Episodes
Thursday Sep 20, 2012
nanna baravaNige beLeda bage
Thursday Sep 20, 2012
Thursday Sep 20, 2012
ದಿನಾಂಕ 21 ಸೆಪ್ಟೆಂಬರ್ 2012
ನನ್ನ ಬರವಣಿಗೆ ಬೆಳೆದ ಬಗೆ
* ಶ್ರೀವತ್ಸ ಜೋಶಿ
[ಖ್ಯಾತ ಲೇಖಕ, ಪತ್ರಕರ್ತ, ನನ್ನ ಆತ್ಮೀಯ ಸ್ನೇಹಿತ ‘ಜೋಗಿ’ (ಗಿರೀಶ್ ಹತ್ವಾರ್) ಅವರ ಪುಸ್ತಕ "ಹಲಗೆ ಬಳಪ- ಹೊಸ ಬರಹಗಾರರಿಗೆ ಪಾಠಗಳು" ಪುಸ್ತಕಕ್ಕೆಂದು ಬರೆದ ವಿಶೇಷ ಲೇಖನ ] [ಲೇಖನದ ಕೊನೆಯಲ್ಲಿರುವ "Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಇದನ್ನು ಧ್ವನಿಮಾಧ್ಯಮದಲ್ಲಿಯೂ ಆನಂದಿಸಬಹುದು!] * * * ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ’ ಎನ್ನುತ್ತಾನೆ ಎದೆತುಂಬಿ ಹಾಡುವ, ಸ್ವಲ್ಪ ಫಿಲಾಸಫಿಕಲ್ ರೀತಿಯಲ್ಲಿ ಚಿಂತಿಸುವ ಹಾಡುಗಾರ. ಅವನು ಕೇವಲ ತನ್ನ ಆತ್ಮಸಂತೋಷಕ್ಕೆಂದು ಹಾಡುವವನು. ಅದೇ ಧಾಟಿಯಲ್ಲಿ ಒಬ್ಬ ಬರಹಗಾರನೂ ಹೇಳಬಹುದು- ‘ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಯಾರು ಓದದಿದ್ದರೂ ನನಗಿಲ್ಲ ಚಿಂತೆ...’ - ಅವನದೂ ಹೆಚ್ಚೂಕಡಿಮೆ ಫಿಲಾಸಫಿ ಕ್ಯಾಟಗರಿಯೇ. ‘ಯಾರಾದರೂ ಓದಲಿ ಎಂದು ನಾನು ಬರೆಯುವುದಿಲ್ಲ; ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂದು ಪ್ರಪಂಚದ ಪ್ರತಿಯೊಬ್ಬ ಬರಹಗಾರನೂ ಹೇಳಿದ್ದೇ ಆದರೆ ಬರಹಗಳೆಲ್ಲ ಬರೀ ಪರ್ಸನಲ್ ಡೈರಿಗಳಷ್ಟೇ ಆಗಬೇಕಿತ್ತಲ್ಲವೇ? ಪುಣ್ಯಕ್ಕೆ ಹಾಗಿಲ್ಲ ಪರಿಸ್ಥಿತಿ. ಪರ್ಸನಲ್ ಡೈರಿ ಮಾತ್ರ ನಮ್ಮ ಸಂತೋಷಕ್ಕೆ, ನಮ್ಮೊಳಗಿನ ಸ್ವಗತದ ರೂಪದಲ್ಲಿ, ನಮಗೋಸ್ಕರವಷ್ಟೇ ಬರೆಯುವುದು. ಮಿಕ್ಕೆಲ್ಲ ಬರಹಗಳೂ ಯಾರಾದರೂ ಓದಲಿ ಎಂದೇ ಬರೆಯುವಂಥವು. ಅಂದಮೇಲೆ ಅದರಲ್ಲಿ ಮುಚ್ಚುಮರೆ ಏಕೆ? ನಾನೇನೂ ಮಹಾನ್ ಬರಹಗಾರ ಅಲ್ಲ. ಆದರೆ ಬರೆದದ್ದಷ್ಟನ್ನು ನಾನು ಬೇರೆಯವರು ಓದಲೆಂದೇ ಬರೆದಿದ್ದೇನೆ ಎಂದು ಎದೆತಟ್ಟಿ ಹೇಳಬಲ್ಲೆ! ನನ್ನ ಬರವಣಿಗೆ ಹೇಗೆ ಆರಂಭವಾಯಿತು, ಹೇಗೆ ಮುಂದುವರಿಯಿತು ಎಂದು ನಾನೀಗ ವಿವರಿಸುವವನಿದ್ದೇನಲ್ಲ, ಆಗ ಈ ಮಾತು ಪುಷ್ಟಿಗೊಳ್ಳುತ್ತ ಹೋಗುತ್ತದೆ. ನೀವೇ ನೋಡುವಿರಂತೆ. ಕಡೆಗೆ ಈ ಬರಹವನ್ನಾದರೂ ನೀವು ಓದಬೇಕಂತಲೇ ತಾನೆ ನಾನು ಬರೆಯುತ್ತಿರುವುದು? ದೊಡ್ಡ ಕುಟುಂಬದಲ್ಲಿ ಅತಿ ಕಿರಿಯವನಾಗಿ ಹುಟ್ಟಿ ಬೆಳೆದ ನಾನು, ಸುಮಾರಾಗಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ನನ್ನ ಅಣ್ಣಂದಿರು ವಿದ್ಯಾಭ್ಯಾಸ ಅಥವಾ ವೃತ್ತಿಗಾಗಿ, ಮತ್ತು ಅಕ್ಕಂದಿರು ಮದುವೆಯಾಗಿ, ಪರವೂರಿನಲ್ಲಿದ್ದರು. ಅವರಿಗೆಲ್ಲ ತಿಂಗಳಿಗೊಮ್ಮೆ ಕ್ಷೇಮಸಮಾಚಾರದ ಪತ್ರ ಬರೆಯುವ ಕೆಲಸವನ್ನು ನಮ್ಮ ತಂದೆಯವರು ಹೆಚ್ಚಾಗಿ ನನ್ನ ಕೈಯಿಂದಲೇ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಮೊಬೈಲ್ ಬಿಡಿ, ಲ್ಯಾಂಡ್ಲೈನ್ ಟೆಲಿಫೋನ್ ಸಹ ನಮ್ಮಲ್ಲಿರಲಿಲ್ಲ. ಪೋಸ್ಟ್ಕಾರ್ಡ್, ಇನ್ಲ್ಯಾಂಡ್ ಲೆಟರ್ ಮತ್ತು ಕವರ್ಗಳೇ ಸಂದೇಶವಾಹಕಗಳು. ಹಾಗಾಗಿ ಶಾಲಾದಿನಗಳಲ್ಲಿ ಪಠ್ಯೇತರವಾಗಿ ನಾನೇನಾದರೂ ಬರೆದದ್ದಿದ್ದರೆ ಆ ಪತ್ರಗಳು ಮಾತ್ರ. ಆದರೆ, ವಿಷಯ-ವಿಚಾರಗಳನ್ನು, ಸಮಾಚಾರ-ಸ್ವಾರಸ್ಯಗಳನ್ನು ಇನ್ನೊಬ್ಬರೊಡನೆ ಎದುರು ಕುಳಿತು ಮಾತನಾಡುತ್ತಿರುವಂತೆ ವಿನಿಮಯ ಮಾಡಿಕೊಳ್ಳುವ ಧಾಟಿ ನನ್ನ ಬರವಣಿಗೆಯಲ್ಲಿ ಕಾಣಿಸಿಕೊಂಡಿದೆಯಾದರೆ ಅದು ಆ ಪತ್ರವ್ಯವಹಾರದಿಂದಲೇ ಎಂದು ನಾನು ದೃಢವಾಗಿ ನಂಬಿದ್ದೇನೆ. ಮತ್ತು ಅದಕ್ಕಾಗಿ ನನ್ನ ದಿ.