ವಸುಧೇಂದ್ರ ಬರೆದ ‘ಮನೀಷೆ’, ‘ಚೇಳು’, ‘ಹಂಪಿ ಎಕ್ಸ್‌ಪ್ರೆಸ್’, ಎಂ.ಎಸ್.ಶ್ರೀರಾಮ್ ಅವರ ‘ತೇಲ್ ಮಾಲೀಶ್’ ವಗೈರಾ ವಗೈರಾ.

ಪತ್ರಿಕೆಗಳಲ್ಲಿ ಬರುವ ‘ಸಾದರ ಸ್ವೀಕಾರ’ ಪಟ್ಟಿಯಂತೆ ತೋರಬಹುದು, ಆದರೆ ನಾನೀಗ ನೀಟಾಗಿ ಜೋಡಿಸಿಟ್ಟಿರುವ ಕಪಾಟಿನಲ್ಲಿ ಹೆಸರಿಸಲೇಬೇಕಾದ ಇನ್ನೂ ಹಲವಾರು ಪುಸ್ತಕಗಳಿವೆ- ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’, ನೇಮಿಚಂದ್ರ ಅವರ ‘ಬದುಕು ಬದಲಿಸಬಹುದು’, ಡಾ.ಜೀ.ವಿ.ಕುಲಕರ್ಣಿ ಅವರ ‘ಬೇಂದ್ರೆ ಜೀವನ ಮತ್ತು ಸಾಹಿತ್ಯ’, ಕ್ಯಾಪ್ಟನ್ ಗೋಪಿನಾಥ್ ಬರೆದು ವಿಶ್ವೇಶ್ವರ ಭಟ್ ಕನ್ನಡಕ್ಕೆ ಅನುವಾದಿಸಿದ ‘ಬಾನ ಯಾನ’, ಕನ್ನಡ ಚಿತ್ರರಂಗ ೭೫ ವರ್ಷಗಳ ಒಂದು ಫ್ಲಾಷ್‌ಬ್ಯಾಕ್ - ಡಾ.ಕೆ.ಪುಟ್ಟಸ್ವಾಮಿ ಬರೆದ ‘ಸಿನಿಮಾ ಯಾನ’, ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದ ಮುದ್ದಣನ ಸಂಸ್ಮರಣೆಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ನಂದಳಿಕೆಯ ನಂದನ’ ಮತ್ತು ‘ಮುದ್ದಣನಿಗೆ ನಮನ’, ಪೂರ್ಣವಾಗಿ ವಾರ್ಧಕ ಷಟ್ಪದಿಯಲ್ಲೇ ರಚಿತವಾಗಿರುವ ರಾಮಚಂದ್ರರಾವ್ ಜಾಣ ಅವರ ‘ರಾಮಾಯಣ ಸುಂದರಕಾಂಡ’, ಡಿವಿಜಿಯವರ ಬದುಕಿನ ನೂರಾರು ರಸಪ್ರಸಂಗಗಳನ್ನು ಶತಾವಧಾನಿ ಡಾ.ಆರ್.ಗಣೇಶ್ ವಿದ್ವತ್ಪೂರ್ಣವಾಗಿ ಸಾದರಪಡಿಸಿರುವ ‘ಬ್ರಹ್ಮಪುರಿಯ ಭಿಕ್ಷುಕ’...

ಒಂದು ಪುಸ್ತಕವೆಂದರೇನೇ ಉದ್ಯಾನವನ ಅಂತಾದರೆ, ಇಷ್ಟೊಂದು ಪುಸ್ತಕಗಳೆಂದರೆ ನನ್ನ ಪಾಲಿಗಂತೂ ಸಹ್ಯಾದ್ರಿಯ ನಿತ್ಯಹರಿದ್ವರ್ಣ ವನರಾಜಿಯೇ ಸೈ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Need to cultivate Book-Reading habit

Saturday, July 16th, 2011
DefaultTag | Comments

ದಿನಾಂಕ  17 ಜುಲೈ 2011ರ ಸಂಚಿಕೆ...

