Episodes
Saturday Mar 03, 2012
Showman Showsoff
Saturday Mar 03, 2012
Saturday Mar 03, 2012
ದಿನಾಂಕ 4 ಮಾರ್ಚ್ 2012ರ ಸಂಚಿಕೆ...
‘ಶೋ’ಬಾಜಿಗೂ ಹದ್ದು ಬೇಕು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅರುಣಮೂರ್ತಿ ಎಂಬವರು ನನ್ನೊಬ್ಬ ಅಮೆರಿಕನ್ನಡಿಗ ಸ್ನೇಹಿತ. ಶಿಕಾಗೊದಲ್ಲಿ ವಾಸಿಸುತ್ತಾರೆ. ಅವರ ಪರಿಚಯವನ್ನು ನಿಮಗೆ ಸುಲಭದಲ್ಲಿ ಹೇಳಬೇಕೆಂದರೆ ಅವರು ಕನ್ನಡ ಪತ್ರಿಕೋದ್ಯಮದ ‘ವಂಡರ್ ವೈಎನ್ಕೆ’ಯವರ ತಮ್ಮನ ಮಗ. ವೃತ್ತಿಯಲ್ಲಿ ತಂತ್ರಜ್ಞಾನ ಕ್ಷೇತ್ರದವರು; ಹವ್ಯಾಸದಲ್ಲಿ ಒಬ್ಬ ಚಿತ್ರಕಾರ. ಒಳ್ಳೊಳ್ಳೆಯ ಕಾರ್ಟೂನ್ಸ್ ಸಹ ಬಿಡಿಸುತ್ತಾರೆ. ದೊಡ್ಡಪ್ಪನಿಂದ ಅಲ್ಪಸ್ವಲ್ಪ ಪತ್ರಿಕೋದ್ಯಮವೂ ಮೈಗೂಡಿಬಂದಿದೆ. ಶಿಕಾಗೊದಲ್ಲಿನ ಕನ್ನಡಕೂಟದ ಸುದ್ದಿಪತ್ರಗಳ ಸಂಪಾದಕೀಯ ಸಮಿತಿಯಲ್ಲಿ ಅವರು ಇರುತ್ತಾರೆ. ಚಂದದ ಚಿತ್ರಗಳಿಂದ ಸಂಚಿಕೆಗಳನ್ನು ಸಿಂಗರಿಸುತ್ತಾರೆ. ಅದಷ್ಟನ್ನು ಅರುಣಮೂರ್ತಿಯವರ ಬಗ್ಗೆ ತಿಳಿದುಕೊಂಡ ನಂತರ ಈಗಿನ್ನು ಅವರು ಇತ್ತೀಚೆಗೆ ಬಿಡಿಸಿದ ಒಂದು ವ್ಯಂಗ್ಯಚಿತ್ರದ ಬಗ್ಗೆ ಹೇಳುತ್ತೇನೆ. ಈ ಚಿತ್ರವನ್ನು ಅವರು ಫೇಸ್ಬುಕ್ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಇಲ್ಲಿ ಸ್ಥಳಾವಕಾಶಕ್ಕೆ ಹೊಂದುವಂತೆ ಅದನ್ನೇ ತುಸು ಕಿರಿದಾಗಿಸಿ ಬಳಸಿದ್ದೇನೆ. ಚಿತ್ರದಲ್ಲಿನ ಸಂಭಾಷಣೆ ಇಂಗ್ಲಿಷ್ನಲ್ಲಿರುವುದು, ಅಕ್ಷರಗಳು ಸ್ಪಷ್ಟವಾಗಿ ಕಾಣಲಿಕ್ಕಿಲ್ಲ, ಹಾಗಾಗಿ ನಾನೇ ವಿವರಿಸುತ್ತೇನೆ. ಶಿಕಾಗೊ ಪ್ರದೇಶದ ಒಂದು ವಿಶಾಲ ಸರೋವರದ ನಡುಗುಡ್ಡೆಯಲ್ಲಿ ಒಂದು ಹದ್ದು ಕುಳಿತಿದೆ. ಸರೋವರದಲ್ಲಿನ ಮೀನುಗಳನ್ನು ಬೇಟೆಯಾಡುವುದಕ್ಕೆ ಅದು ಬಂದಿದೆ. ಅದನ್ನು ನೋಡಿ ಮೀನುಗಳು ತಮ್ಮಲ್ಲೇ ಮಾತಾಡಿಕೊಳ್ಳುತ್ತಿವೆ- “ಈ ಗಿಡುಗಪ್ಪ ತನ್ನ ಬೇಟೆಯ ಕೈಚಳಕ ತೋರಿಸಲಿಕ್ಕೆ ಶುರುಮಾಡೋದು ಏನಿದ್ದರೂ ಆ ಮನುಷ್ಯ ಇತ್ತಕಡೆ ಬಂದಮೇಲಷ್ಟೇ. ಅವನು ಬರುವವರೆಗೆ ನಾವಿಲ್ಲಿ ಆರಾಮಾಗಿ ಆಡ್ಕೊಂಡಿರಬಹುದು. ಯಾರಬಗ್ಗೆ ಹೇಳ್ತಿರೋದು ಅಂತ ಗೊತ್ತಾಯ್ತಲ್ವ?” ಮೀನುಗಳ ಸಂಭಾಷಣೆ ಹಾಗೆ ನಡೆಯುತ್ತಿರಲು, ಹದ್ದು ಕೂಡ ತನ್ನ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದೆ- “ಈ ಫೋಟೊಗ್ರಾಫರ್ ಆಸಾಮಿ ಇವತ್ತಾದ್ರೂ ಸ್ವಲ್ಪ ಬೇಗ ಬರ್ತಾನೆ ಅಂದ್ಕೋತೀನಿ. ತುಂಬಾ ಹಸಿವಾಗ್ತಿದೆ ನನಗೆ. ಆದರೆ ಆತ ಬರುವವರೆಗೆ ಬೇಟೆ ಶುರುಮಾಡೋದಕ್ಕೆ ಮನಸ್ಸಿಲ್ಲ...” ಹದ್ದು ನಿರೀಕ್ಷಿಸುತ್ತಿರುವ ಆ ಫೋಟೊಗ್ರಾಫರ್ ಯಾರು? ಅದರ ಸ್ವಾರಸ್ಯವನ್ನೂ ನಿಮಗೆ ತಿಳಿಸಬೇಕು. ಶಿಕಾಗೊದಲ್ಲಿಯೇ ವಾಸವಾಗಿರುವ ಇನ್ನೊಬ್ಬ ಕನ್ನಡಿಗ ಶ್ರೀನಿವಾಸ ರಾವ್. ಅವರು ಅರುಣಮೂರ್ತಿಯವರ ಸ್ನೇಹಿತ, ನನಗೂ ಪರಿಚಿತರೇ. ಫೋಟೊಗ್ರಫಿ ಅವರ ನೆಚ್ಚಿನ ಹವ್ಯಾಸ. ಇತ್ತೀಚೆಗೆ ವೈಲ್ಡ್ಲೈಫ್ ಫೋಟೊಗ್ರಫಿಯನ್ನೂ ಆರಂಭಿಸಿದ್ದಾರೆ. ವಾರಾಂತ್ಯದ ಬಿಡುವಿನಲ್ಲಿ ಹೊರಸಂಚಾರಕ್ಕೆ ಹೋಗಿ ಪ್ರಾಣಿ-ಪಕ್ಷಿಗಳ ಆಕರ್ಷಕ ಚಿತ್ರಗಳನ್ನು ಕ್ಲಿಕ್ಕಿಸುತ್ತಾರೆ. ಕೆಲವೊಮ್ಮೆ ಫೇಸ್ಬುಕ್ ಗೋಡೆಮೇಲೂ ಅಂಟಿಸುತ್ತಾರೆ. ಯಾವುದೋ ಪಕ್ಷಿಯ ನಿರ್ದಿಷ್ಟ ಭಂಗಿಯ ಚಿತ್ರ ತೆಗೆಯುವುದಕ್ಕಾಗಿ ಎಷ್ಟು ಹರಸಾಹಸ ಮಾಡಬೇಕಾಯ್ತು ಅಂತೆಲ್ಲ ವಿವರಿಸುತ್ತಾರೆ. ಅವರ ಚಿತ್ರಗಳನ್ನು, ಜೊತೆಗಿನ ಕಿರುಟಿಪ್ಪಣಿಗಳನ್ನು ನಾವೆಲ್ಲ ಸ್ನೇಹಿತರು ತುಂಬಾ ಆನಂದಿಸುತ್ತೇವೆ. ಉತ್ತಮ ಚಿತ್ರಗಳಿಗಾಗಿ ಅವರನ್ನು ಅಭಿನಂದಿಸುತ್ತೇವೆ. ಅಂಥದೊಂದು ಸ್ನೇಹಸಲುಗೆಯಿಂದಲೇ ಅರುಣಮೂರ್ತಿಯವರು ‘ಫೋಟೊಗ್ರಾಫರ್ಗಾಗಿ ಕಾಯುತ್ತಿರುವ ಹದ್ದು’ ವ್ಯಂಗ್ಯಚಿತ್ರ ಬಿಡಿಸಿದ್ದು. ನಾವೆಲ್ಲ ಅದನ್ನು ಮೆಚ್ಚಿದ್ದು. ಇಲ್ಲಿಗೆ ಈ ಲೇಖನದಲ್ಲಿ ಅರುಣಮೂರ್ತಿ, ಅವರ ಚಿತ್ರರಚನೆಯ ಹವ್ಯಾಸ, ಶ್ರೀನಿವಾಸ ರಾವ್ ಮತ್ತು ಅವರ ಫೋಟೊಗ್ರಫಿ- ಇದಿಷ್ಟರ ಪಾತ್ರ ಮುಗಿಯುತ್ತದೆ. ಮುಖ್ಯ ವಿಚಾರಕ್ಕೆ ಹಿನ್ನೆಲೆಯಾಗಿ (ಮತ್ತು ‘ನಿಮಗೆ ವಾರವಾರವೂ ಅಂಕಣ ಬರೆಯುವುದಕ್ಕೆ ವಿಷಯ ಹೇಗೆ ಹೊಳೆಯುತ್ತದೆ?’ ಎಂಬ ಸಾಮಾನ್ಯ ಪ್ರಶ್ನೆಗೆ ಜಸ್ಟ್ ಒಂದು ಉದಾಹರಣೆ ರೂಪದ ಉತ್ತರವಾಗಿ) ಇದನ್ನೆಲ್ಲ ಉಲ್ಲೇಖಿಸಬೇಕಾಯ್ತು ಅಷ್ಟೇ. ಈಗ ವ್ಯಂಗ್ಯಚಿತ್ರದಲ್ಲಿನ ಹದ್ದಿನ ಸ್ವಗತದ ಮಾತುಗಳನ್ನಷ್ಟೇ ಇನ್ನೊಮ್ಮೆ ಗಮನಿಸಿ. ಅಫ್ಕೋರ್ಸ್ ಅದೊಂದು ಬರಿ ವ್ಯಂಗ್ಯಚಿತ್ರ. ನಿಜವಾದ ಹದ್ದು ಆರೀತಿ ಫೋಟೊಗ್ರಾಫರ್ಗೆಲ್ಲ ಕಾಯುವುದಿಲ್ಲ. ತನಗೆ ಹಸಿವೆಯಾದಾಗ, ಬೇಟೆ ಆಡಬೇಕೆನಿಸಿದಾಗ ಅದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಡ. ತಾನು ಬೇಟೆಯಾಡುವುದನ್ನು ಯಾರಾದರೂ ನೋಡಿ ಆನಂದಿಸಲಿ, ಚಪ್ಪಾಳೆ ತಟ್ಟಲಿ, ತನ್ನ ಚಾಣಾಕ್ಷತೆಗೆ ಶಭಾಶ್ಗಿರಿ ಸಿಗಲಿ ಅಂತೆಲ್ಲ ಅದು ಆಲೋಚಿಸುವುದೂ ಇಲ್ಲ. ತನ್ನ ಫೋಟೊ ‘ನೇಚರ್’ ಪತ್ರಿಕೆಯಲ್ಲೋ ‘ನ್ಯಾಷನಲ್ ಜಿಯೊಗ್ರಫಿಕ್’ ಮ್ಯಾಗಜಿನ್ನಲ್ಲೋ ಬರಬೇಕೆಂದು ಅದಕ್ಕೆ ಆಸೆಯೂ ಇಲ್ಲ. ಅಸಲಿಗೆ ಹದ್ದು ಅಂತಲ್ಲ ಪ್ರಕೃತಿಯಲ್ಲಿ ಮನುಷ್ಯನೊಬ್ಬನನ್ನು ಬಿಟ್ಟು ಎಲ್ಲವೂ ಅದೇಥರ. ಅದನ್ನೇ ಅಲ್ಲವೇ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದು: “ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ... ಫಲ ಮಾಗುವಂದು ತುತ್ತೂರಿ ದನಿಯಿಲ್ಲ... ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ...” ತನ್ನಪಾಡಿಗೆ ತಾನು ಆಗುತ್ತಲೇ ಇರುತ್ತದೆ. ಎಲ್ಲವೂ ನ್ಯಾಚುರಲ್. ಅದಕ್ಕೇ ಅದು ನೇಚರ್. ಆದರೆ ಮನುಷ್ಯ? ಎಲ್ಲರೂ ತನ್ನನ್ನು ಗಮನಿಸಬೇಕು, ಗುರುತಿಸಬೇಕು, ಗೌರವಿಸಬೇಕು ಎನ್ನುವ ತೀವ್ರ ಚಪಲ. ನಿಜವಾಗಿ ವ್ಯಂಗ್ಯಚಿತ್ರದಲ್ಲಿನ ಹದ್ದಿನಂತೆ ಯೋಚಿಸುವುದು ಹದ್ದಲ್ಲ, ಹದ್ದು ಮೀರಿದ ಮನುಷ್ಯ! ನಮಗೆ ಪ್ರದರ್ಶನದ ಹುಚ್ಚು ಬಹಳ. ಒಳಗೆ ಗೋಳಿಸೊಪ್ಪೇ ಇದ್ದರೂ ತೋಟ ಶೃಂಗಾರಗೊಂಡು ಕಂಗೊಳಿಸಬೇಕು. ಈಗೀಗ ಅದು ಎಷ್ಟು ವಿಪರೀತಕ್ಕೆ ತಲುಪಿದೆಯೆಂದರೆ ಪೂಜೆ-ಪುನಸ್ಕಾರ ಭಕ್ತಿಭಾವಗಳಂಥ ತೀರಾ ವೈಯಕ್ತಿಕ ವಿಚಾರಗಳಲ್ಲೂ ಅಂತಃಸತ್ವಕ್ಕಿಂತ ಆಡಂಬರದ್ದೇ ಅಬ್ಬರ. ಸಾಲದೆಂಬಂತೆ ಮಿತಿಮೀರಿದ ಪ್ರಚಾರಪ್ರಿಯತೆಯ ಬೆಂಕಿಗೆ ತುಪ್ಪ ಸುರಿಯುವ ಮಾಧ್ಯಮಗಳು. ಒಮ್ಮೆ ಯೋಚಿಸಿ: ಹತ್ತಿಪ್ಪತ್ತು ವರ್ಷಗಳ ಹಿಂದೆ ವರಮಹಾಲಕ್ಷ್ಮೀ ವ್ರತ, ಅಕ್ಷಯತದಿಗೆ ಮುಂತಾದ ಧಾರ್ಮಿಕ ಆಚರಣೆಗಳು ಹೇಗೆ ಇರುತ್ತಿದ್ದವು? ಈಗ, ಅದರಲ್ಲೂ ನಗರಪ್ರದೇಶಗಳಲ್ಲಿ, ಇಪ್ಪತ್ತನಾಲ್ಕು ಇನ್ಟು ಏಳುಗಳ ಭರಾಟೆಯಲ್ಲಿ ಅವು ಹೇಗಾಗಿವೆ? ‘ಶೋ’ಬಾಜಿ ನಮ್ಮ ಬದುಕಿನ ಎಲ್ಲ ಮಗ್ಗುಲುಗಳಲ್ಲೂ ಹಾಸುಹೊಕ್ಕಿದೆ. ಜಸ್ಟ್ ಒಂದು ಸ್ಯಾಂಪಲ್- ಸಭಾಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ಆಸೀನರಾಗುವವರ ಸಂಖ್ಯೆ. ನನಗೆ ಎಷ್ಟೋ ಸರ್ತಿ ಅನಿಸುವುದಿದೆ ವೇದಿಕೆಯ ಮೇಲೆ ಇಷ್ಟು ಜನರ ಅಗತ್ಯವಿದೆಯೇ? ಕೆಲವೊಮ್ಮೆ ವೇದಿಕೆಯ ಮೇಲೆ ಎರಡೆರಡು ಸಾಲು ಕುರ್ಚಿಗಳಲ್ಲಿ ಗಣ್ಯರ ಗಡಣ ಜಮೆಯಾಗುತ್ತದೆ. ಆಮೇಲೆ ಅವರೆಲ್ಲರಿಂದ ಭಾಷಣಗಳೂ ಶುರುವಾದರೆ ಗೋವಿಂದಾ! ಒಬ್ಬೊಬ್ಬರೂ “ವೇದಿಕೆಯ ಮೇಲೆ ಆಸೀನರಾಗಿರುವ ... ಅವರೆ, ... ಅವರೆ, ... ಅವರೆ...” ಎಂದು ಅವರೆಕಾಳು ಬಿತ್ತುವುದಕ್ಕೇ ಐದೈದು ನಿಮಿಷ ಬೇಕು. ಮಾರನೆದಿನ ಪತ್ರಿಕೆಗಳಲ್ಲಿ ಎಲ್ಲ ಅವರೆಗಳ ಫೋಟೊ ಬೇರೆ. ಅಷ್ಟಾಗಿ ಆ ಸಭೆಯಲ್ಲಿ ಪ್ರೇಕ್ಷಕರು ಎಷ್ಟು ಜನರಿರುತ್ತಾರೆ? ಅದು ಗೊತ್ತಾಗುವುದಿಲ್ಲ, ಸಭೆಯ ಚಿತ್ರವೂ ಪ್ರಕಟವಾಗುವುದಿಲ್ಲ. ಬಹುಶಃ ಕರಾವಳಿ ಜಿಲ್ಲೆಗಳಲ್ಲಿ ಈರೀತಿಯ ಬಹುಗಣ್ಯ ಸಭಾಕಾರ್ಯಕ್ರಮಗಳ ಹಾವಳಿ ಅಧಿಕ. ಬೇರೆಕಡೆಯೂ ಇರುತ್ತೆ ಆದರೆ ಕರಾವಳಿಯ ಪತ್ರಿಕೆಗಳಲ್ಲಿ ಚಿತ್ರಸಮೇತ ವರದಿಯಾಗುವಷ್ಟು ಬೇರೆಡೆಯದು ಆಗುವುದಿಲ್ಲವೇನೊ. ಅಥವಾ ನಾನು ಗಮನಿಸುವುದಿಲ್ಲವೇನೋ. ಇನ್ನೂ ಒಂದು ತಮಾಷೆಯಿದೆ. ‘ತಾಲೂಕು ಯುವಜನಮೇಳ’ ಅಂತೊಂದು ಮೇಳ ನಡೆಯುತ್ತದೆ ಅಂತಿಟ್ಕೊಳ್ಳಿ. ಅದಕ್ಕೊಂದು ಸಮಾರಂಭ, ಒಂದೆರಡು ಚಿತ್ರಗಳೊಂದಿಗೆ ವರದಿ. ಬಹಳ ಸಂತೋಷ, ಅಷ್ಟು ಬೇಕು. ಆದರೆ, ಯುವಜನಮೇಳದ ಆಮಂತ್ರಣ ಪತ್ರ ಬಿಡುಗಡೆಗೂ ಒಂದು ಸಮಾರಂಭ ಜರುಗುತ್ತದೆ! ಕ್ಷೇತ್ರದ ಶಾಸಕರು ಮುಖ್ಯ ಅತಿಥಿಯಾಗಿ ಬರುತ್ತಾರೆ. ಅವರೊಂದಿಗೆ ಇನ್ನೂ ಐದಾರು ಗಣ್ಯರು ವೇದಿಕೆಯಲ್ಲಿ. ‘ಆಮಂತ್ರಣ ಪತ್ರಿಕೆ ಬಿಡುಗಡೆ’ ಎಂದು ಮಾರನೆದಿನದ ಪತ್ರಿಕೆಗಳಲ್ಲಿ ಸಚಿತ್ರ ವರದಿ. ಅಂದಹಾಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭಕ್ಕೂ ಪ್ರತ್ಯೇಕ ಆಮಂತ್ರಣ ಪತ್ರಿಕೆ ಬೇಡವೇ? ಅದರ ಬಿಡುಗಡೆಗೂ ಸಮಾರಂಭ ಬೇಡವೇ? ಅದಕ್ಕೇ ಹೇಳಿದ್ದು, ಬರಿ ‘ಶೋ’ಬಾಜಿ. ನೆಂಟರು ಬರುತ್ತಾರೆಂದು ಮನೆ, ಇನ್ಸ್ಪೆಕೆಟ್ರು ಬರ್ತಾರಂತ ಶಾಲೆ, ಮೇಲಧಿಕಾರಿ ಭೇಟಿ ಕೊಡುತ್ತಾನಂತ ಕಂಪನಿ ಆಫೀಸು, ಪುಢಾರಿ/ರಾಜಕಾರಣಿ ಬರುತ್ತಾನಂತ ಊರುಕೇರಿ ಎಲ್ಲವೂ ಎಂದೂಇಲ್ಲದ ಸ್ವಚ್ಛತೆಯನ್ನು ಕಾಣುತ್ತವಲ್ಲ, ಅದೂ ಒಂಥರದ ‘ಶೋ’ಬಾಜಿಯೇ. ಅದರಲ್ಲೂ ಕೊನೆಯದು ಅತಿವಿಪರ್ಯಾಸದ್ದು. ಏಕೆಂದರೆ ಆ ಪುಢಾರಿ ಹೆಚ್ಚಾಗಿ ಮಹಾಕೊಳಕನೇ ಆಗಿರುತ್ತಾನೆ, ಅವನ ಆಗಮನಕ್ಕಾಗಿ ಊರು ಸ್ವಚ್ಛಗೊಳ್ಳುತ್ತದೆ! ಇದನ್ನೆಲ್ಲ ನಾನು ಅಮೆರಿಕದಲ್ಲಿ ಕುಳಿತು ಭಾರತದ ಬಗ್ಗೆಯಷ್ಟೇ ಹೇಳುತ್ತಿದ್ದೇನೆ ಅಂದ್ಕೊಳ್ಳಬೇಡಿ. ಈ ದೇಶದಲ್ಲೂ ‘ಶೋ’ಬಾಜಿಗೆ ಕೊರತೆಯೇನಿಲ್ಲ. ಬಾಸ್ ಬಂದಾಗಷ್ಟೇ ಫೇಸ್ಬುಕ್ ವಿಂಡೋ ಮಿನಿಮೈಸ್ ಮಾಡಿ ಗಂಭೀರವಾಗಿ ಕೆಲಸ ಮಾಡುತ್ತಿರುವಂತೆ ನಟಿಸುವುದು, ಪೊಲೀಸ್ ಕಾರು ಹಾಯ್ದುಹೋದಾಗ ಮಾತ್ರ ಕಾರಿನ ವೇಗ ತಗ್ಗಿಸಿ ಅತ್ಯಂತ ವಿಧೇಯರಾಗಿ ಸ್ಪೀಡ್ಲಿಮಿಟ್ ಪಾಲಿಸುವುದು, ಟಿವಿ ಸಂದರ್ಶನಗಳಲ್ಲಿ ನಟಿಮಣಿಗಳು/ಮಾಡೆಲ್ಗಳು ಆರ್ಟಿಫಿಶಿಯಲ್ ಹಾವಭಾವಗಳನ್ನು ಪ್ರದರ್ಶಿಸುವುದು... ಗಮನಿಸುತ್ತ ಹೋದರೆ ಒಂದೆರಡಲ್ಲ, ಎಲ್ಲರೀತಿಯ ‘ಶೋ’ಬಾಜಿಗಳು ಇಲ್ಲೂ ಇವೆ, ಜಗತ್ತಿನೆಲ್ಲೆಡೆಯಲ್ಲೂ ಇವೆ. ‘ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ’ ಎಂದು ಕಗ್ಗದಲ್ಲಿ ಹೇಳಿರುವುದರಿಂದಲೇ ಇರಬಹುದು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.