ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for September 2011


Fastfood Industry and Human Psychology

Saturday, September 10th, 2011
DefaultTag | Comments

ದಿನಾಂಕ  11 ಸೆಪ್ಟೆಂಬರ್ 2011ರ ಸಂಚಿಕೆ...

ಕ್ಷಿಪ್ರಾಹಾರದ ಚಟವೂ ಮನೋವಿಜ್ಞಾನವೂ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಮೆಕ್‌ಡೊನಾಲ್ಡ್ಸ್ ಒಂದೇ ಅಂತಲ್ಲ, ಸಬ್‌ವೇ, ಪಿಜ್ಜಾ ಹಟ್, ಬರ್ಗರ್ ಕಿಂಗ್, ಕೆ‌ಎಫ್‌ಸಿ ಮುಂತಾದ ‘ಕ್ಷಿಪ್ರಾಹಾರ’ (ಫಾಸ್ಟ್‌ಫುಡ್) ಉದ್ಯಮಗಳೆಲ್ಲ ದುಡ್ಡು ಮಾಡೋದು ನಮ್ಮ ಹೊಟ್ಟೆಯ ಅಗತ್ಯಗಳನ್ನು ಅರ್ಥಮಾಡಿಕೊಂಡು ಅಲ್ಲವೇ ಅಲ್ಲ! ಮತ್ತೆ? ನಮ್ಮ ಮಿದುಳು ಹೇಗೆ ಕಾರ್ಯಾಚರಣೆ ಮಾಡುತ್ತೆ ಅಂತ ಈ ಬಹುರಾಷ್ಟ್ರೀಯ ಖಾನಾವಳಿಗಳಿಗೆ ಚೆನ್ನಾಗಿ ಗೊತ್ತಿದೆ. ಇವು ಗ್ರಾಹಕರ ಮೈಂಡ್ ರೀಡಿಂಗ್ ಮಾಡಬಲ್ಲವು. ಮೇಧಾಶಾಸ್ತ್ರ ಅಥವಾ Neuroscinece ಕ್ಷೇತ್ರದಲ್ಲಿ ಆಗಿರುವ ಸುಮಾರಷ್ಟು ಸಂಶೋಧನೆಗಳು- ಮುಖ್ಯವಾಗಿ ಆಹಾರ ಸೇವನೆ ಮತ್ತು ತತ್ಸಂಬಂಧಿ ನಿರ್ಧಾರಗಳ ವೇಳೆ ನಮ್ಮ ನರಮಂಡಲದಲ್ಲಿ ಆಗುವ ಪ್ರಕ್ರಿಯೆಗಳು- ಈ ಫಾಸ್ಟ್‌ಫುಡ್ ಕಂಪನಿಗಳ ಟ್ರೇಡ್ ಸೀಕ್ರೆಟ್‌ಗಳೇ ಆಗಿವೆ. ಹೀಗೆನ್ನುತ್ತಾನೆ ಜೊಶುವಾ ಗೊವಿನ್, ‘ಸೈಕಾಲಜಿ ಟುಡೇ’ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಒಂದು ಲೇಖನದಲ್ಲಿ. 7 Things McDonald’s Knows About Your Brain ಅಂತಲೇ ಇದೆ ಆ ಲೇಖನದ ಶೀರ್ಷಿಕೆ.

ಜೊಶುವಾ ಗೊವಿನ್ ಹ್ಯೂಸ್ಟನ್‌ನಲ್ಲಿ ಯೂನಿವರ್ಸಿಟಿ ಆಫ್ ಟೆಕ್ಸಾಸ್‌ನಲ್ಲಿ ಸೈಕಾಲಜಿ ಸಂಶೋಧಕ. ಅಮೆರಿಕದವನಾದ್ದರಿಂದ ಮೆಕ್‌ಡೊನಾಲ್ಡ್ಸ್‌ಅನ್ನು ನಿದರ್ಶನವಾಗಿ ಬಳಸಿಕೊಂಡಿದ್ದಾನೆ ಅಷ್ಟೇ. ಒಂದುವೇಳೆ ನಮ್ಮ ಬೆಂಗಳೂರಿನ ದರ್ಶಿನಿಗಳ ಭರಾಟೆಯನ್ನು ಈತ ನೋಡುತ್ತಿದ್ದರೆ ತನ್ನ ಲೇಖನದಲ್ಲಿ ಅವುಗಳನ್ನೇ ಉದಾಹರಿಸುತ್ತಿದ್ದನೋ ಏನೋ. ಏಕೆಂದರೆ ಜೊಶುವಾ ಹೇಳುವ ಅಂಶಗಳೆಲ್ಲ ಹೆಚ್ಚೂಕಡಿಮೆ ದರ್ಶಿನಿಗಳ ವಿಚಾರದಲ್ಲೂ ತಾಳೆಯಾಗುತ್ತವೆ. ಇರಲಿ, ಮೆಕ್‌ಡೊನಾಲ್ಡ್ಸ್ ಈಗ ಭಾರತದಲ್ಲೂ ನಗರಪ್ರದೇಶಗಳಲ್ಲಿ ಸಾಕಷ್ಟು ಪರಿಚಿತವೇ ಆಗಿದೆ. ಹಾಗಾಗಿ ಈ ಸಪ್ತಸೂತ್ರಗಳ ವಿಚಾರವನ್ನು ನಾವು ಮೆಕ್‌ಡೊನಾಲ್ಡ್ಸ್ ಉದಾಹರಣೆಯಿಂದಲೇ ತಿಳಿದುಕೊಳ್ಳಲಿಕ್ಕೆ ಅಡ್ಡಿಯಿಲ್ಲ.

ಸಕ್ಕರೆಯ ಸಮ್ಮೋಹನ ಶಕ್ತಿಯೇ ಮೊಟ್ಟಮೊದಲ ಸೂತ್ರ. ರುಚಿಗಳ ಪೈಕಿ ಸಿಹಿ ಎಂದರೆ ಎಲ್ಲರಿಗೂ ಇಷ್ಟ ಎಂಬುದು ಗೊತ್ತೇ‌ಇರುವ ವಿಚಾರ. ಬರೀ ಇಷ್ಟ ಮಾತ್ರ ಆಗಿದ್ದರೆ ಪರವಾಗಿಲ್ಲ, ಸಕ್ಕರೆಗೆ addictive ಗುಣವೂ ಇದೆ. ಇದನ್ನು ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ನಡೆಸಿ ಕಂಡುಕೊಂಡಿದ್ದಾರೆ. ಸಕ್ಕರೆಯಂಶವನ್ನು ಹೆಚ್ಚು ಸೇವಿಸಿದ ಮಕ್ಕಳು ‘ಹೈಪರ್’ ಆಗುವುದೂ ಇದೇ ಕಾರಣಕ್ಕೆ. ಮೆಕ್‌ಡೊನಾಲ್ಡ್ಸ್‌ನ ಮೆನುದಲ್ಲಿ ಬಹುತೇಕ ಎಲ್ಲ ಐಟಮ್‌ಗಳಲ್ಲೂ- ಕೆಚ್‌ಅಪ್, ಕೂಲ್‌ಡ್ರಿಂಕ್ಸ್, ಬನ್ ಮಾತ್ರವಲ್ಲ; ಫ್ರೆಂಚ್‌ಫ್ರೈಸ್ ಎಂದು ಕರೆಯಲ್ಪಡುವ ಆಲೂಗಡ್ಡೆ ಚಿಪ್ಸ್‌ನಲ್ಲೂ ಸಕ್ಕರೆ ಇರುತ್ತದೆ. ಇತ್ತೀಚೆಗೆ ಸೇರ್ಪಡೆಗೊಂಡ ಫ್ರೂಟ್ ‘ಸ್ಮೂತಿ’ಯೂ ಸಕ್ಕರೆಮಯವೇ. ಒಟ್ಟಿನಲ್ಲಿ ಸಕ್ಕರೆಯಿಂದ ಒಂಥರದ ಕಿಕ್ ಪಡೆದುಕೊಳ್ಳುವ ಮಿದುಳಿನ ಸ್ವಭಾವವನ್ನು ಮೆಕ್‌ಡೊನಾಲ್ಡ್ಸ್ ಚೆನ್ನಾಗಿ ಎನ್‌ಕ್ಯಾಷ್ ಮಾಡಿಕೊಂಡಿದೆ.

ಎರಡನೆಯದಾಗಿ ಉರವಣೆ ತಡೆ (impulse control) ವಿಷಯದಲ್ಲಿ ಮಿದುಳಿನ ಸಾಮರ್ಥ್ಯ ಮತ್ತು ದೌರ್ಬಲ್ಯ. ಜಿಹ್ವಾಚಾಪಲ್ಯ ಎಲ್ಲರಿಗೂ ಇರುತ್ತದೆ. ಕೆಲವರು ಮಾತ್ರ ಅದನ್ನು ಸುಮಾರಾಗಿ ನಿಗ್ರಹಿಸಬಲ್ಲರು. ಆದರೂ ಆಹಾರ ಹತ್ತಿರದಲ್ಲೇ ಇದೆಯೆಂದಾಗ ನಿಯಂತ್ರಣ ತಪ್ಪುವುದೇ ಹೆಚ್ಚು. ಅಮೆರಿಕದ ಯಾವುದೇ ಪಟ್ಟಣದಲ್ಲಾಗಲೀ ಐದು ನಿಮಿಷಕ್ಕೂ ಕಡಿಮೆ ಡ್ರೈವಿಂಗ್ ದೂರದಲ್ಲಿ ಒಂದು ಮೆಕ್‌ಡೊನಾಲ್ಡ್ಸ್ ಕಂಡುಬರುತ್ತದೆ. ಅಂದಮೇಲೆ ಉರವಣೆ ತಡೆಯುವುದು ಸ್ವಲ್ಪ ಕಷ್ಟವೇ. ‘ನಿಮ್ಮ ಅನುಕೂಲಕ್ಕಾಗಿ ಈಗ ನಿಮ್ಮ ಸಮೀಪದಲ್ಲೇ...’ ಎಂಬ ಜಾಹೀರಾತು ಬೇರೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಜನತೆಯ ಆಹಾರಸೇವನೆಯ ಮೇಲೆ ದರ್ಶಿನಿಗಳ ಪ್ರಭಾವವೂ ಇದೇ ರೀತಿಯಲ್ಲಾಗಿದೆ ಅಂತನಿಸುವುದಿಲ್ಲವೇ? ಐದು ನಿಮಿಷದ ಕಾಲ್ನಡಿಗೆ ದೂರದಲ್ಲಿ ಕನಿಷ್ಠ ಮೂರ್ನಾಲ್ಕು ದರ್ಶಿನಿಗಳು!

ಯಾವುದಕ್ಕೇ ಆಗಲಿ ದುಡ್ಡು ಕೊಡಬೇಕೆಂದಾಗ ಮಿದುಳು (ಮನಸ್ಸು) ಅದನ್ನು ಒಂಥರದ ನೋವು ಎಂದೇ ಪರಿಗಣಿಸುತ್ತದೆ. ಕಾಲಿನ ಬೆರಳಿಗೆ ಗಾಯವಾದಾಗ ಮಿದುಳು ಎಷ್ಟು ವ್ಯಗ್ರವಾಗುತ್ತೋ ನೂರಿನ್ನೂರು ರೂಪಾಯಿ ಕಳಕೊಂಡಾಗಲೂ ಹಾಗೇ ಆಗುತ್ತದಂತೆ. ಇದನ್ನು ಬ್ರೈನ್ ಇಮೇಜಿಂಗ್ ಮೂಲಕ ಕಂಡುಹಿಡಿದಿದ್ದಾರೆ. ಹೀಗಿರುವಾಗ ಕೊಟ್ಟ ದುಡ್ಡಿಗೆ ಸರಿಯಾಗಿ ವಸ್ತು ಅಥವಾ ಸೇವೆ ಸಿಕ್ಕಿತೇ ಎಂದು ನಮ್ಮ ಮಿದುಳು ಯಾವಾಗಲೂ ಲೆಕ್ಕಾಚಾರ ಮಾಡುತ್ತದೆ. ಮೂರನೇ ತಂತ್ರವಾಗಿ ಮೆಕ್‌ಡೊನಾಲ್ಡ್ಸ್ ಏನು ಮಾಡುತ್ತದೆಂದರೆ ಯಾವುದೋ ಒಂದೆರಡು ಐಟಮ್‌ಗಳಿಗೆ ಕಡಿಮೆ ದರ ಇಟ್ಟು ಗಿರಾಕಿಗಳನ್ನು ಆಕರ್ಷಿಸುತ್ತದೆ; ಹೋದಮೇಲೆ ಯಾರೂ ಬರೀ ಬನ್ ಮಾತ್ರ ತಿನ್ನೋಲ್ಲ ಅಂತ ಗೊತ್ತು. ಫ್ರೈಸ್ ಮತ್ತು ಕೋಲ್ಡ್‌ಡ್ರಿಂಕ್‌ಗೆ ಡಬ್ಬಲ್ ಚಾರ್ಜ್ ಮಾಡಿದರೂ ಗಿರಾಕಿಯ ಮಿದುಳು ತನಗೆ ಚೀಪ್ ಆಗಿಯೇ ಆಹಾರ ಸಿಕ್ಕಿತು ಎಂದು ತೃಪ್ತಿಯಿಂದ ತೇಗಿರುತ್ತದೆ!

fastfood.gif

ನಾಲ್ಕನೆಯ ಅಂಶವೆಂದರೆ, ಆಹಾರದ ವಿಚಾರ ಬಂದಾಗ ನಮ್ಮ ಮಿದುಳು ಸಾಧ್ಯವಾದಷ್ಟೂ ಸಮೃದ್ಧ (=ಕ್ಯಾಲೋರಿ ತುಂಬಿದ) ಆಹಾರವನ್ನೇ ಅಪೇಕ್ಷಿಸುವುದು. ಅದಕ್ಕೆ ಕಾರಣವೂ ಇದೆ. ಬೇಟೆಯಾಡಿ ಆಹಾರ ಸಂಗ್ರಹಿಸುತ್ತಿದ್ದ ಆದಿಮಾನವನ ಕಾಲದಿಂದ ಹಿಡಿದು ನಮ್ಮ ಮಿದುಳಿನ ವಿಕಸನವಾದದ್ದೆಲ್ಲ ಆಹಾರಕ್ಕಾಗಿ ಶ್ರಮಪಡಲೇಬೇಕು ಎನ್ನುವ ಕಹಿಸತ್ಯದೊಂದಿಗೇ. ಹಾಗಾಗಿ ಸಿಕ್ಕಿದ ಆಹಾರ ಸಾಕಷ್ಟು ಪೌಷ್ಟಿಕವಾಗಿರಲಿ, ಎಷ್ಟು ಸಾಧ್ಯವೋ ಅಷ್ಟು ತಿನ್ನಲಿಕ್ಕಾಗಲಿ ಎಂಬ ಬಯಕೆ ಪ್ರತಿಯೊಬ್ಬನಿಗೂ ಇರುತ್ತದೆ. ಅದನ್ನರಿತೇ ಮೆಕ್‌ಡೊನಾಲ್ಡ್ಸ್ ಕ್ಯಾಲೋರಿ ಸಮೃದ್ಧ ತಿನಿಸುಗಳಿಂದ ಗಿರಾಕಿಗಳನ್ನು ಆಕರ್ಷಿಸುತ್ತದೆ.

ಐದನೆಯ ಅಂಶ, ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ವೇಗಕ್ಕೆ ಸಂಬಂಧಿಸಿದ್ದು. ಯಾವ ಪ್ರಚೋದನೆಯು ಅತ್ಯಂತ ವೇಗವಾಗಿ ಮಿದುಳಿಗೆ ಹಿತಾನುಭವ ಕೊಡುತ್ತೋ ಅದಕ್ಕೆ ಚಟವಾಗುವ ಲಕ್ಷಣಗಳು ಹೆಚ್ಚು. ಸಿಗರೇಟ್ ಸೇವನೆ ಚಟವಾಗುವುದಕ್ಕೆ ಕಾರಣ ಹತ್ತಿಪ್ಪತ್ತು ಸೆಕೆಂಡುಗಳೊಳಗೇ ನಿಕೋಟಿನ್ ಕಿಕ್ ಅನುಭವವಾಗುವುದು. ಮನೆಯಲ್ಲಿ ಏನನ್ನಾದರೂ ಸ್ವಾದಿಷ್ಟ ತಿಂಡಿ ಮಾಡಬೇಕಿದ್ದರೆ ಅದಕ್ಕೆ ತುಂಬ ಸಮಯ ಬೇಕು. ಅಂದರೆ ಆಸೆ ಬಂದಾಗಿನಿಂದ ಅದು ಪೂರೈಕೆಯಾಗುವ ಕ್ಷಣ ಬರುವುದಕ್ಕೆ ತುಂಬಾ ಅಂತರ. ಅದೇ ಮೆಕ್‌ಡೊನಾಲ್ಡ್ಸ್‌ನಲ್ಲಿ ಡ್ರೈವ್-ಥ್ರೂ ಸೌಲಭ್ಯ ಇರುವಾಗ ಕಾರಿಂದ ಇಳಿಯದೇನೇ ಆರ್ಡರ್ ಮಾಡಿ ಎರಡೇ ನಿಮಿಷಗಳಲ್ಲಿ ಬರ್ಗರ್, ಫ್ರೈಸ್ ಮತ್ತು ಕೋಕ್ ಚಪ್ಪರಿಸತೊಡಗಬಹುದು. ಇಷ್ಟು ವೇಗವಾಗಿ ಮೋಜು ಸಿಕ್ಕಿದ್ದಕ್ಕೆ ಮಿದುಳಿನಲ್ಲಿ ಖುಷಿಯ ಚೋದಕಗಳು ಆಗಲೇ ಒಸರಿರುತ್ತವೆ!

