Episodes
Saturday Jan 01, 2011
Mistakes by Habit
Saturday Jan 01, 2011
Saturday Jan 01, 2011
ದಿನಾಂಕ 2 ಜನವರಿ 2011ರ ಸಂಚಿಕೆ...
ಅಭ್ಯಾಸಬಲದ ಅನುಭವಗಳೂ ಆಭಾಸಗಳೂ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಎರಡು ಸಾವಿರದ ಹತ್ತಕ್ಕೆ ಗುಡ್ಬೈ ಹೇಳಿ ಹನ್ನೊಂದನ್ನು ಭವ್ಯವಾಗಿ ಸ್ವಾಗತಿಸಿದ್ದಾಗಿದೆ. ಹ್ಯಾಪಿ ನ್ಯೂ ಇಯರ್ ಶುಭಾಶಯದ ಸಹಸ್ರನಾಮ- ಅಂದರೆ ವಿನಿಮಯ ಮೊನ್ನೆ ೩೧ರ ಮಧ್ಯರಾತ್ರೆ ಶುರುವಾದದ್ದು, ಇವತ್ತಿಗೆನ್ನುವಾಗ ಇಷ್ಟಮಿತ್ರಬಂಧುಬಾಂಧವರನ್ನೆಲ್ಲ ಒಂದು ರೌಂಡ್ ಕವರ್ ಮಾಡಿ ಆಗಿದೆ. ಗೋಡೆಯ ಮೇಲೆ ಹೊಸ ವರ್ಷದ ವರ್ಣರಂಜಿತ ಕ್ಯಾಲೆಂಡರ್ ಕಂಗೊಳಿಸುತ್ತಿದೆ. ಪಕ್ಕದಲ್ಲೇ ಕಾಲನಿರ್ಣಯವೋ ಬೆಂಗಳೂರುಪ್ರೆಸ್ನದೋ ಒಂದು ದಿನದರ್ಶಿಕೆಯೂ ತೂಗಾಡುತ್ತಿದೆ. ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ರಜಾದಿನಗಳನ್ನು ಕೆಂಪುಬಣ್ಣದಲ್ಲಿ ತೋರಿಸುತ್ತಿದೆ. ಡೈರಿ ಬರೆಯುವ ಅಭ್ಯಾಸವಿರುವವರ ಬಳಿ ಹೊಸ ಡೈರಿಯೂ ಬಂದಿದೆ. ಜನವರಿ ಒಂದನೇ ತಾರೀಕಿನದನ್ನು ಆಗಲೇ ಶಿಸ್ತಿನಿಂದ, ಅತ್ಯುತ್ಸಾಹದಿಂದ ಬರೆದದ್ದೂ ಆಗಿದೆ. ಒಟ್ಟಿನಲ್ಲಿ ವಾತಾವರಣದಲ್ಲೂ ಮನಸ್ಸಿನೊಳಗೂ ಏನೋ ಒಂದು ಹೊಸತನದ ಅನುಭವವಾಗಿದೆ. ಕಡೇಪಕ್ಷ ಹಾಗಂತ ಮನಸ್ಸು ಅಂದುಕೊಂಡಿದೆ. ಎಲ್ಲ ಸರಿಯೇ. ಆದರೆ ಇವತ್ತು-ನಾಳೆ ಅರ್ಜೆಂಟ್ನಲ್ಲಿ ಒಂದು ಚೆಕ್ ಬರೆದುಕೊಡುವ ಸಂದರ್ಭವೋ ಅಥವಾ ದಿನಾಂಕ ನಮೂದಿಸಬೇಕಾಗುವ ಅಂತಹ ಇನ್ನಾವುದೇ ಸನ್ನಿವೇಶ ಬಂತು ಅಂದ್ಕೊಳ್ಳಿ. ತಾರೀಕು ಮತ್ತು ತಿಂಗಳನ್ನು ಸರಿಯಾಗಿಯೇ ಬರೆಯುತ್ತೀರಿ, ಇಸವಿಯನ್ನು ಮಾತ್ರ 2010 ಎಂದು ಬರೆಯುವ ಸಾಧ್ಯತೆಗಳೇ ಹೆಚ್ಚು. ಒಂದುವೇಳೆ 2011 ಎಂದು ಬರೆದರೂ ಅದು ಅತಿಜಾಗ್ರತೆಯಿಂದ ಪ್ರಜ್ಞಾಪೂರ್ವಕವಾಗಿ ಬರೆದದ್ದಾಗಿರುತ್ತದೆ. ಹೌದು, ಕನಿಷ್ಠ ಒಂದೆರಡು ವಾರಗಳಾದರೂ ಬೇಕಾಗುತ್ತದೆ ಹೊಸ ಇಸವಿ ಶುರುವಾಗಿರುವುದು ನಮ್ಮ ಸಬ್ಕಾನ್ಷಿಯಸ್ ಮನಸ್ಸಿನಲ್ಲಿ ಸ್ಪಷ್ಟವಾಗಿ ಅಚ್ಚೊತ್ತಿಕೊಳ್ಳುವುದಕ್ಕೆ. ಅಲ್ಲಿಯವರೆಗೆ ‘ಅಭ್ಯಾಸಬಲ’ವೆಂಬ ಎಕ್ಸ್ಕ್ಯೂಸ್ ಇದ್ದೇಇರುತ್ತದೆ. ಇವತ್ತು ಅಭ್ಯಾಸಬಲದ ಬಗ್ಗೆಯೇ ಒಂದು ಸೋದಾಹರಣ ಹರಟೆ ಮಾಡೋಣವೆಂದುಕೊಂಡಿದ್ದೇನೆ. ಇಸವಿ ಬದಲಾವಣೆಯ ಪ್ರಸ್ತುತ ಸಂದರ್ಭ ಒಂದು ಒಳ್ಳೆಯ ಉದಾಹರಣೆಯಾದ್ದರಿಂದ ಅದನ್ನೇ ಇಂಟ್ರೊದಲ್ಲಿ ಬಳಸಿದ್ದೇನೆ. ‘ನಮ್ಮನೆಯ ಗೋಡೆಗಡಿಯಾರ ಮೊನ್ನೆ ಕೆಳಗೆಬಿದ್ದು ಒಡೆದುಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದಬುಟ್ಟಿಗೆ ಹಾಕಿದ್ದೆ. ಆದರೆ ಈಗಲೂ ಟೈಮ್ ಎಷ್ಟಾಯ್ತು ಅನ್ಕೊಳ್ಳೋಹೊತ್ತಿಗೆ ದೃಷ್ಟಿ ಆ ಗಡಿಯಾರ ತಗಲುಹಾಕಿದ್ದ ಜಾಗದೆಡೆಗೇ ಹೋಗುತ್ತೆ. ನಿಮಗೂ ಹೀಗಾಗಿದ್ದಿದೆಯೇ?’ - ಹಿಂದೊಮ್ಮೆ sampada.net ನ ವಿಚಾರವಿನಿಮಯ ವೇದಿಕೆಯಲ್ಲಿ ಮಿತ್ರ ಹರಿಪ್ರಸಾದ್ ನಾಡಿಗ್ ಈರೀತಿ ಒಂದು ಪೋಸ್ಟ್ ಹಾಕಿದ್ದರು. ಆಗ ಅಭ್ಯಾಸಬಲದ ಅಂತಹ ಅನುಭವಗಳ ಬಗ್ಗೆ ನಾವು ಕೆಲವು ಸಂಪದ ಸದಸ್ಯರು ರಸವತ್ತಾಗಿ ಚರ್ಚಿಸಿದ್ದೆವು. ರಷ್ಯನ್ ವಿಜ್ಞಾನಿ ಐವಾನ್ ಪಾವ್ಲೊವ್ನ ಜಗದ್ವಿಖ್ಯಾತ ನಾಯಿ-ಗಂಟೆ-ಆಹಾರ ಪ್ರಯೋಗವೂ ಸೇರಿದಂತೆ ಸುಮಾರಷ್ಟು ವಿಚಾರಗಳು ಅಲ್ಲಿ ಬಂದಿದ್ದವು. ಎಸೋಸಿಯೇಟಿವ್ ಲರ್ನಿಂಗ್, ಕಂಡೀಷನ್ಡ್ ರಿಫ್ಲೆಕ್ಸಸ್ ಮುಂತಾಗಿ ಅಭ್ಯಾಸಬಲದ ಎಡಬಲಗಳನ್ನೆಲ್ಲ ಅಲ್ಲಿ ತಡಕಾಡಿದ್ದೆವು. ಇವತ್ತಿಲ್ಲಿ ಆ ಥಿಯರಿಗಳನ್ನೆಲ್ಲ ವಿವರಿಸುವುದಕ್ಕೆ ಹೋಗುವುದಿಲ್ಲ. ಆದರೆ ನಾಡಿಗ್ ಕೇಳಿದ್ದ ಪ್ರಶ್ನೆಯನ್ನೇ ನಾನು ನಿಮಗೆ ಕೇಳುತ್ತಿದ್ದೇನೆ. ನೀವೂ ನೆನಪಿಸಿಕೊಳ್ಳಿ ಅಭ್ಯಾಸಬಲದಿಂದ ನಿಮಗಾದ ಅನುಭವ ಆಭಾಸ ಇರುಸುಮುರುಸಿನ ಈರೀತಿಯ ಉದಾಹರಣೆಗಳನ್ನು. ಅಷ್ಟೊತ್ತಿಗೆ, ಪುರಾಣಗಳಲ್ಲಿ ನಮ್ಮ ಗಮನಕ್ಕೆ ಬರುವ ಒಂದೆರಡು ಪ್ರಸಂಗಗಳನ್ನು ನಾನಿಲ್ಲಿ ದಾಖಲಿಸುತ್ತೇನೆ. ಮಹಾಭಾರತದ ಕಥೆಯಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿ ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದವನು ಪಾರ್ಥನೊಬ್ಬನೇ. ಆದರೆ ದ್ರೌಪದಿ ಪಂಚಪಾಂಡವರಿಗೂ ಧರ್ಮಪತ್ನಿ ಅಂತನಿಸಿಕೊಳ್ಳಬೇಕಾಗಿ ಬಂದದ್ದು ಕುಂತಿಯ ಅಭ್ಯಾಸಬಲದಿಂದಾದ ಎಡವಟ್ಟಿನಿಂದ! ಭಿಕ್ಷೆ ಬೇಡಿ ಬದುಕಿಕೊಂಡಿದ್ದ ಪಾಂಡವರು ಅವತ್ತು ಕೂಡ ಭಿಕ್ಷಾಟನೆಯಿಂದ ಮರಳುವಾಗ ಜತೆಯಲ್ಲಿ ದ್ರೌಪದಿಯನ್ನು ಕರೆದುಕೊಂಡು ಬಂದು ಗುಡಿಸಲಿನ ಹೊರಗಿನಿಂದಲೇ “ಅಮ್ಮಾ ನೋಡು ಇವತ್ತಿನ ನಮ್ಮ ಭಿಕ್ಷೆಯನ್ನು!” ಎಂದರು. ಕುಂತಿ ಮನೆಯೊಳಗಿನಿಂದಲೇ ತನ್ನ ಎಂದಿನ ಅಭ್ಯಾಸದಂತೆ “ಆಯ್ತಪ್ಪಾ ಎಲ್ಲರೂ ಹಂಚಿಕೊಳ್ಳಿ” ಎಂದುಬಿಟ್ಟಳು. ಆಮೇಲಿನದು ನಮಗೆಲ್ಲ ಗೊತ್ತೇ ಇರುವ ಕಥೆ. ರಾಮಾಯಣದಲ್ಲಿ ಒಂದು ತಮಾಷೆ ಪ್ರಸಂಗ ಬರುತ್ತದೆ. ಇದು ವಾಲ್ಮೀಕಿ ಬರೆದದ್ದರಲ್ಲಿ ಇಲ್ಲವಂತೆ, ಆದರೂ ತುಂಬ ಚೆನ್ನಾಗಿದೆ. ಮುಖ್ಯವಾಗಿ ಇದರ ಚಿತ್ರಣ ಸೊಗಸಾಗಿದೆ. ಓದಿ. ಲಂಕೆಯಿಂದ ಮರಳಿದ ನಂತರ ಶ್ರೀರಾಮಚಂದ್ರನ ಪಟ್ಟಾಭಿಷೇಕದ ತರುವಾಯ ಒಮ್ಮೆ ಜನಕಮಹಾರಾಜನು ರಾಮನ ಪರಿವಾರದವರನ್ನೆಲ್ಲ ಮಿಥಿಲೆಗೆ ಆಹ್ವಾನಿಸಿದನು. ಒಂದು ಔತಣಕೂಟ ಏರ್ಪಡಿಸಿ ಸಂಭ್ರಮಿಸುವುದು ಅವನ ಉದ್ದೇಶ. ರಾಮನ ಪರಿವಾರವೆಂದ ಮೇಲೆ ಅದರಲ್ಲಿ ವಾನರಸೇನೆಯೂ ಸೇರಿಕೊಂಡಿತ್ತು. ರಾಮ ಅವರಿಗೆಲ್ಲ “ನೋಡ್ರಪಾ ಅದು ಗೌರವಾನ್ವಿತರ, ಮರ್ಯಾದಸ್ಥರ ಸಭೆ. ಅಲ್ಲಿ ಕುಚೋದ್ಯಗಳನ್ನೆಲ್ಲ ಮಾಡಲಿಕ್ಕೆ ಹೋಗಬೇಡಿ. ಬಿಹೇವ್ ಪ್ರಾಪರ್ಲಿ. ಓಕೆ?” ಎಂದು ಮೊದಲೇ ಸಾಕಷ್ಟು ತರಬೇತುಗೊಳಿಸಿದ್ದ. ಸರಿ, ಮಿಥಿಲೆಯಲ್ಲಿ ಔತಣಕೂಟ ಶುರುವಾಯಿತು. ನೆಲದ ಮೇಲೆ ಸಾಲಾಗಿ ಬಾಳೆಎಲೆ ಹಾಕಿ ಎಲ್ಲರಿಗೂ ಪಂಕ್ತಿಭೋಜನ. ವಾನರರೆಲ್ಲ ಶಿಸ್ತಿನಿಂದಲೇ ಇದ್ದರು. ಪಂಚಭಕ್ಷ್ಯಗಳನ್ನೆಲ್ಲ ಸವಿದರು. ಇನ್ನೇನು ಊಟದ ಕೊನೆ. ಮಜ್ಜಿಗೆಯನ್ನಕ್ಕೆ ನೆಂಚಿಕೊಳ್ಳಲಿಕ್ಕೆಂದು ಉಪ್ಪಿನಕಾಯಿ ಬಡಿಸಲಾಯ್ತು. ಅದು, ಮಿಥಿಲೆಯಲ್ಲೇ ಬೆಳೆದ ಇಡೀ ಮಾವಿನಮಿಡಿಗಳ ರುಚಿರುಚಿಯಾದ ಉಪ್ಪಿನಕಾಯಿ. ಒಬ್ಬ ವಾನರ ಮಾವಿನಮಿಡಿಯನ್ನು ಕೈಯಲ್ಲಿ ಹಿಚುಕಿದಾಗ ಅದರೊಳಗಿದ್ದ ಸಣ್ಣ ಬೀಜ ಛಂಗನೆ ಜಿಗಿಯಿತು! ಅದನ್ನು ನೋಡಿದವನೇ “ಎಲಾಇವ್ನ! ಅಷ್ಟೆತ್ತರಕ್ಕೆ ಜಿಗಿಯುವುದಕ್ಕೆ ನನ್ನಿಂದ ಆಗೋದಿಲ್ಲ ಅಂದ್ಕೊಂಡಿಯಾ?” ಎನ್ನುತ್ತ ಅವನೂ ಅಲ್ಲಿಯೇ ಊಟಕ್ಕೆ ಕುಳಿತವನೇ ಒಮ್ಮೆ ಮೇಲಕ್ಕೆ ಜಿಗಿದ. ಅವನನ್ನು