ಪದ-ಶ್ರಾವ್ಯ

ಈಗ ಆಡಿಯೋ ಟಚ್!

30
Apr 2011
Kannada Bhuvaneshwari in America!
Posted in DefaultTag by sjoshi at 10:45 am

ದಿನಾಂಕ  1 ಮೇ 2011ರ ಸಂಚಿಕೆ...

ಅಮೆರಿಕದ ನೆಲದಲ್ಲಿ ಕನ್ನಡ ಭುವನೇಶ್ವರಿ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

“ಕರ್ನಾಟಕದ ಬ್ಯಾಂಗ್ಲೋರ್‌ನಲ್ಲಂತೂ ಕನ್ನಡದ ಡೆವಲಪ್‌ಮೆಂಟ್ ಬಿಡಿ, ಸರ್ವೈವಲ್ಲೂ ನೋ ಛಾನ್ಸ್. ಅದರ ಆಸೆ ಬಿಟ್ಟಾಗಿದೆ. ದೂರದ ಅಮೆರಿಕದಲ್ಲಿ ಅದೇನೋ ಆವಾಗಾವಾಗ ಕನ್ನಡ ಕಲರವ ಕೇಳಿಬರುತ್ತದಂತೆ. ಏನೂಂತ ನಾನೂ ಒಮ್ಮೆ ನೋಡ್ಕೊಂಡು ಬರ್ಬೇಕು” - ಹೀಗೊಂದು ಆಲೋಚನೆ ಬಂದದ್ದು, ಯಾರಿಗಂತೀರಿ? ಇನ್ನಾರಿಗೂ ಅಲ್ಲ, ಖುದ್ದಾಗಿ ಕನ್ನಡಮಾತೆ ಭುವನೇಶ್ವರಿಗೆ! ಅವಳದು ಇನ್ನೂ ಒಂದು ತರ್ಕಬದ್ಧ ಯೋಚನೆ- “ಕನ್ನಡನೆಲದ ಬೆಂಗಳೂರು ಅಂತೇನಿತ್ತೋ ಅದು ಸಿಲಿಕಾನ್‌ವ್ಯಾಲಿ ಆಯ್ತು; ಕನ್ನಡ ಅಲ್ಲಿಂದ ಕಾಲ್ಕಿತ್ತಿತು. ಆದ್ರೆ ಹೋಗಿಹೋಗಿ ಎಲ್ಲಿಗಂತ ಹೋಗಿರ್ಬಹುದು? ನಿಜವಾದ ಸಿಲಿಕಾನ್ ವ್ಯಾಲಿಗೇ ಹೋಗಿ ಅಲ್ಲೇ ನೆಲೆನಿಂತಿತೋ ಹೇಗೆ ಕೊನೆಗೂ? ಏನಾದರಾಗಲಿ ಕನ್ನಡಕ ಹಾಕಿಯಾದರೂ ಸರಿ ಕನ್ನಡವನ್ನು ಹುಡುಕಿ ತರುತ್ತೇನೆ” - ಭುವನೇಶ್ವರಿಯದು ‘ಬೇ’ ವಿಕ್ರಮನಂಥ ಛಲ. ಆಕೆ ಬಂದಿಳಿದದ್ದೂ ‘ಬೇ’ ಏರಿಯಾಕ್ಕೆ. ಅಮೆರಿಕದ ಕ್ಯಾಲಿಫೋರ್ನಿಯಾ ಸಂಸ್ಥಾನದ ಸಿಲಿಕಾನ್ ವ್ಯಾಲಿ ಪ್ರದೇಶಕ್ಕೆ. ಅದೃಷ್ಟವೋ ಎಂಬಂತೆ ಅಲ್ಲಿ ಅವಳಿಗೆ ಕೇಳಿಸಿದ್ದು ಕನ್ನಡದ ಡಿಂಡಿಮವಷ್ಟೇ ಅಲ್ಲ, ಡೋಲು-ಡಮರು-ಢಕ್ಕೆ!