ಇನ್ನಾದರೂ ಬೆಳೆಸಿಕೊಳ್ಳಬೇಕು ಓದಿನ ಗೀಳು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ದೊಂದು ಕೊರಗು ನನ್ನನ್ನು ಆಗಾಗ ಕಾಡುವುದಿದೆ. ಏನೆಂದರೆ, ಸಾಹಿತ್ಯಿಕ ಓದಿನ ಒಳ್ಳೆಯ ಹವ್ಯಾಸವನ್ನು ನಾನು ಬೆಳೆಸಿಕೊಳ್ಳಲೇ ಇಲ್ಲ. ಓದು ಕೊಡುವ ಅಮಿತಾನಂದಕ್ಕೆ ನನ್ನನ್ನು ಒಡ್ಡಿಕೊಳ್ಳಲೇ ಇಲ್ಲ. ಇದನ್ನೇಕೆ ಹೇಳುತ್ತಿದ್ದೇನೆಂದರೆ ‘ಇವನು ತುಂಬಾ ಓದಿಕೊಂಡವನಿರಬೇಕು...’ ಎಂದು ನನ್ನ ಬಗ್ಗೆ ಒಂದು ರೀತಿಯ ಸದಭಿಪ್ರಾಯ ಇಟ್ಟುಕೊಂಡವರು ಕೆಲವರಿದ್ದಾರೆ. ಅವರ ಮನಸ್ಸಿನಲ್ಲಿ ಈತ ಸಾಹಿತ್ಯದ ಸರಕನ್ನು ಸಾಕಷ್ಟು ಅರೆದು ಕುಡಿದವನು ಎಂಬ ಭಾವನೆಯಿದೆ. ಪ್ರಾಯಶಃ ನನ್ನ ಅಂಕಣ ಬರವಣಿಗೆಯಲ್ಲಿ ಕಂಡುಬರುವ ವಸ್ತುವೈವಿಧ್ಯವೂ ಅಂಥದೊಂದು ಮಿಥ್ಯೆಗೆ ಕಾರಣವಾಗಿದೆ. ಆದರೆ ವಾಸ್ತವಾಂಶ ಬೇರೆಯೇ ಇದೆ. ಕನ್ನಡದಲ್ಲಾಗಲೀ, ಇಂಗ್ಲಿಷ್ ಅಥವಾ ಬೇರಾವ ಭಾಷೆಯಲ್ಲಾಗಲೀ ನನ್ನ ‘ಸಾಹಿತ್ಯಿಕ’ ಓದು ಸೊನ್ನೆ. ಕಥೆ-ಕಾದಂಬರಿ, ಕಾವ್ಯ-ನಾಟಕ, ಆತ್ಮಚರಿತ್ರೆ ಮುಂತಾದ ಗಂಭೀರ ಸಾಹಿತ್ಯಪ್ರಕಾರಗಳು ಅದೇಕೋ ನನ್ನ ಆಸಕ್ತಿಯ ವ್ಯಾಪ್ತಿಯೊಳಕ್ಕೆ ಇದುವರೆಗೆ ಬಂದೇ ಇಲ್ಲ. Voracious reader ಎನ್ನುವಲ್ಲಿನ voracious ಹಾಗಿರಲಿ, ಒಬ್ಬ ಸಾಮಾನ್ಯ reader ಅಂತನ್ನಿಸಿಕೊಳ್ಳುವಷ್ಟನ್ನೂ ನಾನು ಓದಿಲ್ಲ. ಇದನ್ನೇನೂ ನನ್ನ ಹೆಗ್ಗಳಿಕೆ ಎನ್ನುತ್ತಿಲ್ಲ. ಅಥವಾ ತೀರಾ ಕೀಳರಿಮೆಯಿಂದ ಹೇಳುತ್ತಿರುವುದೂ ಅಲ್ಲ.

ಹಾಗಂತ, ಏನನ್ನೂ ಓದುವುದೇ ಇಲ್ಲ ಎಂದೇನಿಲ್ಲ. ಪುಸ್ತಕಗಳೆಂದರೆ ನನಗೂ ಇಷ್ಟವೇ; ಸಾಧ್ಯವಾದಾಗೆಲ್ಲ ಗ್ರಂಥಾಲಯಗಳಿಗೂ ಭೇಟಿ ಕೊಡುತ್ತೇನೆ. ಆದರೆ ಏನಿದ್ದರೂ ‘ಆಕರ ಗ್ರಂಥ’ (reference book)ಗಳೇ ಮೊದಲು ನನ್ನ ದೃಷ್ಟಿಗೆ ಬೀಳುವುದು. ಅಟ್ಲಸ್, ಡಿಕ್ಷನರಿ, ಎನ್‌ಸೈಕ್ಲೊಪೀಡಿಯಾ, ಇಯರ್‌ಬುಕ್‌ನಂಥ ಪುಸ್ತಕಗಳನ್ನು ಕೈಗೆತ್ತಿಕೊಂಡು ಕಣ್ಣಾಡಿಸುವುದೆಂದರೆ ಎಲ್ಲಿಲ್ಲದ ಉಮೇದು. ಕೊನೆಗೆ ರೈಲ್ವೇ ಟೈಮ್‌ಟೇಬಲ್ ಮಾದರಿಯ ಪುಸ್ತಕಗಳಾದರೂ ಸರಿ, ಒಟ್ಟಿನಲ್ಲಿ ಮಾಹಿತಿಯ ಕಣಜ ಆದರಾಯಿತು. ಅಂತಹ ಪುಸ್ತಕಗಳಿಂದ ನಮ್ಮ ಜ್ಞಾನದ ಆಳ ಹೆಚ್ಚುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಜ್ಞಾನದ ಅಗಲ ಖಂಡಿತ ಹೆಚ್ಚುತ್ತದೆ ಎಂದು ನನ್ನ ಅನಿಸಿಕೆ, ಮತ್ತು ಅನುಭವ ಕೂಡ. ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ- ಯಾವುದೋ ಲೇಖನದಲ್ಲಿ ನಾನು ಭೈರಪ್ಪನವರ ಕಾದಂಬರಿಗಳ ಹೆಸರುಗಳನ್ನು ಉಲ್ಲೇಖಿಸುತ್ತೇನೆ ಎಂದುಕೊಳ್ಳಿ. ಆ ಕಾದಂಬರಿಗಳನ್ನು ನಾನು ಅದಾಗಲೇ ಓದಿರುತ್ತೇನೆ ಎಂದು ಅಲ್ಲಿ ಭಾಸವಾಗಬಹುದು. ಆದರೆ ನಿಜಕ್ಕೂ ಓದಿರುವುದಿಲ್ಲ. ಭೈರಪ್ಪನವರ ಎಲ್ಲ ಕಾದಂಬರಿಗಳ ಹೆಸರು, ಪ್ರಕಟಣೆಯ ವರ್ಷ, ಬಂದ ಪ್ರಶಸ್ತಿಗಳು, ಯಾವಯಾವ ಭಾಷೆಗಳಿಗೆ ಅವು ಅನುವಾದಗೊಂಡಿವೆ ಅಂತೆಲ್ಲ ಸಮಗ್ರ ಮಾಹಿತಿ ನನ್ನಲ್ಲಿದೆ. ಅದನ್ನು ಸಂದರ್ಭೋಚಿತವಾಗಿ ಬಳಸುತ್ತೇನೆ ಕೂಡ. ಆದರೆ ಒಂದೇ‌ಒಂದು ಕಾದಂಬರಿಯನ್ನೂ ನಾನು ಓದಿಲ್ಲ! ಸಂಗೀತ ಹಾಡಲು ಅರಿಯದವನಾದರೂ ಯಾವ ಕೃತಿ ಯಾರ ರಚನೆ ಯಾವ ರಾಗದಲ್ಲಿದೆ ಎಂಬುದನ್ನೆಲ್ಲ ತಿಳಿದುಕೊಂಡಿರುವಂತೆ. ಇದೊಂಥರ ಕಂಪ್ಯೂಟರ್ ಕ್ಷೇತ್ರದಲ್ಲಿ ಮೆಟಾ-ಡೇಟಾ ಇದ್ದಹಾಗೆ. ಮೆಟಾ-ಡೇಟಾ ಎಂದರೆ ಆಕ್ಚುವಲ್ ಡೇಟಾ ಅಲ್ಲ; ಡೇಟಾ ಕುರಿತಾದ ಡೇಟಾ.

