ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for January 2011


Perfect Punctuation

Saturday, January 29th, 2011
DefaultTag | Comments

ದಿನಾಂಕ 30 ಜನವರಿ 2011ರ ಸಂಚಿಕೆ...

ವಿರಾಮ ಚಿಹ್ನೆಗಳದೊಂದು ಲೋಕಾಭಿರಾಮ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು]

ವಿರಾಮ ಚಿಹ್ನೆಗಳಿಗೂ ವಿರಾಮ ಬೇಡವೇ? ಅಕ್ಷರಗಳೊಂದಿಗೆ ಅವಿರತವಾಗಿ ದುಡಿಯುವ ಅವುಗಳಿಗೂ ದಣಿವಾಗುವುದಿಲ್ಲವೇ? ಅಂಥದೊಂದು ಆಲೋಚನೆಯಿಂದಲೇ ಕಳೆದವಾರದ ಅಂಕಣದಲ್ಲಿ ನಾನು ಪೂರ್ಣವಿರಾಮವೊಂದನ್ನು ಬಿಟ್ಟು ಮಿಕ್ಕೆಲ್ಲ ವಿರಾಮ ಚಿಹ್ನೆಗಳಿಗೆ ವಿರಾಮ ಘೋಷಿಸಿದ್ದೆ (ಪೂರ್ಣವಿರಾಮವನ್ನು ಮಾತ್ರ ಉಳಿಸಿಕೊಂಡದ್ದು, ಕರ್ಫ್ಯೂ/ಬಂದ್ ಸಂದರ್ಭದಲ್ಲಿ ಹಾಲು, ಪತ್ರಿಕೆ ಮುಂತಾಗಿ essential servicesಗೆ ಮಾತ್ರ ವಿನಾಯತಿ ಇರುವ ಹಾಗೆ). ಅದನ್ನೇ ಕ್ವಿಜ್ ಪ್ರಶ್ನೆಯಾಗಿಸಿ ‘ಈ ಲೇಖನದಲ್ಲಿ ಸ್ವಲ್ಪ ಅಸಾಮಾನ್ಯವೆನಿಸುವ ಅಂಶವೊಂದನ್ನು ಅಳವಡಿಸಲಾಗಿದೆ, ಅಥವಾ ಅಳವಡಿಸಿಕೊಂಡಿಲ್ಲ. ಏನದು?’ ಎಂದು ಕೇಳಿದ್ದೆ. ನೂರಾರು ಪತ್ರಗಳು ಬಂದಿವೆಯಾದರೂ ಸರಿಯುತ್ತರ ಬರೆದು ತಿಳಿಸಿದವರು ನಾಲ್ಕು ಮಂದಿ: ಹಿಡಕಲ್‌ಡ್ಯಾಮ್‌ನಿಂದ ಕಾಡೇಶ ಕರಗುಪ್ಪಿ, ಕ್ಯಾಲಿಫೋರ್ನಿಯಾದಿಂದ ಸುದತ್ತ ಗೌತಮ್, ಇಂಡಿಯಾನಾದಿಂದ ವೆಂಕಟಪ್ರಸಾದ ಭಟ್ ಮತ್ತು ಮೇರಿಲ್ಯಾಂಡ್‌ನಿಂದ ಮಧುಶಾಲಿನಿ ಭಾಸ್ಕರ್. ಇವರೆಲ್ಲರಿಗೆ ಸಾಂಪ್ರದಾಯಿಕವಾಗಿ ಅಭಿನಂದನೆ ಸಲ್ಲಿಸೋಣ. ಆದರೆ, ಸ್ವಲ್ಪ ತಾಳಿ. “ಅಯ್ಯೋ... ನಮಗೆ ಗೊತ್ತೇ ಆಗಲಿಲ್ಲವಲ್ಲ!” ಎಂದು ನೀವು ಚಡಪಡಿಸಬೇಕಾಗಿಲ್ಲ. ಏಕೆಂದರೆ ಆ ಕ್ವಿಜ್ ಕೂಡ ಸ್ವಲ್ಪ ಅಸಾಮಾನ್ಯವೇ. ಅದರ ಸರಿಯುತ್ತರ ಗೊತ್ತಾಗದಿದ್ದರೇನೇ ಒಳ್ಳೆಯದು- ಯಾಕಂತೀರಾ? ನೀವು ವಿರಾಮ ಚಿಹ್ನೆಗಳ ಹೆಚ್ಚುವರಿ ಸಹಾಯವಿಲ್ಲದೆಯೇ ಲೇಖನವನ್ನು ಪರ್ಫೆಕ್ಟಾಗಿ ಓದಿದಿರಿ; ಓದಿ ಅರ್ಥ ಮಾಡಿಕೊಂಡಿರಿ. ನಿಮಗೆ ಅಸಾಮಾನ್ಯವೇನೂ ಅನಿಸಲಿಲ್ಲ ಅಂತಾಯ್ತು. ಅಲ್ಲವೇ?

ನಾನು ಬರವಣಿಗೆಯಲ್ಲಿ ವಿರಾಮ ಚಿಹ್ನೆಗಳನ್ನು ಬಳಸುವುದು ಹೆಚ್ಚು. ಕೆಲವೊಮ್ಮೆ ಅಗತ್ಯಕ್ಕಿಂತಲೂ ಹೆಚ್ಚು ಎನ್ನುವಷ್ಟು. ‘ಚಿತ್ರಾನ್ನದಲ್ಲಿ ಅನ್ನಕ್ಕಿಂತ ಒಗ್ಗರಣೆ ಸಾಮಗ್ರಿಯೇ ಜಾಸ್ತಿ’ ಎಂದು ಅದನ್ನು ನಾನು ಹೋಲಿಸುತ್ತೇನೆ. ಇವತ್ತಿನ ಲೇಖನದ ಮೊದಲ ಪ್ಯಾರಾಗ್ರಾಫನ್ನು ನೋಡಿದರೆ ನಿಮಗೆ ತಿಳಿಯುತ್ತದೆ- ಅದರಲ್ಲಿ ಸುಮಾರಾಗಿ ಎಲ್ಲ ವಿಧದ ಪಂಕ್ಚುವೇಶನ್ ಮಾರ್ಕ್‌ಗಳು ಒಮ್ಮೆಯಾದರೂ ಬಳಕೆಯಾಗಿವೆ. ಹಾಗಿರುವಾಗ ಇಡೀ ಲೇಖನವನ್ನು ಫುಲ್‌ಸ್ಟಾಪ್ ಒಂದನ್ನೇ ಇಟ್ಟುಕೊಂಡು ಬರೆಯಬೇಕೆಂದರೆ ಸ್ವಲ್ಪ ಕಷ್ಟವೇ ಇದೆ. ಆದರೂ ವೈವಿಧ್ಯವಿರಲಿ ಮತ್ತು ಅಷ್ಟಿಷ್ಟು ಚಮತ್ಕಾರವಿರಲಿ ಎಂದು ಇಂಥ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಮೂರು ವರ್ಷಗಳ ಹಿಂದೊಮ್ಮೆ ಈ ಅಂಕಣದಲ್ಲಿ ‘ಯಾರಿಟ್ಟರೀ ಚುಕ್ಕಿ... ಯಾಕಿಟ್ಟರೀ ಚುಕ್ಕಿ...’ ಶೀರ್ಷಿಕೆಯ ಲೇಖನದಲ್ಲೂ ಇದೇ ಪ್ರಯೋಗ ಮಾಡಿದ್ದೆ. ಚುಕ್ಕಿಯ ಬಗ್ಗೆಯೇ ಲೇಖನವಾದ್ದರಿಂದ ಚುಕ್ಕಿಯನ್ನು ಮಾತ್ರ ಬಳಸಿದ್ದೆ. ಕಳೆದವಾರ ‘ತಿನ್ನುವ’ ವಿಷಯವಿತ್ತಾದ್ದರಿಂದ ವಿರಾಮ ಚಿಹ್ನೆಗಳನ್ನು ಗುಳುಂ ಸ್ವಾಹಾ ಮಾಡಲು ಸೂಕ್ತ ಸಂದರ್ಭ ಎಂದು ಹಾಗೆ ಮಾಡಿದೆ.

punctuationteacher.gif

ಬರವಣಿಗೆಯಲ್ಲಿ ವಿರಾಮ ಚಿಹ್ನೆಗಳ ಅಗತ್ಯ ಮತ್ತು ಮಹತ್ವ ನಮಗೆಲ್ಲ ಗೊತ್ತೇ ಇದೆ. ವಿರಾಮ ಚಿಹ್ನೆಗಳೇ ಇಲ್ಲದ ಬರಹವನ್ನು ಊಹಿಸುವುದೂ ಕಷ್ಟ. ಇಲ್ಲಿ ಅಮೆರಿಕದಲ್ಲಿ ಶಾಲಾಮಕ್ಕಳಿಗೆ ಪಂಕ್ಚುವೇಶನ್ ಮಹತ್ವ ತಿಳಿಸಲು Punctuation takes a vacation ಎಂಬ ಒಂದು ಸಚಿತ್ರಕಥೆಪುಸ್ತಕ ಓದಲು ಸಲಹಿಸುತ್ತಾರೆ. ರಾಬಿನ್ ಪಲ್ವರ್ ಬರೆದ ಆ ಪುಸ್ತಕ ತುಂಬಾ ಚೆನ್ನಾಗಿದೆ. ಮಿಸ್ಟರ್ ರೈಟ್ ಎಂಬ ಹೆಸರಿನ ಶಿಕ್ಷಕ ಮೂರನೇ ತರಗತಿಯ ಮಕ್ಕಳಿಗೆ ವಿರಾಮ ಚಿಹ್ನೆಗಳನ್ನು ಕಲಿಸುತ್ತಿರುತ್ತಾರೆ. ದಿನಾ ಬೋರ್ಡ್ ಮೇಲೆ, ಮಕ್ಕಳ ಹೋಮ್‌ವರ್ಕ್ ಪುಸ್ತಕದಲ್ಲಿ ಅವು ಪ್ರತ್ಯಕ್ಷವಾಗುತ್ತವೆ. ಕೆಲವು ತಪ್ಪಾಗಿ, ಕೆಲವು ಸರಿಯಾಗಿ. ಎರೇಸರ್‌ನಿಂದ ಅಳಿಸಲ್ಪಡುವವು ಕೆಲವಾದರೆ ಉಪಾಧ್ಯಾಯರ ಕೆಂಪುಶಾಯಿಗೆ ಗುರಿಯಾಗುವವು ಇನ್ನು ಕೆಲವು. ಒಂದುದಿನ ಮಿಸ್ಟರ್ ರೈಟ್ ಹೇಳುತ್ತಾರೆ- “ವಿರಾಮ ಚಿಹ್ನೆಗಳಿಗೆ ಒಮ್ಮೆ ರಜೆ ಕೊಡೋಣ!” ಹಾಗೆಂದದ್ದೇ ತಡ, ಚಿಹ್ನೆಗಳೆಲ್ಲ ತರಗತಿಯಿಂದ ಹೊರಟೇಬಿಡುತ್ತವೆ. ದೂರದ ದ್ವೀಪವೊಂದಕ್ಕೆ ಪ್ರವಾಸ ಹೋಗುತ್ತವೆ. ಮಕ್ಕಳಿಗೋ ಅವಿಲ್ಲದೆ ಬಿಕೋ ಅನಿಸುತ್ತದೆ. ಬರೆದದ್ದರಲ್ಲಿ ವಿರಾಮ ಚಿಹ್ನೆಗಳಿಲ್ಲದೆ ಏನೂ ಅರ್ಥವೇ ಬರುವುದಿಲ್ಲ. ಪ್ರವಾಸೀದ್ವೀಪದಿಂದ ವಿರಾಮ ಚಿಹ್ನೆಗಳು ಮಕ್ಕಳಿಗೆ ಪೋಸ್ಟ್‌ಕಾರ್ಡ್ಸ್ ಕಳಿಸುತ್ತವೆ. ಒಂದೊಂದು ಕಾರ್ಡ್‌ನಲ್ಲೂ ಬರೆದಿರುವುದನ್ನು ಓದಿ ಅದು ಯಾವ ಚಿಹ್ನೆ ಕಳಿಸಿದ ಕಾರ್ಡ್ ಇರಬಹುದು ಎಂದು ಮಕ್ಕಳು ಊಹಿಸಬೇಕು. ಚಿಹ್ನೆಗಳಿಲ್ಲದೆ ಬೋರಾಗುತ್ತಿದೆಯೆಂದು ಮಕ್ಕಳೂ ಓಲೆ ಬರೆಯುತ್ತಾರೆ. ಆದರೆ ವಿರಾಮ ಚಿಹ್ನೆ ಬಳಸುವಂತಿಲ್ಲವಲ್ಲ? ಪಕ್ಕದ ತರಗತಿಯಿಂದ ಎರವಲು ಪಡೆಯುತ್ತಾರೆ. ಕೊನೆಗೂ ಪ್ರವಾಸದಿಂದ ಚಿಹ್ನೆಗಳು ಮರಳಿದ ಮೇಲೆ ಮಿಸ್ಟರ್ ರೈಟ್ ಕ್ಲಾಸ್‌ನಲ್ಲಿ ಎಲ್ಲವೂ ಸೆಟ್ ರೈಟ್ ಆಗುತ್ತದೆ. Greedy Apostrophe: A Cautionary Tale ಎಂಬ ಇನ್ನೊಂದು ಪುಸ್ತಕವಿದೆ, ಇಂಗ್ಲಿಷ್‌ನಲ್ಲಿ (ಪುಣ್ಯಕ್ಕೆ ಕನ್ನಡದಲ್ಲಿ ಆ ಚಿಹ್ನೆಯ ಬಳಕೆ ಇಲ್ಲ) ಸಾಕಷ್ಟು ದಾಂಧಲೆಯೆಬ್ಬಿಸುವ ಎಪೊಸ್ಟ್ರೊಫಿ ಚಿಹ್ನೆ ಬಗ್ಗೆ. ಅದೂ ಸಹ ತುಂಬ ತಮಾಷೆಯಾಗಿ ಇದೆ. No Dog’s allowed - ಒಂದು ಪಾರ್ಕ್‌ನಲ್ಲಿ ಕಂಡುಬಂದ ಈ ಸೂಚನಾಫಲಕ, ಎಪೊಸ್ಟ್ರೊಫಿ ದಾಂಧಲೆಯ ಜಸ್ಟ್ ಒಂದು ಸ್ಯಾಂಪಲ್. Its ಮತ್ತು it’s ನಡುವಿನ ಗೊಂದಲವಂತೂ ಯೂನಿವರ್ಸಲ್.

ಪಂಕ್ಚುವೇಶನ್ ವಿಚಾರ ಬಂದಾಗೆಲ್ಲ ಪ್ರಸ್ತಾಪಗೊಳ್ಳುವ ಇನ್ನೊಂದು ಪುಸ್ತಕವೆಂದರೆ “Eats, Shoots and Leaves". ಇದು ಲಿನ್ನ್ ಟ್ರಸ್ಸ್ ಎಂಬಾಕೆ ಬರೆದದ್ದು. ಕರಡಿಯನ್ನು ಹೋಲುವ ಆದರೆ ಕರಡಿಗಿಂತಲೂ ಮುದ್ದಾದ ಪಾಂಡಾ ಪ್ರಾಣಿ ಗೊತ್ತಲ್ಲ? ಒಂದು ಎನ್‌ಸೈಕ್ಲೊಪಿಡಿಯಾದಲ್ಲಿ ಪಾಂಡಾ ಚಿತ್ರದ ಪಕ್ಕ ವಿವರಣೆಯಲ್ಲಿ Eats shoots and leaves ಅಂತ ಇತ್ತು. ಪಾಂಡಾ ಚಿಗುರೆಲೆಗಳನ್ನು ತಿನ್ನುತ್ತದೆ ಎಂದು ಅದರ ಅರ್ಥ. ಪಾಂಡಾ ಒಮ್ಮೆ ಒಂದು ರೆಸ್ಟೋರೆಂಟ್‌ಗೆ ಹೋಯಿತಂತೆ. ಗಡದ್ದಾಗಿ ತಿಂದಾದ ಮೇಲೆ ಕೈಯಲ್ಲಿದ್ದ ಪಿಸ್ತೂಲಿನಿಂದ ಢಂ ಢಂ ಎಂದು ಗುಂಡು ಹಾರಿಸಿ, ದುಡ್ಡು ಕೂಡ ಕೊಡದೆ ಅಲ್ಲಿಂದ ಕಾಲ್ಕಿತ್ತಿತು. ಯಾಕೆ ಏನಾಯಿತು ಎಂದು ತಬ್ಬಿಬ್ಬಾಗಿ ನೋಡುತ್ತಿದ್ದ ಜನರಿಗೆ ಪಾಂಡಾ ಹೇಳಿದ್ದು- ಎನ್‌ಸೈಕ್ಲೊಪಿಡಿಯಾದಲ್ಲಿರುವ ವಿವರಣೆಯಂತೆಯೇ ತಾನು ಮಾಡಿದ್ದೇನೆ ಎಂದು. ಇದಕ್ಕೆಲ್ಲ ಕಾರಣ ಎನ್‌ಸೈಕ್ಲೊಪಿಡಿಯಾ ವಿವರಣೆಯಲ್ಲಿ ಮೊದಲ ಪದದ ನಂತರ ಯಾರೋ ಒಂದು ಅಲ್ಪವಿರಾಮ ಸೇರಿಸಿದ್ದರು. ಆಗ ಅರ್ಥ ಏನಾಯ್ತು? ಪಾಂಡಾ: ತಿನ್ನುತ್ತದೆ, ಗುಂಡು ಹಾರಿಸುತ್ತದೆ ಮತ್ತು ಹೊರನಡೆಯುತ್ತದೆ ಎಂದು! ಈ ಒಂದು ಕಪೋಲಕಲ್ಪಿತ ಪ್ರಸಂಗವನ್ನಿಟ್ಟುಕೊಂಡು ಪುಸ್ತಕದ ತುಂಬ ತಮಾಷೆ ತುಂಬಿಸಿದ್ದಾಳೆ ಲಿನ್ನ್ ಟ್ರಸ್ಸ್.

ಅಲ್ಪವಿರಾಮದಿಂದ ಅರ್ಥವ್ಯತ್ಯಾಸವಾಗುವುದಕ್ಕೆ ಇಂಗ್ಲಿಷ್‌ನಲ್ಲಿ ಬೇಕಷ್ಟು ಉದಾಹರಣೆಗಳು ಸಿಗುತ್ತವೆ. “Let's eat, Mummy" ಎನ್ನುತ್ತದೆ ಮಗು. ಅಲ್ಲಿ ಅಲ್ಪವಿರಾಮ ತಿಂದುಹಾಕಿದರೆ ಅಮ್ಮನನ್ನೇ ತಿನ್ನಲುಹೊರಟಂತೆ! ಕಾಲೇಜಿನಲ್ಲಿ ಒಬ್ಬ ಲೆಕ್ಚರರ್ ಒಮ್ಮೆ "A woman without her man is nothing" ಎಂದು ವಿದ್ಯಾರ್ಥಿಗಳಿಂದ ಬರೆಯಿಸಿ ಅದಕ್ಕೆ ಸೂಕ್ತವಾಗಿ ಪಂಕ್ಚುವೇಶನ್ ಹಾಕುವಂತೆ ಹೇಳಿದರಂತೆ. ಹುಡುಗರೆಲ್ಲ "A woman, without her man, is nothing!" ಎಂದು ಬರೆದರೆ ಹುಡುಗಿಯರು "A woman: without her, man is nothing!" ಎಂದು ಬರೆದರು. ಬರ್ತ್‌ಡೇ ಅಥವಾ ಅಂಥ ಪಾರ್ಟಿಗಳಲ್ಲಿ ಕೇಕ್ ಮೇಲೆ ಬರೆದದ್ದರಲ್ಲಿ ಪಂಕ್ಚುವೇಶನ್ ಆಭಾಸಗಳನ್ನು ಪಟ್ಟಿ ಮಾಡಿದ್ದಾಳೆ ಫ್ಲೊರಿಡಾದ ಓರ್ವ ಬ್ಲಾಗುಗಾರ್ತಿ. ಇದು ಬಹುಶಃ ಯಾವುದೋ ಲೇಡಿಸ್ ಹಾಸ್ಟೆಲ್‌ನಲ್ಲಿ ನಡೆದದ್ದು. ಮೂರ್ನಾಲ್ಕು ಹುಡುಗಿಯರ ಬರ್ತ್‌ಡೇಯನ್ನು ಎಲ್ಲ ಒಟ್ಟಾಗಿ ಒಂದೇ ಕೇಕ್ ಮೂಲಕ ಸೆಲೆಬ್ರೇಟ್ ಮಾಡಿದರು. ಕೇಕ್ ಮೇಲೆ Happy Birthday ಎಂದು ಒಂದು ಸಾಲು, ಅದರ ಕೆಳಗೆ (all girls) ಎಂದು ಇನ್ನೊಂದು ಸಾಲು. ಆದರೆ ಕೇಕ್ ಮೇಲಿನ ಬರಹವಾದ್ದರಿಂದ ಆ ಓಪನಿಂಗ್ ಕಂಸ (ಆವರಣ) ಇಂಗ್ಲಿಷ್ ಅಕ್ಷರ C ಯಂತೆ ಕಾಣಿಸಿ ಆಭಾಸವಾಗಿತ್ತು!

ಕಂಸದಿಂದ ಆಭಾಸ ಎಂದಾಗ ನೆನಪಾಯ್ತು. ಮೊನ್ನೆಯಷ್ಟೇ ಅಭ್ಯಾಸಬಲ ಪ್ರದರ್ಶನ ನೋಡಿದೆವಷ್ಟೆ? ಅಬ ಆಭಾಸಗಳ ಪತ್ರಗಳು ಈಗಲೂ ಬರುತ್ತಲೇ ಇವೆ. ಅದರ ಪೈಕಿ ಯಲ್ಲಾಪುರದ ವೆಂಕಟರಮಣ ಹೆಗಡೆ ಬರೆದಿರುವುದು ಸಖತ್ ಮಜಾ ಇದೆ. ಇದು ಅಬ ಆಭಾಸ ಎನ್ನುವುದಕ್ಕಿಂತಲೂ ವಿರಾಮ ಚಿಹ್ನೆಗಳ ಆಭಾಸ ಎನ್ನಬಹುದು. ಶಾಲಾ ವಾರ್ಷಿಕೋತ್ಸವಕ್ಕೆ ನಾಟಕದಲ್ಲಿ ಪಾತ್ರ ಇದ್ದ ಒಬ್ಬ ಹುಡುಗ ಚೆನ್ನಾಗಿ ಪ್ರಾಕ್ಟೀಸ್ ಮಾಡಿದ್ದ. ಡಯಲಾಗ್ಸ್ ಎಲ್ಲ ಉರುಹೊಡೆದಿದ್ದ. ನಾಟಕದ ದಿನ ಬಂದೇಬಿಡ್ತು. ತುಂಬ ಉತ್ಸಾಹದಿಂದಲೇ ಸ್ಟೇಜ್ ಮೇಲೆ ಬಂದ ಹುಡುಗ ಶುರುಮಾಡಿದ. “ಕೌರವ ಕಂಸದಲ್ಲಿ ಮೀಸೆ ತಿರುವುತ್ತ ಹಹ್ಹಹ್ಹಾ...!” ಅಲ್ಲಿ ಆಗಿದ್ದೇನೆಂದರೆ ನಾಟಕ ನಿರ್ದೇಶಿಸಿದ್ದ ಮೇಷ್ಟ್ರು ಅವನ ಪಾತ್ರದ ಸಂಭಾಷಣೆಯನ್ನು- ಕೌರವ (ಮೀಸೆ ತಿರುವುತ್ತ) : “ಹಹ್ಹಹ್ಹಾ...!” ಎಂದು ಬರೆಸಿದ್ದರು. ಹುಡುಗ ವಿರಾಮ ಚಿಹ್ನೆಗಳನ್ನು ಕಡೆಗಣಿಸಿ ಓದಿ ಅಭ್ಯಾಸಮಾಡಿಕೊಂಡಿದ್ದ. ನಾಟಕದ ಪ್ರೇಕ್ಷಕರಿಗೆ, ಸ್ಟೇಜ್ ಮೇಲೆ ಬಂದವ ಕೌರವನೋ ಅಥವಾ ಕಂಸನೋ ಅಂತ ಕನ್‌ಫ್ಯೂಷನ್.

ಡೆನ್ಮಾರ್ಕ್ ದೇಶದ ವಿಕ್ಟರ್ ಬೋರ್ಜೆ ಎಂಬ ಕಾಮೆಡಿಯನ್ ತನ್ನ ಕಾಮೆಡಿ ಶೋಗಳಲ್ಲಿ Phonetic punctuation ಅಂತೊಂದು ಐಟಂ ಪ್ರದರ್ಶಿಸುತ್ತಿದ್ದನಂತೆ. ಬರವಣಿಗೆಯಲ್ಲಿ ಬಳಕೆಯಾಗುವ ಪ್ರತಿಯೊಂದು ವಿರಾಮ ಚಿಹ್ನೆಗೂ ಅವನ ಬಳಿ ಪ್ರತ್ಯೇಕವಾದ ಶಬ್ದಸಹಿತ ಹಾವಭಾವ ಇರುತ್ತಿತ್ತು. ಸ್ಟೇಜ್ ಮೇಲೆ ವಿಕ್ಟರ್ ಒಂದು ಪುಸ್ತಕ ತೆರೆದು ಅದರಲ್ಲಿನ ಪ್ಯಾರಗ್ರಾಫ್ ಓದುತ್ತಿದ್ದ. ವಿರಾಮ ಚಿಹ್ನೆ ಬಂದಾಗೆಲ್ಲ ಆಯಾ ಚಿಹ್ನೆಯ ಧ್ವನಿಯನ್ನು ಹೊರಡಿಸುತ್ತಿದ್ದ. ಪ್ರೇಕ್ಷಕರಿಗೆ ಹೊಟ್ಟೆಹುಣ್ಣಾಗುವಷ್ಟು ನಗು. ವಿಕ್ಟರ್‌ನ ವಿಡಿಯೋಗಳು ಯುಟ್ಯೂಬ್‌ನಲ್ಲಿ ಸಿಗುತ್ತವೆ.

ಇನ್ನೊಬ್ಬ, ಟಿಮೊತಿ ಡೆಕ್ಸ್‌ಟರ್ ಎಂಬುವವನಿದ್ದ. ಈತ ಅಮೆರಿಕದವನು, ೧೮ನೇ ಶತಮಾನದಲ್ಲಿ ಬಾಳಿದವನು. ಶಾಲೆಗೆ ಹೋಗಿ ಓದುಬರಹ ಕಲಿತವನಲ್ಲ. ಇವನು A Pickle for the Knowing Ones ಎಂಬ ಆತ್ಮಚರಿತ್ರೆ ಬರೆದ. ಇಡೀ ಪುಸ್ತಕದಲ್ಲಿ ಒಂದೇ‌ಒಂದು ಪಂಕ್ಚುವೇಶನ್ ಮಾರ್ಕ್ ಬಳಸಲಿಲ್ಲ. ಸ್ಪೆಲ್ಲಿಂಗ್‌ಗಳ ಬಗ್ಗೆಯಂತೂ ಕೇಳುವುದೇ ಬೇಡ. ಹಾಗಿದ್ದರೂ ಪುಸ್ತಕ ತುಂಬ ಜನಪ್ರಿಯವಾಯಿತು. ಎಂಟು ಮುದ್ರಣಗಳನ್ನು ಕಂಡಿತು. ಪುಸ್ತಕದ ಎರಡನೆಯ ಆವೃತ್ತಿಯಲ್ಲಿ ಡೆಕ್ಸ್‌ಟರ್ ಇನ್ನೊಂದು ಗಿಮಿಕ್ ಮಾಡಿದ. ಈಸಲ ವಿರಾಮ ಚಿಹ್ನೆಗಳನ್ನೆಲ್ಲ ಬಳಸಿದ. ಆದರೆ ಬೇಕಾದ ಸ್ಥಾನದಲ್ಲಿ ಅಲ್ಲ. ಎಲ್ಲ ಚಿಹ್ನೆಗಳನ್ನು ಒಟ್ಟಿಗೆ ಒಂದು ಪುಟದಲ್ಲಿ ಮುದ್ರಿಸಿ ಅದನ್ನು ಪುಸ್ತಕದ ಅನುಬಂಧವಾಗಿ ಕೊಟ್ಟು ಜತೆಯಲ್ಲೇ ಓದುಗರಿಗೆ ಪುಟ್ಟ ಸಂದೇಶವನ್ನೂ ಮುದ್ರಿಸಿದ. ‘ಆಹಾರದ ಮೇಲೆ ಉಪ್ಪು ಮತ್ತು ಮೆಣಸಿನಪುಡಿ ಸಿಂಪಡಿಸಿಕೊಂಡಂತೆ ಬೇಕಾದಲ್ಲಿ ಸಿಂಪಡಿಸಿಕೊಳ್ಳಿ’ ಎಂದುಬಿಟ್ಟ. ಡೆಕ್ಸ್‌ಟರ್‌ನ ಕ್ರೇಜಿ ಪ್ರಯೋಗ ಜನರಿಗೆ ಇಷ್ಟವಾಯಿತು. ತಡೆಗುರುತುಗಳು ಎಂದರೇನೆಂದೇ ಗೊತ್ತಿರದಿದ್ದ ಕಾಲದ ಹೈರೊಗ್ಲಿಫ್ ಬರವಣಿಗೆಯನ್ನು ಬಹುಶಃ ಅದು ನೆನಪಿಸಿರಬೇಕು. ಟಿಮೊತಿ ಡೆಕ್ಸ್‌ಟರ್‌ನ ಕ್ರೇಜಿ ಐಡಿಯಾ ಅದಾದರೆ ಚೈನಾ ದೇಶದ ಹು-ವೆನ್-ಲಿಯಾಂಗ್ ಎಂಬುವನ ಸಂಗತಿಯೂ ಸ್ವಾರಸ್ಯಕರವಾಗಿದೆ. ಹು ಒಂದು ಕಾದಂಬರಿ ಬರೆದಿದ್ದಾನಂತೆ. ಅದರಲ್ಲಿ ಒಂದೇ‌ಒಂದು ಅಕ್ಷರವಿಲ್ಲ. ಒಟ್ಟು ಹದಿನಾಲ್ಕು ವಿರಾಮ ಚಿಹ್ನೆಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೂ ಅದೊಂದು ಹೃದಯಸ್ಪರ್ಶಿ ಪ್ರೇಮಕಥೆ ಮತ್ತು ಅದರಲ್ಲಿ ದೊಡ್ಡದೊಡ್ಡ ಕಾದಂಬರಿಗಳಲ್ಲಿ ಇರುವಂತೆ ಕತೆಯ ಥಿಕ್ ಪ್ಲಾಟ್ ಇದೆಯೆನ್ನುತ್ತಾನೆ ಹು. ಹದಿನಾಲ್ಕು ಚಿಹ್ನೆಗಳಿಂದಷ್ಟೇ ರಚನೆಯಾದ ಕಾದಂಬರಿಯನ್ನು ಸರಿಯಾಗಿ ಡಿಕೋಡ್ ಮಾಡಿದವರಿಗೆ ಚಿಹ್ನೆಯೊಂದಕ್ಕೆ ಹತ್ತುಸಾವಿರದಂತೆ ಒಟ್ಟು ಒಂದುಲಕ್ಷ ನಲ್ವತ್ತು ಸಾವಿರ ಯುವಾನ್‌ಗಳ ಆಕರ್ಷಕ ಬಹುಮಾನವನ್ನೂ ಹು ಘೋಷಿಸಿದ್ದಾನಂತೆ. ಹು ವಿಲ್ ವಿನ್ ದ ಪ್ರೈಜ್? ಇಫ್ ನೋವನ್ ವಿನ್ಸ್, ಹು ವಿಲ್ ಕೀಪ್ ದ ಪ್ರೈಜ್ ವಿದ್ ಹಿಮ್‌ಸೆಲ್ಫ್.

