Episodes
Saturday Jul 10, 2010
Language of Flowers
Saturday Jul 10, 2010
Saturday Jul 10, 2010
ಪರಾಗ ಸ್ಪರ್ಶ
ದಿನಾಂಕ 11 ಜುಲೈ 2010ರ ಸಂಚಿಕೆಯಲ್ಲಿ...ಏನೆಂದು ಕೇಳಲು ಹೇಳಿತು ಜೇನಂಥ ಸಿಹಿನುಡಿಯ...
ನನಗೆ ತುಂಬ ಇಷ್ಟವಾಗುವ ಹಾಡುಗಳಲ್ಲಿ ಅದೂ ಒಂದು. ಶುಭಮಂಗಳ ಚಿತ್ರದಲ್ಲಿ ಆರ್.ಎನ್.ಸುದರ್ಶನ್ ಹಾಡಿರುವುದು. ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯ... ಏನೆಂದು ಕೇಳಲು ಹೇಳಿತು ಜೇನಂಥ ಸಿಹಿನುಡಿಯ ಜೇನಂಥ ಸಿಹಿನುಡಿಯ. ಒಂದು ಹೂವು ಪಿಸುಮಾತಿನಲ್ಲಿ ನಮ್ಮ ಬಳಿ ಏನನ್ನೋ ಹೇಳುತ್ತಿದೆಯೋ, ಮಧುರವಾದದ್ದೇನನ್ನೋ ತಿಳಿಸುತ್ತಿದೆಯೋ ಎಂಬ ರೀತಿಯಲ್ಲಿ ಸಾಗುವ ಹಾಡು. ನಿಜಕ್ಕೂ ಹೂವು ಮಾತನಾಡುತ್ತದೆಯೇ? ನಮಗೆ ಏಳನೇ ತರಗತಿಯ ಹಿಂದಿ ಪಠ್ಯಪುಸ್ತಕದಲ್ಲಿ ಒಂದು ಪದ್ಯ ಇತ್ತು. ‘ಫೂಲ್ ಕೀ ಚಾಹ್’ ಅಂತ. ಹೂವಿನಷ್ಟೇ ಸುಂದರವಾದ ಪದ್ಯ. ಚಾಹ್ ನಹೀ ಮೈ ಸುರಬಾಲಾ ಕೇ ಗಹನೊ ಮೆ ಗೂಂಥಾ ಜಾಊ... ಎಂದು ಅದರ ಮೊದಲ ಸಾಲು. ಆ ಪದ್ಯದಲ್ಲಿ ಹೂವು ಮಾತನಾಡುತ್ತದೆ. ತನ್ನ ಮನದಾಳದ ಆಸೆಯನ್ನು ಹೇಳಿಕೊಳ್ಳುತ್ತದೆ. “ಸುರಬಾಲೆಯರ ಕೇಶಶೃಂಗಾರದ ವಸ್ತು ಆಗುವ ಆಸೆ ನನಗಿಲ್ಲ. ಪ್ರೇಮಿಗಳ ಕೊರಳ ಮಾಲೆಯಾಗಿ ಅವರ ಪ್ರೀತಿಯ ಸಂಕೇತವಾಗುವ ಬಯಕೆಯಿಲ್ಲ. ದೇವರ ವಿಗ್ರಹಗಳ ಅಲಂಕಾರವಾಗಿ ಭಾಗ್ಯವಂತ ಎನಿಸಿಕೊಳ್ಳುವ ಇಚ್ಛೆಯಿಲ್ಲ. ಸಾಮ್ರಾಟರ ಶವಗಳ ಮೇಲಿನ ಹೂವಾಗಿ ಮಾನ್ಯತೆ ಪಡೆಯುವ ಆಸೆಯೂ ನನ್ನದಲ್ಲ. ಎಲೈ ಮಾಲಿಯೇ, ನನ್ನನ್ನು ಹೂಗಿಡದಿಂದ ಕಿತ್ತು ಆ ದಾರಿಯುದ್ದಕ್ಕೂ ಬಿಸಾಡು. ಎಲ್ಲಿ ಮಾತೃಭೂಮಿಗಾಗಿ ತಲೆಯನ್ನೇ ಒಪ್ಪಿಸಲು ಸಿದ್ಧರಿರುವ ವೀರ ಸೈನಿಕರು ನಡೆಯುತ್ತಾರೋ ಆ ದಾರಿಯಲ್ಲಿ ನನ್ನ ಎಸಳುಗಳನ್ನು ಹರಡು. ಆ ಸೈನಿಕರ ಪಾದದಡಿಯ ಹುಡಿಯಾಗುವುದೊಂದೇ ನನಗಿರುವ ಆಸೆ” ಎನ್ನುತ್ತದೆ. ಹೂವಿನ ಒಡಲಾಳದಿಂದ ಎಂಥ ಅದ್ಭುತವಾದ ಮಾರ್ಮಿಕವಾದ ಮಾತು! ಮತ್ತದೇ ಪ್ರಶ್ನೆ. ನಿಜಕ್ಕೂ ಹೂವು ಮಾತನಾಡುತ್ತದೆಯೇ? ‘ಚೆಲುವೆಲ್ಲ ನನ್ನದು’ ಎನ್ನುವ ಹೂವಿಗೆ ಅದರದೇ ಭಾಷೆ ಅಂತ ಒಂದಿದೆಯೇ? ಹೀಗೆ ಯೋಚನೆ ಮಾಡುತ್ತಿರುವಾಗಲೇ ನನ್ನ ಕಣ್ಣಿಗೆ ಬಿದ್ದದ್ದು Language of flowers ಎಂಬ ತಲೆಬರಹವಿದ್ದ ಒಂದು ಇಂಗ್ಲಿಷ್ ಲೇಖನ. ಅದು ಹೂವುಗಳು ಮಾತನಾಡುವ ಬಗ್ಗೆಯೇನೂ ಅಲ್ಲ. ಆದರೆ ಹೂವುಗಳ ಮುಖೇನ ನಾವು ಮನುಷ್ಯರು ಮಾತನಾಡುವ, ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿದೆಯಲ್ಲ ಅದರ ಕುರಿತಾದ ವೆರಿ ಇಂಟರೆಸ್ಟಿಂಗ್ ಬರಹ. ಅದರಲ್ಲಿನ ಕೆಲವು ಮುಖ್ಯಾಂಶಗಳನ್ನು ಆಯ್ದುಕೊಂಡು ಇವತ್ತಿನ ಅಂಕಣದಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಹೂವುಗಳ ಕುರಿತು ಬರೆದು ಈ ಅಂಕಣದ ಹೆಸರನ್ನು ಸಾರ್ಥಕಗೊಳಿಸುವ ಒಂದು ಪ್ರಯತ್ನವಿದು. ಇಂಗ್ಲಿಷ್ ಕವಿ ಆಲ್ಫ್ರೆಡ್ ಟೆನಿಸನ್ ಒಂದು ತ್ರಿಪದಿಯಲ್ಲಿ ಹೇಳಿದ್ದಾನೆ, Any man that walks the mead/ In a bud or blade or bloom may find/ A meaning suited to his mind. ಉದ್ಯಾನವನದಲ್ಲಿ ನಡೆದಾಡುವವನೊಬ್ಬ ಯಾವುದೇ ಮೊಗ್ಗನ್ನಾಗಲೀ ಹೂವನ್ನಾಗಲೀ ಕಂಡಾಗ ತನ್ನ ಮನಸ್ಸಿಗೆ ತತ್ಕ್ಷಣಕ್ಕೆ ಸಮಂಜಸವೆನಿಸುವ ಒಂದು ಅರ್ಥವನ್ನು ಅದಕ್ಕೆ ಕಟ್ಟುತ್ತಾನೆ. ಅದು ಸಂತೋಷ ಇರಬಹುದು, ಸಂತೃಪ್ತಿ ಇರಬಹುದು, ಉಲ್ಲಾಸ ಇರಬಹುದು, ಉತ್ಸಾಹವೂ ಇರಬಹುದು. ಎಷ್ಟು ನಿಜ ಅಲ್ವಾ! ಪ್ರವಾದಿ ಮಹಮ್ಮದ ಪೈಗಂಬರ ಹೇಳಿದ್ದೆನ್ನಲಾದ ಮಾತೊಂದಿದೆ ‘ಹೂವುಗಳು ಆತ್ಮದ ಆಹಾರ’ (Flowers are food for the soul) ಎಂದು. ಅದೂ ನಿಜವೇ. ಭಾವನೆಗಳನ್ನು ಉದ್ದೀಪನಗೊಳಿಸುವ ಶಕ್ತಿ ಹೂವಿಗಿದ್ದಂತೆ ಇನ್ನಾವುದಕ್ಕೂ ಇಲ್ಲ. ಹೂವಿನ ಬಣ್ಣಗಳು ನಮ್ಮ ಅಕ್ಷಿಪಟದ ಮೇಲೆ ಗಾಢವಾಗಿ ಅಚ್ಚೊತ್ತಿದರೆ, ಅದರ ಪರಿಮಳವಂತೂ ಮೂಗಿನ ಮೂಲಕ ಮೆದುಳಿನವರೆಗೂ ತಲುಪುತ್ತದೆ. ಅದು ಬರೀ ಪರಿಮಳವಷ್ಟೇ ಅಲ್ಲ, ಮಧುರವೆನಿಸುವ ರುಚಿ ಎಂದೇ ಮೆದುಳು ಅರ್ಥೈಸಿಕೊಳ್ಳುವಂತೆ ಮಾಡುತ್ತದೆ. ಆ ವಿಶೇಷ ಶಕ್ತಿಯಿಂದಾಗಿಯೇ ಹೂವು ಅನಾದಿಕಾಲದಿಂದಲೂ ಭಾವನೆಗಳನ್ನು ಪ್ರತಿಬಿಂಬಿಸಲು, ಅದರಲ್ಲೂ ಮುಖ್ಯವಾಗಿ ಪ್ರೀತಿಯನ್ನು ಪ್ರಕಟಪಡಿಸಲು ಒಂದು ಪರಿಣಾಮಕಾರಿ ಸಂಕೇತವಾಗಿ ರೂಪುಗೊಂಡಿದೆ. ರೆಡ್ ರೋಸ್ ಎಂದರೆ ಲವ್ ಸಿಂಬಲ್. ಪ್ರಿಯತಮೆಯ ಎದುರು ಮಂಡಿಯೂರಿ ಕುಳಿತು ಕೆಂಪು ಗುಲಾಬಿ ಕೊಟ್ಟನೆಂದರೆ ತನ್ನೆಲ್ಲ ಪ್ರೀತಿಯನ್ನೂ ಆತ ಹೊರಗೆಡಹಿದ ಎಂದೇ ಅರ್ಥ. “ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ. ಈ ಹೂವಿನಂದ ಪ್ರೇಯಸೀ ನಿನಗಾಗಿ ಕೇಳೇ ಓ ರತಿ...” ಅದರಾಚೆಗೆ ಯಾವ ಹೂವು ಯಾರ ಮುಡಿಗೋ. ಯಾರ ಒಲವು ಯಾರ ಕಡೆಗೋ. ಕೆಂಪು ಗುಲಾಬಿ ಪ್ರೀತಿಯ ಸಂಕೇತ ಎನ್ನುವುದರ ಆಚೆಗೆ ಹೂವುಗಳ ಪರಿಭಾಷೆ ನಮಗೆ ಗೊತ್ತಿಲ್ಲ. ಕೆಂಪು ಗುಲಾಬಿ ಅಲ್ಲದೆಯೂ ನಾವು ಬೇರೆಬೇರೆ ಸಂದರ್ಭಗಳಲ್ಲಿ ಹೂಗಳನ್ನು ಬಿಡಿಬಿಡಿಯಾಗಿಯೋ, ಗುಚ್ಛದ ರೂಪದಲ್ಲೋ, ಹಾರದ ರೂಪದಲ್ಲೋ ಕೊಡಕೊಳ್ಳುತ್ತೇವೆ. ಬಹುತೇಕವಾಗಿ ಸೌಹಾರ್ದ ಭಾವನೆಯಿಂದಲೇ. ಕೆಲವೊಮ್ಮೆ ಕಾಟಾಚಾರಕ್ಕೂ ಇರಬಹುದು. ಆದರೆ, “ಈ ಹೂವನ್ನು ನಾನು ಈ ಒಂದು ಭಾವನೆಯನ್ನು ವ್ಯಕ್ತಪಡಿಸಲಿಕ್ಕಂತಲೇ ಕೊಡುತ್ತಿದ್ದೇನೆ, ಇದನ್ನು ಸ್ವೀಕರಿಸುವವನು(ಳು) ಕೂಡ ಇದನ್ನು ಅದೇ ಭಾವನೆಯ ಪ್ರತೀಕವೆಂದು ಅರ್ಥೈಸಿಕೊಳ್ಳುತ್ತಾನೆ(ಳೆ)...” ಎಂದೆಲ್ಲ ತಲೆಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅಷ್ಟು ವ್ಯವಧಾನ ನಮಗಿರುವುದಿಲ್ಲ. ದುಂಡುಮಲ್ಲಿಗೆಯ ದಂಡೆ ಸಿಗದಿದ್ದರೆ ಮೊಳದಷ್ಟು ಉದ್ದದ ಹಳದಿ ಸೇವಂತಿಗೆಯ ಕುಚ್ಚನ್ನು ಕೊಳ್ಳುತ್ತೇವೆ. ಜಾಜಿಯಾದರೇನು ಕನಕಾಂಬರವಾದರೇನು ಕಾಕಡಾ ಆದರೇನು ಹೂವೊಂದು ಬಳಿಬಂದು ಮನದನ್ನೆಯ ಮುಡಿಯೇರಿ ಅವತ್ತು ಮನೆಯಲ್ಲಿ ಮಲ್ಲಿಗೆಯಂಥ ಬೆಳದಿಂಗಳು ಹರಡಿದರೆ ಅಷ್ಟು ಸಾಕು. ಆದರೆ ಪ್ರಾಚೀನ ಯುರೋಪ್ ಸಂಸ್ಕೃತಿಯಲ್ಲಿ, ಮುಖ್ಯವಾಗಿ ವಿಕ್ಟೋರಿಯನ್ ಯುಗದಲ್ಲಿ, ಹಾಗಿರಲಿಲ್ಲ. ಅಲ್ಲಿ Floriography ಅಥವಾ Language of flowers ಅಂತೊಂದು ಅಂಗೀಕೃತ ಸಂಪ್ರದಾಯವೇ ಚಾಲ್ತಿಯಲ್ಲಿತ್ತು. ಮೌಖಿಕ ಭಾಷೆಯಲ್ಲಿ ಶಿಷ್ಟಾಚಾರಗಳ ಅಥವಾ ನಿಯಮಗಳ ಪಾಲನೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಕಾಲಘಟ್ಟವದು. ಮನಸ್ಸಿನ ಭಾವನೆಗಳನ್ನು ಸಂದೇಶ ರೂಪದಲ್ಲಿ ಒಬ್ಬರಿಂದೊಬ್ಬರಿಗೆ ತಲುಪಿಸಬೇಕಾದರೆ ಹೂವುಗಳ ಬಳಕೆ ಅನಿವಾರ್ಯವಾಗಿತ್ತು. ಹಾಗಾಗಿ ಪ್ರೀತಿಗೆ ಮಾತ್ರವಲ್ಲ, ಸುಖ-ದುಃಖ, ದುಗುಡ-ದುಮ್ಮಾನ, ದ್ವೇಷ-ತಿರಸ್ಕಾರ ಹೀಗೆ ವಿಧವಿಧ ಭಾವನೆಗಳಿಗೆ ವಿಧವಿಧ ಹೂವುಗಳು. ಲ್ಯಾಂಗ್ವೇಜ್ ಆಫ್ ಫ್ಲವರ್ಸ್ ತಿಳಿದುಕೊಂಡಿದ್ದಾನೆ/ಳೆ ಎಂದರೆ ಆ ವ್ಯಕ್ತಿ ಬರೀ ಕಚಡಾ ಅಲ್ಲ, ಸ್ವಲ್ಪವಾದರೂ ಸುಸಂಸ್ಕೃತ, ಮಾಗಿದ ಮನಸ್ಸಿನವ ಎಂದು ಪರಿಗಣನೆ. ಫ್ಲೋರಿಯೊಗ್ರಫಿ ನಿಘಂಟುಗಳಲ್ಲಿ ಇಂತಿಂಥ ಭಾವನೆಗಳ ಅಭಿವ್ಯಕ್ತಿಗೆ ಇತಿಂಥ ಹೂವು/ ಇಂತಿಂಥ ಬಣ್ಣದ ಹೂವು ಎಂದೆಲ್ಲ ಸ್ಪಷ್ಟ ವಿವರಣೆ. ಹಾಗೆಂದ ಮಾತ್ರಕ್ಕೆ ವಿಕ್ಟೋರಿಯಾ ಕಾಲದಲ್ಲಷ್ಟೇ ಪುಷ್ಪಭಾಷೆ ಶುರುವಾದದ್ದೇನಲ್ಲ. ಪ್ರಾಚೀನ ಗ್ರೀಕರ ಕಾಲದಲ್ಲೂ ಅದು ಇತ್ತು. ಗ್ರೀಕ್ ಮತ್ತು ರೋಮನ್ನರ ನಂಬಿಕೆಯಂತೆ ಹೂವುಗಳೆಂದರೆ ದೇವಾಧಿದೇವತೆಗಳ, ಅಪ್ಸರೆಯರ, ಯಕ್ಷಗಂಧರ್ವಕಿನ್ನರರ ವಿವಿಧ ರೂಪಗಳು. ಆದ್ದರಿಂದಲೇ ಹೂವಿಗೆ ದೈವತ್ವ ಮತ್ತು ಪಾವಿತ್ರ್ಯ. ಈಜಿಪ್ಟ್, ಗ್ರೀಸ್, ಚೈನಾ, ಭಾರತ ಮುಂತಾಗಿ ಪುರಾತನ ನಾಗರಿಕತೆಗಳಲ್ಲೆಲ್ಲ ಹೂವು ಅಥವಾ ಹೂವಿನ ಚಿತ್ರಗಳು ಸಂಕೇತಗಳಾಗಿ ಬಳಕೆಯಾಗಿವೆ. Gillyflower is for gentleness, marigold is for marriage, and cowslips is for council ಎಂಬಂಥ ನುಡಿಗಟ್ಟುಗಳು ಹುಟ್ಟಿಕೊಂಡದ್ದೇ ಹಾಗೆ. ಟರ್ಕಿ ದೇಶದ ಜನರಿಗೆ ಬಹಳ ಹಿಂದಿನಿಂದಲೂ ಹೂವುಗಳ ಮೂಲಕವೇ ಭಾವನೆಗಳನ್ನು ವ್ಯಕ್ತಪಡಿಸುವ ಕಲೆ ಸಿದ್ಧಿಸಿತ್ತಂತೆ. ಹದಿನೇಳನೆಯ ಶತಮಾನದಲ್ಲಿ ಟರ್ಕಿ ದೇಶದಲ್ಲಿದ್ದ ಇಂಗ್ಲೆಂಡ್ ರಾಯಭಾರಿಯ ಪತ್ನಿ ಲೇಡಿ ಮೇರಿ ವೊರ್ಟ್ಲೆ ಎಂಬಾಕೆ ಸ್ವದೇಶದಲ್ಲಿದ್ದ ಸ್ನೇಹಿತೆಯೊಬ್ಬಳಿಗೆ ಬರೆದ ಪತ್ರದಲ್ಲಿ, ಟರ್ಕಿ ದೇಶದ ಸುಂದರ ಕನ್ಯೆಯರು ಹೂವುಗಳಿಗೂ ಮೌನಭಾಷೆಯೊಂದನ್ನು ಕಲಿಸಿದ್ದಾರೆ ಎಂದು ಬರೆದಿದ್ದಳಂತೆ. ೧೭೬೩ರಲ್ಲಿ ಆಕೆ ತನ್ನ ಕಾಗದಗಳ ಸಂಗ್ರಹವನ್ನು ಪ್ರಕಟಿಸಿ ಅದರಲ್ಲಿ ಪುಷ್ಪಭಾಷೆಯನ್ನು ರಸವತ್ತಾಗಿ ಬಣ್ಣಿಸಿದಳು. ಅಲ್ಲಿಂದ ಮುಂದೆ ಇಂಗ್ಲೆಂಡ್ನಲ್ಲಿ ಫ್ಲೊರಿಯೊಗ್ರಫಿ ಕ್ರೇಜ್ ಬೆಳೆಯಿತು. ಪ್ರೇಮಿಗಳು ತಮ್ಮ ಹೆತ್ತವರ ಅಥವಾ ರಕ್ಷಕರ ಕೆಂಗಣ್ಣಿಗೆ ಗುರಿಯಾಗದೆ ಹೂವುಗಳ ವಿನಿಮಯದ ಮೂಲಕ ಪ್ರೀತಿ ಪ್ರಕಟಪಡಿಸುವ ಸುಲಭೋಪಾಯ ಕಂಡುಕೊಂಡರು. ಕವಿ ಥಾಮಸ್ ಹುಡ್ ಬರೆದಂತೆ sweet flowers alone can say what passion fears revealing ಎಂದಾಯಿತು. ಯಾವ ಹೂವು, ಯಾವ ಬಣ್ಣದ್ದು ಅಂತಷ್ಟೇ ಅಲ್ಲ, ಅದನ್ನು ಯಾವ ರೀತಿ ಕೊಡುತ್ತಿರುವುದು ಎನ್ನುವುದಕ್ಕೂ ಅರ್ಥ ಇದೆ. ಊರ್ಧ್ವಮುಖಿಯಾಗಿ ಹಿಡಿದು ಕೊಟ್ಟ ಹೂವು ಸಂತೋಷದ ಪ್ರತೀಕ, ಅಧೋಮುಖಿ ಹೂವು ದುಃಖದ ಚಿಹ್ನೆ. ಎಡಗಡೆಗೆ ಬಾಗಿಸಿ ಕೊಟ್ಟರೆ ತನ್ನ ಮನಸ್ಸಿನ ಆ ಕ್ಷಣದ ಸ್ಥಿತಿಯ ಪ್ರತಿಬಿಂಬ, ಬಲಗಡೆಗೆ ವಾಲಿಸಿದರೆ ಎದುರಿನವನ/ಳ ಮನಸ್ಥಿತಿಯನ್ನು ತಾನೀಗ ಹೇಗೆ ಅರ್ಥೈಸಿದ್ದೇನೆಂಬುದರ ಪ್ರತಿಬಿಂಬ. ಒಂದುವೇಳೆ ಹೌದು/ಅಲ್ಲ ಉತ್ತರದ ಪ್ರಶ್ನೆಗಳ ಮೂಲಕ ಸಂಹವನ ಅಂತಾದರೆ ಬಲಗೈಯಿಂದ ಹೂವು ಕೊಟ್ಟರೆ ಸಕಾರಾತ್ಮಕ, ಎಡಗೈಯಿಂದ ಹೂವು ಕೊಟ್ಟರೆ ನಕಾರಾತ್ಮಕ ಉತ್ತರ ಎಂದು ತಿಳಿದುಕೊಳ್ಳಬೇಕು. ಒಂದು ಉದಾಹರಣೆಯ ಮೂಲಕ ಬಣ್ಣಿಸುವುದಾದರೆ, ಒಬ್ಬ ತರುಣ ಒಬ್ಬ ತರುಣಿಯೆಡೆಗೆ ಆಕರ್ಷಿತನಾಗಿ ಅವಳಿಗೊಂದು ಗುಲಾಬಿ ಹೂ ಕೊಡುತ್ತಾನೆ ಅಂತಿಟ್ಟುಕೊಳ್ಳೋಣ. ಅದರ ದಂಟಿನಲ್ಲಿ ಮುಳ್ಳುಗಳೂ, ಒಂದೆರಡು ಎಲೆಗಳೂ ಇದ್ದರೆ ತರುಣ “ನನಗೇಕೋ ಭಯವಾಗುತ್ತಿದೆ, ಆದರೂ ಭರವಸೆಯಿಂದಿದ್ದೇನೆ” ಎನ್ನುತ್ತಿದ್ದಾನೆಂದರ್ಥ. ತರುಣಿಯೇನಾದರೂ ಅದನ್ನು ಬೋರಲಾಗಿ ಹಿಡಿದು ಹಿಂದಿರುಗಿಸಿದರೆ “ನಿನಗೆ ಭಯವೂ ಬೇಡ, ಭರವಸೆಯೂ ಬೇಡ” ಎನ್ನುತ್ತಿದ್ದಾಳೆಂದು ಅರ್ಥ. ಮುಳ್ಳುಗಳನ್ನು ತೆಗೆದು ಗುಲಾಬಿಯನ್ನು ಹಿಂದಿರುಗಿಸಿದರೆ “ಭರವಸೆ ಕೈಗೂಡುವ ಸಾಧ್ಯತೆಯಿದೆ” ಎಂದರ್ಥ. ಎಲೆಗಳನ್ನು ತೆಗೆದು ಗುಲಾಬಿಯನ್ನು ಹಿಂದಿರುಗಿಸಿದರೆ “ಭಯಪಡುವುದಷ್ಟೇ ನಿನ್ನ ಹಣೆಬರಹ” ಎಂದು ಇಂಗಿತ. ಅವಳೇನಾದರೂ ಗುಲಾಬಿಯನ್ನು ತಲೆಯಲ್ಲಿ ಮುಡಿದುಕೊಂಡರೆ “ಸಾವಧಾನ, ನಿಧಾನವಾಗಿ ಮುನ್ನಡೆ” ಎಂದು ಅರ್ಥಮಾಡಿಕೊಳ್ಳಬೇಕು. ಎಲ್ಲ ಸರಿಹೋಗಿ ಅವಳು ಹೂವನ್ನು ಎದೆಗವುಚಿಕೊಂಡರೆ, ಫಲಿಸಿತು ಒಲವಿನ ಪೂಜಾಫಲ ಎನಗಿಂದು ಕೂಡಿಬಂತು ಕಂಕಣಬಲ... ಹತ್ತೊಂಬತ್ತನೆಯ ಶತಮಾನದ ವೇಳೆಗೆ ಫ್ಲೊರಿಯೊಗ್ರಫಿ ನಿಘಂಟುಗಳು ರಾಶಿರಾಶಿಯಾಗಿ ಪ್ರಕಟಗೊಂಡವು. ಆದರೆ ಅವೆಲ್ಲ ಏಕರೂಪದ ವಿವರಣೆಯುಳ್ಳವುಗಳಲ್ಲ. ಹಾಗಾಗಿ ಎಷ್ಟೋಸಲ ಪುಷ್ಪಭಾಷೆಯಲ್ಲೂ ಆಭಾಸಗಳಾಗುತ್ತಿದ್ದವು. ಲೌಸಾ ಟ್ಯಾಮ್ಲೆ ಎಂಬ ಕವಯಿತ್ರಿ Carnations and Caveliers ಕವನದಲ್ಲಿ ಬಣ್ಣಿಸುತ್ತಾಳೆ- ಒಬ್ಬ ವೀರಯೋಧ ತನ್ನ ಪ್ರಿಯತಮೆಗೆ ಗುಲಾಬಿ ಬಣ್ಣದ ಗುಲಾಬಿ ಹೂವನ್ನು ಕಳಿಸಿದನಂತೆ. ಅವಳಿಗಾದರೋ ಪುಷ್ಪಭಾಷೆ ಗೊತ್ತಿಲ್ಲ ಅಥವಾ ಅವಳು ಅದರ ಬಗ್ಗೆ ಕೇರ್ ಮಾಡುವವಳಲ್ಲ. ಅವಳು ತನ್ನ ಕಡೆಯಿಂದ ವೀರಯೋಧನಿಗೆ ಕಾರ್ನೇಶನ್ (ದಾಸವಾಳವನ್ನು ಹೋಲುವ) ಹೂವನ್ನು ಕಳಿಸುತ್ತಾಳೆ, ಉತ್ಕಟವಾದ ಪ್ರೀತಿಯಿಂದಲೇ. ಆದರೆ ಈತನ ಪುಷ್ಪಭಾಷೆಯಲ್ಲಿ ಕಾರ್ನೇಶನ್ ಹೂವೆಂದರೆ ತಿರಸ್ಕಾರದ ಭಾವನೆಯ ಪ್ರತೀಕ. ಆಘಾತಗೊಂಡ ವೀರಯೋಧ ಸತ್ತೇ ಹೋಗುತ್ತಾನೆ. ಅವನು ಸತ್ತನೆಂದು ಕೇಳಿದ ಪ್ರಿಯತಮೆಯೂ ಪ್ರಾಣ ತ್ಯಜಿಸುತ್ತಾಳೆ. ಪದ್ಯ ಟ್ರಾಜಿಕ್ ಅಂತ್ಯ ಕಾಣುತ್ತದೆ. ಪ್ರೀತಿಯ ವ್ಯವಹಾರಕ್ಕಷ್ಟೇ ಅಲ್ಲ. ದ್ವೇಷ ಪ್ರದರ್ಶನಕ್ಕೆ, ಅವಮಾನ ಮಾಡುವುದಕ್ಕೆ, ಉಪೇಕ್ಷೆ ಮಾಡುವುದಕ್ಕೆ ಕೂಡ ಹೂವುಗಳ ಬಳಕೆಯಿದೆ. ನಿರ್ಮಲವಾದ ಸ್ನೇಹಭಾವದ ವರ್ಧನೆಗೂ, ಗತಕಾಲದ ನೆನಪೊಂದನ್ನು ಮರುಕಳಿಸುವ ಸಿಹಿ ಅಚ್ಚರಿಯಾಗಿಯೂ ಹೂವು ಕಾರ್ಯವೆಸಗಬಲ್ಲದು. ಬಹುಶಃ “ಹೂವೇ ಹೂವೇ ನಿನ್ನೀ ನಗುವಿಗೆ ಕಾರಣವೇನೇ...?” ಎಂದು ಹೂವನ್ನೇ ಕೇಳಿ ಕಂಡುಕೊಂಡರೆ ನಾವೂ ಪುಷ್ಪಭಾಷಾ ಪಂಡಿತರಾದಂತೆಯೇ! * * * "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು! - ಶ್ರೀವತ್ಸ ಜೋಶಿVersion: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.