Episodes
Saturday Jan 28, 2012
Six Thinking Hats
Saturday Jan 28, 2012
Saturday Jan 28, 2012
ದಿನಾಂಕ 29 ಜನವರಿ 2012ರ ಸಂಚಿಕೆ...
ಒಂದೇ ಬಣ್ಣದ ಟೋಪಿಯಾ?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಲ್ಲ, ಒಂದಲ್ಲ ಎರಡಲ್ಲ ಆರು ಬೇರೆಬೇರೆ ಬಣ್ಣಗಳ ಆರು ಬೇರೆಬೇರೆ ಟೋಪಿಗಳು. ನೀಲಿ ಬಣ್ಣದ್ದೊಂದು, ಕೆಂಪಗಿನದೊಂದು; ಒಂದು ಹಳದಿ ಮತ್ತೊಂದು ಹಸಿರು; ಆಮೇಲೆ ಕಪ್ಪು ಮತ್ತು ಬಿಳಿ. ಹೀಗೆ ಆರು ಟೋಪಿ ಆರು ಬಣ್ಣ. ಇದೇನಿದು ಬಣ್ಣಬಣ್ಣದ ಮಾತನಾಡಿ ಯಾರಿಗೋ ಟೋಪಿ ಹಾಕಲಿಕ್ಕೆ ಹೊರಟಿರುವಂತಿದೆ ಎನ್ನಬೇಡಿ ಮತ್ತೆ! ಆರು ಟೋಪಿಗಳನ್ನು ಇಟ್ಕೊಳ್ಳೋಕೆ ನಾವೇನು ಷಣ್ಮುಖನ ಹಾಗೆ ಆರು ತಲೆಯುಳ್ಳವರೇ ಅಂತ ತರ್ಕಕ್ಕೂ ಇಳಿಯಬೇಡಿ. ಇವತ್ತಿನ ಅಂಕಣದಲ್ಲಿ ‘ಆರು ಟೋಪಿಗಳ ಆಲೋಚನಾ ವಿಧಾನ’ ಎಂಬ ವ್ಯಕ್ತಿತ್ವ ವಿಕಸನ ವಿಚಾರವೊಂದನ್ನು ನಿಮಗಿರುವ ಒಂದೇ ತಲೆಯೊಳಕ್ಕೆ (ಅದಂತೂ ಖಂಡಿತವಾಗಿಯೂ ಭದ್ರವಾಗಿ ಇದೆ, ಬೇಕಿದ್ದರೆ ಒಮ್ಮೆ ಮುಟ್ಟಿನೋಡಿ ಖಾತರಿಪಡಿಸಿಕೊಳ್ಳಿ) ತೂರಿಸಬೇಕೆಂಬ ಯೋಜನೆ ಇಟ್ಟುಕೊಂಡಿದ್ದೇನೆ. ವಿಷಯ ಚೆನ್ನಾಗಿದೆ, ಸ್ವಾರಸ್ಯಕರವಾಗಿದೆ, ಅನುಸರಣೀಯವಾಗಿಯೂ ಇದೆ. ಟೋಪಿ ಹಾಕಿಸಿಕೊಂಡ ಹಾಗಂತೂ ಆಗಲಿಕ್ಕಿಲ್ಲ. ಓದಿ ಮುಗಿಸಿದಾಗ ನೀವೇ ನೋಡುವಿರಂತೆ. ಇತರ ಜೀವಿಗಳಿಗಿಂತ ಮನುಷ್ಯ ಹೇಗೆ ಭಿನ್ನ ಎಂದು ಪಟ್ಟಿ ಮಾಡುತ್ತ ಹೋದರೆ ಬಹುಶಃ ‘ಆಲೋಚನಾ ಸಾಮರ್ಥ್ಯ’ ಪ್ರಮುಖವಾದ ಮೂರ್ನಾಲ್ಕು ಅಂಶಗಳೊಳಗೇ ನಮೂದಾಗುತ್ತದೆ. ನಿಜ, ಪ್ರಾಣಿಗಳಿಗೂ ಸ್ವಲ್ಪಮಟ್ಟಿಗೆ ಆಲೋಚನಾ ಸಾಮರ್ಥ್ಯ ಇದೆ, ಅಷ್ಟು ಪ್ರಮಾಣದಲ್ಲಿ ಅವುಗಳಿಗದು ಅವಶ್ಯವೂ ಹೌದು- ಆಹಾರ ಎಲ್ಲಿ ಸಿಕ್ಕೀತು, ಶತ್ರುವಿನಿಂದ ರಕ್ಷಿಸಿಕೊಳ್ಳುವುದೆಂತು ಮೊದಲಾದ ಮೂಲಭೂತ ವಿಚಾರಗಳಲ್ಲಿ ಮಾತ್ರ. ಆದರೆ ಮನುಷ್ಯ ಹಾಗಲ್ಲ. ಅವನ ಆಲೋಚನೆಗಳು ಅಗಾಧ, ಅನಂತ ಮತ್ತು ಅಸದೃಶ. ಒಮ್ಮೊಮ್ಮೆ ಎಣಿಸಿಕೊಂಡರೆ ನಮಗೇ ರೋಮಾಂಚನವಾಗುತ್ತದೆ. ಎಂತಹ ಸೂಪರ್ಕಂಪ್ಯೂಟರ್ಗಿಂತಲೂ ಅದ್ಭುತವಾದ ಮೆದುಳಿದೆ ನಮ್ಮ ತಲೆಬುರುಡೆಯೊಳಗೆ! ಮನುಷ್ಯನಿಗೆ ವರದಾನವಾಗಿ ಬಂದಿರುವ ಈ ಆಲೋಚನಾ ಸಾಮರ್ಥ್ಯದ ಒಳಗುಟ್ಟೇನು, ಅದು ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಅಥವಾ ಒಬ್ಬನೇ ವ್ಯಕ್ತಿಯಲ್ಲಿಯೂ ಸಂದರ್ಭ, ಸನ್ನಿವೇಶ, ವಯಸ್ಸು, ಪೂರ್ವಾನುಭವಗಳಿಗೆ ಹೊಂದಿಕೊಂಡು ಹೇಗೆ ಬದಲಾಗುತ್ತದೆ? ಈ ಎಲ್ಲ ವಿಚಾರಗಳ ಬಗ್ಗೆ ಮನಃಶಾಸ್ತ್ರಜ್ಞರು, ವೈದ್ಯರು, ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ. ಸಂಶೋಧನೆಗಳು ಒಂದೆಡೆಯಿರಲಿ. ಇದ್ದ ಆಲೋಚನಾ ಸಾಮರ್ಥ್ಯವನ್ನೇ ಹೆಚ್ಚಿಸಿಕೊಳ್ಳುವುದು ಹೇಗೆ? ಎರ್ರಾಬಿರ್ರಿಯಾಗಿರುವುದನ್ನು, ಗೊಂದಲಗಳ ಗೂಡಾಗಿರುವುದನ್ನು, ಒಂದು ನಿರ್ದಿಷ್ಟ ಮಿತಿಯಲ್ಲಿ ಮಾತ್ರ ಕಾರ್ಯವೆಸಗುವಂಥದ್ದನ್ನು ಊರ್ಜಿತಗೊಳಿಸುವುದು ಹೇಗೆ? ಈ ನಿಟ್ಟಿನಲ್ಲೂ ಅನೇಕ ತಜ್ಞರು ಯೋಚಿಸಿದ್ದಾರೆ. ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅವರಲ್ಲೊಬ್ಬ ಖ್ಯಾತಿವಂತ ಡಾ. ಎಡ್ವರ್ಡ್ ಡೆ ಬೊನೊ ಎಂಬ ಮಹಾನುಭಾವ. ಈತ ಯುರೋಪ್ನ ಒಂದು ಪುಟ್ಟ ದೇಶ ‘ಮಾಲ್ಟಾ’ ಎಂಬಲ್ಲಿಯವ. ವೈದ್ಯ, ಲೇಖಕ, ಸಂಶೋಧಕ ಮತ್ತು ಸಲಹೆಗಾರ. Dr. Edward de Bono’s Six Hat Thinking ಎಂಬ ಸಿದ್ಧಾಂತದಿಂದ, ಅದರ ಕುರಿತ ಪುಸ್ತಕಗಳು ಮತ್ತು ಕಾರ್ಯಾಗಾರಗಳಿಂದ ಜಗತ್ಪ್ರಸಿದ್ಧನಾದವ. ‘ಆರು ಟೋಪಿಗಳ ಆಲೋಚನಾ ವಿಧಾನ’ದ ಮೂಲ ತಿರುಳು ಒಂದು ಸಮಸ್ಯೆ ಅಥವಾ ಸವಾಲನ್ನು ಕೇವಲ ಒಂದೇ ದೃಷ್ಟಿಕೋನದಿಂದ ನೋಡಿ ಬಗೆಹರಿಸುವುದಕ್ಕೆ ಪ್ರಯತ್ನಿಸುವ ಬದಲಿಗೆ ವಿಭಿನ್ನ ದೃಷ್ಟಿಕೋನಗಳಿಂದ ಅರಿತುಕೊಳ್ಳುವುದು. ಹಾಗೆ ಮಾಡುವುದರಿಂದ ಸಮಸ್ಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು. ‘360 degrees view’ ಅಂತಾರಲ್ಲ ಹಾಗೆ. ಸಮಸ್ಯೆ ಅಥವಾ ಸವಾಲನ್ನು ಸಂಪೂರ್ಣವಾಗಿ ಅರಿತುಕೊಂಡರೆ ಅದರ ಪರಿಹಾರಕಾರ್ಯ ಅರ್ಧದಷ್ಟು ಆದಂತೆಯೇ. ಅಷ್ಟೇಅಲ್ಲ ಪೂರ್ಣ ಪರಿಹಾರಕ್ಕೆ ಶಕ್ತಿ-ಸಂಪನ್ಮೂಲಗಳೂ ಕಡಿಮೆ ಸಾಕಾಗುತ್ತವೆ. ಒಪ್ಪತಕ್ಕ ಮಾತು, ಆದರೆ ವಿಭಿನ್ನ ದೃಷ್ಟಿಕೋನಗಳು ಎಂದರೇನು? ಅವು ಯಾವುವು? ಅದನ್ನೇ ಎಡ್ವರ್ಡ್ ಡೆಬೊನೊ ಆರು ಬಣ್ಣಗಳ ಆರು ಟೋಪಿಗಳಿಂದ ಸಾಂಕೇತಿಕವಾಗಿ ವಿಂಗಡಿಸಿದ್ದು. ಹೇಗೂ ಚಿಂತನೆ ಮತ್ತು ತಲೆಯ ವಿಚಾರ, ಟೋಪಿಯೇ ಅತ್ಯಂತ ಸಮಂಜಸ ಸಂಕೇತ ಎಂದು ಆತ ಅಂದುಕೊಂಡಿರಬೇಕು. ಟೋಪಿಯಾದರೆ ಒಂದನ್ನು ತೆಗೆದು ಇನ್ನೊಂದು ಹಾಕಿಕೊಳ್ಳುವುದು ಸುಲಭ, ಮತ್ತು ಹಾಗೆ ಟೋಪಿ ಬದಲಾಯಿಸುವುದೆಂದರೆ ದೃಷ್ಟಿಕೋನ ಬದಲಾಯಿಸಿದಂತೆ ಎಂದು ಭಾವಿಸುವುದೂ ಸುಲಭ. ಸಮಸ್ಯೆ ಅಥವಾ ಸವಾಲಿನ ಕುರಿತು ಎಷ್ಟು ಸಾಧ್ಯವಿದೆಯೋ ಅಷ್ಟು ಮಾಹಿತಿಯನ್ನು, ಅಂಕಿ-ಅಂಶಗಳನ್ನು ಸಂಗ್ರಹಿಸುವುದು ಬಿಳಿ ಟೋಪಿಯ ಕೆಲಸ. ಸಮಸ್ಯೆಯ ಪರಿಹಾರದ ಬಗ್ಗೆ ಅದು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವ ಮಾಹಿತಿ ಲಭ್ಯವಿದೆ, ಯಾವುದನ್ನು ಕಲೆಹಾಕಿಕೊಳ್ಳಬೇಕು ಅಂತಷ್ಟೇ ಅದರ ಆಲೋಚನೆ. ಸಮಸ್ಯೆ ಅಥವಾ ಸವಾಲಿನತ್ತ ಭಾವನಾತ್ಮಕ ದೃಷ್ಟಿಕೋನ ಕೆಂಪು ಟೋಪಿಯದು. ಅದಕ್ಕೆ ಒಣ ಅಂಕಿಅಂಶಗಳಲ್ಲಿ ನಂಬಿಕೆಯಿಲ್ಲ. ‘ನನ್ನ ಗಟ್ ಫೀಲಿಂಗ್ ಪ್ರಕಾರ....’ ಎಂದು ಹೇಳುತ್ತೇವಲ್ಲ, ಮನಸ್ಸು-ಹೃದಯಗಳ ವ್ಯವಹಾರ ಅದರ ಕಡೆಗೆ ಕೆಂಪು ಟೋಪಿಯದು ಹೆಚ್ಚಿನ ಕ್ಷ್ಯ. ಹೃದಯ- ಕೆಂಪುಬಣ್ಣ ನೆನಪಿಟ್ಟುಕೊಳ್ಳಲಿಕ್ಕೆ ಸುಲಭ. ಕಪ್ಪು ಟೋಪಿಯ ಸಂಗತಿಯೇ ಬೇರೆ. ಅದು ಸೈತಾನನ ವಕೀಲ (devil's advocate) ಇದ್ದಂತೆ. ಪ್ರಶ್ನಿಸುತ್ತ ಹೋಗುವ ಬುದ್ಧಿ. ಯಾರಾದರೊಬ್ಬರು ಪರಿಹಾರವನ್ನು ಸೂಚಿಸಿದರೂ ಸುಲಭದಲ್ಲಿ ಒಪ್ಪಿಕೊಳ್ಳದೆ, ಆ ಪರಿಹಾರದ ಕೆಡುಕುಗಳೇನು, ಅದನ್ನು ಅನುಸರಿಸಿದ್ದೇ ಆದರೆ ದುಷ್ಪರಿಣಾಮಗಳೇನು, ಅದ್ಯಾಕೆ ಹಾಗೆ, ಇದ್ಯಾಕೆ ಹೀಗೆ ಎನ್ನುತ್ತ ಪ್ರಶ್ನೆ ಮೇಲೆ ಪ್ರಶ್ನೆ. ನಿರಾಶಾವಾದಿ ಎಂದರೂ ತಪ್ಪಲ್ಲ. ಕಪ್ಪು ಟೋಪಿ ಎಷ್ಟು ನಿರಾಶಾವಾದಿಯೋ ಅದಕ್ಕೆ ತದ್ವಿರುದ್ಧವಾಗಿ ಅಷ್ಟೇ ಪ್ರಮಾಣದಲ್ಲಿ ಆಶಾವಾದಿ ಹಳದಿ ಟೋಪಿ. ಸೂರ್ಯಕಾಂತಿ ಹೂವು ಹೇಗೆ ಸೂರ್ಯಾಭಿಮುಖಿಯಾಗಿಯೇ ಇರುತ್ತದೋ ಹಳದಿ ಟೋಪಿಯ ಚಿಂತನೆಯೂ ಸದಾ ಒಳ್ಳೆಯ ಅಂಶಗಳ ಮೇಲೆಯೇ. ಸಮಸ್ಯೆಯ ಪರಿಹಾರದಲ್ಲಿ ಪ್ರಯೋಜನಗಳೆಷ್ಟು, ಸುಧಾರಣೆಗೆ ಇನ್ನೂ ಹೆಚ್ಚಿನ ಅವಕಾಶಗಳೆಷ್ಟು, ಮುಂತಾಗಿ ಎಲ್ಲವೂ ಒಳ್ಳೆಯದೇ ದೃಷ್ಟಿಗೆ ಬೀಳುತ್ತದೆ ಹಳದಿ ಟೋಪಿಗೆ. ಇನ್ನು, ಹಸಿರು ಟೋಪಿಯದು ಸೃಜನಶೀಲ ಚಿಂತನೆ. ಹೊಸ ವಿಧಾನಗಳು, ಹೊಸ ಸಾಧ್ಯತೆಗಳು, ಹೊಸತನದ ಹರಿಕಾರ. ನಿಂತ ನೀರಿನಂತೆ ಸಮಸ್ಯೆಯ ಕೊಚ್ಚೆಯಲ್ಲೇ ಬಿದ್ದಿರುವುದು ಇದಕ್ಕೆ ಇಷ್ಟವಾಗದು. ಈ ಐದೂ ಟೋಪಿಗಳಿಗೆ ನಿಯಂತ್ರಕ ಅಥವಾ ನಿರ್ದೇಶಕನ ಪಾತ್ರ ವಹಿಸುವ ಜವಾಬ್ದಾರಿ ನೀಲಿ ಟೋಪಿಯದು. ನೀಲಾಕಾಶವನ್ನು ಅಥವಾ ನೀಲಿಬಣ್ಣದಲ್ಲಿ ಕಾಣುವ ಅಗಾಧ ಜಲರಾಶಿಯನ್ನು ಹೋಲಿಸಿ ಈ ಟೋಪಿಯ ಸಾರ್ವಭೌಮತ್ವವನ್ನು ನೆನಪಿಟ್ಟುಕೊಳ್ಳಬಹುದು. ಟೋಪಿಗಳ ಸಭೆ ನಡೆದದ್ದೇ ಆದರೆ ಅಧ್ಯಕ್ಷತೆ ನಿರ್ವಿವಾದವಾಗಿ ನೀಲಿ ಟೋಪಿಯದು. ಐಬಿಎಂ, ಬ್ರಿಟಿಷ್ ಏರ್ವೇಸ್, ಮೊಟರೊಲಾ, ಪೆಪ್ಸಿ, ಮೈಕ್ರೋಸಾಫ್ಟ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲಿಕ್ಕೆ, ಹಾಗೆಯೇ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಮನರಂಜನೆಯ ಆಟವಾಗಿಯೂ ‘ಆರು ಟೋಪಿಗಳ ಆಲೋಚನಾ ವಿಧಾನ’ವನ್ನು ಬಳಸುತ್ತಾರೆ. ಮಾನವ ಸಂಪನ್ಮೂಲದ ಪರಿಣಾಮಕಾರಿ ಬಳಕೆಗೆ ಇದೂ ಒಂದು ರೀತಿಯೆಂದು ಮನದಟ್ಟು ಮಾಡುತ್ತಾರೆ. ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ‘ಆರು ಟೋಪಿ ಆಲೋಚನಾ ವಿಧಾನ’ದಲ್ಲಿ ಪ್ರಾಜೆಕ್ಟುಗಳನ್ನೂ ಮಾಡಿಸುತ್ತಾರೆ. ಆದರೆ ಅದಷ್ಟಕ್ಕೇ ಅಲ್ಲ ಎಡ್ವರ್ಡ್ ಡೆಬೊನೊ ಈ ವಿಧಾನವನ್ನು