ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for October 2011


Honesty under watchful eyes

Saturday, October 1st, 2011
DefaultTag | Comments

ದಿನಾಂಕ  2 ಅಕ್ಟೋಬರ್ 2011ರ ಸಂಚಿಕೆ...

ಕನಕದಾಸರೇಕೆ ಬಾಳೆಹಣ್ಣು ತಿನ್ನಲಿಲ್ಲ?

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ. ತುಂಡು ಬಟ್ಟೆ ಮಾನ ಮುಚ್ಚೋಕೆ. ಅಂಗೈಯಗಲದಷ್ಟು ಜಾಗ ಹಾಯಾಗಿ ಇರೋದಕ್ಕೆ. ಇವು ‘ಜಿಮ್ಮಿಗಲ್ಲು’ ವಿಷ್ಣುವರ್ಧನ್‌ಗಷ್ಟೇ ಅಲ್ಲ, ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಮೂಲಭೂತ ಅಗತ್ಯಗಳು. ಇದೇನೂ ನಿನ್ನೆಮೊನ್ನೆ ಕಂಡುಕೊಂಡ ಹೊಸ ಸಂಶೋಧನೆಯಲ್ಲ.

ಆದರೆ, ಒಂದುವೇಳೆ ಪ್ರತಿಯೊಬ್ಬ ಮನುಷ್ಯನೂ ಕೇವಲ ಸ್ವಾರ್ಥಿಯಾಗಿ, ತನ್ನೊಬ್ಬನ ಉಳಿವು-ಅಳಿವಿನ ಬಗ್ಗೆಯಷ್ಟೇ ಚಿಂತಿಸುವವನಾಗಿದ್ದರೆ ಹೇಗಿರುತ್ತಿತ್ತು? ಪರಸ್ಪರ ವಿಶ್ವಾಸ, ಸಹಾಯ, ಸಹಕಾರ ಅಂತೆಲ್ಲ ಏನೂ ಇಲ್ಲ. ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಸನ್ನಿವೇಶ.

ಪುಣ್ಯಕ್ಕೆ ಹಾಗೆ ಇಲ್ಲ ಪರಿಸ್ಥಿತಿ. ಎಷ್ಟೋ ಸಂದರ್ಭಗಳಲ್ಲಿ ನಮಗೆ ಗುರುತು-ಪರಿಚಯ ಇಲ್ಲದವರ ಬಗ್ಗೆ ಸಮೇತ ನಾವು ಉದಾರಿಗಳಾಗುತ್ತೇವೆ. ಮುಂದೆ ಅವರು ಭೇಟಿಯಾಗುತ್ತಾರೋ ಇಲ್ಲವೋ, ಮಾಡಿದ ಉಪಕಾರಕ್ಕೆ ಪ್ರತಿಫಲ ದೊರಕುತ್ತದೋ ಇಲ್ಲವೋ ಮುಂತಾಗಿ ಯಾವೊಂದು ಆಲೋಚನೆಯೂ ಇಲ್ಲದೆ ಆಕ್ಷಣಕ್ಕೆ ಏನು ಸಾಧ್ಯವಾಯ್ತೋ ಅಷ್ಟನ್ನು ಮಾಡುತ್ತೇವೆ. ಕಣ್ಣು ಕಾಣದ ಮುದುಕನನ್ನು ಕೈಹಿಡಿದು ರಸ್ತೆ ದಾಟಿಸುತ್ತೇವೆ. ಕಂಕುಳಲ್ಲಿ ಮಗು, ಕೈಯಲ್ಲೊಂದು ಭಾರದ ಚೀಲ ಹಿಡಿದುಕೊಂಡು ಬಸ್ ಹತ್ತುವ ಹೆಂಗಸಿಗೆ ಸೀಟ್ ಬಿಟ್ಟುಕೊಡುತ್ತೇವೆ. ನೆರೆ-ಬರ-ಭೂಕಂಪಗಳಿಂದ ತತ್ತರಿಸಿದವರ ಜಾತಿಮತ ಲೆಕ್ಕಿಸದೆ ಮನಮಿಡಿಯುತ್ತೇವೆ, ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬಂಥ ಸರಳ ಸಂದೇಶಗಳಿಂದಿರಬಹುದು, ಪರೋಪಕಾರಾರ್ಥಮಿದಂ ಶರೀರಂ ಎಂದುಕೊಂಡೇ ಗಂಧದ ಕೊರಡಿನಂತೆ ಬಾಳು ಸವೆಸುವವರನ್ನು ಆದರ್ಶವಾಗಿಟ್ಟುಕೊಂಡು ಇರಬಹುದು, ಸಂತರ ಸದ್ಬೋಧೆಯಿಂದಿರಬಹುದು ಅಂತೂ ಅನಾಮಧೇಯ ಒಳ್ಳೆತನ ಮತ್ತು ಔದಾರ್ಯಗಳು ಈ ಪ್ರಪಂಚದಲ್ಲಿ ಇನ್ನೂ ಜೀವಂತವಾಗಿಯೇ ಇವೆ ಎನ್ನುವುದು ಹದಿನಾರಾಣೆ ಸತ್ಯ.

ಈಬಗ್ಗೆ ಮನಃಶಾಸ್ತ್ರಜ್ಞರು ಇನ್ನಷ್ಟು ಬೆಳಕು ಚೆಲ್ಲುತ್ತಾರೆ. ಮನುಷ್ಯನಲ್ಲಿ ಒಳ್ಳೆತನವೂ ಸುಖಾಸುಮ್ಮನೆ ಇರುವುದಿಲ್ಲ. ತನ್ನ ವಾಂಛೆಗಳಿಗಾಗಿ ಏನನ್ನೂ ಮಾಡಬಲ್ಲನಾದರೂ ‘ಸಮಾಜದ ದೃಷ್ಟಿ’ಯಲ್ಲಿ ತನ್ನ ಗೌರವಕ್ಕೆ ಚ್ಯುತಿ ಬರಬಾರದೆಂದು ಸಾಮಾನ್ಯವಾಗಿ ಪ್ರತಿಯೊಬ್ಬನಿಗೂ ಕಾಳಜಿ ಇರುತ್ತದೆ. ಸ್ವಾರ್ಥ, ಮೋಸ, ವಂಚನೆಗಳಲ್ಲಿ ತೊಡಗಿರುವವರು ಒಂದೊಮ್ಮೆ ಸಿರಿವಂತರಾದರೂ ಅದು ಶಾಶ್ವತವಲ್ಲ ಎಂದು ಇತಿಹಾಸದುದ್ದಕ್ಕೂ (ಇದೀಗ ತಿಹಾರ, ಪರಪ್ಪನ ಅಗ್ರಹಾರ, ಚಂಚಲಗೂಡ ಜೈಲುಗಳಲ್ಲೂ) ಸಾಕ್ಷಿಗಳೇ ಇವೆಯಲ್ಲ? ಹಾಗಾಗಿ ‘ಸಮಾಜದ ದೃಷ್ಟಿ’ ತನ್ನ ಮೇಲಿರುತ್ತದೆ ಎಂಬ ಹೆದರಿಕೆ, ಲಜ್ಜೆಗೆಟ್ಟ ದಗಾಕೋರರಿಗೆ ಇಲ್ಲದಿದ್ದರೂ ಸರಳ ಮನಸ್ಸಿನ ಶ್ರೀಸಾಮಾನ್ಯನಿಗೆ ಇದ್ದೇ ಇರುತ್ತದೆ. ಆ ಹೆದರಿಕೆಯೇ ಒಳ್ಳೆತನಕ್ಕೆ, ಸಹಕಾರಯುತ ಸಹಬಾಳ್ವೆಗೆ ಸಹಾಯಕವಾಗುತ್ತದೆ.

ಯಾರಾದರೂ ತನ್ನನ್ನು ನೋಡುತ್ತಿದ್ದಾರೆ/ಗಮನಿಸುತ್ತಿದ್ದಾರೆ ಎಂಬ ಅರಿವು ಇದ್ದಾಗ ಮನುಷ್ಯನ ವರ್ತನೆಯ ಖದರೇ ಬೇರೆ. ಅದು ಎಲ್ಲಿಯವರೆಗೆಂದರೆ ಆ ‘ನೋಡುವ ಕಣ್ಣು’ಗಳು ನಿಜವೇ ಆಗಿರಬೇಕಾದ್ದಿಲ್ಲ. ಸರ್ವೈಲೆನ್ಸ್ ಕ್ಯಾಮರಾ/ ಕ್ಲೋಸ್‌ಸರ್ಕ್ಯೂಟ್ ಟಿವಿ ಕಣ್ಣುಗಳಾಗಿರಬೇಕಂತನೂ ಇಲ್ಲ. ಕಣ್ಣುಗಳನ್ನು ಹೋಲುವ ಚಿತ್ರವಿದ್ದರೂ ಸಾಕು, ಅದನ್ನು ನೋಡಿ ಮೆದುಳು ಜಾಗ್ರತವಾಗುತ್ತದಂತೆ. ಒಂದು ಪ್ರಯೋಗದಲ್ಲಿ, ಹಾಳೆ-ಪೆನ್ನಿನ ಬದಲು ಕಂಪ್ಯೂಟರ್‌ನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳು ಪರದೆಯ ಮೇಲೆ ಪುಟ್ಟದಾದ ಜೋಡಿಕಣ್ಣುಗಳ ಚಿತ್ರವಿದ್ದುದರಿಂದ ಹೆಚ್ಚಿನ ಪ್ರಾಮಾಣಿಕತೆ ತೋರಿದ್ದನ್ನು ಪರೀಕ್ಷಕರು ಗಮನಿಸಿದ್ದಾರಂತೆ.

