Episodes
Saturday Mar 26, 2011
Preventing Dementia
Saturday Mar 26, 2011
Saturday Mar 26, 2011
ದಿನಾಂಕ 27 ಮಾರ್ಚ್ 2011ರ ಸಂಚಿಕೆ...
ಅರಳುಮರುಳನ್ನು ಸರಳವಾಗಿ ಉರುಳಿಸಬಹುದು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅರವತ್ತರ ಅರಳುಮರುಳು ಎನ್ನುತ್ತದೆ ಪ್ರಸಿದ್ಧ ನುಡಿಗಟ್ಟು. ಹಾಗಂತ ಎಲ್ಲರಿಗೂ ಅದು ಅನ್ವಯಿಸುತ್ತದೆ ಎಂದೇನಿಲ್ಲ. ಕೆಲವರು ಅರವತ್ತಾದರೂ ಶಾರೀರಿಕವಾಗಿ, ಮಾನಸಿಕವಾಗಿ ನವತರುಣರಂತೆ ಲವಲವಿಕೆಯಿಂದ ಇರುತ್ತಾರೆ. ಅವರಲ್ಲಿ ಜೀವನೋತ್ಸಾಹ ತುಂಬಿ ತುಳುಕುತ್ತಿರುತ್ತದೆ. ಮತ್ತೆ ಕೆಲವರಿಗೆ ಅರವತ್ತಾಗುವುದಕ್ಕೆ ಮೊದಲೇ ವೃದ್ಧಾಪ್ಯ ಆವರಿಸುವುದೂ ಇದೆ. ಆದರೂ ಒಟ್ಟಾರೆಯಾಗಿ ವ್ಯಕ್ತಿಯ ಜೀವನದಲ್ಲಿ ಅರವತ್ತು ವಯಸ್ಸೆಂದರೆ ಒಂದು ಹಂತ. ಬದುಕಿನ ಸಂಕ್ರಮಣ ಘಟ್ಟ. ಅದು ನಿವೃತ್ತಿಯ ವಯಸ್ಸೂ ಆಗಿರುವುದು, ಅಥವಾ ಒಂದು ಸಂವತ್ಸರಚಕ್ರ ಅಷ್ಟೊತ್ತಿಗೆ ಮುಗಿಯುವುದು ಅಂಥದೊಂದು ಸಾರ್ವತ್ರಿಕ ದೃಷ್ಟಿಕೋನಕ್ಕೆ ಕಾರಣವಿರಬಹುದು. ಸರಿಯಾಗಿ ಅರವತ್ತಕ್ಕೇ ಅಂತಲ್ಲದಿದ್ದರೂ ಅರಳುಮರುಳಿನ ಲಕ್ಷಣಗಳು ಅಷ್ಟಿಷ್ಟಾದರೂ ಕಂಡುಬರುವುದು ಸಹಜವೇ. ಕಾರಣವೇನೆಂದರೆ ವಯಸ್ಸಾದಂತೆಲ್ಲ ನಮ್ಮ ಮೆದುಳಿನ ಕ್ರಿಯಾಶೀಲತೆ ಕ್ಷೀಣಿಸುತ್ತದೆ. ಕೆಲವರಲ್ಲಿ ಅಲ್ಪಸ್ವಲ್ಪ, ಇನ್ನುಳಿದವರಲ್ಲಿ ತುಸು ಹೆಚ್ಚು. ಮತ್ತೂ ಅಧಿಕವಾದರೆ ಅದು ಡಿಮೆನ್ಷಾ (Dementia) ಅಂತಲೂ, ತೀರಾ ಗಂಭೀರ ಪರಿಸ್ಥಿತಿಯಾದರೆ ಆಲ್ಝೈಮರ್ಸ್ (Alzheimer's) ಕಾಯಿಲೆ ಎಂದೂ ಗುರುತಿಸಲ್ಪಡುತ್ತದೆ. ಹೆಚ್ಚಾಗಿ ‘ಬೆಂಕಿ ಬಿದ್ದಮೇಲೆ ಬಾವಿ ತೋಡುವ’ ಜಾಯಮಾನ ನಮ್ಮೆಲ್ಲರದು. ಆದರೆ ಡಿಮೆನ್ಷಾ, ಆಲ್ಝೈಮರ್ಸ್ ಮುಂತಾದ ಕಾಯಿಲೆಗಳ ವಿಷಯದಲ್ಲಿ ಹಾಗೆ ಮಾಡುವುದು ಸರ್ವಥಾ ಸಾಧುವಲ್ಲ ಎನ್ನುತ್ತಾರೆ ವಿಜ್ಞಾನಿಗಳು ಮತ್ತು