Episodes

Saturday Feb 05, 2011
Countable Countdown
Saturday Feb 05, 2011
Saturday Feb 05, 2011
ದಿನಾಂಕ 6 ಫೆಬ್ರವರಿ 2011ರ ಸಂಚಿಕೆ...
ಹೀಗೂ ಒಂದು ಕನ್ನಡ ಚಿತ್ರಗೀತೆಗಳ ಕೌಂಟ್ಡೌನ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು] ಬಿನಾಕಾ ಗೀತ್ಮಾಲಾ! ಚಿತ್ರಗೀತೆಗಳ ಕೌಂಟ್ಡೌನ್ ಎಂದೊಡನೆ ಬಹುಶಃ ಎಲ್ಲರಿಗೂ ಮೊದಲು ನೆನಪಾಗುವುದು ಅದೇ. ಅಮೀನ್ ಸಯಾನಿಯ ಅನನ್ಯ ಶೈಲಿಯ ನಿರೂಪಣೆಯೊಂದಿಗೆ ಟಾಪ್ ಟ್ವೆಂಟಿ ಹಿಂದಿ ಚಿತ್ರಗೀತೆಗಳು. ಪ್ರತಿ ಬುಧವಾರ ಸಂಜೆ ರೇಡಿಯೋ ಸಿಲೋನ್ನಿಂದ ಬರುತ್ತಿದ್ದ ಆ ಪ್ರೋಗ್ರಾಮಿಗೆ ಸೂಜಿಗಲ್ಲಿನಂಥ ಆಕರ್ಷಣೆ. ಕ್ಯಾಸೆಟ್ಗಳ ಮಾರಾಟ, ಶ್ರೋತೃಸಂಘಗಳ ಅಭಿಮತ, ಸ್ಲೋಗನ್ ಸ್ಪರ್ಧೆಯಲ್ಲಿ ವಿಜೇತರ ಶಿಫಾರಸು- ಈ ಮೂರು ಮಾನದಂಡಗಳಿಂದ ಪ್ರಚಲಿತ ಹಿಂದಿ ಚಿತ್ರಗೀತೆಗಳ ಶ್ರೇಯಾಂಕಗಳನ್ನು ನಿರ್ಧರಿಸಿ ಬಿನಾಕಾ ಟಾಪ್ ಟ್ವೆಂಟಿ ಪಟ್ಟಿ ಸಿದ್ಧವಾಗುತ್ತಿತ್ತು. ವಾರದಿಂದ ವಾರಕ್ಕೆ ಹಾಡುಗಳ ಉತರ್-ಚಢಾವ್. ಹೊಸ ಹಾಡುಗಳ ರಂಗಪ್ರವೇಶ. ಇಪ್ಪತ್ತು ಬಾರಿ ಮೊಳಗಿದ ಹಾಡಿಗೆ ಆಮೇಲೆ ನಿವೃತ್ತಿ. ಸರ್ತಾಜ್ಗೀತ್-ಕಾ-ಬಿಗುಲ್ನೊಂದಿಗೆ ಗೌರವಪೂರ್ಣ ವಿದಾಯ. ಡಿಸೆಂಬರ್ ಕೊನೇ ವಾರದಲ್ಲಿ ಆ ವರ್ಷದ ಅತಿ ಜನಪ್ರಿಯ ಗೀತೆಗಳ ವಾರ್ಷಿಕ ಪೆರೇಡ್... ನಿಜಕ್ಕೂ ಬಿನಾಕಾ ಗೀತ್ಮಾಲಾ ಕಾರ್ಯಕ್ರಮದ್ದು ರೇಡಿಯೋ ಇತಿಹಾಸದಲ್ಲೇ ವಿಶಿಷ್ಟ ಛಾಪು. ಅದಾದಮೇಲೆ ಟಿವಿ ಬಂತು, ಅಸಂಖ್ಯಾತ ಚಾನೆಲ್ಗಳು ಶುರುವಾದವು. ಹಿಂದಿ ಮಾತ್ರವಲ್ಲದೆ ಪ್ರಾದೇಶಿಕ ಭಾಷೆಗಳ ಚಿತ್ರಗೀತೆಗಳು, ಅವುಗಳ ಟಾಪ್ ಟೆನ್ ಚಾರ್ಟ್ಗಳು ಟಿವಿಯಲ್ಲಿ ಪ್ರಸಾರವಾಗತೊಡಗಿದವು. ಈಗಂತೂ ಕಾಸಿಗೊಂದು ಕೊಸರಿಗೆರಡು ಎಂಬಂತೆ ಕೌಂಟ್ಡೌನ್ ಕಾರ್ಯಕ್ರಮಗಳು ಇವೆಯೋ ಏನೋ. ಇವತ್ತು ಪರಾಗ ಸ್ಪರ್ಶ ಅಂಕಣದಲ್ಲಿ ಕನ್ನಡ ಚಿತ್ರಗೀತೆಗಳ ಕೌಂಟ್ಡೌನ್! ಇದು ಒಂದು ವಿಶಿಷ್ಟವಾದ ಮತ್ತು ವಿಭಿನ್ನ ರೀತಿಯ ಪ್ರೆಸೆಂಟೇಷನ್. ಹೇಗೆಂದರೆ ಸಾಂಪ್ರದಾಯಿಕ ಕೌಂಟ್ಡೌನ್ಗಳಂತೆ ಇಲ್ಲಿ ಜನಪ್ರಿಯತೆಯ ಶ್ರೇಯಾಂಕಗಳಿಲ್ಲ. ಅಥವಾ, ‘ನನ್ನ ಇಷ್ಟದ ಎವರ್ಗ್ರೀನ್ ಹಾಡುಗಳು...’ ಮಾದರಿಯ ಪಟ್ಟಿಯೂ ಇಲ್ಲ. ಆದರೂ ಇದೊಂದು ಪಕ್ಕಾ ಕೌಂಟ್ಡೌನ್. ಇಲ್ಲಿರುವವು ಸಾಕಷ್ಟು ಜನಪ್ರಿಯವಾದ ಮತ್ತು ನಮಗೆಲ್ಲ ಚಿರಪರಿಚಿತವಾದ ಹಾಡುಗಳೇ. ಅವರೋಹಣ ಕ್ರಮದಲ್ಲಿಯೇ ಅವುಗಳ ಜೋಡಣೆ. ಮತ್ತೆ, ಅವರೋಹಣವೆಂದರೆ ಸಂಗೀತಸ್ವರಗಳ ಆರೋಹಣ-ಅವರೋಹಣ ಅಂತೆಲ್ಲ ಯೋಚಿಸಬೇಡಿ. ಇರಲಿ, ಪೀಠಿಕೆ ಸಾಕು. ಈಗ ಕಾರ್ಯಕ್ರಮ ಆರಂಭಿಸೋಣ. ಮೊದಲಿಗೆ ಒಂದೆರಡು ಹಾಡುಗಳನ್ನು ಹೀಗೇಸುಮ್ಮನೆ ಒಮ್ಮೆ ನೆನಪಿಸಿಕೊಳ್ಳಬೇಕು. ಇವು ಕೌಂಟ್ಡೌನ್ನ ಭಾಗವಲ್ಲ. ಆದರೆ ಕೌಂಟ್ಡೌನ್ ಹೇಗೆ ರಚನೆಯಾಗಿದೆ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಇವು ಬೇಕು. ‘ಒಂದು ಮುತ್ತಿನ ಕಥೆ’ ಸಿನೆಮಾದಲ್ಲಿ ಅಣ್ಣಾವ್ರು ಹಾಡಿರುವ ‘ಒಂದು ಎರಡು ಮೂರು ನಾಲ್ಕು ಆಮೇಲೆ ಏನು...’ ಹಾಡು ಗೊತ್ತಲ್ಲ? ಹಾಗೆಯೇ ‘ಚಿನ್ನಾರಿ ಮುತ್ತ’ ಚಿತ್ರದ ‘ಒಂದು ಎರಡು ಮೂರು ನಾಲ್ಕು ಕೈಯನ್ ನೆಲಕ್ ತಾಕಿಸ್ಬೇಕು...’ ಹಾಡು. ಇನ್ನೊಂದು ತುಂಬಾ ಹಳೆಯ ಕಪ್ಪುಬಿಳುಪು ಹಾಡು, ‘ಮೊದಲ ತೇದಿ’ ಚಿತ್ರದ್ದು. ‘ಒಂದರಿಂದ ಇಪ್ಪತ್ತರವರೆಗೆ ಉಂಡಾಟ ಉಂಡಾಟ...’ ಅಂತ ಶುರುವಾಗುತ್ತದೆ. ಈ ಮೂರನ್ನೂ ನೀವು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಹಾಡಿನ ಸಾಲಿನಲ್ಲಿ ಒಂದು, ಎರಡು, ಹತ್ತು, ಇಪ್ಪತ್ತು ಅಂತೆಲ್ಲ ಅಂಕೆಸಂಖ್ಯೆಗಳು ಬರುತ್ತವೆ ಅಲ್ಲವೇ? ಹೌದು, ಅದೇ ಇವತ್ತಿನ ಈ ಸ್ಪೆಷಲ್ ಕೌಂಟ್ಡೌನ್ನ ಅಳತೆಗೋಲು. ಚಿತ್ರಗೀತೆಯ ಪಲ್ಲವಿಯಲ್ಲಾಗಲಿ ಚರಣದಲ್ಲಾಗಲಿ ಅಂತೂ ಎಲ್ಲಾದರೂ ಯಾವುದೇ ಸಂಖ್ಯೆ ಕಂಡುಬಂದರೆ ಆ ಹಾಡು ಕೌಂಟ್ಡೌನ್ ಪಟ್ಟಿಗೆ ಸೇರುತ್ತದೆ. ಸಂಖ್ಯೆಯ ಬೆಲೆಯನ್ನಾಧರಿಸಿ ಪಟ್ಟಿಯಲ್ಲಿ ಅದರ ಸ್ಥಾನ ನಿರ್ಧಾರಿತವಾಗುತ್ತದೆ. ಅದಕ್ಕೇ ಹೇಳಿದ್ದು ಇದು ನಿಜವಾದ ‘ಕೌಂಟ್’ಡೌನ್! ನಿಮಗೆ ಅಚ್ಚರಿಯಾಗಬಹುದು ಸಂಖ್ಯೆ ಎಂದರೆ ಬರೀ ಒಂದು, ಎರಡು, ನಾಲ್ಕು, ಹತ್ತು ಮುಂತಾದ ಸಣ್ಣಪುಟ್ಟ ಸಂಖ್ಯೆಗಳಲ್ಲ, ಕನ್ನಡ ಚಿತ್ರಗೀತೆಗಳಲ್ಲಿ ನಮಗೆ ಲಕ್ಷ-ಕೋಟಿಗಳೂ ಸಿಗುತ್ತವೆ! ‘ಲಾಲಿಹಾಡು’ ಎಂಬ ಇತ್ತೀಚಿನ ಚಿತ್ರದಲ್ಲಿ ‘ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ...’ ಎಂಬ ಹಾಡಿದೆ. ‘ಶರಪಂಜರ’ದಲ್ಲಿ ಅಳವಡಿಸಲಾದ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...’ ಬೇಂದ್ರೆಗೀತೆಯಲ್ಲಿ ‘ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು...’ ಎಂದು ಶುರುವಾಗುತ್ತದೆ ಎರಡನೇ ಚರಣ. ‘ಲಕ್ಷ ಲಕ್ಷ ಕೇಳಿದಾಗ ಎಲ್ಲಿ ಓಡಿ ಹೋಗಲಿ...’ ಎನ್ನುತ್ತಾರೆ ಅಣ್ಣಾವ್ರು ‘ಗುರಿ’ ಚಿತ್ರದ ‘ವಸಂತಕಾಲ ಬಂದಾಗ...’ ಹಾಡಿನಲ್ಲಿ. ‘ಸಾವಿರ ಸಾವಿರ ಯುಗ ಯುಗ ಉರುಳಲು ಸಾಗಿದೆ ಸಂಗ್ರಾಮ...’ ಎಂದು ಗರ್ಜಿಸುತ್ತಾರೆ ‘ಪಡುವಾರಹಳ್ಳಿ ಪಾಂಡವರು’. ‘ತುಟಿ ಮೇಲೆ ಬಂದಂಥ ಮಾತೊಂದೇ ಒಂದು ಎದೆಯಲ್ಲಿ ಉಳಿದಿದ್ದು 301’ ಎನ್ನುತ್ತಾರೆ ‘ಬಂಧನ’ದಲ್ಲಿ ವಿಷ್ಣುವರ್ಧನ್. ಇನ್ನು, ಸೆಂಚುರಿ ಬಾರಿಸಿದ ಹಾಡುಗಳಂತೂ ತುಂಬಾ ಇವೆ. ‘ವಿರಹ ನೂರು ನೂರು ತರಹ...’ (ಎಡಕಲ್ಲು ಗುಡ್ಡದಮೇಲೆ), ‘100 ಕಣ್ಣು ಸಾಲದು ನಿನ್ನ ನೋಡಲು...’ (ರಾಜ ನನ್ನ ರಾಜ), ‘100 ಜನ್ಮಕು 106 ಜನ್ಮಕೂ...’ (ಅಮೆರಿಕ ಅಮೆರಿಕ), ‘ಒಂದಾನೊಂದು ಊರು ಆ ಊರಲ್ಲಿ ಇಲಿಗಳು 100...’ (ಬೇಡಿ ಬಂದವಳು), ‘ನಿನ್ನ ಕಣ್ಣ ನೋಟದಲ್ಲಿ 100 ಆಸೆ ಕಂಡೆನು...’ (ಬಬ್ರುವಾಹನ) - ಹೀಗೆ ಬೆಳೆಯುತ್ತದೆ ಪಟ್ಟಿ. ನೂರಕ್ಕಿಂತ ಕಡಿಮೆಯ ಚಿಲ್ಲರೆ ಮೊತ್ತದವನ್ನೂ ಗಮನಿಸಿದರೆ ‘ಇಸವಿಯು ಏನೋ 76 ವೇಷವ ನೋಡು 26...’ (ಹುಡುಗಾಟದ ಹುಡುಗಿ), ‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...’ (ಅಸಂಭವ), ‘16ರ ಹರೆ ಬಂದಾಗ ಕುಡಿ ನೋಟವು ಕರೆ ತಂದಾಗ...’ (ಮಧುರ ಸಂಗಮ), ‘14 ವರ್ಷ ವನವಾಸದಿಂದ ಮರಳಿ ಬಂದಳು ಸೀತೆ...’ (ಶರಪಂಜರ), ‘ಹಾವಿನ ದ್ವೇಷ 12 ವರುಷ...’ (ನಾಗರಹಾವು)- ಇವೆಲ್ಲ ಸಿಗುತ್ತವೆ. ಸಂಖ್ಯೆ ಬಂದಲ್ಲೆಲ್ಲ ಅದನ್ನು ಅಂಕಿಗಳಲ್ಲೇ ಬರೆದಿದ್ದೇಕೆಂದರೆ ನಾನೇನು ಹೇಳುತ್ತಿದ್ದೇನೆನ್ನುವುದು ಚೆನ್ನಾಗಿ ಮನದಟ್ಟಾಗುವುದಕ್ಕೆ (ಮತ್ತು ಜಾಗ ಉಳಿಸುವುದಕ್ಕೆ). ಈಗೊಂದು ಚಿಕ್ಕ ಬ್ರೇಕ್. ಹಾಡುಗಳ ಸರಣಿಯನ್ನು ಒಮ್ಮೆ ನಿಲ್ಲಿಸಿ ‘ಮೇಕಿಂಗ್ ಆಫ್ ದಿಸ್ ಲೇಖನ’ ಕುರಿತು ಸ್ವಲ್ಪ ಹೇಳುತ್ತೇನೆ. ಸಂಸ್ಕೃತ/ಕನ್ನಡ ವ್ಯಾಕರಣದ ಯಾವುದೋ ಪುಸ್ತಕದಲ್ಲಿ ಸಂಧಿ-ಸಮಾಸಗಳ ವಿವರ ಓದುತ್ತಿದ್ದೆ. ‘ಸಂಖ್ಯಾಪೂರ್ವೋದ್ವಿಗುಃ’ ಎಂಬ ನಿಯಮ ಸಿಕ್ಕಿತು. ಪದಗಳ ಜೋಡಣೆಯಲ್ಲಿ ಸಂಖ್ಯೆ ಇದ್ದರೆ ಅದು ದ್ವಿಗು ಸಮಾಸವಾಗುತ್ತದಂತೆ. ‘ಮುಕ್ಕಣ್ಣ’ (ಮೂರು ಕಣ್ಣುಗಳುಳ್ಳವನು), ‘ಇಬ್ಬಗೆ’ (ಎರಡು ಬಗೆ) ಕೆಲವು ಉದಾಹರಣೆಗಳು. ಚಿತ್ರಗೀತೆಗಳಲ್ಲಿ ಸಂಖ್ಯೆ ಇದ್ದರೆ? ಆಗ ಹೊಳೆದ ಐಡಿಯಾ ಈಗ ನಿಮ್ಮ ಮುಂದಿದೆ! ಇಲ್ಲಿ ಬಳಸಿರುವ ಚಿತ್ರಗೀತೆಗಳನ್ನು ಬರೆದ ಸಾಹಿತಿಗಳು, ರಾಗಸಂಯೋಜಿಸಿದ ಸಂಗೀತ ನಿರ್ದೇಶಕರು, ಹಾಡಿದ ಗಾಯಕ-ಗಾಯಕಿಯರು ಇವರನ್ನೆಲ್ಲ ಸ್ಮರಿಸುವುದು ಕರ್ತವ್ಯ. ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು. ಹಾಗೆಯೇ, ಹಿಂದಿ ಮತ್ತು ಕನ್ನಡ ಹಳೇಚಿತ್ರಗೀತೆಗಳ ಅದ್ಭುತ ಡೇಟಾಬ್ಯಾಂಕ್ ಹೊಂದಿರುವ ನನ್ನ ಸೋದರಮಾವ, ಮಂಗಳೂರಿನಲ್ಲಿರುವ ಚಿದಂಬರ ಕಾಕತ್ಕರ್ ಅವರಿಗೂ ಸ್ಪೆಷಲ್ ಥ್ಯಾಂಕ್ಸ್ ಸಲ್ಲಬೇಕು. ಇದು ಪತ್ರಿಕೆಯ ಅಂಕಣಬರಹ ರೂಪಕ್ಕಿಂತ ಯಾರಾದರೂ ಆರ್ಜೆ/ವಿಜೆ ಗಳ ಕ್ರಿಯೇಟಿವಿಟಿಗೆ ಸರಿಹೊಂದುವಂಥದ್ದು. ಈ ಲೇಖನದ ಇ-ಆವೃತ್ತಿಯನ್ನು sjoshi.podbean.com ಬ್ಲಾಗ್ನಲ್ಲಿ ಪ್ರಕಟಿಸಿದ್ದು ಅಲ್ಲಿ ಪ್ರತಿಯೊಂದು ಹಾಡಿಗೂ ವಿಡಿಯೋ/ಆಡಿಯೊ ಲಿಂಕ್ ಕೊಟ್ಟು ವಿಶೇಷ ಅನುಭವವಾಗುವಂತೆ ಮಾಡಿದ್ದೇನೆ. ಆಸಕ್ತರು ನೋಡಿ ಕೇಳಿ ಆನಂದಿಸಬಹುದು.
Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.