ರಷ್ಯನ್ ವಿಜ್ಞಾನಿ ಪಾವ್ಲೊವ್ ತನ್ನ ನಾಯಿಯೊಂದಿಗೆ ಮಾಡಿದ ಪ್ರಯೋಗ ನಿಮಗೆ ಗೊತ್ತಿರಬಹುದು. ಪ್ರತಿಸಲ ಆಹಾರ ಕೊಡುವಾಗಲೂ ಮೊದಲು ಗಂಟೆ ಬಡಿದು, ಕೊನೆಕೊನೆಗೆ ಗಂಟೆ ಬಡಿದಾಕ್ಷಣ ನಾಯಿ ಜೊಲ್ಲು ಸುರಿಸಲಾರಂಭಿಸಿತ್ತು. ಮೆಕ್‌ಡೊನಾಲ್ಡ್ಸ್ ರೆಸ್ಟೊರೆಂಟ್‌ಗಳ ತಂತ್ರವೂ ಅದೇ. ಎಲ್ಲ ಕಡೆಯೂ ಒಂದೇ ಥರದ ಸೆಟ್‌ಅಪ್, ಸಮವಸ್ತ್ರ ಧರಿಸಿದ, ಒಂದೇ ತೆರನಾಗಿ ಮಾತನಾಡುವ ಸಿಬ್ಬಂದಿ. ಮೆನು ಪಟ್ಟಿಯಲ್ಲಿ ತಿನಸಿನ ಹೆಸರುಗಳಷ್ಟೇ ಅಲ್ಲ, ದೊಡ್ಡದೊಡ್ಡ ಚಿತ್ರಗಳು (ಬೆಂಗಳೂರಿನ ದರ್ಶಿನಿಗಳಲ್ಲೂ ವಡೆ, ಉತ್ತಪ್ಪ, ಮಸಾಲೆದೋಸೆ, ಜಾಮೂನ್ ಮುಂತಾಗಿ ದೊಡ್ಡದೊಡ್ಡ ಚಿತ್ರಗಳಿರುವುದನ್ನು ನೋಡಿದ್ದೀರಷ್ಟೆ?) ಒಟ್ಟಿನಲ್ಲಿ ಪಾವ್ಲೊವ್‌ನ ನಾಯಿಗೆ ಹೇಗೆ ಗಂಟೆ ಊಟದ ಮುನ್ಸೂಚನೆಯಾಗಿತ್ತೋ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಲ್ಲಿನ ಆ ವಾತಾವರಣವೇ ಗಿರಾಕಿಯ ಮಿದುಳಿನಲ್ಲಿ ಸಂಭ್ರಮಕ್ಕೆ ಮುನ್ಸೂಚನೆಯಾಗುತ್ತದೆ. ಆ ವಾತಾವರಣ ದೊರಕಿತೆಂದರೆ ಇನ್ನು ಪೊಗದಸ್ತಾಗಿ ಭಕ್ಷಣವಿದೆ ಎಂಬುದಾಗಿ ಮಿದುಳು ಹದಗೊಳ್ಳುತ್ತೆ. ಇದು ಆರನೇ ಸೂತ್ರ.

ಕೊನೆಯದಾಗಿ, ಆಹಾರಸೇವನೆಯ ಪ್ರಕ್ರಿಯೆಯಲ್ಲಿ ಮಿದುಳು ಕಂಡುಕೊಳ್ಳುವ ಆನಂದ. ಅದು ಬರೀ ರುಚಿ, ಪರಿಮಳ ಅಥವಾ ಬಣ್ಣದಿಂದ ಬರುವುದಲ್ಲ. ಆಹಾರಕ್ಕೆ ಸಂಬಂಧಿಸಿದಂತೆ ಮಧುರಸ್ಮೃತಿಯೂ ಆನಂದಕ್ಕೆ ಕಾರಣವಾಗುತ್ತದೆ. ಒಮ್ಮೆ ಪ್ರಯೋಗಾರ್ಥವಾಗಿ ಕೆಲವು ಮಕ್ಕಳಿಗೆ ತಿನ್ನಲಿಕ್ಕೆ ಫ್ರೆಂಚ್‌ಫ್ರೈಸ್ ಕೊಡಲಾಯ್ತು. ಅರ್ಧದಷ್ಟು ಗುಂಪಿಗೆ ಪ್ಲೇನ್ ಬಿಳಿಕಾಗದದ ಪೊಟ್ಟಣದಲ್ಲಿ; ಉಳಿದರ್ಧ ಗುಂಪಿಗೆ ಮೆಕ್‌ಡೊನಾಲ್ಡ್ಸ್‌ನಂತಿರುವ ಕೆಂಪು ಪೊಟ್ಟಣದಲ್ಲಿ. ಎಲ್ಲ ಫ್ರೈಸ್ ಒಂದೇರೀತಿ ರುಚಿಯಿದ್ದದ್ದಾದರೂ ಎರಡನೇ ಗುಂಪಿನ ಮಕ್ಕಳು ಹೆಚ್ಚು ಆನಂದಿಸಿದ್ದು ಕಂಡುಬಂತು. ಅದಕ್ಕೆ ಕಾರಣ ಅವರು ಆ ಕೆಂಪು ಪೊಟ್ಟಣವನ್ನು ಮೆಕ್‌ಡೊನಾಲ್ಡ್ಸ್‌ನೊಂದಿಗೆ ತಳುಕುಹಾಕಿ ತಮಗೆ ಈಹಿಂದೆ ಅಲ್ಲಿ ಫ್ರೈಸ್ ಕೊಂಡಾಗ ಉಚಿತ ಆಟಿಕೆ ದೊರೆತದ್ದನ್ನು ನೆನಪಿಸಿಕೊಂಡಿದ್ದರು.

