ಪದ-ಶ್ರಾವ್ಯ

ಈಗ ಆಡಿಯೋ ಟಚ್!

3
Aug 2012
Kalyani Kalarava
Posted in DefaultTag by sjoshi at 7:30 am

ದಿನಾಂಕ 3 ಆಗಸ್ಟ್  2012

ಕಲ್ಯಾಣಿ ಕಲರವ

* ಶ್ರೀವತ್ಸ ಜೋಶಿ

ರಾಗ ‘ಕಲ್ಯಾಣಿ’ (ಹಿಂದುಸ್ಥಾನಿಯಲ್ಲಿ ‘ಯಮನ್’) ಬಹಳ ಜನಪ್ರಿಯ ರಾಗಗಳಲ್ಲೊಂದು. ಇದು 15-16ನೇ ಶತಮಾನದ ಅಂದಾಜಿನಲ್ಲಿ ಪರ್ಷಿಯಾದಿಂದ ಬಂದದ್ದೆಂದೂ, ಅಲ್ಲಿ ಇದು Emman ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತೆಂದೂ  ಹೇಳಲಾಗಿದೆ. ಆದರೆ ಆ ಕಾಲದಲ್ಲಿ ದಕ್ಷಿಣಭಾರತದಲ್ಲಿ ಈ ರಾಗವು ‘ಕಲ್ಯಾಣಿ’ ಎಂಬ ಹೆಸರಿನಲ್ಲಿ ಆಗಲೇ ಪರಿಚಿತವಿತ್ತು, ಜನಪ್ರಿಯವಾಗಿತ್ತು ಎನ್ನುವವರೂ ಇದ್ದಾರೆ. ಹಾಗಿದ್ದ ಪಕ್ಷದಲ್ಲೂ Emman ಎಂಬ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ blessed ಎಂಬ ಅರ್ಥವಿರುವುದೂ, ‘ಕಲ್ಯಾಣಿ’ ಎಂಬ ಪದ ಕೂಡ ಹೆಚ್ಚೂಕಡಿಮೆ ಅದನ್ನೇ ಹೋಲುವುದೂ ಒಂದು ಸ್ವಾರಸ್ಯಕರ ಅಂಶ.

ಕಲ್ಯಾಣಿ ರಾಗ, ಸಂಜೆ ಅಥವಾ ರಾತ್ರಿಯ ಮೊದಲ ಪ್ರಹರದಲ್ಲಿ ಹಾಡಲಿಕ್ಕೆ ಬಹಳ ಸೂಕ್ತವಾದುದಂತೆ. ಸಂಗೀತದ ಏಳೂ ಸ್ವರಗಳು ಇರುವ (ಅರೋಹಣ: ಸ  ರಿ232 ಪ  ಧ2 ನಿ3 ; ಅವರೋಹಣ: ಸ ನಿ32 ಪ ಮ23 ರಿ2 ; ಮಾಹಿತಿ:ವಿಕಿಪಿಡಿಯಾ) ಕೆಲವೇಕೆಲವು ರಾಗಗಳ ಪೈಕಿ ಒಂದಾದ್ದರಿಂದ ಇದನ್ನು ಸಂಗೀತ ಶಿಕ್ಷಣದ ಆರಂಭಿಕ ಹಂತದಲ್ಲೇ ಕಲಿಸುತ್ತಾರೆ.  ಹಾರ್ಮೋನಿಯಂ‌ನಲ್ಲಿ ರಾಗ ಯಮನ್ ನುಡಿಸಿದರೆ ಹೀಗಿರುತ್ತದೆ:

ದಕ್ಷಿಣ ಭಾರತೀಯ ಭಾಷೆಗಳಲ್ಲಿ ಕಲ್ಯಾಣಿ ರಾಗ ಆಧಾರಿತ ಮತ್ತು ಉತ್ತರ ಭಾರತೀಯ ಭಾಷೆಗಳಲ್ಲಿ ಯಮನ್ ರಾಗ ಆಧಾರಿತ ಚಿತ್ರಗೀತೆಗಳು, ಭಕ್ತಿಗೀತೆಗಳು, ಗಜ಼ಲ್ ಮುಂತಾಗಿ ವಿವಿಧ ಸಂಗೀತಪ್ರಕಾರಗಳು ಲೆಕ್ಕವಿಲ್ಲದಷ್ಟಿವೆ. ಅಷ್ಟೇಅಲ್ಲದೆ ‘ಯಮನ್’ನ ಅಲ್ಪಸ್ವಲ್ಪ ಬದಲಾವಣೆಯಿಂದ ಹುಟ್ಟಿದ ಯಮನ್‌ಕಲ್ಯಾಣ್, ಶ್ಯಾಮಕಲ್ಯಾಣ್, ಪೂರ್ವೀಕಲ್ಯಾಣ್, ರಂಗೀಲಾಕಲ್ಯಾಣ್ ಇವೇ ಮೊದಲಾದ ರಾಗಗಳೂ ಸೇರಿದರೆ ಕಲ್ಯಾಣಿಯದು ಸಂಗೀತ ಸಾಮ್ರಾಜ್ಯದಲ್ಲಿ ದೊಡ್ಡ ಕಾರುಭಾರು.

ಇವತ್ತು ನಾವು ಕಲ್ಯಾಣಿ ಅಥವಾ ಯಮನ್ ರಾಗವನ್ನಾಧರಿಸಿದ (ಮತ್ತು ಮೇಲೆ ಹೇಳಿದ ಯಮನ್‌ನ ವಿವಿಧ ರೂಪಗಳ) ವಿಶೇಷ ರಾಗರಸಾಯನ "ಕಲ್ಯಾಣಿ ಕಲರವ"ವನ್ನು ಸವಿಯುವವರಿದ್ದೇವೆ. ಇದು ಕಲ್ಯಾಣಿ ರಾಗದ ಸಾಧ್ಯವಾದಷ್ಟೂ ಹೆಚ್ಚು ವೈವಿಧ್ಯಮಯ ಪ್ರಸ್ತುತಿಗಳ  ಒಂದು ಗೊಂಚಲು. ಭಾರತದ ವಿವಿಧ ಭಾಷೆಗಳಲ್ಲಿ, ವಿವಿಧ ಪ್ರಕಾರದ ಸಂಗೀತದಲ್ಲಿ ಈ ರಾಗದ ರೋಚಕತೆಯನ್ನು ಆನಂದಿಸುತ್ತಲೇ ರಾಷ್ಟ್ರೀಯ ಭಾವೈಕ್ಯವನ್ನು ಮೂಡಿಸುವ ಪ್ರಯತ್ನ.

ಈ ರಾಗರಸಾಯನ ಮಾಲಿಕೆಯ ಕುರಿತಾಗಿ ಇನ್ನೂ ಒಂದು ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು:  ಇದು ಶಾಸ್ತ್ರೀಯ ಸಂಗೀತದಲ್ಲಿನ  ರಾಗಗಳ ಬಗ್ಗೆ  ಆಸಕ್ತಿ ಕೆರಳಿಸುವ, ಅರಿವನ್ನು ಅರಳಿಸುವ ಒಂದು ಕಿರುಪ್ರಯತ್ನ ಅಷ್ಟೇ.   ಕುತೂಹಲಿಯೊಬ್ಬ ಕಲೆಹಾಕಿದ ಸಾಮಗ್ರಿ. ವಿದ್ವತ್ಪೂರ್ಣ ಇದಮಿತ್ಥಂ ರೀತಿಯ ಸಂಗ್ರಹ ಅಲ್ಲ. ಸಂಗೀತವಿದ್ವಾಂಸರಿಗೆ, ತೀರಾ ಶುದ್ಧವಾದದ್ದನ್ನೇ ಬಯಸುವ ಸಂಪ್ರದಾಯವಾದಿಗಳಿಗೆ ಇದು ಹಿಡಿಸಲಿಕ್ಕಿಲ್ಲ. ಒಂಥರದಲ್ಲಿ, ಚಿಕ್ಕ ಮಗು ಬಣ್ಣಗಳನ್ನು, ಆಕಾರಗಳನ್ನು,ಅಕ್ಷರಗಳನ್ನು ಗುರುತಿಸುತ್ತ ಹೇಗೆ ಕಲಿಕೆಯನ್ನು ಆರಂಭಿಸುತ್ತದೆಯೋ ಹಾಗೆಯೇ ಇದೂ ಕೂಡ. ಸಂಗೀತದ ವಿವಿಧ ಬಣ್ಣ(=ರಾಗ)ಗಳನ್ನು ಗುರುತಿಸಿ/ಅನುಸರಿಸಿ ಅರಿಯುವತ್ತ ಒಂದು ಹೆಜ್ಜೆ. ಇದರಲ್ಲಿ ತಪ್ಪುಗಳು ಸೇರಿಕೊಂಡಿದ್ದರೆ, ಬಲ್ಲವರು ಅವುಗಳ ತಿದ್ದುಪಡಿಯನ್ನು ಸೂಚಿಸಿದರೆ ಸಂತೋಷದಿಂದ ಅಳವಡಿಸಿಕೊಳ್ಳಲಾಗುವುದು.

ಇನ್ನೊಂದೇನೆಂದರೆ,  ಕಲ್ಯಾಣಿ  ರಾಗಕ್ಕೂ ಅದರ ವಿವಿಧ ರೂಪಗಳಿಗೂ ಶಾಸ್ತ್ರೀಯ ಸಂಗೀತದ ಪ್ರಕಾರ ಗಮನಾರ್ಹ ವ್ಯತ್ಯಾಸಗಳಿರಬಹುದು; ಆದರೆ ನಮ್ಮ ಈ ‘ಕಲ್ಯಾಣಿ ಕಲರವ’ದ ಮಟ್ಟಿಗೆ ಅವೆಲ್ಲ ಒಂದೇ.  ಸಾದಾದೋಸೆ, ರವಾದೋಸೆ, ಮಸಾಲೆದೋಸೆ,  ಉತ್ತಪ್ಪ, ಪೇಪರ್‌ದೋಸೆ, ನೀರುದೋಸೆ ಇತ್ಯಾದಿ ಅನೇಕ ವಿಧಗಳಿದ್ದರೂ ‘ದೋಸೆ’ ಎಂಬ broad categoryಯಲ್ಲಿ ಅವು ಹೇಗೆ ಗುರುತಿಸಲ್ಪಡುತ್ತವೋ ಹಾಗೆ ಇಲ್ಲಿನ ಕಲರವದಲ್ಲಿ  ಕಲ್ಯಾಣಿ ರಾಗ ಗುರುತಿಸಲ್ಪಡುತ್ತದೆ.

ಇದಿಷ್ಟು ಪೀಠಿಕೆಯ ನಂತರ...

kalyaninotes.png

ಮೊದಲಿಗೆ, ಗಣೇಶನನ್ನು ಸ್ತುತಿಸುವ ಒಂದು ಮರಾಠಿ ಭಜನ್‌ನೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸೋಣ.  ಮಹಾರಾಷ್ಟ್ರದಲ್ಲಿ ಗಣೇಶಚೌತಿಯ ಸಂಭ್ರಮವಷ್ಟೇ ಅಲ್ಲ, ತಿಂಗಳ ಸಂಕಷ್ಟಚತುರ್ಥಿ ಪೂಜೆ ಸಹ ಈ ಹಾಡು ಮೊಳಗದೆ ಪೂರ್ಣವೆನಿಸುವುದಿಲ್ಲ. ಅಷ್ಟೂ ಜನಪ್ರಿಯವಾದದ್ದು ಈ ಗೀತೆ, ಲತಾ ಮಂಗೇಶ್ಕರ್ ಧ್ವನಿಯಲ್ಲಿ  "ತೂಝ ಮಾಗತೋ ಮೀ ಆತಾ".  ನಿನ್ನನ್ನು ನಾನೀಗ ಬೇಡುತ್ತಿರುವೆ ಎಂದು ಅರ್ಥ. ಈ ಹಾಡಿನ ಹಿನ್ನೆಲೆ ಸಂಗೀತದಲ್ಲಿ, ಮುಖ್ಯವಾಗಿ interlude musicನಲ್ಲಿ ಸರೋದ್, ಸಿತಾರ್‌ಗಳನ್ನೆಲ್ಲ ಕೇಳುವಾಗಲೇ ಕಲ್ಯಾಣಿ ಕಲರವಕ್ಕೆ ನಿಮ್ಮ ಮೈಮನ ಸಿದ್ಧವಾಗತೊಡಗುತ್ತದೆ! ಸಾಮಾನ್ಯವಾಗಿ ಕಲ್ಯಾಣಿ ರಾಗವನ್ನು ಸಂಗೀತಕಛೇರಿಯ ಆರಂಭದಲ್ಲೇ ಎತ್ತಿಕೊಳ್ಳುವುದು ರೂಢಿ. ಅದರಿಂದ ಕಛೇರಿಗೆ "ಕಳೆ ಕಟ್ಟುವುದು" ಸುಲಭವಾಗುತ್ತದಂತೆ. ಇಲ್ಲಿ ಈ ಕಲರವದಲ್ಲಂತೂ ಮೊದಲಿಂದ ಕೊನೆಯವರೆಗೂ ಕಲ್ಯಾಣಿಯೇ. ಹಾಗಾಗಿ ಕಳೆಯೋ ಕಳೆ!