ತೀರ್ಥರೂಪರವರಿಗೆ ಎಂದೆಂದಿಗೂ ಋಣಿಯಾಗಿದ್ದೇನೆ. ಅಣ್ಣಂದಿರಿಗೆ, ಅಕ್ಕಂದಿರಿಗಷ್ಟೇ ಅಲ್ಲ ನಾನು ಪತ್ರ ಬರೆಯುತ್ತಿದ್ದದ್ದು. ಬಾಲ್ಯದಲ್ಲಿ ಒಬ್ಬ ಆತ್ಮೀಯ ಸ್ನೇಹಿತನೆಂದೇ ಪರಿಗಣಿಸಿದ್ದ ‘ಮಂಗಳೂರು ಆಕಾಶವಾಣಿ’ಗೂ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಬಾಲವೃಂದ ಕಾರ್ಯಕ್ರಮದಲ್ಲಿ ಬರುತ್ತಿದ್ದ ರಸಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ, ಕೋರಿಕೆ ಕಾರ್ಯಕ್ರಮದಲ್ಲಿ ನೆಚ್ಚಿನ ಚಿತ್ರಗೀತೆ ಕೇಳಲಿಕ್ಕೆ, ಪತ್ರೋತ್ತರ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ತಿಳಿಸಲಿಕ್ಕೆ - ಹೀಗೆ ಆಕಾಶವಾಣಿಯೊಂದಿಗೆ ನನ್ನ ಪತ್ರವ್ಯವಹಾರ. ರೇಡಿಯೊದಲ್ಲಿ ನನ್ನ ಪತ್ರದ ಉಲ್ಲೇಖವಾದಾಗೆಲ್ಲ ಒಂಥರದ ರೋಮಾಂಚನ. ಮಾಧ್ಯಮದೊಂದಿಗೆ ಸಂಪರ್ಕ-ಸಂವಹನದ ನನ್ನ ಬರವಣಿಗೆಗೆ ಅದು ಭದ್ರ ಅಡಿಪಾಯ ಹಾಕಿತು. ಮುಂದೆ ನನ್ನ ಹೆಚ್ಚಿನ ಬರವಣಿಗೆಯೆಲ್ಲ ಮಾಧ್ಯಮಗಳಿಗೆಂದೇ ಬರೆದದ್ದು ಅಂತಾಯ್ತು. ದಾವಣಗೆರೆಯಲ್ಲಿ ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ‘ಸುಧಾ’ದಲ್ಲಿ ನನ್ನದೊಂದು ಪತ್ರ ಪ್ರಕಟವಾಯ್ತು. ಅದು ಸುಧಾ ಪತ್ರಿಕೆಯ ಬೆಳ್ಳಿಹಬ್ಬದ ವರ್ಷ. ‘ಸುಧಾ ಪತ್ರಿಕೆ ನಿಮಗೇಕೆ ಇಷ್ಟವಾಗುತ್ತದೆ ಅಥವಾ ಆಗುವುದಿಲ್ಲ?’ ಎಂದು ಓದುಗರಿಂದ ವಿಶೇಷವಾಗಿ ಪತ್ರಗಳನ್ನು ಆಹ್ವಾನಿಸಿದ್ದರು. ‘ಸುಧಾ ಬಗ್ಗೆ ನನ್ನ ಪರ-ವಿರೋಧ ನಿಲುವುಗಳನ್ನು ತಕ್ಕಡಿಯ ಎರಡು ತಟ್ಟೆಗಳಲ್ಲಿಟ್ಟಾಗ...’ ಎಂಬ ನನ್ನ ಪತ್ರವೂ ಆಯ್ಕೆಯಾಗಿ ಪ್ರಕಟವಾಯ್ತು. ನಮ್ಮ ಹಾಸ್ಟೆಲ್ನ ವಾಚನಾಲಯಕ್ಕೆ ತರಿಸುತ್ತಿದ್ದ ಪತ್ರಿಕೆಗಳಲ್ಲಿ ಸುಧಾ ಕೂಡ ಇರುತ್ತಿತ್ತು. ಆ ವಾರ ಸುಧಾದಲ್ಲಿ ನನ್ನ ಪತ್ರ/ಹೆಸರು ಪ್ರಕಟವಾಗಿದೆಯೆಂದು ನನಗೆಷ್ಟು ಪುಳಕವೋ ಅಷ್ಟೇ ಹಿಗ್ಗು ನನ್ನೆಲ್ಲ ಸಹಪಾಠಿಗಳಿಗೂ. ಗೌರವಧನವೆಂದು ಐವತ್ತು ರೂಪಾಯಿಗಳ ಚೆಕ್ ಮತ್ತು ಆ ವಾರದ ಸುಧಾ ಸಂಚಿಕೆ ಅಂಚೆಯಲ್ಲಿ ಬಂದಾಗಿನ ಸಂಭ್ರಮವಂತೂ ಸಾಟಿಯಿಲ್ಲದ್ದು! ಮುಂದೆ ನಾನು ಉದ್ಯೋಗಕ್ಕಾಗಿ ದಿಲ್ಲಿ ಮತ್ತು ಹೈದರಾಬಾದ್ನಲ್ಲಿ ಇದ್ದಾಗಲೂ ತಪ್ಪದೇ ಸುಧಾ ತರಿಸುತ್ತಿದ್ದೆ. ಸಮುದ್ರಮಥನ ವಿಭಾಗಕ್ಕೆ ಪತ್ರ ಬರೆಯುತ್ತಿದ್ದೆ. ಸುಧಾದಲ್ಲಿ ಆಗ ಅತ್ಯಂತ ಜನಪ್ರಿಯವಾಗಿದ್ದ ‘ಚೌ ಚೌ ಚೌಕಿ’ ಅಂಕಣದಲ್ಲಿ ಭಾಗವಹಿಸುತ್ತಿದ್ದೆ. ಸಿಲ್ಲಿ ಪ್ರಶ್ನೆಗಳಿಗೆ ತಮಾಷೆಯ ಉತ್ತರಗಳನ್ನು ಬರೆದುಕಳಿಸುತ್ತಿದ್ದೆ. ಅವು ಪ್ರಕಟವೂ ಆಗುತ್ತಿದ್ದವು. ಹೈದರಾಬಾದ್ನಲ್ಲಿದ್ದಾಗ ನಾನು ‘ದ ಹಿಂದು’ ಪತ್ರಿಕೆ ಓದುತ್ತಿದ್ದೆ. ಅಂಕಣಬರಹಗಳ ಓದನ್ನು ನಾನು ಆರಂಭಿಸಿದ್ದು ಹಿಂದು ಪತ್ರಿಕೆಯಲ್ಲೇ. ಭಾನುವಾರಗಳಂದು ಪ್ರಕಟವಾಗುತ್ತಿದ್ದ ಅಮೆರಿಕನ್ ಹಾಸ್ಯಬರಹಗಾರ ಆರ್ಟ್ ಬಕ್ವಾಲ್ಡ್ನ ಅಂಕಣ ಮತ್ತು ವಿ.ಗಂಗಾಧರ್ ಬರೆಯುತ್ತಿದ್ದ Slice of Life ಅಂಕಣ ನನ್ನ ನೆಚ್ಚಿನ ಓದು. ಸೋಮವಾರಗಳಂದು Between You and Me ಎಂಬ ಅಂಕಣ ಬರುತ್ತಿತ್ತು. ಹಿಂದು ಪತ್ರಿಕೆಯ ಹೈದರಾಬಾದ್ ಆವೃತ್ತಿಯಲ್ಲಿ ಅದನ್ನು ನಡೆಸುತ್ತಿದ್ದವರು ಪ್ರೊ. ಕೆ. ಸುಬ್ರಹ್ಮಣ್ಯಂ (Know Your English ಅಂಕಣವನ್ನೂ ಅವರೇ ನಿರ್ವಹಿಸುತ್ತಿದ್ದರು). ಆ ಅಂಕಣಕ್ಕೆ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಅವು ಪ್ರಕಟವಾಗುತ್ತಿದ್ದವು. ಒಮ್ಮೆ ಸಿಕಂದರಾಬಾದ್ ರೈಲ್ವೇ ಸ್ಟೇಷನ್ನ ಯಾವುದೋ ಅವ್ಯವಸ್ಥೆಯ ಕುರಿತು ನಾನು ಬರೆದಿದ್ದ ಪತ್ರಕ್ಕೆ ಸುಬ್ರಹ್ಮಣ್ಯಂ ತಮ್ಮದೊಂದಿಷ್ಟು ವ್ಯಂಗ್ಯವನ್ನೂ ಸೇರಿಸಿ ಪ್ರಕಟಿಸಿದ್ದರು. ಮಾರನೇದಿನ ಹೋಗಿ ನೋಡಿದಾಗ ರೈಲ್ವೇ ಸ್ಟೇಷನ್ನ ಅವ್ಯವಸ್ಥೆ ರಿಪೇರಿ ಆಗಿತ್ತು! ಇದಿಷ್ಟು ಪತ್ರಲೇಖನದ ವಿಚಾರವಾಯ್ತು. ನನ್ನ ಬರವಣಿಗೆಗೆ ಪೂರಕವಾಗಿ ಪರಿಣಮಿಸಿದ ಇನ್ನೂ ಒಂದು ಮುಖ್ಯ ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆಗಲೇ ಹೇಳಿದಂತೆ ನಾನು ಎಂಜಿನಿಯರಿಂಗ್ ಓದಿದ್ದು ದಾವಣಗೆರೆಯ ಬಿ.