ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for July 2011


Double Decker Airbus A380

Wednesday, July 6th, 2011
DefaultTag | Comments

ದಿನಾಂಕ  3 ಜುಲೈ 2011ರ ಸಂಚಿಕೆ...

ಎರಡಂತಸ್ತಿನ ಆ ವಿಮಾನದ್ದೇ ಒಂದು ಗತ್ತು!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಏರ್‌ಬಸ್ ಎ-380. ಶಾರ್ಟ್ ಆಗಿ ‘ಎ-ತ್ರೀ‌ಎಯ್ಟಿ’. ನಮಗೆಲ್ಲ ಬಿಡಿ, ವಿಮಾನಗಳನ್ನು ಸಿಟಿಬಸ್ಸುಗಳಂತೆ ನೋಡುವ/ಬಳಸುವ ಅಮೆರಿಕನ್ನರಿಗೂ ಅದೊಂದು ಅದ್ಭುತವೆನಿಸುವ ಅಚ್ಚರಿ. ನೋಡಿದೊಡನೆಯೇ ನಿಬ್ಬೆರಗಾಗಿ ವಾಹ್ ಎಂದು ಉದ್ಗಾರ ತರಿಸುವಂಥ ದೈತ್ಯ ವಿಮಾನ. ಈಗ ಪ್ರಪಂಚದ ಅತಿದೊಡ್ಡ ‘ಪ್ಯಾಸೆಂಜರ್ ಫ್ಲೈಟ್’ ಎಂಬ ಹೆಗ್ಗಳಿಕೆ ಅದರದು. ದೊಡ್ಡದೆಂದರೆ ಅಷ್ಟಿಷ್ಟಲ್ಲ, ಒಂದು ಸರಾಸರಿ ಸಾಮಾನ್ಯ ಗಾತ್ರದ ವಿಮಾನಕ್ಕಿಂತ ನಾಲ್ಕು ಪಟ್ಟು ದೊಡ್ಡದು! ರಟ್ಟೆಯ ಬಲದಲ್ಲಿ ಭೀಮನಂಥದು. ಹೊಟ್ಟೆಯೊಳಗೆ ತುಂಬಿಸಿಕೊಳ್ಳುವ ವಿಚಾರದಲ್ಲಿ ಬಕಾಸುರನಂಥದು. ಮಿಕ್ಕೆಲ್ಲ ವಿಮಾನಗಳು ಈ ಗಿಡುಗನೆದುರಿಗೆ ಪುಟ್ಟ ಗುಬ್ಬಚ್ಚಿಗಳಂತೆ ಕಾಣುತ್ತವೆ. ಅಂತಹ ಏರ್‌ಬಸ್ ಎ-380 ವಿಮಾನದಲ್ಲಿ ಮೊನ್ನೆ ವಾಷಿಂಗ್ಟನ್‌ನಿಂದ ಪ್ಯಾರಿಸ್‌ವರೆಗೆ ಪ್ರಯಾಣ ಮಾಡಿದ ಪುಳಕ ನನ್ನದಾಯಿತು. ಅದಿನ್ನೂ ತಾಜಾ ಇರುವಾಗಲೇ ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಇವತ್ತಿನ ಅಂಕಣ ಏರ್‌ಬಸ್ ಎ-380 ಸ್ಪೆಷಲ್!

