ಪದ-ಶ್ರಾವ್ಯ

ಈಗ ಆಡಿಯೋ ಟಚ್!

30
Jul 2011
America In So Many Words
Posted in DefaultTag by sjoshi at 6:33 am

ದಿನಾಂಕ  31 ಜುಲೈ 2011ರ ಸಂಚಿಕೆ...

ಇವೆಲ್ಲ ಪದಗಳೂ ಹುಟ್ಟಿದ್ದು ಅಮೆರಿಕದಲ್ಲಿ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಮೆರಿಕ ದೇಶದ ಬಗ್ಗೆ ಸ್ವಲ್ಪ ತಮಾಷೆಯ ಮತ್ತು ತುಸು ಕುಹಕದ ಒಂದು ಮಾತಿದೆ- ಇಲ್ಲಿ Made in USA ಮುದ್ರೆಯಿರುವ ವಸ್ತುಗಳೇ ಇಲ್ಲ ಎಂದು. ಇದು ಬಹುಮಟ್ಟಿಗೆ ನಿಜ ಕೂಡ. ಔಷಧಗಳು, ಆಹಾರ ಪದಾರ್ಥಗಳು ಮತ್ತು ದಿನಬಳಕೆಯ ಕೆಲವು ಗ್ರಾಹಕೋತ್ಪನ್ನಗಳನ್ನು ಬಿಟ್ಟರೆ ಸ್ವದೇಶದ್ದು ಅಂತ ಇಲ್ಲಿ ಯಾವುದೂ ಇಲ್ಲ. ಬಳಸಿದ ನಂತರ ಬಿಸಾಡು ಮಾದರಿಯ ನಿರ್ಲಿಪ್ತ ಜೀವನಶೈಲಿಯಲ್ಲಿ ಬಹುಶಃ ‘ಇದು ನಮ್ಮದು’ ಎಂಬ ಹೆಮ್ಮೆಯ ಭಾವನೆಗೆ ಆಸ್ಪದವಿಲ್ಲ. ಕೇವಲ ನಾಲ್ನೂರು-ಐನೂರು ವರ್ಷಗಳಷ್ಟೇ ಇತಿಹಾಸವಿರುವ ಈ ದೇಶದಲ್ಲಿ, ಈಗಿರುವ ನಿವಾಸಿಗಳೂ ಹೆಚ್ಚೂಕಡಿಮೆ ಆಮದುಗೊಂಡವರೇ (ವಲಸೆ ಬಂದವರೇ) ಆಗಿರುವ ಹಿನ್ನೆಲೆಯಲ್ಲಿ, ಈ ಸಂಗತಿ ವಿಶೇಷವೆನಿಸುವುದೂ ಇಲ್ಲ.

ಆದರೆ, ಇಂಗ್ಲಿಷ್ ಭಾಷೆಯ ವಿಷಯದಲ್ಲಿ ಹಾಗಲ್ಲ. ಕಳೆದ ನಾಲ್ಕೈದು ಶತಮಾನಗಳಲ್ಲಿ ಅಮೆರಿಕದಲ್ಲಿ ಹುಟ್ಟಿಕೊಂಡ ಸಾವಿರಾರು ಪದಗಳು ಇಂಗ್ಲಿಷ್‌ಗೆ ಸೇರ್ಪಡೆಯಾಗಿವೆ. ಭಾಷೆಯನ್ನು ಶ್ರೀಮಂತಗೊಳಿಸಿವೆ. ಹಾಗೆಯೇ ಜಾಗತಿಕವಾಗಿ ಬೇರೆ ಭಾಷೆಗಳಿಗೂ ಹಬ್ಬಿಕೊಂಡಿವೆ. ‘ಹಲೋ’, ‘ಓಕೆ’ಯಂಥ ಕೆಲವಂತೂ ದೇಶ-ಭಾಷೆಗಳ ಗಡಿ ದಾಟಿ ಇದು ನಮ್ಮದೇ ಪದ ಎನ್ನುವಷ್ಟು ಮಟ್ಟಿಗೆ ನಮ್ಮೆಲ್ಲರ ದೈನಂದಿನ ಸಂಭಾಷಣೆಗಳಲ್ಲಿ ಹಾಸುಹೊಕ್ಕಾಗಿವೆ. ಇವತ್ತಿನ ಅಂಕಣದಲ್ಲಿ ಅಂತಹ ಕೆಲವು Made in USA ಪದಗಳ ಪರಿಚಯ ಮಾಡಿಕೊಳ್ಳೋಣವೇ? ಅಂದಹಾಗೆ ಇವು ಅಮೆರಿಕದ ಜೀವನಕ್ಕೆ ಬೇಕಾಗಿ ಇಲ್ಲಿ ಮಾತ್ರ ಚಲಾವಣೆ ಇರುವವಲ್ಲ (ಅಂಥ ಪದಗಳೂ ಬೇಕಷ್ಟಿವೆ, ಅವುಗಳ ಕುರಿತು ಮುಂದೆಂದಾದರೂ ನೋಡೋಣವಂತೆ). ಇವೇನಿದ್ದರೂ ನಿಮಗೂ ಗೊತ್ತಿರುವಂಥವೇ, ನೀವೂ ಬಳಸುವಂಥವೇ. ಇವುಗಳ ಹುಟ್ಟು ಅಮೆರಿಕದಲ್ಲಿ ಆದದ್ದು ಎನ್ನುವ ವಿಚಾರ ಮಾತ್ರ ಹೊಸತು.

made_in_usa.jpg

ಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲ್-ಕಾಲೇಜುಗಳಲ್ಲಿ ಸಹಪಾಠಿಯಾಗಿದ್ದವರನ್ನು ನೆನಪಿಸಿಕೊಳ್ಳುತ್ತ “ಅವನೂ(ಳೂ) ನಾನೂ ಕ್ಲಾಸ್‌ಮೇಟ್ಸ್...” ಅಂತೀವಲ್ವಾ, ಈ ಕ್ಲಾಸ್‌ಮೇಟ್ ಪದ ಅಮೆರಿಕದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಹುಟ್ಟಿಕೊಂಡದ್ದು! ಅದೂ 1713ರಷ್ಟು ಹಿಂದೆ. ಆಮೇಲೆ ರೂಮ್‌ಮೇಟ್, ಟೀಮ್‌ಮೇಟ್, ಬ್ಯಾಚ್‌ಮೇಟ್ ಮುಂತಾದ ಪದಗಳೂ ಬಂದವು. ‘ರೌಡಿ’ ಎಂಬ ಪದವೂ ಹಾಗೆಯೇ. ಅಮೆರಿಕದ ಕಾಲೇಜುಗಳಲ್ಲಿ ದಾದಾಗಿರಿ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಇಲ್ಲಿನ ಪತ್ರಿಕೆಗಳು ಆ ಲೇಬಲ್ ಹಚ್ಚಿದವು, ಸಭ್ಯತೆಯಿಲ್ಲದವರು ಎಂಬರ್ಥದಲ್ಲಿ. ಆಮೇಲೆ ದಾರಿಹೋಕರನ್ನು ದೋಚುವವರು, ಕಾಸಿಗಾಗಿ ಕೊಲೆಗೈಯುವವರೂ ರೌಡಿಗಳೆಂದು ಗುರುತಿಸಲ್ಪಟ್ಟರು. ಇನ್ನೊಂದು, ‘ಟೀನೇಜರ್’ ಎಂಬ ಪದ. ಬಾಲ್ಯ ಕಳೆದ ಆದರೆ ವಯಸ್ಕ ಎನಿಸದ ಪ್ರಾಯದ ಹುಡುಗ-ಹುಡುಗಿಯರನ್ನು ಆರೀತಿ ಕರೆಯುವ ಪರಿಪಾಠ ತೀರಾ ಈಚೆಗೆ ಅಂದರೆ ೧೯೪೦ರ ಆಸುಪಾಸು ಅಮೆರಿಕದಲ್ಲಿ ಆರಂಭವಾದದ್ದೆಂದರೆ ನಂಬ್ತೀರಾ? ಅದಕ್ಕಿಂತ ಮೊದಲು ಇಂಗ್ಲಿಷ್‌ನಲ್ಲಿ ಆ ಪದವೇ ಇರಲಿಲ್ಲವಂತೆ, girl ಬೆಳೆದು woman ಆಗುತ್ತಿದ್ದಳು, boy ಬೆಳೆದು man ಆಗುತ್ತಿದ್ದ! 1941ರಲ್ಲಿ ರೀಡರ್ಸ್ ಡೈಜೆಸ್ಟ್ ಮಾಸಿಕವು ಮೊದಲ ಬಾರಿಗೆ ಟೀನೇಜರ್ ಪದವನ್ನು ಬಳಸಿತು.

