Episodes
Saturday Nov 05, 2011
Alliteration Everywhere
Saturday Nov 05, 2011
Saturday Nov 05, 2011
ದಿನಾಂಕ 06 ನವೆಂಬರ್ 2011ರ ಸಂಚಿಕೆ...
ಎಲ್ಲಿಂದ ಎಲ್ಲಿಗೆ ಎಲ್ಲಿಟರೇಷನ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ವೇಸ್ಟ್ ಲೇಖನದ ಕೊನೆಯ ವಾಕ್ಯ ಬೇರೆಬೇರೆ ಓದುಗರನ್ನು ಬೇರೆಬೇರೆ ಕಾರಣಗಳಿಂದ ಆಕರ್ಷಿಸಿದೆ. ಅದೊಂಥರ ಪಂಚ್ಲೈನ್ ರೀತಿಯಲ್ಲಿ ಖುಷಿಕೊಡ್ತು ಎಂದು ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಬೂಕಿನಕೆರೆ ಅಲ್ಲ ಬೂಕನಕೆರೆ ಅಂತಿರಬೇಕಿತ್ತು ಎಂದು ತಿದ್ದುಪಡಿ ತಿಳಿಸಿದವರಿದ್ದಾರೆ. ಯಡ್ಯೂರಪ್ಪನವರನ್ನು ಏಕವಚನದಲ್ಲಿ ಗುರುತಿಸಿದ್ದು ಒಳ್ಳೆಯದೆನಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದವರೂ ಇದ್ದಾರೆ. ಸೊರಬದಿಂದ ರಂಗನಾಥ ಬಾಪಟ್ ಬರೆದಿದ್ದಾರೆ- “ತೀರಾ ಬೂಕನಕೆರೆಯವನ ಅಂತ ಬರೆಯುವುದು ವಿಕದಂಥ ಪತ್ರಿಕೆಗೆ, ಪರಾಗಸ್ಪರ್ಶದಂಥ ಅಂಕಣಕ್ಕೆ ಚೆನ್ನಾಗಿ ಕಾಣೋಲ್ಲ. ಹಾಗೆ ಬರೆಯಲು ಬೇರೆ ಪತ್ರಿಕೆಗಳಿದ್ದಾವೆ. ನಿಮಗೆ ಗೊತ್ತಿರಬಹುದು, ಕಾರ್ಯದರ್ಶಿ ಬರೆದುಕೊಟ್ಟ ಮೆಮೊರಾಂಡಮ್ನಲ್ಲಿ ‘ಇಂದಿರಾ, ಜವಾಬ್ ದೋ’ ಅಂತಿದ್ದದ್ದನ್ನು ವಾಜಪೇಯಿಯವರು ಓದುವಾಗ ‘ಇಂದಿರಾಜೀ ಜವಾಬ್ ದೀಜಿಯೇ’ ಎಂದು ತಿದ್ದಿಕೊಂಡು ಓದಿದ್ದರಂತೆ.” ಹಾಗೆ ನೀವೂ ತಿದ್ದಿಕೊಂಡು ಓದಿ ಎಂದು ನಾನಿಲ್ಲಿ ಹೇಳುತ್ತಿಲ್ಲ. ಏಕವಚನದಲ್ಲಿ ಬರೆದದ್ದೇ ಸರಿ ಎಂದು ಉಡಾಫೆ ತೋರಿಸುತ್ತಲೂ ಇಲ್ಲ. ನಾನು ಆ ವಾಕ್ಯವನ್ನು ಬರೆದದ್ದು ಯಡ್ಯೂರಪ್ಪನವರಿಗೆ ಅಗೌರವ ಸೂಚಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ಅಲ್ಲ. ಅಲ್ಲೊಂದು ಪದವಿನೋದ ಇತ್ತು. ಬಾಕ್ಸ್ಟರ್, ಬಿಜಿನೆಸ್, ಬೂಕನಕೆರೆ ಮತ್ತು ಬೆರಳಸಂಕೇತ ಈ ನಾಲ್ಕೂ ಪದಗಳು ಬಕಾರದಿಂದಲೇ (ಬಾ ಬಿ ಬೂ ಬೇ) ಆರಂಭವಾಗಿದ್ದವು. ಹೀಗೆ ವಾಕ್ಯದ ಎಲ್ಲ ಪದಗಳೂ ಒಂದೇ ಅಕ್ಷರ/ಉಚ್ಚಾರದಿಂದ ಆರಂಭವಾದರೆ ಅದನ್ನು ‘ಅನುಪ್ರಾಸ’ ಎನ್ನುತ್ತಾರೆ. ಇಂಗ್ಲಿಷ್ನಲ್ಲಿ alliteration ಎಂದು ಹೆಸರು. ತತ್ಕ್ಷಣಕ್ಕೆ ನೆನಪಾಗುವುದೆಂದರೆ ಅತಿಪ್ರಸಿದ್ಧ ಇಂಗ್ಲಿಷ್ ಎಲ್ಲಿಟರೇಷನ್ ವಾಕ್ಯ Peter piper picked a peck of pickled peppers. ಇನ್ನೊಂದು, ಎಲ್ಲಿಟರೇಷನ್ ಆಗಿದ್ದರೂ ಹೃಸ್ವ ರೂಪದಲ್ಲೇ ಪ್ರಖ್ಯಾತವಾಗಿ ಜಗದಗಲ ಹರಡಿರುವ world wide web (www). ಅದರ ಕೃಪೆಯಿಂದಲೇ ನನಗೆ ಗೊತ್ತಾದದ್ದು, ಏನೆಂದರೆ ಆ ‘ಪೀಪಿಯೂದುವ ಪೀಟರನ ಪಚ್ಚಡಿ ಪೀಕಲಾಟದ ಪದವಿನೋದ’ ಹುಟ್ಟಿದ್ದು ಜಾನ್ ಹಾರ್ರಿಸ್ (1756-1846) ಎಂಬಾತ ಬರೆದ Peter Piper's Practical Principles of Plain and Perfect Pronunciation ಪುಸ್ತಕದಲ್ಲಿ! ಅನುಪ್ರಾಸ ನನಗೆ ತುಂಬಾ ಇಷ್ಟ. ಅಂಕಣದ ತಲೆಬರಹ ಅಲಂಕರಣಕ್ಕೆ ನಾನು ಆಗಾಗ ಅನುಪ್ರಾಸ ಬಳಸುತ್ತೇನೆ. ‘ತವರೂರಿಂದ ತಿಂಡಿ ತರುವಾಗ ತರಾವರಿ ತೊಂದರೆ’, ‘ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್’, ‘ಮಧ್ಯರಾತ್ರಿ ಮೈಸೂರುಪಾಕ್ ಮೆಲ್ಲುವಾಸೆ’, ‘ಚೆಲುವಗನ್ನಡದಲ್ಲಿ ಚಿತ್ರಕಾವ್ಯದ ಚಮತ್ಕಾರ’, ಮತ್ತು ಇತ್ತೀಚೆಗಿನ ‘ಮತ್ತೂಮತ್ತೂ ಮನಸ್ಸಲ್ಲುಳಿವ ಮತ್ತೂರಜ್ಜ’ ಮುಂತಾದ ಶೀರ್ಷಿಕೆಗಳು ನಿಮಗೆ ನೆನಪಿರಬಹುದು. ಈರೀತಿ ಎಲ್ಲಿಟರೇಷನ್ ರಚಿಸುವುದೊಂದೇ ಅಲ್ಲ, ಸಾಹಿತ್ಯದಲ್ಲಿ, ಆಡುಮಾತಿನಲ್ಲಿ ಅಲ್ಲಲ್ಲಿ ಕಾಣಸಿಗುವ ಎಲ್ಲಿಟರೇಷನ್ಅನ್ನು ಗುರುತಿಸಿ ಆನಂದಿಸುವುದು ಸಹ ನನಗೆ ಇಷ್ಟವೇ. ಇವತ್ತು ಆ ‘ಚಟ’ವನ್ನು ನಿಮಗೂ ತಗುಲಿಸಬೇಕೆಂದು ಒಂದು ಚಿಕ್ಕ ಬಯಕೆ. ಅದಕ್ಕೋಸ್ಕರ ಅಂಕಣವಿಡೀ ಅನುಪ್ರಾಸದ ಅಳವಡಿಕೆ. ಎಲ್ಲಿಟರೇಷನ್ ಎಲ್ಲಿದೆ ಎಂಬ ಹುಡುಕಾಟವನ್ನು ನೀವು ಕನ್ನಡ ಸಿನೆಮಾ ಹೆಸರುಗಳ ಮೇಲೊಮ್ಮೆ ಕಣ್ಣಾಡಿಸಿ ಆರಂಭಿಸಬೇಕು. ಚೂರಿ ಚಿಕ್ಕಣ್ಣ, ಬೀದಿ ಬಸವಣ್ಣ, ಸರ್ವರ್ ಸೋಮಣ್ಣ, ಬೇಡಿ ಬಂದವಳು, ಪಾಯಿಂಟ್ ಪರಿಮಳ, ಬೆಳದಿಂಗಳ ಬಾಲೆ, ಜನುಮದ ಜೋಡಿ, ಗಜಪತಿ ಗರ್ವಭಂಗ, ಪಡುವಾರಳ್ಳಿ ಪಾಂಡವರು, ತಿಪ್ಪಾರಳ್ಳಿ ತರ್ಲೆಗಳು, ದೇವರ ದುಡ್ಡು, ಸಂಪತ್ತಿಗೆ ಸವಾಲ್, ಮಲಯ ಮಾರುತ, ಮುಂಗಾರು ಮಳೆ, ಮನೆಯೇ ಮಂತ್ರಾಲಯ... ಒಂದೇ ಎರಡೇ! ಹೌದು ಬರೀ ಎರಡೇ ಪದಗಳಾದರೂ ಅವು ಅನುಪ್ರಾಸಬದ್ಧ. ಮುಂದೆ ಮೂರು ಪದಗಳ ಹೆಸರುಗಳನ್ನೂ ಗಮನಿಸಬಹುದು. ಕರುಣೆಯೇ ಕುಟುಂಬದ ಕಣ್ಣು, ಪ್ರೀತಿ ಪ್ರೇಮ ಪ್ರಣಯ, ಮನ ಮೆಚ್ಚಿದ ಮಡದಿ, ಮಸ್ತ್ ಮಜಾ ಮಾಡಿ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ. ಸಿನೆಮಾ ಹೆಸರುಗಳ ನಂತರ ಚಿತ್ರಗೀತೆಗಳ ಸಾಲುಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಅವುಗಳಲ್ಲಿನ ಅನುಪ್ರಾಸ ಆಲಿಸಿದರೆ ಮುಖದಲ್ಲಿ ಮಂದಹಾಸ. ಬಂಕಾಪುರದ ಬೆಂಕಿಚೆಂಡು ಬಹದ್ದೂರ್ಗಂಡು, ತುಂಬುತ ತುಳುಕುತ ತೀಡುತ ತನ್ನೊಳು ತಾನೇ, ತರವಲ್ಲ ತಗಿನಿನ್ನ ತಂಬೂರಿ, ಕಂಡೊಡನೆ ಕರಪಿಡಿದು ಕಲ್ಪಿಸದಾಸುಖ ಕೊಡುವ, ನಾನಿರುವುದೇ ನಿಮಗಾಗಿ ನಾಡಿರುವುದು ನಮಗಾಗಿ, ಪಂಚರಂಗಿ ಪೊಂವ್ ಪೊಂವ್! ಒಂದೇ ಹಾಡಿನ ಎಲ್ಲಿಟರೇಷನ್ ಸಾಲದಿದ್ದರೆ ಎರಡು ಹಾಡುಗಳನ್ನು ಕಸಿ ಕಟ್ಟಿ ನೋಡಿ. ಆಗ ಡಬಲ್ ಧಮಾಕಾ- ಕನ್ನಡದ ಕುಲದೇವಿ ಕಾಪಾಡು ಬಾತಾಯೆ ಭಾರತಿಯೆ ಭಾವ ಭಾಗೀರಥಿಯೆ! ಇನ್ನು, ಕನ್ನಡ ಸಾಹಿತ್ಯದತ್ತ ಹೊರಳಿದರೆ ಅಲ್ಲಿಯೂ ನಮಗೆ ಅನುಪ್ರಾಸದ ಸುಗ್ರಾಸ ಸಿಗುತ್ತದೆ. ರಾಜರತ್ನಂ ತುತ್ತೂರಿ ‘ಕಾಸಿಗೆ ಕೊಂಡನು ಕಸ್ತೂರಿ’, ಸಿದ್ದಯ್ಯ ಪುರಾಣಿಕರ ಅಜ್ಜನ ಕೋಲು ‘ಕಾಥೇವಾಡದಿ ಕಾಣದ ಕುದುರೆ’. ಕಯ್ಯಾರ ಕಿಞಣ್ಣನವರ ‘ಕಾಮನಬಿಲ್ಲು ಕಮಾನು ಕಟ್ಟಿದೆ’. ಬೇಂದ್ರೆಯವರ ‘ಕರಿಮರಿನಾಯಿ ಕುಂಯಿಗುಡುತ್ತಿತ್ತು’, ‘ಕುರುಡು ಕಾಂಚಾಣ ಕುಣಿಯುತಲಿತ್ತು’. ಕರಡಿ ಕುಣಿತದಲ್ಲಂತೂ ‘ಕಬ್ಬಿಣ ಕೈಕಡಗ ಕುಣಿಗೋಲು ಕೂದಲು ಕಂಬಳಿ (ಹೊದ್ದಾಂವ ಬಂದಾನ...)’ ಸರದಿಯಲ್ಲಿ ಐದು ಪದಗಳು ಕಕಾರದವು. ಎಷ್ಟೆಂದರೂ ಬದುಕಲ್ಲಿ ಬೆಂದರೆ ಬೇಂದ್ರೆ, ಹಾಗಾಗಿ ಅವರ ಕುಲುಮೆಯಲ್ಲಿ ಎಂತೆಂಥ ಪದಗಳೂ ಥಳಥಳನೆ ಹೊಳೆಯುತ್ತವೆ. ಕವಿಶೈಲದ ಕವಿಋಷಿ ಕುವೆಂಪು ಕೂಡ ಕಮ್ಮಿಯೇನಲ್ಲ, ‘ಕುರಿನೆಗೆದಾಟ ಕುರುಬರ ಕೊಳಲಿನೂದಾಟ’ದಿಂದ ವಸಂತನನ್ನು ಸ್ವಾಗತಿಸಿದವರು. ‘ಮೂಡಣದಾದಿಗಂತದಿ ಮೂಡುವೆಣ್ಣಿನ ಮೈಸಿರಿ’ಯನ್ನು ಮೆರೆಸಿದವರು. ಆದರೆ ಕನ್ನಡದ ಸಂದರ್ಭದಲ್ಲಿ ಅನುಪ್ರಾಸದ ಅನಭಿಷಿಕ್ತ ಅರಸ ಎನ್ನಬೇಕಾದ್ದು ಟಿಪಿಕಲ್ ಟಿ.