airfrancea380.jpg

‘ಎರಡಂತಸ್ತಿನ...’ ಎಂದೆನಲ್ಲಾ, ಹಾಗೆ ನೋಡಿದರೆ ಬೋಯಿಂಗ್ ೭೪೭-೪೦೦ ಜಂಬೋ ಜೆಟ್ (ಏರ್‌ಬಸ್ ಎ-380 ಆವಿಷ್ಕಾರವಾಗುವ ಮೊದಲು ನಾಲ್ಕೈದು ದಶಕಗಳ ಕಾಲ ಅತಿದೊಡ್ಡ ವಿಮಾನ ಎಂಬ ಖ್ಯಾತಿ ಹೊಂದಿದ್ದದ್ದು) ಕೂಡ ಡಬ್ಬಲ್‌ಡೆಕ್ಕರ್ ವಿಮಾನವೇ. ಆದರೆ ಅದರಲ್ಲಿ ಮುಂಭಾಗವಷ್ಟೇ ಎರಡು ಅಂತಸ್ತುಗಳು. ಏರ್‌ಬಸ್‌ನಲ್ಲಿ ಹಾಗಲ್ಲ, ವಿಮಾನದ ಅಷ್ಟೂ ಉದ್ದವೂ ಎರಡು ಡೆಕ್‌ಗಳು. ಜಂಬೋ ಜೆಟ್‌ನ ಕೆಪ್ಯಾಸಿಟಿ ಸುಮಾರು ನಾಲ್ನೂರು ಪ್ರಯಾಣಿಕರು ಅಷ್ಟೇ. ಏರ್‌ಬಸ್ ಎ-380 ಒಮ್ಮೆಗೇ 555 ಪ್ರಯಾಣಿಕರನ್ನು ಹೊತ್ತುಕೊಂಡು ಹಾರಬಲ್ಲದು! ಅದೂ ಮೂರು ಬೇರೆಬೇರೆ ಶ್ರೇಣಿಗಳ ಆಸನವ್ಯವಸ್ಥೆ ಆದ್ದರಿಂದ ಅಷ್ಟು, ಒಂದುವೇಳೆ ಎಲ್ಲವೂ ‘ಎಕಾನಮಿ ಕ್ಲಾಸ್’ ಅಂತಿದ್ದರೆ ಸುಮಾರು 850 ಸೀಟ್‌ಗಳು! ಜತೆಯಲ್ಲಿ ಅವರೆಲ್ಲರ ಲಗೇಜ್. ಊಟೋಪಚಾರ ಮತ್ತಿತರ ಸೇವೆಗಳಿಗೆ ಬೇಕಾಗುವ ಸಾಮಗ್ರಿ. ಸಾವಿರಾರು ಮೈಲು ಕ್ರಮಿಸಲು ಬೇಕಾಗುವಷ್ಟು ಇಂಧನವನ್ನೂ ಟ್ಯಾಂಕ್ ತುಂಬ ತುಂಬಿಸಿಕೊಂಡು ಹೊರಡಬೇಕು. ಅಂದರೆ ಟೇಕ್‌ಆಫ್ ಆಗುವಾಗ ಈ ದೈತ್ಯವಿಮಾನದ ತೂಕ ಎಷ್ಟಿರಬಹುದೆಂದು ಅಂದಾಜಿಸಿ! ಅದಕ್ಕೋಸ್ಕರವೇ ಮಾಮೂಲಿ ವಿಮಾನಗಳಿಗಿಂತ ಆರು ಪಟ್ಟು ಹೆಚ್ಚು ಸಾಮರ್ಥ್ಯದ ಎಂಜಿನ್‌ಗಳು ಇದರವು.