ಕ್ಷಮಿಸಿ. ಸ್ವಲ್ಪ ನಿಜಾಂಶ, ಒಂಚೂರು ನಾಟಕೀಯತೆ, ಇನ್ನೊಂದು ಕೊಂಚ ಉತ್ಪ್ರೇಕ್ಷೆ ಎಲ್ಲವನ್ನೂ ಹಾಸ್ಯರಸದಲ್ಲಿ ಗೊಟಾಯಿಸಿ ಒಂದು ಸ್ಪೆಷಲ್ ಇಂಟ್ರೊ ಕೊಡೋಣ ಅಂತ ಹಾಗೆ ಬರೆದೆ. ಈ ವಾರಾಂತ್ಯ (ಎ.೩೦ ಮತ್ತು ಮೇ.೧) ಇಲ್ಲಿ ಅಮೆರಿಕದ ಕನ್ನಡಸಾಹಿತ್ಯರಂಗ ಸಂಸ್ಥೆ ಹಮ್ಮಿಕೊಂಡಿರುವ ವಸಂತ ಸಾಹಿತ್ಯೋತ್ಸವ ಕಾರ್ಯಕ್ರಮ. ಅಕ್ಷರಮೋಹಿತರಿಗೆ ಎರಡು ದಿನ ಭರ್ಜರಿಯಾಗಿ ಕನ್ನಡ ಸಾಹಿತ್ಯಸುಗ್ಗಿ. ಇದು ನಡೆಯುತ್ತಿರುವುದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಆಶ್ರಯದಲ್ಲಿ, ಸ್ಯಾನ್‌ಫ್ರಾನ್ಸಿಸ್ಕೊ ನಗರದ ಒಂದು ಭವ್ಯ ಸಭಾಂಗಣದಲ್ಲಿ. ಮುಖ್ಯ ಅತಿಥಿಯಾಗಿ ಕರ್ನಾಟಕದಿಂದ ಬಂದಿದ್ದಾರೆ ಸಾಹಿತಿ ಸುಮತೀಂದ್ರ ನಾಡಿಗ. ಹಾಗೆಯೇ ವಿಶೇಷ ಅತಿಥಿ ಖ್ಯಾತ ನಗೆಬರಹಗಾರ್ತಿ ಭುವನೇಶ್ವರಿ ಹೆಗಡೆ. ಅಲ್ಲಿಗೆ, ಇವತ್ತಿನ ತಲೆಬರಹದಲ್ಲಿ ಮತ್ತು ಪೀಠಿಕೆಯಲ್ಲಿ ಕಂಗೊಳಿಸಿದ ಭುವನೇಶ್ವರಿ ಯಾರು ಅಂತ ನಿಮಗೆ ಗೊತ್ತಾದಹಾಗಾಯ್ತು. ಅಲ್ವೇಮತ್ತೆ, ಹಾಸ್ಯಸಾಹಿತಿ ಅಮೆರಿಕೆಗೆ ಬಂದಿರುವ ಸಮಾಚಾರವನ್ನು ಹಾಸ್ಯದ ಲೇಪವಿಲ್ಲದೆ ತಿಳಿಸುವುದಾದರೂ ಹೇಗೆ?

ಸಾಹಿತ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಕನ್ನಡಸಾಹಿತ್ಯರಂಗದಿಂದ ಆಹ್ವಾನ ಹೋದಾಗ ಭುವನೇಶ್ವರಿ ಹೆಗಡೆ ನನಗೊಂದು ಮಿಂಚಂಚೆ ಕಳಿಸಿದ್ದರು. ‘ಅಮೆರಿಕದ ನೆಲದಲ್ಲಿ ಕನ್ನಡ ಭುವನೇಶ್ವರಿ!’ ಸಬ್ಜೆಕ್ಟ್ ಲೈನ್. ಅದರ ಕೆಳಗೆ, “ಜೋಶಿಯವರೇ, ನನಗೆ ನಿಜಕ್ಕೂ ಹೆದರಿಕೆ ಆಗ್ತಿದೆ. ಇದುವರೆಗೂ ವಿಮಾನ ಹತ್ತಿ ಹೊರದೇಶಕ್ಕೆ ಹಾರಿದವಳಲ್ಲ. ನನ್ನತ್ರ ಪಾಸ್‌ಪೋರ್ಟ್ ಸಹ ಇಲ್ಲ. ವೀಸಾ ಸಿಗ್ಬೇಕಿದ್ರೆ ಇಂಟರ್‌ವ್ಯೂ ಬೇರೆ ಇದೆಯಂತೆ. ಅಮೆರಿಕಾ ಅಂದ್ರೆ ಹಾಗೆಹೀಗೆ ಅಂತೆಲ್ಲ ಕೇಳಿದ್ದೇನೆ. ಹೇಗೋ‌ಏನೋ. ನೀವುಗಳೆಲ್ಲ ಅಲ್ಲಿದ್ದೀರಂತ ಒಪ್ಪಿದ್ದೇನೆ.” ಅವರಿಗೆ ಧೈರ್ಯ ತುಂಬುತ್ತ ನಾನು ಬರೆದಿದ್ದೆ- “ಭುವನಕ್ಕೇ ಈಶ್ವರಿಯಾದ ನಿಮಗ್ಯಾಕೆ ಭಯ? ಏನೂ ಆಗೋದಿಲ್ಲ, ನಗುನಗುತ್ತಲೇ ಬನ್ನಿ, ನಮಗೂ ಒಂದಿಷ್ಟು ನಗು ಕಟ್ಟಿಕೊಂಡು ತನ್ನಿ!” ಮೊನ್ನೆ ಮಂಗಳೂರಿನಿಂದ ಹೊರಡಲು ಒಂದುವಾರ ಇರುವಾಗ ಮತ್ತೆ ಫೋನ್ ಮಾಡಿದ್ದರು, “ಆ ದೇಶದಲ್ಲಿ ಹಣದ ವಿಚಾರ ಎಲ್ಲ ಹೇಗೆ? ಕ್ರೆಡಿಟ್‌ಕಾರ್ಡ್ ಇದ್ದರೆ ಒಳ್ಳೆಯದಂತಾರೆ. ನನ್ನತ್ರ ಕ್ರೆಡಿಟ್‌ಕಾರ್ಡೂ ಇಲ್ಲ. ಇವರೆಂಥ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಅನ್ಬೇಡಿ! ನನ್ನದು ನಗದು ವ್ಯವಹಾರ. ನಗದು ಮತ್ತು ನಗೋದು/ನಗಿಸೋದು ಎರಡೇ ಗೊತ್ತು.”

