Episodes
Saturday Jan 21, 2012
Onomatopoeia
Saturday Jan 21, 2012
Saturday Jan 21, 2012
ದಿನಾಂಕ 22 ಜನವರಿ 2012ರ ಸಂಚಿಕೆ...
ಒನಮೆಟೊಪಿಯಾ : ಶಬ್ದಸಾಹಿತ್ಯ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲಾ... ಎಂದರು ಪುರಂದರದಾಸರು. ಧೊಪ್ಪನೆ ಎಂದರೇನು? ಬಿಂದಿಗೆ ಬಿದ್ದದ್ದು. ದಾಸರು ಅದನ್ನು (ಬಿಂದಿಗೆ ಬಿದ್ದ ಶಬ್ದವನ್ನು) ಅಕ್ಷರಗಳಲ್ಲಿ ಹಿಡಿದಿಟ್ಟದ್ದು. ತುಪ್ಪ ತುಂಬಿದ ಬಿಂದಿಗೆಯಾದ್ದರಿಂದ ಮತ್ತು ತಿಪ್ಪೆಯ ಮೇಲೆ ಬಿದ್ದದ್ದಾದ್ದರಿಂದ ‘ಧೊಪ್’ ಎಂದೇ ಕೇಳಿಸಿದ್ದಿರಬೇಕು. ಒಂದುವೇಳೆ ಖಾಲಿ ಬಿಂದಿಗೆ ಸಿಮೆಂಟ್ ನೆಲದ ಮೇಲೆ ಅಥವಾ ಕಲ್ಲುಬಂಡೆಗಳ ಮೇಲೆ ಬಿದ್ದಿದ್ದರೆ? ಆಗ ಧೊಪ್ ಎಂಬ ಶಬ್ದ ಬರುವುದಿಲ್ಲ. ಮತ್ತ್ಯಾವ ಶಬ್ದ? ಅದನ್ನು ಒಂದು ಸಂಸ್ಕೃತ ಶ್ಲೋಕ ಚಂದವಾಗಿ ವಿವರಿಸಿದೆ- ‘ರಾಜಾಭಿಷೇಕೇ ಮದವಿಹ್ವಲಾಯಾ ಹಸ್ತಾಚ್ಯುತೋ ಹೇಮಘಟಸ್ತರುಣ್ಯಾಃ| ಸೋಪಾನಮಾಸಾದ್ಯ ಕರೋತಿ ಶಬ್ದಂ ಠಠಂಠಠಂಠಂ ಠಠಠಂಠಠಂಠಃ||’ ರಾಜನಿಗೆ ಸ್ನಾನ ಮಾಡಿಸುವುದರಲ್ಲಿ ಮಗ್ನಳಾದ ಸೇವಕಿಯ ಕೈಯಿಂದ ಜಾರಿದ ಚಿನ್ನದ ಬಿಂದಿಗೆಯು ಮೆಟ್ಟಲುಗಳ ಮೇಲೆ ಠಠಂಠಠಂಠಂ ಠಠಠಂಠಠಂಠಃ ಎಂದು ಶಬ್ದ ಮಾಡುತ್ತ ಉರುಳಿತಂತೆ! ವೆಲ್ಕಮ್ ಟು ಒನಮೆಟೊಪಿಯಾ(onomatopoeia). ಬನ್ನಿ, ‘ಶಬ್ದಸಾಹಿತ್ಯ’ದ ಅದ್ಭುತಲೋಕದಲ್ಲಿ ಒಂದು ಸುತ್ತು ತಿರುಗಿಬರೋಣ. ಬಹುಶಃ ಒನಮೆಟೊಪಿಯಾ ಎಂಬ ಪದವನ್ನು ನೀವು ಕೇಳಿರಲಿಕ್ಕಿಲ್ಲ ಅಷ್ಟೇ, ಆದರೆ ಹಾಗಂದ್ರೇನು ಅಂತ ನಿಮಗಾಗಲೇ ಗೊತ್ತಿರುತ್ತದೆ. ಈ ವಾಕ್ಯಗಳನ್ನು ಹೀಗೇಸುಮ್ಮನೆ ಒಮ್ಮೆ ಓದಿ. “ಸಂಜೆಹೊತ್ತು ಜಿಟಿಪಿಟಿ ಮಳೆ ಸುರೀತಿತ್ತು. ಕರ್ರುಂಕುರ್ರುಂ ತಿಂಡಿ ಏನಾದ್ರೂ ಇದ್ದಿದ್ರೆ ಚೆನ್ನಾಗಿರೋದು ಅನ್ನಿಸ್ತು. ಊರಲ್ಲಾಗಿದ್ರೆ ನಿಗಿನಿಗಿ ಉರಿವ ಕೆಂಡದಲ್ಲಿ ಹಪ್ಪಳವೋ ಹಲಸಿನಬೀಜಗಳೋ ಸುಟ್ಟು ತಿಂತಿದ್ವಿ. ಈ ಹಾಳು ನಗರದಲ್ಲಿ ಕುರ್ಕುರೆ ಪ್ಯಾಕೆಟೇ ಗತಿ. ಟಿ.ವಿ ಆನ್ ಮಾಡಿದ್ರೆ ಯಾವ್ದೋ ಡಿಶುಂಡಿಶುಂ ದೃಶ್ಯಗಳ ಸಿನೆಮಾ ಬರ್ತಿತ್ತು. ವಿಲನ್ ನಾಯಕಿಯ ಕತ್ತು ಹಿಸುಕುವುದನ್ನು ನೋಡಿ ಕರುಳು ಚುರ್ರುಕ್ಕೆಂದಿತು. ಹೊರಗೆ ಧೋ ಅಂತ ಮಳೆ ಮತ್ತೂ ಹೆಚ್ಚಾಯ್ತು. ಅಷ್ಟೊತ್ತಿಗೆ ಕಟಕಟ ಬಾಗಿಲು ಬಡಿದ ಶಬ್ದ. ಚಿಲಕ ಹಾಕಿದ್ದಿರಲಿಲ್ಲವಾದ್ದರಿಂದ ಧಡಾರನೆ ಬಾಗಿಲು ತೆರೆದು ಆ ವ್ಯಕ್ತಿ ಒಳಬಂದ. ನನ್ನೆದೆಯಲ್ಲಿ ಡವಡವ. ಆ ದಢೂತಿ ಆಕೃತಿ ನೋಡಿ ಕಿಟಾರನೆ ಕಿರುಚಿದೆ. ಎಲ್ಲೋಇದ್ದ ಕರಿಬೆಕ್ಕು ಮಿಯಾಂವ್ ಎನ್ನುತ್ತ ಆಗಲೇ ಬಂದು ನನ್ನನ್ನು ಹೆದರಿಸಬೇಕೇ!” ಇದರಲ್ಲಿ ಪ್ರತಿಯೊಂದು ವಾಕ್ಯದಲ್ಲೂ ಒಂದೊಂದು ಅನ್ನುವಮಟ್ಟಿಗೆ ಒನಮೆಟೊಪಿಕ್ ಪದಗಳಿವೆ. ಜಿಟಿಪಿಟಿ, ಕರ್ರುಂಕುರುಂ, ಡಿಶುಂಡಿಶುಂ, ಚುರ್ರುಕ್ಕೆಂದಿತು, ಧೋ, ಧಡಾರನೆ, ಕಿಟಾರನೆ, ಮಿಯಾಂವ್... ಇವೆಲ್ಲ ಒಂದೊಂದು ಶಬ್ದಾನುಭವದ ಅಕ್ಷರರೂಪ ಅಲ್ಲವೇ? ಅದೇ ಒನಮೆಟೊಪಿಯಾ! ಯಾವ ಸಪ್ಪಳವನ್ನು ಹೆಚ್ಚೂಕಡಿಮೆ ಅದೇ ರೀತಿಯ ಉಚ್ಚರಣೆಯ ಪದದಲ್ಲಿ ಹಿಡಿದಿಡುತ್ತೇವೋ ಅದು ಒನಮೆಟೊಪಿಕ್ ಪದ ಎನಿಸುತ್ತದೆ. ಗಡಿಯಾರದ ‘ಟಿಕ್ಟಿಕ್’, ನೀರಿನ ‘ಜುಳುಜುಳು’, ಗೆಜ್ಜೆಯ ‘ಘಲ್ಘಲ್’ ಮುಂತಾದವೆಲ್ಲ ಒನಮೆಟೊಪಿಕ್ ಪದಗಳು. ಹೆಚ್ಚಾಗಿ ಶಿಶುಗೀತೆಗಳಲ್ಲಿ ಅನುಕರಣ ಶಬ್ದಗಳಾಗಿ ಇಂಥವು ಕಾಣಿಸಿಕೊಳ್ಳುತ್ತವೆ. ‘ಲೊಳ್ಲೊಳ್ ಭೌ ಎಂದು ಕೂಗಿಯಾಡುವೆ...’ ಎನ್ನುತ್ತದೆ ರಾಜರತ್ಮಂ ಪದ್ಯದ ನಾಯಿಮರಿ. ‘ಟಿಕ್ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್’ ಆಗುತ್ತಾನೆ ದಿನಕರ ದೇಸಾಯಿಯವರ ಗಂಟೆಯ ನೆಂಟ. ‘ಆಗಲೇ ಕೂಗಿತು ಕೊ-ಕ್ಕೊ-ಕ್ಕೋಳಿ ಕಣ್ಣುಜ್ಜುತ ನಾ ನೋಡಿದೆ ಪಿಳಿಪಿಳಿ...’ ಎನ್ನುತ್ತಾನೆ ಮುಂಡಾಜೆ ರಾಮಚಂದ್ರಭಟ್ಟರ ಕವಿತೆಯಲ್ಲಿ ರೈಲುಪ್ರವಾಸದ ಕನಸು ಕಂಡ ಹುಡುಗ. ‘ಕೂವೂ ಜಗ್ಜಗ್ ಪೂವ್ವೀ ಟುವ್ವಿಟ್ಟವೂ...’ ಎಂದು ಹಾಡುತ್ತವೆ ಬಿಎಂಶ್ರೀ ಬಣ್ಣಿಸುವ ವಸಂತ ಋತುವಿನ ಹಕ್ಕಿಗಳು. ಆಶ್ಚರ್ಯವೆಂದರೆ ಆ ಕವಿತೆಯ ಇಂಗ್ಲಿಷ್ ಮೂಲ ಥಾಮಸ್ ನ್ಯಾಷ್ ಬರೆದದ್ದರಲ್ಲೂ Cuckoo jug-jug pu-we to-witta-woo ಎಂದೇ ಇದೆ ಹಕ್ಕಿಗಳ ಕಲರವ! ಬಿಎಂಶ್ರೀಯವರಾಗಲೀ ನ್ಯಾಷ್ ಆಗಲೀ ಮುಂದೊಂದು ದಿನ ‘ಟ್ವಿಟ್ಟರ್’ ಅಂತೊಂದು ಕ್ರೇಜ್ ಬರುತ್ತೆ, ಹಕ್ಕಿಗಳಷ್ಟೇ ಅಲ್ಲ ಜನರೂ ‘ಟ್ವೀಟ್’ ಮಾಡುತ್ತಾರೆ ಎಂದು ಕನಸಲ್ಲೂ ಯೋಚಿಸಿರಲಿಕ್ಕಿಲ್ಲ. ಜಗತ್ತಿನ ಎಲ್ಲ ಭಾಷೆಗಳಲ್ಲೂ ಒನಮೆಟೊಪಿಯಾ ಇದೆ. ಇರಲೇಬೇಕು, ಏಕೆಂದರೆ ಒಂದು ಥಿಯರಿಯ ಪ್ರಕಾರ ಮನುಷ್ಯಜಾತಿ ಮಾತು ಕಲಿತದ್ದೇ ಒನಮೆಟೊಪಿಕ್ ಪದಗಳ ಮೂಲಕ. ತನ್ನ ಸುತ್ತಮುತ್ತಲಿನ ಜೀವಿಗಳು, ವಸ್ತುಗಳು, ಚಲನವಲನಗಳು ಮಾಡುವ ಧ್ವನಿಯನ್ನು ಅನುಕರಿಸಿ ಮನುಷ್ಯ ಮಾತು ಕಲಿತನಂತೆ. ಆ ಥಿಯರಿಯ ಪ್ರತಿಪಾದಕರು ಇತಿಹಾಸ ಕೆದಕುತ್ತ ಹೋಗಿ ಭೂಮಿಯು