ಪರಾಗಸ್ಪರ್ಶ

ಈಗ ಆಡಿಯೋ ಟಚ್!

13
Feb
Posted in Humor by sjoshi at 7:59 pm

ಇದೇ ಅಣಕು ಹಾಡು... ಹದದಿ ಕೆಣಕೊ ಹಾಡು...
[ ವಿಶ್ವವಾಣಿ ಪತ್ರಿಕೆಯ ’ತಿಳಿರುತೋರಣ’ ಅಂಕಣದಲ್ಲಿ 14Feb2016ರಂದು ಪ್ರಕಟವಾದ ಲೇಖನದ ವಿಸ್ತೃತ ರೂಪ ]

* ಶ್ರೀವತ್ಸ ಜೋಶಿ

ಅಣಕವಾಡು ಅಥವಾ ಅಣಕು ಹಾಡು ಅಂದರೆ ಸುಪ್ರಸಿದ್ಧವಾದ ಮೂಲ ಹಾಡುಗಳನ್ನು ಅನುಕರಿಸಿ ಅಣಕಿಸುವ ಪದ್ಯರಚನೆ. ಇಡೀ ಹಾಡಿನ ಪ್ರತಿರೂಪ ಇರಬೇಕಂತೇನಿಲ್ಲ. ಪಲ್ಲವಿ ಅಥವಾ ಬರೀ ಒಂದು ಸಾಲು ಸಾಕು, ಪದ ಬದಲಿಸಿಕೊಂಡ ಪರ್ಯಾಯ ಪದ್ಯ ನಗೆಯುಕ್ಕಿಸುತ್ತದೆ, ಕಚಗುಳಿ ಇಡುತ್ತದೆ. ಕೊರವಂಜಿ, ಅಪರಂಜಿ ಮುಂತಾದ ಹಾಸ್ಯಮಾಸಿಕಗಳಲ್ಲಿ, ಸುಧಾ ಹಾಸ್ಯಸಂಚಿಕೆಗಳಲ್ಲಿ ಮತ್ತು ಇತ್ತೀಚೆಗೆ ಸ್ಟಾಂಡ್‌ಅಪ್ ಕಾಮಿಡಿಗಳಲ್ಲಿ ಈ ಸಾಹಿತ್ಯಪ್ರಕಾರವು ಕನ್ನಡಿಗರನ್ನು ರಂಜಿಸಿದೆ. ಕೆಲವು ಅಣಕಗಳಂತೂ ಮೂಲ ಹಾಡಿಗಿಂತಲೂ ಹೆಚ್ಚು ಫೇಮಸ್ಸಾದದ್ದೂ ಇದೆ. ಅಣಕವಾಡನ್ನು ರಚಿಸಲಿಕ್ಕೆ ಪ್ರತಿಭೆ ಮತ್ತು ಕವಿತ್ವ ಬೇಕು, ಅದಕ್ಕಿಂತ ಮುಖ್ಯವಾಗಿ ಉತ್ತಮ ಹಾಸ್ಯಪ್ರಜ್ಞೆ ಬೇಕು. ಅಣಕವಾಡನ್ನು ಸವಿಯುವುದಕ್ಕೂ ಅಷ್ಟೇ ಹಾಸ್ಯಪ್ರಜ್ಞೆ ಇರಬೇಕು. ನಿಮ್ಮಲ್ಲಿ ಅದು ಇದೆ ಎಂಬ ವಿಶ್ವಾಸದಿಂದ ಇವತ್ತು ಒಂದಿಷ್ಟು ಅಣಕವಾಡುಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ನಿಮ್ಮ ಬತ್ತಳಿಕೆಯಲ್ಲೂ ಇಂಥವು ಕೆಲವು ಇರಬಹುದು. ಏಕೆಂದರೆ ಸಾಮಾನ್ಯವಾಗಿ ಜೋಕುಗಳಂತೆಯೇ ಅಣಕವಾಡುಗಳೂ ಒಮ್ಮೆ ಪ್ರಕಟವಾದೊಡನೆ ಲೋಕದ ಸೊತ್ತು ಆಗಿಹೋಗುತ್ತವೆ. ಜನಪದ ಗೀತೆಗಳಂತೆ ಬಾಯಿಂದ ಬಾಯಿಗೆ ಹರಿದಾಡುತ್ತವೆ. ಎಂದರೋ ಅಣಕವಾಡು ರಚಯಿತಲು/ರಸಿಕುಲು ಅಂದರಿಕಿ ವಂದನಮು.

ಮೊದಲಿಗೆ ಗಣೇಶಸ್ತುತಿ. ಇದು ನನ್ನ ಫೇವರಿಟ್‌ಗಳಲ್ಲೊಂದು. 2002ರಲ್ಲಿ ನಾನು ವಿಚಿತ್ರಾನ್ನ ಅಂಕಣ ಆರಂಭಿಸಿದಾಗ ಮೊದಲ ಲೇಖನದ ಮೊದಲ ಸಾಲುಗಳು ಇವು:

ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ...
ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ...

ದೇವರುಗಳ ಪೈಕಿ ಅತಿಹೆಚ್ಚು ಸೆನ್ಸ್ ಆಫ್ ಹ್ಯೂಮರ್ ಇರುವುದು ಗಣೇಶನಿಗಂತೆ. ಹಾಗಾಗಿ ನಮ್ಮ ಅಣಕವಾಡಿನಿಂದಾಗಲೀ, ಒಂದಾಣೆ ಮಾತ್ರ ಕೊಟ್ಟಿದ್ದಕ್ಕಾಗಲೀ ಗಣೇಶ ಮುನಿಸಿಕೊಳ್ಳುವುದಿಲ್ಲ ಎಂಬ ಭರವಸೆಯಿದೆ.

ಬೇಂದ್ರೆಯವರಂಥ ವರಕವಿಯೇ ಅಣಕವಾಡುಗಳನ್ನು ರಚಿಸಿದ್ದಾರೆ ಮತ್ತು ಸವಿದಿದ್ದಾರೆ ಎಂದಮೇಲೆ ನಮ್ಮಂಥ ಶ್ರೀಸಾಮಾನ್ಯರು ಯಾವ ಅಳುಕು-ಅಂಜಿಕೆಗಳಿಲ್ಲದೆ ಅಣಕವಾಡುಗಳನ್ನು ಆನಂದಿಸಬಹುದು. ಬೇಂದ್ರೆಯವರ ಸುಪ್ರಸಿದ್ಧ ‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆಗೆ ಅನೇಕ ಅಣಕಗಳು ಅವರ ಕಾಲದಲ್ಲೇ ಹುಟ್ಟಿದ್ದವು. ಅಣಕಿಸುವವರಿಗೆ ಉತ್ತರವಾಗಿ ಬೇಂದ್ರೆಯವರೇ ಅಣಕವಾಡು ಅಂದರೆ ಹೇಗಿರಬೇಕೆಂದು ತೋರಿಸಲು ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಗೀತೆಯನ್ನು, ಮೂಲ ಪದ್ಯದ ಏಳೂ ಚರಣಗಳಿಗೆ ಪರ್ಯಾಯವಾಗಿ ಬರೆದಿದ್ದರು. ಪದ್ಯಕ್ಕೆ ಸಂಭಾವನೆಯೆಂದು ಬಂದ ಚೆಕ್ ಬೌನ್ಸ್ ಆಗಿದ್ದರೆ ‘ಚೆಕ್ಕು ಹಾರುತಿದೆ ನೋಡಿದಿರಾ’ ಎಂದು ಹಾಡಬೇಕಾದ ಪರಿಸ್ಥಿತಿ ಕವಿಯದು!

ಬೆಕ್ಕು ಹಾರುತಿದೆ ನೋಡಿದಿರಾ....

ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||

ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||

ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||

ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||

ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||

ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||

ಅಣಕವಾಡುಗಳಿಂದಲೇ ಪ್ರಸಿದ್ಧರಾದ, ತನ್ನ ಹೆಸರಿನಲ್ಲೇ ಅಣಕು ಎಂದು ಸೇರಿಸಿಕೊಂಡಿರುವ ಅಣಕು ರಾಮನಾಥ್ ಅವರು ‘ಕೊಚ್ಚೇವು ಕನ್ನಡದ shapeಅ ಪದಪದದ shapeಅ ವಾಕ್ಯಗಳ shapeಅ ಕೊಚ್ಚುತ್ತ ಭಾಷೆಯು ಕುರೂಪ...’ ಎಂಬ ಅಣಕುಗೀತೆ ರಚಿಸಿದ್ದಾರೆ. ಅಸಡ್ಡೆ-ಉಡಾಫೆಗಳಿಂದ ವ್ಯವಸ್ಥಿತವಾಗಿ ಕನ್ನಡದ ಕೊಲೆ ಮಾಡಿಕೊಂಡು ಬಂದಿರುವ ಸುದ್ದಿವಾಹಿನಿಗಳ ಹುದ್ಘೋಷಕ/ಕಿ ವಾಗ್ದೇವತೆಗಳಿಗೆ ಅದನ್ನು ಸಮರ್ಪಣೆ ಮಾಡಿದ್ದಾರೆ.

ಕೊಚ್ಚೇವು ಕನ್ನಡದ shapeಅ ಪದಪದದ shapeಅ ವಾಕ್ಯಗಳ shapeಅ
ಕೊಚ್ಚುತ್ತ ಭಾಷೆಯು ಕುರೂಪ ಕೊಚ್ಚೇವು ಕನ್ನಡದ shapeಅ ||

ಬಲು ದಿನಗಳಿಂದ ವಾಹಿನಿಗಳಿಂದ ಕನ್ನಡವ ಕೊಚ್ಚೇ ಸಾಗೇವು
ಎಲ್ಲೆಲ್ಲಿ ’ಅ’ಇರಲು ಅಲ್ಲಲ್ಲಿ ’ಹ’ ವೇ... ಎಲ್ಲೆಲ್ಲಿ ’ಹ’ ವೋ ಅಲ್ಲಿಯೇ ’ಅ’...
ದ ಎಂದು ಇರಲಿ, ಧ ಎಂದು ಇರಲಿ ನಮಗೆಲ್ಲ ಒಂದೇ ಹುಚ್ಚಾರ
ಕೊಚ್ಚೇವು ಬರಹ ಕೊಚ್ಚೇವು ನುಡಿಯ ಕೊಚ್ಚೇವು ನಿಮ್ಮ ಸಿಹಿನುಡಿಯ
ನಮ್ಮ ನಾಲ್ಗೆ ಸೀಳಿ ಉಪ್ಹಾಕಿದ್ರೂನೂ ಕೊಚ್ಚೇವು ಕನ್ನಡದ shapeಅ ||

blur ಆದ ಚಿತ್ರ scrolling ವಿಚಿತ್ರ ಅರ್ಥ ಅನರ್ಥಗಳ ಬೀರೇವು
ಕೊಚ್ಚಿರುವ ರೂಪದಲಿ ತಾಯ್ನುಡಿಯನು ಅಚ್ಚಳಿಯದಂತೆ ತೋರೇವು
ಒಡಲೊಳಲ ಕೊಚ್ಚೆಯ ಕಿಡಿಗಳನ್ನು ನಿಮ್ಮ ಬೆಡ್‌ರೂಮಿಗೇ ತೂರೇವು
ಏರಿರಲು ಟಿಆರ್ಪಿ ಎಲ್ಲಿಹುದು ಭೀತಿ ನಮಗಿರಲಿ ನಿಮ್ಮ ಹಿಡಿಶಾಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಕೊಚ್ಚೇವು ಕನ್ನಡದ shapeಅ ||

ನಮ್ಮವರು ಕಟ್ಟಿದ ಚಾನೆಲ್‌ಉಳಿಸಲು ಹೆಲ್ಲಾರೂ ಹೊಂದುಗೂಡೇವು
ನಿಮ್ಮೆದೆಯು ನಡುಗುವೀ ಮಾತಿನಲ್ಲಿ ಮಾತುಗಳ ಪೂಜೆ ಮಾಡೇವು
ನಮ್ಮುಸಿರು ಟಿಆರ್‌ಪಿ ಎಂಬುದೊಂದೇ ಮಂಗಗಳಗೀತ ಹಾಡೇವು
ತೊರೆದೇವು ಬಾಲ ಕಡೆದೇವು ಕೊಂಬ ಪಡೆದೇವು ಅಕ್ಷರಕೆ ಹೊಸರೂಪ
ಕರುಳನ್ನು ಕಿವುಚಿ ಕೊರಳನ್ನು ತಿರುಚಿ ಕೊಚ್ಚೇವು ಕನ್ನಡದ shapeಅ ||

ಇನ್ನೊಂದು ಅಣಕವಾಡು ತತ್‌ಕ್ಷಣಕ್ಕೆ ನೆನಪಿಗೆ ಬರ್ತಿರೋದು ನನ್ನ ಫೇಸ್‌ಬುಕ್ ಸ್ನೇಹಿತ ಚಿಕ್ಕಮಗಳೂರಿನ ಮಧುಸೂದನ ರಾವ್ ರಚಿಸಿದ ‘ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು... ನಿತ್ಯದ ಹಾಗೇ ಊರಿಗೆಊರೇ ಕರೆಂಟ್ ಹೋಗಿತ್ತು ಎಲ್ಲೆಡೆ ಕತ್ತಲೆ ತುಂಬಿತ್ತು...’ ಸಿದ್ದನ ಕತ್ತಲೆರಾಜ್ಯದಲ್ಲಿ ರಾಯರ ಫಜೀತಿ ಎಂದು ಅದರ ಶೀರ್ಷಿಕೆ. ಕೆ.ಎಸ್.ನರಸಿಂಹಸ್ವಾಮಿಯವರ ಮೂಲ ರಚನೆಯ ಅಷ್ಟೂ ಚರಣಗಳನ್ನು ಬಳಸಿ ಸ್ವಾರಸ್ಯಕರವಾಗಿ ಅಣಕಿಸಿದ್ದ ಆ ಹಾಡು ಫೇಸ್‌ಬುಕ್ ವಾಟ್ಸಾಪ್‌ಗಳ ಮೂಲಕ ಜಗತ್ತಿನಾದ್ಯಂತ ಕನ್ನಡಿಗರನ್ನು ತಲುಪಿತು. ಕನ್ನಡದ ಕೆಲವು ಪತ್ರಿಕೆಗಳೂ ಅದನ್ನು ಪ್ರಕಟಿಸಿ ಓದುಗರ ಮನರಂಜಿಸಿದವು.

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ನಿತ್ಯದ ಹಾಗೆ ಊರಿಗೆ ಊರೇ ಕರೆಂಟು ಹೋಗಿತ್ತು | ಎಲ್ಲೆಡೆ ಕತ್ತಲೆ ತುಂಬಿತ್ತು

ಮಾವನ ಮನೆಯಲಿ ಸಣ್ಣಗೆ ಉರಿಯುವ ಚಿಮಣಿಯ ಬೆಳಕಿತ್ತು
ದೀಪದ ಹೊಗೆ ಘಮ್ಮನೆ ಘಮ ಬೀರುತ ಮೂಗಿಗೆ ಅಡರಿತ್ತು | ರಾಯರ ಸ್ವಾಗತ ಕೋರಿತ್ತು

ಟೊಯ್ಯೆನ್ನುತ ಮೊಬೈಲಿನ ಬಾಟರಿ ಚಾರ್ಜನು ಬಯಸಿತ್ತು
ತನ್ನಯ ಅಂತಿಮ ಕ್ಷಣಗಳ ಎಣಿಸುತ ರಾಯರ ಕರೆದಿತ್ತು | ನಾಲ್ಕೇ ಪರ್ಸೆಂಟ್ ಉಳಿದಿತ್ತು

ಯುಪಿಯಸ್ಸಿರೊ ಪಕ್ಕದ ಮನೆಯು ಜಗಮಗ ಎನುತಿತ್ತು
ಹಿಂದಿನ ಬೀದಿಯ ದೊಡ್ಮನೆಯಲ್ಲಿ ಸೋಲಾರ್ ಉರಿದಿತ್ತು | ಗಾಯಕೆ ಉಪ್ಪನು ಸವರಿತ್ತು

ಹತ್ತಕೆ ಕರೆಂಟು ಬರುವುದು ಎಂದರು ಮಾವನು ಗೊಣಗುತಲಿ
ಹತ್ತರ ಮೇಲೊಂದ್ಹೊಡೆದರು ಕೊನೆಗೂ ಕರೆಂಟು ಬರಲಿಲ್ಲ | ಕತ್ತಲೆ ಭಾಗ್ಯವು ತಪ್ಪಿಲ್ಲ

ಹಾಸಿಗೆಯಲಿ ಹೊರಳಾಡುತ ರಾಯರು ಸಿದ್ಧನ ಶಪಿಸುತ್ತಾ
ಫ್ಯಾನು ಇಲ್ಲದೆ ನಿದ್ದೆಯು ಬಾರದು ಸೆಕೆಯೋ ವಿಪರೀತ | ಜೊತೆಯಲಿ ಸೊಳ್ಳೆಯ ಸಂಗೀತ

ಅಂತೂ ಇಂತೂ ಕರೆಂಟು ಬಂತು ಬೆಳಗಿನ ಜಾವದಲಿ
ಮಿಕ್ಸಿಯು ಕೂಗಿತು ಟಿವಿಯು ಹಾಡಿತು ಮಾವನ ಮನೆಯಲ್ಲಿ | ನಕ್ಕರು ರಾಯರು ಹರುಷದಲಿ
ಕತ್ತಲೆ ಭಾಗ್ಯವ ಕೊನೆಮಾಡೆಂದರು ನಮಿಸುತ ದೇವರಲಿ | ವಿದ್ಯುದ್ದೀಪವ ಬೆಳಗುತಲಿ

ತೀರ್ಥಕ್ಷೇತ್ರಗಳು, ಅರ್ಥಾತ್ ಪಬ್ಬು-ಬಾರುಗಳು ಅಣಕವಾಡುಗಳಿಗೆ ಒಳ್ಳೆಯ ಬ್ರೀಡಿಂಗ್ ಗ್ರೌಂಡ್. ನಶೆ ಏರಿದಾಗ ಕವಿತ್ವ ಗರಿಗೆದರುವುದು ಅದಕ್ಕೆ ಕಾರಣ. ವೈಎನ್ಕೆ ಅವರ ರಚನೆಯೆನ್ನಲಾದ ‘ಕರುಣಾಳು ಬಾ ಬೆಳಕೆ ಮುಸುಕಿದೀ ಪಬ್ಬಿನಲಿ ಕೈಹಿಡಿದು ಕುಡಿಸೆನ್ನನು’ ಗುಂಡುಗಲಿಗಳ ಗಾಯತ್ರೀಮಂತ್ರ. ಕೃಷ್ಣೇಗೌಡರ ಜಗದ್ವಿಖ್ಯಾತ ‘ಕುಡುಕರ ಸುಪ್ರಭಾತ’ವನ್ನಂತೂ ಕೇಳದ ಕನ್ನಡಿಗರಿರಲಿಕ್ಕಿಲ್ಲ. ಸುಶೀಲ್ ಸಂದೀಪ್ ಎಂಬೊಬ್ಬ ಸುಸಂಸ್ಕೃತ ಸದಭಿರುಚಿಯ ಸ್ನೇಹಿತ, ಜಿ.ಎಸ್.ಶಿವರುದ್ರಪ್ಪನವರ ಜನಪ್ರಿಯ ಭಾವಗೀತೆಯನ್ನು ಅಣಕವಾಡಿದ ರೀತಿ ಬಲು ಸೊಗಸಿದೆ:

ಸಂಡೆ ಬಾರಿನಂಚಿನಲಿ ಬಿದ್ದ ಕುಡುಕ ಸುಂದರ...
ಮಲ್ಯತೀರ್ಥದಾಳದಲ್ಲಿ ಎಂಗೇಜ್‌ಮೆಂಟಿನುಂಗುರ...

ಹಳೇ ಲವ್ವರ್ರಿನ ಶಾಪವಿದೋ ಇರಿಯುತಿಹುದು ಸುತ್ತಲೂ...
ಉಂಡುದೆಲ್ಲ ಕಕ್ಕುತಿಹನು ಚಿಕ್ಕಕರುಳ ಶ್ರಮದೊಳು...

ಸ್ವಸಹಾಯಕ ಬಾರ್-ಬಳಗ ಕೆಂಗಣ್ಣೊಳು ಖಾರವ?
ರಾತ್ರಿಪಾಳಿ ಕರೆಯುತಿಹುದು,ಬಂದು ಕೊಡುವೆ ಲೆಕ್ಕವ

ಮದ್ಯಸೇವನೆಯಂಥ ಚಟಗಳು ಬೇರೆಯೂ ಇವೆ. ವಾಟ್ಸಾಪು ಫೇಸ್‌ಬುಕ್‌ಗಳ ಎಡಿಕ್ಷನ್ ಸಹ ಎಷ್ಟೋ ಜನರಿಗೆ ಚಟವೇ ಆಗಿಹೋಗಿದೆ. ಅನ್ನಾಹಾರ-ನಿದ್ರೆಯ ಪರಿವೆಯಿಲ್ಲದೆ ಫೇಸ್‌ಬುಕ್ಕಿನಲ್ಲಿ ಮುಳುಗಿಹೋಗುವ ಮನೆಮಂದಿಯನ್ನು ಊಟಕ್ಕೆ ಕರೆಯುವುದಕ್ಕೆ ಅಣಕವಾಡು ರಚಿಸಿದ್ದಾರೆ ಎಕ್ಸ್-ಅಮೆರಿಕನ್ನಡತಿ ಈಗ ಮಣಿಪಾಲದಲ್ಲಿ ಸೆಟ್ಲ್ ಆಗಿರುವ ಕವಯಿತ್ರಿ ಜ್ಯೋತಿ ಮಹಾದೇವ್.

ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು - ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು - ಊಟಕ್ಕೆ

ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು - ಊಟಕ್ಕೆ

ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ - ಊಟಕ್ಕೆ

ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ - ಊಟಕ್ಕೆ

ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು - ಊಟಕ್ಕೆ

ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ - ಊಟಕ್ಕೆ

ಇನ್ನೋರ್ವ ಪ್ರತಿಭಾವಂತ ಅಮೆರಿಕನ್ನಡಿಗ ಮಲ್ಲಿ ಸಣ್ಣಪ್ಪನವರ್ ‘ಲೈಫು ಇಷ್ಟೇನೇ’ ಧಾಟಿಯಲ್ಲಿ ರಚಿಸಿದ ಹಾಡು ಮಜಾ ಇದೆ:

ಹಲ್ಲು ತಿಕ್ಕದೇ ಮುಖಾನು ತೊಳಿದೇ ಬೆಳಿಗ್ಗೆ ಎದ್ದು ಲಾಗಿನ್ ಆಗಿ
ಎಲ್ಲರ ಸ್ಟೇಟಸ್ ಅಪ್ಡೇಟ್ ಮಾಡ್ಕೋ ಫೇಸ್‌ಬುಕ್ ಇಷ್ಟೇನೇ!

ಲೈಕ್ ಬಟನ್ ಒತ್ತು ಸ್ವಾಮಿ ಡಿಸ್‌ಲೈಕ್ ಬಟನ್ ಇಲ್ಲ ಸ್ವಾಮಿ
ಬೇಡಾದವ್ರನ್ ಹೈಡ್ ಮಾಡ್ಕೊ ಫೇಸ್‌ಬುಕ್ ಇಷ್ಟೇನೇ!

ಮಕ್ಕಳ ಜತೆಗೆ ಆಡೋದ್ ಬಿಟ್ಟು ಹೆಂಡ್ತಿ ಮುಖವ ನೋಡೋದ್ ಬಿಟ್ಟು
ಸಿಕ್ಕವ್ರ್ ವಿಡಿಯೋ ನೋಡ್ತಾ ಕುತ್ಕೋ ಫೇಸ್‌ಬುಕ್ ಇಷ್ಟೇನೇ!

ಯಾರ್ಯಾರ ಮನೇಲಿ ಏನೇನ್ ಅಡುಗೆ ಯಾರ್ಯಾರ ಮೈಮೇಲ್ ಏನೇನ್ ಉಡುಗೆ
ಬರೀ ಕಾಂಪ್ಲಿಮೆಂಟ್ಸು ಇಲ್ಲಿ ಕೊಡುಗೆ ಫೇಸ್‌ಬುಕ್ ಇಷ್ಟೇನೇ!

ಬೇಡಾದವ್ರಿಗು ಕಾಮೆಂಟ್ ಹಾಕು ಬೇಕಾದವ್ರಿಗು ಕಾಮೆಂಟ್ ಹಾಕು
ಕಾಮೆಂಟ್ ಹಾಕ್ತಾ ಖುಷಿಯಾಗಿರು ಫೇಸ್‌ಬುಕ್ ಇಷ್ಟೇನೇ... ಟಣ್‌ಟಣಾಟಣ್‌ಟಣ್!

ಹಾಗೆಯೇ, ಬೆಂಗಳೂರಿನ ಸಿ.ಆರ್.ಸತ್ಯ ಅವರ ಲೋಕಪ್ರಿಯ ರಚನೆ ‘ಆಚೆಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ...’ ಹಾಡಿಗೆ ಯುವರ‍್ಸ್ ಟ್ರೂಲಿ ರಚಿಸಿದ ಅಣಕವಾಡನ್ನೂ ಇಲ್ಲಿ ಸ್ಮರಿಸಬಹುದು.

ಈಚೇಮನೆಯ ಸೂಸನ್ನಳಿಗೆ ಫೇಸ್‌ಬುಕ್ಕಿನಾ ಉಪವಾಸ |
ಎಲ್ಲೋ ಸ್ವಲ್ಪ ಕ್ಲಿಕ್‌ತಾಳಷ್ಟೇ ಅವರಿವರ್ ಹಾಕಿದ ಸ್ಟೇಟಸ ||
ಬೆಳಿಗ್ಗೆಯೊಮ್ಮೆ ಲಾಗಿನ್ ಆದ್ರೆ ಹೊಡೆಯುವಳ್ನಾಲ್ಕು ಲೈಕು |
ಒಂದೆರಡ್ ಪೋಸ್ಟಿಗೆ ಕಾಮೆಂಟು ಜಡಿದು ಕೀಬೋರ್ಡಲ್ಲೇ ಸ್ಟ್ರೈಕು ||
ಮಧ್ಯಾಹ್ನವಾದರೆ ಊಟದ ಜೊತೆಗೆ ಫೋಟೊಗಳನು ಶೇರು |
ಬೇಕೋಬೇಡ್ವೋ ಇದ್ದವ್ರನ್ನೆಲ್ಲಾ ಟ್ಯಾಗಿಸದಿದ್ರೇ ಬೋರು ||
ಸಂಜೀಮುಂದ ಹರಟುವ ಮನಸಿಗೆ ಮತ್ತದೇ ಫೇಸ್ಬುಕ್ ನೆನಪು |
ಗೋಡೆಗೆ ಒರಗಿ ಬಾಯ್ಬಿಟ್ಳೆಂದರೆ ಲೊಲ್‌ ಲೊಲ್ ಸ್ಮೈಲೀ ಒನಪು ||
ಸ್ಮಾರ್ಟ್‌ಫೋನಲ್ಲೂ ಟ್ಯಾಬ್ಲೆಟ್ಟಲ್ಲೂ ಫೇಸ್ಬುಕ್ ನೋಡುವ ಹುಚ್ಚು |
ಡಿಜಿಟಲ್ ಯುಗದ ಸೂಸನ್ ಕಥೆಯು ಸುಬ್ಬಮ್ಮನ್ಗಿಂತ್ಲೂ ಹೆಚ್ಚು ||

ನನ್ನೊಬ್ಬ ಸ್ನೇಹಿತ, ವಿಜಯರಾಜ್ ಕನ್ನಂತ್ ಎಂಬುವ ಪ್ರತಿಭಾವಂತ ಹುಡುಗನಿದ್ದ. ಮೂಲತಃ ಕುಂದಾಪುರದವನು, ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ. ಕನ್ನಡದ ಜನಪ್ರಿಯ ಚಿತ್ರಗೀತೆಗಳಿಗೆ ಅಣಕವಾಡು ರಚಿಸುತ್ತಿದ್ದ. ಮನಸಿನ ಮರ್ಮರ ಎಂಬ ಬ್ಲಾಗ್‌ನಲ್ಲಿ ಪ್ರಕಟಿಸುತ್ತಿದ್ದ. ಆತನ ಒಂದೆರಡು ರಚನೆಗಳನ್ನು ನೋಡಿ:

ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು… ಬೆಂಗಳೂರಿಗೆ ನಿನ್ನನು
ಯಾವ ಸಂಬಳದಾಸೆ ಕುಕ್ಕಿತು… ನಿನ್ನ ಆಸೆಯ ಕಣ್ಣನು

ಫೋಮು ಹಾಸಿಗೆ ಟೀವಿ ಫ್ರಿಜ್ಜಿದೆ… ಏ.ಸಿ, ತಂಪಿನ ರೂಮಿದೆ
ಬರಿದೆ ತುಂಬಿಹೆ ಮನೆಯ ಒಳಗೆ ಆಫೀಸು ಅಲ್ಲವೆ ನಿಮ್ಮನೆ

ಹೊಸೂರ್ ರೋಡಿನ ಆಚೆ ಎಲ್ಲೋ… ನಿನ್ನ ಕಂಪನಿ ಬೇಸಿದೆ
ಟ್ರಾಫಿಕ್ ಜಾಮಿನಲಿ ಸಿಲುಕಿಕೊಂಡಿಹ… ನಿನ್ನ ಬರುವಿಕೆ ಕಾದಿದೆ

ವಿವಶನಾದನು ಜಾಣ… ಹ್ಮಾ… ಪರದೇಶಿಯ ಜೀತ ಜೀವನ…
ಸೃಜನಶೀಲತೆಯ ಬಿಟ್ಟು ಕೆರಿಯರ-ಏಳಿಗೆ ದುಡಿಮೆಯೇ ಜೀವನಾ

ಇನ್ನೊಂದು,

ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು ರೀ…
ಯೆತ್ಲಾಗೆ ನೀವ್ ಕರಿರಿ… ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ…

ಹೊಸಬರಿಗೆ ಆಟೋಲಿ… ಕೆಂಪ್ನಾಮ ಗ್ಯಾರಂಟಿ
ಹಳಬರಿಗೂ ಒಮ್ಮೊಮ್ಮೆ… ಪಂಗನಾಮ ಗ್ಯಾರಂಟಿ

ಒಬ್ರೊಬ್ರೆ ಹೋಗುವಾಗ… ಹುಷಾರಾಗಿರಿ…
ಯಾವ್ದಕ್ಕೂ ಆಟೋ ನಂಬರ್… ಬರ್ಕೊಂಡಿರಿ…

ಯೆತ್ಲಾಗೆ ನೀವ್ ಕರಿರಿ… ಅತ್ಲಾಗೆ ನಾವ್ ಬರಲ್ಲ… ಯಾವತ್ತೂ ಬರಲಾರ್ರು ರೀ…
ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ ಯಾವತ್ತೂ ಹೋಗ್ಬಾರ್ದು..ರೀ…

ಆಟೋದವರ ಮೀಟರಲ್ಲಿ ಏನೇನಿದೆ… ತಿಳುಕೊಳ್ಳೊ ತಾಕತ್ತು ನಮಗೆಲ್ಲಿದೆ
ಎಡ್ಜೆಸ್ಟು ಇರದ… ಮೀಟ್ರೇನೆ ಇಲ್ಲ…
ಮೀಟರು ಓಡಬಹುದು ನಿಂತಲ್ಲಿಯೆ… ನಂಬೋಕೆ ಆಗಲ್ಲ ಡೌಟಿಲ್ಲದೆ…
ಅನುಮಾನ ಪಡದೆ… ಉಳಿಗಾಲ ಇಲ್ಲ…

ಮೀ…ಟ್ರನ್ನು ಎಡ್ಜೆಷ್ಟು ಮಾಡೋದು ಈಝಿ…
ಡಿಜಿ…ಟಲ್ಲು ಆದ್ ಮೇಲೆ ಹಿಂಗಾಯ್ತು ಸ್ವಾಮಿ

ಮೀಟ್ರಲ್ಲಿ ಜಂಪಿಂಗು ಕಂಪಲ್ಸರಿ… ಯಾವ್ದಕ್ಕೂ ಮೀಟ್ರನ್ನು ನೋಡ್ತಾ ಇರಿ…

ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ. ಯಾವತ್ತೂ ಹೋಗ್ಬಾರ್ದು..ರೀ…
ಯೆತ್ಲಾಗೆ ನೀವ್ ಕರಿರಿ… ಅತ್ಲಾಗೆ ನಾವ್ ಬರಲ್ಲ… ಯಾವತ್ತೂ ಬರಲಾರ್ರು ರೀ…

ಯಾವೇರ್ಯಾಗ್ ಹೋದ್ರೂನು ಹಿಂಗೆ ಕಣ್ರಿ… ಬಸ್ಸಲ್ಲಿ ಚೀಪ್-ನಲ್ಲಿ ಹೋಗ್ಬೋದುರೀ
ಆಟೋಗೆ ಸುಮ್ನೆ… ಕಾಯ್ಬಾರ್ದು ಕಣ್ರಿ
ಟೈಮ್ ಇದ್ರೆ ಒಂಚೂರು ನಿಂತ್ಕೊಂಡಿರಿ… ಪುಷ್ಪಕ್ಕು ಬರಬಹುದು ಕಾಯ್ತಾ ಇರಿ
ಆಟೋಗೆ ಕಾಸು… ಕೊಡಬಾರ್ದು ಕಣ್ರಿ

ಬೆನ್ನಲ್ಲಿ ಬಂತ್-ನೋಡಿ ಮೂರ್ಮೂರು ಬಸ್ಸು
ಯಾವ್ದಾದ್ರು ಒಂದಾದ್ರು ಸಿಗ್ಬೋದು ನೋಡಿ
ಎಲ್ಲಾರ್ನು ಬೈಯೋಕೆ ಹೋಗ್ಬಾರ್ದು ರೀ… ಕೆಲವ್ರಾದ್ರು ಒಳ್ಳೆಯವ್ರು ಇರಬೌದು ರೀ...

ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ. ಯಾವತ್ತೂ ಹೋಗ್ಬಾರ್ದು..ರೀ…
ಆಟೋ ಸಮಾಚಾರ್… ಬೇಕಾದ್ರೆ ಹೇಳ್ತಿನಿ… ನನ್ನನ್ನು ಕೇಳ್ಕೊಂಬಿಡಿ…

ಹಾಗೆಯೇ, ಭಾರತದ ವಿರುದ್ಧ ಕ್ರಿಕೆಟ್‌ನಲ್ಲಿ ಹೀನಾಯ ಸೋಲುಂಡ ಆಸ್ಟ್ರೇಲಿಯಾ ತಂಡದ ಪರಿಸ್ಥಿತಿ-

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ
ಮಾನ್‌ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್‌ಗೆ ಹೋಗ್ಬಿಟೈತೆ

ಪಾಂಚ್ ದಿನ್ ಬೇಕಾಗಿಲ್ಲ… ನಮ್ದುಕೇ
ತೀನ್ ದಿನ್ ಖೇಲ್ತಾ ಇಲ್ಲ… ನಮ್ದುಕೇ
ಇಂಡಿಯಾನೇ ಸಾಕಾಗ್ಬಿಟ್ಟೈತೆ

ದಿಲ್ಲಿ ಒಳ್ಗೆ ನೆಗ್ದು ಬಿದ್ದ… ನಮ್ಮ ಟೀಮ್ನ ಎಲ್ರೂ ಇಂದು… ಕ್ಯಾಕರ್ಸಿ… ಉಗಿತವ್ರೆ
ನಿಮ್ದುಕ್ಕೆ… ವೇಷ್ಟ್ ಫೆಲೋಸ್ ಅಂತಾ ಅವ್ರೆ

ಮೀಡ್ಯಾ-ಗೀಡ್ಯಾ ನಕ್ಕೋಜಿ ಸುಮ್ಕೆ ಪ್ಯಾಕ್ ಕರೋಜಿ
ನಮ್ದುಕ್ಕೆ ಪ್ಲೇನ್… ಮಿಸ್ಸ್ ಆಗ್ತಾ ಹೈ

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ

ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಧವನ್ ಮಾರ್ಕೇ ಮೆರ್ದುಬಿಡೋದೇ
ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಶಿಖರ್ ಧವನ್ ಮೆರ್ದುಬಿಡೋದೇ

ಮುರ್ಳಿ ಪುಜಾರ ಯಾಕ್ ಕೇಳ್ತೀ ನೆನೆದ್ರೆ ಜುಂ ಜುಂ… ಅಂತೈತಿ
ಜಡೇಜಾನೂ ಹೆಚ್ಕೊಂಡ್-ಬಿಡೋದೇ

ನಕ್ಕೋ… ನಕ್ಕೋ…

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ
ಮಾನ್‌ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್‌ಗೆ ಹೋಗ್ಬಿಟೈತೆ

ಇಂತಹ ಸೃಜನಶೀಲ ವಿಜಯರಾಜ್ ಕ್ಯಾನ್ಸರ್‌ನ ಮಾರಿಗೆ ಬಲಿಯಾಗಿ ನಮ್ಮನ್ನೆಲ್ಲ ಬಿಟ್ಟುಹೋದ. ಸ್ವರ್ಗದಲ್ಲೀಗ ಯಾರಿಗೆ ಟಾಂಗ್ ಕೊಡುತ್ತ ಅಣಕವಾಡು ಕಟ್ಟುತ್ತಿದ್ದಾನೋ.

ಆಗಲೇ ಹೇಳಿದಂತೆ ಅಣಕವಾಡು ರಚನೆಗೆ ಮತ್ತು ಆಸ್ವಾದನೆಗೆ ಬೇಕಾದ್ದು ಭರಪೂರ ಹಾಸ್ಯಪ್ರಜ್ಞೆ. ಮಡಿವಂತರು ಇದರತ್ತ ಹೊರಳಲೂಬಾರದು. ಉದಾಹರಣೆಗೆ ಹುಬ್ಬಳ್ಳಿಯ ವಿನಾಯಕ ಕಾಮತ್ ಎಂಬ ಸ್ನೇಹಿತ, ರಸಾಯನಶಾಸ್ತ್ರ ಸಂಶೋಧನವಿದ್ಯಾರ್ಥಿ ರಚಿಸಿದ ಈ ಅಣಕವಾಡು ಕೆಲವರಿಗೆ ಛೀ ಥೂ ಅಂತನಿಸಬಹುದು. ಆದರೆ ಹಾಸ್ಯರಸ ದೃಷ್ಟಿಯಿಂದಷ್ಟೇ ನೋಡಿದರೆ ಬಹಳ ಚೆನ್ನಾಗಿದೆ. ಸ್ನೇಹಿತರ ಗುಂಪಿನಲ್ಲಿ ಅಕಸ್ಮಾತ್ತಾಗಿ ಯಾರಿಗಾದರೂ ಅಪಾನವಾಯು ಹೋದಾಗ, ಅದೂ ಮ್ಯೂಟ್ ಮೋಡ್‌ನಲ್ಲಿದ್ದರೆ, ಪರಸ್ಪರ ದೂರಿಕೊಳ್ಳುವ ಪರಿ-

ಅನಿಸುತಿದೆ ಯಾಕೋ ಇಂದು ನೀನೇನೆ ಹೂಸಿದೆ ಎಂದು
ಶಬ್ದದ ಅಂಜಿಕೆಯಿಂದ ತಡೆತಡೆದು ಬೀಸಿದೆ ಎಂದು
ಆಹಾ ಎಂಥ ಮಧುರ ವಾಸನೆ
ಕೊಲ್ಲಬೇಡ ಹೀಗೆ ನನ್ನ ಹೂಸಿ ಸುಮ್ಮನೆ

ಬೀಸುವ ಗಾಳಿಯು ಸೂಸಿದೆ ಹೂಸಿನ ಪರಿಮಳ
ಇನ್ಯಾರ ಹೂಸಿಗೂ ಆಗದು ಇಂತಹ ತಳಮಳ
ನಿನ್ನುಯ ಉದರವ ಖಾಲಿ ಮಾಡಿ ಬಾ
ಮತ್ತೆ ತಡೆಯೆನಾ ಒಂದು ಕ್ಷಣ
ನಾಕೈದೆ ಸಾಕಾಗ್ ಹೋಗಿದೆ
ಟಾಯ್ಲೆಟ್ ಗೆ ಹೋಗಿ ಬಾ ಒಮ್ಮೆ ಹಾಗೆ ಸುಮ್ಮನೆ

ನಿನ್ನಯ ಹೂಸಲಿ ಆಗದ ವಾಸನಾ ಕಹಿಯಿದೆ
ಹೋಗದೆ ಹಠದಲಿ ಆಚೆಗೆ ಇಲ್ಲಯೇ ಸಿಡಿಸಿದೆ
ಬಾಯಲಿ ಬಾರದೆ ವಾಂತಿಯ ಕೆಸರ
ಹೊಟ್ಟೇಲೆ ನಾನು ತಡೆದಿರುವೆ
ನಿನಗುಂಟೆ ಅದರ ಕಲ್ಪನೆ
ಚೆಂಬ ಹಿಡಿದು ಹೋಗೆ ಒಮ್ಮೆ ಹಾಗೇ ಸುಮ್ಮನೆ

ಇನ್ನು ಕೆಲವು ಅಣಕವಾಡುಗಳು ಸೊಂಟದ ಕೆಳಗಿನವು ಇರುತ್ತವೆ, ಸಮಯೋಚಿತವಾಗಿ ಸೆಲೆಕ್ಟಿವ್ ಶ್ರೋತೃವರ್ಗದಲ್ಲಿ ಅವೂ ಮಿಂಚುತ್ತವೆ.

ಆದರೆ, ಸೊಂಟದ ವಿಷ್ಯ ಬೇಡ ಶಿಷ್ಯ ಎಂದು ಮೂಗುಮುರಿಯಬೇಕಿಲ್ಲ. ಸೊಂಟಕ್ಕೆ ಕಟ್ಟಿಕೊಳ್ಳುವ ಪಂಚೆ ಈ ಅಣಕವಾಡಿನಲ್ಲಿ ಕೊಟ್ಟಿರುವ ಪಂಚ್, ಬಿಳಿ ಪಂಚೆಯಂತೆ ಎಷ್ಟು ಕ್ಲೀನಾಗಿದೆ ನೋಡಿ:

ನೀನಾರಿಗಾದೆಯೋ ಎಲೈ ಪ್ಯಾಂಟೇ
ಗರಿಗರಿ ಪಂಚೆ ನಾನು...
ಉಟ್ಟರೆ ಲುಂಗಿಯಾದೆ
ತೊಟ್ಟರೆ ಶಾಲಾದೆ
ಕಟ್ಟಿದರೆ ತಲೆಗೆ ರುಮಾಲವಾದೆ...
ಕಟ್ಟದೆ ಹಾಸಿದರೆ ಮೇಲುಹೊದ್ದಿಕೆಯಾದೆ...

ಇದರ ಮೂಲ ಹಾಡು ನಿಮಗೆ ಗೊತ್ತಿರಬಹುದು. ಮತ್ತೆ ಜಿ.ಪಿ.ರಾಜರತ್ನಂ ಅವರ ನಾಯಿಮರಿ ಪದ್ಯಕ್ಕೂ ಒಂದು ಅಣಕು ಇದೆ: ‘ಓ ಪುಢಾರಿ ಓ ಪುಢಾರಿ ಓಟು ಬೇಕೆ? ಓಟು ಬೇಕು ಸೀಟು ಬೇಕು ಎಲ್ಲ ಬೇಕು... ಓ ಪುಢಾರಿ ನಿನಗೆ ಸೀಟು ಏಕೆ ಬೇಕು... ಸೀಟಿನಲ್ಲಿ ಕೂತು ಹಣವ ಬಾಚಬೇಕು’ ಏಕೆಂದರೆ, ‘ಎಲ್ಲಾರು ಮಾಡುವುದು ವೋಟಿಗಾಗಿ... ಒಂದು ಸೀಟಿಗಾಗಿ ಬಿಡಿಎ ಸೈಟಿಗಾಗಿ...’ ಆಧುನಿಕ ಕಾಲದ ಬೇಕಾಬಿಟ್ಟಿ ಕವಿತೆಗಳ ಭರಾಟೆಗೆ ಬೆರಗಾಗಿ ಕವಿ ಬಿ.ಆರ್.ಲಕ್ಷ್ಮಣರಾವ್ ಒಂದು ಅಣಕವಾಡು ಬರೆದಿದ್ದಾರೆ: 

ಪದ್ಯವಂತರಿಗಿದು ಕಾಲವಲ್ಲ
ಸದ್ಯೋಜಾತರಿಗೆ ಸುಭಿಕ್ಷ ಕಾಲ॥
ಛಂದೋಬದ್ಧ ಕಾವ್ಯ ಎಂದೋ ಕಾಣೆಯಾಗಿ
ಇಂದೋ ಗದ್ಯವೇ ಪದ್ಯವಾದ ಕಾಲ

ಕಂದ ತ್ರಿಪದಿ ಷಟ್ಪದಿಯ ಮಾತಂತಿರಲಿ
ಭಾವಗೀತೆಗೂ ಇದು ಅಭಾವ ಕಾಲ॥
ಕೊಂಡಿಯಿಲ್ಲದ ಚೇಳಿನಂಥ ಹನಿಗವನಗಳು
ಧಂಡಿಧಂಡಿಯಾಗಿ ಪಿತಗುಡುವ ಕಾಲ

ಕುಂಡಿಯೂರಲು ವ್ಯವಧಾನವಿಲ್ಲದೆ ನಿಂತು
ಕೊಂಡೇ ಉಂಡೋಡುವ ಧಾವಂತ ಕಾಲ॥
ಫೇಸ್‌ಬುಕ್ಕಿನಲ್ಲಿ ಕಿಕ್ಕಿರಿದ ಚಿಳ್ಳೆಪಿಳ್ಳೆ
ನೀರ್ಗುಳ್ಳೆಪದ್ಯ ಕಾಲ

ಧ್ಯಾನಸ್ಥ ಮನಸ್ಸಿನ ಗಂಭೀರ ಕಾವ್ಯಕ್ಕೆ
ಇಂಬೇ ಇರದಂಥ ಹುಂಬ ಕಾಲ॥
ಪರಂಪರೆ ಯಾರಿಗೂ ಬೇಕಿರದ ಹೊರೆಯಾಗಿ
ಹಿರಿಯರೆಲ್ಲ ಮರೆಗೆ ಸರಿದ ಕಾಲ

ಗಾಳಿಯಲ್ಲೇ ಬೇರೂರಿ ಬೆಳೆವ ತುರುಸಿನ ಕಾಲ
ಗುರುವಿರದ ಗುರಿಯಿರದ ಅತಂತ್ರ ಕಾಲ

ಅಂದಹಾಗೆ ಇವತ್ತಿನ ಲೇಖನದ ಶೀರ್ಷಿಕೆ ಒಂದು ಹಳೆಯ ಕನ್ನಡ ಚಿತ್ರಗೀತೆಯ ಸಾಲನ್ನೇ ಅಣಕವಾಡಿದ್ದು. ಯಾವುದೆಂದು ನಿಮಗೆ ಗೊತ್ತಾಯಿತೇ?

* * *

Comments
26
Sep
Posted in Uncategorized by sjoshi at 1:27 pm

ದಿನಾಂಕ 22 ಸೆಪ್ಟೆಂಬರ್  2013

ನೀನು ನೀನೇನಾ?

[ವಿಜಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿ ‘ವಿಜಯವಿಹಾರ’ದಲ್ಲಿ ಪ್ರಕಟವಾದ ಲೇಖನ ]


* ಶ್ರೀವತ್ಸ ಜೋಶಿ

ದು, ಕೆಲ ದಿನಗಳ ಹಿಂದೆ ನನಗೆ ಬಂದಿದ್ದ ಒಂದು ಮಿಂಚಂಚೆಯ ವಿಷಯಸಾಲು (ಸಬ್ಜೆಕ್ಟ್ ಲೈನ್). ನಾನು ಚಂದಾದಾರನಾಗಿರುವ ಇಲ್ಲಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಇ-ಸುದ್ದಿಪತ್ರ ವಿಭಾಗದವರು ಕಳಿಸಿದ ಮಿಂಚಂಚೆಯದು. “Are you, you?” ಎಂದು ಅವರ ಪ್ರಶ್ನೆ. ನಾನು ನಾನೇ (ಅಂದರೆ ಅವರ ದೃಷ್ಟಿಕೋನದಿಂದಾದರೆ ನೀನು ನೀನೇ) ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಪ್ರಶ್ನೆ. ಹಾಗೆ ಕೇಳುತ್ತಿರುವುದಕ್ಕೆ ಕಾರಣವನ್ನೂ ಮಿಂಚಂಚೆಯಲ್ಲಿ ವಿವರಿಸಿದ್ದರು. ಇ-ಸುದ್ದಿಪತ್ರ ಪಡೆಯಲು ಯಾರೆಲ್ಲ ಯಾಹೂ ಇಮೇಲ್ ವಿಳಾಸ ಬಳಸುತ್ತಾರೋ ಅವರಿಗೆಲ್ಲ ಆ ಪ್ರಶ್ನೆ ಕೇಳಿದ್ದಾರಂತೆ. ಬೇನಾಮಿ ಇಮೇಲ್ ಐಡಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಯಾಹೂ ಕಂಪನಿ ಇತ್ತೀಚೆಗೆ ಪ್ರಕಟಣೆ ಹೊರಡಿಸಿದೆ; ನಿಮ್ಮ ಯಾಹೂ ಐಡಿ ಬೇನಾಮಿ ಅಲ್ಲ ತಾನೆ? ನೀವು ಈಗಲೂ ಅದನ್ನು ಬಳಸುತ್ತೀರಿ ತಾನೆ? ಅದೇ ಯಾಹೂ ವಿಳಾಸಕ್ಕೆ ನಾವು ಕಳಿಸುವ ಇ-ಸುದ್ದಿಪತ್ರ ನಿಮಗೆ ನಿಯಮಿತವಾಗಿ ತಲುಪುತ್ತಿದೆ ತಾನೆ? ಎಂದು ಮುಂತಾದ ಉಭಯಕುಶಲೋಪರಿ ವಿಚಾರಣೆ ಅವರ ಉದ್ದೇಶ. ಅಷ್ಟೇ‌ಅಲ್ಲ, ನೀನು ನೀನೇ ಹೌದು ಅಂತಾದರೆ ಈ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂಬ ಒಕ್ಕಣೆಯೂ ಆ ಮಿಂಚಂಚೆಯಲ್ಲಿತ್ತು.ನನ್ನ ಯಾಹೂ ವಿಳಾಸ ಬೇನಾಮಿ ಏನಲ್ಲ. ನಾನದನ್ನು ದಿನಾ ಬಳಸುತ್ತೇನೆ. ವಾಷಿಂಗ್ಟನ್ ಪೋಸ್ಟ್‌ನ ಇ-ಸುದ್ದಿಪತ್ರ ಸಹ ನನ್ನ ಯಾಹೂ ಡಬ್ಬಕ್ಕೆ ಪ್ರತಿದಿನವೂ ಸುಸೂತ್ರವಾಗಿ ಬಂದು ಬೀಳುತ್ತದೆ. ಹಾಗಾಗಿ ಆ ಮಿಂಚಂಚೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಾದ್ದೇನಿಲ್ಲ. ಪರಂತು "Are you, you?" ಎಂಬ ಪ್ರಶ್ನೆ ಮಾತ್ರ ನನಗೆ ಮೊದಲು ಒಂಚೂರು ತಮಾಷೆಯಾಗಿ, ಆಮೇಲೆ ಸ್ವಲ್ಪ ಕೆಣಕು-ತಿಣುಕಾಗಿ, ಮತ್ತೂ ಯೋಚಿಸಿದರೆ ಜಿಜ್ಞಾಸೆಯಾಗಿ, ಆಳಕ್ಕಿಳಿದಂತೆಲ್ಲ ತತ್ತ್ವಜ್ಞಾನದ ಸವಾಲಾಗಿ ಕಂಡುಬಂತು! ಒಮ್ಮೆ ನೀವೂ ಯೋಚಿಸಿ ನೋಡಿ- "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ತತ್‌ಕ್ಷಣದ ಉತ್ತರ?

ಅಂತರಜಾಲದಲ್ಲಿ, ಕಂಪ್ಯೂಟರ್ ಬಳಕೆಯಲ್ಲಿ ಈ ‘ನೀನು ನೀನೇನಾ?’ ಎನ್ನುವ ಪ್ರಶ್ನೆ ಯಾವಾಗಲೂ ಪ್ರಸ್ತುತವೇ. ಅದಕ್ಕೋಸ್ಕರವೇ ಪಾಸ್‌ವರ್ಡುಗಳು, ಕಂಪ್ಯೂಟರ್ ಬಳಕೆದಾರನ ಪರಿಚಯವನ್ನು ಸರಿಯಾಗಿ ತಿಳಿದುಕೊಳ್ಳಲು ಪರಿಪರಿಯ ಪರಿಕರಗಳು ವಿಧಾನಗಳೆಲ್ಲ ಇರುವುದು. ಕೆಲವು ಜಾಲತಾಣಗಳಲ್ಲಂತೂ "ನೀನೊಬ್ಬ ರೋಬಾಟ್ ಅಲ್ಲ, ಸಾಮಾನ್ಯ ಮನುಷ್ಯ ಎಂದು ದೃಢಪಡಿಸುವುದಕ್ಕಾಗಿ ಇಂಥದನ್ನು ಮಾಡಿತೋರಿಸು..." ಎಂದು ನಿರ್ದೇಶನವೂ ಇರುತ್ತದೆ! ಕಂಪ್ಯೂಟರ್ ವ್ಯವಸ್ಥೆಯನ್ನು ಅತ್ಯಂತ ಸುಭದ್ರಗೊಳಿಸಿದ್ದೇವೆ ಎಂದು ಯಾರು ಎಷ್ಟು ಹೆಮ್ಮೆಯಿಂದ ಹೇಳಿಕೊಂಡರೂ ರಂಗೋಲಿ ಕೆಳಗೆ ತೂರಬಲ್ಲ ಚೋರಚಾಣಾಕ್ಷರು ಇರುವುದರಿಂದ ಅವೆಲ್ಲ ಅನಿವಾರ್ಯವೂ ಹೌದು. ಮತ್ತೆ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯವರು ನನಗೆ ಮಿಂಚಂಚೆ ಬರೆದು ನೀನು ನೀನೇನಾ ಎಂದು ಕೇಳಿದ್ದಾದರೂ ಆ ದಿಸೆಯಲ್ಲೇ.

ನನಗೆ ತಮಾಷೆ ಅನಿಸಿದ್ದೇನೆಂದರೆ ಒಂದುವೇಳೆ ಆ ಪ್ರಶ್ನೆಗೆ ಕಡ್ಡಾಯವಾಗಿ (ಹೌದು ಅಂತಾದ್ರೂ, ಅಲ್ಲ ಅಂತಾದ್ರೂ) ಉತ್ತರಿಸಲೇಬೇಕು ಅಂತಿದ್ದಿದ್ದರೆ ಹೇಗೆ ಉತ್ತರಿಸುವುದು? ಪುರಾವೆ ಹೇಗೆ ಒದಗಿಸುವುದು? ನೆನಪಿರಲಿ- ಅವರು ಕೇಳಿದ್ದು ‘ನೀನು ಶ್ರೀವತ್ಸ ಜೋಶಿನಾ?’ ಅಂತಲ್ಲ. ಹಾಗೊಂದು ವೇಳೆ ಕೇಳಿದ್ದಿದ್ದರೆ ನಾನೇ ಶ್ರೀವತ್ಸ ಜೋಶಿ ಎಂದು ಸಾರುವ ಯಾವುದಾದರೂ ಗುರುತುಪತ್ರವನ್ನು- ಡ್ರೈವಿಂಗ್‌ಲೈಸೆನ್ಸೋ ಪಾಸ್‌ಪೋರ್ಟೋ ಇನ್ನೊಂದೋ ಮತ್ತೊಂದೋ ಏನನ್ನಾದರೂ ತೋರಿಸಬಹುದಾಗಿತ್ತು. ಭಾರತದಲ್ಲಾಗಿದ್ರೆ ‘ಆಧಾರ್’ ಕಾರ್ಡನ್ನೇ ಆಧಾರವಾಗಿ ತೋರಿಸಬಹುದಾಗಿತ್ತು ಎನ್ನಿ. ಆದರೆ ಸಮಸ್ಯೆ ಇರೋದು ನಾನು ನಾನೇ ಎಂದು, ಅಥವಾ ನಾನು ನಾನಲ್ಲ ಎಂದು ಉತ್ತರಿಸುವುದರಲ್ಲಿ!

ಸಮಸ್ಯೆಯ ವಿಶ್ಲೇಷಣೆಗೆ ಮೊದಲು, ಒಂದೆರಡು ಲಘು ಪ್ರಸಂಗಗಳನ್ನು ಮೆಲುಕುಹಾಕೋಣ.

ನಾನು ಪಿಯುಸಿ ಓದುತ್ತಿದ್ದಾಗ ನಮ್ಮ ತರಗತಿಯಲ್ಲಿ ನಂದಾ ಮತ್ತು ನೀನಾ ಎಂಬ ಹೆಸರಿನ ಇಬ್ಬರು ಹುಡುಗಿಯರಿದ್ದರು. ಹಾಜರಿಪಟ್ಟಿಯಲ್ಲಿ ಅವರಿಬ್ಬರ ಹೆಸರುಗಳು ಅನುಕ್ರಮದಲ್ಲಿದ್ದವು. ನಮ್ಮ ಕೆಮೆಸ್ಟ್ರಿ ಪ್ರೊಫೆಸರರು ಬೇಕಂತಲೇ "ನಂದಾ ನೀನಾ?" ಎಂದು ಪ್ರಶ್ನೆಕೇಳುವ ಧಾಟಿಯಲ್ಲಿ ಹಾಜರಿ ಕರೆಯೋರು. ನಂದಾ ಮತ್ತು ನೀನಾ ಇಬ್ಬರೂ ಒಟ್ಟೊಟ್ಟಿಗೇ ಯಸ್ ಸಾರ್ ಎನ್ನೋರು. "ನಾನು ಒಬ್ಬಳನ್ನೇ ಮಾತಾಡ್ಸಿದ್ದಮ್ಮಾ ಇಬ್ಬರೂ ಯಾಕೆ ಎದ್ದುನಿಂತ್ರಿ?" ಎಂದು ಪ್ರೊಫೆಸರ್ ಪ್ರಶ್ನೆ. ಆಮೇಲೆ ನಂದಾಳನ್ನುದ್ದೇಶಿಸಿ “ನಿನ್ನ ಹೆಸರೇನಮ್ಮಾ?" ಎಂದು ಕೇಳಿದರೆ ಆಕೆ ‘ನಂದಾ’ ಎಂದಾಗ "ಹೌದಮ್ಮ ನಿನ್ನದೇ ಹೆಸರು ಕೇಳಿದ್ದು" ಎನ್ನೋರು. ಅಂತೂ ಒಳ್ಳೇ ತಮಾಷೆ. ನಂದಾ-ನೀನಾಗಳಂತೆಯೇ ಹೆಸರುಗಳಲ್ಲೇ ತರ್ಕ ಹುಟ್ಟಿಸಬಹುದಾದ ಇನ್ನೊಂದು ಪ್ರಸಂಗವೆಂದರೆ(ಇದು ಕಾಲ್ಪನಿಕ)- ಹಿಂದಿ ಚಿತ್ರರಂಗದ ನಾನಾ ಪಾಟೇಕರ್ ಮತ್ತು ನೀನಾ ಗುಪ್ತಾ ಇವರಿಬ್ಬರೂ ಕನ್ನಡದಲ್ಲಿ, ಅದರಲ್ಲೂ ಪರಸ್ಪರ ಹೆಸರು ಕೂಗಿ ಮಾತಾಡಿದರೆ? "ನಾನಾ? ನೀನಾ?" ಎಂಬ ಸಂದೇಹ ನಿವಾರಣೆಯಲ್ಲೇ ಕಾಲ ಕಳೆದುಹೋಗಬಹುದು. ಅವರ ಜತೆ ಮಾಧುರಿ ದೀಕ್ಷಿತ್ ‘ನೇನೆ’ ತೆಲುಗಿನಲ್ಲಿ ಮಾತನಾಡುತ್ತ ಸೇರಿಕೊಂಡರೆ ಕಥೆ ಮುಗೀತು. ಹಿನ್ನೆಲೆಯಲ್ಲಿ ಗಡಿಬಿಡಿ ಗಂಡ ಚಿತ್ರದ ಹಾಡು. ಅದೇ- ರವಿಚಂದ್ರನ್ ಮತ್ತು ತಾಯ್‌ನಾಗೇಶ್ ಪರಸ್ಪರ ಚಾಲೆಂಜ್ ಹಾಕಿಕೊಳ್ತಾರಲ್ಲ ‘ನೀನು ನೀನೇ ಇಲ್ಲಿ ನಾನು ನಾನೇ... ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯ ದಾಸಾನುದಾಸ...’

ಕನ್ನಡ-ತೆಲುಗು ಅಷ್ಟೇ‌ಅಲ್ಲ. ಇಂಗ್ಲಿಷ್‌ನ ಮಜಾ ಕೇಳಿ. ಎಂಜಿನಿಯರಿಂಗ್ ಕಾಲೇಜಲ್ಲಿ ಯು.ಆರ್.ಸುಬ್ರಹ್ಮಣ್ಯ ಎಂಬ ಹೆಸರಿನ ಸಹಪಾಠಿಯೊಬ್ಬನಿದ್ದ. ಅವನನ್ನು ನಮ್ಮ ಲೆಕ್ಚರರ್ರು "ಆರ್ ಯೂ ಸುಬ್ರಹ್ಮಣ್ಯ?" ಎಂದು ಕೇಳಿದಾಗಲೆಲ್ಲ ಅವನು "ಯು.ಆರ್.ಸುಬ್ರಹ್ಮಣ್ಯ" ಎಂದು ಉತ್ತರಿಸುತ್ತಿದ್ದ, ತನ್ನ ಇನಿಶಿಯಲ್ಸನ್ನು ಆಚೀಚೆ ಮಾಡಿ ಕೇಳಿದ್ದಕ್ಕೆ ಮುನಿಸಿಕೊಂಡು. "ನನ್ನ ಹೆಸರು ಸುಬ್ರಹ್ಮಣ್ಯ ಅಲ್ಲಪ್ಪಾ, ನೀನು ಸುಬ್ರಹ್ಮಣ್ಯನಾ?" ಎಂದು ಕನ್ನಡದಲ್ಲಿ ಕೇಳಿ ಲೆಕ್ಚರರ್ ಗದರಿಸುತ್ತಿದ್ದರು ಹುಸಿಕೋಪದಿಂದ. "ಯು.ಆರ್" ಎಂಬ ಇನಿಶಿಯಲ್ಸ್ ಇರುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯವರಿಗೂ ಇಂಥದೇ ಸ್ವಾರಸ್ಯಕರ ಪೀಕಲಾಟಗಳು ಒಮ್ಮೆಯಾದರೂ ಎದುರಾಗಿವೆಯಿರಬಹುದು.ಹೆಸರಿನಿಂದಲೇ ಹುಟ್ಟಿಕೊಳ್ಳುವ ‘ಐಡೆಂಟಿಟಿ ಕ್ರೈಸಿಸ್’ ಅದು! ಆದರೂ ನಮ್ಮ ಐಡೆಂಟಿಟಿಗೆ ಮೊದಲನೆಯದಾಗಿ ಜೋಡಣೆಯಾಗುವುದು ನಮ್ಮ ಹೆಸರೇ. ಇಬ್ಬರು ವ್ಯಕ್ತಿಗಳಿಗೆ ಒಂದೇ ಹೆಸರಿದ್ದರೆ ಅಡ್ಡಹೆಸರು, ಊರಿನ ಹೆಸರು, ಇನಿಶಿಯಲ್ಸು ಇತ್ಯಾದಿ. ನಾಮದ ಬಲವೊಂದೇ ಸಾಕಾಗದಿದ್ದರೆ ಭಾವಚಿತ್ರ. ಹಾಗಾಗಿಯೇ "ಯಾವುದಾದರೂ ಫೋಟೊ ಐಡಿ ತೋರಿಸಲೇಬೇಕು" ಎನ್ನುವುದು ಜಾಗತಿಕವಾಗಿ ಒಂದು ರೂಢಿ ಎನ್ನುವುದಕ್ಕಿಂತಲೂ ನಿಯಮವೇ ಆಗಿಬಿಟ್ಟಿದೆ. ಭಾವಚಿತ್ರವೇ ಎಲ್ಲವನ್ನೂ ತಿಳಿಸಬಲ್ಲುದೇ? ನಿಮಗೆ ಒಂದು ಹಳೆಯ ಹಿಂದಿ ಸಿನೆಮಾಹಾಡು, ಕಿನಾರಾ ಚಿತ್ರದ್ದು, ನೆನಪಿರಬಹುದು- "ನಾಮ್ ಗುಮ್ ಜಾಯೇಗಾ... ಚೆಹರಾ ಯೇ ಬದಲ್ ಜಾಯೇಗಾ... ಮೇರೀ ಆವಾಜ್ ಹೀ ಪೆಹಚಾನ್ ಹೈ ಗರ್ ಯಾದ್ ರಹೇ..." ಅಂದರೆ, ಹೆಸರು ಮರೆತು ಹೋಗಬಹುದು; ಮುಖಚರ್ಯೆ ಬದಲಾಗಬಹುದು. ಆದರೆ ನನ್ನ ಧ್ವನಿಯನ್ನು ನೆನಪಿಟ್ಟುಕೊಂಡರೆ ಅದೇ ನನ್ನ ಪರಿಚಯದ ಗುರುತು ಎನ್ನುತ್ತಾಳೆ ಚಿತ್ರದ ನಾಯಕಿ!