ಹೊಸ ಪದಗಳನ್ನು ಟಂಕಿಸುವುದರಲ್ಲಿ, ಪ್ರಚುರಪಡಿಸುವುದರಲ್ಲಿ ಪತ್ರಿಕೆಗಳ ಪಾತ್ರ ಹಿರಿದು. ಅದೇ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪದಗಳೂ ಅಮೆರಿಕದಲ್ಲಿ ಹುಟ್ಟಿವೆ. ಇವತ್ತು ಸಂಪರ್ಕ ಮಾಧ್ಯಮಗಳನ್ನೆಲ್ಲ ಸೇರಿಸಿ ನಾವೇನು ‘ಮೀಡಿಯಾ’ ಎನ್ನುತ್ತೇವೋ ಆ ಪದ ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಚಾಲ್ತಿಗೆ ಬಂದದ್ದು ಅಮೆರಿಕದಲ್ಲೇ. ಪತ್ರಿಕೆ ಎಂದರೆ ಸುದ್ದಿಗಳು ಮಾತ್ರ ಅಂತಿದ್ದ ಕಾಲದಲ್ಲಿ ಪತ್ರಿಕೆಯ ಸಂಪಾದಕರ ಮತ್ತು ಓದುಗರ ಸ್ವಂತ ಅಭಿಪ್ರಾಯಗಳಿಗೂ ಸ್ಥಳವಿರಬೇಕು ಎಂದು ‘ಎಡಿಟೋರಿಯಲ್’ ಆರಂಭವಾದದ್ದು ಅಮೆರಿಕದಲ್ಲೇ. ‘ಡೆಡ್‌ಲೈನ್’ ಪದ ಹುಟ್ಟಿಕೊಂಡದ್ದೂ ಈ ದೇಶದಲ್ಲಿಯೇ. ಪೌರಯುದ್ಧದ ಕಾಲದಲ್ಲಿ ಸೆರೆಯಾಳುಗಳ ಚಲನವಲನ ನಿರ್ಬಂಧಿಸಲು ಹಾಕುತ್ತಿದ್ದ ಬೇಲಿಯನ್ನು ಡೆಡ್‌ಲೈನ್ ಎನ್ನಲಾಗುತ್ತಿತ್ತು, ಅದರಾಚೆಗೆ ಬಂದರೆ ಅವರ ಕಥೆ ಮುಗಿದಂತೆಯೇ ಎಂಬರ್ಥದಲ್ಲಿ. ಆದರೆ ಆಮೇಲೆ ಪತ್ರಿಕೆಗಳ ಸಂಪಾದಕರು ವರದಿಗಾರರಿಗೆ ಮತ್ತು ಲೇಖಕರಿಗೆ ಹಾಕುತ್ತಿದ್ದ ಸಮಯದ ಗಡುವನ್ನೂ ‘ಡೆಡ್‌ಲೈನ್’ ಎನ್ನುವುದು ರೂಢಿಯಾಯ್ತು. ಡೆಡ್‌ಲೈನ್‌ನೊಳಗೆ ತಲುಪದಿದ್ದರೆ ತನ್ನ ಸ್ಟೋರಿ ಡೆಡ್ ಅಂತ ಯಾವ ರಿಪೋರ್ಟರ್ ಆದರೂ ಅರ್ಥೈಸಿಕೊಳ್ಳಬೇಕು.