ವಿರಾಮ ಚಿಹ್ನೆಗಳೆಂದರೆ ಸಾಮಾನ್ಯವಲ್ಲ, ನಿಜಕ್ಕೂ ಅಸಾಮಾನ್ಯ ಅಂತ ಈಗ ಗೊತ್ತಾಯ್ತಲ್ಲ? ಅಂದಹಾಗೆ ಅಮೆರಿಕದಲ್ಲಿ ಈಗ್ಗೆ ಎಂಟು ವರ್ಷಗಳಿಂದ ಸೆಪ್ಟೆಂಬರ್ ತಿಂಗಳ ೨೪ರಂದು National Punctuation Day ಆಚರಣೆಯಾಗುತ್ತದೆ. nationalpunctuationday.com ವೆಬ್‌ಸೈಟ್‌ಗೆ ಭೇಟಿಕೊಟ್ಟರೆ ಅಲ್ಲಿ ವಿರಾಮ ಚಿಹ್ನೆಗಳದೊಂದು ಅದ್ಭುತ ಲೋಕ ತೆರೆದುಕೊಳ್ಳುತ್ತದೆ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Eat but dont eat

Saturday, January 22nd, 2011
DefaultTag | Comments

ದಿನಾಂಕ 23 ಜನವರಿ 2011ರ ಸಂಚಿಕೆ...

ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

ಮತ್ತಿನ್ನೇನು ಎಂದು ನೀವು ಕೇಳಬಹುದು. ತಿನ್ನುವುದೆಂದರೆ ತಿನ್ನುವುದಷ್ಟೇ ಅಲ್ಲದೆ ಬೇರೇನು ಅರ್ಥ ಬರುತ್ತದೆ ಎಂದು ಪ್ರಶ್ನಿಸಬಹುದು. ಆದರೆ ನಮ್ಮೆಲ್ಲರ ಮಾತಿನಲ್ಲಾಗಲೀ ಬರವಣಿಗೆಯಲ್ಲಾಗಲೀ ತಿನ್ನು ಮತ್ತು ಅದರ ಸಮಸಂಬಂಧಿ ಕ್ರಿಯಾಧಾತುಗಳ ಬಗೆಬಗೆಯ ಬಳಕೆಯನ್ನು ಒಮ್ಮೆ ಗಮನಿಸಿದರೆ ಗೊತ್ತಾಗುತ್ತದೆ. ತಿನ್ನುವ ಪ್ರಕ್ರಿಯೆ ಅಥವಾ ತಿನ್ನದೆಯೇ ತಿನ್ನುವ ಪ್ರಕ್ರಿಯೆಯಿಂದ ಭಾಷೆಗೊಂದು ಸೊಗಸು ಬಂದಿರುವುದು ನಮಗೆ ಕಂಡುಬರುತ್ತದೆ. ಒಂದು ಸರಳ ಉದಾಹರಣೆ ಕೊಡುತ್ತೇನೆ. ಮುದ್ದಾದ ಮಗುವನ್ನು ಮುದ್ದುಮಾಡುವಾಗ ನಾವು ಕೆಲವೊಮ್ಮೆ ಪ್ರೀತಿಯಿಂದ ತಿಂದುಬಿಡೋಣ ಅನ್ನಿಸ್ತಿದೆ ಎನ್ನುವುದಿದೆ. ಹಾಗಂತ ಮಕ್ಕಳನ್ನು ತಿಂದುಬಿಡಲಿಕ್ಕೆ ನಾವೇನೂ ಮಾರ್ಜಾಲ ಜಾತಿ ಅಲ್ಲ. ಆಶ್ಚರ್ಯವೆಂದರೆ ಮಕ್ಕಳು ತುಂಬಾ ತಂಟೆಕೋರರಾಗಿದ್ದರೆ ಅವರ ಮೇಲೆ ಸಿಟ್ಟಿನಿಂದ ದುರುಗುಟ್ಟುವಾಗಲೂ ತಿಂದುಬಿಡುತ್ತೇವೇನೋ ಎಂಬಂತೆಯೇ ಇರುತ್ತದೆ ನಮ್ಮ ಮುಖಭಾವ. ಪ್ರೀತಿ ಮತ್ತು ಸಿಟ್ಟು ತದ್ವಿರುದ್ಧ ಭಾವನೆಗಳು. ತಿನ್ನದೆಯೇ ತಿನ್ನುವ ಪ್ರಕ್ರಿಯೆಯ ಮೂಲಕ ಅವುಗಳನ್ನು ಪ್ರಕಟಪಡಿಸುವುದು ನಮಗೆ ಸಾಧ್ಯವಾಗಿರುತ್ತದೆ.

ಅವನು ತುಂಬಾ ತಲೆ ತಿಂತಾನೆ ಎನ್ನುತ್ತೇವೆ. ನಿಜವಾಗಿಯೂ ತಲೆಯನ್ನು ತಿನ್ನುವುದು ಸಾಧ್ಯವಿಲ್ಲವೆಂದು ಗೊತ್ತು. ಅದರಲ್ಲೂ ಸಸ್ಯಾಹಾರಿಯಾಗಿದ್ದರಂತೂ ಬಿಲ್‌ಕುಲ್ ಸಾಧ್ಯವಿಲ್ಲ. ಅಲ್ಲದೆ ತುಂಬಾ ತಲೆ ತಿನ್ನಲು ನಾವೇನು ರಾವಣನಂತೆ ಹತ್ತು ತಲೆಗಳನ್ನಿಟ್ಟುಕೊಂಡಿರುವುದಿಲ್ಲ. ಪ್ರಾಣ ತಿಂತಾನೆ ಅಥವಾ ಜೀವ ತಿಂತಾನೆ ಎಂದೂ ಹೇಳುತ್ತೇವೆ. ಪ್ರಾಣ ಅಥವಾ ಜೀವ ಎನ್ನುವುದು ಭೌತಿಕ ವಸ್ತು ಅಲ್ಲ. ಹಾಗಿರುವಾಗ ಅದನ್ನು ತಿನ್ನುವುದು ಸಾಧ್ಯವೇ ಇಲ್ಲ. ಶಾಲೆಯಲ್ಲಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದದ್ದನ್ನು ನೆನಪಿಸಿಕೊಳ್ಳುತ್ತೇವೆ. ಮಗ್ಗಿಯನ್ನೋ ಪದ್ಯವನ್ನೋ ಬಾಯಿಪಾಠ ಒಪ್ಪಿಸುವಾಗ ನಡುವೆ ಅಲ್ಲಲ್ಲಿ ಬಿಟ್ಟುಕೊಂಡು ಹೇಳಿದರೆ ಅದನ್ನ್ಯಾಕೆ ತಿಂದುಬಿಟ್ಟೆ ಎನ್ನುತ್ತಾರೆ ಮೇಷ್ಟ್ರು. ಹೊಟ್ಟೆಗೇನು ತಿನ್ನುತ್ತೀ ಅನ್ನವಾ ಸೆಗಣಿಯಾ ಎಂದು ಮೂದಲಿಸುತ್ತಾರೆ. ಏಟು ಬೀಳುವುದು ಚರ್ಮಕ್ಕೆ. ಆದರೂ ಪೆಟ್ಟು ತಿನ್ನುವುದು ಅಂತಲೇ ಹೇಳುತ್ತೇವೆ. ಏಟಿನ ರುಚಿ ಹೇಗಿತ್ತು ಎಂಬ ವಿವರಣೆ ಬೇರೆ.

ಕಿತ್ತು ತಿನ್ನುವ ಬಡತನ ಎಂಬ ಮಾತು. ಬಡತನ ಏನನ್ನು ಕೀಳುತ್ತದೆ ಅಥವಾ ಏನನ್ನು ತಿನ್ನುತ್ತದೋ ಗೊತ್ತಿಲ್ಲ. ಅದೇವೇಳೆ ಶ್ರೀಮಂತನಾಗಿ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು. ಕುಡಿಕೆಯಲ್ಲಿನ ಹೊನ್ನನ್ನು ಅದೇ ರೂಪದಲ್ಲಿ ಇಷ್ಟರವರೆಗೆ ಯಾರಾದರೂ ತಿಂದವರಿದ್ದಾರೆಯೇ ತಿಳಿಯದು. ಮೊನ್ನೆ ಎಲ್ಲೋ ಓದಿದ ನೆನಪು. ಚಿನ್ನದಸರ ಕದ್ದ ಒಬ್ಬ ಕಳ್ಳ ಸಿಕ್ಕಿಬೀಳುತ್ತೇನೆಂದು ಗೊತ್ತಾದಾಗ ಆ ಸರವನ್ನು ತಿಂದುಬಿಟ್ಟನಂತೆ. ಅನ್ನ ತಿನ್ನುವ ಬದಲು ಚಿನ್ನ ತಿಂದವನಾದನಂತೆ. ತಾನು ಚಿನ್ನ ತಿಂದು ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುವ ಹುನ್ನಾರ ಅವನದು. ಚಳ್ಳೇಹಣ್ಣು ಎಂದರೇನು ಅದನ್ನು ತಿನ್ನಲಿಕ್ಕಾಗುತ್ತದೆಯೇ ರುಚಿ ಹೇಗಿರುತ್ತದೆ ಎಂದು ಬಲ್ಲವರಿಲ್ಲ. ಪೊಲೀಸರು ಮಾತ್ರ ಅದನ್ನು ತಿನ್ನುತ್ತಾರೆ. ಅದೂ ಕಳ್ಳನ ಕೈಯಿಂದ ಮಾತ್ರ. ಹಾಗೆಂದು ಸೃಷ್ಟಿಕರ್ತನೇ ನಿಯಮ ಮಾಡಿಟ್ಟಿದ್ದಾನೋ ಗೊತ್ತಿಲ್ಲ. ಅಂದಹಾಗೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಯಿಂದಲೇ ನಿಂತು ತಿನ್ನುವ ಪದ್ಧತಿ ಅಂದರೆ ಬೆಂಗಳೂರಿನ ದರ್ಶಿನಿಗಳು ಶುರುವಾದದ್ದು. ಬಫೆ ಊಟದ ಸಂಗತಿಯೂ ಸೇಮ್. ಇಂಗು ತಿಂದ ಮಂಗನ ಹೋಲಿಕೆ ಮುಖಭಂಗ ಮಾಡಿಕೊಂಡವರಿಗೆ. ಮಂಗ ನಿಜವಾಗಿಯೂ ಇಂಗು ತಿಂದ ಪುರಾವೆ ಇದೆಯೇ ಎಂದು ಆ ಹನುಮಂತನಿಗೂ ಗೊತ್ತಿರಲಿಕ್ಕಿಲ್ಲ. ಕಡಲೆ ತಿಂದು ಕೈತೊಳೆದುಕೊಂಡಂತೆ ಅಂತ ಇನ್ನೊಂದು ಗಾದೆ. ವಹಿಸಿಕೊಂಡ ಕೆಲಸವನ್ನು ಚೊಕ್ಕವಾಗಿ ಮಾಡಿಮುಗಿಸುವುದು ಎಂದು ಅರ್ಥ. ನಿಜವಾಗಿ ಕಡಲೆ ತಿನ್ನುವುದೇನಿದ್ದರೂ ಕೆಲಸವೆಲ್ಲ ಮುಗಿದಮೇಲೆಯೇ. ತಾತ್ಪರ್ಯವೇನೆಂದರೆ ಮೇಲಿನೆಲ್ಲ ಉದಾಹರಣೆಗಳಲ್ಲೂ ಅಸಲಿಗೆ ಏನನ್ನೂ ತಿನ್ನದೆಯೇ ಬಹಳಷ್ಟನ್ನು ತಿಂದದ್ದಿರುತ್ತದೆ.

ತಿನ್ನುವಷ್ಟೇ ಸ್ವಾರಸ್ಯ ನುಂಗುವ ಕ್ರಿಯೆಯದೂ. ಜೀವ ತಿನ್ನುವ ರೋಗ ವಾಸಿಯಾಗಲೆಂದು ಮಾತ್ರೆ ನುಂಗುತ್ತೇವೆ. ಕೆಲವರಿಗೆ ಬೆಳಿಗ್ಗೆ ಮಧ್ಯಾಹ್ನ ಸಂಜೆ ಹೀಗೆ ಮೂರುಹೊತ್ತೂ ಮಾತ್ರೆಗಳದೇ ಫಳ್ಹಾರ. ನೋವು ನುಂಗಿ ನಲಿವಿನಿಂದಿರಲು ಪ್ರಯತ್ನಿಸುತ್ತೇವೆ. ಅಳು ನುಂಗಿ ನಗುಮುಖ ಪ್ರದರ್ಶಿಸುತ್ತೇವೆ. ಗುಟ್ಟನ್ನು ನುಂಗಿ ಹೊಟ್ಟೇಲಿಟ್ಟುಕೊಳ್ಳುತ್ತೇವೆ. ಭ್ರಷ್ಟ ರಾಜಕಾರಣಿಗಳು ಕಣ್ಣೆದುರೇ ಕೋಟಿಗಟ್ಟಲೆ ನುಂಗುತ್ತಿರಬೇಕಾದರೆ ಏನೂ ಮಾಡದವರಾಗುತ್ತೇವೆ. ಜಾಗತೀಕರಣದ ಹೆಸರಿನಲ್ಲಿ ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳು ಸಣ್ಣ ಉದ್ಯಮಗಳನ್ನು ನುಂಗುವುದನ್ನು ನೋಡುತ್ತೇವೆ. ತಿಮಿಂಗಿಲಗಳು ಸಣ್ಣ ಮೀನುಗಳನ್ನು ನುಂಗಿದಂತೆ ಎನ್ನುತ್ತೇವೆ. ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳು ಬಡರೈತರ ಜಮೀನನ್ನು ಆಪೋಷಣ ತೆಗೆದುಕೊಳ್ಳುವುದನ್ನು ದಿನಾಲೂ ನೋಡುತ್ತೇವೆ. ಒಳಗೊಳಗೇ ಕುದಿಯಬೇಕಾಗಿ ಬಂದರೂ ಸಿಟ್ಟನ್ನೂ ನುಂಗಿಕೊಳ್ಳುತ್ತೇವೆ. ಪ್ರಕೃತಿವಿಕೋಪಗಳು ಆಸ್ತಿಪಾಸ್ತಿಯನ್ನು ನುಂಗಿ ನೊಣೆದಾಗ ಹತಾಶರಾಗುತ್ತೇವೆ. ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತಾ ಎಂದುಕೊಂಡು ಶಿಶುನಾಳ ಶರೀಫರಾಗುತ್ತೇವೆ.

swallowing.jpg

ಕೋಡಗನ ಕೋಳಿ ನುಂಗಿತ್ತಾ ತತ್ತ್ವಪದದಲ್ಲಿ ಶರೀಫಜ್ಜ ನಿಜವಾಗಿಯೂ ಅದೇನೋ ಪಾರಮಾರ್ಥಿಕವಾದುದನ್ನೇ ಹೇಳಿದ್ದಾನೆ. ನಮಗದು ಸುಲಭದಲ್ಲಿ ಅರ್ಥವಾಗುವುದಿಲ್ಲ ಅಷ್ಟೇ. ಸಾಮಾನ್ಯವಾಗಿ ಯಾವುದು ನುಂಗುತ್ತದೋ ಅದು ಹೊರಗೆ ಮತ್ತು ಯಾವುದು ನುಂಗಲ್ಪಡುತ್ತದೋ ಅದು ಒಳಗೆ. ಕೇರೆಹಾವು ಕಪ್ಪೆಯನ್ನು ನುಂಗಿದರೂ ಹಾಗೆಯೇ. ಕಾಳಿಂಗ ಸರ್ಪವು ಕೇರೆಹಾವನ್ನು ನುಂಗಿದರೂ ಹಾಗೆಯೇ. ಇದು ಸಾಮಾನ್ಯ ಜ್ಞಾನ. ಆದರೆ ಶರೀಫಜ್ಜನ ಪದದಲ್ಲಿ ಗೋಡೆ ಸುಣ್ಣವ ನುಂಗಿ ಎಂಬ ಸಾಲನ್ನೇ ತೆಗೆದುಕೊಳ್ಳಿ. ಗೋಡೆಗೆ ಸುಣ್ಣ ಹಚ್ಚಿದಾಗ ಸುಣ್ಣ ಹೊರಗೆ ಮತ್ತು ಗೋಡೆ ಒಳಗೆ. ಅಂದರೆ ಸುಣ್ಣ ಗೋಡೆಯನ್ನು ನುಂಗಿದಂತೆ. ಆದರೆ ಸುಣ್ಣ ಹಚ್ಚುವಾಗ ಗೋಡೆ ಅದನ್ನು ಹೀರಿಕೊಂಡಿರುತ್ತದೆ. ಆ ಲೆಕ್ಕದಲ್ಲಿ ಗೋಡೆ ಹೊರಗೆ ಸುಣ್ಣ ಒಳಗೆ. ಇದೊಂಥರ ಕನಕದಾಸರು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂದು ಹಾಡಿದಂತೆಯೇ. ಅರ್ಥೈಸಲು ಜಟಿಲವಾದ ವಿಚಾರ.

ನುಂಗುವುದು ತಿನ್ನುವುದು ಕುಡಿಯುವುದು ಕಬಳಿಸುವುದು ಎಲ್ಲ ಒಂದೇ. ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಎಂಬಂತೆ ಸೇರುವುದು ಎಲ್ಲ ಹೊಟ್ಟೆಗೇ. ಆದರೆ ಕುಡಿಯುವ ವಿಚಾರದಲ್ಲೂ ತಿನ್ನುವುದರಂತೆಯೇ ಗಮ್ಮತ್ತಿದೆ. ಅರೆದು ಕುಡಿಯುವುದು ಎಂದು ನೀವು ಕೇಳಿರಬಹುದು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿನ್ನೆಯಷ್ಟೇ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆನ್ನುತ್ತದೆಯೆಂದರೆ ಬರೆದೂ ಬರೆದು ಅರೆದು ಕುಡಿಯುವುದೇ ವಿದ್ಯಾರ್ಥಿಗಳಿಗೆ ಉತ್ತಮವಂತೆ. ಅದರಿಂದ ಮೆದುಳಿನಲ್ಲಿ ಜ್ಞಾನ ಹೆಚ್ಚು ಪರಿಣಾಮಕಾರಿಯಾಗಿ ಅಚ್ಚೊತ್ತುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರಂತೆ. ಹಾಗಾಗಿಯೇ ಇರಬಹುದು ಗಣಿತ ಪ್ರಮೇಯಗಳನ್ನು ಕೆಮೆಸ್ಟ್ರಿ ಫಾರ್ಮುಲಾಗಳನ್ನು ಅರೆದು ಕುಡಿಯುತ್ತಾರೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಶಿಕ್ಷಣದ ಕನಸು ಕಾಣುವವರು. ಪ್ರೀತಿ ಸೌಂದರ್ಯ ಶೃಂಗಾರ ಇತ್ಯಾದಿಗಳನ್ನು ಬೊಗಸೆಯಲ್ಲಿ ಮೊಗೆಮೊಗೆದು ಕುಡಿಯುತ್ತಾರೆ ಕವಿಹೃದಯ ಇದ್ದವರು. ಹೃದಯ ಕದ್ದವರೂ ಅನ್ನಿ ಬೇಕಿದ್ದರೆ. ಪ್ರೇಮವಂಚಿತರಾದವರು ನಿಜವಾಗಿಯೂ ಕುಡಿಯುವ ಚಟಕ್ಕೆ ಬಲಿಬೀಳಬಹುದು. ಹಾಗೆ ನೋಡಿದರೆ ಆ ಕುಡಿತವೂ ನಿಜ ಅರ್ಥದಲ್ಲಿ ಹೊಟ್ಟೆಗಲ್ಲ ತಲೆಗೇ ಹೋಗುವುದು.

ಇನ್ನು ಹೊಟ್ಟೆಬಾಕರ ತಿನ್ನುವಿಕೆಯ ಬಣ್ಣನೆಯಲ್ಲೂ ಭಾಷೆಯ ಬೆಡಗು ಬಹಳ ಚೆನ್ನಾಗಿರುತ್ತದೆ. ಅಗೋಳಿ ಮಂಜಣ್ಣ ಅಂತೊಬ್ಬ ಐತಿಹಾಸಿಕ ಪುರುಷ ಹಿಂದೆ ತುಳುನಾಡಿನಲ್ಲಿದ್ದನಂತೆ. ಮಹಾಬಲಾಢ್ಯ ಕಟ್ಟುಮಸ್ತಾದ ಆಳು. ಅವನ ಕಥೆಯಲ್ಲಿ ಅವನ ಊಟತಿಂಡಿಯ ವಿವರಗಳು ರೋಚಕ. ಬಜಿಲ್ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾ‌ಅರಾ ಆಪುಂಡ್. ಗೋಂಟು ಥಾರಾಯಿ ಇರ್ವತ್ತೈನ್‌ಲಾ ಬಾಯಿಡೇ ಗಾಣ ಫಾಡುಂಡ್. ಅಗೋಳಿ ಮಂಜಣ್ಣನ ಕಥೆ ಹೇಳುವ ತುಳು ಪಾಡ್ದನದ ಸಾಲುಗಳು ಅವು. ಕಳಸಿಗೆಯಷ್ಟು ಅವಲಕ್ಕಿ ಇದ್ದರೂ ಅಗೋಳಿ ಮಂಜಣ್ಣನಿಗೆ ಅದು ಮುಷ್ಟಿಯಲ್ಲಿ ತುಂಬಿದರೆ ಹೆಚ್ಚು. ಕೊಬ್ಬರಿ ಗಿಟುಕುಗಳನ್ನು ಒಂದಿಪ್ಪತ್ತೈದರಷ್ಟು ಒಟ್ಟಿಗೇ ಬಾಯಿಗೆ ಹಾಕಿ ಅಗಿಯತೊಡಗಿದನೆಂದರೆ ಮಂಜಣ್ಣನ ಬಾಯಿ ಎಣ್ಣೆಯ ಗಾಣವೋ ಎಂದುಕೊಳ್ಳಬೇಕು. ಹಾಗಿರುತ್ತಿತ್ತಂತೆ ದೃಶ್ಯ. ಮಹಾಭಾರತದಲ್ಲಿ ಬಕಾಸುರನಿಗೆ  ಬಂಡಿ ತುಂಬ ಆಹಾರ ತೆಗೆದುಕೊಂಡು ಹೋಗುವ ಭೀಮಸೇನ ತಾನೇ ಅದನ್ನು ತಿಂದು ತೇಗುತ್ತಾನೆ. ಆಮೇಲೆ ಬಕಾಸುರನನ್ನೂ ಕೊಂದು ಮುಗಿಸುತ್ತಾನೆ. ಮಾಯಾಬಝಾರ್ ಸಿನೆಮಾದಲ್ಲಿ ಅದು ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಎಂಬ ಹಾಡಾಗುತ್ತದೆ.

ತಿಂದು ತೇಗುವ ಅಥವಾ ತಿಂದು ಅರಗಿಸಿಕೊಳ್ಳುವ ವಿಚಾರ ಬಂದಾಗ ವಾತಾಪಿಯ ಕಥೆಯೂ ನೆನಪಾಗುತ್ತದೆ. ಇಲ್ವಲ ಮತ್ತು ವಾತಾಪಿ ಹೆಸರಿನ ಇಬ್ಬರು ರಾಕ್ಷಸರಿದ್ದರು. ಅವರು ಅಣ್ಣತಮ್ಮಂದಿರು. ತಮಗೆ ಸಂತಾನಪ್ರಾಪ್ತಿಯಾಗಬೇಕಂತಷ್ಟೇ ಅಲ್ಲ ಇಂದ್ರನಂಥ ಮಗನೇ ಹುಟ್ಟಬೇಕು ಎಂದು ಅವರಿಬ್ಬರಿಗೂ ಬಯಕೆ. ಹಾಗೆಂದು ಅನುಗ್ರಹಿಸುವಂತೆ ಅವರು ಕಂಡಕಂಡ ಬ್ರಾಹ್ಮಣರನ್ನೆಲ್ಲ ಬೇಡುತ್ತಿದ್ದರು. ಇಷ್ಟಾರ್ಥ ಕೈಗೂಡದಾದಾಗ ಅದೇ ಬ್ರಾಹ್ಮಣರನ್ನು ಪೀಡಿಸುತ್ತಿದ್ದರು. ಹೇಗೆಂದರೆ ಇಲ್ವಲನು ವಾತಾಪಿಯನ್ನು ಮೇಕೆಯನ್ನಾಗಿಸಿ ಕೊಂದು ಆ ಮಾಂಸವನ್ನು ಅಡುಗೆಮಾಡಿ ಬ್ರಾಹ್ಮಣರಿಗೆ ಬಡಿಸುವನು. ಬ್ರಾಹ್ಮಣರ ಊಟ ಮುಗಿಯುತ್ತಿದ್ದಂತೆಯೇ ವಾತಾಪಿಯನ್ನು ಹೊರಗೆ ಬರುವಂತೆ ಕರೆಯುವನು. ಬ್ರಾಹ್ಮಣರ ಹೊಟ್ಟೆ ಸೀಳಿ ವಾತಾಪಿ ಹೊರಬರುವನು. ಹೀಗೆ ಅನೇಕ ಮಂದಿ ಬ್ರಾಹ್ಮಣರು ಸತ್ತುಹೋದರು. ಒಮ್ಮೆ ಅಗಸ್ತ್ಯಮಹರ್ಷಿ ಇಲ್ವಲನಲ್ಲಿಗೆ ಬಂದಿದ್ದಾಗ ಇಲ್ವಲ ಅವನಿಗೂ ಹಾಗೆಯೇ ಮಾಡಿದ. ಅಗಸ್ತ್ಯನಿಗೆ ಈ ದುಷ್ಟಸಹೋದರರ ಗುಟ್ಟು ಗೊತ್ತಾಯಿತು. ಅವನು ಹೊಟ್ಟೆತುಂಬ ಉಂಡಮೇಲೆ ಹೊಟ್ಟೆಯನ್ನು ಒಮ್ಮೆ ಬಲಗೈಯಿಂದ ಸವರುತ್ತ ತನ್ನ ತಪಃಶಕ್ತಿಯಿಂದ ವಾತಾಪಿ ಹೊಟ್ಟೆಯಲ್ಲೇ ಜೀರ್ಣವಾಗುವಂತೆ ಮಾಡಿಬಿಟ್ಟ. ಇಲ್ವಲ ಹೆದರಿ ಅಗಸ್ತ್ಯನಿಗೆ ಶರಣಾದ. ಅಂದಿನಿಂದ ಬ್ರಹ್ಮದ್ವೇಷವನ್ನು ಬಿಟ್ಟುಬಿಟ್ಟ. ಇದು ಪುರಾಣದ ಕಥೆ. ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರೇ ಅಂತೆಲ್ಲ ಪ್ರಶ್ನೆ ಕೇಳುವುದಕ್ಕೆ ಹೋಗಬಾರದು.

ಆಯ್ತು. ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ ಎಂದು ತಲೆಬರಹವಿರುವ ಈ ಲೇಖನದಲ್ಲಿ ಸ್ವಲ್ಪವಾದರೂ ತಿರುಳಿರುವ ಅಂಶ ಇರಲೆಂದು ಇದನ್ನು ಬರೆಯುತ್ತಿದ್ದೇನೆ. ತಿನ್ನುವ ಕುಡಿಯುವ ವಿಷಯದಲ್ಲಿ ಅಮೆರಿಕನ್ನರೂ ಅಗೋಳಿ ಮಂಜಣ್ಣನಿಗಿಂತ ಕಮ್ಮಿಯೇನಲ್ಲ. ಅದರಲ್ಲೂ ಫಾಸ್ಟ್‌ಫುಡ್ ಸಂಸ್ಕೃತಿ ಅಮೆರಿಕನ್ನರನ್ನು ಸಿಕ್ಕಾಪಟ್ಟೆ ಸ್ಥೂಲಕಾಯರನ್ನಾಗಿಸಿದೆ. ಇದೀಗ ಪ್ರಥಮ ಮಹಿಳೆ ಮಿಶೆಲ್ ಒಬಾಮ ಈ ವಿಷಯದಲ್ಲಿ ಜವಾಬ್ದಾರಿಯಿಂದ ಎಚ್ಚೆತ್ತು ಜನಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ. ಶಾಲಾಮಕ್ಕಳಿಗೆ ನಿಯಮಿತ ಆಹಾರಸೇವನೆಯ ಪಾಠಗಳನ್ನು ಅವರು ತಾವೇ ಶಾಲೆಗಳಿಗೆ ಹೋಗಿ ಮಾಡುತ್ತಿರುವ ನಿದರ್ಶನಗಳೂ ಇವೆ. ಅಮೆರಿಕದ ಪ್ರಖ್ಯಾತ ರಿಟೇಲ್ ಮಳಿಗೆ ವಾಲ್‌ಮಾರ್ಟ್ ಸಹ ಮಿಶೆಲ್ ಒಬಾಮ ಅಭಿಯಾನದಲ್ಲಿ ಕೈಜೋಡಿಸಿದೆ. ತಾನು ಮಾರುವ ಆಹಾರ ಪದಾರ್ಥಗಳಾವುವೂ ಒಬೆಸಿಟಿ ಹೆಚ್ಚಿಸದಿರುವಂತೆ ನೋಡಿಕೊಳ್ಳುತ್ತೇನೆಂದಿದೆ. ತಿನ್ನುವುದಕ್ಕಾಗಿ ಬದುಕು ಎಂದಾಗದೆ ಬದುಕುವುದಕ್ಕಾಗಿಯಷ್ಟೇ ತಿನ್ನಬೇಕು. ಈಗ ಇದು ಮಿಶೆಲ್ ಮಂತ್ರ.

ಕೊನೆಯಲ್ಲೊಂದು ಕ್ವಿಜ್. ಇವತ್ತಿನ ಲೇಖನದಲ್ಲಿ ಸ್ವಲ್ಪ ಅಸಾಮಾನ್ಯ ಎನಿಸುವಂಥ ಅಂಶವೊಂದನ್ನು ಅಳವಡಿಸಲಾಗಿದೆ. ಅಥವಾ ಬೇಕಂತಲೇ ಅಳವಡಿಸಿಕೊಂಡಿಲ್ಲ ಎಂದೂ ಹೇಳಬಹುದು. ಅದೇನೆಂದು ನಿಮ್ಮ ಗಮನಕ್ಕೆ ಬಂದಿದ್ದರೆ ಬರೆದು ತಿಳಿಸಿ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Golden Voice of Homeless Man

Saturday, January 15th, 2011
DefaultTag | Comments

ದಿನಾಂಕ 16 ಜನವರಿ 2011ರ ಸಂಚಿಕೆ...

