ಪದ-ಶ್ರಾವ್ಯ

ಈಗ ಆಡಿಯೋ ಟಚ್!

22
Jan 2011
Eat but dont eat
Posted in DefaultTag by sjoshi at 1:18 pm

ದಿನಾಂಕ 23 ಜನವರಿ 2011ರ ಸಂಚಿಕೆ...

ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

ಮತ್ತಿನ್ನೇನು ಎಂದು ನೀವು ಕೇಳಬಹುದು. ತಿನ್ನುವುದೆಂದರೆ ತಿನ್ನುವುದಷ್ಟೇ ಅಲ್ಲದೆ ಬೇರೇನು ಅರ್ಥ ಬರುತ್ತದೆ ಎಂದು ಪ್ರಶ್ನಿಸಬಹುದು. ಆದರೆ ನಮ್ಮೆಲ್ಲರ ಮಾತಿನಲ್ಲಾಗಲೀ ಬರವಣಿಗೆಯಲ್ಲಾಗಲೀ ತಿನ್ನು ಮತ್ತು ಅದರ ಸಮಸಂಬಂಧಿ ಕ್ರಿಯಾಧಾತುಗಳ ಬಗೆಬಗೆಯ ಬಳಕೆಯನ್ನು ಒಮ್ಮೆ ಗಮನಿಸಿದರೆ ಗೊತ್ತಾಗುತ್ತದೆ. ತಿನ್ನುವ ಪ್ರಕ್ರಿಯೆ ಅಥವಾ ತಿನ್ನದೆಯೇ ತಿನ್ನುವ ಪ್ರಕ್ರಿಯೆಯಿಂದ ಭಾಷೆಗೊಂದು ಸೊಗಸು ಬಂದಿರುವುದು ನಮಗೆ ಕಂಡುಬರುತ್ತದೆ. ಒಂದು ಸರಳ ಉದಾಹರಣೆ ಕೊಡುತ್ತೇನೆ. ಮುದ್ದಾದ ಮಗುವನ್ನು ಮುದ್ದುಮಾಡುವಾಗ ನಾವು ಕೆಲವೊಮ್ಮೆ ಪ್ರೀತಿಯಿಂದ ತಿಂದುಬಿಡೋಣ ಅನ್ನಿಸ್ತಿದೆ ಎನ್ನುವುದಿದೆ. ಹಾಗಂತ ಮಕ್ಕಳನ್ನು ತಿಂದುಬಿಡಲಿಕ್ಕೆ ನಾವೇನೂ ಮಾರ್ಜಾಲ ಜಾತಿ ಅಲ್ಲ. ಆಶ್ಚರ್ಯವೆಂದರೆ ಮಕ್ಕಳು ತುಂಬಾ ತಂಟೆಕೋರರಾಗಿದ್ದರೆ ಅವರ ಮೇಲೆ ಸಿಟ್ಟಿನಿಂದ ದುರುಗುಟ್ಟುವಾಗಲೂ ತಿಂದುಬಿಡುತ್ತೇವೇನೋ ಎಂಬಂತೆಯೇ ಇರುತ್ತದೆ ನಮ್ಮ ಮುಖಭಾವ. ಪ್ರೀತಿ ಮತ್ತು ಸಿಟ್ಟು ತದ್ವಿರುದ್ಧ ಭಾವನೆಗಳು. ತಿನ್ನದೆಯೇ ತಿನ್ನುವ ಪ್ರಕ್ರಿಯೆಯ ಮೂಲಕ ಅವುಗಳನ್ನು ಪ್ರಕಟಪಡಿಸುವುದು ನಮಗೆ ಸಾಧ್ಯವಾಗಿರುತ್ತದೆ.

ಅವನು ತುಂಬಾ ತಲೆ ತಿಂತಾನೆ ಎನ್ನುತ್ತೇವೆ. ನಿಜವಾಗಿಯೂ ತಲೆಯನ್ನು ತಿನ್ನುವುದು ಸಾಧ್ಯವಿಲ್ಲವೆಂದು ಗೊತ್ತು. ಅದರಲ್ಲೂ ಸಸ್ಯಾಹಾರಿಯಾಗಿದ್ದರಂತೂ ಬಿಲ್‌ಕುಲ್ ಸಾಧ್ಯವಿಲ್ಲ. ಅಲ್ಲದೆ ತುಂಬಾ ತಲೆ ತಿನ್ನಲು ನಾವೇನು ರಾವಣನಂತೆ ಹತ್ತು ತಲೆಗಳನ್ನಿಟ್ಟುಕೊಂಡಿರುವುದಿಲ್ಲ. ಪ್ರಾಣ ತಿಂತಾನೆ ಅಥವಾ ಜೀವ ತಿಂತಾನೆ ಎಂದೂ ಹೇಳುತ್ತೇವೆ. ಪ್ರಾಣ ಅಥವಾ ಜೀವ ಎನ್ನುವುದು ಭೌತಿಕ ವಸ್ತು ಅಲ್ಲ. ಹಾಗಿರುವಾಗ ಅದನ್ನು ತಿನ್ನುವುದು ಸಾಧ್ಯವೇ ಇಲ್ಲ. ಶಾಲೆಯಲ್ಲಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದದ್ದನ್ನು ನೆನಪಿಸಿಕೊಳ್ಳುತ್ತೇವೆ. ಮಗ್ಗಿಯನ್ನೋ ಪದ್ಯವನ್ನೋ ಬಾಯಿಪಾಠ ಒಪ್ಪಿಸುವಾಗ ನಡುವೆ ಅಲ್ಲಲ್ಲಿ ಬಿಟ್ಟುಕೊಂಡು ಹೇಳಿದರೆ ಅದನ್ನ್ಯಾಕೆ ತಿಂದುಬಿಟ್ಟೆ ಎನ್ನುತ್ತಾರೆ ಮೇಷ್ಟ್ರು. ಹೊಟ್ಟೆಗೇನು ತಿನ್ನುತ್ತೀ ಅನ್ನವಾ ಸೆಗಣಿಯಾ ಎಂದು ಮೂದಲಿಸುತ್ತಾರೆ. ಏಟು ಬೀಳುವುದು ಚರ್ಮಕ್ಕೆ. ಆದರೂ ಪೆಟ್ಟು ತಿನ್ನುವುದು ಅಂತಲೇ ಹೇಳುತ್ತೇವೆ. ಏಟಿನ ರುಚಿ ಹೇಗಿತ್ತು ಎಂಬ ವಿವರಣೆ ಬೇರೆ.

ಕಿತ್ತು ತಿನ್ನುವ ಬಡತನ ಎಂಬ ಮಾತು. ಬಡತನ ಏನನ್ನು ಕೀಳುತ್ತದೆ ಅಥವಾ ಏನನ್ನು ತಿನ್ನುತ್ತದೋ ಗೊತ್ತಿಲ್ಲ. ಅದೇವೇಳೆ ಶ್ರೀಮಂತನಾಗಿ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು. ಕುಡಿಕೆಯಲ್ಲಿನ ಹೊನ್ನನ್ನು ಅದೇ ರೂಪದಲ್ಲಿ ಇಷ್ಟರವರೆಗೆ ಯಾರಾದರೂ ತಿಂದವರಿದ್ದಾರೆಯೇ ತಿಳಿಯದು. ಮೊನ್ನೆ ಎಲ್ಲೋ ಓದಿದ ನೆನಪು. ಚಿನ್ನದಸರ ಕದ್ದ ಒಬ್ಬ ಕಳ್ಳ ಸಿಕ್ಕಿಬೀಳುತ್ತೇನೆಂದು ಗೊತ್ತಾದಾಗ ಆ ಸರವನ್ನು ತಿಂದುಬಿಟ್ಟನಂತೆ. ಅನ್ನ ತಿನ್ನುವ ಬದಲು ಚಿನ್ನ ತಿಂದವನಾದನಂತೆ. ತಾನು ಚಿನ್ನ ತಿಂದು ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುವ ಹುನ್ನಾರ ಅವನದು. ಚಳ್ಳೇಹಣ್ಣು ಎಂದರೇನು ಅದನ್ನು ತಿನ್ನಲಿಕ್ಕಾಗುತ್ತದೆಯೇ ರುಚಿ ಹೇಗಿರುತ್ತದೆ ಎಂದು ಬಲ್ಲವರಿಲ್ಲ. ಪೊಲೀಸರು ಮಾತ್ರ ಅದನ್ನು ತಿನ್ನುತ್ತಾರೆ. ಅದೂ ಕಳ್ಳನ ಕೈಯಿಂದ ಮಾತ್ರ. ಹಾಗೆಂದು ಸೃಷ್ಟಿಕರ್ತನೇ ನಿಯಮ ಮಾಡಿಟ್ಟಿದ್ದಾನೋ ಗೊತ್ತಿಲ್ಲ. ಅಂದಹಾಗೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಯಿಂದಲೇ ನಿಂತು ತಿನ್ನುವ ಪದ್ಧತಿ ಅಂದರೆ ಬೆಂಗಳೂರಿನ ದರ್ಶಿನಿಗಳು ಶುರುವಾದದ್ದು. ಬಫೆ ಊಟದ ಸಂಗತಿಯೂ ಸೇಮ್. ಇಂಗು ತಿಂದ ಮಂಗನ ಹೋಲಿಕೆ ಮುಖಭಂಗ ಮಾಡಿಕೊಂಡವರಿಗೆ. ಮಂಗ ನಿಜವಾಗಿಯೂ ಇಂಗು ತಿಂದ ಪುರಾವೆ ಇದೆಯೇ ಎಂದು ಆ ಹನುಮಂತನಿಗೂ ಗೊತ್ತಿರಲಿಕ್ಕಿಲ್ಲ. ಕಡಲೆ ತಿಂದು ಕೈತೊಳೆದುಕೊಂಡಂತೆ ಅಂತ ಇನ್ನೊಂದು ಗಾದೆ. ವಹಿಸಿಕೊಂಡ ಕೆಲಸವನ್ನು ಚೊಕ್ಕವಾಗಿ ಮಾಡಿಮುಗಿಸುವುದು ಎಂದು ಅರ್ಥ. ನಿಜವಾಗಿ ಕಡಲೆ ತಿನ್ನುವುದೇನಿದ್ದರೂ ಕೆಲಸವೆಲ್ಲ ಮುಗಿದಮೇಲೆಯೇ. ತಾತ್ಪರ್ಯವೇನೆಂದರೆ ಮೇಲಿನೆಲ್ಲ ಉದಾಹರಣೆಗಳಲ್ಲೂ ಅಸಲಿಗೆ ಏನನ್ನೂ ತಿನ್ನದೆಯೇ ಬಹಳಷ್ಟನ್ನು ತಿಂದದ್ದಿರುತ್ತದೆ.

ತಿನ್ನುವಷ್ಟೇ ಸ್ವಾರಸ್ಯ ನುಂಗುವ ಕ್ರಿಯೆಯದೂ. ಜೀವ ತಿನ್ನುವ ರೋಗ ವಾಸಿಯಾಗಲೆಂದು ಮಾತ್ರೆ ನುಂಗುತ್ತೇವೆ. ಕೆಲವರಿಗೆ ಬೆಳಿಗ್ಗೆ ಮಧ್ಯಾಹ್ನ ಸಂಜೆ ಹೀಗೆ ಮೂರುಹೊತ್ತೂ ಮಾತ್ರೆಗಳದೇ ಫಳ್ಹಾರ. ನೋವು ನುಂಗಿ ನಲಿವಿನಿಂದಿರಲು ಪ್ರಯತ್ನಿಸುತ್ತೇವೆ. ಅಳು ನುಂಗಿ ನಗುಮುಖ ಪ್ರದರ್ಶಿಸುತ್ತೇವೆ. ಗುಟ್ಟನ್ನು ನುಂಗಿ ಹೊಟ್ಟೇಲಿಟ್ಟುಕೊಳ್ಳುತ್ತೇವೆ. ಭ್ರಷ್ಟ ರಾಜಕಾರಣಿಗಳು ಕಣ್ಣೆದುರೇ ಕೋಟಿಗಟ್ಟಲೆ ನುಂಗುತ್ತಿರಬೇಕಾದರೆ ಏನೂ ಮಾಡದವರಾಗುತ್ತೇವೆ. ಜಾಗತೀಕರಣದ ಹೆಸರಿನಲ್ಲಿ ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳು ಸಣ್ಣ ಉದ್ಯಮಗಳನ್ನು ನುಂಗುವುದನ್ನು ನೋಡುತ್ತೇವೆ. ತಿಮಿಂಗಿಲಗಳು ಸಣ್ಣ ಮೀನುಗಳನ್ನು ನುಂಗಿದಂತೆ ಎನ್ನುತ್ತೇವೆ. ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳು ಬಡರೈತರ ಜಮೀನನ್ನು ಆಪೋಷಣ ತೆಗೆದುಕೊಳ್ಳುವುದನ್ನು ದಿನಾಲೂ ನೋಡುತ್ತೇವೆ. ಒಳಗೊಳಗೇ ಕುದಿಯಬೇಕಾಗಿ ಬಂದರೂ ಸಿಟ್ಟನ್ನೂ ನುಂಗಿಕೊಳ್ಳುತ್ತೇವೆ. ಪ್ರಕೃತಿವಿಕೋಪಗಳು ಆಸ್ತಿಪಾಸ್ತಿಯನ್ನು ನುಂಗಿ ನೊಣೆದಾಗ ಹತಾಶರಾಗುತ್ತೇವೆ. ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತಾ ಎಂದುಕೊಂಡು ಶಿಶುನಾಳ ಶರೀಫರಾಗುತ್ತೇವೆ.