ಹೆಸರು, ಮುಖಚರ್ಯೆ, ಧ್ವನಿ ಎಲ್ಲ ಪರಿಚಯವಾಗಿದ್ದರೂ ಶಕುಂತಲೆಯನ್ನು ಮರೆತೇಬಿಟ್ಟನಲ್ಲ ದುಷ್ಯಂತ ಮಹಾರಾಜ? ಅದಕ್ಕೇನನ್ನೋಣ? ಅವನು ಕೊಟ್ಟಿದ್ದ ಉಂಗುರವಾದರೂ ಪರಿಚಯಪ್ರಮಾಣ ಆಗಬಹುದೆಂದು ಆಕೆ ಬಗೆದರೆ ಅದೂ ಕಳೆದುಹೋಗಬೇಕೇ! ವಿಧಿವಿಪರೀತ ವಿಧಿಯಾ ಆಟ. ಮತ್ತದೇ ಪ್ರಶ್ನೆ. ನೀನು ನೀನೇನಾ ಎಂದು ಕೇಳಿದರೆ ಉತ್ತರಿಸುವುದೆಂತು? ನಾನು ನಾನೇ ಎನ್ನಲು ಆಧಾರವೆಂತು? ಈ ಪ್ರಪಂಚದಲ್ಲಿ ಒಬ್ಬೊಬ್ಬ ವ್ಯಕ್ತಿಯ ಬೆರಳಚ್ಚು ವಿನ್ಯಾಸ (ಫಿಂಗರ್‌ಪ್ರಿಂಟ್)ಗಳು ಅನನ್ಯವಾಗಿರುತ್ತವೆ ಎಂದು ವಿಜ್ಞಾನದಿಂದ ಕಂಡುಕೊಂಡಿದ್ದೇವೆ. ಅಕ್ಷರಸ್ಥರಾಗಿಯೂ ಹೆಬ್ಬೆಟ್ಟು ಒತ್ತುವ ಸಂದರ್ಭಗಳನ್ನು ನಿಯಮಗಳಿಗೋಸ್ಕರ ರೂಪಿಸಿಕೊಂಡಿದ್ದೇವೆ. ಅಮೆರಿಕದಲ್ಲಿ ವಿಮಾನನಿಲ್ದಾಣದಲ್ಲಿ ಇಳಿದೊಡನೆ ಊರಿನೊಳಗೆ ಪ್ರವೇಶಿಸುವ ಮೊದಲು ಫಿಂಗರ್‌ಪ್ರಿಂಟುಗಳ ತಪಾಸಣೆ ಆಗಲೇಬೇಕು. ಈಗ ಬೆರಳಚ್ಚುಗಳಷ್ಟೇ ಅಲ್ಲ, ಕಣ್ಣಿನ ಪಾಪೆ ಸಹ ಪ್ರತಿಯೊಬ್ಬ ವ್ಯಕ್ತಿಯದೂ ಅನನ್ಯ ವಿನ್ಯಾಸದ್ದಾಗಿರುತ್ತದೆಂದು ತಿಳಿದುಬಂದಿರುವುದರಿಂದ Iris identification ಅಂತಲೂ ಶುರುವಾಗಿದೆ. ಗುರುತಿನ ಅಗತ್ಯ ಮತ್ತಷ್ಟು ಗುರುತರವಾದರೆ ಡಿ‌ಎನ್‌ಎ ಟೆಸ್ಟಿಂಗ್ ಸಹ ಇದ್ದೇ‌ಇದೆಯಲ್ಲ?

ಆದರೆ ನನ್ನ ಜಿಜ್ಞಾಸೆಗೆ ಅದಾವುದೂ ಸಮರ್ಪಕವಾಗಿ ಉತ್ತರ ಕೊಡಲಾರದು. ಯಾಕೆ ಹೇಳಿ? ದೈಹಿಕ ಲಕ್ಷಣಗಳಿಂದ ನಾನು ನಾನೇ ಎಂದು ನಿರ್ಧರಿಸುವುದೇ ಆದಲ್ಲಿ ನನ್ನ ದೇಹದ ಒಂದೊಂದೇ ಅಂಗವನ್ನು ಬದಲಾಯಿಸುತ್ತಾ ಹೋದರೆ ನಾನು ನಾನಾಗಿಯೇ ಇರುತ್ತೇನೆಯೇ? ‘ಥೀಸಿಯಸ್‌ನ ಹಡಗಿನ ಕತೆ’ಯನ್ನು ನೀವು ಕೇಳಿರಬಹುದು/ಓದಿರಬಹುದು. ಮೊನ್ನೆಮೊನ್ನೆ ಅದೇ ಹೆಸರಿನ ಒಂದು ಸಿನೆಮಾ ಸಹ ಬಿಡುಗಡೆಯಾಗಿದೆಯಂತೆ. ಥೀಸಿಯಸ್ ಎಂಬ ನಾವಿಕ ಹಡಗಿನಲ್ಲಿ ಹೊರಟವನು ದಾರಿಯುದ್ದಕ್ಕೂ ತನ್ನ ಹಡಗಿನ ಒಂದೊಂದೇ ಭಾಗವನ್ನು ಬದಲಾಯಿಸುತ್ತ ಹೋಗಬೇಕಾಗುತ್ತದೆ. ಗಮ್ಯಸ್ಥಾನ ತಲುಪುವಾಗ ಅವನ ಹಡಗಿನ ಪ್ರತಿಯೊಂದು ಭಾಗವೂ ಹೊಸತು ಜೋಡಿಸಿದ್ದಾಗಿರುತ್ತದೆ. ಆದರೂ ಜನ ಅದನ್ನು ಥೀಸಿಯಸ್‌ನ ಹಡಗು ಎಂದೇ ಗುರುತಿಸುತ್ತಾರೆ. ಥೀಸಿಯಸ್ ಬಿಸಾಡಿದ ಭಾಗಗಳನ್ನೆಲ್ಲ ಸೇರಿಸಿ ಇನ್ನೊಂದು ಹಡಗನ್ನು ಒಬ್ಬಾತ ನಿರ್ಮಿಸುತ್ತಾನೆ. ಅಸಲಿಗೆ ಅದೇ ಥೀಸಿಯಸ್‌ನ ಒರಿಜಿನಲ್ ಹಡಗು ಅಲ್ಲವೇ? ಅದೇರೀತಿ ಒಂದುವೇಳೆ ನನ್ನ ದೇಹದ ಅಂಗಗಳನ್ನು (ನನಗೆ ಹೊಸದನ್ನು ಜೋಡಿಸುವಾಗ ಬಿಸಾಡಿದ ಹಳೆಯವನ್ನು) ಜೋಡಿಸಿ ಹೊಸದೊಂದು ವ್ಯಕ್ತಿಯಾದರೆ ಅದೂ ನಾನೇ ಆಗಿರುತ್ತೇನೆಯೇ? ಹಾಗಾದರೆ ನಾನು ಯಾರು? ಕನಕದಾಸರು ‘ನಾನು ಹೋದರೆ ಹೋದೇನು’ ಎಂದು ಹೇಳಿದಾಗಿನ ‘ನಾನು’ ನಾನೇ?

ತರ್ಕ ಮಾಡುತ್ತ ಹೋದರೆ ಈ ಜಿಜ್ಞಾಸೆಯು ದೇಹ-ಆತ್ಮ, ಪ್ರಕೃತಿ-ಪುರುಷ, ದ್ವೈತ-ಅದ್ವೈತ ಸಿದ್ಧಾಂತಗಳನ್ನೆಲ್ಲ ದಾಟಿ ಅಹಂ ಬ್ರಹ್ಮಾಸ್ಮಿ ಎಂದುಕೊಂಡು ಪರಬ್ರಹ್ಮನ ಪದತಲದವರೆಗೂ ಹೋಗಬಹುದೇನೋ. ತತ್ತ್ವಮಸಿ (ತತ್ ತ್ವಮ್ ಅಸಿ = ಅದು ನೀನೇ ಆಗಿರುವಿ) ಎಂಬ ಛಾಂದೋಗ್ಯೋಪನಿಷತ್ತಿನ ಮಹಾವಾಕ್ಯದವರೆಗೂ ತಲುಪಬಹುದೇನೋ. ಅಣೋರಣೀಯನೂ ಮಹತೋಮಹೀಯನೂ ಅಪ್ರಮೇಯನೂ ನಿರಾಕಾರನೂ ಸರ್ವಾಂತರ್ಯಾಮಿಯೂ ಆದ ಪರಬ್ರಹ್ಮನಿಗೇ ನಾವು ತತ್ತ್ವಮಸಿ ಎಂದು ಗುರುತುಪತ್ರ ಕೊಡಬಲ್ಲೆವು, ಆದರೆ ನನಗೆ ನಿಮಗೆ ಸರಿಯಾದ ಗುರುತಿಲ್ಲವೆಂದರೆ ಆ ಪರಬ್ರಹ್ಮನಿಗೂ ನಗು ಬಂದೀತು!

ಅಬ್ಬಾ! ಒಂದು ಇಮೇಲ್ ಸಬ್ಜೆಕ್ಟ್ ಲೈನ್ ನಮ್ಮೆಲ್ಲ ಆಲೋಚನೆಗಳನ್ನು ಬುಡಮೇಲು ಮಾಡಿ ಇಷ್ಟು ಗಹನವಾದ ಸಬ್ಜೆಕ್ಟ್ ಆಗಿಬಿಟ್ಟಿತಲ್ಲ! ಪ್ರಶ್ನೆ ಇರೋದೇ ಸಬ್ಜೆಕ್ಟ್ ಯಾವುದು ಒಬ್ಜೆಕ್ಟ್ ಯಾವುದು ಎನ್ನುವುದಲ್ಲವೇ?  ಈಗ ಹೇಳಿ, "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ಉತ್ತರ?


["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]

00:0000:00
Comments | Embed | Download(Loading)
25
Sep
Posted in Uncategorized by sjoshi at 1:33 pm

ದಿನಾಂಕ  15 ಎಪ್ರಿಲ್ 2012ರ ಸಂಚಿಕೆ...

ಹಸಿ ಗೋಡೆಯಲಿ ನೆಟ್ಟ ಹರಳು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

‘ಹಳಗನ್ನಡ ಕಾವ್ಯದ ಪದ್ಯಭಾಗಗಳು ನಿಮ್ಮ ಸಂಗ್ರಹದಲ್ಲಿ ಯಾವುದಾದರೂ ಇವೆಯೇ, ಅಂತರ್ಜಾಲದಲ್ಲಿ ಸಿಕ್ಕಿದ್ದೂ ಆಗುತ್ತದೆ, ಅಥವಾ ನಿಮ್ಮ ಬಳಿ ಹಳೆಯ ಗ್ರಂಥಗಳಾವುದಾದರೂ ಇದ್ದರೆ ಅದರ ಒಂದೆರಡು ಪುಟಗಳನ್ನು ಸ್ಕ್ಯಾನ್ ಮಾಡಿದ್ದೂ ಆದೀತು. ಅರ್ಥಸಹಿತ ವಿವರಣೆಯಿದ್ದರೆ ಮತ್ತೂ ಒಳ್ಳೆಯದು. ಕಳಿಸಿಕೊಡಲಿಕ್ಕಾಗುತ್ತದೆಯೇ?’ - ಎಂಬ ಒಕ್ಕಣೆಯ ಪತ್ರವನ್ನು ಅಮೆರಿಕನ್ನಡಿಗ ಸ್ನೇಹಿತರೊಬ್ಬರು ಒಮ್ಮೆ ನನಗೆ ಬರೆದಿದ್ದರು. ಅವರಿರುವ ಊರಿನ ಕನ್ನಡಸಂಘದಲ್ಲಿ ಸಾಹಿತ್ಯಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದರಂತೆ. ಹೆಚ್ಚುಹೆಚ್ಚು ಜನ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು ಎಲ್ಲರನ್ನೂ ಉತ್ತೇಜಿಸಿದ್ದರಂತೆ (ಪ್ರೀತಿಯಿಂದ ಒತ್ತಾಯಿಸಿದ್ದರು ಅಂತಿಟ್ಕೊಳ್ಳಿ). ಅದಕ್ಕೆ ನನ್ನ ಸ್ನೇಹಿತ ಭರ್ಜರಿ ತಯಾರಿ ನಡೆಸಿದ್ದರು. ‘ಹಳಗನ್ನಡದ ಕಾವ್ಯವಾಚನ ಮಾಡಬೇಕೆಂಬ ಉಮೇದು ಬಂದಿದೆ. ನಿಮ್ಮಿಂದ ನೆರವು ಸಿಗಬಹುದೆಂದು ಊಹಿಸಿ ನಾನೂ ಹೆಸರು ಕೊಟ್ಟಿದ್ದೇನೆ’ ಎಂದು ಪತ್ರದಲ್ಲಿ ಸೇರಿಸಿದ್ದರು.

