ದಿನಾಂಕ 10 ಏಪ್ರಿಲ್ 2011ರ ಸಂಚಿಕೆ...
ಭಾರತೀಯ ಸಂಸ್ಕೃತಿಯ ತೀರ್ಥ ಸ್ವರೂಪ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ
ಓದಬಹುದು.]
ಸೀತಾರಾಮ ಆಂಜನೇಯಲು ಎಂದು ಆ ಬಾಲಕನ ಹೆಸರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ಪೇಟ ಅವನ ಊರು. ತಂದೆ ವೆಂಕಟೇಶ್ವರ ಅವಧಾನಿ, ತಾಯಿ ಅನಂತಲಕ್ಷ್ಮಮ್ಮ. ಧರ್ಮಭೀರುಗಳಾಗಿ ಬಾಳ್ವೆ ನಡೆಸುತ್ತಿದ್ದ ದಂಪತಿಗೆ ದೈವಾನುಗ್ರಹದಿಂದ ಹುಟ್ಟಿದ ಸುಪುತ್ರ. ಪುಟ್ಟ ಮಗುವಾಗಿದ್ದಾಗಿನಿಂದಲೇ ಅಪಾರ ದೈವಭಕ್ತಿ. ಶಾಲೆಯಲ್ಲಿ ಕಲಿಕೆಯಲ್ಲೂ ಅಗ್ರಶ್ರೇಣಿ. ಗಣಿತವೆಂದರೆ ನೀರು ಕುಡಿದಷ್ಟು ಸುಲಭ. ಒಂಬತ್ತು ವರ್ಷಕ್ಕೆಲ್ಲ ಸಂಸ್ಕೃತ ಭಾಷಾಪ್ರವೀಣ. ತಂದೆಯಿಂದಲೇ ವೇದೋಪನಿಷತ್ತುಗಳ ಶಿಕ್ಷಣ. ಸಂಸ್ಕೃತವಿದ್ವಾಂಸರೆಲ್ಲ ನಿಬ್ಬೆರಗಾಗುವಷ್ಟು ಕವಿತ್ವ ಮತ್ತು ಪಾಂಡಿತ್ಯ. ವಿಜಯವಾಡ ಆಕಾಶವಾಣಿ ಕೇಂದ್ರದಿಂದ ಸಂಸ್ಕೃತ ಕಾರ್ಯಕ್ರಮ ನಡೆಸಿಕೊಡುವಂತೆ ಈ ಬಾಲಕನಿಗೆ ಆಹ್ವಾನ. ಹೈಸ್ಕೂಲ್ನಲ್ಲಿದ್ದಾಗ ಒಮ್ಮೆ ವಿಜಯವಾಡದಲ್ಲಿ ಸಂಸ್ಕೃತ ಭಾಷಣಸ್ಪರ್ಧೆ ಏರ್ಪಟ್ಟಿತ್ತು. ಆಗಿನ ಶೃಂಗೇರಿ ಮಠಾಧಿಪತಿಗಳಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥರ ಸಮ್ಮುಖದಲ್ಲಿ ಆ ಸ್ಪರ್ಧೆ. ಸೀತಾರಾಮ ಆಂಜನೇಯಲು ನಿರರ್ಗಳವಾಗಿ ಮಾತನಾಡಿ ಪ್ರಥಮ ಬಹುಮಾನ ಗಿಟ್ಟಿಸಿದ. ಅಷ್ಟೇಅಲ್ಲ, ಸ್ವಾಮೀಜಿಯವರ ದಿವ್ಯಸನ್ನಿಧಿಯಲ್ಲಿ, ಅವರ ತೇಜೋಮಯ ಕಂಗಳಲ್ಲಿ ಏನೋ ಒಂದು ಹೊಸ ಬೆಳಕನ್ನು ಕಂಡುಕೊಂಡ. ಅವರೇ ತನ್ನ ಪರಮಗುರು ಎಂದು ಅವತ್ತೇ ನಿರ್ಧರಿಸಿದ. ಹೈಸ್ಕೂಲ್ ಶಿಕ್ಷಣ ಮುಗಿದದ್ದೇ ತಡ ಗುರುವಿನ ಸೆಳೆತ ಪ್ರಬಲವಾಯಿತು. ಮನೆಯಲ್ಲಿ ಹಿರಿಯರ ವಿರೋಧವನ್ನೂ ಲೆಕ್ಕಿಸದೆ ಒಂದುದಿನ ಹೊರಟೇಬಿಟ್ಟ, ನೇರವಾಗಿ ಉಜ್ಜೈನಿಗೆ. ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಅಲ್ಲಿ ಆಗ ಚಾತುರ್ಮಾಸ್ಯ ವ್ರತಾಚರಣೆಯಲ್ಲಿದ್ದರು. ಅವರ ಪಾದಗಳಿಗೆರಗಿ ಶಿಷ್ಯತ್ವವನ್ನು ಬೇಡಿಕೊಂಡ. ಶೃಂಗೇರಿ ಶಾರದೆಯ ಇಚ್ಛೆಯೂ ಅದೇ ಇತ್ತೇನೋ, ಸೀತಾರಾಮ ಆಂಜನೇಯಲು ಅಭಿನವ ವಿದ್ಯಾತೀರ್ಥರ ನೆಚ್ಚಿನ ವಿದ್ಯಾರ್ಥಿಯಾದ. ಪಟ್ಟಶಿಷ್ಯನೂ ಆಗಿ ರೂಪುಗೊಂಡ.

ಇದಿಷ್ಟು, ಶೃಂಗೇರಿ ಶಾರದಾಪೀಠದ ಈಗಿನ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಪೂರ್ವಾಶ್ರಮವಿವರ. 1966ರಿಂದ ಎಂಟು ವರ್ಷಕಾಲ ಗುರುಗಳಲ್ಲಿ ವೇದ-ವೇದಾಂತಗಳನ್ನೂ, ನ್ಯಾಯ, ಮೀಮಾಂಸಾ, ವ್ಯಾಕರಣ ಮುಂತಾದ ಶಾಸ್ತ್ರಗಳನ್ನೂ ಕಲಿತು 1974ರಲ್ಲಿ ಸನ್ಯಾಸಸ್ವೀಕಾರ. ಸುಮಾರು 15 ವರ್ಷಗಳವರೆಗೂ ಕಿರಿಯ ಸ್ವಾಮಿಯಾಗಿ ಗುರುಗಳೊಂದಿಗೆ ಶೃಂಗೇರಿಪೀಠದ ಉಸ್ತುವಾರಿ, ದೇಶಪರ್ಯಟನ, ಧರ್ಮಪ್ರಚಾರಕಾರ್ಯ. 1989ರಲ್ಲಿ ಅಭಿನವ ವಿದ್ಯಾತೀರ್ಥರು ಬ್ರಹ್ಮೀಭೂತರಾದ ಮೇಲೆ ಶಾರದಾಪೀಠದ 36ನೇ ಜಗದ್ಗುರುವಾಗಿ ಪಟ್ಟಾಭಿಷೇಕ. ಆದಿಶಂಕರಾಚಾರ್ಯರಿಂದ ಮೊದಲ್ಗೊಂಡು ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಶೃಂಗೇರಿ ಶಾರದಾಪೀಠದ ಗುರುಪರಂಪರೆ ಸಮಗ್ರ ಭಾರತದಲ್ಲೇ ಅದ್ವಿತೀಯವಾದುದು. ಶಂಕರಾಚಾರ್ಯರು ಸಾಕ್ಷಾತ್ ಶಿವನ ಅವತಾರವೆಂದೂ, ತದನಂತರದ ಜಗದ್ಗುರುಗಳೆಲ್ಲರೂ ಶಂಕರಾಂಶಸಂಭೂತರೆಂದೂ ಪ್ರತೀತಿ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪ್ರೇರಕರೆನ್ನಲಾದ ವಿದ್ಯಾರಣ್ಯರು ಈ ಪರಂಪರೆಯಲ್ಲಿ 12ನೆಯವರು. ಆದ್ದರಿಂದಲೇ ಇವತ್ತಿಗೂ ಶೃಂಗೇರಿಪೀಠದ ಜಗದ್ಗುರುಗಳಿಗೆ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ, ಶ್ರೀಮದ್ರಾಜಾಧಿರಾಜಗುರು ಎಂಬ ಬಿರುದು.
ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಅನನ್ಯ ಹಿರಿಮೆಯೆಂದರೆ ಅವರ ಅಪ್ರತಿಮ ಪಾಂಡಿತ್ಯ. ಕೆಲವರ್ಷಗಳ ಹಿಂದೆ ಅಮೆರಿಕದ EnlightenNext ಎಂಬ ಒಂದು ನಿಯತಕಾಲಿಕದಲ್ಲಿ ಸ್ವಾಮೀಜಿಯವರ ಸಂದರ್ಶನ ಪ್ರಕಟವಾಗಿತ್ತು. ಧಾರ್ಮಿಕ ವಿಧಿವಿಧಾನಗಳಲ್ಲಿ ಲಿಂಗಭೇದದ ಬಗ್ಗೆ ಹಿಂದೂಧರ್ಮ ಏನನ್ನುತ್ತೆಯೆಂದು ಕಂಡುಕೊಳ್ಳಲು ವಿಶೇಷ ಪ್ರತಿನಿಧಿಯನ್ನು ಭಾರತಕ್ಕೆ (ಶೃಂಗೇರಿಗೆ) ಕಳಿಸಿ ನಡೆಸಿದ್ದ ಸಂದರ್ಶನವದು. ಅದರ ಪೀಠಿಕೆಯಲ್ಲಿ ಪತ್ರಿಕೆ ಹೀಗೆ ಉಲ್ಲೇಖಿಸಿತ್ತು- “ಭಾರತದಲ್ಲಿ ಅಸಂಖ್ಯಾತ ಸ್ವಾಮಿಗಳು, ಸಾಧು-ಸಂತರು ಇದ್ದಾರೆ. ಒಬ್ಬೊಬ್ಬರೂ ಶ್ರೇಷ್ಠರೇ. ಆದರೆ ಹಿಂದೂಧರ್ಮದ ಬಗ್ಗೆ, ಸನಾತನ ಸಂಸ್ಕೃತಿಯ ಬಗ್ಗೆ, ತಲಸ್ಪರ್ಶಿಯಾಗಿ ಮತ್ತು ಅಧಿಕೃತವಾಗಿ ಮಾತನಾಡಬಲ್ಲವರೆಂದರೆ ಭಾರತೀತೀರ್ಥರೊಬ್ಬರೇ. ಜಗತ್ತಿನ ಕ್ಯಾಥೊಲಿಕ್ ಕ್ರಿಶ್ಚಿಯನ್ ಸಮುದಾಯಕ್ಕೆ ಧರ್ಮಗುರು ಪೋಪ್ ಇದ್ದಂತೆ ಪ್ರಸಕ್ತ ಹಿಂದೂಧರ್ಮಕ್ಕೆ ಜಾಗತಿಕ ನೆಲೆಯಲ್ಲಿ ಗುರು ಅಂತಿದ್ದರೆ ಅವರು ಶೃಂಗೇರಿ ಜಗದ್ಗುರು ಭಾರತೀತೀರ್ಥರೇ.” ಇದು ಉತ್ಪ್ರೇಕ್ಷೆಯಲ್ಲ. ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಶ್ರುತಿ-ಸ್ಮೃತಿಗಳನ್ನು ಅರೆದುಕುಡಿದವರು ಸ್ವಾಮೀಜಿ. ಜನಸಾಮಾನ್ಯರಿಗೆ ಎಂತಹ ಧಾರ್ಮಿಕ ಸಂದೇಹ ಸಂದಿಗ್ಧತೆಗಳಿದ್ದರೂ ಅವರ ಬಳಿಗೆ ಹೋದರೆ ಬಗೆಹರಿಯುತ್ತವೆ. ಅವರು ರಾಜಕಾರಣದಲ್ಲಿ ಮುಳುಗಿದ ಸ್ವಾಮೀಜಿಯಲ್ಲ. ವೇದಪಾಠಶಾಲೆಗಳಲ್ಲಿ ಸ್ವತಃ ಬೋಧನೆ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜ್ಞಾನಾರ್ಜನೆಯ ಮಟ್ಟವನ್ನು ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುತ್ತಾರೆ. ಪ್ರತಿವರ್ಷ ಗಣೇಶಚೌತಿಯಿಂದ ಹತ್ತು ದಿನಗಳಕಾಲ ಶೃಂಗೇರಿಯಲ್ಲಿ ಮಹಾಗಣಪತಿ ವಾಕ್ಯಾರ್ಥಸಭೆ ಎಂಬ ವಿದ್ವತ್ಸದಸ್ಸು ನಡೆಯುತ್ತದೆ. ನೇಪಾಳ, ಕಾಶ್ಮೀರ, ಕಾಶಿ ಮುಂತಾದೆಡೆಗಳಿಂದ ವಿದ್ವಾಂಸರು ಬರುತ್ತಾರೆ. ನ್ಯಾಯ, ವೇದಾಂತ, ಮೀಮಾಂಸಾ, ವ್ಯಾಕರಣ ಶಾಸ್ತ್ರಗಳ ಚರ್ಚೆಯಾಗುತ್ತದೆ. ಆ ಸಮಾವೇಶದಲ್ಲಿ ಪಾಲ್ಗೊಳ್ಳುವುದೇ ಒಂದು ಅಗ್ಗಳಿಕೆ. ಅಧ್ಯಕ್ಷತೆ ವಹಿಸುವ ಸ್ವಾಮೀಜಿಗೆ ಎಲ್ಲವೂ ಕರತಲಾಮಲಕ. ಶಾಸ್ತ್ರಗ್ರಂಥಗಳ ವಾಕ್ಯಗಳನ್ನು ಅನಾಯಾಸವಾಗಿ ಉದಾಹರಿಸುತ್ತ ಅವರು ವಾಗ್ವಾದ ಇತ್ಯರ್ಥ ಮಾಡುವ ಪರಿ ಅದ್ಭುತ. ಸಂಸ್ಕೃತವೆಂದರೆ ಮೃತಭಾಷೆ, ಕೆಲವರಿಗಷ್ಟೇ ಸೀಮಿತ ಎಂದೆಲ್ಲ ಸಂಸ್ಕೃತದ ಬಗೆಗಿರುವ ತಪ್ಪುಕಲ್ಪನೆಗಳನ್ನು ಅಳಿಸುವ ಪ್ರಯತ್ನ. ಸಂಸ್ಕೃತ ಕಷ್ಟವೆನ್ನುತ್ತೀರೇಕೆ? ಎಲ್ಲ ವಿಷಯಗಳೂ ಹಾಗೆಯೇ, ಕಲಿಯುವವನಿಗೆ ಎಲ್ಲವೂ ಸುಲಭ, ಕಲಿಯದವನಿಗೆ ಎಲ್ಲವೂ ಕಷ್ಟ ಎನ್ನುತ್ತಾರವರು. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ಅವರದು ಪ್ರಗಲ್ಭ ಪಾಂಡಿತ್ಯ.