ವೈದ್ಯರು. ಮೂವತ್ತು ಅಥವಾ ನಲ್ವತ್ತರ ವಯಸ್ಸಿನಿಂದಲೇ ಸರಳವಾದ ಕೆಲವು ಜೀವನವಿಧಾನಗಳನ್ನು ಅಳವಡಿಸಿಕೊಂಡರೆ ಮೆದುಳಿನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಕಾಪಾಡಿಕೊಳ್ಳಬಹುದಂತೆ. ಅಮೆರಿಕದ ಪಿಟ್ಸ್ಬರ್ಗ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ನ್ಯೂರೊಸೈಕಾಲಜಿಸ್ಟ್ ಆಗಿರುವ ಡಾ. ಪೌಲ್ ನಸ್ಬೌಮ್ ಹೇಳುವಂತೆ ಇಪ್ಪತ್ತು ಅಂಶಗಳನ್ನು ಜೀವನದಲ್ಲಿ ಆದಷ್ಟು ಬೇಗ ಅಳವಡಿಸಿಕೊಂಡರೆ ಅರಳುಮರುಳನ್ನಷ್ಟೇ ಅಲ್ಲ, ಡಿಮೆನ್ಷಾದಂಥ ಕಾಯಿಲೆಗಳನ್ನೂ ಸರಳವಾಗಿ ಉರುಳಿಸಿಬಿಡಬಹುದಂತೆ! ಯಾವುವು ಆ ಇಪ್ಪತ್ತಂಶಗಳು? ಡಾ.ನಸ್ಬೌಮ್ ಅವರದೇ ಮಾತುಗಳಲ್ಲಿ ತಿಳಿದುಕೊಳ್ಳೋಣ (ವೈಯಕ್ತಿಕವಾಗಿ ನಾನು “ಹಾಗೆ ಮಾಡಿ ಹೀಗೆ ಮಾಡಿ... ಅದನ್ನು ಮಾಡಿ, ಇದನ್ನು ಮಾಡಬೇಡಿ...” ರೀತಿಯ ಆದೇಶ/ಉಪದೇಶ ಧಾಟಿಯಲ್ಲಿ ಅಂಕಣ ಬರೆಯುವುದನ್ನು ಇಷ್ಟಪಡುವುದಿಲ್ಲ. ಆದರೆ ಇವು ತಜ್ಞರ ಸಲಹೆಯ ಮಾತುಗಳಾದ್ದರಿಂದ ಪರಿಣಾಮಕಾರಿಯಾಗಿರಬೇಕು ಎಂಬ ದೃಷ್ಟಿಯಿಂದ ಆ ಧಾಟಿಯನ್ನು ಉಳಿಸಿಕೊಂಡಿದ್ದೇನೆ). 1. ಸಂಘಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ಸೇರಿಕೊಳ್ಳಿ. ಈಗಿನಿಂದಲೇ ಸ್ವಯಂಸೇವಕರಾಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಮುಂದೆ ನಿವೃತ್ತಿಯಾದಾಗ ನಿಷ್ಪ್ರಯೋಜಕ ವ್ಯಕ್ತಿ ಎಂದೆನಿಸಿಕೊಳ್ಳುವುದು ತಪ್ಪುತ್ತದೆ. 2. ಒಂದೆರಡು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮೆದುಳನ್ನು ಚುರುಕಾಗಿಟ್ಟುಕೊಳ್ಳುವುದಕ್ಕೆ ಹವ್ಯಾಸಗಳು ತುಂಬಾ ನೆರವಾಗುತ್ತವೆ. 3. ದಿನಕ್ಕೆ ಒಂದಿಷ್ಟು ನಿಮಿಷಗಳವರೆಗಾದರೂ ಸರಿ, ನಿಮ್ಮ ಎಡಗೈಯಿಂದ (ನೀವು ಮೂಲತಃ ಎಡಚರಾದರೆ ಬಲಗೈಯಿಂದ) ಬರೆಯುವ ಅಭ್ಯಾಸ ಶುರುಹಚ್ಚಿ. ಇದರಿಂದ ನಿಮ್ಮ ಮೆದುಳಿನ ಉಳಿದರ್ಧ ಭಾಗದ ಕೋಶಗಳು ಜಾಗ್ರತವಾಗುವುದಕ್ಕೆ ಅನುಕೂಲವಾಗುತ್ತದೆ. 