ದಿನಾಂಕ 1 ಜೂನ್ 2012
ಬ್ರೇಕು ಬೇಕು - ಬ್ರೇಕು ಬೇಡ...
[27 ಮೇ 2012ರ ಪರಾಗಸ್ಪರ್ಶ ಅಂಕಣ(ಅಂತಿಮ ಅಧ್ಯಾಯ)ಕ್ಕೆ ಬಂದ ಪ್ರತಿಕ್ರಿಯೆಗಳು]
* * *
ಓದುಗರ ಓಲೆಗಳನ್ನು ಓದುವ ಮುನ್ನ-
ಆತ್ಮೀಯ ಸ್ನೇಹಿತರೇ,
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಭಾನುವಾರಗಳಂದು ಪ್ರಕಟವಾಗುತ್ತಿದ್ದ ‘ಪರಾಗಸ್ಪರ್ಶ’ ಅಂಕಣಕ್ಕೆ ಕಳೆದ ವಾರದ
ಕೊನೆಯ ಕಂತಿನೊಂದಿಗೆ ವಿರಾಮ ಘೋಷಿಸಿದಾಗ ಬಂದಿರುವ ಪ್ರತಿಕ್ರಿಯೆಗಳು ನೂರಾರು (ಇಮೇಲ್ನಲ್ಲಿ ನನಗೆ ಬಂದವುಗಳ ಲೆಕ್ಕ ನನ್ನ ಬಳಿ. ವಿ.ಕ ಪತ್ರಿಕಾಕಛೇರಿಗೂ ಕೆಲವರು ಪತ್ರ ಬರೆದಿರಬಹುದು).
ಅಂಕಣಬರಹದಿಂದ ಯಾಕೆ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಕಳೆದ ವಾರದ ಲೇಖನದಲ್ಲೇ ಸ್ಪಷ್ಟವಾಗಿ ವಿವರಿಸಿದ್ದೆ. ಆ breaking news ಅನ್ನು shocking news ಎಂದು ಬಣ್ಣಿಸಿದವರೇ ಹೆಚ್ಚು. ಇನ್ನು ಕೆಲವರು ಬ್ರೇಕ್ನ ಅಗತ್ಯವನ್ನು ಸರಿಯಾಗಿಯೇ ಅರ್ಥಮಾಡಿಕೊಂಡು ಪ್ರತಿಕ್ರಿಯಿಸಿದ್ದಾರೆ. ಅಂಕಣವನ್ನು ತಾವೆಷ್ಟು ‘ಹಚ್ಚಿಕೊಂಡಿ’ದ್ದೆವು, ಈಗಿನ್ನು ಭಾನುವಾರಗಳು ಬೋರ್ ಎನಿಸುವುದಕ್ಕೆ ಏನು ಮಾಡೋಣ ಎಂದು ದುಃಖ ತೋಡಿಕೊಂಡವರು ಕೆಲವರಾದರೆ ವಿಜಯ ಕರ್ನಾಟಕ ಪತ್ರಿಕೆ ತರಿಸುವುದನ್ನೇ ನಿಲ್ಲಿಸುತ್ತೇವೆ ಎಂದು ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದವರೂ ಇದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಪ್ರತಿಕ್ರಿಯೆಗಳಲ್ಲಿ ಅಂಕಣದ ಬಗ್ಗೆ [ಅಂಕಣಕಾರನ ಬಗ್ಗೆಯೂ- ಅವನಿಗೇ ಸ್ವಲ್ಪ ಮುಜುಗರವೆನಿಸುವಷ್ಟು :-)] ಪ್ರೀತಿಯ ಮಹಾಪೂರವೇ ಹರಿದುಬಂದಿದೆ. ಪತ್ರ/ಪ್ರತಿಕ್ರಿಯೆ ಬರೆದವರೆಲ್ಲರಿಗೂ ಧನ್ಯವಾದ.
ಪರಾಗಸ್ಪರ್ಶ ಅಂಕಣದ ಓದುಗರೆಲ್ಲರೂ ಸದಭಿರುಚಿಯುಳ್ಳವರು, ಸಹೃದಯಿ ಸಜ್ಜನರು, ಹೆಚ್ಚಿನ ವಿಷಯಗಳಲ್ಲಿ ನನಗಿಂತ ಹೆಚ್ಚು ಜ್ಞಾನ-ಜೀವನಾನುಭವವುಳ್ಳವರು ಎಂಬುದು ನನಗೆ ಮೊದಲಿಂದಲೂ ಗೊತ್ತಿದ್ದ ಮತ್ತು ನಾನು ಹೆಮ್ಮೆ ಪಡುತ್ತಿದ್ದ ಅಂಶವೇ ಆಗಿತ್ತು. ಈ ಎಲ್ಲ ಪ್ರತಿಕ್ರಿಯೆಗಳಲ್ಲೂ ಅದು ಮತ್ತೊಮ್ಮೆ ಸಾಬೀತಾಗಿದೆ ಎಂದು ತಿಳಿಸಲು ತುಂಬ ಸಂತೋಷವಾಗುತ್ತದೆ. ಎಲ್ಲ ಓದುಗರ, ಎಲ್ಲ ಥರದ ಪ್ರತಿಕ್ರಿಯೆಗಳೂ ನನಗೆ ಏಕಪ್ರಕಾರವಾಗಿ ಮಾನ್ಯ. ಅವುಗಳಲ್ಲಿ ನಾನು ಎಂದೂ ತಾರತಮ್ಯ ತೋರುವುದಿಲ್ಲ.
ಪತ್ರ ಬರೆದವರಿಗೆಲ್ಲ ನಾನು ಆಗಲೇ ವೈಯಕ್ತಿಕ ಉತ್ತರದಲ್ಲಿ ಹೇಳಿರುವಂತೆ ವಾರವಾರದ run-of-the-mill ರೀತಿಯ ಅಂಕಣಬರಹಕ್ಕಷ್ಟೇ ಬ್ರೇಕ್. ಆಗೀಗ ಬೇರೇನಾದರೂ ಬರೆಯಬಹುದು, ಪತ್ರಿಕೆಗಳಿಗೂ ಕಳಿಸಬಹುದು, ಪ್ರಕಟಣಯೋಗ್ಯವೆನಿಸಿದರೆ ಅದು ಪ್ರಕಟವಾಗಲೂಬಹುದು. ನನ್ನ-ನಿಮ್ಮ ಮಿಂಚಂಚೆ ವಿನಿಮಯವಂತೂ ಖಂಡಿತ ಮುಂದುವರಿಯಬಹುದು.
ಮತ್ತೊಮ್ಮೆ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತ,
ಶ್ರೀವತ್ಸ ಜೋಶಿ; ವಾಷಿಂಗ್ಟನ್ ಡಿಸಿ. ಜೂನ್ 1, 2012

===========================================================
ಜೋಶಿಯವರಿಗೆ ನಮಸ್ಕಾರ,
ನಾನು ಮೇ 18ರಿಂದ ಹತ್ತು ದಿನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದೆ. ಆಮೇಲೆ ಒಂದು ವಾರ ಸರಿಯಾಗಿ ಪತ್ರಿಕೆ ಇತ್ಯಾದಿ ಓದಲೂ ಸಾಧ್ಯವಾಗಲಿಲ್ಲ. ನಿನ್ನೆ ಗೊತ್ತಾಯ್ತು, ನಿಮ್ಮ ‘ಪರಾಗ ಸ್ಪರ್ಶ’ ಇನ್ನು ಅಪರೂಪ ಅಂತ. ಒಮ್ಮೆ ಮನಸ್ಸು ‘ಖಾಲಿ ಖಾಲಿ ಆದಹಾಗೆ’ ಆದದ್ದು ಹೌದು...
ಅಂಕಣಬರಹಗಳು ತುಂಬಾ ಸಮಯದ ತನಕ ಬರ್ತಾ ಇದ್ರೆ ಒಂದು ಏಕತಾನತೆಯ ಅನುಭವ ಆಗುವುದೂ ಇದೆ. ಓದುವವರಿಗೂ, ಬರೆಯುವವರಿಗೂ. ಅಂಕಣಬರಹ ಅಂತ ಅಲ್ಲ, ಯಾವುದೇ ಪ್ರದರ್ಶನ, ಪ್ರಕಟಣೆ ಬಿಡುವಿಲ್ಲದೇ ನಡೆದಾಗ ಹೀಗಾಗುವುದು ಸಹಜವೋ ಏನೋ! ಹಾಗಾದಾಗ ಸ್ವಲ್ಪ ಸಮಯ ನಿಲ್ಲಿಸಿ, ಮತ್ತೆ ಶುರು ಮಾಡಿದರೆ ಮತ್ತೆ ಹೊಸತನ ಹೊಮ್ಮುತ್ತದೆ ಎಂದು ತಿಳಿದವರು ಹೇಳುವುದನ್ನು ಕೇಳಿದ್ದೇನೆ. ನನಗೂ ಈ ಅನುಭವ ಆಗಿದೆ. ಎಡೆಬಿಡದೆ ನಾಟಕ, ಶಿಬಿರಕ್ಕೆ ಬೇಡಿಕೆ ಬಂದಾಗ, ‘ಮತ್ತೆಂಥ ಮಾಡುವುದು...’ ಎನ್ನುವ ಸಮರ್ಥನೆಯೊಂದಿಗೆ ಒಪ್ಪಿಕೊಂಡು, ನನಗೆ ನಾನೇ ‘ಜಡ’ ಎನಿಸಿ ಉಲ್ಲಾಸವೇ ಕರಗಿ ಹೋದದ್ದೂ ಇದೆ. ಆದರೆ, ಇದಕ್ಕೆ ಕೆಲವು ಇದಕ್ಕೆ ಅಪವಾದ- ನಿಮ್ಮ ಅಂಕಣದ ‘ವಿಷಯ ವೈವಿಧ್ಯ’. ಅದನ್ನು ಈ ಅಪವಾದದ ಲಿಸ್ಟ್ಗೆ ಸೇರಿಸಿದೆ. ಆದ್ದರಿಂದಲೇ ಬಹುಶಃ ಒಮ್ಮೆ ನನಗೆ ‘ಖಾಲಿ ಖಾಲಿಯಾದ ಹಾಗೆ’ ಕಂಡದ್ದು. ನಿಮ್ಮ ಬರಹಗಳ ಎಲ್ಲಾ ವಿಷಯಗಳೂ ನನ್ನನ್ನು ಸೆಳೆದಿವೆ ಅಂತಲ್ಲ. ಬೇಕಾದ ಆಯ್ಕೆ ಇತ್ತಲ್ಲ!
ಅಲ್ಲ, ಯೋಚನೆ ಮಾಡಿದ್ರೆ.... ಈ ಊಟತಿಂಡಿಗಳೂ ಅಷ್ಟೆ ಅಲ್ಲವೇ? ದಿನಾ ಮನೆ ಊಟ ಆದರೂ, ಒಮ್ಮೊಮ್ಮೆ ಹೋಟೆಲು, ಬೀದಿ ಬದಿಯ ಗಾಡಿಗಳತ್ತ ಹೋಗುತ್ತೇವಲ್ಲ! ಇದು ಏನು? ಒಟ್ಟಾರೆ ಮನುಷ್ಯನಿಗೆ ‘ಹೊಸತು’ ಬೇಕು. ಹಾಗಾದರೆ, ಮೂಲತಃ ಮನುಷ್ಯನ ಮನಸ್ಸು ಎನ್ನುವುದು ಸೃಷ್ಟಿಶೀಲವಾದದ್ದು, ಜಡ ಅಲ್ಲ, ಅಲ್ಲವೇ? ಆದರೆ ಆ ಸೃಷ್ಟಿಶೀಲತೆಯನ್ನೇ ಚಂಚಲ ಸ್ವಭಾವ ಎಂದು ತಿಳಿದು, ಜಡವಾದುದಕ್ಕೇ ಅಂಟಿಕೊಂಡಿರುತ್ತೇವಲ್ಲ? ಅದಕ್ಕೆ ಮತ್ತೆ ಸಮರ್ಥನೆ ಬೇರೆ! “ಇನ್ನೂ ಹುಡುಗಾಟಿಕೆ ಹೋಗ್ಲಿಲ್ಲ...”, “ಅವನಿಗೆ ಕನ್ಸಿಸ್ಟೆನ್ಸಿ ಇಲ್ಲ...”, “ಅವನಿನ್ನೂ ಸೆಟ್ಲ್ ಅಗ್ಲಿಲ್ಲ...” ಹೀಗೆ ಕಾರಣ ಕೊಟ್ಟುಕೊಂಡು ಮತ್ತೆ ಜಡವಾಗುವುದು. ಇನ್ನೂ ಒಂದು ವಿಚಿತ್ರ- ಎಷ್ಟೋ ಜನ ಹೊಟ್ಟೆ ವಿಷಯಕ್ಕೆ ಮಾತ್ರ ಈ ‘ಹೊಸತು’ ಬಯಸುವವರು. ನಿಜವಾಗಿಯೂ ಯೋಚನೆ ಮಾಡಿದರೆ, ಈ ರಸಜ್ಞ ... ರಸಿಕ... ಸೃಷ್ಟಿಶೀಲತೆ... ಇಂತಹ ಪದಗಳ ಅರ್ಥವ್ಯಾಪ್ತಿ ಆಶ್ಚರ್ಯ ಉಂಟುಮಾಡುತ್ತದೆ.
ಎಸ್.ದಿವಾಕರ್ ಒಮ್ಮೆ ಕೀರ್ತಿನಾಥ ಕುರ್ತುಕೋಟಿಯವರ ಬಗ್ಗೆ ಬರೆದಿದ್ದರು- “ಆ ಮನುಷ್ಯ, ಕುಮಾರವ್ಯಾಸ, ಶೇಕ್ಸ್ಪಿಯರ್ ಬಗ್ಗೆ ಮಾತಾಡಿದಂತೆ, ಹಿಂದೂಸ್ಥಾನಿ ಸಂಗೀತದ ಕುರಿತೂ ಮಾತಾಡಬಲ್ಲರು; ಜೋಳದರೊಟ್ಟಿಯ ಬಗ್ಗೆ ಎರಡು ಗಂಟೆ ಮಾತಾಡಬಲ್ಲರು!” ಅಂತ.
ನನ್ನ ಅಪ್ಪಯ್ಯನೂ ಹಾಗೇ ಇದ್ದರು. ತಾಳಮದ್ದಳೆಯ ಕಲಾವಿದರಾಗಿ ವಾಚಿಕಾಭಿನಯದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದವರೂ, ರಾಮಾಯಣ, ಮಹಾಭಾರತಗಳ ಪುನರ್ರಚನಾಕಾರರೂ ಆಗಿದ್ದವರು, ಭಗವದ್ಗೀತೆ, ವೇದ, ಉಪನಿಷತ್ತು, ಪುರಾಣ, ರಾಜಕಾರಣ, ಸಮಾಜವಾದ, ಕೃಷಿಗಳ ಬಗ್ಗೆ ಮಾತಾಡಿದಷ್ಟೇ ಆಸಕ್ತಿಯಿಂದ, ಹಲಸಿನ ಹಣ್ಣಿನ ಪಾಯಸ, ಉಪ್ಪಿಟ್ಟು, ಕೇಸರಿಬಾತುಗಳ ವರ್ಣನೆ ಮಾಡ್ತಿದ್ರು! “ನಾನು ಶ್ರೀಮಂತಿಕೆಯನ್ನೂ ಅನುಭವಿಸಿದ್ದೇನೆ, ಬಡತನವನ್ನೂ ಸವಿದಿದ್ದೇನೆ” ಎಂದವರು ಅವರು. ಅವರು ಯಾವತ್ತೂ ಸೋಲಿಗೆ ಹೆದರಿದವರಲ್ಲ. ಅವರ ಪ್ರಸಿದ್ದ ನುಡಿಕಟ್ಟು ಹೀಗಿದೆ- “ನಾನು ಐದು ರೂಪಾಯಿ ಠಸೆ ಪೇಪರಿನಲ್ಲಿ ‘ಸೋತಿದ್ದೇನೆ’ ಎಂದು ಬರೆದುಕೊಟ್ಟೇ ತಾಳಮದ್ದಳೆಯಲ್ಲಿ ಅರ್ಥ ಹೇಳಲು ಶುರುಮಾಡಿದ್ದು...” ಅಂತ. ಸೋಲುವುದು ಗೊತ್ತಿದ್ದರೆ... ಎಂಥ ಸುಖ ಅಲ್ಲವೇ !?
ಓಹ್... ನಿಮಗೆ ಎರಡು ಸಾಲಿನ ಪತ್ರ ಬರೆಯಲು ಹೊರಟು, ವಿಷಯ ಎಲ್ಲೆಲ್ಲಿಗೋ ಹೋಯ್ತು. ಆದರೂ ನಿಮಗೆ ಬೇಸರ ಆಗ್ಲಿಕ್ಕಿಲ್ಲ ಎನ್ನುವ ವಿಶ್ವಾಸ. ಯಾಕೆಂದರೆ ನೀವು ‘ಸ್ಪರ್ಶ’ವನ್ನು ಮೆಚ್ಚಿಕೊಂಡವರು, ಹಚ್ಚಿಕೊಂಡವರು. ನೀವು ‘ಸ್ಪರ್ಶ’ವನ್ನು ಸ್ಪರ್ಶಿಸಿಕೊಂಡೇ ಇರುವುದೋ... ಅಥವಾ ‘ಸ್ಪರ್ಶ’ವೇ ನಿಮ್ಮನ್ನು ಸ್ಪರ್ಶಿಸಿಕೊಂಡಿರುವುದೋ ಗೊತ್ತಾಗ್ತಾ ಇಲ್ಲ. ಇರಲಿ, ಪತ್ರಿಕೆಯಲ್ಲಿ ಸ್ಪರ್ಶ ಸಿಗದೇ ಇದ್ದರೂ, ಆಗಾಗ, ಫೋನ್, ಮೈಲ್, ಫೇಸ್ಬುಕ್ ನಲ್ಲಿ ಆದರೂ ಸ್ಪರ್ಶ ಸಿಗುತ್ತದಲ್ಲ... !? ಬಾಕಿ ಇನ್ನೊಮ್ಮೆ,
- ಮೂರ್ತಿ ದೇರಾಜೆ; ವಿಟ್ಲ, ದ.ಕ
=======
Dear Sir,
So we will miss a refreshing Sunday morning treat hereafter. We will surely open that page to look for your article. I straight go to that page you know. Your style is distinct and so is Rasheed's.
I have learnt a lot about style of writing or generating ideas or even analysing mundane issues from your articles. You have an entirely different way of looking at the same old thing. I am sure many of your readers have taken your ideas into their thinking... at least I have. Your articles are good examples of bringing the incongruous together and yoking them to the same plough. You have a way with information. The same old info that all of us know for years becomes an enjoyable experience in your write up. You peep out of your photograph smiling through your mush and talking straight into the eyes of your readers. What you write is heard and not just read. Read melodies are sweet, heard melodies are sweeter. The unheard melodies that are created in the process are the sweetest!
Thanks for all those happy moments you have given us through your presentations. I might be revisiting your articles in the archives. Bye for the time being.
