Episodes
Saturday Feb 11, 2012
Murder of Crows
Saturday Feb 11, 2012
Saturday Feb 11, 2012
ದಿನಾಂಕ 12 ಫೆಬ್ರವರಿ 2012ರ ಸಂಚಿಕೆ...
ಕಾಗೆಗಳ ಸಮೂಹ ಮರ್ಡರ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಮೆರಿಕದಲ್ಲಿಯೂ ಕಾಗೆಗಳಿವೆಯೇ!? ಹೀಗೊಂದು ಆಶ್ಚರ್ಯಭರಿತ ಪ್ರಶ್ನೆ ನನ್ನ ಮನಸ್ಸಲ್ಲೂ ಬಂದಿತ್ತು, ಹನ್ನೆರಡು ವರ್ಷಗಳ ಹಿಂದೆ ಮೊದಲಸಲ ಈ ದೇಶಕ್ಕೆ ಬಂದಿಳಿದಾಗ. ಆಗ ನಾನಿದ್ದದ್ದು ಶಿಕಾಗೋದಲ್ಲಿ. ಬಂದ ಒಂದೆರಡು ದಿನಗಳಲ್ಲೇ ಒಂದು ಮುಂಜಾನೆ ಎತ್ತರದ ಮರವೊಂದರ ಮೇಲಿಂದ ‘ಕಾ...ಕಾ...’ ದನಿ ಕೇಳಿ ವಿಚಿತ್ರವೆನಿಸಿತ್ತು. ಈಗ ಯೋಚಿಸಿದರೆ ಅದೊಂದು ಡಬಲ್ ಪೂರ್ವಾಗ್ರಹದ ಪ್ರಶ್ನೆ ಅನಿಸುತ್ತದೆ. ಒಂದನೆಯದಾಗಿ ‘ಅಮೆರಿಕದಲ್ಲಿಯೂ...’ ಎನ್ನಲಿಕ್ಕೆ ಅಮೆರಿಕ ಏನು ಸ್ವರ್ಗದಿಂದ ಬಂದದ್ದೇ? ಆಯ್ತಪ್ಪಾ ಮುಂದುವರಿದ ದೇಶ, ಸ್ವಚ್ಛ ಪರಿಸರ ಎಂದೆಲ್ಲ ಹೇಳಿದರೂ ಕಾಗೆ ಯಾವ ತಪ್ಪು ಮಾಡಿದೆಯಂತ ಅಮೆರಿಕದಲ್ಲಿ ಇರಕೂಡದು? ಸದ್ಯ ಹಾಗೇನೂ ಇಲ್ಲ. ಇಲ್ಲಿಯೂ ನಮ್ಮೂರಿನಂತೆಯೇ ಕಾಗೆಗಳಿವೆ. ನಿಜಕ್ಕಾದರೆ ಅಮೆರಿಕ ಮಾತ್ರವಲ್ಲ, ಅಂಟಾರ್ಕಟಿಕಾ ಒಂದನ್ನು ಬಿಟ್ಟು ಬೇರೆಲ್ಲ ಖಂಡಗಳ ಎಲ್ಲ ದೇಶಗಳಲ್ಲೂ ಕಾಗೆಗಳಿವೆ. ಅಲ್ಲಲ್ಲಿನ ಪರಿಸರ, ಜನಜೀವನ, ನಂಬಿಕೆಗಳು ಮತ್ತು ಆಚಾರವಿಚಾರಗಳಲ್ಲಿ ಹಾಸುಹೊಕ್ಕಾಗಿವೆ. ಆದರೂ ಒಂದು ಮಾತು ನಿಜ. ಕಾಗೆಯೆಂದರೆ ಕೊಳಕು, ಕೆಟ್ಟದು, ಅಪಶಕುನ ಎಂಬ ನಂಬಿಕೆ ಕಾಗೆ ಇರುವಲ್ಲೆಲ್ಲ ಚಾಲ್ತಿಯಲ್ಲಿದೆ. ಕಾಗೆ ಮುಟ್ಟಿದರೆ ಅಪಾಯ ಕಾದಿದೆಯೆಂತಲೋ ಮರಣವೇ ಬಂದೊದಗುತ್ತದೆಯೆಂದೋ ಭಾವನೆ ವ್ಯಾಪಕವಾಗಿದೆ. ಹಾಲಿವುಡ್ ಸಿನೆಮಾಗಳಲ್ಲೂ ಯಾವುದಾದರೂ ಕೆಟ್ಟ ಘಟನೆಯನ್ನು ತೋರಿಸಬೇಕಿದ್ದರೆ ಕಾಗೆಯ ಕೂಗನ್ನು ಸಂಕೇತವಾಗಿ ಬಳಸುತ್ತಾರೆ. ಅದನ್ನು ಕೇಳಿದಾಗ ನೋಡುಗನ ಮನಸ್ಸಿನಲ್ಲಿ ಕರಾಳಛಾಯೆ ಮೂಡುತ್ತದೆ. ಜನಪದದಲ್ಲಿ ಅಥವಾ ಸಾಹಿತ್ಯದಲ್ಲೂ ಬೇಕಿದ್ದರೆ ನೋಡಿ- ಹಂಸ, ನವಿಲು, ಕೋಗಿಲೆ, ಪಾರಿವಾಳ, ಕೋಳಿ, ಗಿಳಿ, ಗುಬ್ಬಚ್ಚಿ ಮುಂತಾದವುಗಳಿಗೆ ಸಿಗುವ ಪ್ರೀತ್ಯಾದರಗಳು ಕಾಗೆಗಿಲ್ಲ. “ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿಬರುತಿರಲಿ...” ಎನ್ನುತ್ತಾರೆ ಕುವೆಂಪು. ಅವರಿಗೂ ಕಾಗೆ ಬೇಕಾಗಿಲ್ಲ. ಯಾರಾದರೂ ಕೆಟ್ಟ ದನಿಯಲ್ಲಿ ಹಾಡಿದರೆ ಕಾಗೆಯ ಹೋಲಿಕೆ. ಕೆಟ್ಟ ಕೈಬರಹವಿದ್ದರೆ ಇದೇನಿದು ಕಾಗೆಕಾಲಿನಂತಿದೆ ಎಂದು ಛೀಮಾರಿ. ಅಂತೂ ಕಾಗೆ ಎಂದರೆ ಕೆಟ್ಟದು. ಪುರಾಣಕಥೆಗಳನ್ನು ಕೆದಕಿದರೂ ಅಷ್ಟೇ, ಕಾಗೆಯನ್ನು ಒಳ್ಳೆಯದಾಗಿ ಚಿತ್ರಿಸಿದ್ದು ಕಾಣಸಿಗುವುದಿಲ್ಲ. ರಾಮಾಯಣದ ಸುಂದರಕಾಂಡದಲ್ಲಿ ಕಾಕಾಸುರನ ಕಥೆ ಬರುತ್ತದೆ. ಸೀತೆ ಹನುಮಂತನ ಮೂಲಕ ರಾಮನಿಗೆ ಕಳಿಸುವ ಅಭಿಜ್ಞಾನ ಸಂದೇಶದಲ್ಲಿ ಹಿಂದೊಮ್ಮೆ ನಡೆದಿದ್ದ ಕಾಗೆಯ ಉಪಟಳದ ಘಟನೆಯನ್ನು ನೆನಪಿಸುತ್ತಾಳೆ. ಅದೆಲ್ಲ ಬೇಡಾ, ಯಾವ ಶನಿಕಾಟದಿಂದ ತಪ್ಪಿಸಬೇಕೆಂದು ನಾವೆಲ್ಲ ಬಯಸುತ್ತೇವೋ ಆ ಶನಿದೇವರ ವಾಹನವೇ ಕಾಗೆ! ಇಂತಿರುವ ಕಾಗೆಯನ್ನು ನಾವು ‘ಬುದ್ಧಿಶಾಲಿ’ ಎಂದು ಗುರುತಿಸಿದ್ದು ಈಸೋಪನ ನೀತಿಕಥೆಯಲ್ಲಿ. ಅದೇ, ಬಾಯಾರಿದ ಕಾಗೆ ಸ್ವಲ್ಪವೇ ನೀರಿದ್ದ ಹೂಜಿಯಲ್ಲಿ ಕಲ್ಲುಗಳನ್ನು ಪೇರಿಸಿ ಮನದಣಿಯೆ ನೀರು ಕುಡಿದುಕೊಂಡು ಹೋದ ಕಥೆ. ನಾವೇನೋ ಅದನ್ನು ಬರಿ ನೀತಿಕಥೆಯಾಗಿ ಓದಿದೆವು. ಆಪತ್ಕಾಲದಲ್ಲೂ ಉಪಾಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಕಲಿತುಕೊಂಡೆವು. ಆದರೆ ಕಾಗೆಯ ಮಟ್ಟಿಗೆ ಅದು ನೈಜತೆಗೆ ತೀರಾ ಸಮೀಪವಾದ ಕಥೆ. ಅಸಲಿಗೆ ಈಸೋಪನ ತಿಳುವಳಿಕೆಯನ್ನು ನಾವು ಮೆಚ್ಚಬೇಕು! ಸಕಲ ಪಕ್ಷಿಸಂಕುಲದಲ್ಲಿ ಕಾಗೆಯೇ ಅತ್ಯಂತ ಬುದ್ಧಿಶಾಲಿ ಪಕ್ಷಿ ಎಂದು ವಿಜ್ಞಾನಿಗಳು ಈಗ ಏನು ಪ್ರತಿಪಾದಿಸುತ್ತಿದ್ದಾರೋ ಈಸೋಪ ಅದನ್ನು ಆಗಲೇ ಹೇಳಿಯಾಗಿತ್ತು. ಇರಲಿ, ಈಸೋಪನನ್ನು ಅಲ್ಲೇಬಿಟ್ಟು ವಿಜ್ಞಾನಿಗಳ ಸಂಶೋಧನೆಗಳೇನು ಎಂದು ತಿಳಿದುಕೊಳ್ಳೋಣ. ಕಾಗಕ್ಕನ ಬಗ್ಗೆ ಅವರೇನು ಹೇಳುತ್ತಾರೆ ಎಂದು ಗಮನಿಸೋಣ. ನಾವು ಕಾಗೆಯ ಬಗೆಗಿನ ತುಚ್ಛ ಭಾವನೆಯಿಂದಾಗಿ ಅದನ್ನು ಅಷ್ಟೇನೂ ಗಮನಿಸುವುದಿಲ್ಲ, ಆದರೆ ಕಾಗೆ ಒಬ್ಬೊಬ್ಬ ಮನುಷ್ಯನನ್ನೂ ಸೂಕ್ಷ್ಮವಾಗಿ ಗಮನಿಸಬಲ್ಲದು, ಗುರುತಿಸಬಲ್ಲದು, ತನಗೆ ಅಪಾಯವಿದೆ ಎಂಬ ಸುಳಿವು ಸಿಕ್ಕರೆ ಸದಾ ನೆನಪಿಟ್ಟುಕೊಂಡು ಎಚ್ಚರವಾಗಿರಬಲ್ಲದು. ಅಪಾಯದ ಮಾಹಿತಿಯನ್ನು ತನ್ನ ಮರಿಗಳಿಗೂ ಕಲಿಸಿಡಬಲ್ಲದು! ಸಿಯಾಟಲ್ ವಿಶ್ವವಿದ್ಯಾಲಯದ ಕೆಲವು ‘ಕಾಕಸಂಶೋಧಕ’ ವಿಜ್ಞಾನಿಗಳು ನಡೆಸಿದ ಪ್ರಯೋಗಗಳು ಇದನ್ನು ಸಾಬೀತುಪಡಿಸಿವೆ. ಕಾಗೆಯ ದೇಹದ ಪ್ರಮಾಣಕ್ಕೆ ಹೋಲಿಸಿದರೆ ಅದರ ಮಿದುಳು ಅಷ್ಟೇನೂ ದೊಡ್ಡದಲ್ಲ, ಆದರೆ ಜೀವಸಂಕುಲದಲ್ಲಿ ಮನುಷ್ಯ ಮತ್ತು ಚಿಂಪಾಂಜಿಯನ್ನು ಬಿಟ್ಟರೆ ಅತ್ಯಂತ ವಿಕಸನಗೊಂಡಿರುವ ಮಿದುಳು ಕಾಗೆಯದು ಎಂದು ವಿಜ್ಞಾನಿಗಳ ಅಭಿಪ್ರಾಯ. ಅದಕ್ಕೆ ಮುಖ್ಯ ಪುರಾವೆಯೆಂದರೆ ಸಲಕರಣೆಗಳ (ಟೂಲ್ಸ್) ಬಳಕೆ. ಹಾಗೆಂದರೇನು? ಮರದ ಕಾಂಡದೊಳಗೆ ಒಂದಿಷ್ಟು ಹುಳಹುಪ್ಪಟೆ ಇರುವುದನ್ನು ಕಾಗೆ ನೋಡುತ್ತದೆನ್ನಿ. ಅದರ ಕೊಕ್ಕಿಗೆ ಅವು ಸಿಗುವುದಿಲ್ಲ. ಆಗ ಕಾಗೆ ಅಲ್ಲೇ ಯಾವುದಾದರೂ ಸಣ್ಣ ಗಿಡದ ಟಿಸಿಲನ್ನು ಮುರಿದು ಆ ಕಡ್ಡಿಯನ್ನು ಕೊಕ್ಕಿನಲ್ಲಿ ಹಿಡಿದು ಹುಳುಗಳನ್ನು ಈಚೆಗೆ ತರುತ್ತದೆ. ನೇರವಾದ ಕಡ್ಡಿಗೆ ಅವು ಸಿಗದಿದ್ದರೆ ಕಡ್ಡಿಯ ತುದಿಯನ್ನು ಕಾಲಿನಿಂದ ತುಸುವೇ ಬಗ್ಗಿಸಿ ಕೊಕ್ಕೆಯಂತೆ ಮಾಡಿಕೊಂಡು ಬಳಸುತ್ತದೆ. ಅಂದರೆ ಅಗತ್ಯವಿದ್ದಾಗ ಸಲಕರಣೆಗಳನ್ನು ತಾನೇ ತಯಾರಿಸಿಕೊಳ್ಳುವ ಜಾಣ್ಮೆ ಕಾಗೆಗಿದೆ! ಆಹಾರದ ಹುಡುಕಾಟದಲ್ಲಷ್ಟೇ ಅಲ್ಲ, ಗೂಡು ಕಟ್ಟುವಾಗಲೂ ವಿವಿಧ ರೀತಿಯ ಸಲಕರಣೆಗಳನ್ನು ಅದು ಬಳಸುತ್ತದೆ. ಗಟ್ಟಿಯಾದ ನೆಟ್ಟಗಿರುವ ಎಲೆಗಳಿಂದ ಗರಗಸದಂಥ ಹತ್ಯಾರಗಳನ್ನು ಮಾಡಿಕೊಳ್ಳುತ್ತದೆ. ಬಟ್ಟೆ ಒಣಗಿಸುವ ಹ್ಯಾಂಗರ್ ಎಲ್ಲೋ ಬಿದ್ದಿರುವುದು ಸಿಕ್ಕಿತೆನ್ನಿ, ಅದನ್ನೊಯ್ದು ತನಗೆ ಬೇಕಾದ ಆಕಾರಕ್ಕೆ ಬಗ್ಗಿಸಿ ಗೂಡಿನ ಫ್ರೇಮ್ವರ್ಕ್ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಮಾನವನ ಹೊರತಾಗಿ ನೈಸರ್ಗಿಕವಾಗಿ ಎಂಜಿನಿಯರಿಂಗ್ ಕೌಶಲ್ಯವನ್ನು ಸಾಧಿಸಿದ ಜೀವಿಯಿದ್ದರೆ ಅದು ಕಾಗೆ! ಸಲಕರಣೆಗಳ ಬಳಕೆಯೊಂದೇ ಕಾಗೆಯ ಬುದ್ಧಿಮಟ್ಟದ ಮಾಪಕವಲ್ಲ. ಮನುಷ್ಯ ಆಧುನಿಕನಾದಂತೆಲ್ಲ ಕಾಗೆಯೂ ಜೊತೆಯಾಗಿ ಹೆಜ್ಜೆಯಿಟ್ಟು ಚಾಣಾಕ್ಷತೆಯನ್ನು ಹೆಚ್ಚಿಸಿಕೊಂಡಿದೆ. ಕೆಲದಿನಗಳ ಹಿಂದೆ ಟಿ.ವಿಯಲ್ಲಿ ಒಂದು ಸಾಕ್ಷ್ಯಚಿತ್ರದಲ್ಲಿ ತೋರಿಸಿದ್ದರು- ಜಪಾನ್ನಲ್ಲಿ ಕಾಗೆಗಳು ಟ್ರಾಫಿಕ್ಸಿಗ್ನಲ್ಗಳನ್ನು ಬಳಸಿಕೊಳ್ಳುವ ರೀತಿ! ಜಪಾನ್ ದೇಶದಲ್ಲಿ ಹೇರಳವಾಗಿ ಸಿಗುವ ಅಕ್ರೂಟ್, ವಾಲ್ನಟ್ ಮುಂತಾದ ಹಣ್ಣುಗಳು ಕಾಗೆಯ ಆಹಾರ. ಆದರೆ ಅವು ಗಟ್ಟಿ ಕವಚ ಹೊಂದಿರುತ್ತವಷ್ಟೆ? ಕಾಗೆಗಳು