*** *** *** *** *** *** ***

ಮುಂದಿನ ಗೀತೆಯನ್ನು ಕೇಳುವ ಮೊದಲು ಅದರ ಬಗ್ಗೆ ಒಂದಿಷ್ಟು ವಿವರಗಳನ್ನು ಓದಿ ಒಂದು ವಿಶೇಷ ರೋಮಾಂಚನಕ್ಕೆ ಸಿದ್ಧರಾಗಿ.  ಇದು ಕೇರಳದ ಒಬ್ಬ ಮುಸ್ಲಿಂ ಕವಿ ಬರೆದಿರುವ ಗೀತೆ. ಸಂಗೀತ ನಿರ್ದೇಶನ ಮಾಡಿದ ಕಲಾವಿದನೂ ಮುಸ್ಲಿಂ. ಹಾಡುಗಾರ ಕ್ರಿಶ್ಚಿಯನ್. ಅಷ್ಟಾಗಿ ಈ ಹಾಡು ಸಂಸ್ಕೃತ ಭಾಷೆಯಲ್ಲಿ ಇರುವುದು, ಮತ್ತು ಹಿಂದೂ ದೇವರಾದ ಶ್ರೀರಾಮನ ಕಥೆಯನ್ನು ಹೇಳುತ್ತಿರುವುದು! ನಿಜಕ್ಕೂ ಮೈನವರೇಳಿಸುವಂಥ ವಿಚಾರ! ನಾವೆಲ್ಲ ಯಾಕಾದರೂ ಕುಲ-ಜಾತಿ-ಮತ-ಧರ್ಮ ಅಂತೆಲ್ಲ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೊ. ಸಂಗೀತದ ಮಾಧುರ್ಯಕ್ಕೆ ಎಲ್ಲಿಯ ಗೋಡೆಗಳು? ಮನುಜರೆಲ್ಲ ಒಂದೇ ಕುಲ ಎನ್ನುವುದನ್ನು ಈ ಗೀತೆಯನ್ನು ಕೇಳಿಯಾದರೂ ನಾವು ಅರ್ಥೈಸಿಕೊಳ್ಳಬೇಕು. ಈಗ ಸವಿಯೋಣ, ಯೂಸುಫ್ ಅಲಿ ಕೆಚೇರಿ ಬರೆದ, ನೌಷಾದ್ ಸಂಗೀತ ನಿರ್ದೇಶಿಸಿದ, ಕೆ.ಜೆ.ಯೇಸುದಾಸ್ ಕಲ್ಯಾಣಿ ರಾಗದಲ್ಲಿ ಸುಮಧುರವಾಗಿ ಹಾಡಿರುವ ಸಂಸ್ಕೃತ ಭಕ್ತಿಗೀತೆ “ಜಾನಕೀ ಜಾನೇ ರಾಮಾ...". ಹಾಡಿನ ಜೊತೆಯಲ್ಲಿ ವಿಡಿಯೋದಲ್ಲಿ ಮೂಡಿಬರುವ ರಾಮಾಯಣ ಕಾವ್ಯದ ವರ್ಣಚಿತ್ರಗಳನ್ನೂ ಗಮನಿಸಿ.

*** *** *** *** *** *** ***

ರಾಮನನ್ನು ಭಜಿಸಿದ ನಂತರ ಕೃಷ್ಣನನ್ನೂ ಕರೆಯುವುದು ಬೇಡವೇ? “ಕೃಷ್ಣಾ ನೀ ಬೇಗನೇ ಬಾರೋ..."! ಹೌದು, ಇದು ಯಮನ್ ಕಲ್ಯಾಣ್ ರಾಗದಲ್ಲಿರುವ ಒಂದು ಅತಿ ಜನಪ್ರಿಯ ಕೃತಿ. ಚಿಕ್ಕಪುಟ್ಟ ಸಂಗೀತಗಾರರಿಂದ ಹಿಡಿದು ಘನವಿದ್ವಾಂಸರ ಸಂಗೀತಕಛೇರಿಗಳಲ್ಲೂ ತಪ್ಪದೇ ಕೇಳಿಬರುವ ಅತಿಮಧುರವಾದ ಕೀರ್ತನೆ, ವ್ಯಾಸತೀರ್ಥರ ರಚನೆ. ಗೂಗಲ್‌ನಲ್ಲಿ, ಯೂಟ್ಯೂಬ್‌ನಲ್ಲಿ ಹುಡುಕಿದರೆ ಇದರ ಸಾವಿರಾರು ಆವೃತ್ತಿಗಳು ಸಿಗುತ್ತವೆ. ಆದರೆ ನಾನು ಈ ಕಲರವಕ್ಕೆ ಆಯ್ದುಕೊಂಡಿದ್ದು ನಮ್ಮೆಲ್ಲರ ನೆಚ್ಚಿನ ವಿದ್ಯಾಭೂಷಣರ ಧ್ವನಿಯಲ್ಲಿ, ಕನ್ನಡದ ಸ್ಪಷ್ಟ ಉಚ್ಚಾರದಲ್ಲಿರುವ  "ಕೃಷ್ಣಾ ನೀ ಬೇಗನೇ ಬಾರೋ..."

*** *** *** *** *** *** ***

ವಿದುಷಿ ಎಂ.ಎಸ್.ಸುಬ್ಬಲಕ್ಷ್ಮಿಯವರ ಧ್ವನಿಯಲ್ಲಿ ನೀವು  “ಭಾವಯಾಮಿ ಗೋಪಾಲಬಾಲಂ" ಕೀರ್ತನೆಯನ್ನು ಕೇಳಿರಬಹುದು. ಅನ್ನಮಾಚಾರ್ಯರ ಈ ರಚನೆಯನ್ನು ಕಲ್ಯಾಣಿ ರಾಗದಲ್ಲಿ ಹಾಡುತ್ತಾರೆ. ಸುಬ್ಬಲಕ್ಷ್ಮಿಯವರಿಂದಾಗಿ ಇದು ಮತ್ತಷ್ಟು ಪ್ರಖ್ಯಾತವಾಗಿದೆ.  ಈಗ ಪಿಯಾನೊ ವಾದ್ಯಸಂಗೀತದಲ್ಲಿ   “ಭಾವಯಾಮಿ ಗೋಪಾಲಬಾಲಂ"ಕೇಳೋಣ. ಉತ್ಸಾಹಿ ಯುವಕಲಾವಿದನೋರ್ವ ಇದನ್ನು ದಿವಂಗತ ಸುಬ್ಬಲಕ್ಷ್ಮಿಯವರಿಗೆ ಶ್ರದ್ಧಾಭಾವದಿಂದ ಸಮರ್ಪಿಸಿದ್ದಾನೆ. ಆತನ ವಾದನ ಪರಿಪಕ್ವವಾಗಿರಲಿಕ್ಕಿಲ್ಲ, ಆದರೆ ಸುಬ್ಬಲಕ್ಷ್ಮಿಯವರಿಗೆ ಸಮರ್ಪಣೆ ಎಂಬ ಆತನ ಚಿಂತನೆಯನ್ನು ಮೆಚ್ಚಬೇಕು. ಇದನ್ನು ಕೇಳುತ್ತ ನಾವೂ ಸುಬ್ಬಲಕ್ಷ್ಮಿಯವರನ್ನೊಮ್ಮೆ ನೆನಪಿಸಿಕೊಳ್ಳೋಣ.

*** *** *** *** *** *** ***

ಈಗ ಒಂದು ಹಿಂದಿ ಚಿತ್ರಗೀತೆ. ಪಕೀಜಾ ಚಿತ್ರದಲ್ಲಿ ಲತಾಮಂಗೇಷ್ಕರ್ ಹಾಡಿರುವ ಒಂದು ಅತ್ಯಂತ ಜನಪ್ರಿಯ ಗೀತೆ. ಪಕೀಜಾ ಚಿತ್ರ ಮತ್ತು ಅದರಲ್ಲಿ ಎಲ್ಲ ಹಾಡುಗಳೂ ಒಂಥರದಲ್ಲಿ ಅಮರಗೀತೆಗಳಾಗಿ ಜನಪ್ರಿಯವಾದುವು. ಅವುಗಳ ಪೈಕಿ  ‘ಇನ್ಹೀ ಲೋಗೋಂನೆ...’ ಮತ್ತು "ಮೌಸಮ್ ಹೈ ಆಶಿಕಾನಾ..." ಇವೆರಡೂ ಕಲ್ಯಾಣಿ ರಾಗದಲ್ಲಿವೆ. ನಾವಿಲ್ಲಿ ಕೇಳಲಿರುವುದು "ಮೌಸಮ್ ಹೈ ಆಶಿಕಾನಾ...". ಕಮಲ್ ಆಮ್ರೋಹಿ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಗುಲಾಂ ಮಹಮ್ಮದ್ ಅವರಿಂದ. ಅಂದಹಾಗೆ ‘ಪಕೀಜಾ’ ಉರ್ದುಪದದ ಅರ್ಥ Pure (ಶುದ್ಧ) ಎಂದು. ಉರ್ದು ಭಾಷೆಯ ಪದಗಳು ಅದೆಷ್ಟು ಸಿಹಿ,ಸೊಗಸು ಕೇಳಲಿಕ್ಕೆ ಅಲ್ಲವೇ?

*** *** *** *** *** *** ***

ಇನ್ನು, ಒಂದೆರಡು ಕನ್ನಡ ಚಿತ್ರಗೀತೆಗಳನ್ನು ನೋಡೋಣ. ಬಬ್ರುವಾಹನ ಚಿತ್ರದಲ್ಲಿ ಡಾ.ರಾಜಕುಮಾರ್ ಅರ್ಜುನನಾಗಿ ಮತ್ತು ಬಿ.ಸರೋಜಾದೇವಿ ಚಿತ್ರಾಂಗದೆಯಾಗಿ ಅಭಿನಯಿಸಿದ  “ಈ ಸಮಯ ಆನಂದಮಯ...". ಹಾಡಿದವರು ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ. ಸಾಹಿತ್ಯ: ಚಿ.ಉದಯಶಂಕರ್, ಸಂಗೀತ: ಟಿ.ಜಿ.ಲಿಂಗಪ್ಪ.

*** *** *** *** *** *** ***

ಇನ್ನೊಂದು ಬಹಳ ಸುಂದರವಾದ ಕನ್ನಡ ಚಿತ್ರಗೀತೆ: ಇದು ಅನಂತನಾಗ್-ಮಾಧವಿ ಅಭಿನಯದ ಅನುಪಮ ಚಿತ್ರದ “ಒಲುಮೆ ಪೂಜೆಗೆಂದೇ ಕರೆಯ ಕೇಳಿಬಂದೇ...". ದೊಡ್ಡರಂಗೇಗೌಡ ಅವರ ರಚನೆಯನ್ನು ಸಂಗೀತಕ್ಕೆ ಅಳವಡಿಸಿದವರು ಅಶ್ವಥ್-ವೈದಿ ಜೋಡಿ. (ಸಿ.ಅಶ್ವಥ್ ಮತ್ತು ಎಲ್.ವೈದ್ಯನಾಥನ್). ಹಾಡಿದವರು ಎಸ್.ಜಾನಕಿ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಆ ಕಾಲದಲ್ಲಿ ಒಂದು ವಿಶೇಷವಾಗಿದ್ದ "ಸ್ಲೋಮೋಷನ್" ಈ ಹಾಡಿನ ಚಿತ್ರೀಕರಣದಲ್ಲಿ ತುಂಬ ಬಳಕೆಯಾಗಿದೆ.

*** *** *** *** *** *** ***

ಮುಂದಿನದು ಒಂದು ವಾದ್ಯವೃಂದ ಪ್ರಸ್ತುತಿ. ವಯಲಿನ್, ಸಿತಾರ್, ಶಂಕರ-ಗಿಟಾರ್, ಸುರಬಹಾರ್, ಮತ್ತು ಹಂಗೇರಿಯನ್ ಗಿಟಾರ್ ಸೇರಿದ ವಾದ್ಯಗೋಷ್ಠಿ, ವಾರಣಾಸಿಯ ‘ಶಂಕರ್ ಆರ್ಕೆಸ್ಟ್ರಾ’ ತಂಡದವರಿಂದ ರಾಗ ಯಮನ್ ಕಲ್ಯಾಣ್‌ನ ಒಂದು ವಿಲಂಬಿತ್ ಗತ್. ಶಂಕರ-ಗಿಟಾರ್ ಎಂದರೆ ಡಾ.ಕಮಲಾ ಶಂಕರ ಅವರು ತಾವೇ ರೂಪಿಸಿದ ಸರೋದ್-ಸಿತಾರ್ ಮಿಶ್ರತಳಿಯ ವಾದ್ಯವೆನ್ನುತ್ತದೆ ಈ ತಂಡದ ವೆಬ್‌ಸೈಟ್‌ನಲ್ಲಿರುವ ವಿವರ.

*** *** *** *** *** *** ***

ಈಗಿನ್ನು ಮತ್ತೆ ಒಂದೆರಡು ಚಿತ್ರಗೀತೆಗಳು.  ಮುಖೇಶ್ ಹಾಡಿರುವ ಸರಸ್ವತಿಚಂದ್ರ ಚಿತ್ರದ “ಚಂದನ್ ಸಾ ಬದನ್..." ಅಂದಿನ ತಾರೆ ನೂತನ್ ನಟಿಸಿದ ಈ ಚಿತ್ರ, ಬಾಲಿವುಡ್ ನಿರ್ಮಿಸಿದ ಕೊನೆಯ ಕಪ್ಪು-ಬಿಳುಪು ಚಿತ್ರ ಎಂದು ದಾಖಲಾಗಿದೆ. ಈ ಹಾಡಿನ ಸಾಹಿತ್ಯ ಇಂದೀವರ್ ಅವರದು, ಸಂಗೀತನಿರ್ದೇಶನ ಕಲ್ಯಾಣ್‌‍ಜೀ ಆನಂದ್‌‍ಜೀ.

*** *** *** *** *** *** ***

ಹೊಂಬಿಸಿಲು ಚಿತ್ರದಲ್ಲಿ ಎಸ್.ಜಾನಕಿ ಹಾಡಿರುವ “ಹೂವಿಂದ ಹೂವಿಗೆ ಹಾರುವ ದುಂಬಿ..." - ಕಲ್ಯಾಣಿ ರಾಗವನ್ನಾಧರಿಸಿದ ಒಂದು ಸುಮಧುರವಾದ ಹಾಡು. ರಾಜನ್-ನಾಗೇಂದ್ರ ಸಂಗೀತ ಸಂಯೋಜನೆ. ಸಾಹಿತ್ಯ- ಗೀತಪ್ರಿಯ.

