ಪದ-ಶ್ರಾವ್ಯ

ಈಗ ಆಡಿಯೋ ಟಚ್!

12
Mar 2011
Vihswa Kannada Sammelana
Posted in DefaultTag by sjoshi at 8:29 pm

ದಿನಾಂಕ  13 ಮಾರ್ಚ್ 2011ರ ಸಂಚಿಕೆ...

ಬೆಳಗಿಹುದು ಭುವನಸಿರಿ ಬೆಳಗಾವಿಯಲಿ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಏನು ಬರೆಯಲಿ ಎಂಬ ಚಿಂತೆ ಕೆಲವೊಮ್ಮೆ ಕಾಡುವುದಿದೆ ನಿಯಮಿತವಾಗಿ ಬರೆಯಬೇಕಾಗಿ ಬರುವ ಅಂಕಣಕಾರರಿಗೆ. ಯಾವಾಗಾದರೂ ಒಮ್ಮೆ ಏನೂ ಸರಕು ಒದಗಿ ಬರದಿದ್ದಾಗ ಹಾಗಾಗುತ್ತದೆ. ಇದಕ್ಕೆ ನಾನೂ ಹೊರತೇನಲ್ಲ. ಆದರೆ ಈವಾರ ನನ್ನ ಪರಿಸ್ಥಿತಿ ಪೂರ್ಣ ತದ್ವಿರುದ್ಧ! ಏನನ್ನು ಬರೆಯದಿರಲಿ, ಅಂದರೆ ಯಾವುದನ್ನು ಬರೆಯದೆ ಬಿಟ್ಟುಬಿಡಲಿ ಎಂಬ ಸಮಸ್ಯೆ ಈಗ ನನ್ನದಾಗಿದೆ. ಕಳೆದವಾರದಿಂದ ಮುಂದುವರಿಸಬೇಕಿದ್ದ ‘ಅಂಗುಷ್ಠಪುರಾಣ’ವನ್ನೇ ಎತ್ತಿಕೊಳ್ಳಲೇ? ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ನುಡಿಹಬ್ಬದ ಕುರಿತು ಸಂಭ್ರಮಿಸಲೇ? ಅಥವಾ, ಉದಯರವಿಯ ನಾಡನ್ನು ಗಾಡಾಂಧಕಾರಕ್ಕೆ ತಳ್ಳಿದ ರಾಕ್ಷಸಿ ಸುನಾಮಿಯನ್ನು ಶಪಿಸುತ್ತ ಮರುಗಲೇ?

ಇಲ್ಲಾ. ಸಂದಿಗ್ಧತೆ ಬೇಡಾ. ಹೇಗೂ ದಿಢೀರ್ ಪ್ಲಾನ್ ಮಾಡಿ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕೆಂದೇ ಬೆಳಗಾವಿಗೆ ಬಂದಿದ್ದೇನೆ; ಅಷ್ಟೇ‌ಅಲ್ಲ, ಇಂಥ ಸಮ್ಮೇಳನಗಳು ಅಮೆರಿಕದಲ್ಲಿ ನಡೆದಾಗೆಲ್ಲ ಸಮ್ಮೇಳನದ ಸ್ಥಳದಿಂದಲೇ ಅಂಕಣ ಬರೆದುಕಳಿಸಿದ ರೋಚಕ ಅನುಭವವಿದೆ; ಇಲ್ಲಿಯೂ ಆ ಸಾಹಸ ಮಾಡಬೇಕು ಎಂದು ಲ್ಯಾಪ್‌ಟಾಪ್ ತೆಗೆದುಕೊಂಡೇ ಬಂದಿದ್ದೇನೆ - ಆದ್ದರಿಂದ ಸಮ್ಮೇಳನದ ಕುರಿತೇ ಬರೆಯಬೇಕು ಎಂದು ನನ್ನೊಳಗೇ ಸಹಮತದ ನಿರ್ಧಾರ ಮಾಡಿದ್ದೇನೆ. ಸರಿ, ಅಲ್ಲಿಗೆ ನಿರುಮ್ಮಳನಾದೆನಾ? ಇದೀಗ ಈ ಸಮ್ಮೇಳನದ ಅಗಾಧತೆಯನ್ನು ನೋಡಿದಾಗ, ಇಲ್ಲಿ ಮುಗಿಲುಮುಟ್ಟಿರುವ ಕನ್ನಡ ಸಡಗರವನ್ನು ಕಣ್ಣಾರೆ ಕಂಡಾಗ, ಹೇಗಪ್ಪಾ ಈ ಪುಟ್ಟ ಅಂಕಣದಲ್ಲಿ ತುಂಬಿಸಲಿ ಎಂಬ ಪ್ರಶ್ನೆ! ಏಕೆಂದರೆ, ಇದನ್ನು ಬರೆಯುವಾಗಿನ್ನೂ ಸಮ್ಮೇಳನದ ಉದ್ಘಾಟನೆ ಮತ್ತು ಮೊದಲ ದಿನದ ವೈಭವವಷ್ಟೇ ಆಗಿರುವುದು. ಶನಿ-ಭಾನುವಾರಗಳಂದು ತೆರೆದುಕೊಳ್ಳಲಿರುವ ಸಾಂಸ್ಕೃತಿಕ ರಸದೌತಣ ಇನ್ನೂ ಬಾಕಿಯೇ ಇದೆ. ಅದನ್ನು ನೆನೆಸಿಕೊಂಡರೇನೇ ಪುಳಕವಾಗುತ್ತದೆ. ಪ್ರತ್ಯಕ್ಷ ಆಸ್ವಾದಿಸಿದಾಗಿನ ರೋಮಾಂಚನಕ್ಕಂತೂ ಪದಗಳೇ ಸಿಗಲಾರವೇನೋ.

ವಿಶ್ವ ಕನ್ನಡ ಸಮ್ಮೇಳನ. ಇದು ಬರೀ ಸಮ್ಮೇಳನವಲ್ಲ, ಸವಿಗನ್ನಡದ ಸಮ್ಮೋಹನ. ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆ ಚಿಕ್ಕ ದೊಡ್ಡ ಪ್ರಮಾಣದಲ್ಲಿ ವಿಶ್ವದ ಪ್ರತಿಯೊಬ್ಬ ಕನ್ನಡಿಗನಿಗೂ ಇದ್ದೇ‌ಇರುತ್ತದೆ. ಆದರೆ ತಾಪತ್ರಯಗಳು ಅಂತ ಇರುತ್ತವಲ್ಲಾ ಅವು ಆ ಬಯಕೆಯನ್ನು ಅಷ್ಟೇ ಪ್ರಮಾಣದಲ್ಲಿ ಹತ್ತಿಕ್ಕುವುದೂ ನಡೆಯುತ್ತಲೇ ಇರುತ್ತದೆ. ಮಾನ್ಯ ಮುಖ್ಯಮಂತ್ರಿಗಳೇನೋ ಅನಿವಾಸಿ ಕನ್ನಡಿಗರಿಗೆಲ್ಲ ಸಮ್ಮೇಳನದಲ್ಲಿ ಭಾಗವಹಿಸಲು ಪ್ರೀತಿಯ ಆಮಂತ್ರಣ ಕಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಂತೂ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಅನಿವಾಸಿ ಕನ್ನಡಿಗರ ಪೈಕಿ ಒಂದಿಷ್ಟು ಹೆಸರುಗಳನ್ನು ಹೆಕ್ಕಿ ಆಹ್ವಾನಪತ್ರಿಕೆಯಲ್ಲಿ ಅಚ್ಚೂ ಮಾಡಿಬಿಟ್ಟಿದ್ದಾರೆ. ಸಮ್ಮೇಳನದ ವೇಳೆ ‘ಹೊರನಾಡು ಮತ್ತು ಹೊರದೇಶದ ಕನ್ನಡಿಗರು’ ಕಾರ್ಯಾಗಾರದಲ್ಲಿ ಉಪಸ್ಥಿತರಿರಬೇಕು ಎಂದು ಪ್ರೀತಿಯ ಆದೇಶ ಬೇರೆ. ನೋಡುತ್ತೇನಾದರೆ ಆ ಪಟ್ಟಿಯಲ್ಲಿ ನನ್ನಂಥ ನನ್ನ ಹೆಸರೂ ಸೇರಿಕೊಂಡಿದೆ! ಅಷ್ಟು ದೊಡ್ಡ ಅಮೇರಿಕಾ ದೇಶವನ್ನು ನಾನು ಪ್ರತಿನಿಧಿಸಬೇಕಂತೆ! ಭುವನೇಶ್ವರಿ ತಾಯಿಯಾಣೆಯಾಗಿ ಇನ್ನು ನೆಪ ಹೇಳುವುದು ಆಗದ ಮಾತು ಎಂದುಕೊಂಡು, ಆಫೀಸಿನಲ್ಲಿ ಒಂದು ವಾರದ ರಜೆಯನ್ನು ಹೇಗೋ ಹೊಂದಿಸಿಕೊಂಡು, ಸೂಟ್‌ಕೇಸಿನಲ್ಲಿ ಬಟ್ಟೆಗಳನ್ನು ತುರುಕಿಸಿಕೊಂಡು ಹೊರಟೇಬಿಟ್ಟೆ.