ಅದನ್ನು ಕೊಕ್ಕಿನಲ್ಲಿ ತಂದು ಸಿಗ್ನಲ್ನಲ್ಲಿ ನಿಂತಿರುವ ವಾಹನಗಳ ಮುಂದೆ ಚೆಲ್ಲುತ್ತವೆ. ಹಸಿರುದೀಪ ಬಂದೊಡನೆ ಪಕ್ಕಕ್ಕೆ ಸರಿಯುತ್ತವೆ. ವಾಹನಗಳು ಮುಂದಕ್ಕೋಡುವಾಗ ಚಕ್ರಗಳ ಘರ್ಷಣೆಗೆ ಸಿಕ್ಕಿ ಅಕ್ರೂಟ್ ಕವಚ ಒಡೆಯುತ್ತವೆ. ಮತ್ತೊಮ್ಮೆ ಕೆಂಪುದೀಪ ಹೊತ್ತಿದಾಗ ಹೋಗಿ ಒಡೆದ ಬೀಜಗಳನ್ನು ತಿಂದುಬರುತ್ತವೆ! ಅಮೆರಿಕದಲ್ಲಿ ಪೌರಾಡಳಿತ ಅಧಿಕಾರಿಗಳು ಇನ್ನೂ ಒಂದು ಅಂಶವನ್ನು ಗಮನಿಸಿದ್ದಾರೆ. ಇಲ್ಲಿ ನಗರಪ್ರದೇಶಗಳಲ್ಲಿ ಬೇರೆಬೇರೆ ಬಡಾವಣೆಗಳಲ್ಲಿ ವಾರದ ಬೇರೆಬೇರೆ ದಿನಗಳಲ್ಲಿ ಕಸ ವಿಲೇವಾರಿ ಇರುತ್ತದೆ. ಆಯಾಯ ದಿನಗಳಂದು ನಾಗರಿಕರು ತಂತಮ್ಮ ಮನೆಗಳ ಕಸವನ್ನು ಚೀಲಗಳಲ್ಲಿ ತುಂಬಿಸಿ ರಸ್ತೆಬದಿಯಲ್ಲಿಡಬೇಕು. ಕಾಗೆಗಳು ವೇಳಾಪಟ್ಟಿಯನ್ನು ಬಾಯಿಪಾಠ ಮಾಡಿಕೊಂಡು ಆಯಾಯ ದಿನಗಳಲ್ಲಿ ಆಯಾಯ ಬಡಾವಣೆಗಳಲ್ಲಿ ಠಳಾಯಿಸುತ್ತವೆ. ಗಾರ್ಬೇಜ್ ಟ್ರಕ್ ಬರುವಷ್ಟರಲ್ಲಿ ಚೀಲಗಳಲ್ಲಿ ತಮಗೇನಾದರೂ ಸಿಗುತ್ತದೆಯೇ ಎಂದು ಕೆದಕುತ್ತವೆ. ಕಾಗೆಗಳು ಇಷ್ಟೊಂದು ಬುದ್ಧಿಶಾಲಿಗಳಾಗುವುದಕ್ಕೆ ಕಾರಣಗಳೇನಿರಬಹುದು ಎಂಬುದನ್ನೂ ಸಂಶೋಧಕರು ವಿವರಿಸುತ್ತಾರೆ. ಕುಟುಂಬಜೀವನದ ವಿಷಯದಲ್ಲಿ ಮನುಷ್ಯರಂತೆಯೇ ಕಾಗೆ ಕೂಡ. ಮನುಷ್ಯನಿಗಿಂತಲೂ ಉತ್ತಮ. ಕೂಡುಕುಟುಂಬ ವ್ಯವಸ್ಥೆ, ಆಜನ್ಮಪರ್ಯಂತ ಏಕಪತ್ನೀವ್ರತ. ಮರಿಗಳ ಲಾಲನೆಪಾಲನೆ ಭಾವನಾತ್ಮಕ ನಂಟಿನಿಂದ ನಡೆಯುತ್ತದೆ. ಮೊಟ್ಟೆಯೊಡೆದು ಬಂದ ದಿನದಿಂದಲೇ ಹಿರಿಯರ ಮಾರ್ಗದರ್ಶನದಲ್ಲಿ ಕಲಿಕೆ ಆರಂಭವಾಗುತ್ತದೆ. ಇನ್ನೊಂದು ಕಾರಣ ಕಾಗೆಯ ಆಹಾರಕ್ರಮ. ಸಸ್ಯಾಹಾರ ಮಾಂಸಾಹಾರ ಎಲ್ಲವನ್ನೂ ತಿನ್ನುವುದರಿಂದ ಸಹಜವಾಗಿಯೇ ಯಾವ ಆಹಾರವನ್ನು