ಈಗ, ಸ್ಪರ್ಧೆಗಳಿಗೆ ಪ್ರವೇಶಪತ್ರ ಕಳಿಸುವುದಕ್ಕೂ ಡೆಡ್‌ಲೈನ್ ಇರುತ್ತದೆ; ವಿಮಾನ ಹೈಜಾಕ್ ಮಾಡಿದ ಭಯೋತ್ಪಾದಕರ ಬೇಡಿಕೆಗಳನ್ನು ಪೂರೈಸುವುದಕ್ಕೂ ಡೆಡ್‌ಲೈನ್ ಇರುತ್ತದೆ; ಭ್ರಷ್ಟ ಮುಖ್ಯಮಂತ್ರಿ ಕುರ್ಚಿ ಬಿಟ್ಟು ತೊಲಗುವುದಕ್ಕೆ ಮಾತ್ರ ಯಾವ ಡೆಡ್‌ಲೈನೂ ವರ್ಕ್‌ಔಟ್ ಆಗದಿರುವುದು, ಅಲ್ಲಾಡದ ಆಸಾಮಿ ಮೀನ-ಮೇಷಗಳನ್ನಷ್ಟೇ ಅಲ್ಲದೆ ಆಷಾಢ-ಶ್ರಾವಣಗಳನ್ನೂ ಎಣಿಸುತ್ತ ಕೂರಿರುವುದು ದೊಡ್ಡ ವಿಪರ್ಯಾಸ.

ಅದಿರಲಿ, ವಿಮಾನ ಹೈಜಾಕ್ ಎಂದೆನಷ್ಟೇ, ಈ ‘ಹೈಜಾಕ್’ ಸಹ ಅಮೆರಿಕದ್ದೇ ಕೊಡುಗೆ. ಅದಕ್ಕೆ ಹೊಂದಿಕೊಂಡಂತೆಯೇ ‘ಪ್ರೊಹಿಬಿಷನ್’ ಕೂಡ. 1920-30ರ ಅವಧಿಯಲ್ಲಿ ಅಮೆರಿಕದಲ್ಲಿ ಮದ್ಯನಿಷೇಧ ಇತ್ತು. ಪತ್ರಿಕೆಗಳು ಅದನ್ನು ಪ್ರೊಹಿಬಿಷನ್ ಎಂದವು. ಆ ಕಾಲದಲ್ಲಿ ಕಾನೂನುಬಾಹಿರವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಹಿಡಿಯುವವರೂ ಇದ್ದರು. ಅವರೇನೂ ಪೊಲೀಸರಲ್ಲ, ಮದ್ಯದಾಸೆಯಿಂದ ಲೂಟಿ ಮಾಡುವವರು. ಅಂಥವರನ್ನು ಹೈಜಾಕರ್ಸ್ ಎನ್ನಲಾಯ್ತು. ಮುಂದಿನ ದಶಕಗಳಲ್ಲಿ ಅದಕ್ಕಿಂತ ಘೋರವಾದ ಹೈಜಾಕ್ ಕೃತ್ಯಗಳಿಗೆ ಅಮೆರಿಕ ಮತ್ತು ಪ್ರಪಂಚವೆಲ್ಲ ಸಾಕ್ಷಿಯಾಗಬೇಕಾಯ್ತು. ‘ಬೋಗಸ್’ ಎಂಬ ಪದ ಹುಟ್ಟಿದ್ದೂ ಅಮೆರಿಕದಲ್ಲೇ. ಮೊದಲೆಲ್ಲ ಖೋಟಾ ನಾಣ್ಯಗಳು, ನೋಟುಗಳು, ಲಾಟರಿ ಟಿಕೆಟ್‌ಗಳಿಗಷ್ಟೇ ಬಳಕೆಯಾದ ಬೋಗಸ್ ಎಂಬ ಬಣ್ಣನೆ ಆಮೇಲೆ ನಕಲಿ ಆಭರಣಗಳಿಗೂ ಅಂಟಿಕೊಂಡಿತು. ಬೋಗಸ್ ಕಂಪನಿಗಳು ಹುಟ್ಟಿದವು. ಬೋಗಸ್ ಪ್ರಮಾಣಪತ್ರಗಳು ಸೃಷ್ಟಿಯಾದವು.

