Episodes
Saturday Dec 03, 2011
Bus Drivers Remembered And Respected
Saturday Dec 03, 2011
Saturday Dec 03, 2011
ದಿನಾಂಕ 4 ಡಿಸೆಂಬರ್ 2011ರ ಸಂಚಿಕೆ...
ಬಸ್ ಡ್ರೈವರರ ಗುಣಗಾನ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮಾಲ್ಗುಡಿ ಡೇಸ್ ಮಾತ್ರವಲ್ಲ, ಆರ್.ಕೆ.ನಾರಾಯಣ್ರ ಎಲ್ಲ ಕಥೆ-ಕಾದಂಬರಿಗಳಲ್ಲಿನ ಪಾತ್ರಗಳದೂ ಒಂದು ವಿಶಿಷ್ಟ ಛಾಪು. ಅವು ಓದುಗನನ್ನು ಆಪ್ಯಾಯಮಾನವಾಗಿ ತಟ್ಟುತ್ತವೆ. ಮುಟ್ಟಿ ಮೈದಡವಿ ಕುಶಲ ಕೇಳುವ ಆಪ್ತತೆ ಅವುಗಳಲ್ಲಿರುತ್ತದೆ. ಅಸಲಿಗೆ ಅವುಗಳನ್ನು ಕಥಾಪಾತ್ರಗಳು ಎನ್ನುವುದಕ್ಕಿಂತ ನಮ್ಮ ಸುತ್ತಲಿನ ಜನಸಾಮಾನ್ಯರಿಂದ ಆಯ್ದುಕೊಂಡ ವ್ಯಕ್ತಿಗಳು ಎಂದರೂ ಸರಿಯೇ. ಒಬ್ಬ ಅಂಚೆಯಣ್ಣ ತಾನಪ್ಪ, ಸಿಹಿತಿಂಡಿ ಅಂಗಡಿಯ ಮಿಠಾಯಿವಾಲಾ ಜಗನ್, ಪ್ರವಾಸಿಗರ ಗೈಡ್ ರಾಜು, ಪ್ರಿಂಟಿಂಗ್ ಪ್ರೆಸ್ನ ನಟರಾಜ್, ಇಂಗ್ಲಿಷ್ ಲೆಕ್ಚರರ್ ಕೃಷ್ಣ, ಬ್ಯಾಂಕರ್ ಮಾರ್ಗಯ್ಯ ಮುಂತಾದವರೆಲ್ಲ ನಮಗೆ ಇವತ್ತಿಗೂ ಅಲ್ಲಲ್ಲಿ ಭೇಟಿಯಾಗುತ್ತಾರೆ. ಅವರ ತದ್ರೂಪಿಗಳು ನಮ್ಮ ಆಸುಪಾಸಿನಲ್ಲಿ ಕಂಡುಬರುತ್ತಾರೆ. ಮತ್ತೆ ತುಂಟ ಹುಡುಗ ಸ್ವಾಮಿನಾಥನ್ (ಚಾಮಿ) ಅಂತೂ ಮನೆಮನೆಯಲ್ಲೂ ಇರುವವನೇ. ಮಾಲ್ಗುಡಿ ಡೇಸ್ ಟಿವಿ ಧಾರಾವಾಹಿಯ ಅಭೂತಪೂರ್ವ ಯಶಸ್ಸಿಗೂ ಮುಖ್ಯ ಕಾರಣ ಅದರಲ್ಲಿನ ಸರಳಾತಿಸರಳ, ಚಿರಪರಿಚಿತ ಎನ್ನುವಂಥ ಪಾತ್ರಗಳೇ. ಇರಲಿ, ನಾನೀಗ ಮಾಡಹೊರಟಿರುವುದು ಆರ್.ಕೆ.ನಾರಾಯಣ್ ಸಾಹಿತ್ಯ ವಿಮರ್ಶೆಯಲ್ಲ. ಅದಕ್ಕೆ ಅರ್ಹತೆಯೂ ನನ್ನಲ್ಲಿಲ್ಲ. ಆದರೆ ಬಹಳ ದಿನಗಳಿಂದ ಅಂದ್ಕೊಳ್ತಿದ್ದೆ ಆರ್.ಕೆ.ನಾರಾಯಣ್ ಕಲ್ಪನೆಯ ಪಾತ್ರಗಳಂತಿರುವ, ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಯಾವುದಾದರೂ ಒಂದು ವೃತ್ತಿಪಾತ್ರವನ್ನು ಆಯ್ದುಕೊಂಡು ಸೋದಾಹರಣವಾಗಿ ಬರೆಯಬೇಕು ಅಂತ. ಹಾಗೆ ಯೋಚಿಸುತ್ತಿದ್ದಾಗ (ಆಕ್ಚುವಲಿ ಬಸ್ನಲ್ಲಿ ಹೋಗುತ್ತಿದ್ದಾಗ) ಹೊಳೆದದ್ದೇ ಬಸ್ ಡ್ರೈವರ್ಗಳ ಬಗ್ಗೆಯೇ ಯಾಕಾಗಬಾರದು ಎಂಬ ಐಡಿಯಾ. ನನಗೆ ತಿಳಿದ ಮಟ್ಟಿಗೆ ಬಸ್ ಡ್ರೈವರ್ ಪಾತ್ರವನ್ನು ಪ್ರಧಾನ ಭೂಮಿಕೆಯಲ್ಲಿಟ್ಟು ಆರ್.ಕೆ.ನಾರಾಯಣ್ ಬರೆದಿಲ್ಲ. ಆ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಪ್ರಯತ್ನ. ನನ್ನ ನೆನಪಿಗೆ ಬರುವ ಕೆಲವು ಬಸ್ ಡ್ರೈವರರ ಕುರಿತು ಒಂದೊಂದು ಪ್ಯಾರಗ್ರಾಫ್ ಬರೆದರೂ ಸಾಕು ಒಟ್ಟುಸೇರಿ ಅದೊಂದು ಹಿತಾನುಭವ ನೀಡಬಹುದು, ನಿಮ್ಮ ಚಿತ್ತಭಿತ್ತಿಯಲ್ಲೂ ಬೇರೆಬೇರೆ ಬಸ್ ಡ್ರೈವರರ ಚಿತ್ರ ಮೂಡಬಹುದು ಎಂಬ ಆಶಯ. ಇದು ಬಸ್ ಡ್ರೈವರರ ಗುಣಗಾನ. ಇಲ್ಲಿ ಅಮೆರಿಕದ ಪ್ರಾಥಮಿಕ ಶಾಲೆಗಳಲ್ಲಿ ‘ಬಸ್ ಡ್ರೈವರ್ ಎಪ್ರೀಸಿಯೇಷನ್ ಡೇ’ (ಶೈಕ್ಷಣಿಕ ವರ್ಷದಲ್ಲೊಂದು ದಿನ ಆಯಾಯ ಸ್ಕೂಲ್ಬಸ್ಗಳ ಚಾಲಕರನ್ನು ತರಗತಿಗಳೊಳಗೆ ಕರೆದು ಮಕ್ಕಳಿಂದ ಅವರಿಗೆ ಗೌರವ ಕೃತಜ್ಞತೆ ಸಲ್ಲಿಕೆ) ಇರುವಂತೆ ಒಂದು ವಿಶಿಷ್ಟ ಪ್ರಯೋಗ. ಮೂರ್ನಾಲ್ಕು ದಶಕಗಳ ಹಿಂದಿನ ಮಾತು. ಆಗ ಕಾರ್ಕಳದಿಂದ ನಮ್ಮೂರು ಮಾಳಕ್ಕೆ ‘ವಿನಾಯಕ ಮೋಟರ್ ಸರ್ವೀಸ್’ ಎಂಬ ಬಸ್ಸು ಬಂದುಹೋಗುತ್ತಿತ್ತು. ದಿನಕ್ಕೆ ನಾಲ್ಕು ಟ್ರಿಪ್. ನಮ್ಮೂರಿಗೆ ಬಸ್ ಸರ್ವೀಸ್ ಆರಂಭವಾದಾಗ ಇದ್ದ ಡ್ರೈವರನ ಹೆಸರು ಶಂಕರ. ಆತನ ಮುಖಚಹರೆ ನನಗೆ ಅಷ್ಟು ಸರಿಯಾಗಿ ನೆನಪಿಲ್ಲ. ಆಮೇಲೆ ತುಂಬಾ ವರ್ಷಗಳ ಕಾಲ ಹರಿಯಪ್ಪ ಎಂಬುವವ ವಿನಾಯಕ ಬಸ್ಸಿನ ಡ್ರೈವರ್. ನಮ್ಮೂರಿಗೆ ಹೊರಜಗತ್ತಿನೊಂದಿಗೆ ಕೊಂಡಿಯೆಂದರೆ ಆ ಬಸ್ ಒಂದೇ. ಮಳೆಗಾಲದಲ್ಲಿ ಅದೂ ಇಲ್ಲ. ಹಾಗಾಗಿ ಹರಿಯಪ್ಪನೆಂದರೆ ನಮ್ಮೂರಿಗೆ ದೇವದೂತ ಇದ್ದಂತೆ. ಬೆಳಗ್ಗಿನ ಮೊದಲ ಟ್ರಿಪ್ನಲ್ಲಿ ಕಾರ್ಕಳದಿಂದ ದಿನಪತ್ರಿಕೆಯ ಕಟ್ಟು ತರುವವನೂ ಅವನೇ. ‘ಸಟ್ಟಾ’ ಆಟದ ಓಪನಿಂಗ್ ಕ್ಲೋಸಿಂಗ್ ಅಂಕಿಗಳನ್ನು ತಿಳಿಯಹೇಳುವವನೂ ಅವನೇ. ಊರಿನವರಿಗೆಲ್ಲ ಪರಿಚಿತ, ಆಪ್ತ. ಅಪರೂಪಕ್ಕೆ ರಜೆ ಹಾಕಿದಂದು ಬದಲಿ ಡ್ರೈವರ್ ಬಂದರೆ ಇದು ನಮ್ಮ ಬಸ್ಸು ಹೌದೋಅಲ್ಲವೋ ಎಂದು ಅನುಮಾನ. ಅಂತಹ ಅವಿನಾಭಾವ ಸಂಬಂಧ. ನನ್ನ ಅಜ್ಜನಮನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ. ನಮ್ಮೂರಿಂದ ಅಲ್ಲಿಗೆ ಹೋಗಬೇಕಿದ್ದರೆ ಕಾರ್ಕಳದಿಂದ ಗುರುವಾಯನಕೆರೆಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಗವರ್ನ್ಮೆಂಟ್ ಬಸ್ ಹಿಡಿಯಬೇಕು. ಕಾರ್ಕಳ-ಗುರುವಾಯನಕೆರೆ ರೂಟ್ನಲ್ಲಿ ಬೇರೆಬೇರೆ ಕಂಪನಿಗಳ ಪ್ರೈವೇಟ್ ಬಸ್ಸುಗಳಿವೆಯಾದರೂ ‘ರಾಜ್ಶೆಟ್ಟಿಯ ಹನುಮಾನ್ ಬಸ್ಸು’ ನಮಗೆಲ್ಲ ತುಂಬಾ ಇಷ್ಟವಾಗುತ್ತಿದ್ದದ್ದು. ನನಗೆ ನೆನಪಿರುವಂತೆ ರಾಜ್ಶೆಟ್ಟಿ ಅದೇ ಹನುಮಾನ್ ಟ್ರಾನ್ಸ್ಪೋರ್ಟ್ ಕಂಪನಿಯ ಅದೇ ರೂಟ್ನಲ್ಲಿ ತುಂಬಾ ವರ್ಷ ಸೇವೆ ಸಲ್ಲಿಸಿದ ಜನಾನುರಾಗಿ ಡ್ರೈವರ್. ಕಾರ್ಕಳದಿಂದ ಗುರುವಾಯನಕೆರೆ ಮಾರ್ಗದಲ್ಲಿ ಸಿಗುವ ಸಣ್ಣಪುಟ್ಟ ಊರುಗಳಲ್ಲೆಲ್ಲ ರಾಜ್ಶೆಟ್ಟಿ ಸೇವೆಯ ಫಲಾನುಭವಿಗಳು. ಪತ್ರಿಕೆಗಳ ಕಟ್ಟು, ಮಲ್ಲಿಗೆ ದಂಡೆ, ಬೀಡಿ ಪೊಟ್ಟಣ, ಜ್ವರದ ಮಾತ್ರೆ ಇತ್ಯಾದಿ ಚಿಕ್ಕಪುಟ್ಟ ಬುಟ್ಟಿ ಕೆಲಸಗಳಿಂದ ಹಿಡಿದು ದುಡ್ಡಿನ ಲೇವಾದೇವಿಗೂ ಅತ್ಯಂತ ನಂಬುಗೆಯ ಮೆಸ್ಸೆಂಜರ್ ಆಗಿ ರಾಜ್ಶೆಟ್ಟಿ ಸೇವೆಯನ್ನು ಜನ ಬಳಸುತ್ತಿದ್ದರು. ನೆಕ್ಸ್ಟ್ ನೆನಪಾಗುವವರು ಉಮೇಶ ಮತ್ತು ಹವಾಲ್ದಾರ ಎಂಬಿಬ್ಬರು ಡ್ರೈವರರು. ಇವರಿಬ್ಬರು ನನ್ನ ನೆನಪಿನ ಡ್ರೈವರರು ಎನ್ನುವುದಕ್ಕಿಂತಲೂ ನಮ್ಮಕ್ಕನ ಮಗನಿಗೆ ಸ್ಮರಣೀಯರು. ಇದೂ ಅಷ್ಟೇ, ಹತ್ತಿಪ್ಪತ್ತು ವರ್ಷಗಳ ಹಿಂದಿನ ಕಥೆ. ನಮ್ಮಕ್ಕನ ಮನೆ ಇರುವುದು ಸೊರಬದಲ್ಲಿ. ಅಲ್ಲಿಗೆ ಕಾರ್ಕಳದಿಂದ ನೇರ ಬಸ್ ಇಲ್ಲ. ಕಾರ್ಕಳದಿಂದ ಹಾಲಾಡಿ ಎಂಬಲ್ಲಿಗೆ ಹೋಗಿ ಅಲ್ಲಿ ಕುಂದಾಪುರ-ಅಕ್ಕಿಆಲೂರು ನ್ಯಾಷನಲ್ ಕಂಪನಿಯ ಬಸ್ ಹತ್ತಬೇಕು. ಅದು ಸೊರಬದ ಮೂಲಕ ಹೋಗುತ್ತದೆ. ನಮ್ಮಕ್ಕ ತವರುಮನೆ ಭೇಟಿಯ ಪಯಣಕ್ಕೆ ಹೆಚ್ಚಾಗಿ ಆ ಬಸ್ಸನ್ನೇ ಅವಲಂಬಿಸಿದ್ದರು. ಕುಂದಾಪುರದಿಂದ ಅಕ್ಕಿಆಲೂರು ಸಾಕಷ್ಟು ದೂರದ ದಾರಿಯಾದ್ದರಿಂದ, ಬೆಳಗ್ಗೆಯಿಂದ ಸಂಜೆವರೆಗೂ ಪ್ರಯಾಣವಾದ್ದರಿಂದ, ಆಪೋಸಿಟ್ ಡೈರೆಕ್ಷನ್ನಲ್ಲಿ ಎರಡು ಬಸ್ಸುಗಳು. ಅವುಗಳ ಡ್ರೈವರರೇ ಅನುಕ್ರಮವಾಗಿ ಉಮೇಶ ಮತ್ತು ಹವಾಲ್ದಾರ. ನಮ್ಮಕ್ಕನ ಮಗನಿಗೆ ಆಗಿನ್ನೂ ಐದಾರು ವರ್ಷಗಳ ಪ್ರಾಯ ಅಷ್ಟೇ, ಎಲ್ಲೋ ಯಾರೋ ಹೀಗೇ ಮಾತಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿ ಉಮೇಶ-ಹವಾಲ್ದಾರರ ಡ್ರೈವಿಂಗ್ ಚಾಕಚಕ್ಯತೆಯ ವ್ಯತ್ಯಾಸ ಅರಿತುಕೊಂಡಿದ್ದಾನೆ. ಮುದುಕ ಹವಾಲ್ದಾರನಿಗಿಂತ ನವಯುವಕ ಉಮೇಶನೇ ಒಳ್ಳೆಯ ಡ್ರೈವರ್, ಅವನ ಬಸ್ಸೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದಾನೆ. ಎಲ್ಲಿಯವರೆಗೆಂದರೆ, ಸೊರಬದಿಂದ ನಮ್ಮೂರಿಗೆ ಬರುವಾಗ ಉಮೇಶನ ಬಸ್ ಇದ್ದರೆ ಹಿಂದಿರುಗುವಾಗಲೂ ಉಮೇಶನ ಬಸ್ಸೇ ಆಗಬೇಕು, ಅಪ್ಪಿತಪ್ಪಿಯೂ ಹವಾಲ್ದಾರನ ಬಸ್ ಇರುವ ದಿನದಂದು (ಅದನ್ನು ಸರಿಯಾಗಿ ಲೆಕ್ಕಹಾಕಿ) ಹೊರಡಬೇಡವೆಂದು ನಮ್ಮಕ್ಕನಿಗೆ ತಾಕೀತು ಮಾಡುತ್ತಿದ್ದ! ನಾವೆಲ್ಲ ಬೇಕಂತ್ಲೇ ಅವನನ್ನು ರೇಗಿಸುತ್ತಿದ್ದೆವು. ನೀನಿಲ್ಲಿ ಅಜ್ಜನಮನೆಯಲ್ಲಿದ್ದಾಗಲೇ ಉಮೇಶ-ಹವಾಲ್ದಾರ ಇಬ್ಬರೂ ರಜಾ ಹಾಕಿ ಈಗ ಅವರ ಪಾಳಿಯ ದಿನಗಳು ಬದಲಾಗಿವೆ, ನಿನಗೆ ಸೊರಬಕ್ಕೆ ವಾಪಸಾಗೋದಕ್ಕೆ ಹವಾಲ್ದಾರನ ಬಸ್ಸೇ ಸಿಗೋದು ನೋಡ್ತಿರು ಎಂದರೆ ಸಿಟ್ಟು ಬರ್ತಿತ್ತು ಅವನಿಗೆ. ಈಗಿನ್ನು ಒಂದು ಸ್ಯಾಂಪಲ್ ಅಮೆರಿಕದ ಬಸ್ ಡ್ರೈವರರದು. ಕಳೆದೆರಡು ವರ್ಷಗಳಿಂದ ನಾನು ಕೆಲಸಕ್ಕೆ ಹೋಗಿಬರಲು ಬಸ್ ಮತ್ತು ಮೆಟ್ರೋಟ್ರೈನ್ ಬಳಸುತ್ತಿರುವುದರಿಂದ ಒಳ್ಳೊಳ್ಳೆಯ ಅನುಭವಗಳಾಗುತ್ತಿರುತ್ತವೆ. ಕಳೆದವರ್ಷ ಒಮ್ಮೆ ಹವಾಮಾನ ಇಲಾಖೆಯ ಮುನ್ಸೂಚನೆಯನ್ನೂ ಮೀರಿ ವಾಷಿಂಗ್ಟನ್ನಲ್ಲಿ ಹಠಾತ್ತನೆ ಹಿಮಪಾತವಾಗಿತ್ತು. ವಾಹನಗಳ ಓಡಾಟವೆಲ್ಲ ಅಸ್ತವ್ಯಸ್ತಗೊಂಡಿತ್ತು. ಸಂಜೆ ಆಫೀಸಿಂದ ಹಿಂದಿರುಗುವವರಿಗೆ ದೊಡ್ಡ ಫಜೀತಿ. ಮೆಟ್ರೋರೈಲು ಸ್ಟೇಷನ್ನಲ್ಲೇ ರಾತ್ರಿಯಿಡೀ ಕಳೆಯಬೇಕೇನೋ ಎಂಬಂಥ ಪರಿಸ್ಥಿತಿ. ಬಸ್ಸುಗಳೆಲ್ಲ ಸ್ಥಗಿತ. ಕೊನೆಗೂ ನಮ್ಮನೆ ಕಡೆಗೆ ಹೋಗುವ ಒಂದು ಬಸ್ಸು ಬಂತು. ಎಲ್ಲರೂ ಅದರೊಳಕ್ಕೆ ನುಗ್ಗಿದರು. ಹಿಮ ಏಕಪ್ರಕಾರವಾಗಿ ಬೀಳುತ್ತಲೇ ಇತ್ತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹಿಮದಲ್ಲಿ ಹೂತುಹೋದ ಕಾರುಗಳು. ಅಂಥಾದ್ರಲ್ಲಿ ಜೈ ಎಂದು ಹೊರಟಿತು ನಮ್ಮ ಬಸ್ಸು. ಅವತ್ತು