ಪ್ರತಿಪಾದಿಸಿದ್ದು. ನಮ್ಮನಮ್ಮ ವೈಯಕ್ತಿಕ ಸಮಸ್ಯೆ-ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಾಗಲೂ ನಾವು ಆರು ಟೋಪಿ ವಿಧಾನವನ್ನು ಅನುಸರಿಸಬಹುದಾಗಿದೆ. ಟೋಪಿ ಹಾಕಿಕೊಳ್ಳಬೇಕಂತಲೂ ಇಲ್ಲ. ಆಯಾಯ ಬಣ್ಣದ ಟೋಪಿಯಂತೆ ಚಿಂತನೆ ಮಾಡಿದರಾಯಿತು, ಸಮಸ್ಯೆ ಸರಳವಾಗುತ್ತ ಹೋಗುತ್ತದೆ. ಅಷ್ಟೇಕೆ, ಸಮಸ್ಯೆ ಅಥವಾ ಸವಾಲು ಅಂತನಿಸಿಕೊಳ್ಳದ ಮಾಮೂಲಿ ಚಟುವಟಿಕೆಗಳಾದ ಪ್ರವಾಸ, ಪಿಕಿನಿಕ್ಗಳ ಆಯೋಜನೆಯಲ್ಲಿ ಸಹ ಆರು ಟೋಪಿ ಆಲೋಚನಾ ವಿಧಾನ ಉಪಯೋಗಕ್ಕೆ ಬರುತ್ತದೆ. ಪಿಕ್ನಿಕ್ ನಡೆಸುವ ಪಾರ್ಕ್ ಎಲ್ಲಿದೆ, ಎಷ್ಟು ದೊಡ್ಡದಿದೆ... ಬಿಳಿ ಟೋಪಿ. ಪಿಕ್ನಿಕ್ಗೆ ಯಾರನ್ನೆಲ್ಲ ಆಮಂತ್ರಿಸಿದರೆ ಚೆನ್ನಾಗಿರುತ್ತೆ... ಕೆಂಪು ಟೋಪಿ; ಪಿಕ್ನಿಕ್ ದಿನ ಮಳೆ ಬಂದರೇನು ಗತಿ?... ಕಪ್ಪು ಟೋಪಿ; ಪಿಕ್ನಿಕ್ನಲ್ಲಿ ಬೆಳಗಿಂದ ಸಂಜೆವರೆಗೂ ಸಂಭ್ರಮವೋ ಸಂಭ್ರಮ... ಹಳದಿ ಟೋಪಿ. ಎಲ್ಲರಿಗೂ ಖುಷಿಯಾಗುವಂತೆ ಹೊಸತೇನು ಮಾಡಬಹುದು?... ಹಸಿರು ಟೋಪಿ. ಪಿಕ್ನಿಕ್ನ ಓವರ್ಆಲ್ ಜವಾಬ್ದಾರಿ... ನೀಲಿ ಟೋಪಿ. ಕಳೆದ ವಾರದ ರಸಪ್ರಶ್ನೆಯ ಉತ್ತರ: ಅಯೊಡೆಕ್ಸ್. ಅಯ್ಯೋ ಗೊತ್ತಾಗ್ಲಿಲ್ವಲ್ಲ ಎಂದು ಈಗ ಕೈಕೈ ಹಿಸುಕಿಕೊಳ್ಳಬೇಡಿ. ಉಳುಕಿದರೆ ಅದೇ ಬೇಕಾದೀತು. ಅಂದಹಾಗೆ ಈವಾರದ ಲೇಖನಕ್ಕೆ ‘ಒಂದೇ ಬಣ್ಣದ ಟೋಪಿಯಾ?’ ಎಂಬ ಶೀರ್ಷಿಕೆ ಕೊಟ್ಟದ್ದು ಏಕಿರಬಹುದು? ಹಸಿರು ಟೋಪಿ ಧರಿಸಿ ಕ್ರಿಯೇಟಿವ್ ಆಗಿ ಆಲೋಚಿಸಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.