4. ಸಾಧ್ಯವಿದ್ದರೆ ಯಾವುದಾದರೂ ಡ್ಯಾನ್ಸ್ ತರಗತಿಗಳಿಗೆ ಸೇರಿಕೊಳ್ಳಿ. ಡ್ಯಾನ್ಸ್ನಿಂದ ದೈಹಿಕ ವ್ಯಾಯಾಮವೂ ಆಗುತ್ತದೆ, ಮೆದುಳಿಗೂ ಕೆಲಸ ಸಿಗುತ್ತದೆ. ಐನೂರು ಮಂದಿಯನ್ನೊಳಗೊಂಡಿದ್ದ ಒಂದು ಅಧ್ಯಯನದಲ್ಲಿ, ವಾರಕ್ಕೆ ಮೂರು ಅಥವಾ ನಾಲ್ಕು ಸಲ ಡ್ಯಾನ್ಸ್ ಮಾಡುವವರಿಗೆ ಡಿಮೆನ್ಷಾ ರೋಗ ತಗಲುವ ಸಾಧ್ಯತೆಯು ಉಳಿದವರಿಗಿಂತ 75 ಶೇಕಡಾದಷ್ಟು ಕಡಿಮೆ ಎಂದು ಕಂಡುಬಂದಿದೆ. 5. ಹೂತೋಟ ಬೆಳೆಸುವುದು (ಗಾರ್ಡನಿಂಗ್) ಒಂದು ಒಳ್ಳೆಯ ಹವ್ಯಾಸ. ಇದು ದಣಿವನ್ನು ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವುದಷ್ಟೇ ಅಲ್ಲ, ಹೂಗಿಡಗಳ ಪಾತಿಗಳನ್ನು ಹೇಗೆ ವಿನ್ಯಾಸಗೊಳಿಸಬೇಕು ಅಂತೆಲ್ಲ ಮೆದುಳಿಗೂ ಕೆಲಸ ಇರುವುದರಿಂದ ತುಂಬ ಸಹಕಾರಿ. ನ್ಯೂಜಿಲೇಂಡ್ನಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಗಾರ್ಡನಿಂಗ್ ಅಭ್ಯಾಸವುಳ್ಳವರಿಗೆ ಡಿಮೆನ್ಷಾ ಬರುವ ಸಂಭವನೀಯತೆ ಕಡಿಮೆ. 6. ದಿನಕ್ಕೆ ಹತ್ತುಸಾವಿರ ಹೆಜ್ಜೆಗಳಾದರೂ ನಡೆಯಿರಿ. ಇದರಿಂದ ಮೆದುಳಿಗೆ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಡಿಮೆನ್ಷಾ ರಿಸ್ಕ್ ಕಡಿಮೆಯಾಗುತ್ತದೆ. 7. ಪ್ರತಿದಿನವೂ ಸ್ವಲ್ಪ ಹೊತ್ತನ್ನು ಓದು ಮತ್ತು ಬರಹಕ್ಕೆ ಮೀಸಲಾಗಿಡಿ. ಓದುವ ಕ್ರಿಯೆಯಲ್ಲಿ ಮೆದುಳಿಗೆ ಸಂಸ್ಕರಣ ಮತ್ತು ಸಂಗ್ರಹಣೆಯ ಕೆಲಸವಾಗುವುದರಿಂದ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಬರವಣಿಗೆಯೂ ಅಷ್ಟೇ. ಕಾಪಿಬರೆಯುವಂತೆ ಬರೆಯುವುದಕ್ಕಿಂತ ಯೋಚಿಸಿ ಬರೆದರೆ ಮತ್ತೂ ಒಳ್ಳೆಯದು. 8. ಹೆಣಿಗೆ (knitting) ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಅದರಲ್ಲಿ ಎರಡೂ ಕೈಗಳಿಗೆ ಕೆಲಸವಾದ್ದರಿಂದ ಮೆದುಳಿನ ಎರಡೂ ಭಾಗಗಳು ಜಾಗ್ರತವಾಗುತ್ತವೆ. ಹೆಣಿಗೆ ಅಥವಾ ಕಸೂತಿಯಿಂದಾದ ರಚನೆಗಳು ಮನಸ್ಸಿಗೆ ಸಂತೋಷವನ್ನೂ ಕೊಡುತ್ತವೆ. 