Episodes
Saturday Dec 17, 2011
Bindupoorvaka Dakaara
Saturday Dec 17, 2011
Saturday Dec 17, 2011
ದಿನಾಂಕ 18 ಡಿಸೆಂಬರ್ 2011ರ ಸಂಚಿಕೆ...
ಬಿಂದುಪೂರ್ವಕ ಡಕಾರ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಬಬ್ರುವಾಹನ ಚಿತ್ರದ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ...’ ಹಾಡನ್ನು ಕೇಳದ ಕನ್ನಡಿಗರಿರಲಿಕ್ಕಿಲ್ಲ. ಕೇಳಿ ಮೆಚ್ಚಿಕೊಳ್ಳದವರಂತೂ ಖಂಡಿತ ಇಲ್ಲ. ಡಾ.ರಾಜ್ ದ್ವಿಪಾತ್ರದಲ್ಲಿ ಅದ್ಭುತವಾದ ಅಭಿನಯ. ಡಾ. ಪಿ.ಬಿ.ಶ್ರೀನಿವಾಸ್ ಜತೆಗೂಡಿ ಅತ್ಯಮೋಘ ಗಾಯನ. ನೆನೆದುಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಮೈ ನವಿರೇಳುತ್ತದೆ. ಈಗ ಈ ಹಾಡಿನ ಒಂದು ನಿರ್ದಿಷ್ಟ ಭಾಗದತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಅರ್ಜುನ: “ಭಂಡರೆದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಡೀವಿ... ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳಖಂಡ ಕೀರ್ತಿಪ್ರಚಂಡ...” ಬಬ್ರುವಾಹನ: “ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ...” ಗೀತರಚನಕಾರ ಹುಣಸೂರು ಕೃಷ್ಣಮೂರ್ತಿ ಇಲ್ಲಿ ಎಷ್ಟು ಚೆನ್ನಾಗಿ ಪದಗಳನ್ನು ಹೆಣೆದಿದ್ದಾರೆ! ಶಬ್ದಾಲಂಕಾರದಿಂದಲೇ ರಣರಂಗದ ದೃಶ್ಯವನ್ನು ಅದೆಷ್ಟು ಅದ್ಭುತವಾಗಿ ನಮ್ಮ ಕಣ್ಮುಂದೆ ತಂದುನಿಲ್ಲಿಸಿದ್ದಾರೆ! ಭಂಡ, ಗುಂಡಿಗೆ, ಖಂಡಿಸುತ, ರಣಚಂಡಿ, ಗಾಂಡೀವಿ... ಎಲ್ಲ ಪದಗಳಲ್ಲೂ ಒಂದು ಸಾಮಾನ್ಯ ಅಂಶವನ್ನು ಗಮನಿಸಿದಿರಾ? ಅಂಥದೇ ಇನ್ನೊಂದು ಪದ್ಯಭಾಗವನ್ನು ಈಗ ನೋಡೋಣ. ಇದು ಪುರಂದರದಾಸರ ಜನಪ್ರಿಯ ರಚನೆ ‘ಜೋಜೋ ಶ್ರೀಕೃಷ್ಣ ಪರಮಾನಂದ’ದಲ್ಲಿ ಕೊನೆಯ ಚರಣ: ಅಂಡಜವಾಹನ ಅನಂತಶಯನ ಪುಂಡರೀಕಾಕ್ಷ ಶ್ರೀಪರಮಪಾವನ ಹಿಂಡುದೈವದ ಗಂಡ ಉದ್ದಂಡನೇ ನಮ್ಮ ಪಾಂಡುರಂಗ ಶ್ರೀಪುರಂದರವಿಠಲ ಇನ್ನೂ ಒಂದು ಉದಾಹರಣೆ ಬೇಕೇ? ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಲ್ಲಿನ ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ ಚಂಡವ್ಯಾಘ್ರನೇ ನೀನಿದೆಲ್ಲವ ನುಂಡುಸಂತಸದಿಂದಿರು ಸಾಕಾಗಲಿಲ್ಲವೇ? ತಗೊಳ್ಳಿ ಕುಮಾರವ್ಯಾಸನದೂ ಒಂದಿರಲಿ. ಸಭಾಪರ್ವದಿಂದ ಭಾಮಿನಿ ಷಟ್ಪದಿ- ಕಂಡು ಕೃಷ್ಣನನಿವರ ಕಾಣಿಸಿ ಕೊಂಡನರಸು ಕ್ಷೇಮಕುಶಲವ ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು ಕಂಡೆವೈ ನಿನ್ನಮಳ ಕರುಣಾ ಖಂಡ ಜಲಧಿಯ ಭಕ್ತಜನಕಾ ಖಂಡಲ ಧ್ರುಮವೆಂದು ತಕ್ಕೈಸಿದನು ಹರಿ ಪದವ ನಾನೇನು ಹೇಳಲಿಕ್ಕೆ ಹೊರಟಿದ್ದೇನೆಂಬುದನ್ನು ಬಹುಶಃ ಇಷ್ಟೊತ್ತಿಗೆ ನೀವೇ ಕಂಡುಕೊಂಡಿದ್ದೀರಿ! ಹೌದು, ಬಿಂದುಪೂರ್ವಕ ಡಕಾರ ಪ್ರಾಸ. ಅನುಸ್ವಾರದ ನಂತರ ಡ ಅಕ್ಷರ ಇರುವ ಪದಗಳಿಂದಾದ ಪ್ರಾಸ. ದೇವನಾಗರಿ ಲಿಪಿಯಲ್ಲಿ (ಬಹುಶಃ ಹಳಗನ್ನಡದಲ್ಲೂ; ವಿಶೇಷವಾಗಿ ಕೈಬರಹದಲ್ಲಿ) ಅನುಸ್ವಾರವನ್ನು ಚುಕ್ಕಿಯಾಗಿ ಬರೆಯುವುದರಿಂದ, ಅನುಸ್ವಾರದ ನಂತರ ಡ ಅಕ್ಷರವಿದ್ದರೆ ಅದು ಬಿಂದುಪೂರ್ವಕ ಡಕಾರ. ಈ ಪದಪುಂಜವನ್ನು ನಾನು ಎರವಲು ಪಡೆದದ್ದು ಶತಾವಧಾನಿ ಡಾ.ಆರ್.ಗಣೇಶ್ ಅವರ ಇತ್ತೀಚಿನ ಪುಸ್ತಕ ‘ಬ್ರಹ್ಮಪುರಿಯ ಭಿಕ್ಷುಕ’ದಿಂದ. ಡಿವಿಜಿಯವರ ಜೀವನದ ರಸಪ್ರಸಂಗಗಳನ್ನು ಬಣ್ಣಿಸಿರುವ ಈ ಪುಸ್ತಕದಲ್ಲಿ ಬಿಂದುಪೂರ್ವಕ ಡಕಾರದ ಸ್ವಾರಸ್ಯಕರ ಉಲ್ಲೇಖಗಳಿವೆ. ಅವುಗಳನ್ನು ಆಮೇಲೆ ವಿವರಿಸುತ್ತೇನೆ. ಅದಕ್ಕೆ ಮೊದಲು ಬಿಂದುಪೂರ್ವಕ ಡಕಾರದ ಇನ್ನೂ ಕೆಲವು ಮೋಜೆನಿಸುವ ಉದಾಹರಣೆಗಳನ್ನು ನಿಮಗೆ ತೋರಿಸುತ್ತೇನೆ. ಅಮೆರಿಕನ್ನಡಿಗ ಕವಿ, ಲೇಖಕ ಡಾ.ಮೈ.ಶ್ರೀ.