Episodes
Saturday Feb 25, 2012
Global Gumma
Saturday Feb 25, 2012
Saturday Feb 25, 2012
ದಿನಾಂಕ 26 ಫೆಬ್ರವರಿ 2012ರ ಸಂಚಿಕೆ...
ಗುಮ್ಮನೊಬ್ಬ ನಾಮ ಹಲವು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಭಗವಂತ ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವರೂಪಧಾರಿ ಅಂತೆಲ್ಲ ನಮ್ಮ ನಂಬಿಕೆ. ಅವರವರ ಭಾವಕ್ಕೆ ಅವರವರ ಭಕುತಿಗೆ ತೆರನಾಗಿ ಇರುವವನು ಎಂದೂ ಹೇಳುತ್ತೇವೆ. ಆದರೆ ಆ ಸರ್ವಶಕ್ತ ಭಗವಂತನನ್ನೂ ಹದ್ದುಬಸ್ತಿನಲ್ಲಿ ಇಡುವುದಕ್ಕೆ, ಹೆದರಿಸಿ ಸುಮ್ಮನಾಗಿಸುವುದಕ್ಕೆ ಯಶೋದೆ ಅವಲಂಬಿಸಿದ್ದು ಗುಮ್ಮನನ್ನು. ಅಂದರೆ ಭಗವಂತನಿಗಿಂತಲೂ ಗುಮ್ಮ ಮಿಗಿಲಾದವನು ಅಂತಾಯ್ತು! ಬೇಡಾ, ಭಗವಂತನಿಗಿಂತ ಗುಮ್ಮ ಮೇಲು ಎಂದು ವಾದಿಸಿ ಗುಮ್ಮನನ್ನು ಅಟ್ಟಕ್ಕೇರಿಸುವುದು ಸರಿಯಲ್ಲ. ಆದರೂ ಕೆಲವು ಗುಣಲಕ್ಷಣಗಳಲ್ಲಿ ಭಗವಂತನಿಗೂ ಗುಮ್ಮನಿಗೂ ಏಕ್ದಂ ಹೋಲಿಕೆ ಇದೆಯೆಂದರೆ ನೀವೂ ಒಪ್ಪುತ್ತೀರಿ. ಬೇಕಿದ್ದರೆ ಸುಮ್ಮನೆ ಒಮ್ಮೆ ಯೋಚಿಸಿಕೊಳ್ಳಿ: ಒಂದನೆಯದಾಗಿ, ಗುಮ್ಮ ಇದ್ದಾನೆ ಎಂದು ಎಲ್ಲರೂ ನಂಬುತ್ತಾರೆ ಹೇಳುತ್ತಾರೆ, ಆದರೆ ನಿಜಕ್ಕೂ ಅವನನ್ನು ನೋಡಿದವರಿಲ್ಲ. ಎರಡನೆಯದಾಗಿ, ಭಕ್ತರ ಕರೆಗೆ ಭಗವಂತ ಹೇಗೆ ತತ್ಕ್ಷಣ ಒಲಿದುಬರುತ್ತಾನೋ ಗುಮ್ಮನೂ ಅಷ್ಟೇ- ಅಮ್ಮಂದಿರು ಆರ್ಡರ್ ಮಾಡಿದಾಗ ತತ್ಕ್ಷಣ ಓಡೋಡಿ ಬರಬಲ್ಲ. ಇಬ್ಬರದೂ ಪವರ್ಫುಲ್ ವ್ಯಕ್ತಿತ್ವ, ಆದರೂ ಏಕವಚನದಿಂದ ಕರೆಸಿಕೊಳ್ಳುವಷ್ಟು ಸಲುಗೆ. ಇನ್ನೂ ಒಂದು ಹೋಲಿಕೆಯೆಂದರೆ, ಭಗವಂತನನ್ನು ನಾವು ಬೇರೆಬೇರೆ ಹೆಸರುಗಳಿಂದ ಕರೆಯುವಂತೆ ಗುಮ್ಮನನ್ನೂ ಪ್ರಪಂಚದ ಬೇರೆಬೇರೆ ಜನಸಮುದಾಯಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯುತ್ತಾರೆ. ದೇವನೊಬ್ಬ ನಾಮ ಹಲವು ಇದ್ದಂತೆಯೇ ಗುಮ್ಮನೊಬ್ಬ ನಾಮ ಹಲವು. ಗುಮ್ಮನ ಜಗದ್ವ್ಯಾಪಿತನದ ಬಗ್ಗೆ ನನಗೆ ಹೇಗೆ ಕುತೂಹಲ ಬಂತೆಂಬುದನ್ನೂ ಹೇಳುತ್ತೇನೆ. ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರ ಉಪನ್ಯಾಸಮಾಲಿಕೆ ಕಳೆದ ಕೆಲ ತಿಂಗಳುಗಳಿಂದ ಅಮೆರಿಕದ ವಿವಿಧೆಡೆಗಳಲ್ಲಿ ನಡೆಯುತ್ತಿದೆ. ನಮ್ಮ ವಾಷಿಂಗ್ಟನ್ ನಗರದಲ್ಲೂ ಭಾಗವತ ಸಪ್ತಾಹ ಏರ್ಪಾಡಾಗಿತ್ತು. ವಿದ್ಯಾವಾಚಸ್ಪತಿ ಅರಳುಮಲ್ಲಿಗೆಯವರ ಅರಳುಹುರಿದಂಥ ಮಾತುಗಳನ್ನು ಕೇಳುವ ಅವಕಾಶ ನಮಗೆಲ್ಲ. ಒಂದುದಿನ ಪ್ರವಚನದಲ್ಲಿ ಅವರು ಒಂದು ಅದ್ಭುತವಾದ ಮಾತನ್ನು ಹೇಳಿದ್ದರು: “ಜಗತ್ತಿನಲ್ಲಿ ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ (ಹೆಣ್ಣಿರಲಿ ಗಂಡಿರಲಿ) ಒಂದಲ್ಲಒಂದು ಕ್ಷಣದಲ್ಲಿ ಕೃಷ್ಣನನ್ನು ಕಾಣುತ್ತಾಳೆ!” ಇದು ಮೇಲ್ನೋಟಕ್ಕೆ ಮಾತಿನ ಚಂದಕ್ಕೆಂದು ಹೇಳಿದ್ದೆನಿಸಬಹುದು, ಆದರೆ ತಾಯಿಯೆನಿಸಿಕೊಂಡ ಯಾರೇ ಆದರೂ ಇದನ್ನು ಖಂಡಿತ ಒಪ್ಪುತ್ತಾರೆ. ಮಾತ್ರವಲ್ಲ ರೋಮಾಂಚನಗೊಳ್ಳುತ್ತಾರೆ. ಇಲ್ಲಿ ಕೃಷ್ಣ ಎಂದರೆ ಭಗವಂತ ಎಂದು ವಿಶಾಲ ಅರ್ಥ ಮಾಡಿಕೊಂಡರೆ ಜಗತ್ತಿನಲ್ಲಿ ಎಲ್ಲ ತಾಯಂದಿರದೂ ಅದೇ ಅನುಭವ. ಪ್ರವಚನ ಕೇಳುತ್ತ ನನ್ನ ಮನಸ್ಸಿಗೆ ಹೊಳೆದದ್ದಿದು- ಸರಿ, ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ ಕೃಷ್ಣನನ್ನು ಕಾಣುತ್ತಾಳೆ; ಅಂದರೆ, ಮಗು ಕೃಷ್ಣನಂತೆಯೇ ಅಸಾಧ್ಯ ಪೋಕ್ರಿ ಮಾಡಿದಾಗ ಗುಮ್ಮನನ್ನೂ ಕರೆಯುತ್ತಾಳೆ ಅಂತಾಯ್ತು. ಅಂದಮೇಲೆ ಜಗತ್ತಿನಲ್ಲಿ ಎಲ್ಲ ತಾಯಂದಿರಿಗೂ ಗುಮ್ಮ ಗೊತ್ತು! ಹೇಗಿರುತ್ತಾನೆ ಆ ಗ್ಲೋಬಲ್ ಗುಮ್ಮ? ನೀವು ನಂಬುತ್ತೀರೋ ಇಲ್ಲವೋ ಗುಮ್ಮ ಎಂಬ ಕಲ್ಪನೆ ಜಗತ್ತಿನ ಎಲ್ಲಕಡೆಯೂ ಇದೆ. ನಮ್ಮ ಕನ್ನಡ ನಾಡಿನಲ್ಲಂತೂ ಶತಮಾನಗಳ ಹಿಂದೆಯೇ ದಾಸರು ‘ಗುಮ್ಮನ ಕರೆಯದಿರೆ ಅಮ್ಮಾ ನೀನು...’ ಎಂದು ಹಾಡಿರುವುದರಿಂದ ಗುಮ್ಮ ಅನಾದಿಕಾಲದಿಂದಲೂ ಇದ್ದಾನೆ. ಮಗು ಹೇಳಿದ್ಮಾತು ಕೇಳೋದಿಲ್ಲ, ಸರಿಯಾಗಿ ಊಟ ಮಾಡೋದಿಲ್ಲ, ಆಡಲಿಕ್ಕೆ ಹೋದರೆ ಕತ್ತಲಾದ ಮೇಲೂ ಮನೆಗೆ ಬರುವುದಿಲ್ಲ, ರಾತ್ರಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡೋದಿಲ್ಲ ಮುಂತಾದ ಎಲ್ಲ ಸಮಸ್ಯೆಗಳಿಗೂ ರಾಮಬಾಣವಾಗಿ ಅಮ್ಮಂದಿರಿಗೆ ಗುಮ್ಮ ನೆರವಾಗಿದ್ದಾನೆ. ಕರ್ನಾಟಕದ ಕೆಲವೆಡೆ ಈತ ‘ಗೊಗ್ಗಯ್ಯ’ ಎಂಬ ಹೆಸರಿನಿಂದಲೂ ಗುರುತಿಸಿಕೊಳ್ಳುತ್ತಾನೆ. ದಾಸರು ಒಂದು ಕೀರ್ತನೆಯಲ್ಲಿ (‘ಇವನ ಪಿಡಿದುಕೊಂಡು ಹೋಗೆಲೋ ಜೋಗಿ ಇವ ನಮ್ಮಮಾತು ಕೇಳದೆ ಪುಂಡನಾದ...’) ‘ಜೋಗಿ’ಯನ್ನೂ ಗುಮ್ಮನಿಗೆ ಸಮಾನಾರ್ಥಕವಾಗಿ ಬಳಸಿದ್ದಾರೆ. ತಮಿಳುನಾಡಿನಲ್ಲಿ ಗುಮ್ಮನನ್ನು ‘ಪೂಚ್ಚಾಂಡಿ’ ಎನ್ನುತ್ತಾರಂತೆ. ತೆಲುಗಿನಲ್ಲಿ ಅವನು ‘ಬೂಚಿವಾಡು’ ಆಗಿದ್ದಾನೆ. ಮಲಯಾಳಂನಲ್ಲಿ ‘ಕೊಕ್ಕಾಯಿ’. ಬಹುಶಃ ಕನ್ನಡದ ಗೊಗ್ಗಯ್ಯನ ದಾಯಾದಿ ಇರಬೇಕು. ಉತ್ತರಭಾರತದಲ್ಲಿ ಚಿಕ್ಕ ಮಕ್ಕಳನ್ನು “ನೋಡು, ನಿನ್ನನ್ನು ಬೋರಿಬಾಬಾ ತಕ್ಕೊಂಡುಹೋಗ್ತಾನೆ!” ಎಂದು ಗದರಿಸುತ್ತಾರಂತೆ. ಬೋರಿ ಎಂದರೆ ಗೋಣಿಚೀಲ. ಶ್ರೀಲಂಕಾದಲ್ಲಿಯೂ ‘ಗೋಣಿ ಬಿಲ್ಲ’ ಎಂದೇ ಗುಮ್ಮನ ಹೆಸರು. ಒಟ್ಟಾರೆಯಾಗಿ ‘ಗೋಣಿಚೀಲ ಹಿಡಕೊಂಡು ಅಡ್ಡಾಡುವ ಕುರೂಪಿ ಮುದುಕ’ - ಇದು ಮುಕ್ಕಾಲುಪಾಲು ಜಗತ್ತಿನಲ್ಲಿ ಗುಮ್ಮನ ಚಹರೆ. ಹಠ ಮಾಡುವ ಮಕ್ಕಳನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಹೋಗ್ತಾನೆ ಎಂಬ ನಂಬಿಕೆ. ಆಮೇಲೆ ಏನು ಮಾಡುತ್ತಾನೆನ್ನುವುದು ಪ್ರಾದೇಶಿಕವಾಗಿ ವ್ಯತ್ಯಾಸವಾಗುತ್ತದೆ. ಕೊಂದು ತಿನ್ನಬಹುದು, ಎಲ್ಲೋ ಅಜ್ಞಾತಸ್ಥಳದಲ್ಲಿ ಅಡಗಿಸಿಡಬಹುದು, ಅಥವಾ ಅಸ್ಸಾಂನವರು ನಂಬುವಂತೆ ಹೊತ್ತೊಯ್ದ ಮಕ್ಕಳ ಕಿವಿಗಳನ್ನಷ್ಟೇ ತಿಂದು ಖುಷಿಪಡಬಹುದು (ಅಸ್ಸಾಮೀಸ್ನಲ್ಲಿ ಗುಮ್ಮನನ್ನು ‘ಕಾನ್ಖೋವಾ’ ಎನ್ನುತ್ತಾರಂತೆ). ಗುಮ್ಮ ಮೊದಲೇ ನೈಟ್ಡ್ಯೂಟಿಯವ, ಕಾರ್ಗತ್ತಲಲ್ಲಿ ಏನು ಮಾಡುತ್ತಾನೆಂದು ನೋಡಿದವರಾರು? ಸ್ಪೈನ್, ಪೋರ್ಚುಗಲ್, ಬ್ರಝಿಲ್ ಮುಂತಾದ ಸ್ಪಾನಿಷ್ ದೇಶಗಳಲ್ಲಿ ಗುಮ್ಮನನ್ನು ‘ಹೊಂಬ್ರೆ-ಡೆಲ್-ಸಾಕೊ’ ಎನ್ನುತ್ತಾರೆ. ಗೋಣಿಚೀಲ ಹಿಡಕೊಂಡ ಮನುಷ್ಯ ಎಂಬರ್ಥದಲ್ಲಿ. ಕ್ರಿಸ್ಮಸ್ತಾತ ಸಾಂತಾಕ್ಲಾಸ್ ಸಹ ಗೋಣಿಚೀಲ ಹಿಡಿದುಕೊಂಡು ಬರುವ ಮುದುಕನೇ. ಆದರೆ ಅವನ ಜೋಳಿಗೆತುಂಬ ಮಕ್ಕಳಿಗೆ ಕೊಡಲಿಕ್ಕೆ ಉಡುಗೊರೆಗಳು. ಗುಮ್ಮ ಹಾಗಲ್ಲ, ಅವನದು ಖಾಲಿ ಗೋಣಿಚೀಲ. ಹಠಮಾರಿ ಮಕ್ಕಳನ್ನು ತುಂಬಿಸಿಕೊಂಡು ಹೋಗಲಿಕ್ಕೆ! ಸ್ಪಾನಿಷ್ ಜನಪದ ಕಥೆಗಳ ಪ್ರಕಾರ ನಾಲ್ಕೈದು ಶತಮಾನಗಳ ಹಿಂದೆ ‘ಹೊಂಬ್ರೆ-ಡೆಲ್-ಸಾಕೊ’ಗಳು ನಿಜವಾಗಿಯೂ ಇದ್ದರಂತೆ. ಅನಾಥ ಮಕ್ಕಳನ್ನು ಎತ್ತಿಕೊಂಡು ಅನಾಥಾಶ್ರಮಗಳಿಗೆ ತಲುಪಿಸುವುದು ಅವರ ಕಾಯಕ. ಗೋಣಿಯಲ್ಲಿ ತುಂಬಿಸಿ ಒಯ್ಯುತ್ತಿದ್ದುದರಿಂದ ಕೆಲವು ಮಕ್ಕಳು ಸತ್ತೇಹೋಗುತ್ತಿದ್ದವೋ ಏನೋ. ಯೂರೋಪ್, ಏಷ್ಯಾ, ಆಫ್ರಿಕಾ ಖಂಡಗಳ ಹೆಚ್ಚಿನೆಲ್ಲ ದೇಶಗಳಲ್ಲೂ ಆಯಾಯ ಪ್ರದೇಶದ ಭಾಷೆಯಲ್ಲಿ ‘ಗೋಣಿಚೀಲ ಹಿಡಿದ ಮನುಷ್ಯ’ ಎಂಬ ಅರ್ಥ ಬರುವ ಪದ ಬಳಕೆಯಾಗುವುದು ಗುಮ್ಮ ಎಂಬ ಕಲ್ಪನೆಗೇ; ಚಿಕ್ಕ ಮಕ್ಕಳನ್ನು ಹೆದರಿಸುವುದಕ್ಕೇ. ಕೊಲಂಬಿಯಾ, ಮೆಕ್ಸಿಕೊ, ಅರ್ಜೆಂಟಿನಾ, ಚಿಲಿ, ಎಲ್ಸಾಲ್ವಡಾರ್ ಮುಂತಾದ ಲ್ಯಾಟಿನ್ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಭಾಗಗಳಲ್ಲಿ ‘ಎಲ್-ಕೊಕೊ’ ಹೆಸರಿನಿಂದ ಗುಮ್ಮನನ್ನು ಗುರುತಿಸುತ್ತಾರೆ. ಅಲ್ಲಿನ ಜೋಗುಳದ ಹಾಡುಗಳಲ್ಲೂ ಎಲ್-ಕೊಕೊ ಬರುತ್ತಾನಂತೆ. “ಮಲಗು ಮಲಗೆನ್ನ ಮರಿಯೇ ಬಣ್ಣದ ನವಿಲಿನ ಗರಿಯೇ... ನಿದ್ದೆ ಮಾಡ್ಲಿಲ್ಲಾದ್ರೆ ಎಲ್-ಕೊಕೊ ಎತ್ಕೊಂಡ್ಹೋಗ್ತಾನೆ ತಿಳಿಯೇ!” ಕೊಕೊ ಎಂದರೆ ಕಂದುಬಣ್ಣದ ಕೂದಲುಳ್ಳ ವಿಕಾರರೂಪಿ ಮನುಷ್ಯ. ದೆವ್ವ ಎಂದರೂ ಸರಿಯೇ. ತೆಂಗಿನಕಾಯಿಗೆ ಕೊಕೊನಟ್ ಎಂಬ ಪದ ಬಂದಿರೋದು ಅದರಿಂದಲೇ. ಕಂದುಕೂದಲು, ಮೂರುಕಣ್ಣುಗಳುಳ್ಳದ್ದು ಇದೆಂಥದಪ್ಪಾ ವಿಚಿತ್ರ ಫಲ ಎಂದು ಪೋರ್ಚುಗೀಸ್ ನಾವಿಕರು ಅಚ್ಚರಿಯಿಂದ ಕೊಕೊನಟ್ ಎಂದರಂತೆ. ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಎಲ್-ಕೊಕೊ ಬಗ್ಗೆ ಎಷ್ಟು ಹೆದರಿಸುತ್ತಾರೆಂದರೆ ಮಕ್ಕಳು ಮಲಗುವ ಮಂಚದಡಿಯಲ್ಲೇ ಅವನು ಅಡಗಿರುತ್ತಾನೆ, ತಂಟೆ ಮಾಡಿದರೆ ಎತ್ತಿಕೊಂಡು ಹೋಗ್ತಾನೆ ಎನ್ನುತ್ತಾರೆ. ಮಕ್ಕಳು ಗಪ್ಚುಪ್ ಆಗಿ ನಿದ್ದೆಗೆ ಜಾರುತ್ತವೆ. ಅಲ್ಲಿಂದ ಉತ್ತರ ಅಮೆರಿಕಕ್ಕೆ ಬಂದರೆ ಗುಮ್ಮನ ಹೆಸರು ‘ಬೂಗಿಮ್ಯಾನ್’ ಎಂದಾಗುತ್ತದೆ. ಅವನೂ ಅಷ್ಟೇ, ವಿಕಾರರೂಪಿ ನಿಶಾಚರಿ. ಕಿಟಕಿಯ ಬಳಿ ಫರಫರ ಸದ್ದು ಮಾಡಬಹುದು. ಹಸಿರು ಹೊಗೆಯಾಗಿ ಕಾಣಿಸಿಕೊಳ್ಳಬಹುದು. ಡಿನ್ನರ್ಟೈಮ್ನಲ್ಲಿ ವಠಾರದಲ್ಲಿ ಸುತ್ತುತ್ತಿರಲು ಅವನಿಗೆ ಹೆತ್ತವರೆಲ್ಲರ ಪರ್ಮಿಶನ್ ಇರುತ್ತದೆ. ಯಾರ ಮನೆಯಲ್ಲಿ ಮಗು ಹಠ ಮಾಡುತ್ತೋ ಅಲ್ಲಿಂದ ರಿಮೋಟ್ಕಂಟ್ರೋಲ್ ಸಿಗ್ನಲ್ ಬರುತ್ತದೆ ಬೂಗಿಮ್ಯಾನ್ನಿಗೆ. ಅವನು ಆ ಮನೆಗೆ ಬರಬೇಕಂತಲೂ ಇಲ್ಲ, ಅಷ್ಟರಲ್ಲಿ ಮಗು ಹಠ ನಿಲ್ಲಿಸಿ ಹಾಯಾಗಿ ಮಲಗಿರುತ್ತದೆ! ಅಮೆರಿಕದಲ್ಲಿ ಬೂಗಿಮ್ಯಾನ್ ಇದ್ದಂತೆ ಇಟಲಿ, ರೊಮಾನಿಯಾ, ಗ್ರೀಸ್, ಈಜಿಪ್ಟ್ ಮೊದಲಾದ ಮೆಡಿಟರೇನಿಯನ್ ದೇಶಗಳಲ್ಲಿ ‘ಬಾಬೌ’ ಅಥವಾ ‘ಬೊವ್ಬೌ’, ಜರ್ಮನಿಯಲ್ಲಿ ‘ಬುಝ್ಮ್ಯಾನ್’, ಡೆನ್ಮಾರ್ಕ್ನಲ್ಲಿ ‘ಬುಸೆಮಾಂಡನ್’, ನೆದರ್ಲ್ಯಾಂಡ್ಸ್ನಲ್ಲಿ ‘ಬೋಮ್ಯಾನ್’... ಗುಮ್ಮನೊಬ್ಬ ನಾಮ ಹಲವು ಎಂದಿದ್ದೇಕಂತ ಈಗ ತಿಳೀತಲ್ಲ? ಆದರೂ ಒಂದುಮಾತು. ಸುಮಾರು ಆರೇಳು ವರ್ಷ ಪ್ರಾಯವಾದಾಗ ಮಗುವಿಗೆ ಗುಮ್ಮನ ಹೆದರಿಕೆ ಇಲ್ಲವಾಗುತ್ತದೆ. ಗುಮ್ಮಇಲ್ಲ ಏನೂಇಲ್ಲ ಅಮ್ಮ ಸುಮ್ಮನೆ ರೈಲುಬಿಟ್ಟದ್ದು ಎಂದು ಮಗುವಿಗೆ ಮನವರಿಕೆಯಾಗುತ್ತದೆ. ಪುರಂದರ ದಾಸರು ಅದನ್ನೇ “ಗುಮ್ಮನೆಲ್ಲಿಹ ತೋರಮ್ಮ ಸುಮ್ಮನಂಜಿಸಬೇಡಮ್ಮ...” ಎಂಬ ಇನ್ನೊಂದು ಕೀರ್ತನೆಯಲ್ಲಿ ಚಂದವಾಗಿ ಬಣ್ಣಿಸಿದ್ದಾರೆ. ಕೃಷ್ಣ ಯಶೋದೆಗೇ ಚಾಲೆಂಜ್ ಹಾಕುತ್ತಾನೆ. ಮೂರುಲೋಕವೆಲ್ಲ ಸುತ್ತಾಡಿ ಬಂದೆ, ಗುಮ್ಮ ಎಲ್ಲೂಇಲ್ಲ, ಸುಮ್ಮನೆ ಬೆದರಿಸಬೇಡಮ್ಮ ಎನ್ನುತ್ತಾನೆ. ನಾವಾದರೂ ಅಷ್ಟೇ, ಚಿಕ್ಕವರಿದ್ದಾಗ ಗುಮ್ಮನಿಗೆ ಹೆದರಿದವರು ಆಮೇಲೆ ಗುಮ್ಮ ಅಲ್ಲ ಅವನಜ್ಜ ಬಂದ್ರೂ ಹೆದರೋದಿಲ್ಲ ಅಂತೇವೆ. ಮತ್ತೆ ನಮ್ಮ ಮಕ್ಕಳನ್ನು ಹೆದರಿಸಲಿಕ್ಕೆ ನಮಗೆ ಗುಮ್ಮನೇ ಬೇಕಾಗುತ್ತಾನೆ. ಗುಮ್ಮ ಚಿರಂಜೀವಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.