Episodes
Saturday Jan 08, 2011
Abhyaasabala Pradarshana
Saturday Jan 08, 2011
Saturday Jan 08, 2011
ದಿನಾಂಕ 9 ಜನವರಿ 2011ರ ಸಂಚಿಕೆ...
ವಾಕಿಂಗ್ನಲ್ಲೂ ಅಭ್ಯಾಸ‘ಬಲ’ಗೈಯಿಂದ ಸಿಗ್ನಲ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] ಹತ್ತು ತಿಂಗಳ ಪುಟ್ಟ ಮಗು. ತೊದಲುಮಾತನ್ನೂ ಆಡತೊಡಗಿಲ್ಲ. ಇವತ್ತಿನ ನಮ್ಮ ‘ಅಭ್ಯಾಸಬಲ ಪ್ರದರ್ಶನ’ದ ಉದ್ಘಾಟನೆಯ ಗೌರವ ಈ ಪುಟ್ಟ ಪಾಪುವಿನದು! ಅಜ್ಜಿ ದಿನಾ ಊಟ ಮಾಡಿಸುವಾಗ ಶ್ರೀರಾಮನಾಮ ಹೇಳ್ತಾರೆ; ಮಗು ಹಿಗ್ಗಿನಿಂದ ಚಪ್ಪಾಳೆ ತಟ್ಟುತ್ತಾ ಊಟ ಮಾಡುತ್ತೆ. ಮಗುವಿಗೆ ಅದು ಎಷ್ಟು ಅಭ್ಯಾಸವಾಗಿಹೋಗಿದೆಯೆಂದರೆ ಈಗ ಅಜ್ಜಿ ರಾಮನಾಮ ಹೇಳಿಲ್ಲ ಅಂದ್ರೂ ತಾನೇ ಚಪ್ಪಾಳೆ ತಟ್ಟಿ ನೆನಪಿಸುತ್ತದೆ! ಇದು ಅಭ್ಯಾಸಬಲದ ಆಭಾಸ ಅಲ್ಲ, ಮುಗ್ಧಹಾಸ. ಬರೆದುಕಳಿಸಿದವರು ಮಗುವಿನ ಅಜ್ಜಿ ಭದ್ರಾವತಿಯಿಂದ ಮಮತಾ ನಾಗರಾಜ. ಕಳೆದವಾರ ಅಭ್ಯಾಸಬಲದ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದೆನಷ್ಟೆ? ಇಂತಹ ಪತ್ರಾಹ್ವಾನ ಈ ಅಂಕಣದಲ್ಲಿ ಹೊಸತೇನಲ್ಲ. ಈ ಹಿಂದೆಯೂ ಷಟ್ಪದಿ ರಚನೆ, ಲೆಕ್ಕ ಬಿಡಿಸುವಿಕೆ, ನೆಮೊನಿಕ್ಸ್ ಸಂಗ್ರಹ, ಸಿಂಪಲ್ ರಸಪ್ರಶ್ನೆ ಇತ್ಯಾದಿ ವಿವಿಧ ಚಟುವಟಿಕೆಗಳಾಗಿವೆ. ಆದರೆ ಇವತ್ತಿನದು ಅವೆಲ್ಲಕ್ಕಿಂತ ಭಿನ್ನವಾದ ಪ್ರದರ್ಶನ. ಇದು ಸ್ವಾನುಭವಗಳ ಸೊಗಸಾದ ಕಥನ. ಒಂದೊಂದು ಪತ್ರದಲ್ಲೂ ಬರೆದವರೇ ಬಂದು ಮಾತನಾಡಿದಂಥ ರೋಮಾಂಚನ. ಕಣ್ಮುಂದೆ ಸುಳಿದು ಮಂದಹಾಸ ಮೂಡಿಸುವ ಚಿತ್ರಣ. ಇದೋ ಇಲ್ಲಿದೆ ಅಭ್ಯಾಸಬಲ ಕುರಿತಂತೆ ಓದುಗರ ಸ್ಪಂದನದ ಸಂಕಲನ. ‘ಬರೆದಾತನೇ ಮಾತನಾಡಿದ...’ ಎಂದೆನಲ್ಲಾ, ಬೆಂಗಳೂರಿನ ರೋಹಿತ್ ಚಕ್ರತೀರ್ಥ ಅದನ್ನೇ ಮಾಡಿದ್ದಾರೆ. ಅಭ್ಯಾಸಬಲದ ಬಗ್ಗೆ ಅಂದವಾದೊಂದು ಲೇಖನ ಬರೆದು ಸ್ವತಃ ಓದಿ ಧ್ವನಿಮುದ್ರಣ ಮಾಡಿ ‘ಸ್ವರಪತ್ರ’ವಾಗಿ ನನಗೆ ಇಮೇಲ್ ಮಾಡಿದ್ದಾರೆ! ಅವರು ಬರೆದ ಹಲವಾರು ‘ಅಬ’ (ಅಭ್ಯಾಸಬಲ)ಗಳ ಪೈಕಿ ಜಸ್ಟ್ ಒಂದು- ನಮ್ಮಲ್ಲಿ ಎಷ್ಟೋ ಜನರಿಗೆ ಬೆಳಗ್ಗೆ ಪ್ರಕೃತಿಯ ಕರೆಗೆ ಓಗೊಡಲು ಕಣ್ಣನ್ದೇವರ ಅನುಗ್ರಹ ಬೇಕಾಗುತ್ತದೆ. ಹೌದು, ಬೆಳಗಾವಿಯ ನಿತ್ಯಾನಂದ ಭಟ್ರಂಥವರಿಗೆ ಆಗ ಕೈಯಲ್ಲೊಂದು ಪುಸ್ತಕವೋ ಪತ್ರಿಕೆಯೋ ಬೇಕಾಗುತ್ತದೆ. ಇಲ್ಲದಿದ್ದರೆ ‘ಆಗುವುದೇ’ ಇಲ್ಲ. ಕಾರ್ಕಳದ ದರ್ಶನ್ ಜೈನ್ ಅವರಿಗೆ ಊಟ ಮಾಡುವಾಗಲೂ ಕೈಯಲ್ಲಿ ಪುಸ್ತಕ ಅಥವಾ ಪತ್ರಿಕೆ ಬೇಕು, ಕನಿಷ್ಠ ಮೊಬೈಲ್ನಲ್ಲಿ ಮೆಸೇಜುಗಳ ಪಠಣವಾದರೂ ಆಗಬೇಕು. ಹೈಸ್ಕೂಲ್ಗೆ ಹೋಗಲು ಆಶ್ರಮದಲ್ಲಿದ್ದಾಗ ಅಲ್ಲಿ ಊಟದವೇಳೆ ಮಂತ್ರಗಳ ಪುಸ್ತಕ ಹಿಡಿದುಕೊಳ್ಳುತ್ತಿದ್ದಾಗಿನ ಅಬ ಇದು ಎನ್ನುತ್ತಾರವರು. ಊಟವಾದ ಮೇಲೆ ತಟ್ಟೆಯಲ್ಲೇ ಕೈತೊಳೆಯುವ ಅಬ ಬೆಂಗಳೂರಿನ ಜಿ.ಕೃಪಾ ಅವರಿಗೆ. ಹೊಟೇಲುಗಳಲ್ಲಾದರೆ ‘ತಟ್ಟೆಯಲ್ಲಿ ಕೈ ತೊಳೆಯಬೇಡಿ’ ಬೋರ್ಡ್ ಇರುತ್ತೆ, ಮನೆಗಳಲ್ಲಿ ಇರುವುದಿಲ್ಲ. ಮದುವೆಯಾದ ಹೊಸತರಲ್ಲಿ ಅವರೊಮ್ಮೆ ಮಡಿವಂತ ನೆಂಟರಲ್ಲಿಗೆ ಹೋಗಿದ್ದಾಗ ಅಲ್ಲೂ ತಟ್ಟೆಯಲ್ಲೇ ಕೈ ತೊಳೆದು ಆಭಾಸಕ್ಕೊಳಗಾಗಿದ್ದರಂತೆ. ಇನ್ನೊಂದು ತಮಾಷೆಯ ಅನುಭವ, ಶ್ರೀವರ ಮೈಸೂರು ಅವರಿಂದ- “ನನ್ನ ಸ್ನೇಹಿತೆಯ ಪತಿಯ ಹೆಸರು ವೇದ್. ಅವರಿಗೆ Ve ಎಂದು ಟೈಪಿಸಿದ ನಂತರ d ಅಕ್ಷರ ತನ್ನಿಂತಾನೇ ಬರುತ್ತದೆ. ಒಮ್ಮೆ ನನ್ನನ್ನು ಡಿನ್ನರ್ಗೆ ಕರೆದು ಅದಕ್ಕೆಮೊದಲು ಕಂಪ್ಯೂಟರ್ ಚಾಟ್ನಲ್ಲೇ `Deciding the menu. will you have Ved biryani?' ಎಂದು ಕೇಳಿ ಗಾಬರಿಪಡಿಸಿದ್ದರು!” ಫೋನ್ ಮಾಡುವಾಗಿನ ಅಬ ಅವಾಂತರಗಳನ್ನು ಕೆಲವರು ಬರೆದಿದ್ದಾರೆ. “ನಮ್ಮನೆಯಲ್ಲಿ ಫೋನಿನ ಪಕ್ಕ ಯಾವಾಗಲೂ ಒಂದು ಕುರ್ಚಿಯಿರುತ್ತದೆ. ಆದಿನ ಮಕ್ಕಳು ಅದನ್ನೆಲ್ಲೋ ಬೇರೆಡೆ ಇಟ್ಟಿದ್ದರು. ರಾತ್ರಿ ಫೋನ್ ಬಂತು. ಬೆಳಕಿರಲಿಲ್ಲ. ಅಭ್ಯಾಸದಂತೆ ಹಲೋ ಹೇಳಿಕೊಂಡು ಕುಳಿತೆ. ಆಮೇಲೇನಾಯ್ತು ನೀವೇ ಊಹಿಸಿ. ಮನೆಯಲ್ಲಿದ್ದವರೆಲ್ಲ ಎದ್ದುಬಂದಿದ್ದರು ನಾನು ಕಿರುಚಿದ್ದು ಕೇಳಿ! ಫೋನಿನಲ್ಲಿ ಇದ್ದವರೂ ಗಾಬರಿಯಾಗಿ ರಾಂಗ್ನಂಬರ್ ಅಂತ ಕೆಳಗಿಟ್ಟರು”- ವೀಣಾ ಅನಂತ ಭಟ್, ಬೆಂಗಳೂರು. ಪ್ರೀತಿಸಿ ಈಗ ಮದುವೆ ನಿಶ್ಚಯದವರೆಗೂ ಆಗಿರುವ ಪ್ರಿಯತಮೆಯೊಂದಿಗೆ ಮಾತಾಡಲೆಂದು ಫೋನಾಯಿಸಿದಾಗ ಆಕೆಯ ಅಪ್ಪ/ಅಮ್ಮ ಫೋನೆತ್ತುತ್ತಾರೆಂಬ ಕಲ್ಪನೆಯೂ ಇಲ್ಲದೆ ಹುಡುಗಿಗೆ ಪ್ರೀತಿಯಿಂದ ದಬಾಯಿಸುವ ಮಾತುಗಳನ್ನಾಡಿದ್ದನ್ನೋ ಪಿಸುಮಾತಿನಲ್ಲಿ ಪ್ರೇಮಸೂಚಿಸಿದ್ದನ್ನೋ ನೆನೆದುಕೊಂಡಿದ್ದಾರೆ ಚನ್ನಪಟ್ಟಣದ ರಾಮು ಬೇವೂರ್. “ನನ್ನ ಶ್ರೀಮತಿಗೆ ಯಾರಾದರೂ ಫೋನ್ನಲ್ಲಿ ಹಬ್ಬಹರಿದಿನಗಳ ಕುರಿತು ಮಾತಾಡಿದರೆ ‘ಜೋರಾಯ್ತಲ್ಲ!’ ಎಂದು ಸಂತೋಷದ ಉದ್ಗಾರ ಬರುತ್ತದೆ. ಮೊನ್ನೆ ವೈಕುಂಠಏಕಾದಶಿ ದಿವಸ ದೂರದ ಸಂಬಂಧಿಕರೊಬ್ಬರು ವೈಕುಂಠವಾಸಿಗಳಾದರು ಎಂದು ಮಿತ್ರರು ಫೋನ್ನಲ್ಲಿ ಹೇಳುತ್ತಿದ್ದಂತೆಯೇ, ಇವಳು ‘ಹೌದೆ? ಜೋರಾಯ್ತಲ್ಲ!’ ಎನ್ನಬೇಕೇ!” ಎಂದು ಬರೆದಿದ್ದಾರೆ ಬೆಳಗಾವಿಯ, ಸದ್ಯ ಅಮೆರಿಕದ ಒಹಯೋದಲ್ಲಿರುವ, ಶ್ರೀನಿವಾಸ ಕಟ್ಟಿ. ವೈಕುಂಠಏಕಾದಶಿಯಂದು ಮಂದಿರದಲ್ಲಿ ವೈಕುಂಠ ದ್ವಾರದರ್ಶನ ಇದೆಯಂತ ಆಟೋರಿಕ್ಷಾ ಮೇಲೆ ಲೌಡ್ಸ್ಪೀಕರ್ ಕಟ್ಟಿ ನಗರದಲ್ಲೆಲ್ಲ ಎನೌನ್ಸ್ ಮಾಡಲು ಒಬ್ಬ ಹುಡುಗನನ್ನು ನೇಮಿಸಿದರೆ ಅವನು ರಾಯರಮಠದಲ್ಲಿ ಆರಾಧನೆ ವೇಳೆ ಕೆಲ್ಸ ಮಾಡಿದ ತನ್ನ ಅನುಭವದಿಂದ ‘ನಾಳೆ ವೈಕುಂಠ ಸಮಾರಾಧನೆ ಎಲ್ಲರೂ ಬನ್ನಿ...’ ಎಂದು ಉದ್ಘೋಷಿಸಿದ್ದನ್ನು ನೆನೆಸಿಕೊಂಡಿದ್ದಾರೆ ಬೆಂಗಳೂರಿನ ವೆಂಕಟೇಶಮೂರ್ತಿ ಗಂಜೂರು. ತೀರ್ಥಹಳ್ಳಿಯ ತಮ್ಮಮನೆಯಲ್ಲಿ ಅತ್ತೆ ತೀರಿಹೋದ ಮಾರನೆದಿನ ಬೆಳಿಗ್ಗೆ ಕಸಗುಡಿಸುವಾಗ, ಅವರು ಇನ್ನೇನು ಪ್ರಾತರ್ವಿಧಿಗಳಿಗಾಗಿ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಾರಂತ ತಾನು ಪಕ್ಕಕ್ಕೆ ಸರಿದು ನಿಂತುಕೊಂಡ, ಕೆಲ ದಿನಗಳಾದ ಮೇಲೂ ಊಟಕ್ಕೆ ಅವರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಅವರಿಗೂ ತಟ್ಟೆ ಇಡುತ್ತಿದ್ದ ಭಾವುಕ ಕ್ಷಣಗಳ ನೆನಪು ಬೆಂಗಳೂರಿನ ಮಾಲತಿ ಶೆಣೈ ಅವರಿಗೆ. “ನಾನು ಕಾಲೇಜಿಗೆ ಹೋಗುವಾಗಲೂ ‘ಅಮ್ಮ ಶಾಲೆಗೆ ಹೋಗಿಬರ್ತೇನೆ’ ಎಂದೇ ಹೇಳುತ್ತಿದ್ದೆ. ಒಮ್ಮೆ ಅಮ್ಮ ಮನೆಯಲ್ಲಿರಲಿಲ್ಲ, ನಾನೇ ಬಾಗಿಲಿಗೆ ಬೀಗವನ್ನೂ ಹಾಕಿ ಹೊರಡುವಾಗ ‘ಅಮ್ಮ ಶಾಲೆಗೆ ಹೋಗಿಬರ್ತೇನೆ’ ಎಂದಿದ್ದೆ, ಉತ್ತರ ಬಾರದೆ ಪೆಚ್ಚಾಗಿದ್ದೆ” - ಉಡುಪಿಯ ನೀರಜಾ ಹೊಳ್ಳ ನಿವೇದನೆ. ಜಗವೇ ನಾಟಕರಂಗ ಎಂದುಕೊಂಡರೆ ಅಲ್ಲೂ ಆಭಾಸಗಳಾಗುವುದಿದೆ. ನಾಟಕದ ಡೈಲಾಗ್ಸ್ ಅಭ್ಯಾಸ ಮಾಡಿಮಾಡಿ ಸ್ವಂತ ಹೆಂಡತಿಯನ್ನೇ ನಾಟಕದಲ್ಲಿನ ಹೆಂಡತಿಯ ಪಾತ್ರದ ಹೆಸರಿನಿಂದ ಕರೆದು ಪೇಚಿಗೆ ಸಿಲುಕಿದ್ದ, ಪೌರಾಣಿಕ ನಾಟಕದ ಗುಂಗಿನಲ್ಲಿ ಭಲೇಭಲೇ, ಅಗ್ರಜನೇ, ದೇವಾ, ಪರಮಾತ್ಮಾ ಎಂದು ಗುನುಗುತ್ತಿದ್ದ ಮಿತ್ರನ ಬಗ್ಗೆ ಬರೆದಿದ್ದಾರೆ ಚನ್ನಪಟ್ಟಣದ ಆನಂದ ಆಣಿಗೆರೆ. “ದ್ರೌಪದೀಪರಿಣಯ ನಾಟಕದಲ್ಲಿ ದ್ರೌಪದಿ ಪಾತ್ರ ಮಾಡಿದವ ನನ್ನೊಬ್ಬ ಸಹಪಾಠಿ. ಯಾವ ಕ್ಷತ್ರಿಯನನ್ನೂ ಒಲ್ಲದೆ ದ್ರೌಪದಿ ನಾಚಿ ನಿಲ್ಲುವ ಸಂದರ್ಭದಲ್ಲಿ ಅವನ ಅಬ ಕೈಕೊಟ್ಟೇಬಿಟ್ಟಿತು. ದ್ರೌಪದಿ ಉಟ್ಟಿದ್ದ ಪಟ್ಟೆಸೀರೆಯನ್ನು ವೇಸ್ಟಿ ಮೇಲೆತ್ತಿ ಕಟ್ಟಿದಂತೆ ಕಟ್ಟಿ ರಾಜಸಭೆಯಲ್ಲಿ ನಾಚುತ್ತಾ ನಿಂತಳು! ಆಗ ನಮ್ಮದು ಮುಗಿಲುಮುಟ್ಟುವ ಕರತಾಡನ! ವುಲ್ಫ್ ವಿಶಲ್! ದ್ರೌಪದಿ ಹೌಹಾರಿ ನೇಪಥ್ಯಕ್ಕೆ ಸರಿದುಬಿಟ್ಟಳು. ಅಂದಿನ ದ್ರೌಪದೀಪರಿಣಯ ನಮಗೆ ಕಾಮಿಡಿ ಆಯಿತು” ಎಂದು ನೆನಪಿಸಿಕೊಂಡಿದ್ದಾರೆ ಬೆಂಗಳೂರಿನ ಎಸ್.ಎಂ.ಪೆಜತ್ತಾಯ. ಕಳೆದ ವಾರದ ಲೇಖನದಲ್ಲಿ ಇಸವಿ ಬದಲಾಗುವಾಗಿನ ಅಬ ಕುರಿತು ಓದಿದ ಮೇಲೂ ಅಪಾರ್ಟ್ಮೆಂಟ್ನ ಬಾಡಿಗೆ ಕೊಡಲು ಚೆಕ್ನಲ್ಲಿ 2010 ಎಂದೇ ಬರೆದು ಚೆಕ್ ಪಡೆದುಕೊಳ್ಳುವವರು ನೆನಪಿಸಬೇಕಾಗಿ ಬಂದದ್ದನ್ನು ಪ್ರಾಮಾಣಿಕವಾಗಿ ತಿಳಿಸಿದ್ದಾರೆ ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್. ಲೇಖನದ ಪರಿಣಾಮವೋ ಎಂಬಂತೆ ಈಸಲ ಜನವರಿ ಮೊದಲವಾರದಲ್ಲಿ ಬ್ಯಾಂಕಿಗೆ ಹೋದಾಗ ಚೆಕ್ ಮೇಲೆ 2011 ಎಂದು ಪ್ರಜ್ಞಾಪೂರ್ವಕವಾಗಿ ಬರೆದಿದ್ದೇನೆಂದಿದ್ದಾರೆ ಹೈದರಾಬಾದ್ನಿಂದ ಅಚ್ಯುತಮೂರ್ತಿ. ನಿವೃತ್ತ ಬ್ಯಾಂಕ್ ಉದ್ಯೋಗಿ ಬೆಂಗಳೂರಿನ ಡಿ.