ಅಂತೂ ಮೆಕ್‌ಡೊನಾಲ್ಡ್ಸ್ ಆಗಲೀ ಇನ್ನೊಂದಾಗಲೀ ಫಾಸ್ಟ್‌ಫುಡ್ ಕಂಪನಿಗಳ ನಿವ್ವಳ ಕೊಡುಗೆಯೇನೆಂದರೆ ನಮಗೆ ಹಸಿವೆಯೇ ಇಲ್ಲದಿದ್ದರೂ ನಾವು ಜಂಕ್ ಫುಡ್ ತಿನ್ನುವಂತೆ ಮಾಡಿ ನಮ್ಮ ಆರೋಗ್ಯ ಕೆಡಿಸುವುದು. ವಿಪರ್ಯಾಸವೆಂದರೆ ಅಷ್ಟು ಗೊತ್ತಿದ್ದರೂ ನಾವು ಫಾಸ್ಟ್‌ಫುಡ್ ರೆಸ್ಟೋರೆಂಟ್‌ಗಳಿಗೆ ಹೋಗುವುದನ್ನೇನೂ ನಿಲ್ಲಿಸುವುದಿಲ್ಲ. ಏಕೆಂದರೆ, ಬಾ ನೊಣವೆ ಬಾ ನೊಣವೆ ಬಾ ನನ್ನ ಬಲೆಗೆ ಎಂದು ಬಲೆ ಬೀಸುವ ಜೇಡ ಇರುವವರೆಗೂ ಬಲೆಗೆ ಬೀಳುವ ನೊಣಗಳು ಇದ್ದೇ ಇರುತ್ತವೆ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Beautiful Beliefs

Saturday, September 3rd, 2011
DefaultTag | Comments

ದಿನಾಂಕ  04 ಸೆಪ್ಟೆಂಬರ್ 2011ರ ಸಂಚಿಕೆ...

‘ಕೆರೆಯ ನೀರನು ಕೆರೆಗೆ ಚೆಲ್ಲಿ...’ ಎಂಬಂತೆ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಸತತ ಮೂರು ವಾರಗಳಿಂದ ನಂಬಿಕೆಗಳದ್ದೇ ಪಾರಾಯಣ (ಓದುಗರೊಬ್ಬರು ಇಟ್ಟ ಹೆಸರು ‘ನಂಬಿಕಾಯಣ’). ನೀವು ಗಮನಿಸಿದ್ದೀರೊ ಇಲ್ಲವೋ ಮೂರು ವಾರವೂ ತಲೆಬರಹದಲ್ಲಿ ದಾಸವಾಣಿಯ ಮೂಲಕ ಭಗವನ್ನಾಮಸ್ಮರಣ. ‘ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ...’, ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ...’ ಮತ್ತು ಇವತ್ತಿನ ‘ಕೆರೆಯ ನೀರನು ಕೆರೆಗೆ ಚೆಲ್ಲಿ...’ - ಇವೆಲ್ಲವೂ ಪುರಂದರದಾಸರ ಜನಪ್ರಿಯ ರಚನೆಗಳು. ಈರೀತಿ ಯಾವುದಾದರೂ ಹಾಡಿನ ಸಾಲನ್ನು (ಚಿತ್ರಗೀತೆ ಭಾವಗೀತೆ ಭಕ್ತಿಗೀತೆ ಯಾವುದೂ ಆಗುತ್ತೆ) ಲೇಖನಕ್ಕೆ ಶೀರ್ಷಿಕೆಯಾಗಿಸುವುದು ನನಗೆ ತುಂಬಾ ಇಷ್ಟ. ಓದುಗರ ಗಮನ ಸೆಳೆಯಲು ಅದೊಂದು ತಂತ್ರವೂ ಹೌದೆನ್ನಿ. ಅಲ್ಲದೇ ಅಂಕಣಕ್ಕೊಂದು ಅನೌಪಚಾರಿಕ ಆಪ್ತತೆ ಅದರಿಂದ ಬರುತ್ತದೆಂದು ನನ್ನ ನಂಬಿಕೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಈ ಪ್ರಯೋಗ ಮಾಡುತ್ತೇನೆ.

ಪ್ರಸ್ತುತ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಶೀರ್ಷಿಕೆಗೆ ಎರಡು ಕಾರಣಗಳಿವೆ: ಓದುಗರ ನಂಬಿಕೆಗಳ ಪತ್ರಗಳು ಇನ್ನೂ ಪ್ರವಾಹದೋಪಾದಿಯಲ್ಲಿ ಬರುತ್ತಿದ್ದು ಅವುಗಳಲ್ಲಿನ ಸ್ವಾರಸ್ಯಕರ ಅಂಶಗಳನ್ನು ನಾನೊಬ್ಬನೇ ಸವಿಯುವುದು ಸರಿಯಲ್ಲ, ಅದಕ್ಕೋಸ್ಕರ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಈ ವಾರವೂ ಓದುಗರ ಓಲೆಗಳದೇ ಟಚ್. ಎರಡನೆಯ ಕಾರಣ ಸ್ವಲ್ಪ ತಮಾಷೆಯದು; ಅದೇನೆಂದು ಲೇಖನವನ್ನು ಓದಿಮುಗಿಸಿದಾಗ ನೀವೇ ಕಂಡುಕೊಳ್ಳುವಿರಂತೆ.

ಕಳೆದುಹೋದ ವಸ್ತು ಸಿಗಬೇಕಿದ್ದರೆ ಕಾರ್ತವೀರ್ಯಾರ್ಜುನನನ್ನು ಸ್ಮರಿಸಬೇಕೆಂಬ ನಂಬಿಕೆಯನ್ನು ಕಳೆದವಾರ ತಿಳಿದುಕೊಂಡೆವಷ್ಟೆ? ನಾನೆಲ್ಲೋ ಅದು ತಮಾಷೆಗೆಂದೇ ಸೃಷ್ಟಿಯಾದದ್ದಿರಬಹುದು ಎಂದುಕೊಂಡಿದ್ದೆ. ಮತ್ತೆ ನೋಡಿದರೆ ಅದಕ್ಕೊಂದು ಮಂತ್ರವೂ ಇದೆಯಂತೆ! ಹಾಸ್ಯಲೇಖಕ ಬೇಲೂರು ರಾಮಮೂರ್ತಿ ಪತ್ರದಲ್ಲಿ ಬರೆದಿದ್ದಾರೆ- “ನಾನು ಚಿಕ್ಕವನಿದ್ದಾಗ ಏನೇ ವಸ್ತುಗಳನ್ನು ಕಳೆದುಕೊಂಡರೂ ನಮ್ಮ ತಂದೆ ನನಗೆ ಕೈಕಾಲು ಮುಖ ತೊಳೆದುಕೊಂಡು ಬರುವಂತೆ ಹೇಳಿ ದೇವರಿಗೆ ಊದುಬತ್ತಿ ಹಚ್ಚಿಸಿ ನಮಸ್ಕಾರ ಮಾಡಿಸಿ ಆಮೇಲೆ, ಕಾರ್ತವೀರ್ಯಾರ್ಜುನೋನಾಮ ರಾಜಾಬಾಹುಸಹಸ್ರವಾನ್ | ತಸ್ಯಸ್ಮರಣ ಮಾತ್ರೇಣ ಹೃತಂ ನಷ್ಟಂ ಚ ಲಭ್ಯತೇ|| ಎಂಬ ಮಂತ್ರ ಹೇಳಿಕೊಡುತ್ತಿದ್ದರು. ನಾನದನ್ನು ಹೇಳಿದ್ದೂಹೇಳಿದ್ದೇ. ಕೆಲವೊಮ್ಮೆ ವಸ್ತು ಸಿಕ್ಕಿದ್ದೂ ಇದೆಯೆನ್ನಿ.”

ರಾಮಮೂರ್ತಿಯವರ ಪತ್ರವನ್ನು ನಾನು ಚಿಟಿಕೆ ಉಪ್ಪಿನೊಂದಿಗೇ ಗ್ರಹಿಸಿದ್ದೆ. ಆ ಮಂತ್ರ ಅವರ ಕಿಸೆಯಿಂದಲೇ ಇದ್ದಿರಬಹುದು ಎಂದುಕೊಂಡಿದ್ದೆ. ಆದರೆ ಉಡುಪಿಯಿಂದ ನಂದಕಿಶೋರ ಅವರೂ ಅದೇ ಶ್ಲೋಕವನ್ನು ಉಲ್ಲೇಖಿಸಿ ಬರೆದಿದ್ದಾರೆ. ಕಾರ್ತವೀರ್ಯನಿಗೆ ಸಾವಿರ ಕೈಗಳಿದ್ದವು. ಕಳೆದುಹೋದ ವಸ್ತುವನ್ನು ಹುಡುಕುವುದು ಆತನಿಗೆ ಸುಲಭ ಎಂಬ ಕಾರಣಕ್ಕೆ ಅವನನ್ನು ನೆನಪಿಸಿಕೊಳ್ಳುವುದು ಎಂದು ತಾರ್ಕಿಕವಾಗಿ ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ಮರೆಗುಳಿಗಳಿಗೆ ಒಳ್ಳೆಯ ಗುಳಿಗೆ. ಜೈ ಕಾರ್ತವೀರ್ಯಾರ್ಜುನ!

ಹಬ್ಬಕ್ಕೆಂದೋ ಮದುವೆ-ಮುಂಜಿ ಸಮಾರಂಭಕ್ಕೆಂದೋ ಮನೆಯಲ್ಲಿ ಹೋಳಿಗೆ ಮಾಡುವಾಗ ಒಂದು ಗಮ್ಮತ್ತಿನ ನಂಬಿಕೆ ಅನ್ವಯವಾಗುವುದಿದೆ. ಅದನ್ನು ಬೆಂಗಳೂರಿನ ಜ್ಯೋತಿ ಉಮೇಶ್ ಬರೆದುಕಳಿಸಿದ್ದಾರೆ- “ಹೋಳಿಗೆ ಮಾಡುವಾಗ ಸಾಮಗ್ರಿಗಳನ್ನ ಎಷ್ಟೇ ಪ್ರಮಾಣಪ್ರಕಾರ ತೆಗೆದ್ಕೊಂಡ್ರೂ ಕೊನೇಲಿ ಒಂದೋ ಹೂರಣ ಇಲ್ಲವೇ ಕಣಕ ಒಂಚೂರಾದ್ರೂ ಮಿಕ್ಕಿ ಉಳೀತದೆ. ಕುಟುಂಬದಲ್ಲಿ ಯಾರಾದ್ರೂ ಬಸುರಿ ಇದ್ದರೆ ಆಕೆಗೆ ಹುಟ್ಟಲಿರುವ ಮಗುವಿನ ಲಿಂಗನಿರ್ಧಾರ ಅದ್ರಿಂದ ಮಾಡ್ಲಿಕ್ಕಾಗ್ತದೆ! ಹೂರಣ ಉಳಿದ್ರೆ ಗಂಡು, ಕಣಕ ಉಳಿದ್ರೆ ಹೆಣ್ಣು. ಅದು ನಿಜವೇ ಆಗುತ್ತದೆ. ನನ್ನ ದೊಡ್ಡಮಗ ವಿಕ್ರಮ್ ಹುಟ್ಟುವ ಒಂದು ತಿಂಗಳು ಮುನ್ನ ನನ್ನ ತಮ್ಮನ ಮದುವೆಯಿದ್ದದ್ದು. ಅಡುಗೆಭಟ್ಟರು ಹೋಳಿಗೆ ಮಾಡಿ ಮುಗಿಸಿದ್ದೇ ತಡ ನನ್ನ ದೊಡ್ಡಪ್ಪ ಜೋರಾಗಿ ಕೂಗಿದ್ರು ‘ಜ್ಯೋತಿಗೆ ಗಂಡುಮಗು!’ ಅಂತ. ಅಲ್ಲೇ ಪಕ್ಕದ ರೂಮ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ನಾನು ಇದೇನಿದು ಡೆಲಿವರಿ ಆಗಿಹೋಯ್ತಾ!? ಎಂದು ಗಡಬಡಿಸಿ ಎದ್ದಿದ್ದೆ. ಒಂದು ತಿಂಗಳ ನಂತರ ಅದು ನಿಜವೇ ಆಯ್ತು! ಹಾಗಾಗಿ ಈ ನಂಬಿಕೆಯಲ್ಲಿ ನನಗೆ ಖಂಡಿತ ನಂಬಿಕೆಯಿದೆ.”