ನಟರಾಜ ಅವರದೊಂದು ಭಂಡಕವಿತೆ ಇದೆ, ‘ಹ್ಯೂಸ್ಟನ್ ಹುಳಿ ಹೆಂಡ’ ಅಂತ ಅದರ ಶೀರ್ಷಿಕೆ. ಮೂರ್ನಾಲ್ಕು ದಶಕಗಳ ಹಿಂದೆ ಅವರು ಅಮೆರಿಕ ದೇಶಕ್ಕೆ ಬಂದ ಹೊಸತರಲ್ಲಿ ಬರೆದದ್ದಿರಬೇಕು. ಅವರ ಸಮಕಾಲೀನ ಅಮೆರಿಕನ್ನಡಿಗರು ಅಪರೂಪಕ್ಕೆ ಒಂದೆಡೆ ಸೇರಿದಾಗ, ಅದರಲ್ಲೂ ಗುಂಡುಪಾರ್ಟಿ ಏನಾದರೂ ಏರ್ಪಡಿಸಿದರೆ ಈ ಕವಿತೆ ಪಾರ್ಟಿಯ ನಶೆಯನ್ನು ಮತ್ತಷ್ಟು ಏರಿಸುತ್ತದಂತೆ. ಡೊಳ್ಳುಕುಣಿತದ ದೋಂಡೂಬಾಯಿ ಅಮೆರಿಕಾ ನೋಡಿ ಬಿಟ್ಟಳು ಬಾಯಿ ಟೆಕ್ಸಾಸ್ನಲ್ಲೂ ತೆಂಗಿನಕಾಯಿ ಮೆಕ್ಸಿಕೊ ಮಣ್ಣಿನ ಮೆಣಸಿನಕಾಯಿ ಎಂದು ಶುರುವಾಗುತ್ತದೆ ಕವಿತೆ. ಮಾಮೂಲಿ ಅಂತ್ಯಪ್ರಾಸವು ಮುಂದಿನ ಒಂದು ಚರಣದಲ್ಲಿ ಬಿಂದುಪೂರ್ವಕ ಡಕಾರ ಪ್ರಾಸವಾಗುತ್ತದೆ- ಹಿಂದೂಮುಂದೂ ನೋಡದೆ ದೋಂಡೂ ತರಿಸಿದಳಣ್ಣ ಘಂಘಂ ಗುಂಡು ಕುಡಿಯುವ ಇವಳ ವೈಖರಿ ಕಂಡು ಮುತ್ತಿದರಣ್ಣ ಗಂಡ್ಗಳ ಹಿಂಡು ಆಮೇಲೆ ಮತ್ತಷ್ಟು ಬಿಂದುಪೂರ್ವಕ ಡಕಾರ. ದೋಂಡೂಬಾಯಿ ಜತೆಸೇರಿದ ಗಂಡಸರ (ಗಂಡಂದಿರ?) ವಿವರ. ತಂಡದ ಭಂಡರ ದೊಡ್ಡ ಮುಖಂಡ ಕೌಬಾಯಿ ಹ್ಯಾಟಿನ ಮಹಾ ಪ್ರಚಂಡ... ಹೀಗೆ ಸಾಗುತ್ತದೆ ಭಂಡಕವಿತೆ. ಶಾಂತಮ್ಮ ಪಾಪಮ್ಮ! ಇದೇನಿದು ಟೀಟೋಟ್ಲರ್ ಅಂಕಣದಲ್ಲಿ ಗುಂಡುತುಂಡಿನ ಸಮಾಚಾರ! ಇದನ್ನು ಖಂಡತುಂಡವಾಗಿ ನಿರಾಕರಿಸಬೇಕು ಅಂತೀರಾ? ಆಯ್ತು ಈಗ ಪಾಪಪರಿಹಾರಕ್ಕೆ ಒಂದಿಷ್ಟು ಭಜನೆ ಮಾಡೋಣ. ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ ಪಾಂಡುರಂಗನನ್ನು ನೆನೆಯೋಣ. ‘ಕಂಡೆ ನಾ ಗೋವಿಂದನ ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ...’ ಎಂದು ಸ್ತುತಿಸೋಣ. ‘ದಂಡಿಗೆ ಬೆತ್ತ ಹಿಡಿಯೋದಕ್ಕೆ ಮಂಡೆ ಮಾಚಿ ನಾಚುತಲಿದ್ದೆ... ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ... ಆದದ್ದೆಲ್ಲ ಒಳಿತೇ ಆಯಿತು’ ಎನ್ನೋಣ. ಖಂಡೀಭವದ್ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧಿಮಹಾ ಕಾಂಡಾತಿಚಿತ್ರಗತಿ ಶೌಂಡಾದ್ಯಹೈಮರದ ಭಾಂಡಾಪ್ರಮೇಯಚರಿತ ಚಂಡಾಶ್ವಕಂಠಮದ ಶುಂಡಾಲದುರ್ಹೃದಯ ಗಂಡಾಭಿಖಂಡಕರದೋ ಚಂಡಾಮರೇಶಹಯ ತುಂಡಾಕೃತೇದೃಶಮ ಖಂಡಾಮಲಂಪ್ರದಿಶಮೇ ಎಂದು ವಾದಿರಾಜರ ದಶಾವತಾರ ಸ್ತುತಿಯನ್ನು ಪಠಿಸೋಣ. ಶಾಸ್ತ್ರೀಯ ಸಂಗೀತದಲ್ಲಿ ‘ದಂಡಮುಪಟ್ಟಿ ಕಮಂಡಲಮುಪೂನಿ ಕೊಂಡಾಡುಚುನು ಕೋದಂಡಪಾಣಿನಿ...’ ಎಂದು ತ್ಯಾಗರಾಜರ ಕೀರ್ತನೆ ಹಾಡೋಣ. ಅಲ್ಲಿಗೆ ಸಂಸ್ಕೃತದಲ್ಲೂ ತೆಲುಗಿನಲ್ಲೂ ಬಿಂದುಪೂರ್ವಕ ಡಕಾರ ಇದೆಯೆಂದಾಯ್ತು. ತೆಲುಗೇನು ತಮಿಳಿನಲ್ಲೂ ಇದೆ- ‘ಕಂಡುಕೊಂಡೇನ್ ಕಂಡುಕೊಂಡೇನ್’ ಅಂತ ಒಂದು ಸಿನೆಮಾದ ಹೆಸರೇ ಇದೆ; ಹಾಗೆಯೇ ಹಿಂದಿ-ಇಂಗ್ಲಿಷ್ಗಳಲ್ಲೂ ಇದೆ: ‘ಸಂಡೇ ಹೋ ಯಾ ಮಂಡೇ... ರೋಜ್ ಖಾವೋ ಅಂಡೇ!’ ಮೊಟ್ಟೆ ಜಾಹಿರಾತಿನಲ್ಲಂತೂ ಖಂಡಿತ ಇದೆ! ಡಕಾರ ಇದೆ ಸರಿ, ಅದಕ್ಕೇನಂತೆ? ಸೋ ವ್ಹಾಟ್? ಎಂದು ಕೆಲವರಿಗನಿಸಬಹುದು. ಅಂಥವರಿಗೆ ಸಣ್ಣಸಣ್ಣ ಸಂಗತಿಗಳಲ್ಲಿ ಸ್ವಾರಸ್ಯ ಕಂಡುಕೊಳ್ಳುವ ಆಸಕ್ತಿಯಿಲ್ಲ ಎಂದು ಬಿಟ್ಟುಬಿಡೋಣ. ನಾವು ಮಾತ್ರ ‘ತೊಂಡೆಕಾಯಿ ಬೆಂಡೆಕಾಯಿ ತೋಟದಲ್ಲಿದೆ... ಉಂಡೆಉಂಡೆ ಬೆಲ್ಲಬೆಲ್ಲ ಡಬ್ಬಿಯಲ್ಲಿದೆ’ನಂಥ ಶಿಶುಗೀತೆಯಲ್ಲೂ, ‘ಗಂಡಹೆಂಡಿರ ಜಗಳ ಉಂಡು ಮಲಗುವತನಕ’ದಂಥ ಗಾದೆಯಲ್ಲೂ, ‘ಹೆಂಡ-ಸಾರಾಯಿ ಸಹವಾಸ ಹೆಂಡತಿಮಕ್ಕಳ ಉಪವಾಸ’ದಂಥ ಘೋಷಣೆಯಲ್ಲೂ, ಕೊನೆಗೆ ‘ದಂಡಪಿಂಡ’ದಂಥ ಬೈಗುಳದಲ್ಲೂ ಬಿಂದುಪೂರ್ವಕ ಡಕಾರ ಇದೆಯೆಂದು ಕೊಂಡಾಡೋಣ. ಏಕೆಂದರೆ ಆಘ್ರಾಣಿಸುವ ಮನಸ್ಸಿದ್ದರೆ ಪರಿಮಳವು ದುಂಡುಮಲ್ಲಿಗೆಯಲ್ಲೂ ಸಿಗುತ್ತದೆ, ಕೆಂಡಸಂಪಿಗೆಯಲ್ಲೂ ಸಿಗುತ್ತದೆ. ಹಾಂ! ಡಿವಿಜಿ ಕುರಿತು ಶತಾವಧಾನಿ ಬರೆದ ಪುಸ್ತಕದಲ್ಲಿನ ಬಿಂದುಪೂರ್ವಕ ಡಕಾರಗಳ ಬಗ್ಗೆ ಹೇಳುತ್ತೇನೆಂದಿದ್ದೆನಲ್ಲ? ಗುಂಡಪ್ಪನವರದು ಬಾಲ್ಯದಿಂದಲೂ ತಿಂಡಿಪೋತ ಸ್ವಭಾವವಂತೆ. ಅವರ ಸೋದರತ್ತೆ ‘ಗುಂಡಂ ಭಂಡಂ ತಿಂಡಿಕಿ ಶೂರಂ ಚಂಡಾಲ ಮುಂಡೇಗಂಡಂ’ ಎಂದು ಗೇಲಿಮಾಡುತ್ತಿದ್ದರಂತೆ. ಇನ್ನೊಂದು ಪ್ರಸಂಗ ಶಿವಶಂಕರ ಶಾಸ್ತ್ರಿಗಳೆಂಬ ಪ್ರಕಾಂಡಪಂಡಿತರು ಸ್ವರಚಿತ ಕಾವ್ಯವಾಚನ ಮಾಡಿದ್ದು. ಅದರಲ್ಲಿ ‘ಹೇ ರುಂಡಮಾಲೀ! ಕಾದು ಕೆಂಡವಾಗಿರುವೀ ಬಂಡೆಯ ಮೇಲೆ ನಾಂ ಬಂದು ಕುಂಡೆಯೂರಲು...’ ಎಂಬ ಭಾಗವನ್ನೋದಿದಾಗ ಡಿವಿಜಿಯವರನ್ನೂ ಒಡಗೂಡಿ ಅಲ್ಲಿದ್ದವರಿಗೆಲ್ಲ ಅಸಾಧ್ಯ ನಗು. ಆದರೆ ಪಂಡಿತರಿಗೆ ಅವಮಾನವಾಗಬಾರದೆಂದು ತಡೆದುಕೊಂಡರು. ವೆಂಕಣ್ಣಯ್ಯನವರಿಗಂತೂ ನಗುತಡೆದು ಕೆಮ್ಮುಬರಲಾರಂಭಿಸಿದಾಗ ಶಾಸ್ತ್ರಿಗಳೇ ನೆರವಿಗೆ ಬರಬೇಕಾಯ್ತು. ಆಮೇಲೆ ಡಿವಿಜಿ ‘ಏನಿಲ್ಲ, ನಿಮ್ಮ ಕಾವ್ಯದ ಬಿಂದುಪೂರ್ವಕ ಡಕಾರ ಪ್ರಾಸದ ಪದಗಳು ತ್ರಾಸ ಕೊಟ್ಟವು. ಇಂಥ ಶಬ್ದಾಲಂಕಾರ ವಿಕಾರವೆಂಬುದಕ್ಕೆ ನನ್ನ ಹೆಸರೇ ಸಾಕ್ಷಿ!’ ಎಂದು ಶಾಸ್ತ್ರಿಗಳಿಗೆ ವಿವರಿಸಿದರಂತೆ. ಮತ್ತೊಮ್ಮೆ ಯಾವುದೋ ಸಭೆಗೆ ಡಿವಿಜಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ಕಾರ್ಯಕರ್ತರು ಬಂದಿದ್ದರು. ಮೊದಲೇ ಮೂಲವ್ಯಾಧಿಯಿಂದ ನರಳುತ್ತಿದ್ದ ಗುಂಡಪ್ಪನವರಿಗೆ ಆ ಸಭೆಗೆ ಹೋಗಲಿಕ್ಕಾಗುವುದಿಲ್ಲ ಎಂದು ಗೊತ್ತಿತ್ತು. ಕಡೇಪಕ್ಷ ಸಂದೇಶವನ್ನಾದ್ರೂ ಕೊಡಿ ಸಭೆಯಲ್ಲಿ ವಾಚಿಸುತ್ತೇವೆ ಎಂದು ಕಾರ್ಯಕರ್ತರು ದುಂಬಾಲು ಬಿದ್ದಾಗ ಹಾಸ್ಯದ ತುಂಟತನದಿಂದ ಡಿವಿಜಿ ಹೀಗೆ ಸಂದೇಶ ಬರೆದುಕೊಟ್ಟಿದ್ದರಂತೆ- “ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ?” ಬಿಂದುಪೂರ್ವಕ ಡಕಾರದ ಬಗ್ಗೆ ಇಷ್ಟೆಲ್ಲ ಓದಿದ ಮೇಲೆ ಈಗ ಕೊನೆಯಲ್ಲೊಂದು ರಸಪ್ರಶ್ನೆ. ತುಂಬಾ ಸುಲಭವಿದೆ. ಉತ್ತರ ನಿಮಗೆ ಖಂಡಿತ ಗೊತ್ತಾಗುತ್ತದೆ. ‘ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಬಿಂದುಪೂರ್ವಕ ಡಕಾರ’ - ಐದಕ್ಷರಗಳ ಪದಕ್ಕೆ ಹೀಗೆ ಸುಳಿವು ಕೊಟ್ಟರೆ ಪದಬಂಧದಲ್ಲಿ ನೀವು ಏನೆಂದು ತುಂಬುತ್ತೀರಿ? ನಿಮ್ಮ ಉತ್ತರವನ್ನು ಇಮೇಲ್ನಲ್ಲಿ ಬರೆದು ಸೆಂಡ್ ಮಾಡಿ ಎನ್ನುತ್ತ ನಾನು ಈ ಹರಟೆಯನ್ನು ಎಂಡ್ ಮಾಡುತ್ತಿದ್ದೇನೆ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.