ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for September 2011


Touch books get Shataavadhani’s touch

Wednesday, September 28th, 2011
DefaultTag | Comments

‘...ಟಚ್’ ಪುಸ್ತಕಗಳಿಗೆ ಶತಾವಧಾನಿಯ ಹಸ್ತ ಸ್ಪರ್ಶ!

ಜುಲೈ 3,2011ರಂದು ಬೆಂಗಳೂರಿನಲ್ಲಿ ನಡೆದ ‘ಸ್ನೇಹಸ್ಪರ್ಶ’ (ಪರಾಗಸ್ಪರ್ಶ ಓದುಗಬಳಗದ ಸ್ನೇಹಸಮ್ಮಿಲನ ಮತ್ತು ‘ಗೆಲುವಿನ ಟಚ್’ ಹಾಗೂ ‘ಚೆಲುವಿನ ಟಚ್’ ಪುಸ್ತಕಗಳ ಬಿಡುಗಡೆ ಸಮಾರಾಂಭ)ಕ್ಕೆ ಶತಾವಧಾನಿ ಡಾ.ಆರ್.ಗಣೇಶ್ ಅವರನ್ನೂ ಆಹ್ವಾನಿಸಿದ್ದೆ. ಕಾರಣಾಂತರಗಳಿಂದ ಅವರಿಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಆಗಿರಲಿಲ್ಲ. ಆ ದಿನಗಳಲ್ಲಿ ಅವರು ಯಾವುದೋ ಕೃತಿರಚನೆಗೆ ಸಂಬಂಧಿಸಿದಂತೆ ಅಧ್ಯಯನನಿರತರಾಗಿದ್ದರಿಂದ ಅವರನ್ನು ಭೇಟಿಯಾಗಿ ಪುಸ್ತಕಗಳ ಗೌರವಪ್ರತಿಯನ್ನು ಕೊಡುವುದು ನನಗೂ ಸಾಧ್ಯವಾಗಿರಲಿಲ್ಲ.

ಆದರೂ, ಸ್ನೇಹಸ್ಪರ್ಶದಲ್ಲಿ ಭಾಗವಹಿಸಿದ್ದ ಓದುಗಮಿತ್ರ ಬೆಂಗಳೂರಿನ ಸುಬ್ರಹ್ಮಣ್ಯಂ ಕೆಂದೋಳೆ (ಶತಾವಧಾನಿ ಅವರ ಒಡನಾಟವುಳ್ಳವರು) ಅವರ ಬಳಿ ಪುಸ್ತಕಗಳ ಪ್ರತಿಯನ್ನು ಕೊಟ್ಟು ಡಾ.ಗಣೇಶ್ ಅವರಿಗೆ ತಲುಪಿಸುವಂತೆ ವಿನಂತಿಸಿದ್ದೆ.

ಸುಬ್ರಹ್ಮಣ್ಯಂ ಅವರು ಮೊನ್ನೆ ಶತಾವಧಾನಿಯವರ ಮನೆಗೆ ಹೋಗಿ (ಬೆಂಗಳೂರಿನಲ್ಲಿ ರಾಜಾಜಿನಗರದಲ್ಲಿದೆ) ನನ್ನ ಪರವಾಗಿ ’ಗೆಲುವಿನ ಟಚ್’ ’ ‘ಚೆಲುವಿನ ಟಚ್’ ಪುಸ್ತಕಗಳನ್ನು ಅವರಿಗೆ ಹಸ್ತಾಂತರಿಸಿದರು. ಅತ್ಯಂತ ಸಂತೋಷದಿಂದ ಪುಸ್ತಕಗಳನ್ನು ಸ್ವೀಕರಿಸಿದ ಡಾ.ಆರ್.ಗಣೇಶ್ ಕೂಡಲೆಯೇ ಅವುಗಳನ್ನು ತೆರೆದು ಕಣ್ಣಾಡಿಸಿ ಮುಕ್ತಕಂಠದ ಪ್ರಶಂಸೆ ವ್ಯಕ್ತಪಡಿಸಿ ಕೆಲವು ಭಾಗಗಳ ಬಗ್ಗೆ ಸುಬ್ರಹ್ಮಣ್ಯಂ ಅವರೊಂದಿಗೆ ಸೋದಾಹರಣವಾಗಿ ವಿಚಾರವಿನಿಮಯ ಸಹ ಮಾಡಿದರಂತೆ!

ಆ ಸಂದರ್ಭದ ಕೆಲವು ಚಿತ್ರಗಳನ್ನು ಸುಬ್ರಹ್ಮಣ್ಯಂ ಅವರು ನನಗೆ ಕಳಿಸಿದ್ದಾರೆ. ಅವುಗಳನ್ನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

[ಅಂದಹಾಗೆ ‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’ ಪುಸ್ತಕಗಳು (ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬೆಂಗಳೂರಿನ ಸಪ್ನಾ, ಅಂಕಿತ, ನವಕರ್ನಾಟಕ, ಟೋಟಲ್‌ಕನ್ನಡ ಮುಂತಾದ ಪುಸ್ತಕಮಳಿಗೆಗಳಲ್ಲಿ, ಹಾಗೂ ಕರ್ನಾಟಕದ ಪ್ರಮುಖ ಪಟ್ಟಣಗಳ ಪುಸ್ತಕದಂಗಡಿಗಳಲ್ಲಿ ಮಾರಾಟವಾಗುತ್ತಿವೆ.]

spic0.jpg

spic1.jpg

spic3.jpg

spic4.jpg

spic5.jpg

spic6.jpg

* **

ಇದನ್ನೂ ಓದಿ : "ಅನುರಾಗದ ರಂಧನ; ಸಂಭ್ರಮಿಸಿದ ಹೃನ್ಮನ" (ಕಳೆದವರ್ಷ ಜನವರಿಯಲ್ಲಿ ನಾನು ಶತಾವಧಾನಿ ಡಾ.ಆರ್.ಗಣೇಶ್ ಅವರ ಮನೆಗೆ ಭೇಟಿಕೊಟ್ಟನಂತರ ಬರೆದಿದ್ದ ಪರಾಗಸ್ಪರ್ಶ ಅಂಕಣಬರಹ.)

Visit to Shataavadhani R Ganesh

Wednesday, September 28th, 2011
DefaultTag | Comments

ಪರಾಗಸ್ಪರ್ಶ  10 ಜನವರಿ 201೦ರ ಸಂಚಿಕೆ... :: ಅನುರಾಗದ ರಂಧನ ಸಂಭ್ರಮಿಸಿತು ಹೃನ್ಮನ   ::

pdf ತೆರೆದು ಓದಿ.