ಬಿ. ಪ್ರಾಣೇಶ ರಾವ್ ಹೇಳುತ್ತಾರೆ- “ಬ್ಯಾಂಕುಗಳ ಲೆಕ್ಕಪತ್ರಗಳಲ್ಲಿ ಅಂಕೆಗಳನ್ನು ಚಿತ್ತುಮಾಡುವುದು, ತಿದ್ದುವುದು, ಹೊಡೆದುಹಾಕುವುದು ಮಾಡಬಾರದು. ಅಕಸ್ಮಾತ್ ಮಾಡಿದರೂ ಅಲ್ಲೇ ಪಕ್ಕ ಇನಿಶಿಯಲ್ಸ್ ಹಾಕಬೇಕು. ಕೆಲವೊಮ್ಮೆ ಮೇಲಧಿಕಾರಿಯಿಂದ ಹಾಕಿಸಬೇಕು. ಬ್ಯಾಂಕಿಗರಾಗಿ ನಮಗೆ ಅದು ಎಷ್ಟು ಅಬ ಎಂದರೆ ಮಿತ್ರರಿಗೆ ಸಂಬಂಧಿಕರಿಗೆ ಖಾಸಗಿ ಪತ್ರ ಬರೆವಾಗ ಚಿತ್ತಾದರೂ ಅಲ್ಲೇಪಕ್ಕ ಇನಿಶಿಯಲ್ಸ್ ಹಾಕ್ತೇವೆ!” ಇಪ್ಪತ್ತೈದು ವರ್ಷಗಳ ಹಿಂದೆ ತಮ್ಮ ಬ್ಯಾಂಕಿನ ಸೈಂಟ್ಜಾನ್ಸ್ ಮೆಡಿಕಲ್ ಕಾಲೇಜ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಾಟರ್ಟ್ಯಾಂಕ್ ಹತ್ತಿರದ ಗೇಟಿನ ಶಾರ್ಟ್ಕಟ್ ಮೂಲಕ ಹೋಗುತ್ತಿದ್ದುದನ್ನೂ, ಒಮ್ಮೆ ಆ ಗೇಟ್ ರಿಪೇರಿಗೆಂದು ದೀರ್ಘಾವಧಿ ಕ್ಲೋಸ್ ಮಾಡಿದ್ದಾಗ ಪಕ್ಕದಲ್ಲೇ ಗೋಡೆ ಮೇಲಿಂದ ಜಂಪ್ ಮಾಡಿ ಹೋಗುತ್ತಿದ್ದುದನ್ನೂ, ಕಾಲಾನುಕ್ರಮದಲ್ಲಿ ಗೇಟ್ ರಿಪೇರಿ ಆಗಿ ತೆರೆದುಕೊಂಡಿದ್ದರೂ ಎಲ್ಲರೆದುರೇ ತಾನು ಗೋಡೆ ಜಂಪ್ ಮಾಡಿ ಮುಜುಗರಕ್ಕೊಳಗಾದದ್ದನ್ನೂ ನೆನೆಸಿಕೊಂಡಿದ್ದಾರೆ ಬೆಂಗಳೂರಿನ ಲಕ್ಷ್ಮೀನಾರಾಯಣ ಹೊಳ್ಳ. ಟೂವ್ಹೀಲರ್ ಮೇಲೆ ಓಡಾಡಿಯೇ ಅಭ್ಯಾಸವಾಗಿ ಈಗ ಕಾಲ್ನಡಿಗೆಯಲ್ಲಿ ಹೋಗುವಾಗಲೂ ಎಡಕ್ಕೆ ಅಥವಾ ಬಲಕ್ಕೆ ಟರ್ನ್ ತೆಗೆದುಕೊಳ್ಳುವುದಿದ್ದರೆ ಬಲಗೈ ತನ್ನಿಂತಾನೇ ಬೀಸತೊಡಗಿ ಸಿಗ್ನಲ್ ಮಾಡುತ್ತದೆಯಂತೆ ಬೆಂಗಳೂರಿನ ಆಯುರ್ವೇದ ವೈದ್ಯ ವಾಸುಕೀಶಯನ ಅವರಿಗೆ. ಧಾರವಾಡದ ಗೌರಿ ಹಿರೇಮಠ ಕಾಲ್ನಡಿಗೆಯಲ್ಲಿ ಹೋಗುವಾಗ ಲೆಫ್ಟ್ ಅಥವಾ ರೈಟ್ ಟರ್ನ್ ಮಾಡುವ ಮೊದಲು ಸೈಡ್ ಮಿರರ್ ನೋಡುವ ವಿಫಲ ಯತ್ನ ಮಾಡುತ್ತಾರಂತೆ! ಗಿಯರ್ ಇರುವ ಕಾರು (ಅಮೆರಿಕದಲ್ಲಿ ‘ಸ್ಟಿಕ್ಶಿಫ್ಟ್’ ಅಂತಾರೆ) ಚಲಾಯಿಸಿಯೇ ಅಭ್ಯಾಸವಾಗಿ ಆಮೇಲೆ ಆಟೊಟ್ರಾನ್ಸ್ಮಿಷನ್ ಕಾರನ್ನು ಡ್ರೈವ್ ಮಾಡುವಾಗ ಗಿಯರ್ಚೇಂಜ್ ಮಾಡಲಿಕ್ಕಂತ ಹೋಗಿ ಕಾರು ನ್ಯೂಟ್ರಲ್ಗೆ ಬಂದು ನಡುರಸ್ತೆಯಲ್ಲಿ ನಿಂತು ಪೇಚಾಟವಾಗಿದೆ ಟೆಕ್ಸಾಸ್ನ ಮೀನಾ ಭಾರದ್ವಾಜ್ ಅವರಿಗೆ. ಮೈಸೂರಿನ ಸುಮಾ ಕೃಷ್ಣ ಅವರಿಗೆ ಇನ್ನೊಂಥರದ ಪಜೀತಿ ಎದುರಾಗಿತ್ತಂತೆ. ಅವರು ಹೊಸ ಕಾರು ಡ್ರೈವ್ ಮಾಡಿಕೊಂಡು ಶಾಪಿಂಗ್ಗೆ ಹೋಗಿದ್ದಾರೆ. ಶಾಪಿಂಗ್ ಮುಗಿಸಿ ಹೊರಬಂದಾಗ ಅದಾಗಲೇ ಮಾರಿದ್ದ ಹಳೇಕಾರನ್ನು ಕೊಂಡವರೂ ಅಲ್ಲೆಲ್ಲೋ ಆ ಕಾರು ಪಾರ್ಕ್ ಮಾಡಿದ್ದಾರೆ. ಇವರು ಹೊಸ ಕಾರಿನ ಬೀಗದಕೈಯಿಂದ ಹಳೇ ಕಾರಿನ ಬಾಗಿಲು ತೆರೆಯಲು ಒದ್ದಾಟ ನಡೆಸಿದ್ದಾರೆ. ಸುತ್ತಲಿದ್ದವರು ಇವರನ್ನು ಕಾರ್ ಕಳ್ಳಿ ಎಂದುಕೊಳ್ಳುವ ಪರಿಸ್ಥಿತಿ ಬಂದಿದೆ. ಆಮೇಲಷ್ಟೇ ಅವರಿಗೆ ಇದು ಅಬ ಅವಾಂತರ ಅಂತ ಗೊತ್ತಾಗಿದೆ. ಇನ್ನು, ಆಫೀಸಿನಲ್ಲಿ ಸೆಕ್ಯುರಿಟಿಗೋಸ್ಕರ ಆಕ್ಸೆಸ್ಕಾರ್ಡ್ ಮೂಲಕವೇ ಬಾಗಿಲು ತೆರೆಯುವ ವ್ಯವಸ್ಥೆಗೆ ಒಗ್ಗಿಕೊಂಡು ಈಗ ಮನೆಯಲ್ಲಿ ಅಥವಾ ಅಂಗಡಿಯಲ್ಲಿ ಬಾಗಿಲು ಮುಚ್ಚಿದ್ದರೆ ತೆರೆಯಲು ಕೊರಳಲ್ಲಿ ನೇತಾಡುವ ಆಕ್ಸೆಸ್ಕಾರ್ಡ್ನಿಂದ ಟ್ರೈ ಮಾಡಿದ ಸಂದರ್ಭಗಳಿವೆ ಎನ್ನುತ್ತಾರೆ ಮೈಸೂರಿನಿಂದ ಸುಧೀಂದ್ರ ಮುಕ್ಕೂರು. ಡಿವಿಡಿಯಲ್ಲಿ ಸಿನೆಮಾ ನೋಡುವಾಗ ಹಾಡು ಬಂದಲ್ಲೆಲ್ಲ ಫಾಸ್ಟ್ಫಾರ್ವರ್ಡ್ ಮಾಡಿ ಅಭ್ಯಾಸವಾಗಿ ಸಿನೆಮಾಥಿಯೇಟರ್ನಲ್ಲೂ ಹಾಡುಬಂದಾಗ “ಲೇ ಮುಂದೆ ಓಡ್ಸಲೇ” ಎಂದು