Episodes
Sunday Sep 23, 2012
Vedhadhyayana Vismaya
Sunday Sep 23, 2012
Sunday Sep 23, 2012
ದಿನಾಂಕ 23 ಸೆಪ್ಟೆಂಬರ್ 2012
ವೇದಾಧ್ಯಯನ ವಿಧಾನದ ವಿಸ್ಮಯ
* ಶ್ರೀವತ್ಸ ಜೋಶಿ
* * * ಹದಿಮೂರ್ ಹದಿನೇಳ್ಲ ಎಷ್ಟು ಎಂದು ಕೇಳಿದರೆ ಬೆಚ್ಚಿಬಿದ್ದು ಕಾಲ್ಕ್ಯುಲೇಟರ್ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ (ಈಗ ಅದನ್ನೂ ಮರೆತ) ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು. ಅದೂ ರಿವರ್ಸ್ ಆರ್ಡರ್, ಡಯಾಗನಲ್ ಆರ್ಡರ್ ಹೀಗೆ ಯಾವ ನಮೂನೆಯಲ್ಲಿ ಬೇಕೊ ಹಾಗೆ ಮಗ್ಗಿಯನ್ನು ಒಪ್ಪಿಸುವ ಜಾಣರಿರುತ್ತಿದ್ದರು. ಯಾಕೆ ಆ ಜಾಣ್ಮೆ ಇರುತ್ತಿತ್ತೆಂದರೆ ಆಗ ಕ್ಯಾಲ್ಕುಲೇಟರ್ಗಳು ಇರಲಿಲ್ಲ, ಅದಕ್ಕೂ ಹಿಂದೆ ಮಗ್ಗಿ ಪುಸ್ತಕಗಳೂ ಇರುತ್ತಿರಲಿಲ್ಲವೇನೊ. ಎಲ್ಲವೂ ಬಾಯಿಪಾಠದ ಕಲಿಕೆ. ಹಸಿಗೋಡೆಯಲ್ಲಿ ಹರಳು ನೆಟ್ಟಂತೆ ಚಿಕ್ಕಂದಿನಲ್ಲೇ ಮಗ್ಗಿ-ಕೋಷ್ಟಕಗಳ, ಗಣಿತ ಸೂತ್ರಗಳ ಕಂಠಪಾಠದ ಅಭ್ಯಾಸ. ಅದರ ಒಳಿತು-ಕೆಡುಕುಗಳು ಏನೇ ಇರಲಿ ಆಗಿನ ಕಾಲದಲ್ಲಿ ಅದು ಅನಿವಾರ್ಯವೆಂಬ ವಿಷಯವೂ ಗಮನಾರ್ಹ. ಮಗ್ಗಿ-ಕೋಷ್ಟಕ, ಸೂತ್ರ-ಸ್ತೋತ್ರಗಳದೇ ಮಾತು ಅನ್ವಯವಾಗುತ್ತದೆ ವೇದಗಳಿಗೂ ಕೂಡ! ವೇದಗಳು ಭಗವಂತನ ಉಸಿರಿನಿಂದ ಉದ್ಭವವಾದುವು (“ಯಸ್ಯ ನಿಶ್ವಸಿತಂ ವೇದಾ:") ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಋಷಿಮುನಿಗಳು ವೇದಗಳನ್ನು ಅವುಗಳ ಮೂಲ ಸ್ವರೂಪದಲ್ಲಿ, ಒಂದಿನಿತೂ ಬದಲಾವಣೆ ಇಲ್ಲದಂತೆ ಜತನವಾಗಿ ಇರಿಸುವಲ್ಲಿ ಬಹಳ ಎಚ್ಚರ ಮತ್ತು ಶ್ರಮ ವಹಿಸಿದ್ದಾರೆ. ಲಿಖಿತ ದಾಖಲೆಗಳಿಲ್ಲದೆ ಬಾಯಿಂದ ಬಾಯಿಗೆ ಮಾತ್ರ (ತಂದೆಯಿಂದ ಮಗನಿಗೆ ಅಥವಾ ಗುರುವಿನಿಂದ ಶಿಷ್ಯನಿಗೆ) ವರ್ಗಾವಣೆ ಹೊಂದುತ್ತ ಸಹಸ್ರಾರು