ಬಾಲ್ಯದ ಮುಗ್ಧತೆಯನ್ನು ಪ್ರತಿಬಿಂಬಿಸುವ ಕೆಲ ನಂಬಿಕೆಗಳ ಸ್ಯಾಂಪಲ್ ನೋಡೋಣ. ಬೆಂಗಳೂರಿನಿಂದ ವೇದಾ ಸುದರ್ಶನ್ ಬರೆಯುತ್ತಾರೆ- “ಮಳೆಗಾಲದಲ್ಲಿ ಕಪ್ಪೆಗೆ ಅಂತ ಮರಳಲ್ಲಿ ಗೂಡು ಕಟ್ತಿದ್ವಿ. ಯಾರನ್ನಾದ್ರು ಕಾಡ್ಸಿ ಪೀಡ್ಸಿ ಚಿಲ್ರೆ ಕಾಸು ತಕ್ಕೊಂಡು ಆ ಗೂಡಿನಲ್ಲಿ ಇಡ್ತಿದ್ವಿ. ಮಾರನೆ ದಿನಕ್ಕೆ ಅದು ಡಬಲ್ ಆಗುತ್ತೆ ಅಂತ ತಾಳ್ಮೆಯಿಂದ ಕಾಯ್ತಿದ್ವಿ ಅದನ್ನ ನಮ್ಮಣ್ಣ ತತ್‌ಕ್ಷಣವೇ ಲಪ್ಟಾಯಿಸ್ತಿದ್ದದ್ದೂ ನಮ್ಮ ಗಮನಕ್ಕೆ ಬರ್ತಿರ್ಲಿಲ್ಲ. ನೆಕ್ಸ್ಟ್ ಡೇ ಏನಿರ್ತಿತ್ತು ಅಲ್ಲಿ ಮಣ್ಣು! ಬರೀ ಖಾಲಿ ಗೂಡು, ಕೆಲವು ಸರ್ತಿ ಅದೂ ಇಲ್ಲ!”

ಇನ್ನೊಂದು, ಹೈದರಾಬಾದ್‌ನಿಂದ ಸಂಧ್ಯಾ ವಸಂತ್ ತಿಳಿಸಿರುವ ನಂಬಿಕೆ- “ವಾರ್ಷಿಕ ಪರೀಕ್ಷೆಯ ರಿಸಲ್ಟ್ಸ್ ಹತ್ರ ಬರ್ತಿದ್ದಹಾಗೆ ಕಪ್ಪು‌ಇರುವೆ ಗೂಡಿನ ಪಕ್ಕ ಕೈ ಇಡೋದು. ಇರುವೆಗಳು ಮೊಣಕೈತನಕ ಬಂದ್ರೆ ಫರ್ಸ್ಟ್‌ಕ್ಲಾಸ್ ಪಾಸ್. ಅದಕ್ಕಿಂತಲೂ ಮೇಲೆ ಬಂದ್ರೆ ಡಿಸ್ಟಿಂಕ್ಷನ್. ಇರುವೆ ಎಲ್ಲಿವರೆಗೆ ಹತ್ತುತ್ತೆ ಅನ್ನೋದ್ರ ಮೇಲೆ ಅವ್ರವ್ರ ಮಾರ್ಕ್ಸ್ ಗ್ರೇಡ್ ನಿರ್ಧಾರ ಆಗ್ತಿತ್ತು. ಕೆಲವುಸರ್ತಿ ಏನು ಮಾಡಿದ್ರೂ ಇರುವೆ ಮೇಲೆ ಹತ್ತುತ್ತಾನೇ ಇರಲಿಲ್ಲ ಜಾರಿ ಬೀಳ್ತಿತ್ತು. ಬಳ್ಳಾರಿಯಲ್ಲಿರುತ್ತ ನಾನು, ವಸುಧೇಂದ್ರ ಮತ್ತು ಅವನ ಅಕ್ಕ ಇದನ್ನು ಬಹಳ ಮಾಡ್ತಿದ್ದೆವು.”

ಕೆಂಬೂತ ಪಕ್ಷಿ ನೋಡಲಿಕ್ಕೆ ಸಿಕ್ಕರೆ ಅವತ್ತು ಏನೋ ಸಿಹಿ ತಿನ್ನುವ ಯೋಗವಿದೆ ಎಂಬ ನಂಬಿಕೆಯನ್ನು ನೆನಪಿಸಿಕೊಂಡವರು ಕಾರವಾರದ ಶಾರದಾ ಭಟ್- “ಸಿಹಿ ಸಿಗಬಹುದು ಸಿಗದೇ ಇರಬಹುದು. ಆದರೆ ಕೆಂಬೂತ ಕಂಡಾಕ್ಷಣ ಸಿಹಿ ತಿಂದಂತೆಯೇ ಮನಸ್ಸು ಮುದಗೊಳ್ಳುವುದಂತೂ ನಿಜ. ತುಂಬ ಸುಂದರ ಪಕ್ಷಿ. ಮನುಷ್ಯರ ಕಣ್ಣಿಗೆ ಕಾಣಿಸಿಕೊಳ್ಳುವುದೂ ಅಪರೂಪ. ಚಿಕ್ಕವಳಿದ್ದಾಗ ಕೆಂಬೂತವನ್ನು ನೋಡಿದ್ದೇನೆ ಎಂಬ ನೆಪ ಹೇಳಿ ಅಮ್ಮನಿಂದ ಬೆಲ್ಲ ಇಸ್ಕೊಂಡು ತಿಂದದ್ದೂ ಉಂಟು.”

