Episodes
Sunday Mar 20, 2011
Angushtha Saahithya and Thumb Impression
Sunday Mar 20, 2011
Sunday Mar 20, 2011
ದಿನಾಂಕ 20 ಮಾರ್ಚ್ 2011ರ ಸಂಚಿಕೆ...
ಅಂಗುಷ್ಠ ಸಾಹಿತ್ಯವೂ ಹೆಬ್ಬೆಟ್ಟಿನ ಸಹಿಯೂ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಮೊಬೈಲ್ ಫೋನಿನ ಪುಟ್ಟಪುಟ್ಟ ಕೀಲಿಗಳ ಮೇಲೆ ಎರಡೂ ಕೈಗಳ ಹೆಬ್ಬೆರಳುಗಳನ್ನಷ್ಟೇ ಆಡಿಸಿ ಟಪಟಪ ಟೈಪಿಸಿ ಎಸ್ಸೆಮ್ಮೆಸ್ ಕಳಿಸ್ತೇವಲ್ಲಾ ಅದನ್ನೇ ನಾನು ಅಂಗುಷ್ಠಸಾಹಿತ್ಯ ಎಂದು ಕರೆದದ್ದು. ಕೆಲವರಿಗಂತೂ ಬೆಳಗಿನ ತಿಂಡಿಯ ಪ್ರವರದಿಂದ ಹಿಡಿದು, ಹೀಗೇ ಸುಮ್ಮನೆ ನಡೆದುಕೊಂಡು ಹೋಗುವಾಗ ಕಂಡ ದೃಶ್ಯ, ಥಟ್ಟನೆ ಹೊಳೆದ ಒಂದು ಐಡಿಯಾ, ತುಟಿಯಂಚಿನಲ್ಲಿ ನಗೆಮಿಂಚು ಮೂಡಿಸಿದ ಒಂದು ಜೋಕು, ಅಥವಾ ಉಮ್ಮಳಿಸಿ ಬಂದ ಒಂದು ಗಾಢ ಭಾವನೆ- ಏನನ್ನೇ ಆದರೂ ಸ್ನೇಹಿತರೊಡನೆ ಹಂಚಿಕೊಳ್ಳುವ ಮನಸ್ಸಾದರೆ ಮೊಬೈಲ್ಫೋನ್ ಮೇಲೆ ಹೆಬ್ಬೆರಳುಗಳ ನರ್ತನ ಶುರು. ಈಗೀಗಂತೂ ವೃತ್ತಪತ್ರಿಕೆಗಳು, ಟಿವಿ/ರೇಡಿಯೊ ವಾಹಿನಿಗಳು ಕೂಡ ಓದುಗ/ಕೇಳುಗರಿಂದ ಅಭಿಪ್ರಾಯ ಸಂಗ್ರಹಣೆ, ದೂರು ದಾಖಲು, ಕೋರಿಕೆ ಸಲ್ಲಿಕೆ ಮುಂತಾಗಿ ಎಲ್ಲದಕ್ಕೂ ಎಸ್ಸೆಮ್ಮೆಸ್ ವಿಧಾನವನ್ನೇ ಹೆಚ್ಚುಹೆಚ್ಚು ಬಳಸುವುದರಿಂದ ಅಲ್ಲೂ ಭರಪೂರವಾಗಿ ಅಂಗುಷ್ಠಸಾಹಿತ್ಯಕೃಷಿ. ನಿಜಕ್ಕೂ ಆಶ್ಚರ್ಯವಾಗುತ್ತದೆ, ‘ಹೆಬ್ಬೆಟ್ಟು’ ಎಂದರೆ ನಿರಕ್ಷರಕುಕ್ಷಿ ಎಂಬ ಅರ್ಥವಿದ್ದ ಕಾಲವೊಂದಿತ್ತು. ಈಗ ಅಕ್ಷರಸ್ಥರು ಅನಕ್ಷರಸ್ಥರು ಎನ್ನದೆ ಎಲ್ಲರ ಕೈಯಲ್ಲೂ ಮೊಬೈಲ್ಫೋನು. ಹೆಬ್ಬೆಟ್ಟಿಲ್ಲದೆ ಅದರ ಬಳಕೆ ಸಾಧ್ಯವಿಲ್ಲ. ಹಾಗಾಗಿ ಸಣ್ಣ-ದೊಡ್ಡ ಪ್ರಮಾಣದಲ್ಲಿ ಎಲ್ಲರೂ ಅಂಗುಷ್ಠ ಸಾಹಿತಿಗಳೇ. ಹಾಗೆ ನೋಡಿದರೆ ಮೊಬೈಲ್ಫೋನ್ ಬಳಕೆ ಅಂತಷ್ಟೇ ಅಲ್ಲ ಹೆಬ್ಬೆರಳಿಲ್ಲದಿದ್ದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನವನ್ನು ಮಾಡುವುದು ಸಾಧ್ಯವೇ ಇಲ್ಲ. ಯಾವಾಗಾದರೂ ಒಮ್ಮೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಾಗ ನಮಗೆ ಅದರ ಅರಿವಾಗುತ್ತದೆ. ಟಿವಿ ಮುಂದೆ ಕುಳಿತು ರಿಮೋಟ್ ಕಂಟ್ರೋಲ್ನ ಗುಂಡಿಗಳನ್ನು ಒತ್ತುವುದರಿಂದ ಹಿಡಿದು ಪದ್ಮಾಸನ ಹಾಕಿ ಜಪಮಾಲೆಯ ಮಣಿಗಳನ್ನು ಎಣಿಸುವುದರವರೆಗೂ ಹೆಬ್ಬೆರಳಿಲ್ಲದೆ ಏನೂ ನಡೆಯದು. ಹಾಗೆಯೇ ಬಿಲ್ಲಿಗೆ ಹೆದೆಯೇರಿಸಿ ಬಾಣ ಬಿಡುವುದಕ್ಕೂ ಸಹ ಹೆಬ್ಬೆರಳು ಬೇಕೇಬೇಕು ಎಂದು ದ್ರೋಣಾಚಾರ್ಯರಿಗೆ ಗೊತ್ತಿತ್ತು; ಅದರಿಂದಲೇ ಏಕಲವ್ಯನ ಹೆಬ್ಬೆರಳಿಗೆ ಬಂತು ಕುತ್ತು. ಆತ ಅಷ್ಟು ಕಷ್ಟಪಟ್ಟು ಕಲಿತ ಬಿಲ್ವಿದ್ಯೆಯನ್ನೆಲ್ಲ ಹೆಬ್ಬೆರಳಿನ ರೂಪದಲ್ಲಿ ಅವನಿಂದ ಕಸಿದುಕೊಳ್ಳಲಾಯ್ತು. ಹೆಬ್ಬೆರಳೊಂದಿಲ್ಲದೆ ಇಡೀ ಏಕಲವ್ಯನೇ ನಿಷ್ಪ್ರಯೋಜಕನಾಗಿ ಹೋದ! ಮಿಕ್ಕೆಲ್ಲ ಜೀವಿಗಳಿಗಿಂತ ಮನುಷ್ಯ ಇಷ್ಟೊಂದು ಮುಂದುವರಿದಿದ್ದಾನೆಂದರೆ ಅದಕ್ಕೆ ಅವನ ಹೆಬ್ಬೆರಳೇ ಕಾರಣ. ಡಾರ್ವಿನ್ ವಿಕಾಸವಾದದಲ್ಲಿ ಅದರ ಪ್ರತಿಪಾದನೆಯಿದೆ. ಕೈಗಳಿಗೆ ಹೆಬ್ಬೆರಳು ಇಷ್ಟು ಪ್ರಬುದ್ಧವಾಗಿ ಬೆಳೆದಿರುವುದು ಮನುಷ್ಯ ಪ್ರಭೇದದಲ್ಲಿ ಮಾತ್ರ. ಆದ್ದರಿಂದ ಜೀವಸಂಕುಲದಲ್ಲಿ ಹೆಬ್ಬೆರಳೇ ಮನುಷ್ಯನ ಐಡೆಂಟಿಟಿ. ಅದು ಜೀವಶಾಸ್ತ್ರೀಯ ದೃಷ್ಟಿಯಾಯ್ತು. ಇನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೂ ಮನುಷ್ಯನ ಜೀವಾತ್ಮ ಎನ್ನುವುದು ಏನಿದೆಯೋ ಅದು ಅಂಗುಷ್ಠ ಗಾತ್ರದ್ದಿರುತ್ತದಂತೆ, ಅಂಗುಷ್ಠದಲ್ಲಿಯೇ ನೆಲೆಸಿರುತ್ತದಂತೆ. ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ಒಂದು ಮಂತ್ರ ಹೀಗೆನ್ನುತ್ತದೆ- ‘ಅಂಗುಷ್ಠಮಾತ್ರಃ ಪುರುಷೋಂಗುಷ್ಠಂ ಚ ಸಮಾಶ್ರಿತಃ| ಈಶಸ್ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್||’ ಊಟದ ಕೊನೆಯಲ್ಲಿ ಬಲಗೈಯ ಹೆಬ್ಬೆರಳನ್ನು ನೆಲಕ್ಕೆ ಊರುತ್ತ ಹೇಳುವ ಮಂತ್ರವಿದು. ಅನ್ನ ಕೊಟ್ಟ ದೇವನಿಗೆ ಕೃತಜ್ಞತೆ ಸಲ್ಲಿಸುವ ಪರಿ. ಆಹಾರ ಸ್ವೀಕೃತಿಯ ಬಗ್ಗೆ ಹೆಬ್ಬೆಟ್ಟಿನ ಗುರುತಿನೊಂದಿಗೆ ಕೊಡುವ ರಸೀದಿ ಎಂದು ಹೇಳಿದರೂ ತಪ್ಪಲ್ಲ. ‘ಹೆಬ್ಬೆರಳನ್ನು ಆಶ್ರಯಿಸಿರುವ ಜೀವಾತ್ಮನು ಹೆಬ್ಬೆರಳಿನಷ್ಟು ಗಾತ್ರವನ್ನು ಹೊಂದಿದವನು. ಈತ ಪ್ರಪಂಚಕ್ಕೆಲ್ಲ ಒಡೆಯ. ಜಗತ್ತನ್ನೆಲ್ಲ ತನ್ನಲ್ಲಿ ಅಡಗಿಸಿಕೊಂಡಿರುವವನು. ಸರ್ವಸಮರ್ಥನಾಗಿ ಸಂತುಷ್ಟನಾಗುವವನು’ ಎಂದು ಮಂತ್ರದ ಅರ್ಥ. ಇದರಲ್ಲಿ ‘ಅಂಗುಷ್ಠ ಗಾತ್ರ’ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಜೀವಾತ್ಮನನ್ನಷ್ಟೇ ಅಲ್ಲ, ಈ ಪ್ರಪಂಚದ ವಿವಿಧ ವಸ್ತುಗಳನ್ನೂ ಅಂಗುಷ್ಠದ ಮಾನದಲ್ಲಿ ಅಳೆಯುವ ಪದ್ಧತಿ ಹಿಂದಿನಿಂದಲೂ ಇದೆ. ಬಡಗಿಗಳು ಮರಮಟ್ಟುಗಳ ಅಳತೆಯನ್ನು ತಮ್ಮ ಹೆಬ್ಬೆರಳಿನಿಂದಲೇ ಮಾಡುತ್ತಿದ್ದರು. ಹೆಬ್ಬೆರಳಿನ ತುದಿಯಿಂದ ಮೊದಲ ಮಡಿಕೆ(ಫೋಲ್ಡ್)ಗೆ ಸರಿಸುಮಾರು ಒಂದು ಇಂಚು ಅಥವಾ ಅಂಗುಲ ಎಂಬ ಲೆಕ್ಕ. ‘ರೂಲ್ ಆಫ್ ಥಂಬ್’ ಎಂಬ ನುಡಿಗಟ್ಟಿನ ಮೂಲ ಅದೇ. ಅಳತೆಪಟ್ಟಿ ಇಲ್ಲದಿದ್ದಾಗ ಹೆಬ್ಬೆರಳನ್ನೇ ಹೇಗೆ ಅಂದಾಜಿನ ಅಳತೆಗೆ ಉಪಯೋಗಿಸುತ್ತೇವೆಯೋ ಹಾಗೆಯೇ ಇದಮಿತ್ಥಂ ಎಂದು ನಿರ್ದಿಷ್ಟವಾದ ಲಿಖಿತ ನಿಯಮಗಳಾಗಲೀ ವೈಜ್ಞಾನಿಕವಾಗಿ ಅನುಮೋದಿಸಲ್ಪಟ್ಟ ಸಿದ್ಧಾಂತಗಳಾಗಲೀ ಇಲ್ಲದಿದ್ದಾಗ ಅಂದಾಜಿನಿಂದ ಮುನ್ನಡೆಯುವುದಕ್ಕೆ ‘ರೂಲ್ ಆಫ್ ಥಂಬ್’ ಬಳಕೆಯಾಗುತ್ತದೆ. ಅಂದಹಾಗೆ ಈ ನುಡಿಗಟ್ಟಿನ ಬಗ್ಗೆ ಒಂದು ಸ್ವಾರಸ್ಯವಾದ ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಒಂದು ದಂತಕತೆಯೂ ಇದೆ. ಅದೇನೆಂದರೆ, ೧೯ನೇ ಶತಮಾನದಲ್ಲಿ ಯುರೋಪ್ನಲ್ಲಿ ಒಂದು ವಿಚಿತ್ರ ಕಾನೂನು ಇತ್ತಂತೆ. ಗಂಡನಾದವನು ಹೆಂಡತಿಯನ್ನು ತನ್ನ ಅಂಗುಷ್ಠಕ್ಕಿಂತ ಹೆಚ್ಚು ದಪ್ಪದ ಕೋಲಿನಿಂದ ಹೊಡೆಯುವಂತಿಲ್ಲ. ಒಂದೊಮ್ಮೆ ಹೊಡೆದದ್ದೇ ಆದರೆ ‘ರೂಲ್ ಆಫ್ ಥಂಬ್’ ಪ್ರಕಾರ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹಾಗಾದರೆ, ಅಂಗುಷ್ಠದಷ್ಟು ಅಥವಾ ಅಥವಾ ಅದಕ್ಕಿಂತ ಕಡಿಮೆ ದಪ್ಪದ ಕೋಲಿನಿಂದ ಹೆಂಡತಿಯನ್ನು ಹೊಡೆಯಬಹುದೇ? ಕೋಲಿನಿಂದಲ್ಲದಿದ್ದರೆ ಮತ್ತ್ಯಾವುದೇ ಆಯುಧದಿಂದಲೇ ಆದರೂ ಒಟ್ಟಿನಲ್ಲಿ ಹೆಂಡತಿಯನ್ನು ಹೊಡೆಯಬಹುದೇ? ಆ ಅಧಿಕಾರ ಗಂಡನಿಗೆ ಇದೆಯೇ? ಅದೆಲ್ಲಿಂದ ಬಂತು? ಎಂದೆಲ್ಲ ಪ್ರಶ್ನೆಗಳು ಏಳುತ್ತವೆ. ಅವುಗಳಿಗೆ ಉತ್ತರ ಹುಡುಕಿದರೆ ಸಿಗಲಿಕ್ಕಿಲ್ಲ. ಹುಡುಕುವುದು ಸಮಂಜಸವೂ ಅಲ್ಲ. ಇದೊಂದು ಬರೀ ಜನಪದ ದಂತಕತೆ ಎಂದು ತಿಳಿದುಕೊಂಡು ಸುಮ್ಮನಾಗಬೇಕು. ಹದಿನೇಳನೇ ಶತಮಾನದ ಒಬ್ಬ ಕವಿ ‘ರೂಲ್ ಆಫ್ ಥಂಬ್’ ನುಡಿಗಟ್ಟನ್ನು ಬಳಸಿರುವುದು ಬೇರೆಯೇ ರೀತಿಯಲ್ಲಿ. ಅವನ ಪ್ರಕಾರ, ಗ್ರೀಕ್ ದೇವತೆ ಹರ್ಕ್ಯೂಲಿಸ್ನ ಪ್ರತಿಮೆಯ ಔನ್ನತ್ಯವನ್ನು ಅದರ ಹೆಬ್ಬೆರಳಿನ ಪ್ರಮಾಣದಿಂದ ಅಳೆಯಬಹುದು. ಹೆಬ್ಬೆರಳಿನದೇ ಅನುಪಾತದಲ್ಲಿ ಇತರ ಅಂಗಾಂಗಗಳೂ ಇರುತ್ತವೆಂದು ಊಹಿಸಬಹುದು. ರೋಮನ್ ದೇವತೆ ವೀನಸ್ಳ ಸೌಂದರ್ಯವನ್ನು ಹೇಗೆ ಅವಳ ಪಾದಗಳಿಂದಲೇ ಅಂದಾಜಿಸಬಹುದೋ ಹರ್ಕ್ಯೂಲಿಸ್ನ ದೇಹದಾರ್ಢ್ಯತೆಯನ್ನು ಅವನ ಹೆಬ್ಬೆರಳಿನಿಂದ ಅಂದಾಜಿಸಬಹುದು ಎಂದು ಕವಿಯ ಅಭಿಪ್ರಾಯ. ಹೆಬ್ಬೆರಳು ಮತ್ತು ಪ್ರತಿಮೆಗಳ ಸುದ್ದಿ ಬಂದಾಗ ನೆನಪಾಯ್ತು, ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ನಲ್ಲಿ ಹೆಬ್ಬೆರಳಿನದೇ ಒಂದು ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ರೂಲ್ ಆಫ್ ಥಂಬ್ನ ಕಥೆ ಅದಾದರೆ ತಂಪುಪಾನೀಯ ‘ಥಮ್ಸ್ ಅಪ್’ಗೆ ಆ ಹೆಸರು ಬಂದದ್ದು ಹೇಗೆ ಗೊತ್ತೇ? ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ಥಮ್ಸ್ಅಪ್, ಮುಂಬಯಿಯ ಪಾರ್ಲೆ ಕಂಪನಿಯ ಹೆಮ್ಮೆಯ ಉತ್ಪನ್ನವಾಗಿತ್ತು (ಈಗ ಕೋಕಾಕೋಲ ಕಂಪನಿಯ ಸ್ವತ್ತಾಗಿದೆ). ಮುಂಬಯಿಯ ಹತ್ತಿರ ‘ಮನ್ಮಾಡ್ ಹಿಲ್ಸ್’ ಅಂತೊಂದು ಬೆಟ್ಟವಿದೆ. ದೂರದಿಂದ ಅದು ಹೆಬ್ಬೆರಳನ್ನು ಮೇಲಕ್ಕೆತ್ತಿದ ಕೈಯ ಮುಷ್ಟಿಯಂತೆ ಕಾಣುತ್ತದೆ. ರೈಲಿನಲ್ಲಿ ಹೋಗುವಾಗ ಆ ನೋಟವನ್ನು ದಿನಾ ನೋಡುತ್ತಿದ್ದ ಪಾರ್ಲೆ ಕಂಪನಿ ಮಾಲೀಕ ತನ್ನ ಹೊಸ ಉತ್ಪನ್ನಕ್ಕೆ ಅದೇ ಹೆಸರನ್ನಿಟ್ಟು ಅದೇ ಆಕೃತಿಯನ್ನು ಲಾಂಛನವಾಗಿಸಿದ. ಥಮ್ಸ್ ಅಪ್ ಭಾರತೀಯ ಮಾರುಕಟ್ಟೆಯಲ್ಲಿ ತುಂಬ ಜನಪ್ರಿಯ ಪೇಯವಾಯ್ತು. ಹೆಬ್ಬೆರಳಿಗೆ ಸಂಬಂಧಿಸಿದಂತೆಯೇ ಇನ್ನೊಂದು ಇಲ್ಲಿ ಉಲ್ಲೇಖಿಸಬಹುದಾದದ್ದೆಂದರೆ ಹೈದರಾಬಾದ್ನ ಕಂಪನಿಯೊಂದರ ಉತ್ಪನ್ನ ‘ಅಂಗುಷ್ಠ’ ಎಂಬ ಹೆಸರಿನ ಫಿಂಗರ್ಪ್ರಿಂಟ್ ಆಕ್ಸೆಸ್ ಕಂಟೋಲ್ ಮೆಷಿನ್. ಆಫೀಸಿನ ಪ್ರವೇಶದ್ವಾರಕ್ಕೆ ಅದನ್ನು ಅಳವಡಿಸಿದರೆ ಉದ್ಯೋಗಿಗಳು ಕಾರ್ಡ್ ಸ್ವೈಪ್ ಮಾಡಬೇಕಂತಿಲ್ಲ, ಬಟನ್ಸ್ ಒತ್ತಬೇಕಂತಿಲ್ಲ. ಥಮ್ಸ್ಅಪ್ ಭಂಗಿಯಲ್ಲಿ ಹೆಬ್ಬೆರಳನ್ನು ಯಂತ್ರಕ್ಕೆ ತೋರಿಸಿದರೆ ಸಾಕು, ಉದ್ಯೋಗಿಯನ್ನು ಸರಿಯಾಗಿ ಗುರುತಿಸುವ ಯಂತ್ರ ಬಾಗಿಲು ತೆರೆಯುತ್ತದೆ. ಹೈಟೆಕ್ ಯುಗದಲ್ಲಿಯೂ ಹೆಬ್ಬೆಟ್ಟಿನ ಸಹಿಯೇ ಬೇಕಾಗುವುದೆಂದರೆ ಹೀಗೆ! ಇಲ್ಲಿಗೆ ಎರಡು ಕಂತುಗಳಲ್ಲಿ ಮೂಡಿಬಂದ ಅಂಗುಷ್ಠಪುರಾಣವು ಸಮಾಪ್ತವಾಯಿತು. ವಿಷಯಗಳು ಇನ್ನೂ ಇವೆಯಾದರೂ ಒಂದೇ ಟಾಪಿಕ್ನ ‘ಬೋರ್’ಗರೆತವಾದರೆ ಚೆನ್ನಾಗಿರುವುದಿಲ್ಲ. ನಿಮಗಿದು ಥಮ್ಸ್ಅಪ್ ಅನಿಸಿತೇ ಅಥವಾ ಥಂಬ್ಸ್ಡೌನ್ ಅನಿಸಿತೇ ಎಂದು ತಿಳಿಸಬಹುದು. ನಾನೀಗ ಬೆಂಗಳೂರಿನಿಂದ ಅಮೆರಿಕೆಗೆ ಮರಳಿರುವುದರಿಂದ ಅಂಗುಷ್ಠಸಾಹಿತ್ಯದ ಮೂಲಕ ಅಂದರೆ ಎಸ್ಸೆಮ್ಮೆಸ್ ಮೂಲಕ ಅನಿಸಿಕೆ ತಿಳಿಸುವುದಾಗದು. ಸದ್ಯಕ್ಕೆ ಮಿಂಚಂಚೆಯೊಂದೇ ಮಾರ್ಗ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.