ನನ್ನತ್ರ ಹಳಗನ್ನಡ ಕಾವ್ಯ ಸಿಕ್ಕೀತೆಂದು ಅವರಿಗೇಕೆ ಅನಿಸಿತೋ. ನಿಜಕ್ಕೂ ನನ್ನ ಬಳಿ ಅಂಥ ಪುಸ್ತಕಗಳಾವುವೂ ಇಲ್ಲ. ಆದರೆ ಅವರ ಉತ್ಸಾಹಭಂಗ ಮಾಡುವ ಮನಸ್ಸಾಗಲಿಲ್ಲ. ‘ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ಇದ್ದ ಕೆಲವು ಪದ್ಯಗಳು ಬಹುಶಃ ಹಳಗನ್ನಡ ಕ್ಯಾಟೆಗರಿಗೆ ಸೇರುವಂಥವು; ಅವುಗಳ ಸಾಲುಗಳೇನಾದ್ರೂ ಸರಿಯಾಗಿ ನೆನಪಿಗೆ ಬಂದರೆ, ಅಥವಾ ಇಂಟರ್‌ನೆಟ್‌ನಲ್ಲಿ ಸಿಕ್ಕಿದ್ರೆ ಇಮೇಲ್ ಮಾಡ್ತೇನೆ’ ಎಂದು ಉತ್ತರ ಬರೆದೆ. ತತ್‌ಕ್ಷಣಕ್ಕೆ ಹೊಳೆದದ್ದು ಸೋಮೇಶ್ವರ ಶತಕದಿಂದಾಯ್ದ ಪದ್ಯಗಳು. ಹಾಗೆಯೇ ‘ಲೋಹಿತಾಶ್ವನ ಸಾವು’ ಎಂಬ ಪದ್ಯ. ಅವೆರಡೂ ನಮಗೆ ಐದನೇ ತರಗತಿಯ ಪಠ್ಯದಲ್ಲಿ ಇದ್ದವು.

ಸೋಮೇಶ್ವರ ಶತಕದ ಪದ್ಯಗಳು ಇಂಟರ್‌ನೆಟ್‌ನಲ್ಲಿ ಸುಲಭವಾಗೇ ಸಿಕ್ಕಿದವು. ‘ಪ್ರಜೆಯಂ ಪಾಲಿಸಬಲ್ಲೊಡಾತನರಸಂ...’, ‘ಉಡುರಾಜಂ ಕಳೆಗುಂದಿ ಪೆರ್ಚದಿಹನೆ...’, ಮತ್ತು ‘ರವಿಯಾಕಾಶಕೆ ಭೂಷಣಂ...’ ಮುಂತಾದ ಚೌಪದಿಗಳಿಗಂತೂ ಪ್ರತಿಯೊಂದು ಪದದ ಅರ್ಥವಿವರಣೆಯೂ ಇತ್ತು. ಕಾವ್ಯವಾಚನ ಕಾರ್ಯಕ್ರಮಕ್ಕೆ ಇದು ಧಾರಾಳವಾಯ್ತು. ಅಲ್ಲದೇ ಸೋಮೇಶ್ವರ ಶತಕ ಬರೆದ ಕವಿಯ ಬಗ್ಗೆಯೂ  ನನ್ನ ಸ್ನೇಹಿತರಿಗೆ ಹೆಮ್ಮೆಯಿಂದ ತಿಳಿಸಬಹುದು ಎಂದುಕೊಂಡೆ. ‘ಸದ್ಯಕ್ಕೆ ಇದನ್ನು ನೋಡಿಟ್ಟುಕೊಳ್ಳಿ. ನಿಮಗೆ ವಾಚನಕ್ಕೆ ಸರಳವಾಗಿ ಅನುಕೂಲಕರವಾಗಿ ಇದೆ. ಅರ್ಥವಿವರಣೆಯೂ ಇದೆ. ಆದರೂ, ಲೋಹಿತಾಶ್ವನ ಸಾವು ಪದ್ಯವನ್ನು ಹೇಗಾದರೂ ಸಂಗ್ರಹಿಸಿ ನಿಮಗೆ ಕಳಿಸಿಕೊಡಬೇಕೆಂದೇ ನನಗೆ ಆಸೆ ಇರುವುದು. ನಿಮ್ಮ ಕಾರ್ಯಕ್ರಮದಲ್ಲಿ ನೀವು ಅದನ್ನೇನಾದ್ರೂ ವಾಚಿಸಿ ವ್ಯಾಖ್ಯಾನಿಸಿದ್ದೇ ಆದರೆ ಭಾರೀ ಮೆಚ್ಚುಗೆ ಗಳಿಸ್ತೀರಿ. ಒಂದೆರಡು ದಿನ ಕಾಲಾವಕಾಶ ಕೊಡಿ, ಹುಡುಕುತ್ತೇನೆ’ ಎಂದು ಅವರಿಗೆ ಪತ್ರಿಸಿದೆ.

‘ಲೋಹಿತಾಶ್ವನ ಸಾವು’ ಒಂದು ಅವಿಸ್ಮರಣೀಯ ಪದ್ಯ. ಕರುಳು ಕಿತ್ತುಬರುವಂತೆ ವಿಷಾದ ಮಡುಗಟ್ಟುವ ಪದ್ಯ. ನಾನು ಕಲಿತ ಏಕೋಪಾಧ್ಯಾಯ ಏಕಕೊಠಡಿಯ ಪ್ರಾಥಮಿಕ ಶಾಲೆಯಲ್ಲಿ, ಇಡೀ ಶಾಲೆಯೇ ಬಳಬಳನೆ ಕಣ್ಣೀರುಗರೆಯುತ್ತಿದ್ದ ಪದ್ಯಗಳೆಂದರೆ ಮೂರನೇ ತರಗತಿಯ ಪಠ್ಯದಲ್ಲಿದ್ದ ‘ಪುಣ್ಯಕೋಟಿ’ ಮತ್ತು ಐದನೇ ತರಗತಿಯ ಪಠ್ಯದಲ್ಲಿದ್ದ ‘ಲೋಹಿತಾಶ್ವನ ಸಾವು’. ಏಕೋಪಾಧ್ಯಾಯ ಏಕಕೊಠಡಿಯ ಶಾಲೆಯಾದ್ದರಿಂದ, ಆ ಪದ್ಯಗಳನ್ನು ಮಾಸ್ತರರು ಕಥೆಯಂತೆ ಬಣ್ಣಿಸುತ್ತಿದ್ದದ್ದನ್ನು ನಾವೆಲ್ಲ ಐದೈದು ವರ್ಷ ಕೇಳಿಸಿಕೊಂಡು ಕಣ್ಣೀರು ಸುರಿಸಿದ್ದೇವೆ. ಪುಣ್ಯಕೋಟಿಯದಾದರೂ ಸುಖಾಂತ್ಯ, ಆದರೆ ಲೋಹಿತಾಶ್ವ ಸತ್ತಾಗಿನ ಚಂದ್ರಮತಿಯ ಸಂಕಟವಂತೂ ವರ್ಣನಾತೀತ. ಈಗಲೂ ನೆನೆಸಿಕೊಂಡರೆ ಮನಸ್ಸು ಮಮ್ಮಲಮರುಗುತ್ತದೆ. ‘ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ...’ ಎಂದು ಶುರುವಾಗುವ ಸಾಲುಗಳಿಂದ ಮೈಝುಮ್ಮೆನ್ನುತ್ತದೆ. ಅದು ನೆನಪುಳಿಯುವುದಕ್ಕೆ ಇನ್ನೊಂದು ಕಾರಣವೂ ಇದೆ. ಚಿಕ್ಕಂದಿನಲ್ಲಿ ಅಂತ್ಯಾಕ್ಷರಿ ಆಡುವಾಗ ನಾವು ಚಿತ್ರೇತರ ಗೀತೆಗಳನ್ನೂ ಸೇರಿಸಿಕೊಳ್ತಿದ್ವಿ. ‘ತ’ ಅಕ್ಷರ ಬಂದಾಗ ಮೊದಲು ನೆನಪಾಗ್ತಿದ್ದದ್ದು ಅದೇ ಪದ್ಯ. ಎಷ್ಟೆಂದರೂ ಶಾಲೆಯಲ್ಲಿ ಕಂಠಪಾಠ ಮಾಡಿದ್ದಲ್ವಾ?

ಆದರೆ ಈಗ ಸರಿಯಾಗಿ ನೆನಪಿಗೆ ಬರ್ತಾ ಇಲ್ಲ! ಅರ್ಧಂಬರ್ಧವಾಗಿ, ತಪ್ಪುತಪ್ಪಾಗಿ ಬರೆದು ಕಳಿಸಿಕೊಡೋದು ತರವಲ್ಲ. ಅದು ಪದ್ಯಕ್ಕೆ, ಕವಿಗೆ ಅವಮಾನ. ಏನು ಮಾಡಲಿ? ಪದ್ಯದ ಸರಿಯಾದ ಸಾಹಿತ್ಯ ದೊರಕಿಸಿಕೊಳ್ಳುವ ಬಗೆಯೆಂತು? ಆಗ ನೆನಪಾದವರೇ ಜೆ.ಕೆ.ಮೋಹನ್ ರಾವ್ ಎಂಬೊಬ್ಬ ಹಿರಿಯ ಅಮೆರಿಕನ್ನಡಿಗರು. ಅವರು ಇಲ್ಲೇ ವಾಷಿಂಗ್ಟನ್ ಪ್ರದೇಶದಲ್ಲಿರುವವರು. ಒಂದೆರಡು ಸರ್ತಿ ಕನ್ನಡಸಂಘದಲ್ಲಿ ಭೇಟಿಯಾಗಿದ್ದೇನೆ. ಅವರೊಬ್ಬ ಕನ್ನಡ ಸಾಹಿತ್ಯದ ಹೈ-ಟೆಕ್ ಅಭಿಮಾನಿ ಎಂದೂ ಕೇಳ್ಪಟ್ಟಿದ್ದೇನೆ. ಹೈ-ಟೆಕ್ ಏಕೆಂದರೆ ಕನ್ನಡದ ಕೆಲವು ಹಳೆಯ ಗ್ರಂಥಗಳನ್ನು ಅವರು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಅವರತ್ರ ‘ಲೋಹಿತಾಶ್ವನ ಸಾವು’ ಸಿಕ್ಕರೂ ಸಿಗಬಹುದು. ಒಮ್ಮೆ ಫೋನಾಯಿಸಿ ಕೇಳಲಿಕ್ಕೇನೂ ಅಡ್ಡಿಯಿಲ್ಲವಲ್ಲ. ಆ ಪದ್ಯವು ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಕೃತಿಯಲ್ಲಿ ಬರುತ್ತದೆ ಎನ್ನುವ ಪ್ರಾಥಮಿಕ ಮಾಹಿತಿಯನ್ನು ಆಗಲೇ ಗುರುತುಮಾಡಿಟ್ಟಿದ್ದೆ. ಸ್ವಲ್ಪ ಅಳುಕುತ್ತಲೇ ದೂರವಾಣಿ ಕರೆಮಾಡಿ ‘ರಾಘವಾಂಕನ ಹರಿಶ್ಚಂದ್ರ ಕಾವ್ಯದ ಡಿಜಿಟಲ್ ಪ್ರತಿ ನಿಮ್ಮ ಸಂಗ್ರಹದಲ್ಲಿ ಇದೆಯೇ?’ ಎಂದು ಕೇಳಿದೆ. ‘ಖಂಡಿತವಾಗಿಯೂ ಇದೆ, ಈಗಲೇ ಕಳಿಸಿಕೊಡ್ತೇನೆ’ ಮೋಹನರಾಯರ ಉತ್ತರ. ಅದಾದ ಒಂದು ನಿಮಿಷದೊಳಗೆ ನನ್ನ ಇಮೇಲ್ ಇನ್‌ಬಾಕ್ಸ್‌ನಲ್ಲಿ ಹರಿಶ್ಚಂದ್ರ ಕಾವ್ಯ ಪಿಡಿ‌ಎಫ್ ಕಡತ ಪ್ರತ್ಯಕ್ಷ. ಇಂಟರ್‌ನೆಟ್ಟನ್ನು ಇನ್ವೆಂಟಿಸಿದ ಟಿಮ್ ಬರ್ನರ್ಸ್‌ಗೆ ಜೈ ಹೋ!

