Episodes
Saturday Jul 16, 2011
Need to cultivate Book-Reading habit
Saturday Jul 16, 2011
Saturday Jul 16, 2011
ದಿನಾಂಕ 17 ಜುಲೈ 2011ರ ಸಂಚಿಕೆ...
ಇನ್ನಾದರೂ ಬೆಳೆಸಿಕೊಳ್ಳಬೇಕು ಓದಿನ ಗೀಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅದೊಂದು ಕೊರಗು ನನ್ನನ್ನು ಆಗಾಗ ಕಾಡುವುದಿದೆ. ಏನೆಂದರೆ, ಸಾಹಿತ್ಯಿಕ ಓದಿನ ಒಳ್ಳೆಯ ಹವ್ಯಾಸವನ್ನು ನಾನು ಬೆಳೆಸಿಕೊಳ್ಳಲೇ ಇಲ್ಲ. ಓದು ಕೊಡುವ ಅಮಿತಾನಂದಕ್ಕೆ ನನ್ನನ್ನು ಒಡ್ಡಿಕೊಳ್ಳಲೇ ಇಲ್ಲ. ಇದನ್ನೇಕೆ ಹೇಳುತ್ತಿದ್ದೇನೆಂದರೆ ‘ಇವನು ತುಂಬಾ ಓದಿಕೊಂಡವನಿರಬೇಕು...’ ಎಂದು ನನ್ನ ಬಗ್ಗೆ ಒಂದು ರೀತಿಯ ಸದಭಿಪ್ರಾಯ ಇಟ್ಟುಕೊಂಡವರು ಕೆಲವರಿದ್ದಾರೆ. ಅವರ ಮನಸ್ಸಿನಲ್ಲಿ ಈತ ಸಾಹಿತ್ಯದ ಸರಕನ್ನು ಸಾಕಷ್ಟು ಅರೆದು ಕುಡಿದವನು ಎಂಬ ಭಾವನೆಯಿದೆ. ಪ್ರಾಯಶಃ ನನ್ನ ಅಂಕಣ ಬರವಣಿಗೆಯಲ್ಲಿ ಕಂಡುಬರುವ ವಸ್ತುವೈವಿಧ್ಯವೂ ಅಂಥದೊಂದು ಮಿಥ್ಯೆಗೆ ಕಾರಣವಾಗಿದೆ. ಆದರೆ ವಾಸ್ತವಾಂಶ ಬೇರೆಯೇ ಇದೆ. ಕನ್ನಡದಲ್ಲಾಗಲೀ, ಇಂಗ್ಲಿಷ್ ಅಥವಾ ಬೇರಾವ ಭಾಷೆಯಲ್ಲಾಗಲೀ ನನ್ನ ‘ಸಾಹಿತ್ಯಿಕ’ ಓದು ಸೊನ್ನೆ. ಕಥೆ-ಕಾದಂಬರಿ, ಕಾವ್ಯ-ನಾಟಕ, ಆತ್ಮಚರಿತ್ರೆ ಮುಂತಾದ ಗಂಭೀರ ಸಾಹಿತ್ಯಪ್ರಕಾರಗಳು ಅದೇಕೋ ನನ್ನ ಆಸಕ್ತಿಯ ವ್ಯಾಪ್ತಿಯೊಳಕ್ಕೆ ಇದುವರೆಗೆ ಬಂದೇ ಇಲ್ಲ. Voracious reader ಎನ್ನುವಲ್ಲಿನ voracious ಹಾಗಿರಲಿ, ಒಬ್ಬ ಸಾಮಾನ್ಯ reader ಅಂತನ್ನಿಸಿಕೊಳ್ಳುವಷ್ಟನ್ನೂ ನಾನು ಓದಿಲ್ಲ. ಇದನ್ನೇನೂ ನನ್ನ ಹೆಗ್ಗಳಿಕೆ ಎನ್ನುತ್ತಿಲ್ಲ. ಅಥವಾ ತೀರಾ ಕೀಳರಿಮೆಯಿಂದ ಹೇಳುತ್ತಿರುವುದೂ ಅಲ್ಲ. ಹಾಗಂತ, ಏನನ್ನೂ ಓದುವುದೇ ಇಲ್ಲ ಎಂದೇನಿಲ್ಲ. ಪುಸ್ತಕಗಳೆಂದರೆ ನನಗೂ ಇಷ್ಟವೇ; ಸಾಧ್ಯವಾದಾಗೆಲ್ಲ ಗ್ರಂಥಾಲಯಗಳಿಗೂ ಭೇಟಿ ಕೊಡುತ್ತೇನೆ. ಆದರೆ ಏನಿದ್ದರೂ ‘ಆಕರ ಗ್ರಂಥ’ (reference book)ಗಳೇ ಮೊದಲು ನನ್ನ ದೃಷ್ಟಿಗೆ ಬೀಳುವುದು. ಅಟ್ಲಸ್, ಡಿಕ್ಷನರಿ, ಎನ್ಸೈಕ್ಲೊಪೀಡಿಯಾ, ಇಯರ್ಬುಕ್ನಂಥ ಪುಸ್ತಕಗಳನ್ನು ಕೈಗೆತ್ತಿಕೊಂಡು ಕಣ್ಣಾಡಿಸುವುದೆಂದರೆ ಎಲ್ಲಿಲ್ಲದ ಉಮೇದು. ಕೊನೆಗೆ ರೈಲ್ವೇ ಟೈಮ್ಟೇಬಲ್ ಮಾದರಿಯ ಪುಸ್ತಕಗಳಾದರೂ ಸರಿ, ಒಟ್ಟಿನಲ್ಲಿ ಮಾಹಿತಿಯ ಕಣಜ ಆದರಾಯಿತು. ಅಂತಹ ಪುಸ್ತಕಗಳಿಂದ ನಮ್ಮ ಜ್ಞಾನದ ಆಳ ಹೆಚ್ಚುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಜ್ಞಾನದ ಅಗಲ ಖಂಡಿತ ಹೆಚ್ಚುತ್ತದೆ ಎಂದು ನನ್ನ ಅನಿಸಿಕೆ, ಮತ್ತು ಅನುಭವ ಕೂಡ. ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ- ಯಾವುದೋ ಲೇಖನದಲ್ಲಿ ನಾನು ಭೈರಪ್ಪನವರ ಕಾದಂಬರಿಗಳ ಹೆಸರುಗಳನ್ನು ಉಲ್ಲೇಖಿಸುತ್ತೇನೆ ಎಂದುಕೊಳ್ಳಿ. ಆ ಕಾದಂಬರಿಗಳನ್ನು ನಾನು ಅದಾಗಲೇ ಓದಿರುತ್ತೇನೆ ಎಂದು ಅಲ್ಲಿ ಭಾಸವಾಗಬಹುದು. ಆದರೆ ನಿಜಕ್ಕೂ ಓದಿರುವುದಿಲ್ಲ. ಭೈರಪ್ಪನವರ ಎಲ್ಲ ಕಾದಂಬರಿಗಳ ಹೆಸರು, ಪ್ರಕಟಣೆಯ ವರ್ಷ, ಬಂದ ಪ್ರಶಸ್ತಿಗಳು, ಯಾವಯಾವ ಭಾಷೆಗಳಿಗೆ ಅವು ಅನುವಾದಗೊಂಡಿವೆ ಅಂತೆಲ್ಲ ಸಮಗ್ರ ಮಾಹಿತಿ ನನ್ನಲ್ಲಿದೆ. ಅದನ್ನು ಸಂದರ್ಭೋಚಿತವಾಗಿ ಬಳಸುತ್ತೇನೆ ಕೂಡ. ಆದರೆ ಒಂದೇಒಂದು ಕಾದಂಬರಿಯನ್ನೂ ನಾನು ಓದಿಲ್ಲ! ಸಂಗೀತ ಹಾಡಲು ಅರಿಯದವನಾದರೂ ಯಾವ ಕೃತಿ ಯಾರ ರಚನೆ ಯಾವ ರಾಗದಲ್ಲಿದೆ ಎಂಬುದನ್ನೆಲ್ಲ ತಿಳಿದುಕೊಂಡಿರುವಂತೆ. ಇದೊಂಥರ ಕಂಪ್ಯೂಟರ್ ಕ್ಷೇತ್ರದಲ್ಲಿ ಮೆಟಾ-ಡೇಟಾ ಇದ್ದಹಾಗೆ. ಮೆಟಾ-ಡೇಟಾ ಎಂದರೆ ಆಕ್ಚುವಲ್ ಡೇಟಾ ಅಲ್ಲ; ಡೇಟಾ ಕುರಿತಾದ ಡೇಟಾ. ಸಾಹಿತ್ಯಿಕ ಉಲ್ಲೇಖಗಳ ಮಟ್ಟಿಗೆ ನನ್ನ ಬಂಡವಾಳ ಬಹುತೇಕವಾಗಿ ಮೆಟಾ-ಡೇಟಾ ಮಾತ್ರ. ಆದರೆ ಈಗ ಹೊಸತೊಂದು ಹುರುಪು ಬಂದಿದೆ. ನಾನೂ ಸಹ ಸಾಹಿತ್ಯಿಕ ಓದಿನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಒಮ್ಮಿಂದೊಮ್ಮೆಲೇ ಕಾದಂಬರಿ ಅಲ್ಲದಿದ್ದರೂ, ಯಾವ ತೆರನಾದ ಪುಸ್ತಕಗಳಿಂದ ಇದುವರೆವಿಗೂ ದೂರವಿದ್ದೆನೋ ಅಂತಹ ಪುಸ್ತಕಗಳನ್ನು ಓದತೊಡಗಬೇಕು. ಹೇಗೂ ಈ ದಿನಗಳಲ್ಲಿ ನಾನು ಕೆಲಸಕ್ಕೆ ಹೋಗಿ ಬರುವುದು ಕಾರ್ ಡ್ರೈವ್ ಮಾಡಿಕೊಂಡು ಅಲ್ಲ, ಬಸ್ಸು ಮತ್ತು ಮೆಟ್ರೋ ರೈಲಿನಲ್ಲಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ತಗಲುತ್ತದೆ. ನನ್ನ ಸಹಪ್ರಯಾಣಿಕರಲ್ಲಿ ಹೆಚ್ಚಿನವರು ಪುಸ್ತಕದ ಓದಿನಲ್ಲಿ ಮುಳುಗಿರುವುದನ್ನು ಗಮನಿಸಿದ್ದೇನೆ. ಪುಸ್ತಕ ಅಲ್ಲದಿದ್ದರೆ ಕಿಂಡಲ್, ನುಕ್, ಐಪ್ಯಾಡ್ನಂಥ ಇ-ಪುಸ್ತಕಗಳಲ್ಲಿ ಮುಳುಗಿರುತ್ತಾರೆ. ಅಂತೂ ಅಮೆರಿಕನ್ನರು ಸಿಕ್ಕಾಪಟ್ಟೆ ಓದುತ್ತಾರೆ. ಅಂದಮೇಲೆ ನಾನೂ ಕೂಡ ಅವರಂತೆಯೇ ‘ಓಡಾಟ’ದ ವೇಳೆಯನ್ನು ‘ಓದಾಟ’ದ ವೇಳೆಯನ್ನಾಗಿಸಬಹುದು/ ಆಗಿಸಬೇಕು. ನನ್ನ ಈ ಹೊಸ ಹುರುಪಿಗೆ ಪೂರಕ ಅಂಶವೂ ಒಂದಿದೆ. ಮೊನ್ನೆ ಭಾರತಪ್ರವಾಸದ ವೇಳೆ ಭೇಟಿಯಾಗಿದ್ದ ಸುಮಾರಷ್ಟು ಸ್ನೇಹಿತರು ಮತ್ತು ಇಮೇಲ್ನಲ್ಲಷ್ಟೇ ಸಂಪರ್ಕವಿದ್ದು ಇದೀಗ ಮುಖಪರಿಚಯವಾಗಿರುವ ಕೆಲ ಓದುಗ ಮಿತ್ರರು ಒಳ್ಳೊಳ್ಳೆಯ ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಒಬ್ಬಿಬ್ಬರಂತೂ ತಮ್ಮದೇ ಸಾಹಿತ್ಯರಚನೆಯ ಹಸ್ತಪ್ರತಿ ಕೊಟ್ಟು ಓದಿ ಅಭಿಪ್ರಾಯ ತಿಳಿಸಿ ಎಂದಿದ್ದಾರೆ. ಅವರ ಪ್ರೀತಿ-ವಿಶ್ವಾಸಗಳನ್ನು ಗೌರವಿಸುವುದಕ್ಕಾದರೂ ನಾನು ಆ ಪುಸ್ತಕಗಳನ್ನೆಲ್ಲ ಓದುವವನಿದ್ದೇನೆ. ಓದತೊಡಗಿದ್ದೇನೆ ಎಂದರೂ ಸರಿಯೇ. ಏಕೆಂದರೆ ಡುಂಡಿರಾಜ್ ಅವರು ಪ್ರೀತಿಯಿಂದ ಕೊಟ್ಟಿರುವ ‘ಟೈಮಿಲ್ಲ ಸಾರ್ ಟೈಮಿಲ್ಲ’ ಪುಸ್ತಕವನ್ನು ‘ಟೈಮಿದೆ ಸಾರ್ ಟೈಮಿದೆ’ ಎಂದುಕೊಂಡು ಆಗಲೇ ಓದಿ ಮುಗಿಸಿದ್ದೇನೆ. ಹರಟೆಗಳು ಮತ್ತು ಲಘುಲೇಖನಗಳ ಓದಿನ ಸವಿಯನ್ನು ಹತ್ತಿಸಿಕೊಂಡಿದ್ದೇನೆ. ಈಗಿನ್ನು ಬೇಲೂರು ರಾಮಮೂರ್ತಿ ಅವರು ಕೊಟ್ಟಿರುವ ‘ಜಾಲಿ ಜಾಲಿ ಜೋಕಾಲಿ’ ಮತ್ತು ‘ಸಖತ್ ಕಾಮಿಡಿ’ ನಗೆಬರಹಗಳ ಸಂಗ್ರಹವನ್ನು ಕೈಗೆತ್ತಿಕೊಳ್ಳುತ್ತೇನೆ. ಆಮೇಲೆ ದಾ.ಭೀ ಪ್ರಾಣೇಶರಾವ್ ಅವರ ‘ಆಗೊಂದಿಷ್ಟು ಈಗೊಂದಿಷ್ಟು’ ಓದುತ್ತೇನೆ. ಸಿ.ಆರ್.ಸತ್ಯ ಅವರ ‘ಏಕಾದ್ಸಿ ಉಪ್ವಾಸ’ ನೆಕ್ಸ್ಟ್. ಯಾರಿವರು ಸಿ.ಆರ್.ಸತ್ಯ? ನನಗೂ ಅವರ ಪರಿಚಯವಿರಲಿಲ್ಲ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಮೆರಿಕನ್ನಡೋತ್ಸವದ ಸಂದರ್ಭದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿಯಾದರು. ಜತೆಯಲ್ಲಿ ಪತ್ನಿ ಶ್ಯಾಮಲಾ ಸತ್ಯ ಇದ್ದರು. ಅವರಿಬ್ಬರೂ ಪರಾಗಸ್ಪರ್ಶ ಅಂಕಣದ ಖಾಯಂ ಓದುಗರಂತೆ. ಅದಲ್ಲ ಮುಖ್ಯ. ಸತ್ಯ ಅವರು “ಆಚೆಮನೆಯ ಸುಬ್ಬಮ್ಮನಿಗೆ ಏಕಾದಶೀ ಉಪವಾಸ... ಪದ್ಯವನ್ನು ಕೇಳಿದ್ದೀರಷ್ಟೆ? ಅದನ್ನು ಸುಮಾರು ನಲ್ವತ್ತು ವರ್ಷಗಳ ಹಿಂದೆ ನಾನೇ ಬರೆದದ್ದು. ಕೊರವಂಜಿ ಪತ್ರಿಕೆಯಲ್ಲಿ ಮೊಟ್ಟಮೊದಲು ಪ್ರಕಟವಾದದ್ದು” ಎಂದು ಪರಿಚಯ ಮಾಡಿಕೊಟ್ಟರು. ವಾಹ್! ಅಷ್ಟು ಜನಪ್ರಿಯ ಪದ್ಯ ಬರೆದ ವ್ಯಕ್ತಿ ಯಾವೊಂದೂ ಬಿಗುಮಾನವಿಲ್ಲದೆ ತಾನೇ ಪರಿಚಯ ತಿಳಿಸಿ ‘ಏಕಾದ್ಸಿ ಉಪ್ವಾಸ’ ಹೆಸರಿನದೇ ಪುಸ್ತಕವನ್ನೂ ಕೊಟ್ಟದ್ದು ಕಂಡು ನನಗೆ ನಿಜಕ್ಕೂ ರೋಮಾಂಚನ. ಅವರು ಕನ್ನಡದ ಪ್ರಸಿದ್ಧ ವಿದ್ವಾಂಸ ಎ.ಆರ್.ಕೃಷ್ಣಶಾಸ್ತ್ರಿಯವರ ಮೊಮ್ಮಗ ಎಂಬ ಅಂಶದಿಂದ ಮತ್ತಷ್ಟು ರೋಮಾಂಚನ. ರವೀಂದ್ರ ಕಲಾಕ್ಷೇತ್ರದಲ್ಲಿಯೇ ನನಗೆ ಇನ್ನೂ ಒಬ್ಬ ವ್ಯಕ್ತಿ ಭೇಟಿಯಾಗಿ ಪುಸ್ತಕ ಕೊಟ್ಟು ರೋಮಾಂಚನ ತಂದರು. ಅವರು ಎಚ್.