ಪದ-ಶ್ರಾವ್ಯ

ಈಗ ಆಡಿಯೋ ಟಚ್!

15
Jan 2011
Golden Voice of Homeless Man
Posted in DefaultTag by sjoshi at 12:31 pm

ದಿನಾಂಕ 16 ಜನವರಿ 2011ರ ಸಂಚಿಕೆ...

ಟೆಡ್ಡ್ ವಿಲಿಯಮ್ಸ್ ಸ್ವರ್ಣಕಂಠಕ್ಕೆ ದುಡ್ಡು ಮಿಲಿಯನ್ಸ್!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

ಅಮೆರಿಕದಲ್ಲಿದ್ದುಕೊಂಡು ಕರ್ನಾಟಕದ ಕನ್ನಡ ಪತ್ರಿಕೆಗೆ ವಾರವಾರ ಅಂಕಣ ಬರೆಯುವುದೆಂದರೆ- ಒಂದು ರೀತಿಯಲ್ಲಿ ಸುಲಭ; ಇನ್ನೊಂದು ರೀತಿಯಲ್ಲಿ ಸವಾಲೂ ಹೌದು. ಸುಲಭ ಏಕೆಂದರೆ, ಅಲ್ಲಿಯ ಇಲ್ಲಿಯ (ಮತ್ತು ಎಲ್ಲೆಲ್ಲಿಯ) ವಿಷಯಗಳನ್ನು ಇಚ್ಛೆಬಂದಂತೆ ಎತ್ತಿಕೊಳ್ಳಬಹುದು; ಅಲ್ಲಿಂದ ದೂರವಿರುವುದರಿಂದ ಮತ್ತು ಇಲ್ಲಿ ಹೇಗೂ ಪರಕೀಯರಾದ್ದರಿಂದ ಯಾವುದನ್ನೂ ತೀರಾ ಹಚ್ಚಿಕೊಳ್ಳದೆ ಒಂಥರದ ನಿರ್ಲಿಪ್ತತೆಯಿಂದ ಬರೆಯಬಹುದು. ಮಾತ್ರವಲ್ಲ, ಗ್ಲೋಬಲ್ ಪರ್ಸ್‌ಪೆಕ್ಟಿವ್ ಎಂಬ ಬಣ್ಣದ ಕನ್ನಡಕವಿಟ್ಟು ವಿಶಾಲ ದೃಷ್ಟಿಕೋನದಿಂದ ಬರೆಯಬಹುದು. ಇನ್ನು, ಸವಾಲು ಯಾವ ರೀತಿ ಅಂತಲೂ ಹೇಳುತ್ತೇನೆ. ವಿಜಯ ಕರ್ನಾಟಕ ಪತ್ರಿಕೆಯ ಇ-ಪೇಪರ್ ಆವೃತ್ತಿಯನ್ನು ಓದುವ ಅನಿವಾಸಿ ಕನ್ನಡಿಗರಿದ್ದಾರೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಅವರಿಗೆ ಅಮೆರಿಕದ ಸಂಗತಿಗಳ ಬಗ್ಗೆ ಬರೆದರೆ ಅಷ್ಟೇನೂ ಹಿಡಿಸುವುದಿಲ್ಲ. ಅದಕ್ಕಿಂತ ತಾಯ್ನಾಡಿನಲ್ಲಿ ಕಳೆದ ತಮ್ಮ ಬಾಲ್ಯವನ್ನು ನೆನಪಿಸುವ ವಿಚಾರ ಲಹರಿಗಳಿದ್ದರೆ ಓದುವಾಗ ತುಂಬಾ ಹಿತಾನುಭವ ಆಗುತ್ತದೆ. ಕೆಲದಿನಗಳ ಹಿಂದೆ ಲಂಡನ್‌ನಿಂದ ಡಾ. ಪ್ರವೀಣ ಕುಮಾರ್ ನನಗೊಂದು ಪತ್ರ ಬರೆದಿದ್ದರು. ಅದರಲ್ಲಿ “ದಯವಿಟ್ಟು ಅಮೆರಿಕಾದ ಬಗ್ಗೆ ತುಂಬಾ ಬರೆಯಬೇಡಿ. ವಿದೇಶದಲ್ಲೇ ಇರುವ ನಮಗೆ ಈ ಬರಹಗಳು ರುಚಿ ಅನ್ಸಲ್ಲ. ಅಲ್ಲದೇ ಕರ್ನಾಟಕದಲ್ಲೂ ಗ್ರಾಮೀಣ ಪ್ರದೇಶದ ಓದುಗರಿಗೆ ಅಮೆರಿಕಾದ ಬಗ್ಗೆ ಯಾವ ಆಸಕ್ತಿ ಇರುತ್ತೆ ಹೇಳಿ? ನಮಗೆ ಹಳ್ಳಿಗಾಡಿನ, ಗ್ರಾಮೀಣ ಜೀವನದ ಸೊಗಸನ್ನು ಮೆಲುಕು ಹಾಕುವಂತೆ ಮಾಡುವ ನಿಮ್ಮ ಲೇಖನಗಳು ಬಹಳ ಇಷ್ಟವಾಗುತ್ತೆ. ಅಂಥವನ್ನೇ ಬರೀರಿ” ಎಂದು ಪ್ರೀತಿಯ ಆದೇಶ ನೀಡಿದ್ದರು.

ಒಬ್ಬ ಅನಿವಾಸಿ ಕನ್ನಡಿಗನಾಗಿ ಪ್ರವೀಣ ಕುಮಾರ್ ಅವರ ಮನದಿಂಗಿತ ನನಗೆ ಅರ್ಥವಾಗುತ್ತದೆ. ಹಾಗೆಯೇ ಕರ್ನಾಟಕದ ಒಬ್ಬ ಜನಸಾಮಾನ್ಯ ಓದುಗನಿಗೆ ಅಮೆರಿಕದ ವಿಚಾರಗಳು ಒಂದೊಮ್ಮೆ ಕುತೂಹಲಕರ ಎನಿಸಿದರೂ ಕೊನೆಗೂ ತನಗದು ಏನೂ ರೆಲವೆಂಟ್ ಅಲ್ಲ, ತಾನು ರಿಲೇಟ್ ಮಾಡಿಕೊಳ್ಳುವಂಥದ್ದು ಅದರಲ್ಲೇನೂ ಇಲ್ಲ  ಅಂತನ್ನಿಸುವುದೇ ಹೆಚ್ಚು. ಆ ಅರಿವು ಕೂಡ ನನಗಿದೆ. ಆದರೆ, ಇನ್ನೊಂದು ವರ್ಗವೂ ಇದೆ. ಅಮೆರಿಕದಲ್ಲಿ ಕುಳಿತುಕೊಂಡು ನೀವು ಹಲಸಿನ ಹಪ್ಪಳದ ಬಗ್ಗೆ, ವಟಸಾವಿತ್ರಿ ವ್ರತದ ಬಗ್ಗೆ, ಹಳಗನ್ನಡ ಕಾವ್ಯದ ಬಗ್ಗೆ ಯಾಕೆ ಬ(ಕೊ)ರಿತೀರಿ? ಅದನ್ನು ಮಾಡಲಿಕ್ಕೆ ಇಲ್ಲಿನವರು ಇದ್ದಾರೆ. ನಮಗೆ ಅಮೆರಿಕದ ವಿಚಾರಗಳನ್ನು, ಅಲ್ಲಿನ ಜನಜೀವನ ಕುರಿತಾದ್ದನ್ನು ಕನ್ನಡದಲ್ಲಿ ತಿಳಿಸಿ ಎನ್ನುವವರು. ಬೆಂಗಳೂರಿನ ಜಿ.ಆರ್. ಅರವಿಂದ ಎಂಬ ಓದುಗಮಿತ್ರರ ಪತ್ರವನ್ನೇ ತೆಗೆದುಕೊಳ್ಳಿ. ಅವರೆನ್ನುತ್ತಾರೆ, “ಗೋರೂರು ರಾಮಸ್ವಾಮಿ ಐಯಂಗಾರರ ಪ್ರವಾಸಕಥನದಿಂದ, ನಾಗತಿಹಳ್ಳಿಯವರ ಸಿನೆಮಾಗಳಿಂದ ಆ ದೂರದ ದೇಶದ ಬಗ್ಗೆ ತಿಳಿದ ಮೇಲೂ ಕುತೂಹಲ ಇನ್ನೂ ಇದೆ. ಅಲ್ಲಿ ತೀರಾ ನಗರಪ್ರದೇಶದಿಂದ ದೂರವಿರುವ ಗ್ರಾಮೀಣ ಜನರ ನಾಡಿಮಿಡಿತ ಹೇಗಿರುತ್ತೆ? ದೇವೇಗೌಡ, ಸಾಧುಕೋಕಿಲ ಮುಂತಾದವರನ್ನು ಹೋಲುವ, ಅಥವಾ ತಮ್ಮ ವೃತ್ತಿಯಿಂದಲೇ ‘ನಿತ್ಯಾನಂದ’ ಪಡೆವವರು-ಕೊಡುವವರು ಅಲ್ಲೂ ಇದ್ದಾರೆಯೇ? ಹೇಗಿದ್ದಾರೆ? ‘ಬುದ್ಧಿಜೀವಿಗಳು’ ಆ ಲೋಕದಲ್ಲೂ ಇದ್ದಾರಾ? ಅವರ ವರ್ತನೆ ಹೇಗಿರುತ್ತದೆ? ತೀರಾ ಚಂದನ ಥರದ ಟಿವಿ ಚಾನಲ್ ಅಲ್ಲೂ ಇದೆಯಾ?...”