Icon for podbean
Self Reference Swaarasya

Saturday, September 24th, 2011
DefaultTag | Comments

ದಿನಾಂಕ  25 ಸೆಪ್ಟೆಂಬರ್ 2011ರ ಸಂಚಿಕೆ...

ಇದರಲ್ಲಿ ಒಟ್ಟು ಹದಿನಾರು ಅಕ್ಷರಗಳಿವೆ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಹುಶಃ ನನ್ನ ಮೇಲೆ ನಿಮಗೆ ನಂಬಿಕೆಯಿಲ್ಲ. ಪರವಾಗಿಲ್ಲ. ಆದರೆ ನಿಮ್ಮ ಕಣ್ಣುಗಳ ಮೇಲಾದರೂ ನಂಬಿಕೆ ಬೇಡವೇ? ಬರೋಬ್ಬರಿ ಹದಿನಾರೇ ಅಕ್ಷರಗಳಿರುವ ಶೀರ್ಷಿಕೆಯನ್ನು ಓದಿದ ಮೇಲೂ ಮತ್ತೆ ಒಂದೊಂದಾಗಿ ಅಕ್ಷರಗಳನ್ನು ಎಣಿಸಿ ಕನ್‌ಫರ್ಮ್ ಮಾಡ್ಕೊಂಡ್ರಿ. ಅಲ್ವಾ?

ಹೋಗಲಿಬಿಡಿ, ಅಂಕಣದ ಶೀರ್ಷಿಕೆಯಲ್ಲಿ ಎಷ್ಟು ಅಕ್ಷರಗಳಿವೆ ಎನ್ನುವುದರಿಂದ ನಿಮಗೇನೂ ಆಗಬೇಕಾದ್ದಿಲ್ಲ. ಆದರೆ ನನಗೆ ಅದು ಮುಖ್ಯವಾಗುತ್ತದೆ. ನನಗಿಂತಲೂ ಹೆಚ್ಚಾಗಿ ಪತ್ರಿಕೆಯ ಪುಟ ವಿನ್ಯಾಸ ಮಾಡುವವರಿಗೆ ಮತ್ತೂ ಮುಖ್ಯವಾಗುತ್ತದೆ. ಕಳೆದವಾರ ಹಾಗೇ ಆಯ್ತು. ಹೇನುಪುರಾಣದ ಲೇಖನಕ್ಕೆ ನಾನು ‘ಹೇನು ಹೆಕ್ಕೋ ಹೆಂಗಸಿಗೆ ಡಿಮಾಂಡಪ್ಪೋ ಡಿಮಾಂಡು’ ಎಂದು ಶೀರ್ಷಿಕೆ ಕೊಟ್ಟಿದ್ದೆ. ಕಾಶಿನಾಥ್ ಅಭಿನಯದ ಒಂದು ಜನಪ್ರಿಯ ಚಿತ್ರಗೀತೆ ಇದೆಯಲ್ಲ ಅದರ ಧಾಟಿಯಲ್ಲಿ ಎಂಬಂತೆ ಆ ಶೀರ್ಷಿಕೆ. ಆದರೆ ಅಂಕಣದ ಸ್ಥಳಾವಕಾಶಕ್ಕೆ ಅದು ಸ್ವಲ್ಪ ಉದ್ದ ಆಯ್ತು. ಒಟ್ಟು ಅಕ್ಷರಗಳು ಹದಿನೈದೇ ಆದರೂ ಅವುಗಳಲ್ಲಿ ಸುಮಾರೆಲ್ಲ ಕೊಂಬು ದೀರ್ಘ ಸೊನ್ನೆ ಇತ್ಯಾದಿ ಇದ್ದಂಥವಾದ್ದರಿಂದ ಜಾಗದ ಸಮಸ್ಯೆಯಾಯ್ತು. ಅಕ್ಷರಗಳನ್ನು ಸಪೂರವಾಗಿಸಿ ಒಂಚೂರು ಅಡ್ಜಸ್ಟ್ ಮಾಡಬಹುದಿತ್ತೇನೋ. ಆದರೆ ಅದು ಚಂದ ಕಾಣುವುದಿಲ್ಲವೆಂದು ವಿನ್ಯಾಸಕಾರರು ‘ಡಿಮಾಂಡಪ್ಪೋ’ ಪದವನ್ನಷ್ಟೇ ತೆಗೆದುಹಾಕಿ ಒಪ್ಪವಾದ ಅರ್ಥಪೂರ್ಣ ಶೀರ್ಷಿಕೆ ಮಾಡಿದರು. ಅದರಿಂದ ನನಗೇನೂ ಬೇಸರವಾಗಲಿಲ್ಲ. ನಿಮಗಂತೂ ಗೊತ್ತೇ ಆಗಲಿಲ್ಲ. ಈವಾರ ಅವೆಲ್ಲ ಕಷ್ಟವೇ ಬೇಡವೆಂದು ಶೀರ್ಷಿಕೆಯ ಸೈಜ್ ಎಷ್ಟಿದೆಯಂತ ಸುಲಭದಲ್ಲೇ ತಿಳಿಯುವಂತೆ ಈ ಪ್ಲಾನು!

ಹಾಂ, ಕೊಂಚ ತಾಳಿ. ‘ಇದರಲ್ಲಿ ಒಟ್ಟು ಹದಿನಾರು ಅಕ್ಷರಗಳಿವೆ’ ಎಂಬ ವಾಕ್ಯವನ್ನು ಮತ್ತೊಮ್ಮೆ ಗಮನವಿಟ್ಟು ನೋಡಿ. ಏನಾದರೂ ವಿಶೇಷ ಕಾಣಿಸಿತೇ? ಈ ವಾಕ್ಯ ತನ್ನ ಬಗ್ಗೆ ತಾನೇ ಹೇಳಿಕೊಳ್ಳುತ್ತಿದೆ ಅಂತ ಅನಿಸಿತೇ? ಹೌದೆಂದಾದರೆ ಇವತ್ತಿನ ವ್ಯಾಖ್ಯಾನಕ್ಕೆ ಆಯ್ದುಕೊಂಡ self reference ಎಂಬ ವಿಷಯಗ್ರಹಣಕ್ಕೆ ನೀವು ಸಿದ್ಧರಾಗಿದ್ದೀರಿ ಎಂದರ್ಥ. ಇಲ್ಲವಾದರೂ ಚಿಂತಿಲ್ಲ. ಇದು ಗಣಿತದ ಕಬ್ಬಿಣದಕಡಲೆ ಏನಲ್ಲ, ವ್ಯಾಕರಣಶಾಸ್ತ್ರದ ತಲೆನೋವಂತೂ ಮೊದಲೇ ಅಲ್ಲ. ಯಥಾಪ್ರಕಾರ ಮನರಂಜನೆಯ ಜತೆಜತೆಗೇ ಮೆದುಳಿಗೆ ಮೇವು ಅಷ್ಟೇ. ಹೀಗೇ ಸುಮ್ಮನೆ ಓದಿಕೊಂಡು ಹೋಗಿ.