ಡಿ.ಟಿ ಕಾಲೇಜಿನಲ್ಲಿ, ಎಂಬತ್ತರ ದಶಕದ ಉತ್ತರಾರ್ಧದಲ್ಲಿ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಆಗಷ್ಟೇ ಶುರುವಾದದ್ದು. ವಿಭಾಗಕ್ಕೆ ಮುಖ್ಯಸ್ಥರಾಗಲಿ ಉಪನ್ಯಾಸಕರಾಗಲಿ ಯಾರೂ ಇರಲಿಲ್ಲ. ಪ್ರಯೋಗಾಲಯ ಸೌಲಭ್ಯವೂ ಅಷ್ಟಕ್ಕಷ್ಟೇ. ಬೇರೆ ವಿಭಾಗಗಳ ಅಥವಾ ಬೇರೆ ಕಾಲೇಜಿನ ಪ್ರಾಧ್ಯಾಪಕರು ಆಗೊಮ್ಮೆ ಈಗೊಮ್ಮೆ ಬಂದು ಪಾಠ ಮಾಡುವ ವ್ಯವಸ್ಥೆ. ವಿದ್ಯಾರ್ಥಿಗಳದು ಹೆಚ್ಚೂಕಡಿಮೆ ಏಕಲವ್ಯನ ಪರಿಸ್ಥಿತಿ. ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಸೆಮಿಸ್ಟರ್ ಆರಂಭದಿಂದಲೇ ಆಯಾಯ ಸಬ್ಜೆಕ್ಟ್ನ ಸಿಲೆಬಸ್ ಏನಿದೆ, ಯಾವ ಪಠ್ಯಪುಸ್ತಕಗಳನ್ನು ಶಿಫಾರಸು ಮಾಡಿದ್ದಾರೆ, ಹಿಂದಿನ ಪ್ರಶ್ನೆಪತ್ರಿಕೆಗಳ ಸ್ವರೂಪ ಹೇಗಿದೆ ಅಂತೆಲ್ಲ ಅಧ್ಯಯನ ನಡೆಸಿ ನನ್ನದೇ ನೋಟ್ಸ್ ತಯಾರಿಸುವುದು. ಅದೂ ಹೇಗೆ, ಒಂದೆರಡು ಸೆಮಿಸ್ಟರ್ಗಳಲ್ಲಿ ಒಂದೆರಡು ಸಬ್ಜೆಕ್ಟ್ಗಳಿಗಲ್ಲ, ಮೂರರಿಂದ ಎಂಟನೇ ಸೆಮಿಸ್ಟರ್ವರೆಗೂ ಅದೇ ಪದ್ಧತಿ. ಮೊದಮೊದಲಿಗೆ ನನಗೋಸ್ಕರವಷ್ಟೇ ಸಿದ್ಧಪಡಿಸಿಕೊಳ್ಳುತ್ತಿದ್ದ ಆ ನೋಟ್ಸ್, ಕ್ರಮೇಣ ಸಹಪಾಠಿಗಳಿಗೂ ಸರಳವಾಗಿದೆಯೆಂದು ತೋರಿತು. ಅವರೆಲ್ಲರೂ ಪಠ್ಯಪುಸ್ತಕಗಳಿಗಿಂತ ನನ್ನ ನೋಟ್ಸನ್ನೇ ಫೊಟೊಕಾಪಿ ಮಾಡಿ ಓದತೊಡಗಿದರು. ಅನಿವಾರ್ಯ ಪರಿಸ್ಥಿತಿಯಲ್ಲಿ ಆಲಂಗಿಸಿಕೊಂಡ ಆ ನೋಟ್ಸ್ ಕಲೆ ನನಗೆ ಚೆನ್ನಾಗಿ ಕರಗತವಾಯಿತು. ಯಾವುದೇ ವಿಷಯವಿರಲಿ, ಅದರ ಬಗ್ಗೆ ಸುಲಭಗ್ರಾಹ್ಯವಾಗುವಂಥ ಕಿರು ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು, ಇನ್ನೊಬ್ಬರಿಗೆ ಅರ್ಥವಾಗುವಂತೆ ಆ ವಿಷಯವನ್ನು ಪ್ರಸ್ತುತಪಡಿಸುವುದು ಕರತಲಾಮಲಕವಾಗಿಹೋಯ್ತು. ಎಂಜಿನಿಯರಿಂಗ್ ಶಿಕ್ಷಣ ಮುಗಿದು ಸುಮಾರು ಹತ್ತು ವರ್ಷಗಳ ನಂತರ ನಾನು ಅಮೆರಿಕ ದೇಶಕ್ಕೆ ಬಂದಾಗ ಮೊದಲು ಮಾಡಿದ ಕೆಲಸವೆಂದರೆ ಇಲ್ಲಿ ಗಮನಿಸಿದ ಹೊಸಹೊಸ ಸಂಗತಿಗಳ ಬಗ್ಗೆ ಟಿಪ್ಪಣಿಗಳನ್ನು ತಯಾರಿಸಿ, ಪೂರಕ ಮಾಹಿತಿ ಸಂಗ್ರಹಿಸಿ, Let us know US ಎಂಬ ವೆಬ್ ಜರ್ನಲ್ ತಯಾರಿಸಿದ್ದು. ಅದಕ್ಕೆ ನೆರವಾದದ್ದೂ ನನ್ನ ಎಂಜಿನಿಯರಿಂಗ್ ಶಿಕ್ಷಣದ ನೋಟ್ಸ್ ಕಲೆಯೇ. Let us know US ವೆಬ್ ಜರ್ನಲ್ ಅಂತರಜಾಲದಲ್ಲಿ ಒಬ್ಬ ಅಮೆರಿಕನ್ ಶಿಕ್ಷಕಿಯ ಕಣ್ಣಿಗೆ ಬಿದ್ದು ಆಕೆ ಅದನ್ನು ಮೆಚ್ಚಿ ‘ನನ್ನ ವಿದ್ಯಾರ್ಥಿಗಳಿಗೆ ಮಾಹಿತಿಸಂಗ್ರಹಣೆಯ ಪ್ರಾಜೆಕ್ಟ್ಗೆ ಇದನ್ನು ಮಾದರಿಯಾಗಿ ಕೊಡುತ್ತಿದ್ದೇನೆ’ ಎಂದು ಇಮೇಲ್ ಬರೆದಿದ್ದನ್ನು ಓದಿ ನನಗಾದ ಸಂತಸ ಅಷ್ಟಿಷ್ಟಲ್ಲ. ಹಾಗೆ ನೋಡಿದರೆ ಆಮೇಲೆ ನಾನು ದಟ್ಸ್ಕನ್ನಡ ಡಾಟ್ ಕಾಮ್ ಅಂತರಜಾಲ ಪತ್ರಿಕೆಯಲ್ಲಿ ಬರೆದ ‘ವಿಚಿತ್ರಾನ್ನ’ ಅಂಕಣದಲ್ಲೂ, ಅದಾದಮೇಲೆ ಐದು ವರ್ಷಗಳ ಕಾಲ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ‘ಪರಾಗಸ್ಪರ್ಶ’ ಅಂಕಣದಲ್ಲೂ, ಈ ನೋಟ್ಸ್ ಕಲೆಯ ಬಲದಿಂದಲೇ ರಸಪಾಕ ಸಿದ್ಧಪಡಿಸುತ್ತಿದ್ದದ್ದು. ಜತೆಯಲ್ಲೇ ಓದುಗರೊಡನೆ ಸಂಭಾಷಿಸುತ್ತಿರುವೆನೋ ಎಂದೆನಿಸುವ ಶೈಲಿ, ಬಾಲ್ಯದಲ್ಲಿ ರೂಢಿಯಾಗಿದ್ದ ಪತ್ರಲೇಖನದ ಬಳುವಳಿ. ಅಂಕಣದ ಓದುಗರಿಗೆ ಅದು ಗೊತ್ತಾಗುತ್ತಿತ್ತೋ ಇಲ್ಲವೋ, ಪ್ರತಿ ವಾರದ ಅಂಕಣವನ್ನು ಸಿದ್ಧಪಡಿಸುವಾಗ ನನಗಂತೂ ಚೆನ್ನಾಗಿ ಗೊತ್ತಾಗುತ್ತಿತ್ತು. ಇನ್ನು, ಒಂದನೇ ತರಗತಿಯಿಂದ ಹತ್ತನೆಯವರೆಗೆ ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದದ್ದನ್ನೂ ನನ್ನ ಬರವಣಿಗೆಗೆ ಸತ್ವ ನೀಡಿದ ಪೋಷಕಾಂಶವೆಂದೇ ನಾನು ಗುರುತಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಓದಿದೆನೆಂಬ ಸಂಗತಿ ನನಗೆ ಒಂದು ಕೊರಗಾಗಿ, ಕೀಳರಿಮೆಯಾಗಿ ಯಾವತ್ತಿಗೂ ಅನಿಸಿದ್ದಿಲ್ಲ. ಬದಲಿಗೆ ಆಬಗ್ಗೆ ನನಗೆ ವಿಶೇಷ ಹೆಮ್ಮೆಯೇ ಇದೆ. ಹಾಗೆಯೇ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಸಂಸ್ಕೃತ ಭಾಷೆಯ ಕಲಿಕೆಯೂ ನನ್ನ ಬರವಣಿಗೆಗೆ ಕಿಂಚಿತ್ತಾದರೂ ಮೆರುಗು ಕೊಡುವುದರಲ್ಲಿ ನೆರವಾಗಿದೆ. ಭಾಷೆಗಳ ಬಗ್ಗೆ ನನಗಿರುವ ಕುತೂಹಲ, ಬೇರೆಬೇರೆ ಭಾಷೆಗಳ ನಡುವಿನ ಸಾಮ್ಯ-ವ್ಯತ್ಯಾಸಗಳ ವಿಶ್ಲೇಷಣೆ, ತೀರಾ ಮಡಿವಂತಿಕೆಯಿಲ್ಲದೆ ಸಂದರ್ಭೋಚಿತವಾಗಿ ಬೇರೆಬೇರೆ ಭಾಷೆಗಳ ಪದ-ವಾಕ್ಯಗಳ ಬಳಕೆ - ಇವೆಲ್ಲವೂ ಬರವಣಿಗೆಗೊಂದು ಬಣ್ಣ ಕೊಟ್ಟಿವೆ. ಅಷ್ಟೇಕೆ, ಪಿಯುಸಿ ಓದುತ್ತ ಉಜಿರೆಯ ಸಿದ್ಧವನ ಗುರುಕುಲದಲ್ಲಿ, ಎಂಜಿನಿಯರಿಂಗ್ ಓದುತ್ತ ದಾವಣಗೆರೆಯ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಅಭ್ಯಸಿಸಿದ್ದೂ ನನ್ನ ಬದುಕನ್ನು, ಬರವಣಿಗೆಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸಿದೆ ಎಂದು ನಾನು ಗರ್ವದಿಂದ ಹೇಳುತ್ತೇನೆ. ಬರವಣಿಗೆಯಲ್ಲಿ ನಾನು ಅಳವಡಿಸಿಕೊಂಡ, ಅಭ್ಯಾಸಮಾಡಿಕೊಂಡ ಕೆಲವು ಸರಳ ತಂತ್ರಗಳ ಬಗ್ಗೆಯೂ ಹೇಳಿ ಈ ಬರಹವನ್ನು ಮುಗಿಸುತ್ತೇನೆ. ಮೊದಲನೆಯದಾಗಿ, ಎತ್ತರದ ಪೀಠದಲ್ಲಿ ಕುಳಿತು/ನಿಂತು ಕೆಳಗೆ ನೋಡುತ್ತ ಜನರಿಗೆ ಉಪದೇಶ ಕೊಡುತ್ತಿದ್ದೇನೆ ಎಂಬಂತೆ ಬರೆಯುವುದನ್ನು (ಇದನ್ನು ivory tower writing ಎನ್ನುತ್ತಾರೆ) ನಾನು ಸ್ವಲ್ಪವೂ ಇಷ್ಟಪಡುವುದಿಲ್ಲ. ‘ಏನೋ ಒಂದು ಸ್ವಾರಸ್ಯಕರ ವಿಷಯವಿದೆ ಎಲ್ಲರೂ ಸೇರಿ ಅದನ್ನು ತಿಳಿದುಕೊಳ್ಳೋಣ, ಆನಂದಿಸೋಣ’ ಎನ್ನುವಂಥ ಧಾಟಿಯೇ ನನಗೆ ಬಹಳ ಹಿಡಿಸುತ್ತದೆ. ಮತ್ತದೇ, ಎಂಜಿನಿಯರಿಂಗ್ ನೋಟ್ಸ್ ಕಲೆಯ ಪ್ರಭಾವ. ಎರಡನೆಯದಾಗಿ, ಓದುಗನಿಗೆ ಹಿತಾನುಭವ ಆಗಬೇಕು, ಅದು ಬರಹದುದ್ದಕ್ಕೂ ಆಗುತ್ತಲೇ ಇರಬೇಕು ಎನ್ನುವುದು ನನ್ನ ಮುಖ್ಯ ಕಾಳಜಿ. ಅಂದಮಾತ್ರಕ್ಕೆ ಓದುಗನನ್ನು ಪ್ಯಾಂಪರ್ ಮಾಡು ಅಂತಲ್ಲ. ನಡುನಡುವೆ ತುಂಟತನದ ಕಚಗುಳಿ, ಲಘುಹಾಸ್ಯದ ಕೀಟಲೆ, ತರ್ಕದ ತರ್ಲೆ ಎಲ್ಲ ಇರಬೇಕು. ಅನಾವಶ್ಯಕ ಕಿರಿಕಿರಿಯಾಗಬಾರದು, ಕೀಳರಿಮೆಗೆ ಆಸ್ಪದವಿರಬಾರದು ಅಷ್ಟೇ. ಮೂರನೆಯದಾಗಿ, ಯಾವುದೇ ಬರಹವು ‘ಹರಕೆ ಸಂದಾಯ’ ಆಗಬಾರದು. ಉಡಾಫೆ ಮತ್ತು ಅತಿಯಾದ ಆತ್ಮವಿಶ್ವಾಸ ಸಲ್ಲದು. ಬರೆದಾದ ನಂತರ ಲೇಖನವನ್ನು ಕಡ್ಡಾಯವಾಗಿ ಕನಿಷ್ಠ ಎರಡು-ಮೂರು ಸಲವಾದರೂ ಪೂರ್ತಿ ಓದಿನೋಡುವ ಪರಿಪಾಠವನ್ನಿಟ್ಟುಕೊಳ್ಳಬೇಕು. ನಾನು ಕೆಲವೊಮ್ಮೆ ನಾಲ್ಕೈದು ಸಲ, ‘ಬೇರೆಬೇರೆ ಓದುಗರ ಪಾದರಕ್ಷೆಗಳಲ್ಲಿ ನನ್ನ ಕಾಲುಗಳನ್ನಿಟ್ಟುಕೊಂಡಂತೆ ಊಹಿಸಿ’ ಓದಿ ನೋಡುವುದೂ ಇದೆ. ಬರಹದಲ್ಲಿನ ಸುಕ್ಕುಗಳನ್ನು, ನಿರಿಗೆಗಳನ್ನು ತೆಗೆಯಲು ಇದು ಸಹಾಯಕವಾಗುತ್ತದೆ. ಮೊದಲಿಂದ ಕೊನೆಯವರೆಗೂ ಅಡೆತಡೆಗಳಿಲ್ಲದೆ ಓದಿಸಿಕೊಳ್ಳುವ ಗುಣ ಬರಹದಲ್ಲಿ ಮೈದಳೆಯುತ್ತದೆ. ನಾನು ಬರೆಯುವುದು ಬರೀ ನನ್ನ ಆತ್ಮಸಂತೋಷಕ್ಕಲ್ಲ, ಓದುವವರಿಗೊಂದು ಆಪ್ತ ಅನುಭೂತಿಯಾಗುವುದಕ್ಕೆ, ಹಿತಾನುಭವ ಕೊಡುವುದಕ್ಕೆ ಎಂದು ಮೊದಲೇ ಹೇಳಿಬಿಟ್ಟಿದ್ದೆನಲ್ಲ? ಹಾಗಾಗಿ ಬರಹದಲ್ಲಿ ಸತ್ವ ಇರಲಿ ಇಲ್ಲದಿರಲಿ, ಬರಹ ಬಂಧುರವಾಗಿರಲಿ ಇಲ್ಲ ಬರಡಾಗಿರಲಿ ಓದಿಸಿಕೊಳ್ಳುವ ಗುಣವನ್ನಾದರೂ ಖಾತರಿಪಡಿಸುವುದು ನನ್ನ ಆದ್ಯತೆ. ಪ್ರಸ್ತುತ, ಈ ಬರಹದಲ್ಲೂ ಅದನ್ನಂತೂ ಸಾಧ್ಯವಾದಷ್ಟು ಪಾಲಿಸಿದ್ದೇನೆ ಎಂಬ ನಂಬಿಕೆ ನನ್ನದು! * * * ["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.