ಅರವಿಂದ್ ಅವರ ಪ್ರಶ್ನೆಗಳನ್ನು ಒಂದೊಂದಾಗಿ ಉತ್ತರಿಸುತ್ತ ಒಂದು ಸ್ವಾರಸ್ಯಕರ ಲೇಖನವನ್ನೇ ಬರೆಯಬಹುದು. ಅದನ್ನು ಮುಂದೆ ಯಾವಾಗಾದರೂ ಮಾಡುತ್ತೇನೆ. ಇವತ್ತು ಅಮೆರಿಕದ ಟೆಡ್ಡ್ ವಿಲಿಯಮ್ಸ್ ಎಂಬೊಬ್ಬ ನಿರಾಶ್ರಿತ ಭಿಕ್ಷುಕ ಕೆಲದಿನಗಳ ಹಿಂದೆ ರಾತೋರಾತ್ರಿ ಎಂಬಂತೆ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಸುದ್ದಿಯನ್ನು ಯಥಾಯೋಗ್ಯವಾಗಿ ಇಲ್ಲಿ ಸ್ಪರ್ಶಿಸುತ್ತೇನೆ. ಅಷ್ಟು ಹೇಳಿದಾಗಲೇ ನಿಮ್ಮಲ್ಲಿ ಕೆಲವರಿಗೆ ಇದ್ದಿರಬಹುದಾದ ಒಂದು ಪ್ರಶ್ನೆಯನ್ನು ಉತ್ತರಿಸಿದಂತಾಯ್ತು. ಅಮೆರಿಕದಲ್ಲೂ ಭಿಕ್ಷುಕರಿದ್ದಾರೆಯೇ? ಹೌದು, ಇದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ದೇಶವೇ ಒಂದು ದೊಡ್ಡ ಭಿಕ್ಷುಕನಿದ್ದಂತೆ ಎಂದು ಕೆಲವು ಸಿನಿಕರು ಹೇಳಬಹುದು. ಅಷ್ಟೇಕೆ, ಪ್ರಪಂಚದ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ‌ಒಂದು ವಿಧದಲ್ಲಿ ಒಂದಲ್ಲ‌ಒಂದು ಸಂದರ್ಭದಲ್ಲಿ ಭಿಕ್ಷುಕನೇ ಎಂಬ ತತ್ತ್ವಜ್ಞಾನದ ಮಾತನಾಡಬಹುದು ಇನ್ನು ಕೆಲವರು. ಅವರನ್ನೆಲ್ಲ ಸದ್ಯಕ್ಕೆ ದೂರವಿಟ್ಟು ನಮ್ಮ-ನಿಮ್ಮ ಪರಿಕಲ್ಪನೆಯಲ್ಲಿ ಭಿಕ್ಷುಕ ಎಂಬ ಪದದ ಸಾಮಾನ್ಯ ಅರ್ಥವನ್ನು ತೆಗೆದುಕೊಂಡರೆ ಅಮೆರಿಕದಲ್ಲೂ ಭಿಕ್ಷುಕರಿದ್ದಾರೆ. ಅಂಥವನೊಬ್ಬ ಟೆಡ್ಡ್ ವಿಲಿಯಮ್ಸ್. ಕಳೆದ ಹದಿನೇಳು ವರ್ಷಗಳೂ ಅವನು ಭಿಕ್ಷೆ ಬೇಡಿಕೊಂಡೇ ಬದುಕಿದ್ದವನು.