ವರ್ಷಗಳ ಕಾಲದಿಂದಲೂ ವೇದಗಳು ಅಸ್ತಿತ್ವದಲ್ಲಿ ಇವೆಯೆಂದರೆ ಈ ಮೂಲಸ್ವರೂಪ ರಕ್ಷಣೆಯ ಮಹತ್ವ ಮತ್ತು ಅದರ ವಿಸ್ಮಯಕರವಾದ ತಂತ್ರ ನಿಜಕ್ಕೂ ಅದ್ಭುತವಾದುದು! ವೇದಮಂತ್ರ ಪಠಣದ ಒಂದು ಮೂಲಭೂತ ಅವಶ್ಯಕತೆಯೆಂದರೆ ಅದರ ಸಂಪೂರ್ಣ ಪ್ರಯೋಜನ ಸಿಗಬೇಕಾದರೆ ಅಕ್ಷರಶುದ್ಧಿ (ಪ್ರತಿಯೊಂದು ಅಕ್ಷರದ ಸರಿಯಾದ ಉಚ್ಚಾರ), ಮಾತ್ರಾಶುದ್ಧಿ (ಪ್ರತಿ ಅಕ್ಷರ ಉಚ್ಚಾರಕ್ಕೆ ನಿಖರವಾದ ಅವಧಿ) ಮತ್ತು ಸ್ವರಶುದ್ಧಿ - ಈ ಮೂರರಲ್ಲೂ ಯಾವೊಂದು ಲೋಪವೂ ಇರಬಾರದು. ಅಷ್ಟೇ ಅಲ್ಲ, ಗೀತೀ ಶೀಘ್ರೀ ಶಿರಃಕಂಪೀ ತಥಾ ಲಿಖಿತಪಾಠಕಃ ಅನರ್ಥಜ್ಞಃ ಅಲ್ಪಕಂಠಶ್ಚ ಷಡೈತೆ ಪಾಠಕಾಧಮಾಃ || ಅಂದರೆ ಹಾಡು ಗುನುಗಿದಂತೆ, ಅವಸರದಲ್ಲಿ, ಸುಮ್ಮನೆ ತಲೆಯನ್ನು ಮೇಲೆ-ಕೆಳಗೆ ಅಲ್ಲಾಡಿಸುತ್ತ, ಪುಸ್ತಕದಿಂದ ಓದುತ್ತ, ಅರ್ಥವನ್ನು ತಿಳಿದುಕೊಳ್ಳದೆ ಮತ್ತು ಕ್ಷೀಣಸ್ವರದಲ್ಲಿ - ಈ ಆರು ನಮೂನೆಯ ವೇದಪಠಣ ನಿಷ್ಪ್ರಯೋಜಕ. ವೇದಗಳ ಸರಿಯಾದ ಪಠಣಕ್ಕೆ, ಜತೆಯಲ್ಲೇ ಅವುಗಳ ಮೂಲರೂಪ ರಕ್ಷಣೆಗೆ ದೋಷರಹಿತ ವಿಧಾನ ಮತ್ತು ನಿಯಮಗಳ ಅವಶ್ಯಕತೆ ಬಹಳವಾಗಿ ಇದೆ. ದೋಷರಹಿತ (error proof) ಯಾಕೆಂದರೆ ವೇದೋಚ್ಚಾರದಲ್ಲಿ ಒಂದೇಒಂದು ಅಕ್ಷರ, ಮಾತ್ರೆ ಅಥವಾ ಸ್ವರದ ಲೋಪವಾದರೂ ಆ ಮಂತ್ರದ ಪರಿಣಾಮ ತದ್ವಿರುದ್ಧವಾಗಬಹುದು (ಇಂದ್ರನನ್ನು ಕೊಲ್ಲಲು ಹೊರಟ ‘ವೃತ್ರ’ನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಕೇವಲ ಒಂದು ಸ್ವರವಷ್ಟೇ ತಪ್ಪಾಗಿದ್ದರಿಂದ ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು ಎಂದು ಕಥೆಯಿದೆ)! ವೇದೋಚ್ಚಾರದ ನಿಯಮಗಳೆಲ್ಲ ‘ಶೀಕ್ಷಾ’ ಎನ್ನುವ ವೇದಾಂಗದಲ್ಲೇ ಅಳವಡಿಸಲ್ಪಟ್ಟಿವೆ. ವರ್ಣ (ಅಕ್ಷರಗಳು), ಸ್ವರ (ಉದಾತ್ತ, ಅನುದಾತ್ತ ಮತ್ತು ಸ್ವರಿತ ಎಂಬ ಮೂರು ಸ್ವರಗಳು), ಮಾತ್ರಾಕಾಲ, ಬಲ (ಉಚ್ಚರಿಸಲು ಬೇಕಾದ ಧ್ವನಿಶಕ್ತಿ), ಸಾಮ (ಸ್ವರಗಳ ಏರಿಳಿತದಲ್ಲಿ ಏಕರೂಪ) ಮತ್ತು ಸಂತಾನ (ನಿರಂತರತೆ) - ಇವೆಲ್ಲವುಗಳಿಗೆ ಸಂಬಂಧಿಸಿದಂತೆ ‘ಶೀಕ್ಷಾ’ದಲ್ಲಿ ನಿಯಮಗಳಿವೆ. ಇಷ್ಟೆಲ್ಲ ಚಾಕಚಕ್ಯತೆ ವಹಿಸಿ ವೇದಪಠಣ ಮಾಡಬೇಕಿದ್ದರೆ ಅದರ ಅಭ್ಯಾಸದಲ್ಲೂ ಕಠಿಣ ಪರಿಶ್ರಮದ ಆವಶ್ಯಕತೆ ಇದೆಯೆಂದು ಬೇರೆ ಹೇಳಬೇಕಿಲ್ಲ. ವೇದಾಭ್ಯಾಸ ಒಂದು ಆಸಕ್ತಿಯ ವಿಷಯವಾಗುವಂತೆ, ಬರೀ ಬಾಯಿಪಾಠವಷ್ಟೇ ಎನಿಸದೆ ಬುದ್ಧಿವಂತಿಕೆಯ ಉಪಯೋಗವೂ ಚೆನ್ನಾಗಿ ಆಗುವಂತೆ ಮಾಡಬೇಕಾದರೆ ಪಠಣ ಕ್ರಮದಲ್ಲಿ ವೈವಿಧ್ಯವಿರಬೇಕಾಗುತ್ತದೆ. ಇದನ್ನು ಮನಗಂಡ ಋಷಿಗಳು ಕೆಲವು ‘ಪಾಠಕ್ರಮ’ಗಳನ್ನು ರೂಪಿಸಿದರು. ಅವುಗಳ ಮೂಲಕ ವೇದಕಲಿಕೆ ದೋಷರಹಿತವಾಗಿರುವಂತೆ ನೋಡಿಕೊಂಡರು. ಅಂತಹ ಪಾಠಕ್ರಮಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳುವುದಕ್ಕಾಗಿ ಈ ಲೇಖನ. ಬೇರೆಬೇರೆ ಕ್ರಮಗಳಲ್ಲಿ ಪದಗಳ ಜೋಡಣೆ ಅರ್ಥವಾಗುವುದಕ್ಕೋಸ್ಕರ ಸಂಸ್ಕೃತ ಮಂತ್ರಗಳ ಬದಲಿಗೆ, ನಮಗೆಲ್ಲ ಚಿರಪರಿಚಿತವಾದ ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’ ಎಂಬ ಕನ್ನಡ ಪದ್ಯದ ಸಾಲನ್ನು ಉದಾಹರಣೆಗಳಲ್ಲಿ ಅಳವಡಿಸಿಕೊಂಡಿದ್ದೇನೆ. ಕೇವಲ ಉದಾಹರಣೆಗಾಗಿ ಹೊರತು ವೇದಗಳನ್ನು ಲಘುವಾಗಿ ಪರಿಗಣಿಸುವುದಾಗಲೀ ಜಿ.ಪಿ.ರಾಜರತ್ನಂ ಪದ್ಯವನ್ನು ತಿರುಚುವುದಾಗಲಿ ಇಲ್ಲಿಯ ಉದ್ದೇಶವಲ್ಲ. * ಅತ್ಯಂತ ಪ್ರಾಥಮಿಕವಾದ ಮತ್ತು ಸರಳವಾದ (ಸೀದಾಸಾದಾ) ಪಾಠವೆಂದರೆ ‘ವಾಕ್ಯ ಪಾಠ’. ವೇದದ ಒಂದೊಂದೇ ಮಂತ್ರವನ್ನು ಒಂದು ವಾಕ್ಯದಂತೆ ಪಠಿಸುವುದು. ಇದನ್ನೇ 'ಸಂಹಿತಾಪಾಠ’ ಎಂದೂ ಕರೆಯುವರು. ವಾಕ್ಯಪಾಠದಲ್ಲಿ ನಮ್ಮ ತುತ್ತೂರಿಪದ್ಯದ ಸಾಲು ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ || ಎಂದು ಸುಲಭರೂಪದಲ್ಲೇ ಇರುತ್ತದೆ. ಮುಂದಿನದು ‘ಪದ ಪಾಠ’. ನಮಗೆ ಪ್ರಾಥಮಿಕಶಾಲೆಯಲ್ಲಿ ಒಂದನೆ, ಎರಡನೆ ತರಗತಿಯ ಪಠ್ಯಪುಸ್ತಕದಲ್ಲಿ ‘ಕಲಿತ ಪದಗಳು...’ ಎಂದಿರುತ್ತಿತ್ತಲ್ಲ? ಹಾಗೆ, ಮಂತ್ರದ ಪ್ರತಿಯೊಂದು ಪದವನ್ನೂ ಕಲಿತುಕೊಳ್ಳುವುದು. ಸಾಂಕೇತಿಕವಾಗಿ ತುತ್ತೂರಿಹಾಡು ಪದಪಾಠದಲ್ಲಿ ಈ ರೀತಿ ಉಚ್ಚರಿಸಲ್ಪಡುತ್ತದೆ. ಬಣ್ಣದ. ತಗಡಿನ. ತುತ್ತೂರಿ. ಕಾಸಿಗೆ. ಕೊಂಡನು. ಕಸ್ತೂರಿ. ಪದಪಾಠಕ್ಕಿಂತ ತುಸು ಸಂಕೀರ್ಣವಾದದ್ದು ‘ಕ್ರಮ ಪಾಠ’. ಇದರ ವೈಶಿಷ್ಟ್ಯವೆಂದರೆ ಮಂತ್ರದ ಎರಡೆರಡು ಪದಗಳನ್ನು, ಒಂದಕ್ಕೊಂದು ಓವರ್ಲ್ಯಾಪ್ ಆಗುವಂತೆ ಉಚ್ಚರಿಸುತ್ತ ಹೋಗುವುದು. 1-2, 2-3, 3-4, 4-5, 5-೬... ಈ ರೀತಿ. ಇದರಿಂದ ಮಂತ್ರದ ಪದಗಳನ್ನು ಕಲಿತಂತೆ ಆಗುತ್ತದೆಯಷ್ಟೇ ಅಲ್ಲ ಪದಗಳ ಜೋಡಣೆ ಮತ್ತು ಅದರಿಂದಾಗಬೇಕಾದ ಸ್ವರಬದಲಾವಣೆಯನ್ನೂ ಅಭ್ಯಸಿಸಿದಂತಾಗುತ್ತದೆ. (ಕ್ರಮಪಾಠದಲ್ಲಿ ವೇದಮಂತ್ರಪಠಣದ ನಿಷ್ಣಾತಿ ಹೊಂದಿದವರನ್ನು ‘ಕ್ರಮವಿತ್’ ಎನ್ನುತ್ತಾರೆ). ತುತ್ತೂರಿಪದ್ಯದ ಸಾಲು ಕ್ರಮಪಾಠದಲ್ಲಿ ಹೀಗೆ ಬರುತ್ತದೆ. ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ || ಗಮನಿಸಬೇಕಾದ ಅಂಶವೆಂದರೆ ಇದುವರೆಗಿನ ವಾಕ್ಯಪಾಠ, ಪದಪಾಠ ಮತ್ತು ಕ್ರಮಪಾಠ - ಈ ಮೂರರಲ್ಲೂ ಮಂತ್ರದ ಪದಗಳ ಅನುಕ್ರಮವು ಯಥಾಸ್ಥಿತಿಯಲ್ಲಿ, ಅಂದರೆ ಸ್ವಾಭಾವಿಕ ಹರಿವಿನಲ್ಲೇ ಇರುತ್ತದೆ. ಆದ್ದರಿಂದ ಈ ಮೂರು ವಿಧಾನಗಳನ್ನು ‘ಪ್ರಕೃತಿ’ ರೂಪದವು ಎನ್ನುತ್ತಾರೆ. ಮುಂದೆ ವಿವರಿಸಲಿರುವ ಪಾಠಕ್ರಮಗಳಲ್ಲಿ ಮಂತ್ರದ ಪ್ರತ್ಯೇಕ ಪದಗಳನ್ನೂ ಆಚೀಚೆ, ಹಿಂದೆಮುಂದೆ ಸ್ಥಾನಪಲ್ಲಟ ಮಾಡುವುದಿರುತ್ತದೆ. ಅಂದರೆ ಅವುಗಳ ಸ್ವಾಭಾವಿಕ ಅನುಕ್ರಮವನ್ನು ಬದಲಿಸಲಾಗುತ್ತದೆ. ಆದ್ದರಿಂದ ಇಂತಹ ಪಾಠಕ್ರಮಗಳಿಗೆ ‘ವಿಕೃತಿ’ ಎಂದು ಹೆಸರು. ಸಂಸ್ಕೃತ ಶ್ಲೋಕಗಳಲ್ಲಿ ಹೇಗೂ ಕರ್ತೃ-ಕರ್ಮ-ಕ್ರಿಯಾ ಇದೇ ಮಾದರಿಯಲ್ಲಿ (ಕನ್ನಡದಲ್ಲಿದ್ದಂತೆ) ಪದಗಳು ಬರಬೇಕೆಂದೇನಿಲ್ಲ, ಹಾಗಾಗಿ ವಿಕೃತಿಗೊಳಪಟ್ಟ ಶ್ಲೋಕವೂ ಅರ್ಥಪೂರ್ಣವೇ ಆಗಿರುತ್ತದೆ. ಜಟಾ ಮಾಲಾ ಶಿಖಾ ರೇಖಾ ಧ್ವಜೊ ದಂಡೊ ರಥೊ ಘನಃ ಇತ್ಯಷ್ಟಾಃ ವಿಕೃತಯಃ ಪ್ರೊಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ || ಮುಖ್ಯವಾದ ಎಂಟು ಪಾಠಕ್ರಮಗಳು - ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ, ಘನ - ಇವು ವಿಕೃತಿ ರೂಪದವು. ಇವುಗಳ ಪೈಕಿ ಜಟಾ ಮತ್ತು ಫ಼ನ ಪಾಠಕ್ರಮಗಳು ಮಾತ್ರ ತುಂಬ ಪ್ರಸಿದ್ಧವಾದುವು ಮತ್ತು ಚಾಲ್ತಿಯಲ್ಲಿರುವಂಥವು. ವಿಕೃತಿ ಪಾಠಕ್ರಮಗಳ ಪೈಕಿ ಕೆಲವನ್ನು ಈಗ ಪರಿಶೀಲಿಸೋಣ. ‘ಜಟಾ ಪಾಠ’ದಲ್ಲಿ ಪದಗಳು ಜಡೆ ಹೆಣೆದಂತೆ (ಜಟಾ ಎಂದರೆ ಜಡೆ) 1-2-2-1-1-2, 2-3-3-2-2-3, 3-4-4-3-3-4, 4-5-5-4-4-5... ಈ ಶ್ರೇಣಿರೂಪದಲ್ಲಿ ಆವರ್ತವಾಗುತ್ತವೆ. ತುತ್ತೂರಿಪದ್ಯದ ಸಾಲನ್ನು ಜಟಾಕ್ರಮದಲ್ಲಿ ಅಳವಡಿಸಿದಾಗ: ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || ‘ದಂಡ ಪಾಠ’ಕ್ರಮ ಸ್ವಾರಸ್ಯಕರವಾಗಿದೆ. ಇದರಲ್ಲಿಯೂ ಪದಯುಗ್ಮಗಳನ್ನು ಪೋಣಿಸುತ್ತ ಹೋಗಬೇಕು, ಒಂದೊಂದು ಸಲಕ್ಕೂ ಒಂದು ಪದವನ್ನು ಹೆಚ್ಚಿಸುತ್ತ ಹೋಗಬೇಕು ಮಾತ್ರವಲ್ಲ ಅವರೋಹಣ ಕ್ರಮದಲ್ಲಿ ಮೊದಲಿನ ಪದದವರೆಗೂ ಬರಬೇಕು. ತುತ್ತೂರಿಪದ್ಯದ ಸಾಲು ದಂಡಪಾಠದಲ್ಲಿ ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || ಘನಪಾಠಿ ವಿದ್ವಾಂಸ ಎಂಬ ವಿಶೇಷಣವನ್ನು ನೀವೆಂದಾದರೂ ಯಾರ ಬಗ್ಗೆಯಾದರೂ ಓದಿದ್ದೀರಿ/ಕೇಳಿದ್ದೀರಾದರೆ ಅವರು ಘನಪಾಠ ಕ್ರಮದಲ್ಲಿ ವೇದಗಳನ್ನುಚ್ಚರಿಸಬಲ್ಲ ಪಂಡಿತರೆಂದರ್ಥ. ಘನಪಾಠ ತುಂಬ ಜನಪ್ರಿಯವಾದದ್ದು. ಇದರಲ್ಲಿ ಪದಗಳ ಜೋಡಣೆ 1-2-2-1-1-2-3-3-2-1-1-2-3; 2-3-3-2-2-3-4-4-3-2-2-3-4; 3-4-4-3-3-4-5-5-4-3-3-4-5... ಈ ಕ್ರಮದಲ್ಲಿ. ಮತ್ತೆ ನಮ್ಮ ತುತ್ತೂರಿಪದ್ಯದ ಸಾಲಿಗೆ ಅನ್ವಯವಾಗುವಂತೆ ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕೊಂಡನು ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || (ಇಲ್ಲಿ, ‘ಕಸ್ತೂರಿ ಎಂಬ ಕಸ್ತೂರಿ...’ ಸಾಲು ಎಲ್ಲಿಂದ ಬಂತು, ರಾಜರತ್ನಂ ಬರೆದ ಮೂಲಪದ್ಯದಲ್ಲಿ ಹಾಗಿರಲಿಲ್ಲವಲ್ಲ ಎಂದು ನಿಮಗೆ ಸಂಶಯ ಬರಬಹುದು. ವೇದಪಠಣದ ವಿವಿಧ ಕ್ರಮಗಳಲ್ಲಿ, ಸೂಕ್ತದ ಕೊನೆಯ ಪದವನ್ನುಪಯೋಗಿಸಿ ಈ ರೀತಿ ಉಚ್ಚರಿಸುವುದು ವಾಡಿಕೆ. ಉದಾಹರಣೆಗೆ ಒಂದು ಸೂಕ್ತವು ’ಸುವೃತ್ತಿ’ ಎಂಬ ಪದದೊಂದಿಗೆ ಮುಕ್ತಾಯವಾಗುವುದಿದ್ದರೆ ಸೂಕ್ತದ ಕೊನೆಯಲ್ಲಿ ‘ಸುವೃತ್ತಿ ಇತಿ ಸುವೃತ್ತಿ...’ ಎಂದು ಹೇಳಬೇಕು. ಆ ಕ್ರಮವನ್ನು ಕನ್ನಡಕ್ಕೆ ತಂದು ‘ಕಸ್ತೂರಿ ಎಂಬ ಕಸ್ತೂರಿ’ ಸಾಲನ್ನು ಸೇರಿಸಿದ್ದೇನೆ). ಘನಪಾಠದ ಘನತೆ ಎಷ್ಟಿದೆಯೆಂದರೆ ಅದು ಅತ್ಯಂತ ಕ್ಲಿಷ್ಟದ ಪಾಠಕ್ರಮವಾದ್ದರಿಂದ ಘನಪಾಠದಲ್ಲಿ ಮಂತ್ರವನ್ನು ಉಚ್ಚರಿಸುವುದರಿಂದ ಸಾವಿರಪಟ್ಟು ಹೆಚ್ಚು ಪುಣ್ಯ. ಸಹಜವಾಗಿಯೇ ಪದಗಳೆಲ್ಲ ಪುನರಾವರ್ತನೆ ಆಗುವುದರಿಂದ ಭಗವಂತನ ಗುಣಗಾನ, ಸದ್ಗುಣ ಚಿಂತನೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ. ಮೇಲಿನ ಪದ್ಯವನ್ನೇ ನೋಡಿ - ಕಸ್ತೂರಿ, ತುತ್ತೂರಿ ಪದಗಳು ಎಷ್ಟು ಸಲ ಬಂದುಹೋಗುತ್ತವೆ! ಅಂದಹಾಗೆ, ಘನಪಾಠ ರೀತಿಯಲ್ಲಿ ಸಂಪೂರ್ಣ ಋಗ್ವೇದವನ್ನು ಪಠಿಸಲು ಸುಮಾರು 450 ಗಂಟೆಗಳು ಬೇಕಾಗಬಹುದು! ಗಾಯತ್ರೀಮಂತ್ರವನ್ನು ಘನಪಾಠ ರೂಪದಲ್ಲಿ ಪಠಿಸುವುದು