Episodes
Saturday Dec 31, 2011
New and Improved
Saturday Dec 31, 2011
Saturday Dec 31, 2011
ದಿನಾಂಕ 1 ಜನವರಿ 2012ರ ಸಂಚಿಕೆ...
ಹೊಚ್ಚಹೊಸ ಮತ್ತು ಬೆಚ್ಚನೆಯ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ತಲೆಕೂದಲನ್ನು ರೇಷ್ಮೆಯಂತೆ ನುಣುಪಾಗಿಸುತ್ತದೆನ್ನುವ ಶಾಂಪೂದಿಂದ ಹಿಡಿದು, ಕಾಲ್ಬೆರಳ ಉಗುರಿಗೆ ಬಂಗಾರದ ಮೆರುಗು ತರುತ್ತದೆನ್ನುವ ನೈಲ್ಪಾಲಿಷ್ವರೆಗೆ (ಅಂದರೆ ತಲೆಯಿಂದ ಅಂಗುಷ್ಠದವರೆಗೂ, ಟಾಪ್ ಟು ಬಾಟಮ್) ಗ್ರಾಹಕೋತ್ಪನ್ನಗಳ ಜಾಹಿರಾತುಗಳದೊಂದು ಅದ್ಭುತ ಲೋಕ. ರಸ್ತೆ ಬದಿಯ ಬಿಲ್ಬೋರ್ಡ್ಗಳಲ್ಲಿ, ರೇಡಿಯೊದಲ್ಲಿ, ಟಿವಿಯಲ್ಲಿ, ಸಿನೆಮಾ ಥಿಯೇಟರ್ನಲ್ಲಿ, ಪತ್ರಿಕೆ ಕೈಗೆತ್ತಿಕೊಂಡು ಪುಟ ತಿರುವಿದರೆ ಅಲ್ಲಿಯೂ- ಎಷ್ಟೇ ನಿರ್ಲಕ್ಷಿಸಿದರೂ ಅವು ನಮ್ಮ ಗಮನ ಸೆಳೆಯುತ್ತವೆ. ಒಪ್ಪಿಗೆ ಪಡೆಯದೆಯೇ ಬಂದು ಅಪ್ಪಳಿಸುತ್ತವೆ. ಕೈ ಹಿಡಿದು ಜಗ್ಗುತ್ತವೆ. ನಾವಾದರೂ ಅಷ್ಟೇ, ಜಾಹಿರಾತುಗಳನ್ನು ನಮ್ಮ ಬದುಕಿನ ಪಾರ್ಟು-ಮತ್ತು-ಪಾರ್ಸೆಲು ಎಂದುಕೊಳ್ಳುತ್ತೇವೆ. ಮಾಹಿತಿಯೊಂದಿಗೆ ಭರಪೂರ ಮನರಂಜನೆಯೂ ಸಿಗುತ್ತದೆಂದು ಅವುಗಳನ್ನು ಕುತೂಹಲದಿಂದ ಸ್ವಾಗತಿಸುತ್ತೇವೆ, ಇಷ್ಟಪಡುತ್ತೇವೆ. ಜಾಹಿರಾತುಗಳಿಲ್ಲದ ಜಗತ್ತನ್ನು ಊಹಿಸುವುದೂ ಕಷ್ಟ! ಆದರೆ, ಬಲೆ ಬೀಸಿ ಬಕರಾಗಳಾಗಿಸುವುದೂ ಇವೇ ಜಾಹಿರಾತುಗಳು ಎನ್ನುವುದು ಎಷ್ಟೋಸಲ ನಮ್ಮ ಅರಿವಿಗೆ ಬರುವುದಿಲ್ಲ. ಬಂದರೂ ಮನಸ್ಸು ಅವುಗಳತ್ತ ಹಾತೊರೆಯುವುದನ್ನು ನಿಲ್ಲಿಸುವುದಿಲ್ಲ. ಬಹುಶಃ ಬಲೆ ಬೀಸುವಿಕೆಯ ಪ್ರಭಾವವೇ ಅಂಥದು. ಬಲೆ ಬೀಸುವಿಕೆಗೆ ಬಗೆಬಗೆಯ ರೂಪಗಳಿರುವುದೂ ಕಾರಣವಿರಬಹುದು. ಇರಲಿ, ಎಲ್ಲದರ ಸೋದಾಹರಣ ವಿವರಣೆ ಇಲ್ಲಿ ಅಪ್ರಸ್ತುತ. ಇವತ್ತಿನ ಸಂದರ್ಭಕ್ಕೆ ಸರಿಯಾಗಿ ಜಸ್ಟ್ ಒಂದು ನಮೂನೆಯ ಮೇಲಷ್ಟೇ ಹೊಸಬೆಳಕು ಹಾಯಿಸೋಣ. ಬಹಳ ವರ್ಷಗಳಿಂದ ಮಾರುಕಟ್ಟೆಯಲ್ಲಿ ಪರಿಚಿತವಿರುವ ಬ್ರಾಂಡ್ನದೇ ಆದರೂ ಕೆಲ ಉತ್ಪನ್ನಗಳ ಜಾಹಿರಾತಿನಲ್ಲಿ ‘ಹೊಸತು!’ ಅಂತಲೋ, ‘ಸುಧಾರಿತ!’ ಅಂತಲೋ, ಗಮನ ಸೆಳೆಯುವಂತೆ ಕೆಂಪುಬಣ್ಣದ ನಕ್ಷತ್ರಾಕಾರದಲ್ಲಿ (starburst shape) ದೊಡ್ಡ ಅಕ್ಷರಗಳಲ್ಲಿ ಬರೆದಿರುವುದನ್ನು ನೀವು ಗಮನಿಸಿರುತ್ತೀರಿ. ಟಿವಿ/ರೇಡಿಯೊದಲ್ಲಿ ಬರುವ ಜಾಹಿರಾತುಗಳಿಗೂ ಇದು ಅನ್ವಯವಾಗುತ್ತದೆ. ‘ಸಾದರಪಡಿಸುತ್ತಿದ್ದೇವೆ ಹೊಚ್ಚಹೊಸ...’, ‘ಈಗ ಹಿಂದೆಂದಿಗಿಂತಲೂ ಅಧಿಕ ಶಕ್ತಿಶಾಲಿ...’, ‘ಇದೀಗ ಆಕರ್ಷಕ ಹೊಸ ಪ್ಯಾಕ್ನಲ್ಲಿ...’ ಮುಂತಾದುವೆಲ್ಲ ಜಾಹಿರಾತುಗಳ ನೆಚ್ಚಿನ ಪದಪುಂಜಗಳು. ಇದನ್ನು ನಾನು ಭಾರತೀಯ ಉತ್ಪನ್ನಗಳ ಭಾರತೀಯ ಭಾಷೆಗಳಲ್ಲಿನ ಜಾಹಿರಾತುಗಳ ಬಗ್ಗೆಯಷ್ಟೇ ಹೇಳುತ್ತಿಲ್ಲ. ಇಲ್ಲಿ ಅಮೆರಿಕದಲ್ಲೂ ಅದೇಥರ: New ಅಂತಲೋ, Improved ಅಂತಲೋ, ಮತ್ತೆ ಕೆಲವೊಮ್ಮೆ New and Improved ಎಂದೋ ಒತ್ತಿಹೇಳದೆ ಯಾವ ಜಾಹಿರಾತೂ ಪರಿಣಾಮಕಾರಿ ಎನಿಸುವುದಿಲ್ಲ. ಬೇಕಿದ್ದರೆ ಅದು ಬ್ರೇಕ್ಫಾಸ್ಟ್ ಸೀರಿಯಲ್ಲೇ ಇರಲಿ, ಬೆಂಜ್ ಕಾರೇ ಇರಲಿ, ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್ಡೇ ಇರಲಿ, ನಾಯಿಗೆ ತಿನ್ನಿಸುವ ಬಿಸ್ಕತ್ತೇ ಇರಲಿ ಎಲ್ಲವೂ ನಿರಂತರವಾಗಿ ‘ನ್ಯೂ’ ಮತ್ತು ‘ಇಂಪ್ರೂವ್ಡ್’ ಆಗುತ್ತಲೇ ಇರುತ್ತವೆ. ಇದು ಗ್ರಾಹಕನನ್ನು