Episodes
Saturday May 05, 2012
Soma Cube
Saturday May 05, 2012
Saturday May 05, 2012
ದಿನಾಂಕ 6 ಮೇ 2012ರ ಸಂಚಿಕೆ...
ಸೋಮರಸವಲ್ಲ ಸೋಮ ಘನ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ರೂಬಿಕ್ಸ್ ಕ್ಯೂಬ್ ಎಂಬ ಸಮಸ್ಯಾಪೂರಣ ಆಟಿಗೆಯ ಹೆಸರನ್ನು ನೀವು ಕೇಳಿರಬಹುದು. ನಿಮ್ಮಲ್ಲಿ ಕೆಲವರು ಅದನ್ನು ಆಡಿರಲೂಬಹುದು. ಘನಾಕೃತಿಯ ಆರು ಮೇಲ್ಮೈಗಳಿಗೆ ಆರು ಬಣ್ಣಗಳ ಜೋಡಣೆಯಲ್ಲಿ ನೀವು ಪರಿಣತರೂ ಇರಬಹುದು. ರೂಬಿಕ್ಸ್ ಕ್ಯೂಬ್ನಷ್ಟು ಜನಪ್ರಿಯವಾಗಿರದ, ಆದರೆ ಅಷ್ಟೇ ಸ್ವಾರಸ್ಯಕರವಾದ, ಅದರಂತೆಯೇ ಸಮಸ್ಯಾಪೂರಣದ ಸವಾಲೊಡ್ಡುವ ಇನ್ನೊಂದು ಆಟಿಗೆ ಇದೆ. ಸೋಮ ಘನ ಎಂದು ಅದರ ಹೆಸರು. ಇವತ್ತಿನ ಅಂಕಣದಲ್ಲಿ ಈ ಸ್ವಾರಸ್ಯಕರ ಆಟಿಗೆಯ ಪರಿಚಯ ಮಾಡಿಕೊಳ್ಳೋಣ. ಮುಖ್ಯವಾಗಿ ಅದಕ್ಕೆ ‘ಸೋಮ’ ಎಂಬ ಹೆಸರೇಕೆ ಬಂತೆಂದು ತಿಳಿದುಕೊಳ್ಳೋಣ. ಸೋಮ ಘನ ರೂಪುಗೊಂಡಿರುವುದು ಒಟ್ಟು ಏಳು ತುಂಡುಗಳಿಂದ. ಚಿತ್ರದಲ್ಲಿ ತೋರಿಸಿದಂತೆ ಏಳು ತುಂಡುಗಳೂ ತಮ್ಮೊಳಗೇ ಪುಟ್ಟಪುಟ್ಟ ಘನಾಕೃತಿಗಳ ಜೋಡಣೆಗಳು. ಒಂದರಲ್ಲಿ ಮೂರು ಘನಾಕೃತಿಗಳಿದ್ದರೆ ಮಿಕ್ಕ ಆರರಲ್ಲಿ ತಲಾ ನಾಲ್ಕು ಘನಾಕೃತಿಗಳ ಜೋಡಣೆಯಿದೆ. ಈ ಏಳು ತುಂಡುಗಳನ್ನು ಒಂದಕ್ಕೊಂದು ಜೋಡಿಸಿ ಪೂರ್ಣ ಘನಾಕೃತಿ ಆಗುವಂತೆ ಮಾಡಬೇಕು. ಅಷ್ಟೇ ಸಮಸ್ಯೆ. ಅದೇನು ಮಹಾ ಅಂತನಿಸುವಷ್ಟು ಸುಲಭವಾಗಿ ತೋರುತ್ತದೆ. ಆದರೆ ತುಂಡುಗಳನ್ನು ಜೋಡಿಸುತ್ತ ಹೋದಂತೆ ಸಮಸ್ಯೆ ನಾವೆಣಿಸಿದ್ದಕ್ಕಿಂತ ಜಟಿಲವಿದೆ ಅನಿಸುತ್ತದೆ. ಸೋಜಿಗವೆಂದರೆ ಏಳು ತುಂಡುಗಳನ್ನು ಪೂರ್ಣ ಘನಾಕೃತಿಯಾಗಿ ಜೋಡಿಸುವ ವಿಧಾನ, ಅಂದರೆ ಸೋಮ ಘನ ಸಮಸ್ಯೆಯ ಪರಿಹಾರ, ಬರಿ ಒಂದೇ ರೀತಿಯದಲ್ಲ. ಬೇರೆಬೇರೆ ರೀತಿಯಲ್ಲಿ ಅದೇ ಏಳು ತುಂಡುಗಳನ್ನು ಜೋಡಿಸಿ ಪೂರ್ಣ ಘನಾಕೃತಿಯಾಗಿಸುವುದು ಸಾಧ್ಯವಿದೆ. ಅಷ್ಟಿದ್ದರೂ ಒಂದು ರೀತಿಯೂ ನಮಗೆ ಬರುವುದಿಲ್ಲವಲ್ಲ ಎಂದು ಹತಾಶೆ, ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇನೆಂಬ ಛಲ- ಸೋಮ ಘನ ಎಡಿಕ್ಟಿವ್ ಆಗುವುದು ಅದೇ ಕಾರಣಕ್ಕೆ. ಸೋಮ ಘನದ ಮೂಲ ಕಲ್ಪನೆ ಮೂಡಿದ್ದು ಡೆನ್ಮಾರ್ಕ್ ದೇಶದ ಪೀಟ್ ಹೆಯ್ನ್ ಎಂಬ ಸಂಶೋಧಕನಿಗೆ. ಆತ ಕವಿ, ತತ್ತ್ವಜ್ಞಾನಿ, ವಿಜ್ಞಾನಿ, ಎಂಜಿನಿಯರ್ ಹೀಗೆ ಬಹುಮುಖ ಪ್ರತಿಭೆಯವನು. ಯೂರೋಪ್ನ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಭೌತಶಾಸ್ತ್ರ ವಿಚಾರಸಂಕಿರಣಗಳಲ್ಲಿ ಪೀಟ್ ಭಾಗವಹಿಸುತ್ತಿದ್ದ. ಒಮ್ಮೆ ಖ್ಯಾತ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ ವರ್ನರ್ ಹೈಸನ್ಬರ್ಗ್ನ ಉಪನ್ಯಾಸ ನಡೆದಿತ್ತು. ಘನ ವಿಚಾರಧಾರೆಗಳು ಒಂದಾದ ಮೇಲೊಂದು ಸಾಗಿದ್ದವು. ಭಾಷಣ ಕೇಳುತ್ತ ಸುಮ್ಮನೆ ಕುಳಿತುಕೊಳ್ಳಲೊಲ್ಲದ ಪೀಟ್ ಮನಸ್ಸಿನಲ್ಲಿ ಘನಾಕೃತಿಗಳದೇ ಗುಂಗಿಹುಳ. ಆಗ ಹೊಳೆದದ್ದೇ ಸೋಮ ಘನ. ಭಾಷಣ ಕೇಳುತ್ತಿರುವಾಗಲೇ ಕಾಗದದಲ್ಲಿ ಪೆನ್ಸಿಲ್ನಿಂದ ರೇಖಾಕೃತಿ ರಚಿಸಿ ಅದನ್ನು ಕತ್ತರಿಸಿ ಪುಟ್ಟ ಘನಾಕೃತಿಗಳನ್ನು ಮಾಡಿಕೊಂಡ ಪೀಟ್ ಭಾಷಣ ಮುಗಿಯುವ ವೇಳೆಗೆ ಅಂತಹ ಏಳು ತುಂಡುಗಳ ಜೋಡಣೆಯಿಂದ ಪೂರ್ಣ ಘನಾಕೃತಿಯನ್ನು ರೂಪಿಸುವುದು ಸಾಧ್ಯ ಎಂಬ ತೀರ್ಮಾನಕ್ಕೆ ಬಂದಿದ್ದ! ಪೀಟ್ನ ಚಟುವಟಿಕೆಯನ್ನು ಉಪನ್ಯಾಸಕಾರ ಹೈಸನ್ಬರ್ಗ್ ಗಮನಿಸದೇ ಇದ್ದದ್ದು ಅವನ ಪುಣ್ಯ. 1933ರಲ್ಲಿ ಪೀಟ್ ಹೆಯ್ನ್ ತನ್ನ ಸೋಮ ಘನ ಸಂಶೋಧನೆಯ ಪೇಟಂಟ್ಗೆ ಅರ್ಜಿ ಸಲ್ಲಿಸಿದ. ಅವನ ಹೊಸ ಆಟಿಗೆ ಡೆನ್ಮಾರ್ಕ್ನಲ್ಲಿ ಹೊಸ ಕ್ರೇಜ್ ಹುಟ್ಟಿಸಿತು. ಆದರೂ ಬೇರೆಡೆಗಳಲ್ಲಿ ಅದು ಅಷ್ಟೇನೂ ಕಾಣಿಸಿಕೊಳ್ಳಲಿಲ್ಲ. 1958ರಲ್ಲಿ ಅಮೆರಿಕದ ಪ್ರಖ್ಯಾತ ಗಣಿತಜ್ಞ ಮಾರ್ಟಿನ್ ಗಾರ್ಡನರ್ ಸೋಮ ಘನದ ಕುರಿತು ಸೈಂಟಿಫಿಕ್ ಅಮೆರಿಕನ್ ಮ್ಯಾಗಜಿನ್ನಲ್ಲಿ ಸಚಿತ್ರ ಲೇಖನ ಬರೆದ. ಅಮೆರಿಕದ ಆಟಿಗೆಗಳ ತಯಾರಕ ಕಂಪನಿ ಪಾರ್ಕರ್ ಬ್ರದರ್ಸ್ 1969ರಲ್ಲಿ ಸೋಮ ಘನದ ಆಕರ್ಷಕ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆಮೇಲೆ ಸೋಮ ಘನ ಒಂದು ಆಟಿಗೆಯಾಗಿ ಪಾಶ್ಚಾತ್ಯ ದೇಶಗಳಲ್ಲಿ ಸಾಕಷ್ಟು ಪ್ರಸಿದ್ಧವಾಯ್ತು. ಸೋಮ ಘನದ ಮೂಲ ಘಟಕಗಳು ಏಳು ಪ್ರತ್ಯೇಕ ತುಂಡುಗಳು ಎಂದಿದ್ದೆನಷ್ಟೆ? ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಪ್ರತಿಯೊಂದು ತುಂಡಿನಲ್ಲೂ ತಲಾ ಮೂರು ಘನಗಳಿಂದಾದ ಇಂಗ್ಲಿಷ್ ಎಲ್ ಅಕ್ಷರಾಕಾರದ ಜೋಡಣೆಯಿದೆ. ಏಳರ ಪೈಕಿ ಒಂದು ತುಂಡು ಮಾತ್ರ ಮೂರೇ ಘನಗಳ ಎಲ್ ಜೋಡಣೆ. ಉಳಿದ ಆರರಲ್ಲಿ ಎಲ್ ಆಕೃತಿಗೆ ತಾಗಿಕೊಂಡು ಇನ್ನೊದು ಘನವೂ ಇರುತ್ತದೆ. ಎಲ್ಲ ಸೇರಿ ೨೭ ಪುಟ್ಟ ಘನಾಕೃತಿಗಳು. ಅವುಗಳನ್ನು 3x3x3 ರೀತಿಯಲ್ಲಿ ಜೋಡಿಸಿದರೇನೇ ಪೂರ್ಣ ಘನಾಕೃತಿ ಆಗುವುದು. ಪೀಟ್ ಹೆಯ್ನ್ಗೆ ಮೊದಲು ಹೊಳೆದದ್ದು ಈ ಏಳು ತುಂಡುಗಳ ಕಲ್ಪನೆಯೇ ಹೊರತು ಅವುಗಳನ್ನು ಜೋಡಿಸಿ ಪೂರ್ಣ ಘನಾಕೃತಿ ಮಾಡಬಹುದೆಂಬ ಸಂಗತಿಯಲ್ಲ. ಆದರೆ ಮತ್ತೆಮತ್ತೆ ಆ ಏಳು ತುಂಡುಗಳನ್ನು ಜೋಡಿಸುವ ಪ್ರಯತ್ನದಲ್ಲಿ ಒಮ್ಮೆ ಅಕಸ್ಮಾತ್ತಾಗಿ ಪೂರ್ಣ ಘನಾಕೃತಿ ಮೈದಳೆಯಿತು! ಒಂದೇ ರೀತಿಯಲ್ಲಲ್ಲ 240 ಬೇರೆಬೇರೆ ರೀತಿಗಳಲ್ಲಿ ಪೂರ್ಣ ಘನಾಕೃತಿಯನ್ನು ರೂಪಿಸಬಹುದೆಂಬ ಅರಿವಾದಾಗಂತೂ ಪೀಟ್ನ ಸಂತಸಕ್ಕೆ ಪಾರವೇ ಇಲ್ಲ. ಪೀಟ್ನ ಸಮಕಾಲೀನ ಗಣಿತಜ್ಞರಿಗೂ ಸೋಮ ಘನದಲ್ಲಿ ಆಸಕ್ತಿ ಹುಟ್ಟಿತು. ಜಾನ್ ಹಾರ್ಟನ್ ಕಾನ್ವೆ ಎಂಬೊಬ್ಬ ಗಣಿತಜ್ಞ ಸೋಮ ಘನದ 240 ವಿನ್ಯಾಸರೀತಿಗಳ ಪರಸ್ಪರ ಸಂಬಂಧಗಳನ್ನು ಗಣಿತರೀತ್ಯಾ ವಿಶ್ಲೇಷಿಸಿದ. ಅದನ್ನು ‘ಸೋಮ್ಯಾಪ್’ ಎಂದು ಕರೆದ. ಆ ಸರಣಿಯಲ್ಲಿನ ಒಂದು ವಿನ್ಯಾಸವನ್ನು ಅರ್ಥ ಮಾಡಿಕೊಂಡರೆ ಸಾಕು ಅದರ ನಂತರದ್ದೂ ಸುಲಭವಾಗುತ್ತದೆ. ಏಕೆಂದರೆ ವಿನ್ಯಾಸಗಳಲ್ಲಿನ ಅಂತರವು ಹೆಚ್ಚೆಂದರೆ ಮೂರು ತುಂಡುಗಳ ಅದಲುಬದಲಿನಿಂದ ಆಗಿದ್ದಿರುತ್ತದೆ. ಎಲ್ಲ ೨೪೦ ವಿನ್ಯಾಸಗಳನ್ನು ಕಂಡುಕೊಳ್ಳುವುದು ಒಂದು ಸವಾಲಾದರೆ ಸೋಮ ಘನದ ಏಳು ತುಂಡುಗಳಿಂದ ಪೂರ್ಣ ಘನಾಕೃತಿಯಲ್ಲದ ಬೇರೆ ಹಲವಾರು ವಿನ್ಯಾಸಗಳನ್ನು ರಚಿಸುವುದೂ ಮೋಜಿನ ಸಂಗತಿ. ಒಟ್ಟಿನಲ್ಲಿ ಅಗೆವ ಬುದ್ಧಿಗೆ ಅನಂತ ಅವಕಾಶ. ಸೈಂಟಿಫಿಕ್ ಅಮೆರಿಕನ್ ನಿಯತಕಾಲಿಕವು ಸೋಮ ಘನದ ಬಗ್ಗೆ ಲೇಖನಗಳನ್ನು ಪ್ರಕಟಿಸಿದ ಮೇಲೆ ಅದರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೋಪಕರಣವಾಗಿ ಸೋಮ ಘನಗಳನ್ನು ರಚಿಸಿದರು. ಮನೋವೈದ್ಯರು ರೋಗಿಗಳ ವಿವೇಚನಾಶಕ್ತಿಯನ್ನು ಅಳೆಯಲು ಸೋಮ ಘನಗಳನ್ನು ಬಳಸತೊಡಗಿದರು. ಒಂಟಿತನದ ಆಲಸ್ಯ ಪರಿಹಾರಕ್ಕೆಂದು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೋಮ ಘನಗಳನ್ನು ಕೊಡುವ ಪರಿಪಾಟ ಆರಂಭವಾಯಿತು. ಸೋಮ ಘನಗಳು ಕ್ರಿಸ್ಮಸ್ ಉಡುಗೊರೆಗಳಾದವು. ಸ್ನೇಹಸೌಹಾರ್ದತೆಗಳ ಸಂಕೇತವಾದವು. ಸರಿ, ಆಟಿಗೆಯ ಹೆಸರಿನಲ್ಲಿ ‘ಸೋಮ’ ಎಲ್ಲಿಂದ ಬಂತು? ಅದು ನಮ್ಮ ಭಾರತೀಯ ಸನಾತನ ಸಂಸ್ಕೃತಿಯದ್ದೇ! ಸೋಮ ಎಂಬ ಸಂಸ್ಕೃತ ಪದವನ್ನೇ ಪೀಟ್ ಹೆಯ್ನ್ ತನ್ನ ಸಂಶೋಧನೆಯ ಹೆಸರಿಗೆ ಬಳಸಿದ್ದು. ಆಗಲೇ ಹೇಳಿದಂತೆ ಆತ ತತ್ತ್ವಜ್ಞಾನಿಯೂ ಆಗಿದ್ದರಿಂದ ಅವನಿಗೆ ಭಾರತೀಯ ಸಂಸ್ಕೃತಿಯ, ಸಂಸ್ಕೃತ ಭಾಷೆಯ ಪರಿಚಯ ಚೆನ್ನಾಗಿ ಇತ್ತು. ಜೀವವೈವಿಧ್ಯ ಮತ್ತು ಸೃಷ್ಟಿಯ ಪ್ರಚ್ಛನ್ನ ಶಕ್ತಿಯನ್ನು ‘ಸೋಮ’ ಎಂದು ಗುರುತಿಸಬಹುದು, ತನ್ನ ಆಟಿಗೆಯ ಅಗಾಧತೆಯನ್ನು ಆ ಪದ ಸಮರ್ಥವಾಗಿ ಪ್ರತಿನಿಧಿಸಬಲ್ಲದು ಎಂದು ಪೀಟ್ನ ಅಂಬೋಣ. ಅಂತೆಯೇ ‘ಸೋಮ’ ಎನ್ನುವುದು ವೇದಗಳ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಒಂದು ಪೇಯ ಪದಾರ್ಥ. ‘ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ’ ಎಂದು ಬರುತ್ತದೆ ವೇದಮಂತ್ರಗಳಲ್ಲಿ. ಸೋಮ ಬರಿ ಪೇಯವಲ್ಲ, ನಶೆಯೇರಿಸುವಂಥದ್ದು. ತಾನು ಕಂಡುಹಿಡಿದ ಆಟಿಗೆಯೂ ಅದೇರೀತಿ ಅಮಲೇರಿಸುವಂಥದ್ದು ಎನ್ನುವುದು ‘ಸೋಮ’ ಹೆಸರಿಗೆ ಪೀಟ್ ಹೆಯ್ನ್ ಸಮರ್ಥನೆ. ಕಾಕತಾಳೀಯವಾಗಿ, 1930ರ ಆಸುಪಾಸಿನಲ್ಲೇ, ಆಲ್ಡಸ್ ಹಕ್ಸ್ಲೇ ಎಂಬಾತ ಬರೆದ ‘ಬ್ರೇವ್ ನ್ಯೂ ವರ್ಲ್ಡ್’ ಎಂಬ ವೈಜ್ಞಾನಿಕ ಕಾದಂಬರಿಯಲ್ಲೂ ‘ಸೋಮ’ ಪದ ಪ್ರಸ್ತಾಪವಾಗಿತ್ತಂತೆ. ಅಲ್ಲಿ ಅದನ್ನೊಂದು ಅಡ್ಡ ಪರಿಣಾಮಗಳಿಲ್ಲದ ಮಾದಕ ಪೇಯ ಎಂಬರ್ಥದಲ್ಲಿ ವಿವರಿಸಲಾಗಿತ್ತು. ಅತಿಯಾದ ಸಂಭ್ರಮದಲ್ಲೂ, ಒಂಟಿತನದ ಬೇಸರದಲ್ಲೂ ಬಳಸಬಹುದಾದ ಪೇಯ ಎಂದು ಬಣ್ಣಿಸಲಾಗಿತ್ತು. ಪೀಟ್ ಹೆಯ್ನ್ನ ಹೊಸ ಆಟಿಗೆಯೂ ಅದೇ ಗುಣಸ್ವಭಾವದ್ದೆಂದು ಕಂಡುಕೊಂಡ ಜನರು ‘ಸೋಮ’ ಎಂಬ ಹೆಸರನ್ನು ಸುಲಭವಾಗಿ ಅರ್ಥೈಸಿಕೊಂಡರು. ಇದಿಷ್ಟನ್ನು ಓದಿದ ಮೇಲೆ ಸೋಮ ಘನವನ್ನು ಒಂದು ಕೈ ನೋಡಬೇಕು ಎಂದು ನಿಮಗೆ ಅನಿಸಿದರೆ ಅಚ್ಚರಿಯಿಲ್ಲ. ಭಾರತದಲ್ಲಿ ಆಟಿಗೆ ಅಂಗಡಿಗಳಲ್ಲಿ ಸೋಮ ಘನ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಸೋಮ ಘನದ ಏಳು ತುಂಡುಗಳನ್ನು ರಟ್ಟಿನಿಂದ, ಕಟ್ಟಿಗೆಯಿಂದ ಸ್ವಂತ ತಯಾರಿಸಿಕೊಳ್ಳಬಹುದು. ಅಂತರಜಾಲದಲ್ಲಿ Soma cube ಎಂದು ಹುಡುಕಿದರೆ ಸಂಪನ್ಮೂಲಗಳು ಧಾರಾಳ ಸಿಗುತ್ತವೆ. ಒಮ್ಮೆ ಸೋಮ ಘನದ ಮೇಲೆ ಕೈಯಾಡಿಸಿದಿರೋ ಆಮೇಲೆ ನಿಮಗೆ ಅದನ್ನು ಬಿಡುವ ಮನಸ್ಸಾಗಲಿಕ್ಕಿಲ್ಲ. ನಿಜವಾಗಿ ಸೋಮರಸವನ್ನು ಸೇವಿಸಿ ಗೊತ್ತಿಲ್ಲದಿದ್ದರೂ ಅದರ ಕಿಕ್ ಹೀಗೆಯೇ ಇದ್ದಿರಬಹುದೆಂದು ತೋರಿಸುವಷ್ಟು ಕಿಕ್ ಸೋಮ ಘನಕ್ಕಿದೆ. ಒಮ್ಮೆ ಪ್ರಯತ್ನಿಸಿ ನೋಡಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.