ಮತ್ತೆ ಕೆಲವು ಪದಗಳು ಆಗಲೇ ಇಂಗ್ಲಿಷ್‌ನಲ್ಲಿದ್ದರೂ ಅಮೆರಿಕದಲ್ಲಿ ಅವು ಹೊಸ ಅರ್ಥ ಪಡಕೊಂಡದ್ದಿದೆ. ಉದಾಹರಣೆಗೆ ‘ಸ್ಟೋರ್’ ಎಂದರೆ ವಸ್ತುಗಳ ದಾಸ್ತಾನು ಎಂದಷ್ಟೇ ಅರ್ಥವಿದ್ದದ್ದು. ಮಾರಾಟಕ್ಕೆ ವಸ್ತುಗಳನ್ನಿಟ್ಟ ಜಾಗ ಎಂಬ ಅರ್ಥ ಬಂದದ್ದು ಅಮೆರಿಕದಲ್ಲಿ. ‘ಕೆಫೆಟೇರಿಯಾ’ದಲ್ಲಿ ಕಾಫಿಯಷ್ಟೇ ಅಲ್ಲ, ತಿಂಡಿಯೂ ಸಿಗುತ್ತದೆ, ಆದರೆ ಸ್ವಸಹಾಯ ಪದ್ಧತಿ ಪಾಲಿಸಬೇಕು ಎಂಬ ಅರ್ಥ ಬಂದದ್ದು ಅಮೆರಿಕದಲ್ಲಿ. ‘ಪ್ಲಾಂಟರ್’ ಎಂದರೆ ಯಾವುದಾದರೂ ಕಾಲೋನಿಯ ಸಂಸ್ಥಾಪಕ ಎಂದಿದ್ದ ಅರ್ಥ ದೊಡ್ಡದೊಡ್ಡ ಎಸ್ಟೇಟ್‌ಗಳ ಮಾಲೀಕ ಎಂದಾದದ್ದು ವರ್ಜೀನಿಯಾದ ತಂಬಾಕು ಪ್ಲಾಂಟೇಶನ್ ಉದ್ಯಮ ಉತ್ತುಂಗಕ್ಕೇರಿದ್ದ ಅಮೆರಿಕದಲ್ಲಿ. ‘ಫ್ಯಾನ್’ ಪದಕ್ಕೆ ಅಭಿಮಾನಿ ಹುಚ್ಚ ಎಂಬರ್ಥ ಬಂದದ್ದು ಬೇಸ್‌ಬಾಲ್ ಆಟಗಾರರ ಅಭಿಮಾನ ಹುಚ್ಚೇರಿದ ಅಮೆರಿಕದಲ್ಲಿ. ರಾಜಕೀಯ ಸ್ತರದಲ್ಲಿ, ಅಧಿಕಾರದ ಪಿರೆಮಿಡ್‌ನಲ್ಲಿ ಅತ್ಯಂತ ಕೆಳಮಟ್ಟದವರೆಗೂ ಎಂಬರ್ಥದಲ್ಲಿ ‘ಗ್ರಾಸ್ ರೂಟ್ಸ್ ಲೆವೆಲ್’ ಬಳಕೆಯಾದದ್ದು ಅಮೆರಿಕದಲ್ಲಿ. ‘ರಿಸರ್ವೇಶನ್’ ಪದ ಹುಟ್ಟಿಕೊಂಡದ್ದು ಮೂಲನಿವಾಸಿ ರೆಡ್‌ಇಂಡಿಯನ್ನರಿಗೆ ಇಂತಿಷ್ಟೇ ಜಾಗ, ಉಳಿದದ್ದು ಸರಕಾರಕ್ಕೆ ಎಂದು ಜಮೀನು ವಿಂಗಡಣೆಯ ಸಂದರ್ಭದಲ್ಲಿ ಇದೇ ಅಮೆರಿಕ ದೇಶದಲ್ಲಿ.

