Episodes
Saturday Jul 23, 2011
The joy of reading continues
Saturday Jul 23, 2011
Saturday Jul 23, 2011
ದಿನಾಂಕ 24 ಜುಲೈ 2011ರ ಸಂಚಿಕೆ...
ಪುಸ್ತಕವೆಂದರೆ ಜೇಬಿನೊಳಗಿನ ಉದ್ಯಾನವನ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]ಕೈಬೀಸಿ ಕರೆದಿಹುದು ಸಾಹಿತ್ಯ ತೋಟ ಕಣ್ಸೆಳೆಯೆ ದಕ್ಕುವುದು ತಂಪಿನ ನೋಟ ಹಣ್ಣುಂಟು ಕಾಯುಂಟು ಹೀಚುಗಾಯಿಗಳು ಕಂಪನ್ನು ಚೆಲ್ಲುವ ಬಗೆಬಗೆಯ ಹೂಗಳು
ಕುವೆಂಪು ಬೇಂದ್ರೆಯಿಹ ಕನ್ನಡವೇ ಚೆನ್ನ ಮಂಕುತಿಮ್ಮನ ನೀನು ಮರೆಯಬೇಡಣ್ಣ ಅನಕೃ ತರಾಸು ತೇಜಸ್ವಿ ಜೊತೆಗೆ ಬಲ್ಲಾಳ ಕಾರಂತ ಚಿತ್ತಾಲರೆಡೆಗೆ
ತ್ರಿವೇಣಿ ಸಾಯಿಸುತೆ ಇಂದಿರೆಯ ನೆನೆದು ವೈದೇಹಿ ಅನುಪಮಾ ಸುಧೆಯನ್ನು ಮೊಗೆದು ಭೈರಪ್ಪ ಪುತಿನ ಮಾಸ್ತಿ ಗೊರೂರು ಸರಸತಿಯ ಮಕ್ಕಳಿಗೆ ಸಾಟಿ ಯಾರಿಹರು
ಬಂಡಾಯ ಕಹಳೆಯ ಸಿದ್ಧಲಿಂಗಯ್ಯ ಗಾಂಧಿಕ್ಲಾಸಿನ ಕುಂವೀ ನಮ್ಮವರೇ ಅಯ್ಯಾ ವಿವೇಕ ಜಯಂತ ವಸುಧೇಂದ್ರ ಇಷ್ಟ ಓದದೇ ಉಳಿದರೆ ನಮಗೆಯೇ ನಷ್ಟ...‘ಸಾಹಿತ್ಯಿಕ ಓದಿನ ಗೀಳನ್ನು ಇನ್ನಾದರೂ ಬೆಳೆಸಿಕೊಳ್ಳಬೇಕು’ ಎಂಬ ನನ್ನ ನಿರ್ಧಾರವನ್ನು ಶಿಕಾಗೋದಲ್ಲಿರುವ ಸ್ನೇಹಿತೆ ತ್ರಿವೇಣಿ ಶ್ರೀನಿವಾಸ ರಾವ್ ಸ್ವಾಗತಿಸಿದ್ದು ಹೀಗೆ! ಕಳೆದ ವಾರದ ಅಂಕಣವನ್ನು ಓದಿದ ಕೂಡಲೇ ಮನದಲ್ಲಿ ಮೂಡಿದ ಆಶುಕವಿತೆಯಾಗಿ ಇದನ್ನವರು ಬರೆದು ಕಳಿಸಿದ್ದಾರೆ. ಬೇಂದ್ರೆಯವರಿಂದ ಹಿಡಿದು ವಸುಧೇಂದ್ರವರೆಗೆ, ಸಾಯಿಸುತೆಯಿಂದ ಹಿಡಿದು ಸುಧಾಮೂರ್ತಿವರೆಗೆ ಕನ್ನಡ ಸಾಹಿತ್ಯಲೋಕದ ಮುತ್ತುಗಳನ್ನು ಪೋಣಿಸಿ ಸೊಗಸಾದ ಮಾಲೆ ಕಟ್ಟಿದ್ದಾರೆ. ಎಷ್ಟು ಚೆನ್ನಾಗಿದೆ ಅಲ್ಲವೇ? ತ್ರಿವೇಣಿ ಇದನ್ನು ಬರೀ ಸ್ತುತಿಗೀತೆಯಾಗಿ ಹೇಳಿದ್ದಲ್ಲ. ಈ ಎಲ್ಲ ಮಹಾನ್ ಸಾಹಿತಿಗಳ ಅನೇಕ ಕೃತಿಗಳನ್ನು ಅವರು ಓದಿ ಆನಂದಿಸಿದ್ದಾರೆ. ಅಷ್ಟೇಅಲ್ಲ, ಅವರು ಸ್ವತಃ ಓರ್ವ ಬರಹಗಾರ್ತಿ. ಹಿರಿಯ ‘ತ್ರಿವೇಣಿ’ಯವರ ಜಾಡಲ್ಲಿ ಹೆಜ್ಜೆಯಿಟ್ಟವರು. ಚಂದದ ಕಥೆ, ಕವಿತೆ, ಲಲಿತಪ್ರಬಂಧಗಳನ್ನೂ ಬರೆಯುತ್ತಾರೆ. ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯಿಕ ಓದು ಅವರ ಚಿಂತನಾಶಕ್ತಿಯನ್ನು ಪಕ್ವವಾಗಿಸಿದೆ. ಬರವಣಿಗೆಯಲ್ಲಿನ ಸತ್ವವನ್ನು ಹೆಚ್ಚಿಸಿದೆ. ಅಂದಮೇಲೆ ಸಾಹಿತ್ಯ ತೋಟಕ್ಕೆ ಸ್ವಾಗತ ಕೋರಿರುವ ತ್ರಿವೇಣಿಯವರ ಆಶಯಕ್ಕೆ ಹೆಚ್ಚು ಬೆಲೆ. ಸಾಹಿತ್ಯಿಕ ಓದನ್ನು ಇನ್ನೂ ಹೆಚ್ಚುಹೆಚ್ಚು ಜನರು ರೂಢಿಸಿಕೊಳ್ಳುವುದಕ್ಕೆ ಅವರ ಈ ಆಶುಕವಿತೆಯೇ ಒಂದು ಸ್ಫೂರ್ತಿ ಸೆಲೆ. ಹಾಂ! ತೋಟ ಎಂದೊಡನೆ ನೆನಪಾಯ್ತು, A book is like a garden carried in the pocket" ಅಂತ ಒಂದು ಚೈನೀಸ್ ನಾಣ್ಣುಡಿಯಿದೆ. ಪುಸ್ತಕವೆಂದರೆ ಜೇಬಿನೊಳಗೇ ಒಂದು ಪುಟ್ಟ ಉದ್ಯಾನವಿದ್ದಂತೆ. ಆಗಾಗ ಓದಿಕೊಂಡರೆ (ವಾಯುವಿಹಾರಕ್ಕೆ ಮನಸ್ಸನ್ನು ಒಡ್ಡಿಕೊಂಡರೆ) ಆಹ್ಲಾದ ಮತ್ತು ಆನಂದ. ಮೆದುಳಿಗೂ ಅಷ್ಟಿಷ್ಟು ವ್ಯಾಯಾಮ. ನಿಜಕ್ಕೂ ಬಹಳ ಅರ್ಥಗರ್ಭಿತವಾಗಿದೆ ಈ ನಾಣ್ಣುಡಿ. ಅದೇನೇ ಇರಲಿ ಓದಿನ ಹಿರಿಮೆಯನ್ನು ಮತ್ತು ಪುಸ್ತಕಗಳ ಗರಿಮೆಯನ್ನು ನಿಮಗೆ, ಅದರಲ್ಲೂ ನಾನು, ತಿಳಿಸುವುದೇನಿದೆ? ಆದರೆ ಭಾರತದಿಂದ ಹಿಂದಿರುಗುವಾಗ ಸೂಟ್ಕೇಸ್ ತುಂಬಾ ಪುಸ್ತಕಗಳನ್ನು ಹೊತ್ತುಕೊಂಡು ಬಂದಿದ್ದೇನೆ, ಅವು ಯಾವುವಂತ ತಿಳಿಸುತ್ತೇನೆ ಎಂದಿದ್ದೆನಷ್ಟೆ, ಅದನ್ನೇ ಈಗ ಮಾಡುತ್ತೇನೆ. ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು- ಕೆ.ವಿ.