Episodes

Saturday Aug 27, 2011
Believe it or not
Saturday Aug 27, 2011
Saturday Aug 27, 2011
ದಿನಾಂಕ 28 ಆಗಸ್ಟ್ 2011ರ ಸಂಚಿಕೆ...
ನಂಬಿ ಕೆಟ್ಟವರಿಲ್ಲವೋ ಈ ನಂಬಿಕೆಗಳನ್ನ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ನನಗೆ ನಂಬಿಕೆಯಿತ್ತು, ಕಳೆದವಾರದ ‘ಚಿಂತೆಗೊಂಬೆಗಳು ಚಿಂತೆಯನ್ನು ನೀಗಿಸುವ ನಂಬಿಕೆ’ ನಿಮಗೂ ಇಷ್ಟವಾಗುತ್ತದೆಂದು. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಇಷ್ಟದ ನಂಬಿಕೆಗಳನ್ನು ಬರೆದು ತಿಳಿಸಿರೆಂದಾಗ ಒಂದಕ್ಕಿಂತ ಒಂದು ಚಂದದ ನಂಬಿಕೆಗಳು ಜಮೆಯಾಗುತ್ತವೆಂದು. ಹಾಗೇ ಆಯ್ತು. ಕೆಲವರಂತೂ (ಅವರನ್ನು ಅತ್ಯಂತ ನಂಬಿಕಸ್ಥರು ಎನ್ನೋಣವೇ?) ನಂಬಿಕೆಗಳ ಉದ್ದುದ್ದ ಪಟ್ಟಿಯನ್ನೇ ತಯಾರಿಸಿದ್ದಾರೆ. ಅವುಗಳಲ್ಲಿ ಅನನ್ಯ ಮತ್ತು ಅತಿವಿಶಿಷ್ಟ ಎನಿಸುವಂಥವನ್ನು ಇವತ್ತಿನ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಅದರರ್ಥ ‘ಬೆಕ್ಕು ಅಡ್ಡ ಬಂದರೆ ಬಲು ಕೆಡುಕು’ ರೀತಿಯ ಜನಜನಿತ ನಂಬಿಕೆಗಳನ್ನು, ಬಹಳಷ್ಟು ಮಂದಿ ಬರೆದುಕಳಿಸಿದ್ದರೂ ಬಿಟ್ಟುಬಿಟ್ಟಿದ್ದೇನೆ. ಕೆಟ್ಟದಾಗುತ್ತದೆ ಎಂದು ಎಚ್ಚರಿಸುವ ನಂಬಿಕೆಗಳೂ ಬಾಳಿನಲ್ಲಿರಬೇಕು ನಿಜ, ಆದರೆ ಒಳ್ಳೆಯದಾಗುತ್ತದೆ ಎಂಬ ಪಾಸಿಟಿವ್ ಥಿಂಕಿಂಗ್ನ ನಂಬಿಕೆಗಳು- ಗ್ವಾಟೆಮಾಲ ಜನರ ಗೊಂಬೆನಂಬಿಕೆಯಂಥವು- ಮನಸ್ಸಿಗೆ ಹೆಚ್ಚು ಖುಷಿಕೊಡುತ್ತವೆ. ಇಲ್ಲಿ ನಿಮಗೆ ಅಂಥವೇ ಹೆಚ್ಚು ಕಂಡುಬರುತ್ತವೆ. ಅಷ್ಟಕ್ಕೂ ಇದು ನಂಬಿಕೆಗಳಲ್ಲಿ ನಂಬಿಕೆ ಹುಟ್ಟಿಸುವ ಹುನ್ನಾರವೇನಲ್ಲ. ನಂಬಿಕೆಗಳ ಸೊಗಸನ್ನು, ಸೊಗಡನ್ನು ಪರಿಚಯಿಸುವ ಹೂಹಾರ. ಅಷ್ಟೇ. ಮಗುವಿನ ಲಾಲನೆಪಾಲನೆಗೂ ನಂಬಿಕೆಗಳಿಗೂ ಗಾಢ ಸಂಬಂಧ. ಮುಗ್ಧಸೌಂದರ್ಯದ ಮಗುವಿಗೆ ದೃಷ್ಟಿ ಬೀಳದಿರಲೆಂದು ಹಣೆಗೆ/ಗಲ್ಲಕ್ಕೆ ಕಪ್ಪು ಬೊಟ್ಟು ಇಡುವುದರಿಂದ ಅದು ಆರಂಭವಾಗುತ್ತದೆ. ಅಷ್ಟೇಅಲ್ಲ, ಬಳ್ಳಾರಿಯಿಂದ ಶಕುಂತಲಾ ನಾಯಕ್ ಬರೆದಿರುವಂತೆ “ಮಗು ಹುಟ್ಟಿದ ಏಳನೇದಿನ ಬ್ರಹ್ಮ ಅದರ ಹಣೆಬರಹ ಬರಿತಾನೆ ಅಂತ ಮಗುವಿನ ಹಾಸಿಗೆ ಪಕ್ಕ ಒಂದು ಪುಸ್ತಕ-ಪೆನ್ನು ಅಥವಾ ಸ್ಲೇಟ್-ಬಳಪ ಇಡುತ್ತೇವೆ. ಬ್ರಹ್ಮನ ಹತ್ತಿರ ಮಗುವಿಗೆ ಆಯುರಾರೋಗ್ಯ ವಿದ್ಯೆ-ಬುದ್ಧಿ ಕೊಡುವ ಹಣೆಬರಹ ಬರೆಯುವಂತೆ ಬೇಡಿಕೊಳ್ಳುತ್ತೇವೆ.” ಇನ್ನು, ವರ್ಷದೊಳಗಿನ ಪ್ರಾಯದ ಮಕ್ಕಳು ಕಿರಿಕಿರಿಯಿಂದ ರಂಪ ಮಾಡುವುದನ್ನು ನಿಲ್ಲಿಸಲು ‘ಅರಿಶಿನ ನೀರು ತೆಗೆಯುವ’ ಕ್ರಮವನ್ನು ವಿವರಿಸಿದ್ದಾರೆ ಬೆಂಗಳೂರಿನ ರೂಪಾ ದೀಪಕ್. “ನಮ್ಮ ಮಕ್ಕಳಿಬ್ಬರೂ ಮಗುವಾಗಿದ್ದಾಗ ಅರಶಿನ ನೀರು ತೆಗೆದು ಪ್ರಯೋಜನವಾಗಿರುವುದರಿಂದ ಈ ನಂಬಿಕೆಯ ಮೇಲೆ ನಂಬಿಕೆ ಇಟ್ಟಿದ್ದೇನೆ” ಎನ್ನುತ್ತಾರವರು. ತಾನು ಚಿಕ್ಕವನಿದ್ದಾಗ ಪ್ರತಿ ಸಂಜೆ ತನ್ನಮ್ಮ ದೃಷ್ಟಿ ನೀವಾಳಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ ಮೇರಿಲ್ಯಾಂಡ್ನ ಕೃಷ್ಣರಾಜ ಭಟ್. ಮಕ್ಕಳಿಗೆ ಒಳ್ಳೆಯ ನಡತೆಯನ್ನು ಕಲಿಸಿಕೊಡುವುದಕ್ಕೂ ನಂಬಿಕೆಗಳನ್ನು ಬಳಸುವುದಿದೆ. ‘ಓದುತ್ತಿರುವ ಪುಸ್ತಕವನ್ನು ತೆರೆದಿಟ್ಟು ಹಾಗೇ ನಿದ್ದೆಮಾಡಿದ್ರೆ ಓದಿದ್ದೆಲ್ಲಾ ಮರೆತುಹೋಗುತ್ತೆ’ ಎನ್ನುವುದರಲ್ಲಿ ನಂಬಿಕೆಯ ಭಾಗ ಮುಖ್ಯವಲ್ಲ. ಪುಸ್ತಕವನ್ನು ಓದಿದಮೇಲೆ ಅಚ್ಚುಕಟ್ಟಾಗಿ ಮುಚ್ಚಿಡಬೇಕು ಎಂಬ ಪಾಠ ಮುಖ್ಯ. ಬೆಂಗಳೂರಿನ ವೀಣಾ ಅನಂತ ಭಟ್ ಬರೆದುಕಳಿಸಿದ ಒಂದು ತಮಾಷೆ ನಂಬಿಕೆಯಲ್ಲೂ ಅಂಥದೇ ಸಂದೇಶವಿದೆ. “ಹುಡುಗಿ ತೆಂಗಿನಕಾಯಿ ತುರಿಯುವಾಗ ತಿಂದರೆ ಅವಳ ಮದುವೆಯಂದು ಮಳೆ ಬರುತ್ತದೆ”- ಇಲ್ಲಿ ಮದುವೆದಿನದ ಮಳೆ ಮುಖ್ಯವಲ್ಲ. ಅಡುಗೆಮಾಡುತ್ತಿರುವಾಗ ಹಾಗೆಲ್ಲ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂಬ ಕಿವಿಮಾತು ಮುಖ್ಯ. ಹಾಗೆಯೇ ಮಂಗಳೂರಿನ ನಮಿತಾ ಶಿವಪ್ರಸಾದ್ ತಿಳಿಸಿರುವಂತೆ ‘ಮನೆಯಲ್ಲಿ ಮಕ್ಕಳು ತುಂಬಾ ಗಲಾಟೆ ಮಾಡುತ್ತಲೇ ಇದ್ದರೆ ಇಡ್ಲಿ/ದೋಸೆಗೆ ರುಬ್ಬಿಟ್ಟ ಹಿಟ್ಟು ಉಬ್ಬುವುದೇ ಇಲ್ಲ’ ಎಂಬ ನಂಬಿಕೆಯೂ ಇದೆ. ರುಚಿರುಚಿಯಾದ ಇಡ್ಲಿ ದೋಸೆ ಬೇಕು ಅಂತಾದ್ರೆ ಗಲಾಟೆ ಮಾಡಬೇಡಿ ಎಂದು ಮಕ್ಕಳನ್ನು ದಬಾಯಿಸುವುದಕ್ಕೆ ಅದೊಂದು ದಾರಿ! ಆಶ್ಚರ್ಯವೆಂದರೆ ಇಂಥ ನಂಬಿಕೆಗಳೆಲ್ಲ ತಲೆತಲಾಂತರಗಳಿಂದ ಬಂದವುಗಳು. ಬೆಂಗಳೂರಿನ ವೇದಾ ಹೆಬ್ಬಾರ್ ಬರೆಯುತ್ತಾರೆ- “ನಾನು ಚಿಕ್ಕವಳಿದ್ದಾಗ ಯಾವಾಗಾದ್ರೂ ಬಿಕ್ಕಳಿಕೆ ಬಂದರೆ ‘ಏನನ್ನೋ ಕದ್ದುತಿಂದಿದ್ದಿ. ಅದಕ್ಕೇ ಬಿಕ್ಕುತ್ತಿದ್ದಿ’ ಎನ್ನುತ್ತಿದ್ದರು ಹಿರಿಯರು. ಕೆಲವೊಮ್ಮೆ ಅಡುಗೆಮನೆಯಲ್ಲಿ ಬೆಲ್ಲ ಅಥವಾ ಕೊಬ್ಬರಿಚೂರನ್ನು ಕದ್ದುತಿಂದದ್ದೂ ಇರಬಹುದೆನ್ನಿ. ಆದರೆ ಬಿಕ್ಕುತ್ತಿರುವಾಗ ಅಂಥ ಆರೋಪ ಕೇಳಿ ಒಮ್ಮೆಲೇ ಸಿಟ್ಟುಬರುತ್ತಿತ್ತು, ಬಿಕ್ಕಳಿಕೆ ನಿಂತುಹೋಗುತ್ತಿತ್ತು! ಮತ್ತೆನೋಡುತ್ತೇನಾದರೆ ಅವರು ಬೇಕಂತಲೇ ಹಾಗೆಮಾಡುತ್ತಿದ್ದರು, ಬಿಕ್ಕಳಿಕೆಯಿಂದ ನನ್ನ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ. ಈಗ ನನ್ನ ಮಕ್ಕಳಿಗೆ ಬಿಕ್ಕಳಿಕೆ ಬಂದಾಗ ನಾನೂ ಅದೇ ಉಪಾಯ ಮಾಡುತ್ತೇನೆ. ಕ್ಷಣಾರ್ಧದಲ್ಲಿ ಬಿಕ್ಕಳಿಕೆ ಬಂದ್!” ಮಡಿಕೇರಿಯಿಂದ ಗೀತಾ ಭಾವೆ ಅವರು ಬರೆದುಕಳಿಸಿದ ನಂಬಿಕೆಗಳ ಪಟ್ಟಿಯಲ್ಲಿ ಇದೊಂದನ್ನು ಗಮನಿಸಿ. “ಒಲೆ ಕೂಗಿದ್ರೆ ಅವತ್ತು ಮನೆಗೆ ಯಾರೋ ನೆಂಟರು ಬರ್ತಾರೆ ಅಂತ ಲೆಕ್ಕ!” ಈ ನಂಬಿಕೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಒಂದು ತಲೆಮಾರಿನಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ಒಲೆ ಕೂಗೋದು ಅಂದ್ರೇನು? ಇನ್ನೇನಿಲ್ಲ, ಉರಿಯುತ್ತಿರುವ ಸೌದೆ ಬುರ್ರ್ಬುರ್ರ್ ಎಂದು ಶಬ್ದ ಮಾಡುವುದು. ಯಾವಾಗಲೂ ಈ ಶಬ್ದ ಆಗುವುದಿಲ್ಲ. ಯಾವತ್ತಾದ್ರೂ ಅಪರೂಪಕ್ಕೆ ಬರುತ್ತದೆ. ಆಗಿನ ಕಾಲದಲ್ಲಿ ‘ನೆಂಟರು ಬರುವುದು’ ಎನ್ನುವುದೂ ಅಪರೂಪದ ಅನಿರೀಕ್ಷಿತ ಅನಂದದಾಯಕ ಪ್ರಕ್ರಿಯೆ. ಈಗ ನೆಂಟರು ಬರುವುದಿದ್ದರೂ ಇಮೇಲ್/ಫೋನ್ನಲ್ಲಿ ಎಪಾಯಿಂಟ್ಮೆಂಟ್ ತೆಗೆದುಕೊಂಡೇ ಬರಬೇಕು. ಟಿವಿಯಲ್ಲಿ ನೆಚ್ಚಿನ ಧಾರಾವಾಹಿ ಪ್ರಸಾರದ ವೇಳೆಯಲ್ಲಿ ಬಂದರಂತೂ ನೆಂಟರ ಪಾಡು ನೆಂಟರಿಗೇ ಪ್ರೀತಿ. ಅಲ್ಲದೇ ಈಗ ಅಡುಗೆಅನಿಲದ ಒಲೆಗಳು ಹಳ್ಳಿಗಳಲ್ಲೂ ಇರುವುದರಿಂದ ಸೌದೆ ಒಲೆ ಉರಿಸುವ, ಅದು ಬುರ್ರ್ಬುರ್ರ್ ಎನ್ನುವ ಪ್ರಮೇಯವೂ ಇಲ್ಲವಲ್ಲ! ಇನ್ನೊಂದು ಸೋಜಿಗದ ನಂಬಿಕೆಯ ಕುರಿತು ಬೆಳಕು ಚೆಲ್ಲಿದ್ದಾರೆ ಬೆಂಗಳೂರಿನ ಪ್ರತಿಮಾ ಶಾನಭಾಗ. “ಉಳುಕು