ಡ್ರೈವರ್ ಒಬ್ಬ ಸರ್ದಾರ್ಜಿ. ಚಾಲಾಕಿನ ಚಾಲಕ. ಪ್ರತಿಯೊಂದು ಸ್ಟಾಪ್ನಲ್ಲಿ ನಿಂತು ಜನರನ್ನಿಳಿಸಿ ಹೊರಡುವಾಗ ಹಿಮದಿಂದಾಗಿ ತುಂಬಾ ಕಷ್ಟವಾಗುತ್ತಿತ್ತು. ಆದರೂ ಚಾಕಚಕ್ಯತೆಯಿಂದ ಆತ ಬಸ್ಸನ್ನು ಮುನ್ನಡೆಸಿದಾಗ ಎಲ್ಲರಿಂದ ಚಪ್ಪಾಳೆ. ಬೇರಾವ ಅಮೆರಿಕನ್ ಅಥವಾ ಮೆಕ್ಸಿಕನ್ ಡ್ರೈವರನಾಗಿದ್ದರೂ ಜನರನ್ನೆಲ್ಲ ಅರ್ಧದಲ್ಲೇ ಬಿಟ್ಟು ಖಾಲಿ ಬಸ್ಸನ್ನು ಡಿಪೋಗೆ ಓಡಿಸಿ ನಿಟ್ಟುಸಿರು ಬಿಡುತ್ತಿದ್ದನೇನೊ, ನಮ್ಮ ವೀರ ಸರ್ದಾರ್ಜಿ ಮಾತ್ರ ಎಳ್ಳಷ್ಟೂ ಧೃತಿಗೆಡದೆ ಪ್ರತಿಯೊಬ್ಬ ಪ್ರಯಾಣಿಕನನ್ನೂ ಅವರವರ ಸ್ಟಾಪ್ನಲ್ಲಿ ಇಳಿಸಿಯೇ ಮುಂದುವರಿಸಿ ಗ್ರೇಟ್ ಹೀರೊ ಅನ್ನಿಸಿಕೊಂಡ. ಅವತ್ತಿನ ಬಸ್ ಪ್ರಯಾಣವನ್ನು ನೆನೆದರೆ ಈಗಲೂ ಮೈಝುಮ್ಮೆನ್ನುತ್ತದೆ. ಲೇಟೆಸ್ಟ್ ಟಚ್: ಮೊನ್ನೆ ಜುಲೈಯಲ್ಲಿ ಬೆಂಗಳೂರಿನಲ್ಲಿ ‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’ ಪುಸ್ತಕಗಳ ಬಿಡುಗಡೆಯಾಯ್ತಲ್ವಾ? ಅಚ್ಚಾದ ಪುಸ್ತಕಗಳ ಮೊದಲ ಐದೈದು ಪ್ರತಿಗಳ ಕಟ್ಟನ್ನು ಮೈಸೂರಿನಿಂದ ಗೀತಾ ಬುಕ್ ಹೌಸ್ನ ಸತ್ಯನಾರಾಯಣ ರಾಯರು ಬೆಂಗಳೂರಿನಲ್ಲಿದ್ದ ನನಗೆ ತಲುಪುವಂತೆ ಮಾಡಿದ್ದು ಹೇಗೆ ಗೊತ್ತೇ? ಮೈಸೂರು-ಬೆಂಗಳೂರು ಐರಾವತ ಬಸ್ಸೊಂದರ ಡ್ರೈವರ್ ಮೂಲಕ ಪಾರ್ಸೆಲ್ ಕಳಿಸಿ, ನಾನದನ್ನು ಮೆಜೆಸ್ಟಿಕ್ನಲ್ಲಿ ಪಡಕೊಂಡದ್ದು. ಬಸ್ ನಂಬರ್ ಮತ್ತು ಚಾಲಕನ ಮೊಬೈಲ್ ನಂಬರುಗಳೇ ಟ್ರ್ಯಾಕಿಂಗ್ ಮೆಕಾನಿಸಮ್. ಪುಸ್ತಕಗಳು ಸುಸೂತ್ರವಾಗಿ ನನ್ನ ಕೈಸೇರಿದವು! ಎಂದರೋ ಬಸ್-ಡ್ರೈವರುಲು ಅಂದರಿಕಿ ವಂದನಮುಲು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.