ಅಷ್ಟು ದೊಡ್ಡ ವಿಮಾನ ಇಳಿಯುವುದಕ್ಕೆ ರನ್‌ವೇ ಕೂಡ ದೊಡ್ಡದಾಗಿಯೇ ಇರಬೇಕಲ್ಲ? ಹೌದು, ಆದರೆ ರನ್‌ವೇಯಷ್ಟೇ ಸಾಲದು, ವಿಮಾನ ನಿಲ್ದಾಣದ ಟರ್ಮಿನಲ್‌ಗಳು ಮತ್ತು ಗೇಟ್‌ಗಳು ಕೂಡ ವಿಶೇಷ ಸಾಮರ್ಥ್ಯದವಾಗಿರಬೇಕು. ವಿಮಾನದಲ್ಲಿ ಪ್ರಯಾಣಿಕರು ಹತ್ತಿ-ಇಳಿಯುವುದಕ್ಕೆ ಬಳಸುವ ‘ಏರೋಬ್ರಿಡ್ಜ್’ಗಳು ಎರಡು ಅಂತಸ್ತುಗಳ ಬಾಗಿಲುಗಳಿಗೆ ಅಟ್ಯಾಚ್ ಆಗುವಂತೆ ಇರಬೇಕು. ಲಂಡನ್, ನ್ಯೂಯಾರ್ಕ್‌ನಂಥ ದಟ್ಟ ಸಂಚಾರದ ಏರ್‌ಪೋರ್ಟ್‌ಗಳಲ್ಲಿ ಕೆಲವೊಮ್ಮೆ ವಿಮಾನ ನಿಲ್ಲಿಸಲು ಒಂದು ಗೇಟ್ ಸಿಗುವುದೇ ಕಷ್ಟವಿರುವಾಗ ಏರ್‌ಬಸ್ ಎ-380ಗೆ ಅಕ್ಕಪಕ್ಕದ ಎರಡು ಗೇಟ್‌ಗಳು ಖಾಲಿ ಸಿಗಬೇಕು! ಅಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರಿರುವಾಗ ಅವರ ಭದ್ರತಾ ತಪಾಸಣೆ, ಕಸ್ಟಮ್ಸ್ ಕ್ಲಿಯರೆನ್ಸ್ ಮುಂತಾದ ಮಾಮೂಲಿ ವಿಧಿವಿಧಾನಗಳೆಲ್ಲ ಬೇಗಬೇಗ ಆಗಬೇಕು. ಸದ್ಯಕ್ಕೆ ಪ್ರಪಂಚದಲ್ಲಿ ಕೇವಲ 20 ವಿಮಾನ ನಿಲ್ದಾಣಗಳಲ್ಲಿ ಮಾತ್ರ ಏರ್‌ಬಸ್ ಎ-380ಯನ್ನು ನಿಭಾಯಿಸುವ ಸಾಮರ್ಥ್ಯ-ಸೌಕರ್ಯ ಇರುವುದು. ನಮ್ಮ ವಾಷಿಂಗ್ಟನ್ ವಿಮಾನನಿಲ್ದಾಣವೂ ಇತ್ತೀಚೆಗಷ್ಟೇ ಅಪ್‌ಗ್ರೇಡ್ ಆಗಿ ಈ ಸಾಮರ್ಥ್ಯವನ್ನು ಪಡಕೊಂಡದ್ದು. ಜಸ್ಟ್ ಹದಿನೈದು ದಿನಗಳ ಹಿಂದೆಯಷ್ಟೇ ಏರ್‌ಫ್ರಾನ್ಸ್‌ನ ವಾಷಿಂಗ್ಟನ್-ಪ್ಯಾರಿಸ್ ವಿಮಾನಯಾನದ ಎ-380 ಸರ್ವೀಸ್ ಶುರುವಾದದ್ದು. ಹಾಗಾಗಿಯೇ ಮೊನ್ನೆ ನಾನು ಪ್ರಯಾಣಿಸುವಾಗ ವಾಷಿಂಗ್ಟನ್ ಏರ್‌ಪೋರ್ಟ್‌ನ ಟರ್ಮಿನಲ್‌ನಲ್ಲೂ, ವಿಮಾನದಲ್ಲೂ ಎಲ್ಲವೂ ಹೊಸತು ಹೊಸತು!