swallowing.jpg

ಕೋಡಗನ ಕೋಳಿ ನುಂಗಿತ್ತಾ ತತ್ತ್ವಪದದಲ್ಲಿ ಶರೀಫಜ್ಜ ನಿಜವಾಗಿಯೂ ಅದೇನೋ ಪಾರಮಾರ್ಥಿಕವಾದುದನ್ನೇ ಹೇಳಿದ್ದಾನೆ. ನಮಗದು ಸುಲಭದಲ್ಲಿ ಅರ್ಥವಾಗುವುದಿಲ್ಲ ಅಷ್ಟೇ. ಸಾಮಾನ್ಯವಾಗಿ ಯಾವುದು ನುಂಗುತ್ತದೋ ಅದು ಹೊರಗೆ ಮತ್ತು ಯಾವುದು ನುಂಗಲ್ಪಡುತ್ತದೋ ಅದು ಒಳಗೆ. ಕೇರೆಹಾವು ಕಪ್ಪೆಯನ್ನು ನುಂಗಿದರೂ ಹಾಗೆಯೇ. ಕಾಳಿಂಗ ಸರ್ಪವು ಕೇರೆಹಾವನ್ನು ನುಂಗಿದರೂ ಹಾಗೆಯೇ. ಇದು ಸಾಮಾನ್ಯ ಜ್ಞಾನ. ಆದರೆ ಶರೀಫಜ್ಜನ ಪದದಲ್ಲಿ ಗೋಡೆ ಸುಣ್ಣವ ನುಂಗಿ ಎಂಬ ಸಾಲನ್ನೇ ತೆಗೆದುಕೊಳ್ಳಿ. ಗೋಡೆಗೆ ಸುಣ್ಣ ಹಚ್ಚಿದಾಗ ಸುಣ್ಣ ಹೊರಗೆ ಮತ್ತು ಗೋಡೆ ಒಳಗೆ. ಅಂದರೆ ಸುಣ್ಣ ಗೋಡೆಯನ್ನು ನುಂಗಿದಂತೆ. ಆದರೆ ಸುಣ್ಣ ಹಚ್ಚುವಾಗ ಗೋಡೆ ಅದನ್ನು ಹೀರಿಕೊಂಡಿರುತ್ತದೆ. ಆ ಲೆಕ್ಕದಲ್ಲಿ ಗೋಡೆ ಹೊರಗೆ ಸುಣ್ಣ ಒಳಗೆ. ಇದೊಂಥರ ಕನಕದಾಸರು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂದು ಹಾಡಿದಂತೆಯೇ. ಅರ್ಥೈಸಲು ಜಟಿಲವಾದ ವಿಚಾರ.