TedWilliams1.jpg

ಹಿಂದಿ ಭಾಷೆಯಲ್ಲಿ ಒಂದು ಜನಜನಿತ ಮಾತಿದೆ- ‘ಭಗವಾನ್ ಜಬ್‌ಭೀ ದೇತಾ ಹೈ ತೊ ಛಪ್ಪರ್ ಫಾಡ್‌ಕೆ ದೇತಾ ಹೈ’ (ಭಗವಂತ ಕೊಟ್ಟಾಗೆಲ್ಲ ಸೂರು ಹರಿದುಹೋಗುವಂತೆ ಸುರಿಯುತ್ತಾನೆ) ಎಂದು. ದೇವರು ನಮ್ಮನ್ನು ಕಷ್ಟಗಳಿಗೆ ಸಿಲುಕಿಸುವ ವಿಷಯದಲ್ಲೂ ಸಕಲಸೌಭಾಗ್ಯವನ್ನು ಒದಗಿಸುವ ವಿಷಯದಲ್ಲೂ ಈ ಮಾತು ಏಕಪ್ರಕಾರವಾಗಿ ಸರಿಹೋಗುತ್ತದೆ. ಕಳೆದವಾರ ಟೆಡ್ಡ್ ವಿಲಿಯಮ್ಸ್ ಬದುಕಿನಲ್ಲಿ ಭಗವಂತ ದಯಪಾಲಿಸಿದ್ದು ‘ಛಪ್ಪರ್ ಫಾಡ್‌ಕೆ’ಗಿಂತಲೂ ಹೆಚ್ಚಿನ ರೀತಿಯಲ್ಲಿ ಎಂದರೆ ತಪ್ಪಲ್ಲ. ಆ ದಿನವೂ ವಿಲಿಯಮ್ಸ್ ಎಂದಿನಂತೆಯೇ ಒಹಯೋ ರಾಜ್ಯದ ಕೊಲಂಬಸ್ ಪಟ್ಟಣದ ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ಕೈಯಲ್ಲೊಂದು ಬೋರ್ಡ್. “ನನಗೆ ದೈವದತ್ತವಾದ ಕಂಠಸಿರಿಯಿದೆ. ಹಿಂದೆ ನಾನೊಬ್ಬ ರೇಡಿಯೊ ಅನೌನ್ಸರ್ ಆಗಿದ್ದೆ, ಆದರೆ ಕಷ್ಟದ ದಿನಗಳಿಗೆ ಗುರಿಯಾದೆ. ದಯವಿಟ್ಟು ಸಹಾಯ ಮಾಡಿ. ನಿಮ್ಮ ನೆರವನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.” ಕೊಲಂಬಸ್ ಪಟ್ಟಣದ ‘ಕೊಲಂಬಸ್ ಡಿಸ್‌ಪ್ಯಾಚ್’ ಪತ್ರಿಕೆಯ ವರದಿಗಾರ ಡೊರಲ್ ಚಿನೊವೆತ್‌ನಿಗೆ ಅವತ್ತು ನಿರಾಶ್ರಿತ ಭಿಕ್ಷುಕರ ಬಗ್ಗೆ ಒಂದು ರಿಪೋರ್ಟ್ ತಯಾರಿಸುವ ಅಸೈನ್‌ಮೆಂಟ್ ಇತ್ತು. ಕಾರಿನಲ್ಲಿ ಆ ರಸ್ತೆಯಾಗಿಯೇ ಹೋಗುತ್ತಿದ್ದವನಿಗೆ ಟ್ರಾಫಿಕ್‌ಸಿಗ್ನಲ್ ಬಳಿ ವಿಲಿಯಮ್ಸ್ ಎದುರಾದ. ಕುತೂಹಲದಿಂದ ಕಾರಿನ ಕಿಟಕಿಗಾಜು ಕೆಳಸರಿಸಿ ವಿಲಿಯಮ್ಸ್‌ನ ಕೈಯಲ್ಲಿದ್ದ ಬೋರ್ಡ್ ಓದಿದ. ಏನಿವನ ಕಂಠಸಿರಿ ನೋಡಿಯೇಬಿಡೋಣ ಎಂದು ತನ್ನಲ್ಲಿದ್ದ ವಿಡಿಯೊಕೆಮರಾದಲ್ಲಿ ವಿಲಿಯಮ್ಸ್ ಮಾತನ್ನು ರೆಕಾರ್ಡ್ ಮಾಡಿದ. ನಿಜಕ್ಕೂ ರೇಡಿಯೊ ಅನೌನ್ಸರ್‌ಗೆ ಹೇಳಿಮಾಡಿಸಿದ ಧ್ವನಿ ಎಂದು ಅಚ್ಚರಿಗೊಂಡ ಚಿನೊವೆತ್ ಆ ವಿಡಿಯೋ ತುಣುಕನ್ನು ಇಂಟರ್‌ನೆಟ್‌ನಲ್ಲಿ ತೇಲಿಬಿಟ್ಟ.