ಪಿ.ಕೈಲಾಸಂ ಅವರನ್ನು. ಪ್ರಹಸನ ಪ್ರಪಿತಾಮಹ ಕನ್ನಡಕ್ಕೊಬ್ಬರೇ ಕೈಲಾಸಂ ಎನಿಸಿದ ಗ್ರೇಟ್ ಮನುಷ್ಯನನ್ನು. ಅವರ ನಾಟಕಗಳ ಹೆಸರಿನಿಂದ ಹಿಡಿದು ಪಾತ್ರಗಳು, ಡೈಲಾಗುಗಳು ಎಲ್ಲ ಎಲ್ಲಿಟರೇಷನ್ಮಯ. ಬಂಡ್ವಾಳ್ವಿಲ್ಲದ್ ಬಡಾಯಿ, ಸೀಕರ್ಣೆ ಸಾವಿತ್ರಿ, ಹರಿಶ್ಚಂದ್ರನ ಹಿಂಸಾ, ಮೊಮ್ಮಗಳ ಮುಯ್ಯಿ, ವೈದ್ಯನ ವ್ಯಾಧಿ. ಟೆರ್ರಿಬಲ್ ಟಂಗು... ಮೆಟಾಲಿಕ್ ಮೌತು... ನನ್ ನಾಲ್ಗೆಗ್ ನರವೇಇಲ್ಲ... ಕಾಪಿ ಕುಡ್ಯೋದು ಕಾದಾಡೋದು... ಕಿರಾತಕಿ! ಕುಟುಂಬ ಕುಟುಂಬಗಳ್ನೇ ಕುಲ ಕುಲಗಳ್ನೇ ಕೊಂಪೆ ಕೊಂಪೆಗಳ್ನೇ ಕಿಚ್ಚಿಗಾಕ್ದ್ಲು! ಹದ್ದಿನ್ ಹೊಟ್ಟೇಲ್ ಹುಟ್ಸಿದ್ರಿ... ನೋಡಿವ್ರಾ ನಮ್ ನಂಜೀನವ ನಮ್ಗಜ ನಿಂಬೇ ನಂಜೀನವ? ಹೀಗೆ ಹುಡುಕಿದರೆ ಎಲ್ಲೆಲ್ಲೂ ಇದೆ ಎಲ್ಲಿಟರೇಷನ್. ಚಹಾದಜೋಡಿ ಚೂಡಾದ್ಹಂಗ ರುಚಿರುಚಿಯಾಗಿದೆ, ಚೂಡಾ ಮಾತ್ರ ಸಾಕಾಗದಿದ್ದರೆ ಚಕ್ಕುಲಿ ಚಿರೋಟಿ ಚುರುಮುರಿ ಚೌಚೌ ಚಂಪಾಕಲಿಯಂತೆಯೂ ಚಪ್ಪರಿಸಬಹುದಾಗಿದೆ. ಏಕೆಂದರೆ ಎಲ್ಲಿಟರೇಷನ್ ‘ಕಪ್ಪು ಕಾಗೆ ಕೆಂಪು ಕುಂಕುಮ’ದಂಥ ನಾಲಿಗೆಹೊರಳು (ಟಂಗ್ಟ್ವಿಸ್ಟರ್)ಗಳಲ್ಲೂ ಇದೆ, ‘ಎರಡೆತ್ತೆಮ್ಮೆಯಮರಿ ಎರಡೆರಡಾಡಿನಮರಿ ಎರಡು’ ಮಾದರಿಯ ಜನಪದ ಒಡಪುಗಳಲ್ಲೂ ಇದೆ. ‘ರಾಜಾಜಿನಗರದ ರಾಜ್ಕುಮಾರ್ ರಸ್ತೆಯಲ್ಲಿ ರೋಡ್ ರೋಲರ್ ರಂಪಾಟ’ದಲ್ಲೂ ಇದೆ, ‘ಹೊಸನಗರದ ಹತ್ತಿರ ಹಾಲ್ಕೊಳವೆಂಬ ಹೋಬಳಿಯ ಹಟ್ಟಿ ಹನುಮಪ್ಪ ಹೆಂಡತಿ ಹೂವಮ್ಮನ ಹಾಳು ಹರಟೆಗೆ ಹೂಂಗುಟ್ಟು’ವುದರಲ್ಲೂ ಇದೆ. ‘ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ’ನಂಥ ಉಪದೇಶಾಮೃತದಲ್ಲೂ ಇದೆ, ಕೊನೆಗೆ ಭಗವಂತನ ನಾಮಸ್ಮರಣೆಯ ವಿಷ್ಣುಸಹಸ್ರನಾಮ ಸ್ತೋತ್ರದಲ್ಲೂ ಇದೆ- ‘ಸುವ್ರತ ಸುಮುಖ ಸೂಕ್ಷ್ಮಃ ಸುಘೋಷ ಸುಖದ ಸುಹೃತ್..., ವೃಷಾಹೀ ವೃಷಭೋ ವಿಷ್ಣುಃ ವೃಷಪರ್ವ ವೃಷೋದರಃ ವರ್ಧನೋ ವರ್ಧಮಾನಶ್ಚ ವಿವಿಕ್ತಶ್ರುತಿಸಾಗರಃ||’ ನನಗೀಗ ಕೊಂಚ ಭಯವೂ ಆಗುತ್ತಿದೆ. ಎಲ್ಲಿಟರೇಷನ್ ಹೆಸರಿನಲ್ಲಿ ಇವತ್ತಿನ ಲೇಖನದಲ್ಲಿ ಸಿಕ್ಕಾಪಟ್ಟೆ ಕನ್ನಡೇತರ ಪದಗಳೂ ಸೇರಿಕೊಂಡಿವೆ. ನವೆಂಬರ್ ತಿಂಗಳು ಬೇರೆ. “ಕರುನಾಡಲಿ ಕಾಲಿಟ್ಟು ಕಪಟಾಟ್ಟಹಾಸದಿ ಕನ್ನಡವ ಕೊಲ್ಲುವ ಕುನ್ನಿಗಳು. ಕಸ್ತೂರಿ ಕನ್ನಡದ ಕಂಪನರಿಯದ ಕಣ್ಣಿರುವ ಕುರುಡರು. ಕನ್ನಡಾಂಬೆ ಕೇಳಲಾರೆನೀ ಕರ್ಕಷ ಕಹಳೆ ಕಾಪಾಡು ಕಾಪಾಡು!” ಎಂದು ಯಾರಾದರೂ ಕನ್ನಡಾಭಿಮಾನಿಗಳು ಕೂಗೆಬ್ಬಿಸಿದರೆ ಕಷ್ಟ. ಆದರೂ, ಇವತ್ತಿನ ಶೀರ್ಷಿಕೆ ಆ ರೀತಿ ಇರುವುದಕ್ಕೆ ನ್ಯಾಯ ಸಲ್ಲಿಸಬೇಕೆಂದು ಒಂದು ಚಂದದ ಎಲ್ಲಿಟರೇಷನ್ ಇಂಗ್ಲಿಷ್ನದನ್ನೇ ಉಲ್ಲೇಖಿಸಿ ಮುಗಿಸುತ್ತೇನೆ. ಇದು ಇಂಗ್ಲಿಷ್ ಅಕ್ಷರ ಎಲ್ಇಂದ ಎಲ್ಇಗೆ ಎಲ್ಲಿಟರೇಷನ್: Low lying land lets leaking liquid linger longer. ಈಗಿನ್ನು ನಿಮ್ಮ ತಲೆಯಲ್ಲಿ ಎಲ್ಲಿಟರೇಷನ್ ಗುಂಗಿಹುಳ ಎಷ್ಟು ದಿನ ಗುಂಯ್ಗುಟ್ಟುತ್ತಿರುತ್ತದೋ ನೋಡಬೇಕು! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.