ನೋಡಿದ ಇತರ ವಾನರರೂ ಜಿಗಿಯತೊಡಗಿದರು. ಉಳಿದವರೆಲ್ಲ ಮಜ್ಜಿಗೆಯೂಟ ಅರ್ಧಕ್ಕೇ ಬಿಟ್ಟು ಇದೇನಿದು ಗಲಾಟೆ ಎಂದು ಗಾಬರಿಯಾದರು. ವಾನರರ ಅಭ್ಯಾಸಬಲದಿಂದಾಗಿ ಜನಕಮಹಾರಾಜನ ಡೈನಿಂಗ್ಹಾಲ್ ಹೇಗೆ ‘ಮೆಸ್’ ಆಗಿದ್ದಿರಬಹುದೆಂಬ ದೃಶ್ಯವನ್ನು ನೀವೇ ಊಹಿಸಿ. ಅದಿರಲಿ, ರಾಮ ವಾನರರೊಂದಿಗೆ ಮಾತನಾಡುವಾಗ ಇಂಗ್ಲೀಷ್ ಪದಗಳನ್ನೂ ಬಳಸಿದನೇ? ಯಾಕಾಗಬಾರದು? ಬಹುಶಃ ಅವನಿಗೂ ನಮ್ಮಂತೆಯೇ ಅಭ್ಯಾಸಬಲ. ಅಷ್ಟಕ್ಕೂ ‘ಬಿಹೇವ್ ಪ್ರಾಪರ್ಲಿ’ ಎಂದದ್ದೇ ವಾನರರ ಜಿಗಿತಕ್ಕೆ ಹೇತುವಾಯಿತೋ ಏನೊ. ಇನ್ನು, ಹಾಸ್ಯಪ್ರವೃತ್ತಿಯ ದೇವರೆಂದೇ ಖ್ಯಾತನಾದ ಗಣೇಶ ಮಾಡಿದ ಒಂದು ಕಿತಾಪತಿಯ ಪ್ರಸಂಗವೂ ಚೆನ್ನಾಗಿದೆ. ಕೈಲಾಸದ ಫ್ಯಾಮಿಲಿಫೊಟೊ ನೀವು ನೋಡೇಇರುತ್ತೀರಿ. ಅದನ್ನೊಮ್ಮೆ ನೆನಪಿಸಿಕೊಳ್ಳಿ. ಆಚೀಚೆ ಶಿವ-ಪಾರ್ವತಿ. ನಡುವೆ ಗಣೇಶ. ಅವರು ಕುಳಿತುಕೊಳ್ಳುತ್ತಿದ್ದದ್ದೇ ಹಾಗೆ. ಅಷ್ಟೇಅಲ್ಲ, ಗಣೇಶನಿಗೆ ಎಡಗೆನ್ನೆಗೆ ಪಾರ್ವತಿಯೂ ಬಲಗೆನ್ನೆಗೆ ಶಿವನೂ ಕಂಟಿನ್ಯುವಸ್ ಆಗಿ ಮುತ್ತು ಕೊಡುತ್ತಿದ್ದರು. ‘ಹೌದಾ ಇದೇ ನಿಮ್ಮ ಅಭ್ಯಾಸವಾ ಮಾಡ್ತೇನ್ ತಡೀರಿ ನಿಮಗೆ’ ಎಂದುಕೊಂಡ ಕಿಲಾಡಿ ಗಣೇಶ ಒಮ್ಮೆ ಏನುಮಾಡಿದನೆಂದರೆ ಆಕಡೆಯಿಂದ ಪಾರ್ವತಿಯೂ ಈಕಡೆಯಿಂದ ಈಶ್ವರನೂ ಮುತ್ತುಕೊಡಲು ಬಗ್ಗಿದಾಗ ತಾನು ಅಲ್ಲಿಂದ ಥಟ್ಟನೆ ಹಿಂದೆಸರಿದುಬಿಟ್ಟ! ಜಗತಃ ಪಿತರೌ ಪಾರ್ವತೀ-ಪರಮೇಶ್ವರೌ ಚುಂಬನದೃಶ್ಯದಲ್ಲಿ ಕಂಡುಬಂದ ಪರಿ ಇದು. ನಾನೇ ಹೆಣೆದದ್ದು ಅಂದ್ಕೊಳ್ಳಬೇಡಿ. ಸುಭಾಷಿತ ರತ್ನಭಾಂಡಾಗಾರಂ ಪುಸ್ತಕದಲ್ಲಿರುವ ಸಂಸ್ಕೃತ ಶ್ಲೋಕವನ್ನು ನಾನು ಅನುವಾದಿಸಿದ್ದು ಅಷ್ಟೇ. ಆಯ್ತು. ಪುರಾಣಗಳ, ದೇವ-ವಾನರರ ವಿಚಾರದ ನಂತರ ಈಗ ನರರ ವಿಷಯಕ್ಕೆ ಬರೋಣ. ದೂರವಾಣಿ ಸಂಭಾಷಣೆಯಲ್ಲಿ ಕೆಲವರ ಅಭ್ಯಾಸಬಲಗಳು ಪ್ರಕಟಗೊಳ್ಳುವುದಿದೆ. ಮಾತೆಲ್ಲ ಮುಗಿದಮೇಲೆ ‘ಇಡ್ಲಾ?’ ಎಂದುಹೇಳಿ ಕೊನೆಗೊಳಿಸುವುದು ಅಭ್ಯಾಸ. ಹಳೇಕಾಲದಲ್ಲಿ, ಅಥವಾ ಈಗಲೂ, ಲ್ಯಾಂಡ್ಲೈನ್ ಫೋನ್ನಲ್ಲಿ ಮಾತನಾಡಿ ಆದಮೇಲೆ ರಿಸೀವರನ್ನು ಅದರ ಬೇಸ್ಡಿವೈಸ್ಗೆ ಕ್ರೆಡಲ್ ಮಾಡಬೇಕು ತಾನೆ? ಹಾಗಾಗಿ ‘ಇಡ್ಲಾ?’ ಎಂಬ ಪ್ರಶ್ನೆ. ಈಗ ವಿವಿಧ ವಿನ್ಯಾಸಗಳ ಮೊಬೈಲ್ಫೋನ್ಗಳು ಬಂದಿರುವಾಗ ‘ಇಡುವುದು’ ಏನಿದ್ದರೂ ಜೇಬಿನಲ್ಲಿ/ಚೀಲದಲ್ಲಿ. ಇನ್ನು ಕೆಲವರಿಗೆ ಫೋನ್ ಸಂಭಾಷಣೆಯನ್ನು ‘ಬರ್ಲಾ?’ ಎಂದುಹೇಳಿ ಕೊನೆಗೊಳಿಸುವ ರೂಢಿ. ಅದರಲ್ಲೇನೂ ತಪ್ಪಿಲ್ಲ, ಆದರೆ ಆಭಾಸವೆನಿಸುವುದು “ಇಲ್ಲಪ್ಪಾ ಆಫೀಸ್ನಲ್ಲಿ ಸಿಕ್ಕಾಪಟ್ಟೆ ಕೆಲ್ಸ, ರಜೆ ಸಿಗೋಹಾಗಿಲ್ಲ. ಊರಿಗೆ ಬರೋದಕ್ಕೆ ಆಗೋದೇಇಲ್ಲ. ಬರೋದಿಲ್ಲ ನಾನು, ತಪ್ಪ್ತಿಳ್ಕೋಬೇಡಿ...” ಅಂತೆಲ್ಲ ಹೇಳಿ ಆಕಡೆಯ ಪಾರ್ಟಿಯವರನ್ನು ಕನ್ವಿನ್ಸ್ ಮಾಡಿ ಎಲ್ಲ ಮುಗಿದಾದಮೇಲೆ ‘ಬರ್ಲಾ?’ ಎಂದುಹೇಳಿ ಫೋನ್ ಇಟ್ಟಾಗ. ಅಭ್ಯಾಸಬಲ! ಬರವಣಿಗೆಯಲ್ಲೂ ಕೆಲವೊಮ್ಮೆ ಆಭಾಸಗಳಾಗುವುದಿದೆ. ಮೊನ್ನೆ ಒಂದು ಲೇಖನದಲ್ಲಿ ಗಮನಿಸಿದ ವಾಕ್ಯ. ‘ಇತ್ತೀಚೆಗೆ ನಿಧನರಾದ ಸೋಏಂಡ್ಸೋ ಅವರ ಶ್ರದ್ಧಾಂಜಲಿ ಸಭೆ ಅಭೂತಪೂರ್ವವಾಗಿ ನಡೆಯಿತು.’ ಬಹುಶಃ ಆ ಲೇಖಕರಿಗೆ ಅದ್ಧೂರಿ, ಅಭೂತಪೂರ್ವ, ವೈಭವೋಪೇತ ಅಂತೆಲ್ಲ ವಿಶೇಷಣಗಳನ್ನು ಬಳಸಿ ಅಭ್ಯಾಸ. ಶ್ರದ್ಧಾಂಜಲಿ ಸಭೆ ಎಷ್ಟೇ ಅದ್ಧೂರಿಯಿರಲಿ ಸಪ್ಪೆಯಿರಲಿ ಸತ್ತ ವ್ಯಕ್ತಿಯ ಮಟ್ಟಿಗೆ ಅಭೂತಪೂರ್ವವೇ ಆಗಿರುತ್ತದಲ್ಲ? ಇಲ್ಲಿ ನನಗೆ ಇನ್ನೊಂದು ಪ್ರಸಂಗ ನೆನಪಾಗುತ್ತಿದೆ. ಒಂದೆರಡು ವರ್ಷಗಳ ಹಿಂದೆ ಸ್ನೇಹಿತರೊಬ್ಬರ ಅಮ್ಮ ನಿಧನರಾದಾಗ ಆ ಸುದ್ದಿಯಿದ್ದ ಇಮೇಲ್ ನನಗೆ ಮತ್ತು ಸುಮಾರಷ್ಟು ಜನ ಕಾಮನ್ಫ್ರೆಂಡ್ಸ್ಗೆಲ್ಲ ಹೋಗಿತ್ತು. ಅದರಲ್ಲಿ ಕೆಲವರು ಶೋಕತಪ್ತ ಸ್ನೇಹಿತನಿಗಷ್ಟೇ ರಿಪ್ಲೈ ಕಳಿಸಿದರೆ ಮತ್ತೆ ಕೆಲವರು reply all ಬಟನ್ ಒತ್ತಿ ‘sad to hear. may your mother's soul rest in peace..’ ಎಂದು ಟೈಪಿಸಿ ಕಳಿಸಿದ್ದರು. ಇದ್ದಬಿದ್ದವರ ಅಮ್ಮಂದಿರನ್ನೆಲ್ಲ ಸುಮ್ಮನೆ ಸಾಯಿಸಿದ್ದರು. ಪರವಾಗಿಲ್ಲ, ಅದು ಶೋಕತಪ್ತ ಸ್ನೇಹಿತನನ್ನಷ್ಟೇ ಉದ್ದೇಶಿಸಿದ್ದೆಂದು ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಇಮೇಲ್ ಲಿಸ್ಟ್ನಲ್ಲಿದ್ದ ಒಬ್ಬಾಕೆ ‘ರಿಪ್ಲೈ ಆಲ್’ ಮಾಡಿದ್ದಷ್ಟೇ ಅಲ್ಲ, ಆಕೆಯ ಇಮೇಲ್ ಸಿಗ್ನೇಚರ್ನಲ್ಲಿ Don't worry, Be happy! ಎಂದು ಒಂದು ಸ್ಮೈಲಿ ಬೇರೆ! ಏನು ಮಾಡುವುದು, ಅಭ್ಯಾಸಬಲ. ಏನ್ರೀ ಹೊಸವರ್ಷದ ಖುಶಿಯಲ್ಲಿರುವಾಗ ಸಾವಿನ ಸುದ್ದಿ ಮಾತಾಡ್ತಿದ್ದೀರಲ್ಲಾ ಎಂದು ನೀವು ಅಸಮಾಧಾನ ವ್ಯಕ್ತಪಡಿಸುವ ಮೊದಲೇ ಅದನ್ನು ನಿಲ್ಲಿಸುತ್ತೇನೆ. ಅದಕ್ಕಿಂತ, ಅಭ್ಯಾಸಬಲದ ಈ ಜೋಕು ಇಂಟರ್ನೆಟ್ನಲ್ಲಿ ಸಿಕ್ಕಿದ್ದು, ಚೆನ್ನಾಗಿದೆ. ಓದಿನೋಡಿ. ಬಸ್ಡ್ರೈವರ್ ಆಗಿದ್ದ ಗುಂಡ, ಕಷ್ಟಪಟ್ಟು ಟ್ರೈನಿಂಗ್ ಮುಗಿಸಿ ಪೈಲಟ್ ಆಗೇಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವಾಗ ಇದ್ದಕ್ಕಿದ್ದಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅಭ್ಯಾಸಬಲದಂತೆ ಗುಂಡ ಹೇಳ್ದ, “ರೀ ಎಲ್ರೂ ಕೆಳಗೆ ಇಳಿದು ಗಾಡೀನ ಸ್ವಲ್ಪ ದೂರ ತಳ್ಳಿ. ಎಂಜಿನ್ ಆಫ್ ಆಗಿದೆ...” ಈ ಜೋಕ್ನಂತೆ ಅಲ್ಲವಾದರೂ ವಿಮಾನಯಾನಕ್ಕೆ ಸಂಬಂಧಿಸಿದಂತೆಯೇ ಮೊನ್ನೆ ನನಗೊಂದು ಅನುಭವ ಆಯ್ತು. ಇದರಲ್ಲಿ ಅಭ್ಯಾಸಬಲದ ಆಭಾಸ ಮಾಡಿದವನು ನಾನೇ. ಅದು ಹೀಗಾಯ್ತು- ವಿಮಾನನಿಲ್ದಾಣದಲ್ಲಿ ಚೆಕ್ಇನ್ ಎಲ್ಲ ಆದಮೇಲೆ ಅಲ್ಲಿನ ಸಿಬ್ಬಂದಿ(ಣಿ) ನನಗೆ ಬೋರ್ಡಿಂಗ್ಪಾಸ್ ಕೊಡುತ್ತ ‘ಹ್ಯಾವ್ ಎ ನೈಸ್ ಜರ್ನಿ’ ಎಂದಳು. ಯಾವ ಗುಂಗಿನಲ್ಲಿದ್ದೆನೋ ‘ಸೇಮ್ ಟು ಯೂ!’ ಎಂದೆ. ತತ್ಕ್ಷಣ ಅವಳು ನಸುನಕ್ಕು ‘ಓಹ್ ನೋ ಐ ಆಮ್ ನಾಟ್ ಫ್ಲೈಯಿಂಗ್!’ ಎಂದಳು. ನನ್ನ ಎಡವಟ್ಟಿನ ಅರಿವಾಗಿ ‘ದೆನ್ ಫೈನ್, ಹ್ಯಾವ್ ಎ ಗುಡ್ ಡೇ’ ಎಂದು ವಿಶ್ ಮಾಡಿ ಅಲ್ಲಿಂದ ಹೊರಟೆ. ಅಮೆರಿಕದಲ್ಲಿ ‘ಹ್ಯಾವ್ ಎ ಗುಡ್ ಡೇ’ ಅಥವಾ ‘ಹ್ಯಾವ್ ಎ ಗುಡ್ ವನ್’ ಎಂಬಂಥ ಅನುದಿನದ ಒಣಹಾರೈಕೆಗಳಿಗೆ ‘ಯೂ ಟೂ’ ಎಂದೋ ‘ಸೇಮ್ ಟು ಯೂ’ ಎಂದೋ ಹೇಳಿಹೇಳಿ ಅಭ್ಯಾಸವಾದ್ದರಿಂದ ಏರ್ಪೋರ್ಟ್ನಲ್ಲಿ ಆರೀತಿ ನನ್ನ ಅಭ್ಯಾಸಬಲಪ್ರದರ್ಶನ ಆಗಿತ್ತು. ಈಗ ನಿಮ್ಮ ಸರದಿ. ಅಭ್ಯಾಸಬಲ ನಿಮಗೆಷ್ಟು ಇದೆ ಎಂದು ಬರೆದು ತಿಳಿಸುತ್ತೀರಾ? ಆಯ್ದ ಅನುಭವಗಳನ್ನೆಲ್ಲ ಪೋಣಿಸಿ ಒಂದು ಪರಾಗ ಸ್ಪರ್ಶಿಸೋಣವಂತೆ! ======== [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.