ನುಂಗುವುದು ತಿನ್ನುವುದು ಕುಡಿಯುವುದು ಕಬಳಿಸುವುದು ಎಲ್ಲ ಒಂದೇ. ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಎಂಬಂತೆ ಸೇರುವುದು ಎಲ್ಲ ಹೊಟ್ಟೆಗೇ. ಆದರೆ ಕುಡಿಯುವ ವಿಚಾರದಲ್ಲೂ ತಿನ್ನುವುದರಂತೆಯೇ ಗಮ್ಮತ್ತಿದೆ. ಅರೆದು ಕುಡಿಯುವುದು ಎಂದು ನೀವು ಕೇಳಿರಬಹುದು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿನ್ನೆಯಷ್ಟೇ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆನ್ನುತ್ತದೆಯೆಂದರೆ ಬರೆದೂ ಬರೆದು ಅರೆದು ಕುಡಿಯುವುದೇ ವಿದ್ಯಾರ್ಥಿಗಳಿಗೆ ಉತ್ತಮವಂತೆ. ಅದರಿಂದ ಮೆದುಳಿನಲ್ಲಿ ಜ್ಞಾನ ಹೆಚ್ಚು ಪರಿಣಾಮಕಾರಿಯಾಗಿ ಅಚ್ಚೊತ್ತುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರಂತೆ. ಹಾಗಾಗಿಯೇ ಇರಬಹುದು ಗಣಿತ ಪ್ರಮೇಯಗಳನ್ನು ಕೆಮೆಸ್ಟ್ರಿ ಫಾರ್ಮುಲಾಗಳನ್ನು ಅರೆದು ಕುಡಿಯುತ್ತಾರೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಶಿಕ್ಷಣದ ಕನಸು ಕಾಣುವವರು. ಪ್ರೀತಿ ಸೌಂದರ್ಯ ಶೃಂಗಾರ ಇತ್ಯಾದಿಗಳನ್ನು ಬೊಗಸೆಯಲ್ಲಿ ಮೊಗೆಮೊಗೆದು ಕುಡಿಯುತ್ತಾರೆ ಕವಿಹೃದಯ ಇದ್ದವರು. ಹೃದಯ ಕದ್ದವರೂ ಅನ್ನಿ ಬೇಕಿದ್ದರೆ. ಪ್ರೇಮವಂಚಿತರಾದವರು ನಿಜವಾಗಿಯೂ ಕುಡಿಯುವ ಚಟಕ್ಕೆ ಬಲಿಬೀಳಬಹುದು. ಹಾಗೆ ನೋಡಿದರೆ ಆ ಕುಡಿತವೂ ನಿಜ ಅರ್ಥದಲ್ಲಿ ಹೊಟ್ಟೆಗಲ್ಲ ತಲೆಗೇ ಹೋಗುವುದು.

ಇನ್ನು ಹೊಟ್ಟೆಬಾಕರ ತಿನ್ನುವಿಕೆಯ ಬಣ್ಣನೆಯಲ್ಲೂ ಭಾಷೆಯ ಬೆಡಗು ಬಹಳ ಚೆನ್ನಾಗಿರುತ್ತದೆ. ಅಗೋಳಿ ಮಂಜಣ್ಣ ಅಂತೊಬ್ಬ ಐತಿಹಾಸಿಕ ಪುರುಷ ಹಿಂದೆ ತುಳುನಾಡಿನಲ್ಲಿದ್ದನಂತೆ. ಮಹಾಬಲಾಢ್ಯ ಕಟ್ಟುಮಸ್ತಾದ ಆಳು. ಅವನ ಕಥೆಯಲ್ಲಿ ಅವನ ಊಟತಿಂಡಿಯ ವಿವರಗಳು ರೋಚಕ. ಬಜಿಲ್ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾ‌ಅರಾ ಆಪುಂಡ್. ಗೋಂಟು ಥಾರಾಯಿ ಇರ್ವತ್ತೈನ್‌ಲಾ ಬಾಯಿಡೇ ಗಾಣ ಫಾಡುಂಡ್. ಅಗೋಳಿ ಮಂಜಣ್ಣನ ಕಥೆ ಹೇಳುವ ತುಳು ಪಾಡ್ದನದ ಸಾಲುಗಳು ಅವು. ಕಳಸಿಗೆಯಷ್ಟು ಅವಲಕ್ಕಿ ಇದ್ದರೂ ಅಗೋಳಿ ಮಂಜಣ್ಣನಿಗೆ ಅದು ಮುಷ್ಟಿಯಲ್ಲಿ ತುಂಬಿದರೆ ಹೆಚ್ಚು. ಕೊಬ್ಬರಿ ಗಿಟುಕುಗಳನ್ನು ಒಂದಿಪ್ಪತ್ತೈದರಷ್ಟು ಒಟ್ಟಿಗೇ ಬಾಯಿಗೆ ಹಾಕಿ ಅಗಿಯತೊಡಗಿದನೆಂದರೆ ಮಂಜಣ್ಣನ ಬಾಯಿ ಎಣ್ಣೆಯ ಗಾಣವೋ ಎಂದುಕೊಳ್ಳಬೇಕು. ಹಾಗಿರುತ್ತಿತ್ತಂತೆ ದೃಶ್ಯ. ಮಹಾಭಾರತದಲ್ಲಿ ಬಕಾಸುರನಿಗೆ  ಬಂಡಿ ತುಂಬ ಆಹಾರ ತೆಗೆದುಕೊಂಡು ಹೋಗುವ ಭೀಮಸೇನ ತಾನೇ ಅದನ್ನು ತಿಂದು ತೇಗುತ್ತಾನೆ. ಆಮೇಲೆ ಬಕಾಸುರನನ್ನೂ ಕೊಂದು ಮುಗಿಸುತ್ತಾನೆ. ಮಾಯಾಬಝಾರ್ ಸಿನೆಮಾದಲ್ಲಿ ಅದು ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಎಂಬ ಹಾಡಾಗುತ್ತದೆ.

ತಿಂದು ತೇಗುವ ಅಥವಾ ತಿಂದು ಅರಗಿಸಿಕೊಳ್ಳುವ ವಿಚಾರ ಬಂದಾಗ ವಾತಾಪಿಯ ಕಥೆಯೂ ನೆನಪಾಗುತ್ತದೆ. ಇಲ್ವಲ ಮತ್ತು ವಾತಾಪಿ ಹೆಸರಿನ ಇಬ್ಬರು ರಾಕ್ಷಸರಿದ್ದರು. ಅವರು ಅಣ್ಣತಮ್ಮಂದಿರು. ತಮಗೆ ಸಂತಾನಪ್ರಾಪ್ತಿಯಾಗಬೇಕಂತಷ್ಟೇ ಅಲ್ಲ ಇಂದ್ರನಂಥ ಮಗನೇ ಹುಟ್ಟಬೇಕು ಎಂದು ಅವರಿಬ್ಬರಿಗೂ ಬಯಕೆ. ಹಾಗೆಂದು ಅನುಗ್ರಹಿಸುವಂತೆ ಅವರು ಕಂಡಕಂಡ ಬ್ರಾಹ್ಮಣರನ್ನೆಲ್ಲ ಬೇಡುತ್ತಿದ್ದರು. ಇಷ್ಟಾರ್ಥ ಕೈಗೂಡದಾದಾಗ ಅದೇ ಬ್ರಾಹ್ಮಣರನ್ನು ಪೀಡಿಸುತ್ತಿದ್ದರು. ಹೇಗೆಂದರೆ ಇಲ್ವಲನು ವಾತಾಪಿಯನ್ನು ಮೇಕೆಯನ್ನಾಗಿಸಿ ಕೊಂದು ಆ ಮಾಂಸವನ್ನು ಅಡುಗೆಮಾಡಿ ಬ್ರಾಹ್ಮಣರಿಗೆ ಬಡಿಸುವನು. ಬ್ರಾಹ್ಮಣರ ಊಟ ಮುಗಿಯುತ್ತಿದ್ದಂತೆಯೇ ವಾತಾಪಿಯನ್ನು ಹೊರಗೆ ಬರುವಂತೆ ಕರೆಯುವನು. ಬ್ರಾಹ್ಮಣರ ಹೊಟ್ಟೆ ಸೀಳಿ ವಾತಾಪಿ ಹೊರಬರುವನು. ಹೀಗೆ ಅನೇಕ ಮಂದಿ ಬ್ರಾಹ್ಮಣರು ಸತ್ತುಹೋದರು. ಒಮ್ಮೆ ಅಗಸ್ತ್ಯಮಹರ್ಷಿ ಇಲ್ವಲನಲ್ಲಿಗೆ ಬಂದಿದ್ದಾಗ ಇಲ್ವಲ ಅವನಿಗೂ ಹಾಗೆಯೇ ಮಾಡಿದ. ಅಗಸ್ತ್ಯನಿಗೆ ಈ ದುಷ್ಟಸಹೋದರರ ಗುಟ್ಟು ಗೊತ್ತಾಯಿತು. ಅವನು ಹೊಟ್ಟೆತುಂಬ ಉಂಡಮೇಲೆ ಹೊಟ್ಟೆಯನ್ನು ಒಮ್ಮೆ ಬಲಗೈಯಿಂದ ಸವರುತ್ತ ತನ್ನ ತಪಃಶಕ್ತಿಯಿಂದ ವಾತಾಪಿ ಹೊಟ್ಟೆಯಲ್ಲೇ ಜೀರ್ಣವಾಗುವಂತೆ ಮಾಡಿಬಿಟ್ಟ. ಇಲ್ವಲ ಹೆದರಿ ಅಗಸ್ತ್ಯನಿಗೆ ಶರಣಾದ. ಅಂದಿನಿಂದ ಬ್ರಹ್ಮದ್ವೇಷವನ್ನು ಬಿಟ್ಟುಬಿಟ್ಟ. ಇದು ಪುರಾಣದ ಕಥೆ. ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರೇ ಅಂತೆಲ್ಲ ಪ್ರಶ್ನೆ ಕೇಳುವುದಕ್ಕೆ ಹೋಗಬಾರದು.

