Episodes
Saturday May 21, 2011
Curry Leaves Of Barcelona
Saturday May 21, 2011
Saturday May 21, 2011
ದಿನಾಂಕ 22 ಮೇ 2011ರ ಸಂಚಿಕೆ...
ಬಾರ್ಸಿಲೊನಾದಲ್ಲಿ ಕರಿಬೇವು ಸಿಕ್ಕ ಸಂತಸ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಸ್ಪೆಷಲ್ ಏನೂ ಇಲ್ಲಾ ಸರ್, ಬಾರ್ಸಿಲೊನಾದಲ್ಲಿ ಒಳ್ಳೆಯ ಭಾರತೀಯ ರೆಸ್ಟೋರೆಂಟ್ ಇಲ್ಲ, ಹಾಗಾಗಿ ಮನೆ ಊಟವೇ ಇಂದು ಕೂಡ. ಶಾಕಾಹಾರಿಗಳಿಗೆ ಆಯ್ಕೆ ಮಾಡಲು ಇಲ್ಲಿ ಏನೂ ಇಲ್ಲ. ಕರಿಬೇವು ಸಿಕ್ಕ ದಿನವೇ ಸ್ಪೆಷಲ್!” - ಎಂದು ಬರೆದಿದ್ದರು ನನ್ನೊಬ್ಬ ಫೇಸ್ಬುಕ್ ಸ್ನೇಹಿತ. ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ನನ್ನ ಸೌಹಾರ್ದ ಪ್ರಶ್ನೆಗೆ ಉತ್ತರವಾಗಿ. ಅವರ ಹೆಸರು ರಂಗಸ್ವಾಮಿ ಮೂಕನಹಳ್ಳಿ. ಮೂಲತಃ ಬೆಂಗಳೂರಿನವರು, ಈಗ ಬಾರ್ಸಿಲೊನಾದಲ್ಲಿದ್ದಾರೆ. ಫೇಸ್ಬುಕ್ ಮೂಲಕವಷ್ಟೇ ನನಗೆ ಪರಿಚಯ. ಇನ್ನೂ ಫೇಸ್ ನೋಡಿಲ್ಲ, ಮಾತನಾಡಿಲ್ಲ. ಬಹುಶಃ ಸಾಫ್ಟ್ವೇರಿಗರೇ ಇರಬಹುದು ಎಂದುಕೊಳ್ಳುತ್ತೇನೆ. ಕನ್ನಡಾಭಿಮಾನಿ ಎಂದು ಅವರ ಪ್ರೊಫೈಲ್ನಿಂದ ಗೊತ್ತಾಗುತ್ತದೆ. ಜತೆಯಲ್ಲೇ ಸ್ಪಾನಿಷ್, ಪೋರ್ಚುಗೀಸ್ ಮತ್ತು ಇಟಾಲಿಯನ್ ಭಾಷೆಗಳನ್ನು ಕಲಿತಿದ್ದಾರೆಂದೂ ತಿಳಿಯುತ್ತದೆ. ಅಂದರೆ ಕೆಲವರ್ಷಗಳಿಂದ ಅಲ್ಲಿ ವಾಸವಾಗಿದ್ದಾರೆ ಎನ್ನಲಡ್ಡಿಯಿಲ್ಲ. ಫೇಸ್ಬುಕ್ ಕ್ಯಾಲೆಂಡರ್ ಯಾರದೆಲ್ಲ ಬರ್ತ್ಡೇ ಎಂದು ಸೂಚಿಸುತ್ತದೆಯೋ ಅವರಿಗೆಲ್ಲ ಆಯಾಯ ದಿನದಂದೇ ಪುಟ್ಟದೊಂದು ಶುಭಾಶಯ ಸಂದೇಶ ಕಳಿಸುವುದು ನನ್ನ ಕ್ರಮ. ಅದು ತೀರಾ ಔಪಚಾರಿಕವಾಗದಂತೆ ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ಪ್ರಶ್ನೆಯನ್ನೂ ಒಂದು ನಗುಮುಖ ಚಿತ್ರವನ್ನೂ ಕೊನೆಯಲ್ಲಿ ಸೇರಿಸುತ್ತೇನೆ. ಅದರಿಂದ ಪ್ರಯೋಜನವಿದೆ- ನನ್ನ ಗ್ರೀಟಿಂಗ್ ಆದರೋ ಎಲ್ಲ ದಿನಗಳಲ್ಲೂ ಎಲ್ಲರಿಗೂ ಒಂದೇ ಮಾದರಿ; ಆದರೆ ಬರುವ ಜವಾಬುಗಳು ಮಾತ್ರ ಸಖತ್ ವೆರೈಟಿಯವು. ವಿಭಿನ್ನ ಅಭಿರುಚಿ, ಖಯಾಲಿ ಮತ್ತು ಜೀವನಶೈಲಿಗಳನ್ನು ಪ್ರತಿಫಲಿಸುವಂಥವು. ರಂಗಸ್ವಾಮಿಯವರದು ಒಂದು ಒಳ್ಳೆಯ ಉದಾಹರಣೆ. ಅವರು ಬರೆದದ್ದರಲ್ಲಿ ಮೊದಲ ಭಾಗ ಅಂಥ ವಿಶೇಷವೇನಲ್ಲ. ಬಾರ್ಸಿಲೊನಾ ಅಷ್ಟೇಅಲ್ಲ ಯುರೋಪ್ನಲ್ಲಿ ಸುಮಾರಷ್ಟು ನಗರಗಳು ಸಸ್ಯಾಹಾರಿಗಳಿಗೆ ಹೇಳಿದಂಥವಲ್ಲ; ಅಲ್ಲಿ ಭಾರತೀಯ ರೆಸ್ಟೋರೆಂಟ್ಗಳಾಗಲೀ ದಿನಸಿ ಅಂಗಡಿಗಳಾಗಲೀ ಇರುವುದಿಲ್ಲವೆಂಬ ವಿಚಾರ ಗೊತ್ತಿದ್ದದ್ದೇ. ಆದರೆ ‘ಕರಿಬೇವು ಸಿಕ್ಕದಿನ ಭರ್ಜರಿ ಸಡಗರ’ ಎಂದಿದ್ದಾರಲ್ಲ ಆ ವಾಕ್ಯವನ್ನು ನಾವು- ತಾಯ್ನಾಡಿನಿಂದ ದೂರವಿರುವವರು- ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು. ನಮ್ಮ ಜೀವನಕ್ಕೆ ರಿಲೇಟ್ ಮಾಡಿಕೊಳ್ಳಬಲ್ಲೆವು. ಆದರೂ ನನ್ನಂತೆ ಹತ್ತುವರ್ಷಗಳ ಹಿಂದೆಯಷ್ಟೇ ಅಮೆರಿಕಕ್ಕೆ ಬಂದವರ, ವಾಷಿಂಗ್ಟನ್ನಂಥ ದೊಡ್ಡ ನಗರಗಳಲ್ಲಿರುವವರ ಸ್ಥಿತಿ ಎಷ್ಟೋ ವಾಸಿ. ನಮಗೆ ಭಾರತದಿಂದ ದೂರವಿದ್ದೇವೆ ಅನಿಸುವುದಿಲ್ಲ. ಎಪ್ಪತ್ತರ ದಶಕದಲ್ಲಿ ಇಲ್ಲಿಗೆ ಬಂದವರ ಅನುಭವಗಳೇ ಬೇರೆ. ಆಗ ಯಾವುದಾದರೂ ಚೈನಿಸ್/ಕೋರಿಯನ್ ತರಕಾರಿ ಅಂಗಡಿಯಲ್ಲಿ ಅಪರೂಪಕ್ಕೆ ಕೊತ್ತಂಬರಿಸೊಪ್ಪು ಸಿಕ್ಕಿದರೆ ನಿಧಿ ಸಿಕ್ಕಿದಂತೆಯೇ. ಹಿರಿಯಮಿತ್ರ ಮೈಸೂರು ನಟರಾಜ್ ನೆನಪಿಸಿಕೊಳ್ಳುತ್ತಿರುತ್ತಾರೆ, ಕೊತ್ತಂಬರಿಸೊಪ್ಪು ಬಂದಿದೆ ಎಂದು ಪರಸ್ಪರ ದೂರವಾಣಿ ಕರೆಗಳನ್ನು ಮಾಡಿಕೊಂಡು ಅಂಗಡಿಗೆ ಮುತ್ತಿಗೆಯಿಡುತ್ತಿದ್ದರಂತೆ. ತಾಜಾ ಇರುವಾಗ ತಂದು ಸಾರು ಮಾಡಿ ಮನೆಯಲ್ಲಿ ಘಮಘಮ ತುಂಬಿ ಸಂಭ್ರಮಿಸುತ್ತಿದ್ದರಂತೆ. ವಿದೇಶದಲ್ಲಿ ಅಪರೂಪವಾಗಿ ಅನಿರೀಕ್ಷಿತವಾಗಿ ನಮ್ಮ ನೆಲದ ವಸ್ತುವೇನಾದರೂ ಕಣ್ಣಿಗೆಬಿದ್ದಾಗಿನ ಸಂಭ್ರಮವಿದೆಯಲ್ಲ ಅದು ಮಾತಿನಲ್ಲಿ/ಅಕ್ಷರಗಳಲ್ಲಿ ವರ್ಣಿಸಲಾಗದ್ದು. ವಿದೇಶವೆಂದರೆ ವಿದೇಶವೇ ಆಗಬೇಕಂತೇನೂ ಇಲ್ಲ, ಆ ವಸ್ತು ಅಡುಗೆಪದಾರ್ಥವೇ ಆಗಿರಬೇಕಂತನೂ ಇಲ್ಲ. ನನ್ನದೇ ಒಂದು ಅನುಭವವನ್ನು ಹೇಳುತ್ತೇನೆ. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ ನಾನು ದಿಲ್ಲಿಯಲ್ಲಿ ಉದ್ಯೋಗಕ್ಕೆ ಸೇರಿದ್ದೆ. ಅದೇ ಮೊದಲಬಾರಿಗೆ ಕರ್ನಾಟಕದಿಂದ ಹೊರಗಿದ್ದದ್ದು. ದಿಲ್ಲಿಯಲ್ಲಿ ಆರೇಳು ತಿಂಗಳ ತರಬೇತಿಯ ನಂತರ ಹೈದರಾಬಾದ್ನಲ್ಲಿ ನನ್ನ ಪೋಸ್ಟಿಂಗ್. ದಿಲ್ಲಿಯಿಂದ ನೇರವಾಗಿ ಹೈದರಾಬಾದ್ಗೆ ನನ್ನ ಬಿಡಾರ ವರ್ಗಾಯಿಸಿದ್ದೆ. ರಜೆಯಲ್ಲೂ ಊರಿಗೆ ಹೋಗಿರಲಿಲ್ಲ, ಕರ್ನಾಟಕದೊಳಗೆ ಪ್ರವೇಶಿಸಿರಲಿಲ್ಲ. ಹೀಗಿರಲು ಒಂದುದಿನ ಹೈದರಾಬಾದ್ನಲ್ಲಿ ಸಿಟಿಬಸ್ನಲ್ಲಿ ಹೋಗುತ್ತಿದ್ದಾಗ ಅಲ್ಲಿನ ಮುಖ್ಯ ಬಸ್ನಿಲ್ದಾಣದಲ್ಲಿ ಒಂದೆರಡು ಕೆಎಸ್ಸಾರ್ಟಿಸಿ ಬಸ್ಸುಗಳು ಕಾಣಸಿಕ್ಕವು. ಹೈದರಾಬಾದ್ನಿಂದ ಗುಲ್ಬರ್ಗ ರಾಯಚೂರು ಮುಂತಾದೆಡೆಗಳಿಗೆ ಹೋಗುವ ಕೆಂಪುಬಸ್ಸುಗಳು. ಅವುಗಳನ್ನು ಕಂಡಾಗ ಆ ಕ್ಷಣದಲ್ಲಾಗಿದ್ದ ಒಂದು ಹಿತಕರ ರೋಮಾಂಚನ ನನಗೆ ಈಗಲೂ ನೆನಪಿದೆ. ಇಂಗ್ಲೆಂಡ್ನಲ್ಲಿರುವ ನನ್ನ ಅಣ್ಣ ಕಳೆದವರ್ಷ ತನಗಾದ ಅಂತಹದೇ ಒಂದು ರೋಮಾಂಚಕ ಕ್ಷಣವನ್ನು ಬಣ್ಣಿಸಿದ್ದರು. ಅದಕ್ಕೆ ಕಾರಣವಾದ ವಸ್ತುವಿನ ಚಿತ್ರವನ್ನು ನನಗೆ ಇಮೇಲ್ನಲ್ಲಿ ಕಳಿಸಿದ್ದರು. ಅವರೆಲ್ಲ ಕುಟುಂಬಸಮೇತ ಫಿನ್ಲ್ಯಾಂಡ್ ದೇಶಕ್ಕೆ ಪ್ರವಾಸ ಹೋಗಿದ್ದರಂತೆ. ಅಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಒಂದು ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ‘ಲ್ಯಾಂಟರ್ನ್’ ದೀಪಗಳನ್ನು ಕಂಡರಂತೆ. ಥೇಟ್ ನಮ್ಮೂರಿನಲ್ಲಿ ಉಪಯೋಗಿಸುವ ಲಾಟೀನಿನದೇ ಆಕಾರ, ಗಾತ್ರ, ರಚನೆ. ಅದೇಥರ ಸರಿಗೆಗಳ ಬಂಧದೊಳಗೆ ಗಾಜಿನ ಬುರುಡೆ, ಸೀಮೆಎಣ್ಣೆ ಟ್ಯಾಂಕ್, ಬತ್ತಿಯ ಜ್ವಾಲೆ ಚಿಕ್ಕದುದೊಡ್ಡದು ಮಾಡಲು ದುಂಡಗಿನ ಬಿರಡೆ... ಎಲ್ಲವೂ ತದ್ರೂಪಿ ನಮ್ಮೂರಿನ ಲಾಟೀನು. ಜರ್ಮನಿಯಲ್ಲಿ ತಯಾರಾದ ಅದನ್ನು 20 ಯೂರೋ (ಸುಮಾರು 1250 ರೂ.) ಕೊಟ್ಟು ಖರೀದಿಸಿ ನೆನಪಿಗೋಸ್ಕರ ತಂದಿಟ್ಟುಕೊಂಡಿದ್ದಾರಂತೆ. ಶಿಕಾಗೊದಲ್ಲಿರುವ ನನ್ನ ಸ್ನೇಹಿತ ಶ್ರೀನಿವಾಸ ರಾವ್ ಒಮ್ಮೆ ನನಗೆ ಇಮೇಲ್ನಲ್ಲಿ ಅಶೋಕ ವೃಕ್ಷದ ಫೋಟೊ ಕಳಿಸಿದ್ದರು. ಜತೆಯಲ್ಲಿ ಒಂದು ಚಿಕ್ಕ ಟಿಪ್ಪಣಿ- “ಶ್ರೀರಾಮ ನನ್ನ ಆರಾಧ್ಯದೈವ. ದಿನದ 24 ಘಂಟೆಯಲ್ಲಿ ಒಂದೆರಡು ನಿಮಿಷವಾದರೂ ನನ್ನ ರಾಮನ ಬಗ್ಗೆ ಏನಾದರೂ ಮೆಲುಕು ಹಾಕುತ್ತಿರುತ್ತೇನೆ. ಮೊನ್ನೆ ಇಲ್ಲಿ ಶಿಕಾಗೋದ ಬೊಟಾನಿಕಲ್ ಗಾರ್ಡನ್ಸ್ನಲ್ಲಿ ‘ಅಶೋಕ’ ವೃಕ್ಷವನ್ನು ನೋಡಿದಾಗ, ಅದರ ಕೆಳಗಿದ್ದ ಬೋರ್ಡ್ನಲ್ಲಿ ಮುದ್ದಾದ ಅಕ್ಷರಗಳಲ್ಲಿ Ashoka Tree ಎಂದು ಬರೆದದ್ದನ್ನು ಓದಿದಾಗ ಅರೆಕ್ಷಣ ನನ್ನನ್ನೇ ಮರೆತಿದ್ದೆ. ಚಿಕ್ಕ ಮರವಾದರೂ ಅದರ ಬುಡದಲ್ಲಿ ನನ್ನ ಸೀತಾಮಾತೆ ಒಮ್ಮೆ ಮಿಂಚಿಹೋದಳು. ಇಂದಿಗೂ ಆ ಕ್ಷಣವನ್ನು ನೆನೆಸಿಕೊಂಡರೆ ನನ್ನ ಮೈನವಿರೇಳುತ್ತದೆ!” ಆಸ್ಟ್ರೇಲಿಯಾದಲ್ಲಿರುವ ಅನುರಾಧಾ ಶಿವರಾಂ (ಅಂಕಣದ ಓದುಗರಾಗಿ ನನಗೆ ಇ-ಪರಿಚಿತರು) ಸಹ ಇದೇರೀತಿಯ ಒಂದು ಅನುಭವವನ್ನು ಇಮೇಲ್ನಲ್ಲಿ ಬಣ್ಣಿಸಿದ್ದರು. “ಸಿಡ್ನಿಯಲ್ಲಿ ನಮ್ಮನೆ ಹತ್ತಿರ ವಾಕ್ ಹೋಗ್ತಿದ್ದಾಗ ಇದ್ದಕ್ಕಿದ್ದಂತೆ ಕೆಂಡಸಂಪಿಗೆ ಹೂವಿನ ಸುವಾಸನೆ ಗಾಳಿಯಲ್ಲಿ ತೇಲಿಬಂತು. ಆ ಪರಿಮಳದೊಡನೆ, ಊರು, ಬಾಲ್ಯ, ಹಬ್ಬ, ನೆನಪುಗಳ ಮೆರವಣಿಗೆಯೇ ಬಂತು. ಮನಸ್ಸು ತಡೆಯದೆ ಆ ಗಿಡವಿದ್ದ ಮನೆಯ ಬಾಗಿಲು ತಟ್ಟಿ ಗಿಡವನ್ನು ಎಲ್ಲಿಂದ ತಂದಿರಿ ಎಂದು ಕೇಳಿದೆ. ಏಕೆಂದರೆ ಅದುವರೆಗೂ ನನಗೆ ಈದೇಶದಲ್ಲಿ ಸಂಪಿಗೆಹೂ ಕಂಡುಬಂದದ್ದೇ ಇಲ್ಲ. ಸಂಪಿಗೆಹೂ ನಮಗೆ ಭಾರತೀಯರಿಗೆ ಎಷ್ಟು ಪ್ರಿಯವಾದದ್ದು, ಪೂಜ್ಯವಾದದ್ದು ಎಂದು ಅದರ ಹಿಂದಿನ ಕಥೆಯನ್ನೂ ಅವರಿಗೆ ವಿವರಿಸಿದೆ. ಅಪರೂಪದ ನರ್ಸರಿಯ ವಿಳಾಸ ಕೊಟ್ಟ ಆ ಆಸ್ಟ್ರೇಲಿಯನ್ ದಂಪತಿ ನಮಗೆ ಇಂದಿಗೂ ಒಳ್ಳೆಯ ಸ್ನೇಹಿತರಾಗಿ ಉಳಿದಿದ್ದಾರೆ, ಸಂಪಿಗೆಯ ಸುವಾಸನೆಯಂತೆಯೇ!” ಕುವೆಂಪು ಅದನ್ನೇ ತಾನೆ ಹೇಳಿದ್ದು? ‘ತನ್ನ ನಾಡಿನ ನೀಲಿಯಬಾನು... ತನ್ನ ನಾಡಿನ ಹಸುರಿನಕಾನು... ತನ್ನ ನಾಡಿನ ಹೊಳೆ-ಕೆರೆ-ಬೆಟ್ಟ... ತನ್ನ ನಾಡಿನ ಪಶ್ಚಿಮಘಟ್ಟ... ದೂರದೇಶಕೆ ಹೋದ ಸಮಯದಿ ತನ್ನ ನಾಡನು ನೆನೆನೆನೆದುಬ್ಬದ.. ಮಾನವನಿದ್ದರೆ ಲೋಕದಲಿ ತಾವಿಲ್ಲವನಿಗೆ ನಾಕದಲಿ...’ ದಯವಿಟ್ಟು ತಪ್ಪುತಿಳಿಯಬೇಡಿ. ಇದು ಅನಿವಾಸಿಗಳ ಹುಚ್ಚು ಹಳವಂಡ ಎಂದುಕೊಳ್ಳಬೇಡಿ. ಬಾರ್ಸಿಲೊನಾದಲ್ಲಿ ಕರಿಬೇವಿನ ರುಚಿ, ಸಿಡ್ನಿಯಲ್ಲಿ ಸಂಪಿಗೆ ಪರಿಮಳ, ನ್ಯೂಯಾರ್ಕ್ನ ಕೆನಡಿ ಏರ್ಪೋರ್ಟ್ನಲ್ಲಿ ರಾಶಿರಾಶಿ ವಿಮಾನಗಳ ಮಧ್ಯೆ ಏರ್ಇಂಡಿಯಾ ವಿಮಾನ ನಿಂತ ದೃಶ್ಯ, ವಾಷಿಂಗ್ಟನ್ನ ಕೆನಡಿ ಆರ್ಟ್ಸೆಂಟರ್ನಲ್ಲಿ ರಘುದೀಕ್ಷಿತ್ ಬಣ್ಣದ ಲುಂಗಿಯುಟ್ಟು ಹಾಡಿದ ‘ಕೋಡಗನ ಕೋಳಿ ನುಂಗಿತ್ತಾ...’ ಹಾಡಿನ ಕೇಳ್ಮೆ, ಡಿಸ್ನಿಲ್ಯಾಂಡ್ನ ಗೈಡ್ ‘ದಿಸ್ ಈಸ್ ಎಲಿಫೆಂಟ್ ಹೆಡೆಡ್ ಗಾಡ್ ಆಫ್ ಇಂಡಿಯಾ’ ಎಂದು ತೋರಿಸುವ ಕಲ್ಲಿನ ಗಣೇಶನನ್ನು ತಡವಿದಾಗಿನ ಸ್ಪರ್ಶ- ಈರೀತಿ ಪಂಚೇಂದ್ರಿಯಗಳ ಪರಮಾನಂದಗಳು, ರೋಮಾಂಚಕಾರಿ ಹಿತಾನುಭವದ ನಿದರ್ಶನಗಳು ಇನ್ನೂ ತುಂಬಾ ಇವೆ. ಮುಂದಿನವಾರ ನೋಡೋಣ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.