ಐದಾರು ವರ್ಷಗಳ ಹಿಂದೆ ಎ-380 ವಿಮಾನಗಳ ಉತ್ಪಾದನೆ ಶುರುವಾದಾಗಿನಿಂದಲೂ ಅದರ ಬಗ್ಗೆ ತುಂಬಾ ಪ್ರಚಾರ ಇತ್ತು. ಅಮೆರಿಕದ ಬೋಯಿಂಗ್ ಕಂಪನಿಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್‌ನ ಏರ್‌ಬಸ್ ಕಂಪನಿಯು ಈ ಗಜಗಾತ್ರದ ವಿಮಾನಗಳ ತಯಾರಿ, ಪ್ರಯೋಗಾರ್ಥ ಹಾರಾಟ ಮತ್ತು ಕಮರ್ಷಿಯಲ್ ಏರ್‌ಲೈನ್‌ಗಳಿಗೆ ಮಾರಾಟವನ್ನು ಆರಂಭಿಸಿದ್ದಾದ್ದರಿಂದ ಒಂದು ರೀತಿಯ ಪೈಪೋಟಿಯ ವಾತಾವರಣವೂ ಇತ್ತು. ಬೋಯಿಂಗ್‌ನ ಹಳತಾದ ಮಾಡೆಲ್‌ಗಳನ್ನು ನೋಡಿನೋಡಿ ಬೇಸತ್ತಿದ್ದ ಜನರಲ್ಲಿ ಎ-380 ಬಗ್ಗೆ ಸಾಕಷ್ಟು ಎಕ್ಸೈಟ್‌ಮೆಂಟ್ ಇತ್ತು. ಟಿವಿ ಡಾಕ್ಯುಮೆಂಟರಿಗಳಲ್ಲಿ, ಪತ್ರಿಕೆಗಳಲ್ಲಿ, ಕೊನೆಗೆ ಇಮೇಲ್‌ಫಾರ್ವರ್ಡ್‌ಗಳಲ್ಲೂ ಎ-380 ಅಚ್ಚರಿಗಳ ಗುಣಗಾನ ನಡೆದಿತ್ತು. ಯುರೋಪ್‌ನ ವಿವಿಧ ದೇಶಗಳಲ್ಲಿ ಅದರ ಬಿಡಿಭಾಗಗಳು ತಯಾರಾಗಿ ಫ್ರಾನ್ಸ್‌ನ ಟೌಲೌಸ್ ಎಂಬಲ್ಲಿ ಅಸೆಂಬ್ಲಿಯಾಗುವ ದೃಶ್ಯಗಳಲ್ಲೇ ಒಂದು ರೋಮಾಂಚನವಿತ್ತು. ಎ-380 ಎಂದರೆ ಅದೊಂದು ಬರೀ ವಿಮಾನವಲ್ಲ; ಬಾರ್, ಕ್ಯಾಸಿನೊ, ಬ್ಯೂಟಿ-ಸಲೂನ್, ಡ್ಯೂಟಿ-ಫ್ರೀ ಮಳಿಗೆಗಳು ಇತ್ಯಾದಿ ಲಕ್ಷುರಿಗಳೂ ಸೇರಿಕೊಂಡ ಒಂದು ಐಷಾರಾಮಿ ಗಗನನೌಕೆ ಎಂಬ ಚಿತ್ರಣವಿತ್ತು.