*** *** *** *** *** *** ***

ಕಲ್ಯಾಣಿ ರಾಗವೆಂದೊಡನೆ ನನಗೆ ತತ್‍ಕ್ಷಣ ನೆನಪಾಗುವ ಮೋಸ್ಟ್ ಫೇವರಿಟ್ ಹಾಡೆಂದರೆ ಚಿತ್‌ಚೋರ್ ಚಿತ್ರದಲ್ಲಿ ಕೆ.ಜೆ.ಯೇಸುದಾಸ್ ಮತ್ತು ಹೇಮಲತಾ ಹಾಡಿರುವ ಎವರ್‌ಗ್ರೀನ್ ಸೂಪರ್‌ಹಿಟ್ “ಜಬ್ ದೀಪ್ ಜಲೇ ಆನಾ..." ಇದರ ಸಂಗೀತನಿರ್ದೇಶಕರು ರವೀಂದ್ರ ಜೈನ್.  ಚಿತ್‌ಚೋರ್ ಸಿನೆಮಾದ ಹಿನ್ನೆಲೆಗಾಯನಕ್ಕಾಗಿ ಯೇಸುದಾಸ್ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ರಫಿ-ಕಿಶೋರ್-ಮನ್ನಾಡೆ-ಮುಖೇಶ್ ಮುಂತಾದ ಹಿಂದೀ ದಿಗ್ಗಜರಲ್ಲಿ ಯಾರೊಬ್ಬರೂ ಕೂಡ "ಜಬ್ ದೀಪ್ ಜಲೇ ಆನಾ..." ಹಾಡನ್ನು ಯೇಸುದಾಸ್‌ರಷ್ಟು ಮಧುರವಾಗಿ ಹಾಡುತ್ತಿರಲಿಲ್ಲವೇನೋ ಎಂದು ಈ ದಿಗ್ಗಜರ ಪರಮಭಕ್ತರೇ ಅಭಿಪ್ರಾಯಪಡುತ್ತಾರೆ. ಯೇಸುದಾಸ್‌ರಂಥ ಕಲಾವಿದರು ಕಲ್ಯಾಣಿ ರಾಗದಲ್ಲಿ ಹಾಡಿದರೆಂದರೆ ಅದರಲ್ಲಿ ಇಡೀ ಜೀವವನ್ನೇ ತುಂಬಿಸಿಬಿಡುತ್ತಾರೆ ಎಂದು ಪ್ರತೀತಿ.

*** *** *** *** *** *** ***

ಈಗ ಒಂದು ಮೀರಾ ಭಜನ್ ಕೇಳೋಣ. ಪ್ರಖ್ಯಾತ ಠುಮ್ರಿ/ಭಜನ್ ಗಾಯಕಿ ಕಿಶೋರಿ ಅಮೋನ್‌ಕರ್ ಹಾಡಿರುವ  “ಮ್ಹಾರೋ ಪ್ರಣಾಮ್ ಬಾಕೇ ಬಿಹಾರೀಜೀ..." ಕಿಶೋರಿ ಅಮೋನ್‌ಕರ್  ‘ಜೈಪುರಿ’ ಗಾಯಕಿಶೈಲಿಯಲ್ಲಿ ಹಾಡಿರುವ ಈ ಗೀತೆ ಹೆಚ್ಚಿನೆಲ್ಲ ಮೀರಾಭಜನ್‌ಗಳಂತೆ ರಾಜಸ್ಥಾನಿ ಭಾಷೆಯಲ್ಲಿದೆ. ಇದೇ ಹಾಡು ಇನ್ನೋರ್ವ ಪ್ರಖ್ಯಾತ ಗಾಯಕಿ ಶೋಭಾ ಗುರ್ತು ಅವರು ಹಾಡಿರುವುದೂ ತುಂಬ ಜನಪ್ರಿಯವಾಗಿದೆ.

*** *** *** *** *** *** ***

ಮಲಯಾಳಂ ಚಿತ್ರಗೀತೆಗಳಲ್ಲಿ ಮಾಧುರ್ಯ ಹೆಚ್ಚು. ಭಾಷೆ ಅರ್ಥವಾಗದಿದ್ದರೂ ಅವುಗಳಲ್ಲಿನ ಮಾಧುರ್ಯದಿಂದಾಗಿ ಅವು ನಮಗೆ ಇಷ್ಟವಾಗುತ್ತವೆ. ಈಗೊಂದು ಮಲಯಾಳಂ ಚಿತ್ರಗೀತೆ ವಿನೋದಯಾತ್ರಾ ಚಿತ್ರದ “ಮಂದಾರಪೂಮುಳಿ..." ಇಳಯರಾಜಾ ಸಂಗೀತನಿರ್ದೇಶನದಲ್ಲಿ ಮಧು ಬಾಲಕೃಷ್ಣನ್ ಮತ್ತು ಶ್ವೇತಾ ಹಾಡಿದ್ದಾರೆ.

*** *** *** *** *** *** ***

ನಮ್ಮ ಹೆಮ್ಮೆಯ ಕನ್ನಡತಿ, ಸುಗಮಸಂಗೀತದಿಂದ ಜಗತ್ತಿನೆಲ್ಲೆಡೆ ಪ್ರಖ್ಯಾತಿ ಪಡೆದ  ಎಂ.ಡಿ.ಪಲ್ಲವಿ ಹಾಡಿರುವ ಯಮನ್ ಕಲ್ಯಾಣ್ ರಾಗದ ಒಂದು fusion piece: "ಮನ್ ಲೇ ಗಯೋ ಸಾವರಾ..." ತನ್ನ ಮನಸ್ಸನ್ನೂ ಹೃದಯವನ್ನೂ ಕದ್ದೊಯ್ದವನ ಕುರಿತು ಹೆಣ್ಣಿನ ಹಾ(ಪಾ)ಡು.

*** *** *** *** *** *** ***

ಶಂಕರಾಭರಣಂ ತೆಲುಗು ಚಿತ್ರದ ಹೆಸರನ್ನು ಕೇಳದವರಾರು? ಅದರಲ್ಲಿನ ಹಾಡುಗಳನ್ನು ಮೆಚ್ಚದವರಾರು? ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ಶಂಕರಶಾಸ್ತ್ರಿಗಳು  “ದೊರಕುನಾ ಇಟುವಂಟಿ ಸೇವಾ..." ಹಾಡುತ್ತಾರೆ. ಹಾಡಿನ ಅರ್ಧದಲ್ಲೇ ಕೆಮ್ಮು ಬಂದು ಶಾಸ್ತ್ರಿಗಳು ಹಾಡುನಿಲ್ಲಿಸುತ್ತಾರೆ. ಅವರ ಶಿಷ್ಯ ಹಾಡನ್ನು ಮುಂದುವರಿಸುತ್ತಾನೆ. ಕೆ.ವಿ.ಮಹಾದೇವನ್ ಸಂಗೀತ ನಿರ್ದೇಶನ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ ಹಿನ್ನೆಲೆ ಗಾಯನ. ಈ ಮೂವರಿಗೂ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಗೀತೆಯಿದು. ಸಾಹಿತ್ಯ- ವೇಟೂರಿ ಸುಂದರರಾಮಮೂರ್ತಿ. "ದೊರಕುನಾ..." ಹಾಡು ಮುಗಿದ ನಂತರದ ದೃಶ್ಯವೂ ಇರುವ ವಿಡಿಯೋ ತುಣುಕನ್ನು ಬೇಕಂತಲೇ ಆಯ್ದುಕೊಂಡಿದ್ದೇನೆ, ಶಂಕರಾಭರಣಂ ಮತ್ತೊಮ್ಮೆ ಕಣ್ಣೆದುರಿಗೆ ಸೃಷ್ಟಿಯಾಗಲಿ ಎಂಬ ಉದ್ದೇಶದಿಂದ.