ಸೃಷ್ಟಿಯಾದ ‘ಬಿಗ್ ಬ್ಯಾಂಗ್’ ಕ್ಷ್ಷಣವನ್ನೂ ತಲುಪಿ ಇಂಗ್ಲಿಷ್ನ ‘ಬ್ಯಾಂಗ್’ ಸಹ ಒಂದು ಒನಮೆಟೊಪಿಕ್ ಪದವೆಂದು ವ್ಯಾಖ್ಯಾನಿಸುತ್ತಾರೆ. ಅದನ್ನೇ ನಾವು ಪ್ರಣವ ನಾದ ‘ಓಂ’ಕಾರದ ವಿಷಯದಲ್ಲೂ ಹೇಳಬಹುದೇನೋ. ಇರಲಿ, ಅಷ್ಟು ಗಂಭೀರವಾದ ತಾರ್ತಿಕ ವಿಶ್ಲೇಷಣೆ ನಮಗೀಗ ಬೇಡ. ಆದರೂ ಮಾತಿನ ಕಲಿಕೆಯಲ್ಲಿ ಒನಮೆಟೊಪಿಕ್ ಪದಗಳ ಕೊಡುಗೆ ಇರುವುದಂತೂ ಹೌದು. ಚಂದದ ಉದಾಹರಣೆಯೆಂದರೆ ಪುಟ್ಟ ಮಕ್ಕಳ ಭಾಷೆಯಲ್ಲಿ ಊಟ ಅಥವಾ ಅನ್ನವನ್ನು ‘ಮಾಮ್ಮಾಂ’ ಎನ್ನುವುದು (‘ಬಿಸಿಅನ್ನ ಗೊಜ್ಜು ಮಾಡಿ ನಿನ್ಗೆ ಮಾಮ್ಮಾಂ ಮಾಡ್ತೀವಿ...’ ಚಿನ್ನಾರಿಮುತ್ತ ಹಾಡನ್ನು ನೆನಪಿಸಿಕೊಳ್ಳಿ. ಹಾಗೆಯೇ, ‘ಮಮ್ಮು ಉಣ್ಣುತ್ತೇನೆ ಸುಮ್ಮನಿರುತ್ತೇನೆ ಗುಮ್ಮನ ಕರೆಯದಿರೆ...’ ದಾಸರಪದ). ಮಾಮ್ಮಾಂ ಅಥವಾ ಮಮ್ಮು ಎಂಬ ಪದ ಭಾಷಾತೀತ. ಮಗು ಅದನ್ನು ಮಾತೃಭಾಷೆಯ ಪದವಾಗಿ ಕಲಿಯುವುದಿಲ್ಲ. ಆಹಾರ ಸೇವನೆಗೆ, ಆನಂದದಿಂದ ಉಣ್ಣುವ ಮೂಲಭೂತ ಪ್ರಕ್ರಿಯೆಗೆ ಅತ್ಯಂತ ಸಮಂಜಸ ಧ್ವನಿರೂಪ ಅದು. ಮಾತಿನಲ್ಲಿ, ಬರಹದಲ್ಲಿ ಅದನ್ನು ಧ್ವನಿರೂಪವಾಗಿ ಬಳಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ‘ನಾನು ಹೋಳಿಗೆ ತಿಂದೆ’, ‘ನಾನು ಹೋಳಿಗೆಯನ್ನು ಗಬಗಬ ಮುಕ್ಕಿದೆ’ ಮತ್ತು ‘ನಾನು ಹೋಳಿಗೆಯನ್ನು ಆಮ್ನಾಮ್ನ್ಯಾಮ್ ಎಂದು ಚಪ್ಪರಿದೆ’ - ಈ ಮೂರು ವಾಕ್ಯಗಳಲ್ಲಿ ಯಾವುದು ಹೋಳಿಗೆಯ ಸವಿಯನ್ನು ಹೆಚ್ಚು ಸಮರ್ಥವಾಗಿ ಸೆರೆಹಿಡಿದಿದೆ, ಬಾಯಿಯಲ್ಲಿ ನೀರೂರಿಸಿದೆ ಎಂದು ಹೋಲಿಸಿನೋಡಿ. ಒನಮೆಟೊಪಿಯಾ ಹೆಚ್ಚುಗಾರಿಕೆ ಆಗ ಅರ್ಥವಾಗುತ್ತದೆ. ಪುಟ್ಟ ಮಗುವನ್ನು ಮುದ್ದಿಸುವಾಗ, ಎಷ್ಟು ಸಿಹಿಯಾಗಿದ್ದೀ ತಿಂದುಬಿಡುತ್ತೇನೆ ಎನ್ನುತ್ತ ಮಗುವಿನ ಕೈಬೆರಳುಗಳನ್ನೋ ಹೊಟ್ಟೆಯನ್ನೋ ತಿಂದಂತೆ ನಟಿಸುವಾಗ ಆಮ್ನಾಮ್ನ್ಯಾಮ್ ಎಂದೇ ತಾನೆ ನಮ್ಮ ಪ್ರೀತಿ ಹೊರಹೊಮ್ಮುವುದು? ಸೆಸಮೆ ಸ್ಟ್ರೀಟ್ ಮಕ್ಕಳ ಟಿ.ವಿ ಕಾರ್ಯಕ್ರಮದಲ್ಲಿ ‘ಕುಕಿ ಮಾನ್ಸ್ಟರ್’ ತನ್ನ ನೆಚ್ಚಿನ ಬಿಸ್ಕತ್ತುಗಳನ್ನು ಚಪ್ಪರಿಸುವುದೂ ಆಮ್ನಾಮ್ನ್ಯಾಮ್ ಧ್ವನಿ ಹೊರಡಿಸಿಯೇ. ಭಾಷೆಗೆ ನಿಜವಾದ ಧ್ವನಿ ಬರುವುದು ಒನಮೆಟೊಪಿಯಾದಿಂದ. ‘ಘಲ್ಲುಘಲ್ಲೆನುತ ಗೆಜ್ಜೆ ಘಲ್ಲುತಾಧಿಮಿತಾ’ ಹಾಡಿನಲ್ಲಾಗಲೀ, ‘ಗಿಲಿಗಿಲಿ ಗಿಲಕ್ಕು ಕಾಲಗೆಜ್ಜೆ ಝಣಕ್ಕು...’ ಹಾಡಿನಲ್ಲೇ ಆಗಲಿ ಗೆಜ್ಜೆ ಶಬ್ದ ತನ್ನಿಂತಾನೇ ನಮ್ಮ ಕಿವಿಗಳಲ್ಲಿ ರಿಂಗಣಿಸುವುದು ಒನಮೆಟೊಪಿಕ್ ಪದಗಳಿಂದ. ಹೌದಲ್ಲ ‘ರಿಂಗಣಿಸು’ ಸಹ ಒಂದು ಒನಮೆಟೊಪಿಕ್ ಪದ! ಯಾವ ಮೋಹನ ಮುರಳಿ ಕರೆಯಿತೋ ಕವನದ ‘ಕರಣ ಗಣದಿ ರಿಂಗಣ...’ ಸಾಲನ್ನು ನೆನಪಿಸಿಕೊಳ್ಳಿ, ಟೆಲಿಫೋನ್ ರಿಂಗ್ ಮೊಳಗಿದ ಅನುಭವ! ಮತ್ತೆ, ಮಳೆಹನಿಗಳ ಶಬ್ದ ಒನಮೆಟೊಪಿಕ್ ಪದಗಳಲ್ಲಿ ಮೂಡಿಬರುವುದು ಇನ್ನೂ ಚಂದ: ‘ಟಿಪ್ ಟಿಪ್ ಬರ್ಸಾ ಪಾನಿ...’ ಅಥವಾ ‘ಬೃಷ್ಟಿ ಪೊಡೇ ಟಾಪುರ್ ಟುಪುರ್...’ ಸಾಲುಗಳು ತೊಟ್ಟಿಕ್ಕುವ ಮಳೆಹನಿಗಳಾದರೆ, ಪಂಜೆ ಮಂಗೇಶರಾಯರ ಕಥೆಯ ‘ತಟಪಟ ಹನಿಯಪ್ಪ’ನದು ಕುಂಭದ್ರೋಣ ಮಳೆಯ ಅಟ್ಟಹಾಸ. ಆ ಕಥೆ ನನಗೆ ಈಗಲೂ ನೆನಪಿರುವುದು ಅದರ ವಿಚಿತ್ರ ಹೆಸರಿನಿಂದಾಗಿಯೇ. ತಟಪಟ ಎಂಬ ಒನಮೆಟೊಪಿಕ್ ಪದದಿಂದಾಗಿಯೇ ಎಂದರೂ ತಪ್ಪಲ್ಲ. ತಟಪಟ ಹನಿಯಪ್ಪನ ಕಥೆಯಂಥದೇ ಶಿಶುಗೀತೆಯೊಂದನ್ನು ಬರೆದಿದ್ದಾರೆ ಅಮೆರಿಕನ್ನಡತಿ ಸ್ನೇಹಿತೆ ಸವಿತಾ ರವಿಶಂಕರ್. ಈ ಕವಿತೆಯಂತೂ ಸಂಪೂರ್ಣ ‘ಶಬ್ದ’ಸಾಹಿತ್ಯ. ಕೆಲವು ಸಾಲುಗಳನ್ನು ನೋಡಿ- “ಭರಭರ ಬೀಸಲು ಗಾಳಿ ಪುರ್ಪುರ್ ಹಾರಿತು ಹಕ್ಕಿ/ ಗುಡುಗುಡು ಗುಡುಗಿತು ಗುಡುಗು ಝಲ್ಝಲ್ ಹೊಳೆಯಿತು ಮಿಂಚು/ ತಪತಪ ಸದ್ದಿನ ಮಳೆಗೆ ತಕತಕ ಕುಣಿಯಿತು ನವಿಲು/ ಟಪಟಪ ಉದುರಲು ಆಲಿಕಲ್ಲು ವಟವಟಗುಟ್ಟಿತು ಕಪ್ಪೆ” ಹೀಗೆ ಪದ್ಯದ ತುಂಬೆಲ್ಲ ಒನಮೆಟೊಪಿಯಾ ಒನಪು. ನನಗನಿಸುತ್ತದೆ, ಕನ್ನಡ ಭಾಷೆಯ ಸೊಗಡನ್ನು ಮಕ್ಕಳಿಗೆ, ಅನ್ಯಭಾಷಿಗರಿಗೆ ತಿಳಿಹೇಳಬೇಕಾದರೆ ‘ನಮ್ಮದು ಎಂಟು ಜ್ಞಾನಪೀಠ ವಿಜೇತ ಭಾಷೆ’ ಅಂತೆಲ್ಲ ದೊಡ್ಡದೊಡ್ಡ ಮಾತುಗಳಿಗಿಂತ ಇಂಥ ಸರಳಸುಂದರ ರಸಘಟ್ಟಿಗಳು ಸಾವಿರಪಾಲು ಮೇಲು. ಕೊನೆಯಲ್ಲೊಂದು ಒನಮೆಟೊಪಿಕ್ ರಸಪ್ರಶ್ನೆ. ‘ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕಾರ್ಯಕ್ರಮ. 1500ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಹೆಸರಿನ ಮೊದಲ ಪದದಲ್ಲೇ ಒನಮೆಟೊಪಿಯಾ ಇದೆ.’ ಇದಕ್ಕೆ ಉತ್ತರವನ್ನು ಹೇಗೆ ಹೇಳಬೇಕು ಎಂದು ನಿಮ್ಮಲ್ಲಿ ಕೇಳಿದರೆ ನಾನೇ ಉತ್ತರವನ್ನೂ ಕೊಟ್ಟಂತಾಗುತ್ತದೆ. ನೀವು ಸರಿಯುತ್ತರ ಬರೆದು ತಿಳಿಸಿದರೂ ಮತ್ತೆ ನನ್ನನ್ನೇ ಕೇಳಿದಂತಾಗುತ್ತದೆ. ಹಾಗಾಗಿ ಪ್ರಶ್ನೆ ಅದಲ್ಲ. ‘ಊಹ್ ಆಹ್ ಔಚ್!’ ಎಂದು ನೋವನ್ನು ಧ್ವನಿಯಾಗಿಸಿದ ಒನಮೆಟೊಪಿಕ್ ಜಾಹೀರಾತು ಯಾವ ಉತ್ಪನ್ನದ್ದು? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.