ಮನುಷ್ಯನ ಜೀವನವೃತ್ತಿಗೆ, ಸನ್ಮಾರ್ಗದಲ್ಲಿ ಮುನ್ನಡೆಗೆ, ಕೊನೆಗೆ ಮೋಕ್ಷಪ್ರಾಪ್ತಿಗೂ ಮೂಲಭೂತವಾದದ್ದು ವಿದ್ಯೆ ಅಥವಾ ಜ್ಞಾನ. ಧರ್ಮದ ದಾರಿಯನ್ನು ನೋಡಲು ಅದು ಕಣ್ಣುಗಳಿದ್ದಂತೆ. ವೇದ-ಶಾಸ್ತ್ರಗಳ ರಕ್ಷಣೆಯಾಗಬೇಕಾದರೆ ವೈದಿಕರ ಪೋಷಣೆಯಾಗಬೇಕು. ಈ ದಿಸೆಯಲ್ಲೊಂದು ಕಿರುಪ್ರಯತ್ನವೆಂಬಂತೆ ಪ್ರತಿ ತಿಂಗಳೂ ಸಾವಿರ ಮಂದಿ ವೃದ್ಧ ವೇದಪಂಡಿತರಿಗೆ ಸಂಭಾವನೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ ಶ್ರೀಗಳು. ಕೇವಲ ಪಾರಂಪರಿಕ ಶಿಕ್ಷಣಕ್ರಮಕ್ಕಷ್ಟೇ ಅಲ್ಲ, ಆಧುನಿಕ ವಿದ್ಯಾಭ್ಯಾಸಕ್ಕೂ ಶೃಂಗೇರಿ ಮಠದ ಪ್ರೋತ್ಸಾಹವಿದೆ. ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲೂಕುಗಳ ಸುಮಾರು ಹತ್ತುಸಾವಿರ ಶಾಲಾವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಶೃಂಗೇರಿ ಮಠದ ಅಡುಗೆಮನೆಯಲ್ಲಿ ತಯಾರಾಗಿ ಸರಬರಾಜಾಗುತ್ತದೆ. ಇನ್ನಿತರ ಸಮಾಜಮುಖಿ ಚಟುವಟಿಕೆಗಳೂ ಮಠದ ವತಿಯಿಂದ ಯಥಾಶಕ್ತಿ ನಡೆಯುತ್ತಿವೆ. ಶೃಂಗೇರಿಯಲ್ಲಿರುವ ಧನ್ವಂತರಿ ಆಸ್ಪತ್ರೆ ಒಂದು ನಿದರ್ಶನವಷ್ಟೇ. ಧರ್ಮಪ್ರಚಾರಕಾರ್ಯವಂತೂ ಅವಿರತವಾಗಿ ನಡೆದೇಇದೆ. ಶಂಕರಾಚಾರ್ಯರು ಹಿಂದೂಧರ್ಮದ ಪುನರುತ್ಥಾನಕ್ಕಾಗಿ ಕಾಲ್ನಡಿಗೆಯಲ್ಲೇ ದೇಶಸುತ್ತಿದವರು. ಅದೇ ಪರಂಪರೆಯನ್ನು ಮುಂದುವರಿಸಿರುವ ಜಗದ್ಗುರುಗಳು ಕಾಲ್ನಡಿಗೆಯಲ್ಲಲ್ಲದಿದ್ದರೂ ದೇಶ-ವಿದೇಶಗಳ ಪರ್ಯಟನೆಮಾಡಿ ಶಿಬಿರಗಳನ್ನು ನಡೆಸಿ ಧರ್ಮಜಾಗ್ರತಿ ಮೂಡಿಸುತ್ತಿದ್ದಾರೆ. ಶೃಂಗೇರಿ ಮಠದ ಶಾಖೆಗಳು ಅಮೆರಿಕದ ಸ್ಟ್ರೌಡ್ಸ್ಬರ್ಗ್ನಲ್ಲಿ ಮತ್ತು ಕೆನಡಾ ದೇಶದ ಟೊರಾಂಟೋ ನಗರದಲ್ಲಿಯೂ ಇದ್ದು ಪಾಶ್ಚಾತ್ಯ ಜಗತ್ತಿನ ಅಧ್ಯಾತ್ಮಪಿಪಾಸುಗಳ ಕ್ಷುಧೆ ತಣಿಸುವ ಕೆಲಸವನ್ನು ಸರಳಸುಂದರ ರೀತಿಯಲ್ಲಿ ಮಾಡುತ್ತಿವೆ.