ತೀರಾ ಇತ್ತೀಚಿನ ಸೇರ್ಪಡೆಯೆಂದರೆ ‘ಬ್ಯಾಂಗಲೋರ್’ ಪದ- ಈಗ ಅಮೆರಿಕದಲ್ಲಿ ಇದೊಂದು ನಾಮಪದವಲ್ಲ, ಹೊರಗುತ್ತಿಗೆ ಕೊಡುವುದು ಎಂಬರ್ಥದ ಕ್ರಿಯಾಪದ! “ಅವರ್ ಕಂಪನಿ ಹ್ಯಾಸ್ ‘ಬ್ಯಾಂಗಲೋರ್ಡ್’ ಇಟ್ಸ್ ಕಸ್ಟಮರ್ ಸರ್ವೀಸ್ ಡಿಪಾರ್ಟ್‌ಮೆಂಟ್...”

ಕ್ರೆಡಿಟ್ ಕಾರ್ಡ್, ಪರ್ಸನಲ್ ಕಂಪ್ಯೂಟರ್, ಸಾಫ್ಟ್‌ವೇರ್, ಪೇಟೆಂಟ್, ಪಿಂಕ್ ಸ್ಲಿಪ್ ಮುಂತಾದವೆಲ್ಲ ಅಮೆರಿಕ ಮೂಲದವು ಎಂದರೆ ಸುಲಭದಲ್ಲೇ ನಂಬಬಹುದು. ಆದರೆ ಐಸ್ ಕ್ರೀಮ್, ಪಾಪ್ ಕಾರ್ನ್, ಸೀರಿಯಲ್, ಪೊಟಾಟೊ ಚಿಪ್, ಕಾಕ್‌ಟೈಲ್, ಲಿಪ್‌ಸ್ಟಿಕ್, ಜೀನ್ಸ್, ಟಿ-ಶರ್ಟ್, ಜೀಪ್, ಬುಲ್‌ಡೋಝರ್, ಟೆಡ್ಡಿಬೇರ್ ಮುಂತಾದವು ಸಹ ಅಮೆರಿಕದವೇ ಎಂದಾಗ ನಿಮಗೆ ಕೊಂಚ ಮಟ್ಟಿಗೆ ಆಶ್ಚರ್ಯವೂ ಆಗಬಹುದು! ಹೌದು, ಅದಕ್ಕೇ ಶೀರ್ಷಿಕೆಯಲ್ಲಿ ಹೇಳಿದ್ದು ಇವೆಲ್ಲ ಪದಗಳೂ ಹುಟ್ಟಿದ್ದು ಅಮೆರಿಕದಲ್ಲಿ ಅಂತ.

ಅಂದಹಾಗೆ, ಇವತ್ತಿನ ಶೀರ್ಷಿಕೆ ಇನ್ನೊಂದು ಅರ್ಥದಲ್ಲೂ ಸರಿಯಾಗಿಯೇ ಇದೆಯಲ್ಲ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.