ಬಟ್ಟೆ ತೊಡುವಾಗ ಅಪ್ಪಿತಪ್ಪಿ ಉಲ್ಟಾ ತೊಟ್ಟುಕೊಂಡರೆ ಹೊಸಬಟ್ಟೆ ಸಿಗುತ್ತೆ ಎಂಬುದೊಂದು ನಂಬಿಕೆ. ಬೆಂಗಳೂರಿನ ಮಾಲತಿ ಶೆಣೈ ಅದನ್ನು ನೆನಪಿಸಿದ್ದೇ ಅಲ್ಲದೆ ಹೊಸ ಬಟ್ಟೆಗೆ ಸಂಬಂಧಿಸಿದಂತೆ ತಾವೇ ಒಂದು ನಂಬಿಕೆಯನ್ನು ತಯಾರಿಸಿದ್ದಾರೆ. “ಬಟ್ಟೆ ಮೇಲೆ ಕಾಗೆ ಹಿಕ್ಕೆ ಬಿದ್ರೆ ಹೊಸ ಬಟ್ಟೆ ಸಿಗುತ್ತೆ. ನಮ್ಮೆಜಮಾನ್ರ ಕೇಸ್‌ನಲ್ಲಿ ಇದು ಖಂಡಿತ ನಿಜವಾಗಿದೆ. ಒಮ್ಮೆ ಅವ್ರಿಗೆ ಕುಣಿಗಲ್‌ಗೆ ಹೋಗಲಿಕ್ಕಿತ್ತು. ಅಲ್ಲಿನ ನಮ್ಮ ಆಫೀಸಿಗೆ ಗಣ್ಯರು ಬರುವವರಿದ್ದರು. ಅವತ್ತು ನಮ್ಮವ್ರು ಕಪ್ಪು ಶರ್ಟ್ ಹಾಕ್ಕೊಂಡಿದ್ರು. ಅದರಮೇಲೆ ಕಾಗೆ ಇಶ್ಶಿ ಮಾಡ್ತು. ಆಫೀಸ್ ಜವಾನ ಅದನ್ನು ಒರೆಸುತ್ತೇನೆಂದವ ಇನ್ನಷ್ಟು ಗಲೀಜು ಮಾಡಿದ. ಆಮೇಲೆ ಬೇರೆ ಉಪಾಯವಿಲ್ಲದೆ ಕುಣಿಗಲ್‌ನ ಕ್ಲಾತ್‌ಶಾಪ್‌ನಲ್ಲಿ ಹೊಸ ಶರ್ಟ್ ಖರೀದಿ ಆಯ್ತು!”

ಕನ್ಯಾಮಣಿಗಳು ಕಾಯಿತುರಿಯುವಾಗ ತಿಂದರೆ ಮದುವೆದಿನ ಮಳೆ ಬರುತ್ತೆ ಎಂದು ಹೆದರಿಸುವ ನಂಬಿಕೆ ಕಳೆದವಾರ ಪ್ರಸ್ತಾಪವಾಗಿತ್ತಲ್ಲ? ಅದನ್ನೋದಿ ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್ ಬರೆದಿದ್ದಾರೆ- “ಚಿಕ್ಕವಳಿದ್ದಾಗ ತುಂಬಾ ಅಕ್ಕಿ ತಿನ್ನುತ್ತಿದ್ದೆ. ಆಗ ನಮ್ಮಮ್ಮ ಗದರಿಸಿ ‘ಅಕ್ಕಿ ತಿಂದ್ರೆ, ನಿನ್ನ ಮದುವೆಯಲ್ಲಿ ಮಳೆ ಬರುತ್ತೆ’ ಅಂತಿದ್ರು. ಅದು ನಿಜವೂ ಆಯಿತು. ನನ್ನ ಮದುವೆಯಲ್ಲಿ ಬಹುಶಃ ಆಕಾಶ ತೂತಾಗಿತ್ತು ಅಂತ ಕಾಣಿಸುತ್ತೆ. ಕಲ್ಲು ಮಳೆ. ಆರತಕ್ಷತೆಯ ಗಲಾಟೆಯಲ್ಲೂ ಅಮ್ಮನ ನಂಬಿಕೆ ಸುಳ್ಳಾಗಲಿಲ್ಲ!”

ಅದಕ್ಕಿಂತಲೂ ಮಜಾ ಎಂದರೆ ಪಡುಬಿದ್ರಿಯಿಂದ ಆಯುರ್ವೇದವೈದ್ಯ ಡಾ.ಗುರುಪ್ರಸಾದ್ ಬರೆದಿರುವ ಪತ್ರ. “ನಾವು ಈಜುವಾಗ ಕೆರೆಯಲ್ಲಿ ಮೂತ್ರ ಮಾಡಿದ್ರೆ ಮದುವೆ ದಿವಸ ಮಳೆಯಾಗುತ್ತ್ತೆ ಅಂತ ಹೇಳ್ತಿದ್ದರು. ನೋಡ್ಬೇಕು ಬರುವ ನವೆಂಬರ್ 3ಕ್ಕೆ ನನ್ನ ಮದುವೆ. ಆದಿನ ಮಳೆ ಬರುತ್ತೋ ಏನೋ ಗೊತ್ತಿಲ್ಲ!” ಇಲ್ಲ ಡಾಕ್ಟ್ರೇ ಮಳೆ ಬರಲಿಕ್ಕಿಲ್ಲ. ಆದರೆ ಶುಭಾಶೀರ್ವಾದಗಳ ಸುರಿಮಳೆ ಆಗ್ತದೆ ನೋಡ್ತಿರಿ!

ಇಲ್ಲಿಗೆ ಮೂರು ಕಂತುಗಳಲ್ಲಿ ಮೂಡಿಬಂದ ನಂಬಿಕಾಯಣವು ಸಮಾಪ್ತವಾದುದು. ಸಮಸ್ತ ನಂಬಿಕಸ್ತರಿಗೂ ಮಸ್ತುಮಸ್ತಾಗಿ ತಥಾಸ್ತು ಆಗಲಿ. * * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!