ಸುಬ್ಬಣ್ಣ ನೆನಪಿನಲ್ಲಿ ಅಕ್ಷರ ಪ್ರಕಾಶನ ಹೊರತಂದ ‘ಮೊದಲ ಓದು’ ಪುಸ್ತಕಮಾಲೆ- ನನ್ನಂಥವರಿಗೆ ಹೇಳಿ ಮಾಡಿಸಿದ ಪುಸ್ತಕಗಳಿವು. ಒಂದೊಂದರಲ್ಲೂ ನೂರಎಂಟು ಪುಟಗಳು. ಆ ಸರಣಿಯಲ್ಲಿ ಒಟ್ಟು ಐವತ್ತು ಪುಸ್ತಕಗಳಿವೆಯಂತೆ. ಆದಿಕವಿ ಪಂಪನಿಂದ ಹಿಡಿದು ಈಗಿನ ಅನಂತಮೂರ್ತಿವರೆಗೂ ವಿವಿಧ ಲೇಖಕರ ಬರಹಗಳ ಸಂಗ್ರಹ. ಪ್ರಾತಿನಿಧಿಕವಾಗಿ ನನಗೆ ‘ನಾಗೇಶ ಹೆಗಡೆ ಅವರ ಆಯ್ದ ಬರಹಗಳು’ ಪುಸ್ತಕ ಸಿಕ್ಕಿದೆ. ಬಹಳ ಚೆನ್ನಾಗಿದೆ. ಇನ್ನೊಂದು ಪುಸ್ತಕ ನನ್ನ ಓದಿನ ಆರಂಭಕ್ಕೆ ಸರಿಯಾಗಿಯೇ ಇದೆ ಅಂತನಿಸಿದ್ದು ‘ಗಾಂಧೀಜಿಯವರ ಸಂಕ್ಷಿಪ್ತ ಆತ್ಮಕಥನ’ ಎಂಬ ಪುಸ್ತಕ. ಇದನ್ನು ಸುಮಾರಾಗಿ ಹೈಸ್ಕೂಲ್ ವಿದ್ಯಾರ್ಥಿಗಳ ಮಟ್ಟಕ್ಕಾಗುವಂತೆ ಬರೆಯಲಾಗಿದೆ. ಇದರ ಲೇಖಕಿ ಎಚ್.ಎಲ್.ಸೀತಾದೇವಿ. ಅವರ ಹೆಸರನ್ನು ನೀವೂ ಕೇಳಿಯೇ ಇರುತ್ತೀರಿ- ಎಂಬತ್ತರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ ಓದುತ್ತಿದ್ದರು. ಆಮೇಲೆ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿಸಂಪಾದಕಿಯೂ ಆಗಿದ್ದರಂತೆ. ನನಗೆ ಪರಾಗಸ್ಪರ್ಶ ಓದುಗರಾಗಿ ಇ-ಪರಿಚಿತರಾದರು, ವಿಶ್ವಾಸಪೂರ್ವಕವಾಗಿ ಪುಸ್ತಕ ಕೊಟ್ಟು ನನ್ನ ಓದಿಗೆ ಪ್ರೇರಕರಾದರು. ಸೀತಾದೇವಿಯ ವಿಚಾರ ಅದಾದರೆ, ಸೀತೆಯನ್ನು ಕುರಿತ ‘ಸೀತಾಂತರಂಗ’ ಎಂಬ ತಮ್ಮ ಕೃತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ ಬೆಂಗಳೂರಿನ ಡಾ.ಜಯಂತಿ ಮನೋಹರ್. ಈ ಕಥಾನಕವು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತಂತೆ. ಮತ್ತೆ, ಸುಧಾದಲ್ಲಿಯೇ ತುಂಬ ವರ್ಷಗಳ ಹಿಂದೆ ಬರುತ್ತಿದ್ದ ‘ಕಜ್ಜಾಯ’ದ ಪುಸ್ತಕರೂಪವೂ ನನಗೆ ಉಡುಗೊರೆಯಾಗಿ ಸಿಕ್ಕಿದೆ, ಸ್ವತಃ ಸುನಂದಾ ಬೆಳಗಾಂವಕರ್ ಅವರಿಂದಲೇ! ಕಾದಂಬರಿ ಓದುವವರಿಗಾದರೆ ಆಮೇಲೆ ಅದು ಚಲನಚಿತ್ರವಾಗಿ ಬಂದಾಗ ಹೇಗಿದೆ ಎಂದು ನೋಡುವ ಕುತೂಹಲ ಇರುತ್ತದೆ. ನನಗಾದರೋ ಈಗ ತದ್ವಿರುದ್ಧ ಅನುಭವ ಆಗುವುದಿದೆ- ಮೊನ್ನೆ ಬೆಂಗಳೂರಿನಲ್ಲಿದ್ದಾಗ ‘ಬೆಟ್ಟದ ಜೀವ’ ಸಿನೆಮಾ ನೋಡಿದೆ, ಇಷ್ಟ ಆಯ್ತು. ಈಗಿನ್ನು ಶಿವರಾಮ ಕಾರಂತರ ಮೂಲ ಕಾದಂಬರಿಯನ್ನು ಓದಬೇಕೂಂತಿದ್ದೇನೆ. ಹಿರಿಯ ಮಿತ್ರ ಎಸ್.ಎಂ.ಪೆಜತ್ತಾಯ ಅವರು ಕಳೆದವರ್ಷವೇ ಆ ಪುಸ್ತಕವನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದರು, ಓದುವ ಮುಹೂರ್ತ ಕೂಡಿಬಂದಿರಲಿಲ್ಲ ಅಷ್ಟೇ. ಈರೀತಿ ಓದಿಗೆ ಕಾಯುತ್ತಿರುವ ಕಾದಂಬರಿಗಳು ಈಗ ನನ್ನ ಬಳಿ ಇನ್ನೂ ಕೆಲವಿವೆ. “ಒಳ್ಳೆಯ ಪುಸ್ತಕ, ಓದಿ!” ಎಂದು ಸ್ನೇಹಿತರು ಕೊಟ್ಟಿರುವಂಥವು- ಕೆ.ವಿ.ಅಯ್ಯರ್ ಅವರ ‘ರೂಪದರ್ಶಿ’, ಅನಂತಮೂರ್ತಿ ಅವರ ‘ಸಂಸ್ಕಾರ’, ತರಾಸು ಅವರ ‘ಹಂಸಗೀತೆ’; ಇನ್ನುಳಿದವು ಕಾದಂಬರಿಕಾರರೇ ಕಾಂಪ್ಲಿಮೆಂಟರಿ ಕಾಪಿ ಕೊಟ್ಟಿರುವಂಥವು- ಡಾ.ತೋನ್ಸೆ ಕೃಷ್ಣರಾಜು ಅವರ ‘ಸಾವಿರ ಪಕ್ಷಿಗಳು’ (ಇದು ನೊಬೆಲ್ ಪಾರಿತೋಷಕ ಪುರಸ್ಕೃತ ಜಪಾನಿ ಕೃತಿಯ ಕನ್ನಡ ಅನುವಾದ. ಡಾ.ತೋನ್ಸೆ ಇಲ್ಲೇ ವಾಷಿಂಗ್ಟನ್ನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಅವರು ಗೋಪಾಲಕೃಷ್ಣ ಅಡಿಗರ ಅಳಿಯ ಎಂಬುದು ಸುಲಭ ಪರಿಚಯ), ದಾವಣಗೆರೆಯಲ್ಲಿ ಇನ್ನೂ ಎಂಜಿನಿಯರಿಂಗ್ ಓದುತ್ತಿರುವ ಗಣೇಶ ಭಟ್ ಬರೆದ ಕಿರುಕಾದಂಬರಿ ‘ಸಮಯದ ಸರ್ಕಲ್’, ಡಾ. ಗುರುಪ್ರಸಾದ್ ಕಾಗಿನೆಲೆಯವರ ‘ಗುಣ’ ಇತ್ಯಾದಿ. ಮತ್ತೆ ಕೆಲವು ಕಥಾಸಂಕಲನಗಳು: ಮಹಾಬಲಮೂರ್ತಿ ಕೊಡ್ಲೆಕೆರೆಯವರ ‘ನೆರಳು ಮತ್ತು ಇತರ ಕಥೆಗಳು’, ರಘುನಾಥ ಚ.