- Dr Kumara Swamy H; Mysore
=======
ವಾರದ ಅಂಕಣ ನಿಲ್ಲುತ್ತಿರುವುದು ಬೇಸರದ ಸಂಗತಿ. ಆದರೆ ‘ಬದಲಾವಣೆ ಜಗದ ನಿಯಮ’. ವಿಚಿತ್ರಾನ್ನದಿಂದ ಪರಾಗಸ್ಪರ್ಶಕ್ಕೆ ಬದಲಾದಂತೆ some positive ಬದಲಾವಣೆ ನಿರೀಕ್ಷಿಸುತ್ತಿದ್ದೇನೆ.
- ರಂಗನಾಥ ಬಾಪಟ್ ; ಬೆಂಗಳೂರು
=======
It’s a good decision to retire when you are in demand (unlike our cricketers).
Wish you all the best for your future writings.
- Srinath Rajanna ; United Arab Emirates
=======
ಆತ್ಮೀಯ ಸ್ನೇಹಿತರಾದ ಶ್ರೀವತ್ಸ ಜೋಶಿಯವರಿಗೆ, ಶಿವಾನಂದ ಬಾಗಲಕೋಟ ಮಾಡುವ ವಂದನೆಗಳು.
ತಾವು ಲೇಖನಬರಹಗಳಿಂದ ಬ್ರೇಕ್ ತೊಗೊಳ್ತಾ ಇರುವ ವಿಚಾರವನ್ನು ಓದಿ ನಮಗೆ ತುಂಬಾ ಬೇಜಾರಾಗಿದೆ. ಯಾಕೆಂದರೆ, ನಾನು ನನ್ನ ಜೀವನದಲ್ಲಿ ಕೆಲವು ಏರುಪೇರುಗಳನ್ನು ಅನುಭವಿಸಿದಂತಹ ವ್ಯಕ್ತಿ. ನಿಮ್ಮ ವಾರದ ಅಂಕಣಗಳನ್ನು ಓದಿಯಾದರೂ ನಾನು ನನ್ನಷ್ಟಕ್ಕೆ ನಾನೇ ಸಮಾಧಾನವನ್ನು ಕಂಡ್ಕೊಳ್ತಾ ಇದ್ದೆ. ದಯವಿಟ್ಟು ನಿಮ್ಮ ಬರಹಗಳನ್ನು ಮುಂದುವರಿಸಲಿಕ್ಕೆ ಪ್ರಯತ್ನಿಸಿ. ಧನ್ಯವಾದಗಳು,
- ಶಿವಾನಂದ; ಬಾಗಲಕೋಟ
=======
ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್! ಹೌದು, ನಿಮಗೊಂದು ಅಲ್ಪ ವಿರಾಮ ಬೇಕಾಗಿತ್ತು. ಸ್ವಾಗತಾರ್ಹವೇ. ಆದರೂ ಪ್ರತಿವಾರ, ನಿಮ್ಮ ಅಂಕಣ- ಇಮೈಲ್ ರೂಪದಲ್ಲಿ ಇನ್ನು ಬರುವುದಿಲ್ಲ ಅಂದರೆ ಮನಸ್ಸಿಗೆ ಕಷ್ಟವೇ! ನೀವೇ ಬರೆದಂತೆ... “ಮುಗಿದರೂ ಅಂಕಣ! ಮುರಿಯದು ಸ್ನೇಹದ ಬಂಧನ!”
- ತ್ರಿವೇಣಿ ರಾವ್; ಶಿಕಾಗೊ
=======
ಇದೇನು ಹೀಗೆ? ಇದು ಬ್ರೇಕಿಂಗ್ ನ್ಯೂಸ್ ಅಥವಾ ಓದುಗರೊಂದಿಗೆ ಬ್ರೇಕ್-ಅಪ್ ನ್ಯೂಸ್? ಪರಾಗಸ್ಪರ್ಶದ ಮೂಲಕ ಪ್ರತಿ ವಾರವೂ pun-fun ಮಾಡುತ್ತಾ ಟಚ್ನಲ್ಲಿ ಇದ್ದು ಹೀಗೆ ಅಚಾನಕ್ ಔಟ್ ಆಫ್ ಟಚ್ ಆಗುವುದೇ? ಎಲ್ಲಿದ್ದರೂ ಸರಿ, ಐಫೋನ್ನಲ್ಲಾದರೂ ಸರಿ, ವಾರಾಂತ್ಯದಲ್ಲಿ ನಿಮ್ಮ ಇಮೇಲ್ ಬಂದ ತಕ್ಷಣ ಪರಾಗಸ್ಪರ್ಶ ಓದಿ ಮುಗಿಸುತ್ತಿದ್ದೆ ಅಥವಾ ಡ್ರೈವ್ ಮಾಡುತ್ತಿದ್ದರೆ podcast ಕೇಳುತ್ತಿದ್ದೆ.
I will terribly miss your articles- henceforth no weekend write-ups to uplift the mood, to bring a smile or to pick the brains! ಇತ್ತೀಚಿಗೆ ನಿಮ್ಮ ಅಂಕಣದ ಓದುವಿಕೆಯೊಂದೇ ನನ್ನ ಸಾಹಿತ್ಯಾಭ್ಯಾಸವಾಗಿತ್ತು, ಮತ್ತೇನನ್ನೂ ಓದಲು ಸಮಯವಿಲ್ಲದೆ.
- ಮಧುಶಾಲಿನಿ ಭಾಸ್ಕರ್ ; ಮೇರಿಲ್ಯಾಂಡ್
=======
You really surprised us all by this 'BREAK' NEWS. I used to eagerly wait for these articles and have got used to it like so many of your literary fans. The combination of knowledge, fun, pun, philosophy and the amazing play of words was an excellent stimulating mixture.
As a writer, you definitely stand high. You have set high standards in contemporary writing. I have followed your writings since 2005 and will be looking forwards for more in the future. Also on a personal level, wanted to know how much of pressure, does this writing & responding and keeping in touch with your fans put you as you are a computer professional and a great family man. It needs lots of talent and infinite energy to balance them all.
Would wish for you to have more energy to keep us all in good humour. Also our appreciation of your family members who have supported you in producing those 500+ great articles.
- Dr Ashok GB; Hamilton, Canada.
=======
ನಿಮ್ಮ Punಡಿತ್ಯಕ್ಕೆ ನಮಸ್ಕಾರಗಳು. ನಿಮ್ಮ ಬರಹಗಳು ಚೇತೋಹಾರಿಯಾಗಿರುತ್ತಿದ್ದವು. ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿ ಎಂಬ ನಿರೀಕ್ಷೆಯೊಂದಿಗೆ. ಪ್ರೀತಿಯಿಂದ,
- ಭರತ್ ಹರಪ್ಪನಹಳ್ಳಿ; ಚೆನ್ನೈ
=======
ನಾನು ಸದ್ಯಕ್ಕೆ ಉಗಾಂಡದಲ್ಲಿದ್ದೇನೆ. ಬೆಳಿಗ್ಗೆ ಎದ್ದು ಇ-ಪೇಪರ್ ನೋಡಿ ತುಂಬಾ ಖುಷಿಯಿಂದ ಓದುವಾಗ shocking ಸಮಾಚಾರ ಕೊಟ್ರಿ! ತುಂಬ ಬೇಜಾರಾಗ್ತಿದೆ ಜೋಶಿಯವರೇ. ಅಂದ ಹಾಗೆ, ನಿಮ್ಮ ಬರೆಯುವ ಸರಕು ನಮಗೆ ಎಂದೆಂದೂ ಎಷ್ಟೇ ದಿನ ಬೇಕಾದರೂ ಸಹಿಸಿಕೊಳ್ಳಬಹುದು. ಅಷ್ಟೊಂದು ಹೊಸ ವಿಚಾರ, ಅಷ್ಟೊಂದು ಲವಲವಿಕೆ, ಎಲ್ಲ ಮಾಹಿತಿಗಳ ಒಟ್ಟಿಗೆ ಪರಾಗಸ್ಪರ್ಶವನ್ನು ನೀವು ಮಾಡಿದ್ದೀರಿ. ನಿಮಗೆ ತುಂಬ ಋಣಿ. ನಿಮ್ಮ ಬಹಳ ಸರಳ ಗುಣ ನಿಮ್ಮನ್ನು ಒಬ್ಬ ಶ್ರೇಷ್ಠ ವ್ಯಕ್ತಿಯನ್ನಾಗಿ ನನ್ನ ಮನದಾಳದಲ್ಲಿರಿಸಿದೆ. ನಿಮ್ಮ ಅಂಕಣ ನಮ್ಮ ಪ್ರತಿ ಆದಿತ್ಯವಾರವನ್ನು ಉಲ್ಲಾಸವಾಗಿರಿಸಿದೆ.
ದಯವಿಟ್ಟು ಆಗೊಮ್ಮೆ ಈಗೊಮ್ಮೆ ಬರೆಯುತ್ತ ಇರಿ. ನಿಮ್ಮ ಅಂತರ್ಜಾಲದ ಬರವಣಿಗೆಯನ್ನು ನಮಗೆ ತಿಳಿಸುತ್ತ ಇರಿ. I MISS U!
ಇಂತೀ ನಿಮ್ಮ ಓದುಗ ಮಿತ್ರ,
- ಸುಧೀರ್ ಶೆಣೈ ; ಕಂಪಾಲ, ಉಗಾಂಡ
=======
ಇಷ್ಟು ದಿವಸ ಭಾನುವಾರದ ಈ ಅಂಕಣಕ್ಕಾಗಿ ಕಾಯುತ್ತಿದ್ದ ಎಷ್ಟೋ ಓದುಗರಿಗೆ ಒಳ್ಳೆ ಶಾಕ್ ನ್ಯೂಸ್ ಕೊಟ್ಟಿರಿ. ಪರವಾಗಿಲ್ಲ ನೀವು ತಿಳಿಸಿದ ಹಾಗೆ ಬೇರೆ ಬೇರೆ ಲೇಖನಗಳನ್ನು ಓದುವ ಭಾಗ್ಯ ನಮ್ಮದಾಗಲಿ. ಕಾಲಂ ಮುಗಿದು ಹೋದರೂ ಕಾಲ ಮುಗಿದಿಲ್ಲ ಬಂದೇ ಬರ್ತೈತೆ ಒಳ್ಳೆ ಕಾಲ ಅನ್ನೋ ಹಾಗೆ ಬಂದೇ ಬರ್ತೈತೆ ಒಳ್ಳೆ ಲೇಖನ ಎನ್ನುವ ನಿರೀಕ್ಷೆಯಲ್ಲಿ ಇಂದಿನ ಪತ್ರವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ. ನಮಸ್ಕಾರಗಳು. ಇದು ವಿದಾಯವಲ್ಲ.
- ಮೀನಾ ಜಿ.ಕೆ; ಮೈಸೂರು
=======
ಜೋಶಿಯವರೇ, ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ. ಇದಕ್ಕಿಂತ ದುಃಖದ ವಿಷಯ ಬೇರೊಂದಿಲ್ಲ. ನಿಮ್ಮ ಅಂಕಣಕ್ಕಾಗಿ ಶನಿವಾರ ರಾತ್ರಿಯಿಂದಲೇ ಓದುವ ಸಿದ್ಧತೆ ನಡೆಸುತ್ತಿದ್ದ, ಪೇಪರ್ ಬಂದೊಡನೆಯೇ ನಾ ಮುಂದು ತಾ ಮುಂದು ಎಂದು ಓದಲು ಸೆಣಸುತ್ತಿದ್ದ, ತಲ್ಲೀನರಾಗಿ ಓದುತ್ತಿದ್ದ, ಓದಿ ಹಲವರೊಡನೆ ಅಂಕಣದಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಇಟ್ಟುಕೊಂಡು ಚರ್ಚಿಸುತ್ತಿದ್ದ ನಮಗೆ ಈಗ ಆಗುತ್ತಿರುವ ದುಗುಡ, ಚಡಪಡಿಕೆ ನಾನು ಹೇಗೆ ಹೇಳಲಿ? ಬಹುಶಃ ಈ ಸೃಷ್ಟಿಯೇ ಹೀಗೆಯೇನೋ. ಉತ್ತಮವಾದದ್ದು ಬಹುಕಾಲ ಸಿಗದೇನೋ?! ಏನೇ ಆಗಲಿ ನಿಮ್ಮಿಂದ ತುಂಬಾ ರಂಜನೆಯನ್ನು ಪಡೆದ, ಜ್ಞಾನವನ್ನು ಗಳಿಸಿದ ಋಣವನ್ನು ಎಂದೆಂದಿಗೂ ಮರೆಯಲಾರೆ ಹಾಗೂ ನಿಮ್ಮ ಋಣವನ್ನು ತೀರಿಸಲಾರದ ಚಿರಋಣಿ ನಾನು.
ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಭಗವಂತನ ದಯೆ ಸದಾ ಇರಲಿ ಎಂದು ಹೃದಯಪೂರ್ವಕವಾಗಿ ಹಾರೈಸುವುದನ್ನು ಬಿಟ್ಟು ನಾನು ಬೇರೇನನ್ನೂ ಹೇಳಲಾರೆ. ಇಂತಿ ತಮ್ಮ ಆತ್ಮೀಯರು,
- ಸುಧೀರ್ ಮತ್ತು ಶ್ವೇತಾ; ಬೆಂಗಳೂರು
=======
ಸರ್ ನೀವು ಬ್ರೇಕ್ ತೊಗೊಳ್ತಿರೋದು ತುಂಬ ಬೇಜಾರ್ ಆಗ್ತಾ ಇದೆ. ನೀವು ನಮ್ಮ ವಾರದ ಮಿತ್ರ. ನೀವಿಲ್ಲದ (ನಿಮ್ಮ ಅಂಕಣ ಇಲ್ಲದ) ಭಾನುವಾರವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರೇಕ್ ಮುಗಿಸಿ ಬೇಗ ಮತ್ತೆ ಬನ್ನಿ! ನಿಮ್ಮನ್ನೇ ಕಾಯುತ್ತಿರುವ,
- ಮಾದೇವ್ ಮತ್ತು ಮಂಜು; ಊರು?
=======
ಪ್ರಿಯ ಜೋಷಿ ಅವರೇ, ನಿಮ್ಮ ಪ್ರಕಾರ ಇದು ಒಳ್ಳೆಯ ಸಮಾಚಾರವೆ? ಇದು ಬ್ರೇಕಿಂಗ್ ನ್ಯೂಸ್ ಅಲ್ಲ ಶಾಕಿಂಗ್ ನ್ಯೂಸ್! ಆದರೆ ಬಹಳ ವಾರಗಳಿಂದ ಇದರ ಬಗ್ಗೆ ನಮಗೆ ಅನುಮಾನ ಇದ್ದೇಇತ್ತು. ವಿ.ಭಟ್ಟರು ವಿ.ಕ ಬಿಟ್ಟ ಮೇಲೆ ಅವರ ಮೇಲೆ ಅಭಿಮಾನದಿಂದ ಬರೆಯುತ್ತಿದ್ದ ಎಲ್ಲರಿಗೂ ವಿದಾಯ ಆಗಿತ್ತು. ಅವರೆಲ್ಲರೂ ಕನ್ನಡ ಪ್ರಭ ಪತ್ರಿಕೆಗೆ ಹಾರಿದರು. ನೀವೊಬ್ಬರೇ ಇಲ್ಲಿಯವರಿಗೆ ಬರೆಯುತ್ತಿದ್ದೀರಿ. ಭಾನುವಾರ ನಿಮ್ಮೊಬ್ಬರಿಗಾಗಿ ವಿಜಯ ಕರ್ನಾಟಕ ಓದ್ತಾ ಇದ್ವಿ. ಇನ್ಮೇಲೆ ಅದರ ಸಹವಾಸ ಸಾಕೋ ಸಾಕು. ಬರೆಯುವುದು ನಿಲ್ಲಿಸಬೇಡಿ. ವಿಜಯ ಕರ್ನಾಟಕ ಒಂದೇ ಪತ್ರಿಕೆ ಅಲ್ಲ. ಹಲವಾರು ಪತ್ರಿಕೆಗಳು ಇದೆ. ಬೇಗ ಜಂಪ್ ಆಗಿ.
ಸ್ನೇಹಸಂಪರ್ಕ ಹೀಗೆ ಇರಲಿ. ಇಮೇಲ್ ಮಾಡುತ್ತಿರಿ. ನಿಮಗೂ ನಿಮ್ಮ ಮನೆಯವರಿಗೆಲ್ಲರಿಗೂ ಪ್ರೀತಿಯ ವಂದನೆಗಳು.
- ರಾಮಗೋಪಾಲ್. ಕೆ.ಎಸ್ ; ರಾಮನಗರ
=======
Well, all I can say is, this can not be true!
Is there any other grand plan? Are you planning a new series or in a different news paper?
- Naraharai Joshi; United Kingdom
=======
Surprised to know that today's is the last write up of present series of "Paragasparsha" write ups. However the eternal truth that "Everything that begins has to have an end" forces to accept this breaking news. Let this break give you wonderful time, abundant supply of new ideas, and happiness. Wishing you all the best,
- Purushotham Joshi; Mumbai
=======
NO. YOU ARE NOT GOING TO DO THIS TO US JOSHIಯವರೇ. ನಮ್ಮ ಹೊಟ್ಟೆ ಉರಿಸಬೇಡಿ. ನಿಜ ಹೇಳಿ. ಯಾಕೆ ನಿಮ್ಮ ಬರವಣಿಗೆ ನಿಲ್ಲಿಸ್ತಾ ಇದ್ದೀರಾ? I can't digest this news. At least for me, you are going to write and send every week. In fact, every saturday I used to get up early with the eagerness to read/ listen to your article. You are not going to stop writing. I will call you tomorrow. ಮನಸ್ಸಿಗೆ ತುಂಬಾ ಬೇಜಾರಾಗಿದೆ.
- Saraswathi Vattam; California
=======
ತುಂಬ ಚೆನ್ನಾಗಿ ಈ ಸರಣಿಗೆ ಮುಕ್ತಾಯ ಹಾಡಿದ್ದೀರಿ. I mean ಸರಿಯಾಗಿ brake ಹಾಕಿದ್ದೀರಿ. Breaking Newsನಲ್ಲಿ ಬರುವಂಥ ಬ್ರೆಕ್ ಹಾಕಿಲ್ಲ. ದೀರ್ಘಕಾಲ ವಿರಮಿಸಬೇಡಿ! ಆಗಾಗ ಬರುತ್ತಿರಿ, ಕೇವಲ ವಿ.ಕದಲ್ಲೊಂದೇ ಅಲ್ಲ, ಪ್ರಜಾವಾಣಿ, ಉದಯವಾಣಿ, ವಿಜಯವಾಣಿ ಪುಟಗಳಲ್ಲೂ!
- ನಾಗೇಶ ಹೆಗಡೆ; ಬೆಂಗಳೂರು
=======
ಮಾನ್ಯ ಶ್ರೀವತ್ಸ ಜೋಷಿಯವರಿಗೆ ನಮಸ್ಕಾರಗಳು,
ಇವತ್ತಿನ ನಿಮ್ಮ ಅಂಕಣಬರಹ ನನಗೆ ತುಂಬಾ ಸಂತೋಷದಾಯಕವೂ ಅಷ್ಟೇ ದುಃಖದಾಯಕವೂ ಆಗಿದೆ. ಸಂತೋಷದಾಯಕ ಏಕೆಂದರೆ, ನಿಮ್ಮ ಬರಹದ ಮೊದಲ ಭಾಗದಲ್ಲಿಯೇ ನನ್ನ ಉತ್ತರ, ಅಭಿಪ್ರಾಯ ಮತ್ತು ನನ್ನ ಹೆಸರು ಕೂಡ ಸೇರಿಸಿದ್ದಿರಿ. ಜೊತೆಗೆ ನನಗೆ ವಿಶೇಷ ಧನ್ಯವಾದಗಳನ್ನು ಕೂಡ ಹೇಳಿದ್ದಿರಿ. ಇದಕ್ಕೆ ನಾನು ನಿಮಗೆ ಚಿರಋಣಿಯಾಗಿದ್ದೇನೆ. ನಿಮ್ಮ ಪರಾಗ ಸ್ಪರ್ಶ ಲೇಖನವನ್ನು ನಾನು ಮೊದಲಿನಿಂದಲೂ ಓದುತ್ತ ಬಂದಿದ್ದೇನೆ. ನೀವು ಅಂಕಣದಲ್ಲಿ ಪ್ರತಿಸಾರಿ ಪ್ರಶ್ನೆ ಕೇಳಿದಾಗಲೂ ಅದಕ್ಕೆ ಉತ್ತರ ಮತ್ತು ಅಭಿಪ್ರಾಯ ಬರೆದು ಕಳುಹಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಕೆಲವುಸಾರಿ ಪ್ರಶ್ನೆಗೆ ಉತ್ತರವೇ ಹೊಳೆಯುತ್ತಿರಲಿಲ್ಲ. ಒಂದೆರೆಡು ಬಾರಿ ಉತ್ತರ ಹೊಳೆದರೂ ಬೇರೆಬೇರೆ ಕಾರಣಗಳಿಂದ ನಿಮಗೆ ಟೈಪಿಸಿ ಕಳುಹಿಸಲು ಆಗಲಿಲ್ಲ. ಮೊದಲ ಬಾರಿ ನಿಮಗೆ ಉತ್ತರ ಬರೆದದ್ದು ಅದು ನಿಮಗೆ ಇಷ್ಟವಾಗಿ ನಿಮ್ಮ ಲೇಖನದಲ್ಲಿ ಸ್ಥಾನ ಕೂಡ ಪಡೆಯಿತು. ಇದು ನನ್ನ ಜೀವನದ ತುಂಬಾ ಸಂತೋಷದಾಯಕ, ಮರೆಯಲಾಗದ ಕ್ಷಣವಾಗಿದೆ. ಇವತ್ತಿನ ಬರಹದೊಂದಿಗೆ ನೀವು ಈ ಅಂಕಣಕ್ಕೆ ವಿದಾಯ ಹೇಳಿದ್ದಿರಿ ಇದು ನನಗೆ ತುಂಬಾ ದುಃಖದ ವಿಷಯವಾಗಿದೆ. ಪ್ರತಿ ರವಿವಾರವು ನಿಮ್ಮ ಲೇಖನ ಓದಲು ಕಾಯುತ್ತಿದ್ದೆ. ಒಂದು ಬಾರಿ ಓದಿದ ಅಂಕಣವೇ ತುಂಬಾ ಇಷ್ಟ ಆಗಿ ಮತ್ತೊಮ್ಮೆ, ಮಗದೊಮ್ಮೆ ಓದ್ತಾ ಇದ್ದೆ.
ನನ್ನ ಮೊದಲ ಮಿಂಚಂಚೆಗೆ ನೀವು ಧನ್ಯವಾದಗಳನ್ನು ತಿಳಿಸಿ ನನ್ನ ಪರಿಚಯವನ್ನು ಕೇಳಿದ್ದಿರಿ. ಅದಕ್ಕಾಗಿ ಕೆಳಗೆ ನನ್ನ ಪರಿಚಯವನ್ನು ನೀಡಿದ್ದೇನೆ. ನನ್ನ ಹೆಸರು ವಿನಯ ಕುಮಾರ ಶಿಲ್ಪಿ ಈಗಾಗಲೇ ನಿಮಗೆ ತಿಳಿದಿದೆ. ನನ್ನ ಊರು ಕರ್ನಾಟಕದ ಇತಿಹಾಸ ಪ್ರಸಿದ್ಧ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ. ಬಿ.ಎ ಡಿಗ್ರೀ ಆಗಿದೆ. ಹಿಂದುಸ್ತಾನಿ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದೇನೆ. ಕಂಪ್ಯೂಟರ್ ಕೋರ್ಸ್ಗಳನ್ನು ಮಾಡಿಕೊಂಡಿದ್ದೇನೆ. ಸದ್ಯ ದಿಗ್ಗಾಂವ ಎಂಬ ಗ್ರಾಮದ ಗ್ರಾಮಪಂಚಾಯತ್ ಕಾರ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ. ನನ್ನ ಬಗ್ಗೆ ಇನ್ನು ಒಂದು ವಿಶೇಷತೆಯನ್ನು ಇಲ್ಲಿ ಟೈಪಿಸಿಲ್ಲ. ಅದನ್ನು ಮುಂದಿನ ಮಿಂಚಂಚೆಗಳಲ್ಲಿ ತಿಳಿಸುತ್ತೇನೆ. ನಿಮ್ಮ ಲೇಖನಗಳನ್ನು ಮತ್ತೆ ಎಲ್ಲಿ ಓದಬಹುದು ತಿಳಿಸಿ. ಧನ್ಯವಾದಗಳೊಂದಿಗೆ,
- ವಿನಯಕುಮಾರ ಶಿಲ್ಪಿ; ಚಿತ್ತಾಪುರ
=======
ನಿಮ್ಮ ‘ಕೆಮ್ಮೋತ್ತರ ಬ್ರೇಕಿಂಗ್ ನ್ಯೂಸ್’ ಒದಿ ವಿರಹವೇದನೆಯಿಂದ ಬಳಲುತ್ತಿದ್ದೇನೆ. ಪ್ರತೀವಾರ ನಿಮ್ಮ ಅಂಕಣದ ನಿರೀಕ್ಷೆಯಲ್ಲಿರೋದು, ಓದಿದ ಮೇಲೆ ಪ್ರತಿಕ್ರಿಯೆ ಕೊಡುವುದು, ನಂತರ ನಿಮ್ಮ ಉತ್ತರಕ್ಕೆ ಕಾಯುವುದು- ಇವೆಲ್ಲ ನಿಂತೇ ಹೋಯಿತೇ! ಇದನ್ನೆಲ್ಲ ನೆನೆದರೆ ದುಃಖವು ಉಕ್ಕಳಿಸಿ ಬರುತ್ತಿದೆ. ‘ನೆನೆ’ ಎಂಬ ಶೀರ್ಷಿಕೆಯ ಒಂದು ಅದ್ಭುತ ಅಂಕಣ ಓದಿದ ನೆನಪು ಮರುಕಳಿಸುತ್ತಿದೆ. ಈ ಮಧ್ಯದಲ್ಲಿ ನಾನು ಕಂಪ್ಯೂಟರ್ ಬಳಸುವುದನ್ನು ತಕ್ಕಮಟ್ಟಿಗೆ ಕಲಿತೆ, ಮತ್ತು ಇದರಿಂದ ನನ್ನ ಪ್ರತಿಕ್ರಿಯೆ ನಿಮಗೆ ತಲುಪಿಸಲು ಸುಲಭವಾಯಿತು. ಇದೇ ಸಮಯಕ್ಕೆ ನಾನು ಕಂಪ್ಯೂಟರ್ ಕಲಿತದ್ದು ಅನುಕೂಲವೇ ಆಯಿತು. ನನ್ನಂತೆ ತುಂಬ ಓದುಗರೂ ದುಃಖಿಸುತ್ತಿರಬಹುದು. ಇಷ್ಟೆಲ್ಲ ಜ್ಞಾನ ಸಾಮಗ್ರಿ ಒದಗಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು. ನೀವೇನಾದರೂ ದೊಡ್ಡ ಜವಾಬ್ದಾರಿಯನ್ನು ಹೊರುತ್ತಿದ್ದೀರೋ ಹೇಗೆ?
- ಎಂ. ಮುಕುಂದ ಜೋಶಿ; ಬೆಂಗಳೂರು
=======
ಮತ್ತೊಂದು ಹೊಸ ಶೀರ್ಷಿಕೆಯೊಂದಿಗೆ ಮರಳಿ ಬರುತ್ತೀರೆಂಬ ನಂಬಿಕೆ ಇದೆ. ಧನ್ಯವಾದಗಳು.
- ಅನುರಾಧ ಅರುಣ್; ಶಿಕಾಗೊ
=======
ಜೋಶಿಯವರೆ,
ಇದು ಬರೀ ಬ್ರೇಕಿಂಗ್ ನ್ಯೂಸ್ ಅಲ್ಲ- ಶಾಕಿಂಗ್ ನ್ಯೂಸ್! ನಿಮಗೆ ಏನೇನು ಬರೀಬೇಕು, ಯಾವ್ಯಾವ ವಿಷಯಕ್ಕೆ ನಿಮ್ಮ ಹತ್ತಿರ ಸುಳ್ಳುಸುಳ್ಳೇ ಜಗಳ ಆಡಬೇಕು ಅಂತ ಲೆಕ್ಕಾಚಾರ ಹಾಕ್ತಿದ್ರೆ ಹೀಗಾ ಕೈ ಕೊಡೋದು? ಪರಾಗಸ್ಪರ್ಶಕ್ಕೂ ವಿಷಾದಕ್ಕೂ ದೂರ ಅಂತ ನೀವು ಬರೆದರೂ ನನಗ್ಯಾಕೋ ಈ ವಾರದ ಸಂಚಿಕೆಯಲ್ಲಿ ವಿಷಾದವೇ ಮಡುಗಟ್ಟಿದ ಹಾಗೆ ಕಾಣತ್ತಪ್ಪ. ‘ಇನ್ನೂ ಉತ್ತಮವಾಗಿ, ಅರ್ಥಪೂರ್ಣವಾಗಿ.... ಬರೆಯಬಹುದಿತ್ತು’ ಅಂತೆಲ್ಲ ನಿಮಗೆ ಯಾಕೆ ಅನ್ಸುತ್ತೆ? ಆಗ ಅದು ಪರಾಗಸ್ಪರ್ಶ ಆಗ್ತಿರ್ಲಿಲ್ಲ- ಇನ್ನೇನೋ ಆಗ್ತಿತ್ತು- ಅಲ್ವಾ? ಕೆಮ್ಮಿ ಕೆಮ್ಮಿ ಸುಸ್ತಾಗಿ ಕಣ್ಣಲ್ಲಿ ನೀರು ಬರೋದು ಬಾಕಿ- ಹಾಗೆ ಡೋಸ್ ಕೊಟ್ಟು ‘ಕೆಮ್ಮಂಗಿಲ್ಲ’ ಅಂತ ಅಪ್ಪಣೆ ಕೊಟ್ರೆ ಹೇಗೆ? ಏನೇ ಆಗಲಿ, ನಿಮ್ಮ ಅಂಕಣದಿಂದ ನಾವು ಬಹಳಷ್ಟು ವಿಷಯಗಳನ್ನು ನಗ್ತಾನಗ್ತಾ ಕಲ್ತಿದ್ದೇವೆ. ನಿಮಗೆ ಪ್ರತಿಕ್ರಿಯೆ ಬರೀತಾ ಬರೀತಾ ಅದರಿಂದಲೂ ಕಲ್ತಿದ್ದೇವೆ. (ನಾವೂ ಮಹಾ ದೊಡ್ಡ ಬರಹಗಾರರು ಅನ್ನೋ ಭಾವನೆ ನಮ್ಮಲ್ಲಿ ಬರೋ ಹಾಗೆ ನೀವು ಮಾಡ್ತಿದ್ರಿ!) ನಿಮಗೆ ಅನಂತಾನಂತ ವಂದನೆಗಳು. ನಮ್ಮ ಶುಭ ಹಾರೈಕೆಗಳು ಸದಾ ನಿಮ್ಮೊಂದಿಗಿರುತ್ತೆ. ನಿಮ್ಮೆಲ್ಲಾ ಸೃಜನಾತ್ಮಕ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ. ಸರಿ, ಮುಂದೆ? ನಿಮ್ಮ ಲೇಖನಗಳನ್ನು pdf ಮೂಲಕ ಕಳಿಸುವುದಾದರೆ ಓದುಗರ ಪಟ್ಟಿಯಲ್ಲಿ ನಮ್ಮೆಲ್ಲರ ಹೆಸರುಗಳನ್ನೂ ಸೇರಿಸುವುದನ್ನು ಮಾತ್ರ ಮರೆಯಬೇಡಿ. ಪ್ರೀತಿ-ವಿಶ್ವಾಸಗಳೊಂದಿಗೆ,
- ಡಾ. ನಾಗಮಣಿ; ವಿಂಧ್ಯಾಚಲ, ಮಧ್ಯಪ್ರದೇಶ
=======
ಆತ್ಮೀಯ ಜೋಶಿಯವರೆ,
ತಾವು ಇನ್ನು ಮುಂದೆ ಪರಾಗ ಸ್ಪರ್ಶ ಅಂಕಣವನ್ನು ಬರೆಯುವದಿಲ್ಲಾ ಎಂಬ ಅಂಶವನ್ನು ಒದಿ ನಿಜವಾಗಿಯೂ ಖೇದವಾಯಿತು. ನಾನು ಇತ್ತೀಚೆಗೆ ‘ಕನ್ನಡ ಪ್ರಭ’ ಪತ್ರಿಕೆಗೆ ಬದಲಾಯಿಸಿದ್ದರೂ ‘ಪರಾಗ ಸ್ಪರ್ಶ’ ಅಂಕಣಕ್ಕಾಗಿ ಮಾತ್ರ ರವಿವಾರದ ವಿಜಯ ಕರ್ನಾಟಕ ಪತ್ರಿಕೆಯನ್ನು ಖರೀದಿಸುತ್ತಿದ್ದೆ. ತಾವು ಬರೆಯುತ್ತಿದ್ದ ವೈವಿಧ್ಯಮಯ ವಿಷಯಗಳು, ಕೇಳುವ ರಸಪ್ರಶ್ನೆಗಳು ತುಂಬಾನೆ ಮುದ ನೀಡುತ್ತಿದ್ದವು. ದಯಮಾಡಿ ಅಂಕಣವನ್ನು ಮುಂದುವರೆಸಿರಿ. ವಂದನೆಗಳು. ತಮ್ಮ ಓದುಗ ಅಭಿಮಾನಿ,
- ಅನೀಲ ರಾಮಚಂದ್ರ ಕುಸುಗಲ್ ; ಗೋಕಾಕ ಜಿ-ಬೆಳಗಾವಿ
=======
ಜೋಶಿಯವರಿಗೆ ನಮಸ್ಕಾರ
ಕೆಮ್ಮೋತ್ತರ ಬ್ರೇಕಿಂಗ್ ನ್ಯೂಸ್ನೊಂದಿಗೆ ಪರಾಗಸ್ಪರ್ಶಕ್ಕೆ ಸದ್ಯ ಸ್ಪರ್ಶವಿದೂರ ಮಾಡುವ ನಿರ್ಧಾರ ಕೈಗೊಂಡಿದ್ದನ್ನು ಓದಿದೆ. ನಿಮ್ಮ ನಿರ್ಧಾರ ಸಕಾಲಿಕವಾಗಿದೆ. ನಿಮ್ಮ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಮುಂದೆ ನಿಮ್ಮ ಬೇರೆ ರೀತಿಯ ಲೇಖನ ಓದಲು ಉತ್ಸುಕಳಾಗಿದ್ದೇನೆ. ದಯವಿಟ್ಟು ಆಗ ಲಿಂಕ್ ಕಳುಹಿಸಿ.
- ರುಕ್ಮಿಣಿ ಮಾಲ; ಮೈಸೂರು
=======
oh... really? I look forward to reading more very soon...
- Shanthi Tantry; Maryland USA
=======
It is a mixed feeling. Am not sure what to say. As much as I want to see paraagasparsha on vk and in my inbox, I support your decision.
Don’t stop writing, though!