ಹೇಗೆಂದು ಈ ವಿಡಿಯೋದಲ್ಲಿ ನೋಡಬಹುದು: [youtube=http://www.youtube.com/watch?v=0gDJgnhF23Y] ಪದಪಾಠ, ಕ್ರಮಪಾಠ, ಜಟಾಪಾಠ ಮತ್ತು ಘನಪಾಠದಲ್ಲಿ ಗಾಯತ್ರೀ ಮಂತ್ರ: ಇನ್ನೊಂದು ವಿಡಿಯೋ- [youtube=http://www.youtube.com/watch?v=2_D1qGcxYxM] ಮಾಲಾ ಪಾಠಕ್ರಮದಲ್ಲಿ ಪುಷ್ಪಮಾಲಾ ಮತ್ತು ಕ್ರಮಮಾಲಾ ಎಂಬ ಎರಡು ನಮೂನೆಗಳಿವೆ. ದೇವರಿಗೆ ಅರ್ಪಿಸಲು ಹೂಮಾಲೆ ಕಟ್ಟುವವರು ಹೇಗೆ ಬೇರೆಬೇರೆ ಬಣ್ಣದ, ಜಾತಿಯ ಹೂಗಳಿದ್ದರೂ ಮಾಲೆಯು ಸಮಮಿತಿಯಲ್ಲಿರುವಂತೆ ಕಾಯ್ದುಕೊಳ್ಳುತ್ತಾರೊ ಹಾಗೆಯೇ ಪದಗಳ ಜೋಡಣೆಯ ಪಾಠಕ್ರಮವಿದು. ಶಿಖಾ ಪಾಠಕ್ರಮವೂ ಜಟಾ ಇದ್ದಂತೆ, ಆದರೆ ಎರಡೆರಡು ಪದಗಳ ಬದಲಿಗೆ ಮೂರುಮೂರು ಪದಗಳನ್ನು ಜೋಡಿಸುತ್ತ ಹೋಗಬೇಕು. ರಥ ಪಾಠಕ್ರಮದಲ್ಲಿ ದ್ವಿಪಾದ, ತ್ರಿಪಾದ ಮತ್ತು ಚತುಷ್ಪಾದ ರಥ (ಆಗಲೇ ಟು-ವ್ಹೀಲರ್, ತ್ರೀ-ವ್ಹೀಲರ್ ಕಾನ್ಸೆಪ್ಟ್ ಇತ್ತೇ?) ಎಂಬ ಉಪವಿಧಾನಗಳೂ ಇವೆ, ಒಂದೊಂದೂ ಜಟಿಲವಾಗುತ್ತ ಹೋಗುತ್ತವೆ. ಹಾಗೆಯೇ ರೇಖಾ ಮತ್ತು ಧ್ವಜ ಪಾಠಕ್ರಮಗಳೂ ತೀರಾ ಕ್ಲಿಷ್ಟವಾದುವು; ಈ ಲೇಖನದ ವ್ಯಾಪ್ತಿಗೆ ತೀರಾ ಭಾರವಾದುವು. ನಮ್ಮ ಪೂರ್ವಜರು ಕಂಡುಕೊಂಡ ಈ ಪಾಠಕ್ರಮಗಳು, ಅವುಗಳ ಸಂಕೀರ್ಣತೆ, ಅವುಗಳಲ್ಲಿ ಹೇರಳವಾಗಿ ಉಪಯೋಗವಾಗಿರುವ ಗಣಿತ-ಸಂಖ್ಯಾಶಾಸ್ತ್ರ - ಇವೆಲ್ಲ ಅಚ್ಚರಿ ಮೂಡಿಸುತ್ತವೆಯಲ್ಲವೆ? ಇಂತಹ ಪ್ರಮಾಣೀಕೃತ, ನಿಯಮಬದ್ಧ ಮೌಖಿಕ ವೇದಪಠಣ ಕ್ರಮವನ್ನು ಒಂದು ಅತ್ಯಮೂಲ್ಯ, ದುರ್ಲಭ ಸಂಪ್ರದಾಯವೆಂದು UNESCO (United Nations Educational Scientific and Cultural Organization) ಪ್ಯಾರಿಸ್ನಲ್ಲಿ 2003ರಲ್ಲಿ ನಡೆದ ಶೃಂಗಸಭೆಯಲ್ಲಿ ಘೋಷಿಸಿ ಗೌರವಿಸಿದೆ! ಹಿಂದೂಧರ್ಮದ, ಭಾರತೀಯ ಸಂಸ್ಕೃತಿಯ ಅರ್ಥಪೂರ್ಣ ಸತ್ಸಂಪ್ರದಾಯವೊಂದಕ್ಕೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ನಿಜಕ್ಕೂ ನಾವೆಲ್ಲರೂ ಹೆಮ್ಮೆಪಡುವಂಥದು! * * * ಈ ಲೇಖನವು 2006ರಲ್ಲಿ thatskannada.com ಅಂತರ್ಜಾಲ ಪತ್ರಿಕೆಯ ‘ವಿಚಿತ್ರಾನ್ನ’ ಅಂಕಣದಲ್ಲಿ ಪ್ರಕಟವಾಗಿ ಆಮೇಲೆ ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ಮರುಪ್ರಕಟಗೊಂಡಿತ್ತು. ಬೆಂಗಳೂರಿನ ‘ವೇದಪ್ರಕಾಶ’ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಲೇಖನವನ್ನೋದಿದ ಮೈಸೂರಿನ ಡಾ.ನ.ರತ್ನ ಅವರು ತಾವು ಬರೆಯುತ್ತಿದ್ದ 'ನಟ ಮತ್ತು ಮಾತು' ಪುಸ್ತಕದಲ್ಲಿ ಒಂದು ಅನುಬಂಧ (annexure) ಆಗಿ ಈ ಲೇಖನವನ್ನು ಅಳವಡಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಅನುಮತಿ ಕೋರಿದ್ದರು. ವೇದವನ್ನು ಕಂಠಪಾಠ ಮಾಡುವ ಕ್ರಮಬದ್ಧ ರೀತಿಯು ನಟನಟಿಯರಿಗೆ ಸಂಭಾಷಣೆ ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳುವುದಕ್ಕೆ ನೆರವಾಗುತ್ತದೆ ಎಂಬ ತರ್ಕ ಅವರದು. ಇದೀಗ 7Sep2012ರಂದು 'ನಟ ಮತ್ತು ಮಾತು’ ಪುಸ್ತಕ ಬಿಡುಗಡೆಯಾಗಿ ಡಾ.ನ.ರತ್ನ ಅವರು ಕೈಬರಹದ ಒಂದು ಪತ್ರದೊಂದಿಗೆ ಪುಸ್ತಕದ ಪ್ರತಿಯನ್ನು ನನಗೆ ಕಳಿಸಿದ್ದಾರೆ. ರಂಗಭೂಮಿಯ ವಾಚಿಕದ ಬಗ್ಗೆ ಪೂರ್ಣಪ್ರಮಾಣದ ಅತ್ಯಮೂಲ್ಯ ಆಕರಗ್ರಂಥ ರಚನೆಗಾಗಿ ನ.ರತ್ನ ಅವರನ್ನು ಅಭಿನಂದಿಸುತ್ತ ಅವರ ಪುಸ್ತಕಕ್ಕೆಂದು ವಿಶೇಷವಾಗಿ ಗುರುತಿಸಿದ ಈ ಲೇಖನವನ್ನು ಪಠ್ಯ ಮತ್ತು ಧ್ವನಿಮಾಧ್ಯಮದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ. ವಿಚಿತ್ರಾನ್ನ ಅಂಕಣದಲ್ಲಿ ಲೇಖನ ಪ್ರಕಟವಾದಾಗ ಬಂದಿದ್ದ ಪ್ರತಿಕ್ರಿಯೆಗಳು ಇಲ್ಲಿವೆ. * * * ["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.