ತನ್ನನ್ನು ತಾನೇ ಬಣ್ಣಿಸಿಕೊಳ್ಳುವ ರಚನೆಗಳು ಇಂಗ್ಲಿಷ್‌ನಲ್ಲಿ ಬೇಕಾದಷ್ಟಿವೆ. ಅವುಗಳಿಗೆ autograms  ಎಂಬ ಹೆಸರೂ ಇದೆ. ಸರಳವಾದ ಉದಾಹರಣೆಯೆಂದರೆ `This sentence has five words' ಎಂಬ ವಾಕ್ಯ. ಅದಕ್ಕಿಂತ ಹೆಚ್ಚು ಮಜಾ ಎನಿಸುವ ಉದಾಹರಣೆ ಬೇಕಾದರೆ- "In this sentence the word 'and' occurs twice, the word 'eight' occurs twice, the word 'four' occurs twice, the word 'fourteen' occurs four times, the word 'in' occurs twice, the word 'occurs' occurs fourteen times, the word 'sentence' occurs twice, the word 'seven' occurs twice, the word 'the' occurs fourteen times, the word 'this' occurs twice, the word 'times' occurs seven times, the word 'twice' occurs eight times, and the word 'word' occurs fourteen times!" ಬೇಕಿದ್ದರೆ ಎಲ್ಲವನ್ನೂ ಲೆಕ್ಕ ಮಾಡಿನೋಡಿ.

ಸರಿ, ವಾಕ್ಯಗಳೇನೋ ಅರ್ಥಬದ್ಧವಾಗಿಯೇ ಇವೆ. ಆದರೆ ಇದರಿಂದ ಉಪಯೋಗವೇನಾದರೂ ಇದೆಯೇ? ಇದೆ! ಇಂಗ್ಲಿಷ್‌ಗಿಂತ ಸಂಸ್ಕೃತ ಅಥವಾ ಕನ್ನಡದಲ್ಲಿನ ಅಂಥ ಒಂದೆರಡು ರಚನೆಗಳನ್ನು ಉದಾಹರಿಸಿದರೆ ಮನದಟ್ಟಾಗುತ್ತದೆ. ತತ್‌ಕ್ಷಣಕ್ಕೆ ನೆನಪಿಗೆ ಬರುವುದೆಂದರೆ ಸಂಸ್ಕೃತದಲ್ಲಿ ಅನುಷ್ಟುಪ್ ಛಂದಸ್ಸಿನ ನಿಯಮವನ್ನು ತಿಳಿಸುವ ಶ್ಲೋಕ. “ಪಂಚಮಂ ಲಘು ಸರ್ವತ್ರ| ಸಪ್ತಮಂ ದ್ವಿಚತುರ್ಥಯೋಃ| ಗುರು ಷಷ್ಠಂ ಚ ಪಾದಾನಾಂ| ಚತುರ್ಣಾಂಸ್ಯಾದನುಷ್ಟುಭಿಃ||” ಸ್ವಾರಸ್ಯವೇನೆಂದರೆ ಈ ಶ್ಲೋಕವೂ ಅನುಷ್ಟುಪ್ ಛಂದಸ್ಸಿನಲ್ಲೇ ಇರುವುದು! ಶ್ಲೋಕ ಏನು ಹೇಳುತ್ತಿದೆಯೆಂದರೆ ಅನುಷ್ಟುಪ್ ಛಂದಸ್ಸಿನ ಪದ್ಯದಲ್ಲಿ ತಲಾ ಎಂಟು ಅಕ್ಷರಗಳ ಒಟ್ಟು ನಾಲ್ಕು ಪಾದಗಳು ಇರುತ್ತವೆ. ಪ್ರತಿಯೊಂದು ಪಾದದ ಐದನೇ ಅಕ್ಷರ ಲಘು. ಎರಡನೇ ಮತ್ತು ನಾಲ್ಕನೇ ಪಾದಗಳ ಏಳನೇ ಅಕ್ಷರಗಳೂ ಲಘು. ನಾಲ್ಕೂ ಪಾದಗಳ ಆರನೇ ಅಕ್ಷರ ಗುರು. ಮೇಲಿನ ‘ನಿಯಮಶ್ಲೋಕ’ದಲ್ಲಿಯೂ ಈ ನಿಯಮ ಚಾಚೂತಪ್ಪದೆ ಪಾಲನೆಯಾಗಿದೆ. ಸಂಸ್ಕೃತದ ಬಹುತೇಕ ನಿಯಮಗಳೆಲ್ಲ ಈರೀತಿ ಆಟೋಗ್ರಾಮ್ ಮಾದರಿಯವೇ ಆಗಿದ್ದು ನೆನಪಿಟ್ಟುಕೊಳ್ಳುವುದಕ್ಕೆ ಸುಲಭವಾಗಿರುವುದು ಮೆಚ್ಚಬೇಕಾದ ಅಂಶ. ಒಂದು ವಸ್ತು ಅಥವಾ ವಿಷಯವನ್ನು ಕಲಿಯಬೇಕಿದ್ದರೆ ಅದನ್ನೇ ಸಂವಹನಸಾಧನ (ಕಲಿಕೆಯ ಮಾಧ್ಯಮ) ಆಗಿಸಿದರೆ ಅತ್ಯಂತ ಪರಿಣಾಮಕಾರಿಯಾಗುತ್ತದೆ ಎಂದು ನಮ್ಮ ಹಿರಿಯರು ಆಗಲೇ ಕಂಡುಕೊಂಡಿದ್ದರಲ್ಲ ನಿಜಕ್ಕೂ ತಲೆದೂಗಬೇಕು ಅವರ ಜಾಣತನಕ್ಕೆ.

‘ಛಂದೋಮಿತ್ರ’ ಪುಸ್ತಕದಲ್ಲಿ ಪ್ರೊ.ಅ.ರಾ.ಮಿತ್ರ ಅವರು ಕನ್ನಡದ ಛಂದಸ್ಸಿನ ವಿವರಣೆಗೂ ಇದೇ ತಂತ್ರವನ್ನು ಬಳಸಿದ್ದಾರೆ. ಭಾಮಿನಿ ಷಟ್ಪದಿಯ ನಿಯಮವನ್ನು ಅವರು ಒಂದು ಭಾಮಿನಿ ಷಟ್ಪದಿಯ ಛಂದದ ಮೂಲಕವೇ ಚಂದವಾಗಿ ವಿವರಿಸುತ್ತಾರೆ: “ಇವಳು ಭಾಮಿನಿ ಷಟ್ಪದಿಯ ಮಧು/ ರವದ ಗಾಯಕಿ ಮೂರು ನಾಲ್ಕರ/ ಕ್ರಮದ ಭಂಗಿಯ ಸಪ್ತಪದಿಯಲಿ ಕೈಯ ಹಿಡಿದವಳು/ ನವರಸಾವಿಷ್ಕಾರ ಸಂಪದೆ/ ಭವ ನಿಮಜ್ಜನ ಚತುರ ಭಾಷಿಣಿ/ ಕವಿಯ ಸೇವಿಸಿ ಕೊನೆಗೆ ಗುರುವೇ ಆಗಿ ನಿಲ್ಲುವಳು.” ಇಪ್ಪತ್ತು ಅಕ್ಷರಗಳ ಉತ್ಪಲಮಾಲಾ ವೃತ್ತವನ್ನು “ಆದಿಯೊಳೊಂದು ಬಂತೆ ಗುರು ಉತ್ಪಲಮಾಲೆಯ ಲಕ್ಷ್ಯ ಕಾಣಿರೇ” ಎಂದು ನಿಯಮಬದ್ಧವಾಗಿ ವಿವರಿಸುತ್ತಲೇ “ಮೇಲಧಿಕಾರಿಗಿಂತಲು ಫಿಮೇಲಧಿಕಾರಿಯೇ ತಾಟಗಿತ್ತಿಯೋ” ಎಂಬ ಭಲೇ ಮೋಜಿನ ಉದಾಹರಣೆಯನ್ನೂ ಕೊಡುತ್ತಾರೆ.

ಇರಲಿ, ವ್ಯಾಕರಣದ ತಲೆನೋವಿಲ್ಲ ಎಂದು ಮೊದಲೇ ಹೇಳಿದ್ದೇನಾದ್ದರಿಂದ ಅದನ್ನು ಅಲ್ಲಿಗೇ ನಿಲ್ಲಿಸೋಣ. ಸೆಲ್ಫ್ ರೆಫರೆನ್ಸ್ ಅಥವಾ ‘ಸ್ವಪ್ರಸ್ತಾಪ’ದ ಸ್ವಾರಸ್ಯವು ಭಾಷೆಯ ಸೊಗಡಿನಲ್ಲಷ್ಟೇ ಇರುವುದೆಂದೇನಿಲ್ಲ. ಗಣಿತ, ಅಧ್ಯಾತ್ಮ, ಚಿತ್ರಕಲೆ, ಸಾಹಿತ್ಯ, ಸಂಗೀತ ಮುಂತಾಗಿ ವಿವಿಧ ಕ್ಷೇತ್ರಗಳಲ್ಲಿ ಅದು  ಇಣುಕುವುದಿದೆ. ಎಷ್ಟೋಸಲ ಇದರಿಂದಲೇ ಸ್ವಾರಸ್ಯಕರ ವಿರೋಧಾಭಾಸಗಳು ಹುಟ್ಟುವುದೂ ಇದೆ. ಸೆಲ್ಫ್ ರೆಫರೆನ್ಸ್ ಮತ್ತು ವಿರೋಧಾಭಾಸಗಳ ಕುರಿತಾಗಿ ಇದೇ ಅಂಕಣದಲ್ಲಿ ಈಹಿಂದೆಯೂ (13 ಜುಲೈ 2008 ಮತ್ತು 6 ಸೆಪ್ಟೆಂಬರ್ 2009) ಬರೆದಿದ್ದೇನೆ. ಬರ್ಟ್ರಾಂಡ್ ರಸೆಲ್ ಮಂಡಿಸಿದ ‘ಕ್ಷೌರಿಕನ ವಿರೋಧಾಭಾಸ’ದಿಂದ ಹಿಡಿದು ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಬರುವ recursive algorithmsವರೆಗೂ ವಿಶ್ಲೇಷಿಸಿದ್ದೇನೆ. ಮತ್ತಷ್ಟು ಸಂಗ್ರಹದಿಂದ ಆಯ್ದ ಒಂದೆರಡು ಸ್ವಾರಸ್ಯಕರ ಅಂಶಗಳನ್ನು ಈಗ ವಿವರಿಸುತ್ತೇನೆ.

ಒಮ್ಮೆ ನಾಲ್ವರು ಬೌದ್ಧಭಿಕ್ಷುಗಳು ಮೌನವ್ರತ ಆಚರಿಸುವ ನಿರ್ಧಾರ ಮಾಡುತ್ತಾರೆ. ಕನಿಷ್ಠ ಒಂದೆರಡು ವಾರಗಳಾದರೂ ಯಾವೊಂದು ಮಾತೂ ಇಲ್ಲದೆ ಧ್ಯಾನದಲ್ಲೇ ಕಳೆಯಬೇಕೆಂದು ಅವರ ಸಂಕಲ್ಪ. ಮೊದಲದಿನ ಸಂಜೆ ಹೊತ್ತು. ಕತ್ತಲೆಯಲ್ಲಿ ಬೆಳಕಿಗೆಂದು ಮೋಂಬತ್ತಿ ಹಚ್ಚಿಟ್ಟು ಸುತ್ತ ಕುಳಿತುಕೊಂಡಿದ್ದಾರೆ. ಗಾಳಿಗೋ ಅಥವಾ ಪತಂಗ ಬಂದೋ ಅಂತೂ ಮೋಂಬತ್ತಿಯ ಜ್ವಾಲೆ ಅಲುಗಾಡಿ ಕೊನೆಗೆ ಆರಿಹೋಗಿದೆ. ಮೊದಲ ಭಿಕ್ಷು ಮೌನವ್ರತವನ್ನು ಮರೆತು “ಅಯ್ಯೋ ಮೋಂಬತ್ತಿ ನಂದಿಹೋಯ್ತಲ್ಲ!” ಎನ್ನುತ್ತಾನೆ. ಆಗ ಎರಡನೇ ಭಿಕ್ಷು “ಅರ್ರೇ ನಾವು ಮಾತನಾಡಲಿಕ್ಕಿಲ್ಲ ಎಂದಲ್ವಾ ನಿರ್ಧರಿಸಿದ್ದು?” ಎಂದು ಉದ್ಗರಿಸುತ್ತಾನೆ. ಮೂರನೇಯವನು ಅವರಿಬ್ಬರನ್ನು ಗಮನಿಸಿ “ನೀವಿಬ್ಬರೇಕೆ ಮೌನವನ್ನು ಮುರಿದಿರಿ?” ಎನ್ನುತ್ತಾನೆ. ನಾಲ್ಕನೆಯವನಾದರೂ ಸುಮ್ಮನಿರಬೇಡವೇ? ಅವನು ಗಹಗಹಿಸಿ ನಕ್ಕು “ನೋಡಿದ್ರಾ? ನಾನೊಬ್ಬನೇ ಮಾತನಾಡದೇ ಇರುವವನು!” ಎಂದುಬಿಟ್ಟ. ಇಲ್ಲೇನಾಯ್ತು? ಭಿಕ್ಷುಗಳ ಮಾತನಾಡುವಿಕೆಯಲ್ಲೇ ಅವರ ಮೌನದ ಪ್ರಸ್ತಾಪವೂ ಆಯ್ತು, ಆದರೆ ಮಾತನಾಡಿದ್ದರಿಂದಾಗಿ ಅವರ ಮೌನಭಂಗವಾದಂತೆಯೂ ಆಯ್ತು. ಯೋಚಿಸಿದರೆ ಸರಳವಾದರೂ ಸಂಕೀರ್ಣ ಸನ್ನಿವೇಶ. ‘ಹನ್ನೆರಡು ಜನ ಬುದ್ಧಿವಂತರ’ ಕತೆಯನ್ನು ನೆನಪಿಸುವಂಥದು.