ಖುಷಿಯಿಂದಲೇ ಪಿಡಿ‌ಎಫ್ ತೆರೆದೆ. ಸುಮಾರು ೨೦೦ ಪುಟಗಳ ಗ್ರಂಥ. ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೩೧ರಲ್ಲಿ ಪ್ರಕಟವಾದದ್ದು. ಬಿ.ಎಂ.ಶ್ರೀಕಂಠಯ್ಯನವರ ಪ್ರಧಾನ ಸಂಪಾದಕತ್ವದಲ್ಲಿ ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳು ಸಂಪಾದಿಸಿದ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಸಂಗ್ರಹ. ಮೊದಲ ಐವತ್ತು ಪುಟಗಳಲ್ಲಿ ಪೀಠಿಕೆ, ಕವಿ-ಕಾವ್ಯ ಪರಿಚಯ, ರಾಘವಾಂಕನ ಗುಣಗಾನ ಇತ್ಯಾದಿ. ರಸವತ್ತಾದ ಕಥನಕ್ರಮ, ಸ್ಫುಟವಾದ ಪಾತ್ರಪ್ರದರ್ಶನ, ಸಹಜತೆಯುಳ್ಳ ಸಂಭಾಷಣೆ, ಭಾವಪ್ರಪಂಚ ಬಾಹ್ಯಪ್ರಪಂಚಗಳ ಖಚಿತವಾದ ವರ್ಣನೆಗಳು ಹೇಗೆ ಈ ಕಾವ್ಯವನ್ನು ಕನ್ನಡದ ಮೇರುಕೃತಿಗಳ ಸಾಲಲ್ಲಿ ನಿಲ್ಲಿಸಿವೆಯೆಂಬ ಸೋದಾಹರಣ ವಿವರಗಳು. ಅದಾದಮೇಲೆ ಒಂಬತ್ತು ಕಾಂಡಗಳಿರುವ ಹರಿಶ್ಚಂದ್ರ ಕಾವ್ಯ ಶುರುವಾಗುತ್ತದೆ, ‘ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು...’ ಎಂದು ರಾಘವಾಂಕ ತನ್ನ ಅಧಿದೇವತೆ ಹಂಪೆಯ ವಿರೂಪಾಕ್ಷನನ್ನು ಸ್ತುತಿಸುವುದರ ಮೂಲಕ.

harishchandrakavya.jpg

ಒಂದೊಂದೇ ಪುಟವನ್ನು ತಿರುವುತ್ತ ಹೋದೆ. ಎಂಟನೇ ಕಾಂಡದಲ್ಲಿ ಸಿಕ್ತು ನೋಡಿ ನಿಧಿ! ‘ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದಿದೇಕೆ ತಳುವಿದನೆನ್ನ ಕಂದನೆಂದೆನುತ ಸುಯ್ಯುತ್ತ ಮರುಗುತ್ತ ಬಸಿರಂ ಹೊಸೆದು ಕೊನೆವೆರಳ ಮುರಿದುಕೊಳುತ...’ ಹೌದು ಇವೇ ನಮ್ಮ ಪಠ್ಯದಲ್ಲಿದ್ದ ಸಾಲುಗಳು! ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಓದುತ್ತಿದ್ದಂತೆ ಕಾಲಚಕ್ರದಲ್ಲಿ ಹಿಂದಕ್ಕೆ ಸರಿದು ಐದನೇ ತರಗತಿಯಲ್ಲಿ ಮಾಸ್ತರರ ವರ್ಣನೆ ಕೇಳುತ್ತ ಕುಳಿತ ಅನುಭವ. ಕಣ್ಣುಗಳಲ್ಲಿ ಪಸೆ. ಮುಂದೆ- ‘ಅಡವಿಯೊಳು ಹೊಲಬುಗೆಟ್ಟನೊ ಗಿಡುವಿನೊಳಗೆ ಹುಲಿ ಹಿಡಿದುದೋ ಕಳ್ಳರೊಯ್ದರೊ ಭೂತಸಂಕುಲಂ ಹೊಡೆದುವೋ ನೀರೊಳದ್ದನೊ ಮರದ ಕೊಂಬೇರಿ ಬಿದ್ದನೋ ಫಣಿ ತಿಂದುದೋ ಕಡುಹಸಿದು ನಡೆಗೆಟ್ಟು ನಿಂದನೋ...’ ಮಗನಿಗೆ ಏನಾಗಿರಬಹುದೆಂದು ಪರಿಪರಿಯ ಯೋಚನೆ ಚಂದ್ರಮತಿಗೆ. ‘ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು ನಿಂದರಂ ಲೋಹಿತಾಶ್ವಾ ಎಂದು ಗಾಳಿಗಿರಿಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗರುವಿನಂತೆ’ ಚಿಂತೆಯಿಂದ ಅವಳಿಗೆ ಹುಚ್ಚು ಹಿಡಿದಂತಾಗಿದೆ. ಅಷ್ಟೊತ್ತಿಗೆ ಒಬ್ಬ ಹುಡುಗ ಬಂದು ‘ನಿನ್ನ ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು’ ಹೇಳುತ್ತಾನೆ. ‘ಏಕೆ ಕಚ್ಚಿತ್ತಾವ ಕಡೆ ಯಾವ ಹೊಲನಕ್ಕಟಾ ಕುಮಾರಂ...’ ಹುಲ್ಲು ತರಲಿಕ್ಕೆ ಬೇರೆ ಹುಡುಗರೂ ಹೋಗಿದ್ರು, ಆದರೂ ತನ್ನ ಮಗನಿಗೇ ಏಕೆ ಹಾವು ಕಚ್ಚಬೇಕು? ಚಂದ್ರಮತಿಯ ಪ್ರಶ್ನೆ. ‘ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ ನೂಕಿ ಫಣಿಯಗಿಯೆ ಕೆಡೆದಂ’ ಎನ್ನುತ್ತಾನೆ ಆ ಹುಡುಗ. ‘ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕ ನೇಕ ಭಲ್ಲುಕ ಜಂಬುಕಂ ಘೂಕ ವೃಕಗಳೆಳೆಯದೆ ಬಿಡವು’ ಎಂದು ಎಚ್ಚರಿಸುತ್ತಾನೆ. ಅಬ್ಬಾ ಎಂಥ ದಾರುಣ ಸ್ಥಿತಿ ಚಂದ್ರಮತಿಯದು!

‘ಲೋಹಿತಾಶ್ವನ ಸಾವು’ ಪದ್ಯದ ಪೂರ್ಣಸಾಹಿತ್ಯವೇನೋ ನನಗೆ ಸಿಕ್ಕಿತು. ಆದರೆ ಜತೆಯಲ್ಲಿ ಒಂದು ಅದ್ಭುತ ಸತ್ಯವೂ ನನಗವತ್ತು ಮನವರಿಕೆಯಾಯ್ತು. ಅದರಿಂದ ಸ್ವಲ್ಪ ದಿಗಿಲೂ ಆಯ್ತು. ಅದೇನು ಗೊತ್ತೇ? ನಮಗೆ ಪಠ್ಯದಲ್ಲಿ ಇದ್ದದ್ದು ಅಲ್ಲಿನ ನಾಲ್ಕು ಷಟ್ಪದಿಗಳು ಮಾತ್ರ. ಇಡೀ ಪುಸ್ತಕದಲ್ಲಿ ನನಗೆ ಅವು ಮಾತ್ರ ಧೂಳೊರೆಸಿದ ಗಾಜಿನಂತೆ ಸುಸ್ಪಷ್ಟವಾಗಿ ಕಂಡುಬಂದದ್ದು. ಒಂದೊಂದು ಪದವನ್ನೂ ಅರ್ಥೈಸಬಲ್ಲೆ ಎಂಬ ವಿಶ್ವಾಸ ಮೂಡಿದ್ದು. ಮಿಕ್ಕ ಭಾಗವನ್ನು ಓದಿ ಅರಗಿಸಿಕೊಳ್ಳಲು ಎಷ್ಟೇ  ಪ್ರಯತ್ನಿಸಿದರೂ ಆಗಲೇ ಇಲ್ಲ. ತುಂಬಾ ಕಷ್ಟವಿದೆ ಅನ್ನಿಸ್ತು. ಅಷ್ಟು ಕಷ್ಟದ ಪದ್ಯಗಳನ್ನು ಅರ್ಥೈಸುವುದು ಐದನೇ ತರಗತಿಯಲ್ಲಿ ಸಾಧ್ಯವಾದದ್ದು ಈಗ ಆಗುತ್ತಿಲ್ಲ! ‘ಹಸಿ ಗೋಡೆಯಲ್ಲಿ ಹರಳು ನೆಟ್ಟಂತೆ’ ಎಂಬ ನಾಣ್ಣುಡಿ ಎಷ್ಟು ಸತ್ಯ ಅಲ್ಲವೇ?

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

00:0000:00
Comments | Embed | Download(Loading)
7
Sep
Posted in Uncategorized by sjoshi at 11:20 pm

ದಿನಾಂಕ  8 ಸೆಪ್ಟೆಂಬರ್ 2013

ಏಕದಂತನಿಗೆ ಏಕವಿಂಶತಿ ನಮನ

ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ ನಿನಗೆ 21 YouTube videoಗಳು....

01.  ಶ್ರೀ ಗಣೇಶ ಸ್ತುತಿ

*** *** *** *** *** *** ***


02.  ಪ್ರಣಮಾಮಿ ಗಣನಾಯಕಂ... ಗಜಾನನ ಗೀತಾರಾಧನ- ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ

*** *** *** *** *** *** ***


03.  ಗಜಮುಖನೆ ಗಣಪತಿಯೆ ನಿನಗೆ ವಂದನೆ... ಎಸ್.ಜಾನಕಿ

*** *** *** *** *** *** ***


04.  ಗಜವದನ ಬೇಡುವೆ ಗೌರೀತನಯ... ಬಾಂಬೇ ಜಯಶ್ರೀ

*** *** *** *** *** *** ***


05.  ಪ್ರಥಮ ತುಲಾ ವಂದಿತೋ ಕೃಪಾಳಾ... ಅಷ್ಟವಿನಾಯಕ ಮರಾಠಿ ಭಕ್ತಿಗೀತೆ- ವಸಂತರಾವ್ ದೇಶಪಾಂಡೆ

*** *** *** *** *** *** ***


06.  ಗಣರಾಜ ರಂಗೀ ನಾಚತೋ ನಾಚತೋ... ಮರಾಠಿ ಭಕ್ತಿಗೀತೆ- ಉಷಾ ಮಂಗೇಶ್ಕರ್

*** *** *** *** *** *** ***


07.  ವಕ್ರತುಂಡ ಮಹಾಕಾಯ... ಗಣೇಶಮಂತ್ರ ಸಮೂಹಗಾನ

*** *** *** *** *** *** ***


08.  ಮಹಾಗಣಪತಿಂ ಮನಸಾ ಸ್ಮರಾಮಿ... ವಯಲಿನ್- ಟಿ.ಎನ್.ಕೃಷ್ಣನ್

*** *** *** *** *** *** ***


09.  ಗಣಪತಿ  ಅಥರ್ವಶೀರ್ಷ ಉಪನಿಷದ್ ಮಂತ್ರ

*** *** *** *** *** *** ***


10.  ಮುದಾಕರಾತ್ತ ಮೋದಕಂ... ಗಣೇಶಪಂಚರತ್ನಮ್- ಎಂ.ಎಸ್.ಸುಬ್ಬುಲಕ್ಷ್ಮೀ

*** *** *** *** *** *** ***


11.  ಶರಣು ಶರಣಯ್ಯ ಶರಣು ಬೆನಕ... ಡಾ.ಪಿ.ಬಿ.ಶ್ರೀನಿವಾಸ್

*** *** *** *** *** *** ***


12.  ನಮ್ಮಮ್ಮ ಶಾರದೆ ಉಮಾಮಹೇಶ್ವರಿ... ವಿದ್ಯಾಭೂಷಣ

*** *** *** *** *** *** ***


13.  ಶ್ರೀ ಗಣೇಶಾಯ ಏಕದಂತಾಯ ಧೀಮಹಿ- ಶಂಕರ್ ಮಹಾದೇವನ್

*** *** *** *** *** *** ***


14.  ಸಂಕಷ್ಟನಾಶನ ಸ್ತೋತ್ರಂ... ಗಣೇಶ ಮಂತ್ರ ಸಮೂಹಗಾನ

*** *** *** *** *** *** ***


15.  ಗಣಪತಿ ಭಗವಾನೇ... ಮಲಯಾಳಂ ಭಕ್ತಿಗೀತೆ- ಕೆ.ಜೆ.ಯೇಸುದಾಸ್

*** *** *** *** *** *** ***


16.  ಜಯಗಣೇಶ ಜಯಗಣೇಶ ಜಯಗಣೇಶ ದೇವ... ಅನುರಾಧಾ ಪೌಡ್ವಾಳ್

*** *** *** *** *** *** ***


17.  ಸುಖಕರ್ತಾ ದುಃಖಹರ್ತಾ... ಮರಾಠಿ ಭಕ್ತಿಗೀತೆ- ಲತಾ ಮಂಗೇಶ್ಕರ್

*** *** *** *** *** *** ***


18.  ಜೈದೇವ್ ಜೈದೇವ್ ಗಣರಾಜ... ಹಿಂದಿ ಭಕ್ತಿಗೀತೆ- ಸಮೂಹಗಾಯನ

*** *** *** *** *** *** ***


19.  ಭಾದ್ರಪದ ಶುಕ್ಲದ ಚೌತಿಯಂದು... ಸ್ಯಮಂತಕೋಪಾಖ್ಯಾನ- ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರು

*** *** *** *** *** *** ***


20.  ಗಣೇಶ ಅಷ್ಟೋತ್ತರ ಶತನಾಮಾವಳಿ... ಗಣೇಶ ಮಂತ್ರ

*** *** *** *** *** *** ***


21.  ವಾತಾಪಿ ಗಣಪತಿಂ ಭಜೇಹಂ... ಮುರಲೀಗಾನ ಗಣಪತಿ ಪೂಜಾ- ಕುಡಮಲೂರ್ ಜನಾರ್ದನನ್

*** *** *** *** *** *** ***ಈ ಇಪ್ಪತ್ತೊಂದು ಗಾನಕುಸುಮಗಳನ್ನು YouTube Playlist ಗಾನಮಾಲಿಕೆಯಾಗಿ ಕೇಳಬಯಸುತ್ತೀರಾದರೆ ಇಲ್ಲಿ ಕ್ಲಿಕ್ಕಿಸಿ.

* * * *

Comments