watchfuleyes.jpg

ಇಂಗ್ಲೇಂಡ್‌ನ ವಿಶ್ವವಿದ್ಯಾಲಯವೊಂದರ ಸೈಕಾಲಜಿ ವಿಭಾಗದವರು ನಡೆಸಿದ ಒಂದು ವಿಶಿಷ್ಟ ಸಮೀಕ್ಷೆಯ ಫಲಿತಾಂಶ ಕೂಡ ಕಣ್ಗಾವಲಿನ ಹಿರಿಮೆಯನ್ನು ಪುಷ್ಟೀಕರಿಸಿದೆ. ಅಲ್ಲಿ ಸೈಕಾಲಜಿ ವಿಭಾಗದ ‘ಟೀ ರೂಮ್’ನಲ್ಲಿ ಕಾಲೇಜಿನ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ, ಅಧ್ಯಯನವಸ್ತುವಾಗಿ ಸ್ವಯಂಸ್ಫೂರ್ತಿಯಿಂದ ಬರುವ ಸಾರ್ವಜನಿಕರಿಗೆಂದು ಟೀ/ಕಾಫಿ ಒದಗಿಸುವ ವ್ಯವಸ್ಥೆಯಿತ್ತು. ದುಡ್ಡು ವಸೂಲಿಗೆ ಅಲ್ಲಿ ಯಾರೂ ಇರುತ್ತಿರಲಿಲ್ಲ. ನಾಣ್ಯ ಹಾಕಿದರೆ ಮಾತ್ರ ಕಾಫಿ ಸುರಿಸುವ ಯಂತ್ರ ಇದ್ದದ್ದೂ ಅಲ್ಲ. ಬಿಸಿನೀರು, ಹಾಲು, ಸಕ್ಕರೆ, ಟೀ-ಬ್ಯಾಗ್/ ಕಾಫಿಪುಡಿ ಇಟ್ಟಿದ್ದನ್ನು ಬಳಸಿ ಸ್ವಂತ ಟೀ/ಕಾಫಿ ಮಾಡಿಕೊಳ್ಳಬೇಕು. ಅಲ್ಲೇ ಪಕ್ಕದಲ್ಲಿಟ್ಟಿದ್ದ ‘ಪ್ರಾಮಾಣಿಕತೆ ಪೆಟ್ಟಿಗೆ’ಯಲ್ಲಿ ದುಡ್ಡು ಹಾಕಬೇಕು. ಒಂದು ಕಪ್ ಕಾಫಿಗಾದರೆ ಇಂತಿಷ್ಟು, ಟೀಗಾದರೆ ಇಂತಿಷ್ಟು, ಚಾಕೊಲೇಟ್ ಮಿಲ್ಕ್‌ಗೆ ಇಂತಿಷ್ಟು ಅಂತೆಲ್ಲ ಬರೆದ ಬೋರ್ಡ್‌ಅನ್ನು ಕಣ್ಣಿಗೆ ಕಾಣುವಂತೆ, ಕಣ್ಣಿನ ಎತ್ತರಕ್ಕೆ ಬರುವಂತೆ ಇಡಲಾಗಿತ್ತು.