*** *** *** *** *** *** ***

ಈಗ ಒಂದು ತಮಿಳು ಚಿತ್ರಗೀತೆ ನೋಡೋಣ. ರೇವತಿ ಅಭಿನಯದ ‘ಉನ್ನೈ ನಾನ್ ಸಂದಿತ್ತೇನ್’ ಚಿತ್ರದಲ್ಲಿ ಎಸ್.ಜಾನಕಿ ಮತ್ತು ಜಯಚಂದ್ರನ್ ಹಾಡಿರುವ ಗೀತೆ "ದೇವನ್ ತಂದ ವೀಣೈ...". ಕಲ್ಯಾಣಿ ರಾಗವನ್ನು ಅತಿಯಾಗಿ ಮೆಚ್ಚಿಕೊಂಡವರೆಂದೇ ಖ್ಯಾತರಾದ ಇಳಯರಾಜಾ ಇದನ್ನು ಸಂಗೀತಕ್ಕೆ ಅಳವಡಿಸಿದ್ದಾರೆ. ಈ ಹಾಡನ್ನು ಕೇಳಿದಾಗ ನಿಮಗೆ ಒಂದು ಕನ್ನಡ ಚಿತ್ರಗೀತೆಯ ನೆನಪಾಗಬಹುದು. ಅದು ಯಾವುದೆಂದು ಇದಾದ ನಂತರ ನೋಡೋಣ!

*** *** *** *** *** *** ***

ಈಗ, ಶಂಕರನಾಗ್ ಅಭಿನಯದಲ್ಲಿ  "ಗೀತಾ" ಚಿತ್ರದ ಸುಂದರ ಗೀತೆ “ನನ್ನ ಜೀವ ನೀನು ನನ್ನ ಬಾಳ ಜೋಡಿ ನೀನು..." ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ಧ್ವನಿಯಲ್ಲಿ ಚಿ.ಉದಯಶಂಕರ್ ರಚನೆ. ಮತ್ತೆ, ಇಳೆಯರಾಜಾ ಅವರದೇ ಸಂಗೀತ ನಿರ್ದೇಶನ!

*** *** *** *** *** *** ***

ಲಾಲ್‌ಗುಡಿ ಜಿ ಜಯರಾಮನ್ ಮತ್ತು ಜಿ ಜೆ ಆರ್ ಕೃಷ್ಣನ್ ಅವರ ವಯಲಿನ್ ದ್ವಂದ್ವವಾದನದಲ್ಲಿ ಕಲ್ಯಾಣಿ ರಾಗದ ಒಂದು ತಿಲ್ಲಾನ.  ಪಕ್ಕವಾದ್ಯದಲ್ಲಿ ಕಾರೈಕುಡಿ ಮಣಿ  (ಮೃದಂಗ)ಮತ್ತು ಹರಿಶಂಕರ್ (ಖಂಜಿರ)

*** *** *** *** *** *** ***

ಇನ್ನು ಒಂದು ಗಜ಼ಲ್ ಕೇಳೋಣ. ಇತ್ತೀಚೆಗಷ್ಟೇ ನಿಧನರಾದ ಪ್ರಖ್ಯಾತ ಗಜ಼ಲ್‌ಗಾಯಕ ಮೆಹದೀ ಹಸನ್ (ಪಾಕಿಸ್ತಾನದ ಮಹಾನ್ ಪ್ರತಿಭೆ) ಹಾಡಿದ ಬಹುಪ್ರಖ್ಯಾತ  “ರಂಜಿಷ್ ಹೈ ಸಹೀ ದಿಲ್ ಹಿ ದುಖಾನೇ ಕೆ ಲಿಯೆ..." ಅಲ್ಲಿಗೆ ನಮ್ಮ ಕಲ್ಯಾಣಿ ಕಲರವದಲ್ಲಿ ಉರ್ದು ಭಾಷೆಯೂ ಸೇರಿಕೊಂಡಂತಾಯ್ತು; ಅಗಲಿದ ಗಜ಼ಲ್ ಗಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದಂತೆಯೂ ಆಯ್ತು.

*** *** *** *** *** *** ***

ಮತ್ತೆ ಒಂದು ಕನ್ನಡ ಚಿತ್ರಗೀತೆ. ‘ಸಮಯದ ಗೊಂಬೆ’ ಚಿತ್ರದ "ಕೋಗಿಲೆ ಹಾಡಿದೆ ಕೇಳಿದೆಯಾ ಹೊಸ ರಾಗವ ಹಾಡಿದೆ ಆಲಿಸೆಯಾ..." ಹಾಡಿದವರು ಎಸ್.ಜಾನಕಿ ಮತ್ತು ಡಾ.ರಾಜಕುಮಾರ್. ಸಾಹಿತ್ಯ- ಚಿ.ಉದಯಶಂಕರ್, ಸಂಗೀತ- ಎಂ.ರಂಗರಾವ್.

*** *** *** *** *** *** ***

ಮುಂದಿನದು ಒಂದು ಕರ್ನಾಟಕ ಶಾಸ್ತ್ರೀಯ ಸಂಗೀತದ ತುಣುಕು. ಅಮೆರಿಕದ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ಸಂಗೀತೋತ್ಸವದಲ್ಲಿ ಖ್ಯಾತ ಸಂಗೀತವಿದುಷಿ ಸುಧಾ ರಘುನಾಥನ್ ಹಾಡುಗಾರಿಕೆ ಕಾರ್ಯಕ್ರಮದಿಂದ ಆಯ್ದ "ಹರಿಸ್ಮರಣೆ ಮಾಡೋ ನಿರಂತರ ಪರಗತಿಗಿದು ನಿರ್ಧಾರ..." ಪುರಂದರ ದಾಸರ ಕೃತಿ.

*** *** *** *** *** *** ***

ಪಂಡಿತ್ ಭೀಮಸೇನ್ ಜೋಶಿಯವರು ಕನ್ನಡ ಭಕ್ತಿಗೀತೆಗಳನ್ನೂ, ಮರಾಠಿ ಅಭಂಗಗಳನ್ನು ಹಾಡಿದ್ದಾರಾದರೂ ಮುಖ್ಯವಾಗಿ ಅವರ ಹಿರಿಮೆ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರನಾಗಿ. ಇಲ್ಲಿ ಅವರ ಕಂಚಿನ ಕಂಠದಲ್ಲಿ  “ಏರಿ ಆಲಿ ಪಿಯಾ ಬಿನ..." ಹಿಂದುಸ್ಥಾನಿ ಶೈಲಿಯಲ್ಲಿ ರಾಗ ಯಮನ್ ಕಲ್ಯಾಣ್‌ನ ಒಂದು ಬಂದಿಶ್ (ಸಾಂಪ್ರದಾಯಿಕ ಗೀತೆ).

*** *** *** *** *** *** ***

ಈಗ ಒಂದು ವಾದ್ಯಸಂಗೀತದ ತುಣುಕನ್ನು ಆಲಿಸೋಣ. ಯುವಕಲಾವಿದ ಉತ್ಸವಲಾಲ್ ಪಿಯಾನೋದಲ್ಲಿ ನುಡಿಸಿರುವ ಯಮನ್ ಕಲ್ಯಾಣ್ ರಾಗ. ತಬಲಾ ಸಾಥಿ ಆದಿತ್ಯ ಕಲ್ಯಾಣಪುರ್. ಇದು 2008ರಲ್ಲಿ ಮುಂಬಯಿಯಲ್ಲಿ  ಟಾಟಾ ಪ್ರಾಯೋಜಕತ್ವದಲ್ಲಿ ನಡೆದ live concertನಿಂದ ಅಯ್ದ ಭಾಗ.

*** *** *** *** *** *** ***

ರಬೀಂದ್ರ ಸಂಗೀತ ಎಂದು ನೀವು ಕೇಳಿರಬಹುದು. ರವೀಂದ್ರನಾಥ ಟಾಗೋರರ ಬಂಗಾಲಿ ಭಾಷೆಯ ಗೀತೆಗಳ ಶಾಸ್ತ್ರೀಯ ಗಾಯನ. ಇಲ್ಲಿ ಅಂಥದೊಂದು ಪ್ರಸ್ತುತಿ ಇದೆ, ಕಲ್ಯಾಣಿ ರಾಗದಲ್ಲಿ "ಮಧುರೋ ಧ್ವೊನಿ" - ಹಾಡಿರುವವರು ಶ್ರಬನಿ ಸೇನ್ ಮತ್ತು ಕೌಶಿಕಿ ದೇಸಿಕನ್. ಕಲ್ಯಾಣಿ ರಾಗ ಹೇಗೆ ನಮ್ಮ ದೇಶದ ಉದ್ದಗಲಕ್ಕೂ ಸಂಗೀತಸೌರಭವನ್ನು ಸೂಸಿದೆ ಎಂದು ಉದಾಹರಿಸುವುದಕ್ಕೋಸ್ಕರ ಇದನ್ನಿಲ್ಲಿ ಸೇರಿಸಿಕೊಂಡಿದ್ದೇನೆ. ದಕ್ಷಿಣಾದಿ ಸಂಗೀತದಲ್ಲಿರುವ ‘ತಿಲ್ಲಾನ’ ಇರುವಂತೆ ಉತ್ತರಾದಿ ಸಂಗೀತದಲ್ಲಿ ‘ತರಾನ’, ಈ ಪ್ರಸ್ತುತಿಯಲ್ಲಿ ಇದೆ.

*** *** *** *** *** *** ***

ಈಗ ಇನ್ನೊಂದು ಅತಿಮಧುರವಾದ ಹಿಂದಿ ಚಿತ್ರಗೀತೆ, ‘ಕಿನಾರಾ’ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಮತ್ತ ಭೂಪಿಂದರ್ ಸಿಂಗ್ ಹಾಡಿರುವ ಗುಲ್ಜಾರ್ ಅವರ ರಚನೆ. ಸಂಗೀತ ಆರ್. ಡಿ.ಬರ್ಮನ್. “ನಾಮ್ ಗುಮ್ ಜಾಯೇಗಾ ಚೆಹರಾ ಯೇ ಬದಲ್ ಜಾಯೇಗಾ..." ಹಾಡು ಆರಂಭವಾಗುವ ಮೊದಲು ಒಂದು ಸ್ವಗತದ ಸಂಭಾಷಣೆಯೂ ಇದೆ, ಗಮನಿಸಿ.

*** *** *** *** *** *** ***

ಪಂಡಿತ್ ಡಿ.ವಿ.ಪಲುಸ್ಕರ್ ಓರ್ವ ಅಸಾಮಾನ್ಯ ಪ್ರತಿಭೆ. ಗ್ವಾಲಿಯರ್ ಘರಾಣಾದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದ. ಹದಿನಾಲ್ಕು ವರ್ಷದ ಬಾಲಕನಾಗಿದ್ದಾಗ ಮೊಟ್ಟಮೊದಲ ಸಂಗೀತ ಕಛೇರಿ ನಡೆಸಿಕೊಟ್ಟವರು. ಕೇವಲ 34ವರ್ಷಗಳಷ್ಟೇ ಬದುಕಿದ್ದ ಅವರು ಅಷ್ಟು ಅವಧಿಯಲ್ಲೇ ಒಬ್ಬ ಮಹಾನ್ ಕಲಾಕಾರ ಎಂದು ಗೌರವಕ್ಕೆಪಾತ್ರರಾದವರು.  ಡಿ.ವಿ.ಪಲುಸ್ಕರ್  ಹಾಡಿರುವ ಒಂದು ಸಾಂಪ್ರದಾಯಿಕ ಪಂಜಾಬಿ ಗೀತೆ, “ಲಂಗರವ ತುರಕ ಜಿನ ಛೂವೋ ..."

*** *** *** *** *** *** ***

ಕಾರ್ಯಕ್ರಮದ ಆರಂಭದಲ್ಲಿ ಕೇಳಿದ್ದ ಮರಾಠಿ ಭಜನ್ ‘ತೂಝ ಮಾಗತೊ ಮೀ ಆತಾ...’  ಹಿಂದುಸ್ಥಾನಿ ಶೈಲಿಯಲ್ಲಿ ಪ್ರಸಾದ್ ಭಂಡಾರ್ಕರ್ ಅವರ ಬಾನ್ಸುರಿ ವಾದನದಲ್ಲಿ ಕೇಳಿದರೆ ಹೇಗಿರಬಹುದು? ಹೀಗೆ-

