Episodes
Saturday Feb 18, 2012
Just a Coincidence
Saturday Feb 18, 2012
Saturday Feb 18, 2012
ದಿನಾಂಕ 19 ಫೆಬ್ರವರಿ 2012ರ ಸಂಚಿಕೆ...
'ಕಾಕತಾಳೀಯ’ದ ಮೂರು ಬಗೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವತ್ತು ನಾನು ಇಮೇಲ್ಸ್ ಚೆಕ್ ಮಾಡುತ್ತ ಇದ್ದದ್ದಕ್ಕೂ ಅವರ ಇಮೇಲ್ ನನ್ನ ಇನ್ಬಾಕ್ಸ್ನಲ್ಲಿ ಬಂದುಬೀಳೋದಕ್ಕೂ ಸರಿಹೋಯ್ತು. ಕೂಡಲೇ ಕ್ಲಿಕ್ಕಿಸಿ ಓದಿದೆ. ಆದಿನವೇ ಪ್ರಕಟವಾಗಿದ್ದ ‘ಕಾಗೆಗಳ ಸಮೂಹ...’ ಲೇಖನಕ್ಕೆ ಪ್ರತಿಕ್ರಿಯೆ ಬರೆದಿದ್ದರು. ನನಗವರು ಇದುವರೆಗೂ ಹೆಸರಿನಿಂದಷ್ಟೇ ಗೊತ್ತು. ಮುಖಪರಿಚಯವಿಲ್ಲ, ಭೇಟಿಯಾಗಿಲ್ಲ, ಯಾವರೀತಿಯ ಸಂಪರ್ಕವೂ ಇಲ್ಲ. ಹಾಗಾಗಿಯೇ ಅವರಿಂದ ಇಮೇಲ್ ಬಂದದ್ದು ಒಂಥರ ಸ್ಪೆಷಲ್ ಸಂಭ್ರಮ. ಇಮೇಲ್ನಲ್ಲಿ ಸಿಗ್ನೇಚರ್ ಕೆಳಗಡೆ ಫೋನ್ನಂಬರೂ ಇತ್ತು. ತತ್ಕ್ಷಣ ಫೋನಾಯಿಸಿದೆ, ಅವರೇ ರಿಸೀವರ್ ಎತ್ತಿಕೊಂಡು ಆಶ್ಚರ್ಯಚಕಿತರಾಗಿ “ಈಗತಾನೆ ನಿಮಗೆ ಇಮೇಲ್ ಬರೆದುಕಳಿಸಿದ್ದೆ, ಇಷ್ಟು ಕ್ವಿಕ್ಕಾಗಿ ರೆಸ್ಪಾನ್ಸ್ ನಿರೀಕ್ಷಿಸಿರ್ಲಿಲ್ಲಪ್ಪ!” ಎಂದು ಖುಷಿಪಟ್ಟರು. ನಾನೂ ಅಷ್ಟೇ ಖುಷಿಯಿಂದ, “ಸಾರ್, ನಿಮ್ಮ ಹೆಸರನ್ನು ನಾನಾದರೂ ನಿರರ್ಥಕಗೊಳಿಸ್ಬೇಕು ಅನ್ನೋ ಕಾರಣಕ್ಕೆ ಫೋನ್ ಮಾಡಿದ್ದು” ಎಂದೆ! ಹಹ್ಹಹ್ಹಾ ಎಂದು ಬಾಯ್ತುಂಬ ನಕ್ಕರು. ಆ ವ್ಯಕ್ತಿ ಯಾರು ಗೊತ್ತೇ? ರಿಗ್ರೆಟ್ ಅಯ್ಯರ್! ನೀವು ಪತ್ರಿಕೆಗಳ/ನಿಯತಕಾಲಿಕಗಳ ರೆಗ್ಯುಲರ್ ಓದುಗರಾದರೆ ಆ ಹೆಸರನ್ನು ಗಮನಿಸಿಯೇ ಇರುತ್ತೀರಿ. ಅವರೊಬ್ಬ ಪತ್ರಕರ್ತ, ವ್ಯಂಗ್ಯಚಿತ್ರಕಾರ, ಛಾಯಾಗ್ರಾಹಕ ಮತ್ತು ಅಂಕಣಕಾರ. ಜತೆಯಲ್ಲೇ ಸಮಾಜಸೇವೆ, ಸಂಶೋಧನೆ ಮತ್ತು ಸಂಸ್ಕೃತಿರಕ್ಷಣೆಯ ಕೆಲಸಗಳನ್ನೂ ಮಾಡುತ್ತಿರುವವರು. ಆರಂಭದಲ್ಲಿ (ನಾಲ್ಕೈದು ದಶಕಗಳ ಹಿಂದೆ) ಪತ್ರಿಕೆಗಳ ಸಂಪಾದಕರಿಂದ ‘ತಿರಸ್ಕಾರ ಪತ್ರ’ಗಳನ್ನೇ ಪಡೆದೂಪಡೆದೂ ತನ್ನ ಹೆಸರನ್ನೇ ರಿಗ್ರೆಟ್ ಅಯ್ಯರ್ ಎಂದು ಪರ್ಮನೆಂಟಾಗಿ ಬದಲಾಯಿಸಿಕೊಂಡ ಮಹಾನುಭಾವ (ನಿಜನಾಮಧೇಯ: ಸತ್ಯನಾರಾಯಣ ಅಯ್ಯರ್. ಮೂಲತಃ ಕೋಲಾರದವರು, ಸದ್ಯಕ್ಕೆ ಬೆಂಗಳೂರಿನ ಪ್ರಜೆ). ಈಗ ಪಾಸ್ಪೋರ್ಟ್ ಆದಿಯಾಗಿ ಎಲ್ಲ ದಾಖಲೆಗಳಲ್ಲೂ ಅವರ ಹೆಸರು ರಿಗ್ರೆಟ್ ಅಯ್ಯರ್. ಮುನ್ನೂರೆಪ್ಪತ್ತಕ್ಕೂ ಹೆಚ್ಚು ‘ತಿರಸ್ಕಾರ ಪತ್ರ’ಗಳ ವಾರೀಸುದಾರನಾಗಿ ಲಿಮ್ಕಾ ದಾಖಲೆಯಲ್ಲೂ; ಆಂಧ್ರಪ್ರದೇಶದ ಅನಂತಪುರದಲ್ಲಿ ಜಗತ್ತಿನ ಅತಿದೊಡ್ಡ ಆಲದಮರ ಇರುವುದನ್ನು ಗಿನ್ನೆಸ್ ವರ್ಲ್ಡ್ರೆಕಾರ್ಡ್ಸ್ ಸಂಸ್ಥೆಗೆ ತಿಳಿಸಿ ಆಮೂಲಕ ಗಿನ್ನೆಸ್ ದಾಖಲೆಯಲ್ಲೂ! ಅಂತಹ ದ ಗ್ರೇಟ್ ರಿಗ್ರೆಟ್ ಅಯ್ಯರ್ ನನಗೆ ಇಮೇಲ್ ಕಳಿಸಿದಾಗ ಕಾಕತಾಳೀಯವಾಗಿ ನಾನು ಆಗಷ್ಟೇ ಇಮೇಲ್ಸ್ ಚೆಕ್ ಮಾಡುತ್ತಿದ್ದುದರಿಂದ ತತ್ಕ್ಷಣ ಅವರಿಗೆ ದೂರವಾಣಿಯಲ್ಲೇ ಪ್ರತ್ಯುತ್ತರ ಕೊಡುವುದು ಸಾಧ್ಯವಾಯ್ತು; ನನ್ನೊಂದಿಗಿನ ಸಂಪರ್ಕದಲ್ಲಾದರೂ ಅವರು ‘ರಿಗ್ರೆಟ್’ಪಡುವುದು ತಪ್ಪಿದಂತಾಯ್ತು. ರಿಗ್ರೆಟ್ ಅಯ್ಯರ್ ಅವರ ಇಮೇಲ್ ಬಂದಿರುವುದರ ಬಗ್ಗೆಯೇ ಇಷ್ಟೊತ್ತು ಬಣ್ಣಿಸಿದೆನೇ ಹೊರತು ಅದರಲ್ಲೇನಿತ್ತೆಂದು ಹೇಳಲಿಲ್ಲ. ಅದನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು. ಅವರ ಮಗ ಶ್ರವಣ್, ಈಗಿನ್ನೂ ಜರ್ನಲಿಸಂ ಓದುತ್ತಿದ್ದಾನೆ. ಆತ ‘ರೆಕ್ಕೆ ಮುರಿದ ಹಕ್ಕಿ ನಾನು’ ಅಂತೊಂದು ಕಿರುಸಾಕ್ಷ್ಯಚಿತ್ರ ನಿರ್ಮಿಸಿದ್ದಾನೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ರೆಕ್ಕೆ ಮುರಿದುಕೊಂಡು ಬದುಕು ಸವೆಸುತ್ತಿರುವ ಕಾಗೆಯೊಂದರ ಕರುಣಾಜನಕ ಆದರೆ ಆತ್ಮವಿಶ್ವಾಸ ತುಂಬಿತುಳುಕುವ ಚಿತ್ರಣ. ಮೊಬೈಲ್ ಫೋನ್ನಲ್ಲಿರುವ ಕ್ಯಾಮೆರಾವನ್ನಷ್ಟೇ ಬಳಸಿ ನಿರ್ಮಿಸಿದ್ದು. ಅದರ ಯೂಟ್ಯೂಬ್ ಲಿಂಕ್ಅನ್ನು ರಿಗ್ರೆಟ್ ಅಯ್ಯರ್ ನನಗೆ ಇಮೇಲ್ನಲ್ಲಿ ಕಳಿಸಿದ್ದಾರೆ ( rekke murida hakki ಎಂದು ಯೂಟ್ಯೂಬ್ನಲ್ಲಿ ಹುಡುಕಿದರೆ ಸಿಗುತ್ತದೆ). ಐದು ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರ ಎಂಥವರ ಅಂತಃಕರಣವನ್ನೂ ತಟ್ಟುತ್ತದೆ. ನೋಡಿದಾಗ ವಿಷಾದ ಮಡುಗುಟ್ಟುತ್ತದೆ. ಕಾಗೆಯ ಸ್ವಗತದಂತಿರುವ ಅದರಲ್ಲಿನ ಸಂಭಾಷಣೆಯು ಕೊನೆಯಲ್ಲಿ ಮೂರು ಗಂಭೀರ ಪ್ರಶ್ನೆಗಳೊಂದಿಗೆ ಮುಗಿಯುತ್ತದೆ: ಅಂಕೆಯಿಲ್ಲದ ಅನರ್ಥದ ಅಭಿವೃದ್ಧಿಕಾರ್ಯಗಳಿಗೆ ಎಂದು ಅಂತ್ಯ? ಮೂಲ ವನಸಿರಿಯನ್ನು ಹನನ ಮಾಡಿ ಕಾಂಕ್ರೀಟ್ ಜಂಗಲ್ ನಿರ್ಮಿಸುವ ನಿಮ್ಮ ಕಾರ್ಯ ಎಷ್ಟು ಸರಿ? ನಮ್ಮ ಅಳಿವು-ಉಳಿವಿನ ಬಗ್ಗೆ ನಿಮ್ಮ ಸ್ವಾರ್ಥದಿಂದಾಚೆ ಎಂದಾದರೂ ಯೋಚಿಸಿದ್ದೀರಾ? ಅಂದಹಾಗೆ ‘ಕಾಗೆಗಳ ಸಮೂಹ...’ ಅಂಕಣಬರಹಕ್ಕೆ ಪ್ರತಿಕ್ರಿಯೆಯಾಗಿ ಸುಮಾರಷ್ಟು ಓದುಗರು ಪತ್ರ ಬರೆದಿದ್ದಾರೆ. ಅದರಲ್ಲಿ, ಕಾಗೆಯ ಬುದ್ಧಿವಂತಿಕೆ ಕಣ್ಣಾರೆ ಕಂಡು ಅನುಭವಿಸಿದ್ದನ್ನು ಹಂಚಿಕೊಂಡವರಿದ್ದಾರೆ; ಸಿಪಿಕೆ ಬರೆದ ಪದ್ಯ ಆರನೇ ತರಗತಿಯ ಕನ್ನಡಭಾರತಿ ಪಠ್ಯ ಪುಸ್ತಕದಲ್ಲಿದ್ದ ‘ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ...’ಯನ್ನು ನೆನೆಸಿಕೊಂಡವರಿದ್ದಾರೆ; ಆರ್.ಕೆ.ಲಕ್ಷ್ಮಣ್ ಅವರ ಕಾರ್ಟೂನ್ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಗೆಯನ್ನೂ ಉಲ್ಲೇಖಿಸಬಹುದಿತ್ತಲ್ವಾ ಎಂದು ಕೇಳಿದವರಿದ್ದಾರೆ. ಕಾಗೆ ಕುರಿತ ಸಂಸ್ಕೃತ ಸುಭಾಷಿತಗಳನ್ನು, ಮರಾಠಿ ಅಭಂಗಗಳನ್ನು, ‘ಕಾಗೆಯೊಂದಗುಳ ಕಂಡೊಡೆ ಕೂಗಿ ಕರೆಯದೆ ತನ್ನ ಬಳಗನೆಲ್ಲವ...’ ಎಂಬ ಬಸವಣ್ಣನವರ ವಚನವನ್ನು ನೆನಪಿಸಿದವರಿದ್ದಾರೆ. ಶ್ರಾದ್ಧಕರ್ಮಗಳಲ್ಲಿ ಪಿತೃಗಳು ಕಾಗೆಯ ರೂಪದಲ್ಲಿ ಬಂದು ನಾವು ಅರ್ಪಿಸಿದ್ದನ್ನು ಸೇವಿಸುತ್ತಾರೆ ಎಂದು ವಿವರಿಸಿದವರಿದ್ದಾರೆ. ಎಲ್ಲ ಪತ್ರಗಳನ್ನೂ ಇಲ್ಲಿ ಉಲ್ಲೇಖಿಸುವುದು ಸಾಧ್ಯವಾಗದು, ಆದ್ದರಿಂದ ಪತ್ರ ಬರೆದವರೆಲ್ಲರಿಗೂ ಮನದಾಳದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ‘ಕಾಕತಾಳೀಯ’ ಎಂಬ ವಿಷಯವನ್ನು ಇವತ್ತಿನ ಲೇಖನಕ್ಕೆ ಆಯ್ದುಕೊಂಡಿದ್ದರಿಂದ ಇನ್ನೊಂದು ಪತ್ರವನ್ನು ಮಾತ್ರ ವಿಶೇಷವಾಗಿ ಆಯ್ದುಕೊಳ್ಳುತ್ತಿದ್ದೇನೆ. ಮೈಸೂರಿನಿಂದ ಡಾ.ಕುಮಾರಸ್ವಾಮಿ ಎಂಬುವರು ಬರೆದಿದ್ದಾರೆ. ಅವರು ಮೈಸೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆಯಲ್ಲಿದ್ದಾರೆ. ಒಂದೆರಡು ವಾರಗಳ ಹಿಂದೆಯಷ್ಟೇ ಅವರು ನನಗೆ ಪತ್ರಮಿತ್ರರಾಗಿ ಪರಿಚಯವಾದವರು. ಮೊನ್ನೆ ಸೋಮವಾರದಂದು ಅವರ ತರಬೇತಿ ಕಾರ್ಯಾಗಾರದಲ್ಲಿ ಏನಾಯ್ತು ಎನ್ನುವುದನ್ನು ಆತ್ಮೀಯವಾಗಿ ಬರೆದು ಕಳಿಸಿದ್ದಾರೆ. “ಮೈಸೂರಿನ ಹೊರವಲಯದ ಕೆಲವು ಶಾಲೆಗಳ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಇತ್ತು. ಪ್ರಾಥಮಿಕ ಶಿಕ್ಷಣದಲ್ಲಿ ಬೋಧನೋಪಕರಣಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದೆ. ಕಾಗೆಯೂ ಹೇಗೆ ಸಲಕರಣೆಗಳನ್ನು ಬಳಸಿ ಬುದ್ಧಿಶಾಲಿಯೆನಿಸುತ್ತದೆ ಎಂದು ಹಿಂದಿನ ದಿನವಷ್ಟೇ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನೂ ಪ್ರಸ್ತಾಪಿಸಿದ್ದೆ. ಅಲ್ಲಿದ್ದ ಕೆಲವರು ಆ ಲೇಖನವನ್ನು ಓದಿಯೂಇದ್ದರು. ನನ್ನ ಉಪನ್ಯಾಸವನ್ನು ಆಸಕ್ತಿಯಿಂದ ಕೇಳಿಸಿಕೊಂಡಿದ್ದ ಶಿಕ್ಷಕಿಯೊಬ್ಬರು ಆಮೇಲೆ ನನ್ನ ಹತ್ತಿರ ಬಂದು ಆ ಲೇಖನ ಬರೆದವನು ತನ್ನ ಖಾಸಾ ತಮ್ಮ ಎಂದು ಹೇಳಿದರು. ಕ್ಷಣಕಾಲ ನನಗೊಂದು ವಿಶೇಷ ಪುಳಕ ಉಂಟಾಯ್ತು!” ಹೌದು, ಡಾ.ಕುಮಾರಸ್ವಾಮಿಯವರ ಇ-ಪರಿಚಯ ನನಗಾಗಿರುವುದು ನಮ್ಮಕ್ಕನಿಗೆ ಗೊತ್ತಿರಲಿಲ್ಲ; ನಮ್ಮಕ್ಕ ಮೈಸೂರಿನ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕಿ ಎಂಬ ವಿಚಾರ ಕುಮಾರಸ್ವಾಮಿಯವರಿಗೂ ಗೊತ್ತಿರಲಿಲ್ಲ. ಕಾಗೆಗಳ ಕುರಿತ ಲೇಖನದ ಸಂದರ್ಭದಲ್ಲಿ ಇಂಥದೊಂದು ಹೃದಯಸ್ಪರ್ಶಿ ಕಾಕತಾಳೀಯ ಜರುಗಿತು! ಇನ್ನು ಮೂರನೆಯದು ನನ್ನ ದೃಷ್ಟಿಯಲ್ಲಿ ನಿಜಕ್ಕೂ ಅದ್ಭುತ ರೋಮಾಂಚನದ ಕಾಕತಾಳೀಯ. ನಿಮಗೆ ಹಾಗನ್ನಿಸುತ್ತದೋ ಇಲ್ಲವೋ ಗೊತ್ತಿಲ್ಲ. ಓದಿನೋಡಿ. ಕಳೆದ ರವಿವಾರ (ಫೆಬ್ರವರಿ 12) ವಿಜಯ ಕರ್ನಾಟಕ ಪತ್ರಿಕೆಯ ಅಂತರ್ಮುಖಿ ಪುಟದಲ್ಲಿ ಮೇಳೈಸಿದ ಸಂಗತಿಯಿದು. ಅವತ್ತಿನ ನಾಲ್ಕೂ ಅಂಕಣಗಳಲ್ಲಿ ಪ್ರಾಣಿಪಕ್ಷಿಗಳ ಕಲರವ! ಪ್ರಾಣಿಸಂಗ್ರಹಾಲಯಕ್ಕೆ ಭೇಟಿಕೊಟ್ಟ ಅನುಭವ! ಹೇಗಂತೀರಾ? ಅಬ್ದುಲ್ ರಶೀದ್ ಅವರ ‘ಕಾಲುಚಕ್ರ’ ಅಂಕಣದಲ್ಲಿ ಕಾಡುಹಂದಿ, ಎತ್ತು/ಹಸು ಮತ್ತು ಆನೆ ಉಲ್ಲೇಖಗೊಂಡಿದ್ದವು. ಎಂ.ಎಸ್.ನರಸಿಂಹಮೂರ್ತಿಯವರ ‘ಅಧಿಕಪ್ರಸಂಗ’ ಅಂಕಣದಲ್ಲಿ ಶೀರ್ಷಿಕೆಯಲ್ಲಿನ ದನವೂ ಸೇರಿದಂತೆ ಕತ್ತೆ, ಕುದುರೆ ಮತ್ತು ಮಂಗಗಳಿದ್ದವು. ಜಿ.ಪಿ.