9. ಹೊಸ ಭಾಷೆಯೊಂದನ್ನು ಕಲಿತುಕೊಳ್ಳಿ. ನಿಮ್ಮ ಭಾಷೆಗೂ ಅದಕ್ಕೂ ಹೋಲಿಕೆ ವ್ಯತ್ಯಾಸಗಳನ್ನು ಗುರುತಿಸುವ ಕೆಲಸ ಮೆದುಳಿಗೆ ಒಳ್ಳೆಯದಾಗಿ ಪರಿಣಮಿಸುತ್ತದೆ. ಸಂಜ್ಞೆಗಳ ಭಾಷೆ (sign language) ಕಲಿಕೆ ಮತ್ತಷ್ಟು ಒಳ್ಳೆಯದು. ಹೆಚ್ಚುಹೆಚ್ಚು ಭಾಷೆಗಳನ್ನು ಕಲಿತಷ್ಟೂ ವ್ಯಕ್ತಿಯ ಐ.ಕ್ಯೂ ಹೆಚ್ಚುತ್ತದೆಯೆಂದು ತಿಳಿದುಬಂದಿದೆ. 10. ಚೆಸ್, ಮೊನೊಪಾಲಿ, ಸ್ಕ್ರಾಬಲ್ನಂಥ ಬೋರ್ಡ್ಗೇಮ್ಸ್ ಆಡಿ. ಇದರಿಂದ ಮೆದುಳಿಗೂ ಕೆಲಸ, ಇನ್ನೊಬ್ಬರ ಒಡನಾಟ ಸಿಕ್ಕಿದಂತೆಯೂ ಆಗುತ್ತದೆ. 11. ಯಾವುದಾದರೂ ಹೊಸ ಕೋರ್ಸ್ ಅಥವಾ ತರಬೇತಿ ಪಡೆದುಕೊಳ್ಳಿ. ಕಲಿಕೆಯಿಂದ ಮೆದುಳಿನಲ್ಲಿ ಚೋದಕಗಳ ಸ್ರಾವ ಹೆಚ್ಚುತ್ತದೆ; ಮತ್ತೆ, ಶಿಕ್ಷಣವೆಂದ ಮೇಲೆ ಜೀವನದಲ್ಲಿ ಒಂದಲ್ಲ ಒಂದು ವೇಳೆಯಲ್ಲಿ ಉಪಯೋಗಕ್ಕೂ ಬರುತ್ತದೆ. 12. ಸಂಗೀತ ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಮೆಲುದನಿಯ ಶಾಸ್ತ್ರೀಯ ಸಂಗೀತ ಮತ್ತೂ ಚೆನ್ನ. ಮೆದುಳಿನ ಎರಡೂ ಭಾಗಗಳಿಗೆ ತಾಳಮೇಳ ಮೂಡಿಸುವುದಕ್ಕೆ ಸಂಗೀತಶ್ರವಣ ತುಂಬ ಒಳ್ಳೆಯದು. 13. ಯಾವುದಾದರೂ ಸಂಗೀತವಾದ್ಯ ನುಡಿಸುವುದನ್ನು ಕಲಿಯಿರಿ. ಬಾಲ್ಯದಲ್ಲಾದಷ್ಟು ಸುಲಭವೆನಿಸದಿದ್ದರೂ ಮೆದುಳಿನ ಜಡತ್ವ ನಿವಾರಣೆಗೆ ಒಳ್ಳೆಯ ಉಪಾಯ. 14. ಪ್ರವಾಸ ಮಾಡಿ. ಅದೇನೂ ದೂರದ ಊರು ಅಥವಾ ವಿದೇಶಕ್ಕೇ ಆಗಬೇಕಂತಿಲ್ಲ, ನಿಮ್ಮೂರಿನ ಆಸುಪಾಸಿನಲ್ಲೇ ಹೊಸಹೊಸ ಜಾಗಗಳಿಗೆ ಭೇಟಿಕೊಟ್ಟರೂ ಆಗುತ್ತದೆ. ಅಂತೂ ಮೆದುಳಿಗೆ ಕೆಲಸ ಇರಬೇಕು. ಲಂಡನ್ನ ಟ್ಯಾಕ್ಸಿ ಡ್ರೈವರ್ಗಳ ಮೆದುಳು ಹೆಚ್ಚು ಆರೋಗ್ಯಕರವಾಗಿರುವುದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಬೇರೆಬೇರೆ ಜಾಗಗಳ ಮಾಹಿತಿಯನ್ನು ಸಂಗ್ರಹಿಸಿ ಉಪಯೋಗಿಸುವ ಕೆಲಸ ನಿರಂತರ ನಡೆಯುವುದರಿಂದ ಅದು ಅವರ ಮೆದುಳನ್ನು ಸುಪರ್ದಿಯಲ್ಲಿಟ್ಟಿರುತ್ತದೆ. 