ಸಾಹಿತ್ಯಿಕ ಉಲ್ಲೇಖಗಳ ಮಟ್ಟಿಗೆ ನನ್ನ ಬಂಡವಾಳ ಬಹುತೇಕವಾಗಿ ಮೆಟಾ-ಡೇಟಾ ಮಾತ್ರ. ಆದರೆ ಈಗ ಹೊಸತೊಂದು ಹುರುಪು ಬಂದಿದೆ. ನಾನೂ ಸಹ ಸಾಹಿತ್ಯಿಕ ಓದಿನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಒಮ್ಮಿಂದೊಮ್ಮೆಲೇ ಕಾದಂಬರಿ ಅಲ್ಲದಿದ್ದರೂ, ಯಾವ ತೆರನಾದ ಪುಸ್ತಕಗಳಿಂದ ಇದುವರೆವಿಗೂ ದೂರವಿದ್ದೆನೋ ಅಂತಹ ಪುಸ್ತಕಗಳನ್ನು ಓದತೊಡಗಬೇಕು. ಹೇಗೂ ಈ ದಿನಗಳಲ್ಲಿ ನಾನು ಕೆಲಸಕ್ಕೆ ಹೋಗಿ ಬರುವುದು ಕಾರ್ ಡ್ರೈವ್ ಮಾಡಿಕೊಂಡು ಅಲ್ಲ, ಬಸ್ಸು ಮತ್ತು ಮೆಟ್ರೋ ರೈಲಿನಲ್ಲಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ತಗಲುತ್ತದೆ. ನನ್ನ ಸಹಪ್ರಯಾಣಿಕರಲ್ಲಿ ಹೆಚ್ಚಿನವರು ಪುಸ್ತಕದ ಓದಿನಲ್ಲಿ ಮುಳುಗಿರುವುದನ್ನು ಗಮನಿಸಿದ್ದೇನೆ. ಪುಸ್ತಕ ಅಲ್ಲದಿದ್ದರೆ ಕಿಂಡಲ್, ನುಕ್, ಐಪ್ಯಾಡ್‌ನಂಥ ಇ-ಪುಸ್ತಕಗಳಲ್ಲಿ ಮುಳುಗಿರುತ್ತಾರೆ. ಅಂತೂ ಅಮೆರಿಕನ್ನರು ಸಿಕ್ಕಾಪಟ್ಟೆ ಓದುತ್ತಾರೆ. ಅಂದಮೇಲೆ ನಾನೂ ಕೂಡ ಅವರಂತೆಯೇ ‘ಓಡಾಟ’ದ ವೇಳೆಯನ್ನು ‘ಓದಾಟ’ದ ವೇಳೆಯನ್ನಾಗಿಸಬಹುದು/ ಆಗಿಸಬೇಕು.

lovereading.jpg

ನನ್ನ ಈ ಹೊಸ ಹುರುಪಿಗೆ ಪೂರಕ ಅಂಶವೂ ಒಂದಿದೆ. ಮೊನ್ನೆ ಭಾರತಪ್ರವಾಸದ ವೇಳೆ ಭೇಟಿಯಾಗಿದ್ದ ಸುಮಾರಷ್ಟು ಸ್ನೇಹಿತರು ಮತ್ತು ಇಮೇಲ್‌ನಲ್ಲಷ್ಟೇ ಸಂಪರ್ಕವಿದ್ದು ಇದೀಗ ಮುಖಪರಿಚಯವಾಗಿರುವ ಕೆಲ ಓದುಗ ಮಿತ್ರರು ಒಳ್ಳೊಳ್ಳೆಯ ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಒಬ್ಬಿಬ್ಬರಂತೂ ತಮ್ಮದೇ ಸಾಹಿತ್ಯರಚನೆಯ ಹಸ್ತಪ್ರತಿ ಕೊಟ್ಟು ಓದಿ ಅಭಿಪ್ರಾಯ ತಿಳಿಸಿ ಎಂದಿದ್ದಾರೆ. ಅವರ ಪ್ರೀತಿ-ವಿಶ್ವಾಸಗಳನ್ನು ಗೌರವಿಸುವುದಕ್ಕಾದರೂ ನಾನು ಆ ಪುಸ್ತಕಗಳನ್ನೆಲ್ಲ ಓದುವವನಿದ್ದೇನೆ. ಓದತೊಡಗಿದ್ದೇನೆ ಎಂದರೂ ಸರಿಯೇ. ಏಕೆಂದರೆ ಡುಂಡಿರಾಜ್ ಅವರು ಪ್ರೀತಿಯಿಂದ ಕೊಟ್ಟಿರುವ ‘ಟೈಮಿಲ್ಲ ಸಾರ್ ಟೈಮಿಲ್ಲ’ ಪುಸ್ತಕವನ್ನು ‘ಟೈಮಿದೆ ಸಾರ್ ಟೈಮಿದೆ’ ಎಂದುಕೊಂಡು ಆಗಲೇ ಓದಿ ಮುಗಿಸಿದ್ದೇನೆ. ಹರಟೆಗಳು ಮತ್ತು ಲಘುಲೇಖನಗಳ ಓದಿನ ಸವಿಯನ್ನು ಹತ್ತಿಸಿಕೊಂಡಿದ್ದೇನೆ. ಈಗಿನ್ನು ಬೇಲೂರು ರಾಮಮೂರ್ತಿ ಅವರು ಕೊಟ್ಟಿರುವ ‘ಜಾಲಿ ಜಾಲಿ ಜೋಕಾಲಿ’ ಮತ್ತು ‘ಸಖತ್ ಕಾಮಿಡಿ’ ನಗೆಬರಹಗಳ ಸಂಗ್ರಹವನ್ನು ಕೈಗೆತ್ತಿಕೊಳ್ಳುತ್ತೇನೆ. ಆಮೇಲೆ ದಾ.ಭೀ ಪ್ರಾಣೇಶರಾವ್ ಅವರ ‘ಆಗೊಂದಿಷ್ಟು ಈಗೊಂದಿಷ್ಟು’ ಓದುತ್ತೇನೆ. ಸಿ.ಆರ್.ಸತ್ಯ ಅವರ ‘ಏಕಾದ್ಸಿ ಉಪ್ವಾಸ’ ನೆಕ್ಸ್ಟ್.

ಯಾರಿವರು ಸಿ.ಆರ್.ಸತ್ಯ? ನನಗೂ ಅವರ ಪರಿಚಯವಿರಲಿಲ್ಲ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಮೆರಿಕನ್ನಡೋತ್ಸವದ ಸಂದರ್ಭದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿಯಾದರು. ಜತೆಯಲ್ಲಿ ಪತ್ನಿ ಶ್ಯಾಮಲಾ ಸತ್ಯ ಇದ್ದರು. ಅವರಿಬ್ಬರೂ ಪರಾಗಸ್ಪರ್ಶ ಅಂಕಣದ ಖಾಯಂ ಓದುಗರಂತೆ. ಅದಲ್ಲ ಮುಖ್ಯ. ಸತ್ಯ ಅವರು “ಆಚೆಮನೆಯ ಸುಬ್ಬಮ್ಮನಿಗೆ ಏಕಾದಶೀ ಉಪವಾಸ... ಪದ್ಯವನ್ನು ಕೇಳಿದ್ದೀರಷ್ಟೆ? ಅದನ್ನು ಸುಮಾರು ನಲ್ವತ್ತು ವರ್ಷಗಳ ಹಿಂದೆ ನಾನೇ ಬರೆದದ್ದು. ಕೊರವಂಜಿ ಪತ್ರಿಕೆಯಲ್ಲಿ ಮೊಟ್ಟಮೊದಲು ಪ್ರಕಟವಾದದ್ದು” ಎಂದು ಪರಿಚಯ ಮಾಡಿಕೊಟ್ಟರು. ವಾಹ್! ಅಷ್ಟು ಜನಪ್ರಿಯ ಪದ್ಯ ಬರೆದ ವ್ಯಕ್ತಿ ಯಾವೊಂದೂ ಬಿಗುಮಾನವಿಲ್ಲದೆ ತಾನೇ ಪರಿಚಯ ತಿಳಿಸಿ ‘ಏಕಾದ್ಸಿ ಉಪ್ವಾಸ’ ಹೆಸರಿನದೇ ಪುಸ್ತಕವನ್ನೂ ಕೊಟ್ಟದ್ದು ಕಂಡು ನನಗೆ ನಿಜಕ್ಕೂ ರೋಮಾಂಚನ. ಅವರು ಕನ್ನಡದ ಪ್ರಸಿದ್ಧ ವಿದ್ವಾಂಸ ಎ.ಆರ್.ಕೃಷ್ಣಶಾಸ್ತ್ರಿಯವರ ಮೊಮ್ಮಗ ಎಂಬ ಅಂಶದಿಂದ ಮತ್ತಷ್ಟು ರೋಮಾಂಚನ.

ರವೀಂದ್ರ ಕಲಾಕ್ಷೇತ್ರದಲ್ಲಿಯೇ ನನಗೆ ಇನ್ನೂ ಒಬ್ಬ ವ್ಯಕ್ತಿ ಭೇಟಿಯಾಗಿ ಪುಸ್ತಕ ಕೊಟ್ಟು ರೋಮಾಂಚನ ತಂದರು. ಅವರು ಎಚ್.ಎಸ್.ಮಂಜುನಾಥ. ೨೦೦೫ರಲ್ಲಿ ನನ್ನ ಮೊಟ್ಟಮೊದಲ ಪುಸ್ತಕ ‘ವಿಚಿತ್ರಾನ್ನ’ (ದಟ್ಸ್‌ಕನ್ನಡ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯಲ್ಲಿ ನಾನು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ) ಪ್ರಕಟವಾದಾಗ ಮಂಜುನಾಥ ಅವರು ಅದರ ಬಗ್ಗೆ ಬರೆದ ವಿಮರ್ಶೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಂದರೆ ಒಬ್ಬ ವಿಮರ್ಶಕ ಮತ್ತು ಹವ್ಯಾಸಿ/ಅಭ್ಯಾಸಿ ಬರಹಗಾರನ ಸೌಹಾರ್ದ ಮುಖಾಮುಖಿ! ಮಂಜುನಾಥ ಅವರು ತಮ್ಮ ಇತ್ತೀಚಿನ ಕೃತಿ ‘ಚಾರ್ಲಿ ಚಾಪ್ಲಿನ್’ ವ್ಯಕ್ತಿಚಿತ್ರ ಪುಸ್ತಕದ ಪ್ರತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ. ಅದನ್ನೂ ಓದಬೇಕೆಂದುಕೊಂಡಿದ್ದೇನೆ.

ManReading.gif

ಇವಿಷ್ಟೂ ಪುಸ್ತಕಗಳನ್ನು ಲೈಟ್‌ರೀಡಿಂಗ್ ಎಂದು ಮೊದಲಿಗೆ ಓದುವುದಕ್ಕೆ ಗುರುತಿಸಿಟ್ಟಿದ್ದೇನೆ. ಊಟಕ್ಕೆ ಮೊದಲು ‘ಎಪೆಟೈಜರ್’ ಇದ್ದಹಾಗೆ. ಇನ್ನು ‘ಮೈನ್ ಕೋರ್ಸ್’ನಲ್ಲಿ ಓದುವುದಕ್ಕೆ ತೂಕದ ಕೃತಿಗಳು ತುಂಬಾ ಇವೆ. ಅಕ್ಷರಶಃ ತೂಕದವೇ, ಏಕೆಂದರೆ ಮೊನ್ನೆ ಭಾರತದಿಂದ ಹಿಂದಿರುಗುವಾಗ ಒಂದು ಸೂಟ್‌ಕೇಸ್ ತುಂಬ ಪುಸ್ತಕಗಳೇ ಇದ್ದದ್ದು. ವಾಷಿಂಗ್ಟನ್ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ‘ವ್ಹಾಟ್ಸ್ ದೇರ್ ಇನ್ ಯುವರ್ ಸೂಟ್‌ಕೇಸಸ್? ಎನಿ ಫುಡ್ ಐಟಮ್ಸ್?’ ಎಂದು ವಿಚಾರಿಸಿದ್ದಾಗ ‘ನೋ ಫುಡ್, ಬಟ್ ದೆರ್ ಈಸ್ ಇನಫ್ ಫುಡ್ ಫಾರ್ ಥಾಟ್’ ಎಂದು ಪುಸ್ತಕಗಳ ಬಗ್ಗೆ ಅವರಿಗೂ ಹೆಮ್ಮೆಯಿಂದ ತಿಳಿಸಿದ್ದೆ.

ಯಾವುದೆಲ್ಲ ಪುಸ್ತಕಗಳು? ಮುಂದಿನ ವಾರ ಬರೆಯುತ್ತೇನೆ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Cow-stopper for the gate

Saturday, July 9th, 2011
DefaultTag | Comments

ದಿನಾಂಕ  10 ಜುಲೈ 2011ರ ಸಂಚಿಕೆ...

‘ಹಸು ತಡೆ’ಯನು ದಾಟಿ ಬಾ ಓ ಅತಿಥಿ...

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ರವಿಯು ಅಜ್ಜನ ಮನೆಗೆ ಹೋದನು. ಅಂಗಳದಲ್ಲಿ ಕಾರಂಜಿಯನ್ನು ಕಂಡನು. ಹಿರಿಹಿರಿ ಹಿಗ್ಗಿದನು... ಇವು ಎರಡನೇ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಿಂದ ನೆನಪಿಸಿಕೊಂಡ ಸಾಲುಗಳು. ರವಿ ಬಹುಶಃ ಪ್ರತಿವರ್ಷವೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಾನೆ. ಅದರಲ್ಲೇನೂ ವಿಶೇಷವಿಲ್ಲ. ಆ ಸರ್ತಿ ಹೋದಾಗ ಅವನಿಗೆ ಅಲ್ಲಿ ಒಂದು ವಿಶೇಷ ಆಕರ್ಷಣೆ ಇತ್ತು. ಅಜ್ಜನ ಮನೆಯ ಅಂಗಳದಲ್ಲಿ ಹೊಸದಾಗಿ ಕಟ್ಟಿಸಿದ್ದ ಕಾರಂಜಿ. ಜುಳುಜುಳು ಶಬ್ದದೊಂದಿಗೆ ತಣ್ಣನೆಯ ನೀರು ನೊರೆನೊರೆಯಾಗಿ ಚಿಮ್ಮುವ ಕಾರಂಜಿ. ಬಿರುಬೇಸಿಗೆಯಲ್ಲಿ ಅದಕ್ಕೆ ಮೈಯೊಡ್ಡಬಹುದು. ನೀರಿನಲ್ಲಿ ಯಥೇಚ್ಛ ಆಡಬಹುದು. ಅಜ್ಜ-ಅಜ್ಜಿಯ ಪ್ರೀತಿಕಾರಂಜಿಯ ಜತೆಗೆ ಇದರ ಮೋಜನ್ನೂ ಸವಿಯಬಹುದು. ರವಿಯ ಹಿಗ್ಗಿಗೆ ಅದೇ ಕಾರಣ.

