Episodes
Saturday Jul 09, 2011
Cow-stopper for the gate
Saturday Jul 09, 2011
Saturday Jul 09, 2011
ದಿನಾಂಕ 10 ಜುಲೈ 2011ರ ಸಂಚಿಕೆ...
‘ಹಸು ತಡೆ’ಯನು ದಾಟಿ ಬಾ ಓ ಅತಿಥಿ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ರವಿಯು ಅಜ್ಜನ ಮನೆಗೆ ಹೋದನು. ಅಂಗಳದಲ್ಲಿ ಕಾರಂಜಿಯನ್ನು ಕಂಡನು. ಹಿರಿಹಿರಿ ಹಿಗ್ಗಿದನು... ಇವು ಎರಡನೇ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಿಂದ ನೆನಪಿಸಿಕೊಂಡ ಸಾಲುಗಳು. ರವಿ ಬಹುಶಃ ಪ್ರತಿವರ್ಷವೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಾನೆ. ಅದರಲ್ಲೇನೂ ವಿಶೇಷವಿಲ್ಲ. ಆ ಸರ್ತಿ ಹೋದಾಗ ಅವನಿಗೆ ಅಲ್ಲಿ ಒಂದು ವಿಶೇಷ ಆಕರ್ಷಣೆ ಇತ್ತು. ಅಜ್ಜನ ಮನೆಯ ಅಂಗಳದಲ್ಲಿ ಹೊಸದಾಗಿ ಕಟ್ಟಿಸಿದ್ದ ಕಾರಂಜಿ. ಜುಳುಜುಳು ಶಬ್ದದೊಂದಿಗೆ ತಣ್ಣನೆಯ ನೀರು ನೊರೆನೊರೆಯಾಗಿ ಚಿಮ್ಮುವ ಕಾರಂಜಿ. ಬಿರುಬೇಸಿಗೆಯಲ್ಲಿ ಅದಕ್ಕೆ ಮೈಯೊಡ್ಡಬಹುದು. ನೀರಿನಲ್ಲಿ ಯಥೇಚ್ಛ ಆಡಬಹುದು. ಅಜ್ಜ-ಅಜ್ಜಿಯ ಪ್ರೀತಿಕಾರಂಜಿಯ ಜತೆಗೆ ಇದರ ಮೋಜನ್ನೂ ಸವಿಯಬಹುದು. ರವಿಯ ಹಿಗ್ಗಿಗೆ ಅದೇ ಕಾರಣ. ಇಲ್ಲಿ ರವಿ ಮತ್ತು ಕಾರಂಜಿಯನ್ನು ಸಾಂಕೇತಿಕವಾಗಿ ತೆಗೆದುಕೊಂಡು ನೋಡಿ. ಅದು ನಮ್ಮ-ನಿಮ್ಮೆಲ್ಲರ ಆನಂದಾನುಭವವೂ ಆಗುತ್ತದೆ! ದೂರದ ಊರಿನಲ್ಲಿದ್ದು ವರ್ಷಕ್ಕೊಮ್ಮೆಯೋ ಮೂರ್ನಾಲ್ಕು ವರ್ಷಗಳಿಗೊಮ್ಮೆಯೋ ತವರೂರಿಗೆ ಹೋದಾಗ, ಹುಟ್ಟಿ ಬೆಳೆದ ಮನೆಗೆ ಭೇಟಿಕೊಟ್ಟಾಗ, ಅಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು, ಹೊಸ ವಸ್ತು ಅಥವಾ ಸೌಲಭ್ಯ-ಸೌಕರ್ಯಗಳನ್ನು ಗಮನಿಸಿದಾಗಿನ ಪುಳಕವಿದೆಯಲ್ಲ ಅದೊಂಥರ ವಿಶೇಷವಾದುದು. ಅದು, ಹಜಾರದಲ್ಲಿನ ಹೊಸ ತೂಗುಮಂಚ ಇರಬಹುದು, ಅಡುಗೆಮನೆಯಲ್ಲಿ ಹೊಸದೊಂದು ಪರಿಕರ ಇರಬಹುದು, ಗೋಡೆಗಳಿಗೆ ಹೊಸ ಸುಣ್ಣಬಣ್ಣ ಇರಬಹುದು, ಅಮ್ಮನೋ ಅಕ್ಕನೋ ಕೈಕರಣದಿಂದ ಮಾಡಿದ ಕಲಾಕೃತಿಯಿರಬಹುದು, ಕೊನೆಗೆ ಹಳೇ ಪೀಠೋಪಕರಣಗಳನ್ನೇ ಹೊಸ ನಮೂನೆಯಲ್ಲಿ ಜೋಡಿಸಿದ್ದಿರಬಹುದು- ಅಂತೂ “ವಾಹ್! ಎಷ್ಟು ಚೆನ್ನಾಗಿದೆ! ಕಳೆದಸಲ ಬಂದಾಗ ಇದು ಇರಲಿಲ್ಲ...” ಎನ್ನಬಹುದಾದ ಯಾವುದಾದರೂ ಸರಿ. ಮಾತಿಗೆ ಸಾಮಗ್ರಿಯಾಗುತ್ತದೆ, ಮನಸ್ಸಿಗೆ ಮುದ ಕೊಡುತ್ತದೆ, ರವಿಗೆ ಕಾರಂಜಿಯಿದ್ದಂತೆ ನಮಗೆ ಹಿಗ್ಗಿನ ಬುಗ್ಗೆಯಾಗುತ್ತದೆ. ಈ ಸಲ ನಾನು ಊರಿಗೆ ಹೋಗಿದ್ದಾಗ ಅಲ್ಲಿ ಅಂಥದೊಂದು ಹೊಸ ಆಕರ್ಷಣೆಯ ಕಾರಂಜಿಯಿತ್ತು. ಅದೇನಂತೀರಾ? ನಮ್ಮ ಮನೆಯ ಗೇಟಿಗೆ ಅಳವಡಿಸಿದ ‘ಹಸು ತಡೆ’! ಇಂಗ್ಲಿಷ್ನಲ್ಲಿ cow-stopper ಅಥವಾ cow-catch ಎನ್ನುತ್ತಾರೆ. ಹಾಗೆಂದರೇನು ಅಂತ ನಿಮಗೆ ತತ್ಕ್ಷಣ ಗೊತ್ತಾಗುವಂತೆ ಇಲ್ಲಿ ಅದರ ಚಿತ್ರವನ್ನು ಕೊಟ್ಟಿದ್ದೇನೆ. ಚಿತ್ರದ ಜತೆಗೆ ಒಂದಿಷ್ಟು ಅಕ್ಷರ-ಚಿತ್ರಣವೂ ಇರಲೆಂದು ಅದನ್ನೂ ಕೊಡುತ್ತಿದ್ದೇನೆ. ಇಪ್ಪತ್ತೈದು ವರ್ಷಗಳಿಗೂ ಹಿಂದಿನ ಮಾತು. ನಾನಾಗ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದೆ. ನಮ್ಮ ಕಾಲೇಜಿನ ಭವ್ಯವಾದ ಕಟ್ಟಡದ ಎದುರಿಗೆ ಒಂದಿಷ್ಟು ಜಾಗದಲ್ಲಿ ಹೂತೋಟ. ಮುಖ್ಯ ರಸ್ತೆಯಿಂದ ಕಾಲೇಜಿನ ಆವರಣದೊಳಕ್ಕೆ ಹೋಗಲು ಆಚೀಚೆ ಎರಡು ದೊಡ್ಡ ಗೇಟುಗಳು. ಅವುಗಳಿಗೆ ಹೊಂದಿಕೊಂಡಂತೆ ಒಂದು ಚಿಕ್ಕ ಕಂದಕದ ಮೇಲೆ, ಸಮಾನಾಂತರವಾಗಿ ಅಡ್ಡ ಹಾಸಿದ ಕಬ್ಬಿಣದ ಕೊಳವೆಗಳು. ಕಾಲೇಜಿಗೆ ಹೋಗುವವರ ವಾಹನಗಳು (ಆಗ ಕಾರು ಇದ್ದದ್ದು ಬಹುಶಃ ಪ್ರಿನ್ಸಿಪಾಲರದು ಮಾತ್ರ; ಉಳಿದಂತೆ ಸ್ಕೂಟರ್ ಅಥವಾ ಸೈಕಲ್ಗಳು) ಮತ್ತು ಪಾದಚಾರಿಗಳು ಅದನ್ನು ದಾಟಿಯೇ ಹೋಗಬೇಕು. ಗೇಟುಗಳು ಯಾವಾಗಲೂ ತೆರೆದೇ ಇರುತ್ತಿದ್ದವು. ಅಲ್ಲಿ ಆ ಕಂದಕ ಮತ್ತು ಅದರ ಮೇಲೆ ಕಬ್ಬಿಣದ ಸಲಾಕೆಗಳು ಯಾಕಿರುತ್ತವೆ ಅಂತ ನನಗೆ ಗೊತ್ತೇ ಇರಲಿಲ್ಲ. ಯಾರೋ ಹೇಳಿದ್ದರು, ದನಕರುಗಳು ಕಾಲೇಜಿನ ಆವರಣದೊಳಕ್ಕೆ ಬರದಂತೆ ತಡೆಯುವುದಕ್ಕಾಗಿ ಆ ವ್ಯವಸ್ಥೆ. ಕಾಲು ಸಿಕ್ಕಿಹಾಕಿಕೊಳ್ಳುವ ಭಯದಿಂದ ದನಗಳು ಅದನ್ನು ದಾಟಲು ಯತ್ನಿಸುವುದಿಲ್ಲ. ಪದೇಪದೇ ಗೇಟ್ ಹಾಕಿ-ತೆಗೆಯುವ ಅವಶ್ಯಕತೆ ಇಲ್ಲ. ಹೂಂ, ಒಳ್ಳೆಯ ವ್ಯವಸ್ಥೆ, ಆದರೆ ‘ದನಗಳು ಯಾಕೆ ಕಾಲೇಜಿಗೆ ಬರುತ್ತವೆ? ಅವಕ್ಕೇನು ಓದಿ ಡಿಗ್ರಿ ಪಾಸಾಗಬೇಕಂತಿದೆಯೇ?’ ಎಂಬ ತುಂಟ ಪ್ರಶ್ನೆ ಈಗಾದರೆ ನನ್ನ ತಲೆಯಲ್ಲಿ ಹೊಳೆಯುತ್ತಿತ್ತು. ಇರಲಿ, ಅಂತೂ ‘ಹಸು ತಡೆ’ಂiiನ್ನು ನಾನು ಮೊಟ್ಟಮೊದಲು ನೋಡಿದ್ದು ಉಜಿರೆ ಕಾಲೇಜಿನಲ್ಲಿ. ಆಮೇಲೆ ಎಷ್ಟೋ ಕಡೆ ಸಾರ್ವಜನಿಕ ಕಟ್ಟಡಗಳ ಗೇಟುಗಳಿಗೆ ಅಂಥ ರಚನೆ ಇರುವುದು ನೋಡಿ ಅದರ ಬಗ್ಗೆ ಕುತೂಹಲ ಕಡಿಮೆಯಾಗಿತ್ತು. ಈಗ, ಕಾರ್ಕಳ ತಾಲೂಕಿನ ಮಾಳ ಎಂಬ ಹಳ್ಳಿಯಲ್ಲಿರುವ ನಮ್ಮ ಮನೆಗೆ ಹೋಗೋಣ. ನಮ್ಮಕಡೆಯ ಹಳ್ಳಿಮನೆಗಳಲ್ಲಿ ಸಾಮಾನ್ಯವಾಗಿ ಇರುವಂತೆ ನಮ್ಮಲ್ಲೂ ಮನೆಯ ಸುತ್ತ ತೋಟ, ಅದಕ್ಕೆ ಬೇಲಿಯ ಆವರಣ. ಮಣ್ಣಿನ ರಸ್ತೆ ಬರುವಲ್ಲಿ ಮಾತ್ರ ದೊಡ್ಡದೊಂದು ಗೇಟು. ಅದು ಮನೆಯಿಂದ ಕನಿಷ್ಠ ನೂರಿನ್ನೂರು ಅಡಿಗಳಷ್ಟು ದೂರದಲ್ಲೇ ಇರುತ್ತದೆ. ವಾಹನಗಳು ಮನೆಯ ಅಂಗಳದವರೆಗೂ ಬರಬಹುದಾದರೂ ಮುಚ್ಚಿರುವ ಗೇಟನ್ನು ತೆಗೆಯಲು ಒಂದೋ ಮನೆಯವರೇ ಯಾರಾದರೂ ಬರಬೇಕು, ಇಲ್ಲ ವಾಹನದಲ್ಲಿದ್ದವರೇ ಒಮ್ಮೆ ಇಳಿದು ಗೇಟು ತೆರೆದುಕೊಂಡು ಮತ್ತೆ ವಾಹನವೇರಿ ಬರಬೇಕು. ನನ್ನ ಅಣ್ಣ ಡೇರಿಗೆ ಹಾಲು ಕೊಟ್ಟು ಬರಲಿಕ್ಕೊಮ್ಮೆ, ಕಾರ್ಕಳ ಪೇಟೆಯಲ್ಲಿ ಏನಾದರೂ ವ್ಯವಹಾರದ ಕೆಲಸಗಳಿದ್ದರೆ ಅದಕ್ಕೆ, ನಮ್ಮೂರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನಾದ್ದರಿಂದ ಅದರ ವಿಚಾರವಾಗಿ, ಅಥವಾ ಮನೆಗೆ ಯಾರಾದರೂ ಬಂದಾಗ ಅವರನ್ನು ಬಸ್ಸ್ಟಾಪ್ವರೆಗೆ ಬಿಟ್ಟು ಬರುವುದಿದ್ದರೆ... ಹೀಗೆ ಒಂದಿಲ್ಲೊಂದು ಕಾರಣಗಳಿಂದ ದಿನಕ್ಕೆ ಏನಿಲ್ಲವೆಂದರೂ ಐದಾರು ಸರ್ತಿ ಬೈಕ್ ಅಥವಾ ಕಾರು ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಿ ಬರಬೇಕಾಗುತ್ತದೆ. ಮನೆಯಲ್ಲಿ ಉಳಿವವರು ಅತ್ತಿಗೆ ಮತ್ತು ಅಮ್ಮ ಮಾತ್ರ. ಇಬ್ಬರೂ ಮನೆಗೆಲಸಗಳಲ್ಲಿ ಮುಳುಗಿರುತ್ತಾರೆ. ಆಗೆಲ್ಲ ಗೇಟು ತೆಗೆದು-ಹಾಕುವ ಕೆಲಸ ದೊಡ್ಡ ತಲೆನೋವು. ಹಾಗಂತ ಗೇಟು ತೆರೆದೇ ಇಟ್ಟರೆ ದನಕರುಗಳ ಕಾಟ. ನಮ್ಮ ಕೊಟ್ಟಿಗೆಯ ದನಗಳಲ್ಲದಿದ್ದರೂ ಬೇರೆ ಉಂಡಾಡಿ ದನಗಳು ಒಳಬಂದು ತರಕಾರಿ ಗಿಡಗಳು ಹೂಗಿಡಗಳು ಅದೂಇದೂ ಎನ್ನದೇ ಎಲ್ಲವನ್ನೂ ತಿಂದು ಹಾಕುತ್ತವೆ. ನಮ್ಮ ಮನೆಯ ಮತ್ತು ನಿವೇಶನದ ಹೆಸರು ‘ಫಲವಾಡಿ’ (ಹಣ್ಣುಹಂಪಲಿನ ತೋಟ ಎಂದು ಮರಾಠಿ ಭಾಷೆಯಲ್ಲಿ ಅರ್ಥ) ಎಂದಿರುವುದು, ಒಳಗೆ ಹೋದರೆ ಒಳ್ಳೆಯ ಮೇವು ಎಂದು ಬಹುಶಃ ದನಕರುಗಳಿಗೂ ಗೊತ್ತಿದೆ. ಅಂತೂ ಗೇಟು ಹಾಕಿಟ್ಟರೂ ಕಷ್ಟ, ತೆರೆದಿಟ್ಟರೂ ಕಷ್ಟ. ಅದಕ್ಕಾಗಿ ಈಗ ಅಣ್ಣ ಮಾಡಿರುವ ಹೊಸ ವ್ಯವಸ್ಥೆಯೇ ಗೇಟಿನ ಹೊರಗಡೆ ‘ಹಸು ತಡೆ’. ಇನ್ನು ದನಕರುಗಳ ಕಾಟವಿಲ್ಲ. ಬೆಳಿಗ್ಗೆ ಒಮ್ಮೆ ಗೇಟು ತೆರೆದರೆ ರಾತ್ರಿಯವರೆಗೂ ಮುಚ್ಚಬೇಕಿಲ್ಲ. ಮೊನ್ನೆ ಹೊಸತರಲ್ಲಿ ಒಂದೆರಡು ದನಗಳು ಗೇಟಿನವರೆಗೂ ಬಂದು ತಡೆಯನ್ನು ಕಂಡು ವಾಪಸಾದದ್ದನ್ನು ನೋಡುವಾಗ ಖುಷಿಯೋ ಖುಷಿ ಎನ್ನುತ್ತಿದ್ದರು ನನ್ನಣ್ಣ. ಉಜಿರೆ ಕಾಲೇಜನ್ನು ನೆನಪಿಗೆ ತಂದ cow-stopper ನಮ್ಮನೆಯ ಗೇಟಿಗೂ ಅಳವಡಿಸಿದ್ದನ್ನು ನೋಡಿದಾಗ ನನಗೂ ಖುಷಿಯಾಯಿತು. ಅದಕ್ಕಿಂತ ಹೆಚ್ಚಾಗಿ, ಇನ್ನು ನಮ್ಮ ಮನೆಯಲ್ಲಿ ‘ತೆರೆದಿದೆ ಗೇಟು ಓ ಬಾ ಅತಿಥಿ... ಹಸು ತಡೆಯನು ದಾಟಿ ಬಾ ಓ ಅತಿಥಿ...’ ಎಂದು ಹಾಡಬಹುದೆನ್ನುವ ಹಾಸ್ಯಚಟಾಕಿಯಿಂದ ಮತ್ತಷ್ಟು ಖುಷಿಯಾಯಿತು. ಸ್ಪರ್ಶ ಸಂಭ್ರಮ: ಕಳೆದ ರವಿವಾರ ಜುಲೈ ೩ರಂದು ಬೆಂಗಳೂರಿನಲ್ಲಿ ನಡೆದ ‘ಸ್ನೇಹಸ್ಪರ್ಶ’ ಕಾರ್ಯಕ್ರಮ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಇತ್ತು; ಒಟ್ಟಿನಲ್ಲಿ ಅತ್ಯಂತ ಆತ್ಮೀಯವಾಗಿತ್ತು, ಅದರಲ್ಲಿ ಪಾಲ್ಗೊಂಡದ್ದು ತುಂಬ ಖುಷಿಕೊಟ್ಟಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಸ್ನೇಹಸ್ಪರ್ಶಕ್ಕೆ ಅನನ್ಯತೆಯ ಅಂದ ತಂದುಕೊಡಲು ಕಾರಣರಾದವರಿಗೆಲ್ಲ, ಶುಭಾಶಯ ಕೋರಿದವರಿಗೆಲ್ಲ, ಹೃತ್ಪೂರ್ವಕ ಧನ್ಯವಾದಗಳು. ಅವತ್ತು ಬಿಡುಗಡೆಯಾದ ‘ಗೆಲುವಿನ ಟಚ್!’ ಮತ್ತು ‘ಚೆಲುವಿನ ಟಚ್!’ ಅವಳಿ ಪುಸ್ತಕಗಳು (ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಕರ್ನಾಟಕದಾದ್ಯಂತ ಪ್ರಮುಖ ಪುಸ್ತಕದಂಗಡಿಗಳಲ್ಲಿ ಸಿಗುತ್ತವೆ. ಕೊಂಡು ಓದಿ. ಇಷ್ಟಮಿತ್ರ ಬಂಧುಬಾಂಧವರಿಗೆ ಉಡುಗೊರೆಯಾಗಿ ಕೊಡಿ. ಅಕ್ಷರಪ್ರೀತಿ, ತನ್ಮೂಲಕ ಜೀವನಪ್ರೀತಿ ಎಲ್ಲರದಾಗಲಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.