15. ದೈನಂದಿನ ಪ್ರಾರ್ಥನೆಗೆ ಸ್ವಲ್ಪ ಸಮಯವನ್ನಾದರೂ ಮೀಸಲಿಡಿ. ಮನಸ್ಸಿಗೆ ಶಾಂತಿ ಮತ್ತು ಸಮತೋಲನ, ತನ್ಮೂಲಕ ಆನಂದ ಮತ್ತು ಆರೋಗ್ಯಭಾಗ್ಯ. ಇದಕ್ಕೆ ಪ್ರಾರ್ಥನೆಯಂಥ ಸುಲಭಮಾರ್ಗ ಬೇರೆ ಇಲ್ಲ. 16. ಧ್ಯಾನ (ಮೆಡಿಟೇಷನ್) ಸಹ ಅತ್ಯಗತ್ಯ. ಪ್ರಾಪಂಚಿಕ ಜಂಜಡಗಳಿಂದ ಮನಸ್ಸಿಗೆ ಕಿಂಚಿತ್ತಾದರೂ ಮುಕ್ತಿ ಸಿಗುತ್ತದೆ. 17. ಯಥಾಯೋಗ್ಯ ಪ್ರಮಾಣದಲ್ಲಿ ನಿದ್ದೆ ಮಾಡಿ. ನಿದ್ರಾಹೀನತೆಯು ಡಿಮೆನ್ಷಾ ಸೇರಿದಂತೆ ಹಲವು ರೋಗಗಳ ಕಾರಣವೂ ಹೌದು ಲಕ್ಷಣವೂ ಹೌದು. 18. ಬಾದಾಮಿ ಮತ್ತು ಅಕ್ರೂಟ್ನಂಥ ಪೌಷ್ಟಿಕ ಬೀಜಗಳ ಸೇವನೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಮೀನು ಮತ್ತಿತರ ಸಾಗರೋತ್ಪನ್ನಗಳ ಸೇವನೆಯೂ ಮೆದುಳನ್ನು ಗಟ್ಟಿಮುಟ್ಟಾಗಿ ಇಡುತ್ತದೆ. 19. ಹಣ್ಣು-ತರಕಾರಿಗಳನ್ನು ಯಥೇಚ್ಛ ಸೇವಿಸಿ. ಇದರಿಂದ ಮೆದುಳಿನ ಕೋಶಗಳು ಸವೆಯುವುದು ಮತ್ತು ನಾಶವಾಗುವುದು ಕಡಿಮೆಯಾಗುತ್ತದೆ. 20. ದಿನದಲ್ಲಿ ಒಂದುಹೊತ್ತಾದರೂ ಮನೆಮಂದಿಯೊಟ್ಟಿಗೆ ಅಥವಾ ಸ್ನೇಹಿತರ ಒಟ್ಟಿಗೆ ಸೇರಿ ಊಟ ಮಾಡಿ. ಇದರಿಂದ ನೀವು ಸಾವಕಾಶವಾಗಿ, ಪರಸ್ಪರ ಆತ್ಮೀಯ ಭಾವನೆಯಲ್ಲಿ, ಆರೋಗ್ಯಕರವಾಗಿ ಉಣ್ಣುವುದು ಸಾಧ್ಯವಾಗುತ್ತದೆ. ಮೆದುಳು ಲವಲವಿಕೆಯಿಂದ ಇರುವಂತಾಗುತ್ತದೆ. ಡಾ. ನಸ್ಬೌಮ್ ಉಪದೇಶದ ಇವಿಷ್ಟೂ ಸೂತ್ರಗಳು ಸುಲಭವಾಗಿಯೇ ಇವೆ ಅಂತನಿಸುವುದಿಲ್ಲವೇ? ಇವುಗಳನ್ನು ಪಾಲಿಸಿದರೆ ಆಗುವುದಿದ್ದರೆ ಏನಾದರೂ ಒಳಿತೇ ಹೊರತು ಕೆಟ್ಟದೇನೂ ಅಲ್ಲ. ಅಂದಮೇಲೆ ಅಳವಡಿಸಿಕೊಳ್ಳುವುದಕ್ಕೆ ಹಿಂದೆಮುಂದೆ ನೋಡಬೇಕಾದ್ದಿಲ್ಲ. ಇಪ್ಪತ್ತರಲ್ಲಿ ಹತ್ತನ್ನಾದರೂ ಇವತ್ತಿನಿಂದಲೇ ಶುರುಹಚ್ಚಿಕೊಳ್ಳೋಣ. ಏನಂತೀರಿ? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.