ಇದು ಪೀಕ್‌ಸೀಸನ್ ಅಲ್ಲವಾದ್ದರಿಂದ ವಾಷಿಂಗ್ಟನ್‌ನಿಂದ ಬೆಂಗಳೂರಿಗೆ ವಿಮಾನದ ಟಿಕೆಟ್ಸ್ ಸುಲಭದಲ್ಲೇ ಸಿಕ್ಕಿದವು. ಆದರೆ ಅಲ್ಲಿನ ಬುಧವಾರ ಸಂಜೆಹೊತ್ತು ವಾಷಿಂಗ್ಟನ್ ಬಿಟ್ಟರೂ ಬೆಂಗಳೂರು ತಲುಪಿದಾಗ ಇಲ್ಲಿ ಶುಕ್ರವಾರ ಮುಂಜಾನೆ. ಸಮ್ಮೇಳನ ಸ್ಪೆಷಲ್ ರೈಲು ಬೆಂಗಳೂರಿನಿಂದ ಬೆಳಗಾವಿಗೆ ಗುರುವಾರ ಸಂಜೆಯೇ ಹೊರಟಾಗಿರುತ್ತದೆ. ಬೇರೆ ರೆಗ್ಯುಲರ್ ಟ್ರೈನು-ಬಸ್ಸುಗಳಲ್ಲಿ ಸೀಟ್ ಸಿಗುವ ಪರಿ ಎಂತು? ಶುಕ್ರವಾರ ಸಂಜೆಯೊಳಗೆ ಬೆಳಗಾವಿ ತಲುಪುವುದೆಂತು? “ಚಿಂತೆಬೇಡ, ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ವಿಮಾನವೊಂದರ ವ್ಯವಸ್ಥೆಯಾಗಿದೆ, ಒಂದು ಸೀಟ್ ನಿಮಗೂ ಕಾಯ್ದಿರಿಸುತ್ತೇವೆ” ಎಂದು ಸಂಬಂಧಪಟ್ಟ ಅಧಿಕಾರಿಯಿಂದ ಭರವಸೆ. ಪುಣ್ಯಕ್ಕೆ ವಾಷಿಂಗ್ಟನ್-ಲಂಡನ್-ಬೆಂಗಳೂರು ವಿಮಾನ ಪ್ರಯಾಣದಲ್ಲಿ ಯಾವೊಂದೂ ಅಡಚಣೆಯಿಲ್ಲದೆ ಸರಿಯಾದ ಸಮಯಕ್ಕೆ ಬೆಂಗಳೂರು ವಿಮಾನನಿಲ್ದಾಣ ತಲುಪುವುದು ಸಾಧ್ಯವಾಯ್ತು. ಮನೆ ತಲುಪಿ ಸ್ನಾನ-ತಿಂಡಿ ಎಲ್ಲ ಮಾಡಿ ಮತ್ತೆ ಧಾವಾಧಾವಿಯಾಗಿ ವಿಮಾನನಿಲ್ದಾಣಕ್ಕೆ ನಿಗದಿತ ವೇಳೆಗೆ ಬರುವುದಕ್ಕಾಯ್ತು.