selfreferencecomic.jpg

ಅದೇರೀತಿ ಈ ಸೆಲ್ಫ್‌ರೆಫರೆನ್ಸ್ ಕಾಮಿಕ್ಸ್ ಚಿತ್ರವನ್ನೂ ನೀವು ಗಮನಿಸಬೇಕು. ಯಾವ ಕಾಮಿಕ್ಸ್ ಸರಣಿಯ ಬಗ್ಗೆ ಇದರಲ್ಲಿ ಪ್ರಸ್ತಾಪವಾಗಿದೆಯೋ ಇದು ಅದೇ ಆಗಿದೆ! ಅಥವಾ ಅದು ಇದೇ ಆಗಿದೆ. ನಮ್ಮ ಅಧ್ಯಾತ್ಮ ಚಿಂತನೆಯಲ್ಲೂ ಹಾಗೆಯೇ ಆಗುತ್ತದೆ. ಒಂದು ಹಂತದಲ್ಲಿ ಅದು-ಇದು, ಅವನು-ನಾನು, ಜೀವಾತ್ಮ-ಪರಮಾತ್ಮ ಎಂಬುದೆಲ್ಲ ಗೋಜಲು ಗೋಜಲಾಗುತ್ತ ಹೋಗುತ್ತದೆ. ತತ್ ತ್ವಮ್ ಅಸಿ ಎಂದು ಉಚ್ಚರಿಸುವ ಮನಸ್ಸೇ ಅಹಂ ಬ್ರಹ್ಮಾಸ್ಮಿ ಎಂದೂ ಹೇಳತೊಡಗುತ್ತದೆ.

“ಏನೋ ಗೊತ್ತಿಲ್ಲಪ್ಪ. ಕಳೆದವಾರ ತಲೆಮೇಲಿನ ಹೇನುಗಳಾಯ್ತು. ಈವಾರ ತಲೆಯೊಳಗೇ ಗುಂಗಿಹುಳ ಬಿಟ್ರಲ್ಲಾ” ಎಂದು ನೀವು ಹೇಳುವಂತಾಗುವುದಂತೂ ಸತ್ಯ ಎಂದುಕೊಂಡಿದ್ದೇನೆ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Biggest Nitpicker Literally

Saturday, September 17th, 2011
DefaultTag | Comments

ದಿನಾಂಕ  18 ಸೆಪ್ಟೆಂಬರ್ 2011ರ ಸಂಚಿಕೆ...

ಹೇನು ಹೆಕ್ಕೋ ಹೆಂಗಸಿಗೆ ಡಿಮಾಂಡಪ್ಪೊ ಡಿಮಾಂಡು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಕನ್ನಡದ ಪತ್ರಿಕೆಗಳೇನಾದರೂ ಆಕೆಯ ಕುರಿತು ನುಡಿಚಿತ್ರ ಬರೆಯುತ್ತಿದ್ದರೆ ತಲೆಬರಹ ಹಾಗೆ ಇರುತ್ತಿತ್ತು. ಆದರೆ ಆ ನ್ಯೂಸ್‌ಸ್ಟೋರಿ ಪ್ರಕಟವಾದದ್ದು ಇಲ್ಲಿನ ‘ವಾಷಿಂಗ್ಟನ್ ಪೋಸ್ಟ್’ ಆಂಗ್ಲ ಪತ್ರಿಕೆಯಲ್ಲಿ. ಅದೇನು ಪದಚಮತ್ಕಾರದಲ್ಲಿ ಕಮ್ಮಿ ಅಂದುಕೊಂಡ್ರಾ? ಲೇಖನದ ಓಪನಿಂಗ್ ಪ್ಯಾರಗ್ರಾಫ್ ಹೇಗಿದೆ ನೋಡಿ- The world is full of lousy jobs, but Karen Franco just might have one of the lousiest. As a professional nitpicker, the 45-year-old Washington woman spends a good part of her week searching for live lice and their tiny eggs, called nits, in hair. Majority of her customers are school-going girls…

ಇಂಗ್ಲಿಷ್‌ನಲ್ಲಿ lice ಎಂದರೆ ಹೇನು. ಅದು ಬಹುವಚನ ಅಥವಾ ಸಮೂಹವಾಚಕ ಪದ. ಒಂದೇ ಹೇನಾದರೆ louse ಎನ್ನಬೇಕು (mice ಮತ್ತು mouse ಇದ್ದಹಾಗೆ). ಅದನ್ನೇ ಶ್ಲೇಷೆಯಿಂದ ಬಳಸಿಕೊಂಡಿದೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ.

ಇರಲಿ, ವಿಷಯ ಪದಚಮತ್ಕಾರದ್ದಲ್ಲ; ಕೆರೆನ್ ಫ್ರಾಂಕೊ ಎಂಬ ಹೆಸರಿನ ಒಬ್ಬ ಸ್ವ‌ಉದ್ಯೋಗಿ ಮಹಿಳೆಯದು. ವಾಷಿಂಗ್ಟನ್ ನಿವಾಸಿಯಾಗಿರುವ ಈಕೆಯ ಸ್ಪೆಷಾಲಿಟಿ ಏನೆಂದರೆ ಹೇನು ಹೆಕ್ಕುವುದು. ಅದು ಅವಳ ಫುಲ್‌ಟೈಮ್ ದಂಧೆ. ಅಷ್ಟೇ‌ಅಲ್ಲ, ಈಗ ಅವಳ ಗಂಡನೂ ಸೇರಿಕೊಂಡು lice and advice ಎಂಬ ಕನ್ಸಲ್ಟೆನ್ಸಿ ಕಂಪನಿ ಆರಂಭಿಸಿದ್ದಾರೆ. ಅಮೆರಿಕದ ಆರ್ಥಿಕತೆ ಅಲ್ಲೋಲಕಲ್ಲೋಲವಾಗಿ ಅದೆಷ್ಟೋ ಜನ ಉದ್ಯೋಗ ಕಳಕೊಂಡು ಒದ್ದಾಡುತ್ತಿದ್ದರೆ ಇವರಿಬ್ಬರ ‘ಹೇನುಗಾರಿಕೆ’ ಉದ್ಯಮ ಹುಲುಸಾಗಿ ಬೆಳೆದಿದೆ!

