Episodes
Saturday Apr 02, 2011
Cricket Craze
Saturday Apr 02, 2011
Saturday Apr 02, 2011
ದಿನಾಂಕ 3 ಏಪ್ರಿಲ್ 2011ರ ಸಂಚಿಕೆ...
ಇದು ಕ್ರಿಕೆಟ್ ‘ನೋಟ’ದ ವೀಕ್ಷಕ ವಿವರಣೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಮೊನ್ನೆ ಮೊಹಾಲಿ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಯಾರೋ ಹಿಡಿದುಕೊಂಡಿದ್ದ ಆ ಬ್ಯಾನರ್ ಎಷ್ಟು ಅರ್ಥಪೂರ್ಣವಾಗಿತ್ತಲ್ವಾ, ‘ಭಾರತೀಯರಿಗೆ ಗೊತ್ತಿರುವುದು ಎರಡೇ ಧರ್ಮಗಳು: ಒಂದು ಸಿನೆಮಾ, ಇನ್ನೊಂದು ಕ್ರಿಕೆಟ್. ಮತ್ತ್ಯಾಕೆ ಜಗಳ?’ ಅಕ್ಷರಶಃ ನಿಜ. ನನಗನಿಸುತ್ತದೆ, ಭಾರತೀಯರೆಲ್ಲರನ್ನೂ ಒಂದೇ ದಾರದಲ್ಲಿ ಪೋಣಿಸುವ ವಿಚಾರದಲ್ಲಿ ಸಿನೆಮಾವನ್ನೂ ಮೀರಿಸಿದ್ದು ಕ್ರಿಕೆಟ್ ಕ್ರೇಜ್. ಶ್ರೀಮಂತ-ಬಡವರೆನ್ನದೆ ಸಮಾನತೆಯನ್ನು ಸಾರುವ ಶ್ರೇಷ್ಠ ಧರ್ಮವೆಂದರೆ ಅದೊಂದೇ. ಬೇರೆಲ್ಲ ಬಿಡಿ, ‘ಸ್ಕೋರ್ ಎಷ್ಟು?’ ಎಂಬ ಒಂದೇಒಂದು ಸಂಭಾಷಣೆ ಸಾಕು ಇಬ್ಬರು ತೀರಾ ಅಪರಿಚಿತರನ್ನು ತತ್ಕ್ಷಣದಲ್ಲಿ ಆತ್ಮೀಯರನ್ನಾಗಿಸುವುದಕ್ಕೆ! ಇದು ದೇಶದೊಳಗಿನ ನೂರಿಪ್ಪತ್ತೊಂದು ಕೋಟಿ ಜನರಿಗಷ್ಟೇ ಅಲ್ಲ, ದೇಶದಿಂದ ದೂರವಿರುವವರಿಗೂ ಅನ್ವಯಿಸುತ್ತದೆ. ವಿದೇಶಗಳಲ್ಲಿ ನೆಲೆಸಿರುವ ಅಷ್ಟೂ ಭಾರತೀಯರಲ್ಲಿ ಯಾರಾದರೂ ಇಬ್ಬರನ್ನು ಆಯ್ದು ಅವರೊಂದಿಗೆ ಮಾತುಕತೆಯಲ್ಲಿ ಭಾರತದ ವಿಷಯವೇನಾದರೂ ಪ್ರಸ್ತಾಪವಾಯ್ತು ಅಂತಿಟ್ಕೊಳ್ಳೋಣ. ಬೇರಾವುದೇ ಸಂದರ್ಭದಲ್ಲಾದರೆ ಅವರಿಬ್ಬರ ಆಸಕ್ತಿಗಳು ಆಲೋಚನೆಗಳು ಒಂದೇರೀತಿ ಇರುತ್ತವೆನ್ನಲಾಗದು. ಆದರೆ ಮೊನ್ನೆ ವರ್ಲ್ಡ್ಕಪ್ ಸೆಮಿಫೈನಲ್ಸ್ನಲ್ಲಿ ಇಂಡೋ-ಪಾಕ್ ಕ್ರಿಕೆಟ್ ಯುದ್ಧ ನಡೆಯಿತಲ್ಲ, ಅವತ್ತಿನ ದಿನವೇನಾದರೂ ವಿಶ್ವದ ಮೂಲೆಮೂಲೆಯಲ್ಲಿರುವ ಭಾರತೀಯರೆಲ್ಲರ ಎದೆಬಡಿತ ಆಲಿಸುವಂತಿದ್ದಿದ್ದರೆ ಅಲ್ಲಿ ಕೇಳಿಬರುತ್ತಿದ್ದದ್ದು ಒಂದೇ- ಕ್ರಿಕೆಟ್ ಮ್ಯಾಚ್ನ ಮಿಡಿತ; ಭಾರತ ಗೆಲ್ಲಬೇಕೆಂಬ ತುಡಿತ. ಕ್ರಿಕೆಟ್ನ ಮೋಡಿಯೇ ಅಂಥದ್ದು. ಕ್ರಿಕೆಟ್ ಆಡುವುದು ತುಂಬಾ ಮಂದಿಗೆ ಇಷ್ಟ. ಕ್ರಿಕೆಟ್ ನೋಡುವುದು ಅದಕ್ಕಿಂತ ಲಕ್ಷ ಪಟ್ಟು ಹೆಚ್ಚು ಜನರಿಗೆ ಇಷ್ಟ. ನನಗೆ ಇವೆರಡಷ್ಟೇ ಅಲ್ಲದೆ ಇನ್ನೂ ಒಂದು ಇಷ್ಟದ ವಿಷಯವಿದೆ, ಅದೇನೆಂದರೆ ಕ್ರಿಕೆಟ್ ಆಡುವವರಿಗಿಂತಲೂ ಹೆಚ್ಚಾಗಿ ನೋಡುವವರನ್ನು ಗಮನಿಸುವುದು. ಅವರ ಕ್ರಿಕೆಟ್ ಆಸಕ್ತಿ ಅಭಿಮಾನಗಳ ವಿಧವಿಧ ನಮೂನೆಗಳನ್ನು ಆನಂದಿಸುವುದು. ‘ನೋಡುವವರು’ ಎಂದರೆ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುವವರೂ ಹೌದು, ನನ್ನ-ನಿಮ್ಮ ಹಾಗೆ ಟಿವಿಯಲ್ಲಿ ಲೈವ್ ನೋಡುವವರೂ ಹೌದು. ರೇಡಿಯೊ ಕಾಮೆಂಟರಿ ಕೇಳುವವರು, ಪತ್ರಿಕೆಗಳಿಂದ ಕ್ರಿಕೆಟ್ ಸುದ್ದಿ ತಿಳಿಯುವವರೂ ಈ ಗುಂಪಿಗೆ ಬರುತ್ತಾರೆ. ಮಾಡರ್ನ್ ಯುಗದಲ್ಲಿ ಫೇಸ್ಬುಕ್ ಟ್ವಿಟ್ಟರ್ಗಳಲ್ಲಿ ಚಿಲಿಪಿಲಿಗುಟ್ಟುವವರೂ ಸೇರಿಕೊಳ್ಳುತ್ತಾರೆ. ಒಟ್ಟಿನಲ್ಲಿ ‘ಕ್ರಿಕೆಟಾಸಕ್ತರು’ ಅನ್ನಿ. ಕ್ರಿಕೆಟ್ ಸೀಸನ್ನಲ್ಲಿ ಇವರ ಉದ್ಗಾರಗಳು, ವ್ಯಾಖ್ಯಾನಗಳು, ನಂಬಿಕೆ-ನಡವಳಿಕೆಗಳು ಸಖತ್ ಮಜಾ ಇರುತ್ತವೆ. ಇವತ್ತಿನ ಅಂಕಣದಲ್ಲಿ ಅಂತಹ ಕೆಲವು ಸ್ವಾರಸ್ಯಗಳನ್ನು ಸೇರಿಸಿಕೊಂಡಿದ್ದೇನೆ. ಇವು ಅಮೆರಿಕದಲ್ಲಿ ನಾನು ಗಮನಿಸಿದ ಮತ್ತು ವಿವಿಧೆಡೆಗಳಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಿ ಸಂಗ್ರಹಿಸಿದ ಅಂಶಗಳು. ವರ್ಲ್ಡ್ಕಪ್ ಕ್ರಿಕೆಟ್ ಟೂರ್ನಮೆಂಟನ್ನು ಅಮೆರಿಕದಲ್ಲಿರುವ ಭಾರತೀಯರು ಒಟ್ಟಾರೆಯಾಗಿ ಹೇಗೆ ಆನಂದಿಸಿದ್ದಾರೆ ಎನ್ನುವುದಕ್ಕೆ ಒಂದು ಸಣ್ಣ ಸ್ಯಾಂಪಲ್. ‘ಕ್ರಿಕೆಟ್ ಜ್ವರ’ ಎನ್ನುತ್ತೇವೆ, ಮೊನ್ನೆ ಬುಧವಾರ ಇಲ್ಲಿ ಭಾರತೀಯರು ಮತ್ತು ಪಾಕಿಸ್ತಾನದವರ ಪೈಕಿ ಅನೇಕರಿಗೆ ಒಮ್ಮಿಂದೊಮ್ಮೆಲೇ ಸಾಮೂಹಿಕ ಜ್ವರ ಬಂದಿತ್ತು! ಅವತ್ತು ‘ಜ್ವರ ಬಂದಿದೆ, ಕೆಲಸಕ್ಕೆ ಬರುವುದಕ್ಕಾಗುವುದಿಲ್ಲ’ ಎಂದು ಸುಳ್ಳುಸುಳ್ಳೇ ಸಿಕ್ಲೀವ್ ಘೋಷಿಸಿ ಆಫೀಸಿಗೆ ಹೋಗದೆ ಕ್ರಿಕೆಟ್ ಮ್ಯಾಚ್ ನೋಡಿದವರು ಅದೆಷ್ಟೋ! ವಾಷಿಂಗ್ಟನ್ನ ಒಂದು ಎಫ್.ಎಂ ರೇಡಿಯೊ ಸ್ಟೇಷನ್ನಲ್ಲಿ ಅದು ನ್ಯೂಸ್ ಕೂಡ ಆಗಿತ್ತು. ಒಂದುವೇಳೆ ನಿಜವಾಗಿಯೂ ಜ್ವರವಿದ್ದು ವೈದ್ಯರ ಹತ್ತಿರ ಹೋಗುವೆನೆಂದರೆ ಅವರೂ ರಜೆಹಾಕಿ ಕ್ರಿಕೆಟ್ ಮ್ಯಾಚ್ ನೋಡುತ್ತಿರಬೇಕೇ! ಉದಾಹರಣೆಗೆ ಡಾ.ಗುರುಪ್ರಸಾದ್ ಕಾಗಿನೆಲೆ ಕುಟುಂಬಸಮೇತರಾಗಿ ಪೋರ್ಟರಿಕೊ ದ್ವೀಪಕ್ಕೆ ಪ್ರವಾಸಹೋಗಿದ್ದವರು ಅಲ್ಲಿ ಸಮುದ್ರತೀರದಲ್ಲಿ ಲ್ಯಾಪ್ಟಾಪ್ ಮತ್ತು ವಯರ್ಲೆಸ್ ಇಂಟರ್ನೆಟ್ ಬಳಸಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದರು. ಕೆಲವು ಆಫೀಸ್ಗಳಲ್ಲಿ (ಮುಖ್ಯವಾಗಿ ಸಾಫ್ಟ್ವೇರ್ ಕಂಪನಿಗಳಲ್ಲಿ) ಭಾರತೀಯ ಉದ್ಯೋಗಿಗಳೆಲ್ಲ ಸೇರಿ ಕಾನ್ಫರೆನ್ಸ್ ರೂಮ್ಗಳಲ್ಲಿ ರಾಜಾರೋಷವಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದಾರೆ. ಅಮೆರಿಕನ್ ಬಾಸ್ ಮತ್ತು ಸಹೋದ್ಯೋಗಿಗಳನ್ನೂ ಸೇರಿಸಿಕೊಂಡು ಅವರಿಗೆ ಕ್ರಿಕೆಟ್ ನಿಯಮಗಳನ್ನು ವಿವರಿಸಿ ಅವರೂ ಕ್ರಿಕೆಟ್ ಮ್ಯಾಚ್ ಸವಿಯುವಂತೆ ಮಾಡಿದ್ದಾರೆ. ವಾಷಿಂಗ್ಟನ್ನಲ್ಲಿರುವ ವರ್ಲ್ಡ್ಬ್ಯಾಂಕ್ ಕೇಂದ್ರಕಛೇರಿಯ ಕೆಫೆಟೆರಿಯಾದಲ್ಲೇ ಕ್ರಿಕೆಟ್ ವೀಕ್ಷಣೆಯ ಏರ್ಪಾಡು ಮಾಡಲಾಗಿತ್ತು ಎನ್ನುತ್ತಾರೆ ಅಲ್ಲಿ ಕೆಲಸ ಮಾಡುವ ರಾಮಕೃಷ್ಣ ಭಟ್. ಅಮೆರಿಕದಲ್ಲಿ ವರ್ಲ್ಡ್ಕಪ್ ಕ್ರಿಕೆಟ್ನ ಪ್ರಸಾರಸ್ವಾಮ್ಯ ‘ವಿಲ್ಲೋ ಟಿವಿ’ ಕಂಪನಿಯದು. ಕ್ರಿಕೆಟ್ಗೋಸ್ಕರವಷ್ಟೇ ಅದಕ್ಕೆ ಚಂದಾದಾರರಾಗಬೇಕು. ಆದ್ದರಿಂದ ಸ್ನೇಹಿತರ/ನೆರೆಕೆರೆಯವರ ಪೈಕಿ ಯಾರಾದರೊಬ್ಬರು ಪ್ಯಾಕೇಜ್ ಖರೀದಿಸಿ ಕ್ರಿಕೆಟ್ ವೀಕ್ಷಣೆಯ ಪಾರ್ಟಿಗಳನ್ನು ಏರ್ಪಡಿಸಿದ ನಿದರ್ಶನಗಳೇ ಹೆಚ್ಚು. ಷಿಕಾಗೊದಲ್ಲಿ ಸತೀಶ್ ಗೋಪಿನಾಥ್ ಅದನ್ನೇ ಮಾಡಿದರು. ಜತೆಯಲ್ಲೇ ಒಂದು ವಿನೋದ. ಏನೆಂದರೆ ವಿಲ್ಲೋ ಟಿವಿ ಟ್ರಾನ್ಸ್ಮಿಷನ್ನಲ್ಲಿ ಸುಮಾರು ನಾಲ್ಕೈದು ನಿಮಿಷಗಳ ಡಿಲೇ ಇರುತ್ತದೆ. ಮೊಹಾಲಿಯಲ್ಲಿ ವಿಕೆಟ್ ಪತನವಾದರೂ ಷಿಕಾಗೊದಲ್ಲಿ ಅದು ಪ್ರಸಾರವಾಗುವುದು ಸ್ವಲ್ಪ ಹೊತ್ತಿನ ನಂತರ. ಅದರ ಮೊದಲೇ ಬೆಂಗಳೂರಿನಿಂದ ಸತೀಷ್ ಅವರಣ್ಣ ಸೆಲ್ಫೋನ್ನಲ್ಲಿ ಅಪ್ಡೇಟ್ ಕೊಡುತ್ತಿದ್ದರಂತೆ. ಸತೀಷ್ ಮ್ಯಾಜಿಕ್ ಮಾಡುವವರಂತೆ “ನೋಡಿ ಈಗ ವಿಕೆಟ್ ಬೀಳುತ್ತದೆ” ಎನ್ನುವರು, ಅಷ್ಟೊತ್ತಿಗೆ ವಿಕೆಟ್ ಬೀಳುವುದು, ಅಲ್ಲಿದ್ದ ಮಿತ್ರರಿಗೆಲ್ಲ ಆಶ್ಚರ್ಯ! ಆಮೇಲೆ ವಿಲ್ಲೋ ಟಿವಿಯ ಡಿಲೇ ಮತ್ತು ಸೆಲ್ಫೋನ್ ಸಂದೇಶಗಳ ರಹಸ್ಯ ಬಯಲಾಯಿತೆನ್ನಿ. ಇನ್ನು, ‘ನಂಬಿಕೆ’ಗಳೂ ಸಾಕಷ್ಟು ಕೆಲಸಮಾಡಿವೆ. ಕ್ವಾರ್ಟರ್ಫೈನಲ್ನಲ್ಲಿ ಭಾರತ ಗೆದ್ದ ಮೇಲೆ ಸೆಮಿಫೈನಲ್ನಲ್ಲಿಯೂ ಗೆಲ್ಲುವಂತೆ ಮನೆಯಲ್ಲೇ ವಿಶೇಷ ಪೂಜೆ ಏರ್ಪಡಿಸಿದ್ದರಂತೆ ವರ್ಜೀನಿಯಾದಲ್ಲಿ ಸಂಜಯರಾವ್ ಅವರ ಪಕ್ಕದಮನೆಯ ತಮಿಳರೊಬ್ಬರು. ಆದರೆ ನಾಗಶಂಕರ್ ಮಗಳು ಐದು ವರ್ಷದ ನಿಧಿ, ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಸಪೋರ್ಟ್ ಮಾಡುವವಳು. ಏಕೆಂದರೆ ಅವಳ ಕಿಂಡರ್ಗಾರ್ಟನ್ ಫ್ರೆಂಡ್ ಪಾಕಿಸ್ತಾನದವಳು! ಕ್ಯಾಲಿಫೋರ್ನಿಯಾದಲ್ಲಿ ಗೌತಮ್ ಸುದತ್ತ ಅವರ ಪರಿಚಯದವರೊಬ್ಬರು, ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದ ಪಂದ್ಯವನ್ನು ನೋಡುವಾಗ ತೊಟ್ಟಿದ್ದ ಪ್ಯಾಂಟ್-ಶರ್ಟ್ ಮತ್ತು ಒಳಉಡುಪುಗಳನ್ನೇ ತೊಟ್ಟುಕೊಂಡು ಪಾಕಿಸ್ತಾನ ವಿರುದ್ಧದ ಪಂದ್ಯ ವೀಕ್ಷಣೆಗೆ ಆಸೀನರಾಗಿದ್ದರಂತೆ! ಹಾಗೆಯೇ ಪಾಕಿಸ್ತಾನಿ ಸಹೋದ್ಯೋಗಿಯೊಬ್ಬರು ‘ನೋಡಿ, ಇವತ್ತು ನಿಮಗೆಲ್ಲ ಗ್ರೀಫ್ ಕೌನ್ಸೆಲಿಂಗ್ ಉಚಿತವಾಗಿ ಏರ್ಪಾಡು ಮಾಡುತ್ತೇನೆ’ ಎಂದು ಭಾರತೀಯರನ್ನು ಕೆಣಕುತ್ತಿದ್ದವರು ಸೆಮಿಫೈನಲ್ಸ್ ಮ್ಯಾಚ್ ಮುಗಿದಾಗ ‘ಅಯ್ಯೋ ಈಗ ನನಗೇ ಕೌನ್ಸೆಲಿಂಗ್ ಬೇಕಾಯ್ತಲ್ಲ’ ಎಂದು ಮರುಕಪಟ್ಟರಂತೆ. ಕೆಲವು ಇಂಡಿಯನ್ ರೆಸ್ಟೋರೆಂಟ್ಗಳು ‘ಬ್ರೇಕ್ಫಾಸ್ಟ್ ವಿದ್ ಕ್ರಿಕೆಟ್’ ಎಂದು ಒಂದೊಂದು ಮ್ಯಾಚ್ಗೆ ಹತ್ತು ಡಾಲರ್ ಟಿಕೆಟ್ ಇಟ್ಟು ವಿಲ್ಲೋ ಟಿವಿ ಪ್ರದರ್ಶನ ವ್ಯವಸ್ಥೆ ಮಾಡಿದ್ದವು. ನಮ್ಮನೆಗೆ ಹತ್ತಿರದಲ್ಲಿರುವ ‘ಟಚ್ ಇಂಡಿಯನ್ ಕ್ಯುಸಿನ್’ ರೆಸ್ಟೋರೆಂಟ್ನಲ್ಲಿ ಅದೇಥರದ ಏರ್ಪಾಡು. ಪ್ರೊಜೆಕ್ಟರ್ನಿಂದ ದೊಡ್ಡ ಸ್ಕ್ರೀನ್ ಮೇಲೆ, ಥಿಯೇಟರ್ನಲ್ಲಿ ಸಿನೆಮಾ ನೋಡಿದ ಅನುಭವ. ಭಾರತ ಆಡಿದ ಬಹುತೇಕ ಮ್ಯಾಚ್ಗಳನ್ನು ನಾನು ನೋಡಿದ್ದು ಅಲ್ಲಿಯೇ. ಭಾರತ-ಪಾಕಿಸ್ತಾನ ಮ್ಯಾಚ್ನ ದಿನವಂತೂ ಅಲ್ಲಿ ಸೇರಿದ್ದವರಿಗೆಲ್ಲ ಉಚಿತ ಊಟ ಉಪಾಹಾರ, ಉಚಿತ ವೀಕ್ಷಣೆ, ಭಾರತ ಗೆದ್ದ ಸಂತಸದಲ್ಲಿ ಹತ್ತು ಡಾಲರ್ಗಳ ಗಿಫ್ಟ್ಕೂಪನ್! ಸರಿ, ನಾವು ಇಷ್ಟೆಲ್ಲ ಮೋಜುಮಸ್ತಿಗಳಿಂದ ಕ್ರಿಕೆಟ್ ನೋಡುತ್ತಿದ್ದೆವಲ್ಲಾ, ಪ್ರಧಾನಿ ಮನಮೋಹನ ಸಿಂಗ್ಜೀ ಬಗ್ಗೆ ನನಗೆ ನಿಜಕ್ಕೂ ಅತ್ಯಂತ ಕನಿಕರವೆನಿಸಿತು. ಕಾರಣ ಇಷ್ಟೇ. ಮೊಹಾಲಿಯಲ್ಲಿ ಉತ್ಸವಮೂರ್ತಿಯ ಹಾಗೆ ಕುಳಿತಿದ್ದರಲ್ಲಾ ಅವರೇನು ಕ್ರಿಕೆಟ್ ಮ್ಯಾಚ್ ನೋಡ್ತಿದ್ರಾ ಇಲ್ಲಾ ಯಾರಾದರೂ ಗಣ್ಯವ್ಯಕ್ತಿಯ ಅಂತ್ಯಸಂಸ್ಕಾರ ವೀಕ್ಷಿಸ್ತಿದ್ರಾ? ಅವರ ಮುಖಚರ್ಯೆಯಿಂದಂತೂ ಖಂಡಿತ ಗೊತ್ತಾಗ್ತಿರ್ಲಿಲ್ಲಪ್ಪಾ! ಅಥವಾ, ‘ಮೇಡಂ’ ಕೂಡ ಅಲ್ಲೇ ಇದ್ದರು ಎಂಬ ಕಾರಣವೂ ಇರಬಹುದು, ತುಟಿಪಿಟಕ್ಕೆನ್ನದೆ ಮ್ಯಾಚ್ ನೋಡಿದರು. ಟಿವಿ ಕಾಮೆಂಟೇಟರ್ಸ್ ಸಹ ಅದನ್ನೇ ಹೇಳುತ್ತಿದ್ದರು. ಗುಂಡುನಿರೋಧಕ ಗಾಜಿನ ಪೆಟ್ಟಿಗೆಯೊಳಗೆ ಸದ್ದುಗದ್ದಲವಿಲ್ಲ. ಬೌಂಡರಿ-ಸಿಕ್ಸರ್ ಹೊಡೆದಾಗಿನ ಸಂಭ್ರಮದ ವಾತಾವರಣವಿಲ್ಲ. ಪಕ್ಕದಲ್ಲಿ ಪಾಕಿಸ್ತಾನದ ಪ್ರಧಾನಿ ಕುಳಿತಿದ್ದರಾದ್ದರಿಂದ ಶಿಷ್ಟಾಚಾರ ಬಿಡುವಂತಿಲ್ಲ. ತಾನು ನೀಲಿ ಟರ್ಬನ್ ಧರಿಸಿದ್ದರಿಂದಲೇ ಭಾರತ ಜಯಗಳಿಸಿತು ಎಂದು ಹುಸಿನಗೆ ಬೀರುವಂತಿಲ್ಲ. ಛೇ! ಇದೂ ಒಂದು ಕ್ರಿಕೆಟ್ ನೋಟದ ಪರಿಯೇ? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.