ಪರಿಹಾರಕ್ಕೊಂದು ನಂಬಿಕೆಯ ಚಿಕಿತ್ಸೆ. ತಾಯಿಯ ಬಸಿರಿನಿಂದ ಕಾಲು ಮುಂದಾಗಿ ಜನಿಸಿದ ವ್ಯಕ್ತಿಯ ಕಾಲನ್ನು ಉಳುಕು ಉಂಟಾದ ಜಾಗಕ್ಕೆ ಮೂರುಸರ್ತಿ ಮೇಲಿನಿಂದ ಕೆಳಕ್ಕೆ ನೀವುವುದರ ಮೂಲಕ ಉಳುಕು ನಿವಾರಣೆಯಾಗುತ್ತದೆ. ಸಾಗರ ಪಟ್ಟಣದಲ್ಲಿರುವ ನನ್ನ ತಂದೆಯವರು ತುಂಬಾ ವರ್ಷಗಳಿಂದ ಇದನ್ನೊಂದು ಪ್ರವೃತ್ತಿ ಮತ್ತು ಸಮಾಜಸೇವೆಯಾಗಿ ಮಾಡುತ್ತಿದ್ದಾರೆ. ಓಡಾಡಲು, ಮೈಕೈ ಅಲ್ಲಾಡಿಸಲೂ ಆಗದೆ ನೋವಿನಿಂದ ನರಳುವವರು ಬರೀ ಒಂದು ಸಲ ನಮ್ಮಪ್ಪನ ಕಾಲುಗಳಿಂದ ನೀವಿಸಿಕೊಂಡರೆ ೬೦ ಪ್ರತಿಶತ ಗುಣಮುಖರಾಗುತ್ತಾರೆ. ಎರಡು-ಮೂರು ಬಾರಿ ಈ ಚಿಕಿತ್ಸೆ ಮಾಡಿದರೆ ಉಳುಕು/ಊತ ಸಂಪೂರ್ಣ ಮಾಯ! ನನ್ನ ಅಪ್ಪ ಅವರ ಫ್ರೆಂಡ್ಸ್ಸರ್ಕಲ್ನಲ್ಲಿ ‘ಡಾ.ಒದೇಗೌಡ್ರು’ ಅಂತನೇ ಫೇಮಸ್ಸು!” ನಂಬಿಕೆಯ ನೆಪದಲ್ಲಿ ದಿನಾಬೆಳಿಗ್ಗೆ ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ ಕ್ಯಾಲಿಫೋರ್ನಿಯಾದಲ್ಲಿರುವ ಶ್ವೇತಾ ಸತೀಶ್. ಅವರೆನ್ನುತ್ತಾರೆ- “ಚಿಕ್ಕಂದಿನಲ್ಲಿ ನಮ್ಮಮ್ಮ ದಿನಾಬೆಳಿಗ್ಗೆ ಎಬ್ಬಿಸುವಾಗ ಬಲಗಡೆಯಿಂದ ಎದ್ದೇಳಿ ಅನ್ನೋರು. ಬಲಗಡೆಯಿಂದ ಎದ್ದರೆ ದಿನವೆಲ್ಲ ಚೆನ್ನಾಗಿರುತ್ತೆ ಅಂತ ನಂಬಿಕೆ. ನಾವೇನಾದ್ರೂ ಅಕಸ್ಮಾತ್ ಎಡಗಡೆಯಿಂದ ಎದ್ದರೆ ಅಮ್ಮ ಮತ್ತೊಮ್ಮೆ ಮಲಗಿಸಿ ಏಳುವಂತೆ ಮಾಡುತ್ತಿದ್ದದ್ದೂ ಇದೆ. ಅಷ್ಟೂ ಅಭ್ಯಾಸವಾಗಿ ಹೋಗಿರುವುದರಿಂದ ಈಗ ದಿನಾಲೂ ಏಳುವಾಗ ಅಮ್ಮ ಇಲ್ಲಿಲ್ಲದಿದ್ದರೂ ನನಗೆ ಅವಳ ಧ್ವನಿ ಕೇಳಿದಂತಾಗುತ್ತದೆ!” ಬಲಗಡೆಯಿಂದ ಎದ್ದರೆ ಅವತ್ತಿನ ದಿನ ಒಳ್ಳೆದಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅನಿರುದ್ಧ ಕುಲಕರ್ಣಿ ಬೆಂಗಳೂರಿನಿಂದ ಬರೆಯುತ್ತಾರೆ, “ನಾನು ದಿನಾಬೆಳಗ್ಗೆ ೮ ಗಂಟೆಗೆ ಆರ್.