ಕಿರುಚಿದ್ದಿದೆ ಎನ್ನುತ್ತಾರೆ ಗಂಗಾವತಿಯ ಲಿಂಗರಾಜ ಜನಾದ್ರಿ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಂತರ ಈಗ ಲಿನಕ್ಸ್ ಬಳಸುವಾಗ ಹಳೇಚಾಳಿಯಿಂದ ಮೌಸ್ ರೈಟ್ಕ್ಲಿಕ್ ಮಾಡಿ ಸ್ಕ್ರೀನ್ ರಿಫ್ರೆಶ್ ಮಾಡಲು ನೊಡುತ್ತೇನೆನ್ನುತ್ತಾರೆ ಹುಬ್ಬಳ್ಳಿಯ ಅರವಿಂದ ಚಕ್ರವರ್ತಿ. ಇದೆಲ್ಲ ಯಾಂತ್ರೀಕೃತ ಬದುಕಿನ ಅಬ ಎನ್ನೋಣವೇ? ಉಡುಪಿಯ ಸುಧೀರ್ ಶೆಣೈ ದೇವಸ್ಥಾನದಲ್ಲಿ ತೀರ್ಥ ತಗೊಂಡು ತಲೆಮೇಲೆ ಕೈ ನೇವರಿಸುವ ಅಭ್ಯಾಸವಾಗಿ ಪಂಚಾಮೃತ ತಗೊಂಡಮೇಲೂ ಹಾಗೆಮಾಡಿದ್ದಿದೆಯಂತೆ. ಆಫ್ರಿಕಾದ ಟಾಂಜಾನಿಯಾದಲ್ಲಿರುವ ಗಣೇಶ ಹತ್ವಾರ್ ಮದುವೆಗೆ ಮುನ್ನ ಆಗೊಮ್ಮೆ ಈಗೊಮ್ಮೆ ಲೈನ್ ಹೊಡೆವ ಅಭ್ಯಾಸವಿದ್ದವರು ಮದುವೆ ಆದಮೇಲೆ ಹೆಂಡತಿಯ ಜತೆ ವಾಕ್ ಹೋಗುವಾಗ ಎದುರಿಗೆ ಬಂದ ತರುಣಿಯನ್ನು ಗಮನಿಸಿ ‘ವಾಹ್ ಎಂಥ ಫಿಗರ್!’ ಎಂದದ್ದಿದೆಯಂತೆ. ಒಟ್ಟಿನಲ್ಲಿ ಅಬ್ಬಾ ಎನ್ನುವಷ್ಟಿದೆ ಅಬ ಅವಾಂತರಗಳ ಹರವು. ಸ್ಥಳಾಭಾವದಿಂದ ಕೆಲವು ಪತ್ರಗಳನ್ನು ಕೈಬಿಡಬೇಕಾಗಿ ಬಂದಿದೆ. ಆದರೂ ಇದೊಂದು ಲೇಟೆಸ್ಟ್ ಅಬ ಆಭಾಸವನ್ನು ಉಲ್ಲೇಖಿಸಲೇಬೇಕು. ಬೆಂಗಳೂರಿನ ಉಷಾ ಉಮೇಶ್ ಬರೆದುಕಳಿಸಿದ್ದಾರೆ. ಮಗಳನ್ನು ಕೆಲವೊಮ್ಮೆ ಪ್ರೀತಿಯಿಂದ ‘ರಾಜಾ’ ಎಂದು ಕರೆಯುವ ಅವರ ಅಭ್ಯಾಸ ಈಗ ೨ಜಿ ಸ್ಪೆಕ್ಟ್ರಂ ಹಗರಣದ ನಂತರ ತೀವ್ರ ಮುಜುಗರದ ವಿಚಾರವಾಗಿದೆಯಂತೆ, ಅಮ್ಮ-ಮಗಳು ಇಬ್ಬರಿಗೂ! ಅಭ್ಯಾಸಬಲ ಪ್ರದರ್ಶನ ಇಲ್ಲಿಗೆ ಮುಗಿದುದು. ಭಾಗವಹಿಸಿದವರಿಗೆಲ್ಲ ಧನ್ಯವಾದಗಳು. ======== [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.