ಯಾವರೀತಿ ಸಂಗ್ರಹಿಸಬೇಕು ಮತ್ತು ತಿನ್ನಬೇಕು ಎಂಬ ಕಲಿಕೆ ಅಗಾಧವಾಗಿ ಬೇಕಾಗುತ್ತದೆ. ಮಾಂಸವನ್ನಷ್ಟೇ ಅಥವಾ ಹಣ್ಣುಗಳನ್ನಷ್ಟೇ ತಿನ್ನುವ ಜೀವಿಗಳಿಗಿಂತ ಕಾಗೆಯ ಮಿದುಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಮೂರನೆಯದಾಗಿ ಮನುಷ್ಯವಸತಿ ಸಾಧ್ಯವಿರುವಲ್ಲೆಲ್ಲ ಕಾಗೆಗಳೂ ಬದುಕುತ್ತವೆ. ಹೀಗೆ ವಿಶಾಲವ್ಯಾಪ್ತಿಯ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ವಿಕಸಿತ ಮಿದುಳು ಇರಬೇಕಾಗುತ್ತದೆ. ಒಟ್ಟಿನಲ್ಲಿ ಮನುಷ್ಯನಿಗೆ ಇಷ್ಟವೆನಿಸದ ಜೀವಿಯಾಗಿಯೂ ಬೌದ್ಧಿಕವಾಗಿ ಮನುಷ್ಯನ ಮಟ್ಟಕ್ಕೆ ಹತ್ತಿರವಿರುವ ಅಗ್ಗಳಿಕೆ ಕಾಗೆಯದು. ಅದೆಲ್ಲ ಸರಿ, ತಲೆಬರಹದಲ್ಲಿನ ‘ಮರ್ಡರ್’ ವಿಷಯವೇನಂತ ಗೊತ್ತಾಗಿಲ್ಲವಲ್ಲ! ಉದ್ವೇಗಕಾರಿಯಾಗಿ ಸುದ್ದಿ ಬಿತ್ತರಿಸುವ ಮಾಧ್ಯಮಗಳ ರೋಗ ಇಲ್ಲಿಗೂ ಬಂತೇ? ಹಾಗೇನಿಲ್ಲ. ಇಂಗ್ಲೀಷ್ ಭಾಷೆಯಲ್ಲಿ ಬೇರೆಬೇರೆ ಪ್ರಾಣಿ/ಪಕ್ಷಿಗಳ ಸಮೂಹಕ್ಕೆ ಆಯಾಯ ಪ್ರಭೇದವನ್ನನುಸರಿಸಿ ಬೇರೆಬೇರೆ ಪದದ ಬಳಕೆಯಿರುವುದು ನಿಮಗೆ ಗೊತ್ತಿರಬಹುದು. Flock of sheep, Herd of buffaloes ಇತ್ಯಾದಿ ಇದ್ದಂತೆ ಸಿಂಹಗಳ ಗುಂಪು Pride; ಮಂಗಗಳ ಗುಂಪು Barrel; ಇರುವೆಗಳದು Colony. ಗೂಬೆಗಳು ಗುಂಪಾಗಿ ಇದ್ದರೆ ಅದಕ್ಕೆ ಏನು ಹೆಸರು ಗೊತ್ತೇ? Parliament of owls! ಅಂತೆಯೇ ಕಾಗೆಗಳು ಗುಂಪಾಗಿ ಇರುವುದನ್ನು Murder of crows ಎನ್ನುತ್ತಾರೆ. ನೋಡಿದಿರಾ, ಕಾಗೆಯೆಂದರೆ ಕರಾಳದೃಶ್ಯವೇ ಕಣ್ಮುಂದೆ ಬರುವಂತೆ ಮಾಡಿಟ್ಟಿದ್ದಾರೆ ಭಾಷಾಪಂಡಿತರೂ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.