Episodes

Monday May 28, 2012
Breaking News
Monday May 28, 2012
Monday May 28, 2012
ದಿನಾಂಕ 27 ಮೇ 2012ರ ಸಂಚಿಕೆ...
ಕೆಮ್ಮೋತ್ತರ ಬ್ರೇಕಿಂಗ್ ನ್ಯೂಸ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ಕನ್ನಡ ಚಿತ್ರಗೀತೆಗಳಿಗೆ ಸಂಬಂಧಪಟ್ಟ ರಸಪ್ರಶ್ನೆ ಕೇಳಿದ್ದರಿಂದಲೋ, ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಲಕ್ಷಣ ವಿಷಯವನ್ನು ಅಂಕಣಕ್ಕೆ ಆರಿಸಿಕೊಂಡಿದ್ದರಿಂದಲೋ, ಅಥವಾ, ಕಣ್ಣಿಗೆ ರಾಚುವಂಥ ತಪ್ಪೊಂದು ಅದರಲ್ಲಿ ನುಸುಳಿದ್ದರಿಂದಲೋ ಅಂತೂ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬಂದಿವೆ. ನನ್ನ ಮಿಂಚಂಚೆಪೆಟ್ಟಿಗೆ ತುಂಬಿತುಳುಕಿದೆ. ಲೇಖನವನ್ನು ಸಿದ್ಧಪಡಿಸುವಾಗ ನನಗೆ ಸ್ವಲ್ಪ ಅಳುಕಿತ್ತು, ಡಬ್ಬಾತೀತ ಯೋಚನೆ ಅಂತೆಲ್ಲ ಹೇಳಿ ಎಲ್ಲಿ ಡಬ್ಬ ಅನಿಸಿಕೊಳ್ಳುವುದೋ ಎಂದು. ಆದರೆ ಓದುಗರ ಸ್ಪಂದನ ಅದನ್ನು ಸುಳ್ಳಾಗಿಸಿದೆ. ರಸಪ್ರಶ್ನೆಗೆ ಉತ್ತರವಷ್ಟೇ ಅಲ್ಲ, ಸಿನೆಮಾದಲ್ಲಿ ಕೆಮ್ಮು ಅಂತೊಂದು ಸಂಶೋಧನಾಪ್ರಬಂಧ ಮಂಡಿಸಿ ಪಿಎಚ್ಡಿ ಗಳಿಸಬಹುದಾದಷ್ಟು ಪೂರಕ ಕೆಮ್ಮು ಪತ್ರಗಳಲ್ಲಿ ಪ್ರತಿಧ್ವನಿಸಿದೆ. ‘ಬಂಧನ’ ಚಿತ್ರದ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ...’ ಹಾಡು, ರಸಪ್ರಶ್ನೆಯ ಸರಿಯುತ್ತರ. ತುಂಬ ಜನಪ್ರಿಯ ಚಿತ್ರಗೀತೆ. ವಿಷ್ಣುವರ್ಧನ್ ಕೆಮ್ಮುತ್ತ ಅಭಿನಯಿಸಿದ, ಎಸ್ಪಿಬಿ ಕೆಮ್ಮುತ್ತ ಹಾಡಿದ ಅದ್ಭುತಗೀತೆ. ಉತ್ತರಕ್ಕಾಗಿ ತಲೆಕೆರೆದುಕೊಳ್ಳುವ ಅಗತ್ಯವಿಲ್ಲದೆ ಹೆಚ್ಚಿನವರಿಗೆ ನೆನಪಿಗೆ ಬಂದಿದೆ. ಕೆಲವರು ಮಾತ್ರ ಬಂಧನ ಸಿನೆಮಾ ಹೆಸರು ನೆನಪಾದರೂ ‘ನೂರೊಂದು ನೆನಪು ಎದೆಯಾಳದಿಂದ...’ ಕೆಮ್ಮಿನಹಾಡು ಎಂದುಕೊಂಡು ಅದೇ ಉತ್ತರವೆಂದಿದ್ದಾರೆ. ಸರಿಯುತ್ತರ ಬರೆದು ತಿಳಿಸಿದವರಿಗೆಲ್ಲ ಅಭಿನಂದನೆಗಳು. ‘ಕೆಮ್ಮು ಇರುವ ಚಿತ್ರಗೀತೆಗಳಲ್ಲಿಯೇ ಈ ಹಾಡಿಗೆ ಅಗ್ರಸ್ಥಾನ ಸಲ್ಲಬೇಕು. ಇದರಲ್ಲಿ ಎಸ್ಪಿಬಿಯವರು ಕೆಮ್ಮನ್ನು ಎಷ್ಟು ಲಯಬದ್ಧವಾಗಿ ಉಪಯೋಗಿಸಿದ್ದಾರೆಂದರೆ ಹಾಡಿನ ಲಯಕ್ಕೆ ಸ್ವಲ್ಪವೂ ತೊಂದರೆ ಇಲ್ಲದಂತೆ, ನಿಜವಾಗಿ ಹಾಡಿನ ಮಧ್ಯದಲ್ಲಿ ಕೆಮ್ಮು ಬಂದಿರುವಂತೆ ಕೇಳಿಸುತ್ತದೆ. ಬಾಲು ಅವರೇ ಹೇಳುವಂತೆ ಇದನ್ನು ಹಾಡುವಾಗ ಅವರ ದೇಹದ ರಕ್ತವೆಲ್ಲ ಅವರ ಮಿದುಳಿಗೆ ಹರಿದಿತ್ತಂತೆ!’ ಎಂದು ಹಾಡಿನ ಕುರಿತು ವ್ಯಾಖ್ಯಾನಿಸಿದ ಓದುಗಮಿತ್ರ ಚಿತ್ತಾಪುರದ ವಿನಯಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು. ಕೆಮ್ಮಿನ ಹಾಡು ಬೇರಾವುದಾದರೂ ನಿಮಗೆ ಗೊತ್ತಿದ್ದರೆ ತಿಳಿಸಿ ಎಂದಿದ್ದೆನಷ್ಟೆ? ಬಹುಮಂದಿ ಸೂಚಿಸಿರುವುದು ‘ಶ್ರುತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯಾ ನೀ ಸೂತ್ರಧಾರಿ ನಾ ಪಾತ್ರಧಾರಿ...’ ಗೀತೆಯನ್ನು. ‘ಅಣ್ಣಾವ್ರ ಹಾಡು ಲೇಖನದಲ್ಲೇ ಇರುತ್ತೆ ಅಂದ್ಕೊಂಡಿದ್ದೆ. ಅದರಲ್ಲಿ ಫ್ರಂಟ್-ಎಂಡ್ ಹಾಸ್ಯನಟ ಉಮೇಶ್. ಬ್ಯಾಕ್-ಎಂಡ್ ಅಣ್ಣಾವ್ರು. ಹಾಡಿನ ನಡುವೆ ಅಣ್ಣಾವ್ರಿಗೆ ಕೆಮ್ಮು ಬರುತ್ತೆ. ಅಲ್ಲಿದ್ದವರು ಫ್ರಂಟ್-ಎಂಡ್ ಉಮೇಶ್ಗೆ ಕೆಮ್ಮುನಿವಾರಣೆಗೆ ನೆರವಾಗ್ತಾರೆ. ನಾಯಕಿ ಮಾಧವಿಗೆ ಗೊತ್ತಾಗಿ ಆಕೆಯೂ ಅಣ್ಣಾವ್ರ ಜೊತೆ ಹಾಡತೊಡಗುತ್ತಾರೆ (ಬ್ಯಾಕ್-ಎಂಡ್ನಲ್ಲಿ). ಪ್ರೇಕ್ಷಕರು ಉಮೇಶ್ ಅವರೇ ಹೆಣ್ಣುಧ್ವನಿಯಲ್ಲಿ ಹಾಡ್ತಿದ್ದಾರೆ ಅಂದ್ಕೊಳ್ತಾರೆ! ತುಂಬ ಹಾಸ್ಯಮಯ.’ ಎಂದು ಹಾಡಿನ ದೃಶ್ಯಾವಳಿಯನ್ನೂ ವಿವರಿಸಿದ್ದಾರೆ ಮಂಗಳೂರಿನ ಗಿರೀಶ್ ಐತಾಳ. ‘ಗಡಿಬಿಡಿ ಗಂಡ’ ಚಿತ್ರದಲ್ಲಿ ರವಿಚಂದ್ರನ್ ಜತೆ ಗಾಯನಸ್ಪರ್ಧೆಗಿಳಿವ ತಾಯ್ ನಾಗೇಶ್ ‘ನೀನು ನೀನೇ ಇಲ್ಲಿ ನಾನು ನಾನೇ’ ಹಾಡುವ ಮೊದಲು ಗಂಟಲು ಟೆಸ್ಟ್ ಮಾಡಿಕೊಳ್ಳುವ ಕೆಮ್ಮನ್ನು ಜ್ಞಾಪಿಸಿದ್ದಾರೆ ಮೈಸೂರಿನ ಮೋಹನ್ರಾಜ್. ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ‘ಉಮಂಡ್ಘುಮಂಡ್ ಘನಗರಜೇ ಬದರಾ...’ ಹಾಡಿನ ಕೆಮ್ಮನ್ನೂ ಒಂದಿಬ್ಬರು ನೆನೆಸಿಕೊಂಡಿದ್ದಾರೆ. ಹಾಸ್ಯೋತ್ಸವದಲ್ಲಿ ಮಂಗಳಗೀತೆ ‘ಭಾಗ್ಯದ ಲಕ್ಷ್ಮೀ ಬಾರಮ್ಮ...’ ಹಾಡುವಾಗ ಕಿರ್ಲೋಸ್ಕರ್ ಶಾಸ್ತ್ರಿಗಳಿಗೆ ಕೆಮ್ಮು ಬಂದು ಆಮೇಲೆ ಹಾಡನ್ನು ರಫೀಕ್ ಮುಂದುವರಿಸುವ ಸೂಪರ್ಹಾಸ್ಯದ ಸನ್ನಿವೇಶವೂ ಕೆಲವರಿಗೆ ನೆನಪಾಗಿದೆ. ಅಂತೆಯೇ ಡುಂಡಿರಾಜರ ಕೆಮ್ಮುಕವನ ‘ಪೆಹಲೇ ಕವಿತಾ ಪಢ್ನೇ ದೋ ಹಮ್ಕೊ, ಆಮೇಲೆ ಬೇಕಿದ್ರೆ ನೀ ಕೆಮ್ಕೊ’ ಕೂಡ. ರಸಪ್ರಶ್ನೆಯ ಉತ್ತರದ ಹೊರತಾಗಿ ಅತಿಹೆಚ್ಚು ಪತ್ರಗಳಲ್ಲಿ ಉಲ್ಲೇಖಗೊಂಡದ್ದು ಲೇಖನದಲ್ಲಿ ಕಂಡುಬಂದಿದ್ದ ಒಂದು ತಪ್ಪು. ‘ಹಾಲುಜೇನು’ ಚಿತ್ರದಲ್ಲಿ ಡಾ.