- Dr. Guruprasad Kaginele; Minnesota USA
=======
‘ಬ್ರೇಕಿಂಗ್ ನ್ಯೂಸ್’ ಅಂದ್ರಾ? ಇದು ನಿಜವಾಗಿ ನಮಗೆ ‘ಶಾಕಿಂಗ್ ನ್ಯೂಸ್’!! ಹಿಂದಿನ ಸ್ಪರ್ಶದಲ್ಲಿ ‘ಕೆಮ್ಮು’ ಬಂದಾಗಲೇ ಅಂದುಕೊಂಡೆ, ಇದು ಕೊನೆಯ... ಅಪಶಕುನವಾದೀತೆಂದು ಕೇಳದೆ ಸುಮ್ಮನಾದೆ, ಅದಕ್ಕೆ ‘ಎಂದೆಂದು ಇರಲಮ್ಮ ಈ ದಿವ್ಯ ಬಂಧ...’ ಎಂದದ್ದು! ಜೀವನಹರ್ಷ ತೋರಿದ `ONGC’ ಟಚ್ಗಳಿಗೆ ಧನ್ಯವಾದಗಳು. ನನ್ನ ಆತಂಕದ/ದುಗುಡದ ದಿನಗಳಲ್ಲಿ ಜೊತೆ ನೀಡಿದ, ನನ್ನನ್ನು ಗುರುತಿಸಿಕೊಂಡು ಬೆಳೆಯುವಂತೆ ಪ್ರೇರೇಪಿಸಿದ, ಎಲ್ಲಕಿಂತ ಹೆಚ್ಚಾಗಿ, ನನ್ನನ್ನ ಅಕ್ಕರೆಯ ಉಷಕ್ಕ ಆಗಿ ಸ್ವೀಕರಿಸಿದ ‘ಪರಾಗ ಸ್ಪರ್ಶ’ಕ್ಕೆ ಮತ್ತು ಅದನ್ನು ಕೊಟ್ಟ ‘ವಿಜಯ ಕರ್ನಾಟಕ’ಕ್ಕೆ ನಾನು ಚಿರಋಣಿ. ಭಾನುವಾರದ ಓದುಗರನ್ನ, ಎಲ್ಲ ದಿನ ಆಕರ್ಷಿಸುವ ಮುಂದಿನ ಉಪಾಯ ಚೆನ್ನಾಗಿದೆ! ಭೇಟಿ ಆಕಸ್ಮಿಕ, ಅಗಲಿಕೆ ಅನಿವಾರ್ಯ, ಪಡೆದ ಅನುಭವವೊಂದೇ ಶಾಶ್ವತ, ಅಲ್ಲವೇ? ನಿಮ್ಮ ಮುಂದಿನ ಎಲ್ಲ ಯೋಜನೆಗಳಿಗೆ ಮನ ತುಂಬಿ ಹರಸುತ್ತಾ, ನಿಮ್ಮಿಂದ ಇನ್ನೂ ಹೆಚ್ಚಿನ ನಿರೀಕ್ಷೆಯಲ್ಲಿ, ಅಕ್ಕರೆಯ,
- ಉಷಾ ಉಮೇಶ್; ಬೆಂಗಳೂರು
=======
ಬ್ರೇಕಿಂಗ್ ನ್ಯೂಸ್ ಸಿಕ್ಕಿತು. ಪ್ರಾಯಶಃ ಇದು ಒಳ್ಳೆಯದೇ ಅನ್ನಿಸುತ್ತೆ. ಈಗತಾನೆ ಟಿವಿಯಲ್ಲಿ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ಮರಿಯಾ ಶ್ರೈವರ್ ಕೊಟ್ಟ ಪದವೀದಾನ ಸಮಾರಂಭದ (ಘಟಿಕೋತ್ಸವ ಭಾಷಣ) ಕಮೆನ್ಸ್ಮೆಂಟ್ ಸ್ಪೀಚ್ನ ಒಂದು ತುಣುಕು ತೋರಿಸಲಾಯಿತು. ಆಕೆ ಹೇಳಿದ್ದೂ ಅದೇ- "Take a pause before you launch again" ಇದು ನಿಮ್ಮ ಮೆದುಳಿನ ಆರೋಗ್ಯಕ್ಕೂ ಮನಾಟನಿಯಿಂದ ಮುಕ್ತಿ ಪಡೆಯುವುದಕ್ಕೂ ಅಗತ್ಯ ಆರೈಕೆ! ಹತ್ತು ವರ್ಷಗಳ ನಿರಂತರ ಬರವಣಿಗೆ ಸಾಧಾರಣ ಮಾತೇನಲ್ಲ! ನಿಮ್ಮ ಹಿತಾಭಿಲಾಷಿ,
- ಡಾ. ಮೈ.ಶ್ರೀ.ನಟರಾಜ; ಮೇರಿಲ್ಯಾಂಡ್
=======
ಬರುವ ರವಿವಾರದಿಂದ ‘ಪರಾಗ ಸ್ಪರ್ಶ’ ಮಿಂಚಂಚೆ ಬರುವುದಿಲ್ಲ! ಮನಸ್ಸಿಗೆ ಏನೋ ಕಳೆದುಕೊಂಡ ದುಃಖ ಮತ್ತು ಹಳಹಳಿ. ‘ಬ್ರೇಕ್’ ಯಾವಾಗ ಮುಗಿಯುತ್ತೆ? ಅಥವಾ ನಿಮ್ಮ ಪ್ರತಿಭೆ ಹೊಸ ರೂಪದಲ್ಲಿ ಹೊಸ ಸ್ಥಾನದಲ್ಲಿ ಯಾವಾಗ ಆರಂಭವಾಗುತ್ತದೆ? ತಿಳಿಸಿ.
- ಶ್ರೀನಿವಾಸ ಕಟ್ಟಿ; ಬೆಳಗಾವಿ
=======
ಚಲ್ತೇ ಚಲ್ತೇ ಮೆರೆ ಯೇ ಗೀತ್ ಯಾದ್ ರಖ್ನಾ ಕಭೀ ಅಲ್ವಿದಾ ನ ಕೆಹನಾ ಕಭೀ ಅಲ್ವಿದಾ ನ ಕೆಹನಾ
ರೋತೇ ಹಸ್ತೇ ಬಸ್ ಯೂಂ ಹೀ ತುಮ್ ಗುನ್ಗುನಾತೇ ರೆಹೆನಾ ಕಭೀ ಅಲ್ವಿದಾ ನ ಕೆಹನಾ...
- ಕಾರ್ತೀಕ್ ಪೈ ; ಪುತ್ತೂರು
=======
It was shocking news than breaking news. Anyways have good break and come back with more and more energy, subjects creativity etc. Please come back soon. Will be awaiting for articles.
- Sudheendra Mukkuru; Mysore
=======
ನಿಜಕ್ಕೂ shocking news. ವಿರಾಮ ವಿಶ್ರಾಂತಿ ಬೇಗ ಮುಗಿಸಿಕೊಂಡು ವಾಪಸ್ ಬರೆಯುವಂಥವರಾಗಿ. ಇದು ನನ್ನ ಆಜ್ಞೆ :-) ಖಂಡಿತ ನಿಮ್ಮ ಲೇಖನಗಳನ್ನು ಮಿಸ್ ಮಾಡುತ್ತೀನಿ (of course till you come back). ನನಗೆ ಬರೆಯುವುದಕ್ಕೆ inspiration ಕೊಟ್ಟವರು ನೀವು (which I am taking a long break from :)
Do keep in touch. Also please share any other articles or any ಕನ್ನಡ ಸಾಹಿತ್ಯ related items you find interesting. Will be following you on FB too.
- Shwetha HP ; Boston
=======
We surely miss you and your articles, but i am confident you would be back soon coz., 'old habits die hard'. Till such time kannadamma pricks you back to writing, have a great break!
with lots of regards to you and your family
- Srihari and Lalitha; Mumbai
=======
ಹತ್ತಕ್ಕೆ ಬ್ರೇಕೇ? ಹತ್ತಿಕ್ಕಲಾರಿರಾ ಬ್ರೆಕ? ಒಂದು quick breakಕೇ ಬಾದ ಬಡಿಸಿ ನಮಗೆ ಬಾಡೂಟಾ!
- ಅನಿಲ ತಾಳಿಕೋಟೆ; ನಾರ್ತ್ ಕೆರೊಲಿನಾ
=======
Why this 'braki'ng news? Will definitely miss your articles! When ( and where ) are you reappearing?
- S S; City?
=======
ಬ್ರೇಕಿಂಗ್ ನ್ಯೂಸ್ ಬೇಸರ ತರಿಸಿತು. Every good thing has an end. ಅನಿವಾರ್ಯ.
ಏಕತಾನತೆಯನ್ನು ತಪ್ಪಿಸಲು ಅಂಕಣವನ್ನು ಸ್ವಲ್ಪ ಕಾಲ ನಿಲ್ಲಿಸಿದುದು ಒಳ್ಳೆಯದು. ಒಂದಷ್ಟು ದಿನ ಮಿದುಳಿಗೆ, ಬೆರಳುಗಳಿಗೆ ವಿಶ್ರಾಂತಿಯನ್ನು ನೀಡಿ. ಹೊಸ ಶೀರ್ಷಿಕೆಯೊಡನೆ, ಹೊಸ ವಿಚಾರಗಳ ಮತ್ತೊಂದು ಅಂಕಣವನ್ನ ಬೇಗ ಆರಂಭಿಸಿ. ಸಂಪೂರ್ಣ ಭಿನ್ನ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರೆ ತಾಜಾತನ ಕಂಡೀತು. ಕಥೆ-ಕಾದಂಬರಿ ಬರೆಯಲು ಪ್ರಯತ್ನಿಸಿ.
ಒಂದು ಕುಗ್ರಾಮದಿಂದ ವಾಷಿಂಗ್ಟನ್ ತಲುಪಿದ ನಿಮ್ಮ ಅನುಭವಕ್ಕೆ ಕಾವ್ಯದ ಲೇಪವನ್ನು ಕೊಟ್ಟರೆ ಸೊಗಸಾದ ಕೃತಿ ಮೂಡೀತು.
ನಿಮ್ಮ ವಿಶ್ವಾಸಿ,
- ಡಾ. ನಾ. ಸೋಮೇಶ್ವರ ; ಬೆಂಗಳೂರು
=======
It’s sad to know your column in VK came to an end. But hope you will soon be back with your versatile style of writing through some other media. We look forward to it. All the best!
- Radhika MG; Bangalore
=======
ನಿಮ್ಮ ವಿಕ ಅಂಕಣದ ಕೊನೆಯ ಕಂತು ನಿರಾಸೆ ತಂದಿದೆ. ಬರವಣಿಗೆ ಮುಂದುವರಿಯುವಿಕೆ ಸಮಾಧಾನ ತಂದಿದೆ. ಎಲ್ಲಿ ನಾವು ನಿಮ್ಮ ಬರಹ ಕಾಣಬಹುದು ಎಂಬುದನ್ನು ದಯಮಾಡಿ ತಿಳಿಸಿ. ರವಿವಾರಕ್ಕೆ ಮೋಡ ಕವಿದಿದ್ದು, ಇದು ಚಲಿಸುವ ಮೋಡಗಳು ಎಂದು ಭಾವಿಸಿ, ಬೇಗ ಮೋಡ ಮರೆಯಾಗಲಿ ಎಂದು ಆಶಿಸಿ, ಶುಭ ಕೋರುತ್ತೇನೆ.
- Dr. T J Renuka Prasad; Professor of Geology, University of
Bangalore
=======
I started buying V.K after reading one article of PARAGASPARSHA at my office. Then never stopped buying it (only Sundays). We are regular readers of UDAYAVANI.
I like reading your articles. So please don’t stop writing. I will stop buying V.K. if you don't start writing. Best wishes.
- Laveena D'souza; Mangalore
=======
ನೀವು ಈ ಸಾರಿ ಓದುಗರಿಗೆ ಕೊಟ್ಟಿರುವುದು breaking ನ್ಯೂಸ್ ಅಲ್ಲ ಅದು shocking ನ್ಯೂಸ್. ನಮಗೆಲ್ಲಾ ಒಂದು ಮಾತೂ ಹೇಳದೆ ನೀವೇ ಹೇಗೆ ಡಿಸೈಡ್ ಮಾಡಿದಿರಿ? ಈಗ ನೀವು ಬರೀ ನೀವಾಗಿ ಉಳಿದಿಲ್ಲ. ನೀವು ಓದುಗರ ಸ್ವಂತವಾಗಿದ್ದಿರಿ. ಇತ್ತೀಚಿಗೆ VK ಚೆನ್ನಾಗಿ ಬರುತ್ತಿಲ್ಲ. ಅದನ್ನು ಓದುವುದೇ ಬೋರ್. ನಾನು VK ತೆಗೆದುಕೊಳ್ಳುತ್ತಿರುವುದೇ ನಿಮ್ಮಂತಹವರ ಕೆಲವು ಲೇಖನಗಳಿಗೆ. ಪ್ಲೀಸ್, ನಮಗಾಗಿ ನಿಲ್ಲಿಸಬೇಡಿ.
- ಶ್ರೀವಲ್ಲಿ ಮಂಜುನಾಥ್; ಬೆಂಗಳೂರು
=======
ಎಂಥ ಮೇರು ಪರ್ವತ ಆಗಿದ್ರೂ ಎಷ್ಟು ವಿನಮ್ರ ನೀವು. ಎಂಥ ಜ್ಞಾನಭಂಡಾರ ನೀವು. ಎಷ್ಟು ಚೆನ್ನಾಗಿ ನಮ್ಮಂಥವರ ತಲೆಗೆ ಅದು ಸೇರಿಕೊಳ್ಳೊ ಹಾಗೆ ಬರೆಯೋ ನಿಮಗೆ ನಾನಂತೂ ಜ್ಞಾನಪೀಠ ಯಾವತ್ತೋ ಕೊಟ್ಟಾಗಿದೆ. ಪ್ರತೀ ವಾರ ತಪ್ಪದೆ ಬರೆಯೋದು ಅಂದ್ರೆ ತಮಾಷೆ ಅಲ್ಲ. ಓಕೆ, ಸ್ವಲ್ಪ ಬ್ರೇಕ್ ತಗೊಂಡು ಮತ್ತೆ ಬನ್ನಿ with a big bash. ನನಗ್ಯಾಕೋ ನಿನ್ನೆ ಮನಸ್ಸೆಲ್ಲ heavy ಅನ್ನಿಸ್ತು.
- ಜ್ಯೋತಿ ಕಡ್ಲಾಡಿ; ಬೆಂಗಳೂರು
=======
ಸಹಿಸಲಸಾಧ್ಯ! ನಿಮ್ಮ ಅಂಕಣ ಮುಗಿದು ಹೋಗುವದು! ಸದ್ಯ ನೀವು ಸಂಪೂರ್ಣವಾಗಿ ಬರವಣಿಗೆಯನ್ನೇ ನಿಲ್ಲಿಸಲಿಲ್ಲವಲ್ಲ, ಅದೇ ನಮ್ಮ ಸೌಭಾಗ್ಯ. ಇಂಥ ಅಂಕಣ ಈ ಹಿಂದೆ ಬಂದಿರಲಿಲ್ಲ, ಇನ್ನು ಮುಂದೆ ಬರುವ ಸಾಧ್ಯತೆಯೂ ಇಲ್ಲ. ನಿಮ್ಮ ಲೇಖನಿಗೆ ಯಾವತ್ತಿಗೂ ಅದ್ಭುತ ಬಲ ಇರಲಿ!
- ಸು. ವೆಂ. ಯಕ್ಕುಂಡಿ; ಧಾರವಾಡ
=======
ನೀವು ಇನ್ನು ಮುಂದೆ ಅಂಕಣ ಬರೆಯದೆ ಇರುವುದು ತುಂಬಲಾರದ ನಷ್ಟಅಂತಾನೇ ಹೇಳಬಹುದು. ಬರೋವಾರದಿಂದ ನಿಮ್ಮ ಅಂಕಣ ಬರುವುದಿಲ್ಲ ಎಂದು ನೆನಸಿಕೊಂಡರೆ ತುಂಬಾ ಬೇಜಾರಾಗುತ್ತದೆ.
ಮತ್ತೆಲ್ಲಿ ನಿಮ್ಮ ಬರಹಗಳನ್ನು ಓದಬಹುದು ತಿಳಿಸಿ.
- ಶ್ರೀಧರ ಆರ್; ಬೆಂಗಳೂರು
=======
ಪರಾಗ ಸ್ಪರ್ಶ ನನ್ನ ನೆಚ್ಚಿನ ಅಂಕಣ. ಪ್ರತಿ ವಾರವೂ ನನಗೆ ರಸದೌತಣ ನೀಡುತ್ತಿತ್ತು. ಶ್ರೀವತ್ಸ ಜೋಶಿಯವರ ಜ್ಞಾನ ಭಂಡಾರ ಅಪಾರವಾದದ್ದು. ಇಂತಹ ಲೇಖನಗಳು ಇನ್ನಷ್ಟು ಬರಲಿ.
- Dr. S.R.Hebbal. M.D, Dharwad
=======
ಆರೆರೆ... ಇದೇನಿದು ಜೋಶಿಗಾರೂ, ನೀವು ಹೀಗಂದ್ರೆ ಹೇಗೆ...? ಆದರೆ ‘ಛೊಟಾ ಬ್ರೇಕ್’ ಅಂತೂ ಬೇಕೇಬೇಕು- to come back with full force again. ಆ ಬ್ರೇಕ್ ಸಣ್ಣದೇ ಆಗಿರಲಿ ಅಂತ ಹಾರೈಸುತ್ತೇನೆ.
Will look forward to your ‘ಅಂಕಣ/ಲೇಖನಗಳು’ again as pdf attachmenents. ನನ್ನ wishes ನಿಮ್ಮೊಡನೆ ಸದಾ. will be in touch & keep in touch sir!
- Sandhya Vasanth; Hyderabad
=======
ನಿಮ್ಮ ಬ್ರೇಕನ್ನು ಸ್ವೀಕರಿಸಿದ್ದೇನೆ. ಬದಲಾವಣೆ ಆಗಲಿ. ಆದರೆ ನಿಮ್ಮ ಅಂಕಣ ಮುಗೀತು ಎಂಬ ವಿಷಯ ತಿಳಿದು ತಲೆ ಖಾಲಿ ಆದಂತಾಗಿದೆ.
- Ganesha Adiga; Ph.D. Scholor (Agricultural Economics) BHU,
Varanasi
=======
ನಿಮ್ಮ ಬರವಣಿಗೆಯ ಸುಂದರ ಶೈಲಿಯು, ಕುಸುಮವು ದುಂಬಿಯನ್ನು ಆಕರ್ಷಿಸುವಂತೆ ಓದುಗರನ್ನು ಆಕರ್ಷಿಸುತ್ತದೆ...
- ಕೀರ್ತನ್ ಎಚ್.ಬಿ; ಕುಂದಾಪುರ
=======
We are (myself and my wife Smt Vijayalaxmi Dixit) reading your column "Paraga Sparsha" regularly. The subjects chosen are light, humorous and also thought-provoking. As you have mentioned in one of the articles, they make us think "OUT OF BOX".The topics were spreading from "VEDA's to Vartamana", Politics to "POLI TRICKS". Paraga Sparsha was making us to wait for Sunday morning Vijaya Karnataka and we were fighting to reading it first.
We hope that the break taken is very very short in letter and sprit and hope you will return with re-inforced thoughts and the forthcoming articles will be still more interesting and cover more variety of subjects. With best wishes and regards,
- Shivanand .V.Dixit & Vijayalaxmi Dixit; Belagavi
=======
ನಿನ್ನೆಯ ಪರಾಗ ಸ್ಪರ್ಶ ಓದಿದೆ. ನೀವು ಕೆಲವು ಸಮಯ ಅಂಕಣಬರಹಕ್ಕೆ ವಿಶ್ರಾಂತಿ ಕೊಡುತ್ತಿರುವುದು ತಿಳಿದು ಬೇಸರ ಆಯಿತು. ಆದರೆ ನೀವು ತಿಳಿಸಿದಂತೆ ಸ್ವಲ್ಪ ವಿರಾಮದ ನಂತರ ಮತ್ತೆ ನಿಮ್ಮ ಅಂಕಣ ನೀರಿಕ್ಷಿಸುತ್ತೇವೆ. ಈ ಬಿಡುವಿನ ಸಮಯದಲ್ಲಿ ನಿಮಗೆ ಹೆಚ್ಚಿನ ಹುರುಪು ಮತ್ತು ಮಾಹಿತಿ ದೊರೆಯಲಿ ಎಂದು ಆಶಿಸುತ್ತೇನೆ.
- ರಂಗನಾಥ ಮಿಟ್ಟಿಮನಿ; ಬೆಂಗಳೂರು
=======
ಹೀಗೆ ಅಕಸ್ಮಾತ್ ಆಗಿ ಅಂಕಣ ಬರಹ ನಿಲ್ಲಿಸಲು ಕಾರಣ ಏನು? ಬೋರ್ ಆಯ್ತಾ ಅಥವಾ ಬೇರೆ ಪತ್ರಿಕೆಗೆ ಬರೆಯುವ ಆಲೋಚನೆ ಇದೆಯಾ? ಒಂದು ರೀತಿಯಲ್ಲಿ ಒಳ್ಳೆಯದೇ. ನೀವು ಈಗ ಎಲ್ಲಾ ಪತ್ರಿಕೆಗಳಿಗೆ ಬರೆಯಬಹುದು. ನಿಮ್ಮ ಬರೆಯುವ ಹವ್ಯಾಸ ಹೀಗೆ ಮುಂದುವರೆಸಬಹುದು. ಅಲ್ವಾ? ಮಧ್ಯೆ ಮಧ್ಯೆ ಕೆಲವು ಅಂಕಣಗಳು ನಂಗೂ ಬೋರಿಂಗ್ ಅನ್ನಿಸಿತ್ತು.