ಇಲ್ಲಿ ರವಿ ಮತ್ತು ಕಾರಂಜಿಯನ್ನು ಸಾಂಕೇತಿಕವಾಗಿ ತೆಗೆದುಕೊಂಡು ನೋಡಿ. ಅದು ನಮ್ಮ-ನಿಮ್ಮೆಲ್ಲರ ಆನಂದಾನುಭವವೂ ಆಗುತ್ತದೆ! ದೂರದ ಊರಿನಲ್ಲಿದ್ದು ವರ್ಷಕ್ಕೊಮ್ಮೆಯೋ ಮೂರ್ನಾಲ್ಕು ವರ್ಷಗಳಿಗೊಮ್ಮೆಯೋ ತವರೂರಿಗೆ ಹೋದಾಗ, ಹುಟ್ಟಿ ಬೆಳೆದ ಮನೆಗೆ ಭೇಟಿಕೊಟ್ಟಾಗ, ಅಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು, ಹೊಸ ವಸ್ತು ಅಥವಾ ಸೌಲಭ್ಯ-ಸೌಕರ್ಯಗಳನ್ನು ಗಮನಿಸಿದಾಗಿನ ಪುಳಕವಿದೆಯಲ್ಲ ಅದೊಂಥರ ವಿಶೇಷವಾದುದು. ಅದು, ಹಜಾರದಲ್ಲಿನ ಹೊಸ ತೂಗುಮಂಚ ಇರಬಹುದು, ಅಡುಗೆಮನೆಯಲ್ಲಿ ಹೊಸದೊಂದು ಪರಿಕರ ಇರಬಹುದು, ಗೋಡೆಗಳಿಗೆ ಹೊಸ ಸುಣ್ಣಬಣ್ಣ ಇರಬಹುದು, ಅಮ್ಮನೋ ಅಕ್ಕನೋ ಕೈಕರಣದಿಂದ ಮಾಡಿದ ಕಲಾಕೃತಿಯಿರಬಹುದು, ಕೊನೆಗೆ ಹಳೇ ಪೀಠೋಪಕರಣಗಳನ್ನೇ ಹೊಸ ನಮೂನೆಯಲ್ಲಿ ಜೋಡಿಸಿದ್ದಿರಬಹುದು- ಅಂತೂ “ವಾಹ್! ಎಷ್ಟು ಚೆನ್ನಾಗಿದೆ! ಕಳೆದಸಲ ಬಂದಾಗ ಇದು ಇರಲಿಲ್ಲ...” ಎನ್ನಬಹುದಾದ ಯಾವುದಾದರೂ ಸರಿ. ಮಾತಿಗೆ ಸಾಮಗ್ರಿಯಾಗುತ್ತದೆ, ಮನಸ್ಸಿಗೆ ಮುದ ಕೊಡುತ್ತದೆ, ರವಿಗೆ ಕಾರಂಜಿಯಿದ್ದಂತೆ ನಮಗೆ ಹಿಗ್ಗಿನ ಬುಗ್ಗೆಯಾಗುತ್ತದೆ.

ಈ ಸಲ ನಾನು ಊರಿಗೆ ಹೋಗಿದ್ದಾಗ ಅಲ್ಲಿ ಅಂಥದೊಂದು ಹೊಸ ಆಕರ್ಷಣೆಯ ಕಾರಂಜಿಯಿತ್ತು. ಅದೇನಂತೀರಾ? ನಮ್ಮ ಮನೆಯ ಗೇಟಿಗೆ ಅಳವಡಿಸಿದ ‘ಹಸು ತಡೆ’! ಇಂಗ್ಲಿಷ್‌ನಲ್ಲಿ cow-stopper ಅಥವಾ cow-catch ಎನ್ನುತ್ತಾರೆ. ಹಾಗೆಂದರೇನು ಅಂತ ನಿಮಗೆ ತತ್‌ಕ್ಷಣ ಗೊತ್ತಾಗುವಂತೆ ಇಲ್ಲಿ ಅದರ ಚಿತ್ರವನ್ನು ಕೊಟ್ಟಿದ್ದೇನೆ. ಚಿತ್ರದ ಜತೆಗೆ ಒಂದಿಷ್ಟು ಅಕ್ಷರ-ಚಿತ್ರಣವೂ ಇರಲೆಂದು ಅದನ್ನೂ ಕೊಡುತ್ತಿದ್ದೇನೆ.

cowcatcher.jpg

ಇಪ್ಪತ್ತೈದು ವರ್ಷಗಳಿಗೂ ಹಿಂದಿನ ಮಾತು. ನಾನಾಗ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದೆ. ನಮ್ಮ ಕಾಲೇಜಿನ ಭವ್ಯವಾದ ಕಟ್ಟಡದ ಎದುರಿಗೆ ಒಂದಿಷ್ಟು ಜಾಗದಲ್ಲಿ ಹೂತೋಟ. ಮುಖ್ಯ ರಸ್ತೆಯಿಂದ ಕಾಲೇಜಿನ ಆವರಣದೊಳಕ್ಕೆ ಹೋಗಲು ಆಚೀಚೆ ಎರಡು ದೊಡ್ಡ ಗೇಟುಗಳು. ಅವುಗಳಿಗೆ ಹೊಂದಿಕೊಂಡಂತೆ ಒಂದು ಚಿಕ್ಕ ಕಂದಕದ ಮೇಲೆ, ಸಮಾನಾಂತರವಾಗಿ ಅಡ್ಡ ಹಾಸಿದ ಕಬ್ಬಿಣದ ಕೊಳವೆಗಳು. ಕಾಲೇಜಿಗೆ ಹೋಗುವವರ ವಾಹನಗಳು (ಆಗ ಕಾರು ಇದ್ದದ್ದು ಬಹುಶಃ ಪ್ರಿನ್ಸಿಪಾಲರದು ಮಾತ್ರ; ಉಳಿದಂತೆ ಸ್ಕೂಟರ್ ಅಥವಾ ಸೈಕಲ್‌ಗಳು) ಮತ್ತು ಪಾದಚಾರಿಗಳು ಅದನ್ನು ದಾಟಿಯೇ ಹೋಗಬೇಕು. ಗೇಟುಗಳು ಯಾವಾಗಲೂ ತೆರೆದೇ ಇರುತ್ತಿದ್ದವು. ಅಲ್ಲಿ ಆ ಕಂದಕ ಮತ್ತು ಅದರ ಮೇಲೆ ಕಬ್ಬಿಣದ ಸಲಾಕೆಗಳು ಯಾಕಿರುತ್ತವೆ ಅಂತ ನನಗೆ ಗೊತ್ತೇ ಇರಲಿಲ್ಲ. ಯಾರೋ ಹೇಳಿದ್ದರು, ದನಕರುಗಳು ಕಾಲೇಜಿನ ಆವರಣದೊಳಕ್ಕೆ ಬರದಂತೆ ತಡೆಯುವುದಕ್ಕಾಗಿ ಆ ವ್ಯವಸ್ಥೆ. ಕಾಲು ಸಿಕ್ಕಿಹಾಕಿಕೊಳ್ಳುವ ಭಯದಿಂದ ದನಗಳು ಅದನ್ನು ದಾಟಲು ಯತ್ನಿಸುವುದಿಲ್ಲ. ಪದೇಪದೇ ಗೇಟ್ ಹಾಕಿ-ತೆಗೆಯುವ ಅವಶ್ಯಕತೆ ಇಲ್ಲ. ಹೂಂ, ಒಳ್ಳೆಯ ವ್ಯವಸ್ಥೆ, ಆದರೆ ‘ದನಗಳು ಯಾಕೆ ಕಾಲೇಜಿಗೆ ಬರುತ್ತವೆ? ಅವಕ್ಕೇನು ಓದಿ ಡಿಗ್ರಿ ಪಾಸಾಗಬೇಕಂತಿದೆಯೇ?’ ಎಂಬ ತುಂಟ ಪ್ರಶ್ನೆ ಈಗಾದರೆ ನನ್ನ ತಲೆಯಲ್ಲಿ ಹೊಳೆಯುತ್ತಿತ್ತು. ಇರಲಿ, ಅಂತೂ ‘ಹಸು ತಡೆ’ಂiiನ್ನು ನಾನು ಮೊಟ್ಟಮೊದಲು ನೋಡಿದ್ದು ಉಜಿರೆ ಕಾಲೇಜಿನಲ್ಲಿ. ಆಮೇಲೆ ಎಷ್ಟೋ ಕಡೆ ಸಾರ್ವಜನಿಕ ಕಟ್ಟಡಗಳ ಗೇಟುಗಳಿಗೆ ಅಂಥ ರಚನೆ ಇರುವುದು ನೋಡಿ ಅದರ ಬಗ್ಗೆ ಕುತೂಹಲ ಕಡಿಮೆಯಾಗಿತ್ತು.