ಗುಪ್ತವಾಗಿ ಸಮೀಕ್ಷಾರ್ಥಿಗಳಿಗೆ ತಿಳಿಯದಂತೆ ಸಮೀಕ್ಷೆ ನಡೆಸಿದ್ದ ಸೈಕಾಲಜಿ ವಿಭಾಗದ ಮುಖ್ಯಸ್ಥೆ ಏನು ಮಾಡುತ್ತಿದ್ದರೆಂದರೆ ಪ್ರತಿವಾರವೂ ದರ ಪಟ್ಟಿಯ ಬೋರ್ಡ್‌ಅನ್ನು ಬದಲಾಯಿಸುತ್ತಿದ್ದರು. ದರಗಳು ಅವೇ ಆದರೂ ಅದನ್ನು ಬರೆದ ಕಾಗದದ ಹಾಳೆ ಪ್ರತಿವಾರ ಹೊಸತು. ದರ ಪಟ್ಟಿಯ ಮೇಲ್ಗಡೆ ಪುಟ್ಟದಾದ ಚಿತ್ರ. ಒಂದು ವಾರ ಜೋಡಿ ಕಣ್ಣುಗಳ ಚಿತ್ರ; ಮುಂದಿನವಾರ ಹೂವಿನ ಚಿತ್ರ; ಅದರ ನಂತರದ ವಾರ ಮತ್ತೆ ಜೋಡಿ ಕಣ್ಣುಗಳ ಚಿತ್ರ. ಮತ್ತೊಮ್ಮೆ ಹೂವಿನ ಚಿತ್ರ... ಹೀಗೆ ಆವರ್ತನ. ಜೋಡಿ ಕಣ್ಣುಗಳ ಚಿತ್ರವನ್ನು ದೃಷ್ಟಿಸಿದರೆ ನಿಜವಾಗಿಯೂ ಆ ಕಣ್ಣುಗಳು ನಮ್ಮನ್ನೇ ನೋಡುತ್ತಿವೆಯೇನೋ ಎಂಬಂತಿರುತ್ತಿತ್ತು, ಅಷ್ಟು ಚಾಕಚಕ್ಯತೆಯಿಂದ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದರು ಆ ಸಮೀಕ್ಷಕಿ.

ಹತ್ತು ವಾರಗಳ ಕಾಲ ಸಮೀಕ್ಷೆ ನಡೆಯಿತು. ಒಂದು ಆಶ್ಚರ್ಯಕರ ಸತ್ಯಾಂಶ ಅದರಿಂದ ಹೊರಬಂತು. ದರ ಪಟ್ಟಿಯ ಮೇಲೆ ಕಣ್ಣುಗಳ ಚಿತ್ರವಿದ್ದ ವಾರಗಳಲ್ಲಿ ಮೂರುಪಟ್ಟು ಹಣ ಜಮೆಯಾಗುತ್ತಿತ್ತು! ನೈಜವಾದರೂ ಅಷ್ಟೇ ಚಿತ್ರದಲ್ಲಾದರೂ ಅಷ್ಟೇ, ಕಣ್ಣು ಮುಖ ಇತ್ಯಾದಿಗಳನ್ನು ಕಂಡಾಗ ನಮ್ಮ ಮೆದುಳಿನ ನರಗಳು ತೀವ್ರವಾಗಿ ಸಂವೇದಿಸುವುದನ್ನು ಮನಃಶಾಸ್ತ್ರಜ್ಞರು ತುಂಬಾ ಹಿಂದೆಯೇ ಕಂಡುಕೊಂಡಿದ್ದಾರೆ. ಹಾಗಾಗಿ ಟೀ-ರೂಮ್‌ನಲ್ಲಿ ದರ ಪಟ್ಟಿಯ ಮೇಲೆ ಕಣ್ಣುಗಳ ಚಿತ್ರವನ್ನು ನೋಡಿ ಗಿರಾಕಿಗಳ ಮೆದುಳಿನಲ್ಲಿ ವಿಶೇಷ ಸಂವೇದನೆ ಆಗಿರುವುದು ಹೌದು. ಪ್ರಾಮಾಣಿಕ ಪೆಟ್ಟಿಗೆಯೊಳಗೆ ತಾನು ಕರಾರುವಾಕ್ಕಾಗಿ ದುಡ್ಡು ಹಾಕಬೇಕು ಎಂಬ ಜಾಗೃತಿ ಉಂಟಾಗಿರುವುದೂ ಹೌದು. ಆ ಪ್ರಕಾರ ದುಡ್ಡು ಜಮೆಯಾಗಿರುವುದೂ ಹೌದು.