- ವೀಣಾ ಅನಂತ ಭಟ್; ಬೆಂಗಳೂರು
=======
ಪ್ರತಿ ವಾರ ನಿಮ್ಮನ್ನು ನಿಮ್ಮ ಅಂಕಣದ ಮೂಲಕ ಭೇಟಿ ಅಗ್ತಿದ್ದೆ. ಆದರೆ ಈಗ ನಿಮ್ಮ ಅಂಕಣ ಮುಂದಿನ ವಾರದಿಂದ ಬರ್ತಾಇಲ್ಲ ಅನ್ನೋದನ್ನು ಜೀರ್ಣ ಮಾಡಿಕೊಳ್ಳೊಕೆ ನನಗೆ ಆಗ್ತಿಲ್ಲ, ಬೇಜಾರಾಗ್ತಿದೆ ತುಂಬ. ವಿಜಯ ಕರ್ನಾಟಕ ಪೇಪರ್ ಬೇಡಾ ಅನ್ನೊವಷ್ಟು ಕೋಪ. ಮತ್ತೆ ಎಲ್ಲಿ (ಯಾವ ಪತ್ರಿಕೇಲಿ) ಸಿಗ್ತೀರಿ ಪ್ರತಿ ವಾರ? Miss you a lot!
- ಕಮಲಾಕ್ಷಿ ಎನ್; ಹಾಸನ
=======
My mother Laxmi is a great fan of your column 'Paraaga Sparsha' in Vijaya Karnataka. She told me that all the articles were the best. The journey has been very wonderful and she will cherish it for lifetime. She wants to thank you for all the articles. She is certainly going to miss the column. Thanks and Regards,
- Siddesh T; Pune
=======
Sad to hear this. I will miss your articles. Hope u come back soon:-)
- Kavitha Kukkillaya; Virginia
=======
ನಿಮ್ಮ break news ಕೇಳಿ ತುಂಬಾ ಬೇಸರವಾಯ್ತು. We are definitely going to miss your weekly column ಪರಾಗಸ್ಪರ್ಶ. ಆದರೆ ನೀವೇ ಹೇಳಿದಂತೆ ನೀವು ಬೇರೆ ಶೀರ್ಷಿಕೆಯಡಿ ಬರೆಯುತ್ತೀರ ಎನ್ನುವ ನಂಬಿಕೆಯಿಂದ ಸಮಾಧಾನವಾಯ್ತು. Perhaps you needed a break to think out of the box of ಪರಾಗಸ್ಪರ್ಶ, ಅಲ್ಲ್ವಾ? We look forward to hear about your new mission. By the way, thank you very much. We would definitely miss your weekly audio too.
- Dr. Sudha Srinath & Family; Chitradurga
=======
I almost fell from my chair when I read the Paraga Sparsha this week - what a "Break" news! I will miss your column that I was looking forward to. All the Best,
- Subrahmanya Bhat; California
=======
Thank you so much for your 10 years of continuous contribution of "vichitranna" and "paragasparsha" to TK and VK. I will definitely miss listening to these articles. Have a good break, recuperate, re-energize and return soon to media with your creative articles!!
- Prasanna Kumar and Usha Prasanna; New Jersey
=======
Really we miss you in Sunday's Vijay Karnataka news paper. I think Vijay Karnataka will miss one of the best infotainment variety among its columns.
With your Paraaga Sparsha our face flower used to blossom. Heartiest thanks to you for entertaining us with beautiful articles since almost one decade. Request you to keep in touch with your email friends with interesting articles.
- Wadiraj Kulkarni; Mysuru
=======
ನಿಮ್ಮ ಬ್ರೇಕ್ ಬಗ್ಗೆ ತಿಳಿದು ಸ್ವಲ್ಪ ತಬ್ಬಿಬ್ಬಾದೆ, ಯಾಕೆಂದರೆ ಏನು ಬರೆಯುವುದು ತಿಳಿಯುತ್ತಿಲ್ಲ. ನೀವು ಹೇಳಿದ ಹಾಗೆ ಎಲ್ಲರಿಗು ಬ್ರೇಕ್ ಬೇಕು. ನಿಮ್ಮ ಬ್ರೇಕ್ ಸುಖಕರವಾಗಿರಲಿ. (ಬರಹದಿಂದ ಬ್ರೇಕ್ ಇಲ್ಲ, ನೀವೇ ಹೇಳಿದ ಹಾಗೆ). ನಿಮ್ಮ ಬರಹವನ್ನು ಮತ್ತೆ ಆದಷ್ಟು ಬೇಗ ಮತ್ತೆ ಓದಲು ಆಕಾಂಕ್ಷಿಸುತ್ತಿರುವ, ನಿಮ್ಮ ಅಭಿಮಾನಿ,
- ಅನಿಲ್ ಕುಮಾರ್; ಜಕಾರ್ತಾ, ಇಂಡೊನೆಷ್ಯಾ
=======
ಮೊದಲಿಗೆ ತುಂಬ ಧನ್ಯವಾದಗಳು, ನನ್ನ ಹೆಸರನ್ನು ನಿಮ್ಮ ಅಂಕಣದಲ್ಲಿ ಹೇಳಿ ನನ್ನ ಅಭಿಪ್ರಾಯ ಸಹಿತ ಪ್ರಕಟಿಸಿದ್ದಕ್ಕೆ. ಆದರೆ ನಿಮ್ಮ ಮೇಲೆ ತುಂಬಾ ಕೋಪ ಬಂದಿದೆ - ಕೊನೇ ಅಂಕಣ ಅಂತ ಹೇಳಿದ್ರಲ್ಲ, very bad. ತುಂಬ ಜನ ಅಭಿಮಾನಿಗಳಿದ್ದಾರೆ ನಿಮಗೆ, ಹಾಗಿದ್ಮೇಲೆ ಬ್ರೇಕ್ ಯಾಕೆ? Keep on writing please. ನಿಮ್ಮ ಅಂಕಣ ಇಲ್ದೇ ರವಿವಾರ ಸಪ್ಪೆ ಸಪ್ಪೆ! Please consider the break once more.
- Suma Amrutesh; Bangalore
=======
I am going to miss your column. It was indeed a very good journey we have enjoyed…
I hope that the break is shorter one like the strategic timeout breaks in IPL matches, which I feel defnitely will rejuvenate you! Thanks for the wonderful reading you provided.
- Sharath Bhargava; Bangalore
=======
ಯಾಕೆ ಅಂಕಣ ನಿಲ್ಲಿಸ್ತಿದ್ದಾರೆ ಎಂದು ಒಮ್ಮೆ ಯೋಚಿಸಿದೆ. My questions are answered and it ended with a smile. You don't miss an opportunity to make us smile :) will await the next series :) Cheers!
- Pushpa Latha; Bangalore
=======
ರಿ-ಚಾರ್ಜ್ ಆಗಿ ರಿಜುವಿನೇಟ್ ಆಗಿ ಹೊಸ ಲಹರಿಯಲ್ಲಿ ಬರುತ್ತೀರಿ ಎಂದು ಭಾವಿಸಿದ್ದೇನೆ.
- ಡಾ.ವಿಜಯಾ ಕುಲಕರ್ಣಿ; ಮೇರಿಲ್ಯಾಂಡ್
=======
ವಾರಕ್ಕೊಮ್ಮೆ ಮಾಡುತ್ತಿದ್ದ ಹಬ್ಬದ ಊಟಕ್ಕೆ ಕಲ್ಲು ಬಿತ್ತಲ್ಲ ಸ್ವಾಮಿ! ಬ್ರೇಕ್ಗೆ ಸ್ವಲ್ಪ ಬ್ರೇಕ್ ಹಾಕಿ ಬ್ರೇಕಿಂಗ್ ಟೈಮ್ನಲ್ಲಿ ಎಂಟ್ರೀ ಕೊಡಿ. ವಾರಕ್ಕೊಮ್ಮೆ ಹೊಟ್ಟೆ ತುಂಬಾ ಊಟ ಮಾಡದಷ್ಟು ದಪ್ಪ ನಾನಲ್ಲ ಕಣ್ರೀ. ಹಸಿವೆಯನ್ನು ತಾಳಲಾರೆ ಕಾಪಾಡಯ್ಯ ಅನ್ನೋ ಹಾಗೆ ಮಾಡಬೇಡಿ. ಹಬ್ಬದೂಟ ನಮ್ಮಗೆ, ನೆನೆಸಿಕೊಂಡ್ರೆ ಝುಮ್ಮಗೆ, ನೀರೂರಿ ನಾಲಿಗೆ... ಹೇಳೋ ಹಾಗೆ ಬೇಗ ಮಾಡಿ. ಅಲ್ಲೀವರೆಗೂ ಹಳೇ ಕಂತು ಮತ್ತೊಮ್ಮೆ ತಿರುವಿ ಹಾಕುತ್ತೇನೆ. ಬಾರೊ ಬಾರೋ ಪರಾಗ ಸ್ಪರ್ಶವ ತಾರೋ. ಇಂತೀ ನಿಮ್ಮ ತಲೆ ತಿನ್ನುವ ಅಭಿಮಾನಿ,
- ಸುಮಾ ಕೃಷ್ಣ; ಮೈಸೂರು
=======
ಇಷ್ಟೂ ದಿನ ನಿಮ್ಮೆಲ್ಲಾ ಲೇಖನಗಳ ಮೂಲಕ ಸಾಕಷ್ಟು ವಿಚಾರ, ವಿಷಯಗಳನ್ನ ತಿಳಿಸಿಕೊಟ್ಟಿರುತ್ತೀರ. ನನ್ನ ಮಂಡೆಗೆ ಕೆಲಸವನ್ನು ಕೆಲವೊಮ್ಮೆ ಕೊಟ್ಟಿರುತ್ತೀರ. ನೀವು ಹೇಳಿರುವಂತೆ ‘ಕಥೆಯು ಮುಗಿದೆ ಹೋದರೂ’ ಏಕೋ ಸರಿ ಅನಿಸುತ್ತಿಲ್ಲ. ಈ ಸಮಯಕ್ಕೆ ‘ಸರಿ ನಾ ಹೋಗಿ ಬರುವೆ, ಮತ್ತೆ ನೀ ಎಂದು ಬರುವೆ?’ ಪ್ರತಿಧ್ವನಿ ಚಿತ್ರದ ಯುಗಳಗೀತೆ ಸೂಕ್ತ ಅನಿಸುತ್ತದೆ. ತಮಗೆ ತುಂಬು ಹೃದಯದ ಅಭಿನಂದನೆಗಳು ಹಾಗು ಶುಭಾಶಯಗಳು.
- ಸುನೀಲ್ ಕೇಳ್ಕರ್; ಬೆಂಗಳೂರು
=======
ಇತ್ತೀಚೆಗೆ ನಿಮ್ಮ ಅಂಕಣಗಳನ್ನು ಓದಿ ನಕ್ಕು ನಲಿದು ಇನ್ನೊಂದು ವಾರ ಕಾಯಬೇಕಲ್ಲಪ್ಪಾ ಅಂತ ದಿನಗಳನ್ನ ಎಣಿಸ್ತಾ ಇದ್ದ ನನಗೆ ನೀವು ಬ್ರೇಕ್ ತೆಗೆದುಕೊಂಡು ನನ್ನ ಮೆದುಳಿನ ಊಟಕ್ಕೆ ಸೊನ್ನೆ ಹಾಕಿದ್ದೀರಿ. ಬೇಗ ಸುಧಾರಿಸಿಕೊಂಡು ನನ್ನ ಕನ್ನಡ ಓದಬೇಕೆಂಬ ದಾಹವನ್ನು ಹಿಂಗಿಸಲು ಪುನಃ ಅಂಕಣಗಳಲ್ಲಿ ಬರೆಯವಿರಿ ಎಂದುಕೊಂಡಿದ್ದೇನೆ. ನನ್ನ ನಿಮ್ಮ ಕನ್ನಡ ಗೆಳೆತನ ಚಿರವಾಗಿರಲಿ ಎಂದು ಹಾರೈಸುತ್ತೇನೆ.
- ಶಾರದಾ ಬೈಯಣ್ಣ; ಶಿಕಾಗೊ
=======
ಇದುವರೆಗೆ ಓದಿ ಓದಿ ಅಭ್ಯಾಸವಾಗಿರುವಾಗ ಹೇಗೆ ಸಂಭಾಳಿಸುತ್ತೇವೋ ನಾನರಿಯೆ. ನಿಮ್ಮ ಧ್ವನಿಮಾಧ್ಯಮ ಕೂಡಾ ನಮಗೆ ತುಂಬಾ ಒಗ್ಗಿಹೋಗಿತ್ತು. ಒಟ್ಟಿನಲ್ಲಿ ಬದಲಾವಣೆ ವಿಧಾಯಕನ ಕೈಸನ್ನೆಯಂತೆ ಆಗಿರುವಾಗ ನಾವು ಮಾಡುವುದಾದರೂ ಏನು. ಆಗಲಿ ಆಗುವುದೆಲ್ಲ ಒಳಿತಿಗೆ ಎಂದು ಒಮ್ಮೊಮ್ಮೆ ಅನಿಸುತ್ತಿದೆ. ಕಾಯುವುದೊಂದೇ ನಮಗಿರುವ ಆಯ್ಕೆ. ಸ್ವಲ್ಪ ಸುಧಾರಿಸಿಕೊಳ್ಳಿ.
- ಎಚ್.ಆರ್. ಲಕ್ಷ್ಮೀವೆಂಕಟೇಶ; ಮುಂಬೈ
=======
ಬ್ರೇಕ್ ಬೇಗ ಮುಗಿಯಲಿ ಎಂದು ಹಾರೈಸುವೆ.
- ಎಚ್. ಡುಂಡಿರಾಜ್; ಬೆಂಗಳೂರು
=======
ಪರಾಗಸ್ಪರ್ಶ ಅಂಕಣಕ್ಕೆ ವಿರಾಮ ಸಿಕ್ಕಿದರೂ ತಮ್ಮ ಸೃಜನಶೀಲತೆಗೆ ವಿರಾಮ ಇರದು ಅನ್ನುವುದು ನನ್ನ ಅನಿಸಿಕೆ. ಹೊಸದೊಂದು ಕಡೆ, ಹೊಸತನದಿಂದ, ಹೊಸ ಸ್ಪರ್ಶದ ಮೂಲಕ ತಾವು ತಮ್ಮ ಓದುಗರೊಂದಿಗೆ ಮತ್ತೆ ಸಂಪರ್ಕ ಸಾಧಿಸುತ್ತೀರೆಂಬ ನಂಬಿಕೆ ನನಗೆ. ಶುಭಸ್ಯ ಶೀಘ್ರಂ! ಶುಭಹಾರೈಕೆಗಳು!
- ಆತ್ರಾಡಿ ಸುರೇಶ ಹೆಗ್ಡೆ; ಬೆಂಗಳೂರು
=======
ನಿಮ್ಮ ಲೇಖನಗಳನ್ನು ಪ್ರತೀವಾರ ಓದುತ್ತಿದ್ದೆ. ಸುಮಾರಷ್ಟು ಬಾರಿ ಕೆಲವು ವಸ್ತುಗಳನ್ನ ನೋಡಿದಾಗ ಜೋಷಿಯವರು ಇದರ ಬಗ್ಗೆ ಹೀಗೆ ಹೇಳಿದ್ದರಲ್ಲಾ ಎಂದು ನೆನಪಾಗುತ್ತಿತ್ತು. ಇತ್ತೀಚೆಗೆ ಡೌನಟ್ ಬೇಕರಿಗೆ ಹೋದಾಗಲೂ ನೀವು ನೆನಪಾಗಿದ್ದಿರಿ. ವಿಷ್ಣು ಅವರು ಬಂಧನ ಚಿತ್ರದ ನಂತರವೂ ಹಲವು ಹಿಟ್ ಚಿತ್ರ ಕೊಟ್ಟಿದ್ದಾರೆ. ಹಾಗೆಯೇ ನೀವೂ ಬರೆಯುವುದನ್ನು ನಿಲ್ಲಿಸಬೇಡಿ, ಹೀಗೇ ಫ/ಪನ್ ನೀಡುತ್ತಿರಿ ಎಂದು ಕಳಕಳಿಯ ಕೋರಿಕೆ.
- ಪ್ರಶಸ್ತಿ. ಪಿ; ಸಾಗರ
=======
For once, we are not happy to see your mail informing about the discontinuation of ಪರಾಗ ಸ್ಪರ್ಶ. ನಮ್ಮ ವಾರನ್ನಕ್ಕೆ ಬೇರೆ ಏನಾದರೂ ವ್ಯವಸ್ಥೆ ಮಾಡಿಯೇ ಮಾಡುತ್ತೀರಿ ಎನ್ನುವ ವಿಶ್ವಾಸ ನಮಗಿದೆ. ಈ ವ್ಯವಸ್ಥೆಯನ್ನು ಕಾತರದಿಂದ ಕಾಯುತ್ತೇವೆ. ವಿಶ್ವಾಸಪೂರ್ವಕವಾಗಿ,
- ವಾಸುದೇವ ಅಡಿಗ ; ಬೆಂಗಳೂರು
=======
So sad to hear. I was a regular reader of your column. Hoping to read more from you.
- Krishna Raj Bhat; Maryland USA
=======
ಹತ್ತು ವರ್ಷಗಳಿಂದ ಮನರಂಜನೆ ಮನೋವಿಕಾಸ ಎರಡಕ್ಕೂ ನೆರವಾದ ನೀವು ಹೀಗೆ ಮಾಡಬಹುದೇ? ‘ಕಭಿ ಅಲ್ವಿದ ನಾ ಕೆಹೆನಾ’
- ಪ್ರಕಾಶ್ ರಾಜಾರಾವ್; ನ್ಯೂಜಿಲ್ಯಾಂಡ್
=======
ಶಾಕಿಂಗ್ ನ್ಯೂಸ್ ಕೊಟ್ರಿ! ಜಾಸ್ತಿದಿನ ವಿರಾಮ ತೆಗೆದುಕೊಳ್ಳದೆ ಮತ್ತೆ ಬೇಗ ಬನ್ನಿ. ಹಾಳಾದ ಮನಸು ನಿಮ್ಮ ಅಂಕಣವನ್ನ ಹುಡುಕುತ್ತಿರುತ್ತದೆ.
- ಮಂಜುನಾಥ ಮರವಂತೆ; ಹಾವೇರಿ
=======
Retired hurt? match fixing? spot fixing? or change in captaincy at VK?... reason... not clear, anyhow nice articles. hope you continue to write these kind of articles in your blog.
- Rangaraj; Bangalore
=======
You could have waited till December 21st. ಹೇಗಿದ್ರೂ ಪ್ರಳಯ ಆಗುತ್ತೆ ಅಲ್ವಾ? :-)
- Raghavendra Upadhyaya; Mangalore
=======
ಬರವಣಿಗೆಯಲ್ಲಿ ಏಕತಾನತೆ ಇರಬಾರದು, ನಿಮ್ಮ ಬರವಣಿಗೆಯಲ್ಲಿ ವೈವಿಧ್ಯ ಇದೆ, ಬರೆಯುವ ಕಲೆ ನಿಮಗೆ ಸಿದ್ಧಿಸಿದೆ. ಬರವಣಿಗೆ ಮುಂದುವರಿಸಿ, ಅಂದಹಾಗೆ ಅದು ನಮಗೂ ಓದಲು ಸಿಗುವಂತಿರಲಿ. ನಿಮಗೆ ಶುಭವಾಗಲಿ. ನಮಸ್ಕಾರ.
- ಶಂಕರ ಭಟ್; ವೇಣೂರು
=======
Paraga Sparsha was a very popular column. We will certainly miss it. But I am sure this will only lead you to do even more interesting things. I wish you all the best in your future ventures.
- Madhukanth Krishnamurthy; California
=======
ಇದು ಕೆಲವು ದಿನಗಳ ವಿದಾಯ ಅಂದುಕೊಂಡಿದ್ದೇನೆ. ಮತ್ತೆ ನಿಮ್ಮ ಬರವಣಿಗೆ ಬೇಗ ಓದಲು ಸಿಗುವಂತಾಗಲಿ.
- ಅನಿತಾ ನರೇಷ್ ಮಂಚಿ; ಮಂಗಳೂರು
=======
ಎಲ್ಲಾದರೂ ಇರಿ, ಎಂತಾದರೂ ಇರಿ... ಎಂದೆಂದಿಗೂ ಬರವಣಿಗೆ ನಮಗೆ ಸಿಗುವಂತಿರಲಿ. ಶುಭ ಹಾರೈಕೆಗಳು. ಹೊಸತನದೊಂದಿಗೆ ಮತ್ತೆ ಬರುತ್ತೀರೆಂಬ ವಿಶ್ವಾಸ ನಮಗಿದೆ.
- ಗುರುಗಣೇಶ ಹೆಗಡೆ ; ಬೆಂಗಳೂರು
=======
Joshi sir, really feeling sad & bad. it is shocking news sir :-( :-(
- Akshatha AKS; Bangalore
=======
ಎಲ್ಲ ಕೆಲಸ ಕಾರ್ಯಗಳ ನಡುವೆ ಪ್ರತೀವಾರ ನಿಮ್ಮ ಅಂಕಣ ಓದುವುದು, ಈಗೊಂದು ವರ್ಷದಿಂದ ಲೇಖನದ ಜೊತೆಗೆ ನಿಮ್ಮ ಓದುಗಮಿತ್ರರ ವಿವಿಧ ಕಮೆಂಟುಗಳನ್ನು ಓದುವುದು ನನಗೊಂದು ಚಟ(ಹವ್ಯಾಸ?)ವೇ ಆಗಿಬಿಟ್ಟಿತ್ತು. ಇಷ್ಟೆಲ್ಲ ವೈವಿಧ್ಯಮಯ ಬರೆಹಗಳನ್ನು ನೀಡಿದ ನಿಮಗೆ ‘ವಿರಾಮ’ದ ಅವಶ್ಯಕತೆ ಇದೆಯೆ? ಕಾರ್ಯ ಬದಲಾವಣೆಯೇ ವಿಶ್ರಾಂತಿ ಎನ್ನುವ ಗಾಂಧೀಜಿಯರ ಮಾತನ್ನು ನೀವು ಕೇಳಿಲ್ಲವೇ?
ಕೇವಲ ಮಿಂಚಂಚೆ ಕಳುಹಿಸುವವರಷ್ಟೇ ಅಲ್ಲ, ಅವರೆಲ್ಲರಾಚೆಗೂ ಅಂದರೆ ನಿಮಗೆ ಪತ್ರ ಬರೆಯದ, ಇ-ಮೇಲ್ ಮಾಡದ ಅಭಿಮಾನಿಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿದಾರೆ ಎಂದು ನಾನು ನಿಮಗೆ ಮೊದಲೇ ತಿಳಿಸಿದ್ದೆ. ಬಹುಶಃ ಅವರಿಗೆಲ್ಲ ಅವಕಾಶ ಸಿಕ್ಕರೆ (ವಿಕ ಸಂಪಾದಕರು ನಿಮ್ಮ ’ಪತಾ’ ತಿಳಿಸಿಬಿಟ್ಟರೆ...) ನಿಮ್ಮನ್ನು ಅಭಿಮಾನಿಗಳ ಆಕ್ರೋಶದಿಂದ (ಪ್ರೀತಿಯಿಂದ) ಆ ದೇವರೇ ಕಾಪಾಡಬೇಕು! ಎನೇ ಆದ್ರೂ ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲ ಖಂಡಿತ ಇದೆ. ಬಲು ಬೇಗ ಲೇಖನ ಸರಮಾಲೆಯನ್ನು ಮತ್ತೆ ಪ್ರಾರಂಭಿಸುತ್ತೀರಿ ಎಂಬ ಆಶಯದೊಂದಿಗೆ,
- ಶಾರದಾ ಭಟ್; ಕಾರವಾರ
=======
ನಿಮ್ಮ ಅಂಕಣದ ಅಭಿಮಾನಿಗಳಲ್ಲಿ ನಾನೂ ಒಬ್ಬ. ಪನ್ ಭರಿತ ಫನ್ಗಳನ್ನೂ ಮುಂದೆಯೂ ನಿರೀಕ್ಷಿಸುತ್ತೇನೆ. ಹತ್ತು ವರ್ಷಗಳ ನಿರಂತರ ಕನ್ನಡ ಸೇವೆಗೆ ಅಭಿನಂದನೆಗಳು, ಅಭಿವಂದನೆಗಳು!
- ಕುಮಾರಸ್ವಾಮಿ ತೆಕ್ಕುಂಜ; ಬೆಂಗಳೂರು
=======
That's Bad! Hope the break will be very short! If I say anything about my USA life, my Sister and Brother @ Blore, Mysore used to say.' Oh! We read that in Joshi's column'. Sure, even they will miss ur articles :(
- Vanitha Vinod; Kuwait
=======
ಕೆಮ್ಮಂಗಿಲ್ಲ ಅಂತ ಹೇಳಿದ್ರೂ ಯಾಕೋ ಸ್ವಲ್ಪ ಕೆಮ್ಮು ಬಂತು ಸರ್.
- ಅನಂತ ನಾರಾಯಣ; ಹೊಸದಿಲ್ಲಿ
=======
I cannot like or comment. When vichitranna was stopped, immediately found you on paraagasparsha. I am going to miss this column for sure!!
- Meena Bharadwaj; Dallas Texas
=======
sir... this is really a shocking news... can u plz change ur decision for the reader's sake... coz i just can’t imagine sunday's VK without paragasparsha... feeling very bad and very very sad... :(
- Varalakshmi Venugopal ; Bangalore
=======
ಈ ಥರಾ ನಿಮ್ಮ ಅಭಿಮಾನಿಗಳಿಗೆ ಕೈ ಕೊಡಬೇಡಿ ಗುರೂ! ವಿ.ಕೆ.ಯಲ್ಲಿ ಅಲ್ಲದಿದ್ರೂ ನಿಮ್ಮ ಬ್ಲಾಗ್ನಲ್ಲಿ ಪರಾಗಸ್ಪರ್ಶಿಸೋದನ್ನು ಮುಂದುವರೆಸಬಹುದಲ್ಲ!
- ಅನುರಾಧಾ ಢಾವಳೆ; ಹೈದರಾಬಾದ್
=======
ಫನ್ನು ಪನ್ನು ಮತ್ತು ವಿಟ್ ಭರಿತ ನಿಮ್ಮ ಲೇಖನಗಳು ಮನಸಿಗೆ ಮುದ ಕೊಟ್ಟವು, ಇನ್ನು ಕೆಲವು ಉಪಯುಕ್ತ ಮಾಹಿತಿಯನ್ನೊದಗಿಸಿದವು, ಬಹಳಷ್ಟು ಲೇಖನಗಳು ನಮ್ಮ ಮೆದುಳನ್ನೂ ಪ್ರಯೋಗಕ್ಕೆ ಹಚ್ಚಿದವು. ಧನ್ಯವಾದಗಳು ಜೋಶಿ ಸರ್. ಬ್ರೇಕ್ನ ನಂತರ ಇನ್ನೊಂದಿಷ್ಟು, ಮತ್ತೊಂದಿಷ್ಟು ಮಗದೊಂದಿಷ್ಟು ಬರಹಗಳೊಂದಿಗೆ ವಾಪಾಸಾಗಿ :))
- ಪ್ರತಿಮಾ ಶಾನಭಾಗ; ಬೆಂಗಳೂರು
=======
We used to buy VK only for ಪರಾಗ ಸ್ಪರ್ಶ. Now that has become ಪರಾಗ ಭೂಸ್ಪರ್ಶ. We are thankful to u for leaving VK with hope of entering any 'GOOD CIRCULATION KANNADA DAILY' Hoping for the same. Whether it is Tea break or Lunch break or short break such as Strategic time out, all the best!
- Ramakrishna Hosabettu; Mangalore
=======
I hope, you will start new innings, ಏನಾದ್ರೂ ಮಾಡುತಿರು ತಮ್ಮಾ!
- Chandu Shekar; Bangalore
=======
ನನಗೆ ಇದೇಕೋ ಅಲ್ಪ ವಿರಾಮ (,) ಅಲ್ಲ, ಪೂರ್ಣ ವಿರಾಮ (.) ಅನಿಸ್ತಿದೆ?
- ಯೋಗಾನಂದ ಪಾಟೀಲ; ಧಾರವಾಡ
=======
ಪರಾಗಸ್ಪರ್ಶ ಆತ್ಮೀಯವಾಗಿತ್ತು, ಬರವಣಿಗೆ ಮನಸಿನೊಳಗಿಳಿದು ಮನನ ಮಾಡಲು ಪ್ರಯಾಸವಾಗಲಿ, ಆಯಾಸವಾಗಲಿ ಆಗೋದಿಲ್ಲ. ಆತ್ಮೀಯರೊಬ್ಬರು ಎದುರಿದ್ದು ಕುಶಲೋಪರಿ ವಿಚಾರಿಸಿದಂತೆ ನಡುನಡುವೆ ಗಂಭೀರತೆ ಚಿಂತನೆಗಿಳಿಸಿದರೆ ಕೆಲವೊಮ್ಮೆ ಮಾರ್ಮಿಕತೆ ಹಾಸುಹೊಕ್ಕ ಹಾಸ್ಯ ಲಾಸ್ಯವಾಗಿ ನಗುವಾಗುತ್ತದೆ! ಹೀಗೆ ಓದುಗ ಮುದದಿಂದ ಪರಾಗಸ್ಪರ್ಶದ ಗಗನವಿಹಾರದಲ್ಲಿ ಮುಂದುವರಿಯುತ್ತಿರುವಾಗಲೇ ಜೋಶಿ ಸಾರ್ ಕೊಟ್ಟ ಈ ಬ್ರೇಕ್ ಬಲವಂತದ ಭೂಸ್ಪರ್ಶ ಆದಂತಾಗಿದೆ, ಮನ ಸ್ವಲ್ಪ ಅಲ್ಲಾಡಿದಂತಾಗಿದೆ. ನಾನು ಸುಮಾರು ಸಮಯದಿಂದ ವಿ.ಕ ಪತ್ರಿಕೆಯಲ್ಲಿ ನಿಮ್ಮ ಸ್ಪರ್ಶದ ಅನುಭವವನ್ನು ಹೊಂದುತ್ತಿದ್ದೆ.ಆದರೆ ನನ್ನ ಅಭಿಪ್ರಾಯಗಳನ್ನು ನಿಮ್ಮೊಂದಿಗೆಹಂಚಿಕೊಳ್ಳಲಾಗುತ್ತಿರಲಿಲ್ಲ, ಆದರೆ ಇತ್ತೀಚೆಗೆ ಈ ಫೇಸ್ಬುಕ್ ಸ್ನೇಹ ನಿಮ್ಮ ಅಂಕಣದ ಅಂಗಳದಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವಂತೆ ಮಾಡುತ್ತಿತ್ತು.
ಹೌದು ನಿಮ್ಮ ವಿಚಾರವಸ್ತುಗಳು ಅಂಕಣದ ಹೆಸರಿನಂತೆಯೇ ಪ್ರತಿ ಓದುಗರ ಮನಸ್ಸನ್ನು ಸ್ಪರ್ಶಿಸಿ, ಹಿತ ನೀಡಿ, ಚಿಂತನಮಂಥನ ನಡೆಸಿ, ಓಹ್ ಈ ವಿಚಾರಗಳು ನಿಜವಾಗಿಯೂ ಅಮೂಲ್ಯ ಅರ್ಥಗರ್ಭಿತವಾಗಿವೆ ಅನ್ನಿಸುತ್ತಿತ್ತು. ನಮ್ಮ ನೋಟ ಬದಲಿಸುವ, ನಿಮ್ಮ ಮಾತುಗಳಲ್ಲಿ ಸಾಹಿತ್ಯದ ಎಲ್ಲಾ ರಸಗಳು ತುಂಬಿರುವುದರಿಂದ ನನಗೆ ಬಹಳ ಆತ್ಮೀಯವಾಗಿತ್ತು. ಕಾಗೆಯ ಚಿತ್ರಣವೇ ಇರಬಹುದು, ಡಬ್ಬಿ ಇಂಗೇ ಇರಬಹುದು... ನಿಮ್ಮ way of presentation is very beautiful. ಅದು ಒಬ್ಬ ತಾಯಿ ತನ್ನ ಪುಟ್ಟ ಮಗುವಿಗೆ ಅರೆದು ಕೊಡುವ ಆಹಾರದಂತಿರುತ್ತೆ, ಅಜೀರ್ಣ, ಅಲರ್ಜಿ ಆಗುವುದೇ ಇಲ್ಲ. ಹೀಗೆ ಸರಾಗವಾಗಿ ಸಾಗುತ್ತಿದ್ದಾಗ... ಅನಿರೀಕ್ಷಿತ ಒಂದು ಬ್ರೇಕ್!! ಅಲ್ಲಾಡಿದ ಓದುಗ ಸಾವರಿಸಿಕೊಳ್ಳಬೇಕಿದೆ,
ಯಾವುದೋ ಅಂಕುಡೊಂಕು ಎದುರಾಗಿರಬೇಕು. ಸರಿ... ನಿಮ್ಮ ನಿರ್ಧಾರ ಸರಿಯಾದದ್ದೇ(?) ಆಗಿರಬೇಕು.
ಇನ್ನು ಈ ಮುಖಪುಸ್ತಕದಲ್ಲಿ ಭೇಟಿಯಾಗ್ತ ಇರ್ತಿರಲ್ಲ?? ಹಾಗೇ ನಿಮ್ಮ ಬರಹ ಬರುತ್ತಾ ಇರಲಿ, ನನ್ನಂತಹವರಿಗೆ ಸದಾ ಪ್ರೇರಣೆ ನೀಡುವ ನಿಮ್ಮ ಹೆಮ್ಮೆಯ ಬರವಣಿಗೆ, ಲೇಖನಗಳು ಸದಾ ಇರಲೀಂತ ಹಾರೈಸುತ್ತೇನೆ. ಶುಭವಾಗಲಿ.
- ಜಯ ಎಸ್; ಕಾರ್ಕಳ
=======
ನಿನ್ನೆ ಈ ಲೇಖನ ಓದಿದಾಗಿನಿಂದ ಬೇಸರವಾಗಿದೆ! ಹಾಗಾದ್ರೆ ವಾರಕ್ಕೊಮ್ಮೆ ನಡೆಯುತ್ತಿದ್ದ ಚರ್ಚೆಗಳು ಇನ್ನಿಲ್ಲ! ಏನಾದರೂ ಪರ್ಯಾಯ ವ್ಯವಸ್ಥೆ ಮಾಡಿ. ಪರಾಗ ಸ್ಪರ್ಶ ಪತ್ರಿಕೆಯಲ್ಲಿ ಬರದಿದ್ದರೂ ನಿಮ್ಮ ವಾಲ್ ಮೇಲಾದರೂ ಇರಲಿ. ವಾರಕ್ಕೊಮ್ಮೆ ಭೇಟಿಯಾಗಬಹುದು. ಉತ್ತರ ಕೊಡಿ ಸರ್. ಹೌದು, ನಿಮಗೆ ಅಲ್ಪವಿರಾಮವಾದರೂ ಏಕೆ ಬೇಕಿದೆ? ನನಗನ್ನಿಸಿದಂತೆ ಒಬ್ಬ ಅಂಕಣಕಾರರು ನಿಮ್ಮಷ್ಟು ಪ್ರೊಆಕ್ಟಿವ್ ಆಗಿರೋರನ್ನ ನಾನು ನೋಡಿಲ್ಲ. ಹಾಗೂ ಪ್ರತಿಯೊಂದು ಪ್ರತಿಕ್ರಿಯೆಗೂ ವೈಯಕ್ತಿಕ ಅಟೆನ್ಷನ್ ಕೊಡುವ ನಿಮ್ಮ ತಾಳ್ಮೆ ನಿಜಕ್ಕೂ ಖುಷಿ ಕೊಡುತ್ತಿದ್ದವು. ನಮಗೆ ಓದುವ ಉಮೇದು ಹೆಚ್ಚು ಮಾಡಿದ್ದವು. ಪರ್ಯಾಯಗಳು ಸಿಗಬಲ್ಲವು ಆದರೆ ಈ ಗಟ್ಟಿ ಸಂಬಂಧ ಮತ್ತೆ ಕುದುರಬಲ್ಲದೆ ಎನ್ನುವ ಪ್ರಶ್ನೆ ಕಾಡುತ್ತದೆ. ಹಾಗಾಗದಿರಲಿ. ನಿಮ್ಮ ನಮ್ಮ ಅ-ಕ್ಷರ ಸಂಬಂಧ ಕ್ಷರವಾಗದಿರಲಿ.
- ಮುರಳೀಕೃಷ್ಣ ಮದ್ದಿಕೇರಿ; ಬಳ್ಳಾರಿ
=======
For the last few months, I was getting VK only for your sake. Now I am going to stop it. ನಿಮ್ಮ ಬರಹವಿಲ್ಲದ VK ನೀರಸ.
- Narasihma Raghavan; Bangalore
=======
ಪರಾಗಸ್ಪರ್ಶ ಇಲ್ಲದೇಇದ್ರೆ ಹೇಗೆ? ಮತ್ತೊಮ್ಮೆ ಯೋಚಿಸಿ!
- ಪುಷ್ಪಲತಾ ಮೂಡಲಮನೆ; ಶಿವಮೊಗ್ಗ
=======
ನಿಮ್ಮ ಅಂಕಣಗಳಿಗೆ ಬ್ರೇಕ್ ಹಾಕುತ್ತಿರುವುದು ನಮಗೆಲ್ಲಾ ಬ್ರೇಕಿಂಗ್ ಅಲ್ಲ ಶಾಕಿಂಗ್ ನ್ಯೂಸ್ ಆಯಿತು:-(:-( ಮತ್ತೆ ನಿಮ್ಮ ಲೇಖನಗಳಿಗೆ ಕಾತರದಿಂದ ಕಾಯುತ್ತಿರುತ್ತೇನೆ.