ಎಸ್.ಮಂಜುನಾಥ. ೨೦೦೫ರಲ್ಲಿ ನನ್ನ ಮೊಟ್ಟಮೊದಲ ಪುಸ್ತಕ ‘ವಿಚಿತ್ರಾನ್ನ’ (ದಟ್ಸ್ಕನ್ನಡ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯಲ್ಲಿ ನಾನು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ) ಪ್ರಕಟವಾದಾಗ ಮಂಜುನಾಥ ಅವರು ಅದರ ಬಗ್ಗೆ ಬರೆದ ವಿಮರ್ಶೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಂದರೆ ಒಬ್ಬ ವಿಮರ್ಶಕ ಮತ್ತು ಹವ್ಯಾಸಿ/ಅಭ್ಯಾಸಿ ಬರಹಗಾರನ ಸೌಹಾರ್ದ ಮುಖಾಮುಖಿ! ಮಂಜುನಾಥ ಅವರು ತಮ್ಮ ಇತ್ತೀಚಿನ ಕೃತಿ ‘ಚಾರ್ಲಿ ಚಾಪ್ಲಿನ್’ ವ್ಯಕ್ತಿಚಿತ್ರ ಪುಸ್ತಕದ ಪ್ರತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ. ಅದನ್ನೂ ಓದಬೇಕೆಂದುಕೊಂಡಿದ್ದೇನೆ. ಇವಿಷ್ಟೂ ಪುಸ್ತಕಗಳನ್ನು ಲೈಟ್ರೀಡಿಂಗ್ ಎಂದು ಮೊದಲಿಗೆ ಓದುವುದಕ್ಕೆ ಗುರುತಿಸಿಟ್ಟಿದ್ದೇನೆ. ಊಟಕ್ಕೆ ಮೊದಲು ‘ಎಪೆಟೈಜರ್’ ಇದ್ದಹಾಗೆ. ಇನ್ನು ‘ಮೈನ್ ಕೋರ್ಸ್’ನಲ್ಲಿ ಓದುವುದಕ್ಕೆ ತೂಕದ ಕೃತಿಗಳು ತುಂಬಾ ಇವೆ. ಅಕ್ಷರಶಃ ತೂಕದವೇ, ಏಕೆಂದರೆ ಮೊನ್ನೆ ಭಾರತದಿಂದ ಹಿಂದಿರುಗುವಾಗ ಒಂದು ಸೂಟ್ಕೇಸ್ ತುಂಬ ಪುಸ್ತಕಗಳೇ ಇದ್ದದ್ದು. ವಾಷಿಂಗ್ಟನ್ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ‘ವ್ಹಾಟ್ಸ್ ದೇರ್ ಇನ್ ಯುವರ್ ಸೂಟ್ಕೇಸಸ್? ಎನಿ ಫುಡ್ ಐಟಮ್ಸ್?’ ಎಂದು ವಿಚಾರಿಸಿದ್ದಾಗ ‘ನೋ ಫುಡ್, ಬಟ್ ದೆರ್ ಈಸ್ ಇನಫ್ ಫುಡ್ ಫಾರ್ ಥಾಟ್’ ಎಂದು ಪುಸ್ತಕಗಳ ಬಗ್ಗೆ ಅವರಿಗೂ ಹೆಮ್ಮೆಯಿಂದ ತಿಳಿಸಿದ್ದೆ. ಯಾವುದೆಲ್ಲ ಪುಸ್ತಕಗಳು? ಮುಂದಿನ ವಾರ ಬರೆಯುತ್ತೇನೆ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.