ಮಜಾ ಏನು ಗೊತ್ತಾ? ಆ ಬೆಂಗಳೂರು-ಬೆಳಗಾವಿ ವಿಶೇಷ ವಿಮಾನ ಯಶಸ್ವಿಯಾಗಿ ಹಾರುವುದಕ್ಕೆ ನನ್ನ ಕೊಡುಗೆಯೂ ಇತ್ತು! ಅದೇನು ಅಂತೀರಾ? ವಿಮಾನದಲ್ಲಿ ಅತ್ಯಂತ ‘ಹಗುರ’ದ ಪ್ರಯಾಣಿಕನೆಂದರೆ ನಾನೊಬ್ಬನೇ. ಮಿಕ್ಕವರೆಲ್ಲ ಮಹಾನ್ ‘ತೂಕ’ದ ವ್ಯಕ್ತಿಗಳು. ಬರೀ ಅವರೇ ಆಗಿದ್ದರೆ ಖಂಡಿತವಾಗಿಯೂ ವಿಮಾನ ಟೇಕ್‌ಆಫ್ ಆಗುವುದೂ ಕಠಿಣವಿತ್ತೇನೋ. ಕಂಬಾರ, ಜಿ.ಎಸ್. ಶಿವರುದ್ರಪ್ಪ, ನಿಸಾರ್ ಅಹಮದ್, ಅನಂತಮೂರ್ತಿಯವರಂಥ ಸಾಹಿತಿವರೇಣ್ಯರು, ಅಂಬರೀಶ್, ಜಯಂತಿ, ಭಾರತಿ, ಸರೋಜಾದೇವಿ, ಅನುಪ್ರಭಾಕರ್, ಜಯಮಾಲಾರಂಥ ಸಿನಿತಾರೆಯರು, ವಿಶ್ವೇಶ್ವರಭಟ್, ಜಯಶೀಲರಾವ್‌ರಂಥ ಹಿರಿಯ ಪತ್ರಕರ್ತರು, ಕ್ರಿಕೆಟಿಗ ಅನಿಲ್ ಕುಂಬ್ಳೆ, ಉದ್ಯಮಿ ಕ್ಯಾಪ್ಟನ್ ಗೋಪಿನಾಥ್, ಸುಧಾಮೂರ್ತಿ-ನಾರಾಯಣ ಮೂರ್ತಿ ದಂಪತಿಗಳು, ಸಿದ್ದರಾಮಯ್ಯ, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ವಿ.ಎಸ್.ಆಚಾರ್ಯರಂಥ ರಾಜಕಾರಣಿಗಳು ಶಾಸಕರು ಮಂತ್ರಿಗಳು, ಮತ್ತು ಖುದ್ದಾಗಿ ಮಾನ್ಯ ಮುಖ್ಯಮಂತ್ರಿ ಯಡ್ಯೂರಪ್ಪನವರು! ಅವರೆಲ್ಲರ ಕೈಕುಲುಕಿ ಕುಶಲ ವಿಚಾರಿಸಿದ ಮೇಲೂ ಇದು ಕನಸಲ್ಲ ತಾನೇ ಎಂದು ನಾನೊಮ್ಮೆ ಮೈಚಿವುಟಿಕೊಂಡೆ. ಚಿಕ್ಕವನಿದ್ದಾಗ ಎರಡನೇ ತರಗತಿಯಲ್ಲಿ ‘ಹಣ್ಣು ಮಾರುವವನ ಹಾಡು’ ಕಲಿಯುತ್ತ ‘ಬೆಳಗಾವಿಯ ಸವಿ ಸಪ್ಪೋಟ... ದೇವನಹಳ್ಳಿಯ ಚಕ್ಕೋತ...’ ಎಂದು ಕಂಠಪಾಠ ಮಾಡಿದ್ದೇನೆಯೇ ಹೊರತು ದೇವನಹಳ್ಳಿಯಿಂದ ಬೆಳಗಾವಿಗೆ ಹೀಗೊಂದು ವಿಮಾನಯಾನ ಮಾಡುತ್ತೇನೆಂದು ಕನಸಲ್ಲೂ ಎಣಿಸಿರಲಿಲ್ಲ. ಇದಿನ್ನು ನೆನಪಿನ ಫ್ರೇಮ್‌ನಲ್ಲಿರಬೇಕು. ಅದಕ್ಕೋಸ್ಕರ ಏನುಮಾಡಿದ್ದೇನೆಂದರೆ ವಿಮಾನ ಪ್ರಯಾಣದ ವೇಳೆಯೇ ಅನುಪ್ರಭಾಕರ್ ಕೈಯಲ್ಲಿ ನನ್ನ ಕ್ಯಾಮೆರಾ ಕೊಟ್ಟು ನನ್ನ ಅಕ್ಕಪಕ್ಕದಲ್ಲಿ ವಿಶ್ವೇಶ್ವರಭಟ್ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರಿರುವ ಭಂಗಿಯಲ್ಲಿ ಒಂದು ಅಪೂರ್ವ ಫೊಟೋ ಕ್ಲಿಕ್ಕಿಸಿಕೊಂಡಿಟ್ಟಿದ್ದೇನೆ. ‘ಇಂಥದೊಂದು ಬಾನಯಾನ’ ಎಂದು ಅದನ್ನಿನ್ನು ನನ್ನ ಸ್ಮೃತಿಪಟಲದ ಮೇಲೆ (ಮತ್ತು ಫೇಸ್‌ಬುಕ್ ಗೋಡೆಯ ಮೇಲೆ) ಅಂಟಿಸುವವನಿದ್ದೇನೆ.