ಅಷ್ಟು ಪಾಪದ ಪುಣ್ಯಾತ್‌ಗಿತ್ತಿ ಭುವನೇಶ್ವರಿ ಹೆಗಡೆ ಇಲ್ಲೀಗ ವಸಂತ ಸಾಹಿತ್ಯೋತ್ಸವದ ಪ್ರಮುಖ ಆಕರ್ಷಣೆ. ದೀಪಾವಳಿ ವಿಶೇಷಾಂಕಗಳಲ್ಲಿ, ನಿಯತಕಾಲಿಕಗಳಲ್ಲಿ ಅವರ ಸದಭಿರುಚಿಯ ಹಾಸ್ಯಬರಹಗಳನ್ನು ಆನಂದಿಸಿಯಷ್ಟೇ ಗೊತ್ತಿದ್ದವರಿಗೆ, ಅಥವಾ ನನ್ನಹಾಗೆ ಇಮೇಲ್ ಮತ್ತು ಫೋನ್‌ನಲ್ಲಷ್ಟೇ ಪರಿಚಯವಿದ್ದವರಿಗೆ ಈಗ ಮುಖತಾ ಭೇಟಿಯಾಗುವ ಅವಕಾಶ. ಅಸಲಿಗೆ ಸಾಹಿತ್ಯರಂಗ ಎರಡುವರ್ಷಗಳಿಗೊಮ್ಮೆ ನಡೆಸಿಕೊಂಡು ಬಂದಿರುವ  ಸಾಹಿತ್ಯೋತ್ಸವಗಳ ವೈಶಿಷ್ಟ್ಯವೇ ಅದು. ಇವುಗಳ ಅರ್ಥಪೂರ್ಣತೆ, ಸರಳತೆ ಮತ್ತು ಅಚ್ಚುಕಟ್ಟುತನ ನನಗೆ ತುಂಬ ಇಷ್ಟವಾಗುತ್ತದೆ. ಇಲ್ಲಿ ಭೀಷಣವಾದ ಭಾಷಣಗಳ ಉಪಟಳವಿಲ್ಲ. ಹಾರ-ತುರಾಯಿ ಸನ್ಮಾನಗಳ ಆಡಂಬರವಿಲ್ಲ. ಮೆರವಣಿಗೆ ಬಾಜಾಭಜಂತ್ರಿಗಳಿಲ್ಲ. ಸಮ್ಮೇಳನದ ಅಧ್ಯಕ್ಷರು ಅಥವಾ ಉದ್ಘಾಟಕರು ಯಾರು, ಅವರನ್ನೇ ಏಕೆ ಆಯ್ದುಕೊಂಡದ್ದು ಮುಂತಾಗಿ ಕೆಲಸಕ್ಕೆ ಬಾರದ ಚರ್ಚೆಗಳಿಲ್ಲ. ಏಕೆಂದರೆ ಆ ರೀತಿಯ ಪದವಿಗಳೇ ಇಲ್ಲ. ಊಟ-ತಿಂಡಿಗೆ ನೂಕುನುಗ್ಗಲು ಅವ್ಯವಸ್ಥೆಗಳ ಪಡಿಪಾಟಲಿಲ್ಲ. ಮತ್ತೆಂಥ ಸಮ್ಮೇಳನರೀ ಅದು? ಎನ್ನಬಹುದು ನೀವು. ಬಹುಶಃ ಸಮ್ಮೇಳನಗಳೆಂದರೆ ಗೊಂದಲಮಯ ಎನ್ನುವುದು ನಮಗೆ ರೂಢಿಯಾಗಿಬಿಟ್ಟಿದೆ. ಹಾಗೆನೋಡಿದರೆ ಇಲ್ಲಿ ಅಮೆರಿಕದಲ್ಲಿ ಕಾಲಾನುಕಾಲಕ್ಕೆ ನಡೆಯುವ ಬೇರೆ ‘ಕನ್ನಡ ಜಾತ್ರೆ’ಗಳೂ ಗೊಂದಲಗಳಿಂದ ಮುಕ್ತವೇನಲ್ಲ.