*** *** *** *** *** *** ***

ಕಾರ್ಯಕ್ರಮ ಇನ್ನೇನು ಮುಗಿಯುತ್ತ ಬಂತು, ಈಗ ವಾದ್ಯಸಂಗೀತದ ಇನ್ನೊಂದು ಚಿಕ್ಕ ತುಣುಕನ್ನು ಆನಂದಿಸೋಣ. ಇದಕ್ಕೆ ಕೊಂಚ ವಿವರಣೆಯ ಆವಶ್ಯಕತೆ ಇದೆ. ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ‘ಗ್ರಾಮೊಫೋನ್ ಕಂಪನಿ ಆಫ್ ಇಂಡಿಯಾ’ದವರು ಏರ್ ಇಂಡಿಯಾ ವಿಮಾನ ಸಂಸ್ಥೆಗಾಗಿ ‘ನಮಸ್ಕಾರ್’ ಎಂಬ ಒಂದು ಮ್ಯೂಸಿಕ್ ಆಲ್ಬಮ್ ರಚಿಸಿದರು. ಖ್ಯಾತ ಸಂಗೀತ ಕಲಾವಿದ ದಿಲೀಪ್ ರಾಯ್ ಅವರ ನಿರ್ದೇಶನದ ಆರ್ಕೆಸ್ಟ್ರಾದಲ್ಲಿ  ಅಚ್ಚಭಾರತೀಯ ಶೈಲಿಯ ಕೆಲವು ಟ್ಯೂನ್‌ಗಳು. ಏರ್‌ಇಂಡಿಯಾ ವಿಮಾನಗಳಲ್ಲಿ ಈ ಸಂಗೀತವನ್ನು ಪ್ಲೇ ಮಾಡುತ್ತಿದ್ದರಂತೆ. ಇದೇ ಆಲ್ಬಮ್ ಆಕಾಶವಾಣಿ ಕೇಂದ್ರಗಳಿಗೂ ವಿತರಣೆಯಾಗಿತ್ತೆಂದು ಕಾಣುತ್ತದೆ. ಮಂಗಳೂರು ಆಕಾಶವಾಣಿಯ ಆರಂಭಿಕ ವರ್ಷಗಳಲ್ಲಿ ಕಾರ್ಯಕ್ರಮಗಳ ಮಧ್ಯೆ ಒಂದರ್ಧ ನಿಮಿಷದ time gap ಇದ್ದರೆ gap-filler-musicಆಗಿ ಈ ಆಲ್ಬಮ್‌ನ ಸಂಗೀತವನ್ನು ಪ್ರಸಾರ ಮಾಡುತ್ತಿದ್ದರು. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಲೇ ಬೆಳೆದ ನನಗೆ ಇವೆಲ್ಲ ಹಚ್ಚುಹಸುರು ನೆನಪುಗಳು. ನಮಸ್ಕಾರ್ ಎಂದು ಆಲ್ಬಮ್ ಹೆಸರಾಗಲೀ ಅದರ ಇತರ ವಿವರಗಳಾಗಲೀ ಆಗ ನನಗೆ ಗೊತ್ತಿರಲಿಲ್ಲ. ಮಂದೆ ನಾನು ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದಾಗ ಅಲ್ಲಿನ ಒಂದು ಮ್ಯೂಸಿಕ್ ಅಂಗಡಿಯಲ್ಲಿ ‘Namaskar- Melodies from India' ಎಂಬ ಸಿ.ಡಿ.ಯನ್ನು ಗಮನಿಸಿದೆ, ಕುತೂಹಲವಾಯ್ತು, ಕೊಂಡುಕೊಂಡೆ. ಮನೆಗೆ ಹೋಗಿ ಪ್ಲೇ ಮಾಡಿ ನೋಡಿದರೆ ಮಂಗಳೂರು ಆಕಾಶವಾಣಿಯಲ್ಲಿ ಯಾವಾಗಲೂ ಕೇಳಿ ಬರುತ್ತಿದ್ದ ಟ್ರ್ಯಾಕ್‍ಗಳು! ಅಕಾಶವಾಣಿಯಲ್ಲಿ ಅರ್ಧಂಬರ್ಧ ಕೇಳುತ್ತಿದ್ದದ್ದು ಈಗ ಸ್ವಂತದ ಮ್ಯೂಸಿಕ್ ಸಿಸ್ಟಮ್‌ನಲ್ಲಿ ಪೂರ್ತಿ ಕೇಳುವ ಅವಕಾಶ. ‘ನಮಸ್ಕಾರ್’ ಆಲ್ಬಮ್ ನನ್ನ ಹೆಮ್ಮೆಯ ಸಂಗ್ರಹ ಎನಿಸಿತು. ಆ ಆಲ್ಬಮ್‌ನ ಮೊದಲ ಟ್ರ್ಯಾಕ್ ರಾಗ ಯಮನ್‌ನ ಒಂದು ಪ್ರಸ್ತುತಿ. ಟ್ರ್ಯಾಕ್ ಹೆಸರು ಸಹ ಯಮನ್ ಎಂದೇಇದೆ. ಯುಟ್ಯೂಬ್‌ನಲ್ಲಿ ಹುಡುಕಿದಾಗ ಈ ಟ್ರ್ಯಾಕ್ ಎಲ್ಲೂ ಸಿಗಲಿಲ್ಲವಾದ್ದರಿಂದ ನನ್ನ ಸಂಗ್ರಹದಿಂದಲೇ ಯೂಟ್ಯೂಬ್‌ಗೆ ಅಪ್‌‍ಲೋಡ್ ಮಾಡಿ ಇಲ್ಲಿ ಕಲ್ಯಾಣಿ ಕಲರವದಲ್ಲಿ ಸೇರಿಸಿಕೊಂಡಿದ್ದೇನೆ. ಕೇಳಿ, Yaman- from the album "Namaskar"!

*** *** *** *** *** *** ***

ಇನ್ನೂ ಒಂದು instrumental music track ಈ ಕಾರ್ಯಕ್ರಮಕ್ಕೆ ಹೇಳಿಮಾಡಿಸಿದಂಥದು ಇಲ್ಲಿದೆ. ಇದು ಖ್ಯಾತ ಕಲಾವಿದ ಕೊಡಮಲೂರು ಜನಾರ್ದನನ್ ಅವರ ವೇಣುವಾದನದಲ್ಲಿ ‘ಕೃಷ್ಣಾ ನೀ ಬೇಗನೇ ಬಾರೋ..." - ಇದನ್ನು ಕೇಳುತ್ತ ಕೇಳುತ್ತ ನಿಮಗೆ ವೃಂದಾವನಕ್ಕೇ ಹೋಗಿಬಂದ ಅನುಭವವಾದರೆ ಸ್ವಲ್ಪವೂ ಆಶ್ಚರ್ಯವಿಲ್ಲ! ಕೊಡಮಲೂರು ಜನಾರ್ದನನ್ ಕೇರಳದ ಒಬ್ಬ ಕಲಾವಿದ. ಅವರ ಕೊಳಲುವಾದನ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಮೃದಂಗ-ಘಟಗಳಷ್ಟೇ ಅಲ್ಲದೆ ಕೇರಳದ ಉಡುಕ್ಕು, ತಿಮಿಲ, ಎಡಕ್ಕ ಮುಂತಾದ ಪಕ್ಕವಾದ್ಯಗಳೂ ಬಳಕೆಯಾಗುತ್ತವೆ.

*** *** *** *** *** *** ***

ಕೊನೆಯಲ್ಲಿ, ಒಂದು ಅತ್ಯಂತ ಜನಪ್ರಿಯ ತುಳಸೀದಾಸ ಭಜನ್  ಕೇಳುತ್ತ ಈ ಕಲ್ಯಾಣಿ ಕಲರವವನ್ನು ಮುಗಿಸೋಣ. ಈ ಹಾಡು ಲತಾ ಮಂಗೇಷ್ಕರ್ ಹಾಡಿರುವ ಆವೃತ್ತಿಯೇ ತುಂಬಾ ಜನಪ್ರಿಯವಾದರೂ ನಾವಿಲ್ಲಿ ಕಾಳುತ್ತಿರುವುದು, ಅಷ್ಟೇ ಮಧುರವಾಗಿ ಅನುರಾಧಾ ಪೌಡ್ವಾಲ್ ಹಾಡಿರುವ “ಶ್ರೀರಾಮಚಂದ್ರ ಕೃಪಾಳು ಭಜಮನ..."

*** *** *** *** *** *** ***

ಇಲ್ಲಿಗೆ ಕಲ್ಯಾಣಿ ಕಲರವ ಮುಗಿಯಿತು. ಇದರಲ್ಲಿನ ಕೆಲವು ಟ್ಯೂನ್‌ಗಳನ್ನಾದರೂ ಮನಸ್ಸಿನಲ್ಲೇ ಅಥವಾ ಮೆಲುದನಿಯಲ್ಲಿ ಗುಣುಗುಣಿಸತೊಡಗಿದರೆ ಕಲ್ಯಾಣಿ(ಯಮನ್) ರಾಗದ ಸ್ವರಜ್ಞಾನ ಬಂತು ಅಂತಲೇ ಲೆಕ್ಕ!

kalyaniscale.jpg

ಈ ಕಲರವ, ಇದರ ಸ್ವರೂಪ ನಿಮಗೆ ಇಷ್ಟವಾಯ್ತೋ ಇಲ್ಲವೋ ಎಂದು ತಿಳಿಯಲು ನಿಮ್ಮ ಪ್ರತಿಕ್ರಿಯೆಯನ್ನು ಎದುರುನೋಡುತ್ತಿರುತ್ತೇನೆ. ಮತ್ತೆ ಮುಂದಿನಸಲ ಮತ್ತೊಂದು ರಾಗದೊಂದಿಗೆ ಭೇಟಿ.

ಅಲ್ಲಿಯವರೆಗೂ, ನಂತರವೂ ಲೋಕಕ್ಕೆಲ್ಲ ‘ಕಲ್ಯಾಣ’ವಾಗುತ್ತಿರಲಿ!


You can follow any responses to this entry through the RSS 2.0 feed. You can skip to the end and leave a response. Pinging is currently not allowed.