ನೋಡಿದ್ರಾ? ಕೊನೆಗೂ ನನಗೆ ಇವತ್ತಿನ ಅಂಕಣದಲ್ಲಿ ಸಮ್ಮೇಳನ ವಿವರಗಳನ್ನು ಬಣ್ಣಿಸುವುದು ಆಗಲೇ ಇಲ್ಲ. ಯಾವುದನ್ನಂತ ಬರೀಲಿ? ಸಮ್ಮೇಳನದ ಆರಂಭದಲ್ಲಿ ನನ್ನ ನೆಚ್ಚಿನ ಕದ್ರಿ ಗೋಪಾಲನಾಥ್ ಸ್ಯಾಕ್ಸೊಫೋನ್ ಮಂಗಳಧ್ವನಿ ಮೊಳಗಿಸುತ್ತ  ‘ಇಳಿದು ಬಾ ತಾಯೇ ಇಳಿದು ಬಾ...’ ಎಂದು ನಾದದ ಅಲೆ ಹೊಮ್ಮಿಸಿದ್ದನ್ನೇ? ‘ಆರು ತೆರೆಯ ನೋಡಂಬಿಗಾ ಅದು ಮೀರಿಬರುತಲಿದೆ ಅಂಬಿಗಾ...’ ಎಂದು ನುಡಿಸುತ್ತಿದ್ದಂತೆಯೇ ಕಿತ್ತೂರುಚೆನ್ನಮ್ಮ ಕ್ರೀಡಾಂಗಣದಲ್ಲಿ ಕನ್ನಡಿಗ ಜನಸ್ತೋಮ ಲಕ್ಷಲಕ್ಷ ಸಂಖ್ಯೆಯಲ್ಲಿ ಅಲೆ‌ಅಲೆಗಳಾಗಿ ಬಂದದ್ದನ್ನೇ? ‘ಹಚ್ಚೇವು ಕನ್ನಡದ ದೀಪ...’ ನೃತ್ಯದ ವೇಳೆ ಬೇಲೂರು-ಹಳೇಬೀಡುಗಳ ಶಿಲಾಬಾಲಿಕೆಯರೇ ನರ್ತಿಸಿದರೆನ್ನಿಸುವಂಥ ಪರಿಣಾಮವನ್ನು ಅದ್ಭುತವಾಗಿ ಮೂಡಿಸಿ ಗಂಧರ್ವಲೋಕ ಸೃಷ್ಟಿಸಿದ ನೃತ್ಯಸಂಯೋಜನೆಯನ್ನೇ? ಕೊಳಲ ಮಾಂತ್ರಿಕ ಗೋಡಖಿಂಡಿ ಇದಕ್ಕಿಂತಲೂ ಗೋಡ (ಮರಾಠಿಯಲ್ಲಿ ಸಿಹಿ) ಆಗಲು ಸಾಧ್ಯವೇ ಇಲ್ಲವೆಂಬಂತೆ ಮಧುರವಾಗಿ ಮುರಲೀನಾದದ ಮೋಡಿ ಮಾಡಿದ್ದನ್ನೇ? ಐಶ್ವರ್ಯಾ ರೈ ಬಂದಾಗ ‘ಕನ್ನಡದ ದೀಪ’ಕ್ಕಿಂತಲೂ ಹೆಚ್ಚಿನ ಜಗಮಗ ವೇದಿಕೆಯಲ್ಲಿ ಕೋರೈಸಿದ್ದನ್ನೇ? ಸಾಂಪ್ರದಾಯಿಕ ಹಣತೆಗಳು ಮತ್ತು ಭುವನಸುಂದರಿಯ ಜಗಮಗ ಸಾಲದೆಂಬಂತೆ ಅತ್ಯಾಧುನಿಕ ತಂತ್ರಜ್ಞಾನದ ‘ಲೇಸರ್ ಶೋ’ದಲ್ಲಿಯೂ ಕನ್ನಡದ ಕೋಲ್ಮಿಂಚು ಕಂಗೊಳಿಸಿದ್ದನ್ನೇ? ದೀಪ ಬೆಳಗಿಸಿ ಉದ್ಘಾಟನಾ ಭಾಷಣ ಮಾಡಿದ ನಾರಾಯಣ ಮೂರ್ತಿಯವರು ಅಚ್ಚಕನ್ನಡದಲ್ಲಿ ಸ್ವಚ್ಛಸುಂದರ ಸ್ಫೂರ್ತಿಯುತ ಮಾತುಗಳನ್ನಾಡಿ, ಬರೀ ವಿವಾದಗಳನ್ನೆಬ್ಬಿಸುವುದರಲ್ಲೇ ಖುಶಿ ಕಾಣುವವರ ಬಾಯ್ಮುಚ್ಚಿಸಿದ್ದನ್ನೇ?

ನನಗ್ಗೊತ್ತು, ಇದು ಮಹಾಸಾಗರದಿಂದ ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ತಂದಂತೆ. ಇಷ್ಟು ಮಾತ್ರ ಹೇಳಬಲ್ಲೆ- ‘ಕುಂದ’ದ ಸಿಹಿ ಬೆಳಗಾವಿಯದು; ಎಂದೆಂದಿಗೂ ಕುಂದದ ಕೀರ್ತಿ ನಮ್ಮ ಕನ್ನಡದ್ದು, ನಮ್ಮೆಲ್ಲರ ಕರ್ನಾಟಕದ್ದು! ಈ ರೀತಿಯ ವಿಶ್ವ ಕನ್ನಡ ಸಮ್ಮೇಳನಗಳು ಆಗುತ್ತಲೇ ಇರಲಿ. ವಿಶ್ವದಲ್ಲೆಲ್ಲ ಕನ್ನಡಿಗರು, ಕರ್ನಾಟಕ, ಮತ್ತು ಕನ್ನಡ ಮೇಳೈಸುತ್ತಲೇ ಇರಲಿ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]


Download(Loading) You can follow any responses to this entry through the RSS 2.0 feed. You can leave a response , or trackback from your own site.