- ಗಣೇಶ ಕೊಪ್ಪಲತೋಟ; ದಾವಣಗೆರೆ
=======
good dicision. but v mis ur articles. hope u come back in some new way..))
- Venkatramana Hegde; Bangalore
=======
ಬ್ರೇಕ್ನ ನಂತರ, ಮತ್ತಷ್ಟು ಹೊಸ ಹೊಸ ವಿಷಯಗಳೊಂದಿಗೆ ವಾಪಾಸ್ ಬಂದು ಓದುಗರೆಲ್ಲರಿಗೆ fun ಮತ್ತು pun ನ ಪರಾಗಸ್ಪರ್ಶ ಮಾಡ್ತಿರ ಎಂಬಾಸೆಯೊಂದಿಗೆ ಕಾಯ್ತಿವಿ. ಶುಭ ವಿರಾಮ!!
- ಶಿವಮೂರ್ತಿ; ಗುರ್ಗಾಂವ್ ಹರ್ಯಾಣ
=======
ಬ್ರೇಕ್ ಬೇಡ!
- ಅಶೋಕಕುಮಾರ್ ಅಂಬಲಪಾಡಿ; ಉಡುಪಿ
=======
ಒಳ್ಳೆಯದಾಗಲಿ ಜೋಶಿಯವರೇ.
- ಹರ್ಷವರ್ಧನ ನಾಗರಾಜಸ್ವಾಮಿ; ಕನೆಕ್ಟಿಕಟ್
=======
Even though you are calling it a day on this column, I am sure you will come back with something else - after a short break! Thanks and Good Luck.
- Arun Murthy; Chicago
=======
ಅಂಕಣ ನಿಲ್ಲಿಸಿಬಿಡುವ ಸಮಾಚಾರ ಶೋಚನೀಯ! ವಾರವಾರ ಅಲ್ಲದಿದ್ದರೆ ತಿಂಗಳಿಗೊಮ್ಮೆಯಾದರೂ ಬರೆಯಬಹುದಲ್ಲ?
- ಕೆ.ಜಿ.ವಿ. ಕೃಷ್ಣ; ಮೇರಿಲ್ಯಾಂಡ್
=======
heart break ಮಾಡಿದ್ರಲ್ಲ sir...!! please second innings ಬೇಗ ಶುರು ಮಾಡಿ.... i'm waiting.....
- Ajay Rao; Ujire
=======
ಜೋಶಿಜೀ, ಅರಗಿಸಿಕೊಳ್ಳೊಕ್ಕೆ ಸ್ವಲ್ಪ ಕಷ್ಟ ಆಗ್ತಿದೆ. ಪರಾಗಸ್ಪರ್ಶವಿಲ್ಲದ ವಿರಾಗ ಪರ್ವ ಶುರುವಾಯ್ತೇ ಇನ್ನು ಪ್ರತಿ ಭಾನುವಾರ!?
- ಪವಮಾನ ಹರಿಹರಕಟ್ಟೆ; ಬೆಂಗಳೂರು
=======
ಜೋಶಿ ಸಾರ್, ನಿಮ್ಮ ವಿಭಿನ್ನ ಶೈಲಿಯ ಅಂಕಣ ಬರಹಗಳು ನನ್ನಂತೆ ಅನೇಕರನ್ನು ಸೆಳೆದಿರುವುದು ನಿಜ. ಮುಂದೆಯೂ ನಿಮ್ಮ ಬತ್ತಳಿಕೆಯಿಂದ ಬರುವ ಹೊಸ ರೀತಿಯ ಬರಹಗಳಿಗೆ ಎದುರುನೋಡುತ್ತಿದ್ದೇವೆ.
- ಮಂಜುಳಾದೇವಿ; ಶಿವಮೊಗ್ಗ
=======
ಪ್ರತಿ ವಾರ ತಪ್ಪದೇ ನಿಮ್ಮ ಕಾಲಂ ಓದುಗಳು ನಾನು. ಇನ್ನು ನಿಮ್ಮ ಬರಹ ಓದಬೇಕೆನಿಸಿದಾಗೆಲ್ಲ ವಿಚಿತ್ರಾನ್ನ ಪುಸ್ತಕವೇ ಗತಿನಾ? ಆದಷ್ಟು ಬೇಗ ನೀವು ಹೊಸ ಸರಕುಗಳನ್ನು ಹಿಡಕೊಂಡು ಬಂದರೆ ನಾನು ಖುಷ್...
- ಶಮಾ ನಂದಿಬೆಟ್ಟ; ಬೆಂಗಳೂರು
=======
I have to unsubscribe VK. Because after V Bhat's exit from VK, I continued it just because of ur articles. Sunday is no longer interesting.
- Suhas Naragund; Dharwad
=======
ಪರಾಗಸ್ಪರ್ಶಕ್ಕೆ ಬ್ರೇಕ್ ಕೊಟ್ಟು ನಮ್ಮನ್ನೆಲ್ಲ ನಿರಾಸೆಗೆ ತಳ್ಳಿದ್ದಿರ. ಈ ಬ್ರೇಕ್ ನಿಮಗೆ ಇನ್ನೂ ಹೆಚ್ಚಿನ ಉತ್ಸಾಹವನ್ನೂ, ಸ್ಫೂರ್ತಿಯನ್ನೂ ತುಂಬಲಿ.
- ಅನಸೂಯಾ ಹೊಳ್ಳ; ಬೆಂಗಳೂರು
=======
ಏನಿದು surprise ಸಮಾಚಾರ!! I am sure we all will miss your regular prompt fun-filled articles. Please do let us know as soon as you restart your new adventure. Good Luck and Regards!
- Asha Gurudutt; Chicago
=======
ನಮಸ್ತೇ ಜೋಶಿಯವರಿಗೆ. ಪರಾಗಸ್ಪರ್ಶಕ್ಕೆ ಅಂತಿಮ ಸ್ಪರ್ಶ! Nice concluding lines. really miss the simple style pun & fun! ನನ್ನ ಅಮ್ಮ ನಿಮ್ಮ ಅಂಕಣ ಇನ್ನು ಬರುವುದಿಲ್ಲವಲ್ಲ ಅಂತ ಬೇಸರ ಮಾಡಿಕೊಂಡಿದ್ದರೆ. ಪರಾಗಸ್ಪರ್ಶದ ಅಭಿಮಾನಿ ಅವರು. ಪ್ರತಿ ವಾರ ನಮ್ಮೆಲರಿಗಿಂತ ಮುಂಚಿತವಾಗಿ ಪೇಪರ್ ಒದಿ ನಮಗೆ ನೀವು ಬರೆದ ವಿಷಯ ಅವರೇ ತಿಳಿಸುತಿದ್ದರು. ನಮ್ಮನೇಲಿ ಇದ್ದಾಗ. ಹಾಗೆ ನಿನ್ನೆ ನಮ್ಮ ಮನೇಲಿ ಅವರೇ ಮೊದಲು ಓದಿದ್ದು ನಿಮ್ಮ ಅಂಕಣವನ್ನು. “ನೋಡಿ, ಇನ್ನು ಶ್ರೀವತ್ಸ ಜೋಶಿಯವರ ಅಂಕಣ ಬರೋದಿಲ್ಲವಂತೆ. ಅಯ್ಯೋ.. ಏನು ಚೆನ್ನಾಗಿ ಬರೀತಿದ್ರು...” ಅಂತ ನಮಗೆಲ್ಲ ಹೇಳಿದರು.
ಪರಾಗಸ್ಪರ್ಶಕ್ಕೆ ನಮ್ಮ ವಂದನೆ. ನಿಮ್ಮ ಇನ್ನಷ್ಟು ಬರಹಗಳ ನಿರೀಕ್ಷೆ ಸದಾ ಇದೆ. ಎಲ್ಲೆಲ್ಲಿ ಏನು ನೋಡಿದರೂ ನೀವು ಮತ್ತು ನಿಮ್ಮ ಬರಹವೇ ಥಟ್ಟನೆ ನೆನಪಾಗುತ್ತೆ. You have covered a lot of topics. Thank you very much. ಪದಗಳೇ ಸಾಲದು. ಮತ್ತೆ ಬರೀತ ಇರಿ. ಶುಭಾಶಯಗಳು.
-ಮಮತಾ ದೇವ; ಸುಳ್ಯ
=======
Namaste Sir! Break news is breaking as a shocking news. Your words were making all the readers happy (including me). Sunday mornings were wonderful with thoughtful write ups. Wish and expect many more exploding articles in future. All the BEST.
- Bharati Chimmad; Dharwad
=======
ಸರ್ ನಮಸ್ಕಾರ. ಮೊನ್ನೆಯ ವಿ.ಕ.ದಲ್ಲಿ ನೀವು ಅಂಕಣಕ್ಕೆ ತಾತ್ಕಾಲಿಕ ವಿದಾಯ ಹೇಳಿರೋದು ಓದಿ ನೋವಾಗಿದೆ. ಇಷ್ಟು ದಿನ ನಮ್ಮನ್ನೆಲ್ಲ ಚಿಂತನೆಗೆ ಹಚ್ಚಿದ, ನಮಗೆ ಸಂತಸ ತಂದ ಮಧುರ ಲೇಖನಗಳು ನಮಗೆ ಇನ್ಮುಂದೆ ಯಾರು ಕೊಡ್ತಾರೆ ಸರ್? ನಿಮಗೆ ಬರೆದು ಬರೆದು ಬೋರ್ ಅಗಿರಬಹುದು ಸರ್. ಆದ್ರೆ ನಮ್ಗೆ ಓದಿಓದಿ ಸುಸ್ತಾಗಿಲ್ವಲ್ಲ? ನಿಮ್ಮ ಲೇಖನಗಳು ಅದೆಷ್ಟು ಚಂದ, ಬರಹಗಳ ಕುಶಲತೆ, ಶಬ್ದಗಳ ಸಿಂಗಾರ, ಹೂರಣದ ವೈಯಾರ - ಆಹಾ ಮರೆಯಲಾದೀತೇ? ಏನಾಗಲಿ ಸರ್, ನಿಮಗೆ ಯಾವಾಗಲೂ ಶುಭವಾಗಲಿ ಅಂತ ಹಾರೈಸುತ್ತೇವೆ. ನಿಮ್ಮ ಲೇಖನಗಳ ಪುಸ್ತಕಗಳಿಂದ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಇರ್ತೀರಿ ನೀವು.
- ರಾಜಕುಮಾರ್ ಬಾದಾಮಿ; ಹೊಸಪೇಟೆ
=======
ನೀವು ಅಂಕಣ ನಿಲ್ಲಿಸಿದ್ದು ಬೇಸರವಾಯ್ತು. ಒಂದು ಸಂಪೂರ್ಣ ಹೊಸ ಶೈಲಿ ಇತ್ತು ನಿಮ್ಮ ಅಂಕಣದಲ್ಲಿ. ಜನಪ್ರಿಯವೂ ಆಗಿತ್ತು. ನಿಮಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ಬ್ರೇಕ್ಕೇ ಬಾದ್ ಬೇಗ ಬನ್ನಿ!
- ಜಯದೇವಪ್ರಸಾದ್ ಮೊಳೆಯಾರ್; ಉಡುಪಿ
=======
Why sudden break sir? of course break is very essential to energize ourself. VK will miss you for sure. Hope to be in touch with you thru' our facebook platform.
- Prashanth Adur; Hubli
=======
ನಾನು ಪರಾಗಸ್ಪರ್ಶ ಅಂಕಣದ ಖಾಯಂ ಓದುಗ. ಮೂರು ವರ್ಷಗಳಿಂದ ಅಂಕಣದ ಪೇಪರ್ಕ್ಲಿಪ್ಪಿಂಗ್ಸ್ ಸಂಗ್ರಹಿಸಿ ಇಟ್ಟುಕೊಂಡಿದ್ದೇನೆ. ಈಗ ನೀವು ಅಂಕಣ ನಿಲ್ಲಿಸಿದ್ದು ಕೇಳಿ ಏನೋ ಕಳೆದುಕೊಂಡ ಅನುಭವ ಆಗ್ತಿದೆ.
- ಜಗದೀಶ ಶೆಟ್ಟಿ; ಹಾಸನ
=======
hey! read yo article last sunday!! felt bad. will surely miss your coloumn.
- Shalmali Bapat; Sagara
=======
ಸರ್ ನಮಸ್ತೇ. will sure miss ur column. it was a surprise shock. Informative writings ಮೂಲಕ ನಗು ಕೂಡ ಹರಿಸಿದ ಖ್ಯಾತಿ ನಿಮ್ಮ ಬರಹಗಳದ್ದು. or viceversa. [:)] VKಯಲ್ಲಿ ಮಿಸ್ಸಾದ್ರೂ ಇಲ್ಲಿ ಮಿಸ್ಸ್ ಆಗ್ಬೇಡಿ ಪ್ಲೀಸ್. ನಿಮ್ಮ ಬರೆಯುವಿಕೆ, ಅದನ್ನು ನಾವು ಓದುವಿಕೆ, ನಿರಂತರವಾಗಿರಲಿ. ಬ್ರೇಕ್ ಬೇಡ!
- ನವೀನ್ ಸಾಗರ್; ಬೆಂಗಳೂರು
=======
ನಿಮ್ಮ ಬ್ರೇಕ್ ನ್ಯೂಸ್ ಓದಿ ಬಹಳ ಶಾಕ್ ಆಯ್ತು. one thing i wanted to convey that we never felt bored any day by any article of yours. we used to enjoy. ಒಟ್ಟಾರೆಯಾಗಿ ಹೇಳಬೇಕೆಂದ್ರೆ ನಿಮ್ಮ ಲೇಖನಗಳ ಬಗ್ಗೆ ಕೆಮ್ಮಂಗೇ ಇಲ್ಲ ಬಿಡಿ.
- ಲಲಿತಾ ರವಿಶಂಕರ್; ಬೆಂಗಳೂರು
=======
ನನ್ನ ಹೆಸರು ಮಾನಸ. ಬೆಂಗಳೂರಿನವಳು. ನಾನು ಈಗಷ್ಟೆ ಹತ್ತನೇ ತರಗತಿ ಮುಗಿಸಿದೆ. ನನ್ನ ಅಮ್ಮನಿಗೆ ನೀವು ಫೇವರಿಟ್. ಪ್ರತಿ ಭಾನುವಾರ ಪತ್ರಿಕೆ ಬಂದ ತಕ್ಷಣ ಓದುವುದೇ ನಿಮ್ಮ ಅಂಕಣ. ಪ್ರತಿಸಲ ನಿಮ್ಮ ಅಂಕಣ ಓದುವಂತೆ ನನಗೂ ಪ್ರೋತ್ಸಾಹಿಸುತ್ತಾರೆ. ಈಗ ಅಂಕಣ ನಿಂತುಹೋಗುತ್ತಿರುವ ವಿಷಯ ಕೇಳಿ ಬೇಜಾರಾಯ್ತು. ನೀವು ಬರೆಯುವುದನ್ನು ಮುಂದುವರೆಸಬೇಕೆಂದು ಕೇಳುತ್ತೇನೆ.
- ಮಾನಸ; ಬೆಂಗಳೂರು
=======
as usual my intuition is right!! :-) take a 'chocolatey break'... and come back with something nicey and spicey...
- Malathi Shenoy; Bangalore
=======
ನಾವು ಹೆಚ್ಚಾಗಿ ಆದಿತ್ಯವಾರ ಬೆಳಿಗ್ಗೆ ತಿಂಡಿ ಬದಲು ಗಂಜಿಯೂಟ ಮಾಡುವುದು ರೂಢಿ. ಹಾಗೆಯೇ ಇತ್ತೀಚೆಗೆ ಗಂಜಿಯೂಟದ ಜತೆಗೆ ನಿಮ್ಮ ಅಂಕಣವನ್ನು ಧ್ವನಿಮಾಧ್ಯಮದಲ್ಲಿ ಕೇಳಿ ಆನಂದಿಸುವುದೂ ಅಭ್ಯಾಸವಾಗಿಹೋಗಿತ್ತು. ಇನ್ನು ಆದಿತ್ಯವಾರ ಬೆಳಿಗ್ಗೆ ಗಂಜಿ ಜೊತೆ ನಾವು ಏನು ಕೇಳುವುದು ಅಂತ? :-) ಅಂದಹಾಗೆ ನೀವು ವಾರವಾರ ಅಂಕಣ ಹೇಗೆ ಬರಿತೀರೋ ಎಂದು ನಮ್ಮದೂ ಸೇರಿಸಿ ಎಲ್ಲರ ಕಣ್ಣು ಬಿತ್ತಾ ಹೇಗೆ!!?? :-) we had been to eastern side of Washington state during the memorial weekend. after 2 days of rest, this evening i checked the mail box n saw this breaking news! anyway, once in a while break is good for most of the things, ಅಲ್ವಾ .. please keep sending articles/audio recording/ link to new writings. wishing you all the best..
- Naina Rao; Seattle
=======
ಸತತ ಬರವಣಿಗೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದೀರಿ. ನೀವೇ ಹೇಳಿರುವಂತೆ ಆಗಾಗ ಪತ್ರಿಕೆಗಳಲ್ಲಿ ನಿಮ್ಮ ಬರವಣಿಗೆಯನ್ನು ನೋಡಬಹುದಲ್ಲ? ಸ್ನೇಹ ಸಂಬಂಧ ಹಸಿರಾಗಿರಲಿ.
- ಭಾರತಿ ಕೆ.ವಿ; ಕುಂದಾಪುರ
=======
Well, we are waiting to see ur new sparsha. when next we can see ur columns?
- Padyana Ramachandra; Dubai
=======
It is very sad to read that you are stopping the column. The real reason to read Vijaya Karnataka on Sunday was your column. Every week you were coming up with new topic and used to present it in an amusing and catchy way. My husband is not a great reader. So I used to tell him about your column and made him to read it. From now onwards I will miss your column. plz start it as soon as possible. Yours sincerely,
- Girija Tamminal ; Belagavi
=======
ಕಭೀ ಅಲ್ವಿದಾ ನ ಕೆಹೆನಾ...
- ಎಸ್. ಎಂ. ಪೆಜತ್ತಾಯ ; ಬೆಂಗಳೂರು
=======
ನಿಮ್ಮ ಪ್ರತಿವಾರದ ಪರಾಗಸ್ಪರ್ಶ ಅಂಕಣ ಖಂಡಿತ ಮಿಸ್ ಮಾಡ್ಕೊಳ್ತೀನಿ. ಹೊಸದೇನು ಬರೆದರೂ ದಯವಿಟ್ಟು ಲಿಂಕ್ ಕಳಿಸಿ.
