Episodes
Saturday Oct 22, 2011
Naarada Also Uses Deodorant
Saturday Oct 22, 2011
Saturday Oct 22, 2011
ದಿನಾಂಕ 23 ಅಕ್ಟೋಬರ್ 2011ರ ಸಂಚಿಕೆ...
ನಾರದ ಮುನಿ ಪರಿಮಳಕ್ಕೆ ಅತ್ತರು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವರು ತ್ರಿಲೋಕಸಂಚಾರಿ. ತಂಬೂರಿ ಹಿಡಕೊಂಡು ಹೊರಟರೆಂದರೆ ತಿರುಗಾಟದಲ್ಲೇ ಬಿಜಿಯಾಗುತ್ತಾರೆ. ಒಮ್ಮೆ ಅನಂತನಾಗ್ ರೂಪದಲ್ಲಿ ಭೂಲೋಕಕ್ಕೂ ಬಂದಿದ್ರಲ್ಲ? “ಇದು ಎಂಥಾ ಲೋಕವಯ್ಯಾ...” ಎಂದು ಹಾಡಿಕೊಳ್ಳುತ್ತ ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಮೇಲೆ ಓಡಾಡಿದ್ರಲ್ಲ? (ಈಗಾದ್ರೆ ಮೆಟ್ರೊ ರೈಲ್ನಲ್ಲೂ ಕಾಣಿಸಿಕೊಳ್ತಿದ್ರೋ ಏನೊ). ಇಂತಿರ್ಪ ನಾರದ ಮಹರ್ಷಿಗಳ ಒಂದು ಖಾಸಗಿ ವಿಚಾರ ಮಾತ್ರ ನಿಮಗೆ ಗೊತ್ತಿಲ್ಲ ಎಂದುಕೊಳ್ಳುತ್ತೇನೆ. ಯಾವ ಪುರಾಣದಲ್ಲೂ ಉಲ್ಲೇಖಗೊಂಡಿರದ ವಿಚಾರವಿದು. ಏನಪ್ಪಾ ಅಂತಂದ್ರೆ ನಾರದ ಮಹರ್ಷಿಗಳದು ಒಂದು ರೀತಿಯ ವಿಶಿಷ್ಟ ಭೌತಿಕಲಕ್ಷಣ. ಅವರ ಮೈಕೈ ಬೆವರುವುದಿಲ್ಲ. ಮೈಗೆ ಕೊಳೆ ಅಂಟುವುದಿಲ್ಲ. ಹಾಗಾಗಿ ದಿನಾ ಸ್ನಾನ ಮಾಡಬೇಕಂತಲೂ ಇಲ್ಲ (ಟೂರ್ನಲ್ಲಿ ಇರುವಾಗ ಟೈಮೂ ಸಿಗಲಿಕ್ಕಿಲ್ಲ, ಕೆಲವೊಮ್ಮೆ ಅನುಕೂಲವೂ ಆಗಲಿಕ್ಕಿಲ್ಲ ಎನ್ನಿ). ಯಾವಾಗ ನೋಡಿದರೂ ತಾಜಾ ಮೈ ಕಾಂತಿ. ಕೊಳೆತು ನಾರುವ ಚಾನ್ಸೇ ಇಲ್ಲ. ಅದಕ್ಕೇ ಅವರಿಗೆ ‘ನಾರದ’ ಮಹರ್ಷಿ ಎಂದು ಹೆಸರು! ಅದ್ಸರಿ, ಅವರು ಅತ್ತದ್ದಾದ್ದರೂ ಏಕೆ? ಕಲಹಪ್ರಿಯನಾಗಿ ಬೇರೆಯವರನ್ನು ಅಳಿಸುವವರು ತಾವೇ ಕಣ್ಣೀರುಗರೆದದ್ದೇಕೆ? ಅದು ಹಾಗಲ್ಲ. ನಾರದ ಮಹರ್ಷಿಗೂ ನಮ್ಮೆಲ್ಲರಂತೆಯೇ ಸೆಂಟಿನ ಶೋಕಿ. ಮೂರು ಲೋಕಗಳಲ್ಲಿ ಸಂಗ್ರಹಿಸಿದ ಒಳ್ಳೊಳ್ಳೆಯ ಹೂವುಗಳಿಂದ ಭಟ್ಟಿಯಿಳಿಸಿ ತೆಗೆದ ಸುಗಂಧದ್ರವ್ಯ ‘ಅತ್ತರು’ ತುಂಬಿಸಿದ ಸಣ್ಣಸಣ್ಣ ಬಾಟ್ಲಿಗಳ ದೊಡ್ಡ ಸಂಗ್ರಹ ಅವರಲ್ಲಿದೆ. ತಮ್ಮದು ನಾರದ ಶರೀರವಾದರೂ ನಾರಾಯಣ ನಾರಾಯಣ ಎನ್ನುತ್ತ ಅತ್ತರು ಸ್ಪ್ರೇ ಮಾಡಿಕೊಳ್ಳುತ್ತಾರೆ. ನಾರಾಯಣ ನಾರಾಯಣ! ಇದೊಂದು ಕಪೋಲಕಲ್ಪಿತ ಕಟ್ಟುಕಥೆಯಂತ ನಿಮಗಾಗಲೇ ಗೊತ್ತಾಗಿರುತ್ತದೆ. ಹೌದು, ಶೀರ್ಷಿಕೆಯಲ್ಲಿನ ಶ್ಲೇಷೆ ವಿ‘ಶ್ಲೇಷ’ಣೆಗೆಂದೇ ನಾನಿದನ್ನು ಕಟ್ಟಿದ್ದು. ಆದರೆ ಒಂದು ಕಿವಿಮಾತು. ‘ನಾರದ’ ಮಹರ್ಷಿಯೇ ಅತ್ತರು ಚಿಮುಕಿಸಿಕೊಳ್ಳುತ್ತಾರಾದರೆ ಭೂಲೋಕದ ‘ನಾರಿ’ಯರು ಇಷ್ಟೆಲ್ಲ ಪ್ರಸಾಧನ ಸಾಮಗ್ರಿ ಬಳಸಿಕೊಳ್ಳುವುದು, ಸೆಂಟು ಸಿಂಪಡಿಸಿಕೊಳ್ಳುವುದು, ಹೂ ಮುಡಿದುಕೊಳ್ಳುವುದು ಯಾಕಂತ ಈಗ ತಿಳಿಯಿತು ಎಂಬ ಹೊಸ ಲಾಜಿಕ್ ಮಾತ್ರ ಶುರುಮಾಡಬೇಡಿ! ಯುರೇಕಾ ಎಂದು ಬಚ್ಚಲುಮನೆಯಿಂದ ಹಾಗೆಯೇ ಓಡಬೇಡಿ! ಹೂವಿನಿಂದಲೇ ನಾರಿಗೂ ಮನ್ನಣೆ ಸಿಗುವುದು, ಸ್ವರ್ಗಪ್ರಾಪ್ತಿ ಆಗುವುದು ಇತ್ಯಾದಿ ಹೌದಾದರೂ ನಾರಿ ಮುನಿದರೆ ಮಾರಿ ಎಂದು ಕಳೆದವಾರ ವ್ಯಾಖ್ಯಾನಿಸಿದ್ದು ನೆನಪಿದೆ ತಾನೆ? ಶ್ಲೇಷೆಯನ್ನು ಬಣ್ಣಿಸುತ್ತ ಛಂದೋಮಿತ್ರ ಪುಸ್ತಕದಲ್ಲಿ ಪ್ರೊ.ಅ.ರಾ.ಮಿತ್ರ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅವರೆನ್ನುತ್ತಾರೆ, ‘ಶ್ಲೇಷೋದ್ಯಾನದಿ ಶಬ್ದವ ಕಸಿಮಾಡಿ ಹೊಸತು ಪದಾರ್ಥವ ಬೆಳೆಸುವರು...’ ಹೇಗೆಂದು ಒಂದು ಚಂದದ ಉದಾಹರಣೆಯನ್ನು ತಾವೇ ಹೊಸೆದು ಕೊಡುತ್ತಾರೆ- ಪೀತವರ್ಣಪ್ರೀತೆ ಗೃಹಪತ್ರಕರ್ತೆ ದೋಷದ ಕರಡು ತಿದ್ದದ ಮನೆಯ ಸಂಪಾದಕ ಇಬ್ಬರಿಂ ಹಾಳಾಯ್ತು ಮನೆಯಚ್ಚುಕೂಟ ಬತ್ತಿ ಹೋಯಿತು ಕೇಳು ಅರ್ಥ ಜೀವನದಿ. ಈ ಪದ್ಯದಲ್ಲಿ ಪ್ರತಿಯೊಂದು ಪದವೂ ಎನ್ನುವಮಟ್ಟಿಗೆ ದ್ವಂದ್ವಾರ್ಥ. ಪೀತವರ್ಣಪ್ರೀತೆ ಎಂದರೆ ಹಳದಿ ಲೋಹವನ್ನು (ಚಿನ್ನವನ್ನು) ಬಯಸುವವಳು. ಪೀತಪತ್ರಿಕೋದ್ಯಮ (yellow journalism, useless gossip) ನಡೆಸುವವಳು ಎಂಬ ಅರ್ಥವೂ ಬಂತು. ಗೃಹಪತ್ರಕರ್ತೆ ಎಂದರೆ ಗೃಹಿಣಿಯೆಂಬ ಪತ್ರಕರ್ತೆ; ಗೃಹಪತ್ರ (ಮನೆಯ ಖರ್ಚುವೆಚ್ಚ ಜವಾಬ್ದಾರಿ) ನೋಡುವವಳು ಕೂಡ. ಸಂಪಾದಕ ಎಂದರೆ ಪತ್ರಿಕಾ ಸಂಪಾದಕ ಅಂತನೂ ಆಗುತ್ತದೆ, ಹಣ ಸಂಪಾದಿಸುವವನು (ಯಜಮಾನ) ಎಂಬರ್ಥವೂ ಬರುತ್ತದೆ. ಅಚ್ಚುಕೂಟ ಎಂದರೆ ಅಚ್ಚುಕಟ್ಟುತನ. ಪ್ರಿಂಟಿಂಗ್ ಪ್ರೆಸ್ ಸಹ. ಅರ್ಥ = ಸ್ವಾರಸ್ಯ, ಹಣ ಕೂಡ. ಜೀವನದಿ = ಜೀವನದಲ್ಲಿ. ಜೀವವೆಂಬ ನದಿ ಎಂದೂ ಅರ್ಥೈಸಬಹುದು. ಅರ್ಥ(ಹಣ)ವೆಂಬ ಜೀವನದಿಯು ದುಂದುವೆಚ್ಚದಿಂದ ಬತ್ತಿಹೋಯಿತು ಎಂದೂ ಅರ್ಥ. ಇಷ್ಟು ಸಂಕೀರ್ಣವಿದ್ದೂ ಸ್ವಾರಸ್ಯಕರವಾದ ದ್ವಂದ್ವಾರ್ಥ ರಚನೆಗಳು ಅ.ರಾ.ಮಿತ್ರರಂಥ ಚತುರೋಕ್ತಿಪಂಡಿತರಿಗಷ್ಟೇ ಸಾಧ್ಯ. ನಮಗೆಲ್ಲ ಏನಿದ್ದರೂ ಆಗಲೇ ರಚಿತವಾದ ವಾಕ್ಯಗಳಲ್ಲಿ, ಮಾತುಗಳಲ್ಲಿ, ಹಾಡಿನ ಸಾಲುಗಳಲ್ಲಿ ಅಡಗಿರುವ ಶ್ಲೇಷೆಯನ್ನು ಪತ್ತೆಹಚ್ಚಿ ಆನಂದಿಸುವುದೇ ದೊಡ್ಡ ರೋಮಾಂಚನ. ಅದೂ ಉದ್ದೇಶಪೂರ್ವಕವಾಗಿ ಶ್ಲೇಷೆಯಾಗಬೇಕೆಂದೇ ಹೆಣೆದ ಶ್ಲೇಷೆಗಿಂತಲೂ ತನ್ನಿಂತಾನೇ ರೂಪುಗೊಂಡ ಶ್ಲೇಷೆ ಪತ್ತೆಯಾದಾಗ ಬಾಳೆಗೊನೆಯಲ್ಲಿ ಅವಳಿಬಾಳೆಹಣ್ಣು ಕಂಡಾಗ ಆಗುವಷ್ಟೇ ಖುಷಿ. ಒಂದು ಉದಾಹರಣೆ ಹೇಳುತ್ತೇನೆ. ‘ಶ್ರಾವಣ ಬಂತು ಕಾಡಿಗೆ... ಬಂತು ನಾಡಿಗೆ... ಬಂತು ಬೀಡಿಗೆ...’ ಕವಿತೆ ಕೇಳಿದ್ದೀರಲ್ವಾ? ದ.ರಾ.ಬೇಂದ್ರೆಯವರದು. ಬೇಂದ್ರೆ ಶ್ಲೇಷಾಲಂಕಾರಪ್ರಿಯರು, ಪರಂತು ಈ ಪದ್ಯದಲ್ಲಿ ಖಂಡಿತವಾಗಿಯೂ ಶ್ಲೇಷೆಯ ಉದ್ದೇಶ ಇಟ್ಟುಕೊಂಡಿರಲಾರರು. ಆದರೇನಂತೆ? ನಾವು ಪದ್ಯವನ್ನು ‘ಶ್ರಾವಣ ಬಂತು ನಾಡಿಗೆ... ಬಂತು ಬೀಡಿಗೆ’ ಎಂದು ಓದಿಕೊಂಡು ಮನಸ್ಸಿನಲ್ಲೇ ‘ಸಿಗರೇಟಿಗೆ ಅಲ್ಲಾ’ ಎಂದು ಹೇಳಿಕೊಂಡರೆ ಸೂಪರ್ ಶ್ಲೇಷೆ! ಎಲ್.ಆರ್.ಈಶ್ವರಿ ಹಾಡಿದ ‘ದೂರದಿಂದ ಬಂದಂಥ ಸುಂದರಾಂಗ ಜಾಣ...’ ಹಾಡಿನಲ್ಲಿ ‘ನಾಕಾಣೆ ನಾಕಾಣೆ ನನ್ನದೇವರಾಣೆ ಭಲಾರೇ...’ ಎನ್ನುವಾಗ ಎರಡೂ ನಾಕಾಣೆಗಳನ್ನು ಎಂಟಾಣೆ ಮಾಡಿಕೊಂಡರೆ ಒಟ್ಟು ಹದಿನಾರಾಣೆ ಶ್ಲೇಷೆ! ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಸಂಭಾಷಣೆಯಲ್ಲಿ ಹಾಸ್ಯರಸೋತ್ಪನ್ನವಾಗುವುದು ಹೆಚ್ಚಾಗಿ ಶ್ಲೇಷೆಯಿಂದಲೇ. ದೂತ, ಕಾವಲುಗಾರ, ಸೇವಕ ಮುಂತಾದ ಚಿಲ್ಲರೆ ಪಾತ್ರಗಳು ರಸವತ್ತಾದ, ಸಮಯಸ್ಫೂರ್ತಿಯ ಶ್ಲೇಷೆಯಿಂದ ಪ್ರೇಕ್ಷಕರನ್ನು ನಗಿಸುತ್ತವೆ. ಕೃಷ್ಣಸಂಧಾನ ಪ್ರಸಂಗದಲ್ಲಿ ಕೃಷ್ಣನ ಪಾತ್ರವನ್ನು ಯಕ್ಷಗಾನದ ಶ್ರೇಷ್ಠ ಕಲಾವಿದರಲ್ಲೊಬ್ಬರಾದ ವಾಸುದೇವ ಸಾಮಗರು ನಿರ್ವಹಿಸಿದರೆನ್ನಿ, ಆಗ ದೂತನ ಪಾತ್ರಧಾರಿ ಒಮ್ಮೆಯಾದರೂ “ವಾಸುದೇವಾ ನಿನಗೆ ಗೊತ್ತಿಲ್ಲದ್ದು ಏನಿದೆ ಈ ಪ್ರಪಂಚದಲ್ಲಿ? ಎಲ್ಲದಕ್ಕೂ ನೀನೇ ಕಾರಣ” ಎಂದು ಶ್ಲೇಷೆ ಮಾಡದೆ ಇರುವುದಿಲ್ಲ. ಸಾಮಗರಂಥ ಹಿರಿಯರನ್ನು ಹೆಸರು ಹಿಡಿದು ಏಕವಚನದಲ್ಲಿ ಕರೆಯುವ ಅವಕಾಶದಿಂದ ತಪ್ಪಿಸಿಕೊಳ್ಳುವುದಿಲ್ಲ. ಕೃಷ್ಣನ ಪಾತ್ರ ವಾಸುದೇವ ಸಾಮಗರದ್ದೆಂದು