ಟಿ.ನಗರದ ಮನೆಯಿಂದ ಹನುಮಂತ ನಗರದಲ್ಲಿರುವ ಕಾಲೇಜಿಗೆ ಹೋಗುವಾಗ ಎಫ್.ಎಂ ರೈನ್ಬೋ ಆಕಾಶವಾಣಿಯಲ್ಲಿ ಅಮೃತವರ್ಷಿಣಿ ಕಾರ್ಯಕ್ರಮ ಕೇಳುತ್ತ ಹೋಗುವುದು ರೂಢಿ. ಎಂಟಕ್ಕೆ ಸರಿಯಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸಾರವಾಗುತ್ತದೆ. ಯಾವತ್ತು ಒಳ್ಳೆಯ ಕಲಾವಿದರ (ಉದಾ: ಭೀಮಸೇನ್ಜೋಶಿ, ಕುಮಾರಗಂಧರ್ವ, ರಶೀದ್ಖಾನ್ ಇತ್ಯಾದಿ) ಕಾರ್ಯಕ್ರಮವಿರುತ್ತೋ, ಆ ಇಡೀದಿನ ಲವಲವಿಕೆಯಿಂದಿರುತ್ತೆ. ಇದು ನನ್ನ ನಂಬಿಕೆ.” ಗೋಕಾಕದ ಅನೀಲ ಕುಸುಗಲ್ ಅವರಿಗೆ ಮಹತ್ವದ ಕೆಲಸಕ್ಕೆ ಹೋಗುವಾಗ ಚೀಲದಲ್ಲೊಂದು ಗಜ್ಜರಿ(ಕ್ಯಾರೆಟ್) ಇದ್ದರೆ ಹೋದಕಾರ್ಯ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಕೊನೆಯಲ್ಲಿ, ಸ್ವಲ್ಪ ತಮಾಷೆಯ ನಂಬಿಕೆಯೊಂದನ್ನು ಉಲ್ಲೇಖಿಸಿ ಇದನ್ನು ಮುಗಿಸುತ್ತೇನೆ. ಟೆಕ್ಸಾಸ್ನಿಂದ ರಾಘವೇಂದ್ರ ಭಟ್ಟ ಅವರು ಬರೆದಿದ್ದಾರೆ- “ಮನೆಯಲ್ಲಿ ಯಾವುದೇ ವಸ್ತು ಕಳೆದುಹೋದರೆ, ಎಲ್ಲಿಟ್ಟಿದ್ದೇವೆಂದು ನೆನಪಾಗದೆ ಹುಡುಕಾಡುವ ಸನ್ನಿವೇಶ ಬಂದರೆ ಮೂರುಸಲ ‘ಕಾರ್ತವೀರ್ಯಾರ್ಜುನ’ ಎಂದರಾಯ್ತು ವಸ್ತು ಇದ್ದಲ್ಲಿಗೇ ನಾವು ಹೋಗುವಂತಾಗುತ್ತದೆ, ಕಳೆದುಹೋದ ವಸ್ತು ಸಿಕ್ಕಿಬಿಡುತ್ತದೆ!” * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125


No comments yet. Be the first to say something!