ಪತ್ರಿಕೆಯ ಪಾತ್ರವೂ ಇದೆ ಈ ಸ್ವಾರಸ್ಯಕರ ಬೆಳವಣಿಗೆಯಲ್ಲಿ. ನಾಲ್ಕು ವರ್ಷಗಳ ಹಿಂದೆ 2007ರಲ್ಲಿ ಕೆರೆನ್‌ಳ ಬಗ್ಗೆ ನ್ಯೂಸ್‌ಐಟಮ್ ಪ್ರಕಟವಾದಾಗ ಆಕೆಯಿನ್ನೂ ಒಬ್ಬ ಆರ್ಟ್ ಟೀಚರ್ ಆಗಿದ್ದಳು. ಬಿಡುವಿನ ಅವಧಿಯಲ್ಲಿ ಪಾರ್ಟ್‌ಟೈಮ್ ಕೆಲಸ ಅಂತ ಅವರಿವರ ಮನೆಗಳಿಗೆ ಹೆಣ್ಮಕ್ಕಳ ತಲೆಯಲ್ಲಿನ ಹೇನು ಹೆಕ್ಕಲಿಕ್ಕೆ ಹೋಗುತ್ತಿದ್ದಳು. ಅದನ್ನೂ ಅವಳೇನು ದುಡ್ಡಿಗಾಗಿ ಶುರುಮಾಡಿದ್ದಲ್ಲವಂತೆ. ತನ್ನ ಮಗಳ ಶಾಲೆಯಲ್ಲಿ ಹುಡುಗಿಯರಿಗೆ ಹೇನಿನ ಕಾಟ ವಿಪರೀತವಾದಾಗ ಶಾಲೆಯಿಂದ ಅನುಮತಿ ಪಡೆದು ಅವರೆಲ್ಲರ ತಲೆಯ ಹೇನು ನಾಶದ ದೀಕ್ಷೆ ತೊಟ್ಟಳು. ಅದರಲ್ಲಿ ಯಶಸ್ವಿಯಾಗಿ ನೆರೆಕೆರೆಯಲ್ಲೆಲ್ಲ ಪ್ರಸಿದ್ಧಳಾದಳು. ಹೇನು ನಿವಾರಣೆಗೆಂದು ಕೆರೆನ್‌ಗೆ ತಲೆಯೊಪ್ಪಿಸುವವರ ಸಂಖ್ಯೆ ಹೆಚ್ಚಾದಾಗ ‘ತಲಾ’ 18 ಡಾಲರ್ (ಜುಯಿಶ್ ಸಂಪ್ರದಾಯದ ಕೆರೆನ್‌ಗೆ ಆ ಸಂಖ್ಯೆ ಪವಿತ್ರ) ಶುಲ್ಕ ವಸೂಲಿ ಮಾಡತೊಡಗಿದಳು. ಜಮೆಯಾದ ಹಣವನ್ನು ದತ್ತಿನಿಧಿಗೆ ದಾನಮಾಡಿದಳು.

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಒಂದು ಇಂಟರೆಸ್ಟಿಂಗ್ ಸ್ಥಿರಶೀರ್ಷಿಕೆ ಇರುತ್ತದೆ, Whatever Happened To... ಅಂತ ಅದರ ಹೆಸರು. ಪತ್ರಿಕೆಯಲ್ಲಿ ಈಹಿಂದೆ ಯಾವಾಗಲೋ ಪ್ರಕಟವಾಗಿದ್ದ, ತುಸು ವಿಲಕ್ಷಣ ರೀತಿಯಲ್ಲಿ ಸುದ್ದಿಯಾಗಿದ್ದ ವ್ಯಕ್ತಿ ಈಗೇನು ಮಾಡುತ್ತಿದ್ದಾರೆ ಎಂದು ಬೆಳಕು ಚೆಲ್ಲುವ ಪುಟ್ಟ ಅಪ್‌ಡೇಟ್ ಮಾದರಿಯ ಬರಹ. ವಾರಕ್ಕೊಬ್ಬ ವ್ಯಕ್ತಿಯ ಕುರಿತು ಬರುತ್ತದೆ, ತುಂಬಾ ಚೆನ್ನಾಗಿರುತ್ತದೆ. ಮೊನ್ನೆ ಕೆರೆನ್‌ಳ ಸಮಾಚಾರ ಪ್ರಕಟವಾಗಿತ್ತು. 2007ರಲ್ಲಿ ಪತ್ರಿಕೆಯಲ್ಲಿ ಕೆರೆನ್ ಹೇನುಗಾರಿಕೆಯ ಬಗ್ಗೆ ಲೇಖನ ಪ್ರಕಟವಾದದ್ದೇ ತಡ ಅವಳಿಗೆ ದೂರವಾಣಿ ಕರೆಗಳು ಮತ್ತು ಇಮೇಲ್‌ಗಳು ಪ್ರವಾಹದೋಪಾದಿ ಬರತೊಡಗಿದವಂತೆ. “ನಮ್ಮ ಮಗಳಿಗೆ ಸಿಕ್ಕಾಪಟ್ಟೆ ಹೇನಿದೆ, ನಿಮ್ಮತ್ರ ಕರ್ಕೊಂಡು ಬರಬಹುದೇ?”, “ನಮ್ಮ ಮಗಳ ತಲೆಯಲ್ಲಿ ಹೇನಿದೆಯಂತ ಸ್ಕೂಲಿಂದ ಮನೆಗೆ ಕಳಿಸ್ತಾರೆ. ಈ ಸಮಸ್ಯೆ ನಿವಾರಣೆಗೆ ದಯವಿಟ್ಟು ನೆರವಾಗ್ತೀರಾ?”... ಹೀಗೆ ಭರಪೂರ ಬೇಡಿಕೆಗಳು.