ಬಸವರಾಜು ಅವರ ‘ನೋಟ-ಪಲ್ಲಟ’ ಅಂಕಣದಲ್ಲಿ ಆನೆ, ಹುಲಿ, ಮಂಗ, ಕೋಳಿ, ಬೆಕ್ಕು, ತೋಳ ಮತ್ತು ಜೇನುನೊಣ. ಹಾಗೆಯೇ ಪರಾಗಸ್ಪರ್ಶ ಅಂಕಣದಲ್ಲಿ ಕಾಗೆ, ಹಂಸ, ನವಿಲು, ಕೋಗಿಲೆ, ಪಾರಿವಾಳ, ಗಿಳಿ, ಗುಬ್ಬಚ್ಚಿ, ಗೊರವಂಕ, ಚಿಂಪಾಂಜಿ, ಹುಳಹುಪ್ಪಟೆ, ಕುರಿ, ಕೋಣ, ಸಿಂಹ, ಇರುವೆ, ಮಂಗ, ಗೂಬೆ - ಇವೆಲ್ಲವೂ ಇದ್ದವು. ಅಂದರೆ ಒಂದೇ ಪತ್ರಿಕೆಯ ಒಂದೇ ಸಂಚಿಕೆಯ ಒಂದೇ ಪುಟದಲ್ಲಿ ಪ್ರಕಟವಾದ ನಾಲ್ಕು ಬೇರೆಬೇರೆ ಅಂಕಣಗಳಲ್ಲಿ ವಿಧವಿಧ ಪ್ರಾಣಿಪಕ್ಷಿಗಳು ಕಾಣಿಸಿಕೊಂಡಿದ್ದವು. ಇದು ನಿಜಕ್ಕೂ ಕಾಕತಾಳೀಯ ಅಂತನ್ನಿಸುವುದಿಲ್ಲವೇ? ಅಷ್ಟೇ ಸಾಲದೆಂಬಂತೆ ಅವತ್ತೇ (ಫೆಬ್ರವರಿ 12) ಜೀವವಿಕಾಸವಾದದ ಮಹಾನ್ ಪ್ರತಿಪಾದಕ ಚಾರ್ಲ್ಸ್ ಡಾರ್ವಿನ್ನ ಜನ್ಮದಿನ ಕೂಡ! ಪತ್ರಿಕೆಯ ಒಂದೇ ಪುಟದಲ್ಲಿ ಪ್ರಾಣಿಪಕ್ಷಿಗಳು ಒಟ್ಟುಸೇರಿದ್ದನ್ನು ಹಿರಿಯ ಸ್ನೇಹಿತರೊಬ್ಬರ ಗಮನಕ್ಕೆ ತಂದಿದ್ದೆ. ಅವರೊಬ್ಬ ಪತ್ರಕರ್ತರೂ ಹೌದು. ಅವರು ತಮಾಷೆಯಿಂದ ಏನಂದ್ರು ಗೊತ್ತೇ? ಪತ್ರಿಕೆಗಳ ಮುಖಪುಟದಲ್ಲಿ ದಿನಾ ರಾರಾಜಿಸುತ್ತವಲ್ಲ ಊಸರವಳ್ಳಿಗಳು, ಗೂಬೆಗಳು, ಕೂಪಮಂಡೂಕಗಳು, ದಪ್ಪಚರ್ಮದ ಹೆಗ್ಗಣಗಳು ಮತ್ತು ಕಣ್ಣೀರಿಡುವ ಮೊಸಳೆಗಳು? ಅವುಗಳ ಮುಂದೆ ಇದೇನು ಮಹಾ? ಹೋಗಲಿಬಿಡಿ ಮುಖಪುಟದವರ ಸುದ್ದಿ ನಮಗೇಕೆ? ನಮಗೆ ಇಂತಹ ಸಣ್ಣಪುಟ್ಟ ಸಂಗತಿಗಳಲ್ಲಿನ ಸಡಗರಗಳು, ಕಾಕತಾಳೀಯಗಳಲ್ಲಿನ ಕೌತುಕಗಳೇ ಹೆಚ್ಚು ಆಪ್ಯಾಯಮಾನ. ಮೊಲದ ಮುಖದಂತೆ ಆಕಾರವುಳ್ಳ ಮರದ ಬೊಡ್ಡೆಯ ಪಕ್ಕದಲ್ಲಿ ಮೊಲವೇ ಕಾಣಿಸಿಕೊಂಡು ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಕ್ಷಣಗಳಂಥವು! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.