Episodes
Saturday Mar 24, 2012
Cherry Blossoms
Saturday Mar 24, 2012
Saturday Mar 24, 2012
ದಿನಾಂಕ 25 ಮಾರ್ಚ್ 2012ರ ಸಂಚಿಕೆ...
ಹೂವುಹಬ್ಬಕ್ಕೆ ನೂರು ವರ್ಷ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು... ವಿ.ಸೀಯವರ ಆ ಸುಪ್ರಸಿದ್ಧ ಕವಿತೆಯಲ್ಲಿನ ಹೂವು, ನಿಜವಾದ ಹೂವಲ್ಲ; ಮದುವೆಯಾಗಿ ಗಂಡನಮನೆ ಸೇರುತ್ತಿರುವ ಹೆಣ್ಣನ್ನು ಹೂವಿಗೆ ಹೋಲಿಸಿ ಬರೆದದ್ದು. ಎಷ್ಟು ಚಂದದ ಹೋಲಿಕೆ, ಎಂತಹ ಆರ್ದ್ರ ಭಾವನೆ! ಎಷ್ಟೆಂದರೂ ಅದು ಕವಿಮನಸಿನ ಕಲ್ಪನೆ. ಆದರೆ ನೂರು ವರ್ಷಗಳ ಹಿಂದೆ, 1912ರಲ್ಲಿ ಹೀಗೆಯೇ ಮಾರ್ಚ್ ತಿಂಗಳ ಒಂದು ದಿನ, ಜಪಾನ್ ದೇಶವು ಅಮೆರಿಕದ ಮಡಿಲೊಳಗಿಡಲು ತಂದದ್ದು ಹೆಣ್ಣೆಂಬ ಹೂವನ್ನಲ್ಲ, ಬದಲಿಗೆ ನಿಜವಾಗಿ ತನ್ನ ಮನೆಯಂಗಳದಿ ಬೆಳೆದ ಹೂವಿನ ಗಿಡವನ್ನು! ವಸಂತ ಋತುವಿನಲ್ಲಿ ಟೋಕಿಯೊ ನಗರದ ಬೀದಿಬೀದಿಗಳನ್ನೂ ಬಣ್ಣಗೊಳಿಸುವ, ಜಪಾನೀಯರ ಅಚ್ಚುಮೆಚ್ಚಿನ ‘ಸಕುರಾ’ ಹೂವಿನ ಗಿಡವದು. ಒಂದೆರಡಲ್ಲ, ಸಾವಿರಾರು ಸಕುರಾ ಗಿಡಗಳು ಹಡಗಿನಲ್ಲಿ ಟೋಕಿಯೊದಿಂದ ವಾಷಿಂಗ್ಟನ್ಗೆ ಬಂದಿಳಿದದ್ದು. ಎರಡು ದೇಶಗಳ ಸೌಹಾರ್ದತೆಯ ಸಂಕೇತವೆಂದು ಜಪಾನ್ ಅಮೆರಿಕಕ್ಕೆ ಪ್ರೀತಿಯ ಉಡುಗೊರೆಯಾಗಿ ಅದನ್ನು ಕಳಿಸಿದ್ದು. ಇವತ್ತು ವಾಷಿಂಗ್ಟನ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ‘ಚೆರ್ರಿ ಬ್ಲಾಸಮ್’ ಹೂವುಹಬ್ಬದ ಚರಿತ್ರೆ ಶುರುವಾಗುವುದು ಹಾಗೆ. 1912ಕ್ಕಿಂತಲೂ ಹತ್ತಿಪ್ಪತ್ತು ವರ್ಷಗಳ ಮುಂಚೆಯೇ ಎಲಿಜಾ ಸ್ಕಿಡ್ಮೋರ್ ಎಂಬ ಅಮೆರಿಕನ್ ಪತ್ರಕರ್ತೆಯೊಬ್ಬಳು ಟೋಕಿಯೊ ನಗರಕ್ಕೆ ಪ್ರವಾಸ ಹೋಗಿಬಂದವಳು ಅಲ್ಲಿನ ಸಕುರಾ ಹೂಗಳ ಸೊಬಗಿಗೆ ಮಾರುಹೋಗಿದ್ದಳಂತೆ. ಅಮೆರಿಕದ ರಾಜಧಾನಿ ವಾಷಿಂಗ್ಟನ್ನ ಬೀದಿಗಳ ಇಕ್ಕೆಲಗಳಲ್ಲಿ, ಇಲ್ಲಿ ಹರಿಯುವ ಪೊಟೊಮೆಕ್ ನದಿಯ ದಂಡೆಗುಂಟ ಸಕುರಾ ಗಿಡಗಳನ್ನು ನೆಟ್ಟು ಬೆಳೆಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಕನಸು ಕಂಡಿದ್ದಳಂತೆ. ಈಬಗ್ಗೆ ಅಧಿಕಾರಿಗಳ, ರಾಜಕಾರಣಿಗಳ ಮನ ಓಲೈಸುವ ಪ್ರಯತ್ನವನ್ನೂ ಮಾಡಿದ್ದಳಂತೆ. ಆದರೆ ಅವರಾರೂ ಕಿವಿಗೊಡಲಿಲ್ಲ. ಈಮಧ್ಯೆ ಡೇವಿಡ್ ಫೇರ್ಚೈಲ್ಡ್ ಎಂಬುವವ, ತೋಟಗಾರಿಕೆ ಇಲಾಖೆಯಲ್ಲಿದ್ದವನು, ಜಪಾನ್ನಿಂದ ಒಂದಷ್ಟು ಸಕುರಾ ಗಿಡಗಳನ್ನು ತಂದು ವಾಷಿಂಗ್ಟನ್ನಲ್ಲಿ ತನ್ನ ನಿವಾಸದ ಸುತ್ತಮುತ್ತ ಬೆಳೆಸುವುದರಲ್ಲಿ ಯಶಸ್ವಿಯಾದ. ಎಲಿಜಾ ಮತ್ತೊಮ್ಮೆ ತನ್ನ ಹೋರಾಟ ಮುಂದುವರೆಸಿದಳು. 1909ರಲ್ಲಿ ವಿಲಿಯಂ ಹೋವರ್ಡ್ ಟಾಫ್ಟ್ ಅಮೆರಿಕಾಧ್ಯಕ್ಷನಾದಾಗ ಅವನ ಪತ್ನಿಯಾಗಿದ್ದವಳು ಹೆಲೆನ್ ಟಾಫ್ಟ್. ಎಲಿಜಾಳ ಅಹವಾಲು ಪ್ರಥಮ ಮಹಿಳೆ ಹೆಲೆನ್ ಟಾಫ್ಟ್ವರೆಗೂ ತಲುಪಿತು. ಆಕೆ ಸಕುರಾ ಗಿಡಗಳನ್ನು ಜಪಾನ್ನಿಂದ ತರಿಸುವುದಕ್ಕೆ ತಾನು ಸಹಕರಿಸುತ್ತೇನೆಂದಳು. ಜಪಾನ್ನಲ್ಲಿ ಖ್ಯಾತ ಉದ್ಯಮಿಯೂ ವಿಜ್ಞಾನಿಯೂ ಆಗಿದ್ದ ಡಾ. ಜೊಕಿಚಿ ಟಕಮೈನ್ ಎಂಬಾತ ಸಕುರಾ ಗಿಡಗಳನ್ನು ಅಮೆರಿಕಕ್ಕೆ ಕಳುಹಿಸುವುದಕ್ಕೆ ಮುಂದಾದ. ಸಕುರಾ ಜಪಾನ್ನ ರಾಷ್ಟ್ರೀಯ ಪುಷ್ಪ. ಜಪಾನೀಯರ ಧಾರ್ಮಿಕ ನಂಬಿಕೆಗಳಲ್ಲಿ ಅದಕ್ಕೆ ಅತ್ಯುಚ್ಚ ಸ್ಥಾನಮಾನವಿದೆ. ಹಾಗಾಗಿ ಸಕುರಾ ಹೂಗಿಡಗಳಿಗೆ ಬೆಲೆ ಕಟ್ಟಲಾಗದು, ಅವು ಜಪಾನ್ ಜನತೆಯಿಂದ ಅಮೆರಿಕದ ಜನತೆಗೆ ಪ್ರೀತಿಯ ಉಡುಗೊರೆ ಎಂದು ಜೊಕಿಚಿ ಘೋಷಿಸಿದ. 1910 ಜನವರಿ 6ರಂದು ಎರಡು ಸಾವಿರದಷ್ಟು ಸಕುರಾ ಗಿಡಗಳು ವಾಷಿಂಗ್ಟನ್ ತಲುಪಿದವು. ಆದರೆ ಇಲ್ಲಿಗೆ ಬಂದಾಗ ದುರದೃಷ್ಟವಶಾತ್ ಅವುಗಳಿಗೇನೋ ರೋಗ ತಗುಲಿತ್ತು, ಅವೆಲ್ಲವನ್ನೂ ಸುಟ್ಟುಹಾಕಬೇಕಾಯ್ತು. ಎರಡು ವರ್ಷಗಳ ನಂತರ 1912ರ ಮಾರ್ಚ್ 26ರಂದು ಮತ್ತೊಮ್ಮೆ ಜಪಾನ್ನಿಂದ ಸಕುರಾ ಗಿಡಗಳ ಉಡುಗೊರೆ ಬಂತು. ಈಬಾರಿ ಮೂರುಸಾವಿರಕ್ಕೂ ಹೆಚ್ಚು ಗಿಡಗಳಿದ್ದವು. ಮಾರ್ಚ್ 27ರಂದು ವಾಷಿಂಗ್ಟನ್ನಲ್ಲಿ ಪೊಟೊಮೆಕ್ ನದೀತೀರದಲ್ಲಿ ಎಲಿಜಾ ಸ್ಕಿಡ್ಮೋರ್, ಹೆಲೆನ್ ಟಾಫ್ಟ್, ಜಪಾನ್ ರಾಯಭಾರಿ ಸುಟೆಮಿ ಚಿಂಡಾ ಮತ್ತವನ ಪತ್ನಿ - ಈ ನಾಲ್ವರು ಸೇರಿ ಸಸಿಗಳನ್ನು ನೆಟ್ಟರು. ಜಪಾನ್ನಲ್ಲಿ ಸಕುರಾ ಎಂದು ಹೆಸರಾಗಿದ್ದ ಅವು ಇಲ್ಲಿ ‘ಚೆರ್ರಿ’ ಎಂಬ ಹೆಸರು ಪಡೆದವು. ಜಪಾನ್ ಮತ್ತು ಅಮೆರಿಕಾ ರಾಷ್ಟ್ರಗಳ ಸ್ನೇಹಸೇತುವಿನ ಸಂಕೇತವಾಗಿ ಬೆಳೆದವು. ತಿಳಿಗುಲಾಬಿ ಅಥವಾ ನಸುಗೆಂಪು ಬಣ್ಣದ ಈ ಚೆರ್ರಿ ಹೂಗಳ ವಿಶಿಷ್ಟತೆಯೆಂದರೆ ವರ್ಷಕ್ಕೊಮ್ಮೆ ಮಾರ್ಚ್-ಏಪ್ರಿಲ್ ಸಮಯದಲ್ಲಿ ಅವು ಅರಳುತ್ತವೆ. ಒಂದೇಒಂದು ಎಲೆಯೂ ಕಾಣಿಸದಷ್ಟು ದಟ್ಟವಾಗಿ ಮರವಿಡೀ ಹೂವುಗಳಿಂದಲೇ ತುಂಬುತ್ತದೆ. ಹೇಳಿಕೊಳ್ಳುವಂಥ ಪರಿಮಳವೇನೂ ಇಲ್ಲ. ಅಷ್ಟೇಅಲ್ಲ, ಈ ಹೂವಿನಿಂದ ಹಣ್ಣಾಗುವುದೂ ಇಲ್ಲ (‘ಚೆರ್ರಿ’ಹಣ್ಣುಗಳ ಮರಗಳೇ ಬೇರೆ, ಅವುಗಳ ಹೂವು ಇಷ್ಟು ಚಂದವಿರುವುದಿಲ್ಲ). ಆದರೂ ಸಾಲುಸಾಲಾಗಿ ಮರಗಳು ಹೂಬಿಟ್ಟಾಗಿನ ದೃಶ್ಯ ನಯನಮನೋಹರ. ಅದರಲ್ಲೂ ನದಿದಂಡೆಯ ಮೇಲಿರುವ ಮರಗಳು ತೇರಿನಂತೆ ಅರಳಿದಾಗಂತೂ ನೀರಿನಲ್ಲಿ ಅವುಗಳ ಪ್ರತಿಫಲನ ನೋಡುವುದಕ್ಕೆ ಮತ್ತೂ ಚಂದ. ಪ್ರತಿವರ್ಷ ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಚೆರ್ರಿ ಹೂಗಳು ಅರಳುವ ಪ್ರಕ್ರಿಯೆ ವಾಷಿಂಗ್ಟನ್ ನಗರದ ಹೊಸ ಆಕರ್ಷಣೆಯಾಗಿ ಬೆಳೆಯಿತು. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಎಲ್ಲ ಮರಗಳೂ ಅರಳಿದಾಗಿನ ಸೊಬಗನ್ನು ಕಣ್ತುಂಬಿಸಿಕೊಳ್ಳಲಿಕ್ಕೆಂದೇ ಪ್ರವಾಸಿಗರು ಬರಲಾರಂಭಿಸಿದರು. ಹೂಗಳ ಅರಳುವಿಕೆಯನ್ನು ‘ಚೆರ್ರಿ ಬ್ಲಾಸಮ್ ಫೆಸ್ಟಿವಲ್’ ಎಂದು ಆಚರಿಸುವ ಕ್ರಮ ಶುರುವಾಯಿತು. ವಾಷಿಂಗ್ಟನ್ ನಿವಾಸಿಗಳಿಗೆ ಚೆರ್ರಿ ಮರಗಳ ಬಗ್ಗೆ ಎಷ್ಟು ಪ್ರೀತ್ಯಾಭಿಮಾನಗಳು ಬೆಳೆದುವೆಂದರೆ 1938ರಲ್ಲಿ ಜೆಫರ್ಸನ್ನ (ಅಮೆರಿಕದ ಸಂವಿಧಾನಶಿಲ್ಪಿ ಮತ್ತು ಮಹಾನ್ ಅಧ್ಯಕ್ಷರುಗಳಲ್ಲೊಬ್ಬ) ಸ್ಮಾರಕ ನಿರ್ಮಾಣಕ್ಕೆಂದು ಕೆಲವು ಚೆರ್ರಿ ಮರಗಳನ್ನು ಕಡಿಯಬೇಕಾಗುತ್ತದೆಂಬ ಸುದ್ದಿಯಾದಾಗ ಮಾನವಸರಪಳಿ ರಚಿಸಿ ಮರಗಳ ರಕ್ಷಣೆಗೆ ಮುಂದಾಗಿದ್ದರಂತೆ. ಆದರೆ 1941ರಲ್ಲಿ ಪ್ರಪಂಚಯುದ್ಧದ ವೇಳೆ ಅಮೆರಿಕದ ನೌಕಾನೆಲೆ ‘ಪರ್ಲ್ ಹಾರ್ಬರ್’ ಮೇಲೆ ಜಪಾನ್ ನೌಕಾಪಡೆ ದಾಳಿ ನಡೆಸಿದಾಗ ಜಪಾನ್ ವಿರುದ್ಧ ರೊಚ್ಚಿಗೆದ್ದ ಅಮೆರಿಕನ್ನರು ಸಾಂಕೇತಿಕವಾಗಿ ವಾಷಿಂಗ್ಟನ್ನಲ್ಲಿ ಕೆಲವು ಚೆರ್ರಿ ಮರಗಳನ್ನು ಕಡಿದುಹಾಕಿದ್ದರಂತೆ. ಮುಂದೆ ಯುದ್ಧ ಮತ್ತಷ್ಟು ಕರಾಳವಾಗಿ ಹಿರೊಷಿಮಾ-ನಾಗಾಸಾಕಿ ಮೇಲೆ ಅಣುಬಾಂಬ್ ದಾಳಿಯೂ ಆಯ್ತು. ಆದರೂ ಯುದ್ಧಾನಂತರ ಅಮೆರಿಕ-ಜಪಾನ್ ಸಂಬಂಧಗಳು ತಿಳಿಯಾದ್ದರಿಂದ ಚೆರ್ರಿ ಮರಗಳು ಬಚಾವಾದವು. ವಾಷಿಂಗ್ಟನ್ನಲ್ಲಿ ವಾರ್ಷಿಕ ಹೂವುಹಬ್ಬ ಅನೂಚಾನವಾಗಿ ಮುಂದುವರಿಯಿತು. ಹಬ್ಬದಲ್ಲಿ ‘ಚೆರ್ರಿ ಬ್ಲಾಸಮ್ ಕ್ವೀನ್’ ಸೌಂದರ್ಯಸ್ಪರ್ಧೆ ಮುಂತಾದವು ಆರಂಭವಾದವು. 1965ರಲ್ಲಿ ಜಪಾನ್ನಿಂದ ಮತ್ತೂ ಸುಮಾರು ನಾಲ್ಕುಸಾವಿರ ಸಕುರಾ ಗಿಡಗಳು ಬಂದವು. ವಾಷಿಂಗ್ಟನ್ ಮಾನ್ಯುಮೆಂಟ್ನ ಸುತ್ತಮುತ್ತ, ಲಿಂಕನ್ ಸ್ಮಾರಕದೆದುರಿನ ಕೆರೆದಂಡೆಯ ಮೇಲೆ ಚೆರ್ರಿ ಮರಗಳು ಬೆಳೆದವು. ಮೂರು ದಿನ ನಡೆಯುತ್ತಿದ್ದ ‘ಚೆರ್ರಿ ಬ್ಲಾಸಮ್ ಫೆಸ್ಟಿವಲ್’ ಒಂದು ವಾರದವರೆಗೆ ವಿಸ್ತರಿಸಿತು. 1994ರಿಂದೀಚೆಗೆ ಎರಡು ವಾರ ಜರುಗುವ ಹಬ್ಬವಾಯಿತು. ಈವರ್ಷ ಶತಮಾನೋತ್ಸವವೆಂದು ವಿಶೇಷವಾಗಿ ಐದು ವಾರಗಳ ‘ಚೆರ್ರಿ ಬ್ಲಾಸಮ್ ಫೆಸ್ಟಿವಲ್’ ಮೊನ್ನೆ ಮಾರ್ಚ್ 17ರಂದು ಶುರುವಾದದ್ದು ಮುಂದಿನ ತಿಂಗಳ 27ರವರೆಗೆ ನಡೆಯಲಿದೆ. ಈಗ ಈ ಹೂವುಹಬ್ಬ ಅಕ್ಷರಶಃ ಜಾತ್ರೆಯ ರೂಪ ತಾಳಿದೆ. ಇದೀಗ ಹವಾಮಾನವೂ ಹಿತಕರವಾಗಿದೆ. ಶಾಲಾಕಾಲೇಜುಗಳಿಗೆ ‘ಸ್ಪ್ರಿಂಗ್ಬ್ರೇಕ್’ ರಜೆ ಬೇರೆ ಇದೆ. ದೇಶವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದ್ತಾರೆ. ಜಾತ್ರೆ ಎಂದಮೇಲೆ ಸಂತೆಯೂ ಇರಬೇಕಲ್ಲ! ಬಗೆಬಗೆಯ ಆಟೋಟಗಳು, ಮನರಂಜನೆಯ ಕಾರ್ಯಕ್ರಮಗಳು, ವಸ್ತುಪ್ರದರ್ಶನ-ಮಾರಾಟಮಳಿಗೆಗಳು, ತಿಂಡಿಪದಾರ್ಥಗಳ ಸ್ಟಾಲ್ಗಳು. ಒಂದು ಕಡೆ ಚಿತ್ರಕಲಾಪ್ರದರ್ಶನ, ಇನ್ನೊಂದೆಡೆ ಜಪಾನ್ನ ಪೇಪರ್ಕಟ್ಟಿಂಗ್ ಆರ್ಟ್ ‘ಒರಿಗಾಮಿ’ ಕಾರ್ಯಾಗಾರ. ಒಂದೆಡೆ ಮಕ್ಕಳ ಚಲನಚಿತ್ರೋತ್ಸವ, ಇನ್ನೊಂದೆಡೆ ಗಾಳಿಪಟ ಹಾರಿಸುವ ಸ್ಪರ್ಧೆ. ಜೆನ್ ಮೆಡಿಟೇಶನ್ ವರ್ಕ್ಶಾಪ್. ಸಮುರಾಯಿ ಸಮರಾಭ್ಯಾಸ ಪ್ರದರ್ಶನ. ಜಪಾನ್ ವಿಶೇಷ ಚಹ ಕೂಟಗಳು. ಸಿಂಫನಿ ಆರ್ಕೆಸ್ಟ್ರಾಗಳು. ಸಂಗೀತ-ನೃತ್ಯ-ನಾಟಕ ಮೇಳಗಳು. ಕತ್ತಲು ಕವಿದಮೇಲೆ ಸುಡುಮದ್ದು ಪ್ರದರ್ಶನ. ಪೊಟೊಮೆಕ್ ನದಿಯಲ್ಲಿ ಡಿನ್ನರ್ಕ್ರೂಸ್. ಚೆರ್ರಿ ಬ್ಲಾಸಮ್ ಶತಮಾನೋತ್ಸವದ ಅಂಚೆಚೀಟಿ ಬಿಡುಗಡೆ. ಇವೆಲ್ಲದಕ್ಕೆ ಕಳಶಪ್ರಾಯವಾಗಿ ಚೆರ್ರಿ ಬ್ಲಾಸಮ್ ಗ್ರ್ಯಾಂಡ್ ಪೆರೇಡ್. ಯಾವಾಗ ಎಲ್ಲಿ ಏನು ನಡೆಯುತ್ತಿದೆಯೆಂದು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುವುದಕ್ಕೆ ಸ್ಮಾರ್ಟ್ಫೋನ್ನಲ್ಲಿ ಚೆರ್ರಿ ಬ್ಲಾಸಮ್ಗೆಂದೇ ತಯಾರಾದ ಅಪ್ಲಿಕೇಶನ್ಸೂ ಇವೆ. ಇಲ್ಲಿನ ಪತ್ರಿಕೆಗಳು ಚೆರ್ರಿ ಬ್ಲಾಸಮ್ ಶತಮಾನೋತ್ಸವಕ್ಕೆ ವಿಶೇಷ ಪುರವಣಿಗಳನ್ನೂ ಪ್ರಕಟಿಸಿವೆ. ಮನೆಯ ಕೈತೋಟದಲ್ಲಿ ಬರಿ ಒಂದು ಗುಲಾಬಿ ಹೂವು ಅರಳಿದರೇನೇ ಅಷ್ಟೊಂದು ಸಂಭ್ರಮ ಪಡುತ್ತೇವಂತೆ, ಇನ್ನು ಅಮೆರಿಕದಂಥ ಅಮೆರಿಕ ದೇಶದ ರಾಜಧಾನಿಯಲ್ಲಿ ವಸಂತಕಾಲದಲ್ಲಿ ಸಾಲುಸಾಲು ಚೆರ್ರಿಮರಗಳು ಅರಳಿದಾಗಿನ ಸಂಭ್ರಮ ಎಷ್ಟಿರಬೇಡ? ಹಾಗೆಯೇ ಇನ್ನೊಂದು ಚಂದದ ಹೋಲಿಕೆಯನ್ನೂ ನಾವಿಲ್ಲಿ ಮನಗಾಣಬಹುದು- ವಿ.ಸೀ ಕವಿತೆಯಲ್ಲಿನ ಹೂವು, ಕೊಟ್ಟ ಎರಡು ದಿನಗಳಲ್ಲಿ ಬಾಡಿಹೋಗುವ ಹೂವಲ್ಲ. ವಂಶವಾಹಿನಿಯಾಗುವ ಬಾಳಿಕೆಯ ಹೂವು. ಹಾಗೆಯೇ, ಪ್ರೀತಿಯ ಸಂಕೇತವಾಗಿ ಬರಿ ಹೂವನ್ನು ಕೊಟ್ಟರೆ ಅದು ಕೆಲದಿನಗಳಷ್ಟೇ ತಾಜಾ ಆಗಿ ಉಳಿದೀತು. ಹೂಗಿಡವನ್ನೇ ಕೊಟ್ಟರೆ? ಆ ಪ್ರೀತಿ ಶತಮಾನೋತ್ಸವ ಸಂಭ್ರಮವನ್ನು ಕಂಡೀತು! * * * ಈ ಯೂಟ್ಯೂಬ್ ವಿಡಿಯೊಗಳನ್ನೂ ಆನಂದಿಸಿ: ಒಂದು [ 2 ನಿಮಿಷ ] ಎರಡು [ 4 ನಿಮಿಷ ] ಮೂರು [ 8 ನಿಮಿಷ ] * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.