kanakadasa.jpg

ಕನಕದಾಸರ ಕಥೆಯಲ್ಲಿಯೂ ಹಾಗೆಯೇ ಅಲ್ಲವೇ ಆದದ್ದು? ಕನಕನ ಗುರುಗಳು ತಮ್ಮ ಶಿಷ್ಯವೃಂದಕ್ಕೆ ಬಾಳೆಹಣ್ಣುಗಳನ್ನು ಹಂಚಿ ಯಾರೂ ನೋಡದೇ ಇರುವಲ್ಲಿ ಹೋಗಿ ತಿಂದುಕೊಂಡು ಬನ್ನಿ ಎಂದರು. ಒಬ್ಬೊಬ್ಬರು ಒಂದೊಂದು ಜಾಗವನ್ನು, ಯಾರೂ ನೋಡುತ್ತಿಲ್ಲ ಎಂದು ತಮಗೆ ಸಮಾಧಾನವೆನಿಸಿದ ಆಯಕಟ್ಟಿನ ಸ್ಥಳವನ್ನು ಆಯ್ದುಕೊಂಡು ಅಲ್ಲಿ ಬಾಳೆಹಣ್ಣು ಭಕ್ಷ್ಯಣ ಮಾಡಿ ಬಂದರು. ಕನಕನಿಗಾದರೋ ಎಲ್ಲಿ ಹೋದರೂ ‘ದೇವರ ಕಣ್ಣು’ ಕಾಣಿಸುತ್ತಿದೆ. ಅಪ್ಪಟ ಪ್ರಾಮಾಣಿಕತೆ ಹೆಡೆಯೆತ್ತಿ ನಿಂತಿದೆ. ನೋಡುವ/ಗಮನಿಸುವ ಮನುಷ್ಯರು ಇಲ್ಲದೇ ಇರಬಹುದು, ಆದರೆ ದೇವರು ಇಲ್ಲದ ಸ್ಥಳವೇ ಸಿಗುತ್ತಿಲ್ಲವಲ್ಲ ಎಂಬ ದಿವ್ಯ ಸತ್ಯದ ಮನವರಿಕೆಯಾಗಿದೆ. ಬಾಳೆಹಣ್ಣನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಗುರುಗಳ ಬಳಿಗೆ ವಾಪಸಾಗಿದ್ದಾನೆ ಕನಕ.

ಇಂಗ್ಲೇಂಡ್‌ನ ಸೈಕಾಲಜಿ ವಿಭಾಗದವರು ನಾಲ್ಕು ವರ್ಷಗಳ ಹಿಂದೆಯಷ್ಟೇ ಕಂಡುಕೊಂಡದ್ದನ್ನು ನಾಲ್ಕುನೂರು ವರ್ಷಗಳ ಹಿಂದೆ ಪ್ರತಿಪಾದಿಸಿದ್ದರು ಕನಕದಾಸರು. ಅಷ್ಟೆ‌ಅಲ್ಲ, ಅವರೇನೂ ಕಣ್ಣುಗಳ ಚಿತ್ರ ನೋಡಿ ಜಾಗ್ರತರಾದವರಲ್ಲ. ಸತ್ಯಸಂಧತೆ ಮತ್ತು ಪ್ರಾಮಾಣಿಕತೆಗಳೆಂಬ ತನ್ನ ಒಳಗಣ್ಣುಗಳಿಂದ ಭಗವಂತನನ್ನು ನೋಡಿ ಎಚ್ಚರಗೊಂಡವರು. ಭಗವಂತನಿಲ್ಲದ ಸ್ಥಳವೇ ಇಲ್ಲ ಎಂದು ಎಚ್ಚರಿಸಿದವರು. ಆ ಎಚ್ಚರದಿಂದಲೇ ಉಚ್ಚ ಮಟ್ಟಕ್ಕೇರಿದವರು.

ಸತ್ಯಸಂಧತೆ, ಸರಳತೆ ಮತ್ತು ಪ್ರಾಮಾಣಿಕತೆಗಳು ಮೂರ್ತಿವೆತ್ತಂತಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹಾದೂರ ಶಾಸ್ತ್ರೀಜಿ - ಇವರಿಬ್ಬರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಇವತ್ತಿನ ಅಂಕಣದಲ್ಲಿ ಎಂದಿಗಿಂತ ತುಸು ಭಿನ್ನವಾಗಿ ಹೀಗೊಂದು ವಿಚಾರ ಲಹರಿಯನ್ನು ಹರಿಸಿರುವುದು. ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಆದರ್ಶಗಳನ್ನು ಪಾಲಿಸುವ ಸದ್ಬುದ್ಧಿ ನಮಗೆಲ್ಲರಿಗೂ ಕರುಣಿಸುವಂತೆ ಶಾರದಾಂಬೆಯನ್ನು ಬೇಡುತ್ತಿರುವುದು. ಪರಾಗಸ್ಪರ್ಶ ಓದುಗರೆಲ್ಲರಿಗೂ ನವರಾತ್ರಿ ಮತ್ತು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!