ಗೊತ್ತೇ ಇರುವುದರಿಂದ ಪ್ರೇಕ್ಷಕರಿಗೂ ರೋಮಾಂಚನ. ಕೆಲವೊಮ್ಮೆ ವಿದೂಷಕನ ಪ್ರತ್ಯುತ್ಪನ್ನಮತಿಗೆ ಅನುವಾಗಲೆಂದೇ ರಾಜ/ರಕ್ಕಸ ಪಾತ್ರಗಳು ಸಂಭಾಷಣೆಯಲ್ಲಿ ಕಿಡಿಹಚ್ಚುವುದೂ ಇದೆ. ಆಗ ವಿದೂಷಕನಿದ್ದವನು ಪ್ರಸಂಗ ಪೌರಾಣಿಕವಾದರೂ ಪ್ರಸ್ತುತ ವಿದ್ಯಮಾನದ, ಈಗಿನ ಕಾಲಘಟ್ಟದ ನುಡಿಮತ್ತುಗಳನ್ನು ಶ್ಲೇಷೆಯಾಗಿ ಉದುರಿಸುವುದೂ ಉಂಟು. ಉದಾಹರಣೆಗೆ, “ಆಹಾ! ಅಲ್ಲಿ ನೋಡು. ಸುಂದರ ಸರೋವರದಲ್ಲಿ ನೀರಿನ ತರಂಗಗಳನ್ನು ಕಂಡೆಯಾ?” ಎಂದು ಕೇಳುತ್ತಾನೆ ಅರ್ಜುನ. “ತರಂಗ!? ನಮ್ಮ ಮನೆಯಲ್ಲಿ ಪ್ರತಿ ವಾರ ತರಿಸ್ತೇವೆ. ಈ ವಾರದ್ದು ಇನ್ನೂ ಓದಿ ಆಗಿಲ್ಲ ಅಷ್ಟೇ” ಎನ್ನುತ್ತಾನೆ ದೂತ! “ಅದಲ್ವೋ ನಾನು ಹೇಳಿದ್ದು. ಸುಭದ್ರೆಯ ಚೆಲುವಿನಿಂದ ನನ್ನ ಹೃದಯದಲ್ಲೆದ್ದಿರುವ ಪ್ರೇಮತರಂಗಗಳನ್ನು ಗಮನಿಸಿದೆಯಾ ಎಂದು ನಿನ್ನನ್ನು ಕೇಳಿದ್ದು!” ಅರ್ಜುನ ಉವಾಚ. ಪ್ರೇಕ್ಷಕರ ಚಪ್ಪಾಳೆ. ಬುದ್ಧಿ ಹರಿತಗೊಳಿಸುವುದಕ್ಕೆ ಶ್ಲೇಷೆ ಖಂಡಿತವಾಗಿಯೂ ಸಹಾಯಕವಾಗುತ್ತದೆ. ನಮ್ಮ ಜನಪದ ಕಾವ್ಯಗಳಲ್ಲಿನ ಒಗಟುಗಳು, ದಾಸಸಾಹಿತ್ಯದಲ್ಲಿನ ‘ಮುಂಡಿಗೆ’ಗಳು ಮುಂತಾದವೆಲ್ಲ ಶ್ಲೇಷೆಯಲ್ಲದೆ ಬೇರೇನಲ್ಲ. ಶಿಶುನಾಳ ಶರೀಫರ ರಚನೆಗಳೂ ಪಾರಮಾರ್ಥಿಕ ತತ್ತ್ವಗಳನ್ನು ಶ್ಲೇಷೆಯಾಗಿ ಒಗಟಿನ ರೂಪದಲ್ಲಿ ತಿಳಿಯಹೇಳುತ್ತವೆ. ಹಾಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ ತಂಗಿ ಕೋಡಗನ ಕೋಳಿ ನುಂಗಿತ್ತಾ. ಅದೇರೀತಿ, ಆತ್ಮವು ಶರೀರವನ್ನು ತೊರೆದು ಹೋಗುವ ಪ್ರಕ್ರಿಯೆಯನ್ನು ಪುರಂದರದಾಸರು ಮಾರ್ಮಿಕವಾಗಿ ಬಣ್ಣಿಸುತ್ತಾರೆ- “ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿತುಂಬಿ ಮಂದಿಯಿರಲು ಕಂಬ ಮುರಿದು ಡಿಂಬ ಬಿದ್ದು ಅಂಬರಕ್ಕೆ ಹಾರಿತಲ್ಲೋ... ರಾಮಾ... ಗಿಳಿಯು ಪಂಜರದೊಳಿಲ್ಲ...” ಕನಕದಾಸರು ಒಂದು ಕೀರ್ತನೆಯಲ್ಲಿ ತರಕಾರಿ ಮಾರುತ್ತಿದ್ದಾರೇನೊ ಅನ್ನಿಸುವಂತೆ “ಪರಮಪುರುಷ ನೀನೆಲ್ಲಿಕಾಯಿ/ ಸರಸಿಯೊಳಗೆ ಕರಿಕೂಗಲುಕಾಯಿ/ ಹಿರಿದು ಮಾಡಿದ ಪಾಪ ನುಗ್ಗೇಕಾಯಿ/ ಹರಿ ನಿನ್ನ ಧ್ಯಾನ ಬಾಳೇಕಾಯಿ/ ಸರುವ ಜೀವರ್ಗುಣಿಸಿಯುಂ ಬದನೆಕಾಯಿ/ ಅರಿಷಡ್ವರ್ಗಗಳೊದಗಿಲಿಕಾಯಿ” ಎನ್ನುತ್ತಾರೆ. ಇಲ್ಲಿ ‘ಕಾಯಿ’ ಎಂದರೆ ಭಗವಂತನಲ್ಲಿ ಮೊರೆ,“ನೀನೇ ಕಾಪಾಡಬೇಕಪ್ಪಾ” ಎಂದು. ಅದೆಲ್ಲ ಇರಲಿ. ಈ ಸಿಂಪಲ್ ಶ್ಲೇಷೆಯೊಗಟು ಗೊತ್ತಾ ನಿಮಗೆ? ‘ಕಾವಲಿಯಿಂದ ಏಳು ದೋಸೆ; ತಟ್ಟೆಯಲ್ಲಿ ಆರು ದೋಸೆ; ಬಾಯಿಗೆ ಹತ್ತು ದೋಸೆ. ಒಟ್ಟು ಎಷ್ಟು ದೋಸೆ?’ ಉತ್ತರ: ಒಂದೇ ದೋಸೆ. ಅದನ್ನು ನಾನೇ ತಿಂದುಬಿಟ್ಟೆ, ನಿಮಗೆ ಒಂಚೂರೂ ಉಳಿಸಿಲ್ಲ! ದೋಸೆಯಷ್ಟೇ ಅಲ್ಲ, ಎರಡು ಕಂತುಗಳಲ್ಲಿ ಹರಿದುಬಂದ ಶ್ಲೇಷ ರಸಾಯನವೂ ನಿಶ್ಶೇಷವಾಯಿತು. ಬೇರೆ ಭಾಷೆಯ ಪದಗಳನ್ನೂ ಸೇರಿಸಿ, ಕಸಿ ಕಟ್ಟಿ ಇನ್ನೂ ಗಮ್ಮತ್ತಿನ ಶ್ಲೇಷೆಗಳನ್ನು ರಚಿಸಬಹುದು, ಹುಡುಕಬಹುದು. ಆದರೆ ನನ್ನ ಉದ್ದೇಶವಿದ್ದದ್ದು ಕಸ್ತೂರಿಕನ್ನಡದಲ್ಲಿ ಶ್ಲೇಷೆ ಎಷ್ಟು ಚೆನ್ನಾಗಿದೆ ಎಂದು ಪರಿಚಯಿಸುವುದು. ಅದಕ್ಕೋಸ್ಕರ ಅಚ್ಚಕನ್ನಡ ಶ್ಲೇಷೆಗಳನ್ನಷ್ಟೇ ಅಳವಡಿಸಿಕೊಂಡೆ. ಅಂದಹಾಗೆ ಕನ್ನಡಪ್ರೇಮ ಎರಡು ವಿಧ : ಎಂದಿಗೂ ಮಾಸದ ಕನ್ನಡಪ್ರೇಮ; ನವೆಂಬರ್ ಮಾಸದ ಕನ್ನಡಪ್ರೇಮ. ನಿಮ್ಮದು ಯಾವುದು? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.