Episodes
Saturday Oct 23, 2010
Story of the Danaides
Saturday Oct 23, 2010
Saturday Oct 23, 2010
ದಿನಾಂಕ 24 ಅಕ್ಟೋಬರ್ 2010ರ ಸಂಚಿಕೆಯಲ್ಲಿ...
ಬುಡ ಒಡೆದ ಗಡಿಗೆಯೂ ಕೊಡ ಹಿಡಿದ ಬೆಡಗಿಯೂ
ಲೇಖನವನ್ನು ನೀವು ಇಲ್ಲಿ ಓದಬಹುದು. "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Sep 18, 2010
Bundh Open
Saturday Sep 18, 2010
Saturday Sep 18, 2010
ದಿನಾಂಕ 19 ಸಪ್ಟೆಂಬರ್ 2010ರ ಸಂಚಿಕೆಯಲ್ಲಿ...
ಬಂದೋಪಾಧ್ಯಾಯರ ಬಂದ್ ಸಮೀಕ್ಷೆ ಓಪನ್ ಆದಾಗ...
ಲೇಖನವನ್ನು ನೀವು ಇಲ್ಲಿ ಓದಬಹುದು. "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Aug 28, 2010
clean hands and moral purity
Saturday Aug 28, 2010
Saturday Aug 28, 2010
ದಿನಾಂಕ 29 ಆಗಸ್ಟ್ 2010ರ ಸಂಚಿಕೆಯಲ್ಲಿ...
ಕೈ ತೊಳೆದುಕೊಂಡರೆ ಮನಸ್ಸು ತೊಳೆದುಕೊಂಡಂತೆಯೇ?
ಲೇಖನವನ್ನು ನೀವು ಇಲ್ಲಿ ಓದಬಹುದು. "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Aug 21, 2010
Childhood Days
Saturday Aug 21, 2010
Saturday Aug 21, 2010
ದಿನಾಂಕ 22 ಆಗಸ್ಟ್ 2010ರ ಸಂಚಿಕೆಯಲ್ಲಿ...
ನನ್ನ ಬಾಲ್ಯದ ಸುಂದರ ದಿನಗಳನ್ನು ನನಗೆ ಮರಳಿಸಿ
ಅದು ಸುಪ್ರಸಿದ್ಧ ಗಝಲ್ ಗಾಯಕ ಜಗಜಿತ್ ಸಿಂಗ್ ಹಾಡಿರುವ, ತುಂಬಾ ತುಂಬಾ ಜನಪ್ರಿಯ ಎನಿಸಿರುವ ಒಂದು ಗಝಲ್. ಅದನ್ನು ಹಾಡುವಂತೆ ಶ್ರೋತೃಗಳಿಂದ ಕೋರಿಕೆ ಬಾರದಿದ್ದರೆ ಜಗಜಿತ್ ಸಿಂಗ್ನ ಯಾವುದೇ ಲೈವ್ ಕನ್ಸರ್ಟ್ ಕಾರ್ಯಕ್ರಮವೂ ಪರಿಪೂರ್ಣ ಎನಿಸುವುದಿಲ್ಲ. ಅಂಥದೊಂದು ಪಾಪ್ಯುಲಾರಿಟಿ ಆ ಹಾಡಿಗಿದೆ. ‘ವೊ ಕಾಗಜ್ ಕೀ ಕಶ್ತೀ ವೊ ಬಾರಿಶ್ ಕಾ ಪಾನಿ...’ ಎಂದು ಶುರುವಾಗುವ ಆ ಗಝಲ್ ನನಗೆ ತುಂಬಾ ಅಚ್ಚುಮೆಚ್ಚಿನದು. ಎಷ್ಟುಸಲ ನಾನದನ್ನು ಕೇಳಿ ಆನಂದಿಸಿದ್ದೇನೆಂಬುದಕ್ಕೆ ಲೆಕ್ಕವೇ ಇಲ್ಲ. ಗಝಲ್ನ ಸಾಲುಗಳನ್ನು ಕನ್ನಡಕ್ಕೆ ಅರ್ಥಾನುವಾದ ಮಾಡಿ ಇಲ್ಲಿ ನಿಮ್ಮ ಓದಿಗೆ ಒದಗಿಸುತ್ತಿದ್ದೇನೆ, ಇವತ್ತಿನ ಅಂಕಣದ ತಿರುಳಿಗೆ ಹೊಂದಿಕೊಳ್ಳುವಂತೆ ಜೋಡಿಸಿರುವ ಮೂರು ಬೇರೆಬೇರೆ ವಿಷಯಗಳ ಪೈಕಿ ಮೊದಲನೆಯದಾಗಿ. “ಬೇಕಿದ್ದರೆ ಈ ದೌಲತ್ತನ್ನು ನನ್ನಿಂದ ಕಸಿದುಕೊಳ್ಳಿ. ನನ್ನಲ್ಲಿರುವ ಸಂಪತ್ತನ್ನೆಲ್ಲ ತೆಗೆದುಕೊಂಡುಹೋಗಿ. ಬೇಕಿದ್ದರೆ ನನ್ನ ತಾರುಣ್ಯವನ್ನೂ ನನ್ನಿಂದ ಕಿತ್ತುಕೊಳ್ಳಿ. ಆದರೆ ನನ್ನ ಬಾಲ್ಯದ ಸುಂದರ ದಿನಗಳನ್ನು ನನಗೆ ಮರಳಿಸಿ. ಆ ಕಾಗದದ ದೋಣಿ... ಆ ಮಳೆಯ ನೀರು... ನಮ್ಮ ಬೀದಿಯ ಅತ್ಯಂತ ಹಳೆಯ ಗುರುತಾಗಿದ್ದ ಆ ಮುದುಕಿಯನ್ನು ನಾವು ಮಕ್ಕಳೆಲ್ಲ ಸೇರಿ ‘ನಾನಿ’ ಅಂತ ಕರೆಯುತ್ತಿದ್ದೆವಲ್ಲ? ಅವಳ ಮಾತುಗಳಲ್ಲಿ, ಸುಕ್ಕುಗಟ್ಟಿದ ಕೆನ್ನೆಗಳಲ್ಲಿ ಮಾಗಿದ ಜೀವನಾನುಭವ ಭಂಡಾರ... ಅವಳು ನಮಗೆ ಹೇಳುತ್ತಿದ್ದ ಕಥೆಗಳಲ್ಲಿ ಬರುವ ಆ ಸುಂದರ ರಾಜಕುಮಾರಿ... ಮರೆತಿಲ್ಲ ಇದನ್ನು ನಾನು. ಮರೆಯುವುದು ಯಾರಿಗೂ ಸಾಧ್ಯವೂ ಇಲ್ಲ... ರಾತ್ರಿಗಳು ಕಿರಿದೆನಿಸುತ್ತಿದ್ದುವು, ಕಥೆ ಕೇಳುತ್ತ ಕೇಳುತ್ತ ಬೆಳಗಾಗಿಬಿಡುತ್ತಿತ್ತೇ ಹೊರತು ಕಥೆ ಇನ್ನೂ ಉಳಿದಿರುತ್ತಿತ್ತು! ಆಟ ಆಡಿಕೊಳ್ಳಲೆಂದು ಬಿಸಿಲ ಝಳದಲ್ಲಿ ನಮ್ಮ ಮನೆಗಳಿಂದ ಹೊರಡುತ್ತಿದ್ದೆವು... ಹಕ್ಕಿ ಹಿಡಿಯುವ ಸಾಹಸ ಮಾಡುತ್ತಿದ್ದೆವು... ಚಿಟ್ಟೆಯ ಹಿಂದೆ ಓಡುತ್ತಿದ್ದೆವು... ಗೊಂಬೆಗೆ ಮದುವೆ ಮಾಡಿಸುವಾಗ ಜಗಳವೂ ಆಗುತ್ತಿತ್ತು... ಆಲದ ಮರದ ತೊಗಟೆ ಚೂರುಗಳೇ ಮದುವೆಯ ಉಡುಗೊರೆಗಳು. ಉಯ್ಯಾಲೆಯಿಂದ ಬೀಳುತ್ತಿದ್ದೆವು, ಬಿದ್ದು ಏಳುತ್ತಿದ್ದೆವು. ಮೈ-ಕೈ ಮೇಲೆಲ್ಲ ಬಳೆ ಚೂರುಗಳ ಗುರುತುಗಳು... ಅವನ್ನೆಲ್ಲ ಮರೆಯುವುದಾದರೂ ಹೇಗೆ? ಮರಳಿನ ದಿಬ್ಬಗಳ ಮೇಲಕ್ಕೆ ಹೋಗುತ್ತಿದ್ದೆವು. ಮರಳಿನ ಸೌಧ ಕಟ್ಟಿ ಮತ್ತೆ ಅದನ್ನೇ ಮುರಿಯುತ್ತಿದ್ದೆವು. ಮುಗ್ಧ ಆಸೆಗಳೇ ತುಂಬಿಕೊಂಡಿದ್ದ ಮನಸು. ಕಣ್ತುಂಬ ಕನಸು. ಕನಸುಗಳದೇ ಲೋಕ. ನಮ್ಮ ಪ್ರಪಂಚದಲ್ಲಿ ದುಃಖ ಅಂತ ಎಲ್ಲಿತ್ತು? ಸಂಬಂಧಗಳ ಬಂಧನ ಎಲ್ಲಿತ್ತು? ಎಷ್ಟೊಂದು ಮುದವಾಗಿತ್ತು ಆ ದಿನಗಳ ಜೀವನ!” ಇನ್ನೊಂದು, ಅದೇ ರೀತಿಯದು, ಪೆರ್ರಿ ಬ್ಲೇಕ್ ಎಂಬ ಹೆಸರಿನ ಇಂಗ್ಲಿಷ್ ಗಾಯಕ (ಮೂಲತಃ ಐರ್ಲೇಂಡ್ ದೇಶದವನು; ಬಿಬಿಸಿ ರೇಡಿಯೋದಲ್ಲಿಯೂ ಹಾಡಿ ಯುರೋಪ್ನಲ್ಲೆಲ್ಲ ಸಾಕಷ್ಟು ಪ್ರಖ್ಯಾತನಾದವನು) ಹಾಡಿರುವ `Give me back my childhood...' ಹಾಡು. ಅದರಲ್ಲಿ, ಸುಂದರ ಯುವಕನೊಬ್ಬ ತನ್ನ ಹಿಂದೆ ಬಿದ್ದಿರುವ ತರುಣಿಯರ ಕಾಟ ತಪ್ಪಿಸಲಿಕ್ಕಾದರೂ Give me back my childhood. Give me back what I have lost... ಎಂದು ದೇವರಲ್ಲಿ ಮೊರೆಯಿಡುತ್ತಿದ್ದಾನೇನೋ ಎಂಬ ಚಿತ್ರಣ. ಆ ಹಾಡಿನಲ್ಲೇ ಬರುವ ಒಂದು ಸಾಲು- That confidence can make a cripple skip on rivers (ತುಂಬಿತುಳುಕುವ ಆತ್ಮವಿಶ್ವಾಸವೊಂದೇ ಸಾಕು, ಕುಂಟನನ್ನೂ ನದಿ ದಾಟಿಸೀತು!) ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತದೆ. ಮೂರನೆಯದಾಗಿ, ಕೆಲದಿನಗಳ ಹಿಂದೆ ನಾನು ಹೀಗೇಒಂದು ಸರ್ವೇಸಾಮಾನ್ಯ ಇಮೇಲ್ ಸಂದೇಶವನ್ನು ಸ್ನೇಹಿತರಿಗೆಲ್ಲ ಕಳಿಸಿದಾಗ ಅದಕ್ಕೆ ಬಂದ ಪ್ರತಿಕ್ರಿಯೆಗಳು ತಂದುಕೊಟ್ಟ ಅಚ್ಚರಿ. ನನ್ನ ಇಮೇಲ್ನಲ್ಲಿದ್ದ ವಿಷಯ ಇಷ್ಟೇ- “ನಾವೆಲ್ಲ ಚಿಕ್ಕಂದಿನಲ್ಲಿ ಚಪ್ಪರಿಸಿದ, ನಮ್ಮೆಲ್ಲರ ಪ್ರೀತಿಯ ‘ಚಂದಮಾಮ’ ಮಾಸಪತ್ರಿಕೆ ಈಗ ಅಂತರ್ಜಾಲದಲ್ಲಿ ಲಭ್ಯವಿದೆ. ಈಗಿನ ಸಂಚಿಕೆಗಳಷ್ಟೇ ಅಲ್ಲ, ೧೯೪೯ರಿಂದ ಮೊದಲ್ಗೊಂಡು ಹಳೆಯ ಸಂಚಿಕೆಗಳನ್ನೆಲ್ಲ ಮುದ್ರಿತ ಪ್ರತಿ ಹೇಗಿರುತ್ತಿತ್ತೋ ಅದೇ ಸ್ವರೂಪದಲ್ಲಿ ಪುಟ ತಿರುಗಿಸುತ್ತ ಓದುವ ಅನುಕೂಲವಿದೆ. www.chandamama.com ವೆಬ್ಸೈಟ್ಗೆ ಭೇಟಿಕೊಡಿ. ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ಸಂಸ್ಕೃತ, ತಮಿಳು, ತೆಲುಗು - ನಿಮಗೆ ಬೇಕಾದ ಭಾಷೆಯನ್ನು ಆಯ್ದುಕೊಂಡು ಆಮೇಲೆ ಹಳೇಸಂಚಿಕೆಗಳ ಉಗ್ರಾಣಕ್ಕೆ ಅಂದರೆ Archives ವಿಭಾಗಕ್ಕೆ ಹೋಗುವುದನ್ನು ಮರೆಯಬೇಡಿ.” ಅದೆಂಥ ಅನರ್ಘ್ಯ ನಿಧಿ ಸಿಕ್ಕಂತಾಯ್ತೋ ಗೊತ್ತಿಲ್ಲ, ಹಳೇ ಚಂದಮಾಮ ಸಂಚಿಕೆಗಳು ಕಂಪ್ಯೂಟರ್ ಪರದೆ ಮೇಲೆ ಮೂಡಿದಾಗ ಒಬ್ಬೊಬ್ಬರೂ ಅನುಭವಿಸಿದ ರೋಮಾಂಚನ ಮಾತ್ರ ವರ್ಣನಾತೀತ ಎಂದು ಆ ಪ್ರತಿಕ್ರಿಯೆಗಳಿಂದ ಸ್ಪಷ್ಟವಾಗಿತ್ತು. “ಚಂದಮಾಮ ಲಿಂಕ್ ಕಳಿಸಿದ್ದಕ್ಕೆ ಥ್ಯಾಂಕ್ಸ್. ನನ್ನನ್ನು ಬಾಲ್ಯದ ನೆನಪುಗಳಿಗೆ ಕರೆದೊಯ್ದಿರಿ” ಎಂದು ಒಬ್ಬರೆಂದರೆ “ನನ್ನ ಬಾಲ್ಯವನ್ನು ಹುಡುಕಿಕೊಟ್ಟದ್ದಕ್ಕೆ ಧನ್ಯವಾದಗಳು” ಎಂದು ಬರೆದರು ಇನ್ನೊಬ್ಬರು. “ಟೈಮ್ಟ್ರಾವೆಲ್ ಮೆಶಿನ್ನಲ್ಲಿ ಕುಳಿತು ನಾನೊಂದು ಸುಂದರಲೋಕವನ್ನೇ ಪ್ರವೇಶಿಸಿದೆ” ಎಂದರು ಮತ್ತೊಬ್ಬರು. “ನನಗೆ ದೊರೆತ ಅತ್ಯಂತ ಪೀತಿಯ ಕೊಡುಗೆ ಇದು. ತತ್ಕ್ಷಣವೇ ಚಂದಮಾಮಾದ ಹಳೆಯ ಸಂಚಿಕೆಗಳನ್ನು ಓದಲು ಪ್ರಾರಂಭಿಸಿದೆ. ನನ್ನ ಬಾಲ್ಯಕ್ಕೆ ನನ್ನನ್ನು ಮರಳಿಸಿದಿರಿ. ಧನ್ಯವಾದಗಳು” ಎಂದರು ಮಗದೊಬ್ಬ ಹಿರಿಯರು. “ಹಳೆಯ ಚಂದಮಾಮ ಓದತೊಡಗಿದ್ದೇನೆ. ನಾನು ಹುಟ್ಟುವುದಕ್ಕೂ ಹಿಂದಿನವು! ಕೆಲವು ಧಾರಾವಾಹಿಗಳು ಇವತ್ತಿಗೂ ಅದೇ ಖುಷಿ ಕೊಡುತ್ತಿವೆ. ಬಾಲ್ಯ ನೆನಪಾಗುತ್ತಿದೆ (ಹೊರಗೆ ಮತ್ತೆ ಮಳೆ ಸುರಿಯುತ್ತಿದೆ). ಇವುಗಳಲ್ಲಿ ಹಲವು ಚಂದಮಾಮಗಳು ಬೈಂಡ್ ಆಗಿ ನಮ್ಮ ಮನೆಯಲ್ಲಿ ರಾಶಿ ಬಿದ್ದಿವೆ. ಆದರೇನು, ನಂತರದ ತಲೆಮಾರಿಗೆ ಬೇಡವಾಗಿವೆ. ಈಗ ಎಲ್ಲವನ್ನೂ ಒಟ್ಟಿಗೆ ಸರಾಗವಾಗಿ ಓದುವ ಸೌಭಾಗ್ಯ!” ಎಂಬ ಉದ್ಗಾರ; “ಚಂದಮಾಮ ಲಿಂಕ್ ನೋಡಿ ನನಗಾಗಿರುವ ಖುಶಿ ಹೇಳಲು ಅಸಾಧ್ಯ. ಒಂದು ಕಾಲದಲ್ಲಿ ನಾವು ಮನೆಯಲ್ಲಿ ಚಂದಮಾಮ ಪುಸ್ತಕಕ್ಕೆ ಜಗಳಾಡುತ್ತಿದ್ದೆವು. ಚಂದಮಾಮ ನನ್ನ ಆತ್ಮೀಯ ಮಿತ್ರನಾಗಿದ್ದ. ಸ್ವಾರಸ್ಯವೆಂದರೆ ಚಂದಮಾಮ ನನ್ನ ಅಜ್ಜಿಯನ್ನೂ ಅಕ್ಷರಸ್ಥಳಾಗಿಸಿತು! ನಾವು ಚಂದಮಾಮ ಕಥೆಗಳನ್ನು ಅವರಿಗೆ ಓದಿ ಹೇಳುತ್ತಿದ್ದೆವು, ಕ್ರಮೇಣ ಅವರೂ ಅಕ್ಷರಪರಿಚಯ ಮಾಡಿಕೊಂಡು ತಾವೇ ಸ್ವತಹ ಓದುವುದನ್ನು ಕಲಿತಿದ್ದರು” ಎಂಬ ಅನುಭವವರ್ಣನೆ; “ಚಂದಮಾಮನನ್ನು ನೋಡಿ ನನ್ನ ಬಾಲ್ಯ ಮರುಕಳಿಸಿದಂತಾಗಿದೆ. ಆ ದಿನಗಳಲ್ಲಿ ನಾನು ಚಂದಮಾಮನನ್ನು ಜೀವಕ್ಕೆ ಜೀವ ಕೊಡುವ ಗೆಳೆಯನಂತೆ ಪ್ರೀತಿಸುತ್ತಿದ್ದೆ. ಅಚ್ಚರಿಯ ಮಾತೆಂದರೆ ಈಗಲೂ ಅವನ ಮೇಲಿನ ಪ್ರೀತಿ ಕಿಂಚಿತ್ತೂ ಕಮ್ಮಿಯಾಗಿಲ್ಲ. ಇವತ್ತಿಗೂ ಹಳೆಯ ಚಂದಮಾಮ ಪ್ರತಿಗಳು ಸಿಕ್ಕರೆ ಚಡ್ಡಿ ಹಾಕುತ್ತಿದ್ದ ಹುಡುಗನಾಗಿಬಿಡುತ್ತೇನೆ! ಅದೇಕೋ ಏನೋ, ಹಳೆಯ ಸಂಚಿಕೆಗಳೆಂದರೆ ಅಷ್ಟೊಂದು ಅಕ್ಕರೆ. ಆ ಕತೆಗಳ ಸರಳತೆ, ಆಪ್ತತೆ, ನೀತಿಪಾಠ ಹೇಳುವ ಬಗೆಯಲ್ಲಿ ಹೊಸತನ- ಇವೆಲ್ಲ ಎಷ್ಟೊಂದು ಮುದ್ದುಮುದ್ದಾಗಿದ್ದವು! ಹಳೆಯ ಚಂದಮಾಮನ ಆಪ್ತತೆ ಈಗಿನ ಸಂಚಿಕೆಗಳಲ್ಲಿಲ್ಲ. ಹಳೆಯ ಸಂಚಿಕೆಗಳ ಆ ವಾಸನೆಗಾಗಿ ಮನಸ್ಸು ಕಾತರಿಸುತ್ತದೆ. ಹೊಚ್ಚಹೊಸ ಸಂಚಿಕೆಗಳ ನುಣುಪಾದ ನ್ಯೂಸ್ಪ್ರಿಂಟಿನಲ್ಲಿ ಆ ಹಳೆಯ ಗೆಳೆಯನ ಸಲಿಗೆ ಬರುವುದಿಲ್ಲ. ಯಾಕಿರಬಹುದು? ನಿಮಗೂ ಹಾಗೆ ಅನಿಸುತ್ತದೆಯ?” ಎಂಬ ಅಭಿಪ್ರಾಯ; “ಆನಂದಬಾಷ್ಪ ಉಕ್ಕಿಬಂತು ಚಂದಮಾಮ ಹಳೆಸಂಚಿಕೆಗಳನ್ನು ಕಂಡು. ಸರಳ ಸುಂದರ ಭಾಷೆ ಕಲಿಯಲಿಕ್ಕೆ ಚಂದಮಾಮ ಪತ್ರಿಕೆಯ ಓದು ಒಂದೇಸಾಕು. ನನ್ನ ಮಟ್ಟಿಗೆ ಹೇಳುವುದಾದರೆ ವ್ಯಕ್ತಿತ್ವವಿಕಸನಕ್ಕೂ, ನನ್ನಲ್ಲಿ ಭಾರತೀಯತೆಯ ಬೀಜ ಬಿತ್ತುವುದಕ್ಕೂ ಚಂದಮಾಮನೇ ಕಾರಣ.” ಎಂಬ ಆತ್ಮನಿವೇದನೆ. ಅಂತೂ ಚಂದಮಾಮ ವೆಬ್ ಲಿಂಕ್ ಎಲ್ಲರಿಗೂ ಮಧುರ ನೆನಪನ್ನು, ಅದು ಮೂಡಿಸುವ ಪುಳಕವನ್ನು, ಸಲೀಸಾಗಿ ಮಾಡಿಕೊಟ್ಟಿತ್ತು. ಬಾಲ್ಯದ ನೆನಪುಗಳ ಸಿರಿತನ-ಸಿಹಿತನಗಳ ಮಹಿಮೆಯೇ ಅಂಥದು. ಅದನ್ನೇ ಇವತ್ತಿನ ಅಂಕಣದ ಥೀಮ್ ಆಗಿಟ್ಟುಕೊಂಡು ಮೂರು ಬೇರೆಬೇರೆ ವಿಚಾರಗಳನ್ನು ಪೋಣಿಸಿದೆ. ನನ್ನ ಆಖ್ಯಾನ-ಉಪಾಖ್ಯಾನಗಳನ್ನು ಬೇಕಂತಲೇ ದೂರವಿರಿಸಿ ಅಂಕಣವನ್ನು ತುಸು ಭಿನ್ನವಾಗಿ ಪ್ರಸ್ತುತಪಡಿಸಿದೆ. ಇದನ್ನು ಓದಿದ ಮೇಲೆ ನಿಮ್ಮ ಮನಸ್ಸಿನಲ್ಲೊಂದು ವಿಶೇಷ ಅನುಭೂತಿ ವ್ಯಕ್ತವಾದರೆ, ‘ಬಾಲ್ಯದ ಆಟ ಆ ಹುಡುಗಾಟ’ದ ಸ್ವಚ್ಛಂದ ದಿನಗಳು ನಿಮ್ಮ ಕಣ್ಮುಂದೆಯೂ ಸುಳಿದರೆ, ಈ ಒಂದು ಪರಾಗ-ಪ್ರಯೋಗ ಸಾರ್ಥಕವಾದಂತೆಯೇ! * * * * * * ಕಳೆದವಾರದ ಅಂಕಣದಲ್ಲಿ ಉಪ್ಪಿನ ಮೂಟೆಯ ಕೊನೆಗೊಂದು ರಸಪ್ರಶ್ನೆ ಕೇಳಿದ್ದೆ. ‘ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಣಿಂದೆತ್ತ ಸಂಬಂಧ ಎಂದ ಶಿವಶರಣರ ಹೆಸರೇನು?’ ಎಂಬ ಪ್ರಶ್ನೆ. ಸುಳಿವಿನಲ್ಲಿ ‘ಅಲ್ಲ’ ಎಂದು ಉದ್ಧರಣ ಚಿಹ್ನೆಯೊಳಗೆ ಬರೆದು ನಲ್ವತ್ತು ಶೇಕಡಾದಷ್ಟು ಉತ್ತರವನ್ನೂ ತಿಳಿಸಿದ್ದೆ. ಸರಿಯುತ್ತರ ‘ಅಲ್ಲಮಪ್ರಭು’. ಬಹಳಷ್ಟು ಓದುಗರು ಅದನ್ನು ಸುಲಭವಾಗಿಯೇ ಕಂಡುಕೊಂಡು ಬರೆದು ತಿಳಿಸಿದ್ದಾರೆ. ಎರಡು ಪತ್ರಗಳನ್ನು ಮಾತ್ರ ಅವುಗಳ ವಿಭಿನ್ನತೆಗಾಗಿ ಇಲ್ಲಿ ಅಳವಡಿಸಿಕೊಂಡಿದ್ದೇನೆ. ಬೆಂಗಳೂರಿನಿಂದ ವೆಂಕಟಪ್ರಸಾದ್ ಭಟ್ ರಸಪ್ರಶ್ನೆಗೆ ಉತ್ತರವನ್ನೂ ಲೇಖನಕ್ಕೆ ಪ್ರತಿಕ್ರಿಯೆಯನ್ನೂ ಒಟ್ಟಾಗಿ ಹೆಣೆದು ಬರೆದಿರುವ ರೀತಿ ಹೇಗಿದೆ ನೋಡಿ. “ಅಲ್ಲ, ಮಾ ಪ್ರಭೂ... ಈವಾರದ ಅಂಕಣ ಅದೆಷ್ಟು ಉಪ್ಪುಪ್ಪಾಗಿ ಬರೆದಿದ್ದೀರಾ. ಓದಿದವರೆಲ್ಲ ಬಿಪಿ ಟೆಸ್ಟ್ ಮಾಡಿಸ್ಕೋಬೇಕಾಗ್ತದೆ ಅಷ್ಟೇ!” ಬೆಂಗಳೂರಿನಿಂದಲೇ ಶಕುಂತಲಾ ಬಾಗಲಕೋಟ್ ಬರೆದಿರುವ ಪತ್ರದಲ್ಲಿ ಉತ್ತರದ ಜತೆಗೆ ಪೂರಕ ಮಾಹಿತಿಯೂ ಇದೆ- “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ? ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ? - ಇದು ಅಲ್ಲಮಪ್ರಭುವಿನ ಬಹಳ ಜನಪ್ರಿಯವಾದ ವಚನಗಳಲ್ಲೊಂದು. ಸಂಬಂಧದ ಎಳೆಗಳನ್ನು ನಮ್ಮೆದುರಿಗೆ ಹರಡುತ್ತದೆ. ಅದಕ್ಕಿಂತ ಹೆಚ್ಚಾಗಿ ಕಾವ್ಯಾತ್ಮಕ ಗುಣದಿಂದ ನಮ್ಮನ್ನು ಸೆಳೆಯುತ್ತದೆ. ಮೊದಲನೆಯದಾಗಿ, ಶೂನ್ಯ ಸಂಪಾದನೆಯಲ್ಲಿ ಈ ವಚನ ಉಕ್ತವಾಗಿರುವ ಸಂದರ್ಭ ತುಂಬಾ ಗಂಭೀರವಾದದ್ದು. ಅಲ್ಲಮ ತಾನು ಉತ್ಕಟವಾಗಿ ಪ್ರೀತಿಸುತ್ತಿದ್ದ ಕಾಮಲತೆ ಮಹಾಜ್ವರದಿಂದ ಮೃತಳಾಗಿದ್ದಾಳೆ ಎಂದು ತಿಳಿದು ತೀವ್ರ ನಿರಾಶೆಗೊಳಗಾಗುತ್ತಾನೆ. ಬದುಕನ್ನೇ ನಿರಾಕರಿಸಿದ ಸ್ಥಿತಿಯಲ್ಲಿ, ಹೂತು ಹೋಗಿದ್ದ ಶಿವಾಲಯವನ್ನು ಪ್ರವೇಶಿಸಿದಾಗ ಅಲ್ಲಿ ಅನಿಮಿಷಯೋಗಿಯನ್ನು ಕಾಣುತ್ತಾನೆ. ಅನಿಮಿಷಯೋಗಿ ತನ್ನ ಕೈಯಲ್ಲಿದ್ದ ಜ್ಯೋತಿರ್ಲಿಂಗವನ್ನು ಅಲ್ಲಮನಿಗೆ ಕೊಟ್ಟು ಪ್ರಾಣ ಬಿಡುತ್ತಾನೆ. ಅದುವರೆಗೂ ಅನಿಮಿಷನ ಕೈಯಲ್ಲಿದ್ದ ಜ್ಯೋತಿರ್ಲಿಂಗ ಈಗ ಅಲ್ಲಮನ ಕೈಯಲ್ಲಿ. ಈ ಘಟನೆ ಅಲ್ಲಮನ ಬದುಕಿನ ದಿಕ್ಕನ್ನು ಬದಲಿಸುತ್ತದೆ. ಬದುಕನ್ನೇ ನಿರಾಕರಿಸಿ ಹೊರಟವನಿಗೆ ಮತ್ತೊಂದು ಬದುಕಿನ ದಾರಿ ತೆರೆಯುತ್ತದೆ. ಇಂಥ ಸಂದರ್ಭದ ಅಚ್ಚರಿ ಮತ್ತು ಧನ್ಯತಾಭಾವದಲ್ಲಿ ಈ ವಚನದ ಉಗಮವಾಗಿದೆ. ಇದನ್ನು ನಾನು ಈಹಿಂದೆ ಓದಿದ್ದೆ, ಕೇಳಿದ್ದೆ. ನಿಮ್ಮ ಪ್ರಶ್ನೆ ನೋಡಿದಕೂಡಲೇ ಅಲ್ಲಮಪ್ರಭುವಿನ ವಚನವಿರಬೇಕೆಂದು ಊಹಿಸಿದೆ. ಸ್ಪಷ್ಟವಾಗಿ ಗೊತ್ತಿರಲಿಲ್ಲ. ಡಿಸೆಂಬರ್ ೨೦೦೯ರ ಬಸವಪಥ ಮಾಸಿಕದಲ್ಲಿ ತಡಕಾಡಿದಾಗ ಕೈಗೆ ಸಿಕ್ಕಿದ್ದು ‘ಅಲ್ಲಮಪ್ರಭುವಿನ ವಚನಗಳಲ್ಲಿ ಕಾವ್ಯತತ್ತ್ವ’ ಶೀರ್ಷಿಕೆಯಡಿ ಈ ವಚನಾಮೃತ! ಕಳೆದು ಹೋದ ನಿಧಿ ಸಿಕ್ಕಂತಾಯಿತು. ಆ ಲೇಖನದ ಸಾರಸಂಗ್ರಹವನ್ನೇ ಇಲ್ಲಿ ಬರೆದು ನಿಮಗೆ ಕಳುಹಿಸಿರುವೆ.” * * * "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125