ಟೆಡ್ಡ್ ವಿಲಿಯಮ್ಸ್ ಸ್ವರ್ಣಕಂಠಕ್ಕೆ ದುಡ್ಡು ಮಿಲಿಯನ್ಸ್!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

ಅಮೆರಿಕದಲ್ಲಿದ್ದುಕೊಂಡು ಕರ್ನಾಟಕದ ಕನ್ನಡ ಪತ್ರಿಕೆಗೆ ವಾರವಾರ ಅಂಕಣ ಬರೆಯುವುದೆಂದರೆ- ಒಂದು ರೀತಿಯಲ್ಲಿ ಸುಲಭ; ಇನ್ನೊಂದು ರೀತಿಯಲ್ಲಿ ಸವಾಲೂ ಹೌದು. ಸುಲಭ ಏಕೆಂದರೆ, ಅಲ್ಲಿಯ ಇಲ್ಲಿಯ (ಮತ್ತು ಎಲ್ಲೆಲ್ಲಿಯ) ವಿಷಯಗಳನ್ನು ಇಚ್ಛೆಬಂದಂತೆ ಎತ್ತಿಕೊಳ್ಳಬಹುದು; ಅಲ್ಲಿಂದ ದೂರವಿರುವುದರಿಂದ ಮತ್ತು ಇಲ್ಲಿ ಹೇಗೂ ಪರಕೀಯರಾದ್ದರಿಂದ ಯಾವುದನ್ನೂ ತೀರಾ ಹಚ್ಚಿಕೊಳ್ಳದೆ ಒಂಥರದ ನಿರ್ಲಿಪ್ತತೆಯಿಂದ ಬರೆಯಬಹುದು. ಮಾತ್ರವಲ್ಲ, ಗ್ಲೋಬಲ್ ಪರ್ಸ್‌ಪೆಕ್ಟಿವ್ ಎಂಬ ಬಣ್ಣದ ಕನ್ನಡಕವಿಟ್ಟು ವಿಶಾಲ ದೃಷ್ಟಿಕೋನದಿಂದ ಬರೆಯಬಹುದು. ಇನ್ನು, ಸವಾಲು ಯಾವ ರೀತಿ ಅಂತಲೂ ಹೇಳುತ್ತೇನೆ. ವಿಜಯ ಕರ್ನಾಟಕ ಪತ್ರಿಕೆಯ ಇ-ಪೇಪರ್ ಆವೃತ್ತಿಯನ್ನು ಓದುವ ಅನಿವಾಸಿ ಕನ್ನಡಿಗರಿದ್ದಾರೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಅವರಿಗೆ ಅಮೆರಿಕದ ಸಂಗತಿಗಳ ಬಗ್ಗೆ ಬರೆದರೆ ಅಷ್ಟೇನೂ ಹಿಡಿಸುವುದಿಲ್ಲ. ಅದಕ್ಕಿಂತ ತಾಯ್ನಾಡಿನಲ್ಲಿ ಕಳೆದ ತಮ್ಮ ಬಾಲ್ಯವನ್ನು ನೆನಪಿಸುವ ವಿಚಾರ ಲಹರಿಗಳಿದ್ದರೆ ಓದುವಾಗ ತುಂಬಾ ಹಿತಾನುಭವ ಆಗುತ್ತದೆ. ಕೆಲದಿನಗಳ ಹಿಂದೆ ಲಂಡನ್‌ನಿಂದ ಡಾ. ಪ್ರವೀಣ ಕುಮಾರ್ ನನಗೊಂದು ಪತ್ರ ಬರೆದಿದ್ದರು. ಅದರಲ್ಲಿ “ದಯವಿಟ್ಟು ಅಮೆರಿಕಾದ ಬಗ್ಗೆ ತುಂಬಾ ಬರೆಯಬೇಡಿ. ವಿದೇಶದಲ್ಲೇ ಇರುವ ನಮಗೆ ಈ ಬರಹಗಳು ರುಚಿ ಅನ್ಸಲ್ಲ. ಅಲ್ಲದೇ ಕರ್ನಾಟಕದಲ್ಲೂ ಗ್ರಾಮೀಣ ಪ್ರದೇಶದ ಓದುಗರಿಗೆ ಅಮೆರಿಕಾದ ಬಗ್ಗೆ ಯಾವ ಆಸಕ್ತಿ ಇರುತ್ತೆ ಹೇಳಿ? ನಮಗೆ ಹಳ್ಳಿಗಾಡಿನ, ಗ್ರಾಮೀಣ ಜೀವನದ ಸೊಗಸನ್ನು ಮೆಲುಕು ಹಾಕುವಂತೆ ಮಾಡುವ ನಿಮ್ಮ ಲೇಖನಗಳು ಬಹಳ ಇಷ್ಟವಾಗುತ್ತೆ. ಅಂಥವನ್ನೇ ಬರೀರಿ” ಎಂದು ಪ್ರೀತಿಯ ಆದೇಶ ನೀಡಿದ್ದರು.

ಒಬ್ಬ ಅನಿವಾಸಿ ಕನ್ನಡಿಗನಾಗಿ ಪ್ರವೀಣ ಕುಮಾರ್ ಅವರ ಮನದಿಂಗಿತ ನನಗೆ ಅರ್ಥವಾಗುತ್ತದೆ. ಹಾಗೆಯೇ ಕರ್ನಾಟಕದ ಒಬ್ಬ ಜನಸಾಮಾನ್ಯ ಓದುಗನಿಗೆ ಅಮೆರಿಕದ ವಿಚಾರಗಳು ಒಂದೊಮ್ಮೆ ಕುತೂಹಲಕರ ಎನಿಸಿದರೂ ಕೊನೆಗೂ ತನಗದು ಏನೂ ರೆಲವೆಂಟ್ ಅಲ್ಲ, ತಾನು ರಿಲೇಟ್ ಮಾಡಿಕೊಳ್ಳುವಂಥದ್ದು ಅದರಲ್ಲೇನೂ ಇಲ್ಲ  ಅಂತನ್ನಿಸುವುದೇ ಹೆಚ್ಚು. ಆ ಅರಿವು ಕೂಡ ನನಗಿದೆ. ಆದರೆ, ಇನ್ನೊಂದು ವರ್ಗವೂ ಇದೆ. ಅಮೆರಿಕದಲ್ಲಿ ಕುಳಿತುಕೊಂಡು ನೀವು ಹಲಸಿನ ಹಪ್ಪಳದ ಬಗ್ಗೆ, ವಟಸಾವಿತ್ರಿ ವ್ರತದ ಬಗ್ಗೆ, ಹಳಗನ್ನಡ ಕಾವ್ಯದ ಬಗ್ಗೆ ಯಾಕೆ ಬ(ಕೊ)ರಿತೀರಿ? ಅದನ್ನು ಮಾಡಲಿಕ್ಕೆ ಇಲ್ಲಿನವರು ಇದ್ದಾರೆ. ನಮಗೆ ಅಮೆರಿಕದ ವಿಚಾರಗಳನ್ನು, ಅಲ್ಲಿನ ಜನಜೀವನ ಕುರಿತಾದ್ದನ್ನು ಕನ್ನಡದಲ್ಲಿ ತಿಳಿಸಿ ಎನ್ನುವವರು. ಬೆಂಗಳೂರಿನ ಜಿ.ಆರ್. ಅರವಿಂದ ಎಂಬ ಓದುಗಮಿತ್ರರ ಪತ್ರವನ್ನೇ ತೆಗೆದುಕೊಳ್ಳಿ. ಅವರೆನ್ನುತ್ತಾರೆ, “ಗೋರೂರು ರಾಮಸ್ವಾಮಿ ಐಯಂಗಾರರ ಪ್ರವಾಸಕಥನದಿಂದ, ನಾಗತಿಹಳ್ಳಿಯವರ ಸಿನೆಮಾಗಳಿಂದ ಆ ದೂರದ ದೇಶದ ಬಗ್ಗೆ ತಿಳಿದ ಮೇಲೂ ಕುತೂಹಲ ಇನ್ನೂ ಇದೆ. ಅಲ್ಲಿ ತೀರಾ ನಗರಪ್ರದೇಶದಿಂದ ದೂರವಿರುವ ಗ್ರಾಮೀಣ ಜನರ ನಾಡಿಮಿಡಿತ ಹೇಗಿರುತ್ತೆ? ದೇವೇಗೌಡ, ಸಾಧುಕೋಕಿಲ ಮುಂತಾದವರನ್ನು ಹೋಲುವ, ಅಥವಾ ತಮ್ಮ ವೃತ್ತಿಯಿಂದಲೇ ‘ನಿತ್ಯಾನಂದ’ ಪಡೆವವರು-ಕೊಡುವವರು ಅಲ್ಲೂ ಇದ್ದಾರೆಯೇ? ಹೇಗಿದ್ದಾರೆ? ‘ಬುದ್ಧಿಜೀವಿಗಳು’ ಆ ಲೋಕದಲ್ಲೂ ಇದ್ದಾರಾ? ಅವರ ವರ್ತನೆ ಹೇಗಿರುತ್ತದೆ? ತೀರಾ ಚಂದನ ಥರದ ಟಿವಿ ಚಾನಲ್ ಅಲ್ಲೂ ಇದೆಯಾ?...”

ಅರವಿಂದ್ ಅವರ ಪ್ರಶ್ನೆಗಳನ್ನು ಒಂದೊಂದಾಗಿ ಉತ್ತರಿಸುತ್ತ ಒಂದು ಸ್ವಾರಸ್ಯಕರ ಲೇಖನವನ್ನೇ ಬರೆಯಬಹುದು. ಅದನ್ನು ಮುಂದೆ ಯಾವಾಗಾದರೂ ಮಾಡುತ್ತೇನೆ. ಇವತ್ತು ಅಮೆರಿಕದ ಟೆಡ್ಡ್ ವಿಲಿಯಮ್ಸ್ ಎಂಬೊಬ್ಬ ನಿರಾಶ್ರಿತ ಭಿಕ್ಷುಕ ಕೆಲದಿನಗಳ ಹಿಂದೆ ರಾತೋರಾತ್ರಿ ಎಂಬಂತೆ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಸುದ್ದಿಯನ್ನು ಯಥಾಯೋಗ್ಯವಾಗಿ ಇಲ್ಲಿ ಸ್ಪರ್ಶಿಸುತ್ತೇನೆ. ಅಷ್ಟು ಹೇಳಿದಾಗಲೇ ನಿಮ್ಮಲ್ಲಿ ಕೆಲವರಿಗೆ ಇದ್ದಿರಬಹುದಾದ ಒಂದು ಪ್ರಶ್ನೆಯನ್ನು ಉತ್ತರಿಸಿದಂತಾಯ್ತು. ಅಮೆರಿಕದಲ್ಲೂ ಭಿಕ್ಷುಕರಿದ್ದಾರೆಯೇ? ಹೌದು, ಇದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ದೇಶವೇ ಒಂದು ದೊಡ್ಡ ಭಿಕ್ಷುಕನಿದ್ದಂತೆ ಎಂದು ಕೆಲವು ಸಿನಿಕರು ಹೇಳಬಹುದು. ಅಷ್ಟೇಕೆ, ಪ್ರಪಂಚದ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ‌ಒಂದು ವಿಧದಲ್ಲಿ ಒಂದಲ್ಲ‌ಒಂದು ಸಂದರ್ಭದಲ್ಲಿ ಭಿಕ್ಷುಕನೇ ಎಂಬ ತತ್ತ್ವಜ್ಞಾನದ ಮಾತನಾಡಬಹುದು ಇನ್ನು ಕೆಲವರು. ಅವರನ್ನೆಲ್ಲ ಸದ್ಯಕ್ಕೆ ದೂರವಿಟ್ಟು ನಮ್ಮ-ನಿಮ್ಮ ಪರಿಕಲ್ಪನೆಯಲ್ಲಿ ಭಿಕ್ಷುಕ ಎಂಬ ಪದದ ಸಾಮಾನ್ಯ ಅರ್ಥವನ್ನು ತೆಗೆದುಕೊಂಡರೆ ಅಮೆರಿಕದಲ್ಲೂ ಭಿಕ್ಷುಕರಿದ್ದಾರೆ. ಅಂಥವನೊಬ್ಬ ಟೆಡ್ಡ್ ವಿಲಿಯಮ್ಸ್. ಕಳೆದ ಹದಿನೇಳು ವರ್ಷಗಳೂ ಅವನು ಭಿಕ್ಷೆ ಬೇಡಿಕೊಂಡೇ ಬದುಕಿದ್ದವನು.

TedWilliams1.jpg

ಹಿಂದಿ ಭಾಷೆಯಲ್ಲಿ ಒಂದು ಜನಜನಿತ ಮಾತಿದೆ- ‘ಭಗವಾನ್ ಜಬ್‌ಭೀ ದೇತಾ ಹೈ ತೊ ಛಪ್ಪರ್ ಫಾಡ್‌ಕೆ ದೇತಾ ಹೈ’ (ಭಗವಂತ ಕೊಟ್ಟಾಗೆಲ್ಲ ಸೂರು ಹರಿದುಹೋಗುವಂತೆ ಸುರಿಯುತ್ತಾನೆ) ಎಂದು. ದೇವರು ನಮ್ಮನ್ನು ಕಷ್ಟಗಳಿಗೆ ಸಿಲುಕಿಸುವ ವಿಷಯದಲ್ಲೂ ಸಕಲಸೌಭಾಗ್ಯವನ್ನು ಒದಗಿಸುವ ವಿಷಯದಲ್ಲೂ ಈ ಮಾತು ಏಕಪ್ರಕಾರವಾಗಿ ಸರಿಹೋಗುತ್ತದೆ. ಕಳೆದವಾರ ಟೆಡ್ಡ್ ವಿಲಿಯಮ್ಸ್ ಬದುಕಿನಲ್ಲಿ ಭಗವಂತ ದಯಪಾಲಿಸಿದ್ದು ‘ಛಪ್ಪರ್ ಫಾಡ್‌ಕೆ’ಗಿಂತಲೂ ಹೆಚ್ಚಿನ ರೀತಿಯಲ್ಲಿ ಎಂದರೆ ತಪ್ಪಲ್ಲ. ಆ ದಿನವೂ ವಿಲಿಯಮ್ಸ್ ಎಂದಿನಂತೆಯೇ ಒಹಯೋ ರಾಜ್ಯದ ಕೊಲಂಬಸ್ ಪಟ್ಟಣದ ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ಕೈಯಲ್ಲೊಂದು ಬೋರ್ಡ್. “ನನಗೆ ದೈವದತ್ತವಾದ ಕಂಠಸಿರಿಯಿದೆ. ಹಿಂದೆ ನಾನೊಬ್ಬ ರೇಡಿಯೊ ಅನೌನ್ಸರ್ ಆಗಿದ್ದೆ, ಆದರೆ ಕಷ್ಟದ ದಿನಗಳಿಗೆ ಗುರಿಯಾದೆ. ದಯವಿಟ್ಟು ಸಹಾಯ ಮಾಡಿ. ನಿಮ್ಮ ನೆರವನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.” ಕೊಲಂಬಸ್ ಪಟ್ಟಣದ ‘ಕೊಲಂಬಸ್ ಡಿಸ್‌ಪ್ಯಾಚ್’ ಪತ್ರಿಕೆಯ ವರದಿಗಾರ ಡೊರಲ್ ಚಿನೊವೆತ್‌ನಿಗೆ ಅವತ್ತು ನಿರಾಶ್ರಿತ ಭಿಕ್ಷುಕರ ಬಗ್ಗೆ ಒಂದು ರಿಪೋರ್ಟ್ ತಯಾರಿಸುವ ಅಸೈನ್‌ಮೆಂಟ್ ಇತ್ತು. ಕಾರಿನಲ್ಲಿ ಆ ರಸ್ತೆಯಾಗಿಯೇ ಹೋಗುತ್ತಿದ್ದವನಿಗೆ ಟ್ರಾಫಿಕ್‌ಸಿಗ್ನಲ್ ಬಳಿ ವಿಲಿಯಮ್ಸ್ ಎದುರಾದ. ಕುತೂಹಲದಿಂದ ಕಾರಿನ ಕಿಟಕಿಗಾಜು ಕೆಳಸರಿಸಿ ವಿಲಿಯಮ್ಸ್‌ನ ಕೈಯಲ್ಲಿದ್ದ ಬೋರ್ಡ್ ಓದಿದ. ಏನಿವನ ಕಂಠಸಿರಿ ನೋಡಿಯೇಬಿಡೋಣ ಎಂದು ತನ್ನಲ್ಲಿದ್ದ ವಿಡಿಯೊಕೆಮರಾದಲ್ಲಿ ವಿಲಿಯಮ್ಸ್ ಮಾತನ್ನು ರೆಕಾರ್ಡ್ ಮಾಡಿದ. ನಿಜಕ್ಕೂ ರೇಡಿಯೊ ಅನೌನ್ಸರ್‌ಗೆ ಹೇಳಿಮಾಡಿಸಿದ ಧ್ವನಿ ಎಂದು ಅಚ್ಚರಿಗೊಂಡ ಚಿನೊವೆತ್ ಆ ವಿಡಿಯೋ ತುಣುಕನ್ನು ಇಂಟರ್‌ನೆಟ್‌ನಲ್ಲಿ ತೇಲಿಬಿಟ್ಟ.