ಲೇಖನ ಪ್ರಕಟವಾಗಿ ಒಂದೆರಡು ತಿಂಗಳಿಗೆಲ್ಲ ಕೆರೆನ್ ತನ್ನ ಆರ್ಟ್ ಟೀಚಿಂಗ್ ವೃತ್ತಿಯನ್ನು ಬಿಟ್ಟು ಪೂರ್ಣಾವಧಿ ಹೇನುಗಾರಿಕೆ ಆರಂಭಿಸಿದಳು. ಪುಟ್ಟದೊಂದು ಆಫೀಸ್-ಕಮ್-ಕ್ಲಿನಿಕ್ ತೆರೆದಳು. ಅಪಾಯಿಂಟ್‌ಮೆಂಟ್‌ಗಳನ್ನು ನಿರ್ವಹಿಸಲಿಕ್ಕೆ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗಂಡ ಮುಂದಾದ. ಮೂವತ್ತು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಸೇಲ್ಸ್‌ಮನ್ ವೃತ್ತಿಗೆ ತಿಲಾಂಜಲಿಯಿತ್ತು ಕೆರೆನ್‌ಳ ವಹಿವಾಟಿನಲ್ಲಿ ಆತ ಪಾಲುದಾರನಾದ.

nitpick1.jpg

ನಾಲ್ಕೈದು ನಮೂನೆಯ ಬಾಚಣಿಗೆಗಳು, ಒಂದು ಭೂತಗನ್ನಡಿ, ತಲೆಗೆ ಸಿಕ್ಕಿಸಿಕೊಳ್ಳಲು ಒಂದು ಟಾರ್ಚ್, ಗಿರಾಕಿಯ ಹೇನುಗಳು ತನ್ನ ತಲೆಯೊಳಗೆ ಸೇರಿಕೊಳ್ಳದಂತೆ ರಕ್ಷಣಾಕವಚ- ಇವಿಷ್ಟು ಪರಿಕರಗಳೊಂದಿಗೆ ಸನ್ನದ್ಧಳಾದರೆ ಕೆರೆನ್‌ಳ ‘ಆಪರೇಷನ್ ಹೇನುನಾಶ’ ಸಕ್ಸೆಸ್‌ಫುಲ್. ಮುಂದೆ ಹೇನುದಾಳಿ ನಡೆಯದಂತೆ ಗಿರಾಕಿಗೆ ಮುಂಜಾಗ್ರತಾ ಕ್ರಮಗಳ ಪಾಠ. ಅಷ್ಟಿಷ್ಟು ಔಷಧೋಪಚಾರಗಳು. ಗಂಟೆಗೆ 85 ಡಾಲರ್ (ಸುಮಾರು 4000 ರೂಪಾಯಿ) ಶುಲ್ಕ. ಮನೆಗೆ ಬಂದು ಸೇವೆ ಒದಗಿಸುವುದಾದರೆ ಗಂಟೆಗೆ 100 ಡಾಲರ್ ಮತ್ತು ಪ್ರಯಾಣವೆಚ್ಚ ಪ್ರತ್ಯೇಕ. ಪೀಕ್ ಸೀಸನ್‌ನಲ್ಲಿ ದಿನಕ್ಕೆ ಐದರಿಂದ ಆರು ಸೆಷನ್‌ಗಳು. ಸಪ್ಟೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ ತುಂಬಾ ಡಿಮಾಂಡು. ಆಗಷ್ಟೇ ಬೇಸಿಗೆರಜೆ ಮುಗಿದು ಹೊಸ ಶೈಕ್ಷಣಿಕ ವರ್ಷ ಆರಂಭವಾಗಿರುತ್ತದೆ. ರಜೆಯಲ್ಲಿ ಸಮ್ಮರ್‌ಕ್ಯಾಂಪ್, ನೆಂಟರಮನೆ ಅಲ್ಲಿ‌ಇಲ್ಲಿ ಅಂತ ಹೋಗಿರುವ ಮಕ್ಕಳ ತಲೆ ಹೇನುಗಳಿಗೆ ಅಭಯಾರಣ್ಯ ಆಗಿರುತ್ತದೆ; ಅದರಿಂದ ಮುಕ್ತಿಹೊಂದಲು ಹೆತ್ತವರು ಕೆರೆನ್ ಮೊರೆಹೋಗುತ್ತಾರೆ.

ಕೆರೆನ್‌ಳ ಯಶಸ್ಸಿನಿಂದ ಪ್ರೇರಿತರಾಗಿ ಈಗ ಅಮೆರಿಕದ ಬೇರೆ ನಗರಗಳಲ್ಲೂ ಹೇನುಗಾರಿಕೆ ಆರಂಭಿಸಿದವರಿದ್ದಾರೆ. Hairy fairies ಎಂಬ ಕಂಪನಿಯಂತೂ ಲಾಸ್‌ಏಂಜಲೀಸ್, ಸ್ಯಾನ್‌ಫ್ರಾನ್ಸಿಸ್ಕೊ, ಶಿಕಾಗೊ, ನ್ಯೂಯಾರ್ಕ್ ನಗರಗಳಲ್ಲಿ ಶಾಖೆಗಳನ್ನೂ ಹೊಂದಿ ಸ್ಟೋರ್‌ಚೈನ್‌ನಂತೆ ಕಾರ್ಯವೆಸಗುತ್ತಿದೆ. ಅದಕ್ಕೇ ಹೇಳಿದ್ದು ಅಮೆರಿಕವನ್ನು ‘ಅವಕಾಶಗಳ ಅಮರಾವತಿ’ ಎಂದು ಬಣ್ಣಿಸುವುದು ಸುಮ್ಮನೆ ಅಲ್ಲ. ಇಲ್ಲಿ ಯಃಕಶ್ಚಿತ್ ಹೇನುಗಳಿಂದಲೂ- ಯಾವ ಕೀಳರಿಮೆ ಅಥವಾ ಹೇಸಿಗೆಯಿಲ್ಲದೆ- ಹಣ ಮಾಡಬಹುದೆಂದರೆ ಆಶ್ಚರ್ಯದಿಂದಲೇ ತಲೆಕೆರೆದುಕೊಳ್ಳಬೇಕು (ಹೇನಿಲ್ಲದೆಯೂ)!

