Episodes
Saturday Mar 05, 2011
Angushta Puraana
Saturday Mar 05, 2011
Saturday Mar 05, 2011
ದಿನಾಂಕ 6 ಮಾರ್ಚ್ 2011ರ ಸಂಚಿಕೆ...
ಅಂಗುಷ್ಠ, ಉಂಗುಟ, ಥಂಬ್ ಮತ್ತು ಟೋ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ| ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ|| ಆಲದೆಲೆಯ ಮೇಲೆ ಮಲಗಿರುವ ಬಾಲಕೃಷ್ಣ ತನ್ನ ಕಾಲಿನ ಹೆಬ್ಬೆರಳನ್ನು ಚೀಪುತ್ತಿದ್ದಾನೆ. ಕ್ಯಾಲೆಂಡರ್ಗಳಲ್ಲಿ, ಪೇಂಟಿಂಗ್ಗಳಲ್ಲಿ ಈ ಸುಂದರ ದೃಶ್ಯವನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಪ್ರಳಯದಿಂದ ರಕ್ಷಿಸಲಿಕ್ಕಾಗಿ ಜಗತ್ತನ್ನು ತನ್ನ ಹೊಟ್ಟೆಯಲ್ಲಡಗಿಸಿಕೊಂಡ ಭಗವಂತ, ಮುಗ್ಧ ಮಗುವಾಗಿ ಈ ಲೀಲೆಯನ್ನಾಡುತ್ತಾನಂತೆ. ತನ್ನ ಪಾದಗಳನ್ನು ಸ್ಪರ್ಶಿಸಿದ ನೀರು ಅಮೃತಕ್ಕಿಂತಲೂ ಸಿಹಿಯೆಂದು ಭಕ್ತರು ತಿಳಿದುಕೊಳ್ಳುತ್ತಾರಲ್ಲ ನಿಜವಾಗಿಯೂ ಸಿಹಿಯಾಗಿರುವುದು ಹೌದೇ ಎಂದು ಸ್ವಯಂಪರೀಕ್ಷೆ ಮಾಡಿ ಕಂಡುಕೊಳ್ಳುವುದಕ್ಕಾಗಿ ಅಂಗುಷ್ಠ ಚೀಪುತ್ತಾನಂತೆ. ಹಾಗೆನ್ನುತ್ತವೆ ಪುರಾಣಗಳು. ಅಂಗುಷ್ಠದ ಮಹಿಮೆ ಕೃಷ್ಣಕಥೆಯಲ್ಲಿ ಆಮೇಲೂ ಬರುತ್ತದೆ. ಮಹಾಭಾರತ ಯುದ್ಧದಲ್ಲಿ ಕರ್ಣಾರ್ಜುನರ ನಡುವೆ ಭೀಕರ ಕಾಳಗದ ಸಂದರ್ಭ. ಕರ್ಣ ಅರ್ಜುನನ ಕೊರಳಿಗೇ ಗುರಿಯಿಟ್ಟು ಸರ್ಪಾಸ್ತ್ರ ಪ್ರಯೋಗಿಸುತ್ತಾನೆ. ಆ ಕ್ಷಣದಲ್ಲಿ ಕೃಷ್ಣ ತನ್ನ ಕಾಲಿನ ಹೆಬ್ಬೆರಳಿನಿಂದ ರಥವನ್ನು ಅದುಮುತ್ತಾನೆ. ಕರ್ಣನ ಬಾಣ ಅರ್ಜುನನ ಕೊರಳಿಗೆ ತಾಗದೆ ಕಿರೀಟವನ್ನಷ್ಟೇ ಹಾರಿಸಿಕೊಂಡು ಹೋಗುವಂತೆ ಮಾಡುತ್ತಾನೆ. ಅರ್ಜುನನ ಪ್ರಾಣ ಉಳಿಸುತ್ತಾನೆ. ಯುದ್ಧಕ್ಕೆ ಮೊದಲು ವಿರಾಟಪರ್ವದಲ್ಲೂ ಒಂದು ಸನ್ನಿವೇಶ ಬರುತ್ತದೆ. ಕುಮಾರವ್ಯಾಸ ಅದನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾನೆ. ಸೆಣಸು ಸೇರದ ದೇವನಿದಿರಲಿ ಮಣಿಯದಾತನ ಕಾಣುತಲೆ ಧಾ ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ ಮಣಿಖಚಿತ ಕಾಂಚನದ ಪೀಠದ ಗೊಣಸು ಮುರಿದುದು ಮೇಲೆ ಸುರ ಸಂ ದಣಿಗಳಾ ಎನೆ ಕವಿದುಬಿದ್ದನು ಹರಿಯ ಚರಣದಲಿ ಕೃಷ್ಣನು ವಿದುರನ ಮನೆಯಿಂದ ಕೌರವರ ಅರಮನೆಗೆ ಬಂದಿದ್ದಾನೆ. ಭೀಷ್ಮ, ದ್ರೋಣ ಮುಂತಾದವರೆಲ್ಲ ಎದ್ದುನಿಂತು ಅವನಿಗೆ ವಂದಿಸಿದ್ದಾರೆ. ದುರ್ಯೋಧನ ಮಾತ್ರ ದರ್ಪದಿಂದ ಸಿಂಹಾಸನಾರೂಢನಾಗಿಯೇ ಇದ್ದಾನೆ. ಅವನ ಗರ್ವಭಂಗ ಮಾಡಲೆಂದು ಕೃಷ್ಣ ತನ್ನ ಉಂಗುಟ ಅಂದರೆ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ಒತ್ತುತ್ತಾನೆ. ಆ ರಭಸಕ್ಕೆ ಭೂಮಿ ನಡುಗಿ ಸಿಂಹಾಸನ ಅದುರುತ್ತದೆ. ದುರ್ಯೋಧನ ಕೆಳಗೆ ಬೀಳುತ್ತಾನೆ, ನೇರವಾಗಿ ಕೃಷ್ಣನ ಪದತಲಕ್ಕೆ! ವಿಧಿಲೀಲೆಯೆಂದರೆ ಅಂತಹ ಮಹಾಮಹಿಮ ಶ್ರೀಕೃಷ್ಣನ ಅವತಾರಾಂತ್ಯದಲ್ಲಿ ಮೊದಲು ಘಾಸಿಗೊಳ್ಳುವುದು ಅವನ ಅಂಗುಷ್ಠವೇ. ಕೊನೆಯ ದಿನಗಳಲ್ಲಿ ವನವಾಸಿಯಾಗಿದ್ದ ಕೃಷ್ಣ ಕಾಡಿನಲ್ಲಿ ಒಂದು ಮರದ ಕೆಳಗೆ ಒರಗಿ ಕಾಲುಚಾಚಿ ಕುಳಿತುಕೊಂಡಿರುತ್ತಾನೆ. ಕೃಷ್ಣನ ಕಾಲ್ಬೆರಳನ್ನು ಜಿಂಕೆಯ ಕಣ್ಣೆಂದು ಭಾವಿಸಿದ ಬೇಡ ಬಾಣ ಬಿಡುತ್ತಾನೆ. ಇಹಲೋಕದ ವಾಸ ಮುಗಿಸಿ ಕೃಷ್ಣ ವೈಕುಂಠಕ್ಕೆ ಮರಳುತ್ತಾನೆ. ಕಾಲಿನ ಹೆಬ್ಬೆರಳು ಎಷ್ಟು ಪವರ್ಫುಲ್ ಎನ್ನುವುದಕ್ಕೆ ರಾಮಾಯಣ ಮತ್ತಿತರ ಕಥೆಗಳಲ್ಲೂ ವಿಸ್ಮಯದ ಚಿತ್ರಣಗಳು ನಮಗೆ ವಿಪುಲವಾಗಿ ಸಿಗುತ್ತವೆ. ವಾಲಿಯು ಬಿಸಾಡಿದ ದುಂದುಭಿ ಎಂಬ ರಾಕ್ಷಸನ ಪರ್ವತಾಕಾರದ ದೇಹವನ್ನು ಶ್ರೀರಾಮ ತನ್ನ ಕಾಲಿನ ಹೆಬ್ಬೆರಳಿನಿಂದಲೇ ದಶ ಯೋಜನ ದೂರಕ್ಕೆ ಝಾಡಿಸಿದ್ದನಂತೆ. ಹಾಗೆಯೇ ಪರಮೇಶ್ವರನು ತನ್ನ ಅಂಗುಷ್ಠದಿಂದ ಕೈಲಾಸ ಪರ್ವತವನ್ನು ಅದುಮಿಹಿಡಿದು ರಾವಣನ ಅಹಂಕಾರಕ್ಕೆ ಪೆಟ್ಟುಕೊಟ್ಟ ಒಂದು ಪ್ರಸಂಗವೂ ಇದೆ. ಇನ್ನು, ಋಷಿ-ಮುನಿಗಳು ಮತ್ತು ಹಿರಣ್ಯಕಷಿಪುವಿನಂಥ ಮಹಾರಾಕ್ಷಸರು ಕಾಲಿನ ಹೆಬ್ಬೆರಳುಗಳ ಆಧಾರದಲ್ಲಿ ನಿಂತು ಘೋರ ತಪಸ್ಸನ್ನಾಚರಿಸಿದರು ಎಂಬ ರೀತಿಯ ವಿವರಣೆಗಳಂತೂ ಪುರಾಣಕಥೆಗಳಲ್ಲಿ ವೆರಿ ಕಾಮನ್. ಗುರುಹಿರಿಯರಿಗೆ ನಮಸ್ಕರಿಸುವಾಗ ನಾವು ಅವರ ಪಾದಗಳನ್ನು ಮುಟ್ಟುತ್ತೇವಲ್ಲ, ವಿಶೇಷವಾಗಿ ಆಗ ಅಂಗುಷ್ಠಗಳನ್ನು ಸ್ಪರ್ಶಿಸಬೇಕಂತೆ. ಏಕೆಂದರೆ ಹಿರಿಯರ ತಪಃಶಕ್ತಿ, ಪುಣ್ಯ ಮತ್ತು ಅನುಭವಾಮೃತಗಳೆಲ್ಲ ಆಶೀರ್ವಾದ ರೂಪದಲ್ಲಿ ಅಂಗುಷ್ಠಗಳ ಮೂಲಕ ನಮಗೆ ಹರಿದುಬರುತ್ತವಂತೆ. ಅಂಗುಷ್ಠ ಎಂದರೆ ಆಶೀರ್ವಾದಗಳು ಟ್ರಾನ್ಸ್ಮಿಷನ್ ಆಗುವ ಆಂಟೆನಾ ಎಂದು ನೆನಪಿಟ್ಟುಕೊಳ್ಳಬೇಕು. ಆಯ್ತು, ಆದರೆ ಅಂಗುಷ್ಠದ ವಿಚಾರ ಇವತ್ತೇಕೆ ಬಂತು ಎಂದು ನಿಮಗೀಗ ಅಚ್ಚರಿಯಾಗಿರಬಹುದು ಅಲ್ಲವೇ? ಹೇಳುತ್ತೇನೆ ಕೇಳಿ. ಅವತ್ತು ಕನ್ನಡ ಚಿತ್ರಗೀತೆಗಳಲ್ಲಿ ತಪ್ಪೊಪ್ಪುಗಳ ಬಗ್ಗೆ ಬರೆಯುತ್ತ ಪ್ರೇಮಲೋಕದ ಹಾಡಿನಲ್ಲಿ ‘ಅಂಗುಷ್ಠ’ವನ್ನು ತಪ್ಪಾಗಿ ‘ಉಂಗುಷ್ಠ’ ಎನ್ನಲಾಗಿದೆ ಎಂದು ಬರೆದಿದ್ದೆನಷ್ಟೆ. ಅದನ್ನು ಕೆಲವು ಭಾಷಾಸೂಕ್ಷ್ಮ ಓದುಗಮಿತ್ರರು ವಿಶೇಷವಾಗಿ ಗಮನಿಸಿದ್ದಾರೆ. ಉಂಗುಷ್ಠ ಎಂಬ ಪದವೂ ಕನ್ನಡದಲ್ಲಿ ಚಾಲ್ತಿಯಲ್ಲಿದೆಯಲ್ಲ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ರತ್ನಕೋಶ ನಿಘಂಟಿನ ೩೨ನೇ ಪುಟದಲ್ಲಿ ‘ಉಂಗುಷ್ಠ = ಕಾಲಿನ ಹೆಬ್ಬೆರಳು; ಎಕ್ಕಡದಲ್ಲಿ ಹೆಬ್ಬೆರಳನ್ನು ತೂರಿಸಲು ಮಾಡಿರುವ ಉಂಗುರದಂಥ ರಚನೆ’ ಎಂಬ ವಿವರಣೆಯಿದೆಯಲ್ಲ ಎಂದು ಪತ್ರ ಬರೆದು ತಿಳಿಸಿದ್ದಾರೆ. ಬೆಂಗಳೂರಿನ ಡಿ.ಪಿ.