Episodes
Saturday Nov 26, 2011
Laddu And Lavanga
Saturday Nov 26, 2011
Saturday Nov 26, 2011
ದಿನಾಂಕ 27 ನವೆಂಬರ್ 2011ರ ಸಂಚಿಕೆ...
ಲಡ್ಡುವಿನಲ್ಲಿ ಲವಂಗ ಇಲ್ಲ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕನ್ನಡ ಸಿನಿಮಾದಲ್ಲಿ ಕನ್ನಡತನ ಇಲ್ಲವಂತೆ. ಮೊನ್ನೆ ಬೆಂಗಳೂರಿನಲ್ಲಿ ಒಂದು ವಿಚಾರಗೋಷ್ಠಿಯಲ್ಲಿ ಈರೀತಿ ವಿಷಾದ ವ್ಯಕ್ತವಾಯ್ತೆಂದು ಇದೇ ಪತ್ರಿಕೆಯಲ್ಲಿ ವರದಿಯಾಗಿತ್ತು. ‘ಕನ್ನಡತನ ಎಂಬ ಪದದ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾಗಳಲ್ಲಿ ಈ ಅಂಶವೇ ಇಲ್ಲವಾಗುತ್ತಿದೆ’ - ಇದು ಗೋಷ್ಠಿಯ ವಿಚಾರಮಂಥನದಲ್ಲಿ ಮೂಡಿಬಂದ ಒಟ್ಟಾರೆ ಅಭಿಪ್ರಾಯ. ಸಮುದ್ರಮಥನದ ಹೋಲಿಕೆ ಕೊಡುವುದಾದರೆ ಗೋಷ್ಠಿಯಲ್ಲಿ ಗೋಚರಿಸಿದ ಹಾಲಾಹಲ ಎಂದೂ ಹೇಳಬಹುದು. ಬಹುಶಃ ಒಪ್ಪತಕ್ಕ ವಿಚಾರವೇ. ಕಹಿಸತ್ಯ ಎನ್ನಬಹುದೇನೊ. ಇತ್ತೀಚಿನ ಕನ್ನಡ ಚಿತ್ರಗಳು ಎಷ್ಟು ಕೆಟ್ಟದಾಗಿ ಇವೆ ಎಂಬುದರ ಸರಿಯಾದ ಕಲ್ಪನೆ ನನಗಿಲ್ಲ. ಆದರೆ ಹಳೆಯದೆಲ್ಲ ಒಳ್ಳೆಯದು ಹೊಸತೆಲ್ಲ ಕೆಟ್ಟದು ಎಂದು ಸಾರಾಸಗಟಾಗಿ ತಿರಸ್ಕರಿಸುವ ಧಾಟಿಯಲ್ಲಿ ವಾದ ಮಾಡುವುದೂ ನನಗೆ ಇಷ್ಟವಿಲ್ಲ. ಹಾಗಾಗಿ, ಕನ್ನಡ ಸಿನಿಮಾದಲ್ಲಿ ಕನ್ನಡತನ ಇಲ್ಲವಾಗಿದೆಯೋ ಇನ್ನೂ ಜೀವಂತವಾಗಿ ಇದೆಯೋ ಎಂಬ ಜಿಜ್ಞಾಸೆಯ ಗಹನ ಚಿಂತನೆಯನ್ನು ಬದಿಗಿಟ್ಟು (ಇದು ಪಲಾಯನವಾದ ಅಲ್ಲ, ಇತಿಮಿತಿಗಳ ಅರಿವು) ಇವತ್ತು ಲೈಟಾಗಿ ಒಂದು ಲಹರಿಯನ್ನು ಹರಿಸಬೇಕೆನ್ನುವುದು ನನ್ನ ಯೋಜನೆ. ಏಕೆಂದರೆ ‘ಕನ್ನಡ ಸಿನಿಮಾದಲ್ಲಿ ಕನ್ನಡತನವಿಲ್ಲ’ ಎಂದು ಆ ಸುದ್ದಿಯ ತಲೆಬರಹ ಇತ್ತಲ್ವಾ ಅದು ನನ್ನ ಗಮನವನ್ನು ವಿಶೇಷವಾಗಿ ಸೆಳೆದಿದೆ. ಅದರಲ್ಲಿ ಪರಾಗ ಸ್ಪರ್ಶಿಸಲು ಸಾಕಷ್ಟು ಸರಕು ಇದೆಯೆಂದು ಥಟ್ಟನೆ ಹೊಳೆದಿದೆ. ಆದ್ದರಿಂದ ನೀವು ಸೈ ಎಂದರೆ ಒಂದು ಕಾಡುಹರಟೆಯ ರೂಪದಲ್ಲಿ ಇದನ್ನು ನಿಮ್ಮೊಡನೆ ಹಂಚಿಕೊಳ್ಳುವವನಿದ್ದೇನೆ. ಅಸಲಿಗೆ ಕನ್ನಡ ನಾಡಿನ ರಾಜಧಾನಿಯಲ್ಲೇ ಕನ್ನಡತನ ಕಾಣೆಯಾಗುತ್ತಿದೆ ಎಂಬ ಕೂಗು ಕೇಳಿಕೇಳಿ ಕ್ಲೀಷೆ ಆಗಿಹೋಗಿದೆ. ಅಂದಮೇಲೆ ಕನ್ನಡ ಸಿನಿಮಾಗಳ ಬಗ್ಗೆ ಮಾತ್ರ ಯಾಕೆ ದೂರು? ಬಹುಶಃ ಈಗಿನ ಕಾಲವೇ ಹಾಗೆ. ನೀವು ‘ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡಿ...’ ಲೇಟೆಸ್ಟ್ ತಮಿಳು ಹಾಡನ್ನು ಕೇಳಿದ್ದೀರಾ? ರಜನಿಕಾಂತ್ ಅಳಿಯ ಧನುಷ್ ಎಂಬಾತ ಮ್ಯೂಸಿಕ್ ಕಂಪೋಸ್ ಮಾಡಿರೋದಂತೆ. ಅಮಿತಾಭ್ ಬಚ್ಚನ್ ಸೇರಿದಂತೆ ಯುವಪೀಳಿಗೆಗೆಲ್ಲ ಈ ಹಾಡಿನ ಕ್ರೇಜ್ ಹತ್ತಿದೆಯಂತೆ. ಅದನ್ನು ಶುದ್ಧತಮಿಳರು ಯಾರಾದರೂ ಕೇಳಿದರೆ/ನೋಡಿದರೆ ‘ತಮಿಳು ಸಿನಿಮಾದಲ್ಲಿ ತಮಿಳುತನವಿಲ್ಲ’ ಎಂದು ತಳಮಳಗೊಳ್ಳುವುದು ಗ್ಯಾರೆಂಟಿ. ಹೋಗಲಿ, ಅದು ಪ್ಯೂರ್ ಇಂಗ್ಲಿಷ್ನಲ್ಲಾದರೂ ಇದೆಯೇ? ಶೇಕ್ಸ್ಪಿಯರ್ ಏನಾದ್ರೂ ಕೇಳಿಸಿಕೊಂಡರೆ ಟೋಟಲ್ ಶೇಕ್ಆಫ್ ಆಗಿಹೋದಾನು! ಒಟ್ಟಿನಲ್ಲಿ ಯಾವುದರಲ್ಲಿ ಏನನ್ನು ನಿರೀಕ್ಷಿಸುತ್ತೇವೋ ಅದು ಅದರಲ್ಲಿ ಇಲ್ಲ ಮತ್ತು ಇರುವುದಿಲ್ಲ ಎಂದು ತಿಳಿದುಕೊಳ್ಳುವುದೇ ಕ್ಷೇಮ. ಅಷ್ಟಕ್ಕೂ ಕೊಲವೆರಿ ಹಾಡಿನ ಕೊನೆಯ ಸಾಲು ಅದನ್ನೇ ಮಾರ್ಮಿಕವಾಗಿ ಹೇಳುತ್ತದೆ- ವಿ ಡೋಂಟ್ ಹ್ಯಾವ್ ಚಾಯ್ಸ್. ತಮಿಳು ಸಿನಿಮಾ ಪ್ರಸ್ತಾಪ ಬಂತಾದ್ದರಿಂದ ‘ಸಿಂಧುಭೈರವಿ’ ಎಂಬ ಸ್ವಲ್ಪ ಹಳೆಯ ತಮಿಳು ಚಿತ್ರದ ಹಾಡಿನ ಸಾಲು ಇಲ್ಲಿ ನನಗೆ ನೆನಪಾಗುತ್ತಿದೆ. ‘ಪೂಮಾಲೆ ವಾಂಗಿವಂದಾನ್ ಪೂಕ್ಕಳಿಲ್ಲಯೇ...’ - ಇದು 80ರ ದಶಕದಲ್ಲಿ ದೂರದರ್ಶನದಲ್ಲಿ ಭಾನುವಾರ ಮಧ್ಯಾಹ್ನ ಅಮೃತಾಂಜನ್ ಪ್ರಾಯೋಜಕತ್ವದಲ್ಲಿ ಪ್ರಾದೇಶಿಕ ಚಲನಚಿತ್ರ ಪ್ರಸಾರವಾಗುತ್ತಿದ್ದಾಗ ಒಮ್ಮೆ ಬಂದಿತ್ತು. ವಿಶೇಷವಾಗಿ ಆ ಹಾಡಿನ ಆ ಒಂದು ಸಾಲಿನ ಇಂಗ್ಲಿಷ್ ಸಬ್ಟೈಟಲ್ ಒಂಥರ ಕಾಡುವ ಸಾಲಿನಂತೆ ನನ್ನನ್ನು ಕಾಡಿತ್ತು. He was garlanded. Alas! with no flowers! ಬಹುಶಃ ಸಿಂಧುಭೈರವಿ ಚಿತ್ರದ ನಾಯಕನ ಸ್ಥಿತಿಯನ್ನು ಆ ಸಾಲು ಸಮರ್ಥವಾಗಿ ಪ್ರತಿಬಿಂಬಿಸಿದ್ದಿರಬೇಕು. ‘ಹೂಗಳಿಲ್ಲದ ಹೂಮಾಲೆ...’ - ವ್ಹಾಟ್ ಎ ಬ್ಯೂಟಿಫುಲ್ ರೂಪಕಾಲಂಕಾರ! ‘ವಾಂಗಿ ವಂದಾನ್’ ಎನ್ನುವಾಗ ನನಗೆ ವಾಂಗಿಭಾತ್ ನೆನಪಾಗೋದು. ಅದಕ್ಕೆ ವಾಂಗಿಭಾತ್ ಎಂಬ ಹೆಸರು ಬಂದದ್ದೇ ಬದನೆ (ಮರಾಠಿಯಲ್ಲಿ ‘ವಾಂಗಿ’) ಹಾಕಿ ಮಾಡುವುದರಿಂದ. ಬದನೆ ಇಷ್ಟವಿಲ್ಲದವರು (ಅಂಥವರು ತುಂಬಾ ಮಂದಿ ಇದ್ದಾರೆ ಪ್ರಪಂಚದಲ್ಲಿ) ಹೂಕೋಸು, ಚವಳಿಕಾಯಿ ಮುಂತಾದ ಬೇರೆ ತರಕಾರಿ ಹಾಕಿ ವಾಂಗಿಭಾತ್ ಮಾಡುವುದೂ ಇದೆ. ಅದು ‘ವಾಂಗಿ ಇಲ್ಲದ ವಾಂಗಿಭಾತ್’! ನನ್ನ ಸ್ನೇಹಿತನೊಬ್ಬನ ಫೇವರಿಟ್ ‘ಚಿಕನ್ಬಿರ್ಯಾನಿ ವಿದೌಟ್ ಚಿಕನ್’. ಅವನಿಗೆ ಆ ಮಸಾಲೆ ಪರಿಮಳ ಮಾತ್ರ ಇಷ್ಟವಂತೆ, ಅದರಲ್ಲಿ ಚಿಕನ್ ತುಂಡುಗಳು ಅವನಿಗೆ ಹಿಡಿಸೋದಿಲ್ಲವಂತೆ. ಇರಲಿ, ಬ್ಯಾಕ್ ಟು ಬದನೆಗೆ ಬಂದರೆ, ಬ್ರಿಟಿಷ್/ಇಂಡಿಯನ್ ಇಂಗ್ಲಿಷ್ನಲ್ಲಿ ಮಾತ್ರ ಬದನೆಗೆ ಬ್ರಿಂಜಾಲ್ ಎನ್ನುವುದು. ಅಮೆರಿಕನ್ ಇಂಗ್ಲಿಷ್ನಲ್ಲಿ ‘ಎಗ್ಪ್ಲಾಂಟ್’ ಎನ್ನುತ್ತಾರೆ. ಇಲ್ಲಿನ ಅಡುಗೆಯಲ್ಲಿ ಅದು ತುಂಬಾ ಬಳಕೆಯಾಗುತ್ತದೆ. ‘ಎಗ್ಪ್ಲಾಂಟ್ ಪರ್ಮೇಸಾನ್’ ಅಂತೊಂದು ಜನಪ್ರಿಯ ಐಟಂ, ಸಸ್ಯಾಹಾರಿಗಳಿಗೂ ಸಲ್ಲುತ್ತದೆ. ಆದರೆ ಎಗ್ಗನ್ನೂ ತಿನ್ನದ ನನ್ನಂಥವರು ಇಲ್ಲಿಗೆ ಬಂದ ಹೊಸತರಲ್ಲಿ ‘ಎಗ್ಪ್ಲಾಂಟ್ನಲ್ಲಿ ಖಂಡಿತವಾಗಿಯೂ ಎಗ್ ಇಲ್ಲ ತಾನೆ?’ ಎಂದು ಎರಡೆರಡು ಬಾರಿ ಕೇಳಿ ಖಾತ್ರಿಪಡಿಸಿಕೊಳ್ಳುತ್ತಾರೆ. ಅದೇವೇಳೆ ‘ಪೆಪ್ಪರೋನಿ ಪಿಜ್ಜಾ’ವನ್ನು ಪೆಪ್ಪರ್ ಓನ್ಲಿ ಪಿಜ್ಜಾ ಎಂದುಕೊಂಡು ಮೋಸಹೋಗುತ್ತಾರೆ. ಅಮೆರಿಕನ್ ಇಂಗ್ಲಿಷ್ನಲ್ಲಿ ಬೇರೆಯೂ ಸುಮಾರೆಲ್ಲ ವಿಚಿತ್ರಗಳಿವೆ. ಆದರೆ ಈ ಬರಹದಲ್ಲಿ ಅವುಗಳ ಪಟ್ಟಿ ಮಾಡಿದರೆ ವಿಷಯಾಂತರವಾಗುತ್ತದೆ. ಒಂದೇಒಂದು ಎಕ್ಸಾಂಪಲ್ ಹೇಳುತ್ತೇನೆ- ಡ್ರೈವ್ವೇ ಮತ್ತು ಪಾರ್ಕ್ವೇ. ಮನೆಯ ಮುಂದೆ ಕಾರು ಪಾರ್ಕ್ ಮಾಡುವ ಜಾಗಕ್ಕೆ ಡ್ರೈವ್ವೇ ಎನ್ನುತ್ತಾರೆ; ಊರಿನ ಮೂಲಕ ಹಾದುಹೋಗುವ ಎಕ್ಸ್ಪ್ರೆಸ್ ಹೆದ್ದಾರಿಗೆ ಪಾರ್ಕ್ವೇ ಎನ್ನುತ್ತಾರೆ. ಅಂದರೆ ಡ್ರೈವ್ವೇಯಲ್ಲಿ ಪಾರ್ಕ್ ಮಾಡೋದು; ಪಾರ್ಕ್ವೇಯಲ್ಲಿ ಡ್ರೈವ್ ಮಾಡೋದು! ಸರಿ, ಮತ್ತೆ ಅಡುಗೆ-ಊಟದ ವಿಚಾರಕ್ಕೇ ಬರೋಣ. ಎಗ್ಪ್ಲಾಂಟ್ನಲ್ಲಿ ಹೇಗೆ ಎಗ್ ಇಲ್ಲವೋ, ಹಾಗೆಯೇ ಲೇಡಿಸ್ಫಿಂಗರ್ (ಬೆಂಡೆಕಾಯಿ)ನಲ್ಲಿ ಲೇಡಿಯೂ ಇಲ್ಲ ಅವಳ ಫಿಂಗರ್ರೂ ಇರುವುದಿಲ್ಲ. ಮೈಸೂರ್ಪಾಕಿನಲ್ಲೂ ಅಷ್ಟೇ- ಮೈಸೂರೂ ಇಲ್ಲ, ಪಾಕಿಸ್ತಾನವೂ ಇಲ್ಲ. ಅಂತೆಯೇ ‘ಹುಳಿಯಲ್ಲಿ ಹೋಳಿಲ್ಲ’ವನ್ನೂ ಗಮನಿಸಬೇಕು. ಒಳ್ಳೆಯ ರುಚಿಕರ ತರಕಾರಿ ಹಾಕಿ ಮಧ್ಯಾಹ್ನಕ್ಕೂ ಸಂಜೆಗೂ ಆಗುವಂತೆ ಹುಳಿ ಮಾಡಿದರೆ ಕೆಲವೊಮ್ಮೆ ಮಧ್ಯಾಹ್ನವೇ ಹೋಳುಗಳೆಲ್ಲ ಖಾಲಿಯಾಗುವುದಿದೆ. ರಾತ್ರೆಗೆ ಹೋಳುಗಳಿಲ್ಲದ ಹುಳಿ. ಅದನ್ನು ಹುಳಿ ಎನ್ನಬೇಕೇ ಸಾರು ಎನ್ನಬಹುದೇ? ಸಾರಿನಲ್ಲಿ ಬೇಳೆಯೂ ಇಲ್ಲದಿದ್ದರೆ ಅದನ್ನು ಸಾರು ಎನ್ನಬೇಕೇ ಬಗ್ಗಡದ ನೀರು ಎನ್ನಬಹುದೇ? ನಾಲ್ಕೈದು ವರ್ಷಗಳ ಹಿಂದೆ ಒಮ್ಮೆ ಇಲ್ಲಿ ತೊಗರಿ ಬೇಳೆಗೆ ಬಂಗಾರಕ್ಕಿಂತಲೂ ಹೆಚ್ಚು ಬೆಲೆಯಾಗಿದ್ದಾಗ ಬೇಳೆ ಇಲ್ಲದೆ ಸಾರು ಮಾಡುವ ಪದ್ಧತಿ ಶುರು ಆಗಿತ್ತು. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ‘ಒಂದು ಎರಡು ಬಾಳೆಲೆ ಹರಡು...’ ಪದ್ಯದ ‘ಐದು ಆರು ಬೇಳೆಸಾರು’ ಸಾಲನ್ನು ‘ಐದು ಆರು ಬೇಳೆ ಇಲ್ಲದ ಸಾರು’ ಎಂದು ತಿದ್ದಿಕೊಳ್ಳುವ ನಿರ್ಧಾರವಾಗಿತ್ತು. ಕೊನೆಯದಾಗಿ, ಇವತ್ತಿನ ಶೀರ್ಷಿಕೆಯಲ್ಲಿನ ಲಡ್ಡು-ಲವಂಗ ಸಂಗತಿಯೇನು ಎಂಬ ನಿಮ್ಮ ಕುತೂಹಲಕ್ಕೆ ಈಗ ಉತ್ತರ ಕೊಡುತ್ತೇನೆ. ನನ್ನ ಹಿರಿಯ ಮಿತ್ರರೂ ವಾಷಿಂಗ್ಟನ್ ನಿವಾಸಿಯೂ ಆಗಿರುವ ಡಾ.ಮೈ.ಶ್ರೀ.ನಟರಾಜ ಅವರದೊಂದು ಸುಪ್ರಸಿದ್ಧ ಕಿರುಪ್ರಬಂಧವಿದೆ, ‘ಕೂಟವನ್ನು ಕೊಲ್ಲುವುದು ಹೇಗೆ?’ ಎಂದು ಅದರ ತಲೆಬರಹ. ಕನ್ನಡ ಕೂಟಗಳೂ ಸೇರಿದಂತೆ ಸಾಮಾನ್ಯವಾಗಿ ಅಂತಹ ಕೂಟಗಳಲ್ಲೆಲ್ಲ (ಅಮೆರಿಕದಲ್ಲಿ ಅಂತಷ್ಟೇ ಅಲ್ಲ, ಪ್ರಪಂಚದಲ್ಲಿ ಎಲ್ಲೇ ಆದರೂ) ಸೇರಿಕೊಳ್ಳುವ ಕೆಲವು ಋಣಾತ್ಮಕ ಶಕ್ತಿಗಳ ಬಗ್ಗೆ ಸಖತ್ ತಮಾಷೆಯಾಗಿ ಬರೆದಿರುವ ನಗೆಬರಹ. ಅದರಲ್ಲಿ ಕೂಟವನ್ನು ಕೊಲ್ಲುವ ಹತ್ತು ತಂತ್ರಗಳನ್ನು ವಿವರಿಸಲಾಗಿದೆ. ಪಟ್ಟಿಯಲ್ಲಿನ ಒಂಬತ್ತನೆಯ ಸೂತ್ರದ ಸಾರಾಂಶ(ಹುಳಿಯಂಶ)ವನ್ನಷ್ಟೇ ಇಲ್ಲಿ ಕೊಡುತ್ತಿದ್ದೇನೆ- “ಕೂಟದವರು ಕಾರ್ಯಕ್ರಮ ಏರ್ಪಡಿಸಿದರೆ ಖಂಡಿತ ಹೋಗಿ. ಬಿಟ್ಟಿ ಕೂಳಿದ್ದರೆ ಮಾತ್ರ. ಆದಷ್ಟು ಮಟ್ಟಿಗೆ ಊಟದ ಸಮಯಕ್ಕೆ ಸರಿಯಾಗಿ ಹೋಗಿ. ಬೇರಾವ ಕಾರ್ಯಕ್ರಮದಲ್ಲೂ ನಿಮ್ಮ ಅಮೂಲ್ಯವಾದ ವೇಳೆಯನ್ನು ಹಾಳು ಮಾಡಿಕೊಳ್ಳದೆ ಉಪಾಯವಾಗಿ ಜಾರಿಕೊಳ್ಳಿ. ಅನಂತರ ಹುಳಿಯನ್ನಕ್ಕೆ ಉಪ್ಪು ಕಮ್ಮಿ ಎಂತಲೋ, ಬೋಂಡಾ ವಿಪರೀತ ಎಣ್ಣೆ ಕುಡಿದಿತ್ತು ಅಂತಲೋ, ಲಡ್ಡುವಿನಲ್ಲಿ ಲವಂಗ ಇರಲಿಲ್ಲವೆಂತಲೋ ಟೀಕಿಸುತ್ತಾ ಡರ್ರ್ ಎಂದು ತೇಗಿ.” ಅಂತಹ ಟೀಕಾಕಾರ ಟೀಕ್ವುಡ್ಗಳು, ತೇಗುವ ತೇಗದ ಮರಗಳು ಪ್ರತಿಯೊಂದು ಜನಾರಣ್ಯದಲ್ಲೂ ಒಬ್ಬರಲ್ಲ ಒಬ್ಬರು ಸಿಕ್ಕೇಸಿಗುತ್ತಾರೆ ಅಲ್ಲವೇ? ಆಯ್ತು. ಇನ್ನು ಈ ಕಾಡುಹರಟೆಗೆ ಜನಗಣಮನ ಹಾಡುವ ಸಮಯ. ಹಾಂ, ಒಂದು ಮಾತಂತೂ ನಿಜ. ಲಡ್ಡುವಿನಲ್ಲಿ ಲವಂಗ ಇಲ್ಲದಿದ್ದರೇನಂತೆ, ನಮ್ಮ ರಾಷ್ಟ್ರಗೀತೆಯಲ್ಲಿ ಲವಂಗ ಪರ್ಮನೆಂಟಾಗಿ ಕೂತಿದೆ. ದ್ರಾವಿಡ-ಉತ್ಕ-ಲವಂಗ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.