ಹ ಅವರ ‘ಹೊರಗೂ ಮಳೆ ಒಳಗೂ ಮಳೆ’, ವಸುಧೇಂದ್ರ ಬರೆದ ‘ಮನೀಷೆ’, ‘ಚೇಳು’, ‘ಹಂಪಿ ಎಕ್ಸ್ಪ್ರೆಸ್’, ಎಂ.ಎಸ್.ಶ್ರೀರಾಮ್ ಅವರ ‘ತೇಲ್ ಮಾಲೀಶ್’ ವಗೈರಾ ವಗೈರಾ. ಪತ್ರಿಕೆಗಳಲ್ಲಿ ಬರುವ ‘ಸಾದರ ಸ್ವೀಕಾರ’ ಪಟ್ಟಿಯಂತೆ ತೋರಬಹುದು, ಆದರೆ ನಾನೀಗ ನೀಟಾಗಿ ಜೋಡಿಸಿಟ್ಟಿರುವ ಕಪಾಟಿನಲ್ಲಿ ಹೆಸರಿಸಲೇಬೇಕಾದ ಇನ್ನೂ ಹಲವಾರು ಪುಸ್ತಕಗಳಿವೆ- ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’, ನೇಮಿಚಂದ್ರ ಅವರ ‘ಬದುಕು ಬದಲಿಸಬಹುದು’, ಡಾ.ಜೀ.ವಿ.ಕುಲಕರ್ಣಿ ಅವರ ‘ಬೇಂದ್ರೆ ಜೀವನ ಮತ್ತು ಸಾಹಿತ್ಯ’, ಕ್ಯಾಪ್ಟನ್ ಗೋಪಿನಾಥ್ ಬರೆದು ವಿಶ್ವೇಶ್ವರ ಭಟ್ ಕನ್ನಡಕ್ಕೆ ಅನುವಾದಿಸಿದ ‘ಬಾನ ಯಾನ’, ಕನ್ನಡ ಚಿತ್ರರಂಗ ೭೫ ವರ್ಷಗಳ ಒಂದು ಫ್ಲಾಷ್ಬ್ಯಾಕ್ - ಡಾ.ಕೆ.ಪುಟ್ಟಸ್ವಾಮಿ ಬರೆದ ‘ಸಿನಿಮಾ ಯಾನ’, ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದ ಮುದ್ದಣನ ಸಂಸ್ಮರಣೆಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ನಂದಳಿಕೆಯ ನಂದನ’ ಮತ್ತು ‘ಮುದ್ದಣನಿಗೆ ನಮನ’, ಪೂರ್ಣವಾಗಿ ವಾರ್ಧಕ ಷಟ್ಪದಿಯಲ್ಲೇ ರಚಿತವಾಗಿರುವ ರಾಮಚಂದ್ರರಾವ್ ಜಾಣ ಅವರ ‘ರಾಮಾಯಣ ಸುಂದರಕಾಂಡ’, ಡಿವಿಜಿಯವರ ಬದುಕಿನ ನೂರಾರು ರಸಪ್ರಸಂಗಗಳನ್ನು ಶತಾವಧಾನಿ ಡಾ.ಆರ್.ಗಣೇಶ್ ವಿದ್ವತ್ಪೂರ್ಣವಾಗಿ ಸಾದರಪಡಿಸಿರುವ ‘ಬ್ರಹ್ಮಪುರಿಯ ಭಿಕ್ಷುಕ’... ಒಂದು ಪುಸ್ತಕವೆಂದರೇನೇ ಉದ್ಯಾನವನ ಅಂತಾದರೆ, ಇಷ್ಟೊಂದು ಪುಸ್ತಕಗಳೆಂದರೆ ನನ್ನ ಪಾಲಿಗಂತೂ ಸಹ್ಯಾದ್ರಿಯ ನಿತ್ಯಹರಿದ್ವರ್ಣ ವನರಾಜಿಯೇ ಸೈ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.