ಸುಹಾಸ್ ಎಂಬುವವರಂತೂ ಅಂಗುಷ್ಠ, ಉಂಗುಷ್ಠ, ಉಂಗುಟ ಈ ಎಲ್ಲ ಪದಗಳೂ ಕನ್ನಡದಲ್ಲಿ ವ್ಯಾಪಕವಾಗಿ ಬಳಕೆಯಾಗಿವೆ ಎಂದು ಸೋದಾಹರಣ ಮಾಹಿತಿಯನ್ನು ಆಸಕ್ತಿಕರವಾಗಿ ಪೋಣಿಸಿ ಎರಡು ಪುಟಗಳ ಪ್ರಬಂಧದಂತೆ ಬರೆದು ಕಳಿಸಿದ್ದಾರೆ. ಯಾರ ವಾದ ಸರಿ ಯಾರದು ತಪ್ಪು ಎಂದು ಹಠಕ್ಕೆ ಬೀಳದೆ ನಾನು ಮತ್ತು ಸುಹಾಸ್ ಒಂದಿಷ್ಟು ಇಂಟರೆಸ್ಟಿಂಗ್ ಇಮೇಲ್ಗಳ ವಿನಿಮಯ ಮಾಡಿಕೊಂಡಿದ್ದೇವೆ. ‘ಅಂಗುಷ್ಠಪುರಾಣ’ಕ್ಕೆ ಸೇರಬಹುದಾದ ಅಂಶಗಳ ಸ್ವಾರಸ್ಯಕರ ಪಟ್ಟಿ ತಯಾರಿಸಿದ್ದೇವೆ. ಮೂಲ ಸಂಸ್ಕೃತ ಪದ ‘ಅಂಗುಷ್ಠ’ ಅಂತಲೇ ಇರುವುದು; ಕೈ ಮತ್ತು ಕಾಲಿನ ಹೆಬ್ಬೆರಳುಗಳೆರಡಕ್ಕೂ ಅಂಗುಷ್ಠ ಎಂದೇ ಹೆಸರು. ಕನ್ನಡದಲ್ಲಿ ಅದು ‘ಅಂಗುಷ್ಠ’ ಎಂಬ ರೂಪದಲ್ಲಿ, ‘ಉಂಗುಟ’ ಎಂಬ ತದ್ಭವದ ರೂಪದಲ್ಲಿ (ಕುಮಾರವ್ಯಾಸನ ಕಾವ್ಯದಲ್ಲಿರುವಂತೆ), ಅಥವಾ ‘ಉಂಗುಷ್ಠ’ ಎಂಬ ಅಪಭ್ರಂಶದ ರೂಪದಲ್ಲಿಯೂ ಬಳಕೆಯಲ್ಲಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಆ ದೃಷ್ಟಿಯಿಂದ ನೋಡಿದರೆ ಪ್ರೇಮಲೋಕದ ಹಾಡಿನಲ್ಲಿ ಉಂಗುಷ್ಠ ಅಂತಿರುವುದು ಓಕೆ. ಹೇಗೂ ಅದು ಕನ್ನಡ ಚಿತ್ರಗೀತೆ. ಉಂಗುಷ್ಠ ಪದ ಕನ್ನಡ ನಿಘಂಟುಗಳಲ್ಲೂ ಸೇರಿಕೊಂಡಿರುವುದರಿಂದ ಮಾಫಿ ಮಾಡಬಹುದು. ಆದರೆ, ‘ಪ್ರೇಮಲೋಕ’ ಸಿನೆಮಾ ಒಂದು ವೇಳೆ ಸಂಸ್ಕೃತದಲ್ಲಿ ಬಂದಿದ್ದಿದ್ದರೆ!? ಆಗ ನಿಂಬೆಹಣ್ಣಿನಂಥ ಹುಡುಗಿಯ ಹಾಡೂ ಸಂಸ್ಕೃತದಲ್ಲಿರಬೇಕಾಗುತ್ತಿತ್ತು. ಅಂಗುಷ್ಠ ಪದ ಕೂಡ ಶುದ್ಧರೂಪದಲ್ಲಿಯೇ ಕಂಗೊಳಿಸುತ್ತಿತ್ತು. ಹೀಗೇ ಒಮ್ಮೆ ಯೋಚಿಸಿ. ಅನುಷ್ಟುಪ್ ಛಂದದಲ್ಲಿ ಪ್ರೇಮಲೋಕಃ ಸಿನೆಮಾದ ಚಂದದ ಹಾಡು! ಹೀಗೆ- ನಿಂಬೂಕಾಭಾ ಇಯಂ ಬಾಲಾ ಪಶ್ಯಂತ್ವೇನಾಮಿಹಾಗತಾಂ| ಉತ್ತಮಾಂಗಂ ಸಮಾರಭ್ಯ ಅಂಗುಷ್ಠಾಂತಂ ಮನೋರಮಾ|| ಅರ್ಥವಾಗಲಿಲ್ಲವೇ? ತಾಳಿ, ಇದರ ಪ್ರತಿಪದಾರ್ಥ ಅಂದರೆ ಪದಪದಗಳಾಗಿ ಬಿಡಿಸಿದಾಗಿನ ಅರ್ಥ ಹೇಳುತ್ತೇನೆ- ನಿಂಬೂಕ ಆಭಾ (ನಿಂಬೆಹಣ್ಣಿನ ಕಾಂತಿಯುಳ್ಳ) ಇಯಂ ಬಾಲಾ (ಈ ಹುಡುಗಿ) ಇಹ ಆಗತಾಮ್ (ಇಲ್ಲಿಗೆ ಬಂದಿರುವವಳನ್ನು) ಪಶ್ಯಂತು (ನೋಡುವಂಥವರಾಗಿ). ಉತ್ತಮಾಂಗಂ (ತಲೆಯಿಂದ) ಸಮಾರಭ್ಯ (ಮೊದಲ್ಗೊಂಡು) ಅಂಗುಷ್ಠಾಂತಂ (ಕಾಲಿನ ಹೆಬ್ಬೆರಳಿನವರೆಗೂ) ಮನೋರಮಾ (ಮುದ ನೀಡುವ ಸೌಂದರ್ಯವುಳ್ಳವಳು, ಯಾವುದೇ ಕೊರತೆಯಿಲ್ಲದವಳು). ಆಹಾ! ಸಂಸ್ಕೃತ ಕಾವ್ಯ, ಅದರಲ್ಲೂ ಹೆಣ್ಣಿನ ಬಣ್ಣನೆಯೆಂದ ಮೇಲೆ ರಸಿಕತೆಯ ಮಹಾಪೂರ! ಅದಿರಲಿ, ಅಂಗುಷ್ಠಪುರಾಣದಲ್ಲಿ ಸಂಗ್ರಹಿಸಲಾದ ಇನ್ನೂ ಕೆಲವು ವಿನೋದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ. ಕಾಲಿನ ಹೆಬ್ಬೆರಳನ್ನಷ್ಟೇ ಇವತ್ತು ವ್ಯಾಖ್ಯಾನಿಸಿದ್ದು. ಕೈಯ ಹೆಬ್ಬೆರಳು ಕೂಡ ‘ಅಂಗುಷ್ಠ’ವೇ. ಅದಕ್ಕೆ ಸಂಬಂಧಿಸಿದ ಕಥೆಗಳೂ ಸ್ವಾರಸ್ಯಕರವಾಗಿವೆ. ಏಕಲವ್ಯನ ಕಥೆ ಇದೆ, ಥಮ್ಸ್ಅಪ್ ಪಾನೀಯದ ಪುರಾಣವಿದೆ, ರೂಲ್ ಆಫ್ ಥಂಬ್ ಎಂಬ ನುಡಿಗಟ್ಟಿನ ಚರಿತ್ರೆಯನ್ನು ಅರಿಯುವುದಿದೆ. ಹೆಬ್ಬೆಟ್ಟಿನ ಸಹಿ (ಅಂಗುಠಾಛಾಪ್) ಹಾಕುವ ಕ್ರಮ ಯಾವಾಗ ಎಲ್ಲಿ ಶುರುವಾಯ್ತು ಎಂದು ತಿಳಿಯುವುದಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ‘ಅಂಗುಷ್ಠಸಾಹಿತ್ಯ’ ಎಂಬ ಅಲ್ಟ್ರಾಮಾಡರ್ನ್ ಸಾಹಿತ್ಯಪ್ರಕಾರವೊಂದನ್ನು ಪರಿಚಯ ಮಾಡಿಕೊಳ್ಳುವುದಿದೆ. ಸದ್ಯಕ್ಕೆ ಅವೆಲ್ಲ ನನ್ನ ಕಂಪ್ಯೂಟರ್ನ ‘ಥಂಬ್ ಡ್ರೈವ್’ನಲ್ಲಿವೆ. ನೆಕ್ಸ್ಟ್ ಸಂಡೇ ಅಂಕಣದಲ್ಲಿ ನೋಡೋಣ. ಅಲ್ಲಿಯವರೆಗೆ, ಅಂಗುಷ್ಠಸಾಹಿತ್ಯ ಅಂದರೆ ಏನಿರಬಹುದು ಎಂದು ಯೋಚಿಸಿ. ನೀವೂ ಓರ್ವ ಅಂಗುಷ್ಠಸಾಹಿತಿ ಆಗಿದ್ದರೆ ನಿಮಗೆ ಆಗಲೇ ಗೊತ್ತಾಗಿಹೋಯ್ತು ಎಂದುಕೊಳ್ಳುವೆ. ಸಿಗೋಣ, ಮುಂದಿನವಾರ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.