ಕಾಳ್ಗಿಚ್ಚಿನಂತೆ, ಕಂಪ್ಯೂಟರ್ ವೈರಸ್‌ನಂತೆ ಹರಡಿತು ಆ ‘ಗೋಲ್ಡನ್ ವಾಯ್ಸ್ ಆಫ್ ಹೋಮ್‌ಲೆಸ್ ಮ್ಯಾನ್’ ವಿಡಿಯೋ ತುಣುಕು. ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನ ಅದನ್ನು ನೋಡಿದರು. ಸಿ‌ಎನ್‌ಎನ್ ಸೇರಿದಂತೆ ಅಮೆರಿಕದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯ್ತು (ಭಾರತದ ಟಿವಿ ಚಾನಲ್‌ಗಳ ಭಾಷೆಯಲ್ಲಾದರೆ ‘ಬ್ರೇಕಿಂಗ್ ನ್ಯೂಸ್’). ನ್ಯೂಯಾರ್ಕ್‌ನ ಎನ್‌ಬಿಸಿ ಟೆಲಿವಿಷನ್ ನೆಟ್‌ವರ್ಕ್ ತನ್ನ ಬೆಳಗ್ಗಿನ ಪ್ರಸಾರದ ‘ಟುಡೇ’ ಶೋಗೆ ವಿಲಿಯಮ್ಸ್‌ನನ್ನು ಅತಿಥಿಯಾಗಿ ಕರೆಸಿ ಸಂದರ್ಶನ ನಡೆಸಿತು. ಇದೆಲ್ಲ ನಿಜವೇ, ಕನಸಿನಲ್ಲಿ ಆಗುತ್ತಿದೆಯೇ ಎಂದು ನಂಬದಾದ ವಿಲಿಯಮ್ಸ್ ತನ್ನೆಲ್ಲ ಕಥೆಯನ್ನು ಆ ಸಂದರ್ಶನದಲ್ಲಿ ಬಿಚ್ಚಿಟ್ಟ. ಹದಿನಾಲ್ಕು ವರ್ಷದ ಬಾಲಕನಾಗಿದ್ದಾಗಲೇ ತನಗೆ ರೇಡಿಯೊ ಅನೌನ್ಸರ್ ಆಗಬೇಕೆಂಬ ಬಯಕೆಯಿದ್ದದ್ದು, ಅದಕ್ಕಾಗಿ ತರಬೇತಿ ಪಡೆದು ತಾನು ರೇಡಿಯೊ ಅನೌನ್ಸರ್ ಆದದ್ದು, ಆದರೆ ಆಮೇಲೆ ಕುಡಿತ, ಡ್ರಗ್ಸ್ ಮುಂತಾಗಿ ದುಶ್ಚಟಗಳಿಗೆ ಬಲಿಯಾಗಿ ಜೀವನದಲ್ಲಿ ಅಧೋಗತಿಯತ್ತ ಸಾಗತೊಡಗಿದ್ದು, ಈನಡುವೆ ಮದುವೆಯಾಗಿ ಒಂಬತ್ತು ಮಕ್ಕಳ ತಂದೆಯಾದದ್ದು, ದುರ್ವ್ಯಸನಗಳು ಹೆಚ್ಚಿದಂತೆಲ್ಲ ಒಂದುದಿನ ಮನೆಯಿಂದ ಹೊರದಬ್ಬಲ್ಪಟ್ಟು ಬೀದಿಪಾಲಾದದ್ದು, ಬದುಕಿಗೋಸ್ಕರ ಭಿಕ್ಷೆ, ಕಳ್ಳತನ, ದರೋಡೆ, ಜೈಲುವಾಸ ಇತ್ಯಾದಿ ಏನೇನೆಲ್ಲ ಮಾಡಿದ್ದು, ಕಳೆದೆರಡು ವರ್ಷಗಳಿಂದ ದುಶ್ಚಟಗಳನ್ನೆಲ್ಲ ಬಿಟ್ಟು ದೇವರ ಮೇಲೆ ಭಾರ ಹಾಕಿ ದಿನದೂಡತೊಡಗಿದ್ದು, ೨೦೧೦ ಕೂಡ ವ್ಯರ್ಥ ವರ್ಷವಾಯ್ತಲ್ಲ ಎಂದುಕೊಳ್ಳುತ್ತಿದ್ದಾಗಲೇ ಈ ಪವಾಡ ಸಂಭವಿಸಿದ್ದು... ಕಥೆ ಹೇಳುವೇ ನನ್ನ ಕಥೆ ಹೇಳುವೆ ಎಂದು ನಾಗರಹಾವು ಸಿನೆಮಾದಲ್ಲಿ ಅಲಮೇಲು (ಆರತಿ) ಹೇಳುವಂತೆ ವಿಲಿಯಮ್ಸ್ ಹೇಳುತ್ತ ಹೋದ. ನಡುನಡುವೆ ಭಾವುಕನಾಗುತ್ತಿದ್ದ. ೯೨ ವರ್ಷಗಳ ತನ್ನ ಅಮ್ಮ ಬದುಕಿರುವಾಗಲೇ ಅವಳಿಂದ “ಮಗ ಸರಿದಾರಿಗೆ ಬಂದ, ಬೇಡುವುದನ್ನು ನಿಲ್ಲಿಸಿ ಕೆಲಸಕ್ಕೆ ತೊಡಗಿದ” ಎನ್ನಿಸಿಕೊಳ್ಳಬೇಕೆಂದು ತನ್ನ ಆಸೆಯಿರುವುದು ಎನ್ನುವಾಗಂತೂ ಗಳಗಳನೆ ಕಣ್ಣೀರಿಟ್ಟ. ಸಂದರ್ಶನದ ಕೊನೆಯಲ್ಲಿ ತನ್ನ ಎಲ್ಲ ಒಂಬತ್ತು ಮಕ್ಕಳ ಹೆಸರುಗಳನ್ನೂ ಉಚ್ಚರಿಸಿ ಅವರ ಪ್ರೀತಿ ಮತ್ತೆ ತನಗೆ ಬೇಕೆಂದು ಗೋಗರೆದ.

ವಿಲಿಯಮ್ಸ್‌ನ ಕಂಠಸಿರಿ ಮತ್ತು ಅದ್ಭುತವಾದ ಆತ್ಮವಿಶ್ವಾಸವನ್ನು ಗಮನಿಸಿದ ಕ್ಲೀವ್‌ಲ್ಯಾಂಡ್ (ಒಹಯೊ ರಾಜ್ಯದ ಮತ್ತೊಂದು ಪಟ್ಟಣ)ದ ‘ಕೆವೆಲಿಯರ್ಸ್’ ಬಾಸ್ಕೆಟ್‌ಬಾಲ್ ತಂಡದ ಮಾಲೀಕತ್ವದ ಕಂಪನಿಯು ವಿಲಿಯಮ್ಸ್‌ನಿಗೆ ಉದ್ಯೋಗ ನೀಡಲು ಮುಂದಾಯಿತು. ಬಾಸ್ಕೆಟ್‌ಬಾಲ್ ಪಂದ್ಯಗಳು ನಡೆಯುವ ‘ಅರೆನಾ’ದಲ್ಲಿ ಉದ್ಘೋಷಣೆ, ತಂಡದ ಜಾಹೀರಾತುಗಳಿಗೆ ವಾಯ್ಸ್‌ಒವರ್ ಮಾಡುವ ಕೆಲಸ. ಕೈತುಂಬ ಸಂಬಳವಷ್ಟೇ ಅಲ್ಲ, ವಾಸಿಸುವುದಕ್ಕೊಂದು ಮನೆಯನ್ನೂ ಕೊಡುವುದಾಗಿ ಘೋಷಿಸಿತು. ಅದೂ ಹೇಗೆಂದರೆ ಒಂದು ರೇಡಿಯೋ ಸ್ಟೇಷನ್‌ನಲ್ಲಿ ವಿಲಿಯಮ್ಸ್‌ನ ಸಂದರ್ಶನ ನಡೆಯುತ್ತಿದ್ದಾಗಲೇ ಫೋನ್ ಮಾಡಿ ಆಫರ್ ಕೊಟ್ಟಿತು ಆ ಕಂಪನಿ! ಅದುವರೆಗೆ ವಿಲಿಯಮ್ಸ್ ಅಪರಾಧಗಳನ್ನು ಮಾಡಿ ಸಿಕ್ಕಿಬಿದ್ದಾಗೆಲ್ಲ ಪೊಲೀಸರು ಅರೆಸ್ಟ್ ರೆಕಾರ್ಡ್‌ನಲ್ಲಿ ಅವನ ಮಾಹಿತಿಯನ್ನು ಬರೆದುಕೊಳ್ಳುವಾಗ ‘ವಿಳಾಸ: ಕೊಲಂಬಸ್ ಪಟ್ಟಣದ ಬೀದಿಗಳು’ ಎಂದೇ ಬರೆಯುತ್ತಿದ್ದರು! ಉದ್ಯೋಗಕ್ಕೆ ಅರ್ಜಿ ಗುಜರಾಯಿಸಬೇಕೆಂದರೂ ಅವನಿಗೊಂದು ಐಡೆಂಟಿಟಿ ಆಗಲೀ, ಅಡ್ರೆಸ್ ಆಗಲೀ ಏನಿತ್ತು? ಈಗ ಇಷ್ಟೆಲ್ಲ ಪ್ರಸಿದ್ಧನಾದ ಮೇಲೆ ಒಹಯೋ ರಾಜ್ಯದ್ದೇ ಒಂದು ಬ್ಯಾಂಕ್ ತನ್ನ ಜಾಹೀರಾತಿಗೆ ವಿಲಿಯಮ್ಸ್‌ನಿಂದ ಕಂಠದಾನ ಕಾಂಟ್ರಾಕ್ಟ್‌ಗೆ ಸಹಿ ಹಾಕಿಸಿ, ಅವನಿಗೆ ಹತ್ತುಸಾವಿರ ಡಾಲರ್ ಮುಂಗಡ ಪಾವತಿಸಿದೆ. ಶಿಕಾಗೋದ ಕಂಪನಿಯೊಂದು ತನ್ನ ಚೀಸ್ ಉತ್ಪನ್ನಗಳ ಜಾಹೀರಾತಿಗೆ ವಿಲಿಯಮ್ಸ್‌ನ ಕಂಠ ಬೇಕೆಂದು ಬೇಡಿಕೆ ಸೂಚಿಸಿದೆ. ಒಂದು ವಾರದ ಹಿಂದೆಯಷ್ಟೇ ‘ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ತೋಳೇ ತಲೆಕೆಳಗೆ...’ ಎನ್ನುವಂತಿದ್ದ ವಿಲಿಯಮ್ಸ್ ಈಗ ವಿಮಾನದಲ್ಲಿ ಅತ್ತಿಂದಿತ್ತ ಸಂಚರಿಸುತ್ತಾನೆ. ಲಾಸ್‌ಏಂಜಲೀಸ್‌ವರೆಗೂ ಪಾದಬೆಳೆಸಿ ಅಲ್ಲಿನ ಹಾಲಿವುಡ್ ಹೊಟೇಲ್‌ನಲ್ಲಿ ಉಳಕೊಳ್ಳುತ್ತಾನೆ. ಭಿಕ್ಷಾಟನೆ ಮಾಡುತ್ತಿದ್ದಾಗಿನ ಕೆದರಿದ ಕೂದಲೆಲ್ಲ ಚೆನ್ನಾಗಿ ಟ್ರಿಮ್ ಆಗಿ ಈಗ ಹ್ಯಾಂಡ್‌ಸಮ್ ಹೀರೋ ಆಗಿದ್ದಾನೆ. ಇದೆಲ್ಲವೂ ಸಾಧ್ಯವಾದದ್ದು ‘ರೈಟ್ ಪ್ಲೇಸ್ ರೈಟ್ ಮೊಮೆಂಟ್’ ಎಂಬಂತೆ ಅವತ್ತು ಅವನು ರಸ್ತೆಬದಿಯಲ್ಲಿ ಬೋರ್ಡ್ ಹಿಡಿದುಕೊಂಡು ಆ ಜಾಗದಲ್ಲಿ ನಿಂತುಕೊಂಡಿದ್ದರಿಂದ ಮತ್ತು ರಿಪೋರ್ಟರ್ ಮಹಾಶಯ ಅದೇ ಜಾಗದಲ್ಲಿ ಕಾರು ನಿಲ್ಲಿಸಿ ಇವನತ್ತ ದೃಷ್ಟಿ ಹಾಯಿಸಿದ್ದರಿಂದ! ‘ಸಮಯಾಸಮಯವುಂಟೇ ಭಕ್ತವತ್ಸಲ ನಿನಗೆ?’ ಎನ್ನುತ್ತಿದ್ದಾನೆ ಈಗ ದೇವರಲ್ಲಿ ಸಂಪೂರ್ಣ ನಂಬಿಕೆ ಚಿಗುರಿಕೊಂಡಿರುವ ಟೆಡ್ಡ್ ವಿಲಿಯಮ್ಸ್. ಭಿಕಾರಿಯೊಬ್ಬ ಬಿಲಿಯನೇರ್ ಆಗಹೊರಟಿರುವ ಸತ್ಯಕಥೆ ಇದು. ಬೇಡಾ, ಬಿಲಿಯನೇರ್ ಆಗಹೊರಟವ ಎನ್ನುವುದಕ್ಕಿಂತ, ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದವ ಎನ್ನೋಣ. ಈ ಇನ್ನಿಂಗ್ಸ್‌ನಲ್ಲಾದರೂ ಅವನ ಬದುಕು ಬಂಗಾರವಾಯ್ತು ಎನ್ನುವಂತಾಗಲೆಂದು ಹಾರೈಸೋಣ.

ಮತ್ತೆ ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಹಿಂದಿರುಗುವುದಾದರೆ, ಪರಾಗ ಸ್ಪರ್ಶ ಅಂಕಣದ ಓದುಗರಾಗಿ ನಿಮಗೆ ಇಲ್ಲಿ ಯಾವ ರೀತಿಯ ವಿಷಯಗಳು ಇಷ್ಟವಾಗುತ್ತವೆ? ಯಾವ ವಿಷಯಗಳನ್ನು ನೀವು ಅಪೇಕ್ಷಿಸುತ್ತೀರಿ, ನಿರೀಕ್ಷಿಸುತ್ತೀರಿ? ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ‘ಓದುಗರನ್ನು ಓಲೈಸುವುದಕ್ಕಾಗಿಯೇ ನಾನು ಬರೆಯುತ್ತೇನೆ’ ಎಂಬ ತುದಿಗೂ ಹೋಗದೆ, ‘ಯಾರು ಓದಲೆಂದೂ ನಾನು ಬರೆಯುವುದಲ್ಲ, ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂಬ ಇನ್ನೊಂದು ತುದಿಗೂ ಹೋಗದೆ, ನನಗೆ-ನಿಮಗೆ ಹಿತವಾಗುವಂಥದ್ದು, ಉಪಯೋಗವಾಗುವಂಥದ್ದು ಈ ಅಂಕಣದಲ್ಲಿ ಹೆಚ್ಚುಹೆಚ್ಚು ಬರಲಿ ಎಂಬ ಧ್ಯೇಯೋದ್ದೇಶದಿಂದ ಈ ಪ್ರಶ್ನೆಯನ್ನು ನಾನು ನಿಮ್ಮಲ್ಲಿ ಕೇಳುತ್ತಿರುವುದು. ನಿಮ್ಮ ಪ್ರಾಮಾಣಿಕ ಅಭಿಪ್ರಾಯ ತಿಳಿಸಿದರೆ ತುಂಬ ಸಂತೋಷ. ನಿನ್ನೆಯಷ್ಟೇ ಹೇಳಿಕೊಂಡೆವಲ್ಲ ‘ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆಯ ಮಾತನಾಡೋಣ’ ಅಂತ? ಮಾತಿನಂತೆ ಕೃತಿಯೂ ಒಳ್ಳೆಯದಾಗಿಯೇ ಇರಲಿ ಎನ್ನುವುದು ಒಟ್ಟಾರೆ ಆಶಯ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Abhyaasabala Pradarshana

Saturday, January 8th, 2011
DefaultTag | Comments

ದಿನಾಂಕ 9 ಜನವರಿ 2011ರ ಸಂಚಿಕೆ...