ಸೆಳೆಯಲಿಕ್ಕೆಂದೇ ಮಾಡುವ ತಂತ್ರ. ಹೊಸತು ಯಾವಾಗಲೂ ಹಳೆಯದಕ್ಕಿಂತ ಉತ್ತಮವಾಗಿ, ಹೆಚ್ಚು ಸಾಮರ್ಥ್ಯವುಳ್ಳದ್ದಾಗಿ ಇರುತ್ತದೆ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಅದರ ಲಾಭಗಿಟ್ಟಿಸಿ ಹೆಣೆಯಲಾದ ತಂತ್ರವಿದು. ಇದನ್ನು appeal to novelty (ಲ್ಯಾಟಿನ್ ಮೂಲ argumentum ad novitatem) ಎನ್ನುತ್ತಾರೆ. ಇದೊಂದು ತರ್ಕಾಭಾಸ ಅಥವಾ ತಪ್ಪರಿವು. ಹೊಸತು ಎಂದಮಾತ್ರಕ್ಕೆ ಹಳೆಯದಕ್ಕಿಂತ ಹೆಚ್ಚು ಶಕ್ತಿಶಾಲಿ, ಸತ್ವಯುತ ಆಗಿರಲೇಬೇಕು ಅಂತೇನಿಲ್ಲ. ಆದರೆ ಜನಸಾಮಾನ್ಯರಿಗೆ ಹಾಗೊಂದು ನಂಬಿಕೆ ಇರುತ್ತದೆ. ಉದ್ಯಮಗಳು ಅದರ ಲಾಭಪಡೆಯುತ್ತವೆ. ‘ಹೊಸತು’, ‘ಸುಧಾರಿತ’ ಅಂತೆಲ್ಲ ಜಾಹಿರಾತಿನಲ್ಲಿ ಸೇರಿಸುತ್ತವೆ. ಒಳಗಿನ ಗುಟ್ಟು ಶಿವನೇಬಲ್ಲ ಎಂಬಂತೆ ಬರೀ ಹೊರಕವಚವನ್ನು ಆಕರ್ಷಕವಾಗಿಸಿ ಬೆಲೆಯನ್ನೂ ಒಂದಿಷ್ಟು ಹೆಚ್ಚಿಸಿ ಒಳಗೆ ಅದೇ ಹಿಂದಿನ ಗುಣಮಟ್ಟದ ಉತ್ಪನ್ನವನ್ನೇ ಮಾರಿದರೂ ಬಡಪಾಯಿ ಗ್ರಾಹಕನಿಗೆಲ್ಲಿ ಗೊತ್ತಾಗುತ್ತದೆ? ‘ಹೊಸತು ಮತ್ತು ಸುಧಾರಿತ’ ಎಂದು ಎರಡೂ ವಿಶೇಷಣಗಳನ್ನು ಒಟ್ಟಿಗೇ ಬಳಸಿದರಂತೂ ತಾಜಾ ಆಭಾಸ. ಯಾವುದೇ ಉತ್ಪನ್ನವು ಒಂದೋ ಹೊಚ್ಚಹೊಸದಾಗಿ ಇರಬಹುದು, ಇಲ್ಲ ಇದ್ದದ್ದರಲ್ಲೇ ಸುಧಾರಣೆಯಾದದ್ದಿರಬಹುದು. ಎರಡೂ ಒಟ್ಟಿಗೇ ಸಾಧ್ಯವಿಲ್ಲ. ಆದರೂ New and Improved ಎಂದು ಜಾಹಿರಾತುದಾರರು ಅಬ್ಬರಿಸುತ್ತಾರೆ. ಉತ್ಕೃಷ್ಟವಾದ ಉತ್ಪನ್ನ ಎಂದುಕೊಂಡು ಗ್ರಾಹಕರು ಉಬ್ಬಿಹೋಗುತ್ತಾರೆ. ತಮಾಷೆಯೆಂದರೆ ಈಗ ಯಃಕಶ್ಚಿತ್ ಪೊರಕೆಗೂ ಜಾಹಿರಾತು. ಪೊರಕೆ ತಯಾರಿಸುವ ಕಂಪನಿಯೂ ಪತ್ರಿಕೆಗಳಲ್ಲಿ ಫುಲ್ಪೇಜ್ ಕಲರ್ ಎಡ್ವರ್ಟೈಸ್ಮೆಂಟ್ ಕೊಡುತ್ತದೆ. ಟಿವಿಯಲ್ಲಿ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತದೆ. ‘ಈಗ ಹಿಂದೆಂದಿಗಿಂತಲೂ ಹೆಚ್ಚು ಕಸವನ್ನು ಗುಡಿಸುತ್ತೇವೆ!’ ಎಂದು ತನ್ನ ಜಾಹಿರಾತಿನಲ್ಲಿ ಹೇಳಿಕೊಳ್ಳುತ್ತದೆ. ಅದರ ಸೂಕ್ಷ್ಮಾರ್ಥ ನಾವು ಗಮನಿಸಬೇಕು. ಪೊರಕೆಯ ಸಾಮರ್ಥ್ಯ ಹೆಚ್ಚಿದೆ ಅಂತಲ್ಲ, ಕಾಲ ಬದಲಾದಂತೆಲ್ಲ ನಾವುಗಳು ಮನೆಯಲ್ಲೂ ಮನದಲ್ಲೂ ಹೆಚ್ಚುಹೆಚ್ಚು ಕಸ ಉತ್ಪಾದಿಸುತ್ತೇವೆ ಎಂದು! ಹಾಗೆಯೇ ‘ಇದೀಗ ಹೆಚ್ಚು ಪೋಷಕಾಂಶಗಳೊಂದಿಗೆ, ವೈದ್ಯರಿಂದ ಶಿಫಾರಿಸಲ್ಪಟ್ಟದ್ದು’ ಎಂದು ಯಾವುದಾದರೂ ಆಹಾರೋತ್ಪನ್ನದ ಜಾಹಿರಾತಿದ್ದರೆ, ಇದುವರೆಗೂ ನಾವು ತಿನ್ನುತ್ತಿದ್ದದ್ದೆಲ್ಲ ನಾಲಾಯಕ್ ಪದಾರ್ಥಗಳು, ಈಗ ಪೋಷಕಾಂಶಗಳಿಗೆ ಅರ್ಹತೆ ಗಳಿಸಿದ್ದೇವೆ ಎಂದು ಅರ್ಥೈಸಬೇಕು. ಅಂತೂ ಜಾಹಿರಾತುಗಳ ಧಾಟಿಯನ್ನು, ಒಳಧ್ವನಿಯನ್ನು ಅಕ್ಷರಶಃ ತೆಗೆದುಕೊಂಡರೆ ನಾವೆಲ್ಲ ಏನೂ ಅರಿಯದ ದಡ್ಡರೆಂದು ಒಪ್ಪಿಕೊಂಡಂತೆ. ಈ ‘ಹೊಚ್ಚಹೊಸ’ ಪದದ ಬಳಕೆಯೂ ತಮಾಷೆಯೇ. ಐದಾರು ವರ್ಷಗಳ ಹಿಂದೆ, ಕನ್ನಡ ವಾಹಿನಿಗಳು ಸಿಗುವ ಸ್ಯಾಟಲೈಟ್ ಟಿವಿ ಸೇವೆಯನ್ನು ಇಲ್ಲಿ ಪಡೆದುಕೊಂಡು ಕನ್ನಡವಾಹಿನಿಗಳನ್ನು ನೋಡತೊಡಗಿದ್ದಾಗ ಗಮನಿಸಿದ್ದೆ. ‘ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಹೊಚ್ಚಹೊಸ ಚಲನಚಿತ್ರ...’ ಅಂತ ಜಾಹಿರಾತು. ಆಹಾ ಪರ್ವಾಗಿಲ್ವೇ ಹೊಸ ಸಿನೆಮಾ ಇಷ್ಟು ಬೇಗ ಟಿವಿಯಲ್ಲಿ ಬರುತ್ತಿದೆ ಎಂದು ಸಣ್ಣಮಟ್ಟಿನಲ್ಲಿ ರೋಮಾಂಚನವಾಗಿತ್ತು. ಕೊನೆಗೂ ಆ ಚಲನಚಿತ್ರ ಪ್ರಸಾರವಾಯಿತು. ಆಮೇಲೆ ಒಂದೆರಡು ವಾರಗಳ ನಂತರ ಇನ್ನೊಂದು ಚಲನಚಿತ್ರಕ್ಕೂ ‘ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಹೊಚ್ಚಹೊಸ...’! ಅರೆರೆ ಇದು ಹೇಗೆ ಸಾಧ್ಯ? ಕಳೆದವಾರವಷ್ಟೇ ಇನ್ನೊಂದು ಸಿನೆಮಾ ಅದೇ ಹೆಗ್ಗಳಿಕೆಯಿಂದ ಬೀಗಿತ್ತಲ್ವೇ? ಹೋಗಲಿ ಒಂದೊಂದು ಹೊಸ ಚಿತ್ರಕ್ಕೂ ಆ ಸ್ಲೋಗನ್ನ ಸ್ವಾಗತ ಅಂತಂದುಕೊಂಡ್ರೆ, ಒಂದೆರಡು ತಿಂಗಳ ನಂತರ ಮತ್ತೆ ಅದೇ ಚಲನಚಿತ್ರ ಎರಡನೇ ಬಾರಿ ಪ್ರಸಾರವಾಯಿತು. ಮತ್ತೆ ಅದೇ ಸೊಲ್ಲು- ‘ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಹೊಚ್ಚಹೊಸ!’ ಅಲ್ಲೇ ಗೊತ್ತಾಯ್ತಲ್ಲ ಹೊಚ್ಚಹೊಸ ಎನ್ನುವುದು ಸತ್ಯವಲ್ಲ, ಮೂರ್ಖರ ಪೆಟ್ಟಿಗೆಯತ್ತ ಮೂರ್ಖರನ್ನು ಸೆಳೆಯುವ ಹಸಿಹಸಿ ಸುಳ್ಳು! ಇವೆಲ್ಲ ಈಗಿನ ೨೧ನೇ ಶತಮಾನದ ತಂತ್ರಗಳು ಅಂದ್ಕೊಳ್ಳಬೇಡಿ. ಐದಾರು ದಶಕಗಳ ಹಿಂದೆ ಜಾಹಿರಾತುಗಳು ಹೇಗಿದ್ದವು ಎಂದು ಕುತೂಹಲವಿದ್ದರೆ chandamama.com ವೆಬ್ಸೈಟ್ಗೆ ಹೋಗಿನೋಡಿ. ಚಂದಮಾಮ ಹಳೇ ಸಂಚಿಕೆಗಳಲ್ಲಿನ ಜಾಹಿರಾತು ಪುಟಗಳನ್ನೇ ಪ್ರತ್ಯೇಕವಾಗಿ ಜೋಡಿಸಿಟ್ಟಿದ್ದಾರೆ. ಉಷಾ ಫ್ಯಾನುಗಳ ಜಾಹಿರಾತು ‘ಈ ಮೊದಲೆಂದೂ ಕಂಡು ಕೇಳಿ ಅರಿಯದ ಹೊಚ್ಚಹೊಸ ಡಿಸೈನುಗಳು!’ ಅಂತ ಇತ್ತು ಆಗಲೂ. ‘ಪರಿಪೂರ್ಣವಾದ ಮುಖವರ್ಚಸ್ಸಿಗೆ ಉಪಯೋಗಿಸಿರಿ ಹೊಚ್ಚಹೊಸ ಕಾಶ್ಮೀರ್ ಸ್ನೋ!’ ಅಂತ ಇನ್ನೊಂದು. ರಾಲೆ, ಹರ್ಕ್ಯೂಲಿಸ್ ಸೈಕಲ್ಗಳು, ನ್ಯೂಟ್ರೀನ್, ಪ್ಯಾರಿ ಮಿಠಾಯಿಗಳು, ವುಡ್ವರ್ಡ್ಸ್ ಗ್ರೈಪ್ವಾಟರ್... ಎಲ್ಲವುಗಳದ್ದೂ ಅದೇ ಮಂತ್ರ ಅದೇ ತಂತ್ರ ‘ಹೊಚ್ಚಹೊಸ’, ‘ಸುಧಾರಿತ’ ಅಥವಾ ಎರಡೂ! ಗಂಡಸರ ಅಂಡರ್ವೇರ್ ಕಂಪನಿಯು