- ಮಾಲಾ ರಾವ್; ಕ್ಯಾಲಿಫೋರ್ನಿಯಾ
=======
ದೀರ್ಘ ಕಾಲದಿಂದ ನಿಮ್ಮ ಅಂಕಣವನ್ನು ಓದುತ್ತಿರುವೆ. ಒಮ್ಮೆಲೇ ನೀವು ಹೀಗೆ ಬ್ರೇಕ್ ತೆಗೆದುಕೊಂಡು ಬಿಟ್ಟರೆ ಪತ್ರಿಕೆಯ ಆ ಜಾಗ ಖಾಲಿಖಾಲಿ ಅನ್ಸುತ್ತೆ. ಆದ್ರೂ ಎಲ್ಲರಿಗೂ ಒಂದು ಸ್ವಲ್ಪವಾದ್ರೂ ಬ್ರೇಕ್ ಬೇಕೇಬೇಕು. ಅಡ್ಜಸ್ಟ್ ಮಾಡ್ಕೊಳ್ತೀವಿ. ಆದ್ರೆ ಬ್ರೇಕ್ ತೊಗೊಂಡು ಬೇಗ ವಾಪಸ್ ಬರ್ಬೇಕು ಆಯ್ತಾ? ನಮಸ್ಕಾರ. ಎಂಜಾಯ್ ದ ಬ್ರೇಕ್.
- ಡಾ. ಪ್ರಶಾಂತ ಬಸವನಾಳಮಠ; ರಟ್ಟಿಹಳ್ಳಿ
=======
ವಾರದ ಅಂಕಣ ತಪ್ಪದೆ ಮುಂದುವರೆಸಿ. ಇದು ನನ್ನ ಮತ್ತು ಇತರ ಅಸಂಖ್ಯಾತ ಓದುಗರ ಅಭಿಪ್ರಾಯ. ದೇವರು ನಿಮಗೆ ಇನ್ನಷ್ಟು ಲೇಖನ ಬರೆಯುವ ಚೈತನ್ಯ ನೀಡಲಿ.
- ಭೀಮಾಶಂಕರ ಬುಗಡೆ; ಬಿಜಾಪುರ
=======
ಯಾವುದೋ ಹೂವು ಯಾವುದೋ ಹುಳು... ಇವತ್ತ್ಯಾಕೋ ಮುಂಜಾನೆಗೆ ಜಯಂತ ಕಾಯ್ಕಿಣಿ ದೆವ್ವ ಬಡ್ಕೊಂಡ ಹಾಗೆ ಹುಚ್ಚು ಪರಾಗ ಸ್ಪರ್ಶ ಬೆಳಕ ಜೇನು. ಅದೇ ನೀನು ಅದೇ ನಾನು ಒಂದಾದ ಮೇಲೆ ಯಾಕೀ ನಿಲ್ದಾಣ...? ಅದೇ ದಾರಿ ಅದೇ ಪಯಣ ಈ ತಿರುವೇ ಅಪಹರಿಸುತಿದೆ ಪ್ರಾಣ... ಜೋಶಿಮೇಷ್ಟ್ರೇ ಯಾಕೋ ತುಂಬ ಹಿಂಸೆ ಆಗ್ತಿದೆ. ಅಂಕಣ ಅನುರಾಗ ಬಂಧನ ಆಗುತ್ತೆ. ಬಂಧನ ಬಿಡುಗಡೆ ಬಯಸುತ್ತೆ. ಬಯಸಿದ ಬಿಡುಗಡೆ ಕ್ರೂರವಾಗಿರುತ್ತೆ ಅನ್ನೋ ಸತ್ಯ ತುಂಬ ಹಿಂಸಿಸುತ್ತಿದೆ. ನೀವು ಬೇರೆ ಏನೇ ಬರೆದ್ರೂ ಯಾವ್ದೇ ಪತ್ರಿಕೆಗೆ ಬರೆದ್ರೂ ನನಗೂ ತಿಳ್ಸಿ. ಇದುವರೆಗೂ ಜೊತೆಗೂಡಿ ನಡೆಸಿದ ನಿಮ್ಮ ಅಕ್ಷರಗಳಿಗೆ ‘ಕೆಮ್ಮದಂಗೆ’ ಸಾಷ್ಟಾಂಗ ನಮಸ್ಕಾರ.
- ರಾಜಕುಮಾರ್ ಮಡಿವಾಳರ್; ಧಾರವಾಡ
=======
ಜೂನ್ 3ರಂದು/ ಅನಂತರ ಸೇರ್ಪಡೆಗೊಂಡ ಪ್ರತಿಕ್ರಿಯೆಗಳು:
ಪ್ರಿಯ ಜೋಶಿಯವರೇ
ನಿಮ್ಮ ಅಂಕಣವಿಲ್ಲದ ವಿಜಯ ಕರ್ನಾಟಕದ ಪುಟ ಬಹಳವೇ ಭಣಭಣವೆನ್ನಿಸುತ್ತಿದೆ, ಇಲ್ಲಿ ಓದಿಗಿಂತ ನಮ್ಮನ್ನು ನೀವು ತೊಡಗಿಸಿಕೊಳ್ಳುತ್ತಿದ್ದ ರೀತಿ, ನಮ್ಮ ಯಾವುದೇ ವಿಚಾರಗಳಿಗೂ ತತ್ಕ್ಷಣ ಸ್ಪಂದಿಸುತ್ತಿದ್ದ ರೀತಿ, ನನಗೆ ತುಂಬಾ ಆತ್ಮೀಯ/ಆಪ್ತವೆಂಬ ಭಾವ ಮೂಡಿಸುತ್ತಿತ್ತು. ಯಂತ್ರದ ಮೂಲಕ ಒಂದು ಒಳ್ಳೆಯ ಜಗತ್ತು ಸಿಗಬಲ್ಲದು ಎಂಬ ಆಶಾಭಾವನೆ ಮೂಡಿಸಿದ ಸ್ನೇಹಿತರು ನೀವು. ಆದಷ್ಟು ಬೇಗನೆ ಮತ್ತೆ ಅಂಕಣಕಾರರಾಗಿ ಬಂದು ಸ್ನೇಹ ಸೇತುವೆಯನ್ನು ಗಟ್ಟಿಗೊಳಿಸುತ್ತೀರೆಂದು ಹಾರೈಸುವ
- ಎಚ್ ಎನ್ ಶ್ಯಾಮಲಾ {ಮತ್ತು ಸ್ನೇಹಿತೆಯರು}; ಬೆಂಗಳೂರು
=======
ನಮಸ್ತೇ ಸರ್... ಹೇಗಿದ್ದೀರಾ?
ಕಾರಣಾಂತರಗಳಿಂದ ಕಳೆದ ವಾರದ 'ಪರಾಗ ಸ್ಪರ್ಶ' ಓದಲಾಗಿರಲಿಲ್ಲ. ಇವತ್ತು ಬೆಳಗ್ಗೆ ವಿಜಯ ಕರ್ನಾಟಕ ಖರೀದಿಸಿದಾಗ ಅಶ್ಚರ್ಯವಾಯಿತು. ನನ್ನ ಮೇಲ್-ಬಾಕ್ಸ್ ತೆಗೆದು ಕಳೆದ ವಾರದ ಸಂಚಿಕೆ ಓದಿದಾಗ ಶಾಕ್ ಅಯಿತು. ನಿಜಕ್ಕೂ unexpected. ಒಂದು ಸಣ್ಣ ಹಿಂಟ್ ಕೂಡ ಕೊಟ್ಟಿರಲಿಲ್ಲ. 'ಬ್ರೇಕ್' ಅಂತ ಹೇಳಿದ್ದೀರಿ. ಇದರರ್ಥ ಇನ್ನು ಸ್ವಲ್ಪ ಕಾಲದ ಬಳಿಕ ಮತ್ತೆ ನಿಮ್ಮ ಬರಹಗಳನ್ನು ಸವಿಯುವ ಖುಷಿ ದೊರಕಲಿದೆ ಅಂತ ಭಾವಿಸುತ್ತೇನೆ. ಇದ್ದಕಿದ್ದಂತೆ ಪರಾಗ ಸ್ಪರ್ಶ ನಿಲ್ಲಿಸಿದ್ದು ಕೊಂಚ ಬೇಸರ ಮೂಡಿಸಿದೆಯಾದರೂ, ನಿಮ್ಮ ವೃತ್ತಿ ಬರವಣಿಗೆಯಲ್ಲ ಎಂಬುವುದನ್ನು ನಾವು ಅರ್ಥಮಾಡಿಕೊಳ್ಳಲೇಬೇಕು.
ಧನ್ಯವಾದಗಳು ಸರ್, ಕಳೆದೈದು ವರ್ಷಗಳಿಂದ ‘ಸಂಡೇ’ಯ ಸೊಬಗನ್ನು ಹೆಚ್ಚಿಸಿದ್ದಕ್ಕೆ. ಧನ್ಯವಾದಗಳು ಕಳೆದೈದು ವರ್ಷದಿಂದ ನನ್ನ ಜ್ಞಾನವನ್ನು ಹೆಚ್ಚಿಸಿದ್ದಕ್ಕೆ; ಧನ್ಯವಾದಗಳು ಕಳೆದೈದು ವರ್ಷಗಳಿಂದ ಅನೇಕ ಮಾನವೀಯ ಹಾಗೂ ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ; ಹಾಗೂ ನೂರಾರು ಬಾರಿ ಸಭ್ಯ ಹಾಸ್ಯದಿಂದ ನಗಿಸಿದ್ದಕ್ಕೆ; ಧನ್ಯವಾದಗಳು ಸರ್ ಗೊತ್ತೇ ಇರದ ನೂರಾರು ವ್ಯಕ್ತಿಗಳನ್ನು/ಘಟನೆಗಳನ್ನು ಉದಾಹರಿಸಿ ಜೀವನಪ್ರೀತಿ ತುಂಬಿದ್ದಕ್ಕೆ; ಹಾಗೂ ಹೇಳಲು ಮರೆತ ಅನೇಕಾನೇಕ ಕಾರಣಗಳಿಗೆ ಧನ್ಯವಾದಗಳು. ಪರಾಗ ಸ್ಪರ್ಶ ಕೇವಲ ಅಂಕಣವಾಗಿರಲಿಲ್ಲ ಅದು ಒಂದು ಸುಂದರ ಯಾನವಾಗಿತ್ತು. ಧನ್ಯವಾದಗಳು ಸರ್! ತುಂಬು ಅಭಿಮಾನ ಹಾಗೂ ಪ್ರೀತಿಯಿಂದ,
- ದರ್ಶನ್ ಜೈನ್; ಕಾರ್ಕಳ
=======
It's been wonderful reading you all these years. Its been a great learning experience for me as well. I believe you were the select few writers in Kannada who defined art of internet based writings and thereby raising the quality as well. You started in days when people use to put anything and everything on the internet. Your writings gave a sense of purpose to those.
I am sure your writings will be missed by lot of your fans including me. I felt connected to you and your fans and now I miss that community. I hope you would reconsider this after your well deserved break.
Good luck and keep in touch.
- Vadiraja Narasimha; Boston
========
Srivathsa,
I meant to send this earlier. I think you have done great job here to educate us and entertain us. Enjoyed reading the series. I am sure your next adventure is cooking up and best wishes for the same.
- Shivu Bhat; Virginia
========
Dear Srivatsaji,
Surprised not to find 'PARGA SPARSHA' in today's Vijaya Karnataka. Is it a lapse or permanent arrangement? Have you stopped the column? If so I am sorely disappointed.
- M Raghavan; Kasaragod
========
Dear Sri Joshi,
Can I know the reason why a break? We miss you on Sundays. Though I stopped subscribing to VK long back I used to read soft copies with the help of your regular mails. Thanks,
- Ishwara Bhat; Madikeri
========
ಶ್ರೀವತ್ಸ ಜೋಷಿ ಸರ್ ರವರಿಗೆ ಒಂದು ಸಣ್ಣ ಮುನಿಸಿನೊಂದಿಗಿನ ಪ್ರಣಾಮಗಳು.
ಸರ್, ಯಾಕೋ ಏನ್ ಬರಿಲಿಕ್ಕೂ ಬೆರಳ್ಗಳೇ ಬಗ್ಗಲ್ಲ; ಜೊತೆಗೆ ಏನು ತೋಚುತ್ತಿಲ್ಲ ಕೂಡ; ಅಂತಹುದು ನಿಮ್ಮಿಂದಾದ ಈ ಬೇಸರಿಕೆ; ಆದರೂ ಸತತ ಎರಡು ವಾರಗಳ ಮೌನ ಮುರಿದು ಟೈಪಿಸಿದ್ದೇನೆ, ನಾನು ನಿಜಕ್ಕೂ ಊಹೆ ಮಾಡೇ ಇರ್ಲಿಲ್ಲ ಸರ್; ಪರಾಗ ಸ್ಪರ್ಶ ದೀಡೀರ್ ನಮ್ಮನಗಲಿ ಹೋಗುತ್ತದೆಂದು! ಬೇಕೇ ಬೇಕಿತ್ತಾ ಈ ಬ್ರೇಕು? ಒಲುಮೆಯ ಗೆಳತಿಯೊಡನೆ ಪರವಶನಾಗಿದ್ದ ಪ್ರೇಮಿಗೆ ಗೆಳತಿಯೇ ಪರರವಶವಾದ ಮೇಲೆ ಆಗುವ ಯಾತನೆಯಂತೆ ಪರಾಗದ ಚಿಂತೆ ಕಾಡುತ್ತಿದೆ: ಆದರೂ ಯಾವುದೊ ಮೋಹನನ ಮುರಳಿ ಮರಳಿ ನಿಮ್ಮ ಕರೆದಂತಿದೆ ಎಂಬ ಅನುಮಾನವು ಸಹ ;
ರಾಮನಾದರೇನು? ಕೃಷ್ಣನಾದರೇನು? ದೈವಾಂಶವೊಂದೇ ಅವತಾರ ಬೇರೆ ! ಚಿಟ್ಟೆಯಾದರೇನು? ದುಂಬಿಯಾದರೇನು? ಆಗಬೇಕಿರುವುದು ‘ಪರಾಗ’! ಮತ್ತದೇ ಸಂಜೆ ; ಮತ್ತದೇ ಬೇಸರ... ಪರಾಗವಿಲ್ಲದಿದ್ದರೂ ಸರಿ ಸ್ಪರ್ಶದಲ್ಲಾದ್ರು (ಒಲವಿನ ಟಚ್)ಹೀಗೆ ಇರಿ ;
ಹೊಸ ಅವತಾರದೊಂದಿಗಿನ ನಿಮ್ಮ ಸ್ಪರ್ಶದ ನಿರೀಕ್ಷೆಯಲ್ಲಿ...
- ಆನಂದ ಆಣಿಗೆರೆ; ಚನ್ನಪಟ್ಟಣ
========
ಜೋಶಿಯವರೇ, ಈಗ ಎಪ್ರಿಲ್ ಅಲ್ಲ, ಜೂನ್! ನನಗೆ ಶಾಕ್ ಆಯ್ತು ನಿಮ್ಮ ಈ ಬ್ರೇಕಿಂಗ್ ನ್ಯೂಸ್ನಲ್ಲಿ ನೀವು ಇನ್ನು ಮೇಲೆ ಬರೆಯಲ್ಲ ಅಂತ ತಿಳಿದು. ಯಾಕೆ ಎಂದು ಕೇಳಬಹುದಾ? ಅದೇ ಯೋಚಿಸ್ತಿದ್ದೆ ಈಗ ಎಪ್ರಿಲ್ ಅಲ್ಲ, ಇದು ನಿಜವೋ ಇಲ್ಲ ತಮಾಷೆನೋ ಅಂತ. ನಿಮ್ಮ ಅಂಕಣ ಬರಲ್ಲ ಅಂದ್ರೆ ತುಂಬ ಬೇಜಾರಾಗುತ್ತೆ. ಆದರೆ ನಿಮ್ಮ ಟೈಮ್ ಮತ್ತು ಸಂದರ್ಭ ಅಂದ್ರೆ ಕೆಲಸದಲ್ಲಿ ಟೈಮ್ ಸಾಕಾಗಲ್ಲವೇನೊ ಅಂತೂ ಯಾಕೆ ಎಂದು ಯೋಚಿಸಲು ಅಗುತ್ತಿಲ್ಲ. ಒಟ್ಟಿನಲ್ಲಿ ನಿಮ್ಮ ಬರಹ ಇನ್ನು ಮೇಲೆ ಬರಲ್ಲ ಅಂತ ಅಂದುಕೊಂಡರೆ ಬೇಜಾರಾಗುತ್ತೆ.
- ಗಿರಿಜಾ ಮೇಘನಾಥ; ಸೌತ್ ಕೆರೊಲಿನಾ
========
ವಿ.ಕ.ದಲ್ಲಿ ನಿಮ್ಮ ಲೇಖನವಿಲ್ಲದಿರುವುದು ಸಪ್ಪೆ ಎನ್ನಿಸುತ್ತಿದೆ.
- ರಘುಪತಿ ಬೇಳೂರು; ಬೆಂಗಳೂರು
========
Paraga Sparsha column left a vacuum on the top right hand corner of the paper. eyes stare that space only to miss it. I felt the same when Dundiraj’s weekly articles stopped appearing long time back. I love the grip you writers have on everyday matters to make them interesting reading.
-Raghavendra M Muzomdar; Bangalore
========
ಹತ್ತು ವರ್ಷಗಳವರೆಗೆ ಓದುಗರಿಗೆ ಸತತವಾಗಿ ವೈವಿಧ್ಯಮಯ ಮಾಹಿತಿಯೊಂದಿಗೆ ಮನರಂಜನೆಯನ್ನು ನೀಡಿ ರಂಜಿಸಿ, ಇವತ್ತು ಕನ್ನಡದಲ್ಲಿ ಒಬ್ಬ ಪ್ರಮುಖ ಅಂಕಣ ಬರಹಗಾರನೆಂದು ಗುರುತಿಸಿಕೊಂಡಿದ್ದೀರಿ ಮತ್ತು ಬರವಣಿಗೆಯಲ್ಲಿ ನಿಮ್ಮದೇ ಒಂದು ಛಾಪನ್ನು ತೋರಿದ್ದೀರಿ. ನನ್ನ ಮನಃಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಆನಂದವೆನಿಸುತ್ತದೆ.
ನಿಮಗೆ ಇವತ್ತು ಈ ವಿಶ್ರಾಮದ (ತಾತ್ಕಾಲಿಕ?) ಆವಶ್ಯಕತೆ ಖಂಡಿತವಾಗಿಯೂ ಇದೆ. ವಿಶ್ರಮಿಸಿರಿ, ಮತ್ತೆ ಹೊಸ ಹುರುಪಿನಿಂದ, ಹೊಸ ಪ್ರಯೋಗಗಳಿಂದ ಹೊರಬನ್ನಿರಿ ಎಂದು ಹಾರೈಸುತ್ತ, ನಿಮಗೆ ಮತ್ತು ನಿಮ್ಮ ಪರಿವಾರಕ್ಕೆ ಹಿತವನ್ನು ಬಯಸುತ್ತ, ಶುಭ ಕೋರುವೆ. ವಿಶ್ವಾಸದಲ್ಲಿ,
- ವಿದ್ಯಾ ಗದಗ್ಕರ್; ಕೊಲಂಬಸ್ ಓಹಯೊ
========
Dear Sri Srivathsa,
I miss your column in VK very much. They were so lovely with literary flavour!
May God bless you!
- Dr. Shivamurthy Swamiji; www.taralabalu.org
===========================================================
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.