ಚಾಂದ್ರಮಾನ ತಿಥಿಪ್ರಕಾರ ನಿನ್ನೆ (ಚೈತ್ರ ಶುಕ್ಲ ಪಂಚಮಿ), ಸೌರಮಾನ ಕ್ಯಾಲೆಂಡರ್ ಪ್ರಕಾರ ನಾಳೆ (ಏಪ್ರಿಲ್ 11) ಶ್ರೀ ಭಾರತೀತೀರ್ಥ ಸ್ವಾಮೀಜಿಯವರಿಗೆ ಷಷ್ಟ್ಯಬ್ದಪೂರ್ತಿ. ತನ್ನಿಮಿತ್ತ ಕಳೆದೊಂದು ವಾರದಿಂದ ಶೃಂಗೇರಿಯಲ್ಲಿ ಅಭೂತಪೂರ್ವ ಸಂಭ್ರಮ. ಲಕ್ಷಮೋದಕ ಮಹಾಗಣಪತಿ ಹೋಮ, ಅತಿರುದ್ರ ಮಹಾಯಾಗ, ಸಂಹಿತಾಹವನ, ಅಯುತ ಚಂಡಿಕಾಯಾಗ ಮುಂತಾದ ವಿಧಿವಿಧಾನಗಳು. ಅಯುತ ಎಂದರೆ ಹತ್ತುಸಾವಿರ. ಅಷ್ಟು ಸಂಖ್ಯೆಯಲ್ಲಿ ಸಪ್ತಶತೀಪಾರಾಯಣ. ನೂರು ಕುಂಡಗಳಲ್ಲಿ ಸಾವಿರ ಸರ್ತಿ ಹೋಮ. ಶೃಂಗೇರಿಯಲ್ಲಿ ಇದು ಪ್ರಪ್ರಥಮ. ಇವೆಲ್ಲವೂ ಲೋಕಕಲ್ಯಾಣಾರ್ಥ, ಎಲ್ಲ ವರ್ಗದ ಜನರ ಮನಸ್ಸಿನ ಕಲ್ಮಶಗಳೂ ದೂರವಾಗಿ, ಮಳೆ-ಬೆಳೆ ಸಕಾಲದಲ್ಲಿ ಆಗಿ ಸುಖಶಾಂತಿ ಸಮೃದ್ಧಿ ನೆಲೆಸಬೇಕೆಂಬ ಸಂಕಲ್ಪದೊಂದಿಗೆ ನಡೆಯುತ್ತಿರುವ ಧಾರ್ಮಿಕ ಕೆಲಸಗಳು. ಜತೆಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ. ರಾಜಮಹಾರಾಜರ ಕಾಲದಲ್ಲಿ ಯಜ್ಞಯಾಗಾದಿಗಳು, ಗೀತನೃತ್ಯ ಸಾಹಿತ್ಯಗೋಷ್ಠಿಗಳು ವೈಭವೋಪೇತವಾಗಿ ನಡೆಯುತ್ತಿದ್ದವಂತೆ. ಇದರಿಂದ ಋತ್ವಿಜರಿಗೂ, ಕಲಾವಿದರಿಗೂ ಉತ್ತೇಜನ ಕೊಟ್ಟಂತೆಯೂ ಆಯ್ತು, ಪರಂಪರೆಯನ್ನು ಊರ್ಜಿತಸ್ಥಿತಿಯಲ್ಲಿಟ್ಟಂತೆಯೂ ಆಯ್ತು. ಶೃಂಗೇರಿಯಲ್ಲಿ ಇದೀಗ ಜರುಗುತ್ತಿರುವುದೂ ಅದೇ. ನಿಜ, ಪೂರ್ವಾಶ್ರಮವನ್ನೂ ಲೆಕ್ಕಕ್ಕೆ ತಗೊಂಡು ಸ್ವಾಮೀಜಿಯವರಿಗೆ ಈಗ ಷಷ್ಟ್ಯಬ್ದಪೂರ್ತಿ. ಆದರೆ ಇಂತಹ ಮೇರುಸದೃಶ ವ್ಯಕ್ತಿತ್ವವೊಂದು ನಮ್ಮ ನಡುವೆ ನಮ್ಮ ನಾಡಿನಲ್ಲಿಯೇ ಇದೆಯೆನ್ನುವುದು, ಅವರ ಸಮಕಾಲೀನರಾಗಿ ನಾವಿದ್ದೇವೆನ್ನುವುದು ಸಮಸ್ತ ಕನ್ನಡಿಗರಿಗೂ ಹೆಮ್ಮೆ ಮತ್ತು ಸ್ಫೂರ್ತಿ!
* * *
[ಈ ಲೇಖನವನ್ನು ನೀವು
ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ
ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.