ಮೊಟ್ಟಮೊದಲಿಗೆ ಪಟ್ಟೆಪಟ್ಟೆಗಳ ಒಳಉಡುಪುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾಗ ಸುಧಾ/ತರಂಗದಲ್ಲಿ ಜಾಹಿರಾತು ಬಂದಿತ್ತು- ‘ಈಗ ಹೊಚ್ಚಹೊಸ ವಿನ್ಯಾಸ: ಗಂಡಿಗೆ ಒಪ್ಪುವ ಪಟ್ಟೆಗಳು!’ ಪಕ್ಕದಲ್ಲಿ ಒಂದು ಹುಲಿಯ ಚಿತ್ರ. ನಾನಾಗ ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದೆ. ಹಾಸ್ಟೆಲ್ನಲ್ಲಿ ಕೆಲವೊಮ್ಮೆ ಇಡ್ಲಿಗಳಿಗೆ ತಾಮ್ರದ ತಟ್ಟೆಗಳ ಕಿಲುಬು ತಗುಲಿದ್ದಿರುತ್ತಿತ್ತು. ಪಟ್ಟೆಪಟ್ಟೆಗಳಾಗಿ ಚಂದದ ವಿನ್ಯಾಸ ಬೇರೆ. ಕಿರಣ್ ಎಂಬೊಬ್ಬ ಸಹಪಾಠಿ ‘ಹೊಚ್ಚಹೊಸ ವಿನ್ಯಾಸ! ಗಂಡಿಗೆ ಒಪ್ಪುವ ಪಟ್ಟೆಗಳು; ಇಡ್ಲಿಗೆ ಒಪ್ಪುವ ಕಿಲುಬುಗಳು!’ ಎಂದು ತಮಾಷೆ ಮಾಡುತ್ತಿದ್ದದ್ದು ನನಗೀಗಲೂ ಚೆನ್ನಾಗಿ ನೆನಪಿದೆ. ಇನ್ನೊಂದು ಹೊಚ್ಚಹೊಸ ಜೋಕು ಮೊನ್ನೆ ಫೇಸ್ಬುಕ್ ಗೋಡೆಮೇಲೆ ನೋಡಿದ್ದು. ತುಳುಭಾಷೆಯ ಪದಗಳೂ ಇರುವ ಇದರ ಮೂಲ ದಕ್ಷಿಣಕನ್ನಡ ಅಥವಾ ಉಡುಪಿ ಜಿಲ್ಲೆ ಇರಬೇಕು. ಜೋಕ್ ಹೀಗಿದೆ- ‘ಮಕ್ಕಳು ಶಾಲೆಗೆ ಹೋಗುತ್ತಿಲ್ಲವೇ? ಹಾಗಾದರೆ ಚಿಂತಿಸಬೇಡಿ. ಈಗ ಬಂದಿದೆ ಟಾರ್ಟಾರಿಕ್ ಕಂಪನಿಯವರ ಹೊಚ್ಚಹೊಸ ಪುಳಿತ್ತ ಅಡರ್! ರಪರಪ ನಾಲ್ಕು ಬಾರಿಸಿ. ಆಗ ಒಂದು ಮಧುರ ರಿಂಗ್ಟೋನ್ ಹೊರಗೆ ಬರುತ್ತೆ. ಯಾನ್ ಶಾಲೆಗ್ ಪೋಪೆ.’ (ಪುಳಿತ್ತ ಅಡರ್ = ಹುಣಿಸೆಮರದ ಛಡಿ; ಯಾನ್ ಶಾಲೆಗ್ ಪೋಪೆ = ನಾನು ಶಾಲೆಗೆ ಹೋಗ್ತೇನೆ). ಪರಾಗಸ್ಪರ್ಶ ಅಂಕಣದ ಓದುಗಮಿತ್ರರೆಲ್ಲರಿಗೂ ಹೊಚ್ಚಹೊಸ ವರ್ಷದ ಬೆಚ್ಚನೆಯ ಮತ್ತು ಸುಧಾರಿತ ಶುಭಾಶಯಗಳು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.