ಕಾಳ್ಗಿಚ್ಚಿನಂತೆ, ಕಂಪ್ಯೂಟರ್ ವೈರಸ್‌ನಂತೆ ಹರಡಿತು ಆ ‘ಗೋಲ್ಡನ್ ವಾಯ್ಸ್ ಆಫ್ ಹೋಮ್‌ಲೆಸ್ ಮ್ಯಾನ್’ ವಿಡಿಯೋ ತುಣುಕು. ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನ ಅದನ್ನು ನೋಡಿದರು. ಸಿ‌ಎನ್‌ಎನ್ ಸೇರಿದಂತೆ ಅಮೆರಿಕದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯ್ತು (ಭಾರತದ ಟಿವಿ ಚಾನಲ್‌ಗಳ ಭಾಷೆಯಲ್ಲಾದರೆ ‘ಬ್ರೇಕಿಂಗ್ ನ್ಯೂಸ್’). ನ್ಯೂಯಾರ್ಕ್‌ನ ಎನ್‌ಬಿಸಿ ಟೆಲಿವಿಷನ್ ನೆಟ್‌ವರ್ಕ್ ತನ್ನ ಬೆಳಗ್ಗಿನ ಪ್ರಸಾರದ ‘ಟುಡೇ’ ಶೋಗೆ ವಿಲಿಯಮ್ಸ್‌ನನ್ನು ಅತಿಥಿಯಾಗಿ ಕರೆಸಿ ಸಂದರ್ಶನ ನಡೆಸಿತು. ಇದೆಲ್ಲ ನಿಜವೇ, ಕನಸಿನಲ್ಲಿ ಆಗುತ್ತಿದೆಯೇ ಎಂದು ನಂಬದಾದ ವಿಲಿಯಮ್ಸ್ ತನ್ನೆಲ್ಲ ಕಥೆಯನ್ನು ಆ ಸಂದರ್ಶನದಲ್ಲಿ ಬಿಚ್ಚಿಟ್ಟ. ಹದಿನಾಲ್ಕು ವರ್ಷದ ಬಾಲಕನಾಗಿದ್ದಾಗಲೇ ತನಗೆ ರೇಡಿಯೊ ಅನೌನ್ಸರ್ ಆಗಬೇಕೆಂಬ ಬಯಕೆಯಿದ್ದದ್ದು, ಅದಕ್ಕಾಗಿ ತರಬೇತಿ ಪಡೆದು ತಾನು ರೇಡಿಯೊ ಅನೌನ್ಸರ್ ಆದದ್ದು, ಆದರೆ ಆಮೇಲೆ ಕುಡಿತ, ಡ್ರಗ್ಸ್ ಮುಂತಾಗಿ ದುಶ್ಚಟಗಳಿಗೆ ಬಲಿಯಾಗಿ ಜೀವನದಲ್ಲಿ ಅಧೋಗತಿಯತ್ತ ಸಾಗತೊಡಗಿದ್ದು, ಈನಡುವೆ ಮದುವೆಯಾಗಿ ಒಂಬತ್ತು ಮಕ್ಕಳ ತಂದೆಯಾದದ್ದು, ದುರ್ವ್ಯಸನಗಳು ಹೆಚ್ಚಿದಂತೆಲ್ಲ ಒಂದುದಿನ ಮನೆಯಿಂದ ಹೊರದಬ್ಬಲ್ಪಟ್ಟು ಬೀದಿಪಾಲಾದದ್ದು, ಬದುಕಿಗೋಸ್ಕರ ಭಿಕ್ಷೆ, ಕಳ್ಳತನ, ದರೋಡೆ, ಜೈಲುವಾಸ ಇತ್ಯಾದಿ ಏನೇನೆಲ್ಲ ಮಾಡಿದ್ದು, ಕಳೆದೆರಡು ವರ್ಷಗಳಿಂದ ದುಶ್ಚಟಗಳನ್ನೆಲ್ಲ ಬಿಟ್ಟು ದೇವರ ಮೇಲೆ ಭಾರ ಹಾಕಿ ದಿನದೂಡತೊಡಗಿದ್ದು, ೨೦೧೦ ಕೂಡ ವ್ಯರ್ಥ ವರ್ಷವಾಯ್ತಲ್ಲ ಎಂದುಕೊಳ್ಳುತ್ತಿದ್ದಾಗಲೇ ಈ ಪವಾಡ ಸಂಭವಿಸಿದ್ದು... ಕಥೆ ಹೇಳುವೇ ನನ್ನ ಕಥೆ ಹೇಳುವೆ ಎಂದು ನಾಗರಹಾವು ಸಿನೆಮಾದಲ್ಲಿ ಅಲಮೇಲು (ಆರತಿ) ಹೇಳುವಂತೆ ವಿಲಿಯಮ್ಸ್ ಹೇಳುತ್ತ ಹೋದ. ನಡುನಡುವೆ ಭಾವುಕನಾಗುತ್ತಿದ್ದ. ೯೨ ವರ್ಷಗಳ ತನ್ನ ಅಮ್ಮ ಬದುಕಿರುವಾಗಲೇ ಅವಳಿಂದ “ಮಗ ಸರಿದಾರಿಗೆ ಬಂದ, ಬೇಡುವುದನ್ನು ನಿಲ್ಲಿಸಿ ಕೆಲಸಕ್ಕೆ ತೊಡಗಿದ” ಎನ್ನಿಸಿಕೊಳ್ಳಬೇಕೆಂದು ತನ್ನ ಆಸೆಯಿರುವುದು ಎನ್ನುವಾಗಂತೂ ಗಳಗಳನೆ ಕಣ್ಣೀರಿಟ್ಟ. ಸಂದರ್ಶನದ ಕೊನೆಯಲ್ಲಿ ತನ್ನ ಎಲ್ಲ ಒಂಬತ್ತು ಮಕ್ಕಳ ಹೆಸರುಗಳನ್ನೂ ಉಚ್ಚರಿಸಿ ಅವರ ಪ್ರೀತಿ ಮತ್ತೆ ತನಗೆ ಬೇಕೆಂದು ಗೋಗರೆದ.

ವಿಲಿಯಮ್ಸ್‌ನ ಕಂಠಸಿರಿ ಮತ್ತು ಅದ್ಭುತವಾದ ಆತ್ಮವಿಶ್ವಾಸವನ್ನು ಗಮನಿಸಿದ ಕ್ಲೀವ್‌ಲ್ಯಾಂಡ್ (ಒಹಯೊ ರಾಜ್ಯದ ಮತ್ತೊಂದು ಪಟ್ಟಣ)ದ ‘ಕೆವೆಲಿಯರ್ಸ್’ ಬಾಸ್ಕೆಟ್‌ಬಾಲ್ ತಂಡದ ಮಾಲೀಕತ್ವದ ಕಂಪನಿಯು ವಿಲಿಯಮ್ಸ್‌ನಿಗೆ ಉದ್ಯೋಗ ನೀಡಲು ಮುಂದಾಯಿತು. ಬಾಸ್ಕೆಟ್‌ಬಾಲ್ ಪಂದ್ಯಗಳು ನಡೆಯುವ ‘ಅರೆನಾ’ದಲ್ಲಿ ಉದ್ಘೋಷಣೆ, ತಂಡದ ಜಾಹೀರಾತುಗಳಿಗೆ ವಾಯ್ಸ್‌ಒವರ್ ಮಾಡುವ ಕೆಲಸ. ಕೈತುಂಬ ಸಂಬಳವಷ್ಟೇ ಅಲ್ಲ, ವಾಸಿಸುವುದಕ್ಕೊಂದು ಮನೆಯನ್ನೂ ಕೊಡುವುದಾಗಿ ಘೋಷಿಸಿತು. ಅದೂ ಹೇಗೆಂದರೆ ಒಂದು ರೇಡಿಯೋ ಸ್ಟೇಷನ್‌ನಲ್ಲಿ ವಿಲಿಯಮ್ಸ್‌ನ ಸಂದರ್ಶನ ನಡೆಯುತ್ತಿದ್ದಾಗಲೇ ಫೋನ್ ಮಾಡಿ ಆಫರ್ ಕೊಟ್ಟಿತು ಆ ಕಂಪನಿ! ಅದುವರೆಗೆ ವಿಲಿಯಮ್ಸ್ ಅಪರಾಧಗಳನ್ನು ಮಾಡಿ ಸಿಕ್ಕಿಬಿದ್ದಾಗೆಲ್ಲ ಪೊಲೀಸರು ಅರೆಸ್ಟ್ ರೆಕಾರ್ಡ್‌ನಲ್ಲಿ ಅವನ ಮಾಹಿತಿಯನ್ನು ಬರೆದುಕೊಳ್ಳುವಾಗ ‘ವಿಳಾಸ: ಕೊಲಂಬಸ್ ಪಟ್ಟಣದ ಬೀದಿಗಳು’ ಎಂದೇ ಬರೆಯುತ್ತಿದ್ದರು! ಉದ್ಯೋಗಕ್ಕೆ ಅರ್ಜಿ ಗುಜರಾಯಿಸಬೇಕೆಂದರೂ ಅವನಿಗೊಂದು ಐಡೆಂಟಿಟಿ ಆಗಲೀ, ಅಡ್ರೆಸ್ ಆಗಲೀ ಏನಿತ್ತು? ಈಗ ಇಷ್ಟೆಲ್ಲ ಪ್ರಸಿದ್ಧನಾದ ಮೇಲೆ ಒಹಯೋ ರಾಜ್ಯದ್ದೇ ಒಂದು ಬ್ಯಾಂಕ್ ತನ್ನ ಜಾಹೀರಾತಿಗೆ ವಿಲಿಯಮ್ಸ್‌ನಿಂದ ಕಂಠದಾನ ಕಾಂಟ್ರಾಕ್ಟ್‌ಗೆ ಸಹಿ ಹಾಕಿಸಿ, ಅವನಿಗೆ ಹತ್ತುಸಾವಿರ ಡಾಲರ್ ಮುಂಗಡ ಪಾವತಿಸಿದೆ. ಶಿಕಾಗೋದ ಕಂಪನಿಯೊಂದು ತನ್ನ ಚೀಸ್ ಉತ್ಪನ್ನಗಳ ಜಾಹೀರಾತಿಗೆ ವಿಲಿಯಮ್ಸ್‌ನ ಕಂಠ ಬೇಕೆಂದು ಬೇಡಿಕೆ ಸೂಚಿಸಿದೆ. ಒಂದು ವಾರದ ಹಿಂದೆಯಷ್ಟೇ ‘ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ತೋಳೇ ತಲೆಕೆಳಗೆ...’ ಎನ್ನುವಂತಿದ್ದ ವಿಲಿಯಮ್ಸ್ ಈಗ ವಿಮಾನದಲ್ಲಿ ಅತ್ತಿಂದಿತ್ತ ಸಂಚರಿಸುತ್ತಾನೆ. ಲಾಸ್‌ಏಂಜಲೀಸ್‌ವರೆಗೂ ಪಾದಬೆಳೆಸಿ ಅಲ್ಲಿನ ಹಾಲಿವುಡ್ ಹೊಟೇಲ್‌ನಲ್ಲಿ ಉಳಕೊಳ್ಳುತ್ತಾನೆ. ಭಿಕ್ಷಾಟನೆ ಮಾಡುತ್ತಿದ್ದಾಗಿನ ಕೆದರಿದ ಕೂದಲೆಲ್ಲ ಚೆನ್ನಾಗಿ ಟ್ರಿಮ್ ಆಗಿ ಈಗ ಹ್ಯಾಂಡ್‌ಸಮ್ ಹೀರೋ ಆಗಿದ್ದಾನೆ. ಇದೆಲ್ಲವೂ ಸಾಧ್ಯವಾದದ್ದು ‘ರೈಟ್ ಪ್ಲೇಸ್ ರೈಟ್ ಮೊಮೆಂಟ್’ ಎಂಬಂತೆ ಅವತ್ತು ಅವನು ರಸ್ತೆಬದಿಯಲ್ಲಿ ಬೋರ್ಡ್ ಹಿಡಿದುಕೊಂಡು ಆ ಜಾಗದಲ್ಲಿ ನಿಂತುಕೊಂಡಿದ್ದರಿಂದ ಮತ್ತು ರಿಪೋರ್ಟರ್ ಮಹಾಶಯ ಅದೇ ಜಾಗದಲ್ಲಿ ಕಾರು ನಿಲ್ಲಿಸಿ ಇವನತ್ತ ದೃಷ್ಟಿ ಹಾಯಿಸಿದ್ದರಿಂದ! ‘ಸಮಯಾಸಮಯವುಂಟೇ ಭಕ್ತವತ್ಸಲ ನಿನಗೆ?’ ಎನ್ನುತ್ತಿದ್ದಾನೆ ಈಗ ದೇವರಲ್ಲಿ ಸಂಪೂರ್ಣ ನಂಬಿಕೆ ಚಿಗುರಿಕೊಂಡಿರುವ ಟೆಡ್ಡ್ ವಿಲಿಯಮ್ಸ್. ಭಿಕಾರಿಯೊಬ್ಬ ಬಿಲಿಯನೇರ್ ಆಗಹೊರಟಿರುವ ಸತ್ಯಕಥೆ ಇದು. ಬೇಡಾ, ಬಿಲಿಯನೇರ್ ಆಗಹೊರಟವ ಎನ್ನುವುದಕ್ಕಿಂತ, ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದವ ಎನ್ನೋಣ. ಈ ಇನ್ನಿಂಗ್ಸ್‌ನಲ್ಲಾದರೂ ಅವನ ಬದುಕು ಬಂಗಾರವಾಯ್ತು ಎನ್ನುವಂತಾಗಲೆಂದು ಹಾರೈಸೋಣ.

ಮತ್ತೆ ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಹಿಂದಿರುಗುವುದಾದರೆ, ಪರಾಗ ಸ್ಪರ್ಶ ಅಂಕಣದ ಓದುಗರಾಗಿ ನಿಮಗೆ ಇಲ್ಲಿ ಯಾವ ರೀತಿಯ ವಿಷಯಗಳು ಇಷ್ಟವಾಗುತ್ತವೆ? ಯಾವ ವಿಷಯಗಳನ್ನು ನೀವು ಅಪೇಕ್ಷಿಸುತ್ತೀರಿ, ನಿರೀಕ್ಷಿಸುತ್ತೀರಿ? ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ‘ಓದುಗರನ್ನು ಓಲೈಸುವುದಕ್ಕಾಗಿಯೇ ನಾನು ಬರೆಯುತ್ತೇನೆ’ ಎಂಬ ತುದಿಗೂ ಹೋಗದೆ, ‘ಯಾರು ಓದಲೆಂದೂ ನಾನು ಬರೆಯುವುದಲ್ಲ, ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂಬ ಇನ್ನೊಂದು ತುದಿಗೂ ಹೋಗದೆ, ನನಗೆ-ನಿಮಗೆ ಹಿತವಾಗುವಂಥದ್ದು, ಉಪಯೋಗವಾಗುವಂಥದ್ದು ಈ ಅಂಕಣದಲ್ಲಿ ಹೆಚ್ಚುಹೆಚ್ಚು ಬರಲಿ ಎಂಬ ಧ್ಯೇಯೋದ್ದೇಶದಿಂದ ಈ ಪ್ರಶ್ನೆಯನ್ನು ನಾನು ನಿಮ್ಮಲ್ಲಿ ಕೇಳುತ್ತಿರುವುದು. ನಿಮ್ಮ ಪ್ರಾಮಾಣಿಕ ಅಭಿಪ್ರಾಯ ತಿಳಿಸಿದರೆ ತುಂಬ ಸಂತೋಷ. ನಿನ್ನೆಯಷ್ಟೇ ಹೇಳಿಕೊಂಡೆವಲ್ಲ ‘ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆಯ ಮಾತನಾಡೋಣ’ ಅಂತ? ಮಾತಿನಂತೆ ಕೃತಿಯೂ ಒಳ್ಳೆಯದಾಗಿಯೇ ಇರಲಿ ಎನ್ನುವುದು ಒಟ್ಟಾರೆ ಆಶಯ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.