ನಿಜಕ್ಕೂ ಅವೆಲ್ಲ ಇರುವುದು ಹೌದಾ ಎಂಬ ಕುತೂಹಲ ನನಗೂ ಇತ್ತು. ನಾನು ಪ್ರಯಾಣಿಸಿದ್ದು ಏರ್‌ಫ್ರಾನ್ಸ್‌ನ ಎ-380 ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ. ಅದರಲ್ಲಿ ಹೇಳಿಕೊಳ್ಳುವಂಥ ಸ್ಪೆಷಲ್ ಫೀಚರ್‌ಗಳೇನೂ ಕಾಣಲಿಲ್ಲ. ಅವೇ ಇಕ್ಕಟ್ಟಾದ ಸೀಟ್‌ಗಳು. ಕಾಲು ಚಾಚಲಿಕ್ಕೂ ಹೆಚ್ಚೇನೂ ಜಾಗವಿಲ್ಲ. ನನ್ನ ಸೀಟ್ ಇದ್ದದ್ದು ಕೆಳಗಿನ ಸ್ತರದಲ್ಲಿ. ಮೇಲಿನ ಡೆಕ್ ಹೇಗಿರುತ್ತದೆ ನೋಡಿಕೊಂಡು ಬರಬಹುದೇ ಎಂದು ಗಗನಸಖಿಯೊಬ್ಬಳನ್ನು ಪುಸಲಾಯಿಸಿದಾಗ ಅಲ್ಲಿನ ಎಕಾನಮಿ ಕ್ಲಾಸ್‌ಗೆ ಮಾತ್ರ ಹೋಗಿಬರುವ ಪರ್ಮಿಷನ್ ಸಿಕ್ಕಿತು. ಹೇಳಿಕೇಳಿ ಏರ್‌ಫ್ರಾನ್ಸ್‌ನ ವಿಮಾನ. ಏರ್‌ಫ್ರಾನ್ಸ್ ‘ನಗುಮೊಗ’ದ ಸೇವೆಗಿಂತ ‘ಬಿಗುಮೊಗ’ದ ಸೇವೆಗೇ ಪ್ರಸಿದ್ಧ. ಆಫ್‌ಕೋರ್ಸ್, ವಿಮಾನವೆಲ್ಲ ಸುತ್ತಾಡಿ ನೋಡಿಬರುತ್ತೇನೆ ಎಂದು ನನ್ನಹಾಗೆ ಎಲ್ಲರೂ ಕೇಳಿದರೆ ಅದೇನೂ ಮ್ಯೂಸಿಯಂ ಅಲ್ಲವಲ್ಲ. ‘ಎ-380ಯಲ್ಲಿ ನಾನೂ ಪ್ರಯಾಣಿಸಿದ್ದೇನೆ ಎಂಬ ಬಿಂಕವೇ ಹೆಚ್ಚಿನದು’ ಎಂದುಕೊಂಡು ಸುಮ್ಮನಾದೆ. ಇನ್‌ಫ್ಲೈಟ್ ಎಂಟರ್‌ಟೇನ್‌ಮೆಂಟ್ ಸಿಸ್ಟಂ (ಪ್ರತಿ ಸೀಟ್‌ಗೂ ಅಳವಡಿಸಿರುವ ಬಹುಮಾಧ್ಯಮ ಮನರಂಜನೆಯ ವ್ಯವಸ್ಥೆ) ಮಾತ್ರ ತುಂಬಾ ಚೆನ್ನಾಗಿತ್ತು. ಅದರಲ್ಲೂ ವಿಮಾನದ ಟೇಲ್‌ಪೀಸ್‌ಗೆ ಅಳವಡಿಸಿದ ಕ್ಯಾಮೆರಾದಿಂದ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ವೇಳೆಯಲ್ಲಿ ಮೂಡಿಬರುವ ಲೈವ್ ಚಿತ್ರಗಳನ್ನು ನಾನು ಇದೇ ಮೊದಲಸಲ ನೋಡಿದ್ದು. ವಿಮಾನದ ಟಾಪ್ ಮೇಲೆ ಕುಳಿತು ನೋಡಿದರೆ ಹೇಗೆ ಕಾಣುತ್ತದೆ ಎಂದು ತೋರಿಸುವ ಚಿತ್ರಗಳು. ಸೂಪರ್!