ಈಗ, ಕಾರ್ಕಳ ತಾಲೂಕಿನ ಮಾಳ ಎಂಬ ಹಳ್ಳಿಯಲ್ಲಿರುವ ನಮ್ಮ ಮನೆಗೆ ಹೋಗೋಣ. ನಮ್ಮಕಡೆಯ ಹಳ್ಳಿಮನೆಗಳಲ್ಲಿ ಸಾಮಾನ್ಯವಾಗಿ ಇರುವಂತೆ ನಮ್ಮಲ್ಲೂ ಮನೆಯ ಸುತ್ತ ತೋಟ, ಅದಕ್ಕೆ ಬೇಲಿಯ ಆವರಣ. ಮಣ್ಣಿನ ರಸ್ತೆ ಬರುವಲ್ಲಿ ಮಾತ್ರ ದೊಡ್ಡದೊಂದು ಗೇಟು. ಅದು ಮನೆಯಿಂದ ಕನಿಷ್ಠ ನೂರಿನ್ನೂರು ಅಡಿಗಳಷ್ಟು ದೂರದಲ್ಲೇ ಇರುತ್ತದೆ. ವಾಹನಗಳು ಮನೆಯ ಅಂಗಳದವರೆಗೂ ಬರಬಹುದಾದರೂ ಮುಚ್ಚಿರುವ ಗೇಟನ್ನು ತೆಗೆಯಲು ಒಂದೋ ಮನೆಯವರೇ ಯಾರಾದರೂ ಬರಬೇಕು, ಇಲ್ಲ ವಾಹನದಲ್ಲಿದ್ದವರೇ ಒಮ್ಮೆ ಇಳಿದು ಗೇಟು ತೆರೆದುಕೊಂಡು ಮತ್ತೆ ವಾಹನವೇರಿ ಬರಬೇಕು. ನನ್ನ ಅಣ್ಣ ಡೇರಿಗೆ ಹಾಲು ಕೊಟ್ಟು ಬರಲಿಕ್ಕೊಮ್ಮೆ, ಕಾರ್ಕಳ ಪೇಟೆಯಲ್ಲಿ ಏನಾದರೂ ವ್ಯವಹಾರದ ಕೆಲಸಗಳಿದ್ದರೆ ಅದಕ್ಕೆ, ನಮ್ಮೂರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನಾದ್ದರಿಂದ ಅದರ ವಿಚಾರವಾಗಿ, ಅಥವಾ ಮನೆಗೆ ಯಾರಾದರೂ ಬಂದಾಗ ಅವರನ್ನು ಬಸ್‌ಸ್ಟಾಪ್‌ವರೆಗೆ ಬಿಟ್ಟು ಬರುವುದಿದ್ದರೆ... ಹೀಗೆ ಒಂದಿಲ್ಲೊಂದು ಕಾರಣಗಳಿಂದ ದಿನಕ್ಕೆ ಏನಿಲ್ಲವೆಂದರೂ ಐದಾರು ಸರ್ತಿ ಬೈಕ್ ಅಥವಾ ಕಾರು ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಿ ಬರಬೇಕಾಗುತ್ತದೆ. ಮನೆಯಲ್ಲಿ ಉಳಿವವರು ಅತ್ತಿಗೆ ಮತ್ತು ಅಮ್ಮ ಮಾತ್ರ. ಇಬ್ಬರೂ ಮನೆಗೆಲಸಗಳಲ್ಲಿ ಮುಳುಗಿರುತ್ತಾರೆ. ಆಗೆಲ್ಲ ಗೇಟು ತೆಗೆದು-ಹಾಕುವ ಕೆಲಸ ದೊಡ್ಡ ತಲೆನೋವು. ಹಾಗಂತ ಗೇಟು ತೆರೆದೇ ಇಟ್ಟರೆ ದನಕರುಗಳ ಕಾಟ. ನಮ್ಮ ಕೊಟ್ಟಿಗೆಯ ದನಗಳಲ್ಲದಿದ್ದರೂ ಬೇರೆ ಉಂಡಾಡಿ ದನಗಳು ಒಳಬಂದು ತರಕಾರಿ ಗಿಡಗಳು ಹೂಗಿಡಗಳು ಅದೂ‌ಇದೂ ಎನ್ನದೇ ಎಲ್ಲವನ್ನೂ ತಿಂದು ಹಾಕುತ್ತವೆ. ನಮ್ಮ ಮನೆಯ ಮತ್ತು ನಿವೇಶನದ ಹೆಸರು ‘ಫಲವಾಡಿ’ (ಹಣ್ಣುಹಂಪಲಿನ ತೋಟ ಎಂದು ಮರಾಠಿ ಭಾಷೆಯಲ್ಲಿ ಅರ್ಥ) ಎಂದಿರುವುದು, ಒಳಗೆ ಹೋದರೆ ಒಳ್ಳೆಯ ಮೇವು ಎಂದು ಬಹುಶಃ ದನಕರುಗಳಿಗೂ ಗೊತ್ತಿದೆ. ಅಂತೂ ಗೇಟು ಹಾಕಿಟ್ಟರೂ ಕಷ್ಟ, ತೆರೆದಿಟ್ಟರೂ ಕಷ್ಟ. ಅದಕ್ಕಾಗಿ ಈಗ ಅಣ್ಣ ಮಾಡಿರುವ ಹೊಸ ವ್ಯವಸ್ಥೆಯೇ ಗೇಟಿನ ಹೊರಗಡೆ ‘ಹಸು ತಡೆ’. ಇನ್ನು ದನಕರುಗಳ ಕಾಟವಿಲ್ಲ. ಬೆಳಿಗ್ಗೆ ಒಮ್ಮೆ ಗೇಟು ತೆರೆದರೆ ರಾತ್ರಿಯವರೆಗೂ ಮುಚ್ಚಬೇಕಿಲ್ಲ. ಮೊನ್ನೆ ಹೊಸತರಲ್ಲಿ ಒಂದೆರಡು ದನಗಳು ಗೇಟಿನವರೆಗೂ ಬಂದು ತಡೆಯನ್ನು ಕಂಡು ವಾಪಸಾದದ್ದನ್ನು ನೋಡುವಾಗ ಖುಷಿಯೋ ಖುಷಿ ಎನ್ನುತ್ತಿದ್ದರು ನನ್ನಣ್ಣ.