ರಾಜ್ ಅವರೊಡನೆ ನಾಯಕಿಯಾಗಿ ನಟಿಸಿದವರು ಸರಿತಾ ಎಂಬರ್ಥದಲ್ಲಿ ನಾನು ತಪ್ಪಾಗಿ ಬರೆದಿದ್ದೆ. ಸರಿತಾ ಅಲ್ಲ, ಮಾಧವಿ ಅಂತಾಗಬೇಕಿತ್ತು. ಲೇಖನ ಬರೆಯುವುದಕ್ಕೆ ಸ್ವಲ್ಪ ಮೊದಲಷ್ಟೇ ಯೂಟ್ಯೂಬ್ನಲ್ಲಿ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ...’ ಹಾಡಿನ ವಿಡಿಯೋ ನೋಡಿ ಅದರಲ್ಲಿ ಕೆಮ್ಮು ಇರುವುದನ್ನು ಖಾತರಿಪಡಿಸಿಕೊಂಡಿದ್ದೆ. ರಾಜ್-ಮಾಧವಿ ಜೋಡಿಯನ್ನೂ ಗಮನಿಸಿದ್ದೆ. ಆದರೆ ಯಾವುದೋ ಗುಂಗಿನಲ್ಲಿ ಟೈಪಿಸುವಾಗ ಮಾಧವಿ ಬದಲು ಸರಿತಾ ಪ್ರತ್ಯಕ್ಷವಾದರು. ಸ್ವಾರಸ್ಯವೆಂದರೆ ಆ ಚಿತ್ರದಲ್ಲಿ ಮಾಧವಿಗೆ ಕಂಠದಾನ ಮಾಡಿದ್ದು ಸರಿತಾ! ಕೆಲವರು ಸೂಕ್ಷ್ಮಮತಿಗಳು ಇನ್ನೂ ಒಂದು ತಪ್ಪನ್ನು ಕಂಡುಹಿಡಿದಿದ್ದಾರೆ. ಬೆಂಗಳೂರಿನಿಂದ ಸುಮಾ ಅಮೃತೇಶ್ ಬರೆಯುತ್ತಾರೆ: ‘ನಿಮ್ಮ ರಸಪ್ರಶ್ನೆಯಲ್ಲಿ, ಹಾಡು ಮುಗಿದಾಗ ವಿಷ್ಣು ಕೊನೆಯುಸಿರೆಳೆಯುತ್ತಾರೆ ಎಂದಿದ್ದೀರಿ. ವಿಷ್ಣು ಸರ್ ಆ ಹಾಡಿನ ಕೊನೆಗೇ ಸಾಯುವುದಿಲ್ಲ. ಚಿತ್ರದ ಕೊನೆಯಲ್ಲಿ ಸುಹಾಸಿನಿಯ ಮಗುಗೆ ಜೀವ ಕೊಡು ಅಂತ ಬೆಳಕಲ್ಲಿ ದೇವ್ರನ್ನ ಕೇಳಿ ಜೀವಬಿಡ್ತಾರೆ. ಈಗಲೂ ಅದನ್ನು ನೆನೆಸಿಕೊಂಡರೆ ಕಣ್ಣೀರುಬರುತ್ತೆ.’ ಏನೇಇರಲಿ, ತಪ್ಪು ತಪ್ಪೇ. ನ್ಯೂನಾನಿಚಾತಿರಿಕ್ತಾಣಿ ಕ್ಷಮಸ್ವ ಪರಮೇಶ್ವರ ಎಂದು ಪೂಜೆಯ ಕೊನೆಯಲ್ಲಿ ಹೇಳುವಂತೆ ಅಂಕಣದಲ್ಲಿನ ನ್ಯೂನಗಳನ್ನೂ ಅತಿರಿಕ್ತಗಳನ್ನೂ (ಉದಾ: ವ್ಯಾಕರಣಬದ್ಧ ಗುಣಸಂಧಿಯ ಪದವಾಗದೆಯೂ ‘ಕೆಮ್ಮೋತ್ತರ’ ಎಂದು ಇವತ್ತಿನ ತಲೆಬರಹದಲ್ಲಿ ಬಳಸಿರುವಂಥದನ್ನು) ಓದುಗರು ದೊಡ್ಡಮನಸ್ಸಿನಿಂದ ಕ್ಷಮಿಸುವರೆಂಬ ನಂಬಿಕೆ.
Version: 20241125
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.