Episodes
Saturday May 14, 2011
Capital Bikeshare
Saturday May 14, 2011
Saturday May 14, 2011
ದಿನಾಂಕ 15 ಮೇ 2011ರ ಸಂಚಿಕೆ...
ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಸೈಕಲ್ ಎಂದ ಕೂಡಲೇ ಬಹುಶಃ ನಮ್ಮಲ್ಲಿ ಎಷ್ಟೋ ಜನರಿಗೆ ಹಳೆಯ ನೆನಪುಗಳ ದೊಡ್ಡ ಮೂಟೆಯೇ ಬಿಚ್ಚಿಕೊಳ್ಳುತ್ತದೆ. ಸೈಕಲ್ ಸವಾರಿ ಮಾಡುತ್ತ ನೆನಪಿನ ಓಣಿಗಳಲ್ಲಿ ಸುತ್ತಿಬಂದ ಹಾಯಾದ ಅನುಭವವಾಗುತ್ತದೆ. ಆ ಮಟ್ಟಿಗೆ ಹೇಳುವುದಾದರೆ ‘ಬುಲಂದ್ ಭಾರತ್ಕೀ ಬುಲಂದ್ ತಸ್ವೀರ್...’ ಎಂದು ಬಜಾಜ್ ಸ್ಕೂಟರ್ ಎಷ್ಟೇ ಬೀಗಿಕೊಂಡರೂ ಅದಕ್ಕಿಂತ ನೂರುಪಟ್ಟು ಬುಲಂದ್ ತಸ್ವೀರ್ (ವಿಶಾಲ ಚಿತ್ರಹಾಸು) ಸೈಕಲ್ನದು; ಸೈಕಲ್ ಎಂಬ ಪದದ ಪ್ರಸ್ತಾಪವೊಂದೇ ಹೊತ್ತುತರಬಲ್ಲ ಹಚ್ಚಹಸಿರು ನೆನಪುಗಳದು. ಇರಲಿ, ಈ ಲೇಖನ ಅಂತಹ ಸೈಕಲ್ ನೆನಪುಗಳದಲ್ಲ. ಬರೆಯಬೇಕೆಂದುಕೊಂಡಿರುವುದು ಬಾಡಿಗೆ ಸೈಕಲ್ ಬಗ್ಗೆ. ಆದರೆ ಬಾಡಿಗೆ ಸೈಕಲ್ ಎಂದರೇನು? ಮರೆತೇ ಹೋಗಿರಬಹುದಾದ, ಅಥವಾ ಈಗಿನ ಯುವಪೀಳಿಗೆಗೆ ಗೊತ್ತೇ ಇಲ್ಲದ ವಿಚಾರವಾಗಿರುವ ಸಾಧ್ಯತೆಯೂ ಇದೆ! ಅದಕ್ಕಾಗಿ, ಬಾಡಿಗೆ ಸೈಕಲ್ ನೆನಪುಗಳನ್ನು ತಾಜಾಗೊಳಿಸುವ ಒಂದೆರಡು ಉಲ್ಲೇಖಗಳನ್ನು ಇಲ್ಲಿ ಸೇರಿಸುತ್ತಿದ್ದೇನೆ. ಅಲ್ಲಿಇಲ್ಲಿ ಬ್ಲಾಗುಗಳಲ್ಲಿ ಸಿಕ್ಕಿದ ಈ ರಸಘಟ್ಟಿಗಳನ್ನು ಒಮ್ಮೆ ಹಾಗೇಸುಮ್ಮನೆ ಓದಿಕೊಳ್ಳಿ. ಇವು ನಿಮ್ಮದೇ ಅನುಭವಗಳಂತೆ ಭಾಸವಾದರೂ ಆಶ್ಚರ್ಯವಿಲ್ಲ. “ಬಳ್ಳಾರಿಯಲ್ಲಿ ಆರನೇ ತರಗತಿಯಲ್ಲಿದ್ದಾಗಿನ (1962-63) ಕಥೆ. ಕೌಲ್ಬಜಾರಿನ ಗಿರಣಿಗೆ ಅಕ್ಕಿ-ಗೋಧಿ ಒಯ್ದು ಹಿಟ್ಟು ಮಾಡಿ ತರಬೇಕಾದರೆ ನನಗೆ ಅಮ್ಮ ಬಾಡಿಗೆ ಸೈಕಲ್ಲಿನ ಲಂಚ ಕೊಡಲೇಬೇಕಾಗುತ್ತಿತ್ತು. ಅಕ್ಕಿ-ಗೋಧಿ ಚೀಲ ಹ್ಯಾಂಡಲಿಗೆ ತೂಗುಹಾಕಿ, ಮನೆಯೆದುರಿನ ಕಲ್ಲ ಮಂಚದಿಂದ ಟೇಕ್ಆಫ್ ಆದವನಿಗೆ ಗಿರಣಿಯೆದುರಿನ ಮೋಟುಜಗಲಿಯೇ ಲ್ಯಾಂಡಿಂಗ್ ಸೈಟು. ಗ್ರಹಚಾರಗೆಟ್ಟು ಅದು ಇನ್ಯಾರದೋ ಸೈಕಲ್ಲಿಗೋ ಸೋಮಾರಿಗಳ ಬೈಠಕ್ಕಿನಲ್ಲೋ ಎಂಗೇಜ್ ಆಗಿದ್ದರೆ ನನ್ನದು ಕ್ರ್ಯಾಶ್ಲ್ಯಾಂಡು!” - ಮಂಗಳೂರಿನ ಅತ್ರಿ ಬುಕ್ಸೆಂಟರ್ ಮಾಲೀಕ ಜಿ.ಎನ್.ಅಶೋಕವರ್ಧನ ‘ಅತ್ರಿ ಬುಕ್ ಸೆಂಟರ್’ ಹೆಸರಿನದೇ ಒಂದು ಬ್ಲಾಗ್ ಬರೆಯುತ್ತಾರೆ. ಅದರಲ್ಲಿ ಬಾಡಿಗೆ ಸೈಕಲ್ ಸವಾರಿಯ ಸುಮಾರಷ್ಟು ನೆನಪುಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಹರ್ಷ ಎಂಬುವರ ಬ್ಲಾಗಿನಲ್ಲೂ ಅಂತಹದೇ ನೆನಪು- “ಆರನೇ ಕ್ಲಾಸಿನಲ್ಲಿದ್ದಾಗ, ಆ ವಯಸ್ಸಿನ ಬಹಳಷ್ಟು ಹುಡುಗರಿಗೆ (ಆ ಕಾಲದಲ್ಲಿ) ಬರುವ ಬಯಕೆಯಂತೆ, ಸೈಕಲ್ ಹೊಡೆಯುವ ಹುಚ್ಚು. ಅದಕ್ಕಾಗಿ ನಾನು ಮನೆಯಲ್ಲಿ ಸಾಕಷ್ಟು ಅಳು-ಜಗಳದ ಅಪ್ಲಿಕೇಶನ್ನುಗಳನ್ನು ಹಾಕಿದ್ದೆ. ಯಾವುದೂ ವರ್ಕೌಟ್ ಆಗುವುದಿಲ್ಲ ಅನ್ನಿಸಿ ಅನಿರ್ದಿಷ್ಟ ಉಪವಾಸ ಹೂಡಿ ಏಟುಗಳನ್ನೂ ತಿಂದಿದ್ದೆ. ನನ್ನ ಬಯಕೆ ತಡೆಯಲಾಗದೆ ಪಾಕೆಟ್ಮನಿಯನ್ನು ಉಳಿಸಿ ಬಾಡಿಗೆ ಸೈಕಲ್ ಓಡಿಸಿದ್ದೆ. ದೊಡ್ಡ ಅಟ್ಲಾಸ್ ಸೈಕಲನ್ನು ‘ಒಳಗಾಲು’ ಹಾಕಿ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ...” ಇನ್ನು, ಚಿಕ್ಕಮಗಳೂರಿನ ಕಾಫಿತೋಟದ ಮಾಲೀಕ ಎಸ್.ಎಂ.ಪೆಜತ್ತಾಯರ ಆತ್ಮಕಥೆ ‘ಕಾಗದದ ದೋಣಿ’ಯಲ್ಲಿ ‘ನಾನೂ ಸೈಕಲ್ ಸವಾರಿ ಕಲಿತೆ’ ಎಂಬ ಅಧ್ಯಾಯ ಬರುತ್ತದೆ. “ನಮ್ಮನೆ ಹತ್ತಿರ ರಾಮ ಎಂಬ ಲೋಕಲ್ ರೌಡಿಯೊಬ್ಬ ಹೊಸದಾಗಿ ಸೈಕಲ್ ಅಂಗಡಿ ತೆರೆದ. ಅವನಲ್ಲಿ ಎಲ್ಲಾ ಸೈಜಿನ ಸೈಕಲ್ಗಳು ಬಾಡಿಗೆಗೆ ಸಿಗುತ್ತಿದ್ದುವು. ಬಾಡಿಗೆ ಒಂದು ಗಂಟೆಗೆ ಎರಡಾಣೆ ಮಾತ್ರ. ಆದರೆ ಪಾಕೆಟ್ಮನಿ ಪದ್ಧತಿ ಇಲ್ಲದ ಆ ಕಾಲದಲ್ಲಿ ಅದು ನಮಗೆ ದೊಡ್ಡ ಮೊತ್ತವೇ ಆಗಿತ್ತು. ಅಲ್ಲದೇ, ರೌಡಿ ರಾಮನು ಸೈಕಲ್ ಹೊಡೆಯಲು ಬರದ ಹುಡುಗರಿಗೆ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ. ಪ್ರತೀ ಬಾಡಿಗೆದಾರ ಹುಡುಗನೂ ರೌಡಿ ರಾಮನೆದುರು ಸೈಕಲ್ಸವಾರಿ ಮಾಡಿ ತೋರಿಸಿಯೇ ಅವನಿಂದ ಸೈಕಲ್ ಪಡೆಯಬೇಕಾಗಿತ್ತು..." ಅಂಥ ನಿರ್ದಯಿ ರಾಮನಿಂದ ಬಾಡಿಗೆ ಸೈಕಲ್ ಪಡೆದು ತನ್ನ ಮಿತ್ರ ರವಿಯ ನೆರವಿನಿಂದ ಸೈಕಲ್ ಕಲಿತ ಸ್ವಾರಸ್ಯಕರ ಪ್ರಸಂಗಗಳನ್ನು ಪೆಜತ್ತಾಯ ಬಣ್ಣಿಸುತ್ತಾರೆ. ಅದೂ ಒಂದು ಕಾಲ. ನಗರಗಳಲ್ಲಿ, ಹದಾ ದೊಡ್ಡ ಎನ್ನಬಹುದಾದ ಪಟ್ಟಣಗಳಲ್ಲಿ ಬಾಡಿಗೆ ಸೈಕಲ್ ಬಳಕೆ ತೀರಾಸಾಮಾನ್ಯ. ಹೆಚ್ಚಾಗಿ ಸೈಕಲ್ ರಿಪೇರಿ ಅಂಗಡಿಗಳಲ್ಲೇ ಸಾಲಾಗಿ ನಿಲ್ಲಿಸಿಟ್ಟ ಬಾಡಿಗೆ ಸೈಕಲ್ಗಳು ಇರುತ್ತಿದ್ದವು. ಗಂಟೆಗೆ ಇಂತಿಷ್ಟು ದುಡ್ಡು ಬಾಡಿಗೆ ಲೆಕ್ಕ. ಸೈಕಲ್ ಪಡೆದು ಉಪಯೋಗದ ನಂತರ ಅಲ್ಲಿಗೇ ಹಿಂದಿರುಗಿಸಬೇಕು. ಬಹುತೇಕ ಮುಖಪರಿಚಯ ಮತ್ತು ನಂಬುಗೆಯಿಂದಲೇ ವ್ಯವಹಾರ. ಕ್ರಮೇಣ ಜನರಲ್ಲಿ ಸ್ವಂತ ವಾಹನ, ಅದರಲ್ಲೂ ಇಂಧನಚಾಲಿತ ವಾಹನ ಬಳಕೆ ಹೆಚ್ಚಿದಂತೆ ಸೈಕಲ್ ರಿಪೇರಿ ಅಂಗಡಿಗಳು ಮುಚ್ಚಿದವು. ಬಾಡಿಗೆ ಸೈಕಲ್ಗಳೂ ಕಣ್ಮರೆಯಾದವು. ಕಾಲಗರ್ಭದಲ್ಲಿ ಹುದುಗಿಹೋದವು. ಕಾಲಾಯ ತಸ್ಮೈನಮಃ. ಆದರೆ ಕಾಲವೂ ಒಂದು ಚಕ್ರ. ಸೈಕಲ್ಚಕ್ರದಂತೆಯೇ ತಿರುಗುತ್ತದೆ. 21ನೇ ಶತಮಾನದ ಮೊದಲ ದಶಕ ಕಳೆಯಿತೆನ್ನುವಾಗ ಇದೀಗ ಮತ್ತೆ ಪ್ರತ್ಯಕ್ಷವಾಗಿವೆ ಬಾಡಿಗೆ ಸೈಕಲ್ಗಳು. ಅದೂ ಎಲ್ಲಿ? ಕಾರ್ ಕಾರ್ ಎಲ್ನೋಡಿದ್ರೂ ಕಾರ್... ನಾಡಾದ ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ! ಕಳೆದವರ್ಷ ಸಪ್ಟೆಂಬರ್ನಲ್ಲಿ ಇಲ್ಲಿ Capital Bikeshare ಎಂಬ ಹೊಸ ವ್ಯವಸ್ಥೆ ಆರಂಭವಾಗಿದೆ. ನಗರದ ವಿವಿಧೆಡೆಗಳಲ್ಲಿ ಬಾಡಿಗೆ ಸೈಕಲ್ ಸ್ಟ್ಯಾಂಡ್ಗಳು. ದಿನದ ೨೪ ಗಂಟೆಗಳೂ ಸಾರ್ವಜನಿಕರ ಸೇವೆಗೆ ತೆರೆದಿರುವ ಈ ಸ್ಟ್ಯಾಂಡ್ಗಳು ಸಂಪೂರ್ಣ ಸ್ವಯಂಚಾಲಿತ. ರೌಡಿರಾಮನೂ ಇಲ್ಲ, ಸೈಕಲ್ ಪಡೆವ ಮುನ್ನ ಅವನಿಂದ ಪರೀಕ್ಷೆಯೂ ಇಲ್ಲ. ಬಾಡಿಗೆ ಸೈಕಲ್ ಬಳಸಲಿಚ್ಛಿಸುವವರು ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯ ಸದಸ್ಯರಾಗಬೇಕು. ವಾರ್ಷಿಕ (75 ಡಾಲರ್), ಮಾಸಿಕ(25 ಡಾಲರ್), ಸಾಪ್ತಾಹಿಕ(15 ಡಾಲರ್) ಅಥವಾ ದೈನಂದಿನ (5 ಡಾಲರ್) ಸದಸ್ಯತ್ವ ಶುಲ್ಕ ಪಾವತಿಸಿ ‘ಕೀ’ ಕಾರ್ಡ್ ಪಡೆದುಕೊಳ್ಳಬೇಕು. ಅದು ಸೈಕಲ್ನ ಬೀಗದಕೈ. ಯಾವುದೇ ಸ್ಟ್ಯಾಂಡ್ಗಾದರೂ ಹೋಗಿ ಅಲ್ಲಿಂದ ಸೈಕಲ್ ಪಡೆದುಕೊಂಡು ಎಷ್ಟು ಸಮಯ ಬೇಕಾದರೂ ಬಳಸಿ ಯಾವುದೇ ಸ್ಟ್ಯಾಂಡ್ನಲ್ಲಾದರೂ ಹಿಂದಿರುಗಿಸಬಹುದು. ಮೊದಲ ಅರ್ಧ ಗಂಟೆ ಬಳಕೆಗೆ ಚಾರ್ಜ್ ಇಲ್ಲ. ಆಮೇಲೆ ಗಂಟೆ ಲೆಕ್ಕದಲ್ಲಿ ಬಳಕೆ ಶುಲ್ಕ. ಇದೀಗ ಆರೇಳು ತಿಂಗಳೊಳಗೇ ಅಪಾರ ಜನಪ್ರಿಯತೆ ಗಳಿಸಿರುವ ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯಲ್ಲಿ ಸುಮಾರು 11000 ಸದಸ್ಯರಿದ್ದಾರೆ, ನೂರಕ್ಕೂ ಹೆಚ್ಚು ಸ್ಟ್ಯಾಂಡ್ಗಳಲ್ಲಿ ಸಾವಿರಕ್ಕೂ ಹೆಚ್ಚು ಸೈಕಲ್ಗಳಿವೆ. ಗಟ್ಟಿಮುಟ್ಟಾದ ಅಲ್ಯುಮಿನಿಯಂ ಫ್ರೇಮ್, ಕೆಂಪುಬಣ್ಣ, ಮುಂದುಗಡೆ ಕ್ಯಾರಿಯರ್ ಬ್ಯಾಸ್ಕೆಟ್- ಆಕರ್ಷಕ ಸೈಕಲ್ಗಳು. ಗಂಡಸರು-ಹೆಂಗಸರೆನ್ನದೆ, ಸಾಮಾಜಿಕ ಸ್ತರಗಳ ಭೇದವಿಲ್ಲದೆ ಎಲ್ಲ ವರ್ಗದ ಬಳಕೆದಾರರು. ಈಗ ಬೇಸಿಗೆಯ ದಿನಗಳಲ್ಲಂತೂ ಬೈಸಿಕಲ್ಗಳ ಭರಾಟೆ ವಿಪರೀತ. ಮೊನ್ನೆ ಬಿನ್ಲಾಡನ್ ಹತ್ಯೆಯ ವಾರ್ತೆ ಬಂದಾಗ ವಾಷಿಂಗ್ಟನ್ನಲ್ಲಿ ತಡರಾತ್ರೆಯಾಗಿತ್ತು, ಮೆಟ್ರೊರೈಲು/ಸಿಟಿಬಸ್ಸುಗಳ ಸಂಚಾರ ಮುಗಿದಿತ್ತು. ಆ ಅಪರಾತ್ರಿಯಲ್ಲಿ ವ್ಹೈಟ್ಹೌಸ್ ಪ್ರಾಂಗಣದಲ್ಲಿ ಹರ್ಷಾಚರಣೆಗೆ ಬಹಳಷ್ಟು ಜನರು ಹೋದದ್ದು ಬಾಡಿಗೆ ಸೈಕಲ್ ತುಳಿದುಕೊಂಡು! ಮುಂದುವರೆದ ದೇಶಗಳಲ್ಲಿ ಈರೀತಿಯ ಬಾಡಿಗೆ ಸೈಕಲ್ ವ್ಯವಸ್ಥೆ ಶುರುವಾಗುವುದಕ್ಕೆ, ಅತ್ಯಂತ ಜನಪ್ರಿಯವಾಗುವುದಕ್ಕೆ ಪ್ರಬಲ ಕಾರಣಗಳಿವೆ. ತಾಳ್ಮೆಗೆಡಿಸುವ ಸಂಚಾರ ದಟ್ಟಣೆ; ಏರುತ್ತಲೇ ಇರುವ ಇಂಧನ ಬೆಲೆ; ಜತೆಯಲ್ಲೇ ಪರಿಸರ ಮಾಲಿನ್ಯ. ಸಾರ್ವಜನಿಕರು ರೋಸಿಹೋಗಿದ್ದಾರೆ; ಸರಕಾರಗಳು ಸಕಾಲದಲ್ಲಿ ಎಚ್ಚೆತ್ತಿವೆ. ಚೈನಾ ದೇಶದ ಷಾಂಘಾಯ್ನಲ್ಲಿ ಸ್ವಂತ ಕಾರು ಖರೀದಿ ಮತ್ತು ಬಳಕೆ ಬಲುದುಬಾರಿಯಾಗುವಂತೆ ಮಾಡಿದ್ದಾರಂತೆ. ಅಲ್ಲಿ ಮೆಟ್ರೊ ರೈಲ್ವೇನಿಲ್ದಾಣಗಳು ಮತ್ತು ಬಸ್ ನಿಲುಗಡೆ ಸ್ಥಳಗಳ ನಡುವೆ ಜನಸಂಚಾರಕ್ಕೆ ಉಚಿತವಾಗಿ ಬಾಡಿಗೆ ಸೈಕಲ್ ವ್ಯವಸ್ಥೆ ಕಲ್ಪಿಸಿದ್ದಾರೆ. ಯುರೋಪ್ನಲ್ಲೂ ಬಾಡಿಗೆ ಸೈಕಲ್ ವ್ಯವಸ್ಥೆ ಕಳೆದ ನಾಲ್ಕೈದು ವರ್ಷಗಳಿಂದ ಚಾಲ್ತಿಯಲ್ಲಿದೆ. ಪ್ಯಾರಿಸ್ನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಅಂತೆಯೇ ಡಬ್ಲಿನ್, ಕೊಪನ್ಹೇಗಾನ್, ಬಾರ್ಸಿಲೊನಾ, ಲಂಡನ್ ಮುಂತಾದ ನಗರಗಳಲ್ಲಿ. ಅಮೆರಿಕಾದಲ್ಲಿ ಸದ್ಯಕ್ಕೆ ವಾಷಿಂಗ್ಟನ್ನಲ್ಲಿ (ಬಿಳಿಮನೆಯೂರಿನಲ್ಲಿ = ವ್ಹೈಟ್ಹೌಸ್ ನಗರದಲ್ಲಿ) ಮಾತ್ರ ಆರಂಭವಾಗಿದ್ದು ಇನ್ನು ನ್ಯೂಯಾರ್ಕ್, ಷಿಕಾಗೊ, ಸ್ಯಾನ್ಫ್ರಾನ್ಸಿಸ್ಕೊ ಮೊದಲಾದ ನಗರಗಳಿಗೂ ವ್ಯಾಪಿಸಲಿದೆ. ಸೈಕ್ಲಿಂಗ್ ಮತ್ತು ರೀಸೈಕ್ಲಿಂಗ್- ಬಹುಶಃ ನಾವು ಮಾಡದಿದ್ದರೂ ಪ್ರಕೃತಿಯೇ ನಮ್ಮಿಂದ ಮಾಡಿಸುತ್ತದೆ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.