Episodes
Saturday Jun 04, 2011
Digital Diet
Saturday Jun 04, 2011
Saturday Jun 04, 2011
ದಿನಾಂಕ 5 ಜೂನ್ 2011ರ ಸಂಚಿಕೆ...
ನಮಗೂ ಬೇಕಾದೀತು ‘ಡಿಜಿಟಲ್ ಡಯಟ್’
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಇನ್ನೊಬ್ಬರೊಂದಿಗೆ ಆತ್ಮೀಯ ಸಂವಾದದಲ್ಲಿರುವ ಹೊತ್ತಿಗೇ ನಿಮ್ಮ ಮೊಬೈಲ್ ರಿಂಗಣಿಸುವ, ಅಥವಾ ನೀವೇ ಏತಕ್ಕೋ ಮೊಬೈಲನ್ನು ಬಳಸಬೇಕಾಗುವ ಸಂದರ್ಭಗಳು ಆಗಾಗ ಬರುತ್ತಿವೆಯೇ? ನಿಮ್ಮ ಮಗು ಶಾಲೆಯ ಸಮಾಚಾರಗಳನ್ನು ಆಸಕ್ತಿಯಿಂದ ನಿಮ್ಮಲ್ಲಿ ಹೇಳುತ್ತಿರುವಾಗ ನೀವೇನೋ ಮೊಬೈಲ್ನಲ್ಲಿ ಇಮೇಲ್ಸ್ ಚೆಕ್ಮಾಡುತ್ತಿರುವುದು, ಎಸ್ಸೆಮ್ಮೆಸ್ ಕಳಿಸುತ್ತಿರುವುದು ಆಗುತ್ತಿದೆಯೇ? ನೀವು ಫೇಸ್ಬುಕ್ನಲ್ಲಿ ಎನೌನ್ಸ್ ಮಾಡುವವರೆಗೂ, ಟ್ವಿಟ್ಟರ್ನಲ್ಲಿ ಟ್ವೀಟುವವರೆಗೂ, ಯಾವ ಮಹಾನ್ ಘಟನೆಯೇ ಆಗಲಿ ಘಟಿಸಿದಂತೆಯೇ ಅಲ್ಲ ಅಂತನಿಸಿದ್ದಿದೆಯೇ? ಬ್ಲಾಕ್ಬೆರ್ರಿಯ ಕೆಂಪುದೀಪ ಮಿನುಗತೊಡಗುತ್ತಿದ್ದಂತೆ ನಿಮ್ಮ ಎದೆಬಡಿತ ಹೆಚ್ಚುತ್ತದೆಯೇ? ಗಂಡಹೆಂಡತಿ ಅಕ್ಕಪಕ್ಕ ಕುಳಿತಿದ್ದೂ ಇಬ್ಬರೂ ಪರಸ್ಪರ ಹಾಂಹೂಂ ಎನ್ನದೆ ಬೇರೆಬೇರೆ ಇ-ಯಂತ್ರಗಳಲ್ಲಿ ತಾಸುಗಟ್ಟಲೆ ತಲ್ಲೀನರಾಗಿರುತ್ತೀರಾ? - ಈಪೈಕಿ ಯಾವುದೇ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೂ ನಿಮಗೆ ‘ಟೆಕ್ನಾಲಜಿಯ ಬೊಜ್ಜು’ ಬಂದಿದೆ ಮತ್ತು ನೀವು ‘ಡಿಜಿಟಲ್ ಡಯಟ್’ ಮಾಡಬೇಕಿದೆ ಎಂದು ಅರ್ಥ! ಹೀಗೆನ್ನುತ್ತಾನೆ ಡೇನಿಯಲ್ ಸೀಬರ್ಗ್. ಈತ ಅಮೆರಿಕದ ವಾರ್ತಾವಾಹಿನಿಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ವರದಿಗಾರ. ಕಳೆದ ವರ್ಷದವರೆಗೂ ಸ್ವತಃ ಒಬ್ಬ ಟೆಕ್ನೋ-ಎಡಿಕ್ಟ್ ಆಗಿದ್ದವನು. ಆಮೇಲೆ ಏಕಾಏಕಿ ಜ್ಞಾನೋದಯವಾಗಿ ತಾನೇ ಕಂಡುಕೊಂಡ ‘ಡಿಜಿಟಲ್ ಡಯಟ್’ ಎಂಬ ವ್ರತನೇಮವನ್ನು ಅನುಸರಿಸಿ, ಇದೀಗ ಅದೇ ಹೆಸರಿನ ಪುಸ್ತಕವನ್ನೂ ಬರೆದು ಪ್ರಕಟಿಸಿದವನು. ಈಗ ಈ ಪುಸ್ತಕ ಅಮೆರಿಕದಲ್ಲಿ ಸುದ್ದಿಯಲ್ಲಿದೆ. ವಾಷಿಂಗ್ಟನ್ಪೋಸ್ಟ್ ಪತ್ರಿಕೆಯಲ್ಲಿ ಪುಸ್ತಕದ ಕೆಲ ಭಾಗಗಳು ಮೊನ್ನೆ ಮುಖಪುಟ ಲೇಖನವಾಗಿ ಪ್ರಕಟವಾಗಿವೆ. “ಟೆಕ್ನಾಲಜಿಯಲ್ಲಿ ಎಲ್ಲಿಯವರೆಗೆ ಮುಳುಗಿ ಹೋಗಿದ್ದೆನೆಂದರೆ ವೈಯಕ್ತಿಕ ಜೀವನದಲ್ಲಿ ಅವಿಸ್ಮರಣೀಯವೆನಿಸಬೇಕಿದ್ದ ಚಿಕ್ಕದೊಡ್ಡ ಘಟನೆಗಳೆಲ್ಲ ನನ್ನ ಅರಿವಿಗೆ ಬರಲೇ ಇಲ್ಲ ಎನ್ನುವ ರೀತಿಯಲ್ಲಿ ಗತಿಸಿಹೋದವು. ನಾನು well-connected ಎಂದು ಬೀಗಿಕೊಳ್ಳುತ್ತಿರುವ ಹೊತ್ತಿಗೇ ನಿಜಕ್ಕೂ ನೋಡಿದರೆ most distracted and disconnected ಆಗಿಬಿಟ್ಟಿದ್ದೆ. ಸಕಾಲದಲ್ಲಿ ಎಚ್ಚೆತ್ತು ನನ್ನನ್ನು ಸುತ್ತುವರಿದಿದ್ದ ವಯರುಗಳ ಹುತ್ತವನ್ನು ಕೊಡವಿಕೊಂಡು ಮತ್ತೆ ಬದುಕನ್ನು ಗಳಿಸಿದೆ. ಈಗಲೂ ಟೆಕ್ನಾಲಜಿಯನ್ನು ಬಳಸುತ್ತೇನೆ, ಇಲ್ಲವೆಂದೇನಿಲ್ಲ. ಆದರೆ ಮುಂಚಿನಂತಲ್ಲ, ಹಿತವಾಗಿ ಮಿತವಾಗಿ...” ಎಂದು ಸಾಗುತ್ತದೆ ಡೇನಿಯಲ್ನ ಜ್ಞಾನೋದಯಗಾಥೆ. ಅಮೆರಿಕದಲ್ಲಿ ಲಕ್ಷಾಂತರ ಜನರು ಟೆಕ್ನಾಲಜಿಯ ದಾಸರಾಗಿದ್ದಾರೆ; ಬ್ಲಾಕ್ಬೆರ್ರಿ, ಐಫೋನು, ಐಪ್ಯಾಡು, ಲ್ಯಾಪ್ಟಾಪು ಅದೂಇದೂ ಗ್ಯಾಡ್ಜೆಟ್ಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ದೇಶಿಸುವ ಅಧಿಕಾರ ಒಪ್ಪಿಸಿದ್ದಾರೆ. ಹಾಗಂತ ಟೆಕ್ನಾಲಜಿ ವಿರುದ್ಧ ಸಮರ ಸಾರಬೇಕೆಂದಾಗಲೀ, ಎಲ್ಲರೂ ಈಕೂಡಲೇ ಗ್ಯಾಡ್ಜೆಟ್-ಸನ್ಯಾಸ ಸ್ವೀಕರಿಸಬೇಕೆಂದಾಗಲೀ ಡೇನಿಯಲ್ನ ಬೋಧನೆಯಲ್ಲ. ಗ್ಯಾಡ್ಜೆಟ್ಗಳೊಂದಿಗೆ ಒಂಥರದ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು. ನಾವು ಹೇಳಿದಂತೆ ಅವು ಕೇಳಬೇಕೇ ಹೊರತು ಅವುಗಳೇ ನಮ್ಮನ್ನು ಆಳಬಾರದು. ಅದಕ್ಕಾಗಿ Re-think, Re-boot, Re-connect, Re-vitalize ಎಂಬ ನಾಲ್ಕು ಹಂತಗಳ ಡಯಟ್ ಪ್ಲಾನ್ಅನ್ನು ಅನುಸರಿಸಬೇಕು ಎನ್ನುತ್ತಾನೆ ಡೇನಿಯಲ್. ದಿನಕ್ಕೆ ಸುಮಾರು ಎರಡು ಗಂಟೆ ಸಮಯವನ್ನು ಉದ್ಯೋಗ ಸಂಬಂಧವಲ್ಲದೆ ಹೀಗೇಸುಮ್ಮನೆ ಅಂತರ್ಜಾಲದಲ್ಲಿ ವಿಹರಿಸುತ್ತ, ಫೇಸ್ಬುಕ್ ಟ್ವಿಟ್ಟರ್ಗಳ ಮೂಲಕ ನಿಮ್ಮದೇ ಒಂದು ಭ್ರಾಮಕ ವ್ಯಕ್ತಿತ್ವವನ್ನು ಕೆತ್ತುತ್ತ್ತ ಕಳೆಯುತ್ತೀರಿ ಎಂದಿಟ್ಟುಕೊಳ್ಳಿ. ಅದೇನೂ ಟೈಮ್ಪಾಸ್ ಅಲ್ಲ, ಜ್ಞಾನಾರ್ಜನೆಯ ಜತೆಗೆ ಒಂದಿಷ್ಟು ಮನರಂಜನೆ ಎಂದು ಸಬೂಬು ಬೇರೆ ಕೊಡುತ್ತೀರಿ. ಆದರೆ ದಿನಕ್ಕೆ ಎರಡು ಗಂಟೆಗಳಂತೆ ಇಡೀವರ್ಷದ ಲೆಕ್ಕ ಹಾಕಿದರೆ ಭರ್ತಿ ಒಂದು ತಿಂಗಳು ಇಂಟರ್ನೆಟ್ ಓತ್ಲಾ ಅಂತಾಯಿತು! ಕೊನೆಗೂ ಏನು ಉಪಯೋಗಕ್ಕೆ ಬಂತು? ಆ ಸಮಯವನ್ನು ಯಾವುದಾದರೂ ರಚನಾತ್ಮಕ ಚಟುವಟಿಕೆಗೆ ಬಳಸಬಹುದಿತ್ತಲ್ವಾ? ಅದೇ, ಡೇನಿಯಲ್ ಹೇಳುವ ‘ರೀ-ಥಿಂಕ್’ ಹಂತ. ಎರಡನೆಯದು ‘ರೀ-ಬೂಟ್’, ಅಂದರೆ ಒಂದೊಮ್ಮೆ ಎಲ್ಲ ಗ್ಯಾಡ್ಜೆಟ್ಗಳಿಗೂ ತಾತ್ಕಾಲಿಕ ವಿರಾಮ ಘೋಷಣೆ. ಐಪ್ಯಾಡು, ಕ್ಯಾಮರಾ, ಲ್ಯಾಪ್ಟಾಪು ಇತ್ಯಾದಿ- ಯಾವುದಕ್ಕೆ ಚಾರ್ಜರ್ ಬೇಕೋ ಅಂಥ ಎಲ್ಲ ಉಪಕರಣಗಳನ್ನೂ- ಒಂದು ಪೆಟ್ಟಿಗೆಯೊಳಗಿಟ್ಟು ಬೀಗಹಾಕಿ. ಫೇಸ್ಬುಕ್ ಮತ್ತಿತರ ವೆಬ್ ಖಾತೆಗಳ ಪಾಸ್ವರ್ಡ್ ಬದಲಾಯಿಸಿ ಬಿಡುವಂತೆ ಯಾರಾದರೂ ಆಪ್ತರಿಗೆ ಹೇಳಿ. ಫೋನ್ ಕರೆ ಮಾಡಿದವರಿಗೆ ‘ಬಳಕೆದಾರರು ಲಭ್ಯರಿಲ್ಲ’ ಎಂಬ ಮೆಸೇಜು ಬರುವಂತೆ ಸೆಟ್ ಮಾಡಿ. ಎಸ್ಸೆಮ್ಮೆಸ್ ವಿನಿಮಯ ನಿಲ್ಲಿಸಿಬಿಡಿ. ದಿನಕ್ಕೆ ಒಂದುಸರ್ತಿ ಮಾತ್ರ ಇಮೇಲ್ ಚೆಕ್ಮಾಡಿ. ಹೀಗೆ ಒಂದೆರಡು ದಿನ ಕಟ್ಟುನಿಟ್ಟಿನ ಟೆಕ್ನೊ-ಉಪವಾಸ ಮಾಡಿನೋಡಿ. ಗ್ಯಾಡ್ಜೆಟ್ಗಳೊಂದಿಗೆ ವ್ಯಯಿಸುತ್ತಿದ್ದ ಸಮಯವನ್ನು ಮಗುವಿಗೆ ಕಥೆಪುಸ್ತಕ ಓದಿ ಹೇಳುವುದಕ್ಕೋ, ಮನೆಯ ಒಳಹೊರ ಸ್ವಚ್ಛ ಮಾಡಲಿಕ್ಕೋ, ಅಟ್ಟದಲ್ಲಿ ಧೂಳು ತಿನ್ನುತ್ತಿರುವ ಗಿಟಾರ್ಅನ್ನು ಹೊರತೆಗೆದು ಒಂದಿಷ್ಟು ಸಂಗೀತ ಅಭ್ಯಸಿಸುವುದಕ್ಕೋ ಉಪಯೋಗಿಸಿ ನೋಡಿ. ಈಗ ಮೂರನೇ ಹಂತದಲ್ಲಿ ನಿಧಾನವಾಗಿ ನಿಮ್ಮ ಗ್ಯಾಡ್ಜೆಟ್ಗಳನ್ನು ಬಳಕೆಗೆ ಹಚ್ಚಿ. ಆದರೆ ಯಾವುದು ಎಷ್ಟು ಅಗತ್ಯವೋ ಅಷ್ಟೇ ಸಾಕು. ರಾತ್ರಿಹೊತ್ತು ಅವನ್ನೆಲ್ಲ ಲಿವಿಂಗ್ರೂಮ್ನಲ್ಲೋ ಅಡುಗೆಮನೆಯಲ್ಲೋ ಚಾರ್ಜ್ ಮಾಡಲಿಕ್ಕಿಡಿ, ಬೆಡ್ರೂಮ್ಗೆ ತರಬೇಡಿ. ಐಫೋನ್/ಬ್ಲಾಕ್ಬೆರ್ರಿಯಲ್ಲಿ ಅಲಾರಂ ಸಹ ಇದೆಯೆಂದು ಅದನ್ನೇ ಬಳಸಬೇಡಿ. ಬೆಳಿಗ್ಗೆ ಅಲಾರಂ ಮಾಡಿಯಷ್ಟೇ ಅವು ಸುಮ್ಮನಿರುವುದಿಲ್ಲ, ನಿಮ್ಮ ಗಮನವನ್ನೂ ಬೇಡುತ್ತವೆ. ಅದಕ್ಕಿಂತ ಒಂದು ಅಲಾರಂ ಗಡಿಯಾರವನ್ನೇ ಉಪಯೋಗಿಸಿ. ದಿನಕ್ಕೆ ಇಂತಿಷ್ಟು ಹೊತ್ತು ಮಾತ್ರ ಆನ್ಲೈನ್ ಇರಬಹುದೆಂದು ನಿಯಮ ಮಾಡಿ ಪಾಲಿಸಿ. ಮನೆಯೊಳಗೂ ಮನದೊಳಗೂ ಕಸ (ಜಂಕ್) ತುಂಬಿಸಿಕೊಳ್ಳಬೇಡಿ. ಕೊನೆಯದಾಗಿ ‘ರೀ-ವೈಟಲೈಜ್’ ಹಂತದಲ್ಲಿ ಟೆಕ್ನಾಲಜಿ ಪ್ರಪಂಚ ಮತ್ತು ಇಷ್ಟಮಿತ್ರ ಬಂಧುಬಾಂಧವರ ಒಡನಾಟದ ಪ್ರಪಂಚ - ಎರಡರ ನಡುವೆ ಆರೋಗ್ಯಕರ ಬ್ಯಾಲೆನ್ಸ್ ತಂದುಕೊಳ್ಳಿ. ಟಿಪಿಕಲ್ ಸೆಲ್ಫ್-ಹೆಲ್ಪ್ ಪುಸ್ತಕಗಳ ಮಾದರಿಯಲ್ಲೇ ಇದೆ ಡೇನಿಯಲ್ನ ಪುಸ್ತಕವೂ. ‘ಮೂರು ವಾರಗಳಲ್ಲಿ ಮೂವತ್ತು ಪೌಂಡ್ ತೂಕ ಇಳಿಸಿ’, ‘ಹದಿನೈದು ದಿನಗಳಲ್ಲಿ ಹಿಂದೀ ಕಲಿಯಿರಿ’ ಅಂತೆಲ್ಲ ಇರುತ್ತವಲ್ಲ ಅದೇ ಧಾಟಿ. ಒಂಚೂರು ಉಪದೇಶ, ಒಂದಿಷ್ಟು ಆಪ್ತಸಲಹೆ, ಮತ್ತೆ ಸ್ವಲ್ಪ ಆತ್ಮಾವಲೋಕನಕ್ಕೆ ಅವಕಾಶ. ಕೆಲವು ಭಾಗಗಳಂತೂ ನಮ್ಮ ಜೀವನಶೈಲಿಯನ್ನು ನೋಡಿಯೇ ಬರೆದದ್ದಿರಬಹುದೇ ಅಂತನ್ನಿಸುವಷ್ಟು ನಾಟುತ್ತವೆ, ಮನಸ್ಸಾಕ್ಷಿಯನ್ನು ತಟ್ಟುತ್ತವೆ. ಹೌದು, ನಾವೆಲ್ಲರೂ ಸ್ವಲ್ಪ ಮಟ್ಟಿಗಾದರೂ ಟೆಕ್ನಾಲಜಿಗೆ ನಮ್ಮತನವನ್ನು ಒಪ್ಪಿಸಿದವರೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ಗ್ಯಾಡ್ಜೆಟ್ಗಳಿಗೆ ಮಾರುಹೋದವರೇ. ಈಗಲೇ ಎಚ್ಚರ ವಹಿಸದಿದ್ದರೆ ಮುಂದೊಮ್ಮೆ ನಮಗೂ ಡಿಜಿಟಲ್ ಡಯಟ್ನ ಅಗತ್ಯ ಬೀಳಬಹುದು. ಆ ನಿಟ್ಟಿನಲ್ಲಿ ಡೇನಿಯಲ್ ಸೀಬರ್ಗ್ನ ವಿಚಾರಧಾರೆ ಅರ್ಥವುಳ್ಳದ್ದೇ ಆಗಿದೆ. ಜಾಗೃತಿ ಮೂಡಿಸುವಂಥದೇ ಆಗಿದೆ. ಹಾಗೆನ್ನುವಾಗಲೇ, ಸ್ನೇಹಿತ ಮಲ್ಲಿ ಸಣ್ಣಪ್ಪನವರ್ ರಚಿಸಿದ ‘ಫೇಸ್ಬುಕ್ ಇಷ್ಟೇನೇ...’ ಅಣಕುಹಾಡು ನೆನಪಾಗುತ್ತಿದೆ. ತಮಾಷೆಯೆಂದರೆ ಇದರ ಸಾಲುಗಳೂ ಹಾಗೆಯೇ, ತಮಾಷೆಯಾಗೇ ಕಂಡರೂ ಹೌದಲ್ವಾ ಫೇಸ್ಬುಕ್ ಕ್ರೇಜ್ ಹತ್ತಿದರೆ ನಿಜಕ್ಕೂ ಅದೇರೀತಿ ಆಗ್ತದಲ್ವಾ ಎಂದೆನಿಸುತ್ತದೆ. ಫೇಸ್ಬುಕ್ ಖಾತೆ ಇದ್ದವರು ಓದಲೇಬೇಕಾದ ಕವಿತೆ- ಹಲ್ಲು ತಿಕ್ಕದೇ ಮುಖಾನು ತೊಳಿದೇ ಬೆಳಿಗ್ಗೆ ಎದ್ದು ಲಾಗಿನ್ ಆಗಿ ಎಲ್ಲರ ಸ್ಟೇಟಸ್ ಅಪ್ಡೇಟ್ ಮಾಡ್ಕೋ ಫೇಸ್ಬುಕ್ ಇಷ್ಟೇನೇ! ಲೈಕ್ ಬಟನ್ ಒತ್ತು ಸ್ವಾಮಿ ಡಿಸ್ಲೈಕ್ ಬಟನ್ ಇಲ್ಲ ಸ್ವಾಮಿ ಬೇಡಾದವ್ರನ್ ಹೈಡ್ ಮಾಡ್ಕೊ ಫೇಸ್ಬುಕ್ ಇಷ್ಟೇನೇ! ಮಕ್ಕಳ ಜತೆಗೆ ಆಡೋದ್ ಬಿಟ್ಟು ಹೆಂಡ್ತಿ ಮುಖವ ನೋಡೋದ್ ಬಿಟ್ಟು ಸಿಕ್ಕವ್ರ್ ವಿಡಿಯೋ ನೋಡ್ತಾ ಕುತ್ಕೋ ಫೇಸ್ಬುಕ್ ಇಷ್ಟೇನೇ! ಯಾರ್ಯಾರ ಮನೇಲಿ ಏನೇನ್ ಅಡುಗೆ ಯಾರ್ಯಾರ ಮೈಮೇಲ್ ಏನೇನ್ ಉಡುಗೆ ಬರೀ ಕಾಂಪ್ಲಿಮೆಂಟ್ಸು ಇಲ್ಲಿ ಕೊಡುಗೆ ಫೇಸ್ಬುಕ್ ಇಷ್ಟೇನೇ! ಬೇಡಾದವ್ರಿಗು ಕಾಮೆಂಟ್ ಹಾಕು ಬೇಕಾದವ್ರಿಗು ಕಾಮೆಂಟ್ ಹಾಕು ಕಾಮೆಂಟ್ ಹಾಕ್ತಾ ಖುಷಿಯಾಗಿರು ಫೇಸ್ಬುಕ್ ಇಷ್ಟೇನೇ... ಟಣ್ಟಣಾಟಣ್ಟಣ್! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.