vasanta-sahityotsava-2011.jpg

ಕನ್ನಡಸಾಹಿತ್ಯರಂಗದ ಈಹಿಂದಿನ ನಾಲ್ಕು ಸಮಾವೇಶಗಳಲ್ಲೂ ನಾನು ಭಾಗವಹಿಸಿದ್ದೇನೆ. ಅದರ ಸವಿನೆನಪುಗಳನ್ನು ಮೆಲುಕುಹಾಕಿದಾಗ ನನಗೆ ಹೆಮ್ಮೆಯೇ ಆಗುತ್ತದೆ. ಒಂದು ಸಂಕ್ಷಿಪ್ತ ಸಿಂಹಾವಲೋಕನ ಮಾಡುವುದಾದರೆ- ಮೊತ್ತಮೊದಲ ಸಾಹಿತ್ಯೋತ್ಸವ ಫಿಲಡೆಲ್ಫಿಯಾದಲ್ಲಿ ೨೦೦೪ರಲ್ಲಿ ನಡೆಯಿತು; ಅದು ಕುವೆಂಪು ಜನ್ಮಶತಾಬ್ದಿಯ ವರ್ಷ. ಕುವೆಂಪು ಪಟ್ಟಶಿಷ್ಯ ಡಾ.ಪ್ರಭುಶಂಕರ ಮುಖ್ಯ ಅತಿಥಿಯಾಗಿ ಬಂದಿದ್ದರು. ಅಮೆರಿಕನ್ನಡಿಗ ಬರಹಗಾರರು ಕುವೆಂಪು ಮತ್ತವರ ಕೃತಿಗಳ ಕುರಿತು ಬರೆದ ಲೇಖನಗಳ ಸಂಕಲನಗ್ರಂಥ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಬಿಡುಗಡೆಯಾಗಿತ್ತು. ಎರಡನೇ ಸಮ್ಮೇಳನ ಲಾಸ್‌ಏಂಜಲೀಸ್‌ನಲ್ಲಿ. ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿ. ‘ಆಚೀಚೆಯ ಕಥೆಗಳು’ ಎಂಬ ಸಣ್ಣಕತೆಗಳ ಸಂಕಲನ ಆವಾಗಿನ ಕೃತಿ. ಮೂರನೇ ಸಮಾವೇಶ ಷಿಕಾಗೊದಲ್ಲಿ. ಹಾಸ್ಯಸಾಹಿತ್ಯ ಆ ಸರ್ತಿಯ ಥೀಮ್. ಪ್ರೊ.ಅ.ರಾ.ಮಿತ್ರ ಮುಖ್ಯ ಅತಿಥಿ. ಖ್ಯಾತ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಕೂಡ ಬಂದಿದ್ದರು. ‘ನಗೆಗನ್ನಡಂ ಗೆಲ್ಗೆ’ ಎಂಬ ಮೌಲ್ಯಯುತ ಉದ್ಗ್ರಂಥ ಆವಾಗಿನ ಪ್ರಕಟಣೆ. ನಾಲ್ಕನೆಯ ಸಮಾವೇಶ ನಡೆದದ್ದು ವಾಷಿಂಗ್ಟನ್‌ನಲ್ಲಿ. ಡಾ.ವೀಣಾ ಶಾಂತೇಶ್ವರ ಮತ್ತು ವೈದೇಹಿ ಮುಖ್ಯ ಅತಿಥಿಗಳು. ‘ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು’ ವಿಮರ್ಶಾಲೇಖನಗಳ ಸಂಗ್ರಹದ ಕೃತಿ ಬಿಡುಗಡೆ. ಇದೀಗ ಐದನೆಯ ಸಮ್ಮೇಳನ ಸಂದರ್ಭದಲ್ಲೂ ಒಂದು ಒಳ್ಳೆಯ ಗ್ರಂಥ ಬಿಡುಗಡೆಯಾಗುತ್ತಿದೆ- ‘ಮಥಿಸಿದಷ್ಟೂ ಮಾತು’ ಇದು ಅಮೆರಿಕನ್ನಡಿಗ ಲೇಖಕಲೇಖಕಿಯರ ಲಲಿತಪ್ರಬಂಧಗಳ ಸಂಕಲನ.

ಆಗಲೇ ಹೇಳಿದಂತೆ ಕನ್ನಡಸಾಹಿತ್ಯರಂಗದ ಕಾರ್ಯಕ್ರಮಗಳಲ್ಲಿ ಎದ್ದುಕಾಣುವ ಅಂಶಗಳೆಂದರೆ ಅರ್ಥಪೂರ್ಣತೆ, ಶಿಸ್ತು, ಸಮಯಪಾಲನೆ ಮತ್ತು ಅದರಿಂದಾಗಿ ಸಹಜವಾಗಿ ಮೂಡಿಕೊಳ್ಳುವ ಒಂದುರೀತಿಯ ಅಚ್ಚುಕಟ್ಟುತನ. ಎಷ್ಟೆಂದರೂ ಎಚ್.ವೈ.ರಾಜಗೋಪಾಲ್ ಅವರ ಕಲ್ಪನೆಯ ಕೂಸಿದು. ಅವರ ವ್ಯಕ್ತಿತ್ವದ್ದೇ ಮಾದರಿ ಇದರದೂ. ಇಲ್ಲಿನ ‘ಇಲ್ಲ’ಗಳ ಪಟ್ಟಿ ಮಾಡಿದಂತೆಯೇ, ಏನೇನು ಇರುತ್ತದೆ ಎಂಬುದನ್ನೂ ತಿಳಿಸಿದರೆ ನಿಮಗೊಂದು ಕಲ್ಪನೆ ಬರುತ್ತದೆ. ಅತಿಥಿಗಳ ಭಾಷಣ ಮತ್ತು ಅವರೊಂದಿಗಿನ ಸಂವಾದ ಅಷ್ಟೇ‌ಅಲ್ಲದೆ ಇತರ ಸಾಹಿತ್ಯಿಕ ಕಾರ್ಯಕ್ರಮಗಳೂ ಇರುತ್ತವೆ. ಹಿರಿಯ ಸಾಹಿತಿಗಳ ಸ್ಮರಣೆ, ವಿಶೇಷ ಗ್ರಂಥದ ಬಿಡುಗಡೆ, ಕವಿಗೋಷ್ಠಿ, ಇಲ್ಲಿನ ಬರಹಗಾರರ ಕೃತಿಗಳ ಪರಿಚಯ, ಅಮೆರಿಕದಲ್ಲಿನ ಸಾಹಿತ್ಯ ವಿಚಾರಗೋಷ್ಠಿಗಳ ಬಗ್ಗೆ ವಿವರಣೆ, ಕನ್ನಡ ಕಲಿಯಲು ಕಾಲೇಜುಮಟ್ಟದಲ್ಲಿ ಇಲ್ಲಿರುವ ಅವಕಾಶಗಳು, ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳ ಕಾರ್ಯಕ್ರಮಗಳು, ಇಲ್ಲಿನ ಬರಹಗಾರರ ಪುಸ್ತಕಗಳನ್ನು ಕೊಳ್ಳಲು ಅನುಕೂಲವಾಗುವಂತೆ ಪುಸ್ತಕಪ್ರದರ್ಶನ ಮತ್ತು ಮಾರಾಟ. ಇವಲ್ಲದೇ ಉತ್ತಮವಾದೊಂದು ನಾಟಕ ಪ್ರದರ್ಶನ (ಈಬಾರಿ ಪುತಿನ ಅವರ ‘ಹರಿಣಾಭಿಸರಣ’ ನಾಟಕ; ಕ್ಯಾಲಿಫೋರ್ನಿಯಾ ಕನ್ನಡಿಗರಿಂದ ‘ಕಂಸವಧೆ’ ಯಕ್ಷಗಾನ). ಗೀತ-ಸಂಗೀತ-ನೃತ್ಯಗಳ ಹಿತಮಿತ ಮಿಶ್ರಣ. ಜತೆಗೆ ರುಚಿರುಚಿಯಾದ ರಸಭೋಜನ. ಒಟ್ಟಿನಲ್ಲಿ ಸುಗಂಧಭರಿತ ತಂಗಾಳಿ ಹಿತವಾಗಿ ಬೀಸುವ ಉದ್ಯಾನದಲ್ಲಿ ಒಂದೆರಡು ಗಂಟೆ ಕಳೆವಾಗಿನಂಥದೇ ಅನುಭವ. ಒಂದಾದ ಮೇಲೊಂದರಂತೆ, ಯಾವುದೂ ಅತಿಯೆನಿಸದಂತೆ, ಆಸ್ವಾದನೆಗೆ ಅವಕಾಶಗಳು. ಆಕಳಿಕೆಯ ಮಾತಿಲ್ಲ.

ಭೇಷ್ ಎನ್ನದೆ ಭುವನೇಶ್ವರಿಗೆ ಬೇರೆ ಆಯ್ಕೆಯೇ ಇಲ್ಲ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.