ಆಯ್ತು. ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ ಎಂದು ತಲೆಬರಹವಿರುವ ಈ ಲೇಖನದಲ್ಲಿ ಸ್ವಲ್ಪವಾದರೂ ತಿರುಳಿರುವ ಅಂಶ ಇರಲೆಂದು ಇದನ್ನು ಬರೆಯುತ್ತಿದ್ದೇನೆ. ತಿನ್ನುವ ಕುಡಿಯುವ ವಿಷಯದಲ್ಲಿ ಅಮೆರಿಕನ್ನರೂ ಅಗೋಳಿ ಮಂಜಣ್ಣನಿಗಿಂತ ಕಮ್ಮಿಯೇನಲ್ಲ. ಅದರಲ್ಲೂ ಫಾಸ್ಟ್‌ಫುಡ್ ಸಂಸ್ಕೃತಿ ಅಮೆರಿಕನ್ನರನ್ನು ಸಿಕ್ಕಾಪಟ್ಟೆ ಸ್ಥೂಲಕಾಯರನ್ನಾಗಿಸಿದೆ. ಇದೀಗ ಪ್ರಥಮ ಮಹಿಳೆ ಮಿಶೆಲ್ ಒಬಾಮ ಈ ವಿಷಯದಲ್ಲಿ ಜವಾಬ್ದಾರಿಯಿಂದ ಎಚ್ಚೆತ್ತು ಜನಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ. ಶಾಲಾಮಕ್ಕಳಿಗೆ ನಿಯಮಿತ ಆಹಾರಸೇವನೆಯ ಪಾಠಗಳನ್ನು ಅವರು ತಾವೇ ಶಾಲೆಗಳಿಗೆ ಹೋಗಿ ಮಾಡುತ್ತಿರುವ ನಿದರ್ಶನಗಳೂ ಇವೆ. ಅಮೆರಿಕದ ಪ್ರಖ್ಯಾತ ರಿಟೇಲ್ ಮಳಿಗೆ ವಾಲ್‌ಮಾರ್ಟ್ ಸಹ ಮಿಶೆಲ್ ಒಬಾಮ ಅಭಿಯಾನದಲ್ಲಿ ಕೈಜೋಡಿಸಿದೆ. ತಾನು ಮಾರುವ ಆಹಾರ ಪದಾರ್ಥಗಳಾವುವೂ ಒಬೆಸಿಟಿ ಹೆಚ್ಚಿಸದಿರುವಂತೆ ನೋಡಿಕೊಳ್ಳುತ್ತೇನೆಂದಿದೆ. ತಿನ್ನುವುದಕ್ಕಾಗಿ ಬದುಕು ಎಂದಾಗದೆ ಬದುಕುವುದಕ್ಕಾಗಿಯಷ್ಟೇ ತಿನ್ನಬೇಕು. ಈಗ ಇದು ಮಿಶೆಲ್ ಮಂತ್ರ.

ಕೊನೆಯಲ್ಲೊಂದು ಕ್ವಿಜ್. ಇವತ್ತಿನ ಲೇಖನದಲ್ಲಿ ಸ್ವಲ್ಪ ಅಸಾಮಾನ್ಯ ಎನಿಸುವಂಥ ಅಂಶವೊಂದನ್ನು ಅಳವಡಿಸಲಾಗಿದೆ. ಅಥವಾ ಬೇಕಂತಲೇ ಅಳವಡಿಸಿಕೊಂಡಿಲ್ಲ ಎಂದೂ ಹೇಳಬಹುದು. ಅದೇನೆಂದು ನಿಮ್ಮ ಗಮನಕ್ಕೆ ಬಂದಿದ್ದರೆ ಬರೆದು ತಿಳಿಸಿ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.