ಉಜಿರೆ ಕಾಲೇಜನ್ನು ನೆನಪಿಗೆ ತಂದ cow-stopper ನಮ್ಮನೆಯ ಗೇಟಿಗೂ ಅಳವಡಿಸಿದ್ದನ್ನು ನೋಡಿದಾಗ ನನಗೂ ಖುಷಿಯಾಯಿತು. ಅದಕ್ಕಿಂತ ಹೆಚ್ಚಾಗಿ, ಇನ್ನು ನಮ್ಮ ಮನೆಯಲ್ಲಿ ‘ತೆರೆದಿದೆ ಗೇಟು ಓ ಬಾ ಅತಿಥಿ... ಹಸು ತಡೆಯನು ದಾಟಿ ಬಾ ಓ ಅತಿಥಿ...’ ಎಂದು ಹಾಡಬಹುದೆನ್ನುವ ಹಾಸ್ಯಚಟಾಕಿಯಿಂದ ಮತ್ತಷ್ಟು ಖುಷಿಯಾಯಿತು.

ಸ್ಪರ್ಶ ಸಂಭ್ರಮ: ಕಳೆದ ರವಿವಾರ ಜುಲೈ ೩ರಂದು ಬೆಂಗಳೂರಿನಲ್ಲಿ ನಡೆದ ‘ಸ್ನೇಹಸ್ಪರ್ಶ’ ಕಾರ್ಯಕ್ರಮ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಇತ್ತು; ಒಟ್ಟಿನಲ್ಲಿ ಅತ್ಯಂತ ಆತ್ಮೀಯವಾಗಿತ್ತು, ಅದರಲ್ಲಿ ಪಾಲ್ಗೊಂಡದ್ದು ತುಂಬ ಖುಷಿಕೊಟ್ಟಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಸ್ನೇಹಸ್ಪರ್ಶಕ್ಕೆ ಅನನ್ಯತೆಯ ಅಂದ ತಂದುಕೊಡಲು ಕಾರಣರಾದವರಿಗೆಲ್ಲ, ಶುಭಾಶಯ ಕೋರಿದವರಿಗೆಲ್ಲ, ಹೃತ್ಪೂರ್ವಕ ಧನ್ಯವಾದಗಳು. ಅವತ್ತು ಬಿಡುಗಡೆಯಾದ ‘ಗೆಲುವಿನ ಟಚ್!’ ಮತ್ತು ‘ಚೆಲುವಿನ ಟಚ್!’ ಅವಳಿ ಪುಸ್ತಕಗಳು (ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಕರ್ನಾಟಕದಾದ್ಯಂತ ಪ್ರಮುಖ ಪುಸ್ತಕದಂಗಡಿಗಳಲ್ಲಿ ಸಿಗುತ್ತವೆ. ಕೊಂಡು ಓದಿ. ಇಷ್ಟಮಿತ್ರ ಬಂಧುಬಾಂಧವರಿಗೆ ಉಡುಗೊರೆಯಾಗಿ ಕೊಡಿ. ಅಕ್ಷರಪ್ರೀತಿ, ತನ್ಮೂಲಕ ಜೀವನಪ್ರೀತಿ ಎಲ್ಲರದಾಗಲಿ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

Podbean App

Play this podcast on Podbean App