ವಾಷಿಂಗ್ಟನ್‌ನಿಂದ ಪ್ಯಾರಿಸ್ ವಿಮಾನಯಾನಕ್ಕೆ ಸುಮಾರು ಆರು ಗಂಟೆ ತಗಲುತ್ತದೆ (ದಶಕಗಳ ಹಿಂದೆ ಇದೇ ಏರ್‌ಫ್ರಾನ್ಸ್ ಸಂಸ್ಥೆಯ ಛಿoಟಿಛಿoಡಿಜ  ಪ್ಯಾಸೆಂಜರ್ ವಿಮಾನಗಳು ಶಬ್ದದ ವೇಗದಲ್ಲಿ ಚಲಿಸಿ ಪ್ಯಾರಿಸ್-ನ್ಯೂಯಾರ್ಕ್ ದೂರವನ್ನು ಒಂದೆರಡು ಗಂಟೆಗಳಲ್ಲಿ ಕ್ರಮಿಸುತ್ತಿದ್ದವು. ಒಂದು ಭೀಕರ ಅಪಘಾತದ ನಂತರ ಈಗ ಕಾನ್‌ಕಾರ್ಡ್ ವಿಮಾನಗಳ ಹಾರಾಟ ನಿಂತಿದೆ). ಆರು ತಾಸಿನ ಐಷಾರಾಮ ಯಾನ ಎನ್ನುತ್ತದೆ ಏರ್‌ಫ್ರಾನ್ಸ್‌ನ ಜಾಹೀರಾತು. ಐಷಾರಾಮ ಅವರವರ ಭಾವಕ್ಕೆ ಅವರವರ ಅಭಿರುಚಿಗೆ ಮತ್ತು ಕಿಸೆ-ಸಾಮರ್ಥ್ಯಕ್ಕೆ ಬಿಟ್ಟದ್ದು. ಆದರೆ ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಎ-380 ವಿಮಾನಗಳಿಂದ ಪ್ರಯೋಜನಗಳೂ ಇವೆ. ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಒಂದೇ ವಿಮಾನವು ಏಕಕಾಲಕ್ಕೆ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಒಯ್ಯುವಂತಾದರೆ ಒಳ್ಳೆಯದೇ. ಇಲ್ಲಿಯವರೆಗೆ ಏರ್‌ಫ್ರಾನ್ಸ್, ಲುಫ್ತಾನ್ಸಾ, ಎಮಿರೇಟ್ಸ್, ಸಿಂಗಾಪುರ್, ಕೋರಿಯನ್, ಮತ್ತು ಕ್ವಾಂಟಾಸ್ ಏರ್‌ಲೈನ್‌ಗಳಷ್ಟೇ ಎ-380 ವಿಮಾನಗಳನ್ನು ಬಳಸುತ್ತಿರುವುದು. ಇನ್ನು ಸದ್ಯದಲ್ಲಿಯೇ ಬೆಂಗಳೂರು ಸೇರಿದಂತೆ ಭಾರತದ ಕೆಲವು ವಿಮಾನ ನಿಲ್ದಾಣಗಳೂ ಎ-380 ಕಂಪಾಟಿಬಲ್ ಆಗಲಿವೆ. ವಿಜಯ್ ಮಲ್ಯ ಮಾಲೀಕತ್ವದ ಕಿಂಗ್‌ಫಿಶರ್ ಸಂಸ್ಥೆ ಆಗಲೇ ಐದು ಎ-380 ವಿಮಾನಗಳಿಗೆ ಆರ್ಡರ್ ಸಲ್ಲಿಸಿದೆಯಂತೆ. ಮೊದಲಿಗೆ ಮುಂಬಯಿಯಿಂದ ಎ-380 ಸರ್ವೀಸ್ ಆರಂಭಿಸುತ್ತದೆಯಂತೆ. ನಾಲ್ಕೈದು ವರ್ಷಗಳ ನಂತರ ಒಂದುವೇಳೆ ನಾನು ಹೀಗೆ ‘ಎ-380 ಎರಡಂತಸ್ತಿನ ವಿಮಾನದ ಗತ್ತು’ ಎಂದು ಲೇಖನ ಬರೆದರೆ ಆಗ ನೀವು ‘ಹೌದ್ರೀ ಅದು ನಮಗೂ ಗೊತ್ತು’ ಎನ್ನುತ್ತೀರಿ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]