ವಾಕಿಂಗ್‌ನಲ್ಲೂ ಅಭ್ಯಾಸ‘ಬಲ’ಗೈಯಿಂದ ಸಿಗ್ನಲ್!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

ಹತ್ತು ತಿಂಗಳ ಪುಟ್ಟ ಮಗು. ತೊದಲುಮಾತನ್ನೂ ಆಡತೊಡಗಿಲ್ಲ. ಇವತ್ತಿನ ನಮ್ಮ ‘ಅಭ್ಯಾಸಬಲ ಪ್ರದರ್ಶನ’ದ ಉದ್ಘಾಟನೆಯ ಗೌರವ ಈ ಪುಟ್ಟ ಪಾಪುವಿನದು! ಅಜ್ಜಿ ದಿನಾ ಊಟ ಮಾಡಿಸುವಾಗ ಶ್ರೀರಾಮನಾಮ ಹೇಳ್ತಾರೆ; ಮಗು ಹಿಗ್ಗಿನಿಂದ ಚಪ್ಪಾಳೆ ತಟ್ಟುತ್ತಾ ಊಟ ಮಾಡುತ್ತೆ. ಮಗುವಿಗೆ ಅದು ಎಷ್ಟು ಅಭ್ಯಾಸವಾಗಿಹೋಗಿದೆಯೆಂದರೆ ಈಗ ಅಜ್ಜಿ ರಾಮನಾಮ ಹೇಳಿಲ್ಲ ಅಂದ್ರೂ ತಾನೇ ಚಪ್ಪಾಳೆ ತಟ್ಟಿ ನೆನಪಿಸುತ್ತದೆ! ಇದು ಅಭ್ಯಾಸಬಲದ ಆಭಾಸ ಅಲ್ಲ, ಮುಗ್ಧಹಾಸ. ಬರೆದುಕಳಿಸಿದವರು ಮಗುವಿನ ಅಜ್ಜಿ ಭದ್ರಾವತಿಯಿಂದ ಮಮತಾ ನಾಗರಾಜ. ಕಳೆದವಾರ ಅಭ್ಯಾಸಬಲದ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದೆನಷ್ಟೆ? ಇಂತಹ ಪತ್ರಾಹ್ವಾನ ಈ ಅಂಕಣದಲ್ಲಿ ಹೊಸತೇನಲ್ಲ. ಈ ಹಿಂದೆಯೂ ಷಟ್ಪದಿ ರಚನೆ, ಲೆಕ್ಕ ಬಿಡಿಸುವಿಕೆ, ನೆಮೊನಿಕ್ಸ್ ಸಂಗ್ರಹ, ಸಿಂಪಲ್ ರಸಪ್ರಶ್ನೆ ಇತ್ಯಾದಿ ವಿವಿಧ ಚಟುವಟಿಕೆಗಳಾಗಿವೆ. ಆದರೆ ಇವತ್ತಿನದು ಅವೆಲ್ಲಕ್ಕಿಂತ ಭಿನ್ನವಾದ ಪ್ರದರ್ಶನ. ಇದು ಸ್ವಾನುಭವಗಳ ಸೊಗಸಾದ ಕಥನ. ಒಂದೊಂದು ಪತ್ರದಲ್ಲೂ ಬರೆದವರೇ ಬಂದು ಮಾತನಾಡಿದಂಥ ರೋಮಾಂಚನ. ಕಣ್ಮುಂದೆ ಸುಳಿದು ಮಂದಹಾಸ ಮೂಡಿಸುವ ಚಿತ್ರಣ. ಇದೋ ಇಲ್ಲಿದೆ ಅಭ್ಯಾಸಬಲ ಕುರಿತಂತೆ ಓದುಗರ ಸ್ಪಂದನದ ಸಂಕಲನ.

‘ಬರೆದಾತನೇ ಮಾತನಾಡಿದ...’ ಎಂದೆನಲ್ಲಾ, ಬೆಂಗಳೂರಿನ ರೋಹಿತ್ ಚಕ್ರತೀರ್ಥ ಅದನ್ನೇ ಮಾಡಿದ್ದಾರೆ. ಅಭ್ಯಾಸಬಲದ ಬಗ್ಗೆ ಅಂದವಾದೊಂದು ಲೇಖನ ಬರೆದು ಸ್ವತಃ ಓದಿ ಧ್ವನಿಮುದ್ರಣ ಮಾಡಿ ‘ಸ್ವರಪತ್ರ’ವಾಗಿ ನನಗೆ ಇಮೇಲ್ ಮಾಡಿದ್ದಾರೆ! ಅವರು ಬರೆದ ಹಲವಾರು ‘ಅಬ’ (ಅಭ್ಯಾಸಬಲ)ಗಳ ಪೈಕಿ ಜಸ್ಟ್ ಒಂದು- ನಮ್ಮಲ್ಲಿ ಎಷ್ಟೋ ಜನರಿಗೆ ಬೆಳಗ್ಗೆ ಪ್ರಕೃತಿಯ ಕರೆಗೆ ಓಗೊಡಲು ಕಣ್ಣನ್‌ದೇವರ ಅನುಗ್ರಹ ಬೇಕಾಗುತ್ತದೆ. ಹೌದು, ಬೆಳಗಾವಿಯ ನಿತ್ಯಾನಂದ ಭಟ್‌ರಂಥವರಿಗೆ ಆಗ ಕೈಯಲ್ಲೊಂದು ಪುಸ್ತಕವೋ ಪತ್ರಿಕೆಯೋ ಬೇಕಾಗುತ್ತದೆ. ಇಲ್ಲದಿದ್ದರೆ ‘ಆಗುವುದೇ’ ಇಲ್ಲ. ಕಾರ್ಕಳದ ದರ್ಶನ್ ಜೈನ್ ಅವರಿಗೆ ಊಟ ಮಾಡುವಾಗಲೂ ಕೈಯಲ್ಲಿ ಪುಸ್ತಕ ಅಥವಾ ಪತ್ರಿಕೆ ಬೇಕು, ಕನಿಷ್ಠ ಮೊಬೈಲ್‌ನಲ್ಲಿ ಮೆಸೇಜುಗಳ ಪಠಣವಾದರೂ ಆಗಬೇಕು. ಹೈಸ್ಕೂಲ್‌ಗೆ ಹೋಗಲು ಆಶ್ರಮದಲ್ಲಿದ್ದಾಗ ಅಲ್ಲಿ ಊಟದವೇಳೆ ಮಂತ್ರಗಳ ಪುಸ್ತಕ ಹಿಡಿದುಕೊಳ್ಳುತ್ತಿದ್ದಾಗಿನ ಅಬ ಇದು ಎನ್ನುತ್ತಾರವರು. ಊಟವಾದ ಮೇಲೆ ತಟ್ಟೆಯಲ್ಲೇ ಕೈತೊಳೆಯುವ ಅಬ ಬೆಂಗಳೂರಿನ ಜಿ.ಕೃಪಾ ಅವರಿಗೆ. ಹೊಟೇಲುಗಳಲ್ಲಾದರೆ ‘ತಟ್ಟೆಯಲ್ಲಿ ಕೈ ತೊಳೆಯಬೇಡಿ’ ಬೋರ್ಡ್ ಇರುತ್ತೆ, ಮನೆಗಳಲ್ಲಿ ಇರುವುದಿಲ್ಲ. ಮದುವೆಯಾದ ಹೊಸತರಲ್ಲಿ ಅವರೊಮ್ಮೆ ಮಡಿವಂತ ನೆಂಟರಲ್ಲಿಗೆ ಹೋಗಿದ್ದಾಗ ಅಲ್ಲೂ ತಟ್ಟೆಯಲ್ಲೇ ಕೈ ತೊಳೆದು ಆಭಾಸಕ್ಕೊಳಗಾಗಿದ್ದರಂತೆ. ಇನ್ನೊಂದು ತಮಾಷೆಯ ಅನುಭವ, ಶ್ರೀವರ ಮೈಸೂರು ಅವರಿಂದ- “ನನ್ನ ಸ್ನೇಹಿತೆಯ ಪತಿಯ ಹೆಸರು ವೇದ್. ಅವರಿಗೆ Ve ಎಂದು ಟೈಪಿಸಿದ ನಂತರ d ಅಕ್ಷರ ತನ್ನಿಂತಾನೇ ಬರುತ್ತದೆ. ಒಮ್ಮೆ ನನ್ನನ್ನು ಡಿನ್ನರ್‌ಗೆ ಕರೆದು ಅದಕ್ಕೆಮೊದಲು ಕಂಪ್ಯೂಟರ್ ಚಾಟ್‌ನಲ್ಲೇ `Deciding the menu. will you have Ved biryani?' ಎಂದು ಕೇಳಿ ಗಾಬರಿಪಡಿಸಿದ್ದರು!”

ಫೋನ್ ಮಾಡುವಾಗಿನ ಅಬ ಅವಾಂತರಗಳನ್ನು ಕೆಲವರು ಬರೆದಿದ್ದಾರೆ. “ನಮ್ಮನೆಯಲ್ಲಿ ಫೋನಿನ ಪಕ್ಕ ಯಾವಾಗಲೂ ಒಂದು ಕುರ್ಚಿಯಿರುತ್ತದೆ. ಆದಿನ ಮಕ್ಕಳು ಅದನ್ನೆಲ್ಲೋ ಬೇರೆಡೆ ಇಟ್ಟಿದ್ದರು. ರಾತ್ರಿ ಫೋನ್ ಬಂತು. ಬೆಳಕಿರಲಿಲ್ಲ. ಅಭ್ಯಾಸದಂತೆ ಹಲೋ ಹೇಳಿಕೊಂಡು ಕುಳಿತೆ. ಆಮೇಲೇನಾಯ್ತು ನೀವೇ ಊಹಿಸಿ. ಮನೆಯಲ್ಲಿದ್ದವರೆಲ್ಲ ಎದ್ದುಬಂದಿದ್ದರು ನಾನು ಕಿರುಚಿದ್ದು ಕೇಳಿ! ಫೋನಿನಲ್ಲಿ ಇದ್ದವರೂ ಗಾಬರಿಯಾಗಿ ರಾಂಗ್‌ನಂಬರ್ ಅಂತ ಕೆಳಗಿಟ್ಟರು”- ವೀಣಾ ಅನಂತ ಭಟ್, ಬೆಂಗಳೂರು. ಪ್ರೀತಿಸಿ ಈಗ ಮದುವೆ ನಿಶ್ಚಯದವರೆಗೂ ಆಗಿರುವ ಪ್ರಿಯತಮೆಯೊಂದಿಗೆ ಮಾತಾಡಲೆಂದು ಫೋನಾಯಿಸಿದಾಗ ಆಕೆಯ ಅಪ್ಪ/ಅಮ್ಮ ಫೋನೆತ್ತುತ್ತಾರೆಂಬ ಕಲ್ಪನೆಯೂ ಇಲ್ಲದೆ ಹುಡುಗಿಗೆ ಪ್ರೀತಿಯಿಂದ ದಬಾಯಿಸುವ ಮಾತುಗಳನ್ನಾಡಿದ್ದನ್ನೋ ಪಿಸುಮಾತಿನಲ್ಲಿ ಪ್ರೇಮಸೂಚಿಸಿದ್ದನ್ನೋ ನೆನೆದುಕೊಂಡಿದ್ದಾರೆ ಚನ್ನಪಟ್ಟಣದ ರಾಮು ಬೇವೂರ್. “ನನ್ನ ಶ್ರೀಮತಿಗೆ ಯಾರಾದರೂ ಫೋನ್‌ನಲ್ಲಿ ಹಬ್ಬಹರಿದಿನಗಳ ಕುರಿತು ಮಾತಾಡಿದರೆ ‘ಜೋರಾಯ್ತಲ್ಲ!’ ಎಂದು ಸಂತೋಷದ ಉದ್ಗಾರ ಬರುತ್ತದೆ. ಮೊನ್ನೆ ವೈಕುಂಠ‌ಏಕಾದಶಿ ದಿವಸ ದೂರದ ಸಂಬಂಧಿಕರೊಬ್ಬರು ವೈಕುಂಠವಾಸಿಗಳಾದರು ಎಂದು ಮಿತ್ರರು ಫೋನ್‌ನಲ್ಲಿ ಹೇಳುತ್ತಿದ್ದಂತೆಯೇ, ಇವಳು ‘ಹೌದೆ? ಜೋರಾಯ್ತಲ್ಲ!’ ಎನ್ನಬೇಕೇ!” ಎಂದು ಬರೆದಿದ್ದಾರೆ ಬೆಳಗಾವಿಯ, ಸದ್ಯ ಅಮೆರಿಕದ ಒಹಯೋದಲ್ಲಿರುವ, ಶ್ರೀನಿವಾಸ ಕಟ್ಟಿ.

ವೈಕುಂಠ‌ಏಕಾದಶಿಯಂದು ಮಂದಿರದಲ್ಲಿ ವೈಕುಂಠ ದ್ವಾರದರ್ಶನ ಇದೆಯಂತ ಆಟೋರಿಕ್ಷಾ ಮೇಲೆ ಲೌಡ್‌ಸ್ಪೀಕರ್ ಕಟ್ಟಿ ನಗರದಲ್ಲೆಲ್ಲ ಎನೌನ್ಸ್ ಮಾಡಲು ಒಬ್ಬ ಹುಡುಗನನ್ನು ನೇಮಿಸಿದರೆ ಅವನು ರಾಯರಮಠದಲ್ಲಿ ಆರಾಧನೆ ವೇಳೆ ಕೆಲ್ಸ ಮಾಡಿದ ತನ್ನ ಅನುಭವದಿಂದ ‘ನಾಳೆ ವೈಕುಂಠ ಸಮಾರಾಧನೆ ಎಲ್ಲರೂ ಬನ್ನಿ...’ ಎಂದು ಉದ್ಘೋಷಿಸಿದ್ದನ್ನು ನೆನೆಸಿಕೊಂಡಿದ್ದಾರೆ ಬೆಂಗಳೂರಿನ ವೆಂಕಟೇಶಮೂರ್ತಿ ಗಂಜೂರು. ತೀರ್ಥಹಳ್ಳಿಯ ತಮ್ಮಮನೆಯಲ್ಲಿ ಅತ್ತೆ ತೀರಿಹೋದ ಮಾರನೆದಿನ ಬೆಳಿಗ್ಗೆ ಕಸಗುಡಿಸುವಾಗ, ಅವರು ಇನ್ನೇನು ಪ್ರಾತರ್ವಿಧಿಗಳಿಗಾಗಿ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಾರಂತ ತಾನು ಪಕ್ಕಕ್ಕೆ ಸರಿದು ನಿಂತುಕೊಂಡ, ಕೆಲ ದಿನಗಳಾದ ಮೇಲೂ ಊಟಕ್ಕೆ ಅವರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಅವರಿಗೂ ತಟ್ಟೆ ಇಡುತ್ತಿದ್ದ ಭಾವುಕ ಕ್ಷಣಗಳ ನೆನಪು ಬೆಂಗಳೂರಿನ ಮಾಲತಿ ಶೆಣೈ ಅವರಿಗೆ. “ನಾನು ಕಾಲೇಜಿಗೆ ಹೋಗುವಾಗಲೂ ‘ಅಮ್ಮ ಶಾಲೆಗೆ ಹೋಗಿಬರ್ತೇನೆ’ ಎಂದೇ ಹೇಳುತ್ತಿದ್ದೆ. ಒಮ್ಮೆ ಅಮ್ಮ ಮನೆಯಲ್ಲಿರಲಿಲ್ಲ, ನಾನೇ ಬಾಗಿಲಿಗೆ ಬೀಗವನ್ನೂ ಹಾಕಿ ಹೊರಡುವಾಗ ‘ಅಮ್ಮ ಶಾಲೆಗೆ ಹೋಗಿಬರ್ತೇನೆ’ ಎಂದಿದ್ದೆ, ಉತ್ತರ ಬಾರದೆ ಪೆಚ್ಚಾಗಿದ್ದೆ” - ಉಡುಪಿಯ ನೀರಜಾ ಹೊಳ್ಳ ನಿವೇದನೆ.