ನಾನಿದನ್ನು ಇವತ್ತಿನ ಅಂಕಣದಲ್ಲಿ ಬರೆದದ್ದು ಕೇವಲ ಸುದ್ದಿಸ್ವಾರಸ್ಯ ರೀತಿಯಲ್ಲಿ. ನನಗೆ ಚೆನ್ನಾಗಿ ಗೊತ್ತು, ಸುಮಾರಷ್ಟು ಓದುಗರಿಗೆ ಇದರಲ್ಲಿನ ಕೆರೆನ್ ಫ್ರಾಂಕೊ ಆಗಲೀ, ಅವಳ ಹೇನುದ್ಯಮ ಅಥವಾ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನ ಆಗಲೀ ಯಾವುದೂ ರೆಲವೆಂಟ್ ಆಗೋದಿಲ್ಲ, ರಿಲೇಟ್ ಆಗೋದಿಲ್ಲ. ಆದರೆ ‘ಹೇನು’ ಎಂಬ ಪದವಿದೆಯಲ್ಲ ಅದೊಂದೇ ಸಾಕು, ಎಷ್ಟೋ ಓದುಗರಿಗೆ ಕೈಜಗ್ಗಿ ಹಿಡಿದೆಳೆದು ನೆನಪಿನಂಗಳಕ್ಕೆ ಒಯ್ದ ಅನುಭವವಾಗುತ್ತದೆ. ಕ್ಯಾಲಿಫೋರ್ನಿಯಾದಲ್ಲಿರುವ ಸರಸ್ವತಿ ವಟ್ಟಮ್ ಅವರಿಂದ ಫರ್ಸ್ಟ್ ಇಮೇಲ್ ಬರುತ್ತದೆ- “ಜೋಶಿಯವರೇ, ಹೇನುಪುರಾಣವನ್ನು ಓದಿದ ಕೂಡಲೇ ಬಾಲ್ಯ ನೆನಪಾಗಿ ದಳದಳ ಕಣ್ಣೀರುಬಂತು. ಫ್ರಾಕ್ ತೊಡುತ್ತಿದ್ದ ವಯಸ್ಸಿನಲ್ಲಿ ನನ್ನೊಬ್ಬ ಗೆಳತಿ ಮಹಾನ್ ಹೇನುಬುರುಕಿ ಇದ್ದಳು. ಅವಳ ಮನೆಗೆ ಒಮ್ಮೆ ಸ್ಲೀಪ್‌ಓವರ್‌ಗೆ ಹೋಗಿ ನಾನೂ ಹೇನುಗಳನ್ನು ರಖಂ ಆಗಿ ಆಮದುಮಾಡಿಕೊಂಡಿದ್ದೆ...” ಅಂತೆಲ್ಲ ಬರೆಯುತ್ತಾರೆ. ಇನ್ನೊಬ್ಬರಿಗೆ ಅಮ್ಮನ ನೆನಪು ಒತ್ತರಿಸಿ ಬರುತ್ತದೆ. ಕೂದಲು ಬಾಚುವಾಗ ಸ್ಸ್... ಎಂದು ಬಾಯಿಂದ ಶಬ್ದಹೊರಡಿಸಿ ಹೇನುಗಳಿಗೆ ಪಂಥಾಹ್ವಾನ ನೀಡಿ ಅವುಗಳನ್ನು ಹೊರಬರುವಂತೆ ಮಾಡುತ್ತಿದ್ದ ಅಮ್ಮ, ಬಾಚಣಿಗೆಯನ್ನು ನೆಲಕ್ಕೆ ಕೊಡವಿ ಉದುರಿದ ಹೇನುಗಳನ್ನು ಉಗುರುಗಳಿಂದ ಚಟ್ ಚಟ್ ಎಂದು ಸಶಬ್ದವಾಗಿ ಸಂಹರಿಸುತ್ತಿದ್ದ ಅಕ್ಕ, ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಿಕೊಳ್ಳುವುದೇ ಮೊದಲಾದ ಹೇನು ನಿವಾರಣೆಯ ಅಜ್ಜಿಮದ್ದುಗಳನ್ನು ಉಪದೇಶಿಸುತ್ತಿದ್ದ ಅಜ್ಜಿ ನೆನಪಾಗುತ್ತಾರೆ. ಹೇನು ತಲೆಯಿಂದ ತಲೆಗಷ್ಟೇ ಅಲ್ಲ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿದೆಯೇನೋ ಅಂತನಿಸುವಷ್ಟು ಕೌಟುಂಬಿಕ ಭಾವಬಂಧದಲ್ಲಿ ಪಾತ್ರವಹಿಸುತ್ತದೆ ಎಂದು ಅಚ್ಚರಿಯೂ ಆಗುತ್ತದೆ.

nitpick2.jpg

ಇನ್ನು ಕೆಲವರಿಗೆ ಈ ಹೇನುಪುರಾಣವು ವಸುಧೇಂದ್ರ ಬರೆದ ಒಂದು ಚಂದದ ಕಥೆಯನ್ನು, ಅದರಲ್ಲಿ ಮಂಗನಿಂದ ಹೇನು ಹೆಕ್ಕಿಸಿಕೊಳ್ಳುವ ಬಳ್ಳಾರಿ ಹೆಂಗಸರ ಚಿತ್ರಣ, ಒಬ್ಬ ಹೆಂಗಸನ್ನು ಹೇನು ಹೆಕ್ಕುತ್ತಿರುವಾಗ ಸುಮ್ಮನೆ ಕೂಡಲಿಲ್ಲವೆಂದು ಮಂಗ ಹೊಡೆದದ್ದು, ಪ್ರತಿಯಾಗಿ ಅವಳೂ ಮಂಗನನ್ನು ಥಳಿಸಿದ್ದು... ಇವನ್ನೆಲ್ಲ ನೆನಪಿಸಬಹುದು. ಮಗದೊಬ್ಬರಿಗೆ ತಮ್ಮ ಪ್ರಾಥಮಿಕ ಶಾಲೆಯಲ್ಲಿ ಒಬ್ಬಿಬ್ಬರು ಹೇನುಬುರುಕಿ ಸಹಪಾಠಿಗಳಿದ್ದದ್ದು, ‘ಜೇನು ಬೇಕೇ ಜೇನು?’ ಕನ್ನಡ ಪಾಠದ ಶೀರ್ಷಿಕೆಯನ್ನು ಉಪಾಧ್ಯಾಯರು ಬೇಕಂತಲೇ ‘ಹೇನು ಬೇಕೇ ಹೇನು?’ ಎಂದು ಓದಿ ತಮಾಷೆಮಾಡಿದ್ದು ನೆನಪಾಗಬಹುದು.

nitpick3.jpg

ಬಹುಶಃ ನೆನಪುಗಳದು ಅದೊಂದು ಅದ್ಭುತಶಕ್ತಿ. ಅವುಗಳ ನಾಗಾಲೋಟಕ್ಕೆ ಕುದುರೆಗಳೇ ಬೇಕಂತಿಲ್ಲ. ಹೇನುಗಳ ಸಾರೋಟಿನಲ್ಲೂ ಅವು ಮೆರವಣಿಗೆ ಹೊರಡಬಲ್ಲವು.

ನೀವು ಹೇನಂತೀರಿ?

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Podbean App

Play this podcast on Podbean App