ಜಗವೇ ನಾಟಕರಂಗ ಎಂದುಕೊಂಡರೆ ಅಲ್ಲೂ ಆಭಾಸಗಳಾಗುವುದಿದೆ. ನಾಟಕದ ಡೈಲಾಗ್ಸ್ ಅಭ್ಯಾಸ ಮಾಡಿಮಾಡಿ ಸ್ವಂತ ಹೆಂಡತಿಯನ್ನೇ ನಾಟಕದಲ್ಲಿನ ಹೆಂಡತಿಯ ಪಾತ್ರದ ಹೆಸರಿನಿಂದ ಕರೆದು ಪೇಚಿಗೆ ಸಿಲುಕಿದ್ದ, ಪೌರಾಣಿಕ ನಾಟಕದ ಗುಂಗಿನಲ್ಲಿ ಭಲೇಭಲೇ, ಅಗ್ರಜನೇ, ದೇವಾ, ಪರಮಾತ್ಮಾ ಎಂದು ಗುನುಗುತ್ತಿದ್ದ ಮಿತ್ರನ ಬಗ್ಗೆ ಬರೆದಿದ್ದಾರೆ ಚನ್ನಪಟ್ಟಣದ ಆನಂದ ಆಣಿಗೆರೆ. “ದ್ರೌಪದೀಪರಿಣಯ ನಾಟಕದಲ್ಲಿ ದ್ರೌಪದಿ ಪಾತ್ರ ಮಾಡಿದವ ನನ್ನೊಬ್ಬ ಸಹಪಾಠಿ. ಯಾವ ಕ್ಷತ್ರಿಯನನ್ನೂ ಒಲ್ಲದೆ ದ್ರೌಪದಿ ನಾಚಿ ನಿಲ್ಲುವ ಸಂದರ್ಭದಲ್ಲಿ ಅವನ ಅಬ ಕೈಕೊಟ್ಟೇಬಿಟ್ಟಿತು. ದ್ರೌಪದಿ ಉಟ್ಟಿದ್ದ ಪಟ್ಟೆಸೀರೆಯನ್ನು ವೇಸ್ಟಿ ಮೇಲೆತ್ತಿ ಕಟ್ಟಿದಂತೆ ಕಟ್ಟಿ ರಾಜಸಭೆಯಲ್ಲಿ ನಾಚುತ್ತಾ ನಿಂತಳು! ಆಗ ನಮ್ಮದು ಮುಗಿಲುಮುಟ್ಟುವ ಕರತಾಡನ! ವುಲ್ಫ್ ವಿಶಲ್! ದ್ರೌಪದಿ ಹೌಹಾರಿ ನೇಪಥ್ಯಕ್ಕೆ ಸರಿದುಬಿಟ್ಟಳು. ಅಂದಿನ ದ್ರೌಪದೀಪರಿಣಯ ನಮಗೆ ಕಾಮಿಡಿ ಆಯಿತು” ಎಂದು ನೆನಪಿಸಿಕೊಂಡಿದ್ದಾರೆ ಬೆಂಗಳೂರಿನ ಎಸ್.ಎಂ.ಪೆಜತ್ತಾಯ.

ಕಳೆದ ವಾರದ ಲೇಖನದಲ್ಲಿ ಇಸವಿ ಬದಲಾಗುವಾಗಿನ ಅಬ ಕುರಿತು ಓದಿದ ಮೇಲೂ ಅಪಾರ್ಟ್‌ಮೆಂಟ್‌ನ ಬಾಡಿಗೆ ಕೊಡಲು ಚೆಕ್‌ನಲ್ಲಿ 2010 ಎಂದೇ ಬರೆದು ಚೆಕ್ ಪಡೆದುಕೊಳ್ಳುವವರು ನೆನಪಿಸಬೇಕಾಗಿ ಬಂದದ್ದನ್ನು ಪ್ರಾಮಾಣಿಕವಾಗಿ ತಿಳಿಸಿದ್ದಾರೆ ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್. ಲೇಖನದ ಪರಿಣಾಮವೋ ಎಂಬಂತೆ ಈಸಲ ಜನವರಿ ಮೊದಲವಾರದಲ್ಲಿ ಬ್ಯಾಂಕಿಗೆ ಹೋದಾಗ ಚೆಕ್ ಮೇಲೆ 2011 ಎಂದು ಪ್ರಜ್ಞಾಪೂರ್ವಕವಾಗಿ ಬರೆದಿದ್ದೇನೆಂದಿದ್ದಾರೆ ಹೈದರಾಬಾದ್‌ನಿಂದ ಅಚ್ಯುತಮೂರ್ತಿ. ನಿವೃತ್ತ ಬ್ಯಾಂಕ್ ಉದ್ಯೋಗಿ ಬೆಂಗಳೂರಿನ ಡಿ.ಬಿ. ಪ್ರಾಣೇಶ ರಾವ್ ಹೇಳುತ್ತಾರೆ- “ಬ್ಯಾಂಕುಗಳ ಲೆಕ್ಕಪತ್ರಗಳಲ್ಲಿ ಅಂಕೆಗಳನ್ನು ಚಿತ್ತುಮಾಡುವುದು, ತಿದ್ದುವುದು, ಹೊಡೆದುಹಾಕುವುದು ಮಾಡಬಾರದು. ಅಕಸ್ಮಾತ್ ಮಾಡಿದರೂ ಅಲ್ಲೇ ಪಕ್ಕ ಇನಿಶಿಯಲ್ಸ್ ಹಾಕಬೇಕು. ಕೆಲವೊಮ್ಮೆ ಮೇಲಧಿಕಾರಿಯಿಂದ ಹಾಕಿಸಬೇಕು. ಬ್ಯಾಂಕಿಗರಾಗಿ ನಮಗೆ ಅದು ಎಷ್ಟು ಅಬ ಎಂದರೆ ಮಿತ್ರರಿಗೆ ಸಂಬಂಧಿಕರಿಗೆ ಖಾಸಗಿ ಪತ್ರ ಬರೆವಾಗ ಚಿತ್ತಾದರೂ ಅಲ್ಲೇಪಕ್ಕ ಇನಿಶಿಯಲ್ಸ್ ಹಾಕ್ತೇವೆ!” ಇಪ್ಪತ್ತೈದು ವರ್ಷಗಳ ಹಿಂದೆ ತಮ್ಮ ಬ್ಯಾಂಕಿನ ಸೈಂಟ್‌ಜಾನ್ಸ್ ಮೆಡಿಕಲ್ ಕಾಲೇಜ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಾಟರ್‌ಟ್ಯಾಂಕ್ ಹತ್ತಿರದ ಗೇಟಿನ ಶಾರ್ಟ್‌ಕಟ್ ಮೂಲಕ ಹೋಗುತ್ತಿದ್ದುದನ್ನೂ, ಒಮ್ಮೆ ಆ ಗೇಟ್ ರಿಪೇರಿಗೆಂದು ದೀರ್ಘಾವಧಿ ಕ್ಲೋಸ್ ಮಾಡಿದ್ದಾಗ ಪಕ್ಕದಲ್ಲೇ ಗೋಡೆ ಮೇಲಿಂದ ಜಂಪ್ ಮಾಡಿ ಹೋಗುತ್ತಿದ್ದುದನ್ನೂ, ಕಾಲಾನುಕ್ರಮದಲ್ಲಿ ಗೇಟ್ ರಿಪೇರಿ ಆಗಿ ತೆರೆದುಕೊಂಡಿದ್ದರೂ ಎಲ್ಲರೆದುರೇ ತಾನು ಗೋಡೆ ಜಂಪ್ ಮಾಡಿ ಮುಜುಗರಕ್ಕೊಳಗಾದದ್ದನ್ನೂ ನೆನೆಸಿಕೊಂಡಿದ್ದಾರೆ ಬೆಂಗಳೂರಿನ ಲಕ್ಷ್ಮೀನಾರಾಯಣ ಹೊಳ್ಳ.

ಟೂವ್ಹೀಲರ್ ಮೇಲೆ ಓಡಾಡಿಯೇ ಅಭ್ಯಾಸವಾಗಿ ಈಗ ಕಾಲ್ನಡಿಗೆಯಲ್ಲಿ ಹೋಗುವಾಗಲೂ ಎಡಕ್ಕೆ ಅಥವಾ ಬಲಕ್ಕೆ ಟರ್ನ್ ತೆಗೆದುಕೊಳ್ಳುವುದಿದ್ದರೆ ಬಲಗೈ ತನ್ನಿಂತಾನೇ ಬೀಸತೊಡಗಿ ಸಿಗ್ನಲ್ ಮಾಡುತ್ತದೆಯಂತೆ ಬೆಂಗಳೂರಿನ ಆಯುರ್ವೇದ ವೈದ್ಯ ವಾಸುಕೀಶಯನ ಅವರಿಗೆ. ಧಾರವಾಡದ ಗೌರಿ ಹಿರೇಮಠ ಕಾಲ್ನಡಿಗೆಯಲ್ಲಿ ಹೋಗುವಾಗ ಲೆಫ್ಟ್ ಅಥವಾ ರೈಟ್ ಟರ್ನ್ ಮಾಡುವ ಮೊದಲು ಸೈಡ್ ಮಿರರ್ ನೋಡುವ ವಿಫಲ ಯತ್ನ ಮಾಡುತ್ತಾರಂತೆ! ಗಿಯರ್ ಇರುವ ಕಾರು (ಅಮೆರಿಕದಲ್ಲಿ ‘ಸ್ಟಿಕ್‌ಶಿಫ್ಟ್’ ಅಂತಾರೆ) ಚಲಾಯಿಸಿಯೇ ಅಭ್ಯಾಸವಾಗಿ ಆಮೇಲೆ ಆಟೊಟ್ರಾನ್ಸ್‌ಮಿಷನ್ ಕಾರನ್ನು ಡ್ರೈವ್ ಮಾಡುವಾಗ ಗಿಯರ್‌ಚೇಂಜ್ ಮಾಡಲಿಕ್ಕಂತ ಹೋಗಿ ಕಾರು ನ್ಯೂಟ್ರಲ್‌ಗೆ ಬಂದು ನಡುರಸ್ತೆಯಲ್ಲಿ ನಿಂತು ಪೇಚಾಟವಾಗಿದೆ ಟೆಕ್ಸಾಸ್‌ನ ಮೀನಾ ಭಾರದ್ವಾಜ್ ಅವರಿಗೆ. ಮೈಸೂರಿನ ಸುಮಾ ಕೃಷ್ಣ ಅವರಿಗೆ ಇನ್ನೊಂಥರದ ಪಜೀತಿ ಎದುರಾಗಿತ್ತಂತೆ. ಅವರು ಹೊಸ ಕಾರು ಡ್ರೈವ್ ಮಾಡಿಕೊಂಡು ಶಾಪಿಂಗ್‌ಗೆ ಹೋಗಿದ್ದಾರೆ. ಶಾಪಿಂಗ್ ಮುಗಿಸಿ ಹೊರಬಂದಾಗ ಅದಾಗಲೇ ಮಾರಿದ್ದ ಹಳೇಕಾರನ್ನು ಕೊಂಡವರೂ ಅಲ್ಲೆಲ್ಲೋ ಆ ಕಾರು ಪಾರ್ಕ್ ಮಾಡಿದ್ದಾರೆ. ಇವರು ಹೊಸ ಕಾರಿನ ಬೀಗದಕೈಯಿಂದ ಹಳೇ ಕಾರಿನ ಬಾಗಿಲು ತೆರೆಯಲು ಒದ್ದಾಟ ನಡೆಸಿದ್ದಾರೆ. ಸುತ್ತಲಿದ್ದವರು ಇವರನ್ನು ಕಾರ್ ಕಳ್ಳಿ ಎಂದುಕೊಳ್ಳುವ ಪರಿಸ್ಥಿತಿ ಬಂದಿದೆ. ಆಮೇಲಷ್ಟೇ ಅವರಿಗೆ ಇದು ಅಬ ಅವಾಂತರ ಅಂತ ಗೊತ್ತಾಗಿದೆ. ಇನ್ನು, ಆಫೀಸಿನಲ್ಲಿ ಸೆಕ್ಯುರಿಟಿಗೋಸ್ಕರ ಆಕ್ಸೆಸ್‌ಕಾರ್ಡ್ ಮೂಲಕವೇ ಬಾಗಿಲು ತೆರೆಯುವ ವ್ಯವಸ್ಥೆಗೆ ಒಗ್ಗಿಕೊಂಡು ಈಗ ಮನೆಯಲ್ಲಿ ಅಥವಾ ಅಂಗಡಿಯಲ್ಲಿ ಬಾಗಿಲು ಮುಚ್ಚಿದ್ದರೆ ತೆರೆಯಲು ಕೊರಳಲ್ಲಿ ನೇತಾಡುವ ಆಕ್ಸೆಸ್‌ಕಾರ್ಡ್‌ನಿಂದ ಟ್ರೈ ಮಾಡಿದ ಸಂದರ್ಭಗಳಿವೆ ಎನ್ನುತ್ತಾರೆ ಮೈಸೂರಿನಿಂದ ಸುಧೀಂದ್ರ ಮುಕ್ಕೂರು. ಡಿವಿಡಿಯಲ್ಲಿ ಸಿನೆಮಾ ನೋಡುವಾಗ ಹಾಡು ಬಂದಲ್ಲೆಲ್ಲ ಫಾಸ್ಟ್‌ಫಾರ್ವರ್ಡ್ ಮಾಡಿ ಅಭ್ಯಾಸವಾಗಿ ಸಿನೆಮಾಥಿಯೇಟರ್‌ನಲ್ಲೂ ಹಾಡುಬಂದಾಗ “ಲೇ ಮುಂದೆ ಓಡ್ಸಲೇ” ಎಂದು ಕಿರುಚಿದ್ದಿದೆ ಎನ್ನುತ್ತಾರೆ ಗಂಗಾವತಿಯ ಲಿಂಗರಾಜ ಜನಾದ್ರಿ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಂತರ ಈಗ ಲಿನಕ್ಸ್ ಬಳಸುವಾಗ ಹಳೇಚಾಳಿಯಿಂದ ಮೌಸ್ ರೈಟ್‌ಕ್ಲಿಕ್ ಮಾಡಿ ಸ್ಕ್ರೀನ್ ರಿಫ್ರೆಶ್ ಮಾಡಲು ನೊಡುತ್ತೇನೆನ್ನುತ್ತಾರೆ ಹುಬ್ಬಳ್ಳಿಯ ಅರವಿಂದ ಚಕ್ರವರ್ತಿ. ಇದೆಲ್ಲ ಯಾಂತ್ರೀಕೃತ ಬದುಕಿನ ಅಬ ಎನ್ನೋಣವೇ?

ಉಡುಪಿಯ ಸುಧೀರ್ ಶೆಣೈ ದೇವಸ್ಥಾನದಲ್ಲಿ ತೀರ್ಥ ತಗೊಂಡು ತಲೆಮೇಲೆ ಕೈ ನೇವರಿಸುವ ಅಭ್ಯಾಸವಾಗಿ ಪಂಚಾಮೃತ ತಗೊಂಡಮೇಲೂ ಹಾಗೆಮಾಡಿದ್ದಿದೆಯಂತೆ. ಆಫ್ರಿಕಾದ ಟಾಂಜಾನಿಯಾದಲ್ಲಿರುವ ಗಣೇಶ ಹತ್ವಾರ್ ಮದುವೆಗೆ ಮುನ್ನ ಆಗೊಮ್ಮೆ ಈಗೊಮ್ಮೆ ಲೈನ್ ಹೊಡೆವ ಅಭ್ಯಾಸವಿದ್ದವರು ಮದುವೆ ಆದಮೇಲೆ ಹೆಂಡತಿಯ ಜತೆ ವಾಕ್ ಹೋಗುವಾಗ ಎದುರಿಗೆ ಬಂದ ತರುಣಿಯನ್ನು ಗಮನಿಸಿ ‘ವಾಹ್ ಎಂಥ ಫಿಗರ್!’ ಎಂದದ್ದಿದೆಯಂತೆ. ಒಟ್ಟಿನಲ್ಲಿ ಅಬ್ಬಾ ಎನ್ನುವಷ್ಟಿದೆ ಅಬ ಅವಾಂತರಗಳ ಹರವು. ಸ್ಥಳಾಭಾವದಿಂದ ಕೆಲವು ಪತ್ರಗಳನ್ನು ಕೈಬಿಡಬೇಕಾಗಿ ಬಂದಿದೆ. ಆದರೂ ಇದೊಂದು ಲೇಟೆಸ್ಟ್ ಅಬ ಆಭಾಸವನ್ನು ಉಲ್ಲೇಖಿಸಲೇಬೇಕು. ಬೆಂಗಳೂರಿನ ಉಷಾ ಉಮೇಶ್ ಬರೆದುಕಳಿಸಿದ್ದಾರೆ. ಮಗಳನ್ನು ಕೆಲವೊಮ್ಮೆ ಪ್ರೀತಿಯಿಂದ ‘ರಾಜಾ’ ಎಂದು ಕರೆಯುವ ಅವರ ಅಭ್ಯಾಸ ಈಗ ೨ಜಿ ಸ್ಪೆಕ್ಟ್ರಂ ಹಗರಣದ ನಂತರ ತೀವ್ರ ಮುಜುಗರದ ವಿಚಾರವಾಗಿದೆಯಂತೆ, ಅಮ್ಮ-ಮಗಳು ಇಬ್ಬರಿಗೂ!

ಅಭ್ಯಾಸಬಲ ಪ್ರದರ್ಶನ ಇಲ್ಲಿಗೆ ಮುಗಿದುದು. ಭಾಗವಹಿಸಿದವರಿಗೆಲ್ಲ ಧನ್ಯವಾದಗಳು.

========

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Podbean App

Play this podcast on Podbean App